ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:44 PM

ಅಸ್ಪೃಶ್ಯರು

Posted by ekanasu

ವೈದೇಹೀ ಕಾದಂಬರಿ
ಹಿಂದಿನ ಸಂಚಿಕೆಯಿಂದ...

ರತ್ನ ಹೂಂಗುಟ್ಟುತ್ತ ಇದ್ದಳು. ರವಿ ಮಗುವಾಗಿದ್ದಾಗಲೂ ಹೀಗೆಯೇ ಹೇಳಿದ್ದರು ಪಾರ್ತಕ್ಕ.ಅವಳಿಗೆ ನೆನಪಿದೆ. ಈಗಲೂ ಹೇಳುತ್ತಾರೆ. ಮುಂದೆ ಸರೋಜನಿಗೂ ಹೇಳಿಯಾರು. ಆದರೆ ಹಿಂದೊಮ್ಮೆ ನೀವು ಹೇಳಿದ್ದೀರಿ ಎನ್ನಲು ಮನಸ್ಸಾಗುವುದಿಲ್ಲ.ಆ ಮಾತು ಹಾಗೆ; ಮಗುವಿನ ಕುರಿತ ಮಾತುಗಳೇ ಹಾಗೆ. ಕೇಳುತ್ತಲೇ ಇದ್ದರೆ ರುಚಿ ಹೆಚ್ಚುತ್ತಲೇ ಇರುತ್ತದೆ. ಎದ್ದು ಬಂದು ಹಾಯೆಂತ ಮಲಗಿದ ಮಗುವಿನ ಮುಷ್ಟಿ ಬಿಚ್ಚಿ ನೋಡಲು ಮನಸ್ಸಾಗುವುದಿಲ್ಲ. `ನಾ ಮಲಗುತ್ತೇನಪ್ಪ' - ಎಂದು ಅಲ್ಲಿಯೇ ಒರಗಿಕೊಂಡಳು ರತ್ನ.`ಮಗುವನ್ನು ಮಲಗಿದಾಗ ನೋಡಬಾರದು. ದೃಷ್ಟಿಯಾಗುತ್ತದೆ' - ಎನ್ನುತ್ತ ನುಸಿಬಲೆಯನ್ನು ಬಳಿ ಇಟ್ಟು ಕುಳಿತುಕೊಂಡು ಮೆಲ್ಲನೆ ತೊಟ್ಟಿಲು ಬೀಸತೊಡಗಿದರು. ತೂಗುತ್ತ ತೂಗುತ್ತ ಮನಸ್ಸು ಭಾಸ್ಕರನನ್ನು ನೆನೆಯಿತು.
`ಅವರು ಸಾಯುವಾಗ ನಮ್ಮ ಭಾಸ್ಕರ ಎಷ್ಟಿದ್ದ? ನಾಲ್ಕು ವರ್ಷದ ಮಗು. ಆರು ವರ್ಷದ ವರೆಗೂ ಹೀಗೇ ತೊಟ್ಟಿಲಲ್ಲಿಟ್ಟು ತೂಗಿದ್ದೇ ತೂಗಿದ್ದು. ಬೇರೆ ಪ್ರಪಂಚ ಇತ್ತೇ ನನಗೆ?

ಎಷ್ಟು ಹಾಡು ಹೇಳಿದ್ದೇನೋ. ಅದರ ಅರ್ಧ ಸಹ ಈಗ ಬರುವುದಿಲ್ಲ... ಕಡೆಗೂ ಉಣಿಸಿಯೇ ಬಿಟ್ಟ. ಎಣಿಸಿದರೆ ಕರುಳು ಕತ್ತರಿಸಿದ ಹಾಗೆ ಆಗುತ್ತದೆ.
ರತ್ನ ಸಹಾನುಭೂತಿಯಿಂದ ಕೇಳಿದಳು. `ಬೇಜಾರು ಮಾಡಿಕೊಳ್ಳಬೇಡಿ ಪಾರ್ತಕ್ಕ. ಏನು ಮಾಡುವುದು? ಅದೆಲ್ಲ ನಾವು ಪಡೆದುಕೊಂಡು ಬಂದದ್ದಲ್ಲವೇ?' - ಎಂಬ ಸಮಾಧಾನದ ವಾಕ್ಯಗಳನ್ನು ಬಾಯಿಪಾಠ ಒಪ್ಪಿಸುವವರಂತೆ ಹೇಳಿದಳು.

