ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ


ಆನೆ ಎಂದರೆ ಯಾರಿಗೆ ತಾನೆ ಕುತೂಹಲವಿಲ್ಲ. ಆನೆ ನಡೆದದ್ದೇ ದಾರಿ ಎಂಬಂತೆ ಅದರ ಗಾಂಭೀರ್ಯ ವ್ಯಕ್ತಿತ್ವದ ಬಗ್ಗೆ ಕೇಳಿದ್ದೇವೆ ನೋಡಿದ್ದೇವೆ, ಹಲವಾರು ಬಾರಿ ಆನೆಯ ಚಿತ್ರವನ್ನೋ, ಆನೆಯನ್ನೋ ನೋಡಿ ಅದರ ಗಾತ್ರ, ಆಕಾರವನ್ನು ನೋಡಿ ವಿಸ್ಮಿತರಾಗಿದ್ದೇವೆ, ಮುದಗೊಂಡಿದ್ದೇವೆ. ಆನೆಯನ್ನು ದೇವರೆಂದು ಪೂಜಿಸುವುದು ಇದೆ, ಹಲವಾರು ದೇವಾಲಯಗಳಲ್ಲಿ ಆನೆ ಇರಲೇಬೇಕು . ಜಂಬುಸವಾರಿಗು ಆನೆಯೇ ವಾಹನ, ಗಣಪತಿಗು ಮುಖವಾದದ್ದು ಆನೆಯ ಶಿರವೇ. ಆನೆಯೆಂದರೆ ಎಲ್ಲರಿಗೂ ಪ್ರೀತಿಯಿದೆ, ಇತ್ತೀಚಿನ ದಿನಗಳಲ್ಲಿ ಭಯವೂ ಇದೆ. ಅದು ಮನುಷ್ಯನೇ ನಿರ್ಮಿಸಿಕೊಂಡ ಖೆಡ್ಡಾದ ಫಲ. ಎಲ್ಲಾ ಜೀವಿಗಳಂತೆಯೇ ಅವುಗಳ ಸಂಖ್ಯೆಯೂ ಕ್ಷೀಣಿಸುತ್ತಿದೆ. ಇನ್ನೂ ಕೆಲವು ಜನ ದಂತಚೋರರು ಇದ್ದಿದ್ದರೆ ಇಷ್ಟೊತ್ತಿಗಾಗಲೇ ಇವುಗಳು ನಶಿಸಿರುತ್ತಿದ್ದವು. ಮುಂದಿನ ತಲೆಮಾರಿನವರಿಗೆ ಆನೆಗಳನ್ನು ಕೇವಲ ಚಿತ್ರಗಳಲ್ಲಿ ತೋರಿಸಬೇಕಾದ ಪರಿಸ್ಥಿತಿ ಬಂದೊದಗುತ್ತಿತ್ತೇನೋ ? ಅವುಗಳ ವಾಸ ಸ್ಥಳವೂ ನಶಿಸುತ್ತಿದೆ.ಕಾಡಿನಲ್ಲೂ ಅವುಗಳಿಗೆ ಮೊದಲಿನಂತೆ ಆಹಾರವೂ ದೊರೆಯುತ್ತಿಲ್ಲ. ಇಂತಹ ಅನೇಕಾನೇಕ ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿರುವ ಆನೆಗಳ ಮುಂದೆ ಮಾಧ್ಯಮವಿಲ್ಲ (ಮಾಧ್ಯಮದವರಿಲ್ಲ) ಅವುಗಳಿಗೆ ಲಾಬಿ ನಡೆಸಲು ಗೊತ್ತಿಲ್ಲ. ರೆಸಾರ್ಟ್ಟಗಳಿಗೆ ಹೋಗಿ ತಮ್ಮ ಅತೃಪ್ತಿಯನ್ನು ಹೊರಹಾಕೋಣವೆಂದರೆ ಅಲ್ಲೆಲ್ಲಾ ಬರೀ ರಾಜಕಾರಿಣಿಗಳೇ ತುಂಬಿಹೋಗಿದ್ದಾರೆ ಬೇಕೆಂದರೂ ಅವುಗಳನ್ನು ನಿಭಾಯಿಸಬಲ್ಲ ರೆಸಾರ್ಟ್ಟಗಳು ಇನ್ನೂ ನಿರ್ಮಾಣವಾಗಿಲ್ಲ. ಇನ್ನು ಅವುಗಳು ಬಳಸಬಹುದಾದ ಅಹಿಂಸಾತ್ಮಕ ಅಸ್ತ್ರವೆಂದರೆ ಅದು ಉಪವಾಸ ಅವುಗಳು ಉಪವಾಸ ನಡೆಸಿದರೆ ತಲೆ ಕೆಡಿಸಿಕೊಳ್ಳುವವರು ಯಾರು ? ಉಪವಾಸದಿಂದ ಅವುಗಳು ಸಾಯುತ್ತವೆಯೇ ಹೊರತು ಅವುಗಳ ಧ್ವನಿ ನಮ್ಮನ್ನು ತಲುಪುವುದಿಲ್ಲ. ಇನ್ನು ಅವರು ಕೊನೆಯದಾಗಿ ತಿಳಿವಳಿಕೆಯಿಲ್ಲದೇ ನಡೆಸುವ ಹೋರಾಟವೆಂದರೆ ಅದು ನಗರದ-ಮನುಷ್ಯನ ಮೇಲೆ ನಡೆಸುವ ಹಲ್ಲೆಗಳು ಇದಕ್ಕೆಲ್ಲಾ ಕೊನೆಯೆಂತು ? ಉತ್ತರ ನನಗೂ ಗೊತ್ತಿಲ್ಲ ಅಷ್ಟಕ್ಕೂ ಆನೆಗಳ ಬಗೆಗೆ ಇಷ್ಟೆಲ್ಲಾ ಪೀಠಿಕೆ ಯಾಕೆಂದುಕೊಂಡಿರಾ ಅದಕ್ಕೂ ಕಾರಣವಿದೆ, ಮುಂದೆ ಓದಿ


