ವಿಚಾರ
ತಪ್ಪಿನ ಅನುಭವವೇ ನಮ್ಮ ಮುಂದಿನ ಬೆಳವಣೆಗೆಗೆ ನಾಂದಿ
ನಾವು ತಪ್ಪು ಮಾಡುವುದು ಸಹಜ. ಆದರೆ ಅದನ್ನು ತಿದ್ದುಕೊಂಡು ಮುಂದೆ ಸಾಗುವವನೇ ಮನುಜ. ಕೆಲವರು ಭವಿಷ್ಯತ್ ಕಾಲ ಮರೆತು,ವರ್ತಮಾನ ಕಾಲವನ್ನು ಪ್ರೀತಿಸದೆ, ಭೂತ ಕಾಲದಲ್ಲೇ ಬದುಕುತ್ತಿರುತ್ತಾರೆ. ತನ್ನ ಒಂದೇ ಒಂದು ಸೋಲಿನ ಕಹಿ ಅನುಭವದಲ್ಲೇ ವರ್ಷಗಳನ್ನು ಕಳೆದು ಬಿಡುತ್ತಾರೆ.
ನಿಮಗೊಂದು ನನ್ನ ಪ್ರಶ್ನೆ: ನಿಜವಾಗಲು "ತಪ್ಪು" ಎಂಬ ವಸ್ತು ಇದೆಯೇ? ಮೊದಲನೆಯದಾಗಿ, ಯಾರೂ ಬೇಕು ಬೇಕಂತ ಸೋಲನ್ನು ಅನುಭವಿಸಲು ಅಥವಾ ತಪ್ಪು ಮಾಡಲು ಇಷ್ಟ ಪಡುವುದಿಲ್ಲ. ಪ್ರತಿ ದಿನ ಬೆಳಗ್ಗೆ ಎದ್ದು, ನಮ್ಮ ಸಕಲ ಸಾಮಥ್ರ್ಯದೊಂದಿಗೆ ನಾವು ಹೊರ ಪ್ರಪಂಚಕ್ಕೆ ಕಾಲಿಡುತ್ತೇವೆ. ಅಲ್ಲವೇ...?
ಇನ್ನೂ ಮುಖ್ಯವಾಗಿ, ನಮ್ಮಿಂದ ಆಗುವ ಪ್ರತಿಯೊಂದು ತಪ್ಪು ತಪ್ಪಲ್ಲ, ಅದು ಅನುಭವ ಪಡೆಯುವ ಒಂದು ಉನ್ನತ ಮೂಲ. ತಪ್ಪುಗಳು ನಮ್ಮನ್ನು ಜಾಗೃತಪಡಿಸಲು, ವಿಷಯಗಳನ್ನು ಮತ್ತು ಸನ್ನಿವೇಶಗಳನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತವೆ. ಒಮ್ಮೆ ನಮಗೆ ಅದರ ಅನುಭವ ಆದರೆ ಪುನಃ ನಾವು ಆ ಕೆಲಸವನ್ನು ಮಾಡಲು ಹೋಗುವುದಿಲ್ಲ. ಹೋದರೂ, ಜಯಶೀಲರಾಗಲು ಅತ್ಯಂತ ಜಾಗರೂಕತೆಯಿಂದ ಆ ಕೆಲಸವನ್ನು ಮಾಡುತ್ತೇವೆ. ಆ ಕೆಲಸವನ್ನು ಇನ್ನೂ ಉತ್ತಮವಾಗಿ ಮಾಡಲು ಪ್ರಯತ್ನಿಸುತ್ತೇವೆ.
ನಾವು ನಮ್ಮ ತಪ್ಪನ್ನು ಅರಿತು, ಅದರಿಂದ ಮುಂದಿನ ದಿನಗಳಲ್ಲಿ ಲಾಭ ಪಡೆದರೆ ಆ ತಪ್ಪು ತಪ್ಪೇ ಅಲ್ಲ. ಏಕೆಂದರೆ ಆ ತಪ್ಪಿನ ಅನುಭವವೇ ನಮ್ಮ ಮುಂದಿನ ಬೆಳವಣೆಗೆಗೆ ನಾಂದಿ. "ತಪ್ಪುಗಳನ್ನು" ನಮ್ಮ ಬೆಳವಣಿಗೆಯ ಪಾಠಗಳು ಎಂದು ತಿಳಿದುಕೊಳ್ಳಬೇಕು. ಅನುಭವ ಆದಷ್ಟು ವ್ಯಕ್ತಿ ಮುಂದಿನ ಜೀವನದಲ್ಲಿ ಗೆಲ್ಲುತ್ತಾ ಹೋಗುತ್ತಾನೆ. ನನ್ನಿಂದ ಏನು ಮಾಡಿದರೂ ತಪ್ಪು ನಡೆದು ಹೋಗುತ್ತದೆಂದು ಕಾಲಾಹರಣ ಮಾಡುತ್ತಾ ಕುಳಿತರೆ ನಿಮ್ಮಿಂದ ಏನು ಮಾಡಲು ಸಾಧ್ಯವಾಗುವುದಿಲ್ಲ. ಧೈರ್ಯದಿಂದ ಮುನ್ನುಗ್ಗಬೇಕು. ತಪ್ಪಾದರೆ ಆಗಲಿ. ಅದನ್ನು ತಿದ್ದುಕೊಳ್ಳೋಣ. ಮುಂದೆ ಆ ತಪ್ಪು ಆಗದ ಹಾಗೆ ನಡೆದು ಕೊಳ್ಳೋಣ ಅಲ್ಲವೇ...?
ಮೇಷ್ಟ್ರು ಮೊದಲನೆ ದಿನ ಪಾಠ ಮಾಡಿದಾಗ ಹೇಗಿರುತ್ತಾರೆ...? ಅನುಭವ ಆದ ಮೇಲೆ ಹೇಗಿರುತ್ತಾರೆ...? ನೀವು ಇದನ್ನು ಗಮನಿಸಿರಬಹುದು....! ಇದು ಕೇವಲ ಒಂದು ಉದಾಹರಣೆ ಇಂತಹ ಹಲವಾರು ಉದಾಹರಣೆಗಳು ನಿಮ್ಮ ಕಣ್ಮುಂದೆ ನಡೆದಿರಬಹುದು....
- ಜಬೀವುಲ್ಲಾ ಖಾನ್
ಈ ಕನಸು ಅವಾರ್ಡ್
ನನ್ನ ಬದುಕಲ್ಲಿ ಬಂದೆ
ನೀ ಮಂದ ಮಾರುತದಂತೆ,
ಮನ ಪ್ರವೇಶಿಸುವಾಗ ನಿನಗಿರಲಿಲ್ಲ
ಜಗದ ಅಳಕು...
ಪ್ರೀತಿ ಮಾಡುವಾಗ ಯಾರಲ್ಲೂ
ಕೇಳದವ ಬದುಕು ಅನ್ನುವ
ಮೂರುರಕ್ಷರ ಬಂದಾಗ
ಆಕೆಯ ಚರಿತ್ರೆಯೇನು ಎಂದು ಕೇಳುತ್ತಿರುವೆಯಲ್ಲಾ...
ಇನ್ನೂ ಏನೂ ಬರೆಯದ ಸ್ವಚ್ಚ
ಸುಂದರ ಹಾಳೆ ನನ್ನ ಮನಸ್ಸು
ಗೀಚಬೇಡವೋ
ನಿನ್ನ ಮನದಾಸೆಗಳನ್ನ
ಶುಭ್ರ ಹಾಳೆ ಕೊಳಕಾಗುವುದು,
ನೈಜತೆಯಲ್ಲಿಯೇ
ಅರಳಿದ ಈ ಹೂವಿಗೆ
ನಿನ್ನ ಕಪಟ ಪ್ರೀತಿಯ
ಅರಿವಾಗಲೇ ಇಲ್ಲ
ನಿಜವೆಂದೆ ನಂಬಿತು,
ಬಾಡಿಹೋದ ಹೂವು
ಮತ್ತೆ ಅರಳದು.
ನೀನು ತಿಳಿದಂತೆ
ಜನರಾಡೋ
ಹರಟೆಯ ಕಟ್ಟೆಯಂತೂ
ಅಲ್ಲ ನನ್ನ ಮನಸ್ಸು.....
ಏನೂ ತಪ್ಪು ಮಾಡದ ಮುಗ್ಧ
ಮನಸ್ಸಿಗೆ ಹೇಳದೇ-ಕೇಳದೇ
ಎದ್ದು ಹೋದೆಯಲ್ಲಾ
ಕಾರಣವೇನು..... ?
-ಮಲ್ಲಿಕಾಭಟ್ ಪರಪ್ಪಾಡಿ
ರಾಜ್ಯ - ರಾಷ್ಟ್ರ
ಜು.1 ರಂದು ಮನೆಯಲ್ಲಿಯೇ ಪ್ರದಾನ
ಕಾರ್ಕಳ: ತಮ್ಮ ವಿಶಿಷ್ಟವಾದ ವ್ಯಕ್ತಿತ್ವದಿಂದ ಗಮನ ಸೆಳೆಯುವ ಮತ್ತು ಸದಾ ಓದುಗರನ್ನು ಸೃಷ್ಟಿಸುವ ಕಾರ್ಯ ಮಾಡುತ್ತಿರುವ ಹಾಸ್ಯ ಸಾಹಿತಿ ಕು.ಗೋ ಅವರಿಗೆ ಪತ್ರಕರ್ತರ ವೇದಿಕೆ ಬೆಂಗಳೂರು ಇದರ ಉಡುಪಿ ಜಿಲ್ಲಾ ಘಟಕವು ಮೂಡುಬಿದಿರೆಯ ಶ್ರೀ ಸ್ಕೂಲ್ ಆಫ್ ಜರ್ನಲಿಸಮ್ ಜೊತೆಗೆ ಪತ್ರಿಕೋದ್ಯಮ ದಿನಾಚರಣೆಯ ಗೌರವ ನೀಡಲಿದೆ.ಸಾಹಿತಿ ಹಿರಿಯ ಪತ್ರಕರ್ತ ಡಾ. ರಾಘವ ನಂಬಿಯಾರ್ ಅವರು ಈ ಗೌರವವನ್ನು ಪ್ರದಾನಿಸಲಿರುವರು. ಹಿರಿಯರೆಡೆಗೆ ನಮ್ಮ ನಡಿಗೆ ಎಂಬ ಧ್ಯೇಯದೊಂದಿಗೆ ವೇದಿಕೆ ಅಂಬಾತನಯ ಮುದ್ರಾಡಿ, ವಿದ್ವಾನ್ ಚಂದ್ರಯ್ಯ, ಉಮೇಶ್ ರಾವ್ ಎಕ್ಕಾರು ಮೊದಲಾದವರನ್ನು ಹಿಂದಿನ ವರ್ಷಗಳಲ್ಲಿ ದಿನಾಚರಣೆಯ ಗೌರವವಿತ್ತು ಅವರವರ ನಿವಾಸದಲ್ಲಿಸನ್ಮಾನಿಸಿದೆ.
ಎಚ್. ಗೋಪಾಲ ಭಟ್ಟ ಕು.ಗೋ ಅವರ ಪೂರ್ಣ ಹೆಸರಾಗಿದ್ದು ಉಡುಪಿಯ ಸುಹಾಸಂ ಹಾಸ್ಯ ಸಂಘಟನೆಯ ಸ್ಥಾಪಕರಾಗಿದ್ದಾರೆ.
ಹೊಸ ಪುಸ್ತಕಗಳಿಗೆ, ನವೋದಿತ ಲೇಖಕರಿಗೆ ಸಾಕಷ್ಟು ಪ್ರೋತ್ಸಾಹ ನೀಡುತ್ತಾ ಬಂದಿರುವ ಇವರ ಬರಹಗಳು ನಾಡಿನ ಬಹುತೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಆಯ್ದ ಬರಹಗಳು, ಆಯ್ದ ಕತೆಗಳು, ಆಯ್ದ ಲಲಿತ ಪ್ರಬಂಧಗಳು, ಅಕ್ಕನ ಮದುವೆ,ಶನಿ ಹಿಡಿದವ, ಎತ್ತಣಿಂದೆತ್ತ,,ತೇಲ್ನೋಟ, ಲೊಳಲೊಲಾಯಿ, ಪಟಪಟಾಕಿ ಮೊದಲಾದ ಕೃತಿಗಳು ಪ್ರಕಟವಾಗಿವೆ.
ಗೋರೂರು ಸಾಹಿತ್ಯ ಪ್ರಶಸ್ತಿ,ಪರಮಾನಂದ ಪ್ರಶಸ್ತಿ,ದೆಹಲಿ ಕನ್ನಡಿಗ ಪ್ರಶಸ್ತಿ, ಉಗ್ರಾಣ ಪ್ರಶಸ್ತಿ,ಸುಮಸೌರಭ ಪ್ರಶಸ್ತಿ,ಅಪರಂಜಿ ಟ್ರಸ್ಟ್ ಪ್ರಶಸ್ತಿ, ರಜತ ಪುಸ್ತಕ ಪ್ರಶಸ್ತಿ,ಹಾಸ್ಯ ಲೋಕ ಪ್ರಶಸ್ತಿ ಹೀಗೆ ಐವತ್ತಕ್ಕೂ ಹೆಚ್ಚಿನ ಸನ್ಮಾನ ಗೌರವಗಳನ್ನು ಅವರು ಪಡೆದಿದ್ದಾರೆ.
ಮಣಿಪಾಲ ಬಳಿಯ ಹೆರ್ಗದಲ್ಲಿ ಜನಿಸಿದ 74 ಹರೆಯದ ಕು.ಗೋ ಅವರ ಜೀವನೋತ್ಸಾಹ ಇತರರಿಗೆ ಮಾದರಿಯಾಗಿದೆ. ಜೀವ ವಿಮಾ ನಿಗಮದಲ್ಲಿ ಉದ್ಯೋಗಿಯಾಗಿದ್ದ ಅವರು ಸ್ವಯಂ ನಿವೃತ್ತಿ ಪಡೆದು ಸಾಹಿತ್ಯ ರಚನೆ ಮತ್ತು ಪರಿಚಾರಿಕೆಗೆ ತಮ್ಮನ್ನು ಸಮಪರ್ಿಸಿ ಕೊಂಡರು.
ನಡುಮನೆ ಕಾರ್ಯಕ್ರಮ, ಪುಸ್ತಕ ಬಿಡುಗಡೆ, ಉಪನ್ಯಾಸ,ಹಾಸ್ಯ ಭಾಷಣ,ಚುಟುಕು ಗೋಷ್ಟಿ ಸನ್ಮಾನ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಸಂಘಟಿಸಿದ್ದಾರೆ.
ಹೊಸ ಪುಸ್ತಕಗಳಿಗೆ ಪ್ರಚಾರ, ಪ್ರಕಟಣೆಗಳಿಗೆ ಬೆಂಬಲ ಕೊಡುತ್ತಾರೆ. ನಿವೃತ್ತಿಯ ನಂತರ ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಕು.ಗೋ ಇತರರನ್ನು ನಗಿಸುವುದು, ನಗುವುದನ್ನು ಜೀವನದ ಧ್ಯೇಯ ಎಂದು ಪಾಲಿಸುತ್ತಾ ಬಂದಿದ್ದಾರೆ. ಅವರ ದೊಡ್ಡ ಚೀಲದಲ್ಲಿ ಹತ್ತಾರು ಪುಸ್ತಕಗಳಿತ್ತವೆ.ಸಿಕ್ಕವರಿಗೆಲ್ಲಾ ಪುಸ್ತಕ ಕೊಡುತ್ತಾರೆ. ಹಣ ಕೊಟ್ಟರೂ ಆಯಿತು,ಬಿಟ್ಟರೂ ಆಯಿತು.ಕನ್ನಡದ ಪುಸ್ತಕ ಓದಿಸಿದ ಖುಷಿಯೇ ಅವರಿಗೆ ಸಂದ ಹಣ. ಯಾವುದೇ ಕಾರ್ಯಕ್ರಮವಿರಲಿ ಕು.ಗೋ ಲವಲವಿಕೆಯಿಂದ ಯುವಕರನ್ನು ನಾಚಿಸುವಂತೆ ಓಡಾಡುತ್ತಾರೆ.
ವೈವಿಧ್ಯ
“ಪ.ಗೋ. ಕಾಲಂ” ಜಗತ್ತಿನಲ್ಲಿ ಪತ್ರಕರ್ತನಿಗೊಂದು “ಸರ್ಟಿಫಿಕೇಟ್”
ಮಂಗಳೂರಿನ ಹಿರಿಯ ಪತ್ರಕರ್ತ ಹಾಗೂ ಅಂಕಣಕಾರ ದಿವಂಗತ ಪದ್ಯಾಣ ಗೋಪಾಲಕೃಷ್ಣ ( ಪ.ಗೋ 1928-1997) ಅವರ ಬಗ್ಗೆ ಮದ್ಯ ಆಫ್ರಿಕಾದ ಕ್ಯಾಮರೂನುನಲ್ಲಿ ಇರುವ ಪ.ಗೋ. ಅಭಿಮಾನಿ ಶ್ರೀಯುತ ರವಿ ಮೂರ್ನಾಡು ಬರೆದ ಲೇಖನ.ಇಂದು ಪತ್ರಿಕಾ ದಿನ (ಜುಲೈ1).ಆ ಸಂದರ್ಭದಲ್ಲಿ ಈಕನಸು ಓದುಗರಿಗಾಗಿ ಈ ವಿಶೇಷ ಲೇಖನ.
ಆಯ್ದುಕೊಂಡ ವೃತ್ತಿ ಮತ್ತು ಅದರೊಳಗಿನ ಚಟುವಟಿಗಳು ನಮ್ಮ ಮುಂದೆ ಕಣ್ಣಿಗೆ ಕಟ್ಟುವಂತಿದೆ ಪದ್ಯಾಣ ಗೋಪಾಲಕೃಷ್ಣರ ಪದಗಳ ಜಗತ್ತು. ಸರಳ ವ್ಯಕ್ತಿತ್ವ- ನೇರ ನಡೆ ಅಂತ ಒಂದು ಮಾತು ಬಂತು. ಅಂದರೆ, ನೀರಿನಂತೆ ಸುಲಲಿತವಾಗಿ ಹರಿಯುವಂತದ್ದು. ನೇರವಾಗಿ ಗೊಂದಲವಿಲ್ಲದ ಮಾತುಗಳ ಸ್ಪರ್ಶ. ಪ.ಗೋ. ಅವರ ಬದುಕಿನಲ್ಲಿಯೂ ಮತ್ತು ಅದಕ್ಕೆ ಸಾಕ್ಷಿಗಳಾಗಿ ಅವರ ಬರಹಗಳು ನಮ್ಮ ಮುಂದಿವೆ. ಅದರಲ್ಲೂ ಅವರ ಮುತ್ಸದ್ಧಿತನದ ಮಾತುಗಳು ಕನ್ನಡ ಸಾಹಿತ್ಯ ಲೋಕ ಕಂಡ ಅದ್ಭುತಗಳಲ್ಲಿ ಒಂದು. ಅದು " ಕಾಲಂ" ಹೆಸರಿನಲ್ಲಿ ಜಗತ್ತನ್ನು ತೆರೆದುಕೊಂಡಿದೆ.
ಪ.ಗೋ. ಜಗತ್ತಿನ ಪದಗಳ ಹಂದರದಲ್ಲಿ ಒಬ್ಬ " ವಿಲನ್" ಸೃಷ್ಠಿಯಾಗುತ್ತಾನೆ . ಅವನನ್ನು ಬುದ್ಧಿವಂತ ಹುಚ್ಚ ಅನ್ನುತ್ತೇವೆ. ಅದು ಕೊಡಿಯಾಲ್ ಬೈಲ್ ನವಭಾರತ ಪತ್ರಿಕೆಯಿದ್ದಾಗ ಪತ್ರಿಕಾ ಪ್ರಸರಣಾ ವಿಭಾಗದ ಮುಖ್ಯಸ್ಥ ಕಾಮತ್. ಅದಕ್ಕೆ ದಿವಂಗತ ಪ.ಗೋ.ರವರು "ಹಿತ್ತಾಳೆ ದೂರುಗಂಟೆ" ಅಂತ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ತಮ್ಮ " ವಿಚಿತ್ರ ಸೃಷ್ಠಿಯ ಲೋಕದಲ್ಲಿ ಮತ್ತು ಅಂಕಣ ಬರಹಗಳು" ಸಂಕಲನದಲ್ಲಿ ಹಿತ್ತಾಳೆ ದೂರುಗಂಟೆಯ ಪಾತ್ರಧಾರಿ ವಿಲಕ್ಷಣವಾಗಿ ಎದ್ದು ನಿಲ್ಲುವಂತದ್ದು. ಹೀಗೂ ಉಂಟೆ...?! ಅನ್ನುವ ಒಂದು ಪ್ರಶ್ನೆ. ಪತ್ರಿಕಾ ಕಾರ್ಯಾಲಯದಲ್ಲಿ ಅಚಾನಕ್ಕಾಗಿ ಸೃಷ್ಠಿಯಾಗುತ್ತವೆ, ಇಲ್ಲದಿದ್ದರೆ ಸೃಷ್ಠಿಸುತ್ತಾರೆ . ಎಲ್ಲಾ ಖಾಸಾಗಿ ಸಂಸ್ಥೆಯಲ್ಲಿ ಇಂತಹ "ಶಕುನಿ"ಗೊಂದು ಹುದ್ದೆ ಉಂಟೇ ಉಂಟು. ಪ.ಗೋ.ರವರು ಮೌನವಾಗಿ ನವಭಾರತ ಕಚೇರಿ ಬಿಟ್ಟು ಹೋದಾಗ, ಕಚೇರಿಯ ಬಾಗಿಲಿಗೆ ತುಕ್ಕು ಹಿಡಿಯಬಾರದಿತ್ತೋ ಆನ್ನಿಸಿತು. ಬದುಕಿನ ಗೋಡೆ ಬಿರುಕಿಟ್ಟ ಸನ್ನಿವೇಶಕ್ಕೆ, ಪತ್ರಿಕಾ ಬದುಕಿಗೆ ಛೀಮಾರಿ ಹಾಕುವಷ್ಟು ವ್ಯಥೆಯಾಗುವಂತದ್ದು.
