ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
8:17 PM

ಅಸ್ಪೃಶ್ಯರು

Posted by ekanasu

ವೈದೇಹೀ ಕಾದಂಬರಿ...
ಕಳೆದ ಸಂಚಿಕೆಯಿಂದ...

`ಹೆಣೆ , ನಿನ್ನ ಪ್ರಾಯ ಎಷ್ಟು ? ಅನುಭವ ಎಷ್ಟು ? ನಿನ್ನ ವಯಸ್ಸಿಗೆ ನೀನು ಹೀಗೆ ಆಡುವುದೇ ಸರಿ. ಬೇಗ ಒಂದು ಮದುವೆಯಾಗಿ ಆಚೆ ಕಂಡು ಈಚೆ ಕಾಣುವುದರೊಳಗೆ ಒಂದು ಮಗುವಾಗಲಿ. ಆ ಮಗು ದೊಡ್ಡದಾಗಲಿ. ಆಗ ಗೊತ್ತಾಗುತ್ತದೆ ಇದೆಲ್ಲ ಏನು ಅಂತ. ಇಂತಹ ಮಾಯೆ ಬಿಡಬೇಕು ಎನ್ನುತ್ತಾರೆ. ಮಾಯೆಯನ್ನೇ ಬಿಟ್ಟ ಮೇಲೆ ಪ್ರಪಂಚ ಯಾಕೆ ಇರಬೇಕು ?'`ನಾನು ಭಾಸ್ಕರನನ್ನು ಹೇಗೆ ಸಾಕಿದೆ ? ನಿಮ್ಮಂತೆಲ್ಲ ಬೇಕಂಬಷ್ಟು ಇದ್ದು ಸಾಕಿದೆನ? ಆ ದೇವರಿಗೂ ಗೊತ್ತಿತ್ತು ನನ್ನ ಕಷ್ಟ. ಅದಕ್ಕೆ ನನಗೆ ಎಷ್ಟು ಹಾಲಿತ್ತು ಗೊತ್ತುಂಟ? ಎರಡು ವರ್ಷದವರೆಗೂ ಎಳೆದಿದ್ದನಲ್ಲ ಅವ! ಸುಮ್ಮನೆ ಊಜಿದ್ದಲ್ಲ. ಅವ ಮರೆತರೆ ಕೂಗಿ ಕರೆದು ಕುಡಿಸುವಷ್ಟು ಹಾಲು ತುಂಬಿರುತ್ತಿತ್ತು. ಈಗಿನವರ ಹಾಗೆ ಬಚ್ಚಟೆ ಮೊಲೆಯಲ್ಲ. ನಿಮ್ಮದೆಲ್ಲಯಂತದ್ದು? ನಾಲ್ಕು ತಿಂಗಳಿಗೇ ಹಾಲಿಲ್ಲ. ಬಾಟಲಿಯಂತೆ, ಡಬ್ಬಿಯಂತೆ. ಇದು ಮಕ್ಕಳನ್ನು ಸಾಕುವ ಚಂದವಾ ?..' ಎಲ್ಲ ಮರೆತು ನಕ್ಕರು ಒಂದು ಕ್ಷಣ.

ರತ್ನನಿಗೂ ನಗು ಬಂತು.ತುಸು ನಾಚಿಗೆಯೂ ಆಯಿತು. ತನ್ನಷ್ಟಕ್ಕೆ ಕೈ ಸೆರಗು ಸರಿ ಮಾಡಿತು. ತಲೆ ಬೋಳಿಸಿಕೊಂಡು ರವಕೆ ಹಾಕದೆ ಬರಿಯ ಕೆಂಪು ಸೀರೆಯಲ್ಲಿ ಕುಳಿತ ಪಾರ್ತಕ್ಕನ ಎದೆ ಸಹ, ಬಾಡಿ ಬತ್ತಿರುವ ಅವಸ್ಥೆಯಲ್ಲಿಯೂ ಹಸಿಯ ಗುರುತಿದ್ದಂತಿತ್ತು. ಫಕ್ಕೆಂತ `ಅಲ್ಲ ಪಾರ್ತಕ್ಕ , ಗಂಡ ಸತ್ತ ಮೇಲೆ ಹೀಗೆ ರವಕೆ ಸಹ ಹಾಕದೆ ಹೇಗೆ ಕಳೆದಿರಿ ನೀವು !' - ಎಂದು ಕೇಳಿದಳು.
`ಆ ವಿಷಯ ಬಿಡು. ಹೇಳಿದರೆ ರಾಮಾಯಣ ಬಿಟ್ಟು ವಾಲ್ಮೀಕಿ ಇದನ್ನೇ ಬರೆಯುತ್ತಿದ್ದ. ನಾ ಏನು ಹೇಳುತ್ತಿದ್ದೆ ? ಭಾಸ್ಕರನಲ್ಲವೇ ? ಮಾಣಿ ಮದುವೆ ಬೇಡ ಮದುವೆ ಬೇಡ ಅಂದದ್ದು ಕಡೆಗೂ ಕೊರಾತಿಯನ್ನು ಮದುವೆಯಾದನಲ್ಲ! ಅವ ಯಾರನ್ನೇ ಮದುವೆಯಾಗಲಿ. ಅಮ್ಮ, ಹೀಗೆ ಹೀಗುಂಟು ಅಂತ, ನಾ ಸಿಟ್ಟು ಮಾಡಿಕೊಂಡಿದ್ದರೂ , ಹೇಳಿ ಕಾಲಿಗೆ ಬಿದ್ದು ಹೋಗುತ್ತಿದ್ದ ನೋಡು; ನಾ ಮಗ ಇಲ್ಲ ಎಂಬ ಸಮಾಧಾನ ಮಾಡಿಕೊಳ್ಳುತ್ತಿದ್ದೆ. ಅವನಿಗೆ ಅಷ್ಟು ಬುದ್ಧಿ ದೇವರು ಕೊಡಲಿಲ್ಲ '.

