ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ವೇಣೂರು: ಏಳೂರು ಏನೂರಾಗಿ ಇದೀಗ ವೇಣೂರಾಯಿತು...ಇದು ವೇಣೂರ ಹೆಸರಿನ ಹಿಂದಿರುವ ಇತಿಹಾಸ.ಫಲ್ಗುಣೀ ನದೀ ದಂಡೆಯಲ್ಲಿ ಲಭಿಸಿದ ಶಿಲಾ ಲೇಖವೊಂದು ವೇಣೂರನ್ನು `ಏನೂರು' ಎಂದು ಕರೆದ ಬಗ್ಗೆ ಉಲ್ಲೇಖಿಸಲ್ಪಟ್ಟಿದೆ. ಏಳು ಊರುಗಳು ಕರಗಿ ಹೋಗಿ `ಏನೂರು' ಆಯಿತು.ಮುಂದೆ ವೇಣೂರು ಎಂದು ಕರೆಯಲ್ಪಟ್ಟಿತು ಎಂಬುದು ಇದರ ಹಿಂದಿರುವ ಕಥೆ.ವೇಣೂರು ಎಂದು ಕರೆಯಲ್ಪಡುವ ಈ ಊರಿನಲ್ಲಿ 390ವರುಷಗಳ ಹಿಂದೆ 770 ಜೈನ ಕುಟುಂಬಗಳು ವಾಸಿಸುತ್ತಿದ್ದವು ಎಂಬ ಮಾಹಿತಿ `ಜೈನಾಚಾರ' ಎಂಬ ಗ್ರಂಥದಲ್ಲಿ ಉಲ್ಲೇಖಿಸಲ್ಪಟ್ಟಿದೆ.ಆ ಸಂದರ್ಭದಲ್ಲಿ ವೇಣೂರು ಬೃಹತ್ ವ್ಯಾಪಾರ ಕೇಂದ್ರವಾಗಿಯೇ ಗುರುತಿಸಲ್ಪಟ್ಟಿತು. ಸೆಟ್ಟಿಗಾರರು, ಯೆಳಮೆಗಳು, ಹಲರು ಮೊದಲಾದ ಹೆಸರಿನಿಂದ ಕರೆಯಲ್ಪಡುತ್ತಿದ್ದ ವ್ಯಾಪಾರಿ ಸಂಘಗಳು ವೇಣೂರಿನಲ್ಲಿ ವ್ಯಾಪಾರ ವ್ಯವಹಾರ ನಡೆಸುತ್ತಿದ್ದವು.ದಿ.ಲೋಕನಾಥ ಶಾಸ್ತ್ರಿಗಳ ಕೃತಿಯನ್ನು ಅವಲೋಕಿಸಿದರೆ ಅಲ್ಲೂ ವೇಣೂರಿನ ಉಲ್ಲೇಖ ಕಂಡು ಬರುತ್ತದೆ. 1965ರ ಸುಮಾರಿಗೆ ಈ ವೇಣೂರಿನ ಜನಸಂಖ್ಯೆ 300ರಷ್ಟಿದ್ದರಂತೆ.ಈ ಪೈಕಿ ಶೇಕಡಾ ಐವತ್ತರಷ್ಟು ಅಕ್ಷರಸ್ಥರೆಂಬುದು ಗಮನಾರ್ಹ. 1763.60 ಹೆಕ್ಟೇರ್ ವಿಸ್ತೀರ್ಣ ಹೊಂದಿರುವ ವೇಣೂರಿನಲ್ಲಿ ಪ್ರಸ್ತುತ ಹಿಂದೂ,ಜೈನ, ಕ್ರೈಸ್ತ, ಮುಸಲ್ಮಾನ ಹೀಗೆ ವಿವಿಧ ಜಾತಿ - ಧರ್ಮ - ಪಂಗಡದ ಜನ ಬಾಳ್ವಿಕೆ ನಡೆಸುತ್ತಿದ್ದಾರೆ. ಸಾಮರಸ್ಯದ ನಾಡು ಎಂಬ ಕೀರ್ತಿ ಈ ವೇಣೂರಿಗೆ ಇದೆ.ವೇಣೂರನ್ನು ಮೇಲ್ನೋಟಕ್ಕೆ ಮೂರು ವಿಭಾಗಗಳಾಗಿ ಔದ್ಯಮಿಕ ಹಿನ್ನಲೆಯಿಂದ ವಿಂಗಡಿಸಬಹುದು. ವೇಣೂರು ಕೆಳಗಿನ ಪೇಟೆ, ವೇಣೂರು ಸೇತುವೆಯ ಪಕ್ಕದ ಪೇಟೆ (ಮಧ್ಯ ಪೇಟೆ) , ವೇಣೂರು ಮೇಲಿನ ಪೇಟೆ. ಈ ಮೇಲಿನ ಪೇಟೆ ಇರುವುದು ಬಾಹುಬಲಿ ಬೆಟ್ಟದ ಸುತ್ತಮುತ್ತಲು. ಇಲ್ಲೇ ಸನಿಹದಲ್ಲಿ ಇತರ ಬಸದಿಗಳು; ಮಹಾಲಿಂಗೇಶ್ವರ ದೇವಸ್ಥಾನ, ಬ್ಯಾಂಕ್, ಪ್ರಿಂಟಿಂಗ್ ಪ್ರೆಸ್,ಫೋಟೋ ಸ್ಟುಡಿಯೋ,ಪೋಸ್ಟ್ ಆಫೀಸ್, ಪೆಟ್ರೋಲ್ ಬಂಕ್, ಸಣ್ಣ ಪುಟ್ಟ ರಿಪೇರಿ ಅಂಗಡಿಗಳು, ಜಿನಸಿ ಅಂಗಡಿಗಳು , ವೆಲ್ಡಿಂಗ್ ಶಾಪ್, ಹೊಟೇಲ್ ಉದ್ಯಮಗಳು ಹೀಗೆ ಕಾಣಸಿಗುತ್ತವೆ. ಪುಟ್ಟ ಪೇಟೆ. ಪೇಟೆ ಮಧ್ಯದಲ್ಲೇ ಬೆಳ್ತಂಗಡಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಹಾದು ಹೋಗುತ್ತದೆ.

