ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ


ಉತ್ತರ ಕನ್ನಡ ಜಿಲ್ಲೆಯ ಶಿರಸಿಯಿಂದ ಯಲ್ಲಾಪುರಕ್ಕೆ ಹೋಗುವ ಮಾರ್ಗದಲ್ಲಿ 12.5 ಕಿ.ಮೀ.ಪಯಾಣಿಸಿದರೆ ಅಲ್ಲಿಂದ ಎಡಕ್ಕೆ 1.5 ಕಿ.ಮೀ.ದೂರದ ಹುಳಗೋಳ ಗ್ರಾಮದ ಪಶ್ಚಿಮ ದಿಕ್ಕಿನಲ್ಲಿರುವ ಶಾಲ್ಮಲಾ ನದಿ ಸಹಸ್ರ ಲಿಂಗಗಳ ತವರು. ಪ್ರತಿನಿತ್ಯ ಒಂದಷ್ಟು ಪ್ರವಾಸಿಗರು ಆಗಮಿಸುವ ಸುಂದರ ತಾಣ. ಸರಿಸುಮಾರು 2.5 ಕಿ.ಮೀ.ವ್ಯಾಪ್ತಿಯಲ್ಲಿ ಶಾಲ್ಮಲಾ ನದಿಯೊಳಗಿನ ಶಿಲೆಗಳ ಮೇಲೆ ಬರೋಬ್ಬರಿ 2500 ಈಶ್ವರ ಲಿಂಗಗಳಿರುವುದು ಇಲ್ಲಿನ ವಿಶೇಷ. ಅದರಿಂದಲೇ ಇಲ್ಲಿಗೆ ಸಹಸ್ರಲಿಂಗವೆನ್ನುವ ಹೆಸರು ಬಂದಿದೆ. ಸಹಸ್ರ ಲಿಂಗಗಳ ಮೂಲಕ ಸಾವಿರಾರು ನೋಡುಗರ ಮನಗೆದ್ದಿರುವ ಶಾಲ್ಮಲಾ ನದಿ ಪ್ರವಾಸಿಗರಿಗೊಂದು ಉತ್ತಮ ತಾಣ.


ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ಉಗಮವಾಗುವ ಶಾಲ್ಮಲಾ ನದಿಯಲ್ಲಿ ಕಾಣಸಿಗುವ ಸಹಸ್ರ ಲಿಂಗಗಳಿಗೆ ಹಲವಾರು ವರ್ಷಗಳ ಇತಿಹಾಸವಿದೆ. ಈ ಲಿಂಗಗಳು ಉದ್ಭವಿಸಿದ ಬಗ್ಗೆ ಇರುವ ಪ್ರತೀತಿ, ನಂಬಿಕೆ, ಇತಿಹಾಸಗಳಲ್ಲೂ ಒಂದಷ್ಟು ಗೊಂದಲಗಳಿವೆ. ನದಿಯುದ್ದಕ್ಕೂ ಲಿಂಗಗಳನ್ನು ,ನಂದಿ ವಿಗ್ರಹಗಳನ್ನು ಕಲ್ಲಿನಿಂದ ಕೆತ್ತಲಾಗಿದೆ. ಕೆಲವು ಲಿಂಗಗಳ ಮೇಲೆ ಹಳೆಗನ್ನಡ ಪದಗಳಿವೆ. ಇಲ್ಲಿಯ ಶಾಸನಗಳಲ್ಲಿ ಈ ಸ್ಥಳವನ್ನು 'ಸಹಸ್ರ ಹಳ್ಳಿ'ಎಂದು ಉಲ್ಲೇಖಿಸಲಾಗಿದೆ.
ಸೋಯಿದೇವನು ತನಗೆ ಮಕ್ಕಳಿಲ್ಲವಾದಾಗ ನದಿಯಲ್ಲಿ ಲಿಂಗ ಪ್ರತಿಷ್ಠಾಪಿವುದಾಗಿ ಹರಕೆ ಹೊತ್ತು ಮಕ್ಕಳಾದಾಗ ಲಿಂಗಗಳನ್ನು ಪ್ರತಿಷ್ಠಾಪಿಸಿ ದತ್ತಿ ಬಿಟ್ಟ ಎಂಬ ವಿಷಯವು ಶಾಸನಗಳಲ್ಲಿದೆ. ಸಾಮಾನ್ಯವಾಗಿ ನೋಡುಗರ ಕಣ್ಣಿಗೆ ಇಲ್ಲಿನ ಲಿಂಗಗಳನ್ನು ಹಿಂದಿನ ಕಾಲದ ರಾಜರು ಕೆತ್ತಿಸಿದಂತೆಯೆ ಭಾಸವಾಗುತ್ತಿರುವುದಂತೂ ಸತ್ಯ .ಒಂದು ದೊಡ್ಡ ಕಲ್ಲಿನಲ್ಲಿ ಮಾತ್ರ ವೃತ್ತಾಕಾರದಲ್ಲಿ ಲಿಂಗಗಳಿದ್ದು ಮಧ್ಯ ಭಾಗದಲ್ಲಿ ಬಟ್ಟಲಿನ ಆಕಾರವಿದ್ದು, ಅದಕ್ಕೆ ಸುತ್ತುವರಿದು ನವಗ್ರಹಗಳ ಸಂಕೇತವೆಂಬಂತೆ ಒಂಭತ್ತು ಆಕಾರಗಳನ್ನು ಕೆತ್ತಲಾಗಿದೆ. ಸಾವಿರಾರು ಲಿಂಗಗಳ ಮಧ್ಯೆ ದೊಡ್ಡ ದೊಡ್ಡ ಬಂಡೆಗಳಲ್ಲಿ ಕೆತ್ತಲ್ಪಟ್ಟ ಬಸವನ ವಿಗ್ರಹ,ನಾಟ್ಯ ಭಂಗಿಯ ಕಲಾಕೃತಿಗಳು ನೋಡುಗರ ಮನ ಗೆಲ್ಲುತ್ತಿವೆ.
ಹಿಂದಿನ ಕಾಲದಲ್ಲಿ ಶಿಲ್ಪಕಲೆಯನ್ನು ಕಲಿಸುವ ಶಾಲೆಗಳಿದ್ದು ಸ್ವಾದಿಯ ಅರಸನು ತನ್ನ ಪ್ರೀತಿಯ ಅರಸರಿಗೆ ಕಲಾತ್ಮಕ ವಸ್ತುಗಳನ್ನು ಇಲ್ಲಿ ತಯಾರಿಸಿ ಕಳುಹಿಸುತ್ತಿದ್ದ ಸ್ವಾದಿ ಸೀಮೆಯ ಅನೇಕ ಕಟ್ಟಡಗಳು, ಕಂಬಗಳು, ಮೂರ್ತಿಗಳು ಇಲ್ಲಿಂದಲೇ ರಚಿಸಲ್ಪಟ್ಟವು. ಸ್ವಾದಿಯ ಅರಸನು ಬನವಾಸಿಯ ಅರಸನಿಗೆ ಕಲ್ಲಿನ ಮಂಚ ಮಾಡಿಸಿ ಕಳುಹಿಸುತ್ತಿದ್ದನೆಂಬ ನಂಬಿಕೆಯೂ ಇದೆ. ಇನ್ನು ಪಾಂಡವರಿಂದ ಇಲ್ಲಿನ ಲಿಂಗಗಳು ಕೆತ್ತಲ್ಪಟ್ಟುವು ಎಂಬ ಉಲ್ಲೇಖವು ಇದೆ. ಲಿಂಗಗಳು ಉದ್ಭವಿಸಿದ ಬಗ್ಗೆ ನಿಖರವಾದ ದಾಖಲೆಗಳಿಲ್ಲದಿದ್ದರೂ ಇಲ್ಲಿನ ಎಲ್ಲಾ ಲಿಂಗಗಳು ಮೃದು ಕಲ್ಲಿನಿಂದ ರಚಿಸಲ್ಪಟ್ಟಿದ್ದನ್ನು ಗಮನಿಸಿದಾಗ ಹಿಂದೆ ಇಲ್ಲಿ ಶಿಲ್ಪಕಲೆಯನ್ನು ಕಲಿಸುವ ಶಾಲೆಗಳಿದ್ದುವು. ಕಲಿಕೆಗಾಗಿ ಇಲ್ಲಿನ ಬಂಡೆಗಳ ಮೇಲೆ ಸಾವಿರಾರು ಶಿವಲಿಂಗಗಳನ್ನು ಕೆತ್ತಲಾಗಿದೆ ಎಂಬ ಮಾತನ್ನು ತಲ್ಲಿಹಾಕುವಂತಿಲ್ಲ.

