ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯಇಂದಿನ ದಿನಗಳಲ್ಲಿ ಆಧುನಿಕ ತಂತ್ರಜ್ಙಾನಗಳಿಗೆ ನಾವು "ಅಡಿಕ್ಟ್" ಆಗಿದ್ದೇವೆ ಎಂದರೆ ತಪ್ಪಾಗಲಾರದು. ಇದರ ಹೊರತಾದ ನಮ್ಮ ಜೀವನ ಕಲ್ಪನೆಗೂ ಅಸಾಧ್ಯ.


ನಮ್ಮ ಎಲ್ಲ ಕೆಲಸಗಳಲ್ಲಿ ಲಗ್ಗೆ ಇಟ್ಟಿರುವ ಯಂತ್ರಗಳಿಂದ ನಾವು ಆಲಸಿಗಳಾಗಿದ್ದಲ್ಲದೇ ಯಂತ್ರ ಮಾನವರಾಗುತ್ತಿದ್ದೇವೆ. ಇದ್ಯಾವ ತಂತ್ರಜ್ಞಾನಗಳಿಲ್ಲದ ದಿನಗಳಲ್ಲಿ ನಮಗಿಂತ ಸುಖವಾಗಿ,ಬಾಳಿದ ನಮ್ಮ ಪೂರ್ವಜರು ನಮಗೆ ಗ್ರೇಟ್ ಎನಿಸುತ್ತಾರೆ. ಯಾವ ಯಂತ್ರಗಳೂ ಇಲ್ಲದೇ ಮರದ,ಮಣ್ಣಿನ ವಸ್ತುಗಳನ್ನೇ ಬಳಸಿ ಸರಳವಾಗಿ ಬದುಕಿದ ಅವರ ಜೀವನ ನಮಗೆ ಮಾರ್ಗದರ್ಶಿಯಾಗಬೇಕು. ಆದರೆ ಅವರ ದಿನಬಳಕೆಯ ವಸ್ತುಗಳೆಲ್ಲ ಬಹುತೇಕ ಕಣ್ಮರೆಯಾಗಿವೆ. ಅವುಗಳಲ್ಲಿನ ಸರಳತೆ,ವಿನ್ಯಾಸಗಳು ನಿಜಕ್ಕೂ ಅಚ್ಚರಿ ಮೂಡಿಸುವಂತಹವು. ಈಗೀಗ ಅಲ್ಲೋ ಇಲ್ಲೋ ಕಾಣ ಸಿಗುವ ಅಂತಹ ಕೆಲವು ವಸ್ತುಗಳು ಇತ್ತೀಚೆಗೆ ಯಲ್ಲಾಪುರ ತಾಲೂಕಿನ ವೈದಿಕರಮನೆಯ ಗೋಪಾಲಕೃಷ್ಣ ಭಟ್ಟರ ಮನೆಯಲ್ಲಿ ಸಿಕ್ಕವು.

ಹಿಂದಿನವರು ಬಳಸುತ್ತಿದ್ದ ಮರದ,ಮಣ್ಣಿನ ದಿನಬಳಕೆಯ ವಸ್ತುಗಳ ಜಾಗವನ್ನು ಇಂದಿನ ಯಂತ್ರಗಳು ಆಕ್ರಮಿಸಿವೆ. ಉದಾಹರಣೆಗೆ ಹಿಂದೆ ಅನ್ನ ಬಾಗಿಸಲು ಮರದ ಮರಿಗೆ ಬಳಸುತ್ತಿದ್ದರೆ ಇಂದು ಅನ್ನ ಬಾಗಿಸುವ ಕೆಲಸವೇ ಇಲ್ಲ. ಆ ಕೆಲಸಕ್ಕೆ ಕುಕ್ಕರ್ ಇದೆಯಲ್ಲ! ಮೊಸರು ಕಡೆಯಲು ಬಳಸುತ್ತಿದ್ದ ಕಡಗೋಲನ್ನು ಮೊಸರು ಕಡೆಯುವ ಯಂತ್ರ ಮಾಯ ಮಾಡಿದೆ. ಉಪ್ಪಿನಕಾಯಿ,ಮಾವಿನಕಾಯಿ ಮುಂತಾದ ಆಹಾರ ಪದಾರ್ಥಗಳು ಕೆಡದಂತೆ ಇಡಲು ಬಳಸುತ್ತಿದ್ದ ಭರಣಿಗಳ ಬದಲಿಗೆ ಇಂದು ಫ್ರಿಜ್ ಬಂದು ಕೂತಿದೆ. ನೀರು,ಮೊಸರು,ಪದಾರ್ಥಗಳನ್ನೆಲ್ಲ ಸಂಗ್ರಹಿಸಿಡುತ್ತಿದ್ದ ಮರದ ಕೊಡಗಳು,ಮಣ್ಣಿನ ಮಡಕೆಗಳು ಪ್ಲಾಸ್ಟಿಕ್,ಸ್ಟೀಲ್,ಹಿತ್ತಾಳೆಗಳ ಪಾತ್ರೆಗಳಿಂದ ಮೂಲೆ ಸೇರಿವೆ. ವಿವಿಧ ರೀತಿಯ ಸಲಕರಣೆಗಳನ್ನು ಉಪಯೋಗಿಸಿ ತಯಾರಿಸುತ್ತಿದ್ದ ತಿಂಡಿಗಳು ಈಗ ಸಿದ್ಧ ರೂಪದಲ್ಲಿ ಸಿಗುವುದರಿಂದ ಆ ಸಲಕರಣೆಗಳಿಗೆ ಏನು ಕೆಲಸ?

