ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಚಾರ

‘ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ’ ಎಂಬ ನಾಣ್ಣುಡಿ ಮನುಷ್ಯನ ನಡವಳಿಕೆಯನ್ನು ಅಳೆಯುತ್ತದೆ. ಪ್ರೀತಿ, ವಿಶ್ವಾಸ, ಸಹನೆ, ತಾಳ್ಮೆಗಳ ಜೊತೆ ಬಾಲ್ಯದಿಂದಲೇ ನಡೆದುಕೊಳ್ಳುವುದು ವ್ಯಕ್ತಿತ್ವಕ್ಕೆ ಭದ್ರ ಬುನಾದಿ ಎಂಬುದು ಹಿರಿಯರ ಅಭಿಪ್ರಾಯ. ಆದರೆ ಇತ್ತೀಚೆಗೆ ಮರವಾಗಿ ಬೆಳೆಯುವುದರ ಮೊದಲೇ ಯುವ ಜನಾಂಗ ವಿನಾಶದ ದಾರಿ ಹಿಡಿಯುತ್ತಿರುವುದು ಸಾಮಾಜಿಕ ಸಮಸ್ಯೆಯಾಗಿ ಪರಿಣಮಿಸಿದೆ. ಕ್ಷುಲ್ಲಕ ಕಾರಣಗಳಿಗೆ, ತೊಂದರೆಗಳಿಗೆ ಯುವ ಜನರು ಆತ್ಮಹತ್ಯೆಯೇ ಪರಿಹಾರವೆಂದೆನಿಸಿರುವುದು ದೌರ್ಭ್ಯಾಗ್ಯವೇ ಸರಿ. ಇದಕ್ಕೆ ಸರಿಯಾಗಿ ಮನುಷ್ಯ ಭಾವನೆಗಳನ್ನು ಅರ್ಥೈಸಿಕೊಳ್ಳಲು ಹೋಗದಿರುವುದು, ಕ್ರಾಂತಿಕಾರಿ ನಡವಳಿಕೆ, ಪಾಲಿಸಲಾಗದ ಆಜ್ಞೆಗಳು, ಹಟಮಾರಿತನದಂತಹ ಭಿನ್ನತೆಗಳು ಮಕ್ಕಳ-ಹೆತ್ತವರ ನಡುವೆ ಸುಳಿದಿರುವುದು ಅನಾವಶ್ಯಕ ಆವೇಶ ಉಂಟಾಗುವಂತೆ ಮಾಡಿದೆ. ವರ್ಷದಲ್ಲಿ ಸುಮಾರು 30,000ಕ್ಕೂ ಮಿಗಿಲಾಗಿ ದೇಶದಲ್ಲಿ ಆತ್ಮಹತ್ಯೆಗೆ ಶರಣಾಗುತ್ತಿರುವ ಸಂಗತಿ ಬೆಚ್ಚಿ ಬೀಳಿಸುತ್ತದೆ.ಒಂದು ಅಥವಾ ಎರಡು ಮಕ್ಕಳಿರುವ ಸಂಸಾರದಲ್ಲಿ ಮುಳುವಾಗಿರುವ ಈ ಸಮಸ್ಯೆಯ ಬೆನ್ನು ಹತ್ತಿದರೆ ಹೆತ್ತವರು, ಸುತ್ತಮುತ್ತಲ ಪರಿಸರ, ಶಾಲೆ-ಶಿಕ್ಷಣ, ಸಹವಾಸ ಮತ್ತು ಆಕರ್ಷಣೆಗಳಂತಹ ಕೆಲವು ಅಸಹಜ ವ್ಯಕ್ತಿ-ಸನ್ನಿವೇಶಗಳು ಬೆಳಕಿಗೆ ಬರುತ್ತವೆ. ಯಾರನ್ನೂ ಪ್ರತ್ಯಕ್ಷವಾಗಿ ತೆಗಳುವಂತಿಲ್ಲ ಅಂತೆಯೇ ಘಟನೆಗಳನ್ನು ಅಲ್ಲಗಳೆಯುವಂತಿಲ್ಲ. ಇಂದಿನ ಸಮಾಜ ಬದಲಾವಣೆ, ಆಧುನೀಕರಣಗಳ ಹಿನ್ನೆಲೆಯಲ್ಲಿ ಮೌಲಿಕ ಅಂಶಗಳನ್ನು ಪೋಷಿಸುವಲ್ಲಿ ಹಿಂದೆ ಬಿದ್ದಿದೆ. ವೇಗದ ಜೀವನ, ಆತುರದ ನಿರ್ಧಾರಗಳು ಬದುಕಿನ ದಿಕ್ಕನ್ನೇ ಬದಲಿಸುತ್ತಿವೆ.

ಹುತಾತ್ಮರನ್ನು ಮಾದರಿಯನ್ನಾಗಿಸಿಕೊಳ್ಳುವ ಯುವ-ಜನಾಂಗ ವಿನಾ ಕಾರಣ ಹೀನ ಕೃತ್ಯಕ್ಕೆ ಕೈ ಹಾಕುತ್ತಿರುವುದು ಯಾರಿಗೂ ಮಾದರಿಯಾಗದಿದ್ದರೆ ಒಳಿತು. ಸಂಘರ್ಷಗಳನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯ ಕಡಿಮೆಯಾಗಿದೆಯೇ? ಅಥವಾ ಬೆಂಬಲ, ಥೈರ್ಯ ತುಂಬುವವರ ಕೊರತೆಯೇ? ಎಂಬುದು ಪ್ರಶ್ನಾರ್ಥಕ.

