ಈ ಕನಸು ವಿಶೇಷ
ದ.ಕ.ಜಿಲ್ಲಾಡಳಿತದ ಸಹಯೋಗದೊಂದಿಗೆ "ಸೇವ್ ಅವರ್ ಬೀಚ್ - 2011"ಕಾರ್ಯಕ್ರಮ ಮೇ 1ರಂದು ಮಂಗಳೂರು ತೋಟ ಬೆಂಗ್ರೆಯಲ್ಲಿ ಪ್ರಾರಂಭಗೊಳ್ಳಲಿದ್ದು, ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಘನ ಕರ್ನಾಟಕ ಸರಕಾರದ ಮುದ್ರೆ ಹೊಂದಿದ್ದು, ಇಡೀ ಆಮಂತ್ರಣ ಆಂಗ್ಲಭಾಷೆಯಲ್ಲಿ ಮುದ್ರಿತಗೊಂಡಿದೆ. ಸರಕಾರಿ ಮುದ್ರೆ ಹೊಂದಿರುವ ಪತ್ರಗಳೇ ಈ ರೀತಿಯಾದರೆ ಇನ್ನು ಕನ್ನಡಾನುಷ್ಠಾನ ಹೇಗಾಗಬೇಕಲ್ಲವೇ...? ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬಂತಾಗಿದೆ.!
ಪ್ರಾದೇಶಿಕ ಸುದ್ದಿ
ಮೂಡುಬಿದಿರೆ : ಆಳ್ವಾಸ್ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿ ಶಿರಸಿಯ ಸಂದೀಪ್ ಪಿ. ಹೆಗಡೆ ಇವರು ರಚಿಸಿದ 'ಸತ್ಯಗ್ರಹಣ' ಎಂಬ ಕಾದಂಬರಿಗೆ ಕನ್ನಡ ಪುಸ್ತಕ ಪ್ರಾಧಿಕಾರದ 2010ರ ಯುವ ಬರಹಗಾರ ಪ್ರೋತ್ಸಾಹಕ ಅನುದಾನ ಲಭಿಸಿದೆ.ಪಿ.ಯು.ಸಿ. ವಿಜ್ಞಾನ ವಿಭಾಗದಲ್ಲಿ ಶೈಕ್ಷಣಿಕ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿರುವ ಸಂದೀಪ್ ಇವರು ಮೂಲತಃ ಉತ್ತರ ಕನ್ನಡ ಜಿಲ್ಲೆ ಶಿರಸಿಯ ಚಿಪಗಿ ಗ್ರಾಮದವರು. ಪರಮೇಶ್ವರ ಹೆಗಡೆ ಮತ್ತು ಶಾರದ ಹೆಗಡೆಯವರ ಮಗ.ಹಿಂದೂಸ್ಥಾನಿ ಸಂಗೀತದ ಸೀನಿಯರ್ ವಿಭಾಗದಲ್ಲಿ ಅಭ್ಯಾಸ ನಡೆಸುತ್ತಿರುವ ಇವರು ರಾಜ್ಯಮಟ್ಟದ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಆಳ್ವಾಸ್ ನ ಪ್ರತಿಭಾನ್ವಿತರ ದತ್ತು ಸ್ವೀಕಾರ ಯೋಜನೆಯಡಿ ವ್ಯಾಸಂಗ ನಡೆಸುತ್ತಿರುವ ಸಂದೀಪ್ ಬರೆದ ಮೊದಲ ಕೃತಿಗೆ ಈ ಅನುದಾನ ಲಭಿಸಿದೆ. ಅನುದಾನವು 10,000 ನಗದು ಮತ್ತು ಸಂಮಾನವನ್ನು ಒಳಗೊಂಡಿದೆ. ಮೇ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಅನುದಾನವನ್ನು ನೀಡಲಾಗುವುದು. ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಸಂದೀಪ್ ಹೆಗಡೆ ಸಾಧನೆಯನ್ನು ಅಭಿನಂದಿಸಿದ್ದಾರೆ.
ವರದಿ: ಧನಂಜಯ ಕುಂಬ್ಳೆ.
ಪ್ರಾದೇಶಿಕ ಸುದ್ದಿ
ಉಡುಪಿ : ಇದು ಗುಂಡಿನ ಕರಾಮತ್ತು! ಒಳಗೆ ಸೇರಿದರೆ ಗುಂಡು ಹುಡುಗಿ ಗಂಡಾಗುತ್ತಾಳೋ ಇಲ್ಲವೋ ಅನ್ನೋದು ಬೇರೆ ಮಾತು.
ಮಟಮಟ ಮಧ್ಯಾಹ್ನ ನಿಷೆ ಏರಿದ ವ್ಯಕ್ತಿ ಭಲಾಡ್ಯ ನಾಯಿಯೊಂದನ್ನು ಹೆಗಲ ಮೇಲೆ ಹೊತ್ತು ಚಿತ್ರ-ವಿಚಿತ್ರ ರೀತಿಯಲ್ಲಿ ಉಡುಪಿ ಪೇಟೆಯಲ್ಲಿ ಸಂಚರಿಸುವ ಪರಿ ನೋಡುಗರಿಗೆ ಪುಕ್ಕಟೆ ಮನೋರಂಜನೆಗೆ ಕಾರಣವಾಯಿತು.ಘಟನೆ ನಡೆದದ್ದು ಉಡುಪಿ ಪೇಟೆಯಲ್ಲಿ.ನಾಯಿ ಅಂದ್ರೆ ಪಂಚಪ್ರಾಣಾರೀ ಅಂತ ತೋರಿಸಲಿಕ್ಕಾಗಿ ನಾಯಿ ಹೊತ್ತು ಹೊರಟನಾ ಗೊತ್ತಿಲ್ಲ. ಇಲ್ಲಾ ಈತ ನಾಯಿ ಪ್ರೇಮ ಪ್ರಕಟಿಸೋದೇ ಹೀಗೇನಾ ಅದೂ ಗೊತ್ತಿಲ್ಲ. ಏನೇ ಇರಲಿ... ಉಡುಪಿ ಮುಖ್ಯರಸ್ತೆಯಲ್ಲಿ ಒಂದು ನಾಯಿ ಹೆಗಲ ಮೇಲೆ ಮತ್ತೊಂದು ನಾಯಿ ಬಾಡೀಗಾರ್ಡ್ ಹಾಗೆ ಹೊರಟ ಪರಿ ನೋಡುಗರಿಗೆ ಮನೋರಂಜನೆಯ ಬರಪೂರ ಆನಂದ.
ಏಯ್ ನಾಯಿ ಯಾಕೆ ಹೆಗಲ ಮೇಲೆ ಹೊತ್ತುಕೊಂಡು ಹೊರಟಿದೀಯಪ್ಪಾ ಅಂದ್ರೆ ಅದೂ ನಂದೇ ನಾಯಿರೀ ಪಿರೂತಿಗಾಗಿ ಹೆಗಲ ಮೇಲೆ ಕೂರಿಸಿಕೊಂಡಿದ್ದೀನಿ... ನಿಮಗೇನು ನಷ್ಟಾ. ನೀವು ಮಕ್ಕಳು ಮರಿ ಜೋತೆ ಪೇಟೆ ಸುತ್ತೋದಿಲ್ವಾ. ನಾಯಿ ಕರ್ಕೊಂಡು ಪೇಟೆ ತಿರುಗಾಕೆ ಹೊಂಟೀವ್ನಿ ಅಂತಾನೆ ಭೂಪ!
ನಾಯಿ ಹೊತ್ತು ಹೊರಟ ಭೂಪನ ಹೆಸರು ಹನುಮಂತ. ಘಟ್ಟದಿಂದ ಕೆಲಸ ಹುಡುಕಿಕೊಂಡು ಉಡುಪಿಗೆ ಬಂದವ ಈತ. ಕೆಲಸ ಮುಗಿದ ಮೇಲೆ ಇವನಾಯಿತು. ಇವನ ನಾಯಿಯಾಯಿತು. ಬ್ರಾಂದಿ ಅಂಗಡಿ ಬಾಗಿಲಾಯಿತು.
ನಾಯಿ ಪ್ರೇಮಿ ವ್ಯಕ್ತಿ ಸಾಮ್ರಾಜ್ಯ ರಾಜ್ಯಸಾರಿಗೆ ಬಸ್ ನಿಲ್ದಾಣ ಪರಿಸರ. ರಾಜ್ಯ ಸಾರಿಗೆ ನಿಗಮದ ಟಿಸಿ ಯಿಂದ ಹಿಡಿದು ಕಂಡೆಕ್ಟರ್ ಅವರೆಗೆ ಇವನಿಗೆ ಗೊತ್ತು. ಹನುಮಂತನ ಹುಚ್ಚಾಟವೂ ಇವರೆಲ್ಲರಿಗೂ ಗೊತ್ತು. ರೆಟ್ಟೆತುಂಬಾ ಕೆಲಸ, ಹೊಟ್ಟೆತುಂಬಾ ಗುಂಡು ಸೇರುತ್ತೆ.ಕಣ್ಣು ತುಂಬಾ ನಿದ್ದೆ ಇದೆ ಹಾಗಾಗಿ ಇವನು ಸುಖಿ ಅನ್ನೋಕಾಗೋಲ್ಲ.
ತಾನು ತಿಂದಿದ್ದರಲ್ಲಿ ನಾಯಿಗೂ ನೀಡುತ್ತಾನೆ. ಒಟ್ಟಾರೆ ನಾಯಿಗೆ ಈತ ಪೋಷಕ. ನಾಯಿ ಈತನ ಅನುಯಾಯಿ.
ನಾಯಿ ಕಯ್..ಕುಯ್ ಎನ್ನದೆ ಈತ ಹೆಗಲ ಮೇಲೆ ಕೂರುತ್ತದೆ. ಮತ್ತೊಂದು ಕಪ್ಪು ನಾಯಿ ಇವನ ಪಕ್ಕದಲ್ಲಿ ಹೊರಡುತ್ತದೆ. ನಾಯಿ ಹೊತ್ತು ಬರುವ ಇವನನ್ನು ಕೆಣಕಲು ಹೋದರೆ ಬೆನ್ನಿಗಿರುವ ನಾಯಿ ಗುರ್ ಗುರ್ ಅಂತ ಹೆದರಿಸುತ್ತದೆ.
ಒಟ್ಟಾರೆ ಹನುಮಂತನ ಹುಚ್ಚಾಟಕ್ಕೆ ಎರಡು ಬೀದಿ ಬದಿಯ ನಾಯಿಗೆ ದಿಕ್ಕಾಗಿದೆ. ಇದು ಹನುಮಂತನ ನಾಯಿ ಪ್ರೇಮವಾ.. ನಿಶೆ ಏರಿದ ಹುಚ್ಚಾಟವಾ ಎನ್ನೋದಕ್ಕೆ ಇವನೇ ಉತ್ತರಿಸಬೇಕು.
-ಶ್ರೀಪತಿ ಹೆಗಡೆ ಹಕ್ಲಾಡಿ.
ಈ ಕನಸು ಅವಾರ್ಡ್
ಮನುಷ್ಯನು ತಾನು ದುಃಖದಿಂದ ಇರಲು ಕಾರಣ ಅಸೆ ಎಂಬುದು ಅವನಿಗೆ ಗೊತ್ತು. ಆದರೆ ಅತನು ತನ್ನ ಅಸೆಯನ್ನು ಕಡಿಮೆ ಮಾಡಿಕೊಂಡಿದ್ದನೆಯೇ...ಖಂಡಿತಾ ಇಲ್ಲ. ಉದಾಹರಣೆಗೆ ಒಬ್ಬ ನೀರುದ್ಯೋಗಿಗೆ ಕೆಲಸದ ಅಸೆ. ಅದೇ ಕೆಲಸ ಸಿಕ್ಕ ನಂತರ ಅವನಿಗೆ ಮತ್ತೆ ದೊಡ್ಡ ಕೆಲಸದಕ್ಕೆ ಹೋಗುವ ಅಸೆ. ಹಾಗೆಯೇ ನವ ದಂಪತಿಗೆ ಗಂಡು ಮಗುವನ್ನು ಪಡೆಯಬೇಕೆಂಬ ಅಸೆ... ಈ ಆಸೆಗಳು ಪೂರೈಸದಾಗ ಎಷ್ಟೋ ಸಂಸಾರಗಳು ಒಡೆದು ಹೋದ ಉದಾಹರಣೆಗಳು ಸಾಕಷ್ಟಿವೆ...
ಅಸೆಯೆಂಬುದು ಮಾನವನ ಸಹಜ ಗುಣ ಅದು ಇತಿ ಮಿತಿಯಾಗಿದ್ದರೆ ಚೆನ್ನ. ಅಹಿಂಸಾವಾದಿಯಾದ ಬುದ್ದನು ಅಸೆಯೇ ದುಃಖಕ್ಕೆ ಕಾರಣ ಎಂದು ಜಗತ್ತಿಗೆ ಹೇಳಿದ... ಒಬ್ಬ ಸಾಮಾನ್ಯ ಮಹಿಳೆ ಮೊದಲು ಒಂದು ಸೀರೆ ನೋಡಿ ಅದನ್ನು ಬಯಸುತ್ತಾಳೆ. ನಂತರ ಅದಕ್ಕಿಂತ ಹೆಚ್ಚಿನ ಬೆಲೆಯ ಸೀರೆಗೆ ಆಕರ್ಷಿತಳಾಗುತ್ತಾಳೆ. ನಂತರ ಇನ್ನು ಅಧಿಕ ಬೆಲೆಯ ಸೀರೆ... ಹೀಗೆ ಮುಂದುವರಿಯುತ್ತದೆ ಆಕೆಯ ಆಸೆಯ ಬೆಟ್ಟ. ಪ್ರತಿಯೊಬ್ಬ ಮನುಷ್ಯ ತನ್ನ ಜೀವನದಲ್ಲಿ ಅದು ಬೇಕು...ಇದು ಬೇಕೆಂದು ಆಸೆ ಪಡುತ್ತಲೇ ಇರುತ್ತಾನೆ. ಒಂದು ಸಿಕ್ಕಾಗ ಇನ್ನೊಂದರತ್ತ ಆಸೆ ಹೊರಳುತ್ತದೆ. ಆಶಿಸಿದ ವಸ್ತುವನ್ನು ಪಡೆಯಲು ಹಪಹಪಿಸುತ್ತಾನೆ. ಕೆಲವೊಮ್ಮೆ ಹಣದ ಅಭಾವದಿಂದ ಸಾಲದ ಮೊರೆಹೋಗುತ್ತಾನೆ. ನಂತರ ಸಾಲದ ಮೇಲೆ ಸಾಲ ಬೆಳೆದು ಅದನ್ನು ತೀರಿಸಲಾಗದೆ ಪೇಚಿಗೆ ಸಿಲುಕುತ್ತಾನೆ.ಆಸೆಯೇ ಈ ಸಾಲಕ್ಕೆ ಮೂಲಕ ಕಾರಣ ಎಂಬ ನೋವಿನಿಂದ ಪರಿತಪಿಸುತ್ತಾನೆ.
ಆಸೆ ಇರಲಿ.ಆದರೆ ಅದು ಅತಿಯಾಗಬಾರದು. ಅತಿಯಾದರೆ ಅಮೃತವೂ ವಿಷ ಎಂಬಂತೆ. ನಮ್ಮ ಹೊಟ್ಟೆಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ತಿನ್ನಬೇಕು.ಅದು ಮುಗಿದು ಹೋಗುತ್ತದೆ ಎಂಬ ಆಸೆಯಿಂದ ಎಲ್ಲವನ್ನೂ ತಿನ್ನಲು ಹೊರಟರೆ ಹೇಗಾಗಬೇಡ...?
- ಮಂಜುನಾಥ ಹೊಸಕೊಪ್ಪಲು
ಸಂವಹನ ಮತ್ತು ಪತ್ರಿಕೋದ್ಯಮ, ಮಾನಸ ಗಂಗೋತ್ರಿ, ಮೈಸೂರು
ಸಾಹಿತ್ಯ
ಕತ್ತಲೆಯ ಹಾದಿಯಲ್ಲಿ
ಆಸೆ ಆಕಾಂಕ್ಷೆಗಳ ದೀಪ
ಎದುರಾಗುವ ಪ್ರತಿ ನೆರಳಲ್ಲೂ
ನ್ಯಾಯಕ್ಕಾಗಿ ಹುಡುಕಾಟ.
ಹೆಜ್ಜೆ ಹೆಜ್ಜೆಗೂ ಭ್ರಷ್ಟಾಚಾರ
ಉಸಿರುಗಟ್ಟಿದ ಸಮಾಜ...
ಜಗದಲಿ ರೋಸಿಹೋದ
ಹತಾಶೆಗೀಡಾದ
ಅನಾಥ ಮನಸ್ಸುಗಳಲ್ಲಿ ಸಿಟ್ಟು
ನಾಳೆಯೋ, ನಾಳಿದ್ದೋ...
ಮುಕ್ತಿಯ ಕನಸು.
ಕ್ರಾಂತಿಯ ಕನಸು ಭ್ರಮೆ
ಪ್ರಕೃತಿಯೂ ಮೂಕ
ಏನಾಗುವುದೋ ಈ ಬನದ ಭವಿಷ್ಯ
ಪ್ರತಿಯೊಂದು ರಂಬೆಯ ಮೇಲೆ
ಕುಳಿತಿದೆ ವಿಷಸರ್ಪ.- ಜಬೀವುಲ್ಲಾ ಖಾನ್
ಈ ಕನಸು ಅವಾರ್ಡ್
ನಿದ್ದೆಯಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ.ಆರಾಮಾಗಿ ನಿದ್ದೆ ಮಾಡೋದು ಬಹುತೇಕರು ಕಾಣೋ ಕನಸು, ಅದರಲ್ಲೂ ವಿದ್ಯಾರ್ಥಿಗಳಿಗೂ ನಿದ್ದೆಗೂ ಅವಿನಾಭಾವ ಸಂಬಂಧ.ಕ್ಲಾಸು ನಡೆಯಬೇಕಾದರೆ ನಿದ್ದೆ ಓಡೋಡಿ ಬರುತ್ತದೆ. ಬೇಡಬೇಡವೆಂದರೂ ಕೂತಲ್ಲೆ ಕಣ್ಣೆಳೆಯುತ್ತದೆ. ತಾನಾಗಿಯೆ ಮುಚ್ಚಿಹೋಗುತ್ತಿರುವ ಕಣ್ಣುಗಳನ್ನು ಅರೆತೆರೆದಿಟ್ಟುಕೊಂಡು ಸುಸ್ತುಬಿದ್ದುಹೋಗಿರುತ್ತಾರೆ ವಿದ್ಯಾರ್ಥಿಗಳು.
ಹೀಗೆ ಅವಶ್ಯವಿದ್ದಾಗ ಕೆಲವೊಮ್ಮೆ ಅನಾವಶ್ಯವಿದ್ದಾಗಲೂ ಕಾಡುವ ನಿದ್ದೆ ಬದುಕಿನಲ್ಲಿ ಒಂದು ಮೂಲಭೂತ ಅಗತ್ಯ. ಹಸಿವು ನೀರಡಿಕೆಯಷ್ಟೇ ಅಗತ್ಯವಾದ ನಿದ್ದೆ ಜೀವನದಲ್ಲಿ ನವೋಲ್ಲಾಸ ಮೂಡಿಸುವುದರಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಒಬ್ಬ ಮನುಷ್ಯನಿಗೆ ಜೀವನದಲ್ಲಿ ಆರು ಗಂಟೆಗಳ ನಿದ್ದೆ ಅವಶ್ಯಕ. ರಾತ್ರಿ ಬೇಗನೆ ಮಲಗಿ ಬೆಳಗ್ಗೆ ಬೇಗ ಎದ್ದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ಹಿಂದಿನಿಂದಲೂ ಕೇಳಿಕೊಂಡು ಬಂದ ಮಾತು. ಆದರೆ ಇತ್ತೀಚೆಗೆ ಯಾಕೊ ಈ ಅಭ್ಯಾಸ ಜನರಲ್ಲಿ ಕಡಿಮೆಯಾಗುತ್ತಿದೆ.
ಬದಲಾಗುತ್ತಿರುವ ಜೀವನಶೈಲಿಯೇ ಇಂದು ನಮ್ಮ ನಿದ್ದೆಯನ್ನು ಎಡವಟ್ಟುಗೊಳಿಸುತ್ತದೆ. ನಿದ್ರಿಸಬೇಕಾದ ಸಮಯದಲ್ಲಿ ನಿದ್ದೆ ಮಾಡದಿರುವುದು, ಮನಸ್ಸಾದಾಗ ಕಾಲವಲ್ಲದ ಕಾಲದಲ್ಲಿ ನಿದ್ದೆ ಮಾಡುವುದು ಸಾಮಾನ್ಯವಾಗಿದೆ.ಲೇಟ್ ನೈಟ್ ಪಾರ್ಟಿಗಳು, ಮಿಡ್ ನೈಟ್ ಟಿ.ವಿ ಕಾರ್ಯಕ್ರಮಗಳು, ರಾತ್ರಿಪಾಳಿ ಕೆಲಸಗಳು, ಹೀಗೆ ಹಲವು ರೀತಿಯ ಜೀವನಶೈಲಿಗಳು ಆರೋಗ್ಯಕರ ನಿದ್ದೆಯನ್ನು ನಮ್ಮಿಂದ ದೂರ ಮಾಡುತ್ತಿದೆ.
ನಿದ್ರಾಹೀನತೆ ಹಲವಾರು ರೋಗಗಳಿಗೆ ಮೂಲಕಾರಣ. ದೇಹಾಲಸ್ಯ, ಜೀರ್ಣಕ್ರಿಯೆಯ ಏರುಪೇರು, ಮುಂತಾದುವುಗಳಿಗೆ ಕಾರಣವಾಗುವಂತಹ ನಿದ್ದೆ ಕೆಲವೊಮ್ಮೆ ನಮ್ಮ ನಿತ್ಯ ಚಟುವಟಿಕೆಗಳ ಏರುಪೇರಿಗೂ ಕಾರಣವಾಗುತ್ತದೆ.