ವಿಸ್ತಾರವಾದ ಹುಲ್ಲಿನ ಹಾಸಿಗೆಯ ಬಯಲು, ಪಕ್ಕಕ್ಕೆ ಜಲಾಶಯದ ಹಿನ್ನೀರಿನ ಆಗರ, ಸುತ್ತಲೂ ಗಿರಿವನ ಕಾನನ, ಎಲ್ಲೆಲ್ಲೂ ಹಚ್ಚ ಹಸಿರಿನ ಪರಿಸರ, ಇಲ್ಲಿ ಬರೀ ಆನೆಗಳದ್ದೇ ಕಲರವ, ಆನೆಗಳೇ ಇಲ್ಲಿನ ಆಕರ್ಷಣೆಯ ಕೇಂದ್ರ. ಆನೆಗಳ ಆಟ, ಪಾಠ, ಊಟ, ಚೆಲ್ಲಾಟ, ತುಂಟಾಟ, ನೆಗೆದಾಟಗಳು, ಒಟ್ಟಾರೆ ಇಡೀ ವಾತಾವರಣವೇ ಆನೆಮಯ, ಮನುಷ್ಯರಿಗಿಂತ ತಾವೂ ಏನು ಕಡಿಮೆಯಿಲ್ಲವೆಂಬಂತೆ ನಲಿದು ಕುಣಿದು ಸ್ಪರ್ಧಿಸಿ, ಗೆಲವು-ಸೋಲುಗಳನ್ನು ಸಮನಾಗಿ ಸ್ವೀಕರಿಸಿ ಮಾದರಿಯಾಗುತ್ತವೆ. ಆ ಮೂಲಕ ಮನುಷ್ಯರಂತೆಯೇ ತಾವು ಸಮಾಜದ ಒಂದು ಭಾಗ ಮತ್ತು ಎಲ್ಲರೊಂದಿಗೆ ಎಲ್ಲರಂತೆಯೇ ಬದುಕಲಿಚ್ಛಿಸುವವು ಎಂಬುದನ್ನು ತೋರಿಸಿಕೊಡುವ ಪ್ರಯತ್ನವಾಗಿದೆ ಎನ್ನುವುದು ಕೇವಲ ಪರಿಕಲ್ಪನೆಯಲ್ಲ.

ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಸಾಗುವ ಹಾದಿಯಲ್ಲಿ ಗಾಜನೂರು ಜಲಾಶಯದ ಹಿನ್ನೀರು ದಡದಲ್ಲಿರುವ ಸಕ್ರೆಬೈಲು ಆನೆ ಬಿಡಾರದಲ್ಲಿ ಯಾವಾಗಲೂ ಈ ಆನೆಗಳದ್ದೇ ಕಾರುಬಾರು. ಶಿವಮೊಗ್ಗ ನಗರದಿಂದ ಈ ಆನೆ ಬಿಡಾರಕ್ಕೆ ಸುಮಾರು 10 ರಿಂದ 15 ಕಿ.ಮೀ ಗಳ ಅಂತರವಿದೆ. ಇಲ್ಲಿ ಕಾಡಿನಿಂದ ಹಿಡಿದು ತಂದ ಆನೆಗಳನ್ನು ಪಳಗಿಸುವ, ಆರೈಕೆ ಮಾಡುವ, ಶಿಕ್ಷಣ ನೀಡುವ ಕಾರ್ಯ ದಿನನಿತ್ಯವೂ ನಡೆಯುತ್ತದೆ ಅರಣ್ಯ ಇಲಾಖೆಯ ನುರಿತ ಮಾವುತರು ಪ್ರತಿಯೊಂದು ಆನೆಯ ಬಗೆಗೂ ವಿಶೇಷ ಕಾಳಜಿ ವಹಿಸಿ ಅವುಗಳನ್ನು ಪಳಗಿಸುವಲ್ಲಿ, ದಾರಿಗೆ ತರುವಲ್ಲಿ ಯಶಸ್ವಿಯಾಗುತ್ತಾರೆ ಅದರ ಫಲಿತಾಂಶವೇ ಆನೆಗಳು ಮನುಷ್ಯನೊಂದಿಗೆ ಬೆರೆಯುವ ಪ್ರಯತ್ನ ಮಾಡುವ ಈ ಕ್ರಿಡಾ-ಸ್ನೇಹ-ಕಲಾತ್ಮಕ ಮತ್ತು ಭಾಂಧವ್ಯ ಬೆಸೆಯುವ ಕುಟೀರವಾಗಿದೆ.

ಬಿಡಾರದಲ್ಲಿ ದಿನನಿತ್ಯವೂ ಸಾರ್ವಜನಿಕರಿಗೆ ಗಜಪಡೆಗಳ ಸ್ನಾನ, ಕಲಿಕೆ, ಆಟ-ಪಾಠ, ಊಟ, ತುಂಟಾಟ, ಮೋಜು-ಮಸ್ತಿಗಳನ್ನು ದುಡ್ಡುಕೊಟ್ಟು (ರೂ. 5-00) ವೀಕ್ಷಿಸುವ ಅವಕಾಶವಿದೆ. ಇವೆಲ್ಲವೂ ಒಂದಕ್ಕಿಂತ ಮಂತ್ತೊಂದು ಬೆರಗು ಮತ್ತು ಸಂತೊಷವನ್ನುಂಟು ಮಾಡುತ್ತವೆ. ದಿನನಿತ್ಯದ ರಾಜಕೀಯ ದೊಂಬರಾಟಗಳಿಗಿಂತ ಬಹಳ ಭಿನ್ನವಾಗಿರುತ್ತದೆ. ಹಾಗಾಗಿ ಇಲ್ಲಿ ತೆತ್ತ ದುಡ್ಡಿಗೆ ಮೋಸವಿಲ್ಲ. ಇನ್ನು ಮಾವುತರನ್ನು ಒಲಿಸಿಕೊಂಡರೆ ಆನೆಗಳೊಂದಿಗಿನ ಒಡನಾಟ ಇನ್ನೂ ಸುಲಭ ಮತ್ತು ಹತ್ತಿರವಾಗುತ್ತದೆ. ರಜೆಯ ಸಂದರ್ಭಗಳಲ್ಲಿ ಮನೆಯವರೆಲ್ಲರೂ ಸೇರಿ ಬರಬಹುದಾದ ಪ್ರೇಕ್ಷಣೀಯ, ಅನುಭವಾತ್ಮಕ ಮತ್ತು ಆನಂದಮಯ ಕ್ಷಣಗಳಿಗೆ ಸಾಕ್ಷಿಯಾಗಬಲ್ಲ ಸ್ಥಳವಾಗಿದೆ. ಮಕ್ಕಳಿಂದ ಹಿರಿಯರವರೆಗೂ ಯಾರೇ ಇಲ್ಲಿಗೆ ಬಂದರೂ ಆನೆಗಳ ಲೋಕದಿಂದ ತಕ್ಷಣಕ್ಕೆ ಮರಳಲು ಮನಸ್ಸೇ ಬರುವುದಿಲ್ಲ. ಆನೆಗಳ ಲಾಸ-ವಿಲಾಸಗಳನ್ನು ನೋಡುತ್ತಾ ನಮ್ಮನ್ನೇ ನಾವು ಮರೆಯುತ್ತೇವೆ. ಅಷ್ಟರಮಟ್ಟಿಗೆ ಎಲ್ಲರನ್ನೂ ರಂಜಿಸುವಲ್ಲಿ ಈ ಸ್ಥಳವು ಯಶಸ್ವಿಯಾಗುತ್ತದೆ.