ಇವತ್ತಿಗೂ ಮಾತಾಡುತ್ತಿದೆ.... ಮನುಷ್ಯ ಬದುಕಿಗೆ ಸವಾಲು ಹಾಕಿದ ಮಾತು. "ನಾನು ಪತ್ರಿಕೆ ಹುಟ್ಟು ಹಾಕುವ ಕನಸು ಕಂಡಿದ್ದು ತಪ್ಪಾಯಿತು..!" ಅಂತ. ಬದುಕಿನ ಸ್ಥಿತ್ಯಂತರದಲ್ಲಿ ಒಮ್ಮೊಮ್ಮೆ ಕನಸುಗಳು ಈಟಿ ಇರಿದಂತೆ ಅಣಕಿಸುತ್ತವೆ. ಮಂಗಳೂರಿನ ಕಡಲ ಮರಳ ಕಣಗಳಿಗೆ ಇದರ ಪರಿಚಯ ಉಂಟು. ಅಲೆಗಳು ದಡಕ್ಕೆ ಬಡಿದು ಎಚ್ಚರಿಸಿ ಹೋಗುತ್ತಿವೆ... ಆ ಒಂದು ಜಗತ್ತಿನ ವಿಸ್ತಾರದಲ್ಲಿ ಜೀವನದ ಸಾರ್ಥಕ್ಯಕ್ಕೆ ಮನಸ್ಸುಗಳು ತೆರೆದುಕೊಳ್ಳಲಿಲ್ಲ . ಪದ್ಯಾಣ ಗೋಪಾಲಕೃಷ್ಣರ ರೆಕ್ಕೆ ಮುರಿದ ಮಾತುಗಳ ಹಕ್ಕಿಯ ಕಲರವ ಕೇಳಿಸುತ್ತಲೇ ಇದೆ.... ಕನಸುಗಳ ಮೂಟೆ ಹೊತ್ತ ದೋಣಿ ಕಡಲ ಮಧ್ಯದಲ್ಲಿ ಈಜುತ್ತಿದೆ....!
" ಪೇಪರ್ ಕೆಲ್ಸ ಅದೇನು ಮಹಾ? ಕಾಸೆಸೆದ್ರೆ ಕೈ ನೆಕ್ಕೋ ನಾಯಿಗಳು ಎಷ್ಟೋ ಸಿಗ್ತಾವೆ" ಅಂತ ಒಂದು ಕಡೆ ಹೇಳುತ್ತಾರೆ. ಮಾತುಗಳು ಪದಗಳಾಗಿ ಮಾತಾಡುವಾಗ ನೈಜವಾದುದು ಅನ್ನಿಸಿತು. ತನ್ನ ಸ್ವಂತಿಕೆ ಬಿಟ್ಟು, ಗುಲಾಮರಾಗುತ್ತಿರುವ ಇಂದಿನ ಸಮಾಜದಲ್ಲಿ, ಗುಲಾಮಗಿರಿಗೆ ಪರೋಕ್ಷವಾಗಿ ಪ.ಗೋ.ರವರು ಎಸೆದ ಬಾಣವಿದು. ಸ್ವಹಿತಾಸಕ್ತಿಗೆ "ತಿಗಣೆ"ಗಳ ಹಾಗೆ ರಕ್ತ ಕುಡಿಯುತ್ತಿರುವ ಸಮಾಜದ ಮುಖವಾಣಿ ಹೊತ್ತ ಘನತೆಯ ಡಂಭರು, ಹೇಗೇ ಹೇಳಿದರೋ ಹಾಗೆ ಸೆರೆಹಿಡಿದು ಬಿಟ್ಟಿದ್ದಾರೆ. ನಾವೆಲ್ಲರೂ ಅಧುನಿಕ ಸಮಾಜದಲ್ಲಿ ವಿದ್ಯಾವಂತೆರೆನ್ನುವ ಶಾಲೆ-ಕಾಲೇಜುಗಳ ಸರ್ಟಿಫಿಕೇಟ್ ಗಿಟ್ಟಿಸಿ ದುಡಿಯುತ್ತಿರುವ ಗುಲಾಮರು. ಅದಕ್ಕೆ ಬ್ರಿಟೀಷರು ಭಾರತ ಬಿಟ್ಟು ಹೋಗುವಾಗ ತರಬೇತಿ ನೀಡಿದ್ದ ಅವರ ನಾಯಿಗಳನ್ನು ವಿವಿಧ ಹಂತದಲ್ಲಿ ಪ.ಗೋ. ತರಾಟೆಗೆ ತೆಗೆದುಕೊಂಡಿದ್ದಾರೆ.
ಕಾಲಂ ಸಾಹಿತ್ಯ ಅನ್ನುವ ಹೊಸ ಒಂದು ಕನ್ನಡದ ಆಯಾಮವನ್ನು ಪ.ಗೋ.ಜಗತ್ತಿನಲ್ಲಿ ಕನ್ನಡ ಸಾಹಿತ್ಯ ನೋಡುತ್ತದೆ. ವಸ್ತುನಿಷ್ಠ ವಿಚಾರವನ್ನು ಹಾಗೇ ಪದಗಳಲ್ಲಿ ಕಟ್ಟಿ ಗಟ್ಟಿಗೊಳಿಸಿದ ಉದಾಹರಣೆಗೆ ಇನ್ನೊಂದು ಇತಿಹಾಸವನ್ನು ನೋಡಿಲ್ಲ. ಅದು ದೇಹವಿಲ್ಲದೆಯೂ ಮಾತಾಡುವಂತದ್ದು. ಕೆಲವೊಂದು ವಿಷಯಗಳು ಪಿಸುಮಾತಾಗಿದ್ದು. ನೇರವಾಗಿ ಜಗತ್ತನ್ನು ತೆರೆದು ಘಟನೆಯನ್ನು ನಿರೂಪಿಸುವ ತಂತ್ರ, ಈಗಿನ ಹಲವರು ಅನುಸರಿಸುತ್ತಿರುವುದಕ್ಕೆ ಸಾಕ್ಷಿಗಳು ಸಿಗುತ್ತವೆ. ಮನುಷ್ಯ ಈ ಜಗತ್ತು ಬಿಟ್ಟು ಹೋಗುವಾಗ ಏನಾದರು ಉಳಿಸಿ ಹೋಗಿದ್ದರೆ ನೆನಪಾಗುತ್ತಾನೆ. ಅದರಲ್ಲೂ ತನ್ನದೇ ಆದ ಸ್ವಂತಿಕೆಯನ್ನು ಇತರರು ಅನುಸರಿಸುವಂತೆ ಮಾಡುವುದು ಇನ್ನೋ ದೊಡ್ಡ ಮಾತು. ಅದಕ್ಕೆ ಮೈಕೆಲ್ ಜಾಕ್ಸನ್ ಉದಾಹರಣೆ. ಅಂದರೆ,ತನ್ನದೇ ಜಗತ್ತಿನ ಒಂದು ಹೆಜ್ಜೆ ಗುರುತನ್ನು ಪ.ಗೋ.ರವರು ಬಿಟ್ಟು ಹೋದರು. ಇಂದಿಗೂ ಅದರ ನಿಜದ ಆಳವನ್ನು ಅಳತೆ ಮಾಡಲಾಗಲಿಲ್ಲ. ಈ ತಲೆಮಾರು, ಮತ್ತೊಂದು ತಲೆಮಾರಿಗೂ... ಪ.ಗೋ. ಕಾಲಂ ಸಾಹಿತ್ಯದ ಮೊನಚು ಜೀವಂತವಾಗಿರುತ್ತದೆ.
ಗಬ್ಬೆದ್ದು ನಾರುತ್ತಿರುವ ಸಮಾಜದ ಕೊಳೆಯನ್ನು ತೊಳೆಯುವ ಪತ್ರಕರ್ತನಿಗೆ ತನ್ನ ಮೈ ಮೇಲಿರುವ ಕೊಳೆಯ ಬಗ್ಗೆ ಅರಿವಿರುವುದಿಲ್ಲ. ಈ ವಾಕ್ಯಕ್ಕೆ ಒಗ್ಗುವ ಪತ್ರಕರ್ತರ ಒಂದು ಗುಂಪು ಉಂಟು. ಅಂದ ಹಾಗೆ ತೊಳೆಯಲು ಸಮಯವೂ ಇರುವುದಿಲ್ಲ. ಈ ವಾಕ್ಯಕ್ಕೂ ಒಗ್ಗುವ ಪತ್ರಕರ್ತರ ಗುಂಪೂ ಉಂಟು. ಅದಕ್ಕೆ ಉದಾಹರಣೆಗೆ ಸಿಗುವವರು ದಿ. ಪ. ಗೋ.ರವರು. ಬದುಕಿನ ಸವಾಲುಗಳನ್ನು ಸ್ವೀಕರಿಸುವುದು ಅಂದರೆ, ಅರ್ಧ ವಯಸ್ಸು ಮುಗಿದಂತೆ. ಒಂದೇ ದಿಕ್ಕಿಗೆ ಛಲ ಬಿಡದ ವಿಕ್ರಮನಂತೆ ಅಲೆದಾಡುವುದು ವಿಸ್ತ್ರುತ ಬದುಕಿನಲ್ಲಿ ಮೈಲುಗಲ್ಲಾಗುವಂಹದ್ದು. ಅದನ್ನು ಅವರು ಮಾಡಿದರು. ’ವಿಶ್ವ ಕರ್ನಾಟಕ" ಪತ್ರಿಕೆಯಿಂದ ತಮ್ಮದೇ ಆದ " ವಾರ್ತಾ ಲೋಕ " ಪತ್ರಿಕೆಯವರೆಗೆ ಕಪ್ಪು ಮಸಿಯೊಂದಿಗೆ ನಡೆಸಿದ ಹೋರಾಟದ ಇತಿಹಾಸ ಅವರು ಬಿಟ್ಟು ಹೋದ ಲೇಖನಿಯಲ್ಲಿ ಅಡಗಿ ಕುಳಿತಿದೆ. ಒಂದು ಹಂತದಲ್ಲಿ " ವಿಚಿತ್ರ ಸೃಷ್ಠಿಯ ಲೋಕದಲ್ಲಿ ಮತ್ತು ಅಂಕಣ ಬರಹಗಳು" ಸಂಕಲನ ವಸ್ತುನಿಷ್ಠ ಪತ್ರಕರ್ತನ ಬದುಕು ಅನ್ನುವುದಕ್ಕೆ ಇನ್ನೊಂದು ಹೆಸರು. ಪತ್ರಿಕೆ ಕೈಯಲ್ಲಿಡಿದು ಓದುತ್ತಿರುವ ಓದುಗನಿಗೆ,ಆ ದಿನದ ಸುದ್ಧಿಗಳು ಮತ್ತು ಪುಟಗಳು ಸುಂದರವಾಗಿ ಕಾಣುತ್ತವೆ. ಅದರ ಹಿಂದಿನ ಶ್ರಮದ ಕೈಗಳು ಅಗೋಚರ. ಅದರ ಪ್ರತಿಫಲ ಉಣ್ಣುವುದು ಪತ್ರಿಕೆ ಮತ್ತು ಅದರ ಸಂಪಾದಕ. ಈ ವಸ್ತುಸ್ಥಿತಿಯನ್ನು ಸ್ಪಷ್ಟವಾಗಿ ಪ.ಗೋ.ರವರು ಪದಗಳಲ್ಲಿ ಕಟ್ಟಿ ಇಟ್ಟಿದ್ದಾರೆ.
ಯಾವುದೇ ಪತ್ರಿಕೆಯನ್ನು ಕೈಗೆತ್ತಿಕೊಂಡರೂ, ಸ್ಪಷ್ಟವಾಗಿ ಹೇಳುವ ಒಂದು ಉತ್ತರ ಉಂಟು. ಅದು ಒಂದು ದಿಕ್ಕಿಗೆ ವಾಲಿಕೊಂಡಿರುವುದು. ಅದು ರಾಜಕೀಯವಿರಬಹುದು, ಜಾತಿ-ಪಂಥ ಮತ್ತು ವ್ಯಕ್ತಿಗತ " ಪರಾಖ್"ಗಳಿಗೆ ಅಂಟಿಕೊಂಡಂತೆ. ಇದು ಅವುಗಳ ಧರ್ಮ ಅಂತ ಅವುಗಳು ಪ್ರತಿಪಾದಿಸುತ್ತವೆ. ಅದರಲ್ಲಿ ಎಷ್ಟು ಪತ್ರಿಕೆಗಳು ಸಮಾಜವನ್ನು ದಿಕ್ಕು ತಪ್ಪಿಸುವ ಮಾರ್ಗ ಹಿಡಿದು "ಪೀತ" ಪತ್ರಿಕೆಗಳ ಪಟ್ಟಿಯಲ್ಲಿವೆಯೋ ಎಂದು ವಿಶಾಲ ಮನಸ್ಸಿನ ಓದುಗರೇ ನಿರ್ಧರಿಸಬೇಕು.
ದಿನ ಬೆಳಗಾಗುವುದರೊಳಗೆ ಲಕ್ಷಾಂತರ ಪತ್ರಿಕೆಗಳು ಕಾಗದಗಳಲ್ಲಿ- ಅಂತಾರ್ಜಾಲಗಳಲ್ಲಿ ಪ್ರಕಟಗೊಳ್ಳುತ್ತವೆ. ಕನ್ನಡ ಜಾಗ್ರತಿಯ ಬಗ್ಗೆ ರಾಗ ಎಳೆಯುವ ನಾವು "ಕನ್ನಡದ ಸ್ವಂತಿಕೆಯ ಪತ್ರಿಕೋದ್ಯಮವನ್ನು ಕಾಣುತ್ತಿದ್ದೇವೆಯೇ ಅನ್ನೋದಕ್ಕೆ ಒಂದು ನಿಮಿಷ ಆಲೋಚನೆ ಮಾಡುತ್ತೇವೆ. ಕನ್ನಡದ ಬಗ್ಗೆ ಮಾತಾಡುವಾಗ ಅನ್ಯ ಭಾಷೆಯನ್ನು ಯದ್ವಾ-ತದ್ವಾ ತರಾಟೆಗೆ ತೆಗೆದುಕೊಳ್ಳುವುದು ನಮ್ಮೊಳಗೇ ಉದ್ಭವಿಸುವ ಆವೇಶ. ಇವತ್ತು ಕನ್ನಡ ಅಭಿಮಾನವನ್ನು ಭಿತ್ತರಿಸಲು ಕನ್ನಡ ಪತ್ರಿಕೆಗಳಲ್ಲಿ ಬ್ರಿಟೀಷ್ ಸಿದ್ಧಾಂತ- ವಿಧಾನಗಳ ಅಳವಡಿಸಿಕೊಳ್ಳಬೇಕಾಯಿತು. ಪ.ಗೋ. ಇತ್ತೀಚಿನವರೆಗೂ ಹೇಳಿದ್ದರು, ಭಾರತದಲ್ಲಿ ಪತ್ರಿಕೆಗಳ ಪರಿಚಯ ಮಾಡಿಕೊಟ್ಟವರು ಇಂಗ್ಲೀಷರು. ಮೊತ್ತಮೊದಲ ಭಾರತದ ಸಂಪಾದಕ ಭಾರತೀಯರು ಅಂತ ಎದೆತಟ್ಟಿಕೊಳ್ಳುವ ಉದಾಹರಣೆಯಿಲ್ಲ. ಭಾರತದ ಮೊತ್ತಮೊದಲ ಸಂಪಾದಕ ಜೇಮ್ಸ್ ಗಸ್ಟಸ್ ಹಿಕ್ಕಿ ಎಂಬ ಬ್ರಿಟೀಷನಿಗೆ ಈ ಗೌರವ ಸಲ್ಲುತ್ತದೆ. ಈ ವಿಷಯವನ್ನು ತಮ್ಮ ಬರಹ ಬದುಕಿನಲ್ಲಿ ಸೇರಿಸುವಾಗ ಕನ್ನಡ ಜಾಗೃತಿಯ ಬಗ್ಗೆ ಪ.ಗೋ.ರವರು ಉತ್ತರ ಕೊಟ್ಟು ಹೋಗಿದ್ದಾರೆ. ಕನ್ನಡ ಅಭಿಮಾನದ ಬಗೆಗಿನ "ಸ್ಲೋಗನ್"ಗೆ ಯಾವ ನಂಟು? ಬ್ರಿಟೀಷರು ಊಟ ಮಾಡಿ ತೊಳೆಯದೇ ಇಟ್ಟ ಅವರ ತಟ್ಟೆಗಳು ಈಗಲೂ ಇದೆ. ಅದನ್ನು ತೊಳೆಯದೆ ಅದರಲ್ಲೆ ಊಟ ಮಾಡುವ ಕನ್ನಡದ ಸ್ವಂತಿಕೆಯ ಬಗ್ಗೆ ಬೊಬ್ಬೆ ಹೊಡೆಯುವ ಸಂಸ್ಥೆಗಳಿಗೆ- ಪತ್ರಿಕೆಗಳಿಗೆ ಪ.ಗೋ. ಪರೋಕ್ಷವಾಗಿ ಖೇಧ ವ್ಯಕ್ತ ವ್ಯಕ್ತಪಡಿಸಿದ ಸನ್ನಿವೇಶಗಳುಂಟು.
"ಬಾಯಾರಿಕೆಯಾದರೆ ಮಸಿ ಕುಡಿದು, ಹಸಿವೆಯಾದರೆ ನ್ಯೂಸ್ಪ್ರಿಂ ಟ್ ಕಾಗದಗಳನ್ನೇ ಹರಿದು ತಿನ್ನುವವನೇ ಪತ್ರಿಕೋದ್ಯಮಿ" ಅಂತ ಪತ್ರಿಕಾ ಜಗತ್ತಿಗೆ ಒಂದು ಹೆಸರು ಬರೆದ ಪ.ಗೋ., ಅದನ್ನು ಸ್ವತಃ ಅನುಭವಿಸಿಯೇ ಭಾಷ್ಯಾ ಬರೆದರು. ತಡ ರಾತ್ರಿಯವರೆಗೂ ಕೆಲಸ ಮಾಡಿ ನೀರೆನ್ನುವ ಜಾಗದಲ್ಲಿ ಮಸಿ ಕುಡಿದ ಅವರ ಘಟನೆ ಪತ್ರಿಕಾ ಬದುಕಿನ ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯುವ ವ್ಯಥೆ. ಇದೇ ಪ.ಗೋ.ರಂತಹ ಹಲವರು ಈಗ ಇತಿಹಾಸವಾಗಿದ್ದಾರೆ. ಕೆಲವರು ಹೇಳ ಹೆಸರಿಲ್ಲದಂತೆ. ಅದು ಆ ಪತ್ರಿಕೆಯ ಉನ್ನತಿ ಮತ್ತು ಅದರ ಚಲಾವಣೆಯಲ್ಲಿ ಕಂಡು ಬರುವುದಿಲ್ಲ. ಬದುಕಿದ್ದಾಗ ಹೆಸರಿತ್ತು, ಇಲ್ಲವಾದ ಮೇಲೆ ಆ ಜಗತ್ತೇ ಮಾಯಾವಾಗುತ್ತವೆ. ಪತ್ರಿಕೆಯ ಕಾರ್ಯ ತಂತ್ರದಲ್ಲಿ ಹೊಸತೊಂದು ಮಾದರಿಯನ್ನು ಅವರು ತಂದಿದ್ದರೂ ಕೂಡ ತಂತ್ರ ನಡೆಯುತ್ತಿರುತ್ತದೆ, ವ್ಯಕ್ತಿ ಇರುವುದಿಲ್ಲ. ಪ.ಗೋ.ರವರ ವಿಷಯದಲ್ಲಿ ಇದು ಭಿನ್ನವಾಗಿರುವಂತಹದ್ದು, ಅವರೂ ಇದ್ದಾರೆ ಅನ್ನುವ ತಂತ್ರವೂ ಉಂಟು.
ಕನಸುಗಳ ಬಗ್ಗೆ ಒಂದಿಷ್ಟು ಮಾತಾಡುವಾಗ,ಆಶಾಭಾವನೆಯ ಬಗ್ಗೆ ಸಂಶಯ ಪಡುವಂತಾಗುತ್ತದೆ. ಭಿಕ್ಷುಕನೂ ರಾಜನಾಗುವ ಕನಸು ಕಾಣುವುದು ತಪ್ಪು ಅಂತ ಕಾನೂನು ಸಿದ್ಧವಾದರೋ?. ಹಾಗಿದ್ದಲ್ಲಿ, ಮನುಷ್ಯನ ಮನಸ್ಸಿಗೊಂದು ಸಂವಿಧಾನ ಸೃಷ್ಟಿಯಾಗಬೇಕಾಗುತ್ತದೆ. ತಾನೆ ಪ್ರೀತಿಸಿದ ವೃತ್ತಿಯಲ್ಲಿ ತನ್ನದೊಂದು ವ್ಯವಸ್ಥೆಯನ್ನು ಕಲ್ಪಿಸುವ ಕನಸನ್ನು ಕಾಣುವುದು ತಪ್ಪೆ ಅನ್ನುವ ಪ್ರಶ್ನೆ ಪ.ಗೋ. ಬದುಕಿನಲ್ಲಿ ಕಾಣುವಂತದ್ದು. ತಾನೊಂದು ಬಗೆದರೆ ವಿಧಿ ಇನ್ನೊಂದು ಬರೆಯಿತು ಅನ್ನುವಂತಾಯ್ತು. ಕನಸು ಹಾಗಿರಲಿ, "ಬದುಕಿಗಾಗಿ ಹೋರಾಡುವುದು" ಮುಖ್ಯ ಅಂತ " ವಿಚಿತ್ರ ಸೃಷ್ಠಿಯ ಲೋಕದಲ್ಲಿ ಮತ್ತು ಅಂಕಣ ಬರಹಗಳು" ಸಂಕಲನದಲ್ಲಿ ಸಾರ ದಾಖಲಾಗಿದೆ. ತುಕ್ಕು ಹಿಡಿದ ಸಮಾಜದ ಬದಲಾವಣೆಗೆ ಪತ್ರಕರ್ತ ಸಮಾಜದ ಒಳಿತಿಗಾಗಿ ಬದುಕನ್ನು ಕಂಡುಕೊಳ್ಳುತ್ತಾನೋ ಅಥವಾ ಬದುಕಿಗಾಗಿ ಪತ್ರಕರ್ತನಾಗುತ್ತಾನೋ ಅನ್ನುವುದು ಪ.ಗೋ. ಬದುಕಿನಲ್ಲಿ ಕಂಡುಕೊಳ್ಳಬೇಕಾದ ಉತ್ತರ.-ರವಿ ಮುರ್ನಾಡು.