ಆರೋಗ್ಯಕರ ಜೀವನಕ್ಕೆ ಸಮತೋಲಿತ ನಿದ್ರೆ ಅತೀ ಅಗತ್ಯ. ಸಕಾಲದಲ್ಲಿ ಸರಿಯಾದ ಪ್ರಮಾಣದಲ್ಲಿ ನಿದ್ರಿಸುವುದು ಒಳಿತು. ಹಾಗಾಗಿ ಚೆನ್ನಾಗಿ ನಿದ್ರೆ ಮಾಡಿ...ರೋಗಗಳಿಂದ ದೂರವಿರಿ.
- ಸನತ್ ಕುಮಾರ್
ಪ್ರಥಮ ಎಮ್.ಸಿ.ಜೆ, ಎಸ್. ಡಿ.ಎಮ್.ಸಿ,ಉಜಿರೆ.
ಸಾಹಿತ್ಯ
ಮುಚ್ಚಿದ ರೆಪ್ಪೆಯಡಿಯಲ್ಲಿ
ಕಾಡುವ ನೆನಪುಗಳು
ಬೆಳಕು ಕಂಡಾಕ್ಷಣ ಓಡುವ
ಕತ್ತಲೆಯಂತೆ!
ಕಣ್ಣು ತೆರೆದಾಕ್ಷಣ ಮಾಯವಾಗುತ್ತವೆ
ಮತ್ತೆ ಕಣ್ಣ ಮುಂದೆ ಸುಳಿಯುತ್ತವೆ
ತಮ್ಮ ಸ್ಥಳವೆಲ್ಲಿಯೆಂದು
ಮತ್ತೆ ಮತ್ತೆ ಕಾಡುತ್ತವೆ
ರೆಪ್ಪೆಯಡಿಯಲ್ಲಿ
ಅಡಗಿ ಕೂರುತ್ತವೆ
ಮತ್ತೆ ಕಾಡುತ್ತವೆ ನೆನಪುಗಳು!
- ಸೌಮ್ಯ, ಸಾಗರ.
ವಿಶೇಷ ವರದಿ
ಪ್ರವಾಸವೆಂದರೆ ಯಾರಿಗಿಷ್ಟವಿಲ್ಲ...? ಕಿರಿಯರಿಂದ ಹಿಡಿದು ಹಿರಿಯರವರೆ, ಶ್ರೀಮಂತರಿಂದ ಹಿಡಿದು ಬಡವರವರೆಗೆ ಪ್ರವಾಸವೆಂದರೆ ಅದೇನೋ ಆನಂದ, ಅದೇನೋ ಉಲ್ಲಾಸ. ಮಕ್ಕಳಿಗಂತೂ ಪ್ರವಾಸ ಹಬ್ಬಕ್ಕೆ ಸರಿ. ಪ್ರವಾಸಕ್ಕೆ ಹೋಗುತ್ತಿದ್ದೇವೆಂದರೆ ಅವರ ಸಂತೋಷಕ್ಕೆ ಪಾರವೇ ಇರಲ್ಲ. ಮಕ್ಕಳನ್ನು ಪ್ರವಾಸಿತಾಣಗಳನ್ನು ತೋರಿಸುವ ನೆಪದಲ್ಲಿ ಹಿರಿಯರು ಸಹ ಮೆಲ್ಲನೆಯೇ ತಮ್ಮ ಕಣ್ಣುಗಳನ್ನು ತಣಿಸಿಕೊಳ್ಳುತ್ತಾರೆ. ಹಿರಿಯರಿಗೆ ವಯಸ್ಸಾದರೂ ಸಹ ಅವರ ಪ್ರವಾಸದ ಆ ನೆನಪುಗಳಿಗೆ ಮುಪ್ಪೇ ಇಲ್ಲ. ನಾಲ್ಕು ಸ್ನೇಹಿತರು ಸೇರಿದರೆ ಸಾಕು, ಮಾತುಮಾತಲ್ಲೆ ತನ್ನ ಪ್ರವಾಸದ ಇಡೀ ಚಿತ್ರಣ ಅವರ ಕಣ್ಮುಂದೆ ಇರುವ ಹಾಗೆ ವಿವರಿಸುತ್ತಾರೆ.
ಹಳೇ ಕಾಲದಲ್ಲಿ ಕಾಲ್ನಡಿಗೆ,ಕುದುರೆ ಸವಾರಿ,ಎತ್ತಿನ ಬಂಡಿಗಳಲ್ಲಿ ದೂರದ ತಾಣಗಳನ್ನು ನೋಡಲು ಬಹಳ ಉತ್ಸಾಹದಿಂದ ಗುಂಪು ಗುಂಪಾಗಿ ಹೋಗುತ್ತಿದ್ದರಂತೆ. ಈಗ ಸವಾರಿಗಳು ಬದಲಾಗಿವೆಯೇ ಹೊರತು ಆ ಉತ್ಸಾಹ ಹುಮ್ಮಸ್ಸು ಯಾವ ದೃಷ್ಟಿಯಿಂದಲೂ ಕಡಿಮೆಯಾಗಿಲ್ಲ. ನಾವು ಒಂದು ವಾರ ಸಂತೋಷವಾಗಿರಬೇಕಾದರೆ ಒಂದಿನ ಪಿಕ್ನಿಕ್ ಗೆ ಹೋಗಿ ಬರಬೇಕಂತೆ. ಒಂದು ತಿಂಗಳು ಸಂತೋಷವಾಗಿರಬೇಕಾದರೆ ಮೂರು ದಿನ ತಮಗಿಷ್ಟವಾದ ತಾಣಕ್ಕೆ ಪ್ರವಾಸ ಬೆಳೆಸಿ ಬರಬೇಕಂತೆ. ಕೆಲವರಿಗೆ ನಿಸರ್ಗ ಸೌಂದರ್ಯವಿಷ್ಟ, ಕೆಲವರು ಚಾರಿತ್ರಿಕ ಸ್ಥಳಗಳನ್ನು ನೋಡಬೇಕೆಂಬ ಆಸೆಯನ್ನು ವರ್ಷಗಳಿಂದ ಮನಸ್ಸಿನಲ್ಲೇ ಬಚ್ಚಿಟ್ಟುಕೊಂಡಿರುತ್ತಾರೆ. ಇನ್ನೂ ಕೆಲವರು ನಮಗೆ ವಯಸ್ಸಾಯಿತು, ಜೀವನದಲ್ಲಿ ಮನೆಯಿಂದಾಚೆ ಎಲ್ಲೂ ಪ್ರಯಾಣ ಬೆಳಸಲಿಲ್ಲ, ಕೊನೆಕಾಲದಲ್ಲಾದರೂ ಪವಿತ್ರ ಸ್ಥಳಗಳಿಗೆ ಒಮ್ಮೆ ಭೇಟಿಕೊಟ್ಟು ಬರೋಣವೆಂದು ಅದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಾರೆ. ಮತ್ತೆ ಕೆಲವರು ನಮ್ಮ ದೇಶ ಸುತ್ತಿದ್ದು ಸಕಾಯಿತು, ಈಗ ಪರದೇಶಗಳ ಜನಜೀವನ ಮತ್ತು ಸಂಸ್ಕೃತಿಯನ್ನು ನೋಡಿ ಬರೋಣವೆಂದು ಅದಕ್ಕೆ ಬೇಕಾದ ಏರ್ಪಾಡು ಮಾಡಿಕೊಳ್ಳುತ್ತಾರೆ. ಒಟ್ಟಿನಲ್ಲಿ ಪ್ರವಾಸವೆಂಬುದು ಎಲ್ಲರ ಮನಸ್ಸಿನಲ್ಲಿ ಸಂತೋಷದ ಅಲೆ ತರುವ ಪ್ರವಾಹದಂತೆ.
ಪ್ರವಾಸ ಎಂದಾಗ ಉದ್ಭವಿಸುವ ಸಾಮಾನ್ಯ ಪ್ರಶ್ನೆಗಳು - ಎಲ್ಲಿ, ಹೇಗೆ, ಯಾವಾಗ ಹೋಗಬೇಕು. ನಮ್ಮ ಗುರಿಗೆ, ಯೋಗ್ಯತೆಗೆ ಅಥವಾ ಅರ್ಹತೆಗೆ ಮತ್ತು ಸಮಯಕ್ಕೆ ತಕ್ಕಂತೆ ಪ್ರವಾಸದ ರೂಪುರೇಶೆಗಳು ಸಿದ್ಧವಾಗುತ್ತವೆ. ಗ್ರಾಹಕರ ಆಸೆಗಳಿಗೆ ರೆಕ್ಕೆಪುಕ್ಕ ಕೊಡಲು ಪ್ರವಾಸೋದ್ಯಮ ತನ್ನ ಕೈಚಾಚಿ ನಿಂತಿದೆ. ಒಂದು ಫೋನ್ ಕಾಲ್ ಸಾಕು, ಎಲ್ಲಿಗೆ ಹೋಗಬೇಕು ಅಲ್ಲಿಗೆ ನಮ್ಮನು ಕರೆದುಕೊಂಡು ಹೋಗುವ ಜವಾಬ್ದಾರಿಯನ್ನು ನಿಭಾಯಿಸಲು ಸನ್ನದ್ಧರಾಗಿರುತ್ತಾರೆ.
ನಾವು ಎಲ್ಲಿಗೆ ಪ್ರವಾಸ ಹೋಗಲು ಇಚ್ಛಿಸಿದ್ದೇವೆಂದು ಅವರಿಗೆ ಕಿವಿಮಾತು ಹೇಳಿದರೆ ಸಾಕು, ಪ್ಯಾಕೇಜ್ ಗಳ ಪೆಟ್ಟಿಗೆಯನ್ನೇ ನಮ್ಮುಂದೆ ತೆರೆದಿಡುತ್ತಾರೆ. ನಮ್ಮ ಬಡ್ಜೆಟ್ಟಿನ ಪ್ರಕಾರ ನಮಗೆ ಬೇಕಾದ ಎಲ್ಲಾ ಸವಲತ್ತುಗಳನ್ನು ಕಲ್ಪಿಸಲು ತಯಾರಾಗಿರುತ್ತಾರೆ. ರಸ್ತೆಮಾರ್ಗ, ಜಲಮಾರ್ಗ ಅಥವಾ ವಾಯುಮಾರ್ಗ - ನಮಗೆ ಯಾವ ಮಾರ್ಗ ಬೇಕೋ ಅದನ್ನು ಆರಿಸಿಕೊಳ್ಳಬಹುದು.
ಲಕ್ಷಾಂತರ ಪ್ರವಾಸಿಗರು ನಮ್ಮ ದೇಶಕ್ಕೆ ಬರುತ್ತಾರೆ. ಹಾಗೆಯೇ ನಮ್ಮ ದೇಶದಿಂದ ಪರದೇಶಗಳಿಗೆ ಜನ ಪ್ರವಾಸ ಬೆಳೆಸುತ್ತಾರೆ. ಪ್ರವಾಸೋದ್ಯಮ ಬೆಳೆಯಲು ಇದು ಬಹಳ ಸಹಾಯದಾಯಕವಾಗಿದೆ. ಪ್ರವಾಸೋದ್ಯಮದಿಂದ ವ್ಯಾಪಾರ ವಹಿವಾಟು ಹೆಚ್ಚಾಗುತ್ತದೆ. ಹಾಗೆಯೇ ಪರೋಕ್ಷವಾಗಿ ಹೋಟೆಲ್ ಉದ್ಯಮವೂ ಸಹ ಬೆಳೆಯುತ್ತದೆ. ಒಟ್ಟಾರೆ ಪ್ರವಾಸೋದ್ಯಮ ಹಣ ಹರಿದು ಬರುವ ಉದ್ಯಮವಾಗಿ ಬೆಳೆಯುತ್ತಿದೆ. ಮಲೇಶಿಯಾ ದೇಶ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ಕೊಟ್ಟ ಮೇಲೆಯೇ, ಆ ದೇಶ ಹೆಚ್ಚಿನ ಪ್ರಗತಿ ಹೊಂದಲು ಸಹಾಯವಾಗಿದ್ದು. ನಮ್ಮ ದೇಶ ಚಾರಿತ್ರಿಕ ಸ್ಥಳಗಳಿಂದ ತುಂಬಿದೆ. ಪ್ರವಾಸೋದ್ಯಮಕ್ಕೆ ಬೇಕಾದ ಸವಲತ್ತುಗಳನ್ನು ಒದಗಿಸಲು ಖಾಸಗಿ ಸಂಸ್ಥೆಗಳು ಕೈಕಟ್ಟಿ ನಿಂತಿವೆ. ಸರ್ಕಾರವೂ ಸಹ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡುತ್ತಿದೆ. ಆದರೆ ಈ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿಯ ಅವಶ್ಯಕತೆ ಇದೆ.
ಪ್ರವಾಸೋದ್ಯಮ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಎಲ್ಲಾ ವರ್ಗದ ಜನರಿಗೆ ಉದ್ಯೋಗ ಕಲ್ಪಿಸುತ್ತಿದೆ. ಒಮ್ಮೆ ಆಗ್ರಾದ ತಾಜ್ ಮಹಲ್ ಗೆ ಭೇಟಿ ನೀಡಿದರೆ ಪ್ರವಾಸೋದ್ಯಮದ ವಹಿವಾಟಿನ ಒಂದು ಕಿರುನೋಟ ನೋಡುಬಹುದು. ಗೈಡ್ ಗಳು, ಟಾಂಗಾದವರು, ಟ್ಯಾಕ್ಸಿಗಳು, ಹೋಟೆಲ್ಗಳು, ವಿವಿಧ ಸಾಮಾನು ಸರಕುಗಳನ್ನು ಮಾರಾಟ ಮಾಡುವ ಅಂಗಡಿಯವರು ಪ್ರವಾಸೋದ್ಯಮದ ಆಸರೆಯಲ್ಲಿ ಬದುಕುತ್ತಿದ್ದಾರೆ.
ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರಿಯ ಮಟ್ಟದಲ್ಲಿ ಪ್ರವಾಸೋದ್ಯಮ ಬೆಳೆಯುತ್ತಿದೆ. ಪ್ರವಾಸೋದ್ಯಮದ ಬಗ್ಗೆ ವಿಶೇಷವಾದ ಕೋರ್ಸುಗಳು ಸಹ ಇವೆ. ಪ್ರವಾಸೋದ್ಯಮಕ್ಕೆ ದುಮುಕಲು ಅದಕ್ಕೆ ಬೇಕಾದ ಬಂಡವಾಳ ಮತ್ತು ಅದರ ಬಗ್ಗೆ ಅನುಭವ ಇದ್ದರೆ ಸಾಕು. ಪ್ರವಾಸೋದ್ಯಮ ಜೀವಂತ ಉದ್ಯಮ. ಇಂದು ಇದೆ. ನಾಳೆಯೂ ಇರುತ್ತದೆ.- ಜಬೀವುಲ್ಲಾ ಖಾನ್
ಈ ಕನಸು ಅವಾರ್ಡ್
ವಿವೇಕಕ್ಕೆ
ಕವಿದ ಮುಸುಕು
- ಮಲ್ಲಿಕಾ ಭಟ್ ಪರಪ್ಪಾಡಿ.
ವಿಶೇಷ ವರದಿ
ಛೇ... ಓದಿದ್ದು ಕಡಿಮೆ ಆಯ್ತು ಅಂತ ಹಲುಬೋರು ಅದೆಷ್ಟು ಜನರಿಲ್ಲಾ ಹೇಳಿ. ಕೈಲಾಗದೋನು ಮೈಯಲ್ಲಾ ಪರಚಿಕೊಂಡ ಅಂತಾರಲ್ಲಾ ಹಾಗೆ. ಓದಿದ್ದು ಕಡಿಮೆ ಆಯ್ತು ಅಂತ ಅನ್ನೋರು ತಮಗೆ ತಾವೇ ಸಮಾ`ನಾಮಾಡಿಕೊಳ್ಳೋಕೆ ಕಂಡುಕೊಂಡ ಮಾರ್ಗ. ಅವನೇನು ಮಹಾ ಸಾಧನೆ ಮಾಡಿದ್ದು, ನಾನೂ ಸ್ವಲ್ಪ ಕಲ್ತಿದ್ದರೆ ಅವನ ದುಪ್ಪಟ್ಟು ಸಾಧನೆ ಮಾಡುತ್ತಿದ್ದೆ ಎಂಬ ಆತ್ಮಸ್ಥುತಿ ಮಾಡಿಕೊಳ್ಳೊರಿಗೆ ನಮ್ಮಲ್ಲಿ ಬರವಿಲ್ಲ.
ಇದು ತಮ್ಮನ್ನು ತಾವು ಸಮರ್ಥಿಸಿಕೊಳ್ಳಲಿಕ್ಕೆ ಆಡೋ ಮಾತು ಎನ್ನೋದು ಎಲ್ಲರಿಗೂ ಗೊತ್ತಿರೋದೇ. ಹೇಳೋರು ಮಾಡೋದಿಲ್ಲ ಮಾಡೋರು ಹೇಳೋದಿಲ್ಲ ಅಂತಾರಲ್ಲಾ ಹಾಗೆ.
ಇಲ್ಲೊಬ್ಬರು ತಾನು ಓದಿದ್ದು ಕಡಿಮೆಯಾಯ್ತು ಅಂತ ಹಣೆಗೆ ಕೈಹಚ್ಚಿ ಕೂರಲಿಲ್ಲ. ಕಣ್ಣುಚ್ಚಿ ಏನಾದರೂ ಮಾಡಲೇ ಬೇಕು ಎಂದು ರಚ್ಚೆ ಹಿಡಿದು ಕೂತವರನ್ನು ಸಾಧನೆ ದಡ ಮುಟ್ಟಿಸಿದೆ. ಸಾಧನೆ ಮಾಡೋಕೆ ಕುಂಟು ನೆಪ ಹೇಳದೆ ತುಟ್ಟಿಕಚ್ಚಿ ಕುಳಿತು ಸಾಧನೆ ಮಾಡಿದ ಸಾಹೇಬ್ರ ಕಥೆಯಿದು. ಕಥೆಯಲ್ಲಿ ಇಂಟರೆಸ್ಟಿಂಗ್ ಪಾಯಿಂಟ್ ಇದೆ. ಇಂತಹಾ ಕಥೆಗಳ ಹುಟ್ಟಿಗೆ ಕಾರಣರಾಗೋರು ಇರೋದ್ರಿಂದಲೇ `ಮೇರಾಭಾರತ್ ಮಹಾನ್'. ಹಾಗೇ ಸುಮ್ಮನೆ ಬುಲೆಟ್ ಸಾಹೇಬ್ರ ಕಥೆ ಮೇಲೆ ಕಣ್ಣಾಡಿಸಿ.
ಓದಿದ್ದೂ ಬರೇ ಐದೂರೀ.. ಆದರೆ ಇವರು ಆದ್ರು ಇಂಜಿನಿಯರ್! `ಬುಲೆಟ್' ಇವರ ಕೈಯಲ್ಲಿ ಶೃಂಗರಿಸಿಕೊಂಡ ಮದುವಣಗಿತ್ತಿ. ಮದುಮಗಳಲ್ಲಿಯಾದರೂ ಕೊಂಕು ಹುಡುಕಿ ತೆಗೀಬಹುದು. ಇವರು ಬುಲೆಟ್ಗೆ ಹೊಚ್ಚ ಹೊಸ ಸ್ಪರ್ಶ, ನೂತನ ಲುಕ್, ಅದರ ಅಂದ-ಚಂದದಲ್ಲಿ ಕೊಂಕು ಹುಡುಕೋದು ಕಷ್ಟ. ಇವರ ಕೈಯಲ್ಲಿ ಹೊಸ ರೂಪ ಪಡೆದ ಬುಲೆಟ್ ನೋಡೋದೆ ಒಂದು ಖುಷಿ.
ಬುಲೆಟ್ ಪ್ರಿಯರ ನೆಚ್ಚಿನ ಸಾಹೇಬ್ರ ಹೆಸರು ಸೈಫುಲ್ಲಾ ಅಂತ. ಉಡುಪಿಯಲ್ಲಿ ಬುಲೆಟ್ ವಿಷಯ ಬಂದರೆ ಅಲ್ಲಿ ಸೈಫುಲ್ಲಾ ಬರುತ್ತಾರೆ. ಬುಲೆಟ್ ಸಂಗತಿ ಬಂದಾಗಲೆಲ್ಲಾ ಸೈಫುಲ್ಲಾ ಬಾರದಿದ್ದರೆ ಆ ಮಾತು ಅಪೂರ್ಣ. ಉಡುಪಿ ಪರಿಸರದ ಜನ ಇವರನ್ನು ಬುಲೆಟ್ ಸ್ಪೆಷಲಿಸ್ಟ್ ಅಂತಲೇ ಗುರುತಿಸುತ್ತಾರೆ. ಅಷ್ಟೊಂದು ಫೇಮಸ್ ಸೈಫುಲ್ಲಾ ಸಾಹೇಬ್ರೂ. ಓದಿದ್ದು ಐದಾದರೂ ಬುಲೆಟ್ಗೆ ಹೊಸ ವಿನ್ಯಾಸ ಕೊಟ್ಟ ಸೈಪುಲ್ಲಾ ಇಂಜನಿಯರ್ ಅಲ್ವಾ?
