ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ
ಜೀವನ ಎಂಬುದು ಗಾಲಿಯಂತೆ...ಒಮ್ಮೆ ಮೇಲೇರುತ್ತದೆ..ಮತ್ತೊಮ್ಮೆ ಕೆಳಗೆ ಹೋಗುತ್ತದೆ. ನೆನಪುಗಳೂ ಹಾಗೆನೇ...ಇದೀಗ ಜೀವನ ಒಂದು ಹಂತ ತಲುಪುತ್ತಿದ್ದಂತೆ ಮತ್ತೆ ಮತ್ತೆ ಹಳೆಯ ನೆನಪುಗಳು ಬೇಡ ಬೇಡವೆಂದರೂ ಕಾಡತೊಡಗುತ್ತವೆ...ಆ ನೆನಪುಗಳ ಅಂಗಳದಿಂದ ಎದ್ದೆದ್ದು ಬರುತ್ತವೆ...ನಿರಂತರವಾಗಿ ಬರೆಯುತ್ತಿದ್ದ ಅಂಕಣಗಳು...ಓದುಗರ ನಿರಂತರ ಪ್ರತಿಸ್ಪಂದನ, ಪತ್ರಗಳ ರಾಶಿ ರಾಶಿ ಅದೆಲ್ಲವೂ ಮತ್ತೆ ನೆನಪನ್ನು ಕೆದಕತೊಡಗಿವೆ...ನನ್ನ ಕೋಣೆಯೊಳಗೆ ಒಂದಷ್ಟು ಕ್ಲೀನಿಂಗ್ ಕೆಲಸ ಆರಂಭಿಸಿದ್ದೇನೆ...ಪತ್ರಿಕೆಯಲ್ಲಿದ್ದಾಗ ಬಂದಂತಹ ಹಳೆಯ ಪತ್ರಗಳು, ಓದುಗರ ಪ್ರತಿಸ್ಪಂದನಗಳು ಹಳೆಯ ಲೇಖನಗಳನ್ನು ನೆನಪಿಸುವಂತೆ ಮಾಡಿದವು...ಆ ನೆನಪಿಗೋಸ್ಕರ ಇದೀಗ ಹಳೆಯ ಲೇಖನವೊಂದನ್ನು ಈ ಕನಸಿನ ಮೂಲಕ ಮತ್ತೊಮ್ಮೆ ಓದುಗರಿಗೆ ನೀಡುತ್ತಿದ್ದೇನೆ...ಅದೇ ಪ್ರೀತಿ ವಿಶ್ವಾಸದ ನಿರೀಕ್ಷೆಯೊಂದಿಗೆ...ಆಕೆ ಮುನಿಸಿಕೊಂಡರೆ ನೋಡುವುದಕ್ಕೇನೋ ಒಂಥರಾ ಖುಷಿ... ನಾನು ಏನಾದರೊಂದು ಹೇಳಿದರೆ ಸಾಕು...ಅದಕ್ಕೆ ಆಕೆಯ ಕಾಮೆಂಟ್ಸ್ ಇದ್ದೇ ಇರುತ್ತದೆ. ಪ್ರತಿಯಾಗಿ ನಾನು ವಾದ ಮಾಡಹೊರಟರಂತೂ ಸಾಕು...`ನಿಮ್ಮಲ್ಲಿ ಮಾತ್ನಾಡೋದಕ್ಕೆ ಫುಲ್ ಪ್ರಿಪೇರ್ ಮಾಡ್ಬೇಕು ... ಇಲ್ಲಾಂದ್ರೆ ಕಷ್ಟ ನೋಡಿ..' ಸಾಕು ಸಾಕು ಎಂದು ಮಾತು ಅರ್ಧಕ್ಕೆ ಸ್ಟಾಪ್. ಅಷ್ಟರಲ್ಲಿ ನಾನೊಂದು ಡೈಲಾಗ್ ಹೊಡ್ದೇನಂತ್ರೆ ಸಾಕು... ಮುನಿಸು ಓಡೋಡಿ ಬಂದು ಆಕೆಯ ನೀಳ ಮೂಗಿನ ತುದಿಗೇರಿಯೇ ಬಿಡುತ್ತದೆ...ಗೋಧಿವರ್ಣದ ತ್ವಚೆ ಕೆಂಪಗೆ ತಿರುಗಿಯೇ ಬಿಡುತ್ತದೆ...