ರವಿ ಮುರ್ನಾಡು ಹುಟ್ಟಿದ್ದು ಕೊಡಗಿನ ಕುಶಾಲನಗರದ ಸುಂಟಿಕೊಪ್ಪ ಸಮೀಪ ಇರುವ ಮಕ್ಕಂದೂರು.ಮಡಿಕೇರಿಯ "ಶಕ್ತಿ" ದಿನಪತ್ರಿಕೆ, " ಗಡಿನಾಡ ಸಂಚಾರಿ", ಮೈಸೂರಿನ ಆಂದೋಲನ ದಿನಪತ್ರಿಕೆ, " ಮೈಸೂರು ಮಿತ್ರ"ದಲ್ಲಿ ಹತ್ತು ವರ್ಷಗಳ ಕಾಲ ದುಡಿದ ಅನುಭವ. ಮಡಿಕೇರಿ ಆಕಾಶ ವಾಣಿಯಲ್ಲೂ ಉದ್ಗೊಷಕನಾಗಿ ತಾತ್ಕಾಲಿಕವಾಗಿ ಕಾರ್ಯ ಕ್ರಮಗಳನ್ನು ನೀಡಿದ್ದ ರವಿ ಮುರ್ನಾಡು ಅವರು ಪ್ರಸ್ತುತ ಮಧ್ಯ ಆಫ್ರಿಕಾದ ಕ್ಯಾಮರೂನಿನ ಕಂಪೆನಿಯೊಂದರ ಆಡಳಿತ ವಿಭಾಗದಲ್ಲಿ ಕಾರ್ಯನಿರ್ವಹಿಸುತಿದ್ದಾರೆ.
ಉದ್ದುದ್ದ ಬರೆಯುವ ವಿಷಯವನ್ನ ಚುಟುಕಾಗಿ ಕವಿತೆ ಬರೆಯುವ ರವಿ ಮುರ್ನಾಡು ಅವರ ಬ್ಲಾಗಂಗಳ 'ಹಗಲು-ರಾತ್ರಿಯ ರೆಕ್ಕೆ' ಯ ಕೊಂಡಿ http://ravimurnad.blogspot.com/ ನೀವೂ ಒಂದು ಬಾರಿ ಭೇಟಿ ನೀಡಿ.
ಈ ಕನಸು ಅವಾರ್ಡ್
ಒಡನಾಡಿಗಳನ್ನು
ನಿರ್ಭೀತಿಯಿಲ್ಲದೆ
ಅಳುವಂತೆ ಮಾಡಿ
ನಿರ್ಭಾವುಕವಾಗಿ
ಸದ್ದಿಲ್ಲದೇ
ಆಯುಷ್ಯ ಕದಿಯೋ ಕಳ್ಳ...
- ಮಲ್ಲಿಕಾ ಭಟ್, ಪರಪ್ಪಾಡಿ.
ವಿಚಾರ
"ಬೀಡಿ,ಸಿಗರೇಟು ಸೇದಲು ಸಮಯವಿದೆ, ಆದರೆ ಬೇರೆ ಕೆಲಸಗಳಿಗಾಗಿ ನಮ್ಮ ಬಳಿ ಸಮಯವಿಲ್ಲ...!"
ನೀವು ತಂದೆತಾಯಿಗಾಗಿ ಎಷ್ಟು ಸಮಯ ಕೊಡುತ್ತಿದ್ದೀರಿ? ಹೆಂಡತಿ ಮಕ್ಕಳಿಗಾಗಿ ಎಷ್ಟು ಸಮಯ ಕೊಡುತ್ತಿದ್ದೀರಿ? ಸ್ನೇಹಿತರು, ಸಂಬಂಧಿಕರಿಗಾಗಿ ಎಷ್ಟು ಸಮಯ ಕೊಡುತ್ತಿದ್ದೀರಿ? ಸಮಾಜಕ್ಕೆ ಎಷ್ಟು ಸಮಯ ಕೊಡುತ್ತಿದ್ದೀರಿ? ಆರೋಗ್ಯ ಮತ್ತು ಮನಃಶಾಂತಿಗಾಗಿ ಎಷ್ಟು ಸಮಯ ಕೊಡುತ್ತಿದ್ದೀರಿ? ದುಡಿಮೆಗಾಗಿ ಎಷ್ಟು ಸಮಯ ಕೊಡುತ್ತಿದ್ದೀರಿ? ನಿದ್ದೆಗಾಗಿ ಎಷ್ಟು ಸಮಯ ಕೊಡುತ್ತಿದ್ದೀರಿ? ಓದಲು ಎಷ್ಟು ಸಮಯ ಕೊಡುತ್ತಿದ್ದೀರಿ? ಜೀವನದ ಗುರಿ ಮುಟ್ಟಲು ಪ್ರತಿದಿನ ಎಷ್ಟು ಸಮಯ ಕೊಡುತ್ತಿದ್ದೀರಿ? ಕಾಲ ಎಲ್ಲಿ ವ್ಯರ್ಥ ಮಾಡುತ್ತಿದ್ದೀರಿ?...ಇತ್ಯಾದಿ...ನೀವೇ ನಿಮ್ಮ ಮನಸ್ಸಿಗೆ ಪ್ರಶ್ನೆ ಕೇಳಿ ಜಾಗೃತರಾಗಿ.
"ನನ್ನ ಹತ್ತಿರ ಸಮಯವಿಲ್ಲ" - ಇದರ ಬಗ್ಗೆ ಸ್ವಲ್ಪ ವಿವರಣೆ ನೀಡುತ್ತೀರಾ...? ಹಾಗಿದ್ದಲ್ಲಿ, ನೀವು ಸುಳ್ಳು ಹೇಳುತ್ತಿದ್ದೀರಿ ಎಂದರ್ಥ. ಏಕೆಂದರೆ ನಮ್ಮಲ್ಲಿ ಎಷ್ಟೇ ಸಾಮಾಜಿಕ ವ್ಯತ್ಯಾಸಗಳಿದ್ದರೂ ಎಲ್ಲರಿಗಿರುವುದು ಒಂದೇ ಸಮಯವಲ್ಲವೇ..? ಹಿಂದೂಗಳಿಗೊಂದು ಸಮಯ, ಮುಸಲ್ಮಾನರಿಗೊಂದು ಸಮಯ,ಬಡವರಿಗೋಂದು ಸಮಯ, ಶ್ರೀಮಂತಿರಿಗೊಮದು ಸಮಯ, ವಿದ್ಯಾವಂತರಿಗೊಂದು ಸಮಯ,ಅವಿದ್ಯಾವಂತರಿಗೊಂದು ಸಮಯ ಅಂತ ಇದೆಯೇ...? ಆದುದರಿಂದ ನಿಮ್ಮ ಬಳಿ ಸಮಯವಿಲ್ಲವೆಂಬುದು ತಪ್ಪಾಗುತ್ತದಲ್ಲವೇ? ಬಹುಶಃ ನಿಮ್ಮ ಸಮಯ ಎಲ್ಲಿ ಕಳೆಯುತ್ತಿದೆಂಬುದು ನಿಮಗೆ ಗೊತ್ತಿಲ್ಲದಿರಬಹುದು. ಯಾವುದೇ ಮೂಲಸಂಪತ್ತು ಅಥವಾ ಬಂಡವಾಳದ ಬಗ್ಗೆ ಜಾಗರೂಕತೆಯಿಂದ ಲೆಕ್ಕವಿಡಬೇಕು. ಸಮಯವೆಂಬುದು ಎಲ್ಲಾ ಮೂಲಸಂಪತ್ತುಗಳಿಗಿಂತ ಅತ್ಯಮೂಲ್ಯವಾದದ್ದು. ನೀವು ಅದನ್ನು ಎಲ್ಲಿ,ಹೇಗೆ ಖರ್ಚು ಮಾಡುತ್ತಿದ್ದೀರಿ ಎಂದು ತಿಳಿದುಕೊಂಡರೆ ಒಳಿತು.
ಈ ಅಭ್ಯಾಸವನ್ನು 10 ದಿನ ಮಾಡಿ: ನಿಮ್ಮ ಎಲ್ಲಾ ದಿನಚರಿಗಳನ್ನು ಒಂದು ಹಾಳೆಯ ಮೇಲೆ ಬರೆದಿಟ್ಟುಕೊಳ್ಳಿ. ನೀವು ಬೆಳಗ್ಗೆ ಎದ್ದಾಕ್ಷಣದಿಂದ ಮಲಗುವವರೆಗೂ ಪ್ರತಿ ಅರ್ಧ ಗಂಟೆಯಲ್ಲಿ ಏನು ಮಾಡುತ್ತೀರಿ ಎಂಬುದನ್ನು ಬರೆದಿಟ್ಟುಕೊಳ್ಳಿ. ಹೀಗೆ ಮಾಡುವುದು ಮೊದಮೊದಲು ಕಷ್ಟವಾಗಬಹುದು. ಬೇಡವಾದ ಕೆಲಸ ಅಂತೆಯೂ ಕಾಣಬಹುದು. ಆದರೂ ಪ್ರಾಮಾಣಿಕವಾಗಿ ಇದನ್ನು ಮಾಡಿ. ಅದನ್ನು ಯಾರಿಗೂ ತೋರಿಸಬೇಕಾಗಿಲ್ಲ. 10 ದಿನಗಳ ನಂತರ ನಿಮ್ಮ ಲಾಗ್ ಶೀಟ್ ನೋಡಿ. ನಿಮ್ಮ ಸಮಯ ಎಲ್ಲಿ ಹೇಗೆ ಹೋಗಿದೆ ಎಂಬುದನ್ನು ಸ್ವಲ್ಪ ಗಮನಿಸಿ. ನೀವು ಯಾವ ಕೆಲಸಗಳನ್ನು ಮಾಡಬೇಕಿತ್ತು, ಆದರೆ ಮಾಡಿಲ್ಲ. ಆ ಕೆಲಸಗಳನ್ನು ಗುರುತು ಹಾಕಿ. ಅದನ್ನು ಮಾಡಿ. ನಿಮ್ಮಲ್ಲಿಆಗುವ ಬದಲಾವಣೆಗಳು ನಿಮಗೇ ಗೋಚರವಾಗುತ್ತವೆ.
- ಜಬೀವುಲ್ಲಾ ಖಾನ್
ವೈವಿಧ್ಯ
ಯೋಗ ನಿದ್ರೆ ಎಂದರೆ ನಿದ್ರೆ ಮತ್ತು ಎಚ್ಚರಗಳ ನಡುವಿನ ಸ್ಥಿತಿ. ಈ ಆಸನದಲ್ಲಿ ಯೋಗಿಗೆ ಕಾಲುಗಳೇ ದಿಂಬು ಆಗಿರುತ್ತದೆ. ಬೆನ್ನು ಹಾಸಿಗೆಯಂತೆ ಇರುತ್ತದೆ. ಈ ಆಸನದ ಅಭ್ಯಾಸದಿಂದ ದೇಹವು ಬಲುಬೇಗ ಶಾಖಗೊಳ್ಳುವುದು. ಯೋಗಿಗಳು ಹೆಚ್ಚು ತಂಪಿರುವ ಪರ್ವತ ಪ್ರದೇಶ ಹಿಮಾಲಯಗಳಲ್ಲಿ ಈ ಆಸನವನ್ನು ಮಾಡುತ್ತಾರೆ. ಈ ಆಸನವು ಬಹಳ ಕ್ಲಿಷ್ಟಕರ ಆಸನವಾಗಿದೆ. ಗುರು ಮುಖೇನ ಹೆಚ್ಚಿನ ಸಲಹೆ ಪಡೆದುಕೊಂಡೇ ಈ ಆಸನವನ್ನು ಅಭ್ಯಾಸ ಮಾಡಬೇಕು.
ಅಭ್ಯಾಸ ಕ್ರಮ
ಮೊದಲು ನೆಲದ ಮೇಲೆ ಅಂಗಾತವಾಗಿ ಮಲಗಬೇಕು. ಆಮೇಲೆ ಎರಡು ಕಾಲುಗಳನ್ನು ಬಗ್ಗಿಸಿ ತಲೆಯ ಮೇಲೆ ಬರುವಂತೆ ಮಾಡಬೇಕು. ಅನಂತರ ಉಸಿರನ್ನು ಹೊರಕ್ಕೆ ಬಿಟ್ಟು ಬಲಪಾದವನ್ನು ಕೈಗಳ ಆಧಾರದಿಂದ ತಲೆಯ ಹಿಂಬದಿಗೆ ತಂದು ಎಡ ಪಾದವನ್ನು ಕೈಗಳ ಸಹಾಯದಿಂದ ತಲೆಯ ಹಿಂಬದಿಗೆ ತಂದು ಒಂದಕ್ಕೊಂದು ಹೆಣೆಯಬೇಕು. ಕೈಗಳನ್ನು ಬೆನ್ನ ಹಿಂಬದಿಯಲ್ಲಿ ಒಂದನ್ನೊಂದು ಹೆಣೆದು ನೆಲದ ಮೇಲೆ ಕೈಗಳನ್ನೊರಗಿಸಿಡಬೇಕು. ಈ ಭಂಗಿಯಲ್ಲಿ ಸಮ ಉಸಿರಾಟ ನಡೆಸುತ್ತಾ ಅರ್ಧ ನಿಮಿಷದಿಂದ, ನಿಮಿಷ ಕಾಲ ಇರಬೇಕು ಅನಂತರ ವಿರಮಿಸಬೇಕು.
ಉಪಯೋಗಗಳು
ಈ ಆಸನದ ಭಂಗಿಯಲ್ಲಿ ಬೆನ್ನೆಲುಬು ಸಾಕಷ್ಟು ಹಿಗ್ಗುತ್ತದೆ. ಬೆನ್ನಿಗೆ ವ್ಯಾಯಾಮ ದೊರಕಿ ಒಂದು ವಿಧವಾದ ಸುಖವು ದೊರಕುತ್ತದೆ. ಈ ಆಸನದಲ್ಲಿ ಶ್ವಾಸಕೋಶಗಳು, ಕಿಬ್ಬೊಟ್ಟೆಯ ಮಾಂಸಖಂಡಗಳು ತೀವ್ರವಾಗಿ ಹಿಗ್ಗಿ, ಮೂತ್ರಪಿಂಡ, ಪಿತ್ತಕೋಶ ಇನ್ನಿತರ ಅಂಗಗಳು ಚುರುಕಾಗಿ ತಮ್ಮ ತಮ್ಮ ಕಾರ್ಯಗಳನ್ನು ಸಮರ್ಪಕವಾಗಿ ಜರಗಿಸುತ್ತವೆ. ಮೂತ್ರದೋಷ, ಕಿಬ್ಬೊಟ್ಟೆಯ ಎಲ್ಲಾ ರೋಗಗಳು ಪರಿಹಾರವಾಗುತ್ತವೆ. ಈ ಆಸನದ ಅಭ್ಯಾಸದಿಂದ ನರಮಂಡಲಕ್ಕೆ ಒಳ್ಳೆಯ ವಿಶ್ರಾಂತಿ ದೊರೆಯುತ್ತದೆ. ದೇಹದಲ್ಲಿ ಶಕ್ತಿಯ ಶೇಖರವಾಗುತ್ತದೆ. ಹಾಗೂ ದೇಹವು ಲವಲವಿಕೆಯಿಂದ ಇರುತ್ತದೆ.
'ಯೋಗರತ್ನ' ಶ್ರೀ ಗೋಪಾಲಕೃಷ್ಣ ದೇಲಂಪಾಡಿ
ಅಂತರರಾಷ್ಟ್ರೀಯ ತೀರ್ಪುಗಾರರು
ರಾಜ್ಯ - ರಾಷ್ಟ್ರ
ಮೂಡಬಿದಿರೆ: ಆಳ್ವಾಸ್ ಎಜುಕೇಷನ್ ಫೌಂಡೇಷನ್ ಪ್ರವರ್ತಿತ ಆಳ್ವಾಸ್ ಪದವಿ ಕಾಲೇಜು - ಪತ್ರಿಕೋದ್ಯಮ ವಿಭಾಗದ ಸಹಕಾರದೊಂದಿಗೆ,"ವರ್ಷ" ಕ್ರಿಯೇಷನ್ಸ್ ಪ್ರಸ್ತುತಿಯ ದೂರ ತೀರ ಯಾನ...ಕನ್ನಡ ಹಾಡುಗಳ ಆಲ್ಬಂ ಇದೀಗ ಬಿಡುಗಡೆಗೆ ಸಿದ್ಧಗೊಂಡಿದೆ.
ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳೇ ಹಾಡು ರಚಿಸಿ, ರಾಗ ಸಂಯೋಜಿಸಿ, ಅದಕ್ಕೆ ಒಪ್ಪುವ ನಟನೆ ಮಾಡಿ ರೂಪಿಸಿದ ವಿಡಿಯೋ ಆಲ್ಬಂ ಇದಾಗಿದೆ. ಇದರ ನಿರ್ದೇಶನ ಹಾಗೂ ಛಾಯಾಗ್ರಹಣವನ್ನು ಪತ್ರಕರ್ತ ಹರೀಶ್ ಕೆ.ಆದೂರು ನಿರ್ವಹಿಸಿದ್ದಾರೆ.ಸಂಗೀತ ಸಂಯೋಜನೆ ಮತ್ತು ಹಿನ್ನಲೆ ಗಾಯನ ಪೂಜಾ ಉಡುಪ ಅವರದ್ದು. ರಂಜಿತ್ ಪಿ.ಎನ್. - ಕೊಳಲು,ಮೇಘ ಸಮೀರ - ತಬ್ಲಾ,ಶುಭಕರ ಬಿ. - ರಿದಂ ಪ್ಯಾಡ್ ಮತ್ತು ಪುರುಷೋತ್ತಮ ಬಿ. ಕೀ ಬೋರ್ಡ್ ನಲ್ಲಿ ಸಾಥ್ ನೀಡಿದ್ದಾರೆ.
ಮುಂಜಾನೆ ಸೂರ್ಯ , ಮುಂಜಾವ ಬೆಳಗು ಮತ್ತು ಅಮ್ಮ ನಿನ್ನ ಮಡಿಲಲ್ಲಿ , ದೂರ ಸರಿದರು ಇಲ್ಲವಾದರು ,ನನ್ನ ಕನಸಿನ ಹಾಡು ನೆನಪುಗಳ ಮೆರವಣಿಗೆ ಎಂಬ ಆರು ಹಾಡುಗಳನ್ನು ಈ ವಿಡಿಯೋ ಆಲ್ಬಂ ಒಳಗೊಂಡಿದೆ.
ಸನತ್ ಕುಮಾರ್ ಪರಿಕಲ್ಪನೆಯಲ್ಲಿ ನಿರ್ಮಾಣಗೊಂಡಿರುವ ಈ ವಿಡಿಯೋ ಆಲ್ಬಂ ನಲ್ಲಿ ವಿದ್ಯಾರ್ಥಿಗಳಾದ ಪಲ್ಲವಿ ರಾವ್,ಪ್ರವಲ್ಲಿಕಾ ಬಿ,ಪೂಜಾ ಉಡುಪ,ಅನೂಪ್ ಜೋನ್ಸನ್ ನಟಿಸಿದ್ದಾರೆ. ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ವಿವಿಧ ಕಡೆಗಳಲ್ಲಿ ಆಲ್ಬಂ ಸಾಂಗ್ ಚಿತ್ರೀಕರಣ ಗೊಂಡಿದೆ. ಹಾಡುಗಳ ರೆಕಾರ್ಡಿಂಗ್ ಪೂರ್ಣಗೊಂಡು ಚಿತ್ರೀಕರಣ ಮುಗಿದು ಈಗಾಗಲೇ ಸಂಕಲನ ಕಾರ್ಯವೂ ಪೂರ್ತಿಯಾಗಿದೆ.ರವಿಚಂದ್ರ ಸಂಕಲನದಲ್ಲಿ ಸಹಕರಿಸಿದ್ದಾರೆ. ಒಟ್ಟಿನಲ್ಲಿ ಇದೇ ಮೊದಲ ಬಾರಿಗೆ 6ಕನ್ನಡ ಗೀತೆಗಳನ್ನೊಳಗೊಂಡ ವಿಡಿಯೋ ಆಲ್ಬಂ ಹೊರಬರುತ್ತಿದೆ.ಇದು ಒಂದು ದಾಖಲೆ.
ವಿಚಾರ
ಮನಸ್ಸು ಗೊಂದಲದಲ್ಲಿದ್ದಾಗ ಏನು ಮಾಡಬೇಕು...?
ಒಮ್ಮೆ ಬುದ್ಧ ಮಹಾಷಯ ತನ್ನ ಶಿಷ್ಯಂದಿರೊಂದಿಗೆ ಪ್ರಯಾಣ ಬೆಳೆಸಿದರು. ದಾರಿಯಲ್ಲಿ ನೀರನ್ನು ಕಂಡು, ಓರ್ವ ಶಿಷ್ಯನಿಗೆ ಕುಡಿಯಲು ನೀರು ತರಲು ಹೇಳಿದರು. ಶಿಷ್ಯ ನೀರಿನ ಬಳಿ ಹೋದ. ಅಷ್ಟರಲ್ಲಿ ಒಂದು ಎತ್ತಿನ ಬಂಡಿ ಆ ನೀರನ್ನು ಹಾದು ಹೋಯಿತು. ಆದ ಕಾರಣ ಕೆಸರು ಕದಡಿ ನೀರು ಒಂಡಾಗಿ ಹೋಯಿತು. ಈ ಮಣ್ಣು ಮಿಶ್ರಣ ನೀರನ್ನು ಬುದ್ಧನಿಗೆ ಕುಡಿಯಲು ಹೇಗೆ ಕೊಡಲಿ ಎಂದು ಯೋಚಿಸಿ,ಶಿಷ್ಯ ಬರಿಗೈಯಲ್ಲೇ ಮರಳಿ,ನೀರು ಕದಡಿ ಹೋಗಿದೆ. ಅದು ಕುಡಿಯಲು ಯೋಗ್ಯವಲ್ಲ ಎಂದು ಹೇಳಿದ.