ಸೈಫುಲ್ಲಾ ಸಾಹೇಬ್ರಿಗೆ ಎಳೆಯೆಯಲ್ಲೇ ಬುಲೆಟ್ ಹುಚ್ಚು ಅಂಟಿಕೊಂಡು ಬಂದಿದೆ. ಅದರ ಗತ್ತು ಗೈರತ್ತು ಆವಾಜ್ ಎಲ್ಲವೂ ಸೈಫುಲ್ಲಾ ಅವರಿಗೆ ಇಷ್ಟ. ಲೌವ್ ಈಸ್ ಫಸ್ಟ್ ಸೈಟ್ ಅಂತಾರಲ್ಲಾ ಹಾಗೆ ಬುಲೆಟ್ ಸಾಹೇಬ್ರಿಗೆ ಸನ್ಮೋಹನಾಸ್ತ್ರದಿಂದ ಎಳೆದುಕೊಂಡಿದೆ. ಅಂದು ಬುಲೆಟ್ ಮೇಲೆ ಹುಟ್ಟಿದ ಮೋಹ ಇಂದಿಗೂ ಬಿಟ್ಟಿಲ್ಲ. ಮದುವೆಯಾಯ್ತು, ಮಕ್ಕಳೂ ಮನೆಗೆ ಬಂದ್ರು ಆದರೆ ಸಾಹೇಬ್ರ ಬುಲೆಟ್ ಪ್ರೀತಿಗೆ ಕುಂದುಬಂದಿಲ್ಲ. ಹೊಸ ಹೆಂಡತಿಯಹಾಗೆ ಬುಲೆಟ್ ಬೈಕನ್ನು ಪ್ರೀತಿಸುತ್ತಾರೆ. ಬುಲೆಟ್ ಮೇಲಿನ ವ್ಯಾಮೋಹ ಹೊಸ ಸೃಷ್ಠಿ ಹೊಸ ದೃಷ್ಟಿಗೆ ದಾರಿಮಾಡಿಕೊಟ್ಟಿದೆ. ಇದೂವರಗೆ ಸಾಹೇಬ್ರ ಕೈಯಲ್ಲಿ ಅಕಾರ ಬದಲಿಸಿ ಕೊಂಡ ಬುಲೆಟ್ ಸಂಖ್ಯೆ ಐನೂರಕ್ಕೂ ಹೆಚ್ಚು. ಸಾಹೇಬ್ರಿಗೂ ಬುಲೆಟ್ಟಿಗೂ ಇರೋ ನಂಟಿದೆಯಲ್ಲಾ ಅದು ಮೂರು ದಶಕಕ್ಕೂ ಮಿಕ್ಕಿದ್ದು.
ಉಡುಪಿ ರಾಜ್ಯ ರಸ್ತೆ ಸಾರಿಗೆ ನಿಗಮ ತಟಾಕಿ ಬಿಎಸ್ಎನ್ಎಲ್ ಎದುರು ನಿಂತರೆ ಸಾಕು ಬುಲೆಟ್ ಪ್ರಪಂಚ ತೆರೆದುಕೊಳ್ಳುತ್ತದೆ. ಸೈಫುಲ್ಲಾ ಸಾಹೇಬರ ಶೋರೂಂ ಹೆಸರು `ಬ್ರಾಹ್ಮೀ ಮೋಟಾರ್ಸ್' ಶೂ ರೂಮ್ನಲ್ಲಿ ಊದಿನಕಡ್ಡಿ ಬೆಳಗೋದು ಹಿಂದೂ ದೇವರಿಗೆ.
ಸಾಹೇಬ್ರ ಆರಂಭದಲ್ಲಿ ಕಡಿಯಾಳಿಯಲ್ಲಿ ಬುಲೆಟ್ ಮ್ಯಾಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದರು. ಅಲ್ಲಿಂದ ಸಾಹೀರಾಂ ರಸ್ತೆ ಬ್ರಾಹ್ಮೀ ಮೋರಾರ್ಸ್ಗೆ ಬಂದಿದ್ದಾರೆ.
ಗುಜರಿಗೆ ಹೋಗುವ ಹಂತಕ್ಕೆ ಬಂದ ಬುಲೆಟ್ಗಳೂ ಸಾಹೇಬ್ರ ಕೈಯಲ್ಲಿ ಮರು ಜೀವ ಪಡೆದುಕೊಂಡಿವೆ. ಕಂಪನಿ ಹೊಸ ಬುಲೆಟ್ಗಳಿಗೂ ಸೇಹೇಬರ ಖದರ್ ತೋರಿಸಿದ್ದಾರೆ. ಹೊಸ ರೂಪಪಡೆದು ಇವರ ಶೋರೂಂನಲ್ಲಿ ನಿಂತ ಬುಲೆಟ್ ನೋಡೋದೆ ಒಂದು ಖುಷಿ.
ಕಂಪನಿ ಬುಲೆಟ್ಗಳಿಗೂ ಹೆಚ್ಚಿನ ಬದಲಾವಣೆಯಿಲ್ಲದೆ ಸಾಧಾರಣ ಒಂದೇ ತೆರೆನಾಗಿರುತ್ತವೆ. ಆದರೆ ಸೈಫುಲ್ಲಾ ಶೋರೂಂನಲ್ಲಿ ಹಾಗಲ್ಲಾ ಥರಹೇವಾರಿ ಆಕಾರಗಳ ಬುಲೆಟ್ಗಳು. ಇಲ್ಲಿ ಬುಲೆಟ್ ಪ್ರಿಯರಲ್ಲಿ ಆಸೆಹುಟ್ಟಿಸುತ್ತವೆ.
ಕುದುರೆಗೆ ಲಗಾಮು ಹಾಕಿ ಹಿಡದಂತೆ ಕಾಣುವ ಬುಲೆಟ್, ಸೊಂಟ ಜಾರಿಸಿಕೊಂಡ ಹಾಗೆ, ಒಂದು ಸೀಟಿನದ್ದೂ, ಜಿರಾಫೆ ಸೊಡ್ಡಿನದ್ದೂ, ಒಂಟೆ ತರದ್ದೂ, ಫ್ಯಾಂತರ್ ತರದ್ದು ಬುಲೆಟ್ ಸಾಹೇಬರ ಸೃಷ್ಟಿ. ಹಾಗೆ ನಿಮಗೆ ನೆನಪಿರಲಿ ಬುಲೆಟ್ ಸಾಹೇಬರೂ ಉಡುಪಿ ಬುಲೆಟ್ ಕ್ಲಬ್ ಮೆಂಬರ್. ಉಡುಪಿ ಪರ್ಯಾಯ ಶಿರೂರು ಮಠ ಶ್ರೀ ಲಕ್ಷ್ಮೀವರತೀರ್ಥ ಸ್ವಾಮೀಜಿ ಉಡುಪಿ ಬುಲೆಟ್ ಕ್ಲಬ್ ಹುಟ್ಟಿಗೆ ಕಾರಣ.
ಬೇರೆ ಬೇರೆ ಬೈಕ್ಗಳಿದ್ದರೂ ಸಾಹೇಬ್ರಿಗೆ ಬುಲೆಟ್ ಮೇಲೆ ಅಂದೆಂಥಾ ವ್ಯಾಹೋಹ ಅಂದ್ರೆ ಸಾಹೇಬ್ರು ತಮ್ಮ ಮಾತಲ್ಲೇ ಉತ್ತರ ಕೊಡುತ್ತಾರೆ. ಯಾವ ಬೈಕ್ಗಳು ಬುಲೆಟ್ಗೆ ಸಾಟಿಯಲ್ಲ ಅಂತಾರೆ. ನೀವು ಅಷ್ಟು ದೂರ ಪ್ರಯಣಮಾಡಿ ಬುಲೆಟ್ ಆಯಾಸ ಮಾಡೋದಿಲ್ಲ. ಅದರ ಮ್ಯಾನಿಫ್ಯಾಕ್ಚರ್ ಅಂತಾದ್ದು. ಈಗ ಬರೋ ಗಾಡಿಗಳು ಮೈಲೇಜ್ ಕೊಡುತ್ತೆ. ಅದರ ಶಬ್ದ ಅದರ ರಾಜ ಗಂಭಿರ್ಯಕ್ಕೆ ಬೇರೆ ಏಣೆಯುಂಟೆ. ಬುಲೆಟ್ಗೆ ಬುಲೆಟ್ ಉಪಮೆ ಎನ್ನುತ್ತಾರೆ ಸಾಹೇಬರು.
ಉಡುಪಿಯಲ್ಲಿ ಸಾಹೇಬರು ಮನೆಮಾತಾಗಿದ್ದಾರೆ. ಇವರ ಬುಲೆಟ್ ಪರಾಕ್ರಮ ಹೊರರಾಜ್ಯಕ್ಕೂ ವಿಸ್ತರಿಸಿದೆ. ಇವರಲ್ಲಿ ಪಕ್ಕದ ಕೇರಳದಿಂದಲು ಬುಲೆಟ್ ಆಲ್ಟ್ರೇಷನ್ಗೆ ಬರುತ್ತಾರೆ. ಸಾಹೇಬ್ರಿಗೆ ಕೈತುಂಬ ಕೆಲಸವಿದೆ. ಹಾಗೆ ತೆಲೆಯಲ್ಲಿ ಹೊಸ ಹೊಸ ರೂಪಗಳು ಜನ್ಮತಾಳುತ್ತವೆ.-ಶ್ರೀಪತಿ ಹೆಗಡೆ ಹಕ್ಲಾಡಿ

ರಾಜ್ಯ - ರಾಷ್ಟ್ರ
ಮಂಗಳೂರು:ಜನರ ಆಶಯಕ್ಕೆ ಪೂರಕವಾಗಿ ಎಂಡೋಸಲ್ಫಾನ್ ನಿಷೇಧಿಸಲು ರಾಜ್ಯ ಸರ್ಕಾರ ಬದ್ಧವಾಗಿದ್ದು, ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಪೂರಕ ಕ್ರಮ ಕೈಗೊಳ್ಳಬೇಕಿದೆ ಎಂದು ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಹೇಳಿದರು. ಮೇರಿ ಹಿಲ್ ಹೆಲಿ ಪ್ಯಾಡಿನಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತ ರಿಸಿದ ಎಂಡೋ ಸಲ್ಫಾನ್ ನಿಷೇಧದ ಬಗ್ಗೆ ಹೋರಾಟ ನಡೆಸು ತ್ತಿರುವ ಕೇರಳ ಮುಖ್ಯ ಮಂತ್ರಿ ಗಳಿಗೆ ತಾವು ಸಂಪೂರ್ಣ ಬೆಂಬಲ ನೀಡು ವುದಾಗಿ ಹೇಳಿ ದರು.ಕೆಂದ್ರ ಸರ್ಕಾರ ಕೂಡ ಎಂಡೋ ಸಲ್ಫಾನ್ ಶಾಶ್ವತ ನಿಷೇಧ ಮಾಡುವ ನಿಟ್ಟಿನಲ್ಲಿ ಪೂರಕ ಕ್ರಮ ಗಳನ್ನು ಕೈ ಗೊಳ್ಳ ಬೇಕೆಂದು ಒತ್ತಾ ಯಿಸಿದರು. ಜನರ ಆಶೋ ತ್ತರ ಗಳಿಗೆ ರಾಜ್ಯ ಸರ್ಕಾರ ಸ್ಪಂದಿ ಸುತ್ತಿದೆ, ಮೀನು ಗಾರರಿಗೆ ನೆರವು ನೀಡು ವುದರಲ್ಲಿ ರಾಜ್ಯ ದೇಶಕ್ಕೆ ಮಾದರಿಯಾಗಿದ್ದು, ಶ್ರಮ ಜೀವಿಗಳ ನೆರವಿಗೆ ಪೂರಕ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ ಎಂದರು. ಮೀನುಗಾರರ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದರು.
ಪ್ರಾದೇಶಿಕ ಸುದ್ದಿ
ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜೀಸ್ ಡಿಪಾರ್ಟ್ ಮೆಂಟ್ ಆಫ್ ಕಂಪ್ಯೂಟರ್ ಸಾಯನ್ಸ್ ಎಂಡ್ ಇಂಜಿನಿಯರಿಂಗ್ ಇದರ ಸಹಯೋಗದಲ್ಲಿ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ರಕ್ತದಾನ ಶಿಬಿರ ನಡೆಯಿತು ಡಾ.ಶರತ್ ಉದ್ಘಾಟಿಸಿದರು. 300 ಮಂದಿ ರಕ್ತದಾನಿಗಳು ಈ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ನಡೆಸಿದರು.
ರಾಜ್ಯ - ರಾಷ್ಟ್ರ
ಪುತ್ತೂರು: ವಿಶ್ವದಾದ್ಯಂತ ಎಂಡೋಸಲ್ಫಾನ್ ನಿಷೇಧಗೊಂಡಿದೆ.ಇದಕ್ಕೆ ಸಂಪೂರ್ಣ ಜನತೆ ಸಂಭ್ರಮಿಸುತ್ತಿದ್ದಾರೆ. ಮಹಾಮಾರಿ ಎಂಡೋಸಲ್ಫಾನ್ ನಿಂದಾಗಿ ಹಲವು ಕುಟುಂಬಗಳು ತೀವ್ರ ತೊಂದರೆಯನ್ನನುಭವಿಸಿದೆ. ಎಂಡೋ ಮಾರಿಯಿಂದ ಜೀವನ ಪೂರ್ತಿ ನೋವನ್ನನುಭವಿಸುತ್ತಿರುವ, ಎಂಡೋ ಮಾರಿಗೆ ಬಲಿಯಾದ ಅನೇಕಾನೇಕ ಜೀವಗಳಿಗೆ ಎಂಡೋ ನಿಷೇಧದಿಂದ ಮುಕ್ತಿ ಸಿಕ್ಕಿದಂತಾಗುವುದರಲ್ಲಿ ಸಂದೇಹವಿಲ್ಲ. ಎಂಡೋ ಮಾರಿಯ ನಿಷೇದಕ್ಕೆ ಭಾರತದಾದ್ಯಂತ ಸೇರಿದಂತೆ ಕರ್ನಾಟಕ, ದಕ್ಷಿಣ ಕನ್ನಡದಲ್ಲಿ ತೀವ್ರ ಹರ್ಷ ವ್ಯಕ್ತವಾಗಿದೆ. ಪುತ್ತೂರಿನಲ್ಲಿ ಹರ್ಷ ವ್ಯಕ್ತವಾಗಿದೆ. ಕಳೆದ ಅನೇಕ ವರ್ಷಗಳಿಂದ ನಡೆಯುತ್ತಿದ್ದ ಹೋರಾಟಕ್ಕೆ ಯಶ ಸಿಕ್ಕಿದೆ ಎಂದು ಹೋರಾಟಗಾರರು ಪ್ರತಿಕ್ರಿಯಿಸಿದ್ದಾರೆ.
ಪುತ್ತೂರು ತಾಲೂಕು ಸೇರಿದಂತೆ ಹಲವು ಪ್ರದೇಶಗಳಲ್ಲಿ ಎಂಡೋಸಲ್ಫಾನ್ ಸಿಂಪಡಣೆಯಿಂದಾಗಿ ವಿವಿದ ಕಡೆ ಹಲವಾರು ಕಾಯಿಲೆಗಳಿಂದ ಜನರು ಬಳಲುತ್ತಿದ್ದರು. ಹೀಗಾಗಿ ಎಂಡೋಸಲ್ಫಾನ್ನಂತಹ ವಿಷಕಾರಿ ವಸ್ತು ಭಾರತದಲ್ಲಿ ನಿಷೇಧಗೊಳ್ಳಬೇಕು ಎಂಬ ಪ್ರಬಲವಾದ ಬೇಡಿಕೆ ವ್ಯಕ್ತವಾಗಿತ್ತು. ಹೀಗಿದ್ದರೂ ಭಾರತವು ಈ ಬಗ್ಗೆ ಗಮನಹರಿಸಿರಲಿಲ್ಲ. ಆದರೆ ಕರ್ನಾಟಕದಲ್ಲಿ ಕಳೆದ 4 ತಿಂಗಳಿನಿಂದ ಎಂಡೋಸಲ್ಫಾನ್ ಮಾರಾಟ ನಿಷೇಧಗೊಂಡಿತ್ತು.ಇಡೀ ದೇಶದಲ್ಲಿ ಎಂಡೋ ನಿಷೇಧವಾಗಬೇಕೆಂದು ಪ್ರತಿಭಟನೆ ವ್ಯಕ್ತವಾಗಿತ್ತು. ಶುಕ್ರವಾರದವರೆಗೆ ಸ್ಟಾಕ್ಹೋಂನಲ್ಲಿ ನಡೆದ ಸಭೆಯಲ್ಲಿ ಎಂಡೋವಿರುದ್ಧ ಭಾರತ ಮಾತನಾಡಬೇಕೆಂಬ ಒತ್ತಾಯವೂ ಕೇಳಿಬಂದಿತ್ತು. ಇದೀಗ ಎಲ್ಲಾ ದೇಶಗಳು ಎಂಡೋವಿರುದ್ದ ಮಾತನಾಡಿದ್ದರ ಪರಿಣಾಮವಾಗಿ ಇಡೀ ವಿಶ್ವದಲ್ಲೇ ಎಂಡೋಸಲ್ಫಾನ್ ಮಾರಾಟ ನಿಷೇಧಗೊಂಡಿದೆ.
ಈ ನಿಷೇಧಕ್ಕೆ ಎಂಡೋಸಲ್ಫಾನ್ ವಿರುದ್ದ ಹೋರಾಟಗಾರರಾದ ಪಟ್ರಮೆಯ ಶ್ರೀಧರ ಗೌಡ , ಸಾಮಾಜಿಕ ಕಾರ್ಯಕರ್ತ ಸಂಜೀವ ಗೌಡ ಕಬಕ , ಬಳಕೆದಾರರ ಹಿತರಕ್ಷಣಾ ವೇದಿಕೆಯ ಪುತ್ತೂರಿನ ಸಂಚಾಲಕ ಸಂಘದ ಡಾ.ನಿತ್ಯಾನಂದ ಪೈ ,ಸಂತಸ ವ್ಯಕ್ತಪಡಿಸಿದ್ದಾರೆ.ಸಂತ್ರಸ್ತರಿಗೆ ಪರಿಹಾರ ನೀಡುವ ಕೆಲಸವನ್ನು ಇನ್ನು ಸರಕಾರ ಮಾಡಬೇಕಾಗಿದೆ ಎಂದು ಇದೇ ವೇಳೆ ಒತ್ತಾಯಿಸಿಲಾಗಿದೆ.
- ಮಹೇಶ್ ಪುಚ್ಚಪ್ಪಾಡಿ.
ಈ ಕನಸು ಸ್ಪೆಷಲ್ ಸ್ಟೋರಿ
`ಟೂರಿಸಂ' ಇದನ್ನು ಒಂದು ಉದ್ಯಮವನ್ನಾಗಿ ವ್ಯಾವಹಾರಿಕ ರೀತಿಯಲ್ಲಿ ಬೆಳೆಸಿದ್ದೇ ಆದಲ್ಲಿ ಸರಕಾರಕ್ಕೆ ಆರ್ಥಿಕವಾಗಿ ಸಹಕಾರಿಯಾಗುತ್ತದೆ ಮಾತ್ರವಲ್ಲದೆ ರಾಜ್ಯ ಪ್ರವಾಸೋದ್ಯಮದಲ್ಲೂ ಒಂದು ಸಾಧನೆ ಮೆರೆಯಬಹುದಾಗಿದೆ. ಇಲ್ಲಿನ ಭೌಗೋಳಿಕ ಅಂಶಗಳು ಪ್ರವಾಸೋದ್ಯಮಕ್ಕೆ ಪೂರಕವಾಗಿದೆಯಾದರೂ ಪ್ರವಾಸೋದ್ಯಮದ ಅಭಿವೃದ್ಧಿಯತ್ತ ಸರಕಾರ ಸೂಕ್ತ ರೀತಿಯ ಕಾರ್ಯಾನುಷ್ಠಾನಗೊಳಿಸುತ್ತಿಲ್ಲ. ಪ್ರವಾಸಿಗರನ್ನು ಆಕರ್ಷಿಸಿ ಲಾಭದಾಯಕ ರೀತಿಯಲ್ಲಿ ಪ್ರವಾಸೋದ್ಯಮ ನಡೆಸಲು ಸಾಕಷ್ಟು ಅವಕಾಶಗಳಿವೆ . ಆದರೆ ಅವೆಲ್ಲವೂ ಇಂದು ಕಡತಗಳಲ್ಲಿ, ಸದನದಲ್ಲಿ ಚರ್ಚೆಯಾಗಿಯೇ ಉಳಿಯುತ್ತಿರುವುದು ಮಾತ್ರ ವಿಪರ್ಯಾಸ.ಕರ್ನಾಟಕದಲ್ಲಿ ಯಾವ ಪಕ್ಷವೇ ಆಡಳಿತಕ್ಕೆ ಬಂದರೂ ಪ್ರವಾಸೋದ್ಯಮ ಅಭಿವೃದ್ಧಿಯತ್ತ ಮಾತ್ರ ಪ್ರಾಮಾಣಿಕ ಚಿಂತನೆ ಹರಿಸುತ್ತಿಲ್ಲ. ಇದು ಬೇಸರದ ಸಂಗತಿ.
ಪ್ರವಾಸೋದ್ಯಮವಾಗಲೀ, ಅದಕ್ಕೆ ಎಲ್ಲೋ ಒಂದು ಸಣ್ಣ ಲಿಂಕ್ ಇರುವ ಯಾವುದೇ ಕಾರ್ಯಕ್ರಮವಿರಲಿ...ಅಥವಾ ಮಂಗಳೂರಿನ ವಿಶೇಷ ಆರ್ಥಿಕ ವಲಯದ ಸಭೆ, ಸಮಾರಂಭಗಳಿರಲಿ...ಇತರೆ ಕಾರ್ಯಕ್ರಮಗಳಿರಲಿ...ಸ್ಥಳೀಯ ಶಾಸಕರು, ಸಚಿವರು `ಕರಾವಳಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುತ್ತೇವೆ...ಇಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿವೆ' ಎಂಬ ಸಿದ್ಧ ಹೇಳಿಕೆಯೊಂದನ್ನು ಕಳೆದ ಹತ್ತಿಪ್ಪತ್ತು ವರುಷಗಳಿಂದ ನೀಡುತ್ತಾ ಬಂದಿದ್ದಾರೆ. ಆದರೆ ಇಲ್ಲಿ ಪ್ರವಾಸೋಧ್ಯಮ ಎಷ್ಟರ ಮಟ್ಟಿಗೆ ಅಭಿವೃದ್ಧಿ ಕಂಡಿದೆ.? ಪ್ರವಾಸೋಧ್ಯಮಕ್ಕೆ ವಿಫುಲ ಅವಕಾಶಗಳಿರುವ ಈ ಪ್ರದೇಶದ ಅಭಿವೃದ್ಧಿ ಹೇಗಾಗಿದೆ? ಎಷ್ಟರ ಮಟ್ಟಿಗೆ ಆಗಿದೆ.? ನೆರೆಯ ಕೇರಳಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಪ್ರವಾಸೋದ್ಯಮ ನಿಜಾರ್ಥದಲ್ಲಿ ಸಾರ್ಥ್ಯಕ್ಯತೆಯನ್ನು ಪಡೆದುಕೊಂಡಿದೆಯೇ...? ಹೀಗೆ ಪ್ರಶ್ನೆಗಳ ಹಿಂದೆ ಪ್ರಶ್ನೆಗಳು ಬೆಳೆಯಲಾರಂಭಿಸುತ್ತವೆ... ಇವೆಲ್ಲಕ್ಕೂ ಉತ್ತರ ಮಾತ್ರ "ಇಲ್ಲ" ಎಂಬುದೊಂದೇ!
