ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಚಾರ
ಸ್ವಪ್ರಜ್ಞೆಯಿಂದ ಕೊಲೆಯಾದ ನೆಮ್ಮದಿ

ಬೇರೆಯವರು ನನ್ನನ್ನು ಗಮನಿಸುತ್ತಿದ್ದಾರೆ, ಪರೀಕ್ಷಿಸುತ್ತಿದ್ದಾರೆ ಮತ್ತು ನಾನು ಗುಂಪಿನ ಅನಾವಶ್ಯಕ ಕೇಂದ್ರ ಬಿಂದು ಆಗಿದ್ದೇನೆ - ಇಂತಹ ಅನೇಕ ಆಂತರಿಕ ಭಾವನೆಗಳೇ ಸ್ವಪ್ರಜ್ಞಾ ಭಾವನೆ. ಇದು ಬಹಳ ಅಪಾಯಕಾರಿ.ನಿಜ. ಕೆಲವು ಸಂದರ್ಭಗಳಲ್ಲಿ ಬೇರೆಯವರು ನಮ್ಮ ಬಗ್ಗೆ ಏನು ಯೋಚಿಸುತ್ತಿರಬಹುದು ಎಂದು ನಾವು ಜಾಗೃತರಾಗುತ್ತೇವೆ. ಇದು ಪ್ರಾಕೃತಿಕವೂ ಹೌದು. ತೊಂದರೆ ಯಾವಾಗಪ್ಪಾ ಅಂದರೆ ಪ್ರತಿ ಸಮಯವೂ ನಾವು ಸ್ವಪ್ರಜ್ಞಾರಾಗಿಬಿಟ್ಟರೆ ಸಮಾಜದಲ್ಲಿ ಬದುಕುವುದು ಬಹಳ ಕಷ್ಟವಾಗಿಬಿಡುತ್ತದೆ. ನಮ್ಮ ಸಂತೋಷವನ್ನು ನಾವೇ ಕೊಲೆ ಮಾಡಿದಂತಾಗಿ ಹೋಗುತ್ತದೆ. ಕೊನೆಗೆ ಎಲ್ಲರಿಂದ ದೂರವಾಗಿ ಮೂಲೆ ಪ್ರಾಣಿಯಾಗಿ ಉಳಿಯಬೇಕಾಗುತ್ತದೆ."ಸ್ವಪ್ರಜ್ಞೆ" - ನಮ್ಮನ್ನು ಸಂತೋಷ ಪಡುವುದರಿಂದ, ಸಾಮಾನ್ಯವಾಗಿ ವರ್ತಿಸುವುದರಿಂದ, ಹೊಸ ವಿಷಯಗಳನ್ನು ಕಲಿಯುವುದರಿಂದ ಅಥವಾ ಹೊಸ ಸ್ನೇಹಿತರನ್ನು ಬೆಳೆಸಿಕೊಳ್ಳುವುದರಿಂದ, ಅವರನ್ನು ಅರ್ಥ ಮಾಡಿಕೊಳ್ಳುವುದರಿಂದ ತಡೆಯುತ್ತದೆ.


