ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ
`ಸಂಯೋಜಿತ' ಚಿಕಿತ್ಸಾ ಪದ್ಧತಿಯ ಮೂಲಕ `ಆನೆಕಾಲು'ರೋಗಕ್ಕೆ ಯಶಸ್ವೀ ಚಿಕಿತ್ಸೆ ಕಂಡುಹಿಡಿದು ವೈದ್ಯಕೀಯ ಕ್ಷೇತ್ರದಲ್ಲೇ ಒಂದು ಸಂಚಲನ ಮೂಡಿಸಿದ ಇನ್ಸಿಟ್ಯೂಟ್ ಆಫ್ ಅಪ್ಲೈಡ್ ಡರ್ಮಿಟಾಲಜಿ(ಐಎಡಿ) ಬಿಳಿತೊನ್ನಿಗೆ ಪರಿಣಾಮಕಾರಿ ಚಿಕಿತ್ಸೆ ಕಂಡುಹಿಡಿಯುವ ಮೂಲಕ ಇನ್ನೊಂದು ಮೈಲಿಗಲ್ಲು ನೆಟ್ಟಿದೆ.ಜೀವನದಲ್ಲಿ ನೊಂದ, ದೇಶದ 50 ಲಕ್ಷಕ್ಕೂ ಅಧಿಕ ಜನರ ಬಾಳಲ್ಲಿ `ಆಶಾಕಿರಣ' ಮೂಡಿಸುವಲ್ಲಿ ತನ್ಮೂಲಕ ಐಎಡಿಯ ಸಮಾನ ಮನಸ್ಕ ನಾಲ್ವರು ವೈದ್ಯರು ಪಾತ್ರರಾಗಿದ್ದಾರೆ.ಬಿಳಿತೊನ್ನಿಗೆ ಕಾರಣವೇನು?, ಯಾರಲ್ಲಿ, ಯಾಕಾಗಿ ಇದು ಕಾಣಿಸಿಕೊಳ್ಳುತ್ತದೆ ಎಂಬುದೇ ವೈಜ್ಞಾನಿಕ ಕ್ಷೇತ್ರಕ್ಕೊಂದು ಸವಾಲಾಗಿದ್ದ ಸಂದರ್ಭದಲ್ಲಿ ಹಲವು ಎಡರು ತೊಡರುಗಳ ನಡುವೆ ಈ ಖಾಸಗಿ ಸಂಸ್ಥೆ `ಕಾರಣ' ಹುಡುಕುವಲ್ಲಿ ಯಶಗಳಿಸಿದೆ.ಈ ರೋಗದ ಬಗ್ಗೆ ಈತನಕವಿದ್ದ ನಾನಾ ಆತಂಕಗಳಿಗೆ ತೆರೆಎಳೆಯುವಂತೆ ಮಾಡಿದೆ.


ಫೈಲೇರಿಯಾ, ಎಚ್.ಐ.ವಿ ಮತ್ತು ಬಿಳಿತೊನ್ನು ರೋಗಗಳಿಗೆ ಈ ಖಾಸಗೀ ಸಂಸ್ಥೆ ಚಿಕಿತ್ಸೆ ನೀಡುವ ಮೂಲಕ ವಿಶ್ವವೇ ಇವರತ್ತ ನೋಡುವಂತೆ ಮಾಡಿದೆ; ಕರ್ನಾಟಕದ ಭಾಗವೆಂದೇ ಪರಿಗಣಿಸಲ್ಪಡುವ ಕಾಸರಗೋಡು ಈ ಹೆಮ್ಮೆಗೆ ಪಾತ್ರವಾಗಿದೆ. ಇಲ್ಲಿನ ಪುಟ್ಟ ಕಟ್ಟಡದೊಳಗೆ ನಾಲ್ಕು ಮನಸ್ಸುಗಳು ಒಂದುಗೂಡಿ ನಡೆಸಿದ ಪರಿಣಾಮಕಾರಿ ಚರ್ಚೆಯೇ ಇದಕ್ಕೆಲ್ಲಾ ಉತ್ತರ ನೀಡುವಲ್ಲಿ ಸಾಧ್ಯವಾಗಿದೆ.

