ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸಾಹಿತ್ಯ

ವಸುಧೇಂದ್ರ ಎಂಬ ವಿಶಿಷ್ಟವಾದ ಪ್ರತಿಭೆ ತಮ್ಮ ಸರಳವಾದ ಬರಹದ ಶೈಲಿ, ಭಾವನಾ ಲೋಕದಲ್ಲಿ ಒದುಗರನ್ನು ತೇಲಿಸುವ ಶಕ್ತಿಯ ಆಳವಾದ ಅನುಭವದ ಹೊತ್ತಿಗೆಯನ್ನು ಹೊತ್ತಗೆಯಲ್ಲಿ ಅರಳಿಸುವ ಕಥಾಗರ.


ಆದರೆ ಕಥೆಗಷ್ಟೆ ಸೀಮಿತಗೊಳ್ಳದ ಕಾದಂಬರಿಕಾರ, ಲಲಿತ ಪ್ರಬಂಧಕಾರ, ಒಳ್ಳೆಯ ಮಾತುಗಾರ ಮೇಲಾಗಿ ಸಹೃದಯರ ಗೆಳೆಯ . ದೈನಂದಿನ ಜೀವನದ ಇರಸು- ಮುರುಸು, ಮನುಷ್ಯ ಸಂಬಂಧಗಳ ತಾಳಮೇಳ, ಹಳ್ಳಿಯ ಜೀವನ, ಜನರ ಮುಗ್ದತೆ ಇಂತಹ ಹಲವಾರು ಸಣ್ಣ ಪುಟ್ಟ ವಿಚಾರಗಳೂ ಇವರ ಕೃತಿಯಲ್ಲಿ ಮುಖ್ಯವಾಗುತ್ತವೆ.

ಅಷ್ಟರ ಮಟ್ಟಿಗೆ ಅವು ಇವರನ್ನ ಕಾಡಿವೆ ಎಂದರೆ ತಪ್ಪಾಗುವುದಿಲ್ಲ. ಅಂತೆಯೇ ಸರ್ವೇ ಸಾಮಾನ್ಯ ವಿಚಾರಗಳನ್ನು ರಸವತ್ತಾಗಿ, ವಿಭಿನ್ನವಾಗಿ ತಿಳಿಸಿಕೊಡುವ ಪ್ರಯತ್ನ ಇವರ ಎಲ್ಲಾ ಸಾಹಿತ್ಯ ಸೃಷ್ಠಿಗಳಲ್ಲಿ ಕಾಣ ಬಹುದಾದ ಒಂದು ಪ್ರಧಾನವಾದ ಅಂಶ. ಹೀಗೆ ವಸುದೇಂದ್ರರು ಮೂಲತಃ ಸಾಫ್ಟವೇರ್ ಉದ್ಯಮಿಯಾದರೂ ಪ್ರವೃತ್ತಿಯಿಂದ ಪಕ್ಕಾ ಲೇಖಕ.

ಕೆಲಸದ ಒತ್ತಡದ ನಡುವೆಯೂ ಸಿಕ್ಕ ಸಮಯದಲ್ಲೇ ಸಾಹಿತ್ಯ ರಚನಾಕ್ರಿಯೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಇವರು ಈಗಂತೂ ತಮ್ಮ ಸಮಯವನ್ನು ಸಾಹಿತ್ಯಕ್ಕಾಗಿಯೇ ಮುಡಿಪಾಗಿಟ್ಟಿದ್ದಾರೆ. ಯಾಕೆಂದರೆ ತಮ್ಮ ಸಾಫ್ಟವೇರ್ ಕೆಲಸದಿಂದ ಸ್ವಲ್ಪ ಕಾಲದವರೆಗೆ ದೂರ ಬಂದಿದ್ದಾರೆ.
ಕುಟುಂಬದಲ್ಲಿ ಯಾವುದೇ ಸಾಹಿತ್ಯಿಕ ವಾತಾವರಣದಿಂದ ಹಿನ್ನಲೆಯಿಲ್ಲದಿದ್ದರೂ ಬಾಲ್ಯದಿಂದ ಇಂದಿನವರೆಗಿನ ಜೀವನಾನುಭವ ಮೇಲಾಗಿ ಅವರ ತಾಯಿ ದಿನವೂ ಹೇಳುತ್ತಿದ್ದ ಕಥೆಗಳು ಅವರನ್ನು ಕಥೆ, ಪ್ರಬಂಧಗಳನ್ನು ರಚಿಸುವಂತೆ ಪ್ರೇರೇಪಿಸಿತು.