ಸ್ವಪ್ರಜ್ಞಾ ಪೀಡಿತ ವ್ಯಕ್ತಿಯ ಯೋಚನೆಗಳು ಬಹಳ ಕಪ್ಪಾಗಿ ಅಥವಾ ಬಿಳುಪಾಗಿರುತ್ತವೆ ಅಥವಾ ಆ ಯೋಚನೆಗಳಿಗೆ ಅರ್ಥವೇ ಇರುವುದಿಲ್ಲ. "ಬೇರೆಯವರು ನನ್ನನ್ನು ಇಷ್ಟ ಪಡುವುದಿಲ್ಲ ಅಥವಾ ನಾನು ನನ್ನನ್ನು ಸಂಪೂರ್ಣವಾಗಿ ಟೊಪ್ಪಿಗೆ ಹಾಕಿಸಿಕೊಳ್ಳುತ್ತಿದ್ದೇನೆ" - ಇಂತಹ ಅನೇಕ ಬುಡವಿಲ್ಲದ ಆಂತರಿಕ ಯೋಚನೆಗಳು ಹುಟ್ಟಿಸಿಕೊಳ್ಳುತ್ತಿರುತ್ತಾರೆ. ಇದಕ್ಕೆ ಮೂಲ ಕಾರಣ ಅವರ ಯೋಚನೆಯ ರೀತಿ. ಸ್ವತಃ ತಾವೇ ಯೋಚನೆಗಳನ್ನು ಸೃಷ್ಟಿ ಮಾಡಿಕೊಂಡಿರುವುದರಿಂದ ಆ ಯೋಚನೆಗಳು ಸತ್ಯ ಎಂದು ಸಹ ನಂಬುತ್ತಾರೆ. ಸ್ವಪ್ರಜ್ಞಾ ಪೀಡಿತ ವ್ಯಕ್ತಿಗಳು ಅವರ ಬಗ್ಗೆಯೇ ಅವರ ಸ್ವಂತ ಕಲ್ಪನೆಗಳನ್ನು ಇಟ್ಟುಕೊಂಡಿರುತ್ತಾರೆ. ಬೇರೆಯವರು ಏನು ಯೋಚಿಸುತ್ತಿರಬಹುದು ಅವರ ತಲೆಯನ್ನು ನಾನು ಓದಬಲ್ಲೆ ಎಂಬ ಊಹೆಯನ್ನು ಸೃಷ್ಟಿಸಿಕೊಂಡಿರುತ್ತಾರೆ. ಅವರು ಊಹಿಸಿಕೊಂಡಿರುವುದು ಅಕ್ಷರತಃ ಸತ್ಯ ಎಂಬ ಊಹೆಯನ್ನು ಮಾಡಿಕೊಂಡಿರುತ್ತಾರೆ.

ಸ್ವಪ್ರಜ್ಞೆ ಒಂದು ರೀತಿಯ ಪಿಡುಗೆಂದೇ ಹೇಳಬಹುದು. ನಿಮ್ಮ ಬಗ್ಗೆ ಬೇರೆಯವರು ಯೋಚನೆಯೇ ಮಾಡಿರಲ್ಲ. ಅವರ ಹತ್ತಿರ ಅಷ್ಟು ಸಮಯವೂ ಇರುವುದಿಲ್ಲ. ಒಂದು ರೀತಿಯ ದೊಡ್ಡ ಕಾಲ್ಪನಿಕ ಚಿತ್ರವನ್ನೇ ನಿಮ್ಮ ಮನಸ್ಸಿನಲ್ಲಿ ನೀವೇ ನಿರ್ಮಾಣ ಮಾಡಿಕೊಂಡು, ಅದು ಸತ್ಯವೆಂದು ನಂಬಿ, ನಿಮ್ಮ ಮನಸ್ಸನ್ನು ಅಸೂಯೆ,ದ್ವೇಷ,ಕಾಮ,ಅಹಂ,ಕೀಳರಿಮೆ,ಆಯಾಸ,ದುಃಖ,ಉದ್ವೇಗ,ಕಳವಳದ ಗೂಡನ್ನಾಗಿ ಪರಿವರ್ತಿಸಿ ಬಿಡುತ್ತೀರಿ. ಇದರಿಂದ ನಿಮ್ಮ ಸಮಯ ಮತ್ತು ಶಕ್ತಿ ವ್ಯರ್ಥವಾಗುತ್ತದೆ. ನೆಮ್ಮದಿ ಹಾಳಾಗುತ್ತದೆ. ನಿಮ್ಮ ಜೀವನದ ನಿಜವಾದ ಗುರಿಯಿಂದ ಗಮನ ತಪ್ಪಿ ಆಗಬಾರದ ಅನಾಹುತಗಳಿಗೆ ಹೊಣೆಯಾಗುತ್ತೀರಿ.

ಅನಾವಶ್ಯಕ ಯೋಚನೆಗಳನ್ನು, ಕಲ್ಪನೆಗಳನ್ನು ಮಾಡುವುದನ್ನು ನಿಲ್ಲಿಸಿ, ಮನಸ್ಸಿಗೆ ಶಾಂತಿ ಕೊಡಿ. ನೆಮ್ಮದಿಯಿಂದ ಬಾಳಿ.