ಬಿಳಿತೊನ್ನು(ಪಾಂಡುರೋಗ, ಶ್ವಿತ್ರ, ವೈಟ್ ಪ್ಯಾಚಸ್) ದೇಶದ ಅಸ್ಪೃಶ್ಯ ಕಾಯಿಲೆಯೆಂದೇ ಪರಿಗಣಿಸಲ್ಪಟ್ಟಿದೆ. ಕಾಸರಗೋಡು, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಈ ರೋಗಿಗಳಿದ್ದಾರೆಯಾದರೂ ಹುಬ್ಬಳ್ಳಿ, ಧಾರಾವಾಡ, ದಾವಣಗೆರೆ ಪ್ರದೇಶಗಳಲ್ಲಿ ಈ ರೋಗಪೀಡಿತರ ಸಂಖ್ಯೆ ಅಧಿಕ. ವೆಸ್ಟ್ ಬೆಂಗಾಳ್, ಬಾಂಗ್ಲಾದೇಶಗಳಲ್ಲೂ ರೋಗ ಬಾಧಿತರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ.

ದೇಶದ ಜನಸಂಖ್ಯೆಯ 0.5ಶೇಕಡಾ ಜನರು ಬಿಳಿತೊನ್ನು ರೋಗದಿಂದ ಬಳಲುತ್ತಿದ್ದಾರೆ... ಮಾನಸಿಕ ಜರ್ಝರಿತರಾಗುತ್ತಿದ್ದಾರೆ. ಕಲ್ಕತ್ತಾದ ದಾಸ್, ಮುಜುಂದಾರ್ ಚಕ್ರಬೋರ್ತಿ ನಡೆಸಿದ ಸಂಶೋಧನೆ ಇದನ್ನು ದೃಢಪಡಿಸಿದೆ. ಬಿಳಿತೊನ್ನು ಚರ್ಮವನ್ನು ಬಾಧಿಸುವ ಒಂದು ಕಾಯಿಲೆ. ಚರ್ಮ ಎಂಬುದು ಇಡೀ ದೇಹದ ಕವಚ. ಕೂದಲು, ಉಗುರು ಸಹ ಇದಕ್ಕೆ ಸೇರುತ್ತದೆ. ತ್ವಚೆಯಲ್ಲಿನ ಕೆಲವು ಭಾಗಗಳಲ್ಲಿ ಅಥವಾ ಶರೀರ ಪೂರ್ತಿ ಬೆಳ್ಳಗಾಗುವುದನ್ನೇ `ಪಾಂಡುರೋಗ'ಎನ್ನಲಾಗಿದೆ. ಇದು ವಂಶಪಾರಂಪರ್ಯ(ಶೇ.20ರಷ್ಟು ಸಾಧ್ಯತೆ)ವಾಗಿಯೂ ಬರಬಹುದು. ಯಾವುದೇ ಒಂದು ಕಾರಣಕ್ಕೆ ಚರ್ಮಕ್ಕೆ ಬಣ್ಣ ನೀಡುವ `ಮೆಲನೋಸೈಟು' ತನ್ನ ಕಾರ್ಯವನ್ನು ನಿಲ್ಲಿಸಬಹುದು. ಇದರಿಂದಾಗಿ ಮೆಲನಿನ್ ಜೀವಕಣದ ಉತ್ಪಾದನೆ ಆಗುವುದಿಲ್ಲ. ಆಗ ಚರ್ಮ ತನ್ನ ತಾಜಾ ಬಣ್ಣವನ್ನು ಕಳೆದು ಬಿಳಿ ಬಣ್ಣಕ್ಕೆ ತಿರುಗುತ್ತದೆ.