ಅದೇ ನೋಡಿ ಕರ್ನಾಟಕದಲ್ಲಿ ಪ್ರವಾಸೋದ್ಯಮ ನೆಲಕ್ಕಚ್ಚಿದೆ. ಎತ್ತೋರೇ ಇಲ್ಲ ಎಂಬುದು!!!
ಸರಿಯಾಗಿ ಹದಿನೈದು ಹದಿನಾರು ವರ್ಷಗಳಿ ಹಿಂದೆ. ಅದಾಗ ಇದೇ ಜಿಲ್ಲೆಯವರೇ ಆಗಿದ್ದ ಎಂ.ವೀರಪ್ಪ ಮೊಯಿಲಿ ಘನ ಸರಕಾರದ ಮುಖ್ಯಮಂತ್ರಿಗಳಾಗಿದ್ದರು. ಕರಾವಳಿ ಉತ್ಸವವನ್ನು ಅವರೇ ಉದ್ಘಾಟಿಸಿ ಆಡಿದ್ದು ಹೀಗೆ...`` ಇಡೀ ಕರ್ನಾಟಕವನ್ನು ಗಮನದಲ್ಲಿರಿಸಿಕೊಂಡು ಬೀಚ್ ಟೂರಿಸಂ ಅಭಿವೃದ್ಧಿಗೊಳಿಸಲಾಗುತ್ತದೆ'' ಎಂದು.
ಅದಕ್ಕಿಂತಲೂ ಮೊದಲು ಮೊಯ್ಲಿಯವರು ಪ್ರವಾಸೋದ್ಯಮ ಸಚಿವರಾಗಿದ್ದಾಗಲೂ ಬೀಚ್ ಟೂರಿಸಂ ಅಭಿವೃದ್ಧಿಯ ಪ್ರಸ್ತಾಪಗಳಿದ್ದವು. ಇದೆಲ್ಲಾ ಆಗಿ ವರ್ಷಗಳು ಹಲವು ಕಳೆಯಿತು. ಟೂರಿಸಂ ಇಲಾಖೆಯ ಅಧಿಕಾರಿಗಳೂ ಸೇರಿದಂತೆ ಅನೇಕ ಜನಪ್ರತಿನಿಧಿಗಳು `ಕರಾವಳಿಗೆ' ಕಾಲಿಟ್ಟಾಕ್ಷಣ ಪ್ರವಾಸೋಧ್ಯಮ ಅಭಿವೃದ್ಧಿ ಪಡಿಸುವುದಾಗಿ ಉದ್ದುದ್ದ ಭಾಷಣಗಳನ್ನು ಬಿಗಿದು ಹೋಗಿದ್ದಾರೆ. ಕರಾವಳಿಯ ಉದ್ದಕ್ಕೂ ಇರುವ ಕಡಲ ಕಿನಾರೆಯನ್ನು ಉತ್ತಮ ಪ್ರವಾಸೋದ್ಯಮ ತಾಣವನ್ನಾಗಿ ಪರಿವರ್ತಿಸುವ ಸಾಧ್ಯತೆಗಳ ಬಗ್ಗೆ ಅತಿರಂಜಿತ ಮಾತುಗಳನ್ನಾಡಿ ಪ್ರಚಾರ ಗಿಟ್ಟಿಸಿಕೊಂಡು ಹೋಗಿದ್ದಾರೆ. ಆದರೆ ಇಂದಿನ ತನಕವೂ ಅದ್ಯಾವುದೂ ಅನುಷ್ಠಾನ ಆಗಲೇ ಇಲ್ಲ. ಯಾವೊಂದು ಬೀಚ್ ಕೂಡ ಟೂರಿಸಂ ದೃಷ್ಟಿಯಲ್ಲಿ ಅಭಿವೃದ್ಧಿ ಹೊಂದಲೇಇಲ್ಲ.
300ಕಿ.ಮೀ ಉದ್ದದ ಕರಾವಳಿಯಲ್ಲಿ ಟೂರಿಸಂ ಅಭಿವೃದ್ಧಿಗೆ ಉತ್ತಮ ಅವಕಾಶವಿದೆ. ಕಾಸರಗೋಡು ಸೇರಿದಂತೆ ಕಾರವಾದರ ತನಕವಿರುವ ಕಡಲ ಕಿನಾರೆಯನ್ನು ಅಭಿವೃದ್ಧಿ ಪಡಿಸಿದ್ದೇ ಆದಲ್ಲಿ ಕನರ್ಾಟಕದಲ್ಲೂ ಪ್ರವಾಸೋದ್ಯಮಕ್ಕೆ ಉತ್ತಮ ಅವಕಾಶಗಳಿವೆ. ಆದರೆ ಸರಕಾರ ತಾನೂ ಮಾಡುತ್ತಿಲ್ಲ...ಖಾಸಗಿಯವರಿಗೂ ಬಿಟ್ಟುಕೊಡುತ್ತಿಲ್ಲ.
ಅಷ್ಟಕ್ಕೂ ಬೀಚ್ ಟೂರಿಸಂ ಎಂಬ ಕಲ್ಪನೆಗೆ ಒಂದು ಸ್ಪಷ್ಟ ರೂಪ ಇನ್ನೂ ದೊರಕಿಲ್ಲ. ಇದ್ದ ಬೀಚ್ಗಳನ್ನು ಹಾಗೇ ಉಳಿಬಿಟ್ಟು ಅಲ್ಲಿಗೆ ಪ್ರವಾಸಿಗರನ್ನು ಆಕರ್ಷಿಸುವುದೋ ಅಥವಾ ಬೀಚ್ಗಳಲ್ಲಿ ಒಂದಷ್ಟು ಆಸನ ನಿರ್ಮಿ, ವಿಹಾರಾರ್ಥಿಗಳಿಗೆ ಸೂಕ್ತ ಆಹಾರ ವ್ಯವಸ್ಥೆ, ವಸತಿ ನಿಲಯಗಳು, ಕಾಟೇಜುಗಳನ್ನು ರಚಿಸಿ ಪ್ರವಾಸಿಗರನ್ನು ಆಕರ್ಷಿಸುವುದೋ, ಬೋಟಿಂಗ್ ಮೊದಲಾದ ಜಲಕ್ರೀಡೆಗೆ ಅವಕಾಶ ನೀಡುವುದೋ ಇದ್ಯಾವುದೂ ಇಂದು ಸ್ಪಷ್ಟವಾಗುತ್ತಿಲ್ಲ.
ಒಬ್ಬೊಬ್ಬ ಸಚಿವರೂ ಒಂದೊಂದು ವಿಚಾರವನ್ನು ಹೇಳುತ್ತಾರೆಯೇ ವಿನಃ ಅದ್ಯಾವುದೂ ಅನುಷ್ಠಾನಗೊಳ್ಳುತ್ತಿಲ್ಲ.ಮಂಗಳೂರಿನಲ್ಲಿ ಕರಾವಳಿ ಉತ್ಸವ ಆರಂಭಗೊಳ್ಳುತ್ತಿದ್ದಂತೆಯೇ ಬೀಚ್ ನಲ್ಲಿ ಒಂದಷ್ಟು ಕಾರ್ಯಕ್ರಮ ಹಮ್ಮಿಕೊಂಡು ನಾವು ಬೀಚ್ ಟೂರಿಸಂಗೆ ಅವಕಾಶ ನೀಡಿದ್ದೇವೆ ಎಂಬ ಒಂದು ಫೋಸ್ ನೀಡುವ ಕಾರ್ಯ ವ್ಯವಸ್ಥಿತವಾಗಿ ಆಗುತ್ತಿದೆ. ಅಲ್ಲಿ ಕಾರ್ಯಕ್ರಮ ಮುಗಿಸಿ ತೆರಳುವಾಗ ಆ ಬೀಚ್ ಮಲಿನಗೊಳ್ಳುವ ಸ್ಥಿತಿ ನೋಡಿದರೆ ಅದು ದೇವರಿಗೇ ಪ್ರಿಯ!
ಉಳ್ಳಾಲದ ಸಮುದ್ರ ತೀರ, ಇತ್ತ ಪಣಂಬೂರು ಕಲಡ ಕಿನಾರೆ, ಸೈಂಟ್ ಮೇರೀಸ್ , ಉಳ್ಳಾಲದ ಸಮ್ಮರ್ ಸ್ಯಾಂಡ್ , ಮರವಂತೆ ಹೀಗೆ ಸಾಕಷ್ಟು ಅತ್ಯಂತ ಸೌಂದರ್ಯದ ತಾಣಗಳಿದ್ದರೂ ಅಲ್ಲಿ ಮೂಲಭೂತ ವ್ಯವಸ್ಥೆಗಳ ಕೊರತೆಯಿದೆ. ಪ್ರವಾಸಿಗರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ, ಅವುಗಳತ್ತ ಪ್ರವಾಸಿಗರು ಇನ್ನಷ್ಟು ಆಕರ್ಷಿತರಾಗುವಂತೆ ಮಾಡುವ ಕಾರ್ಯ ಆಗಬೇಕಾಗಿದೆ.
ಮತ್ತೆ ತುಪ್ಪ ಸವರುತ್ತಿದ್ದಾರೆ...
ಪ್ರವಾಸೋದ್ಯಮ ಖಾತೆ ಸಚಿವರು ಮತ್ತೆ ಮೊಣಕೈಗೆ ತುಪ್ಪ ಸವರುವ ಕಾರ್ಯ ಮಾಡುತ್ತಿದ್ದಾರೆ. ಘನ ಸರಕಾರದ ಸಚಿವರು ಎರಡು ದಿನಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿ ಮತ್ತೊಂದು ಹೇಳಿಕೆ ನೀಡಿ ಹೋಗಿದ್ದಾರೆ.
ದಕ್ಷಿಣಕನ್ನಡ ಕರಾವಳಿ ತೀರ ಪ್ರದೇಶ ಮಲೆನಾಡು ಅರೆಮಲೆನಾಡು ಹೊಂದಿದ್ದು,ಪರಂಪರಾಗತ ಶ್ರೀಮಂತ ಸಂಸ್ಕೃತಿಯನ್ನು ಹೊಂದಿದ್ದು,ಇಲ್ಲಿಯ ದೇವಸ್ಥಾನ ,ದೈವಸ್ಥಾನ ಚರ್ಚ್ ,ಮಸೀದಿಗಳು ನಾಡಿನಾದ್ಯಂತ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.ಇಲ್ಲಿಯ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವಂತೆ 26.30 ಕೋಟಿ ರೂ.ಗಳ ವೆಚ್ಚದಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಪ್ರಸ್ತಾವನೆಯೊಂದನ್ನು ಜಿಲ್ಲಾಡಳಿತ ಪ್ರವಾಸೋದ್ಯಮ ಇಲಾಖೆಗೆಸಲ್ಲಿಸಿದೆ ಎಂದು ಪ್ರವಾಸೋದ್ಯಮ ಖಾತೆ ಸಚಿವ ಜಿ.ಜನಾರ್ಧನ ರೆಡ್ಡಿ ತಿಳಿಸಿದ್ದಾರೆ.
ದಕ್ಷಿಣಕನ್ನಡ ಜಿಲ್ಲೆಯ ಒಟ್ಟು 16 ಯೋಜನೆಗಳಿಗೆ ರೂ.13.72 ಕೋಟಿ ಆಡಳಿತಾತ್ಮಕ ಮಂಜೂರಾತಿ ದೊರಕಿತ್ತು. ಇದರಲ್ಲಿ ಜಿಲ್ಲಾಡಳಿತ ಬಿಡುಗಡೆಯಾದ ಮೊತ್ತ ರೂ.5.71 ಕೋಟಿ ಇಲ್ಲಿಯವರೆಗೆ ವೆಚ್ಚವಾದ ಮೊತ್ತ 3.15 ಕೋಟಿಯಾಗಿರುತ್ತದೆ. ಸುಲ್ತಾನ್ ಬತ್ತೇರಿಯಿಂದ ತಣ್ಣೀರು ಬಾವಿ ವರೆಗೆ ತೂಗು ಸೇತುವೆ ನಿರ್ಮಾಣ ಯೋಜನೆ ಅಂದಾಜು ರೂ.5.00 ಕೋಟಿಯಿಂದ 12.00 ಕೋಟಿಗೆ ಪರಿಷ್ಕರಿಸಿ ಅನುಮೋದನೆಗಾಗಿ ಸಲ್ಲಿಸಲಾಗಿದೆ. ಪಣಂಬೂರು, ತಣ್ಣಿರುಬಾವಿ ಹಾಗೂ ಸೋಮೇಶ್ವರ ಕಡಲ ತೀರಗಳ ಅಭಿವೃದ್ಧಿಗಾಗಿ 230.40ಲಕ್ಷಗಳಿಗೆ ಮಂಜೂರಾತಿ ದೊರಕಿದ್ದು ಈಗಾಗಲೇ 141 ಲಕ್ಷ ಬಿಡುಗಡೆಯಾಗಿ ಕಾಮಗಾರಿಗಳು ಪ್ರಗತಿಯಲ್ಲಿವೆಯೆಂದು ಪ್ರವಾಸೋದ್ಯಮ ಸಚಿವರು ತಿಳಿಸಿದ್ದಾರೆ.
ಏನೇ ಆಗಲಿ...ಪಕ್ಷ ಯಾವುದೇ ಇರಲಿ...ಅಭಿವೃದ್ಧಿ ಮಾತ್ರ ಆಗಬೇಕು. ಕೇರಳದಲ್ಲಿ ಪ್ರವಾಸೋದ್ಯಮವನ್ನು ಅಚ್ಚುಕಟ್ಟಾಗಿ ರೂಪಿಸಿದಂತೆ ಕರ್ನಾಟಕದಲ್ಲೂ ಅತ್ಯಂತ ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಬೇಕು. ಈ ಸರಕಾರವಾದರೂ ಪ್ರವಾಸೋದ್ಯಮವನ್ನು ಚೆಂದದಲ್ಲಿ ರೂಪಿಸಲಿ.
- ಹರೀಶ್ ಕೆ.ಆದೂರು.
ಈ ಕನಸು ಸ್ಪೆಷಲ್ ಸ್ಟೋರಿ
ಕರಾವಳಿಯಲ್ಲಿ ಮರೀಚಿಕೆಯಾದ ಲೋಹದ ಹಕ್ಕಿಗಳ ಕಲರವ!
ಹಚ್ಚ ಹಸಿರಿನ ಸುಂದರ ಪ್ರಕೃತಿ ಸೌಂದರ್ಯ, ವರ್ಷದುದ್ದಕ್ಕೂ ಬತ್ತದ ಜಲರಾಶಿಯ ಸಮುದ್ರ...! ಮರಳ ರಾಶಿಯ ಸುಂದರ ಸಮುದ್ರ ಕಿನಾರೆ... ಹಸುರ ಗುಡ್ಡಗಳ ಸಾಲು, ವಿಶ್ವಖ್ಯಾತಿಯ ಬಸದಿಗಳ ತಾಣ... ಪುರಾಣ ಪ್ರಸಿದ್ಧಿಯ ದೇಗುಲ, ಮಂದಿರ ಮಸೀದಿಗಳು... ಆಕರ್ಷಕ ಕೃಷಿ ಭೂಮಿ, ಚಾರಣಯೋಗ್ಯ ಪರ್ವತಗಳು, ಜಲಲ ಜಲಧಾರೆ... ಹೀಗೆ ಪರಿಸರ ಪ್ರಿಯರಿಗೆ ಪ್ರವಾಸಿಗರಿಗೆ ದಕ್ಷಿಣ ಕನ್ನಡ, ಕರಾವಳಿ ಪ್ರದೇಶ ಹೇಳಿ ಮಾಡಿಸಿದ ಸ್ಥಳ...ಇಲ್ಲಿ ಹೆಲಿಕಾಪ್ಟರ್ ಬಳಸಿ ಟೂರಿಸಂ ಅಭಿವೃದ್ಧಿಪಡಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವರಾಗಿದ್ದ ಜನಾರ್ಧನ ರೆಡ್ಡಿ ದೊಡ್ಡದೊಂದು ಹೇಳಿಕೆ ನೀಡಿದ್ದರು. ಇದನ್ನು ನೀಡಿ ವರುಷಗಳು ಉರುಳಿವೆ.ಆದರೆ ರೆಡ್ಡಿ ಮಾತು ಠುಸ್ ಆಗಿದೆ.ಒಂದೇ ಒಂದು ಬಾರಿಯೂ ಇಲ್ಲಿ ಹೆಲಿಕಾಪ್ಟರ್ ಹಾರಿಲ್ಲ...ಟೂರಿಸಂ ಅಭಿವೃದ್ಧಿಯೂ ಆಗಿಲ್ಲ...!
ವರುಷಗಳ ಹಿಂದೆ .... ಕರ್ನಾಟಕ ರಾಜ್ಯ ಪರಿಪೂರ್ಣವಾಗಿ ಬಿಜೆಪಿ ಆಳ್ವಿಕೆಯ ತೆಕ್ಕೆಗೆ ಬಂದಾಗಿತ್ತು. ರೆಡ್ಡಿ ಬ್ರದರ್ಸ್ ಸಚಿವ ಪಟ್ಟ ಸ್ವೀಕರಿಸಿ ಆಗಿತ್ತು. ಪ್ರವಾಸೋದ್ಯಮ ಸಚಿವ ಜನಾರ್ಧನ ರೆಡ್ಡಿ ಹೊಸ ಸರಕಾರದಲ್ಲಿ ಹುರುಪಿನಿಂದ ಹೊಸ ಯೋಜನೆಯೊಂದನ್ನು ರೂಪಿಸಲು ಸಿದ್ಧರಾಗಿ ಹೇಳಿಕೆಗಳನ್ನೂ ಕೊಟ್ಟಾಗಿತ್ತು... "ಮಂಗಳೂರು ಹಾಗೂ ಹಂಪಿಯಲ್ಲಿ ಆರಂಭಿಕ ಹಂತದಲ್ಲಿ ಪ್ರವಾಸೋದ್ಯಮ ಅಭಿವೃದ್ದಿಗೆ ಹೊಸ ಯೋಜನೆ ರೂಪಿಸಲಾಗುತ್ತಿದೆ. ಈ ಎರಡೂ ಪ್ರದೇಶಗಳಲ್ಲಿ ತಲಾ 10 ಹೆಲಿಕಾಪ್ಟರ್ಗಳನ್ನು ನಿಯೋಜಿಸಲಾಗುತ್ತದೆ.ತನ್ಮೂಲಕ ಹೆಲಿ ಟೂರಿಸಂ ಇಲ್ಲಿ ಅಭಿವೃದ್ಧಿ ಪಡಿಸಲಾಗುತ್ತದೆ ಎಂಬುದಾಗಿ"
ಅಮೆರಿಕಾದ ಗ್ರೇಟ್ ಕ್ಯಾನಿಯನ್ ಮಾದರಿಯಲ್ಲಿಯೇ ಇಲ್ಲೂ ಈ ಯೋಜನೆ ಅನುಷ್ಠಾನಗೊಳ್ಳಲಿದೆ. ಕರಾವಳಿಯ ಸೌಂದರ್ಯ, ಇಲ್ಲಿನ ಪಶ್ಚಿಮ ಘಟ್ಟಗಳ ಸುಂದರ ಶಿಖರ ರಾಶಿಗಳು... ಚಾರಿತ್ರಿಕ ತಾಣಗಳನ್ನು ಹೆಲಿಕಾಪ್ಟರ್ ಮೂಲಕ ಸಂದರ್ಶಿಸಲು ಅವಕಾಶ. ಇದು ಹೆಲಿಕಾಪ್ಟರ್ ಆಧಾರಿತ ಪ್ರವಾಸೋದ್ಯಮದ ಒಂದು ಸಣ್ಣ ಚಿತ್ರಣ!
ಕರಾವಳಿಯ ಜನ ಜನಾರ್ಧನ ರೆಡ್ಡಿ ಅವರ ಮಾತಿಗೆ ಮರುಳಾದರು. ಖುಷಿಯಿಂದ ಹುಚ್ಚೆದ್ದು ಕುಣಿದರು. ಹೆಲಿಕಾಪ್ಟರ್ ಮೂಲಕ ಸೌಂದರ್ಯ ವೀಕ್ಷಣೆಯ ಕನಸು ಕಂಡರು. ಆದರೆ ಕರಾವಳಿಯ ಬಾನಲ್ಲಿ ಟೂರಿಸಂ ಹೆಲಿಕಾಪ್ಟರ್ ಗಳು ಹಾರಾಡಲೇ ಇಲ್ಲ...ಜನ ಇದರಲ್ಲಿ ಸೌಂದರ್ಯ ವೀಕ್ಷಿಸಲೂ ಇಲ್ಲ...
ಹೆಲಿ ಟೂರಿಸಂ ಯೋಜನೆ ಒಳ್ಳೆಯದ್ದೇ ಆಗಿದೆ. ಆದರೆ ಇದನ್ನಾದರೂ ಅನುಷ್ಠಾನ ಮಾಡುವ ಕಾರ್ಯ ಆಗಬೇಕಾಗಿದೆ.
ಹೇಗಿರುತ್ತದೆ ಈ ಯೋಜನೆ...
