ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಹಿರಿಯ ಕಲಾವಿದ ಎನ್.ಮರಿಶಾಮಾಚಾರ್ ಅವರಿಗೆ ಚಿತ್ರಸಿರಿ ಪ್ರಶಸ್ತಿ
ಆಳ್ವಾಸ್ ನುಡಿಸಿರಿ ರಾಷ್ಟ್ರೀಯ ವೇದಿಕೆಯಲ್ಲಿ ಪ್ರಶಸ್ತಿ ಪ್ರದಾನ
ಮೂಡಬಿದಿರೆ: ಹಿರಿಯ ಕಲಾವಿದ, ಸಾಹಿತಿ, ಸಂಘಟಕ ಎನ್.ಮರಿಶಾಮಾಚಾರ್ ಅವರನ್ನು 2011ರ ಸಾಲಿನ ಪ್ರತಿಷ್ಠಿತ "ಆಳ್ವಾಸ್ ಚಿತ್ರಸಿರಿ ರಾಷ್ಟ್ರೀಯ ಪ್ರಶಸ್ತಿ"ಗೆ ಆಯ್ಕೆಮಾಡಲಾಗಿದೆ. ಪ್ರಶಸ್ತಿಯು ಹತ್ತುಸಾವಿರ ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ, ಹಾಗೂ ಸಾಂಪ್ರದಾಯಿಕ ಸನ್ಮಾನಗಳನ್ನೊಳಗೊಂಡಿರುತ್ತವೆ. ನವೆಂಬರ್ 12ರಂದು ಮಧ್ಯಾಹ್ನ 12ಗಂಟೆಗೆ ಆಳ್ವಾಸ್ ನುಡಿಸಿರಿಯ ರಾಷ್ಟ್ರೀಯ ವೇದಿಕೆಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಆಳ್ವಾಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.


ಪ್ರತಿಷ್ಠಿತ ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿ, ಛತ್ರಪತಿ ಶಿವಾಜಿ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಮೊದಲಾದ ಮಹೋನ್ನತ ಪ್ರಶಸ್ತಿ ಪಡೆದಿರುವ ಹಿರಿಯ ಕಲಾವಿದ ಎನ್.ಮರಿಶಾಮಾಚಾರ್ ಅವರಿಗೆ ಈ ಬಾರಿಯ ಚಿತ್ರಸಿರಿ ಪ್ರಶಸ್ತಿ ನೀಡುತ್ತಿರುವುದು ಸಂತಸ ತಂದಿದೆ ಎಂದು ಆಳ್ವ ತಿಳಿಸಿದರು.
ಆಳ್ವಾಸ್ ನುಡಿಸಿರಿಗೆ ಪೂರ್ವಭಾವಿಯಾಗಿ ನವೆಂಬರ್ 7,8 ಮತ್ತು 9ರಂದು ರಾಜ್ಯದ ಹಿರಿಯ ಚಿತ್ರ ಕಲಾವಿದರಿಂದ "ಚಿತ್ರಸಿರಿ"ಕಾರ್ಯಕ್ರಮವೂ ನಡೆಯಲಿದೆ.ನವೆಂಬರ್ 7 ರಿಂದ 13ರ ತನಕ ಸಂಸ್ಥೆಯ ಸಂಗ್ರಹದಲ್ಲಿರುವ ಅನಘ್ರ್ಯ ವೈವಿಧ್ಯಮಯ ಚಿತ್ರಕಲಾ ಪ್ರಕಾರಗಳ ಪ್ರದರ್ಶನವನ್ನೂ ಏರ್ಪಡಿಸಲಾಗಿದೆ. ಇವೆಲ್ಲವೂ ಮೂಡಬಿದಿರೆಯ ವಿದ್ಯಾಗಿರಿಯಲ್ಲಿರುವ ಸುಂದರೀ ಆನಂದ ಆಳ್ವ ಆವರಣದಲ್ಲಿ ನಡೆಯಲಿವೆ.

ಆಳ್ವಾಸ್ ನುಡಿಸಿರಿಗೆ ಅಭೂತಪೂರ್ವ ಬೆಂಬಲಆಳ್ವಾಸ್ ನುಡಿಸಿರಿಗೆ ಈ ಬಾರಿ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಸಾಹಿತ್ಯಾಸಕ್ತರಿಂದ, ಕನ್ನಡಿಗರಿಂದ ವ್ಯಕ್ತವಾಗಿದೆ. ಹತ್ತನೇ ವರುಷದ ಆಳ್ವಾಸ್ ನುಡಿಸಿರಿ ಸಮ್ಮೇಳನವನ್ನು ಜಾಗತಿಕ ಮಟ್ಟದಲ್ಲಿ ನಡೆಸುವ ದೃಷ್ಠಿಕೋನದಿಂದ ಕರ್ನಾಟಕದ ಜಿಲ್ಲೆ ಜಿಲ್ಲೆಗಳಲ್ಲಿ ಈಗಾಗಲೇ ಆಳ್ವಾಸ್ ನುಡಿಸಿರಿ ಘಟಕಗಳನ್ನು ಸಮಾಲೋಚನಾ ಸಭೆಗಳನ್ನು ನಡೆಸಲಾಗಿದೆ. ಈ ಎಲ್ಲಾ ಸಮಾಲೋಚನಾ ಸಭೆಗಳು ಅತ್ಯಂತ ಯಶಸ್ವಿಯಾಗಿದ್ದು, ಉತ್ತಮ ಜನಬೆಂಬಲ ವ್ಯಕ್ತವಾಗಿವೆ. ಈ ಬಾರಿಯ ಆಳ್ವಾಸ್ ನುಡಿಸಿರಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆ ದೃಢವಾಗಿದೆ.
ಈಗಾಗಲೇ ರಾಜ್ಯದಾದ್ಯಂತ 26ನುಡಿಸಿರಿ ಘಟಕಗಳನ್ನು ಪ್ರಾರಂಭಿಸಲಾಗಿದೆ. ಈ ಘಟಕಗಳ ಮೂಲಕ ಕನ್ನಡವನ್ನು, ಕನ್ನಡ ಮನಸ್ಸನ್ನು ಕಟ್ಟುವ ಬೆಳೆಸುವ ಕಾರ್ಯ ಮುಂದಿನ ದಿನಗಳಲ್ಲಿ ನಡೆಯಲಿವೆ.

