ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಅವಾರ್ಡ್
ಮಕ್ಕಳ ಮನಸ್ಸು ಸೂಕ್ಷ್ಮ ಸಂವೇದನೆಯ ಮನಸ್ಸು. ಏನೂ ತಿಳಿಯದಂತಹ ವಯಸ್ಸು, ಇಂತಹ ಮಕ್ಕಳಿಗೆ ತಿಳಿ ಹೇಳುವಂತಹ ವಾಸ್ತವ ಸಂಗತಿಯ ಅರಿವು ಮೂಡಿಸಲು ತುಂಬಾ ಜಾಗರೂಕರಾಗಿ ಕಾರ್ಯ ಮಾಡಬೇಕಾಗುತ್ತದೆ. ಪ್ರಾಥಮಿಕ, ಪ್ರೌಢ ಹಂತದ ವಿದ್ಯಾರ್ಥಿಗಳಲ್ಲಿ ಬುದ್ದಿಯು ಆಗತಾನೇ ಚಿಗುರೊಡೆಯುತ್ತಿರುತ್ತದೆ, ಅದು ಹಂತ ಹಂತವಾಗಿ ವಿಕಾಸವಾಗುತ್ತ ಬರುತ್ತದೆ. ಈ ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡಬೇಕು ಮಕ್ಕಳಲ್ಲಿ ಉತ್ಸಾಹ, ಹುಮ್ಮಸ್ಸು ಕುಂದದಂತೆ ಪ್ರೋತ್ಸಾಹ, ಪ್ರೇರಣೆ ಅಗತ್ಯವಾಗಿರುತ್ತದೆ.


ಇಂತಹ ಮಕ್ಕಳಿಗೆ ಯಾವ ರೀತಿಯಲ್ಲಿ ಶಿಕ್ಷಣ ನೀಡಬೇಕೆಂಬುದು ಇಲ್ಲಿ ಮುಖ್ಯವಾಗುತ್ತದೆ. ಸರಕಾರ ಮಕ್ಕಳಿಗಾಗಿ ಹಲವಾರು ಕಾರ್ಯಕ್ರಮಗಳನ್ನು, ಯೋಜನೆಗಳನ್ನು ಹಾಕಿಕೊಂಡಿದೆ. ಇಂಥಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಯಾವ ರೀತಿಯಲ್ಲಿ ಪರಿಣಾಮಕಾರಿಯಾಗಿ ಬೋಧನೆ ನೀಡುತ್ತಿವೆ ಎನ್ನುವದನ್ನು ತಿಳಿಯಬೇಕಾಗಿದೆ.

ವಿದ್ಯಾರ್ಥಿ ಜೀವನ ಬಂಗಾರಮಯವಾಗಿದೆ, ಕಾಲೇಜು ಜೀವನ ವಜ್ರದಂತೆ ಹೊಳೆಯುತ್ತಿರುತ್ತದೆ. ಪಾಲಕರು ಚಕ್ಕ ಮಕ್ಕಳಿರುವಾಗಲೇ ಅವರಿಗೆ ಯಾವ ರೀತಿಯಲ್ಲಯೂ ಒತ್ತಡ ಹೇರದಂತೆ ಹಾಗೂ ಅವರ ಮನಸ್ಸಿಗೆ ವಿದುದ್ಧವಾಗಿ ನಡೆಯುವದು ಒಳಿತಲ್ಲ. ಅವರ ನಿರ್ಮಲವಾದ ಮನಸ್ಸಿನ ಪರಿಯನ್ನು ಅರ್ಥ ಮಾಡಿಕೊಂಡು ಅವರನ್ನು ಸಂರಕ್ಷಿಸುವ ಕೆಲಸ ಆಗಬೇಕಾಗಿದೆ.