ಸ್ವಲ್ಪ ಸಮಯದ ನಂತರ ಬುದ್ಧ ಪುನಃ ತನ್ನ ಆ ಶಿಷ್ಯನಿಗೆ ನೀರಿನ್ನು ಹೋಗಿ ನೋಡಲು ಹೇಳಿದರು. ನೀರು ಅದೇ ಅವಸ್ಥೆಯಲ್ಲಿತ್ತು. ಶಿಷ್ಯ ಮರಳಿ ಬಂದು ವಿಷಯ ತಿಳಿಸಿದ.
ಪುನಃ ಸ್ವಲ್ಪ ಸಮಯದ ನಂತರ ಬುದ್ಧ ತನ್ನ ಆ ಶಿಷ್ಯನಿಗೆ ನೀರಿನ್ನು ಹೋಗಿ ನೋಡಲು ಹೇಳಿದರು. ಶಿಷ್ಯ ಮತ್ತೆ ಹೋಗಿ ನೋಡಿದಾಗ ಮಣ್ಣು ತಳವೂರಿತ್ತು. ನೀರು ಶುಚಿ ಮತ್ತು ಶುದ್ಧವಾಗಿತ್ತು. ಒಂದು ಕೊಳದಲ್ಲಿ ನೀರನ್ನು ತುಂಬಿಕೊಂಡು ಬುದ್ಧನಿಗಾಗಿ ತಂದ.
ಬುದ್ಧ ನೀರನ್ನು ಒಮ್ಮೆ ನೋಡಿ, ಶಿಷ್ಯನತ್ತ ಮುಖ ಮಾಡಿ ಹೇಳಿದರು. - ನೀನು ನೀರು ಶುದ್ದಿ ಮಾಡಲು ಏನು ಮಾಡಿದೆ ನೋಡು ! ಅದನ್ನು ಹಾಗೆ ಬಿಟ್ಟೆ. ಮಣ್ಣು ತಾನಾಗೆ ತಳವೂರಿತು. ನಿನಗೆ ಶುದ್ದ ನೀರು ಲಭಿಸಿತು.
ನಿನ್ನ ಮನಸ್ಸು ಕೂಡ ಹಾಗೆಯೇ - ಅದು ಗೊಂದಲದಲ್ಲಿದ್ದಾಗ, ಅದನ್ನು ಹಾಗೆ ಬಿಟ್ಟು ಬಿಡು. ಅದಕ್ಕೆ ಸ್ವಲ್ಪ ಸಮಯ ಕೊಡು. ಅದು ತನ್ನಷ್ಟಕ್ಕೆ ತಾನೇ ತಳವೂರುತ್ತದೆ. ಅದನ್ನು ಶಾಂತಪಡಿಸಲು ನೀನು ಯಾವುದೇ ರೀತಿಯ ಒತ್ತಡ ಹೇರಬೇಕಾಗಿಲ್ಲ. ಶ್ರಮವಿಲ್ಲದೆಯೇ ಅದು ಶಾಂತವಾಗುತ್ತದೆ.
- ಜಬೀವುಲ್ಲಾ ಖಾನ್
ರಾಜ್ಯ - ರಾಷ್ಟ್ರಶಿಕಾರಿಪುರಕ್ಕೆ ಮಂಗಳವಾರ ಮದ್ಯಾಹ್ನ ಹೆಲಿಕ್ಯಾಪ್ಟರ್ನಲ್ಲಿ ಆಗಮಿಸಿದ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ನೇರವಾಗಿ ಶ್ರೀ ಹುಚ್ಚೂರಾಯಸ್ವಾಮಿ ಕೆರೆಯ ಅಂತಿಮ ಹಂತದ ಕಾಮಗಾರಿ ವೀಕ್ಷಿಸಿದರು.
ನಂತರದಲ್ಲಿ ಸಮೀಪದಲ್ಲಿನ ಉದ್ಯಾನವನಕ್ಕೆ ಬೇಟಿ ನೀಡಿದರು.ಕೆರೆಯ ಸುತ್ತಮುತ್ತ ಹಸಿರು ವಾತಾವರಣ ನಿರ್ಮಾಣಕ್ಕೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿ ಕೆರೆಯಲ್ಲಿ ಸರಕಾರದ ವತಿಯಿಂದ ದೋಣಿ ಮೂಲಕ ವಿಹಾರಕ್ಕೆ ಸೂಕ್ತ ಕ್ರಮ ಹಾಗೂ ಉದ್ಯಾನವನಕ್ಕೆ ಪ್ರವೇಶ ಶುಲ್ಕ ವಿಧಿಸುವಂತೆ ತಿಳಿಸಿದರು.ಉದ್ಯಾನವನದ ಸೌಂದರ್ಯಕ್ಕೆ ಧಕ್ಕೆ ತರುವ ವ್ಯಕ್ತಿಗಳ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸುವಂತೆ ತಿಳಿಸಿ ಸಮೀಪದ ಯಾತ್ರಿ ನಿವಾಸ ಹೋಟೆಲ್ ಅನ್ನು ಪ್ರವಾಸೋದ್ಯಮ ಇಲಾಖೆಯ ಸುಪರ್ದಿಗೆ ವಹಿಸುವಂತೆ ತಿಳಿಸಿದರು.
ರಾಘವೇಂದ್ರ ಎಚ್.ಆರ್
ಸಾಹಿತ್ಯ
ನಿನ್ನ ಈ ಪ್ರೀತಿ
ಮೀಟಿತು...
ನನ್ನೆದೆಯ ತಂತಿ...
- ಸೌಮ್ಯ ಸಾಗರ.
ರಾಜ್ಯ - ರಾಷ್ಟ್ರ
ಧರ್ಮಸ್ಥಳ: ರಾಜ್ಯದ ರಾಜಕೀಯ ವಿದ್ಯಮಾನಗಳ; ಅದರಲ್ಲೂ ಪ್ರಮುಖವಾಗಿ ಪಕ್ಷ ಪಕ್ಷಗಳ ನಡುವಿನ ಕೆಸರೆರಚಾಟ, ಆರೋಪ , ಪ್ರತ್ಯಾರೋಪಗಳನ್ನು ವರದಿ ಮಾಡುವುದನ್ನು ರಾಜ್ಯದ ಸಮಸ್ತ ಮಾಧ್ಯಮಗಳು ನಿಲ್ಲಿಸಿದ್ದೇ ಆದಲ್ಲಿ ವ್ಯವಸ್ಥಿತವಾದ ರಾಜಕಾರಣ ನಡೆಯಲು ಸಾಧ್ಯ. ಮಾಧ್ಯಮಗಳ ಮುಂದೆ ಪ್ರತಿಭಟನೆ ಮಾಡಿಸುವುದು; ಪ್ರತಿಭಟನೆಗೆ ಕುಮ್ಮಕ್ಕು ನೀಡಿ ತಾವು ಸಭ್ಯರಂತೆ ಫೋಸ್ ನೀಡುವುದು ...ಇದು ಇಂದಿನ ರಾಜಕಾರಣಿಗಳು ರಾಜಕೀಯ ಪಕ್ಷಗಳು ನಡೆದುಕೊಳ್ಳುವ ರೀತಿ.
ಅದಕ್ಕೆ ತಕ್ಕಂತೆ ಮಾಧ್ಯಮಗಳು ಈ ಎಲ್ಲಾ ವಿದ್ಯಮಾನಗಳನ್ನು ವರದಿ ಮಾಡುತ್ತಾ ಕ್ಷಣ ಕ್ಷಣಕ್ಕೆ ಮಾಹಿತಿಗಳನ್ನು ಭಿತ್ತರಿಸಿ ಮತ್ತಷ್ಟು ಕೊಳಕು ರಾಜಕೀಯಕ್ಕೆ ಪ್ರಚಾರ ನೀಡುವ ಕಾರ್ಯ ನಡೆಸುತ್ತದೆ.ಅಷ್ಟಕ್ಕೂ ಇಂದಿನ ಬಹುತೇಕ ಮಾಧ್ಯಮಗಳು ರಾಜಕಾರಣಿಗಳ ಕಪಿಮುಷ್ಠಿಯಲ್ಲಿದೆ ಹಾಗೂ ಅವರ ನೇರ/ಪರೋಕ್ಷ ಆಡಳಿತದಲ್ಲಿದೆ ಎಂಬುದು ಕೂಡಾ ಅಷ್ಟೇ ಮಹತ್ವದ್ದು!
ಧರ್ಮಸ್ಥಳದ ಮಂಜುನಾಥನಿಗೆ ಹರಕೆ, ಆಣೆ ಹೊತ್ತ ಬಿ.ಎಸ್.ಯಡಿಯೂರಪ್ಪ ಹಾಗೂ ಇವರ ಆಣೆಗೆ ಸವಾಲು ಸ್ವೀಕರಿಸಿದ ಕುಮಾರ ಸ್ವಾಮಿ ಅವರ ವಿಚಾರವನ್ನೇ ತೆಗೆದುಕೊಳ್ಳೋಣ. ಅವರೀರ್ವರ ಈ ಆಣೆ ಪ್ರಮಾಣಗಳು ರಾಷ್ಟ್ರೀಯ ಸುದ್ದಿಯಾಗಿ ಭಿತ್ತರಗೊಂಡವು. ಅಷ್ಟೇ ಅಲ್ಲದೆ ಆಣೆ ಹರಕೆ ಸಲ್ಲಿಸುವ ಸೋಮವಾರದಂದು ಕ್ಷಣ ಕ್ಷಣಕ್ಕೆ ಪ್ರಾದೇಶಿಕ ಸುದ್ದಿವಾಹಿನಿಗಳು/ ರಾಷ್ಟ್ರೀಯ ಸುದ್ದಿವಾಹಿನಿಗಳು ಸ್ಥಳದಲ್ಲೇ ಬೀಡು ಬಿಟ್ಟು ನೇರ ವರದಿಯನ್ನು (ಲೈವ್ ರಿಪೋರ್ಟಿಂಗ್)ನೀಡಿದವು.
ಇದೇ ಸಂದರ್ಭದಲ್ಲಿ ಜೆ.ಡಿ.ಎಸ್ ಬೆಂಬಲಿಗರ ಗುಂಪೊಂದು ಸುದ್ದಿ ವಾಹಿನಿಗಳ ಕ್ಯಾಮರಾ ಮುಂದೆ ಘೋಷಣೆ ಕೂಗಿ ಯಡಿಯೂರಪ್ಪರ ವಿರುದ್ಧ ಪ್ರತಿಭಟನೆ ಕೈಗೊಂಡವು. ರಾಷ್ಟ್ರೀಯ ಸುದ್ದಿ ವಾಹಿನಿಗಳು ಸೇರಿದಂತೆ ಪ್ರತಿಯೊಂದು ಸುದ್ದಿ ವಾಹಿನಿಗಳು ಈ ಘಟನೆಯನ್ನು ನೇರ ವರದಿ ಮಾಡಿದವು. ಹಾಗಾದರೆ ಕ್ಯಾಮರಾ ಎದುರಿಗಿದ್ದರಷ್ಟೇ ಈ ಪ್ರತಿಭಟನಾ ಕಾರರಿಗೆ ಪ್ರತಿಭಟನೆ ಕೈಗೊಳ್ಳಲು ಸಾಧ್ಯವೇ...ಏತನ್ಮಧ್ಯೆ " ಈ ಸುದ್ದಿ ಎಷ್ಟು ಗಂಟೆಗೆ ಪ್ರಸಾರ ಆಗುತ್ತೇರೀ?" ಎಂದು ಕೇಳಿದ್ದು ನೋಡಿದರೆ ಕೇವಲ ಕ್ಯಾಮರಾ ಮುಂದೆ ನಿಂತು ಪ್ರಚಾರ ಗಿಟ್ಟಿಸಿಕೊಳ್ಳುವುದಷ್ಟೇ ನಮ್ಮ ಉದ್ದೇಶ ಎಂಬುದು ಸ್ಪಷ್ಟವಾಗುತ್ತಿತ್ತು.
ಇಂತಹ ಸುದ್ದಿಯನ್ನು ವಾಹಿನಿಗಳು/ಮಾಧ್ಯಮಗಳು ಏನೋ ದೊಡ್ಡ ಘಟನೆ ನಡೆಯಿತು ಎಂಬಂತೆ ಭಿತ್ತರಿಸಬೇಕೇ...? ನಿಜವಾಗಿಯೂ ಪ್ರತಿಭಟನೆಯ ಹಿಂದಿರುವ ಉದ್ದೇಶ ಏನು ಎಂಬುದನ್ನು ಯಾಕೆ ನೀಡುತ್ತಿಲ್ಲ...ಅಥವಾ ಇಂದು ನೀಡಿಲ್ಲ...? ಯಡಿಯೂರಪ್ಪ ಅವರ ನೇತೃತ್ವದ ಸರಕಾರ ಏನು ಮಾಡಿದೆಯೋ ಹೇಗೆ ಕಾರ್ಯನಿರ್ವಹಿಸುತ್ತಿದೆಯೋ ಎಂಬುದನ್ನು ಹಂತ ಹಂತವಾಗಿ ನೀಡುವ ಮಾಧ್ಯಮಗಳು ಅದರಲ್ಲೂ ಸುದ್ದಿ ವಾಹಿನಿಗಳು ಈ ವ್ಯವಸ್ಥಿತ ಸಂಚನ್ನು ಜನತೆಗೆ ತಿಳಿಸುವ ಕಾರ್ಯ ಮಾಡಬೇಕಾಗಿತ್ತು.
ಕುಮಾರ ಸ್ವಾಮಿ ಹಾಗೂ ಯಡಿಯೂರಪ್ಪರ ಆಣೆ ಪ್ರಮಾಣಗಳ ಕುರಿತಾಗಿ ಕ್ಷಣ ಕ್ಷಣಕ್ಕೆ ಮಾಹಿತಿ, ವಿಶೇಷ ಸಂದರ್ಶನ, ನೇರ ಪ್ರಸಾರಗಳ ಕಾರ್ಯಕ್ರಮಗಳನ್ನು ಒಟ್ಟಾರೆಯಾಗಿ ಇಡೀ ಮಾಧ್ಯಮ ಸಮೂಹ ವರದಿ ಮಾಡದೇ ಇದ್ದಿದ್ದಲ್ಲಿ ಈ ಘಟನೆ ಇಷ್ಟೊಂದು ಮಹತ್ವ ಪಡೆಯುತ್ತಿರಲಿಲ್ಲ.
ಪಕ್ಷಗಳ ನಡುವಣ ಇಂತಹ ಹೊಲಸು ರಾಜಕೀಯವನ್ನು ಮಾಧ್ಯಮಗಳು ವರದಿಮಾಡುವುದನ್ನು ಒಂದಷ್ಟುಕಾಲ ನಿಲ್ಲಿಸಿದ್ದೇ ಆದಲ್ಲಿ ಈ ರಾಜಕೀಯ ಫುಡಾರಿಗಳ ಕೆಟ್ಟ ಚಾಳಿಗೆ ಕಡಿವಾಣ ಬೀಳುವುದರಲ್ಲಿ ಸಂದೇಹವೇ ಇಲ್ಲ...
ಈ ಕನಸು ಎಸ್ಕ್ಲೂಸಿವ್...
ಧರ್ಮಸ್ಥಳ: ಆಣೆ ಪ್ರಮಾಣದ ಹೆಸರಿನಲ್ಲಿ ಧರ್ಮಸ್ಥಳದ ಮಂಜುನಾಥನ ಸನ್ನಿಧಿಗೆ ಮಾಜಿ ಮತ್ತು ಹಾಲಿ ಸಿ.ಎಂ. ಸೋಮವಾರ ಆಗಮಿಸಿದ್ದಾರೆ. ಮಾಜಿ - ಹಾಲಿಗಳ ಮಧ್ಯೆ ಏನೇ ಕೆಸರೆರಚಾಟಗಳು ನಡೆದಿರಲಿ ಆದರೆ ಅವರ ಹಾಗೂ ಅವರ ಪಕ್ಷ , ಬೆಂಬಲಿಗರ ವರ್ತನೆಯಿಂದಲೇ ಅವರವರ ಸಂಸ್ಕಾರಗಳು ಗೊತ್ತಾಗುತ್ತಿದ್ದುದು ಮಾತ್ರ ವಿಶೇಷ.
ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 9.15ನಿಮಿಷಕ್ಕೆ ಸರಿಯಾಗಿ ಶ್ರೀ ಕ್ಷೇತ್ರದ ಸನ್ನಿಧಿ ಅತಿಥಿ ಗೃಹದಿಂದ ತನ್ನ ಬೆಂಬಲಿಗ ಶಾಸಕ,ಸಚಿವರೊಂದಿಗೆ ವಿಶೇಷ ಬಸ್ಸಿನ ಮೂಲಕ ಕ್ಷೇತ್ರಕ್ಕೆ ಬಂದಿಳಿಯುವ ಸಂದರ್ಭದಲ್ಲಿ ಅತ್ಯಂತ ಶಿಸ್ತುಬದ್ಧ ಕಾರ್ಯಕರ್ತರು, ಹಾಗೂ ಪಕ್ಷದ ಬೆಂಬಲಿಗರು ಯಾವುದೇ ರೀತಿಯ ಗೊಂದಲಗಳಿಲ್ಲದೆ ಉಪಸ್ಥಿತರಿದ್ದು, ಸಿ.ಎಂ. ಅವರನ್ನು ಬರಮಾಡಿಕೊಂಡು ಕ್ಷೇತ್ರದೊಳಕ್ಕೆ ಕರೆದೊಯ್ದರು. ಏತನ್ಮಧ್ಯೆ ಜೆ.ಡಿ.ಎಸ್ ಕಾರ್ಯಕರ್ತರು, ಬೆಂಬಲಿಗರ ಗುಂಪೊಂದು ಯಡಿಯೂರಪ್ಪ ಅವರ ವಿರುದ್ಧ ತೀವ್ರ ಪ್ರತಿಭಟನೆ ಕೈಗೊಂಡಿತು. ಮಾತ್ರವಲ್ಲದೆ ಕೆಟ್ಟ ಶಬ್ಧಗಳನ್ನು ಬಳಸಿ ಧಿಕ್ಕಾರ ಕೂಗಿ ಗೊಂದಲ ಸೃಷ್ಟಿಗೆ ಆಸ್ಪದವೊದಗಿಸಿಕೊಟ್ಟಿತು. ಪೋಲೀಸರ ಮಧ್ಯ ಪ್ರವೇಶದ ನಡುವೆಯೂ ಪ್ರತಿಭಟನೆ ಮುಂದುವರಿದಿತ್ತು...
ಮಧ್ಯಾಹ್ನ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರು ಶ್ರೀ ಕ್ಷೇತ್ರಕ್ಕೆ ಆಗಮಿಸುವ ಸಂದರ್ಭದಲ್ಲಿ ಜೆ.ಡಿ.ಎಸ್.ಕಾರ್ಯಕರ್ತರು,ಮುಖಂಡರು ಆಗಮನಕ್ಕೂ ಮುನ್ನ ಕ್ಷೇತ್ರದ ಮುಂದೆ ಜಮಾಯಿಸಿದ್ದರು. ಕುಮಾರ ಸ್ವಾಮಿ ಆಗಮನಕ್ಕೂ ಮುನ್ನ ಸುಮಾರು ಅರ್ಧಗಂಟೆಗೂ ಮೊದಲೇ ಕಾರ್ಯಕರ್ತರ ಜೈಕಾರ, ಯಡಿಯೂರಪ್ಪ ಅವರ ವಿರುದ್ಧದ ತೀವ್ರ ಧಿಕ್ಕಾರಗಳು ಮುಗಿಲು ಮುಟ್ಟಿದ್ದವು.
ಮಧ್ಯಾಹ್ನ 12.20ರ ಸುಮಾರಿಗೆ ಕುಮಾರ ಸ್ವಾಮಿ ಕಾರಿನಲ್ಲಿ ಬಂದಿಳಿಯುತ್ತಿದ್ದಂತೆಯೇ ಕಾರ್ಯಕರ್ತರು ಅವರನ್ನು ಮುತ್ತಿ ಜೈಕಾರ ಹಾಕಿದರು. ಹಾಗೂ ಅವರೊಂದಿಗೆ ದೇವಳದೊಳಗೆ ಪ್ರವೇಶಿಸಲು ಮುಂದಾದರು. ತದನಂತರ ಮಾಧ್ಯಮದವರನ್ನುದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ವೇದಿಕೆಯೇರಿದ ಕಾರ್ಯಕರ್ತರು ಆ ಸಂದರ್ಭದಲ್ಲೇ ಕುಮಾರ ಸ್ವಾಮಿಯವರನ್ನು ಸನ್ಮಾನಿಸುವುದಕ್ಕೂ ಮುಂದಾಗಿ ಗೊಂದಲದ ವಾತಾವರಣಕ್ಕೆ ಕಾರಣರಾದರು. ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡುತ್ತಿರುವ ಸಂದರ್ಭದಲ್ಲಿ ಜೈಕಾರಗಳನ್ನು ಹಾಕುತ್ತಾ ತೀವ್ರ ಅಡಚಣೆಗೆ ಕಾರಣರಾದರು. ಒಟ್ಟಾರೆಯಾಗಿ ಜೆ.ಡಿ.ಎಸ್ ಕಾರ್ಯಕರ್ತರ ಅಶಿಸ್ತಿನ ವರ್ತನೆ ಮಾಧ್ಯಮ ವಲಯ ಹಾಗೂ ಪೋಲೀಸ್ ಇಲಾಖೆಯ ಕೆಂಗಣ್ಣಿಗೆ ಕಾರಣವಾಗುವಂತಾಯಿತು.