ಉಗ್ರಾಣ ಕೋಣೆಗೆ ಸಾಮಾನು ಸೇರಿಸಿಡಲೆಂದು ಹೋಗುತ್ತಿದ್ದ ಗೌರಮ್ಮ ಒಂದು ಗಳಿಗೆ ನಿಂತು ನೋಡಿ ` ಪಾರ್ತಕ್ಕನಿಗೆ ಮಾತಾಡಲಿಕ್ಕೊಂದು ಜನ ಗಟ್ಟಿ ಸಿಕ್ಕಿತು ' - ಎಂದು ನಗುತ್ತ ಹೋದರು.
`ಪರಾಧೀನ ಅಲ್ಲ ಎಂದಳು ನಿನ್ನ ಅಮ್ಮ. ಅಪ್ಪಯ್ಯನೂ . ಅದು ಅವರ ದೊಡ್ಡ ಮನಸ್ಸು. ಆದರೆ ಇದು ನನ್ನ ಜಾಗವಾ? ಎಷ್ಟೆಂದರೂ ಒಂದು ಉಪಕಾರ. ನಾಳೆ ನಾನು ಕೈಕಾಲು ಬಿದ್ದು ಮಲಗಿದಲ್ಲೇ ಆದರೆ ಹೇಳು ಉಚ್ಚೆ ಬಾಚಬೇಕು ಗೌರಿಯೇ. ಇದು ಸಮವ ? ಒಂದೊಂದು ಸಲ ಎಣಿಸುತ್ತ ಹೋದರೆ ರಾತ್ರಿ ತಟಕು ನಿದ್ರೆ ಹತ್ತುವುದಿಲ್ಲ ಗೊತ್ತುಂಟ ?

`ಹಾಗೆಂತ ಅವನ ಹೆಂಡತಿ ಒಳ್ಳೆಯದಂತಲ್ಲ. ಬಂದು ಹೋದವರಿಗೆ ಬಹಳ ಉಪಚಾರವಂತೆ. ಅಪ್ಪಯ್ಯನೇ ಹೇಳುತ್ತಿದ್ದರಲ್ಲ.ಅಪ್ಪಯ್ಯನೇನು ಸ್ವಲ್ಪ ಸಲ ಹೋಗಿದ್ದರ ಅವನ ಮನೆಗೆ ? ಅವರು ಅವನ ಮನೆಯಲ್ಲಿಯೇ ಇದ್ದರಲ್ಲ ?!'

`ಹೌದು ಮಾರಾಯ್ತಿ, ಇವ ಅವನ ಮನೆಗೆ ಯಾವ ಕರ್ಮಕ್ಕೆ ಹೋಗಬೇಕು ? ಹಾಗೆ ಹೋಗುವುದು, ಇರುವುದು ನಂಗೆ ಸಮ ಕಾಣುವುದಿಲ್ಲ. ಯಾಕೆ ಹೋಗಬೇಕು ಜನಿವಾರ ಹಾಕಿಕೊಂಡವ. ಗಾಯತ್ರಿ ಹೇಳುವವ ? ಇರಲಿ, ಭಾಸ್ಕರ ಅವನ ಹತ್ತಿರ ಒಂದು ಸಲವಾದರೂ ಅಮ್ಮ ಇದ್ದಾಳಾ ಸತ್ತಳಾ ಎಂದು ವಿಚಾರಿಸಿದ್ದಾನಾ ಕೇಳು. ಹೆತ್ತ ಅಬ್ಬೆಯನ್ನೇ ವಿಚಾರಿಸದವ ಇವ ದೇಶ ಉದ್ಧಾರ ಮಾಡುತ್ತಾನಾ ? ಹೆಂಡತಿ ಒಳ್ಳೆಯದೇ ಇರಲಿ. ಅವನಿಗೆ ಪರಮಾನ್ನವನ್ನೇ ಮಾಡಿ ಬಡಿಸಲಿ. ನಂಗೇನು ? '


`ನಿನ್ನನ್ನು ಕರೆದುಕೊಂಡು ಬರಲಿಕ್ಕೆ ಹೇಳುತ್ತಿದ್ದಳಂತೆ ಅಪ್ಪಯ್ಯನ ಎದುರಿಗೆ ?' - ಎಂದಳು ಸರೋಜ.

`ಹೇಳದೆ ! ಅಡಿಗೆ ಮಾಡಿ ಹಾಕಲಿಕ್ಕೆ ಒಂದು ಜನವಾಯಿತು... ಅವಳು ಹಾಗೆ ಹೇಳಿದರೆ ನನ್ನ ಮಗನೆನ್ನಿಸಿಕೊಂಡವ ಏನಂದ? ಏನಾದರೂ ಅಂದನಾ ? ಅವನ ಬಾಯಿ ಬಿದ್ದು ಹೋಗಲಿಕ್ಕೆ. , ಮುಟ್ಟಿದ ನೀರಿನಲ್ಲಿ ಹುಳವಾಗಲಿಕ್ಕೆ. ಮಾತನಾಡಿದರೆ ಎಲ್ಲಿ ನಿನ್ನ ಅಪ್ಪಯ್ಯ ನನ್ನನ್ನು ಕರೆದುಕೊಂಡು ಬಂದು ಬಿಡುತ್ತಾನೇನೋ ಅಂತ ಹೆದರಿದನೇನೋ...

ಮುಂದುವರಿಯುವುದು...


1 comments:

Unknown said...

gm medam nanu nimma artical tappade odutene tumba channagi baritiri

totendra s makal
ma journalisam
gulbarga

Post a Comment