ಮಧ್ಯಪೇಟೆಯಲ್ಲಿ ಮೆಡಿಕಲ್ ಶಾಪ್, ಪುಟ್ಟ ಆಸ್ಪತ್ರೆ, ದಿನಸಿ ಅಂಗಡಿ, ಹೊಟೇಲ್, ಫೋಟೋ ಸ್ಟುಡಿಯೋ, ಇತರೆ ವ್ಯವಹಾರ, ಬ್ಯಾಂಕ್ ಉದ್ದಿಮೆ, ಸರ್ಕಾರಿ ಆಸ್ಪತ್ರೆ, ಕಾಲೇಜು, ಶಾಲೆ ಹೀಗೆ ವೈವಿಧ್ಯಮಯ ಅಂಶಗಳನ್ನು ಗಮನಿಸಬಹುದು. ಇಲ್ಲೇ ಅಯ್ಯಪ್ಪ ಸ್ವಾಮಿಯ ಗುಡಿಯೂ ಒಂದಿದೆ.

ಇದಾದ ನಂತರ ಫಲ್ಗುಣೀ ನದಿಗೆ ಸೇತುವೆಯನ್ನು ಕಟ್ಟಿ ಸಂಪರ್ಕವ್ಯವಸ್ಥೆ ಮಾಡಲಾಗಿದೆ. ಅದು ಕೆಳಗಿನ ಪೇಟೆಗೆ ಸಂಪರ್ಕ. ಅಲ್ಲಿ ಬೃಹತ್ ಮಟ್ಟದಲ್ಲಿ ವ್ಯಾಪಾರ ವಹಿವಾಟುಗಳು ನಡೆಯುತ್ತವೆ. ತರಕಾರಿ ಮಾರುಕಟ್ಟೆ, ವಾರದ ಸಂತೆ, ಬಸ್ ನಿಲ್ದಾಣ ಎಲ್ಲವೂ ಇದೇ ಪೇಟೆಯಲ್ಲಿ ಕಾಣಸಿಗುತ್ತವೆ. ಒಟ್ಟಾರೆಯಾಗಿ ಮೂರು ಹಂತದಲ್ಲಿ ವೇಣೂರಿನ ಪೇಟೆ ವಿಭಜಿಸಲ್ಪಟ್ಟಿದೆ.

42ವರುಷಗಳ ಬಳಿಕ ಮೊಟ್ಟಮೊದಲ ಬಾರಿ 2000ನೇ ಇಸವಿಯಲ್ಲಿ ಇದೇ ವೇಣೂರು ಬಾಹುಬಲಿಗೆ ಮಹಾ ಮಜ್ಜನದ ಭಾಗ್ಯ ಒಲಿದಿತ್ತು. ಆ ಸಂದರ್ಭದಲ್ಲಿ ವೇಣೂರು ಪೇಟೆ ಅಷ್ಟೊಂದು ಬೆಳವಣಿಗೆ ಹೊಂದಿರಲಿಲ್ಲ. ಇದೀಗ ಕಟ್ಟಡಗಳು ಈ ಭಾಗದಲ್ಲಿ ದಿನಕ್ಕೊಂದರಂತೆ ತಲೆಯೆತ್ತುತ್ತಿವೆ.ಲಾಡ್ಜ್,ಹೊಟೇಲ್ ಅಭಿವೃದ್ದಿಗೊಂಡಿವೆ. ಒಟ್ಟಾರೆಯಾಗಿ ವೇಣೂರು ಒಂದು ಪ್ರಮುಖ ಪಟ್ಟಣದಂತೆ ಈ ಭಾಗದಲ್ಲಿ ಕಾಣತೊಡಗಿದೆ.

- ಟೀಂ ಈ ಕನಸು.

1 comments:

Shankara Bhat said...

ವೇಣೂರು>ವೇಣುಪುರ=ಬಿದಿರು ಇರುವ ಊರು ಯಾ ಪುರ.
ಬೆದ್ರ ಯಾ ಬಿದಿರೆ ಇದು ಸಹ ಬಿದಿರಿಗೆ ಸಂಬಂದಿಸಿದ ಶಬ್ದ.

Post a Comment