ಹೊಸ ವಿಧಾನ: ರೋಗಿಗಳು ಬಹುಪದ್ಧತಿಯ(ಆಯುರ್ವೇದ ಮತ್ತು ಅಲೋಪತಿ)ಔಷಧಿಗಳನ್ನು ಏಕಕಾಲದಲ್ಲಿ ಬಳಸುವುದರಿಂದ ರೋಗಗಳ ನಿಯಂತ್ರಣ ಬಹುಬೇಗನೇ ಆಗುತ್ತಿದೆ ಎಂಬ ಸತ್ಯವನ್ನು ತಮ್ಮ ವೈದ್ಯಕೀಯ ವೃತ್ತಿ ಅನುಭವದಿಂದ ಕಂಡುಕೊಂಡ ಕಾಸರಗೋಡಿನ ಚರ್ಮ ಮತ್ತು ಲೈಂಗಿಕ ರೋಗ ತಜ್ಞ ಡಾ.ಎಸ್ ಆರ್ ನರಹರಿ, ಈ ಸೂಕ್ಷ್ಮ ವಿಚಾರವನ್ನೇ ತಮ್ಮ ಅಧ್ಯಯನ ವಿಷಯವನ್ನಾಗಿ ಕೈಗೊಂಡರು. ಇದರ ಪರಿಣಾಮವೇ ಇಡೀ ವಿಶ್ವದಲ್ಲೇ ಅತ್ಯಂತ ಹೊಸಪದ್ಧತಿಯೆಂದು ಪರಿಗಣಿಸಲ್ಪಟ್ಟ `ಸಂಯೋಜಿತ ಚಿಕಿತ್ಸಾ ಪದ್ಧತಿ'ಯ ಜನನ.

ಆಯುರ್ವೇದ, ಅಲೋಪತಿ ಮತ್ತು ಹೋಮಿಯೋಪತಿ ಪದ್ಧತಿಗಳನ್ನು ಒಗ್ಗೂಡಿಸಿ ರೋಗಿಗಳಿಗೆ ಅನುರೂಪವಾದ ಚಿಕಿತ್ಸೆ ನೀಡುವ ವಿಧಾನವೇ ಸಂಯೋಜಿತ ಚಿಕಿತ್ಸಾ ಪದ್ಧತಿ. ಇದರ ಮೂಲಕವೇ ಐಎಡಿಯ ತಂಡ ಪಾಂಡುರೋಗಕ್ಕೆ ಪರಿಣಾಮಕಾರಿ ಚಿಕಿತ್ಸೆಯನ್ನೂ ನೀಡುತ್ತಿದೆ.
ಡಾ.ಪ್ರಸನ್ನ ನರಹರಿ, ಆಯುರ್ವೇದ ಪದ್ಧತಿಯ ಡಾ.ಮಹಾದೇವನ್, ಹೋಮಿಯೋಪತಿಯ ಡಾ.ಕೆ.ಎಸ್ ಬೋಸ್ ಸೇರಿದಂತೆ ಒಂದು ಸಮಾನ ಮನಸ್ಕರ ತಂಡ ರಚಿತಗೊಂಡು ಈ ನೂತನ ಚಿಕಿತ್ಸಾವಿಧಾನವನ್ನು ಕಂಡುಹಿಡಿದೆ. ಇದರಿಂದ ನಿರೀಕ್ಷೆಗೂ ಮೀರಿದ ಫಲ ಇದರಿಂದ ದೊರಕಿದೆ.
ಆಯುರ್ವೇದ ಪದ್ಧತಿಯಲ್ಲಿ ಬಿಳಿತೊನ್ನಿಗೆ ಚಿಕಿತ್ಸೆ ಇದೆ. ಇದರಲ್ಲಿ ಹೇಳಿರುವಂತೆ ಶರೀರದ ಬ್ರಾಜಕ ಪಿತ್ತದಲ್ಲಿನ ಅಸಮತೋಲನದಿಂದಲೇ ಈ ರೋಗ ಕಾಣಸಿಗುತ್ತದೆ. ರೋಗಿಗಳಿಗೆ ಕಾಮಧೇನು ಶ್ವಿತ್ರನಾಶಕವಟಿ ಮಾತ್ರೆಯ ಮೂಲಕ ಚಿಕಿತ್ಸೆ ನೀಡುವ ಪದ್ಧತಿಯೂ ಸೇರಿದಂತೆ ಇನ್ನಿತರ 25ಕ್ಕೂ ಅಧಿಕ ಚಿಕಿತ್ಸಾ ವಿಧಾನಗಳನ್ನು ಗೊತ್ತುಮಾಡಿದೆ.

