ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಅವಾರ್ಡ್
ಕರ್ನಾಟಕ ರಾಜ್ಯ ಅನೇಕ ಆದಿವಾಸಿಗಳ ನೆಲೆಬೀಡು. ಊರ ಹೊರಗೋ ಅಥವಾ ಎಲ್ಲೋ ಕಾಡಿನ ಮಧ್ಯೆ ಜೀವನ ನಡೆಸುತ್ತಿರುವ ಇವರು ಇಂದು ಸುಶಿಕ್ಷಿತರಾಗಿ ಸಮಾಜದ ಮುಖ್ಯ ಬರುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕಂಡು ಬರುವ ಪ್ರಮುಖ ಬುಡಕಟ್ಟು ಜನಾಂಗ ಎಂದರೆ ಅದು ಸಿದ್ದಿ ಜನಾಂಗ. ದೂರದ ಆಫ್ರಿಕಾದಿಂದ ಬಂದ ಇವರು ದೇಶದ ಅನೇಕ ಭಾಗಗಳಲ್ಲಿ ನೆಲೆಸಿದ್ದಾರೆ.ಸಿದ್ಧಿಜನಾಂಗದ ಕುರಿತಾದ ಅಧ್ಯಯನ ನಮ್ಮ ಚಿಂತನೆಯಾಗಿತ್ತು. ಅಂದು ಸುಮಾರು ಮಧ್ಯಾನ್ನ 12.30ರ ಸಮಯ.


ಶಿರಸಿ ತಾಲೂಕಿನ ವಾನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಪುಟ್ಟ ಗ್ರಾಮ ಶಿರಸಗಾಂವವನ್ನು ತಲುಪಿದ್ದೆವು. ಸಿದ್ದಿಗಳ ಜನಜೀವನವನ್ನು ತಿಳಿಯಲೆಂದೇ ನಾವು ಅಲ್ಲಿನ ವೆಂಕಟರಮಣ ಗಿಡ್ಡ ಸಿದ್ದಿ ಎಂಬುವವರ ಮನೆಗೆ ನಡೆದೆವು. ಅವರ ಮನೆ ಸಾಮಾನ್ಯ ಮನೆಯಂತೆ ಇತ್ತು. ಡಿಶ್ ಟಿವಿ ಪ್ರಭಾವವೂ ಇತ್ತು. ಮನೆ ಯೊಳಗೆ ನೋಡಿದಾಗ ಏಸುವಿನ ಚಿತ್ರಗಳು ಕಾಣುತ್ತಿದ್ದವು. ಅವರು ಕ್ರೈಸ್ಥ ಧರ್ಮಕ್ಕೆ ಸೇರಿದವರಾಗಿದ್ದರು. ವೆಂಕಟರಮಣ ಸಿದ್ದಿಯವರ ಸಂಸಾರದಲ್ಲಿ
ಹೆಂಡತಿ, ಮೂರು ಜನ ಹೆಣ್ಣು ಮಕ್ಕಳು, ಒಂದು ಗಂಡು ಮಗುವಿನ ಚಿಕ್ಕ ಕುಟುಂಬ.

ಅವರ ಮನೆಗೆ ನಾವು ಭೇಟಿ ನೀಡಿದಾಗ ಅವರ ಮನೆಗೆ ಸುಣ್ಣ - ಬಣ್ಣ ಬಳಿಯಲಾಗುತ್ತಿತ್ತು. ಅವರ ಎರಡನೇ ಮಗಳಿಗೆ ಮದುವೆ ನಿಶ್ಚಯವಾಗಿತ್ತು. ಹಿಂದೂ ವರನೊಂದಿಗೆ ವಿವಾಹ ನಿಶ್ಚಯಿಸಿದ್ದರು. ಮೊದಲ ಮಗಳಿಗೆ ಮದುವೆಯಾಗಿತ್ತು. ಅವರ ಸಂಪ್ರದಾಯ ಏನೆಂದರೆ ಹಿಂದೂಗಳೊಂದಿಗೆ ವಿವಾಹವಾಗುವಾಗ ಹಿಂದೂ ವಿವಾಹ ಪದ್ದತಿ ಅನುಸರಿಸುವುಸುದು, ಕ್ರೈಸ್ತರೊಂದಿಗೆ ವಿವಾಹ ಆಗುವಾಗ ಕ್ರೈಸ್ತ ಧರ್ಮದ ವಿವಾಹ ಪದ್ದತಿಯನ್ನು ಅನುಸರಿಸುವುದಾಗಿದೆ. ಹೀಗೆ ಎಲ್ಲಾ ಧರ್ಮಗಳಲ್ಲೂ ಇವರು ಸಂಬಂಧ ಬೆಳೆಸುತ್ತಿರುವುದು ಆಶ್ಚರ್ಯದ ಸಂಗತಿ.

