ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:36 PM

ಚಳಿಗಾಲಕ್ಕೆ ಯೋಗ

Posted by ekanasu

ವೈವಿಧ್ಯಪ್ರತಿವರ್ಷ ಚಳಿಗಾಲಕ್ಕಿಂತ ಈ ಋತುವಿನ ಚಳಿಗಾಲ ಬಹಳಷ್ಟು ಶೀತ, ತಂಪಿನಿಂದ ಕೂಡಿದೆ. ದಶಂಬರದಿಂದ ಆರಂಭವಾದ ಚಳಿ ಜನವರಿ, ಫೆಬ್ರವರಿವರೆಗೆ ಹೆಚ್ಚಾಗಿ ಇರುತ್ತದೆ. ಆದರೆ ಈ ಬಾರಿಯ ಚಳಿಗಾಲದಲ್ಲಿ ಉಷ್ಣಾಂಶ ತೀರಾ ಕಡಿಮೆಯಾಗಿದೆ. ರಾಜ್ಯದ ಹಲವು ಕಡೆ ಅತೀ ಕಡಿಮೆ ಚಳಿ ದಾಖಲಾಗಿದೆ. ಚಳಿಗಾಲದಲ್ಲಿ ಸುಮ್ಮಗೆ ಮೈಮುದುಡಿಕೊಂಡು ಬೆಚ್ಚಗೆ ವಿರಮಿಸಲು ಇಷ್ಟವಾಗುತ್ತದೆ. ಆದರೆ ಈ ರೀತಿ ಚಳಿಗೆ ತುಂಬಾ ಹೊತ್ತು ಒಂದೆಡೆ ಇದ್ದಾಗ ದೇಹದಲ್ಲಿ ರಕ್ತ ಸಂಚಲನೆ ಸಮರ್ಪಕವಾಗಿ ಜರಗದೆ ಕಾಯಿಲೆಗಳಿಗೆ ಆಸ್ಪದವಾಗುತ್ತದೆ. ಹಾಗೂ ಚಳಿಗಾಲದಲ್ಲಿ ಯಾವುದೇ ರೀತಿಯ ಕೆಲಸಗಳನ್ನು ಸಮರ್ಪಕವಾಗಿ ಮಾಡಲು ಉತ್ಸಾಹ ಬರುವುದಿಲ್ಲ.

ಚಳಿಗಾಲದಲ್ಲಿ ವ್ಯಕ್ತಿಯು ಉದಾಸೀನತೆಯಿಂದ ಯಾವುದೇ ಕೆಲಸ ಕಾರ್ಯಗಳನ್ನು ಮಾಡದೇ ಇದ್ದಾಗ ದೇಹದಲ್ಲಿ ರಕ್ತಸಂಚಾರವು ಸಮರ್ಪಕವಾಗಿ ಜರಗುವುದಿಲ್ಲ. ಈ ರೀತಿಯಿಂದಾಗಿ ರಕ್ತ ಸಂಚಾರದ ಕೊರತೆ ಆದಾಗ ಸಹಜವಾಗಿ ಕಾಡುವ ಶೀತ, ಅಲರ್ಜಿ, ಗಂಟುನೋವು, ಚರ್ಮದ ತುರಿಕೆ, ಜ್ವರ, ತಲೆನೋವು, ಬೆನ್ನು ನೋವು, ಹುಳದ ಬಾಧೆ, ಕೆಲವೊಮ್ಮೆ ಆಕಸ್ಮಾತಾಗಿ ದೇಹಕ್ಕೆ ತಾಗಿ ಬಂದ ನೋವು ಬಹಳಷ್ಟು ಸಮಯ ದೀರ್ಘಾವಧಿವರೆಗೆ ಕಾಡುತ್ತಿರುತ್ತದೆ.