ಮಹಾರಾಷ್ಟ್ರದ ವಾರ್ಧಾದಲ್ಲಿರುವ ಡೆಲ್ಲಿಯ ಐಐಟಿ ಅಂಗಸಂಸ್ಥೆಯಾದ ಎಂಜಿಐಆರ್ಐ ನ ತಜ್ಞ ವೈದ್ಯರ ತಂಡವೊಂದು ಪಾಂಡುರೋಗಕ್ಕೆ ಕಾಮಧೇನು ಶ್ವಿತ್ರನಾಶಕ ವಟಿಯಿಂದ ಚಿಕಿತ್ಸೆ ನಡೆಸಿದಾಗ ಉತ್ತಮ ಫಲಿತಾಂಶ ದೊರಕುತ್ತಿದೆ ಎಂಬ ಸತ್ಯವನ್ನು ಕಂಡುಕೊಂಡಿತು. ಅದೇ ಸಂದರ್ಭದಲ್ಲಿ ಕಾಸರಗೋಡಿನ ಐಎಡಿ ವೈದ್ಯ ತಂಡ ಸಂಯೋಜಿತ ಚಿಕಿತ್ಸಾ ಪದ್ಧತಿ ಸಿದ್ಧಪಡಿಸಿ, 2003ರ ಮಾರ್ಚ್ ತಿಂಗಳಲ್ಲಿ ಎಂಜಿಆರ್ಐ ನ ಅಂಗೀಕಾರಕ್ಕೆ ಕಳುಹಿಸಿತು. ಜುಲೈನಲ್ಲಿ ಇದು ಅಂಗೀಕೃತವಾಗಿ ಈ ವಿಧಾನ ಮುಂದುವರಿಸಲು ಅಧಿಕೃತ ಆದೇಶವನ್ನೂ ನೀಡಿತು. 2003ರ ಆಗಸ್ಟ್ ತಿಂಗಳಲ್ಲಿ ಐಎಡಿ ಬಿಳಿತೊನ್ನಿಗೆ ಚಿಕಿತ್ಸೆ ನೀಡುವ ವಿಚಾರದಲ್ಲಿ `ಎಥಿಕ್ ಕಮಿಟಿ' ಒಪ್ಪಿಗೆ ಪಡೆದು ಚಿಕಿತ್ಸೆ ಆರಂಭಿಸಿತು. 2006ರ ಅಗಸ್ಟ್ ತಿಂಗಳ ತನಕ ಒಟ್ಟು 237 ಮಂದಿಗೆ ಇದೇ ರೋಗಕ್ಕೆ ಚಿಕಿತ್ಸೆಯನ್ನು ನೀಡಿದೆ. ಈ ಪೈಕಿ ಶೇ.33ಮಂದಿಗೆ ಉತ್ತಮ ಫಲಿತಾಂಶ ದೊರಕಿದೆ.

ಶೇ.46.6ಮಂದಿಗೆ ಪರಿಣಾಮಕಾರಿಯಾಗಿದೆ. ಶೇ.20 ಮಂದಿ ನಾನಾ ಕಾರಣದಿಂದ ಚಿಕಿತ್ಸೆಯಿಂದ ಹಿಂದೆ ಸರಿದಿದ್ದಾರೆ. ಒಟ್ಟಿನಲ್ಲಿ ಹೊಸ ಪದ್ಧತಿ ಈ ರೋಗಕ್ಕೆ ಪರಿಣಾಮಕಾರಿ ಚಿಕಿತ್ಸಾ ವಿಧಾನವಾಗಿ ಕಾರ್ಯನಿರ್ವಹಿಸಿದೆ.

ಅಧ್ಯಯನ ವರದಿ-ಹೋಲಿಕಾ ಮಾಪನ: ಪಾಂಡುರೋಗದ ಚಿಕಿತ್ಸೆ, ಪ್ರಗತಿಗಳ ಬಗ್ಗೆ ನಿರಂತರ ಮೂರು ವರ್ಷಗಳ ಅಧ್ಯಯನ ವರದಿ ಈ ತನಕ ವಿಶ್ವದಲ್ಲೇ ನಡೆದಿಲ್ಲ,ಎನ್ನುತ್ತಾರೆ ಐಎಡಿ ಸಂಸ್ಥೆಯ ನಿರ್ದೇಶಕ ಮತ್ತು ಅಧ್ಯಕ್ಷ ಡಾ.ಎಸ್ ಆರ್ ನರಹರಿ.
ಇದೀಗ ಐಎಡಿ ಈ ಬಗ್ಗೆ ಕಾರ್ಯೋನ್ಮುಖವಾಗಿದೆ.

- ಟೀಂ ಈ ಕನಸು

0 comments:

Post a Comment