ಇದು ಒಂದು ದಿನದ ಪ್ರವಾಸ. ಹೆಲಿಕಾಪ್ಟರ್ ಮೂಲಕ ಈ ಪ್ರವಾಸಕ್ಕೆ ಅವಕಾಶ. ಇಲ್ಲಿನ ಪಶ್ಚಿಮ ಘಟ್ಟಗಳಾಗಿರಬಹುದು, ಸುಂದರ ಬೀಚ್ಗಳಾಗಿರಬಹದು, ಅಥವಾ ದೇಗುಲಗಿರಬಹುದು...ಇನ್ಯಾವುದೇ ಸ್ಥಳಗಳಿರಬಹುದು...ಅಲ್ಲಿಗೆ ಯಾತ್ರಾರ್ಥಿಗಳನ್ನು ಕರೆದೊಯ್ದು ಅಲ್ಲಿನ ಸುಂದರ ಸ್ಥಳಗಳ ವೀಕ್ಷಣೆಗೆ ಅವಕಾಶ. ಸೂಕ್ತ ಸ್ಥಳಗಳಲ್ಲಿ ಹೆಲಿಕಾಪ್ಟರ್ ನಿಲುಗಡೆ... ಆ ಸುಂದರ ಸ್ಥಳದಲ್ಲೇ ಊಟ, ಉಪಹಾರದ ವ್ಯವಸ್ಥೆ... ಹೀಗಿರುತ್ತೆ ಯೋಜನೆ.
ಏನಿದು ಗ್ರೇಟ್ ಕ್ಯಾನಿಯನ್ ಮಾದರಿ...
ಅಮೆರಿಕಾದ ಗ್ರೇಟ್ ಕ್ಯಾನಿಯನ್ ಆಳವಾದ ಪ್ರಪಾತಗಳನ್ನು ಹೊಂದಿದ ಗುಡ್ಡಕಾಡು ಪ್ರದೇಶ. ಇಲ್ಲಿ ಪ್ರವಾಸೋದ್ಯಮ ನಡೆಸಿದರೆ ಹೇಗೆ ಎಂಬ ಚಿಂತನೆ ಅಲ್ಲಿನ ಪ್ರಮುಖರಿಗೆ ಬಂತು. ಅದರ ಪರಿಣಾಮವೇ 20 ಹೆಲಿಕಾಪ್ಟರ್ಗಳ ಮೂಲಕ ಪ್ರವಾಸೋದ್ಯಮಕ್ಕೆ ಚಾಲನೆ. ಪ್ರವಾಸಿಗರನ್ನು ಹೆಲಿಕಾಪ್ಟರ್ ಮೂಲಕ ಕರೆದೊಯ್ದು ಸ್ಥಳ ವೀಕ್ಷಣೆಗೆ ಅವಕಾಶ ನೀಡುವುದೇ ಇಲ್ಲಿನ ಒಂದು ಮಾದರಿ.
- ಹರೀಶ್ ಕೆ.ಆದೂರು.
ಈ ಕಸನು ಸ್ಪೆಷಲ್ ಸ್ಟೋರಿ
ನಿಸರ್ಗದ ಕನ್ಯೆ ಸೈಂಟ್ ಮೇರೀಸ್ ಐಲ್ಯಾಂಡ್ ಇಂದು ತನ್ನ ಪಾವಿತ್ರ್ಯತೆಯನ್ನು ಕಳೆದುಕೊಳ್ಳುತ್ತಿದೆ. ಪ್ರವಾಸಿಗರ ಕೈಯಲ್ಲಿ ನಲುಗಿ ಹೋಗುತ್ತಿದೆ. ಸೈಂಟ್ ಮೇರೀಸ್ ಐ ಲ್ಯಾಂಡ್ ನಲ್ಲಿರುವ ಪ್ರವಾಸಿಗರ ತಂಗುದಾಣಗಳು ಇಂದು ಜೀರ್ಣಾವಸ್ಥೆಗೆ ತಲುಪಿದೆ. ಬಾಟಲಿ ಚೂರುಗಳು, ಪ್ಲಾಸ್ಟಿಕ್ ತ್ಯಾಜ್ಯಗಳು ಕಡಲ ಕಿನಾರೆ, ಪರಿಸರದ ತುಂಬೆಲ್ಲಾ ಹರವಿಕೊಂಡು ಪ್ರಕೃತಿಯ ನಾಶ ಪ್ರಾರಂಭಗೊಂಡಿದೆ. ಒಟ್ಟಿನಲ್ಲಿ ಅದು ಪಡ್ಡೆ ಹುಡುಗರ , ಅನೈತಿಕ ಕಾರ್ಯಗಳ ತಾಣವಾಗಿ ಬದಲಾಗಿದೆ. ಓ ಪ್ರವಾಸೋದ್ಯಮ ಇಲಾಖೆಯೇ ಎಚ್ಚೆತ್ತು ಬಾ...ಒಂದಷ್ಟು ಇಂತಹ ಪರಿಸ್ಥಿತಿಯತ್ತ ಗಮನಹರಿಸು... ಪ್ರವಾಸೀ ತಾಣಗಳಲ್ಲಿ ಎಲ್ಲರೂ ವಿಹರಿಸುವಂತಾಗಲು ಸಹಾಯ ಹಸ್ತ ತೋರು....
ಪ್ರಶಾಂತವಾದ ವಾತಾವರಣ...ಕಡಲ ಭೋರ್ಗರೆತದ ಸದ್ದು... ಮರಳ ರಾಶಿಯಉದ್ದಕ್ಕೂ ಮುತ್ತಿಕ್ಕಿ ಸಾಗುವ ತೆರೆಗಳ ನೋಡುತ್ತಾ ನೋಡುತ್ತಾ ನಿಂತರೆ ಸಮಯ ಹೋಗಿದ್ದೇ ಅರಿಯದು... ಸಾಗರದ ನಡುವೆಯಿರುವ ದ್ವೀಪದ ತುಂಬೆಲ್ಲಾ ಬಾಗಿ ಬಳುಕಿ ಎತ್ತರೆತ್ತರಕ್ಕೆ ಏರಿನಿಂತ ಕಲ್ಪವೃಕ್ಷ. ಒಂದಷ್ಟು ಕುರುಚಲು ಗಿಡಗಳು...ಬಿಟ್ಟರೆ ಪೇರಿಸಿಟ್ಟಂತಿರುವ ಕಲಾತ್ಮಕ ಕಲ್ಲರಾಶಿ! ಇವಿಷ್ಟು ವರ್ಣನೆ ಸಾಕೆನಿಸುತ್ತದೆ...ಇದ್ಯಾವುದೆಂದು ತಿಳಿಯಲು... ಹೌದು ಅದೇ ಕೋಕನಟ್ ಐಲ್ಯಾಂಡ್ ಖ್ಯಾತಿಯ ದ್ವೀಪ. ಅದು ಸೈಂಟ್ ಮೇರಿಸ್ ಎಂಬ ಹೆಸರಿನಿಂದ ಪ್ರಸಿದ್ಧಿ.
ಪರಿಸರ ಸವಿಯಲು ಬಂದ ಜನರಿಂದ ನಲುಗುತ್ತಿರುವ ಸ್ಥಳ...!
ಸಾಕಷ್ಟು ಇತಿಹಾಸ ಹೊಂದಿದ ಈ ದ್ವೀಪ ರಾಷ್ಟ್ರೀಯ ಭೂಗರ್ಭ ಸ್ಮಾರಕ ಎಂದು ನವೆಂಬರ್ 16,1979ರಲ್ಲಿ ಘೋಷಿಸಲ್ಪಟ್ಟಿದೆ.
ಇಲ್ಲಿರುವ ಕಲ್ಲುಗಳೇ ಒಂದು ವೈಶಿಷ್ಠ್ಯ. ಸ್ಥಂಭಾಕೃತಿಯಲ್ಲಿರುವ ಈ ಕಲ್ಲುಗಳು ಪಂಚ, ಷಡ್ ಭುಜಗಳನ್ನೊಳಗೊಂಡಿವೆ.ಕಾಲುಮ್ನಾರ್ ಲಾವದಿಂದ ಉಂಟಾದ ಈ ಬಂಡೆಗಳು ಒಂದು ಕುತೂಹಲ ಸೃಷ್ಟಿಸುತ್ತವೆ.
ಸೈಂಟ್ ಮೇರೀಸ್ ದ್ವೀಪ ಪ್ರವಾಸವೇ ಒಂದು ರೋಚಕ. ಬೋಟ್ ಮುಖಾಂತರ ಒಂದರ್ಧಗಂಟೆಗಳ ಸಮುದ್ರಯಾನ. ತೀರದಲ್ಲೊಂದು `ಬೋಟುಗಳ' ಕಟ್ ಸರ್ವೀಸ್. ಅಂತೂ ಆ ಯಾನವೊಂದು ಪುಳಕನೀಡುತ್ತದೆ. ಅಕ್ಷರಶಃ ಮನದ ನೋವನ್ನು ಒಂದಷ್ಟು ಕಾಲ ಮರೆಮಾಡುತ್ತದೆ.
ಸೈಂಟ್ ಮೇರೀಸ್ ಒಂದು ಸುಂದರ ತಾಣ. ನಿಸರ್ಗದ ಕನ್ಯೆ. ಅದನ್ನು ಹಾಳು ಮಾಡುವ ಬದಲು ರಕ್ಷಿಸುವ ಕಾರ್ಯ ಆಗಬೇಕಾಗಿದೆ. ಪ್ರವಾಸಿಗರು ಈ ನಿಟ್ಟಿನಲ್ಲಿ ಚಿಂತಿಸಬೇಕಾಗಿದೆ.
ಈ ಕನಸು ಸ್ಪೆಷಲ್ ಸ್ಟೋರಿ
ಇದೀಗ ರಜೆಯ ಮಜಾ...
ಓಹ್ ಏನು ರಜಾ ಎಂಥಾ ಖುಷಿ...
ಈಗ ಶಾಲೆಗಳಿಗೆಲ್ಲಾ ರಜೆ...ಮಕ್ಕಳಿಗೆ ರಜೆಯ ಮಜಾ... ಆದರೆ ಎಲ್ಲಡೆ ಈಗ ಮುಂಬರುವ ಶಾಲೆ, ಕಾಲೇಜುಗಳ ಕ್ಲಾಸ್ ಗಳ ಬಗ್ಗೆಯೇ ಪೂರ್ವ ತಯಾರಿಯೂ ಜೊತೆ ಜೊತೆಗೆ!. ಮಕ್ಕಳಿಗೆ ಅವರದ್ದೇ ಆದ ಯಾವುದೇ ಆಟಗಳಿಗೆ ಅಲ್ಲಿ ಅವಕಾಶವೇ ಇಲ್ಲ. ಇದ್ದರೂ ಇಂದಿನ ಅನೇಕ ಮಕ್ಕಳಿಗೆ ಮೊಬೈಲ್, ಕಂಪ್ಯೂಟರ್, ವಿಡಿಯೋ ಗೇಮ್ ಬಿಟ್ಟರೆ ಮತ್ಯಾವ ಸೊತ್ತುಗಳತ್ತವೂ ಗಮನವಿಲ್ಲ ಬಿಡಿ. ಸೃಜನ ಶೀಲ ಆಟಗಳು ಅವರ ಕಣ್ಣಿಗೆ ಬೀಳುವುದೇ ಇಲ್ಲ. ಇದಕ್ಕೆ ಹೆತ್ತವರೂ ಕಾರಣರಾಗುತ್ತಾರೆ ಎಂಬುದು ಗಮನಾರ್ಹ ಸಂಗತಿ. ಅಜ್ಜಿ ಮನೆ, ನೆಂಟರ ಮನೆ, ಆಪ್ತರ ಮನೆಗೆ ಹೋಗಲೂ ಇಂದಿನ ಮಕ್ಕಳಿಗೆ ಟೈಮಿಲ್ಲ! ಅಷ್ಟರ ಮಟ್ಟಿಗೆ ಬ್ಯುಸಿ!
ಇಂತಹ ಪರಿಸ್ಥಿತಿಯಲ್ಲಿ ಒಮ್ಮೆ ನಮ್ಮ ಬಾಲ್ಯಗಳನ್ನು ನೆನಪಿಸಿದರೆ...ಖುಷಿಯಾಗುತ್ತದೆ...
ಆರ ರಜೆಯಲ್ಲಿ ನೆಂಟರ ಮನೆಗೆ ಪಯಣ. ಒಂದಿಷ್ಟು ಉಪಟಳ... ಇತರ ಮಕ್ಕಳೊಂದಿಗೆ ಹೊಳೆ, ನದಿಯಲ್ಲಿ ಆಟ, ಮರಳ ರಾಶಿಯಲ್ಲಿ ಕುಣಿದಾಟ, ಬೈಸಿಕಲ್ ಕಲಿಯುವ, ಕಲಿಸುವ ಮನಸ್ಸು... ಅತ್ತೆ ಮಗಳಿಗೊಮ್ಮೆ ಲೈನ್ ಹೊಡೆಯುವುದು... ಹೀಗೆ ಇದೆಲ್ಲಾ ಒಂದು ಸಿಹಿನೆನಪು...
ಆದರೆ ಈಗೆಲ್ಲಿದೆ ಆ ಸಂಭ್ರಮ... ಸಡಗರ...ಈಗೇನಿದ್ದರೂ ಮೊಬೈಲ್ ಇದ್ದರೆ ರಜಾ ಕಾಲವಿಡೀ ಮಜಾ... ಎಂಬಂತಾಗಿದೆ.ಒಮ್ಮೊಮ್ಮೆ ಅನಿಸುತ್ತದೆ ಮೊಬೈಲ್ ಮಕ್ಕಳ ಸೃಜನಶೀಲತೆಯನ್ನೇ ಕಸಿದುಕೊಂಡಿತೇ...
-ಮಹೇಶ್ ಪುಚ್ಚೆಪ್ಪಾಡಿ.
ಇದೀಗ ಅಪರೂಪ
ಹೌದು ಇದು ನಿಜಾರ್ಥದಲ್ಲಿ ಹವಾನಿಯಂತ್ರಿತ ಮನೆಗಳು... ಬೇಸಿಗೆಯಲ್ಲಿ ಕೂಲ್ ಕೂಲ್! ಮಳೆಗಾಲದಲ್ಲಿ ಬೆಚ್ಚನೆಯ ವಾತಾವರಣ. ಇದೊಂದು ನೈಸರ್ಗಿಕ ಹವಾನಿಯಂತ್ರಿತ ವ್ಯವಸ್ಥೆ. ಕರಾವಳಿಯ ಹಳ್ಳಿಗಳಲ್ಲಿ ಕೆಲವರ್ಷಗಳ ಹಿಂದೆ ಇಂತಹ ಮನೆಗಳು ಮಾಮೂಲಿ. ಕೇರಳದ ಕಾಸರಗೋಡಿನಲ್ಲಂತೂ ಮುಳಿಹುಲ್ಲಿನ ಬೆಚ್ಚನೆಯ ಮನೆಗಳು ಮಾಮೂಲಿಯಾಗಿದ್ದವು. ಈಗಲೂ ಕುಗ್ರಾಮಗಳಲ್ಲಿ ಇವು ಅಪರೂಪಕ್ಕೆ ಕಾಣಸಿಗುತ್ತವೆ....
ಮುಳಿಹುಲ್ಲಿನ ಈ ಮನೆಗಳ ರಚನೆಯೇ ಒಂದು ವೈಶಿಷ್ಠ್ಯಪೂರ್ಣ. ಇದೊಂದು ಕಲೆ. ಸರಳ ವಿಧಾನದಲ್ಲಿ ರಚಿಸಲ್ಪಡುವ ಈ ಮನೆ ಒಂದು ಸುಖದ ವಾತಾವರಣವನ್ನು ನೀಡುತ್ತದೆ.

ಸೆಗಣಿ ಸಾರಿಸಿದ ಮಣ್ಣಿನ ನೆಲ. ಅಲ್ಲೊಂದು ಹುಲ್ಲ ಚಾಪೆ, ಕೂರಲು ಮಣ್ಣಿನ ಚಿಟ್ಟೆ... ಎದುರು ದೊಡ್ಡ `ದಳಿ' ತಟ್ಟಿ ಕಿಟಿಕಿಗಳು... ಇದು ಸಾಮಾನ್ಯ ಮುಳಿ ಹುಲ್ಲಿನ ಮನೆಯ ಒಂದು ನೋಟ. ಸೆಕೆಗಾಲ ಬಂದಾಗ ವರ್ಷಂಪ್ರತಿ ಮಾಡಿನ ರಿಪೇರಿ. ಮತ್ತೆ ಮಳೆಗಾಲಕ್ಕೆ ಬೆಚ್ಚನೆಯ ಮಾಡು ರೆಡಿ. ಮಾಡಿನ ಮೇಲ್ಭಾಗದ ಒಂದು ತಟ್ಟು ಮುಳಿಹುಲ್ಲು ಜಾರಿಸಿ ಹೊಸ ಮುಳಿಹುಲ್ಲು ಹೊದೆಸಲಾಗುತ್ತದೆ. ಮುಳಿಹುಲ್ಲುಗಳನ್ನು ಮಾಡಿಗೆ ಹೊದೆಸುವುದೂ ಒಂದು ಕಲೆಯೇ ಸೈ. ಅದು ಎಲ್ಲರಿಗೂ ಸಾಧ್ಯವಿಲ್ಲ. ಅದಕ್ಕೆ ಅದರದ್ದೇ ಆದ ವಿಧಾನವಿದೆ. ಆ ರೀತಿಯಲ್ಲಿ ಹೊದೆಸಿದರಷ್ಟೇ ಮಾಡು ಸಮರ್ಪಕವಾಗಿ ನೀರನ್ನು ತಡೆಯುತ್ತದೆ. ಅದೆಲ್ಲಾ ಹಿಂದಿನ ಹಿರಿಯರಿಗೆ ಕರತಲಾಮಲಕ!
ಇಂತಹ ಮನೆಗಳು ಗಡಿನಾಡ ಕಾಸರಗೋಡು ಸೇರಿದಂತೆ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ ಅಲ್ಲೊಂದು ಇಲ್ಲೊಂದು ಉಳಿದುಕೊಂಡಿದೆ. ಪ್ರವಾಸೋದ್ಯಮ ಇಲಾಖೆ ಪ್ರವಾಸೀ ತಾಣಗಳಲ್ಲಿ ಈ ರೀತಿಯ ಮನೆಗಳನ್ನು ನಿರ್ಮಿಸಿ ಅದರಲ್ಲಿ ಪಟ್ಟಣದ ಮಂದಿಗೆ ಸುಖದಲ್ಲಿ ಉಳಿದುಕೊಳ್ಳಲು ಅವಕಾಶ ಮಾಡಿಕೊಟ್ಟರೆ ಅದು ಹಿಟ್ ಆಗುವುದರಲ್ಲಿ ಸಂದೇಹವೇ ಇಲ್ಲ...
ಇದೀಗ ಕಾಲ ಬದಲಾದಂತೆ ಮುಳಿಹುಲ್ಲಿನ ಮನೆಗಳು ಮಾಯ. ಬದಲಿಗೆ ಆರ್.ಸಿ.ಸಿ ಮನೆಗಳ ನಿರ್ಮಾಣ. ಅಪರೂಪವೆಂಬಂತೆ ಹಂಚಿನ ಮನೆಗಳು. ಇವುಗಳು ಇಂದಿನ ವಾತಾವರಣಕ್ಕೆ ಒಗ್ಗುತ್ತಿಲ್ಲ. ಸೆಕೆಕಾಲದಲ್ಲಿ ಕೂಲ್ ಇರೋದಿಲ್ಲ. ಕೂಲ್ ಆಗಿರ್ಬೇಕಾದ್ರೆ ಎ.ಸಿ ಬೇಕೇ...ಬೇಕು. ಹಿಂದಿನಂತೆ ಮುಳಿ ಹುಲ್ಲುಗಳು ಲಭ್ಯವಾಗುವ `ಬಯಲು'ಗಳೂ ಇಂದಿಲ್ಲ. ಮುಳಿಹುಲ್ಲೂ ಇಲ್ಲ. ಕ್ಷಣ ಕ್ಷಣಕ್ಕೆ ಸಮಾಜ ಬದಲಾಗುತ್ತಿದ್ದಂತೆಯೇ ಇವೆಲ್ಲವೂ ನಾಶವಾಗುತ್ತಾ ಸಾಗುತ್ತಿವೆ. ಅಂತೂ ಅಪರೂಪಕ್ಕೆ ಕೆಲವೆಡೆಗಳಲ್ಲಿ ಈ ಮನೆಗಳು ಕಾಣಸಿಗುತ್ತವೆ.
ಇಂದು ಇದೇ ಮನೆಗಳನ್ನು ಹೋಲುವ `ರೆಸಾರ್ಟ್ 'ಗಳು ಕೊಂಚ ಆಧುನೀಕ ಗೆಟಪ್ಗಳೊಂದಿಗೆ ನಿರ್ಮಾಣವಾಗುತ್ತಿವೆ. ಏನಿದ್ದರೂ ಹಳೆಯ ತಂತ್ರಜ್ಞಾನಕ್ಕೆ ತಲೆಬಾಗಲೇ ಬೇಕು...ಯಾವತ್ತಿಗೂ `ಓಲ್ಡ್ ಈಸ್ ಗೋಲ್ಡ್'!
- ವರ್ಷಾ
ಈ ಕನಸು ಸ್ಪೆಷಲ್ ಸ್ಟೋರಿ
ಕವಿ-ಕಲಾವಿದನ ಪಾಲಿಗೆ ಕಲ್ಲುಗಳೂ ಒಂದು ಅದ್ಭುತವಾದ ಕಲ್ಪನೆಯನ್ನು ನೀಡುತ್ತದೆ. ಹಲವು ಕಾವ್ಯಗಳು ಇಂತಹ ನಿಸರ್ಗದತ್ತವಾದ ಕಲ್ಲ ರಾಶಿಯ ಮೇಲೆ ಹುಟ್ಟಿವೆ. ಕಲಾವಿದನ ಕ್ಯಾನ್ವಾಸ್ಗಳಿಗೂ ಈ ಕಲ್ಲ ರಾಶಿಗಳು ಅದ್ಭುತ ಪ್ರೇರಣೆ ನೀಡಿವೆ. ಅಂತಹ ಕಲ್ಲುಗಳ ರಾಶಿಯೇ ಒಂದು ನೈಜ ಕಲಾಕೃತಿ ಇದ್ದಂತೆ...ಒಂದು ಕಾವ್ಯವಿದ್ದಂತೆ... ಆದರೆ ರಾಜ್ಯದ ಪ್ರವಾಸೋದ್ಯಮ ಇಲಾಖೆಗೆ ಇವೆಲ್ಲವೂ ಬರಿಯ ಕಲ್ಲಾಗಿ ಕಾಣಿಸುತ್ತಿದೆ. ಒಂದಷ್ಟು ಕಾವ್ಯಾತ್ಮಕವಾಗಿ , ಕವಿದೃಷ್ಟಿಯಿಂದ ಮನಸ್ಸನ್ನು ಮುದಗೊಳಿಸುವ ತಾಣವಾಗಿ ಕಾಣುವಲ್ಲಿ ಸೊರಗಿಹೋಗಿದೆ. ಓ ಪ್ರವಾಸೋದ್ಯಮ ಇಲಾಖೆಯೇ ಇತ್ತನೋಡೊಮ್ಮೆ...ಗಾಢ ನಿದ್ದೆಯಿಂದ ಹೊರಬಂದು ನೋಡು ಎನ್ನುತ್ತಾರೆ ನಾಡೋಡಿ...