ಈ ಹೊತ್ತಿಗೆ ಅತ್ಯಂತ ಜನಪ್ರಿಯ ಕಥೆಗಾರರಲ್ಲಿ ಒಬ್ಬರಾದ ವಸುಧೇಂದ್ರರು ತಮ್ಮ ಸರಳ ಉತ್ತರ ಕರ್ನಾಟಕದ ಗ್ರಾಮೀಣ ಭಾಷೆಯ ಪ್ರಬಲವಾದ ಬಳಕೆಯ ಜೊತೆಗೆ ಓದುಗರ ಭಾವಾಲೋಕವನ್ನು ತಟ್ಟುವ, ಓದುಗರು ಭಾವಾಲೋಕದಲ್ಲಿ ವಿಹರಿಸುವಂತೆ ಮಾಡಿವ ವಿಶೇಷ ಶಕ್ತಿಯಿದೆ. ಅದೇ ಕಾರಣದಿಂದಲೋ ಏನೋ ಅಥವಾ ತಾಯಿ ಮಗನ ಸಂಬಂಧವನ್ನು ಸೂಕ್ಷ್ಮವಾಗಿ ವಿವೇಚಿಸಿದ್ದದರ ಕಾರಣದಿಂದಲೂ ಇರಬಹುದು "ನಮ್ಮಮ್ಮ ಅಂದ್ರೆ ನನಗಿಷ್ಟ" ಎನ್ನುವ ಪ್ರಬಂಧ ಸಂಕಲನವು ಹತ್ತನೇ ಮುದ್ರಣಕ್ಕೆ ತಯಾರಾಗಿ ನಿಂತಿದೆ. ಇದೇ ರೀತಿಯಲ್ಲಿ ಇವರ ಕೃತಿಗಳನ್ನು ಬಿಸಿಬಿಸಿ ಕಜ್ಜಾಯದಂತೆ ಓದುಗರು ಸ್ವೀಕರಿಸಿದ್ದಾರೆ.ಅಂದಹಾಗೆ ವಸುಧೇಂದ್ರ ಚಂದ್ರ ಅವರು ಮಾತಿಗೆ ಸಿಕ್ಕಿದ್ದು ಈ ಬಾರಿಯ ಆಳ್ವಾಸ್ ನುಡಿಸಿರಿಯಲ್ಲಿ. ಅವರು ಅಲ್ಲಿ "ಕಥಾಸಮಯ" ಕಾರ್ಯಕ್ರಮದಲ್ಲಿ ತಮ್ಮ ಕಥೆಯನ್ನು ವಾಚಿಸಲು ಬಂದಿದ್ದರು. ಹಾಗೆಯೇ ನನಗೆ ಮಾತಿಗೆ ಸಿಕ್ಕಿದ್ದು. ನಾನು ಅವರ ಸುಮಾರು ಒಂದು ಘಂಟೆಗಳ ಅವಧಿಯನ್ನು ತಿಂದದ್ದು ಇವೆಲ್ಲ ಈ ಸಂದರ್ಶನ ಸ್ವರೂಪದ ಲೇಖನಕ್ಕೆ ಸಾಕ್ಷಿಯಾಯಿತು.

