ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಚಾರ
ನಿಮ್ಮ ಬಟ್ಟೆ ಸಹ ಬೇರೆಯವರ ಜೊತೆ ಗೌಪ್ಯವಾಗಿ ಮಾತನಾಡುತ್ತದೆ. ಗೊತ್ತಾ?

ಸೃಷ್ಟಿಕರ್ತ ಸುಂದರ. ಸುಂದರತೆಯನ್ನು ಇಷ್ಟಪಡುತ್ತಾನೆ. ಮನುಷ್ಯನ ಸ್ವಭಾವವು ಸ್ವಲ್ಪ ಹಾಗೆಯೇ. ತನ್ನ ಕಣ್ಣಿಗೆ ಸುಂದರವಾಗಿ ಕಾಣುವ ಎಲ್ಲವನ್ನೂ ಇಷ್ಟಪಡುತ್ತಾನೆ. ಅದು ಸುಂದರವಾದ ಸರೋವರ ಇರಬಹುದು, ಬೆಟ್ಟಗುಡ್ಡಗಳಿರಬಹುದು, ತಂಪಾದ ಕಾಡುಗಳಿರಬಹುದು, ತಣ್ಣನೆಯ ಗಾಳಿ ಇರಬಹುದು, ಸಮುದ್ರ ತೀರವಿರಬಹುದು, ನದಿ ನಾಲೆ ಇರಬಹುದು, ಪ್ರಾಣಿಗಳಿರಬಹುದು, ವಾಹನಗಳಿರಬಹುದು, ಸುಂದರ ಮನುಷ್ಯ ಪ್ರಾಣಿಗಳಿರಬಹುದು.ನಮಗಾಗಿ ಈ ಸುಂದರ ಪ್ರಪಂಚವನ್ನು ಸೃಷ್ಟಿಕರ್ತ ನಿರ್ಮಿಸಿದ್ದಾನೆ. ಆತ ನಮ್ಮನ್ನು ನಮ್ಮ ಸುಂದರತೆ ಅಥವಾ ಉಡುಗೆ ತೊಡುಗೆಗಳನ್ನು ನೋಡಿ ಇಷ್ಟಪಡುವುದಿಲ್ಲ, ಮನಸ್ಸನ್ನು ನೋಡಿ ಇಷ್ಟ ಪಡುತ್ತಾನೆ. ಆದರೆ ಮನುಷ್ಯ ಜಾತಿಯ ಬರೀ ಕಣ್ಣಿಗೆ ಕಾಣುವುದು ಮನಸ್ಸಲ್ಲಾ, ಮೇಲೆ ಧರಿಸಿರುವ ಉಡುಗೆ ತೊಡುಗೆಗಳು ಮಾತ್ರ.ಈ ಆಧುನಿಕ ಯುಗದಲ್ಲಿ ಮನುಷ್ಯನನ್ನು ಅಳೆಯುವ ತಕ್ಷಣದ ವಿಧಾನ ಎಂದರೆ ಆತ ಉಟ್ಟಿರುವ ಬಟ್ಟೆ. ಅವನ ಚಲನ ವಲನ, ಹಾವಭಾವ, ವಿದ್ಯಾರ್ಹತೆಯ ಮೌಲ್ಯಮಾಪನ ಆತನು ಧರಿಸಿರು ಉಡುಗೆ ಮತ್ತು ಅದರ ಶೈಲಿಯಿಂದ ತಿಳಿದುಕೊಳ್ಳಬಹುದು. ನೀವು ಎಷ್ಟೇ ನಿರ್ಮಲ ಮನಸ್ಸಿನವರಾಗಿದ್ದರೂ, ನಿಮ್ಮ ಉಡುಗೆ ತೊಡುಗೆಗಳು ಸರಿಯಾದ ಸ್ಥಿತಿಯಲ್ಲಿ ಇಲ್ಲದಿದ್ದಲ್ಲಿ, ಪ್ರಪಂಚ ನಿಮಗೆ ಕೊಡಬೇಕಾದ ಗೌರವ ಕೊಡುವುದಿಲ್ಲ. ನಮಗೆ ಸೃಷ್ಟಿಕರ್ತ ಮರ್ಯಾದೆ ಕೊಟ್ಟರೆ ಸಾಕು, ಜನರ ಗೌರವ ನಮಗೆ ಬೇಕಾಗಿಲ್ಲ ಎನ್ನುವ ಜನರು ಇದ್ದಾರೆ. ಆದರೆ ಅಂಥವರಿಗೆ ಈ ಪ್ರಪಂಚ ಆಟಕ್ಕೂ ಇಲ್ಲ, ಊಟಕ್ಕೂ ಇಲ್ಲ ಎಂಬ ಸಾಲಿನಲ್ಲಿ ಸೇರಿಸಿಬಿಡುತ್ತದೆ.