`ನಿಸರ್ಗ' ಇದೇ ಒಂದು ಅಚ್ಚರಿ!... ಅದ್ಭುತ!... ಸೃಷ್ಠಿಯೇ ಒಂದು ವೈಚಿತ್ರ!... ನಿಸರ್ಗವೇ ದೊಡ್ಡ ಕ್ಯಾನ್ವಾಸ್... ಅದರೊಳಗೆ ಅದೆಷ್ಟು ವರ್ಣ ವೈವಿಧ್ಯ!... ಬಣ್ಣಗಳ ಚೆಲ್ಲಾಟ!... ಅಚ್ಚರಿಗಳ ಸೃಷ್ಠಿ!... ಚಿತ್ತಾರಗಳ ಮೋಡಿ...
ಎಷ್ಟು ಹೇಳಿದರೂ ಕಡಿಮೆಯೇ ಅದೇ ಈ ದೊಡ್ಡ ಕ್ಯಾನ್ವಾಸ್ನ ಹೆಗ್ಗಳಿಕೆ...
ನಿಸರ್ಗದಲ್ಲೆಲ್ಲಾ ಒಂದಲ್ಲಾ ಒಂದು ಸಹಜ ಕಲಾಕೃತಿಗಳಿವೆ. ನೋಡುವ ದೃಷ್ಠಿಯಲ್ಲಿ ಅದರ ಅಂದಕಾಣಸಿಗುತ್ತದೆ. ಒಂದು ಮರವನ್ನೇ ಉದಾಹರಣೆಗೆ ತೆಗೆದುಕೊಳ್ಳುವ... ಮರದ ಅಂಕುಡೊಂಕಾದ ರೆಂಬೆ-ಕೊಂಬೆಗಳು, ಅದರ ಕಾಂಡ, ಬೇರುಗಳ, ಅಲ್ಲಲ್ಲಿ ಪೊಟರೆಗಳು, ವರ್ಣ ವಿಭಿನ್ನದ ಎಲೆಗಳ ರಾಶಿ, ತೊಗಟೆಯ ಮೇಲಣ ಸಣ್ಣ ಸಣ್ಣ ಚುಕ್ಕಿಗಳು, ಉಬ್ಬುತಗ್ಗುಗಳು... ಬಾಗಿ ಬಳುಕುವ ಇಡೀ ಮರ... ಇದನ್ನೆಲ್ಲಾ ನೋಡುವುದೇ ಒಂದು ಖುಷಿ.
ಹೀಗೆ ಸಣ್ಣ ಹುಲ್ಲಿನಿಂದ ತೊಡಗಿ, ಕೆರೆ, ಸರೋವರ, ನದಿ, ಕೊಳ, ಹಳ್ಳ, ತೋಡು, ಗುಡ್ಡ, ಬೆಟ್ಟ, ಕಲ್ಲು...ಎಲ್ಲೆಂದರಲ್ಲಿ ಒಂದಲ್ಲಾ ಒಂದು ಸುಂದರ ಕಲಾಕೃತಿಗಳನ್ನು ಪ್ರಕೃತಿಯೇ ಸೃಷ್ಠಿಸಿದೆ. ಅದು ನೈಜ ಕಲಾಕೃತಿ.ಕಲಾವಿದನ ಕಲಾಕೃತಿಗಳಿಗಿಂತಲೂ ವಿಭಿನ್ನವಾದ, ಶ್ರೇಷ್ಠವಾದ ಕಲೆ ಸಾಕ್ಷಾತ್ ಪ್ರಕೃತಿಯಲ್ಲಿ ಕಾಣಸಿಗುತ್ತದೆ. ಅದು ನೈಜ ಕಲೆಯಾಗಿದೆ. ಅದನ್ನು ಅನುಭವಿಸುವ ಸಾಮರ್ಥ್ಯ ನಮಗಿರಬೇಕಷ್ಟೇ.
ಹೀಗೇ ಸುತ್ತಾಡುತ್ತಿರಬೇಕಾದರೆ ಕಂಡುಬಂದುದೇ ಈ ಕಲ್ಲುಗಳ ರಾಶಿ. ಇದು ಕೇವಲ ಕಲ್ಲ ರಾಶಿಯಲ್ಲ. ನಿಸರ್ಗದ ಕಲೆ..ಕಲಾತ್ಮಕ ಕಾವ್ಯ, ಅಲ್ಲಿ ಜುಳು ಜುಳು ಸದ್ದುಮಾಡುತ್ತಾ ಬಾಗಿ ಬಳುಕಿ ಸಾಗುವ ನದಿಯಿದೆ...
ನದಿಯ ಹರಿವಿಗೆ ಸಿಕ್ಕು ಒಂದೊಂದು ಕಲ್ಲುಗಳೂ ಒಂದೊಂದು ರೂಪ ತಳೆದಿವೆ. ಅವೆಲ್ಲಾ ನೋಡುಗನ ಮನ ಸೂರೆಗೊಳಿಸುವಂತಿವೆ. ನದಿಯ ನೀರ ಹರಿವಿನ ರಭಸಕ್ಕೆ ಕಲ್ಲುಗಳು ತಲೆ ಬಾಗಿಸಿವೆ.ವರ್ಷಾನುಗಟ್ಟಲೆ ನೀರ ವಿವಿಧ ರೀತಿಯ ಹರಿವಿಗೆ ಇವೆಲ್ಲಾ ನಿಧಾನವಾಗಿ ಕರಗಿ ಒಂದೊಂದು ರೂಪ ಪಡೆದಿವೆ. ಮಳೆಗಾಲ ಕಳೆದು ಬೇಸಿಗೆ ಬರುತ್ತಿದ್ದಂತೆಯೇ ನೀರು ಬತ್ತಿಹೋಗಿ ಕಲ್ಲುಗಳ ದರ್ಶನವಾಗತೊಡಗುತ್ತವೆ. ಒಂದಷ್ಟು ಹೊತ್ತು ಆ ಕಲ್ಲ ರಾಶಿಯನ್ನೇ ನೋಡುವ , ನೋಡಿ ಸಂತಸ ಪಡೆಯುವ ಭಾಗ್ಯ ನಮ್ಮದಾಗುತ್ತದೆ. ಕಲೆ ನೋಡುವ ದೃಷ್ಠಿಯಲ್ಲಿದೆ. ಕಲೆಯ ಸ್ವಾಧ ಅನುಭವಿಸಿದವನಿಗಷ್ಟೇ ಪ್ರಾಪ್ತವಾಗುತ್ತದೆ. ಅದಕ್ಕೆ ನಿದರ್ಶನವೇ ನಾಡಿನಾದ್ಯಂತ ತಣ್ಣನೆ ಹರಿಯುವ ನದೀಗಳು, ಅವುಗಳ ಒಡಲಲ್ಲಿರುವ ಚಿತ್ರ ವಿಚಿತ್ರ ಕಲ್ಲುಗಳು!
-ನಾಡೋಡಿ.
ಈ ಕನಸು ಸ್ಪೆಷಲ್ ಸ್ಟೋರಿ
ಕರಾವಳಿ ಜಿಲ್ಲೆಯ ಅತ್ಯಂತ ಸುಂದರ ತಾಣಗಳಲ್ಲೊಂದು ಪೊಸಡಿಗುಂಪೆ. ಇಲ್ಲಿನ ದೃಶ್ಯ ವೈಭವ ನೋಡುತ್ತಿದ್ದಂತೆಯೇ ಮನಸ್ಸು ಪುಳಕಿತಗೊಳ್ಳುತ್ತದೆ. ಸಂಜೆಯ ಆಹ್ಲಾದಕರ ಗಾಳಿಯ ನಡುವೆ ಮನಸ್ಸು ಪ್ರಕೃತಿಯಲ್ಲಿ ಲೀನವಾಗಿ ಬಿಡುತ್ತದೆ.ಸಮಯ ಕಳೆದದ್ದೇ ತಿಳಿಯುವುದಿಲ್ಲ ಅಂತಹ ಅದ್ಭುತ ಸ್ಪಾಟ್ ಇದು.. ಆದರೆ ಪ್ರವಾಸೋದ್ಯಮ ದೃಷ್ಠಿಯಿಂದ ಇದು ಅಭಿವೃದ್ಧಿ ಹೊಂದಿಲ್ಲ. ಪ್ರವಾಸೋದ್ಯಮವಾಗಿ ಪೊಸಡಿಗುಂಪೆ ಬೆಳೆದಿಲ್ಲ...ಒಂದಷ್ಟು ಚಾರಣಿಗರಿಗೆ, ಪರಿಸರಾಸಕ್ತರಿಗೆ, ನಿಸರ್ಗ ಪ್ರಿಯರಿಗೆ, ಸಿನೆಮಾ ಚಿತ್ರೀಕರಣಕ್ಕೆ ಪೊಸಡಿಗುಂಪೆ ಒಂದು ವೇದಿಕೆಯೊದಗಿಸಿ ಬಿಟ್ಟರೆ ಹೊರಜಗತ್ತಿಗೆ ಪ್ರವಾಸೋದ್ಯಮ ರೀತಿಯಲ್ಲಿ ಪೊಸಡಿಗುಂಪೆ ತೆರೆದುಕೊಂಡಿಲ್ಲ...ಓ ಪ್ರವಾಸೋದ್ಯಮ ಇಲಾಖೆಯೇ ಕೊಂಚ ನಿದ್ದೆ ಕೊಡವಿ ಹೊರಜಗತ್ತಿನತ್ತ ದೃಷ್ಠಿ ಹರಿಸಿ...
ಇದು ಗಡಿನಾಡು ಜಿಲ್ಲೆ , ಕರಾವಳಿ ತೀರದ ಕಾಸರಗೋಡಿನ ಬಾಯಾರು ಬಳಿ ವಿಶಾಲವಾಗಿ ಹರಡಿರುವ ಪೊಸಡಿಗುಂಪೆ. ಈ ಗುಂಪೆ ಗುಡ್ಡೆ ಎಂತಹವರ ಮನಸ್ಸಿಗೂ ಒಂದು ಶಕ್ತಿ ಕೊಡಬಲ್ಲ ಹಿಮಾಚ್ಚಾದಿತ ಸ್ವರ್ಗ. ಹಾಗಾಗಿಯೇ ಕವಿ ಕಯ್ಯಾರ ಕಿಞ್ಞಣ್ಣ ರೈಯವರು ಪೊಸಡಿಗುಂಪೆಯನ್ನು ಹೇಳಿದ್ದು ಇದೊಂದು ಧೀರಮೂರ್ತಿ , ಹೊಸತು ಕಣ್ಣುಗಳಿಗೆ ಇದೊಂದು ಹಬ್ಬ ನೀಡುವ ಶಿಖರ , ಮಾತ್ರವಲ್ಲ ಬದುಕಿಗೆ ಸ್ಫೂರ್ತಿ ನೀಡುವ , ಶಕ್ತಿ ನೀಡುವ ತಾಣ ಎಂದು. ಮಳೆಗಾಲದ ಈ ಸಮಯದಲ್ಲಿ ಈ ಪ್ರದೇಶವು ಇನ್ನಷ್ಟು ನಯನಮನೋಹರವಾಗಿ ಕಾಣಿಸುತ್ತಿದೆ.ಬೆಟ್ಟದ ತುದಿಯಿಂದ ಕಣ್ಣು ಹಾಯಿಸಿದಷ್ಟು ದೂರಕ್ಕೆ ಕಾಣುವ ಊರುಗಳು , ಇನ್ನೊಂದು ಕಡೆ ನೋಡಿದರೆ ಸಮುದ್ರದ ಅಬ್ಬರ . ಇನ್ನೊಮ್ಮೆ ಹಿಮಾಚ್ಚಾದಿತ ಬೆಟ್ಟ . . ಹೀಗೇ ಇಲ್ಲಿ ಎಲ್ಲವೂ ಕಾಣಸಿಗುತ್ತದೆ.
ಮಂಗಳೂರಿನಿಂದ ಸುಮಾರು 50 ಕಿಲೋ ಮೀಟರ್ ಅಂತರದಲ್ಲಿರುವ ಈ ಪೊಸಡಿಗುಂಪೆ ಬಾಯಾರಿನಿಂದ ಅನತಿ ದೂರದಲ್ಲಿ ವಿಶಾಲವಾಗಿ ಹರಡಿಕೊಂಡಿದೆ. ಈ ಬೆಟ್ಟದ ಬಳಿಗೆ ತಲಪುತ್ತಿದ್ದಂತೆಯೇ ಮೊದಲಿಗೆ ನಮಗೆ ಕಾಣುವುದು ಮುರಕಲ್ಲಿನಿಂದ ಆವೃತವಾದ ಒಂದು ಗುಹೆ.ನೋಡುವುದಕ್ಕೆ ಇದೊಂದು ಕೇವಲ ಗುಹೆ.ಆದ್ರೆ ಅದೊಂದು ವಿಸ್ಮಯದ ಗುಹೆಯೂ ಹೌದು.ಮಳೆ ಜೋರಾಗಿ ಸುರಿಯುತ್ತಿದ್ದಂತೆ ಇಲ್ಲಿ ಹರಿಯುವ ನೀರು ಅಂಕುಡೊಂಕಾಗಿ ಹರಿದು ಬಂದು ಜಲಪಾತವನ್ನು ಸೃಷ್ಠಿಸಿ ಗುಹೆಯೊಳಗೆ ಸೇರಿಬಿಡುತ್ತದೆ.ಆ ನಂತರ ಮಾಯವಾಗುವ ಈ ನೀರ ಸೊಬಗು ನೋಡುವುದೇ ಒಂದು ಖುಷಿ.ಹಾಗೆ ಗುಹೆಯೊಳಗೆ ಹರಿಯುವ ನೀರು ಮತ್ತೆ ಒಂದಷ್ಟು ದೂರ ಹಾಗೇ ಗುಪ್ತಗಾಮಿನಿಯಾಗಿ ಅನತಿ ದೂರದಲ್ಲಿ ಹೊರಬರುವಾಗ ಇನ್ನೊಂದು ಜಲಪಾತ ಸೃಷ್ಠಿಸುತ್ತೆ.ಇಲ್ಲೂ ವಿಧವಿಧವಾಗಿ ಧುಮುಕಿ ಹರಿಯುವ ನೀರ ಸೊಬಗು ನೋಡಿ ಮೈಮರೆವ ನಮಗೆ ಅಲ್ಲೇ ಹಸಿರು ಹಸಿರಾದ ಪ್ರದೇಶವು ಕಾಣುತ್ತದೆ.ಕಣ್ಣು ಹಾಯಿಸಿದಷ್ಟು ದೂರಕ್ಕೆ ಕಾಣುವ ಊರುಗಳು . . ಅಬ್ಬಾ . . . !. . .
ಇಲ್ಲಿಗೇ ಮುಗಿದಿಲ್ಲಾ ರೀ . . . , ಇನ್ನು ಆರಂಭವಾಗ್ಬೇಕಿದೆ ಪೊಸಡಿಗುಂಪೆಯ ದೃಶ್ಯಕಾವ್ಯ.
ಈ ಗುಂಪೆಗುಡ್ಡೆ ತಳಭಾಗದವರೆಗೆ ವಾಹನಗಳು ಬರುತ್ತೆ.ವಾಹನ ಇಳಿದು ಒಂದೆರಡು ಕಿಲೋ ಮೀಟರ್ ದೂರ ಗುಡ್ಡ ಹತ್ತಲೇ ಬೇಕು.ವಾಹನ ಇಳಿದಾಗ ಈ ಬೆಟ್ಟ ಕಣ್ಣಿಗೆ ನುಣ್ಣಗೆ ಕಾಣುತ್ತೆ.ಆದ್ರೆ ಹೆಜ್ಜೆ ಹಾಕುತ್ತಾ ಸಾಗಿದಾಗ ಬೆಟ್ಟದ ಶಕ್ತಿ ತಿಳಿಯುತ್ತೆ ಬಿಡಿ.. .!!. ಹೂಂ . .; ಅದಿರ್ಲಿ , ನಾವು ಬೆಟ್ಟ ಹತ್ತೋದಿಕ್ಕೆ ಆರಂಭಿಸಿದಾಗಲೇ ಅದೊಂದು ದೃಶ್ಯ ವೈಭವ ಸಕತ್ ಆಗಿದೆ.ಮುರಕಲ್ಲಿನಿಂದಲೇ ಆವೃತವಾದ ಗುಡ್ಡ , ಬೆಟ್ಟವೇ ನಿರ್ಮಿಸಿಕೊಂಡ ಹಸಿರ ಹೊದಿಕೆ. . ದೂರದಿಂದಲೆ ಕಾಣೋ ಹಳ್ಳಿಗಳು. . ಹೀಗೇ ದೃಶ್ಯ ಸವಿಯುತ್ತಾ ಹೋದಾಗ ಒಮ್ಮೆಲೇ ಮಂಜು. . .!! ಶೂ. . . ಕೊನೆ ಕೊನೆಗೇ ನಮ್ಮವರನ್ನೆ ಕಾಣದಾಗುವಷ್ಟು ಮಂಜು. . , ಹೌದು , ಈ ಮಂಜು ಯಾವಾಗ್ಲೂ ನಮ್ಗೆ ಸಿಗಲ್ಲ. ಮಳೆಗಾಲದ ಸಮಯದಲ್ಲಿ ಮಾತ್ರಾ ಹಿಮಪರ್ವತ ಇಲ್ಲಿರುತ್ತೆ.ಬೆಟ್ಟದ ತುದಿಗೆ ತಲಪಿದಾಗ ಎಲ್ಲವೂ ಹಿಮ ಮಯ . . ಹೀಗಾಗಿ ಫೋಟೊಗ್ರಾಫರ್ಗಂತೂ ಸಕತ್ ಖುಷಿ. . ಪ್ರವಾಸಿಗರೂ ಹಾಗೇ ಫುಲ್ ಖುಷ್. . !!.ಆಮೇಲೆಲ್ಲಾದ್ರೂ ನಿಮ್ಗೆ ರೆಸ್ಟ್ ಬೇಕಂದ್ರೆ, ತೆರೆದ ಹಿಮದ ಮನೆಯೇ ಇಲ್ಲಿ ರೆಸಾರ್ಟ್.ಬೇಸಗೆ ಕಾಲದಲ್ಲಾದ್ರೆ ತೆರೆದ ಆಗಸವೇ ರೆಸಾರ್ಟ್. . . ಬೇಸಗೆ ಕಾಲದಲ್ಲಿ ಈ ಪೊಸಡಿಗುಂಪೆಯ ದೃಶ್ಯ ಸವಿಯಲು ಅದೆಷ್ಟೋ ಜನ ಬರ್ತಾರೆ.ಮಳೆಗಾಲದಲ್ಲಿ ಕೊಂಚ ಕಡಿಮೆ.
ಇಂತಹ ಭೂಲೋಕದ ಸ್ವರ್ಗ ಈಗಾಗ್ಲೇ ಪ್ರವಾಸಿಗರ ಆಕರ್ಷಣೆಗೆ ಕೇಂದ್ರವಾಗಿರುವಂತೆಯೇ ಸಿನಿಮಾ ಚಿತ್ರೀಕರಣಕ್ಕೂ ಇದೊಂದು ಸೂಪರ್ ಲೊಕೇಶನ್. ಜನ ಹೆಚ್ಚಾಗಿ ಬರೋದು ನೋಡಿ ಮಲಯಾಳೀ ಚಲನಚಿತ್ರ ನಿರ್ದೇಶಕರ ಚಿತ್ತ ಕೂಡಾ ಇಲ್ಲಿಗೆ ಬಿದ್ದಿತ್ತು. ಕೆಲ ವರ್ಷಗಳ ಹಿಂದೆ ಪೊಸಡಿಗುಂಪೆಯ ತಪ್ಪಲಿನ ಪ್ರದೇಶದಲ್ಲಿ ಮಲೆಯಾಳದ ವಾರ್ ಎಂಡ್ ಲವ್ ಅನ್ನೋ ಫಿಲಂನ 75 ಪರ್ಸೆಂಟ್ಸ ಇಲ್ಲೇ ಚಿತ್ರೀಕರಣವಾಗಿದೆ. ಯಾಕೆಂದ್ರೆ ಸ್ಟಂಟ್ಗೆ , ಕಾರ್ಗಲ್ ನಂತಹ ದೃಶ್ಯಕ್ಕೆ ಇಲ್ಲಿ ಒಳ್ಳೇ ಲೊಕೇಶನ್ ಇದೆ.ಹಾಗಾಗಿ ವಾರ್ ಎಂಡ್ ಲವ್ ಸಿನಿಮಾ ಇಲ್ಲೇ ಸುಮಾರು 20 ದಿನಗಳ ಕಾಲ ಶೂಟಿಂಗ್ ನಡೆದಿದೆಯಂತೆ.ಅದಾದ ಬಳಿಕ ಇನ್ನೂ ಕೆಲವು ಮಲೆಯಾಳೀ ಫಿಲಂನ ಟೈಟಲ್ ಸಾಂಗ್ ದೃಶ್ಯವೂ ಇಲ್ಲೇ ಚಿತ್ರೀಕರಣವಾಗಿದೆಯಂತೆ. ಹಾಗಾಗಿ ಕೇರಳದಲ್ಲಿ ಮಲೆಯಾಳ ಸಿನಿಮಾಗಳ ಶೂಟಿಂಗ್ಗೆ ಪೊಸಡಿಗುಂಪೆ ಒಂದೊಳ್ಳೆ ಲೊಕೇಶನ್.