ಸ್ವಲ್ಪ ಸಮಯದ ನಂತರ ನಾವು ಅವರ ಅಡುಗೆ ಮನೆಗೆ ತೆರಳಿ ಮನೆಯವರೊಂದಿಗೆ ಮಾತನಾಡುತ್ತಿದ್ದೆವು. ಆಗ ಅವರು ನಮಗೆ ಕೋಕಂಬ್ ಜ್ಯೂಸ್ ತಯಾರಿಸುತ್ತಿದ್ದು ಕಂಡು ಬಂತು. ಅವರು ಆ ಜ್ಯೂಸ್ ತಯಾರಿಸುವುದನ್ನು ಶಿರಸಿಯ ಪ್ರಗತಿ ಎಂಬ ಸಂಸ್ಥೆಯಿಂದ ಕಲಿತಿದ್ದರು. ಅವರ ಮೂಲ ಅಡುಗೆಗಳ ಬಗ್ಗೆ ಕೇಳಿದಾಗ , "ಮೂಲ ಅಡುಗೆಗಳು ಅಂತ ಏನೂ ಇಲ್ಲರಿ, ಈಗ ಎಲ್ಲರೂ ಮಾಡುವ ಅಡುಗೆಯನ್ನೇ ಮಾಡುತ್ತೇವೆ, ಅನ್ನ ಸಾರು, ಪಲಾವ್ ಹೀಗೆ ಎಲ್ಲಾ ಮಾಡುತ್ತೇವೆ" ಎಂದು ಆ ಮನೆಯ ಮಗಳು ಅನ್ನಳ ಹೇಳುತ್ತಾಳೆ..