ಸುದ್ದಿಗೋಷ್ಠಿಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ತನ್ನ ಎಂದಿನ ಚಾಳಿ ಮುಂದುವರಿಸಿದರು. ಮತ್ತೆ ಮುಖ್ಯಮಂತ್ರಿಗಳನ್ನು ಕೆಣಕುವ, ಸರಕಾರದ ಮೇಲೆ ಗೂಬೆಕೂರಿಸುವ ಕಾರ್ಯವನ್ನು ಮಾಡಿದರು. ಧರ್ಮಸ್ಥಳದ ಮಂಜುನಾಥನ ಸನ್ನಿಧಿಯ ಮುಂಭಾಗದಲ್ಲಿ ರಾಜಕೀಯದ ಮಾತುಗಳನ್ನಾಡುವ ಮೂಲಕ ಮಾಜಿ ಮುಖ್ಯಮಂತ್ರಿಗಳು ತಮ್ಮ ಕೆಟ್ಟ ಚಾಳಿಯನ್ನು ಜನತೆಯೆದುರು ಪ್ರದರ್ಶಿಸಿದರು.
ರಾಜ್ಯ - ರಾಷ್ಟ್ರಧರ್ಮಸ್ಥಳ: ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನನ್ನೊಂದಿಗೆ ಸಂಧಾನಕ್ಕೆ ಅವರ ಜನರೊಬ್ಬನನ್ನು ಕಳುಹಿಸಿದ್ದು, ಹಾಗೂ ಯಾವುದೇ ರೀತಿಯ ಹಗರಣ, ರಾಜ್ಯಾಡಳಿತಕ್ಕೆ ತೊಡಕು ಮಾಡಬಾರದೆಂಬ ಸಂಧಾನ ನಡೆಸಿದ್ದು ಸತ್ಯ ಸತ್ಯ ಸತ್ಯ. ಈ ಬಗ್ಗೆ ಧರ್ಮಸ್ಥಳದ ಮಂಜುನಾಥರನ ಸನ್ನಿಧಿಯಲ್ಲಿ ಭಕ್ತಿಪೂರ್ವಕವಾಗಿ ಮನಸ್ಸಿನಲ್ಲೇ ಪ್ರಮಾಣ ಮಾಡಿದ್ದಾಗಿ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ತಿಳಿಸಿದ್ದಾರೆ.
ಧರ್ಮಸ್ಥಳ ಕ್ಷೇತ್ರಕ್ಕೆ ಆಗಮಿಸಿದ ಅವರು ಮಂಜುನಾಥನ ದರ್ಶನಪಡೆದು ಮಾಧ್ಯಮದವರೊಂದಿಗೆ ಮಾತನಾಡಿದರು. ಯಡಿಯೂರಪ್ಪ ಮಾತಿಗೆ ತಪ್ಪಿದ್ದಾರೆ. ಅವರ ಸವಾಲಿಗೆ ಸ್ಪಂದಿಸಿ ತಾನು ಈ ಕ್ಷೇತ್ರಕ್ಕಾಗಮಿಸಿದ್ದೇನೆ.ಆದರೆ ಯಡಿಯೂರಪ್ಪ ಅವರು ಪಲಾಯನ ಮಾಡಿದ್ದಾರೆ. ತಮ್ಮ ಮಾತಿಗೆ ತಪ್ಪಿ ನಡೆದಿದ್ದಾರೆ. ವಚನ ಭ್ರಷ್ಟತೆಯನ್ನು ಮೆರೆದಿದ್ದಾರೆ ಎಂದು ಕುಮಾರ ಸ್ವಾಮಿ ಹೇಳಿದರು.
ಯಡಿಯೂರಪ್ಪ ನೇತೃತ್ವದ ಸರಕಾರ ಹಾಗೂ ಅವರ ವಿವಿಧ ಹಗರಣಗಳ ಕುರಿತ ಸವಿವರ ಮಾಹಿತಿಯುಳ್ಳ ಪತ್ರವೊಂದನ್ನು ಸನ್ನಿಧಾನಕ್ಕೆಹಾಗೂ ಪೂಜ್ಯ ಹೆಗ್ಗಡೆಯವರಿಗೆ 19ರಂದು ಕಳುಹಿಸಿರುವುದಾಗಿ ತಿಳಿಸಿದ ಕುಮಾರ ಸ್ವಾಮಿ ಮಾಧ್ಯಮದ ಮುಂದೆ ಪತ್ರ ಬಹಿರಂಗ ಪಡಿಸಿದರು.
ತಮ್ಮ ರಾಜಕೀಯ ದುರುದ್ದೇಶವನ್ನು ಧಾರ್ಮಿಕತೆಯೊಂದಿಗೆ ಯಡಿಯೂರಪ್ಪ ಬೆರೆಸಿದ್ದು ಸರಿಯಲ್ಲ ಎಂದು ಕಮಾರ ಸ್ವಾಮಿ ಹೇಳಿದರು.
ರಾಜ್ಯ - ರಾಷ್ಟ್ರ
ಮಂದಸ್ಮಿತರಾದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೋಮವಾರ ಬೆಳಗ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.ಇದೇ ಸಂದರ್ಭದಲ್ಲಿ ಜೆ.ಡಿ.ಎಸ್.ಕಾರ್ಯಕರ್ತರು ಧಿಕ್ಕಾರ ಕೂಗಿದರು.
ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೋಮವಾರ ಬೆಳಗ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿನೀಡಿ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿದರು.ಯಾವುದೇ ರೀತಿಯ ಪ್ರಮಾಣ ಮಾಡಿಲ್ಲ.ಬದಲಾಗಿ ರಾಜ್ಯದ ಸುಭಿಕ್ಷೆಗಾಗಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆ. ಮುಂದಿನ ಎರಡು ವರುಷಗಳ ತನಕ ಅಡ್ಡಿ ಆತಂಕಗಳಿರದೆ ರಾಜ್ಯದ ಆಡಳಿತ ನಡೆಸಲು ಅವಕಾಶ ದೊರಕುವಂತಾಗಲಿ ಎಂದವರು ಪ್ರಾರ್ಥಿಸಿರುವುದಾಗಿ ತಿಳಿಸಿದರು.
ವೈಯಕ್ತಿಕವಾಗಿ ಯಾವ ಬೇಡಿಕೆಯನ್ನೂ ದೇವರ ಮುಂದೆ ಇಟ್ಟಿಲ್ಲ.ಕ್ಷೇತ್ರದಲ್ಲಿ ರಾಜ್ಯದ ಸುಭಿಕ್ಷೆಗಾಗಿ ಪ್ರಾರ್ಥನೆ ಸಲ್ಲಿಸಿರುವುದಾಗಿ ತಿಳಿಸಿದರು. ಇಡೀ ದೇಶದಲ್ಲೇ ಕರ್ನಾಟಕವನ್ನು ಮಾದರಿಯಾಗಿ ಮೂಡಿಸುವ ಗುರಿ ತನ್ನದೆಂದರು.
ರಾಜ್ಯ - ರಾಷ್ಟ್ರ
ಆಣೆ - ಪ್ರಮಾಣ, ಸವಾಲು - ಪ್ರತಿ ಸವಾಲು... ಹೇಸಿಗೆ ಹುಟ್ಟಿಸುವ ರಾಜಕಾರಣ. ಮಾನ ಮರ್ಯಾದೆ ಇಲ್ಲದ ರಾಜಕಾರಣಿಗಳು. ತಮ್ಮ ಸ್ಥಾನ ಮಾನದ ಬಗೆಗಿನ ಕಲ್ಪನೆಯೂ ಇವರಿಗಿಲ್ಲ. ಇವರೆಲ್ಲರೂ ರಾಜ್ಯವಾಳಲು ನಾಲಾಯಕ್ ...
ಕರ್ನಾಟಕ ಸರಕಾರವನ್ನು ಆಡಳಿತ ನಡೆಸುತ್ತಿರುವ ಆಡಳಿತಾರೂಢ ಬಿಜೆಪಿ ಸರಕಾರದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಇದೇ ರಾಜ್ಯವನ್ನು ಆಡಳಿತ ನಡೆಸಿ ಜನರಿಂದ "ನಲಾಯಕ್ " ಆಡಳಿತ ಎಂದು ಹೇಳಿಸಿಕೊಂಡು ಮತ್ತೆ ಅಧಿಕಾರ ಪಡೆಯುವಲ್ಲಿ ವಿಫಲಗೊಂಡ ಜೆ.ಡಿ.ಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಸುಪುತ್ರ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಪರಸ್ಪರ ಕೆಸರೆರಚಾಟ ನಡೆಸಿಕೊಳ್ಳುತ್ತಿರುವುದು ನೋಡಿದರೆ ಇವರ್ಯಾರಿಗೂ ಕನಿಷ್ಠ ಜ್ಞಾನವೂ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿರುವ ಈ ರಾಜ್ಯವೂ ಪ್ರಜಾಪ್ರಭುತ್ವ ವ್ಯವಸ್ಥೆಗೊಳಪಡುತ್ತಿದೆ. ಜನರಿಂದ ಜನರಿಗಾಗಿ ಜನರೇ ಆಯ್ಕೆ ಮಾಡಿದ ಜನಪ್ರತಿನಿಧಿಗಳೆಂಬ ಇಂಥಹವರು ಕೊನೇ ಪಕ್ಷ ತಮಗಾದ ಪ್ರಾಯದ ಬಗೆಗಾದರೂ ಚಿಂತಿಸಿ ಮಾತನಾಡಬೇಕಾಗಿತ್ತು. ಬಿಡಿ ಇಡೀ ರಾಜ್ಯವನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳೆಂಬ ಚಿಂತನೆಯಾದರೂ ಈ ರಾಜಕಾರಣಿಗಳಿಗೆ ಇರಬೇಕಾಗಿತ್ತು.
ರಾಜ್ಯದ ಸಮಸ್ತ ಜನತೆಯನ್ನು ಪ್ರತಿನಿಧಿಸುವ ಜನರಿಂದ ಚುನಾಯಿತಗೊಂಡಿರುವ ಇಂಥಹ ರಾಜಕೀಯ ವ್ಯಕ್ತಿಗಳು ತಮ್ಮ ತಮ್ಮ ಘನತೆ, ಸ್ಥಾನಮಾನಗಳ ಬಗ್ಗೆ ಕನಿಷ್ಠ ಚಿಂತನೆಯನ್ನೂ ನಡೆಸದೆ ಮಾತನಾಡುವುದು ಸರಿಯಲ್ಲ.
ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಹಂತ ಹಂತದಲ್ಲೂ ಆಡಳಿತಾರೂಢ ಬಿಜೆಪಿ ಸರಕಾರದ ಬಗ್ಗೆ ಕುಟಿಲ ರಾಜಕೀಯ ನೀತಿಯ ಮೂಲಕ ದಿನಕ್ಕೊಂದರಂತೆ ಅಂತೆ ಕಂತೆಗಳ ಸಂತೆಯನ್ನು ಸೃಷ್ಠಿಸುವ ಸಾಹಸವನ್ನು ಮಾಡುತ್ತಾ ಬಂದಿರುವುದು ಸುಳ್ಳಲ್ಲ. ತನ್ನ ಎಲೆಯಲ್ಲಿರುವ ಹೆಗ್ಗಣವನ್ನು ಬಿಟ್ಟು ಉಳಿದವರ ಬಟ್ಟಲಲ್ಲಿದ್ದ ನೊಣದ ಬಗ್ಗೆ ಮಾತನಾಡಿದ ಎಂಬಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ತನ್ನೊಡಲೊಳಗೆ ಹುಳುಕು ತುಂಬಿಸಿಕೊಂಡು ವೃಥಾ ರಾಜಕೀಯವನ್ನು ಮಾಡುವುದು ಸರಿಯಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಕೊಂಚ ಯೋಚಿಸಿ ಮಾತನಾಡುವುದು ಲೇಸು. ಒಂದು ಪೆಟ್ಟು ಎರಡು ತುಂಡು ಎಂಬ ಧೋರಣೆಯನ್ನು ತನ್ನ ಆ ಕುರ್ಚಿಯಲ್ಲಿದ್ದು ಅವರು ಮಾಡುವುದು ಸರಿಯಲ್ಲ.ಪ್ರತಿಯೊಂದು ಹೇಳಿಕೆಗಳನ್ನು ನೀಡುವಾಗಲೂ, ಮಾತುಗಳನ್ನಾಡುವಾಗಲೂ ಕ್ಷಣಕಾಲ ಯೋಚಿಸಿ ಅಳೆದು ಮಾತನಾಡಿದ್ದೇ ಆದಲ್ಲಿ ಪೇಚಿಗೆ ಸಿಲುಕುವ ಪ್ರಸಂಗದಿಂದ ತಪ್ಪಿಸಿಕೊಳ್ಳಲು ಸಾಧ್ಯವಿದೆ. ತಮಗೆ ಸಿಕ್ಕಿದ ಅಧಿಕಾರವನ್ನು ಯಶಸ್ವಿಯಾಗಿ ಪೂರೈಸುವ ಕಾತರ ಯಡಿಯೂರಪ್ಪರಿಗೆ ಇರಬಹುದು. ಬೆಟ್ಟದಷ್ಟು ಕನಸುಗಳಿರಬಹುದು. ಅದರ ಸಾಕಾರಕ್ಕಾಗಿ ಹಗಲಿರುಳು ಪ್ರಯತ್ನಿಸುವ ಸಂದರ್ಭದಲ್ಲಿ ಯಾರಾದರೂ ಅಪಸ್ವರ ಎತ್ತಿದರೆ ಬೇಸರ, ದುಃಖ ಮೂಡುವುದು ಸಹಜ.ಇದು ಯಡಿಯೂರಪ್ಪರಿಗೆ ಮಾತ್ರವಲ್ಲ; ಆ ಸ್ಥಾನದಲ್ಲಿ ಕುಮಾರ ಸ್ವಾಮಿ ಅಥವಾ ನಾವು ನೀವು ಯಾರಿದ್ದರೂ ಆಗುವುದು ಸಹಜ. ಇದನ್ನು ಪ್ರತಿಪಕ್ಷಗಳು ಚಾತಕ ಪಕ್ಷಿಯಂತೆ ಕಾದು ಕುಟುಕುವ ರೀತಿ ನಿಜಕ್ಕೂ ಹೇಯ. ಏನೇ ಇರಲಿ. ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಅದರದ್ದೇ ಆದಂತಹ ಘನತೆ, ಗೌರವಗಳಿವೆ. ಭಕ್ತಿಕೇಂದ್ರ, ಶಕ್ತಿ ಕೇಂದ್ರ, ಅಷ್ಟು ಮಾತ್ರವಲ್ಲದೆ ಕಾರಣೀಕ ಕೇಂದ್ರ ಧರ್ಮಸ್ಥಳಕ್ಕೆ ಇಂತಹ ಕೊಳಕು ಹುಳುಕುಗಳನ್ನು ಹೊತ್ತು ಈ ರಾಜಕಾರಣಿಗಳು ಬರುತ್ತಿರುವುದು ಸರಿಯಲ್ಲ. ಇನ್ನಾದರೂ ತಾವು ಜನರಿಂದ ಆರಿಸಲ್ಪಟ್ಟವರು; ಜನತೆ ನಮ್ಮನ್ನು ಈ ಆಸನದಲ್ಲಿ ಅಲಂಕರಿಸುವಂತೆ ಮಾಡಿದವರು . ಅವರ ಸೇವೆ ಮಾಡಬೇಕೆ ಹೊರತು ಪರಸ್ಪರ ಈ ರೀತಿಯ ಹೇಳಿಕೆಗಳನ್ನು ನೀಡಿ, ಆಣೆ ಪ್ರಮಾಣಗಳನ್ನು ಮಾಡಿ ಜನತೆಯ ಮುಂದೆ ತಮ್ಮ ಬುದ್ದಿ ಇಷ್ಟೇ ಎಂಬುದು ತೋರಿಸುವುದು ಸರಿಯಲ್ಲ ಎಂಬ ಕನಿಷ್ಠ ಜ್ಞಾನವನ್ನು ಈರ್ವರು ಅನುಭವೀ ರಾಜಕಾರಣಿಗಳು ಮಾಡಬೇಕಾಗಿದೆ. ಇನ್ನಾದರೂ ಮಾಜಿ ಇರಲಿ ಹಾಲಿ ಇರಲಿ... ಆ ಸ್ಥಾನಗಳನ್ನು ಅಲಂಕರಿಸುವ ಯಾವ ರಾಜಕಾರಣಿಗಳೇ ಇರಲಿ ಒಂದಷ್ಟು ತಮ್ಮ ತಮ್ಮ "ನಾಲಿಗೆ"ಯತ್ತ ಗಮನ ಹರಿಸಬೇಕಾಗಿದೆ.
- ವರ್ಷಾ
ವೈದೇಹಿ ಕಾದಂಬರಿ
ಕಳೆದ ಸಂಚಿಕೆಯಿಂದ...
ಪಾರ್ತಕ್ಕ ಆ ಮನೆಯಲ್ಲಿ ಸೇರಿಕೊಂಡು ಮನೆ ಜನರಲ್ಲಿ ಒಂದಾಗಿರುವ ಜೀವ. ಭಾಸ್ಕರ ಹುಟ್ಟಿ ನಾಲ್ಕನೆಯ ವರುಷಕ್ಕೆ ಪಾರ್ತಕ್ಕನ ಗಂಡ ತೀರಿಕೊಂಡರು. ಅಂದಿನಿಂದ ಐದು ಮಾನಿಗೆ ಅಕ್ಕಿಯ ಆದಾಯದಲ್ಲಿ ಹೇಗೆ ಬದುಕಲಿ ಅಂತ ಯಾರ ಮುಂದೆ ಮುಖ ಸಣ್ಣದು ಮಾಡದೆ ಇದ್ದದ್ದರಲ್ಲಿಯೆ ಭಾಸ್ಕರನನ್ನು ಬೆಳೆಸಿದರು. ಭಾಸ್ಕರ ಓದಲ್ಲಿಕ್ಕೆಂದು ಊರು ಬಿಟ್ಟಾಗ ವಾಸುದೇವರಾಯರು ಪಾರ್ತಕ್ಕನನ್ನು ತಮ್ಮ ಮನೆಗೇ ಬಂದು ಇರಲು ಹೇಳಿಕೊಂಡರು. `ಭೂತದ ಹಾಗೆ ಒಬ್ಬರೇ ಕುಟು ಕುಟು ಬೇಯಿಸಿ ಉಣ್ಣುವುದೆಂತದು? ಬನ್ನಿ ನಮ್ಮ ಮನೆಗೆ. ಗೌರಿಗೂ ಇತ್ತೀಚೆಗೆ ಸಾಕಾಗುತ್ತದೆ. ಅವಳಿಗೊಂದು ಆಧಾರವೂ ಆದೀರಿ ನೀವು' - ಎಂದರು. ಮುಂಚಿನಿಂದಲೂ ಎರಡು ಎಲೆಯಡಿ ಜಾಸ್ತಿ ಹಾಕಬೇಕು ಎಂದರೆ ಅಡುಗೆಗೆ ಪಾರ್ತಕ್ಕ ಬೇಕು ಎಂಬ ಈ ಮನೆಗೆ ಈಗ ಮನೆ ಮಂದಿಯಲ್ಲಿ ಪಾರ್ತಕ್ಕನೂ ಒಬ್ಬರು ಎನ್ನುವಂತಾಯಿತು.
ಗೌರಮ್ಮನ ಕಡಕಡೆಯ ಬಾಣಂತಣಗಳು ನಡೆದದ್ದು ಪಾರ್ತಕ್ಕನ ಉಸ್ತುವಾರಿಯಲ್ಲಿಯೇ.ಪಾರ್ತಕ್ಕನ ಹಾಗೆ ಬಾಣಂತಿಗೆ ನರು ಹಾಕುವವರು ಯಾರು? ಎಣ್ಣೆ ತಿಕ್ಕುವವರು ಯಾರು?
ಇತ್ತೀಚೆಗೆ ಮಾತ್ರ ಅವರ ಜೀವನದಲ್ಲಿ ಸ್ವಾರಸ್ಯವಿಲ್ಲ. ಭಾಸ್ಕರನ ಮದುವೆಯಾದ ಲಾಗಾಯ್ತು ಹೀಗೆ.ಮದುವೆಯೇ ಬೇಡ ಎಂದು ಹೇಳುತ್ತಿದ್ದ ಭಾಸ್ಕರ. ಕಡೆಗೆ ನೋಡಿದರೆ ವರ್ಷ ನಲುವತ್ತು ಸಮೀಪಿಸುವಾಗ ಹೇಳದೆ ಕೇಳದೆ ಆದ. ಆ ಮದುವೆಯ ವಿಷಯ ಹೇಳಲು ಪಾರ್ತಕ್ಕನಿಗೆ ನಾಲಗೆ ಏಳುವುದಿಲ್ಲ. ಅವನು ಮದುವೆಯಾದ ಸುದ್ದಿ ಕೇಳಿದ್ದೇ `ವಾಸ್ತೇವ, ಇನ್ನು ನನಗೆ ಈ ಮನೆಯ ಋಣ ಹರಿಯಿತು. ಎಲ್ಲಿಯಾದರೂ ನಾನಿದ್ದು ಸಾಯುತ್ತೇನೆ. ನಿನ್ನ ಮನೆಯಲ್ಲಿದ್ದುಕೊಂಡು ನಾಳೆ ನಿನ್ನ ಮಕ್ಕಳ ಮದುವೆ ಮುಂಜಿಗೊಂದು ದೃಷ್ಟಿ ಬೊಟ್ಟು ಬೇಡ' - ಎಂದರೆ ವಾಸುದೇವರಾಯರು ಅವರನ್ನು ಹೋಗಲಿಕ್ಕೆ ಬಿಡಲಿಲ್ಲ.
`ನಮ್ಮ ಮಕ್ಕಳ ಹಣೆಯಲ್ಲಿ ಬರೆದಂತಾಗುತ್ತದೆ. ಅದೆಲ್ಲ ನೀವು ಹೇಳುವುದೆಂತದು? ನೀವು ಇರಿ. ಆದದ್ದು ಆಗುತ್ತದೆ. ಊರಿನವರ ಚಿಂತೆ ನನಗಿರಲಿ.'- ಎಂದರು.