ಮಕ್ಕಳಲ್ಲಿ ಉತ್ಸಾಹ ಪುಟಿದೇಳುವಂತೆ ಮಾಡಬೇಕು, ಅವರ ಕೆಲಸಗಳನ್ನು ಅವರೇ ಮಾಡಿಕೊಳ್ಳುವಂತೆ ವಾಸ್ತವ ಪರಿಸ್ಥಿತಿಯ ಅರಿವು ಮೂಡಿಸಬೇಕು, ಮಕ್ಕಳ ಬುದ್ದಿಮಟ್ಟ ಒಂದೇ ರೀತಿ ಇರುವದಿಲ್ಲ ಅವರವರ ಕೌಶಲ್ಯಗಳು ಅವರಲ್ಲಿಯೇ ಬೆರೆತಿರುತ್ತವೆ, ಅದನ್ನು ಸೂಕ್ಷ್ಮವಾಗಿ ಗಮನಿಸಿ ಮಾರ್ಗದರ್ಶನ ನೀಡಬೇಕಾದುದು ಪ್ರತಿಯೊಬ್ಬರ ಕರ್ತವ್ಯ. ಆಟ-ಪಾಠಗಳಲ್ಲಿ ತೊಡಗಿಕೊಂಡ ಮಕ್ಕಳು ಸದೃಡವಾದ ಮನಸ್ಸನ್ನು, ಸದೃಡವಾದ ದೇಹವನ್ನು ಹೊಂದಿರುತ್ತಾರೆ.

ಮಕ್ಕಳ ಮನಸ್ಸನ್ನು ಹಿಡಿದಿಡಲು ಏನಾದರೂ ಮ್ಯಾಜಿಕ್ ಮಾಡಿ ತೋರಿಸಬೇಕಾಗುತ್ತದೆ, ರೂಪಕ, ನಾಟಕಗಳಿಂದ ಅವರು ಪ್ರೇರಿತರಾಗುವಂತೆ ಮಾಡಬೇಕಾಗುತ್ತದೆ, ಅದೇ ರೀತಿ ಮಕ್ಕಳಿಗಾಗಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವಂತಹ ಕೆಲಸವನ್ನು ಬೆಂಗಳೂರಿನ ರಾಷ್ಟ್ರೀಯ ನಾಟಕ ಶಾಲೆ ಅಧ್ಯಾಯ ಇವರ ವತಿಯಿಂದ ಮೂರು ತಿಂಗಳ ರಂಗ ತರಬೇತಿ ನಡೆಸುತ್ತಿದೆ.


ಶಿಬಿರದ ಖ್ಯಾತ ರಂಗಭೂಮಿ ನಿರ್ದೇಶಕ ಚಿದಂಬರಾವ್ ಜಂಬೆ ಅವರು ಹೇಳುವಂತೆ ಶಿಕ್ಷಣದಲ್ಲಿ ರಂಗಭೂಮಿ ಕಾರ್ಯಕ್ರಮವು ಮಕ್ಕಳನ್ನು ಮುಕ್ತವಾಗಿ ಯೋಚಿಸುವದನ್ನು ಪ್ರಚೋದಿಸುವದಲ್ಲದೆ, ಕಲಿಕೆಯನ್ನು ಕ್ರಿಯಾತ್ಮಕವಾಗಿ ಸುಲಭ ಸಾಧ್ಯವಾಗಿಸುವ ನಿಟ್ಟಿನಲ್ಲಿ ಹುಡುಕಾಟ ನಡೆಸಿದೆ. ಇಲ್ಲಿ ಮಕ್ಕಳು ನೋಡುವದರ ಮೂಲಕ ಕಲಿಯುತ್ತಾ, ಒಂದು ನಾಟಕ ತಮ್ಮಿಂದಲೇ ತೆರೆದುಕೊಳ್ಳುವ ಬಗೆಯನ್ನು ಅವರು ನೋಡಿ ನಲಿಯುತ್ತಾರೆ. ನಾಟಕ ಮಕ್ಕಳಲ್ಲಿ ಪ್ರಶೆಗಳನ್ನು ಹುಟ್ಟು ಹಾಕುವದಲ್ಲದೇ ಆ ಪ್ರಶ್ನೆಗಳಿಗೆ ಉತ್ತರ ಕೂಡ ಮಕ್ಕಳಿಂದಲೇ ಬರುತ್ತದೆ, ಅವರ ವಿಚಾರ, ಸಲಹೆಗಳಿಂದಲೇ ನಾಟಕ ಇನ್ನೂ ಗಟ್ಟಿಗೊಳ್ಳುತ್ತಾ ಹೋಗುತ್ತದೆ ಎನ್ನುತ್ತಾರೆ.

