ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ
ಒಂದೆಡೆ ತಮ್ಮ ಮನೆಯ ಬೆಳೆಗಳಿಂದ ತಯಾರಾದ ತಿಂಡಿ-ತಿನಿಸುಗಳನ್ನು ಖರೀದಿಸುವ ತವಕ,ಇನ್ನೊಂದೆಡೆ ಅವುಗಳನ್ನು ತಯಾರಿಸಿದ ಕುರಿತು ಚರ್ಚೆಗಳು,ಕೆಲವರದು ಕೃಷಿ ಉಪಕರಣಗಳ ಕುರಿತಾದ ಮಾತುಕತೆಗಳು,ಅವುಗಳ ಕುರಿತಾದ ಮಾಹಿತಿಗಳನ್ನು ಅಧಿಕಾರಿಗಳಿಂದ ಪಡೆಯುವುದು ಇಂತಹ ಸಂಭ್ರಮಗಳು ಒಂದೆಡೆ ಮೇಳೈಸಿದ್ದು ಯಲ್ಲಾಪುರದ ನಂದೊಳ್ಳಿಯಲ್ಲಿ ಶನಿವಾರ ನಡೆದ ಜಲಾನಯನ ಮೇಳದಲ್ಲಿ. ಜಲಾನಯನ ಇಲಾಖೆ, ಜಿ.ಪಂ ಸಹಯೋಗದಲ್ಲಿ ನಡೆಸಿದ ಒಂದುದಿನದ ಈ ಮೇಳದಲ್ಲಿ ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಜಲಾನಯನ ಯೋಜನೆ ಕೃಷಿಗೆಪೂರಕವಾದುದಾಗಿದ್ದು ಗ್ರಾಮೀಣ ಭಾಗಗಳಲ್ಲಿ ಉತ್ತಮ ಕಾರ್ಯಗಳ ಮೂಲಕ ಮನೆಮಾತಾಗುತ್ತಿದೆ. ಕೃಷಿಗೆ ಹೆಚ್ಚಿನ ಮಹತ್ವ ನೀಡಿ ಅವುಗಳ ಮೂಲಕ ಹಳ್ಳಿಗಳ ಅಭಿವೃದ್ಧಿ ಮಾಡುವುದು ಇದರ ಮುಖ್ಯ ಗುರಿ. ಆ ನಿಟ್ಟಿನಲ್ಲಿ ನಂದೊಳ್ಳಿಯಲ್ಲಿ ನಡೆಸಿದ ಈ ಮೇಳ ಯಶಸ್ವಿಯಾಯಿತು.ವಿಶೇಷ ಉಪನ್ಯಾಸ

ಜಲಾನಯನ ಮೇಳದಲ್ಲಿ ರೈತರಿಗೆ ಉಪಯೋಗವಾಗಬಲ್ಲ ವಿಷಯಗಳ ಕುರಿತು ತಜ್ಞರಿಂದ ಉಪನ್ಯಾಸ ಕಾಯಕ್ರಮ ಏರ್ಪಡಿಸಲಾಗಿತ್ತು. "ಉದ್ಯಮಶೀಲತೆ" ಎಂಬ ಕುರಿತು ಉಪನ್ಯಾಸ ನೀಡಿದ ಸಹಕಾರಿ ಧುರೀಣ ಭಾಸ್ಕರ ಹೆಗಡೆ ಕಾಗೇರಿ ಪೌರಾಣಿಕ ಘಟನೆಗಳ ಮೂಲಕ ಹಾಗೂ ಸ್ಲೈಡ್ಶೋ ಮೂಲಕ ವಿಷಯವನ್ನು ಮಂಡಿಸಿದ್ದು ವಿಶೇಷವಾಗಿತ್ತು. ಕೃಷಿಯ ಜೊತೆಗೆ ಅದಕ್ಕೆ ಪೂರಕವಾದ ಉದ್ಯಮಗಳಲ್ಲಿ ತೊಡಗಿಸುವ ಕುರಿತು ವಿಸ್ತಾರವಾಗಿ ತಿಳಿಸಿದರು. ಉದ್ಯಮಶೀಲತೆ,ಅದರ ಮಹತ್ವಗಳನ್ನು ವಿವರವಾಗಿ ಹೇಳಿದ ಅವರು ಉದ್ಯಮಶೀಲರಾಗುವಂತೆ ಕರೆನೀಡಿದರು.