ಮಲೆಯಾಳಿ ಚಿತ್ರಗಳ ಮೂಲಕ ಹೊರಬಂದ ಇಂತಹ ಅದ್ಭುತ ಸ್ಪಾಟ್ ಮುಂದೆ ಹಿಂದಿ,ತಮಿಳು , ತೆಲುಗು ಚಿತ್ರಗಳಿಗೂ ಒಂದೊಳ್ಳೆಯ ಸ್ಪಾಟ್ ಆದ್ರೂ ಆಗ್ಬಹುದು. ಹೀಗೇ ಕನ್ನಡದ ಚಿತ್ರಗಳ ಶೂಟಿಂಗ್ಗೂ ಇದೊಂದು ಒಳ್ಳೇ ಲೊಕೇಶನ್ ಎಂಬುದಂತೂ ಸತ್ಯ.ಚಿತ್ರಗಳಿಗೆಲ್ಲಾ ವಿದೇಶವೇ ಆಗ್ಬೇಕು ಎಂಬ ಅಹಂನ ಹಿಮದ ಪರದೆಯಿಂದ ಹೊರಬಂದು ಪೊಸಡಿಗುಂಪೆಯಂತಹ ನೈಜ ತಾಣಗಳತ್ತ ನೋಡಿದ್ರೆ ನಮ್ಮ ನಾಡೋಳಗೇ ಇರೋ ಸೂಪರ್ ಲೊಕೇಶನ್ ಎಲ್ರಿಗೂ ಪರಿಚಯವಾದಂತಾಗುತ್ತದೆ..ಇಂತಹ ಸುಂದರ ಲೊಕೇಶನ್ಗೆ ಹೋಗೋದಿಕ್ಕೆ ಒಂದು ಪ್ಲಾನ್ ಮಾಡಿದ್ರೆ ಹೇಗೆ ಅಂತಿರಾ ?...
- ಮಹೇಶ್ ಪುಚ್ಚಪ್ಪಾಡಿ.
ಸಾಹಿತ್ಯ
ಒಂದು ಸುಂದರ ಮುಂಜಾನೆ
ಪ್ರಕೃತಿ ಬಿಚ್ಚಿಡುತ್ತಿರುವ
ಅಮೂಲ್ಯ ಖಜಾನೆ
ಮೂಡಣ ದಿಗಂತದಲಿ
ಮೋಡಗಳ ಆಟ
ಪುಟಿಯುತಿರುವ ಪ್ರಥಮ
ಕಿರಣಗಳ ಮಾಟ
ಅದ್ಭುತ ರಂಗು ರಂಗಿನ ದೃಶ್ಯ
ಮನಸೆಳೆವ ನಿಸರ್ಗ ರಹಸ್ಯ
ಮರಗಳ ಹಚ್ಚ ಹಸಿರು
ನಾದಮಯ ಎಲೆಗಳ ಉಸಿರು
ಹಕ್ಕಿಗಳ ಇಂಚರ
ಮುಂಜಾನೆ ತಂಗಾಳಿಯ ಸಡಗರ
ಸೃಷ್ಟಿಯಾಯಿತು
ಕಲಾತ್ಮಕ ಪರಿಸರ
ಸೃಷ್ಟಿಕರ್ತನೇ ಅದೆಷ್ಟೊಂದು
ಸುಂದರ ನಿನ್ನ ವಿಶ್ವ!
ಕಂಡು ಬೆರಗಾದೆನು
ಈ ವಿಸ್ಮಯ ವಿಶ್ವ.- ಜಬೀವುಲ್ಲಾ ಖಾನ್
ಈ ಕನಸು ಅವಾರ್ಡ್
ನಗು
ಸ್ತಂಭನವಾದ
ಸಮಯ
- ಮಲ್ಲಿಕಾ ಭಟ್, ಪರಪ್ಪಾಡಿ.
ಸಾಹಿತ್ಯ
ನಾನು ಚಿಕ್ಕವಳಿದ್ದಾಗ
ಹಗಲು - ಬೆಳಕಿನ
ರಾತ್ರಿಯ ಕತ್ತಲೆಯ
ಅರಿವಾಗುತ್ತಿತ್ತು...
ಎಲ್ಲವೂ ಮುದ ನೀಡುತ್ತಿತ್ತು...
ಈಗ ಅದೆಲ್ಲವೂ ಇದೆ
ಕಾಲ ಬದಲಾಗಿದೆಯೋ ಗೊತ್ತಿಲ್ಲ...
ನಾನು ಮಾತ್ರ ಬದಲಾಗಿದ್ದೇನೆ...
ಯಾವಾಗ ಹಗಲೋ
ಯಾವಾಗ ಇರುಳೋ
ನಾನು
ಯಂತ್ರಗಳನ್ನು ನಡೆಸುವ
ಯಂತ್ರವಾಗಿಯೇ ಬಿಟ್ಟಿದ್ದೇನೆ...!
- ಸೌಮ್ಯ, ಸಾಗರ.
ವಿಶೇಷ ವರದಿ
ಸುಮ್ಮನೆ ಕತ್ತು ಬಗ್ಗಿಸಿ ಕೆಲಸ ಮಾಡುತ್ತಾ ಹೋಗಿ... ಕೆಲಸಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ ಎನ್ನೋದಕ್ಕೆ ಕೇಶವ ಕೋಟೇಶ್ವರ ಅವರಿಗಿಂತ ಬೇರೆ ಉದಾಹಾರಣೆ ಬೇಕಾ? ಕೃಷ್ಣ ಗೀತೆಯಲ್ಲಿ ಹೇಳಿದ್ದೂ ಇದನ್ನೇ ಆಲ್ವಾ? ಹಳ್ಳಿ ಮೂಲೆಯಲ್ಲಿ ನಡೆಯುತ್ತಿರುವ ಶಿಕ್ಷಣ ಕ್ರಾಂತಿಗಾಗಿ ಪ್ರಶಸ್ತಿ ಪುರಸ್ಕಾರಗಳು ಇಂದು ಅರಸಿಬರುತ್ತಿದೆ.
ಕೇಶವ ಕೋಟೇಶ್ವರ ಅವರ `ಸ್ಪೂರ್ತಿ' `ಧಾಮ ಇಂದು ಜಗದಗಲಕ್ಕೆ. ಕೇವಲ ಐದು ಜನ ಯುವಕರು ಹುಟ್ಟುಹಾಕಿದ ಅನುದಾನಿತ ಕೊರಗ ಮಕ್ಕಳ ವಸತಿ ಶಾಲೆ `ಸ್ಪೂರ್ತಿ `ಧಾಮ' ಏರಿದ ಎತ್ತರವಿದೆಯಲ್ಲಾ ಅದು ಬೆರಗು ಮೂಡಿಸುತ್ತದೆ. ಅದೂ ರಸ್ತೆ ಬದಿಯಲ್ಲಿ ಕೂಲಿ ಮಾಡುತ್ತಿದ್ದ ಸಂಜೀವಯ್ಯ ಅವರ ಮಗ ಕೇಶವ ಕೋಟೇಶ್ವರ ಏರಿದ ಎತ್ತರದ ಪರಿಯಿದೆಯಲ್ಲಾ ಅದು ಊಹಿಸಲಸಾಧ್ಯ. ತಾಯಿ ಲಕ್ಷ್ಮೀ ಬಳೆಗಾರ್ತಿ ಅವರ ಜೊತೆ ಹೆಗಲಿಗೆ ಹೆಗಲಕೊಟ್ಟು ಬಳೆ ಹೊತ್ತು ಹಳ್ಳಿ ಹಳ್ಳಿ ತಿರುಗುತ್ತದ್ದ ಕೇಶವ ಅವರು ಸ್ಪೂರ್ತಿ ಧಾಮ ಕಟ್ಟಿನಿಲ್ಲಿಸಿದ ರೀತಿಯಿದೆಯಲ್ಲಾ ಅದೂ ಊಹೆಗೂ ನಿಲುಕದ ಮಾತು.
ಸ್ಪೂರ್ತಿಧಾಮದ ತಾಕತ್ತೇ ಅಂಥಾಹದ್ದು..ಡಾ.ವೀರೆಂದ್ರ ಹೆಗ್ಗಡೆ ಸ್ವತಃ ಸ್ಪೂರ್ತಿ ಅಂಗಳದಲ್ಲಿ ನಿಂತು ಬಲೆ ಬಲೇ ಅಂದಿದ್ದಾರೆ. ಪೇಜಾವರ ಮಠ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಸ್ಪೂರ್ತಿಗೆ ಭೇಟಿ ನೀಡಿ ಒಳ್ಳೆ ಕೆಲಸ ಮಾಡ್ತಿದೀಯ ಅಂತ ಬೆನ್ನು ಚಪ್ಪರಿಸಿದ್ದಾರೆ. ಪರ್ಯಾಯ ಶಿರೂರು ಮಠ ಶ್ರೀ ಲಕ್ಷ್ಮೀವರತೀರ್ಥ ಸ್ವಾಮೀಜಿ ಒಂದು ಹೆಜ್ಜೆ ಮುಂದೆಹೋಗಿ `ಸಮಾಜ ಸುಧಾರಕ' ಅಂತ ಬಿರುದು ನೀಡಿದ್ದಾರೆ. ಅಷ್ಟೇಕೆ ರಾಜ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸ್ಪೂರ್ತಿಯ ನಡುಮನೆಯಲ್ಲಿ ನಿಂತು ಇಲ್ಲಿ ಶಿಕ್ಷಣ ಕ್ರಾಂತಿ ಮೂಲಕ ಸಮಾಜ ಪರಿರ್ವತನೆ ಕೆಲಸ ನಡೆಯುತ್ತದೆ ಎಂದು ಹೇಳಿದ್ದಾರೆ.
ಸಾಂಸದ ಅನಂತಕುಮಾರ್ ಸ್ಪೂರ್ತಿ ಮಕ್ಕಳಿಗೆ ಏಕಲವ್ಯ ಕತೆ ಹೇಳಿದ್ದಾರೆ. ನ್ಯಾ.ವೆಂಕಟಾಚಲಯ್ಯ ಸ್ಪೂರ್ತಿಯ ಸಾಮಾಜಿಕ ಕೆಲಸ ಕಣ್ಣಾರೆ ಕಂಡಿದ್ದಾರೆ. ಸ್ಪೂರ್ತಿ ಹುಟ್ಟುಹಾಕಿ ಅದರ ಅಭಿವೃದ್ಧಿ ಪಥಕ್ಕೆ ಕೊಂಡೊಯಿದ ಕೇಶವ ಕೋಟೇಶ್ವರ ಅವರ ಶುದ್ಧ ಮನಸ್ಸಿನ ಪರಾಕ್ರಮವಿದೆ. ಅಂದು ಸದ್ದಿಲ್ಲದೆ ದುಡಿಯುತ್ತಾ ಹೋದ ಕೇಶವ ಅವರಿಗೆ ಈಗ ಪ್ರಶಸ್ತಿ ಪುರಸ್ಕಾರದ ಕಾಲ.
ಆರಂಭ ಹೀಗಿತ್ತು : ಸ್ಪೂರ್ತಿ ಸಂಸ್ಥೆ ತೆಂಗಿನ ಮಡಲಿನ ಚಪ್ಪರದಿಂದ ಮಹಡಿ ಮಹಲ್ ವರಗೆ ನಡೆದ ದಾರಿ ಸಾಪ್ ಸೀದಾ ಆಗಿರಲಿಲ್ಲ. ನೀರಿನ ಹರಿವಿಕೆ ಜೋತೆ ಈಜೋದು ಸುಲಭ. ಆದರೆ ವಿರುದ್ಧ ಈಜೋದಿದೆಯಲ್ಲಾ ಅದಕ್ಕೆ ಎಂಟೆದೆಬೇಕು. ಹತ್ತು ಹಲವು ಅಡೆತಡೆ ಮೀರಿ ಸ್ಪೂರ್ತಿ ಬೇಳೂರಿನಲ್ಲಿ ಸದೃಡವಾಗಿ ನಿಂತಿದೆ.
ಗಿರಜನರ ಶಿಕ್ಷಣ ಗುರಿಯೊಂದಿಗೆ ಆರಂಭವಾದ ಸ್ಪೂರ್ತಿ ಎರಡನೇ ದಶಕದ ಅಂಚಿಗೆ ಬಂದು ನಿಂತಿದೆ. ಸ್ಪೂರ್ತಿ ಮಾನವ ಸೇವೆಗೆ ಒತ್ತು ನೀಡುತ್ತಿದೆ. ಸಮಾಜದಲ್ಲಿ ಶಿಕ್ಷಣ ವಂಚಿತರ, ಅನಾಥ ಮತ್ತು ಗಿರಿಜನ ಮಕ್ಳಳ ಶಿಕ್ಷಣಕ್ಕೆ ಆದ್ಯತೆ ನೀಡುತ್ತಾ ಜನರಲ್ಲಿ ಶಿಕ್ಷಣಿಕ ಜಾಗೃತಿ ಮೂಡಿಸುವ ಮೂಲಕ ಸಮಾಜದಲ್ಲಿರುವ ಕೀಳರಿಮೆ ತೊಡೆದು ಹಾಕುವ ಸಾರ್ಥಕ ಕೆಲಸದಲ್ಲಿ ಸ್ಪೂರ್ತಿ ನಿರತ.
ಸ್ಪೂರ್ತಿ ಸಂಸ್ಥೆಯನ್ನು ಇನ್ನಿಲ್ಲದೆ ಕಾಡಿದವರ ಪಟ್ಟಿ ದೊಡ್ಡದಿದೆ. ಎಲ್ಲಾ ಅಡೆತಡೆ ಮೆಟ್ಟಿ ನಿಂತು ಸ್ಪೂರ್ತಿಗೆ ಇಂದಿಗೂ ಚಿಟುಕು ಮುಳ್ಳಾಡಿಸೋದು ತಪ್ಪಿಲ್ಲ. ದಿನಕ್ಕೊಂದು ತನಿಖೆ, ನಿಯೋಗ ಭೇಟಿ ನೀಡುತ್ತಲೇ ಇದೆ. ಸ್ಪೂರ್ತಿಗೆ ಬಂದವರು ಸಂದರ್ಶನ ಪುಸ್ತಕದಲ್ಲಿ ಬರದಿರುವ ಒಕ್ಕಣೆ ನೋಡಿದರೆ ಸಾಕು ಸ್ಪೂರ್ತಿ ಹೇಗಿದೆ ಎಂಬುದಾಗಿ. ಮಾಜಿ ಶಾಸಕಿ ವಿನ್ನಫ್ರಡ್ ಫೆರ್ನಾಂಡೀಸ್ ಅವರ ಬಾಡಿಗೆ ಕಟ್ಟಡದಲ್ಲಿ ಸ್ಪೂರ್ತಿ ಹುಟ್ಟಿತು. ಗಿರಿಜನರ ಮೇಲೆ ಅಪಾರ ಕಾಳಜಿಯಿದ್ದ ಮಂಗಳೂರಿನ ಡೆಸ್ಮಂಡ್ ಏಬ್ರಿಯೋ ಅವರು ಬೇಳೂರು ಪಂಚಾಯ್ತಿ ವ್ಯಾಪ್ತಿಯಲ್ಲಿ ಸ್ಪೂರ್ತಿಗೆ 2.20 ಎಕ್ರೆ ಜಾಗ ಕೊಟ್ಟರು. ಆರಂಭದಲ್ಲಿ ಮಡ್ಲು ಚಪ್ಪರದ ಶೃಂಗಾರದಲ್ಲಿದ್ದ ಸ್ಪೂರ್ತಿ ಈಗ ಸುಸಜ್ಜಿತ ಕಟ್ಟಡ ಹೊಂದಿದೆ. ಕೇಶವ ಕೋಟೇಶ್ವರ, ಪ್ರಮೀಳಾ ವಾಜ್, ಗಣೇಶ್, ನಿತ್ಯಾನಂದ ಮತ್ತು ಕರುಣಾಕರ ಎಂಬವರು ಸ್ಪೂರ್ತಿ ಕಟ್ಟಿ ಬೆಳೆಸಿದರು. ಹದಿನೈದು ಗಿರಿಜನ ವಿದ್ಯಾರ್ಥಿಗಳೊಂದಿಗೆ ಆರಂಭಗೊಂಡ
ಸ್ಪೂರ್ತಿಯಲ್ಲಿ ಈಗ 150ರಷ್ಟು ಮಕ್ಕಳಿದ್ದಾರೆ. ಇದರಲ್ಲಿ ಶಿಕ್ಷಣ ವಂಚಿತರು. ಅನಾಥ ಹಾಗೂ ಗಿರಿಜನ ಮಕ್ಕಳಪಾಲು ದೊಡ್ಡದಿದೆ. ಸ್ಪೂರ್ತಿ ಆರಂಭದ ಕಾಲದಲ್ಲಿ ನೂರಾರು ವರ್ಷಗಳಿಂದ ತಮ್ಮದೇ ಬದುಕಿನ ಗೂಡಲ್ಲಿದ್ದ ಗಿರಿಜನರಿಗೆ ಅಕ್ಷರದ ಕಾಗುಣತದ ಅರಿವೂ ಇರಲಿಲ್ಲ. ಅವರು ತಮ್ಮ ಮಕ್ಕಳು ಶಾಲೆಗೆ ಹೋಗುವುದನ್ನೂ ಊಹಿಸಲೂ ಹಿಂಜರಿಯುತ್ತಿದ್ದರು. ಆದರೆ ಈ ಯವಕರು ಗಿರಿಜನ ಕೇರಿಗೆ ಎಡತಾಗಿದರು. ಅವರ ಮನವೊಲಿಸಿ ಮಕ್ಕಳನ್ನು ಕರೆತರುವುದಲ್ಲಿ ಯಶಸ್ವಿಯಾದರು. ಅಂದು ಗಿರಿಜನರಲ್ಲಿ ಬಿತ್ತಿದ ಅಕ್ಷರ ಬೀಜ ಇಂದು ಫಲಕೊಡುತ್ತಿದೆ. ಗಿರಿಜನರೇ ತಮ್ಮ ಮಕ್ಕಳನ್ನು ಕರೆತಂದು ಸ್ಪೂರ್ತಿಗೆ ಬಿಡುವಷ್ಟು ಬದಲಾವಣೆಯಾಗಿದೆ.
ಆರಂಭವಾಯಿತು ಶಿಕ್ಷಣ ಯಜ್ಞ: ಕಳೆದ ಹದಿನೇಳು ವರ್ಷದ ಹಿಂದೆ ಆರಂಭಗೊಂಡ ಸ್ಪೂರ್ತಿ ಸಂಸ್ಥೆಯಲ್ಲಿ ಪ್ರಸಕ್ತ 150 ವಿದ್ಯಾರ್ಥಿಗಳಿದ್ದಾರೆ. ಸ್ಪೂರ್ತಿ ಸಂಸ್ಥೆ ಮಕ್ಕಳು ಕಲಿಕೆಯಲ್ಲೂ ಮುಂದಿದ್ದಾರೆ. ಆರಂಭಿಕ ಹಂತದಲ್ಲಿ ಶೇ.90ರಷ್ಟಿದ್ದ್ದು ಫಲಿತಾಂಶ ನಂತರದ ದಿನಗಳಲ್ಲಿ ನೂರಕ್ಕೆ ಏರಿದೆ.
ಸ್ಪೂರ್ತಿ ಗಿರಿಜನ ಮಕ್ಕಳಿಗೆ ಶಿಕ್ಷಣ ಕೊಡುವುದಷ್ಟಕ್ಕೇ ಸೀಮಿತವಾಗಿಲ್ಲ. ಗಿರಜನ ಸಮಾಜದ ಮೌಲ್ಯ ವೃದ್ಧಿಗಾಗಿ ಹತ್ತು ಹಲವು ಕಾರ್ಯಕ್ರಮ ಹಮ್ಮಿಕೊಂಡಿದೆ. ಕೊರಗರ ಶಿಕ್ಷಣ ಅನೌಪಚಾರಿಕ ವಸತಿ ಶಿಕ್ಷಣ, ಸಂಸ್ಕೃತಿಕ ಅಧ್ಯಯನ ಮತ್ತು ಸಾಂಸ್ಕೃತಿಕ ಪರಿಕರ ಸಂಗ್ರಹ, ಸಮುದಾಯದ ಅಭಿವೃದ್ಧಿ ಕಾರ್ಯಕ್ರಮ, ಗಿರಿಜನ ಯುವಕ, ಯುವತಿಯರಿಗೆ ನಾಯಕತ್ವ ತರಬೇತಿ, ಸಂಘಟನಾ ಚಟುವಟಿಕೆ, ಸಣ್ಣ ಉಳಿತಾಯದ ಬಗ್ಗೆ ಜಾಗೃತಿ, ಸರಕಾರಿ ಯೋಜನೆಗಳ ಕುರಿತು ಮಾಹಿತಿ, ಹಕ್ಕಿನ ಭೂಮಿಗಾಗಿ ಹೋರಾಟ ಮತ್ತು ಏಡ್ಸ್, ವರದಕ್ಷಿಣ ಮುಂತಾದ ಸಾಮಾಜಿಕ ಪಿಡುಗುಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಸ್ಪೂರ್ತಿ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಸಮುದಾಯದ ಒಳಿತಿಗಾಗಿ ಹಲವು ಯೋಜನೆಗಳನ್ನು ತರೋದು ಕೇಶವ ಕೋಟೇಶ್ವರ ಅವರ ಕನಸು.