ಲಿಂಗಗಳು ಉದ್ಭವಿಸಿದ ಬಗ್ಗೆ ವಾದ, ಪ್ರತಿವಾದಗಳೇನೇ ಇರಲಿ. ಆದರೆ ಪ್ರವಾಸಿಗರ ಪಾಲಿಗೆ ಇದೊಂದು ಉತ್ತಮ ತಾಣ ಎನ್ನುವುದರಲ್ಲಿ ಎರಡು ಮಾತಿಲ್ಲ. ಹುಳಗೋಳ ಗ್ರಾಮಕ್ಕೆ ಯಾವುದೇ ಬಾಡಿಗೆ ವಾಹನದ ವ್ಯವಸ್ಥಯಿಲ್ಲದಿರುವುದರಿಂದ ಪ್ರವಾಸಿಗರು ತಮ್ಮ ಸ್ವಂತ/ಬಾಡಿಗೆ ವಾಹನಗಳಲ್ಲಿ ಸಂಚರಿಸಬೇಕಾಗಿದೆ. ಲಿಂಗಗಳನ್ನು ನೋಡುವುದಕ್ಕೆ ಯಾವ ಶುಲ್ಕವು ಇಲ್ಲ. ವರ್ಷಂಪ್ರತಿ ಮಳೆಗಾಲದಲ್ಲಿ ಲಿಂಗಗಳು ಕಾಣಸಿಗಲಾರವು. ಮಳೆಗಾಲದಲ್ಲಿ ಒಂದಷ್ಟು ಲಿಂಗಗಳು ನೀರಿನ ಸುಳಿಗೆ ಸಿಕ್ಕಿ ನಾಶವಾಗುತ್ತವೆ ಎಂಬುವುದು ಇಲ್ಲಿನ ಗ್ರಾಮಸ್ಥರ ಮಾತು.

ಈಶ್ವರನ ಹೆಸರಿನಲ್ಲಿ ದಿನನಿತ್ಯ ಇಲ್ಲಿ ಪೂಜೆ ನಡೆಯುತ್ತದೆ. ಶಿವರಾತ್ರಿ ದಿನ ಪ್ರತಿವರ್ಷ ಸಾವಿರಾರು ಜನ ಇಲ್ಲಿ ಸೇರುತ್ತಾರೆ. ಬೇಸಿಗೆ ಕಾಲದಲ್ಲಿ ಮಾತ್ರ ಲಿಂಗಗಳು ವೀಕ್ಷಣೆಗೆ ಸೂಕ್ತ. ಆದರೆ ಬಿಸಿಲ ಬೇಗೆಯನ್ನು ತಡೆದುಕೊಂಡು ಬಂಡೆ ಮೇಲೆ ನಿಂತು ಲಿಂಗಗಳನ್ನು ವೀಕ್ಷಿಸುವುದೇ ಸಾಹಸ. ಒಂದು ವೇಳೆ ನಿಮಗೆ ಎರಡುವರೆ ಸಾವಿರ ಲಿಂಗಗಳ ದರ್ಶನವಾಬೇಕಾದರೆ ನೀವು ನದಿಯುದ್ದಕ್ಕೂ ಎರಡೂವರೆ ಕಿ.ಲೋ ಮೀಟರ್ ದೂರ ಚಲಿಸಲೇಬೇಕು.

- ಚಂದ್ರಹಾಸ ಚಾರ್ಮಾಡಿ


1 comments:

bhatjalsur said...

ಉತ್ತಮ ಮಾಹಿತಿ; ಆಕರ್ಷಕ ಚಿತ್ರಗಳು.
ಆದರೆ ಅಲ್ಲಲ್ಲಿ ಅಸಮಂಜಸ ಪದಪ್ರಯೋಗಗಳು ಹಾಗೂ ಕಾಗುಣಿತ ದೋಷಗಳು ಇವೆ. ಪ್ರೇಕ್ಷಣಿಯರು/ವೀಕ್ಷಣಿಯರು ಎನ್ನುವುದು ಅಶುದ್ಧ ಪ್ರಯೋಗ. ಪ್ರೇಕ್ಷಕ/ವೀಕ್ಷಕ ಅಂತ ಆಗಬೇಕಿತ್ತು.
ಹಾಗೆಯೇ 'ಪಯಾಣಿಸಿದರೆ' 'ಪ್ರತಿಷ್ಠಾಪಿವುದಾಗಿ' 'ಮಡಿಸಿ' 'ತಲ್ಲಿಹಾಕುವಂತಿಲ್ಲ' 'ಸಂಚಾರಿಸಬೇಕಾಗಿದೆ' ಇತ್ಯಾದಿ ಮೇಲ್ನೋಟಕ್ಕೇ ಗೋಚರವಾಗುವ ದೋಷಗಳನ್ನು ಖಂಡಿತವಾಗಿಯೂ ಕಡೆಗಣಿಸುವಂತಿಲ್ಲ.

Post a Comment