ಹಳ್ಳಿ ಹಳ್ಳಿಗೂ ಬೇಟಿ ನೀಡಿ ಪ್ರತಿಯೊಂದು ಶಾಲೆಗಳಲಿಯ್ಲೂ ಶಿಬಿರಗಳನ್ನು ಏರ್ಪಡಿಸಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ಮಕ್ಕಳನ್ನು ಕೂರಿಸಿಕೊಂಡು ವಿಚಿತ್ರವಾದ ಮ್ಯಾಜಿಕ್ಗಳನ್ನು ಮಾಡಿ ಅವರ ಮನಸ್ಸಿಗೆ ಮುದ ನೀಡುವಂತಹ ಹಾಗೂ ಮಾಹಿತಿ ನೀಡುವಂತಹ ಕೆಲಸ ಮಾಡುತ್ತಿದೆ. ಅವರು ಇತ್ತೀಚೆಗೆ ಗುಲಬರ್ಗಾ ವಿಶ್ವವಿದ್ಯಾಲಕ್ಕೆ ಬೇಟಿ ಕೊಟ್ಟು ಅಲ್ಲಿನ ಪ್ರೌಢ ಶಾಲಾ ಮಕ್ಕಳಿಗೆ 'ಸ್ಟೋನ್ ಸೂಪ್' ಎಂಬ ವಿಚಿತ್ರವಾದ ಮ್ಯಾಜಿಕ್ ನಾಟಕವನ್ನು ಶಿಬಿರದ ವತಿಯಿಂದ ಪ್ರದರ್ಶಿಸಿದರು . ಇಲ್ಲಿ ಬರುವ ಪಾತ್ರಗಳು, ಸನ್ನಿವೇಶಗಳು ವಿಚಿತ್ರ ರೀತಿಯಲ್ಲಿ ಇರುತ್ತವೆ, ಹಾಡುಗಳು ಹಾಗೂ ಮೂಕಾಭಿನಯದ ಮೂಲಕ ಸಂದೇಶ ಸಾರುವ ರೂಪಕವಾಗಿತ್ತು.

ಇಲ್ಲಿನ ಒಂದು ಪಾತ್ರ ವಿಶೇಷವಾಗಿತ್ತು 'ಮುಖವೇ ಇಲ್ಲದ ಅಚ್ಚರಿ' ಬರೀ ದೇಹವನ್ನು ಹೊತ್ತುಕೊಂಡಿರುವ ಜೀವ ಈ ಭಾವಾಭಿನಯದ ಮಾರ್ಮಿಕ ಭಾವ ಈ ರೀತಿಯಾಗಿದೆ, ಶರೀರದಲ್ಲಿರುವದು ಅಜ್ಞಾನ, ಅದನ್ನು ತೆಗೆದು ಹಾಕುವದೇ ಸುಜ್ಞಾನ, ಮಕ್ಕಳ ಮೌಢ್ಯತೆಯನ್ನು ಕತ್ತಲಿನಿಂದ ಬೆಳಕಿಗೆ ತರುವ ನಿಟ್ಟಿನಲ್ಲಿ ಈ ಒಂದು ಅಭಿನಯದ ಸಂದೇಶವಿದೆ.

ಮಕ್ಕಳಿಗೆ ನೀರಿನ ಮಹತ್ವದ ಬಗ್ಗೆ ನಾಟಕದ ಮೂಲಕ ಅರಿವು ಮೂಡಿಸಲಾಯಿತು. ದಾಹ ಆದಾಗಲೇ ನೀರಿನ ಮಹತ್ವ ತಿಳಿಯುವದು, ಜಲವೇ ಜೀವ ಸಂಕುಲವನ್ನು ಕಾಪಾಡಿ ಬದುಕಿಸಿರುವದು, ಸಾಗರ-ಸರೋವರಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರಿದ್ದರೂ ಕುಡಿಯಲು ಯೋಗ್ಯವಿಲ್ಲ. ಯೋಗ್ಯವಿದ್ದ ನೀರಿನ ಮೂಲಗಳನ್ನು ಕಾಪಾಡುವದು ಅತ್ಯವಶ್ಯ, ಜಲವೇ ಜೀವದಾನ ನೀಡುವ ಸಂಜೀವಿನಿಯಾಗಿದೆ.