ಸಣ್ಣ ಪ್ರಶ್ನೆಗಳಿಂದ ಆರಂಭವಾದ ಸಂವಾದದಲ್ಲಿ ಘಂಟೆ ಹೋದದ್ದೇ ತಿಳಿಯಲ್ಲ. ಆಪ್ತತತೆಯೂ ಗಟ್ಟಿಗೊಳ್ಳುತ್ತಾ ಹೋದದ್ದೂ ಗೋಚರವಾಗಲಿಲ್ಲ. ಅದಕ್ಕೆಲ್ಲಾ ಒಂದು ವೇದಿಕೆ ಕಲ್ಪಿಸಿಕೊಟ್ಟವರು ಮತ್ತೊಬ್ಬ ಕಥೆಗಾರ-ಕಾದಂಬರಿಕಾರ ಅನುಬೆಳ್ಳೆ ನಾಮಾಂಕಿತ ರಾಘವೇಂದ್ರ ಬಿ. ರಾವ್.
ವಸುದೇಂದ್ರರು ಸಾಹಿತ್ಯ ರಚಿಸಲು ಪ್ರೇರಣೆಯಾದ, ಪ್ರಭಾವ ಬೀರಿದ ಅಂಶಗಳು ಹೀಗಿವೆ; ಬಾಲ್ಯದಿಂಲೂ ತಾಯಿ ಹೇಳುತ್ತಿದ್ದ ಕಥೆಗಳು, ಬದುಕಿನ ಅನುಭವಗಳು, ಹೆಚ್ಚು ಹೆಚ್ಚಾಗಿ ನೋಡಿದ ಪಾಶ್ಚಾತ್ಯ ಅಥವಾ ಆಂಗ್ಲ ಸಿನೆಮಾಗಳು- ಹೀಗೆ ಅಂತಹ ಸಿನೆಮಾಗಳನ್ನು ನೋಡುವುದರಿಂದ ಹೊಸತನ, ಹೊಸಹೊಳಪು, ಹೊಸ ನೋಟಗಳು ಬೀರಲು ಸಾಧ್ಯ ಎಂದೇ ಅವರು ನಂಬಿದ್ದಾರೆ.

ಹಾಗೂ ಅದೇ ಸಲಹೆಯನ್ನು ಇತರರಿಗೂ ನೀಡುತ್ತಾರೆ. ಅದೇ ರೀತಿ ಕುವೆಂಪು, ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಹಾಗೂ ಶಿವರಾಮ ಕಾರಂತರು ಅವರನ್ನು ಬಹಳಷ್ಟು ಪ್ರಭಾವಿಸಿದ್ದಾರೆ ಎನ್ನುತ್ತಾರೆ. ಕುವೆಂಪುರವರ ಕಲಾತ್ಮಕತೆ, ಮಾಸ್ತಿಯವರ ಧೈರ್ಯ, ಕಾರಂತರ ಅನುಭವಗಳನ್ನು ಓದಿದ ಇವರನ್ನೂ ಸಾಹಿತ್ಯ ರಚಿಸುವಂತೆ ಪ್ರೇರೇಪಿಸಿತು. ಬದುಕಿನ ಬಗೆಗಿನ ಪ್ರೀತಿ, ಕಾಡುವ ಮನುಷ್ಯ ಮನುಷ್ಯ ಸಂಬಂಧಗಳು ಇವರನ್ನು ಸದಾ ಕಾಡುವುದಿದೆಯಂತೆ. ಪರಿಸರ ಯಾವುದಾದರೂ ಸರಿ ಅಲ್ಲಿ ವಾಸಿಸುವ ಜನರೇ ಮುಖ್ಯರೆನಿಸುತ್ತಾರೆ ಅನ್ನುತ್ತಾರೆ.
ಇನ್ನು ಇವರ ಕೃತಿಗಳಲ್ಲಿ ಸಾಮಾನ್ಯರಂತಹ ಸಾಮಾನ್ಯರೂ ಅಂದರೆ ತೀರಾ ಕಡೆಗಣಿಸಲ್ಪಟ್ಟವರೂ ಕೂಡಾ ಮುಖ್ಯರಾಗುತ್ತಾರಲ್ಲ ಎಂಬ ಪ್ರಶ್ನೆಗೆ ಅವರ ಉತ್ತರ ಹೀಗಿತ್ತು - ಲೇಖಕನಿಗೆ 'ಸೂಕ್ಷ್ಮತೆ' ಇರಬೇಕು ಮತ್ತು ಮಕ್ಕಳ ರೀತಿಯಲ್ಲಿ ಬದುಕಬೇಕು ಮತ್ತು ಅಹಂಭಾವವನ್ನು ತೊರೆಯಬೇಕು ಎನ್ನುತ್ತಾರೆ.