ಚಲಿಗಾಲಕ್ಕೆ ಸಮಾನ್ಯವಾಗಿ ಹೆಚ್ಚಿನವರು ರಕ್ಷಣೆ ಪಡೆಯಲು ಬಟ್ಟೆಯ ಹೊದಿಕೆ, ಮಪ್ಲರ್, ಮಂಕಿಕ್ಯಾಪ್, ಗ್ಲಿಸರಿನ್, ಲೋಶನ್ ಮಾಯ್ಶ್ಚರೈಸರ್ ಇತ್ಯಾದಿ ಬಳಸುತ್ತಾರೆ. ಚರ್ಮದ ಮೃದುತ್ವ ಕಾಪಾಡಲು ಎಣ್ಣೆಯ ಸ್ನಾನ, ಉತ್ತಮ ಅಹಾರ ಸೇವನೆ ಇತ್ಯಾದಿಗಳನ್ನು ಹೆಚ್ಚಿಸನವರು ಮಾಡುತ್ತಾರೆ. ಆದರೆ ಚಳಿಗಾಲದಲ್ಲಿ ದೇಹಕ್ಕೆ ನೈಜವಾಗಿ ರಕ್ತಸಂಚಾರವಾಗುವಂತಹ ಯೋಗ ವ್ಯಾಯಾಮದ ಅಗತ್ಯತೆ ಇದೆ. ಹೆಚ್ಚಿನವರು ಚಳಿಗಾಲದಲ್ಲಿ ಈ ಯೋಗ ವ್ಯಾಯಾಮವನ್ನು ಮಾಡಲು ಆಸಕ್ತಿ ಹೊಂದದೆ ಮುದುಡಿ ಕುಳಿತುಕೊಳ್ಳುತ್ತಾರೆ. ದೇಹಕ್ಕೆ ಸಮರ್ಪಕವಾಗಿ ರಕ್ತಸಂಚಾರ ಜರಗಲು ಸರಳ ವ್ಯಾಯಾಮ ಯೋಗ ಸೂರ್ಯನಮಸ್ಕಾರ ಇತ್ಯಾದಿಗಳ ಅಗತ್ಯತೆ ಇದೆ.

ಇಲ್ಲಿ ದೇಹವನ್ನು ಶಿಸ್ತು ಬದ್ಧವಾಗಿ ಕ್ರಮವತ್ತಾಗಿ, ಉಸಿರಿನ ಗತಿಯೊಂದಿಗೆ ಬೇಕಾದ ರೀತಿಯಲ್ಲಿ ಬಾಗಿಸುವುದು, ತಿರುಗಿಸುವುದು, ಚಲಿಸುವಿಕೆ ಇತ್ಯಾದಿಗಳೂ ಇದೆ. ಈ ರೀತಿ ದೇಹವನ್ನು ಬೇಕಾದ ರೀತಿಯಲ್ಲಿ ಬಾಗಿಸಿ, ಚುರುಕುಗೊಳಿಸಿ ಚಲಿಸುವುದರಿಂದ ದೇಹದ ಒಳಗಿನ ಅಂಗಗಳಿಗೂ, ಮಾಂಸಖಂಡಗಳಿಗೂ, ನರಮಂಡಲಕ್ಕೂ ಪ್ರಚೋದನೆ ಮತ್ತು ವಿಶ್ರಾಂತಿ ದೊರಕಿ ರಕ್ತ ಪರಿಚಲನೆ, ಪಚನಕ್ರಿಯೆ ಇತ್ಯಾದಿ ಸಮರ್ಪಕವಾಗಿ ನಡೆಯುವುದಲ್ಲದೆ ನರಮಂಡಲವೂ, ಮಾಂಸಖಂಡಗಳೂ, ಪೆಡಸಾಗಿದರೆ ಶಕ್ತಿಯುತವಗುವುವು ಮತ್ತು ಚೈತನ್ಯ ಭರಿತವಾಗುವುವು. ಯೋಗಾಸನಗಳನ್ನು ಮಾಡುವುದರಿಂದ ಜಡತ್ವ ಹೋಗಿ ಲಘುತ್ವ ಉಂಟಾಗುತ್ತದೆ.