ಆದರೆ ಗೌರಮ್ಮನಿಗೆ ಈಗ ಪಾರ್ತಕ್ಕನನ್ನು ಕಳಿಸಿದರೆ ಸಮ ಅಂತ ಅನಿಸಿತ್ತು. `ನಾಳೆ ಊರಿನವರು ಮಾತಿಗೆ ತಲೆ ಕೊಡುವವರು ಯಾರು? ಇದೊಂದು ಸಮಯ. ಕಳಿಸಿಬಿಡುವ. ಅವರಿಗೂ ಇಷ್ಠುರವಿಲ್ಲ.ನಮಗೂ'- ಎಂದರು ಗಂಡನೊಡನೆ, ಒಬ್ಬರೇ ಇದ್ದಾಗ. `ನೀನೊಳ್ಳೆ ಜನ. ಹೊಳೆದಾಟಿದ ಮೇಲೆ ದೋಣಿಯವ ಯಾಕೆ ಎಂಬ ಜಾತಿ.ಈಗ ಅವರನ್ನು ಕಳಿಸಿ ಕೊಟ್ಟರೆ ನನ್ನ್ನೊಬ್ಬ ಮನುಷ್ಯ ಅಂತ ಹೇಳಿಯಾರ?- ಎಂದು ಬಿಟ್ಟರು ವಾಸುದೇವರಾಯರು.
`ಅದೆಲ್ಲ ನನಗೂ ಗೊತ್ತುಂಟು. ನಾನಷ್ಟು ಮೂಢೆಯಲ್ಲ. ಆದರೆ ನಾಳೆ ಮಕ್ಕಳನ್ನೊಂದು ದಡ ಮುಟ್ಟಿಸುವ ಕೆಲಸ ಉಂಟಲ್ಲ. ಅದರ ಆಲೋಚನೆ ಉಂಟ ನಿಮಗೆ?'
`ಎಲ್ಲ ಆಲೋಚನೆ ಇರುವುದೂ ನಿನಗೊಬ್ಬಳಿಗೇ ಅನ್ನುವ ಹಾಗಿದೆ ನೀನು ಹೇಳುವುದನ್ನು ಕೇಳಿದರೆ.ಪಾರ್ತಕ್ಕ ಇರಲಿ ಅಂತ ನಾನು ಹೇಳಿದ ಮೇಲೆ ಮುಗಿಯಿತು. ಮತ್ತೆ ಅದರ ಬಗ್ಗೆ ಮಾತು ಬೇಡ.'
ಇನ್ನು ಗೌರಮ್ಮನಿಗೆ ಮಾತಾಡಲು ಚಡಿಯಿಲ್ಲ.ಪಾರ್ತಕ್ಕ ಬೇಡವೆಂತ ತಾನು ಹೇಳಿದನೆ ಅವರು ತನಗೆ ಮಾಡಿದ ಚಾಕರಿಯ ಋಣ ತಾನು ಈ ಜನ್ಮದಲ್ಲಿ ತೀರಿಸಿಯೇನು!ಆದರೆ ಮನುಷ್ಯನಾಗಿ ಹುಟ್ಟಿದ ಮೇಲೆ ಪಾಪ - ಪುಣ್ಯ ಅಂತ ಇದೆಯಲ್ಲ. ಅವರನ್ನು ಮನೆಯಲ್ಲಿಟ್ಟು ಕೊಂಡು ಭಾಸ್ಕರ ಮಾಡಿದ ಪಾಪದ ಹುಯಿಲಲ್ಲಿ ಅವನ ಅಬ್ಬೆ ಮಾತ್ರವಲ್ಲದೆ ತಾವೆಲ್ಲರೂ ಕೊಚ್ಚಿ ಹೋಗುವಂತಾಗಿಬಿಟ್ಟರೆ!ಋಣವನ್ನು ಬೇರೆ ಯಾವುದಾದರೂ ರೀತಿಯಲ್ಲಿ ತೀರಿಸುವ ಪ್ರಯತ್ನ ಮಾಡಬಹುದು.
ಮುಂದುವರಿಯುವುದು...
- ವೈದೇಹಿ.
ಈ ಕನಸು ಅವಾರ್ಡ್
ಊರಿನ ಹೆಸರೇ ಸ್ವಲ್ಪ ತಲೆಕೆಡಿಸುವಂತದ್ದು,ಹಾಗಿತ್ತು ಆ ಹೆಸರು. ಧರ್ಮಸ್ಥಳದಿಂದ ಕೊಕ್ಕಡಕ್ಕೆ ಸಾಗುವ ದಾರಿಯಲ್ಲಿ ಸುಮಾರು 10-14 ಕಿ.ಮೀ ದೂರ ಕ್ರಮಿಸುತ್ತಿದ್ದಂತೆಯೇ ಎರಡನೇ ಸೇತುವೆಯ ಮುಂಚೆ ಸಿಗುವ ಊರಿನ ಹೆಸರೇ "ಪೆರ್ಪಿಕಲ್". ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಕಾಣಸಿಗದು ಈ ಊರಿನ ಹೆಸರು. ಈ ಪ್ರದೇಶದಲ್ಲಿರುವ ಅದ್ಭುತ ಜಲಪಾತದ ವಿಚಾರ ಬಲ್ಲವರು ಬೆರಳೆಣಿಕೆಯ ಮಂದಿ ಮಾತ್ರ... ಕೇವಲ ಒಂದು ಗೂಡಂಗಡಿ ಇರುವ ಊರಿನ ಬಸ್ಸು ನಿಲ್ದಾಣ. ಅಲ್ಲಿಂದ ಸ್ವಲ್ಪವೇ ಹೆಜ್ಜೆಯ ದೂರದಲ್ಲಿ ಸಣ್ಣದೊಂದು ಸೇತುವೆ.ಸೇತುವೆಯ ಕೆಳಗೆ ಕಲ್ಲುಗಳ ಮಹಾಸಭೆಯಂತೆ ಗೊಚರಿಸುವ ಕಗ್ಗಲ್ಲುಗಳು. ಅದರ ನಡುವೆ ಕಪಿಲೆಯ (ನದಿಯ ಹೆಸರು) ತುಸು ಬಳುಕೆಯ ನಡಿಗೆ. ಇಷ್ಟು ಆ ಜಾಗದ ಒಂದು ಸಣ್ಣ ಪರಿಚಯ.
ಸೇತುವೆಯ ಬದಿಯಿಂದ ನದಿಗೆ ಇಳಿದು ಕಗ್ಗಲ್ಲುಗಳನ್ನು ದಾಟುತ್ತಾ ನದಿಯ ದಾರಿಯಲ್ಲಿ ಸ್ವಲ್ಪ ಪ್ರಯಾಸದ ಪ್ರಯಾಣ. ಪಾಚಿ ಹಿಡಿದ ಕಲ್ಲುಗಳ ಮೇಲೆ ಹಿಡಿತ ತಪ್ಪಿದರೆ ಕೇವಲ ಮೊಣಕಾಲೆತ್ತರದ ನೀರಿಗೇ...! ಮೈಯೆಲ್ಲಾ ಕಣ್ಣಾಗಿಸಿಕೊಂಡು ನಡಿಗೆ, ಅಲ್ಲಿಗೆ ಸಣ್ಣದೊಂದು ಜಲಪಾತದ ಇಂಪಾದ ಮೆಲುದನಿ ನಮ್ಮನ್ನು ಆಕರ್ಷಿಸುತ್ತದೆ... ಆಕರ್ಷಣಿಯೆಡೆಗೆ ಪಯಣ , ಆಹಾ !!! ಸುಂದರ ಕಪಿಲೆಯು ಸುಮಾರು ಮೂರಾಳೆತ್ತರದಿಂದ ಧುಮುಕುವ ದೃಶ್ಯವದು. ಆ ದೃಶ್ಯವನ್ನು ಕಣ್ಣಾರೆ ಆನಂದಿಸಿಕೊಂಡು ನಾ ಆ ಜಲಪಾತಕ್ಕೆ ಮಾಡಿದ ನಾಮಕರಣವೇ "ಪೆರ್ಪಿಕಲ್ ಫಾಲ್ಸ್" . ಜಲಪಾತದ ಸುತ್ತಮುತ್ತಲಿನ ಪ್ರದೇಶವು ನಿಜವಾಗಿಯೂ ಪ್ರಕೃತಿಯ ಕಲಾಕೃತಿಗೆ ಹಿಡಿದ ಕೈಗನ್ನಡಿ.
ಚಂದ್ರನ ಮೇಲೆ ನಡೆದ ಅನುಭವವದು, ವರ್ಷಾನು ವರ್ಷಗಳ ನೀರಿನ ರಭಸಕ್ಕೆ ಕಗ್ಗಲ್ಲುಗಳು ತಾಳಬಾರದ ವಿಚಿತ್ರ, ಕೌತುಕ. ಹುಚ್ಚುಹಿಸುವಂತಹ ಕಲಾಕೃತಿಗಳನ್ನು ತಳೆದಿತ್ತು .ಮುಂದೆ ಪಾತಾಳದಂತಹ ಕಲ್ಲಿನ ಕಂದಕಗಳನ್ನು ನಿರ್ಮಿಸಿಕೊಂಡು ಸಾಗಿದ್ದಳು ಕಪಿಲೆ.ಮುಗಿದಿತ್ತು ಚಾರಣದಂತಹ ಆ ಪಯಣ. ಬೇರೆ ಪ್ರವಾಸಿ ತಾಣಗಳಿಗೆ ಹೋಲಿಸಿದರೆ ಈ ಜಲಪಾತ ವಿಶಿಷ್ಟ ರೀತಿಯಲ್ಲಿ ಮುಂದಿದೆ.
ಕೊನೆಯದಾಗಿ ಆ ಜಲಪಾತದ ಹೆಸರು ನಿಜವಾಗಿಯೂ ತಿಳಿದಿಲ್ಲ ಆದರೆ ಚಾರಣದಂತಹ ಪ್ರಯಾಣ ಸುತ್ತಿ ಬಂದು ಬಸ್ಸು ನಿಲ್ದಾಣದ ಬದಿಯ ಗೂಡಂಗಡಿಯ ಹುಳಿ, ಜೀರಿಗೆ ಮೆಣಸು ಸೇರಿಸಿದ ಸೋಡಾ ಶರಬತ್ನ ಖಾರ ಮಾತ್ರ ಇನ್ನೂ ಮರೆತಿಲ್ಲ.
ಅಭಿಲಾಷ್ ಪಿ. ಎಸ್
ಪತ್ರಿಕೋದ್ಯಮ ವಿಭಾಗ,ಆಳ್ವಾಸ್ ಕಾಲೇಜು
ಮೂಡುಬಿದಿರೆ.
ಈ ಕನಸು ಅವಾರ್ಡ್
ಯಜಮಾನರು ತು೦ಬಾ ಒಳ್ಳೆಯ ಮನುಷ್ಯರು .ಅವರು
ಸಣ್ಣವರಿರುವಾಗಿ೦ದ ರಾಮು ಅವನ ಮನೆಯಲ್ಲಿ ಜೀತ ಮಾಡಿಕೊ೦ಡಿದ್ದ .ರಾಮು ಬಹಳ
ಒಳ್ಳೆಯ ಮನುಷ್ಯ .ಬಹು ಸರಳ ಹಾಗು ಶಿಸ್ತು -ನಿಷ್ಠೆಯಿ೦ದ ಕೆಲಸ ಮಾಡುತ್ತಿದ್ದ
.ಅವನ ಹೆ೦ಡತಿಯೂ ಅಷ್ಟೇ .ಆಕೆಯು ಸರಳ ಸ್ವಭಾವದವಳು .ಯಜಮಾನರ ಪತ್ನಿಗೆ
ಅಡಿಗೆಯಲ್ಲಿ ,ಮನೆಯ ಕೆಲಸದಲ್ಲಿ ಸಹಾಯ ಮಾಡಿಕೊಡುತ್ತಿದ್ದಳು .ಯಜಮಾನರ ಮಗಳನ್ನು
ಹಿಡಿದು ಆಡಿಸಿದ್ದು ,ಬೆಳೆಸಿದ್ದು ಎಲ್ಲಾ ಈ ರಾಮುನ ಹೆ೦ಡತಿ .
ಇಷ್ಟೆಲ್ಲಾ ಕೆಲಸ ಮಾಡಿದ್ದಕ್ಕೆ ಅವರಿಗೆ ಸ೦ಬಳವೇನೂ ಇರಲಿಲ್ಲ
.ಅವರಿಗೆ ಸಿಗುತ್ತಿದ್ದುದು ಅಕ್ಕಿ ,ಜೋಳ .ಅವರ ಖರ್ಚಿಗೇ ನಾದರೂ ಬೇಕಾದರೆ
ಕಷ್ಟಪಟ್ಟು ಯಜಮಾನರ ಬಳಿ ಕೇಳಿ ಪಡೆಯಬೇಕಿತ್ತು .
ರಾಮುನ ಮಗಳು (ಶ್ರದ್ಧಾ) ಯಜಮಾನರ ಮಗಳೊ೦ದಿಗೆ(ಮುಗ್ಧಾ) ಒ೦ದೇ
ಶಾಲೆಯಲ್ಲಿ ಕಲಿಯುತ್ತಿದ್ದಳು .ಇಬ್ಬರು ಒಳ್ಳೆಯ ಸ್ನೇಹಿತರಾಗಿದ್ದರು .ಯಜಮಾನರ
ಮಗಳಿಗೆ ರಾಮುನ ಮಗಳು ಅಲ್ಲದೆ ರಾಮು ,ಅವರ ಹೆ೦ಡತಿ ಅ೦ದರೆ ತು೦ಬಾ ಪ್ರೀತಿ
.ಅವರ ಕಷ್ಟ ನೋಡಿ ಆಕೆಗೆ ಸಹಾಯ ಮಾಡಬೇಕೆ೦ದು ಆಸೆಯಿತ್ತು .
ಒ೦ದು ದಿನ ಮುಗ್ಧಾಳಿಗೆ ತಾಯಿಯ ಬೆ೦ಡೋಲೆ ಸಿಕ್ಕಿತು .ಅದನ್ನು
ಹೇಗಾದರೂ ಮಾಡಿ ರಾಮುವಿನ ಸ೦ಸಾರಕ್ಕೆ ನೆರವಾಗುವ೦ತೆ ಮುಟ್ಟಿಸಬೇಕೆ೦ದುಕೊ೦ಡು .ಆ
ದಿನ ರಾಮುವಿಗೆ ಕೊಡಬೇಕೂ೦ತ ತೆಗೆದಿಟ್ಟ ನೆನ್ನೆ ಉಳಿದ ಅನ್ನದ ಡಬ್ಬಿಯಲ್ಲಿ
ಆ ಬೆ೦ಡೋಲೆಯನ್ನು ಹಾಕಿದಳು .ಮತ್ತು ಅವರಿಗೆ ಸಹಾಯ ಮಾಡಿದೆನೆ೦ದು ಸ೦ತಸ
ಪಟ್ಟುಕೊ೦ಡಳು .
ತನ್ನ ಗೆಳತಿ ಬಳಿ ಯಾವ ಆಭರಣವಿಲ್ಲಾ ಪಾಪ ,ಆಕೆಯ ಬೋಳು ಕಿವಿ ,ಕೈಗಳನ್ನು ಕ೦ಡ
ಆಕೆಗೆ ಏನಾದರು ಒಳ್ಳೆಯದಾಗಲಿ ಎ೦ಬ ಹಾರೈಕೆಯಿತ್ತು .ಅಲ್ಲದೆ ರಾಮು ಮಗಳಿಗೆ
ತಾನು ಓದಿ ಇ೦ಜಿನಿಯರ್ ಆಗಬೇಕೆ೦ಬ ಆಸೆಯಿತ್ತು .ಪಾಪ ! ಪುಟ್ಟ ಹುಡುಗಿ ಒ೦ದು
ಜೊತೆ ಬೆ೦ಡೋಲೆಯಲ್ಲಿ ಅವರ ಕಷ್ಟಗಳೆಲ್ಲ ದೂರವಾಗಬಹುದು ,ಅವರು ದೊಡ್ಡ
ಶ್ರೀಮ೦ತರಾಗಬಹುದು ಎ೦ದುಕೊ೦ಡಳು .
ರಾಮು ಮನೆಗೆ ಹೋದ ತಕ್ಷಣ ಹೆ೦ಡತಿ ಮಕ್ಕಳಿಬ್ಬರೂ ಮನೆಯಲ್ಲಿ ಅಡುಗೆ
ಮಾಡಲು ಏನೂ ಇರದೇ ಹಸಿವಿನಿ೦ದ ಕೂತಿದ್ದರು .ಮನೆಗೆ ಬ೦ದ ತಕ್ಷಣ ಊಟ ಮಾಡೋಣ
ಎ೦ದು ಡಬ್ಬಿ ತೆಗೆದನು .
ಊಟ ಮಾಡುತ್ತಾ ಮಗಳಿಗೆ ಉ೦ಗುರ ಸಿಕ್ಕಿತು .ಅವಳು ಅಪ್ಪ-ಅಮ್ಮನಿಗೆ
ತೋರಿಸಿದಳು .ಅವರಿಗೆ ಅದನ್ನು ನೋಡಿ ಆಶ್ಚರ್ಯವಾಯಿತು .ಏನು ಮಾಡುವುದೆ೦ದು
ತಿಳಿಯದಾಯಿತು .ರಾಮುಗೆ ತನ್ನ ಹೆ೦ಡತಿಗೆ ಹಾಕಿಕೊಳ್ಳಲಾಗುತ್ತಲ್ಲಾ ,ಕರಗಿಸಿ
ಮಗಳಿಗೆ ಒಡವೆಯಾದರೂ ಮಾಡಬಹುದಲ್ಲಾ ಎ೦ಬ ಆಸೆ .
ಮಗಳಿಗೆ ಅಪ್ಪ -ಅಮ್ಮ ಏನು ಮಾಡುತ್ತಾರೆ ಎ೦ದು ಕುತೂಹಲ . ಆದರೆ ಹೆ೦ಡತಿ
ಮಾತ್ರ ಕ೦ಡವರ ವಸ್ತುವಿಗೆ ಆಸೆ ಪಡುವುದು ಒಳ್ಳೆಯದಲ್ಲ ಎ೦ದು ಗ೦ಡನಿಗೆ
ಯಜಮಾನರಿಗೆ ಹೋಗಿ ಕೊಟ್ಟುಬನ್ನಿ ಎ೦ದು ಹೇಳಿ ಬೆ೦ಡೋಲೆ ಸಮೇತ ಗ೦ಡನನ್ನು
ಕಳಿಸಿದಳು .
- ಪಾರ್ಥವಿ .
ವಿಚಾರ
ಭಾರತದ ಎರಡನೇ ಮರುಭೂಮಿ - ಕರ್ನಾಟಕ !!!
ಶೇಖಡಾ 33ರಷ್ಟು ಇರಬೇಕಾದ ಕಡೆ ಕೇವಲ ಶೇಖಡಾ 18 ನ್ನು ಮಾತ್ರ ಅದೂ ಸರಕಾರೀ ದಾಖಲೆಗಳಲ್ಲಿ ಇರುವ ರಾಜ್ಯದ ಅರಣ್ಯ ಪ್ರದೇಶ ಇಡೀ ವಿಶ್ವದ ಆಸ್ತಿ. ಬೆಟ್ಟ-ಗುಡ್ಡ , ಗಿಡ-ಮರಗಳಲ್ಲಿ, ನದಿ-ತೊರೆಗಳಲ್ಲಿ ದೇವರನ್ನು ಕಾಣುವುದೆಂದರೆ ಯಾವುದೋ ಒಂದು ಮರ, ಒಂದು ಕಲ್ಲಿನ ತುಂಡನ್ನು ಗುಡಿಯೊಳಗಿರಿಸಿ, ಕುಂಕುಮ ಹಚ್ಚಿ, ಗಂಟೆ ಬಾರಿಸಿ ಪೂಜಿಸುವುದಲ್ಲ.ಅನಗತ್ಯ ರಸ್ತೆಗಳು, ವಿವೇಚನಾರಹಿತ ಜಲವಿದ್ಯುತ್ ಯೋಜನೆಗಳು, ಪರಿಸರ ಪ್ರವಾಸೋದ್ಯಮದ ಹೆಸರಿನಲ್ಲಿ ನಡೆಯುತ್ತಿರುವ ಖಾಸಗಿಯವರ ಬಂಡವಾಳ ಹೂಡಿಕೆಗಳ ಮೂಲಕ ಸಮಸ್ತ ಜೀವಸಂಕುಲದ ಆಸ್ತಿಯನ್ನು ತಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಬಳಸುತ್ತಿರುವುದು ಅಕ್ಷಮ್ಯ. ಅರಣ್ಯವನ್ನು ಏಟಿಎಮ್ ಎಂದು ಭಾವಿಸಿ ದಿನನಿತ್ಯ ನಿರಂತರವಾಗಿ ಗೊತ್ತುಗುರಿಯಿಲ್ಲದೇ ದೌರ್ಜನ್ಯಕ್ಕೆ ಗುರಿಪಡಿಸಲಾಗುತ್ತಿದೆ.
ಈ ಪ್ರಕೃತಿಯು ನಮ್ಮ ಮುಂದಿನ ದಿನಗಳಲ್ಲಿ ಮೈದೆಳೆಯಲಿರುವ ಜೀವಸಂಕುಲದ ಆಸ್ತಿ. ಅದು ನಾವು ನೀಡುತ್ತಿರುವ ದಾನವಲ್ಲ, ನಾವೇ ಇಲ್ಲಿ ಸಾಲಗಾರರು. ಈ ಅಮೂಲ್ಯ ಕಾಡುಗಳನ್ನು ರಕ್ಷಿಸಲು, ವಿಸ್ತರಿಸಲು ತ್ವರಿತ ಕ್ರಮ ಕೈಗೊಳ್ಳದಿದ್ದರೆ ಅದು ನಮ್ಮ ಮೂರ್ಖತನದ ಪರಮಾವಧಿ. ರಸ್ತೆ, ಜಲವಿದ್ಯುತ್, ಗಣಿಗಾರಿಕೆ, ತೈಲಸಾಗಣೆ, ಕೃಷಿಗಾಗಿ ಭೂಮಿ ಒತ್ತುವರಿ ಮುಂತಾದುವು ಸರಕಾರೀ ಯೋಜನೆಗಳ ಹೆಸರಿನಲ್ಲಿ ಪರಿಸರದ ಮೇಲೆನಡೆಯುತ್ತಿರುವ ಅಮಾನುಷ ಅತ್ಯಾಚಾರ. ಅದರ ಪರವಾಗಿ ಮಾತನಾಡುವವರು ಆಧುನಿಕ ದುಶ್ಯಾಸನರೇ ಸರಿ.