ಸ್ಪೂರ್ತಿ ಸಂಸ್ಥೆ ಅಂಗಳದಲ್ಲಿ ಅನಾಥ ಮತ್ತು ಬೀದಿಬದಿ ಬಿಟ್ಟು ಹೋದ ಮಕ್ಕಳಿಗೂ ಆಶ್ರಯ ನೀಡುತ್ತದೆ. ಅನಾಥರು ಕೂಡಾ ಸ್ಪೂರ್ತಿ ಸಂಸ್ಥೆ ಬಾಗಿಲಿಗೆ ಬಂದಿದ್ದಾರೆ. ನಾಲ್ಕು ಜನ ಅನಾಥರು ಸ್ಪೂರ್ತಿ ಆಶ್ರಯದಲ್ಲಿದ್ದಾರೆ. ಅವರೆಲ್ಲರಿಗೂ ಎಲ್ಲಾ ಇದ್ದೂ ಮನೆಯಿಂದ ಹೊರಗೆ ಹಾಕಲ್ಪಟ್ಟವರು. ಮತ್ತು ವಂಚನೆಗೆ ಒಳಗಾದವರು. ದತ್ತು ಕೇಂದ್ರದಲ್ಲಿ ಎಳೆಯ ಮಕ್ಕಳ ನಗು ಅಳುವಿನ ಅಲೆಯಿದೆ. ಈ ಮಕ್ಕಳ ಮುಂದಿನ ಭವಿಷ್ಯ ಬರೆಯುವ ಪ್ರಯತ್ನ ಸ್ಪೂರ್ತಿ ಮಾಡುತ್ತಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಪ್ರಶಸ್ತಿಗಳು ಹುಡುಕಿ ಬರುತ್ತದೆ ಕೇಶವ ಕೋಟೇಶ್ವರ ಅವರನ್ನು.
ಸಮಾಜ ಸುಧಾರಕ, ಕಲಾ ಪೋಷಕ, ಸಮಾಜ ರತ್ನ ಹೀಗೆ ಸಾಗುತ್ತದೆ ಪುರಸ್ಕಾರಗಳ ಪಟ್ಟಿ. ಅದಕ್ಕೆ ಹೆಳಿದ್ದು ಮಾಡೋಕೆಲಸವನ್ನು ನಿಷ್ಠೆಯಿಂದ ಮಾಡುತ್ತಾ ಹೋದರೆ ಸಮಾಜ ಅವರನ್ನು ಗುರತಿಸುತ್ತದೆ. ಒಳ್ಳೆ ಕೆಲಸ ಮಾಡೋರನ್ನು ಸಮಾಜ ಮರೆಯೋದಿಲ್ಲ. ಕೇಶವ ಕೋಟೇಶ್ವರ ಅವರಿಂದ ಇನ್ನಷ್ಟು ಸಮಾಜಕಿ ಕೆಲಸಗಳು ಆಗಲಿ.ಜೈ..ಹೋ...
-ಶ್ರೀಪತಿ ಹೆಗಡೆ ಹಕ್ಲಾಡಿ
ವೈವಿಧ್ಯ
ಉತ್ಥಿಥ ಪಾರ್ಶ್ವ ಕೋಣಾಸನ
ಈ ಭಂಗಿಯು ದೇಹವನ್ನು ಪಾರ್ಶ್ವವಾಗಿ ಬಾಗಿಸುವ ಆಸನವಾಗಿದೆ.
ಅಭ್ಯಾಸ ಕ್ರಮ
ಪ್ರಥಮವಾಗಿ ತಾಡಾಸನ ಭಂಗಿಯಲ್ಲಿ ನಿಲ್ಲಬೇಕು. ಆಮೇಲೆ ಕಾಲುಗಳನ್ನು ನಾಲ್ಕು ನಾಲ್ಕುವರೆ ಅಡಿಗಳಷ್ಟು ಅಗಲಿಸಬೇಕು. ಈಗ ಕೈಗಳು ನೇರವಾಗಿರಬೇಕು. ಆಮೇಲೆ ಬಲಕಾಲನ್ನು ಬಲಬದಿಗೆ ತ್ತೊಂಬತ್ತು ಡಿಗ್ರಿಗಳಷ್ಟು ತಿರುಗಿಸಬೇಕು. ನಂತರ ಉಸಿರನ್ನು ಬಿಡುತ್ತಾ ಬಲ ಮಂಡಿಯನ್ನು ಮುಂದಕ್ಕೆ ಬಾಗಿಸಬೇಕು. ಈ ಕಾಲುಗಳ ಆಕಾರ ತ್ತೊಂಬತ್ತು ಡಿಗ್ರಿಗಳಷ್ಟು ಇರಬೇಕು. ಅನಂತರ ಬಲಕೈಯನ್ನು ಬಲಕಾಲಿನ ಕಿರುಬೆರಳಿನ ಪಕ್ಕದಲ್ಲಿ ಊರಿಡಬೇಕು. ಎಡಕೈಯನ್ನು ಎಡ ಕಿವಿಯ ಮೇಲೆ ತಂದು, ಆಮೇಲೆ ಗಲ್ಲವನ್ನು ಎಡ ಕೈಯ ಬಳಿ ತಿರುಗಿಸಬೇಕು. 20 ಸೆಕೆಂಡು ಸಮ ಉಸಿರಾಟ. ಹೀಗೆಯೇ ಎಡ ಬದಿಯಲ್ಲಿ ಅಭ್ಯಸಿಸಬೇಕು. ಅನಂತರ ವಿಶ್ರಾಂತಿ.
ಉಪಯೋಗಗಳು
ಈ ಆಸನವನ್ನು ಮಾಡುವುದರಿಂದ ಕಾಲಿನ ನರಗಳ ಸೆಳೆತ, ಮಂಡಿನೋವು ಹಾಗೂ ವಾತ ಇತ್ಯಾದಿಗಳು ನಿವಾರಣೆಯಾಗುತ್ತದೆ. ಈ ಆಸನವು ಮಲಬದ್ಧತೆಯ ನಿವಾರಣೆಗೆ ತುಂಬಾ ಸಹಕಾರಿಯಾಗುತ್ತದೆ. ಜೀರ್ಣ ಶಕ್ತಿಯು ಹೆಚ್ಚುತ್ತದೆ.
- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ,
ಈ ಕನಸು ಎಸ್ಕ್ಲೂಸಿವ್
ಸತ್ಯ ಸಮಾಧಿಯಾಗಿದೆ!... ಪ್ರಾಮಾಣಿಕ ಮಾಧ್ಯಮಗಳು, ಸಾಯೀ ಬಾಬಾ ಅವರ ನೈಜ ಭಕ್ತರು ಸಮಾಧಿಯಾಗಿರುವ ಸತ್ಯವನ್ನು ಸಮಾಜದೆದುರು ಬಹಿರಂಗಪಡಿಸಬೇಕಾಗಿದೆ. ಸತ್ಯಕ್ಕೆ ಸಾವಿಲ್ಲ ಎಂಬುದನ್ನು ಸಾಬೀತುಪಡಿಸಬೇಕಾಗಿದೆ. ಹಾಗಾದಲ್ಲಿ ಮಾತ್ರ ಸಮಾಧಿಯಾಗಿರುವ ಸತ್ಯ ಸಮಾಜದೆದುರು ಅನಾವರಣಗೊಳ್ಳಲು ಸಾಧ್ಯ... ಅದುವೇ "ಸತ್ಯ ಸಮಾಧಿ"
ಸಾಯೀ ಬಾಬಾ...ಕೋಟ್ಯಾಂತರ ಭಕ್ತರ ಜೀವಂತ ದೇವರು. ಅವರು ಪವಾಡ ಮಾಡಲಿ, ಅಥವಾ ಪವಾಡ ಪುರುಷ ಎಂದುಕೊಳ್ಳಲಿ; ಅವತಾರ ಪುರುಷ ಹೇಳಿಕೊಳ್ಳಲಿ...ದೇವ ಮಾನವ ಎಂದೇ ಕರೆಯಿಸಿಕೊಳ್ಳಲಿ...ಅದೇನೇ ಇರಲಿ...ಆದರೆ ಸಾಯೀ ಬಾಬಾ ಓರ್ವ ಸಾಧಕ...ಎಂಬುದಂತೂ ಸತ್ಯ. ಕೋಟ್ಯಾಂತರ ಜೀವಗಳಿಗೆ ಸಾಂತ್ವನ ನೀಡದವರು. ಲಕ್ಷಾಂತರ ಮನೆ - ಮನಸ್ಸು ಬೆಳಗಿಸಿದವರು; ಜೀವಕೋಟಿಗೆ ಆಸರೆಯಾದವರು; ಅಶಕ್ತರ ಪಾಲಿಗೆ ಕೈ ಹಿಡಿದು ನಡೆಸಿದ ಓವ ಜೀವಂತ ದೇವರಾಗಿ ಗೋಚರಿಸಿದವರು; ಲಕ್ಷಾಂತರ ಮಂದಿಗೆ ವಿದ್ಯಾದಾನ ಮಾಡಿದವರು; ಬರಡು ಭೂಮಿಯಲ್ಲಿ ಜೀವಜಲ ಹರಿಸಿದವರು; ಸಹಸ್ರ ಸಹಸ್ರ ಸಂಖ್ಯೆಯ ನಿರುದ್ಯೋಗಿಗಳಿಗೆ ಉದ್ಯೋಗಕ್ಕಾಸರೆಯಾದವರು...!!!...ಒಂದೇ ...ಎರಡೇ...ಬಾಬಾ ಅವರು ಮಾಡಿದ ಮಹತ್ಕಾರ್ಯಗಳು ಅಗಣಿತ...ಆ ಕಾರಣಕ್ಕೆ ಅವರು ದೇವ ಮಾನವ ಎನಿಸಿದರು...ಆ ಕಾರಣಕ್ಕೆ ಅವರು ಪೂಜ್ಯನೀಯ ಎಂದೆನಿಸಿಕೊಂಡರು...ಆ ಕಾರಣಕ್ಕೆ ಅವರೋರ್ವ ಮಹಾನ್ ವ್ಯಕ್ತಿ...ಶಕ್ತಿ ಎಂದೆನಿಸಿಕೊಂಡವರು...
ಆದರೆ...
ಹೌದು... ಬಾಬಾ ಇನ್ನಿಲ್ಲ... ಈ ಸುದ್ದಿ ನಿಜಕ್ಕೂ ಒಂದು ಶಾಕ್
ಅರಗಿಸಿಕೊಳ್ಳಲಾಗದ ಒಂದು ವೇದನೆ...
ಪ್ರತ್ಯಕ್ಷ...ಪರೋಕ್ಷವಾಗಿ ಬಾಬಾ ಅವರ ಒಂದಿಲ್ಲೊಂದು ಪ್ರಯೋಜನ ಪಡೆದ ಪ್ರತಿಯೊಬ್ಬರಿಗೂ ಇದು ನಿಜಾರ್ಥದಲ್ಲಿ ವೇದನೆಯ ಸಂಗತಿ...
ಪ್ರಶ್ನೆ - 1
ಬಾಬಾ ಅವರ ನಿಧನದ ವಾರ್ತೆ ಭಾನುವಾರ ಬೆಳಗ್ಗೆ ಮಾಧ್ಯಮಗಳಲ್ಲಿ ಭಿತ್ತರಗೊಂಡಿತು." ಬಾಬಾ 7.40ಕ್ಕೆ ವಿಧಿವಶರಾದರು". ಇದು ಸಾಯೀ ಟ್ರಸ್ಟ್ ನ ಅಧಿಕೃತ ಹೇಳಿಕೆ ಎಂದು ಮಾಧ್ಯಮಗಳು ಬಹಿರಂಗಪಡಿಸಿದವು. ಆದರೆ ಬಾಬಾ ಅವರ ಆರೋಗ್ಯ ಹಾಗೂ ಇತರೆ ಬಾಬಾ ಸಂಬಂಧೀ ವಿಚಾರಗಳನ್ನು ಪ್ರಸ್ತುತ ಪಡಿಸುವ ವೆಬ್ ಸೈಟ್ ಒಂದು ಇದಕ್ಕೂ ಮೊದಲೇ "11 ಗಂಟೆಗೆ ವಿಶೇಷ ಸುದ್ದಿಗಾಗಿ ನಿರೀಕ್ಷಿಸಿರಿ" ಎಂಬ ಸುದ್ದಿಯನ್ನು ಪ್ರಕಟಿಸಿತ್ತು. ನಿರಂತರ ಬಾಬಾ ಅವರ ಆರೋಗ್ಯ, ವೈದ್ಯಕೀಯ ರಿಪೋರ್ಟ್ ಗಳನ್ನೊಳಗೊಂಡಂತೆ ಬಾಬಾ ಅವರ ಹಂತ ಹಂತದ ಸುದ್ದಿ ಭಿತ್ತರಿಸುವ ಈ ವೆಬ್ ಈ ರೀತಿ ಸುದ್ದಿ ನೀಡುವುದಕ್ಕೆ ಕಾರಣವೇನು...?
ಪ್ರಶ್ನೆ - 2
ಬಾಬಾ ಅವರು ನಿಧನರಾದರು ಎಂಬ ಅಧಿಕೃತ ಘೋಷಣೆ 7.40ಕ್ಕೆ ಮಾಡಿದ ಸಾಯಿ ಟ್ರಸ್ಟ್ ಹಾಗೂ ಅಧಿಕಾರಿಗಳು, ವೈದ್ಯರು ಬಾಬಾ ಅವರ ಪಾರ್ಥಿವ ಶರೀರವನ್ನು ಸಂಪೂರ್ಣ ಬಟ್ಟೆಯಲ್ಲಿ ಮುಚ್ಚಿ ಎರಡು ಕಣ್ಣುಗಳನ್ನಷ್ಟೇ ಕಾಣುವಂತೆ ತೂತು ಮಾಡಿದ್ದು ಯಾಕಾಗಿ? ಸಂಜೆಯ ತನಕವೂ ಅದೇ ರೀತಿ ಇರಿಸಿರುವುದರ ಹಿಂದಿನ ರಹಸ್ಯವಾದರೂ ಏನು?
ಪ್ರಶ್ನೆ - 3
ಸಾಯೀ ಬಾಬಾ ಅವರು ನಿಧನರಾದ ಕೆಲವೇ ಹೊತ್ತಲ್ಲಿ ಸಾಯೀ ಬಾಬಾ ಅವರ ಪ್ರತಿಯೊಂದು ಕಾರ್ಯಕ್ರಮಗಳಲ್ಲೂ ಕಾಣಸಿಗುವ ಲಾಂಛನ ಹೊಂದಿದ ಶವ ಪೆಟ್ಟಿಗೆ ಸಿದ್ಧಗೊಂಡದ್ದು ಹೇಗೆ. ಗಾಜಿನ ಹವಾನಿಯಂತ್ರಿತ ವ್ಯವಸ್ಥೆಯುಳ್ಳ ಆ ಪೆಟ್ಟಿಗೆ ಲಾಂಛನ ಹೊಂದಿ ಆ ಕ್ಷಣದಲ್ಲಿ (ಕೆಲವೇ ಗಂಟೆಗಳಲ್ಲೂ) ತಯಾರಾಗಲು ಅಸಾಧ್ಯ...? ಆದರೆ ಅದು ಆಗಿದ್ದು ಹೇಗೆ...?
ಪ್ರಶ್ನೆ - 4
ಸಾಯೀ ಬಾಬಾ ಅವರು ಚಿಕಿತ್ಸೆ ಪಡೆಯುತ್ತಿದ್ದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸಾಯೀ ಬಂಧುಗಳಿಗಾಗಲೀ , ಭಕ್ತರಿಗಾಗಲೀ ಪ್ರವೇಶ ನಿರ್ಭಂಧಿಸಿದ್ದು ಯಾಕಾಗಿ. ಕೊನೇ ಪಕ್ಷ ಸಾಯೀ ಬಂಧುಗಳನ್ನಾದರೂ ಅಲ್ಲಿಗೆ ಪ್ರವೇಶಕ್ಕೆ ಅವಕಾಶ ನೀಡಬಹುದಿತ್ತಲ್ಲಾ...?
ಪ್ರಶ್ನೆ - 5
ಸಾಯೀ ಬಾಬಾ ಅವರು ಚಿಕಿತ್ಸೆ ಪಡೆಯುವ ಆಸ್ಪತ್ರೆಯ ಹೊರಭಾಗದಲ್ಲಿ;ಸ್ಥಳೀಯವಾಗಿ , ಅಧಿಕೃತ ಪ್ರಕಟಣೆಗಳಲ್ಲಿ "ಸಾಯೀ ಬಾಬಾ ಅವರು ದೇಹತ್ಯಾಗ ಮಾಡಿದರೂ ಅವರ ಆತ್ಮ ಇಲ್ಲೇ ಇರುತ್ತದೆ" ಎಂಬುದಾಗಿ ಅವರು ಆಸ್ಪತ್ರೆ ಸೇರಿದಾಗಿಂದಲೂ ಪ್ರಕಟಿಸುತ್ತಾ ಬಂದಂತಹ ಕಾರಣವಾದರೂ ಏನು?
ಸಾಯೀ ಬಾಬಾ ಅವರ ಪಾರ್ಥಿವ ಶರೀರವನ್ನು ಇರಿಸಿದ ಶವಪೆಟ್ಟಿಗೆ ಹವಾನಿಯಂತ್ರಿತ ವ್ಯವಸ್ಥೆಯನ್ನೊಳಗೊಂಡ ವಿ.ಐ.ಪಿ ಪೆಟ್ಟಿಗೆಯಾಗಿತ್ತು. ಅದನ್ನು ಕುಮಾರ್ ಎಂಡ್ ಕೋ ಕಂಪೆನಿ ತಯಾರಿಸಿದೆ ಎಂಬುದು ದೃಢಪಟ್ಟಿದೆ. ಇದು ಈಗಾಗಲೇ ಮಾಧ್ಯಮಗಳಲ್ಲಿ ತೀವ್ರ ಚರ್ಚೆಗೆ ಪಾತ್ರವಾಗಿದೆ. ಸಂಸ್ಥೆಯ ಮುಖ್ಯಸ್ಥರು ಹೇಳುವ ಪ್ರಕಾರ ಎರಡು ತಿಂಗಳ ಹಿಂದೆ ಖರೀದಿ ನಡೆದಿತ್ತು ಎಂಬುದಾಗಿ. ಅಂತೂ ಆ ಸಂದರ್ಭದಲ್ಲೇ ಸಾಯೀ ಬಾಬಾ ಸಾಯುತ್ತಿದ್ದಾರೆ ಎಂಬ ಮಾಹಿತಿ ಶವಪೆಟ್ಟಿಗೆ ಖರೀದಿಸಿದವರಿಗೆ ತಿಳಿದಿತ್ತು ಎಂಬುದಂತೂ ಸತ್ಯ. ಅಥವಾ ಖರೀದಿಗೆ ಮುತುವರ್ಜಿ ತೋರಿಸಿದವರಿಗೆ ಈ ಸೂಚನೆ ಲಭ್ಯವಾಗಿತ್ತು.
ಇನ್ನು... ಸತ್ಯ ಸಾಯೀ ಬಾಬಾ ಅವರ ಭಕ್ತರು ವಿದೇಶಗಳಲ್ಲೂ ನೆಲೆಸಿದ್ದು, ನೂರಕ್ಕೂ ಹೆಚ್ಚು ಕೇಂದ್ರಗಳು ಕಾರ್ಯಾಚರಿಸುತ್ತಿವೆ.ಕೋಟ್ಯಾಂತರ ಮೌಲ್ಯದ ಆಸ್ತಿ ಈ ಸಂಸ್ಥೆಗಿದೆ. ಇದನ್ನು ಲೂಟಿ ಹೊಡೆಯುವ ಉದ್ದೇಶ ಸಂಸ್ಥೆಯ ಒಳಹೊರಗಿದ್ದವರದ್ದಾಗಿತ್ತು. ಈ ಕಾರಣಕ್ಕೆ ಸಾಯೀ ಬಾಬಾ ಅವರನ್ನು "ಪಂಚಭೂತಗಳಲ್ಲಿ ಲೀನ"ಗೊಳಿಸುವ ಕಾರ್ಯ ನಡೆಸಲಾಗಿದೆ!
ಏನೇ ಆಗಲಿ ಸತ್ಯ ಸಾಯೀ ಬಾಬಾ ಅವರು ಸಾವನ್ನಪ್ಪಿದ್ದಾರೆ. ದೈವಾಧೀನರಾಗಿದ್ದಾರೆ... ಬುಧವಾರ ಸತ್ಯಸಾಯೀ ಬಾಬಾ ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರವೂ ನಡೆದೇ ಹೋಯಿತು. ಸತ್ಯಸಾಯೀ ಬಾಬಾ ಅವರು ಸಮಾಧಿಯಾದರು...ಜೊತೆಗೆ ಹಲವಾರು ಸತ್ಯಗಳನ್ನು ತನ್ನೊಳಗೆ ಇರಿಸಿಕೊಂಡು...
ಸತ್ಯಸಾಯೀ ಬಾಬಾ ಅವರು ಆದರ್ಶ ಪುರುಷರು. ಅವರ ಸಾಧನೆ, ಸಾಹಸಗಳಿಗೆ ನಾವೆಲ್ಲರೂ ತಲೆಬಾಗಲೇ ಬೇಕು.ಆದರೆ ಅವರ ಸಾವು ಮಾತ್ರ ಖೇದಕರ. ಅವರು ಸಾವು ನೈಜ ಸಾವೇ...ಅವರ ಸಾವಿನೊಂದಿಗೆ ಹಲವಾರು ಸಂದೇಹಗಳು ಹುಟ್ಟಿಕೊಂಡಿವೆ. ಈ ಸಂದೇಹಗಳಿಗೆ ಒಂದು ತೆರೆಯೆಳಬೇಕು.ಅದಾಗ ಬೇಕಾದರೆ ಸತ್ಯದ ಅನಾವರಣವಾಗಬೇಕು. ಇದು ಆದಷ್ಟು ಶೀಘ್ರ ಆಗಬೇಕಾಗಿದೆ.
- ವರ್ಷ
ಇದು ಈ ಕನಸು ಸ್ಪೆಷಲ್....
ಕರ್ನಾಟಕ ಟೂರಿಸಂ...ಇದು ನೆನೆಗುದಿಗೆ ಬಿದ್ದಿದೆ...ಎತ್ತೋರು ಯಾರೂ ಇಲ್ಲ...!. ಟೂರಿಸಂ ಅಭಿವೃದ್ಧಿ ಕಡತದಲ್ಲಷ್ಟೇ ಬಾಕಿ... ಈ ಕನಸು.ಕಾಂ ಸ್ಪೆಷಲ್ ಸ್ಟೋರಿ...
Video