ಈ ದಿನ ಯಾಕೆ ಅವನು/ಅವಳು ಆ ರೀತಿ ನೋಡಿದ್ದು. ಏನಿರಬಹುದು? ಏನಾದರು ನನ್ನಿಂದ ತಪ್ಪು ನಡೆದು ಹೋಯಿತೆ..? ನನ್ನ ಹತ್ತಿರ ಆತ/ಆಕೆ ಹಣ ಕೇಳಬಹುದಾ..? ಈ ಸಲ ನನ್ನ ಬಡ್ತಿಗೆ ಏನಾದರೂ ಬತ್ತಿ ಇಟ್ಟು ಬಿಡುತ್ತಾನಾ/ಬಿಡುತ್ತಾಳಾ...? ಟ್ರೀಟ್ ಕೊಡಿಸಲಿ ಅಂತ ಆ ರೀತಿ ಮುಖ ಮಾಡಿದ್ದಾನಾ..? - ಅವನು/ಅವಳು ನೋಡಿದಾಗಿನಿಂದ ಹಿಡಿದು ಮಲಗುವವರೆಗೂ ಅದೇ ಯೋಚನೆ. ಮನಸ್ಸಲ್ಲಿ ಒಂದು ರೀತಿಯ ಕಳವಳ. ನಾಳೆ ಕೇಳೇ ಬಿಡೋಣ. ನಿನ್ನೆ ಯಾಕೆ ನೀವು ಆ ರೀತಿ ನೋಡಿದ್ದು? ಯಾವಾಗ? ನಿನ್ನೆ. ನನಗೆ ಪರಚಿಕೊಳ್ಳಲು ಸಹ ಪುರುಸೊತ್ತಿಲ್ಲ, ನನ್ನ ಕೆಲಸ ನನಗೆ...! ಉತ್ತರ ಸಿಕ್ಕ ತಕ್ಷಣ ಮೀಟರ್ ಡೌನ್. ಛೆ... ನಾನು ಏನೇನೋ ಅಂದುಕೊಂಡೆ. - ಇಂತಹ ಅದೆಷ್ಟೋ ವಿಷಯಗಳು ಪ್ರತಿ ದಿನ ಯೋಚನೆ ಮಾಡಿ ಮಾಡಿ ಸಮಯವನ್ನು ವ್ಯರ್ಥ ಮಾಡಿಕೊಂಡು ಮನಃಶಾಂತಿಯನ್ನು ಭಂಗ ಮಾಡಿಕೊಳ್ಳುತ್ತೇವೆ.

ಸ್ವಪ್ರಜ್ಞಾ ಯೋಚನೆಗಳನ್ನು ಮಾಡುವುದನ್ನು ನಿಲ್ಲಿಸುವುದೇ ಇದಕ್ಕೆ ತಕ್ಕ ಔಷಧಿ. ಬೇರೆಯವರು ಏನೋ ಪಿಸುಗುಟ್ಟುತ್ತಿದ್ದರೂ ನನ್ನ ಬಗ್ಗೆಯೇ ಅವರು ಮಾತನಾಡುತ್ತಿರುವುದು ಎಂದು ಊಹಿಸಿಕೊಳ್ಳದೆ ನಿಮ್ಮ ಕೆಲಸದಲ್ಲಿ ನೀವು ನಿರತರಾಗಿ. ಊಹೆಗಳಿಗೆ ಎಡೆ ಮಾಡಿಕೊಡಬೇಡಿ. ಅವರು ನಿಜವಾಗಲೂ ಮಾತನಾಡುತ್ತಿದ್ದೇ ಆದರೆ ಅದು ಅವರ ಮೂರ್ಖತನ. ತಮ್ಮ ಬುದ್ದಿ ಮತ್ತು ಬಾಯಿಗೆ ವ್ಯರ್ಥ ಸಮಸ್ಯೆ ಕೊಡುತ್ತಿದ್ದಾರೆ. ತಮ್ಮ ಅಮೂಲ್ಯವಾದ ಸಮಯವನ್ನು ವ್ಯರ್ಥವಾಗಿ ಕಳೆಯುತ್ತಿದ್ದಾರೆ. ಅವರ ಶಾಂತಿ ಮತ್ತು ಪ್ರಗತಿಗೆ ಅವರೇ ಮುಳ್ಳಾಗುತ್ತಿದ್ದಾರೆ. ನೀವು ತಲೆ ಕೆಡಿಸಿಕೊಳ್ಳದೆ, ಆ ಕಡೆ ಗಮನ ಹರಿಸದೆ, ಕಾಲ್ಪನಿಕ ಯೋಚನೆಗಳ ಸರಮಾಲೆ ಸೃಷ್ಟಿಸದೆ ಹಾಯಾಗಿ ಇದ್ದು ಬಿಡಿ. ಇದನ್ನು ಅಭ್ಯಾಸ ಮಾಡಿಕೊಳ್ಳಿ.

- ಜಬೀವುಲ್ಲಾ ಖಾನ್

0 comments:

Post a Comment