ಖ್ಯಾತ ಕೃಷಿ ಬರಹಗಾರ ಶಿವಾನಂದ ಕಳವೆ "ನಮ್ಮ ನೆಲ-ಜಲ ಸಂರಕ್ಷಣೆ" ಕುರಿತು ಉಪನ್ಯಾಸ ನೀಡಿದರು. 2070ರ ಹೊತ್ತಿಗೆ ಮೂಳಭೂತ ಸಂಪನ್ಮೂಲಗಳ ಅಭಾವದಿಂದ ಉಂಟಾಗಬಹುದಾದ ವಿಪರೀತ ಪರಿಸ್ಥಿತಿಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದರು. ಮುಂದೆ ಸಂಪನ್ಮೂಲಗಳ ಕೊರತೆಯಿಂದ 50 ವರ್ಷಕ್ಕೇ ಮನುಷ್ಯ ಮುದುಕನಾಗುತ್ತಾನೆ. ತನಗೆ ಬಂದ ರೋಗಗಳ ಕುರಿತು ಆತ ತನ್ನ ಮಕ್ಕಳಿಗೆ ಬರೆಯುವ ಪತ್ರದಲ್ಲಿ ತನಗೆ ಸರ್ವರೋಗಗಳು ಬರಲು ನೀರು,ಶುದ್ಧಗಾಳಿ ಸಿಗದಿರುವುದೇ ಕಾರಣ ಎಂದು ವಿವರಿಸುತ್ತಾನೆ ಎಂಬ ಭೀಕರ ಕಲ್ಪನೆಯ ಮೂಲಕ ತಮ್ಮ ಮಾತು ಪ್ರಾರಂಭಿಸಿದರು. ಮುಂದೆ ನೌಕರರಿಗೆ ದುಡ್ಡಿನ ಬದಲು ನೀರನ್ನೇ ಸಂಬಳವನ್ನಾಗಿ ನೀಡುವ ದಿನಗಳು ಬರಬಹುದು. ವೈಜ್ಞಾನಿಕ ತಂತ್ರಜ್ಞಾನಗಳನ್ನು ಮಿತವಾಗಿ ಬಳಸದೇ ಅವುಗಳಿಗೆ ಅಂಟಿಕೊಂಡರೆ ಅವು ನಮಗೆ ಮಾರಕವಾಗುತ್ತವೆ. ಆದ್ದರಿಂದ ನೆಲ-ಜಲದ ಸಂರಕ್ಷಣೆಗೆ ಮುಂದಾಗಬೇಕಿದೆ ಎಂದು ಮನಮುಟ್ಟುವಂತೆ ತಿಳಿಸಿದರು. ಈ ಎರಡು ಉಪನ್ಯಾಸಗಳು ಪರಿಣಾಮಕಾರಿಯಾಗಿದ್ದವು.