ಹತ್ತಾರು ನದಿಗಳಿಗೆ ಉಗಮ ಸ್ಥಾನವಾದ ಪಶ್ಚಿಮಘಟ್ಟಗಳು ಪ್ರಪಂಚದ ಜೀವವೈವಿಧ್ಯದ ಹಾಟ್ಸ್ಪಾಟ್ ಆಗಿದೆ. ಇಲ್ಲಿರುವ ಇರುವೆ, ಗೆದ್ದಲು, ಹುಲ್ಲು, ಪೊಟರೆಯೊಳಗಿನ ಹಕ್ಕಿ, ಧರೆಗುರುಳಿದ ಮರ, ಕಲ್ಲು ಇವೆಲ್ಲವಕ್ಕೂ ಅವುಗಳದೇ ಆದ ಜೈವಿಕ ಮಹತ್ವ ಇದೆ. ನಮ್ಮ ಯಾವುದೇ ರೀತಿಯ ಮದ್ಯ ಪ್ರವೇಶವು ದೊಡ್ಡ ಜೈವಿಕ ದುರಂತಕ್ಕೆ ಕಾರಣವಾಗುತ್ತದೆ.
ಅಭಿವೃದ್ಧಿಯೆಂದರೆ ಏನು? ಕಾಡಿನೊಳಗೆ ರಸ್ತೆ ಮಾಡಿಸಿ ಗುತ್ತಿಗೆದಾರರಿಗೆ ಕೆಲಸ ಒದಗಿಸುವುದಾ?, ಪರ್ವತದ ಒಡಲು ಬಗೆದು ಖನಿಜ ಹೊರತೆಗೆಯುವುದಾ?, ಜೀವನದಿಗಳನ್ನು ಅಡ್ಡಗಟ್ಟಿ, ತಿರುವಿ ಕಾಡು ಮುಳುಗಿಸಿ ಖಾಸಗಿಯವರಿಗೆ ಬಂಡವಾಳ ಹೂಡಲು ಅನುಕೂಲ ಮಾಡಿಕೊಡುವುದಾ?, ಕಾಡಿನಂಚಿನಲ್ಲಿರುವ ಒತ್ತುವರಿ ಕೃಷಿಭೂಮಿಗೆ ವಾಣಿಜ್ಯ ಬೆಲೆ ದೊರಕಿಸಿಕೊಡುವುದಾ? ಎಲ್ಲಿ ಪುಕ್ಕಟೆ ಸಂಪನ್ಮೂಲ ಹಾಗೂ ಹಣ ಓಡಾಡುತ್ತದೆಯೋ ಅಲ್ಲೆಲ್ಲ ಪ್ರಕೃತಿಯ ಮೇಲೆ ದಾಳಿ ಅವ್ಯಾಹತವಾಗಿ ನಡೆಯುತ್ತದೆ.
ಜೈವಿಕ ಪರಿಸರವನ್ನು ಕಾಪಾಡುವುದಕ್ಕೇ ಯುನೆಸ್ಕೋ ಸ್ಥಳೀಯ ಸರಕಾರಗಳಿಗೆ ಸಹಕಾರ ನೀಡುತ್ತಿರುವುದು ಒಂದು
ರಚನಾತ್ಮಕ ಬೆಳವಣಿಗೆ. ಅದನ್ನು ಅರಿಯದೇ ತಿರಸ್ಕರಿಸಿ ದಾಷ್ಟ್ರ್ಯ ಮೆರೆದರೆ ಅದು ರಾಜ್ಯ ಸರಕಾರದ ಅಕ್ಷಮ್ಯ ಅಪರಾದವೇ ಸರಿ. ಯಾರ ಹಿತವನ್ನು ಕಾಪಾಡಲು ಈ ವಿರೋಧವನ್ನು ತೋರಿಸುತ್ತಿದೆ ಎಂದು ಹೇಳಲಿ. ಗಿರಿಜನರು, ವಿದ್ಯುತ್ ಸಮಸ್ಯೆ,
ವನ್ಯಜೀವಿ ರಕ್ಷಣೆ, ಮುಂತಾದುವುಗಳಿಗೆ ಪ್ರಾಯೋಗಿಕ ಪರಿಹಾರವನ್ನು ಕಂಡುಕೊಳ್ಳಲಾರದ ಸರಕಾರ ತನ್ನ ಭಂಡತನವನ್ನು ಮರೆಮಾಚಲು ಯುನೆಸ್ಕೋ ಜತೆ ಗುದ್ದಾಡಿದೆವೆಂಬ ಹಮ್ಮಿಗೆ ಬಿದ್ದು ವರ್ತಿಸುತ್ತಿರುವುದು ತಪ್ಪು. ಇದರಿಂದ ಯುನೆಸ್ಕೋ ಕಳೆದುಕೊಳ್ಳುವುದು ಏನೂ ಇಲ್ಲ, ನಷ್ಟವಾಗುವುದು ನಮ್ಮೆಲ್ಲರಿಗೆ ಮತ್ತು ನಮ್ಮನಿಮ್ಮೆಲ್ಲರನ್ನೂ ಕಾಪಾಡುತ್ತಿರುವ ಜೈವಿಕ ವ್ಯವಸ್ಥೆಗೆ.
ಹಂಪಿಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲಾಗದೇ ಇರುವುದು ಸರಕಾರದ ಅಸಮರ್ಥತೆಯ ನಿದರ್ಶನ.
ಅಭಿವೃದ್ಧಿಯೆಂದರೆ ಕಾಂಕ್ರೀಟ್ ಕಟ್ಟಡ, ಟಾರು ರಸ್ತೆ, ವ್ಯಾಪಾರೀ ಮಳಿಗೆಗಳನ್ನು ನಿರ್ಮಿಸಲು ತಮ್ಮ ರಾಜಕೀಯ ಕಾರ್ಯಕರ್ತರಿಗೆ ಅನುವು ಮಾಡಿಕೊಡುವುದು ಎಂದುಕೊಂಡಿರುವುದು ನಮ್ಮ ತಿಳುವಳಿಕೆಗಿರುವ ಮಿತಿ. ಸೀಮಿತ ಸಂಪನ್ಮೂಲಗಳನ್ನು ಸುಸ್ತಿರವಾಗಿ ಉಳಿಸಿಕೊಂಡೇ ಹೆಜ್ಜೆ ಮುಂದಿಡಬೇಕಾದ ಅಗತ್ಯ ಹಿಂದೆಂದಿಗಿಂತಲೂ ಇಂದಿದೆ. ಅಲ್ಲಲ್ಲಿ ಅಲ್ಪಸ್ವಲ್ಪ ಉಳಿದಿರುವ ಕಾಡನ್ನು ವಿಚಲಿತಗೊಳಿಸದೇ ಅಭಿವೃದ್ಧಿ ಸಾಧಿಸಲು ಪ್ರಯತ್ನಿಸದಿರುವುದೇ ನಮ್ಮ ದೌರ್ಬಲ್ಯ.
ಅರಣ್ಯ ಮತ್ತು ಪರಿಸರವೆಂದರೆ ಮರಮುಟ್ಟು ನೀಡುವ ಅಕ್ಷಯ ಖಜಾನೆ ಎಂದುಕೊಂಡಿರುವ ನಾಯಕರು, ಬಂಜರು ಪ್ರದೇಶದಲ್ಲಿ ನೀಲಗಿರಿ, ಅಕೇಶಿಯಾ, ಸಾಗುವಾನಿ ಗಿಡಗಳನ್ನು ನೆಡುವದರಿಂದಲೇ ಅರಣ್ಯ ಸೃಷ್ಟಿಮಾಡಿದೆವೆಂದು ಬೀಗುವ ಅಧಿಕಾರಿಗಳು ಸ್ವಲ್ಪ ಪರಿಸರ ಅದ್ಯಯನ ಮಾಡುವುದು ಒಳ್ಳೆಯದು. ಕಲ್ಲು ಕೀಳುವುದು, ಮರ ಉರುಳಿಸುವುದು, ಕಾಡು ಮಳುಗಿಸುವುದು, ಪ್ರವಾಸಿಗರಿಂದ ದುಡ್ಡು ಪೀಕುವುದು, ರೈಲು ಹಳಿ ಹಾಕುವುದು, ಪೈಪ್ಲೈನ್ ಅಳವಡಿಸುವುದು, ವಿದ್ಯುತ್ ಸಾಗಣೆಗೆ ಲೈನ್ ಎಳೆಯುವುದು ಮಾತ್ರ ಅಭಿವೃದ್ಧಿಯಲ್ಲವೆಂದು ಅರಿಯುವುದು ಅಗತ್ಯವಾಗಿದೆ.
ಗಣಿಗಾರಿಕೆ, ಕೈಗಾರಿಕೆ, ಕೃಷಿಭೂಮಿ ಒತ್ತುವರಿ, ಅರಣ್ಯ ಉತ್ಪನ್ನಗಳ ಲೂಟಿ ಇವನ್ನೆಲ್ಲಾ ನಿಯಂತ್ರಣದಲ್ಲಿಡಬೇಕಾದ ಸರಕಾರ ಪಶ್ಚಿಮಘಟ್ಟಕ್ಕೆ ಯುನೆಸ್ಕೋ ನೀಡುತ್ತಿರುವ ಮಾನ್ಯತೆಯನ್ನು ವಿವೇಚನೆಯಿಂದ ಸ್ವಾಗತಿಸಿ, ಸಿಕ್ಕಿರುವ ಗೌರವವನ್ನು ಪಡೆಯಬೇಕು. ನೂರಾರು ದೇಶಗಳು ತಮ್ಮ ಪರಂಪರೆಯ ತಾಣಗಳಿಗೆ ಯುನೆಸ್ಕೋ ಮಾನ್ಯತೆ ಸಿಗಲೆಂದು ಆಶಿಸುತ್ತಿರುವಾಗ ಕರ್ನಾಟಕ ವಿಮುಖತೆ ಆಶ್ಚರ್ಯ ಹಾಗೂ ಮರುಕ ಉಂಟುಮಾಡುತ್ತದೆ. ಬಂಡವಾಳಶಾಹಿಗಳು ಹಾಗೂ ಗುತ್ತಿಗೆದಾರರೇ ಈ ಸರಕಾರವನ್ನು ನಡೆಸುತಿದ್ದಾರೋ ಎಂಬ ಅನುಮಾನ ಉಂಟಾಗುತ್ತಿದೆ. ಜನಸೇವೆ ಮಾಡಲು ಆಯ್ಕೆಯಾದವರು ಜನರ ಮೇಲೇ ಸವಾರಿ ಮಾಡುವುದು ಸರಿಯಲ್ಲ.
ಕಾಡಿನೊಳಗೆ ಪ್ರವೇಶಿಸಿದೊಡನೆ ಎದುರಾಗುವ ಮರದಿಂದ ಎಷ್ಟು ಚದರಡಿ ನಾಟಾ ಪಡೆಯಬಹುದೆನ್ನುವುದು, ಕಾಡು ಸವರಿ ತೋಟಮಾಡಿದರೆ ಎಷ್ಟು ಬೆಳೆ ತೆಗೆಯಬಹುದೆನ್ನುವುದು, ಕರಿಕಲ್ಲು ಕಿತ್ತರೆ ಎಷ್ಟು ಗಳಿಸಬಹುದೆನ್ನುವುದು, ನೆಲ ಅಗೆದರೆ ಎಷ್ಟು
ಅದಿರು ಸಾಗಿಸಬಹುದೆನ್ನುವುದು, ನೀರು ಕಟ್ಟಿ ನಿಲ್ಲಿಸಿದರೆ ಎಷ್ಟು ಕಮಿಷನ್ ಪಡೆಯಬಹುದೆನ್ನುವುದು, ಗಿರಿಜನರನ್ನು ಸ್ಥಳಾಂತರಿಸಿದರೆ ಹುಟ್ಟುವ ಕಾಲೋನಿಗಳಲಿ ಎಷ್ಟು ಓಟು ಪಡೆಯಬಹುದೆನ್ನುವುದು, ರಸ್ತೆ ನಿರ್ಮಾಣ ಮಾಡಲು ಗುತ್ತಿಗೆ ನೀಡಿದರೆ ಪಾರ್ಟಿಗೆ ಎಷ್ಟು ಫಂಡ್ ಪಡೆಯಬಹುದೆಂದು ಯೋಚಿಸುವುದನ್ನು ಬಿಟ್ಟು ಮರದ ಮೇಲಿರುವ ಆರ್ಕಿಡ್ , ತೊಗಟೆಯಡಿ ವಾಸಿಸುವ ಹುಳುಹುಪ್ಪಟೆಗಳು, ಕಪ್ಪೆಗಳು, ಪೊಟರೆಯ ಪಕ್ಷಿಗಳು, ನೆಲದಲ್ಲಿನ ಅಣಬೆಗಳು, ಮರಗಳು ಬೇರಿಳಿಸಿ ಬಾಷ್ಪೀಕರಿಸುವ ನೀರು, ನೆಲದಡಿಯ ಸೂಕ್ಷ್ಮ ಜೀವಿಗಳು, ಕಲ್ಲಿನಡಿಯ ನೀರಿನ ಸಂಗ್ರಹ, ದೊಣೆಗಳೊಳಗಿನ ಸರೀಸೃಪಗಳು ಇವುಗಳನ್ನು ಗಮನಿಸಲಿ. ಇವೆಲ್ಲವೂ ಸೇರಿಯೇ ಅರಣ್ಯವಾಗುತ್ತದೆ.
ಪಶ್ಚಿಮಘಟ್ಟವನ್ನು ವಿಶ್ವಪರಂಪರೆಯ ಪಟ್ಟಿಗೆ ಯಾಕೆ ಸೇರಿಸಬೇಕೆಂದು ಕೇಳಿದರೆ ಕನಿಷ್ಟ ನೂರು ಕಾರಣ ನೀಡಬಹುದಾದರೆ, ಯಾಕೆ ಸೇರಿಸಬಾರದೆಂಬುದಕ್ಕೆ ಮೂರು ವಿತಂಡವಾದಗಳು ಸಿಗಬಹುದು. ಜೈವಿಕ ಪರಿಸರ, ಪರಿಸರ ವಿಜ್ಞಾನ, ಮಾಲಿನ್ಯ ನಿಯಂತ್ರಣ, ಅರಣ್ಯ ಸಂರಕ್ಷಣೆ ಮುಂತಾದುವುಗಳ ಬಗ್ಗೆ ತಳಮಟ್ಟದ ಚರ್ಚೆಯಾಗಬೇಕು. ಇಂದಿನ ಲಾಭಕ್ಕಾಗಿ ಮಿಲಿಯಾಂತರ ವರ್ಷಗಳ ಈ ಭೂಮಿಯನ್ನು ಬಲಿಕೊಡುವುದು ಬೇಡ. ಯುನೆಸ್ಕೋ ಪರಂಪರಾ ತಾಣಗಳ ನಿರ್ವಹಣೆಯ ಕುರಿತಾದ ನೀತಿನಿಯಮಾವಳಿಗಳನ್ನೇ ಪೂರ್ಣವಾಗಿ ಅಧ್ಯಯನ ಮಾಡದೇ ಸಾರಾಸಗಟಾಗಿ "ಜುಟ್ಟು" ಹೇಳಿಕೆಯನ್ನು ನೀಡಿರುವುದು ಎಷ್ಟರಮಟ್ಟಿಗೆ ಸರಿ? ಅರಣ್ಯ ಇಲಾಖೆಯ ಅಧಿಕಾರಿಗಳಲ್ಲದೇ ಆ ಕ್ಷೇತ್ರದಲ್ಲಿ ಪರಿಣತಿ, ಆಸಕ್ತಿಯುಳ್ಳ ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳು, ವಿಜ್ಞಾನಿಗಳು ಸೇರಿ ಸಮಗ್ರವಾಗಿ ಪರಂಪರಾತಾಣಗಳ ಉಸ್ತ್ತುವಾರಿ ಮಾಡಬೇಕೆನ್ನುವುದನ್ನು
ಯುನೆಸ್ಕೋ ಸೂಚಿಸುತ್ತದೆ. ಪ್ರವಾಸಿಗಳು ಬರಲಿ, ಬಿಡಲಿ ನಮಗೆ ನಮ್ಮ ಅರಣ್ಯ ಪ್ರದೇಶದ ಸೂಕ್ಷ್ಮ ಮೂಲಸ್ವರೂಪವನ್ನು ಉಳಿಸಿಕೊಳ್ಳುವುದು ಮುಖ್ಯ.
ವೈಜ್ಞಾನಿಕ ಅನ್ವೇಷಣೆಗಳ ಅಳವಡಿಕೆ, ಐಷಾರಾಮಿ ಜೀವನ ಶೈಲಿಗಳ ಅನುಕರಣೆ, ವಿದೇಶೀ ಜೀವನ ಶೈಲಿಗಳತ್ತ ನೋಡುವ, ದನ ಸಾಕುವುದು ಹೇಗೆಂದು ತಿಳಿಯಲು ವಿದೇಶೀ ಪ್ರವಾಸ ಹೋಗುವ ಮಂತ್ರಿ ಮಹೋದಯರಿಗೆ, ಶೌಚಗೃಹಗಳ ನಿರ್ಮಾಣ ತಂತ್ರಜ್ಞಾನ ತಿಳಿಯಲು ವಿದೇಶಕ್ಕೆ ಅದ್ಯಯನ ತಂಡವನ್ನು ಕಳಿಸುವ ಸರಕಾರಕ್ಕೆ, ಕೆರೆ ಹೂಳೆತ್ತುವ ನೆಪದಲ್ಲಿ, ರಸ್ತೆ ನಿರ್ಮಾಣದ ಕಾರಣಕ್ಕೆ, ಚೆರಂಡಿ ನಿರ್ಮಾಣದ ನೆಪದಲ್ಲಿ ದುಡ್ಡುಹೊಡೆಯಲು ವಿಶ್ವಬ್ಯಾಂಕ್ ನೆರವಿಗೆ ಕೈಒಡ್ಡುವ ನಮಗೆ, ನಮ್ಮ ಕಾಡನ್ನು ರಕ್ಷಣೆ ಮಾಡಲು ವಿಶ್ವಸಂಸ್ಥೆಯ ನೆರವಿನ ಅಗತ್ಯವಿಲ್ಲ ಎನ್ನುವುದು ಹಾಸ್ಯಾಸ್ಪದವಾಗಿ ಕಾಣುತ್ತದೆ. ನಾವೇ ಸ್ಥಳೀಯರು ರಕ್ಷಣೆ ಮಾಡುತ್ತೇವೆಂದು ಈವರೆವಿಗೆ ಕಾಪಾಡಿಕೊಂಡಿರುವುದು ನಮ್ಮ ಕಣ್ಣಮುಂದಿದೆ. ನಮ್ಮೊಡನೆ ಯಾರೋ ಸದುದ್ದೇಶ ಹೊಂದಿರುವವರು ಕೈಜೋಡಿಸಿದರೆ ಎಲ್ಲಿ ನಮ್ಮಗಳ ಹುನ್ನಾರ ಜಾರಿಯಾಗಲು ಕಷ್ಟವಾಗುತ್ತದೋ ಎಂಬ ಭಯ ಅಧಿಕಾರಸ್ಥರನ್ನು ಕಾಡುತ್ತಿದೆ. ಈ ಅರಣ್ಯ ಪ್ರದೇಶ ಯಾರೊಬ್ಬರ ಸ್ವಂತ ಆಸ್ತಿಯಲ್ಲ, ಇಡೀ ಜಗತ್ತಿನ ಜೀವರಾಶಿಯ ಮಿಲಿಯಾಂತರ ವರ್ಷಗಳ ಫಲಶೃತಿ.
ಸ್ಥಳೀಯರಿಗೆ ಇಲ್ಲಸಲ್ಲದ ಸುಳ್ಳು ಹೇಳಿ, ಆಮಿಷ ಒಡ್ಡಿ ಹಾದಿತಪ್ಪಿಸುವುದನ್ನು ಬಿಟ್ಟು ಪಶ್ಚಿಮ ಘಟ್ಟವನ್ನು ಕಾಪಾಡುವತ್ತ
ಗಮನ ಹರಿಸುವುದು ಮತ್ತು ಜವಾಬ್ದಾರಿಯುತ ಹಾಗೂ ತಿಳುವಳಿಕೆಯುಳ್ಳ ನಾಗರೀಕರನ್ನು ಒಳಗೊಂಡ ಜೈವಿಕ ಪರಿಸರ ರಕ್ಷಣಾ ತಂಡಗಳನ್ನು ತಾಲ್ಲೂಕುವಾರು ರಚಿಸುವುದು ಇಂದಿನ ಅಗತ್ಯವಾಗಿದೆ .ಅರಣ್ಯವಾಸಿಗಳನ್ನು ಯಾವುದಾದರೂ ನೆಪದಲ್ಲಿ ಒಕ್ಕಲೆಬ್ಬಿಸಿ ಉದ್ದಿಮೆಗಳಿಗೆ ಕಾರ್ಮಿಕರನ್ನು ಸೃಷ್ಟಿಸಲು ಪ್ರಯತ್ನಿಸುತ್ತಿರುವ ಬಂಡವಾಳಶಾಹಿಗಳೊಂದಿಗೆ ಕೈಜೋಡಿಸುತ್ತಿರುವ ಆಡಳಿತ ವ್ಯವಸ್ಥೆ ತಮ್ಮ ಅಧಿಕಾರದ ಅವದಿಯಲ್ಲಿ ಇಡೀ ಕಾಡನ್ನೇ ಹರಾಜು ಹಾಕಲು ಹೊರಟಿರುವುದು ವಿಪರ್ಯಾಸ. ಸ್ಥಳೀಯ ಅಮಾಯಕ ಜನರಿಗೆ ಪರಿಹಾರ ಹಣದ ಆಮಿಷ ಒಡ್ಡಿ ಅವರನ್ನು ಹಾದಿ ತಪ್ಪಿಸಲು ಸರಕಾರದ ಬಳಿ ಸಾಕಷ್ಟು ದಾರಿಗಳಿವೆ. ಕೃಷಿ ಮಾಡುವುದು ನಷ್ಟದ ಬಾಬತ್ತೆಂದು ರೈತರಿಗೆ ಅನ್ನಿಸುವಂತೆ ಪರಿಸ್ಥಿತಿ ಸೃಷ್ಟಿಮಾಡಿ, ಪರಿಹಾರ ರೂಪದ ಹಣದಲ್ಲಾದರೂ ಜೀವನ ಮಾಡುವ ಎಂದು ನಗರಕ್ಕೆ ವಲಸೆ ಹೋಗುವಂತೆ ಮಾಡುವುದು, ನಗರದಲ್ಲಿ ಇರುವ ಅಧಿಕಾರಸ್ತರ
ಉದ್ದಿಮೆಗಳಿಗೆ ಕೂಲಿ-ಕಾರ್ಮಿಕರನ್ನು ಪೂರೈಕೆ ಮಾಡುವುದು ಇದರ ಪರೋಕ್ಷ ಹುನ್ನಾರ. ಇಲ್ಲಿ ರೈತರು ಮೂರುಕಾಸಿಗೆ ಮಾರಿದ ಭೂಮಿಯನ್ನು ತಾವೇ ಖರೀದಿಸಿ, ರೈತರನ್ನೇ ಕೂಲಿಗಿಟ್ಟುಕೊಳ್ಳುವ ವ್ಯವಸ್ಥಿತ ಲೂಟಿಯ ಭಾಗವೇ ಈ ಎಲ್ಲಾ ವಿದ್ಯಮಾನಗಳು.