ಅಂದ ಹಾಗೆ ವರ್ಷಂಪ್ರತಿ ಇಲ್ಲಿ ವನ್ಯ ಜೀವಿ ಸಪ್ತಾಹದ ಸಮಾರೋಪ ಮತ್ತು ಆನೆಗಳ ದಿನಾಚರಣೆ ಅಂಗವಾಗಿ ಅರಣ್ಯ ಇಲಾಖೆಯ ವತಿಯಿಂದ ಆನೆಗಳ ಉತ್ಸವವನ್ನು ನಡೆಸಸಲಾಗುತ್ತದೆ. ಅಂದು ಆನೆಗಳು ಸುಮಾರು ಒಂದು ವರ್ಷದಿಂದ ನಡೆಸಿದ ತಾಲೀಮಿಗೆ ತೆರೆಯೆಳೆದು ನೇರವಾಗಿ ರಂಗಸ್ಥಳ ಪ್ರವೇಶಿಸುವ ಸಂದರ್ಭ. ಆ ಸಂಧರ್ಭದಲ್ಲೇ ತಮ್ಮ ವೈಶಿಷ್ಟ್ಯಪೂರ್ಣ ಕಲೆಗಳಿಂದ ಅಲ್ಲಿ ಬರುವ ಸಾವಿರಾರು ಪ್ರೇಕ್ಷಕರನ್ನು ಮೂಖವಿಸ್ಮಿತರನ್ನಾಗಿಸುತ್ತದೆ. ಮಾವುತನಿಗೂ ಅಂದು ನಿಜವಾದ ಅಗ್ನಿಪರೀಕ್ಷೆ. ಅಂದು ಪಳಗಿಸಿದ ಆನೆಗಳದ್ದೇ ಮೋಡಿ ಒಂದಕ್ಕಿಂತ ಮತ್ತೊಂದಕ್ಕೆ ತಮ್ಮ ಕೌಶಲ್ಯವನ್ನು ಪ್ರದರ್ಶಿಸುವ ತವಕ.

ನೀರೆರೆಚುವ ಆಟ, ಓಟದ ಸ್ಪರ್ಧೆ, ಹಿಂದೆ ಓಡುವ ಸ್ಫರ್ಧೆ, ಕಬ್ಬು-ಬಾಳೆಹಣ್ಣುಗಳನ್ನು ತಿನ್ನುವ ಸ್ಪರ್ಧೆ, ಪುಟ್ ಬಾಲ್ ಆಟ, ಮಾವುತನ ಆಜ್ಞೆಯನ್ನು ಸರಿಯಾಗಿ ಪಾಲಿಸುವ ಸ್ಪರ್ಧೆ, ಒಂಟಿಕಾಲಿನ ಸ್ಪರ್ಧೆ ಎಲ್ಲದರಲ್ಲೂ ಒಂದಕ್ಕಿಂತ ಒಂದು ಮುಂದು. ಬದಲಾಗುತ್ತಿರುವ ಸ್ಪರ್ಧಾತ್ಮಕ ಯುಗದಲ್ಲಿ ತಮ್ಮ ಸಾಮರ್ಥ್ಯದ ಮೂಲಕ ತಮ್ಮನ್ನು ತಾವು ಸಿದ್ಧರಾಗಿಸಿಕೊಳ್ಳುತ್ತಿರುವ ಪರಿಯೂ ಹೌದು ಎನಿಸುತ್ತದೆ.