ಕನ್ನಡ ಪರಿಕಲ್ಪನೆಯ ನಾಲ್ಕು ಗೊಷ್ಠಿಗಳು

ಆಳ್ವಾಸ್ ನುಡಿಸಿರಿಯಲ್ಲಿ ಒಟ್ಟು ನಾಲ್ಕು ಪ್ರಮುಖ ಗೋಷ್ಠಿಗಳನ್ನು ಏರ್ಪಡಿಸಲಾಗಿವೆ. ಕನ್ನಡ ಸಂಸ್ಕೃತಿ - ಭಾಷೆ: ಸಂಘರ್ಷ ಮತ್ತು ಸಾಮರಸ್ಯ, ಪ್ರಾಚೀನ ಕನ್ನಡ ಸಾಹಿತ್ಯ : ಸಂಘರ್ಷ ಮತ್ತು ಸಾಮರಸ್ಯ , ಮಧ್ಯಕಾಲೀನ ಕನ್ನಡ ಸಾಹಿತ್ಯ : ಸಂಘರ್ಷ ಮತ್ತು ಸಾಮರಸ್ಯ ಹಾಗೂ ಆಧುನಿಕ ಕನ್ನಡ ಸಾಹಿತ್ಯ : ಸಂಘರ್ಷ ಮತ್ತು ಸಾಮರಸ್ಯ ಎಂಬ ವಿಚಾರದಲ್ಲಿ ಈ ಗೋಷ್ಠಿಗಳು ನಡೆಯಲಿವೆ.
ಮಾಧ್ಯಮ : ಸಂಘರ್ಷ ಮತ್ತು ಸಾಮರಸ್ಯ , ಕನ್ನಡ ಜನಪರ ಚಳುವಳಿಗಳು, ಕನ್ನಡ ಜನಪದ, ಮತ್ತು ಕಂಬಾರ ಸಾಹಿತ್ಯಾವಲೋಕನ ಎಂಬ ನಾಲ್ಕು ವಿಶೇಷ ಉಪನ್ಯಾಸ ಕಾರ್ಯಕ್ರಮಗಳು ನಡೆಯಲಿವೆ.
ಕವಿಸಮಯ - ಕವಿನಮನದಲ್ಲಿ ಹಿರಿಯ ಕವಿಗಳಾದ ಲಕ್ಷ್ಮೀಪತಿ ಕೋಲಾರ, ಎಲ್.ಹನುಮಂತಯ್ಯ, ಡಾ.ಕವಿತಾ ರೈ, ಅಲ್ಲಮಪ್ರಭು ಬೆಟ್ಟದೂರು, ಎಚ್.ಎನ್.ಆರತಿ, ಡಾ.ರಮಾನಂದ ಬನಾರಿ, ಡಾ.ರಾಮಚಂದ್ರ ದೇವ, ನಾಡೋಜ ಕೆ.ಎಸ್.ನಿಸಾರ್ ಅಹಮದ್, ಭಾಗವಹಿಸಲಿದ್ದಾರೆ.
ಕಥಾಸಮಯದಲ್ಲಿ ಜನಪ್ರಿಯ ಕಥೆಗಾರರಾದ ವಸುಧೇಂದ್ರ, ಮಿತ್ರಾ ವೆಂಕಟ್ರಾಜ್, ಅಬ್ದುಲ್ ರಶೀದ್, ಮೊದಲಾದ ಕಥೆಗಾರರು ಭಾಗವಹಿಸಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಆಳ್ವಾಸ್ ಎಜುಕೇಷನ್ ಫೌಂಡೇಷನ್ ನ ಮಾಧ್ಯಮ ಸಂಪರ್ಕಾಧಿಕಾರಿ ಹರೀಶ್ ಕೆ.ಆದೂರು, ಆಡಳಿತಾಧಿಕಾರಿ ಸ್ಮಿತಾ ಪಿ.ಐತಾಳ್, ಡಾ.ಧನಂಜಯ ಕುಂಬ್ಳೆ, ರಾಮದಾಸ್ ಅಡ್ಯಂತಾಯ ಉಪಸ್ಥಿತರಿದ್ದರು.

0 comments:

Post a Comment