ಅಲ್ಲಿ ಕಾಣ ಸಿಕ್ಕ ಇನ್ನೊಂದು ವಿಶೇಷ ವಸ್ತುವೆಂದರೆ ಹಿಂದಿನವರು ಬಳಸುತ್ತಿದ್ದ ಪಾದುಕೆಗಳು. ಇಂದು ಪಾದುಕೆಗಳನ್ನು ಕೆಲವು ಸ್ವಾಮೀಜಿಗಳ ಕಾಲಿನಲ್ಲಿ ನೋಡಬಹುದೇ ವಿನಃ ಮತ್ತೆಲ್ಲೂ ಕಾಣಲು ಸಾಧ್ಯವಿಲ್ಲ. ಹಿಂದೆ ಪಾದುಕೆ ಧರಿಸುವವನು ಶ್ರೀಮಂತನಾಗಿದ್ದರೆ ಬಡವನಿಗೆ ಬರಿಗಾಲೇ ಗತಿಯಾಗಿತ್ತು. ಆದರೆ ಅದರ ಮುಂದುವರಿದ ರೂಪವಾದ ಚಪ್ಪಲಿ ಇಂದು ನಮ್ಮ ಆಪ್ರಮಿತ್ರ! ಹೀಗೆ ಆ ವಸ್ತುಗಳನ್ನು ಪಟ್ಟಿ ಮಾಡುತ್ತ ಹೋದರೆ ಉದ್ದ ಸಾಲೇ ಬೆಳೆಯುತ್ತದೆ. ಆಧುನಿಕತೆಯ ಅಮಲಿನಲ್ಲಿ ತೇಲುತ್ತಿರುವ ನಮಗೆ ಅವುಗಳನ್ನು ಬಳಸುತ್ತಿದ್ದ ಕಾಲವೊಂದಿತ್ತು ಎಂದರೆ ಆಶ್ಚರ್ಯವಾಗುವುದು ಸಹಜವೇ.

ಹಿಂದಿನ ಕಾಲದ ವಸ್ತುಗಳನ್ನು ಹುಡುಕಿ ಅವುಗಳನ್ನೇ ನಾವೂ ಬಳಸಬೇಕು ಎನ್ನುವುದು ಇಲ್ಲಿನ ಆಶಯವಲ್ಲ. ಹಾಗೆ ಮಾಡಲು ನಮ್ಮಿಂದ ಸಾಧ್ಯವೂ ಇಲ್ಲ. ಆದರೆ ಈ ವಸ್ತುಗಳೊಂದಿಗೆ ಜೀವನ ನಡೆಸಿದ ಪೂರ್ವಜರ ಬದುಕಿನ ಕುರಿತು ತಿಳಿಯುವುದಕ್ಕಾದರೂ ಅವುಗಳ ಸಂರಕ್ಷಣೆ ಆಗಬೇಕು. ಯಂತ್ರಗಳಿಂದಾಗಿ ನಮ್ಮ ತನವನ್ನೇ ಕಳೆದುಕೊಳ್ಳುತ್ತಿರುವ ನಾವು ಇವುಗಳ ಹೊರತಾದ ಬದುಕು ಕೂಡ ಇತ್ತು ಎಂಬ ಕಲ್ಪನೆಯನ್ನು ಮುಂದಿನವರಿಗೆ ತೋರಿಸಲು ಮತ್ತು ನಮ್ಮ ಪೂರ್ವಜರ ಬದುಕನ್ನು ಅರಿಯಲು "ಆಧುನಿಕತೆಯ ಅಟ್ಟಹಾಸದಲ್ಲಿ ಅಟ್ಟ ಸೇರಿದ" ಈ ವಸ್ತುಗಳನ್ನು ಉಳಿಸಬೇಕು.


-ಶ್ರೀಧರ ಅಣಲಗಾರ
ಯಲ್ಲಾಪುರ0 comments:

Post a Comment