`ಬೇಜಾರು ಮಾಡಿಕೊಳ್ಳಬಾರದು ಎಂದರೆ ಹೇಗೆ? ಕೂತಲ್ಲಿ ನಿಂತಲ್ಲಿ ನಂಗೆ ಅವನ ನೆನಪು ಆಗುತ್ತದೆ ಗೊತ್ತುಂಟ?'
ಆಗ ಅಲ್ಲಿಗೆ ಸರೋಜನೂ ಬಂದಳು. `ಪಾರ್ತಕ್ಕ ಏನು ಮಾಡುತ್ತಿರಬಹುದು? ನಾನೂ ಒಂಚೂರು ಕೇಳುವಾ ಅಂತ ಬಂದೆ. ಕಂಡರೆ ಅದೇ ಮಾತು, ಭಾಸ್ಕರಣ್ಣನದು? '
`ಹ್ಹೂಂ... ನಿನ್ನ ಭಾಸ್ಕರಣ್ಣನದೇ. ಈ ಪಾರ್ತಕ್ಕನಿಗೆ ಅದನ್ನು ಬಿಟ್ಟರೆ ಬೇರೆ ಯಂತದುಂಟು? ... ನೀ ಮಾತಾಡುವುದು ಕಂಡರೆ ಪ್ರಾಯ ಹೋದ ಅಜ್ಜಿ ನಾನಾ ನೀನಾ ಅಂತ.
ನೀನು ಧೋರಣೆಯ ಸ್ವರ ಬಿಡುಕಾಂಬ'.
`ಅಯ್ಯಯ್ಯ! ನಾನೆಂತ ಧೋರಣೆ ಮಾಡಿದೆ ಈಗ'?
`...'
`ನೀವು ಏನೇ ಹೇಳಿ ಪಾರ್ತಕ್ಕ. ಭಾಸ್ಕರಣ್ಣನನ್ನು ಹೆತ್ತದ್ದು ನಾಳೆ ಅವ ನಿಮ್ಮನ್ನು ನೋಡುತ್ತಾನೆ ಅಂತವ? ಹಾಗಾದರೆ ರತ್ನಕ್ಕ ರವಿಯನ್ನು, ಈ ಹೆಣ್ಣನ್ನು ಹೆತ್ತದ್ದು ನಾಳೆ ಇವಳು ಹೇಳಿದ ಹಾಗೆಯೇ ಅವು ಕೇಳಬೇಕು ಅಂತವ? ಅದರಲ್ಲಿ ಖುಶಿಯೂ ಇದೆಯಲ್ಲ. ಈ ಮಗು ಕೊಡುವ ಖುಶಿಗೆ ಸಾಟಿಯೇ ಇಲ್ಲ ಅಂತ ನೀವೇ ಹೇಳುತ್ತೀರಿ. ಈ ಖುಷಿಯನ್ನು ತೆಗೆದುಕೊಂಡು ಅವು ದೊಡ್ಡದಾದ ಮೇಲೆಯೂ ಅವಕ್ಕಾಗಿ ನಾವು ಪಟ್ಟ ಕಷ್ಟಗಳನ್ನು ಅವಕ್ಕೆ ಕೊಟ್ಟ ಸಾಲವೆಂಬಂತೆ ಹೇಳುತ್ತಾ ಬಡ್ಡಿ ಸಮೇತ ವಸೂಲು ಮಾಡಲು ಹವಣಿಸುತ್ತಿರುವವರಂತೆ ನಾವಾದರೂ ಯಾಕೆ ಮಾಡಬೇಕು?
ನಾ ಹೇಳುವುದಾದರೆ ದೊಡ್ಡವರು , ನೀವೆಲ್ಲ, ಭಾರೀ ಆಸ್ಥೆ ಇಟ್ಟುಕೊಳ್ಳುತ್ತೀರಿ ಮಕ್ಕಳ ಬಗ್ಗೆ. ಅದೇ ತಪ್ಪು'.

ಮುಂದುವರಿಯುತ್ತದೆ...

- ವೈದೇಹಿ.

0 comments:

Post a Comment