ಹಾಡಿಗೆ ತಕ್ಕಂತೆ ಕುಣಿತ, ಸ್ನೇಹ ಸೌಹಾರ್ದತೆಯನ್ನು ಸಾರುವ ಗಜನಡಿಗೆ ಎರಡೂ ಕೈಗಳನ್ನೆತ್ತಿ ಮಾಡುವ ನಮಸ್ಕಾರ, ಕೂರುವ, ಮಲಗುವ, ಮಾವುತನನ್ನು ಹತ್ತಿಸಿಕೊಳ್ಳುವ, ವಿವಿಧ ಭಂಗಿಗಳಲ್ಲಿ ಹೊತ್ತೊಯ್ಯುವ ಕಲೆಗಾರಿಗೆಗಳು, ಸ್ನೇಹಮಯ ಗುಣ, ಕೆಲವೊಮ್ಮೆ ಮಾವುತನ ಆದೇಶ ಪಾಲಿಸದೇ ಚಿನ್ನಾಟವಾಡುವ ತುಂಟತನ ಎಲ್ಲವೂ ನೆರೆದವರನ್ನು ಹಾಸ್ಯದ ಹೊನಲಲ್ಲಿ ತೇಲಿಸುವುದಲ್ಲದೇ ಆನೆಯ ಸಾಮರ್ಥ್ಯದ ಬಗೆಗೂ ಹೆಮ್ಮೆಯುಂಟಾಗುವಂತೆ ಮಾಡುತ್ತದೆ ತಾವು ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಹುದೆಂಬ ಸಂದೇಶದ ಛಾಯೆಯೂ ಇಲ್ಲಿ ವ್ಯಕ್ತವಾಗಿದೆ.

ಈ ಬಾರಿ ಒಟ್ಟು 9 ಪಳಗಿದ ಆನೆಗಳು ತಮ್ಮ ತಮ್ಮ ವಿಭಿನ್ನ-ವಿಶಿಷ್ಟ ಪ್ರತಿಭೆಗಳನ್ನು ಪ್ರದರ್ಶಿಸಿದವು. ಇವುಗಳಲ್ಲಿ ಅತೀ ಹಿರಿಯದಾದ 79 ವರ್ಷದ 'ಇಂದಿರಾ' ದಿಂದ ಹಿಡಿದು ಅತೀ ಕಿರಿಯ 4 ವರ್ಷದ ಆಲೆ ಎಂಬ ಆನೆಯೂ ಸೇರಿತ್ತು. ಉಳಿದಂತೆ ಕಾವೇರಿ (77), ಸುಭದ್ರ (67), ಗೀತಾ (63) ಕಪಿಲ (63), ಗಂಗೆ (57), ಸಾಗರ (21), ಅಮೃತ (6) ಎಂಬ ಆನೆಗಳೂ ಸೇರಿದ್ದವು ಇನ್ನೂ ಎರಡು ಮೂರು ಆನೆಗಳು ಸರಿಯಾಗಿ ಪಳಗಿರದ ಕಾರಣ ಅವುಗಳನ್ನು ಕೇವಲ ಕಟ್ಟಿ ಹಾಕಲಾಗಿತ್ತು ಮುಂದಿನ ದಿನಗಳಲ್ಲಿ ಅವುಗಳೂ ತಮ್ಮ ಕೌಶಲ್ಯವನ್ನು ಪ್ರದರ್ಶಿಸುವ ಎಲ್ಲಾ ಲಕ್ಷಣಗಳು ಕಾಣುತ್ತಿದ್ದವು.