ಚಳಿಗಾಲದಲ್ಲಿ ರಕ್ಷಣೆ ಪಡೆಯಲು ಬೆಳಗ್ಗೆ ಎದ್ದ ಕೂಡಲೇ ನಿತ್ಯ ವಿಧಿಗಳನ್ನು ಮುಗಿಸಿ ಒಂದು ಲೋಟ ಬಿಸಿ ದ್ರವಾಹಾರ ಸೇವಿಸಿ ಸರಳ ವ್ಯಾಯಾಮಗಳನ್ನು ಸೂರ್ಯನಮಸ್ಕಾರಗಳನ್ನು ಮಾಡಬೇಕು. ಸಾಧ್ಯವಾಗುವವರು ಕಪಾಲಭಾತಿ ಕ್ರಿಯೆ ಮಾಡಬೇಕು.ಯೋಗಾಸನಗಳಲ್ಲಿ ಆಯ್ದ ಕೆಲವು ಆಸನಗಳಾದ ಅರ್ಧಚಕ್ರಾಸನ, ಪದಾಹಸ್ತಾನಸ, ವೀರ ಭದ್ರಾಸನ, ಪ್ರಸಾರಿತ ಪಾದೋತ್ಸಾನಾಸನ, ಬದ್ಧ ಕೋಣಾಸನ, ಪರ್ವತಾನಸ, ಪಶ್ಚಿಮೋತ್ತಾನಾಸನ, ಶಶಾಂಕಾಸನ, ಅರ್ಧ ಉಷ್ಟ್ರಾಸನ, ವಕ್ರಾಸನ ಸರ್ವಾಂಗಾಸನ, ಹಲಾಸನ, ಭುಜಂಘಾಸನ, ಶಲಭಾಸನ, ಊಧ್ರ್ವ ಧನುರಾಸನ, ಶವಾಸನ ಮತ್ತು ಪ್ರಾಣಯಾಮಗಳನ್ನು ಮಾಡಬಹುದು. ಇನ್ನೂ ಸಾಧ್ಯವಾದರೆ ಕ್ಲಿಷ್ಟಕರ ಭಂಗಿಗಳನ್ನು ಸಮರ್ಪಕವಾಗಿ ಕಲಿತು ಅಭ್ಯಾಸ ಮಾಡಿದರೆ ಒಳ್ಳೆಯದು.
ವಿಶೇಷವಾಗಿ ಊಧ್ರ್ವ ಕುಕ್ಕುಟಾಸನ, ಬಕಾಸನ, ಯೋಗ ನಿದ್ರಾಸನ, ಶೀರ್ಷಾಸನ, ಪಿಂಭ ಮಯೂರಾಸನ, ಶಲಭ ವೃಶ್ಚಿಕಾಸನ ಇತ್ಯಾದಿಗಳನ್ನು ಆಸನಗಳು ಈ ಕಷ್ಟಕರ ಆಸನಗಳನ್ನು ಅಭ್ಯಾಸ ಮಾಡಿದರೆ ಶರೀರವು ಬೇಗನೆ ಬೆಚ್ಚಗಾಗುತ್ತದೆ, ಅದರಲ್ಲೂ ಯೋಗ ನಿದ್ರಾಸನದ ಅಭ್ಯಾಸದಿಂದ ದೇಹವು ಬಲುಬೇಗ ಶಾಖಗೊಳ್ಳುವುದು. ಯೋಗಿಗಳು ಹೆಚ್ಚು ತಂಪಿರುವ ಪರ್ವತಪ್ರದೇಶ ಹಿಮಾಲಯಗಳಲ್ಲಿ ಈ ಆಸನಗಳನ್ನು ಮಾಡುತ್ತಾರೆ. ಈ ಆಸನವು ಬಹಳ ಕ್ಲಿಷ್ಟಕರ ಆಸನವಾಗಿದೆ. ಗುರುಮುಖೇನ ಹೆಚ್ಚಿನ ಸಲಹೆ ಮಾರ್ಗದರ್ಶನವನ್ನು ಪಡೆದುಕೊಂಡೇ ಈ ಆಸನವನ್ನು ಅಭ್ಯಾಸಮಾಡಬೇಕು.ಯೋಗ ವ್ಯಾಯಾಮದ ಜೊತೆಗೆ ವಾಕಿಂಗ್ ಮಾಡಬೇಕು. ಬೆಳಿಗ್ಗೆ ಎದ್ದು ಉದಾಸೀನ ಮಾಡದೆ ಚಳಿಗಾಲದಲ್ಲಿ ವ್ಯಾಯಾಮ, ಯೋಗ ಅಭ್ಯಾಸ ಮಾಡಬೇಕು. ಸುಲಭವಾಗಿ ನಮಗೆ ಆರೋಗ್ಯ ರಕ್ಷಣೆ ಮಾಡಬಹುದು. ಆದ್ದರಿಂದ ಯೋಗ ಆರೋಗ್ಯ ವರ್ಧಕ, ರೋಗನಿವಾರಕ, ರೋಗ ನಿರೋಧಕ ಎಂದೇ ಹಿರಿಯರು ಹೇಳಿದ್ದು ಕಟು ಸತ್ಯ. ಪತಂಜಲಿ ಋಷಿ ಮುನಿ ತಿಳಿಸಿದ ಯೋಗದಲ್ಲಿ ಯಮ, ನಿಯಮ, ಆಸನ, ಪ್ರಾಣಯಾಮ, ಪತ್ಯಾಹಾರ ಧಾರಣ ಮತ್ತು ಸಮಾಧಿ ಇವುಗಳು ಅಡಕವಾಗಿದೆ. ಯೋಗ ವಿಧ್ಯೆಯನ್ನು ಗುರುಮುಖೇನ ಕಲಿತು ನಿತ್ಯ ಅಭ್ಯಾಸನ ಮಾಡಬೇಕು. ಟಿ.ವಿ. ಚಿತ್ರ ನೋಡಿ ಯೋಗ ಕಲಿಯುವುದು ಒಳಿತಲ್ಲ. ಆದರೆ ಕಲಿತ ಮೇಲೆ ಟಿ.ವಿ ನೋಡಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು. ಚಳಿಗಾಲಕ್ಕೆ ಯೋಗ ಬಹಳ ಸಹಕಾರಿಯಾಹಿದೆ.

ಲೇಖಕರು :''ಯೋಗರತ್ನ' ಶ್ರೀ ಗೋಪಾಲಕೃಷ್ಣ ದೇಲಂಪಾಡಿ

0 comments:

Post a Comment