ಅಲ್ಲೆಲ್ಲಾ ಬೆವರ ಹನಿ ಜಿನುಗಿ ಸುಂದರ ಮುತ್ತಿನಂತೆ ತುದಿಯನ್ನಲಂಕರಿಸಿಬಿಡುತ್ತದೆ!... ಆಗ ನಾನೇ ಸಜೆಷನ್ ಕೊಡುತ್ತೇನೆ... `ಕೆಂಪುಮೂಗಿನ ಹುಡುಗಿಯೇ ಕರ್ಚೀಫ್ ತೆಗೆದು ಮೂಗಿನ ತುದಿ ಒರೆಸಿಕೋ' ಎನ್ನುತ್ತೇನೆ... ಮತ್ತದೇ ಕೋಪದಲ್ಲಿ ...ರೀ...ನೋಡಿ ನೋಡಿ... ನನ್ನ ರೇಗಿಸ್ಬೇಡೀ ಮತ್ತೆ... ಎನ್ನುತ್ತಾಳೆ..
ಮತ್ತೆ ಒಂದಷ್ಟು ಕಾಲ ಮೌನ... ಹೂಂ...ಎನ್ನುವ ಒಂದು ಸಣ್ಣ ಹೂಂಕಾರ... ಎದುರಿಗಿದ್ದರೆ ಆಕಡೆ ಎಲ್ಲೋ ನೋಡುತ್ತಾ ಕೂರುವ ಸ್ವಭಾವ.. ಇಲ್ಲಾಂದ್ರೆ ಮೇಲೆ ನೋಡುತ್ತಾ ಕಾಲಲ್ಲಿ ಭೂಮಿಯನ್ನೇ ತಿವಿಯುತ್ತಾ `ಹಗೆ'ತೀರಿಸುತ್ತಾಳೆ...


ಕೊನೆಗೆ ಆಕೆಯ ಸಾವರಿಸಿಕೊಂಡು ಛೆ...ಏನಾಯ್ತು...ಯಾಕೆ ಮೂಡ್ ಹೋಯ್ತಾ...ದೇವ್ರೇ ಎಷ್ಟೊತ್ತಿಗೆ ಮೂಡ್ ಬರುತ್ತೆ...ಎಷ್ಟೊತ್ತಿಗೆ ಮೂಡ್ ಹೋಗುತ್ತೆ ಹೇಳೋದೇ ಕಷ್ಟ. ನಿಮ್ಮಲ್ಲಂತೂ ಮಾತಾಡೋದ್ ಭಾರೀ ಡೇಂಜರಪ್ಪಾ... ಎಂದು ನಂಗೇ ಡೈಲಾಗ್ ತಿರುಗಿಸಿ ಹೊಡೀತಾಳೆ!...ಫೋನಲ್ಲಿ ಮಾತಾಡ್ಬೇಕಾದ್ರೆ ನಾನ್ ಏನಾದ್ರೂ ಡೈಲಾಗ್ ಹೊಡ್ದೇ ಅಂದ್ರೆ ಅಲ್ಲಿಂದ ಕ್ಷಣ ಕಾಲ ಮೌನದುತ್ತರ ದೊರೆತ್ರೆ ನಂಗೆ ಗೊತ್ತಾಗಿ ಬಿಡುತ್ತೆ... ಆಕೆಯ ಮೂಗು ಕೆಂಪಾಗಿದೆ!... ನಾನೇ ಆಗ ಹೇಳುತ್ತೇನೆ... `ಹೇ...ನೋಡೇ ಅಲ್ಲೇ ಪಕ್ಕದಲ್ಲಿರೋ ಟವೆಲ್ ತೆಗೆದು ಮೂಗ್ ಒರೆಸ್ಕೋ... ಹೇಗೆ ಕೆಂಪಾಗಿದೆ ನೋಡು...' ಏನು ಇನ್ನೂ ಮೇಲೆ ನೋಡ್ತಿಯಲ್ಲೇ... ಹೇಳಿದ್ದು ಗೊತ್ತಾಗಿಲ್ವೇ ಎಂದು ಮತ್ತೊಂದು ಡೈಲಾಗ್ ಹೊಡೆದೇ ಆಂದ್ರೆ ...ಅಲ್ಲಿಗೇ ಶರಣು..ಶರಣು...ಮತ್ತೆ ಒಂದಷ್ಟು ಕಾಲ ಮುಗುಂ...ಮಾತು ಇಲ್ಲ ಕಥೆನೂ ಇಲ್ಲ...