ಮಳಿಗೆ-ಪ್ರದರ್ಶನಗಳು

ಮಳದ ಅಂಗವಾಗಿ ವಿವಿಧ ಮಾರಾಟ ಮಳಿಗೆ,ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗಿತ್ತು. ಕೃಷಿ ಇಲಾಖೆಯವರು ವಿವಿಧ ಕೃಷಿ ಉಪಕರಣಗಳ ಪ್ರದರ್ಶನ ನಡೆಸಿದರೆ ಮೀನುಗಾರಿಕಾ ಇಲಾಖೆ ವಿವಿಧ ಜಾತಿಯ ಮೀನುಗಳ ಪ್ರದರ್ಶನ ಏರ್ಪಡಿಸಿತ್ತು. ರೇಷ್ಮೆ,ಜಲಾಯನ,ಅರಣ್ಯ,ಪಶುಸಂಗೋಪನಾ ಇಲಾಖೆಗಳು ಆಯಾ ಇಲಾಖೆಗಳ ಕುರಿತಾದ ಮಾಹಿತಿ,ವಸ್ತುಗಳ ಪ್ರದರ್ಶನ ನಡೆಸಿದವು.
ಸ್ಥಳೀಯ ನಂದೊಳ್ಳಿ,ದೇವರಗದ್ದೆ,ಹೆಗ್ಗುಂಬಳಿ,ಗುಮ್ಮಾನಿಮನೆ,ಗುಂಡ್ಕಲ್ ಮುಂತಾದ ಊರುಗಳ ಸ್ವಸಹಾಯ ಸಂಘಗಳು ಸಾವಯವ ಕೃಷಿ ಉತ್ಪನ್ನಗಳಿಂದ ತಯಾರಿಸಿದ ತಿಂಡಿ-ತಿನಿಸುಗಳ ಪ್ರದರ್ಶನ,ಮಾರಾಟ ನಡೆಸಿದವು. ಅವುಗಳಲ್ಲಿ ಹಪ್ಪಳ,ಚಿಪ್ಸ್,ಪೇಡೆ,ಚಕ್ಕುಲಿ,ರೊಟ್ಟಿ,ತೊಡೆದೇವು,ಸಂಡಿಗೆ,ಉಪ್ಪಿನಕಾಯಿ,ಉಂಡೆ ಸೇರಿದಂತೆ ವಿವಿಧ ತಿಂಡಿಗಳು ಸೇರಿದ್ದವು. ಅವುಗಳ ಜೊತೆ ಅರಿಶಿನ,ಶುಂಠಿ,ಗೆಣಸು,ಮುಂತಾದ ಉತ್ಪನ್ನಗಳ ಮಾರಾಟವೂ ಇತ್ತು. ಮಜ್ಜಿಗೆ,ತಂಬ್ಳಿ,ಕೋಕಂ ಮುಂತಾದ ಪಾನೀಯಗಳೂ ಲಭ್ಯವಾಗಿದ್ದವು.
ಈ ಪ್ರದರ್ಶನಗಳ ಜೊತೆಗೆ ವಿವಿಧ ತಳಿಗಳ ಜಾನುವಾರು ಪ್ರದರ್ಶನ ನಡೆಯಿತು. ಮಧ್ಯಾಹ್ನ ನಡೆದ ಶ್ವಾನ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಬೇರೆ ಬೇರೆ ಜಾತಿಯ ನಾಯಿಗಳ ಪ್ರದರ್ಶನ ನಡೆಯಿತು. ನಾಯಿಗಳು ತಮ್ಮ ಒಡೆಯನ ಜೊತೆಗೆ ವೇದಿಕೆಯಲ್ಲಿ ಹೆಜ್ಜೆ ಹಾಕಿದವು.
ಜಲಾನಯನ ಯೋಜನೆ ಗ್ರಾಮೀಣ ಕೃಷಿ ಅಭಿವೃದ್ಧಿಯ ಗುರಿ ಹೊಂದಿದ್ದು ಇಂತಹ ಮೇಳಗಳಿಂದಾಗಿ ಯೋಜನೆಗಳ ಕುರಿತು ಸಾರ್ವಜನಿಕರಿಗೆ ಸಂಪೂರ್ಣ ಮಾಹಿತಿ ನೀಡಬಹುದು. ಇಲಾಖೆಯ ಯೋಜನಾಧಿಕಾರಿಗಳು ಸಾರ್ವಜನಿಕರ ಜೊತೆಗೆ ಬೆರೆತು ಕೆಲಸ ನಿರ್ವಹಿಸಬಹುದು. ಸಾರ್ವಜನಿಕರ ಸಕ್ರಿಯ ಪಾಲ್ಗೊಳ್ಳುವಿಕೆಯೂ ಇಂತಹ ಮೇಳಗಳಿಂದ ಸಾಧ್ಯ. ಯೋಜನೆಯ ಯಶಸ್ಸಿನ ದೃಷ್ಟಿಯಿಂದ ಜಲಾನಯನ ಮೇಳಗಳು ಉತ್ತಮ ಕಾರ್ಯಕ್ರಮ.

ಶ್ರೀಧರ ಅಣಲಗಾರ, ಯಲ್ಲಾಪುರ

0 comments:

Post a Comment