ಇವರಲ್ಲಿ ಹುಟ್ಟುವ ಕಥೆ, ಪ್ರಬಂಧ, ಕಾದಂಬರಿಗಳ ವಸ್ತು ಬಹಳ ಹಿಂದಿನಿಂದಲೇ ಮನಸ್ಸಿನಲ್ಲಿ ಕಾಡುತ್ತಿರುತ್ತದೆ. ಅಮೂರ್ತ ರೂಪದಲ್ಲಿ ಬೆಳೆಯುತ್ತಾ ಸಾಗುತ್ತಿರುತ್ತದೆ. ಹೀಗೆ ಮನಸ್ಸಿನಲ್ಲಿ ಮೊಳಕೆಯೊಡೆಯುವ ಚಿಗುರು ಹದವಾಗುತ್ತಾ, ಮಾಗುತ್ತಾ ಸಾಗಿ ಯಾವುದೋ ಒಂದು ಸಂದರ್ಭದಲ್ಲಿ ಮೂರ್ತ ರೂಪಕ್ಕೆ ಬರುತ್ತದೆ ಎನ್ನುತ್ತಾರೆ. ಹಾಗೆಯೇ ಇವರು ಪೆನ್ನು-ಪೇಪರನ್ನು ಬಳಸಿ ಸಾಹಿತ್ಯ ರಚಿಸಿದ್ದು ಬಹಳ ಕಡಿಮೆ. ಇವರದ್ದೇನಿದ್ದರೂ ನೇರವಾಗಿ ಗಣಕಯಂತ್ರದಲ್ಲೇ, ಅಂದರೆ ಆ ಮೂಲಕ ಚಿಂತನೆಯ ಬದಲಾವಣೆಗಳನ್ನು ಸುಲಭವಾಗಿ ಮಾಡಿಕೊಳ್ಳಬಹುದು ಎಂಬುದೇ ಆಗಿದೆ.

ವರ್ತಮಾನಕ್ಕೆ ಸಂವಾದಿಯಾಗಿ ಸಾಹಿತ್ಯ ರಚಿಸಬೇಕು ಎನ್ನುವ ಇವರು ಇತಿಹಾಸ ಉಳಿಸುವುದರಲ್ಲಿ ನಂಬಿಕೆಯನ್ನು ಹೊಂದಿಲ್ಲ, ತಮ್ಮ ಸಾಹಿತ್ಯದ ಮೂಲಕ ಓದುಗರನ್ನು ರಂಜಿಸುವುದಷ್ಟೇ ಅವರ ಉದ್ದೇಶವಲ್ಲ. ಹೊಸತನ್ನು ಹೇಳುವುದರ ಮೂಲಕ ಸಾರ್ವಕಾಲಿಕ ಮೌಲ್ಯಗಳನ್ನು ಪ್ರತಿಪಾದಿಸಬೇಕು ಎನ್ನುತ್ತಾರೆ. ಹಾಗೆಯೇ ಬರವಣಿಯಲ್ಲಿ ಸಂದರ್ಭಕ್ಕನುಸಾರವಾದ ಅಗತ್ಯವಾದ ಲಾಲಿತ್ಯ, ಅನುಭವ ಎಲ್ಲ ಬೇಕು ಎನ್ನುತ್ತಾರೆ. ಆದರೆ ಅದರ ಹೆಸರಿಲ್ಲಿ ಲಾಲಿತ್ಯದ ಅತಿಯಾದ ಹೇರಿಕೆ ಅನುಭವಗಳ ಅನಗತ್ಯ ತುರುಕುವಿಕೆಯಿಂದ ಕೃತಿಯು ಜಡ್ಡು ಹಿಡಿಯುತ್ತದೆ ಎನ್ನುತ್ತ ಮುಗ್ದತೆಯ ನಗುವನ್ನು ಬೀರುತ್ತಾರೆ.