ಮತ್ತೂ ಮಜ ಇದೆ ನೋಡಿ...ಒಂದಷ್ಟು ಹೊತ್ತು ಮಾತು ಕತೆ ಇಲ್ಲಾಂದ್ರೆ ಆಕೆಯ ಮೊಬೈಲ್ ಮೇಲೆ ಸುಂದರ ಕೈಬೆರಳು ಓಡೋಡಿ ಒಂದಷ್ಟು ಎಸ್.ಎಂ.ಎಸ್ ಹಾಗೇ ಟೈಪ್ ಆಗಿರುತ್ತೆ.... `ಹೇ .... ಏನಾಯ್ತು...ನೀನ್ ನನ್ನ ರಾಜ್ಕುಮಾರ ಅಲ್ವಾ...ಏನಾಯ್ತು ಪಾಪೂ...ಯಾಕೆ ಕೋಪಾನಾ...ಸೋರಿ...ಸೋರಿ ಅಂದ್ನಲ್ಲಾ...ಹ್ಹಾಂ...ನಿಂಗೊಂದು ಸಸ್ಪನ್ಸ್ ಇದೆ... ಏನ್ ಗೊತ್ತಾ...ಹೇಳಲ್ಲ...ತಕ್ಷಣ ಕಾಲ್ ಮಾಡು..' ಅಲ್ಲಿಗೆ ಸ್ಟಾಪ್! ಹಾಗೇ ಸಸ್ಪನ್ಸ್ ಕೊಟ್ಟು ಎಲ್ಲಾ ಸಿಟ್ಟನ್ನು ಒಮ್ಮೆಲೆ ಕರಗಿಸಿ ಬಿಡ್ತಾಳೆ ಈ ಚೆಂದುಳ್ಳಿ ಚೆಲುವೆ....! ಮತ್ತೆ ಒಂದೋ...ಎರಡೋ ಗಂಟೆಗಳು ನಿಮಿಷದಂತೆ ಹೋಗಿಬಿಡುತ್ತೆ...!ಆಕೆಗೆ ಮೂಡ್ ಆಫ್ ಆದ್ರೆ ಎಲ್ಲಾದ್ರೂ ಏಕಾಂತದಲ್ಲಿ ಹೋಗಿ ಕೂರುತ್ತಾಳೆ...ಒಂದಷ್ಟು ಕಾಲ ತಲೆ ಅಡಿಗೆ ಹಾಕಿ ಅಳ್ತಾಳೆ... ಊಟ..ತಿಂಡಿಗೆಲ್ಲಾ ಸ್ಟ್ರೈಕ್.