ಕೇವಲ ಸರ್ಕಸ್ಗಳಲ್ಲೋ, ಸಿನಿಮಾಗಳಲ್ಲೋ ನೋಡಬಹುದಾಗಿದ್ದ ಆನೆಗಳ ಪ್ರತಿಭೆ, ಆಟೋಟಗಳನ್ನು ಇಲ್ಲಿ ನೇರವಾಗಿ ಕಣ್ಮನಸೆಳೆಯುವಷ್ಟೂ ಹೊತ್ತು ನೋಡಬಹುದಾಗಿದೆ. ಆನೆಗಳ ಬಗೆಗೆ ಭಯ ಹೊಂದಿರುವವರು ಕೂಡ ಹೋಗಿ ಆನೆಗಳೂ ಮನುಷ್ಯರೊಂದಿಗೆ ಮನುಷ್ಯರಂತೆಯೇ ಬೆರೆಯುವ ಪ್ರಾಣಿಗಳು ಎಂಬುದನ್ನು ಮನಗಾಣಬಹುದಾಗಿದೆ. ಒಟ್ಟಾರೆಯಾಗಿ ಈ ಬಿಡಾರಕ್ಕೆ ಬರುವುದರಿಂದ ಆನೆಗಳ ಲೋಕಕ್ಕೆ ಬಂದಂತೆ ಭಾಸವಾಗುತ್ತದೆ. ಸ್ನೇಹ-ಶಾಂತಿ-ಸೌಹರ್ದತೆಯ ಪ್ರತೀಕದಂತಿರುವ ಪ್ರಕೃತಿ ಮತ್ತು ಮನುಷ್ಯನ ಕೊಂಡಿಯಂತೆ ಈ ಸ್ಥಳವು ಗೊಚರವಾಗುತ್ತದೆ.

ನಿಜಕ್ಕೂ ಇಂತಹ ಸ್ಥಳಗಳಿಗೆ ಭೇಟಿ ನೀಡುವುದರಿಂದ ಕೇವಲ ಸಂತೋಷ ಮಾತ್ರ ಸಿಗದೆ ಪ್ರಾಣಿಗಳ ಮತ್ತು ಮನುಷ್ಯರ ಸಮಬಂಧಕ್ಕೆ ಮಾನವೀಯತೆಯ ಛಾಯೆ ಅಪ್ಪಳಿಸಿದಂತಾಗುತ್ತದೆ. ಪ್ರಾಣಿ ಪ್ರಪಂಚದ ವಿಸ್ಮಯಗಳನ್ನು ತಿಳಿದಂತಾಗುತ್ತದೆ. ಇಂತಹ ಸ್ಥಳಗಳಿಗೆ ಭೇಟಿ ನೀಡುವುದರಿಂದ ವ್ಯಕ್ತಿತ್ವ ವಿಕಸನಕ್ಕೆ ಪ್ರಯೋಜನಕಾರಿಯಾಗುತ್ತದೆ. ಹಾಗಾಗಿ ಅವಕಾಶ ದೊರೆತಾಗ ಕುಟುಂಬದವರೆಲ್ಲರೂ ಸೇರಿ ಒಮ್ಮೆಯಾದರೂ ಸಕ್ರೆಬೈಲ್ನ ಆನೆಬಿಡಾರಕ್ಕೆ ಹೋಗಿ ಬರಲೇಬೇಕು ಇಂತಹ ಅದೆಷ್ಟೋ ಸ್ಥಳಗಳು ನಮ್ಮ ನಡುವಿನಲ್ಲೇ ಇವೆ. ಅವುಗಳಲ್ಲಿನ ವಿಶೇಷತೆಯನ್ನು ಗುರುತಿಸಿ ಆನಂದಿಸಬೇಕಷ್ಟೆ. ಆದ್ದರಿಂದ ಮನಸ್ಸಿಗೆ ರಮಣೀಯತೆಯ ಮೂಲಕ ಆಹ್ಲಾದವನ್ನುಂಟುಮಾಡುವ ಇಂತಹ ಸ್ಥಳಗಳಿಂದ ಕಲಿಯಬೇಕಾದ್ದು, ತಿಳಿಯಬೇಕಾದ್ದು ಬಹಳಷ್ಟಿದೆ. ಹಾಗದರೆ ನೀವು ಹೋಗಬೇಕಾದ ಸ್ಥಳಗಳ ಪಟ್ಟಿಯಲ್ಲಿ ಆನೇ ಬಿಡಾರದ ಹೆಸರನ್ನೂ ಸೇರಿಸಿಕೊಳ್ಳಿ.