ಜಸಾಮರಸ್ಯದಿಂದ ಸಂಘರ್ಷವನ್ನು ದೂರ ಮಾಡಬೇಕು ಎನ್ನುತ್ತಾರೆ. ಇನ್ನು ಅವರ ಕೃತಿಗಳ ಬಗ್ಗೆ ಮಾತನಾಡುತ್ತಾ ಅವರಿಗೆ ನಿರೂಪಣೆಯ ತಂತ್ರಗಾರಿಕೆಯಲ್ಲಿ ಆಸಕ್ತಿಯೂ ಇಲ್ಲ ಮತ್ತು ನಂಬಿಕೆಯೂ ಇಲ್ಲ ಎನ್ನುತ್ತಾರೆ. ಅನಿಸಿದ್ದನ್ನು ಬರೆಯಿತ್ತಾ ಹೋಗಬೇಕು ಆಗಲೇ ಸಾಹಿತ್ಯ ಹೆಚ್ಚು ಆಪ್ತವಾಗುತ್ತದೆ ಎನ್ನುತ್ತಾರೆ ರಸಾನುಭವಿ ಕಥೆಗಾರರಾದ ವಸುದೇಂದ್ರರು.
ಕಥೆಗಳು ಬೆಳೆದು ಬಂದ ಪರಿಸರದಲ್ಲೇ ಹುಟ್ಟುತ್ತದೆ ಎನ್ನುತ್ತ 'ಪುಸ್ತಕ ಮಾರಾಟದ ಸೊಗಡಾಗಬಾರದು' ಎಂಬ ಎಚ್ಚರಿಕೆಯನ್ನು ನೀಡುತ್ತಾರೆ. ಕನ್ನಡದಲ್ಲಿ ಉತ್ತಮವಾದ ಹೊಸ ಜಾಯಮಾನದ ನವೀನ ಶೈಲಿಯ ಹಲವಾರು ಉತ್ತಮ ಬರಹಗಾರರು ಬರೆಯುತ್ತಾರೆ. ಅದು ಒಳ್ಳೆಯ ಬೆಳವಣಿಗೆ ಆದರೆ ಮುದ್ರಣ ಸಂಸ್ಥೆಗಳು ಯತೇಚ್ಚವಾಗಿ ಪುಸ್ತಗಳನ್ನು ಪ್ರಕಟಿಸುವ ಭರಾಟೆಯಲ್ಲಿ ಉತ್ತಮ ಗದ್ಯ ಕೃತಿಗಳು ಹೊರಹೊಮ್ಮುತ್ತಿಲ್ಲವಲ್ಲ? ಎಂಬ ಪ್ರಶ್ನೆಗೆ ಅವರು ಹೇಳುವ ಉತ್ತರ ಬಹಳ ಗಂಭೀರವಾದದ್ದು ಮತ್ತು ಆಲೋಚನಾರ್ಹವಾದದು - "ಸರಕಾರಗಳು ಮೊದಲು ಪುಸ್ತಕಗಳನ್ನು ಕೊಂಡುಕೊಳ್ಳುವುದನ್ನು ತಾತ್ಕಾಲಿಕವಾಗಿಯಾದರೂ ನಿಲ್ಲಿಸಬೇಕು" ಆಗಲೇ ಗಂಭೀರವಾದ ಗದ್ಯ ಉದಯಿಸಲು ಸಾಧ್ಯ ಎನ್ನುತ್ತಾರೆ.

ಇನ್ನು ನಮ್ಮ ಶಿಕ್ಷಣ ವ್ಯವಸ್ಥೆಯ ಬಗ್ಗೆ ಸ್ವಲ್ಪ ಬೇಸರದಲ್ಲಿಯೇ ಪ್ರಾಥಮಿಕ ಹಂತದಿಂದಲೇ ಸಾಹಿತ್ಯದ ಪ್ರೀತಿಯನ್ನು ಬೆಳೆಸಬೇಕು, ಸಾಹಿತ್ಯದಿಂದ ಶಿಕ್ಷಣವನ್ನು ಕಲಿಸಬೇಕು ಎನ್ನುತ್ತಾರೆ. ಅಂತೆಯೇ ಪಾಶ್ಚಾತ್ಯರು ಹೆಚ್ಚು ಹೆಚ್ಚು ಸಾಹಿತ್ಯವನ್ನು ಓದುತ್ತಾರೆ, ಅಲ್ಲಿನ ಸರಕಾರ ಆ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಕೈಗೊಳ್ಳುತ್ತವೆ, ಗ್ರಂಥಾಲಯಗಳು ಅದೇ ಕೆಲಸವನ್ನು ಮಾಡುತ್ತವೆ. ಇಲ್ಲೂ (ನಮ್ಮ ದೇಶದಲ್ಲೂ) ಅಂತಹದ್ದೇ ಹಲವಾರು ಬದಲಾವಣೆಗಳನ್ನು ಸಾಧ್ಯಾವಾಗಿಸಬೇಕು ಎಂಬುದನ್ನು ಸ್ಪಷ್ಟಪಡಿಸುತ್ತಾರೆ.