ಹ್ಹೂಂ...ಇದೆಲ್ಲಾ ಹಳೇ ಕಥೆ... ಅದು ಹಾಗೇ ನೆನಪಾಯಿತು... ಅಲ್ಲೇ ಟೆರೇಸ್ ಮೇಲೆ ನಿಂತು ಹಾಗೇ ಫೋನಲ್ಲಿ ಮಾತನಾಡುತ್ತಿರಬೇಕಾದ್ರೆ ನೆನಪಾಯ್ತು. ಅದೇ ಅಂದು ನಾನು ಆಕೆಯಲ್ಲಿ ಫೋನ್ ಮಾತನಾಡ್ಬೇಕಾದ್ರೆ ಇದ್ದ `ಚೆವಿ' ಹಣ್ಣಿನ ಗಿಡ ಇಂದು ಒಣಗಿ ಕರಟಾಗಿ ಹೋಗಿದೆ. ನಮ್ಮ ಸಂಬಂಧದಂತೆ!...ಅದೇ ಗಿಡ ಈ ಎಲ್ಲಾ ಘಟನೆಗಳನ್ನು ನೆನಪಿಸಿತು.ಈಗ `ಮೂಗಿನ ತುದಿ ಒರೆಸಿಕೋ' ಅನ್ನೋ ಡಯಲಾಗ್ ಹೊಡೆಯೋಕೆ ಫೋನೇ ಇಲ್ಲ... ಮುಖತಾ ಸಿಗುವುದಂತೂ ಇಲ್ಲವೇ ಇಲ್ಲ... ಮಾತೂ ಇಲ್ಲ ಕಥೆನೂ ಇಲ್ಲ. ಆ ಆತ್ಮೀಯ ಸಂಬಂಧಗಳೂ ಹಾಗೇ ಮಂಜುಗಡ್ಡೆಯಂತೆ ಕರಗಿ ನೀರಾಗಿ ಹೋಗಿದೆ... ಆ ನೀರ ಕೊನೆ ಹನಿಯೂ ಆರಿ ಹೋಗಿದೆ...!


ಈತನಕ ನನ್ನಲ್ಲಿದ್ದ ಸಿಟ್ಟು, ಬೇಸರ, ಮೂಗಿನ ತುದಿಯಲ್ಲಿದ್ದ ಕೋಪ ಎಲ್ಲವೂ ಈ ಹೊಸ ವರ್ಷದಲ್ಲಿ ಜೊತೆ ಜೊತೆಗೆ ಕರಗಿ ಹೋಗಿದೆ... ಈಗ ಎಲ್ಲವೂ ಹೊಸತು... ನವೋಲ್ಲಾಸದ ಸಂಭ್ರಮ... ಬರಡುಗಾಡಲ್ಲಿ ಓಯಸಿಸ್ ಹುಡುಕುವಂತೆ ಹೊಸತನದ ಹುಡುಕಾಟ...ಹೊಸದಾಸೆಗಳ ಹುಡುಕಾಟ...ಹಳೆಯ ನೆನಪುಗಳು ಕಳಚಿಕೊಳ್ಳತೊಡಗಿದೆ...ಬಾಡಿದ ಗುಲಾಬಿಯ ಒಂದೊಂದೇ ದಳಗಳು ಕಳಚಿ ತೇಲುತ್ತಾ ತೇಲುತ್ತಾ...ಭೂಸ್ಪರ್ಷವಾಗುವಂತೆ... ಅದೇ ಸ್ಥಾನದಲ್ಲಿ ಹೊಸ ಮೊಗ್ಗು ಅರಳತೊಡಗಿದೆ...ಸುವಾಸನೆ ಬೀರಿ ನವೋಲ್ಲಾಸವ ಹರಡುವ ತವಕದಲ್ಲಿದೆ...! ಕಾಲಚಕ್ರ ಬದಲಾದಂತೆ...ಹಳೆಯ ನೆನಪುಗಳು ಮಾಸುತ್ತವೆ...ಅಲ್ಲಿ ಹೊಸ ನೆನಪುಗಳು ಪುಳಕಗೊಳ್ಳುತ್ತವೆ... ಹಳೆ ಬೇರು ಬಾಡುತ್ತದೆ...ಹೊಸ ಚಿಗುರು ಮೊಳೆಯುತ್ತದೆ...ಹಾಗೇ ಜೀವನವೂ!

- ಹರೀಶ್ ಕೆ.ಆದೂರು

2 comments:

Anonymous said...

ಪ್ರತಿ ಹೊಸ ವರ್ಷದಲ್ಲಿ ಹಳೆ ಬೇರು ಬಾಡುತ್ತದೆ...ಹೊಸ ಚಿಗುರು ಮೊಳೆಯುತ್ತದೆ...ಜೀವನವೂ ಹಳೆಯ ಲೇಖನ....

Anonymous said...

nimma kempu mugin hudugi ennuva shirshikeye tuma sogasagide... Prakash.B.Jalahalli

Post a Comment