ಕೊನೆ ಮಾತು...


ಅಂತಹ ಆನೆಗಳಿಗೂ ಬುದ್ಧಿ ಕಲಿಸುವ, ಪಳಗಿಸುವ, ಅವುಗಳನ್ನು ಸನ್ನಡತೆಯ ಹಾದಿಯಲ್ಲಿ ನಡೆಸುವ, ಶಿಲ್ಪಿಸುವ ಮಾವುತರಿಗೆ (ಆನೆಯ ಶಿಕ್ಷಕರು) ಒಂದು ನಮನವಿರಲಿ ಯಾಕೆಂದರೆ ಅಂತಹ ಪ್ರತಿಭಾವಂತ ಆನೆಗಳ ಬೆನ್ನ ಹಿಂದೆ (ಮೇಲೆ) ಇರುವ ಗುರುಗಳು ಇವರೇ ತಾನೆ.- ಶ್ರೇಯಾಂಕ ಎಸ್. ರಾನಡೆ
ಪ್ರಥಮ ಎಂ.ಎ., ಕನ್ನಡ ವಿಭಾಗ
ಮಂಗಳೂರು ವಿಶ್ವವಿದ್ಯಾನಿಲಯ
ಮಂಗಳ ಗಂಗೋತ್ರಿ, ಕೋಣಾಜೆ.

6 comments:

ಪ್ರವೀಣ ಚಂದ್ರ said...

ಚೆನ್ನಾಗಿದೆ ಶ್ರೇಯಾಂಕ

Anonymous said...

ಒಳ್ಳೆಯ ಲೇಖನ. ಸ್ಥಳದ ಬಗ್ಗೆ ನೇರ ನಿರೂಪಣೆಯಿರಲಿ. ಚಿತ್ರಗಳಿಗೂ ತುಂಟ ಶೀಷಿಱಕೆಗಳನ್ನು ಕೊಟ್ಟರೆ ಇನ್ನೂ ಸೊಗಸು. ಬರವಣಿಗೆ ಮುಂದುವರಿಯಲಿ. ಶುಭಾಶಯಗಳು
ಶರತ್ ಹೆಗ್ಡೆ

Anonymous said...

thumaba chennagide.. hege continue baritha iru..
nillisbeda...
Darshan B.M

Rakesh.C said...

ಚಲೋ ಉಂಟು ನಿನ್ನ ಲೇಖನ,ಹೀಗೆ ಮುಂದುವರಿಸು......ಹಾಗೆ ಆನೆಗಳನ್ನು ಪಳಗಿಸುವಾಗ ಅವಕ್ಕೆ ನೀಡುವ ಹಿಂಸೆಗಳ ಬಗ್ಗೆಯು ಬರೆಯಬೇಕು.ಆನೆಯೊಂದೆ, ತನ್ನ ನೋವನ್ನು ಕಣ್ಣಿರು ಹರಿಸುವ ಮೂಲಕ ಹೇಳಿಕೊಳ್ಳುವ ಪ್ರಾಣಿ.ಮನುಷ್ಯನ ಮನರಂಜನೆಗಾಗಿ ಇವೆಲ್ಲ ಬೇಕ? ಅವುಗಳ ಪಾಡಿಗೆ ಅವುಗಳನ್ನು ಬಿಡುವುದು ಲೇಸಲ್ಲವೇ?ಎಂದು ಒಮ್ಮೊಮ್ಮೆ ನನಗೆ ಅನಿಸುವುದುಂಟು.ಒಳ್ಳೆಯದಾಗಲಿ ಶ್ರೇಯಾಂಕ.

ಅಶ್ವಥ್ ಸಂಪಾಜೆ said...

ಚೆನ್ನಾಗಿದೆ . ashwath sampaje

Ramakrishna said...

Shreya tumba chennagide nijavaglu nanage aanegala bagge istondu gottirlilla. nannante esto janakke vishaya tilitu thanks

Post a Comment