ಜಾಗತೀಕರಣದ ಈ ಸಂದರ್ಭವನ್ನು ಹೇಗೆ ಸದ್ಬಳಕೆ ಮಾಡಿಕೊಳ್ಳಬೇಕೆಂಬುದು ಅವರ ಅಭಿಪ್ರಾಯ. ಹಾಗೆಯೇ ಮುಂದಿನ ತಲೆ ಮಾರಿನ ಬರಹಗಾರರಿಗೆ ಏನಾದರೂ ಸಲಹೆ ಸೂಚನೆಗಳಿವೆಯಾ? ಎಂದು ಕೇಳೆದರೆ ನಾನು ಹೊಸ ತಲೆಮಾರಿನವನೇ, ನನಗೂ ಹೆಚ್ಚೇನು ವಯಸ್ಸಾಗಿಲ್ಲ ಎನ್ನುತ್ತಾ ಮುಗ್ದತೆಯ ಮುಕ್ತ ನಗುವನ್ನು ಬೀರುತ್ತಾರೆ.

ಇವರ ಬಗ್ಗೆ ಇನ್ನೊಂದು ಸ್ವಾರಸ್ಯಕರ ಸಂಗತಿಯೊಂದನ್ನು ತಿಳಿಸಬೇಕು. ಇವರು ಬರಹವನ್ನು ಆರಂಭಿಸಿದಾಗ ಇಂತಹ ಬರಹಗಳನ್ನು ಯಾರು ಪ್ರಕಟಿಸುತ್ತಾರೆ ಹೋಗ್ರಿ? ಎಂದವರೇ ಹೆಚ್ಚು. ಆಗಲೇ ಹುಟ್ಟಿಕೊಂಡದ್ದಿ "ಛಂದ ಪ್ರಕಾಶನ". ಈ ಹೊತ್ತಿನಲ್ಲಿ ಒಂದು ಉತ್ತಮ ಪ್ರಕಾಶನ ಸಂಸ್ಥೆಯೂ ಹೌದು. ಹಾಗೆಯೇ ಯುವ ಬರಹಗಾರರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ, ಸ್ಪರ್ಧೆ ನಡಿಸಿ ಆಯ್ಕೆಯಾದ ಪುಸ್ತಕವನ್ನು "ಛಂದ ಪ್ರಕಾಶನದ" ಮೂಲಕವೇ ಪ್ರಕಟಿಸುತ್ತಾರೆ. ಛಂದ ಪ್ರಕಾಶನವು ಓದುಗರನ್ನು- ಓದನ್ನು ಪ್ರೋತ್ಸಾಹಿಸುವ, ಬೆಳೆಸುವ ಉದ್ದೇಶದಿಂದ ಒಂದು ಮಹತ್ವದ ಹೆಜ್ಜೆಯನ್ನು ಇಟ್ಟಿದೆ. ಅದೆಂದರೆ ಈ ಪ್ರಕಾಶನದ ಪುಸ್ತಕ ಬೇಕೆಂದರೆ ಛಂದ ಪ್ರಕಾಶನದ ಕಛೇರಿಗೆ ಕರೆ ಮಾಡಿದರಾಯ್ತು, ಅವರೇ ಬೇಕಾದ ಪುಸ್ತಕವನ್ನು ಮನೆಬಾಗಿಲಿನ ತನಕವೂ ತಲುಪಿಸುತ್ತಾರೆ. ಗಾಬರಿಬೇಕಿಲ್ಲ ನೀವು ಅವರಿಗೆ ಪಾವತಿಸಬೇಕಾದದ್ದು ಪುಸ್ತಕದ ಶುಲ್ಕ ಅಷ್ಟೆ. ಅಂದರೆ ಸಾರಿಗೆಯ ವೆಚ್ಚವಿಲ್ಲ.