ಹುಟ್ಟಿದ ಮೇಲೆ ಸಾಯಲೇ ಬೇಕು. ಹಾಗಂತ ಇಗಲೇ ಸಾಯಿ ಎಂದರೆ ಹೇಗೆ? ಯಾರು ಸಹ ಸಾಯಲು ಇಷ್ಟಪಡುವುದಿಲ್ಲ. ಬಾಳಿ ಬದುಕಲು ಇಷ್ಟಪಡುತ್ತಾರೆ. ಕಷ್ಟವಿದ್ದರೂ ಬದುಕಬೇಕು. ಜೀವನದಲ್ಲಿ ಕಷ್ಟಗಳಿಲ್ಲದಿದ್ದರೂ ಬದುಕಬೇಕು. ಹಾಗಾದರೆ ಚೆನ್ನಾಗಿಯೇ ಏಕೆ ಬದುಕಲು ಪ್ರಯತ್ನಿಸಬಾರದು? ಆನಂದವಾಗಿ ಬಾಳಲು ಏಕೆ ಹಿಂಜರಿಯಬೇಕು? ಬರೀ ಒಳ್ಳೆ ಬಟ್ಟೆಗಳನ್ನು ಹಾಕಿಕೊಂಡರೆ ಎಲ್ಲಾ ಸರಿ ಹೋಗುತ್ತಾ ಎಂದು ನೀವು ಪ್ರಶ್ನಿಸಬಹುದು. ನಾನು ನಿಮಗೆ ಕೇಳುತ್ತೇನೆ - ಒಳ್ಳೆ ಬಟ್ಟೆಗಳನ್ನು ಹಾಕಿಕೊಳ್ಳದಿದ್ದರೆ ಎಲ್ಲಾ ಸರಿ ಹೋಗುತ್ತಾ? ಪ್ರಪಂಚ ಮೇಲ್ನೋಟಕ್ಕೆ ಬೆಲೆ ಕೊಡುತ್ತದೆ. ಆ ಗೌರವ ಪಡೆದುಕೊಳ್ಳುವುದು ಬಿಡುವುದು ನಮ್ಮ ಕೈಯಲ್ಲಿದೆ. ಮನುಷ್ಯರು ಮುಖಾಮುಖಿ ಮಾತನಾಡುತ್ತಿದ್ದರೂ ಓರೆ ಕಣ್ಣುಗಳಿಂದ ನಿಮ್ಮ ಉಡುಗೆ ತೊಡುಗೆಗಳನ್ನು ಗಮನಿಸುತ್ತಾ, ಒಳಳೊಳಗೆಯೇ ಲೆಕ್ಕಾ ಹಾಕುತ್ತಿರುತ್ತಾರೆ. ಈ ಲೆಕ್ಕಾಚಾರ ಸ್ತ್ರೀ ಪ್ರಪಂಚದಲ್ಲಿ ಅತಿ ಹೆಚ್ಚು. ಏನೇನು ಒಡವೆಗಳನ್ನು ಹಾಕಿಕೊಂಡಿದ್ದಾರೆ, ನಿಜವಾಗಲೂ ಚಿನ್ನದ್ದೇ ಅಥವಾ ಗೋಲ್ಡ್ ಪಾಲಿಶ್ದೇ? ಸ್ವಂತವೇ ಅಥವಾ ಪಕ್ಕದ ಮನೆಯವರದೇ? ಈ ಸೀರೆ ಎಷ್ಟಿರಬಹುದು? ಮೇಕಪ್ ಮನೆಯಲ್ಲೇ ಮಾಡಿಕೊಂಡಿರೋದೇ ಅಥವಾ ಬ್ಯೂಟಿಪಾರ್ಲರ್ನಲ್ಲಿ ಮಾಡಿಸಿಕೊಂಡಿದ್ದಾರೆಯೇ? ಈ ರೀತಿ ನೂರಾರು ಪ್ರಶ್ನೆಗಳು ಹುಟ್ಟುತ್ತಿರುತ್ತವೆ.

ಈ ಪ್ರಪಂಚವನ್ನು ಟೀಕಿಸುವುದು ಬೇಡ. ಅದು ಅನಾದಿ ಕಾಲದಿಂದ ಹೀಗೆಯೇ ಬೆಳೆದು ಬಂದಿದೆ. ಅದನ್ನು ಬದಲಿಸುವುದು ಸಾಧ್ಯವಾಗದ ಮಾತು. ಆದರೆ ನಾವು ಒಂದು ಕೆಲಸ ಮಾಡಬಹುದು. ಏನಪ್ಪಾ ಅದು? "ನಮ್ಮನ್ನು ನಾವು ಬದಲಿಸಿಕೊಳ್ಳುವುದು. ಹೇಗೆ? ಮೊದಲು ನಮ್ಮ ಬಟ್ಟೆಗಳನ್ನು ಸರಳವಾಗಿ, ಸುಂದರವಾಗಿ ಮತ್ತು ಸುಶೀಲವಾಗಿ ಉಟ್ಟುಕೊಳ್ಳೂಣ.