ಆ ಮನೆಯವರಿಂದ ಸಿಕ್ಕ ಇನ್ನೊಂದು ಕುತೂಹಲದ ವಿಷಯ ಎಂದರೆ ಚಿಗಳಿ ಚಟ್ನಿ. ಈ ಚಿಗಳಿ ಚಟ್ನಿಯನ್ನು ಕೆಂಪು ಇರುವೆಗಳಿಂದ ಮಾಡುತ್ತಾರಂತೆ. ಈ ಇರುವೆಗಳ ಗೂಡನ್ನೇ ತಂದು ಅವನ್ನು ಹುರಿದು ಮಸಾಲೆ ಹಾಕಿ ಚಟ್ನಿಯನ್ನು ತಯಾರಿಸುತ್ತಾರಂತೆ. ಇದು ಬಾಣಂತಿಯರಿಗೆ ತುಂಬಾ ಉಪಯೋಗ ಹಾಗೂ ನೆಗಡಿ ಕೆಮ್ಮು ಎಲ್ಲಕ್ಕೂ ಬರತ್ತೆ ಅಂತ ಹೇಳ್ತಾರೆ ಮನೆಯ ಯಜಮಾನಿ ಪ್ರೇಮ ವೆಂಕಟರಮಣ ಸಿದ್ದಿ.
ಜೀವನೋಪಾಯಕ್ಕೆಂದೇ ಅನೇಕ ಕಸುಬುಗಳನ್ನು ಮಾಡುತ್ತಿದ್ದಾರೆ.
ಇವರು ಅರಣ್ಯ ಕಿರು ಉತ್ಪನ್ನಗಳಾದ ಉಪ್ಪಾಗೆ, ಲವಂಗ, ದೂಪ, ರಾಂಪತ್ರೆಗಳನ್ನು ಕಾಡಿನಿಂದ ಸಂಗ್ರಹಿಸಿ ಮಾರುಕಟ್ಟೆಗೆ ನೀಡುತ್ತಿದ್ದಾರೆ. ಒಂದನ್ನು ಕಡಿದರೆ ಎರಡನ್ನು ಬೆಳಸಿ ಎಂಬ ತತ್ವದೊಂದಿಗೆ ಉತ್ತಮ ಜೀವನ ನಡೆಸುತ್ತಿದ್ದಾರೆ.
ಕಾಡಿನಲ್ಲಿ ಸಿಗುವಂತಹ ಹುಕ್ಕೆ ಬಳ್ಳಿಯಿಂದ ಬುಟ್ಟಿ ಹೆಣೆಯುವುದು, ಪ್ಲೇಟ್ ತಯಾರಿಕೆ, ಬೀಸಣಿಕೆ, ಟಿಪಾಯಿಗಳು, ಅಲಂಕಾರಿಕ ಹೂಗಳನ್ನು ತಯಾರಿಸುತ್ತಿದ್ದಾರೆ. ವೈವಿಧ್ಯಮಯ ಚಾಪೆಗಳನ್ನು ಹೆಣೆಯುತ್ತಿದ್ದಾರೆ. ಈ ವಸ್ತುಗಳ ಬೆಲೆ 250-300 ರೂಗಳಿಂದ ಆರಂಭವಾಗುತ್ತದೆಯಂತೆ ಇದಕ್ಕೆ ಮಾರುಕಟ್ಟೆಯಲ್ಲಿ ತುಂಬಾ ಬೇಡಿಕೆ ಇದೆಯಂತೆ.
ನಮ್ಮದು ಅಡಿಕೆ ಹಾಗು ತೆಂಗಿನ ತೋಟ ಇದೆ ಕಣ್ರಿ ಮತ್ತೆ ಜೇನು ಕೂಡಾ ಸಾಕುತ್ತಾ ಇದ್ದೇವೆ ಕಣ್ರೀ ಅಂತ ಖುಷಿಯಿಂದ ಜೇನು ಸಾಕುತ್ತಿರುವ ಪಟ್ಟಿಗೆಯನ್ನು ತೆಗೆದು ತೊರಿಸುತ್ತಾರೆ ವೆಂಕಟರಮಣ ಸಿದ್ದಿಯವರು.
ಒಟ್ಟಾರೆ ಇಂದಿನ ಕಳೆದು ಹೋಗಿರುವ ಪ್ರಪಂಚದಲ್ಲಿ ಕಳೆದು ಹೋಗಿರುವ ನಾವು ಸಿದ್ದಿಗಳ ಜೀವನವನ್ನು ನೋಡಿದಾಗ ನಮಗಿಂತ ಉತ್ತಮ ಸ್ಥಿತಿಯಲ್ಲಿದ್ದಾರೆ ಎನ್ನಿಸುವುದು ಸಹಜ. ಆದರೆ ಅವರಲ್ಲಿ ಇಂದು ಅನೇಕ ಬದಲಾವಣೆಗಳನ್ನು ಕಾಣಬಹುದು. ಅವರ ಮೂಲ ಆಹಾರ ಪದ್ದತಿಗಳನ್ನು ಮರೆತ್ತಿದ್ದಾರೆ. ಅನೇಕ ಕಾಡಿನ ಔಷಧಿಗಳನ್ನು ಬಿಟ್ಟು ಇಂಗ್ಲೀಷ್ ಮೆಡಿಸಿನ್ ಗಳತ್ತ ನಡೆಯುತ್ತಿದ್ದಾರೆ. ಆಧುನಿಕ ಯುಗದತ್ತ ದಾಪುಗಾಲಿಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯೇ ಸರಿ. ಆದರೆ ಎಲ್ಲೋ ಅವರ ಮೂಲ ಸಂಸ್ಕೃತಿ ನಾಶವಾಗುತ್ತಿದೆ ಎಂದು ಅನಿಸುತ್ತಿಲ್ಲವೇ?. ಇದು ಅವರ ಸಿದ್ದಿಗಳ ಉನ್ನತಿಯೋ...? ಅವನತಿಯೋ...? ಎಂಬುದು ಯಕ್ಷ ಪ್ರಶ್ನೆಯಾಗಿದೆ.

ದರ್ಶನ್ ಬಿ.ಎಂ
ಪತ್ರಿಕೋದ್ಯಮ ವಿಭಾಗ
ಆಳ್ವಾಸ್ ಕಾಲೇಜ್
ಮೂಡುಬಿದಿರೆ.

2 comments:

Ranga said...

darshan superB... artical yaar..

sanath said...

nice

Post a Comment