ಈ ಸಮಸ್ಯೆ ಸಮಾಜದ ಒಂದು ವರ್ಗ ಯಾ ನಿರ್ದಿಷ್ಠ ಕಟ್ಟು-ಪಾಡುಗಳನ್ನು ಅನುಸರಿಸುತ್ತಿರುವವರಲ್ಲಿ ಮಾತ್ರವಾಗಿದ್ದಲ್ಲಿ ಉತ್ತರ ಸರಳವಾಗಿ ಕಂಡು ಹಿಡಿಯಬಹುದಿತ್ತು. ಇದೆಲ್ಲದರ ಮಧ್ಯೆ ಹೆತ್ತ ಕರುಳಿನ ನೋವಿಗೆ ಬೆಲೆ ತೆತ್ತುವವರು ಯಾರು?ಸ್ಪರ್ಧಾತ್ಮಕ ಯುಗದಲ್ಲಿ ಪೈಪೋಟಿಗಿಳಿಯುವುದು ಸಹಜ. ಹಾಗಂತ ಎಲ್ಲರೂ ಜಯಶಾಲಿಗಳಾಗುವುದು ಕಷ್ಟ ಸಾಧ್ಯ.

ಎಲ್ಲರ ಬುಧ್ಧಿಮತ್ತೆ ಒಂದೇ ರೀತಿಯಾಗಿ ಇರುವುದಿಲ್ಲ. ಹೆತ್ತವರು ಇತ್ತ ಕಡೆ ಗಮನಿಸದೆ, ತಮ್ಮ ಸಹೋದ್ಯೋಗಿಗಳ ಅಥವಾ ಓರಗೆಯ ಮಕ್ಕಳಂತಾಗಬೇಕೆಂದು ಬಯಸುವುದು ಸರಿಯಲ್ಲ. ಪ್ರತಿಯೊಬ್ಬರಲ್ಲೂ ಪಠ್ಯೇತರ ವಿಷಯಗಳಲ್ಲಿ ಎಲೆ ಮರೆಯ ಕಾಯಿಯಂತಹ ಪ್ರತಿಭೆ ಇದ್ದೇ ಇರುತ್ತದೆ. ಇದನ್ನು ಗುರುತಿಸಿ ಪೋಷಿಸುವಲ್ಲಿ ಇಂದಿನ ಶಿಕ್ಷಣ ಕ್ರಮ ವಿಫಲವಾಗಿದೆ. ಔದ್ಯೋಗಿಕ ರಂಗವನ್ನು ಹೊರತು ಪಡಿಸಿಯೂ, ಶಿಕ್ಷಣ ವ್ಯಾಪಾರದ ಸರಕಾಗಿ ಬಿಟ್ಟಿದೆ.

ಮೌಲ್ಯಾಧಾರಿತ ಶಿಕ್ಷಣ ಮೂಲೆಗುಂಪಾಗಿದೆ. ಕೆಲವು ವಿಚಾರಗಳ ಕುರಿತು ಪ್ರಶ್ನೆ ಮಾಡುವ ಹಕ್ಕು ಮಕ್ಕಳಿಗೆ ಸಿಗುತ್ತಿಲ್ಲ. ಇದು ಮಾನಸಿಕ ಶಾಂತಿ ಕದಡುವಂತೆ ಮಾಡುತ್ತಿದೆ. ಇನ್ನು ಹದಗೆಟ್ಟ ಸುತ್ತಮುತ್ತಲ ಪರಿಸರ ಮತ್ತು ಆಚಾರ-ವಿಚಾರಗಳು ವಿಕೇಂದ್ರಿಕರಿಸುತ್ತಿರುವುದು, ಕೊಲೆ, ಸುಲಿಗೆ, ಅನಾಚಾರಗಳು ಬೀಡು ಬಿಟ್ಟಿರುವುದರಿಂದ ಕ್ರಾಂತಿಕಾರಿ ಮನೋಭಾವ ಹುಟ್ಟಿಕೊಂಡಲ್ಲಿ ಯಾವುದೇ ಸಂಶಯವಿಲ್ಲ.

ಇಂದು ಸರ್ವೇ ಸಾಮಾನ್ಯವಾಗಿರುವ ಮೊಬೈಲ್, ಇಂಟರ್ ನೆಟ್ ಬಳಕೆ ಬೇಡದ ಆಪ್ತತೆ, ವಯಸ್ಸಿಗೆ ಮೀರಿದ ತಿಳುವಳಿಕೆಯನ್ನು ನೀಡುತ್ತಿದೆ. ಮಾಮೂಲಿಯಾಗಿರುವ ದುಶ್ಚಟಗಳು, ಇನ್ನೇನೋ ಆಸೆ-ಆಕರ್ಷಣೆಗಳನ್ನು ಹುಟ್ಟು ಹಾಕುತ್ತಿವೆ. ಅತಿಯಾದ ಕಾಳಜಿ ಅಥವಾ ಗಮನ ಹರಿಸದೇ ಇರುವುದು, ಕುಂಟು ನೆಪಗಳಿಗೆ ಪುಷ್ಠಿ ಕೊಟ್ಟಂತಾಗುತ್ತದೆ. ಯಾರನ್ನೋ ಅನುಕರಣೆ ಮಾಡಲು ಹೋಗಿ ಬೇಡಿಕೆ ಈಡೇರದ ಪಕ್ಷದಲ್ಲಿ ಬಿಸಿರಕ್ತದ ಯುವ ಜನಾಂಗ ಮಸಣವೇ ಲೇಸೆನ್ನುವ ನಿರ್ಧಾರ ಎಷ್ಟು ಸಮಂಜಸ ?

ಸಂದೀಪ ಫಡ್ಕೆ, ಮುಂಡಾಜೆ

0 comments:

Post a Comment