ಇರಾಕ್ ದೇಶದಲ್ಲಿ ಇಮಾಮ್ ಅಬು ಹನೀಫಾ(ರ) ಎಂಬ ಮಹಾನ್ ವಿದ್ವಾಂಸರಿದ್ದರು. ಅವರು ಬಟ್ಟೆಗಳ ವ್ಯಪಾರಿಯೂ ಸಹ ಆಗಿದ್ದರು. ರಾಜಮನೆತನಕ್ಕೂ ಬಟ್ಟೆಗಳನ್ನು ಸರಬರಾಜು ಮಾಡುತ್ತಿದ್ದರು. ಬಹಳ ಸರಳ ಜೀವಿ. ಸಾಮಾನ್ಯ ಉಡುಪುಗಳನ್ನು ಧರಿಸುತ್ತಿದ್ದರು. ಆದರೆ ಅರಮನೆಗೆ ಬಟ್ಟೆ ಮಾರಲು ಹೋಗುವಾಗ ಅತಿ ಉತ್ತಮವಾದ, ಬೆಲೆ ಬಾಳುವ ಉಡುಪನ್ನು ಧರಿಸುತ್ತಿದ್ದರಂತೆ. ಇದರಿಂದ ನಮಗೆ ಅರ್ಥವಾಗುವ ವಿಷಯವೇನೆಂದರೆ ಉಡುಪುಗಳನ್ನು ಸಂದರ್ಭಕ್ಕೆ ಅನುಸಾರವಾಗಿ ಧರಿಸಬೇಕು.

ನೀವು ಉಟ್ಟಿರುವ ಬಟ್ಟೆ, ನಿಮ್ಮ ವೃತ್ತಿ, ವ್ಯಕ್ತಿತ್ವ, ಬುದ್ಧಿವಂತಿಕೆಯನ್ನು ಪರರಿಗೆ ಪರಿಚಯಿಸುತ್ತದೆ. ಸಂದರ್ಭಕ್ಕೆ ಅನುಸಾರವಾಗಿ ಬಟ್ಟೆಗಳನ್ನು ಉಡದೇ ಹೋದರೆ, ನಿಮ್ಮಲ್ಲಿ ಆತ್ಮಗೌರವ ಕಡಿಮೆಯಾಗಿ, ಕೀಳರಿಮೆ ಹೆಚ್ಚಾಗುತ್ತದೆ. ಎಷ್ಟೋ ಹುಡುಗರು/ಹುಡುಗಿಯರು ಇಂಟರ್ವ್ಯೂನಲ್ಲಿ ಫೇಲಾಗಲು ಅವರ ಬಟ್ಟೆ ಸಹ ಒಂದು ಕಾರಣ. ನಾವು ಉಡುವ ಬಟ್ಟೆ ನಮಗೆ ಗೌರವ ತಂದು ಕೊಡುತ್ತದಲ್ಲದೇ ನಮ್ಮ ಸ್ವಭಾವವನ್ನು ಸಹ ತಿಳಿಸುತ್ತದೆ. ಮನುಷ್ಯ ಮಾತನಾಡುತ್ತಾನೆ ನಿಜ, ಬಟ್ಟೆ ಸಹ ಬೇರೆಯವರ ಜೊತೆ ಗೌಪ್ಯವಾಗಿ ಮಾತನಾಡುತ್ತದೆ.

ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬ ಗಾದೆಯನ್ನು ಮರೆಯದೆ, ನಮ್ಮಿಂದ ಎಂತಹ ಬಟ್ಟೆಗಳನ್ನು ಉಡಲು ಸಾಧ್ಯವೋ, ಅವನ್ನು ಸುಂದರವಾಗಿ, ಸರಳವಾಗಿ ಮತ್ತು ಸಮಯಕ್ಕನುಸಾರವಾಗಿ ಉಟ್ಟುಕೊಂಡರೆ ಸಾಕು. ಬಹಳ ಮುಖ್ಯವಾಗಿ ನಾವು ಬಟ್ಟೆಗಳಿಗಿಂತ ಹೆಚ್ಚಾಗಿ ಮನುಷ್ಯರನ್ನು ಮರ್ಯಾದೆ ಕೊಡುವುದನ್ನು ಕಲಿತುಕೊಳ್ಳಬೇಕು. ಏಕೆಂದರೆ ನಮಗಾಗಿ ಬಟ್ಟೆ, ಬಟ್ಟೆಗಾಗಿ ನಾವಲ್ಲ.


- ಜಬೀವುಲ್ಲಾ ಖಾನ್

0 comments:

Post a Comment