ಅಂದ ಹಾಗೆ ಅವರು ಮೊದಲ ಕಥೆ ಬರೆದದ್ದು ಒಂಭತ್ತನೇ ತರಗತಿಯಲ್ಲಿ ಅದು ಪ್ರಕಟವೂ ಆಗಿತ್ತು. ಆದರೆ ಆ ಕಥೆ ನಿಮಗ್ಯಾರಿಗೂ, ಎಲ್ಲೂ ಸಿಗೊಲ್ಲಾ ಕಣೋ ಅನ್ನುತ್ತಾರೆ. ಹೀಗೆಯೇ ಎಲ್ಲರೂ ಹೆಚ್ಚು ಹೆಚ್ಚು ಓದಬೇಕು. ಏನೇ ಬರೆಯಬೇಕಾದರೂ ಜೀವನದಲ್ಲಿ ಮಾಡಬೇಕಾದ್ರೂ ಒಂದು ಸುಂದರವಾದ ಛಂದ ಲಯ ಇರಬೇಕು ಎನ್ನುತ್ತಾರೆ. ಛಂದ ಎಂದರೆ ಪ್ರೀತಿ ಎನ್ನುವ ಅರ್ಥವೇ ಹೊರತು ಬೇರೇನಲ್ಲ ಎಂದು ನಗುತ್ತಾರೆ. ಮತ್ತು ನಿರ್ಲಿಪ್ತತೆಯ, ನಿರಾಳ ಭಾವವನ್ನು ತಾಳುತ್ತಾರೆ. ಈ ಎಲ್ಲಾ ಆಪ್ತತೆ ಮತ್ತು ಬಹಳ ಸ್ಪಷ್ಟವಾದ ಚಿಂತನಾಶೀಲ ಆಲೋಚನೆಗಳಿಂದ ಬಹಳ ಮುಖ್ಯರೆನಿಸುತ್ತಾರೆ.

ಒಟ್ಟಾರೆಯಾಗಿ ಈ ಕಾಲಘಟ್ಟದಲ್ಲಿ ಪ್ರಮುಖವಾಗಿ ವಿಭಿನ್ನ ಶೈಲಿಯಲ್ಲೇ ಬರೆದು ಓದುಗರನ್ನು ಹತ್ತಿರದಿಂದ ಆತ್ಮೀಯವಾಗಿ ತಲುಪಿರುವ ವಸುಧೇಂದ್ರರು ನವನವೀನತೆಯನ್ನು ಯಶಸ್ವಿಯಾಗಿ ಅಳವಡಿಸಿಕೊಂಡಿದ್ದಾರೆ. ಅಷ್ಟೇ ಜನರನ್ನು ತಲುಪಿದ್ದಾರೆ. ಅವರ ಕೃತಿಯ ಬಗ್ಗೆ ಓದುಗರು ಹಂಚಿಕೊಳ್ಳುವ ಭಾವನೆಗಳು ಬಹಳ ಇಷ್ಟವಾಗುತ್ತವೆ ಎನ್ನುತ್ತಾರೆ. ಈಗಾಗಲೇ ಅವರ ಹಲವು ಕೃತಿಗಳು ರಂಗ ರೂಪದಲ್ಲೂ ಪ್ರದರ್ಶಿತವಾಗಿವೆ. ಅದೂ ಇವರಿಗೆ ಮತ್ತಷ್ಟು ಯಶಸ್ಸನ್ನು ದೊರಕಿಸಿದೆ. ಈ ಬಗ್ಗೆ ಅವರಿಗೆ ಸಂತೋಷವಿದೆ. ಈಗ ಒಂದು ಚಲನಚಿತ್ರಕ್ಕೆ ಸ್ಕ್ರಿಪ್ಟ್ ಕೂಡಾ ತಯಾರಿಸುವ ಪ್ರಕ್ರಿಯೆಯಲ್ಲಿದ್ದಾರೆ. ಮತ್ತು ಅವರ ಮನಸ್ಸು ಮಾತ್ರ ಕಥೆ ಕಟ್ಟುವತ್ತ ಚಿಂತಿಸುತ್ತಿದೆ.ಶ್ರೇಯಾಂಕ ರಾನಡೆ
ಎಂ.ಎ ಕನ್ನಡ ವಿದ್ಯಾರ್ಥಿ
ಮಂಗಳೂರು ವಿ.ವಿ

0 comments:

Post a Comment