ಶಿಬಿರಗಳನ್ನು ರಚಿಸಿಕೊಂಡು ನಾಟಕದ ಮೂಲಕ ಪ್ರತಿಯೊಂದು ವಿಷಯದ ಬಗ್ಗೆ ಸಲಹೆ, ಸೂಚನೆಗಳನ್ನು, ಮಾಹಿತಿಯನ್ನು ನೀಡುವದು ಶ್ಲಾಘನೀಯವಾದ ಕಾರ್ಯವಾಗಿದೆ. ಇಂತಹ ನಾಟಕಗಳಿಂದ ಮಕ್ಕಳು ಪ್ರೇರಿತರಾಗಿ ಪ್ರಶ್ನೆಗಳನ್ನು ಕೇಳುವಂತಹ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು. ಈ ಪ್ರಶ್ನಾರ್ಥಕ ಚಿಹ್ನೆ? ಹೊಲಗಳಲ್ಲಿ ಕಸವನ್ನು ತೆಗೆದು ಹಾಕುವದಕ್ಕಾಗಿ ಬಳಸುವ ಕುಡುಗೋಲು ರೂಪದಲ್ಲಿದೆ, ಹೊಲದಲ್ಲಿರವ ಕಸವನ್ನು ಕಿತ್ತು ಹಾಕಿ, ಸ್ವಚ್ಚಗೊಳಿಸಿ ಬೆಳೆಯ ಫಸಲತೆಯನ್ನು ಕಾಪಾಡುತ್ತದೆ. ಅದೇ ರೀತಿ ನಮ್ಮಲ್ಲಿ ಹುದುಗಿರುವ ಕಸವನ್ನು ಪ್ರಶ್ನೆಗಳೆಂಬ ಕುಡುಗೋಲಿನಿಂದ ತೆಗೆದು ಹಾಕಿ ಹಸನು ಮಾಡುವಂತಹ ಅಸ್ತ್ರವಾಗಿದೆ. ಇದರಿಂದ ವಿದ್ಯಾರ್ಥಿಗಳ ಮನಸ್ಸು ತಿಳಿಯಾಗಿ ಅವರಲ್ಲಿ ಕಲಿಯುವಂತಹ ಹುಮ್ಮಸ್ಸು ಚಿಗುರೊಡೆಯುತ್ತದೆ.

ಮಕ್ಕಳಲ್ಲಿ ಅಭಿವ್ಯಕ್ತಪಡಿಸುವ ವೈಚಾರಿಕತೆ ಮತ್ತು ಸೃಜನಶೀಲತೆ ಬೆಳೆದರೆ ಕೌಶಲ್ಯ ಪೂರ್ಣರಾಗಿ ಹೊರಹೊಮ್ಮಬಹುದು. ಇಂದಿನ ಅತಿವೇಗದ ಜೀವನದಲ್ಲಿ ಮಕ್ಕಳು ಒತ್ತಡಕ್ಕೆ ಸಿಲುಕಿ ಹಾಕಿಕೊಂಡಿದ್ದಾರೆ, ಸರಳವಾದ ನಾಟಕಗಳ ಮೂಲಕ ಅವರ ಮನಸ್ಸನ್ನು ಹಿಗ್ಗಿಸುವ ಕೆಲಸ ಮಾಡಬೇಕಾಗಿದೆ, ಅವರಲ್ಲಿ ಕೀಳರಿಮೆ ಹೋಗಲಾಡಿಸಿ ದೈರ್ಯವಾಗಿ ಮಾತನಾಡುವ ಶಕ್ತಿ ಬೆಳೆಸಬೇಕಾಗಿದೆ.

ಅಮರೇಶ ನಾಯಕ, ಜಾಲಹಳ್ಳಿ
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಗುಲಬರ್ಗಾ ವಿ.ವಿ.

0 comments:

Post a Comment