ಈಗ ಗುರುತಿಸಿರುವ ಅರಣ್ಯಪ್ರದೇಶಗಳು ಮಾತ್ರವಲ್ಲ, ರಾಜ್ಯದಾದ್ಯಂತ ಇರುವ ಇನ್ನೂ ಹಲವು ತಾಣಗಳನ್ನು ಆಯ್ಕೆ ಮಾಡಿ ಶೀಘ್ರವೇ ಯುನೆಸ್ಕೋ ಮಾನ್ಯತೆಗೆ ಶಿಫಾರಸ್ಸು ಮಾಡಿ ಸರಕಾರ ಕೋರಿಕೆ ಸಲ್ಲಿಸಬೇಕು.
ಮರಗಳ್ಳರು, ಗಣಿಕೋರರು, ಅರಣ್ಯ ಒತ್ತುವರಿದಾರರು, ರೆಸಾರ್ಟ್ ಬಂಡವಾಳಿಗರು, ಭ್ರಷ್ಟ ಅಧಿಕಾರಿಗಳು, ಸಮಯ ಸಾಧಕ ರಾಜಕಾರಣಿಗಳು, ಒಟ್ಟಾಗಿ ಸೇರಿ ನಡೆಸಿರುವ ಈ ಲಾಬಿಗೆ ಸರಕಾರ ಮಣಿದರೆ ಈ ರಾಜ್ಯದ ಜನತೆ ಅವರನ್ನು ಎಂದೂ ಕ್ಷಮಿಸಲಾರರು. ಜೈವಿಕ ಪರಿಸರ ಎಂದರೆ ಮೂಲಭೂತವಾಗಿ ಏನೆಂದೇ ತಿಳಿಯದವರು ವಾದ ಮಂಡಿಸುವುದನ್ನು ನೋಡಿದರೆ ನಾವು ಈ ಮಟ್ಟಿಗಿನ ಬೌದ್ಧಿಕ ಅಧ:ಪತನ ಕಂಡಿದ್ದೇವೆಯೇ ಎಂದು ದಿಗ್ಬ್ರಮೆ ಉಂಟಾಗುತ್ತಿದೆ. ಓಟು ಗಳಿಸಿ ಅಧಿಕಾರ ಪಡೆದಿದ್ದಾರೆ ಎಂಬ ಒಂದೇ ಕಾರಣಕ್ಕೆ ರಾಜಕಾರಣಿಗಳ ಮುಂದೆ ಈ ನಾಡಿನ ಬುದ್ಧಿಜೀವಿಗಳು ಅಂಗೈಯಷ್ಟು ಸ್ಪಷ್ಟವಾಗಿರುವ ಸತ್ಯವನ್ನು ಪ್ರತಿಪಾದಿಸಲು ಕೈ ಮುಗಿದು ಪ್ರಾರ್ಥಿಸುವ ಪರಿಸ್ಥಿತಿ ನಿರ್ಮಾಣವಾಗಿದೆಯೆಂದರೆ ನಮ್ಮೆಲ್ಲರಿಗೂ ನಾಚಿಕೆಯ ವಿಷಯ. ಹೊಟ್ಟೆಗೆ ಅನ್ನ ತಿನ್ನಿ ಎಂದು ಹೇಳುವುದಕ್ಕೂ ಕೈ ಜೋಡಿಸಿ ಬೇಡಬೇಕಾಗಿರುವುದು ಪರಿಸ್ಥಿತಿಯ ವ್ಯಂಗ್ಯ. ಮಲೆಕುಡಿಯರು, ಸಿದ್ಧಿಯರನ್ನು ಮುಖ್ಯವಾಹಿನಿಗೆ ತರುತ್ತೇವೆಂದು ಬಂಬಡಾ ಬಾರಿಸುತ್ತಿರುವುದರ ಹಿಂದೆ ಇರುವ ಉದ್ದೇಶ ಎಂಥವರಿಗೂ ಅರ್ಥವಾಗುವಂಥದ್ದೇ. ಕಾಡುಜನರಿಗಾಗಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತಿದ್ದೇವೆ ಎಂದು ಜಾಗಟೆ ಹೊಡೆಯುತ್ತಿರುವವರು ಈ ಎಲ್ಲಾ ಕಾರ್ಯಗಳನ್ನು ಅರಣ್ಯ ಲೂಟಿ ಹೊಡೆಯಲು ಮೂಲಸೌಕರ್ಯವಾಗಿ ಹೊಂದಿಸಿಕೊಳ್ಳುತ್ತಿದ್ದಾರೆ ಅಷ್ಟೇ. ಇಲ್ಲಿನ ಕಾಮಗಾರಿಗಳ ಗುತ್ತಿಗೆಯ ಫಲಾನುಭವಿಗಳು ಆಯಾ ಪಕ್ಷದ ಕಾರ್ಯಕರ್ತರುಗಳು. ಕೆಲಸಕ್ಕಾಗಿ ಗುತ್ತಿಗೆಯಲ್ಲ, ಗುತ್ತಿಗೆದಾರರಿಗಾಗಿ ಕೆಲಸದ ಸೃಷ್ಟಿಯಾಗುತ್ತಿದೆ. ನಮ್ಮ ಕಾನೂನಿನ ಸದುಪಯೋಗ ಪಡೆದು ಈವರೆಗೆ ಅರಣ್ಯ ರಕ್ಷಣೆ ಮಾಡಿರುವುದರ ಚಿತ್ರಣ ನಮ್ಮ ಮುಂದೆ ಇದೆ. ವಿಶ್ವ ಪರಂಪರೆಯ ಪಟ್ಟಿಗೆ ಅರಣ್ಯ ಪ್ರದೇಶವನ್ನು ಸೇರಿಸುವುದರಿಂದ ಯಾವುದೇ ಲಾಭವಿಲ್ಲ ಎಂದಿರುವ ಸಚಿವರು ಈ "ಲಾಭ" ಪದದ ಅರ್ಥವ್ಯಾಪ್ತಿಯನ್ನು ವಿವರಿಸಿದರೆ ಈ ನಾಡಿನ ಜನತೆಗೆ ಉಪಕಾರವಾಗುತ್ತದೆ.
ನಮಗೆ ಪ್ರವಾಸೋದ್ಯಮದ ಹೆಸರಿನಲ್ಲಿ ಹರಿದು ಬರುವ ಹಣ ಬೇಡ. ಹಣದಿಂದ ನಮಗೆ ಆಮ್ಲಜನಕ, ಶುಭ್ರ ನೀರು, ಆರೋಗ್ಯಕರ ವಾತಾವರಣ ಸಿಗುವುದಿಲ್ಲ. ನಮಗೆ ನಮ್ಮ ಅರಣ್ಯ ಉಳಿಯಬೇಕು, ಹೆಚ್ಚು ವಿಸ್ತಾರವಾಗಿ ಬೆಳೆಯಬೇಕು ಮತ್ತು ನೈಸರ್ಗಿಕವಾಗಿರಬೇಕು. ಅರಣ್ಯದೊಳಗೆ ಬದುಕುತ್ತಿರುವವರು ಈ ಮೂರನ್ನು ಗಮನದಲ್ಲಿಟ್ಟುಕೊಂಡು ಪ್ರಕೃತಿಯೊಡನೆ ಹೊಂದಿಕೊಂಡು ಜೀವಿಸಬೇಕು.
2005ರಲ್ಲಿ ಕರ್ನಾಟಕ ಸರಕಾರವೇ ಯುನೆಸ್ಕೋ ಮಾನ್ಯತೆ ಕೋರಿ ಮನವಿ ಸಲ್ಲಿಸಿದ್ದರೆ ಇಂದಿನ ಸರಕಾರ ಸಿಕ್ಕಿರುವ
ಮಾನ್ಯತೆಯನ್ನು ತಿರಸ್ಕರಿಸಿ ಭಾರೀ ಪ್ರಮಾದವನ್ನೇ ಮಾಡುತ್ತಿದೆ. ಜನತೆ ತಮಗೆ ನೀಡಿರುವ ಪರಮಾಧಿಕಾರದಿಂದ ಈ ವರೆವಿಗೆ ಏನೇನನ್ನು ಮಾಡಿದ್ದೀರೆಂಬುದು ಕಣ್ಣೆದುರೇ ಇದೆ. ಯಾರಿಗೂ ಬೇಕಿಲ್ಲದ ಕಾಮಗಾರಿಗಳನ್ನು ಅರಣ್ಯದೊಳಗೆ ನಡೆಸಿದ್ದರಿಂದ ಸರಕಾರೀ ಖಜಾನೆ ಖಾಲಿಯಾಯ್ತಲ್ಲದೇ, ಹಿಂಬಾಲಕರ ಜೇಬು ಈ ನೆಪದಲ್ಲಿ ತುಂಬಿತು. ಪರಂಪರಾ ತಾಣವಾಗಿ ಗುರುತಿಸಿರುವ ಹತ್ತು ಸ್ಥಳಗಳಲ್ಲಿ 5 ತಾಣಗಳು ರಾಷ್ಟ್ರೀಯ ಉದ್ಯಾನ ಮತ್ತು ವನ್ಯಜೀವಿ ಧಾಮಗಳಾಗಿದ್ದು, ಇನ್ನು 5 ತಾಣಗಳು ರಕ್ಷಿತಾರಣ್ಯಗಳೇ ಆಗಿವೆ. ಸರಕಾರ ಈ ವರೆಗೆ ಮಾಡಿರುವ ಸಂರಕ್ಷಣಾ ಕೆಲಸಗಳನ್ನು ಮಾನ್ಯಮಾಡುವುದಷ್ಟೇ ಯುನೆಸ್ಕೋದ ಉದ್ದೇಶವಾಗಿದೆ.
ಕೆಸರಿನಲ್ಲಿ ಸಿಕ್ಕಿಹಾಕಿಕೊಂಡಿರುವ ವಾಹನವನ್ನು ತಳ್ಳಲು ನಮ್ಮ ಜೊತೆ ದಾರಿಹೋಕರ್ಯಾರೋ ಕೈಜೋಡಿಸಿದಂತೆ ಅಷ್ಟೇ. ಅದಕ್ಕೆ ಯಾಕೆ ಈ ಅವಾಂತರ ಸೃಷ್ಟಿಯಾಗಿದೆಯೋ ಆಶ್ಚರ್ಯವಾಗುತ್ತದೆ.
ವನಮಹೋತ್ಸವದಂದು ಒಂದು ಗಿಡವನ್ನು ಕೈಯಲ್ಲಿ ಹಿಡಿದು ಫೋಟೋ ತೆಗೆಸಿಕೊಂಡು, ಪೇಪರಿನಲ್ಲಿ ಹಾಕಿಸಿಕೊಳ್ಳುವುದೇ ಪರಿಸರ ರಕ್ಷಣೆ ಎಂದುಕೊಂಡಿರುವುದು ಹಾಸ್ಯಾಸ್ಪದ. ಯಾರೋ ಕೆಲವು ಬುದ್ಧಿಗೇಡಿಗಳ ತಪ್ಪು ನಿರ್ಧಾರದಿಂದ ಕರ್ನಾಟಕದ ಜನತೆ ಮೂರ್ಖರೆಂಬ ಹಣೆಪಟ್ಟಿ ಧರಿಸುವ ಕಾಲ ಬಂದಿದೆ.
ಅತ್ಯಂತ ಮುಖ್ಯ ನಿರ್ಧಾರವನ್ನು ಮತ್ತು ಸಮಸ್ಯೆಗಳನ್ನು ಜನರಿಂದ ದೂರವಿಟ್ಟು ಮುಚ್ಚಿಹಾಕುವ ಹುನ್ನಾರ ನಾಡಿಗೆ
ಒಳಿತನ್ನು ಮಾಡುವುದಿಲ್ಲ. ನಮ್ಮ ನೈಸರ್ಗಿಕ ಕಾಡನ್ನು ಮೂಲಧನವನ್ನಾಗಿಟ್ಟುಕೊಂಡು ಅದರಿಂದ ಬರುವ ಬಡ್ಡಿಯನ್ನಷ್ಟೇ ನಾವು ಬಳಸುವುದನ್ನು ಬಿಟ್ಟು ಮೂಲ ಬಂಡವಾಳವನ್ನೇ ಬೇಕಾಬಿಟ್ಟಿಯಾಗಿ ಬಳಸಿಕೊಳ್ಳುತ್ತಿದ್ದೇವೆ. ಜೀವಮಂಡಲದ ಮೇಲೆ ದಬ್ಬಾಳಿಕೆ ನಡೆಸದಂತೆ ಬದುಕುವುದರಲ್ಲಿ ನಾಡಿನ ಘನತೆ-ಗೌರವ ಇದೆ.
ಧನಂಜಯ ಜೀವಾಳ ಬಿ.ಕೆ.
ಪರಿಸರ ಕಾರ್ಯಕರ್ತ, ಮೂಡಿಗೆರೆ.
ವೈವಿಧ್ಯ
ಸಾಮಾನ್ಯವಾಗಿ ನಮ್ಮ ಕೈಗೆ ಹಣ್ಣು-ತರಕಾರಿಗಳು ಸಿಕ್ಕರೆ ಏನು ಮಾಡುತ್ತೇವೆ? ಅವು ನಮ್ಮ ಹೊಟ್ಟೆ ಸೇರಲು ಏನು ವ್ಯವಸ್ಥೆ ಬೇಕೋ ಅದನ್ನು ಮಾಡುತ್ತೇವೆ. ಆದರೆ ಹುಬ್ಬಳ್ಳಿಯಲ್ಲಿ ಕೇಶವನ್ ಗಾಂಧಿ ಎನ್ನುವವರು ಹಣ್ಣು-ತರಕಾರಿಗಳನ್ನು ಉಪಯೋಗಿಸಿಕೊಂಡು ವಿವಿಧ ಕಲಾಕೃತಿಗಳನ್ನು ರಚಿಸುತ್ತಾರೆ!! ಮದುವೆ ಹಾಗು ಇನ್ನಿತರ ಸಮಾರಂಭಗಳಲ್ಲಿ ಕೇಶವನ್ ಅವರು ತಮ್ಮ ಕಲಾಕೃತಿಗಳ ಪ್ರದರ್ಶನ ನಡೆಸುತ್ತಾರೆ.ಕುಂಬಳಕಾಯಿಯಿಂದ ಗಣಪತಿಯನ್ನು ರಚಿಸಿದರೆ, ಬಿಟರೂಟ, ಗಜ್ಜರಿ, ಮೂಲಂಗಿ, ಕಲ್ಲಂಗಡಿ ಇವನ್ನೆಲ್ಲ ಬಳಸಿಕೊಂಡು ಹೂವು ತಯಾರಿಸುತ್ತಾರೆ. ಬಾಳೆಹಣ್ಣು, ಮೆಣಸಿನಕಾಯಿ, ಸವತೆಕಾಯಿಗಳಿಂದ ವಿವಿಧ ಪ್ರಾಣಿಗಳು ಸಿದ್ಧವಾಗುತ್ತವೆ.
ಶ್ರೀಧರ ಅಣಲಗಾರ,
ನಂದೊಳ್ಳಿ, ಯಲ್ಲಾಪುರ
ಈ ಕನಸು ಅವಾರ್ಡ್
ಪಯಣಿಗನ
ಜೊತೆಗಾರ
-ಮಲ್ಲಿಕಾ ಭಟ್ ಪರಪ್ಪಾಡಿ.
ಏಕಚಿತ್ತ
ಯಾವುದೇ ಸಾಧನೆ ಸಫಲಗೊಳ್ಳಬೇಕಾದರೆ ಶ್ರಮ ಪಡಬೇಕು. ಕೇವಲ ಶ್ರಮಪಟ್ಟರೆ ಸಾಲದು, ಸಾಧನೆ ಫಲಿಸುವವರೆಗೂ ನಿರಂತರ ಪ್ರಯತ್ನವನ್ನು ಏಕಚಿತ್ತದಿಂದ ಮಾಡಬೇಕಾಗುತ್ತದೆ. ಮನಸಿದ್ದರೆ ಮಾರ್ಗ ಎಂಬ ಮಾತನ್ನು ಬಿಹಾರಿನ ದಶರಥ ಮಾಂಜಿ ಕಾರ್ಯರೂಪದಲ್ಲಿ ಮಾಡಿ ತೋರಿಸಿದ್ದಾನೆ. ಗಯಾ ಜಿಲ್ಲೆಯ ಗೆಲೌರ್ ಆತನ ಕುಗ್ರಾಮ. ಅಲ್ಲಿಯ ಜನ ಕುಡಿಯುವ ನೀರಿಗಾಗಿ ಪಕ್ಕದ ಹಳ್ಳಿಯಾದ ವಜೀರ್ಗಂಜ್ ಗೆ ಹೋಗಬೇಕು. ಅಲ್ಲಿಗೆ ಹೋಗಲು ದಾರಿ ಸರಿಯಾಗಿಲ್ಲ. ಎರಡು ಹಳ್ಳಿಗಳ ಮಧ್ಯೆ ಒಂದು ಗುಡ್ಡ ಇದೆ. ಅದನ್ನು ಬಳಸಿಕೊಂಡು ಕಾಲುದಾರಿಯಲ್ಲಿ ಹೋಗಬೇಕಾಗುತ್ತದೆ. ನೀರು ತರಲು ದೂರವೂ ನಡೆಯಬೇಕು ಮತ್ತು ಹೆಚ್ಚು ಶ್ರಮವೂ ಪಡಬೇಕು.
ದಶರಥನ ಪತ್ನಿ ಫಗುಣಿದೇವಿ ನೀರು ತರಲು ಹೋಗಿ ತುಂಬಾ ಹೊತ್ತಾಗಿದೆ. ಅವಳ ಬರುವನ್ನೇ ಕಾಯುತ್ತಾ ದಶರಥ ತನ್ನ ಗುಡಿಸಲ ಮುಂದೆ ಕುಳಿತಿದ್ದಾನೆ. ಏಕೆ ಈ ದಿನ ಇಷ್ಟು ತಡಮಾಡುತ್ತಿದ್ದಾಳೆ ಎಂದು ಯೋಚಿಸುವಷ್ಟರಲ್ಲಿ, ದೂರದಲ್ಲಿ ಅವಳ ಹೆಂಡತಿ ಕುಂಟುತ್ತಾ ಬರುತ್ತಿರುವದನ್ನು ನೋಡಿದ. ಆಕೆ ಸಮೀಪ ಬಂದಳು. ವಿಚಾರಿಸಿದಾಗ, ಕಾಲು ಜಾರಿ ಬಿದ್ದು ಗಾಯಗಳಾಗಿವೆ, ಇದ್ದ ಒಂದೇ ಒಂದು ಮಡಕೆಯೂ ಸಹ ಚೂರುಚೂರಾಗಿ ಹೋಯಿತೆಂದು ನೋವಿನಿಂದ ಹೇಳಿಕೊಂಡಲು.
ಗಂಡನಿಗೆ ಎಲ್ಲಿಲ್ಲದ ಕೋಪ ಬಂತು. ಯಾರ ಮೇಲೆ ಕೋಪ....? ಹೆಂಡತಿಯ ಮೇಲಲ್ಲ. ಹಾಳು ಹಳ್ಳಿಯ ಮೇಲಲ್ಲ. ತನ್ನ ಕಡು ಬಡತನದ ಮೇಲಲ್ಲ. ರಾಜಕಾರಣಿಗಳ ಮೇಲಲ್ಲ. ಸಮಾಜದ ವ್ಯವಸ್ಥೆಯ ಮೇಲಲ್ಲ. ಆತನಿಗೆ ಕೋಪ ಬಂದಿದ್ದು ಗುಡ್ಡದ ಮೇಲೆ. ಗುಡ್ಡ ಸೀಳಿ, ಎರಡು ಹಳ್ಳಿಗಳ ಮಧ್ಯೆ ದಾರಿ ಮಾಡಬೇಕೆಂದು ಯೋಚಿಸಿದ. ಇದರಿಂದ ಜನರಿಗೂ ಅನುಕೂಲವಾಗುತ್ತದೆ ಮತ್ತು ತನ್ನ ಪ್ರೀತಿಯ ಪತ್ನಿ ನೀರಿಗಾಗಿ ಕಷ್ಟ ಪಡುವುದು ತಪ್ಪುತ್ತದೆ ಎಂದು ಮನಗಂಡು ಸುತ್ತಿಗೆ ಹಿಡಿದು ಗುಡ್ಡದ ತಪ್ಪಲಿಗೆ ಬಂದು ಗುಡ್ಡ ಸೀಳುವುದನ್ನು ಪ್ರಾರಂಭಿಸಿದ. ಒಬ್ಬಂಟಿಯಾಗಿ 22 ವರ್ಷಗಳ ಕಾಲ ಬೆಟ್ಟ ಕೊರದು, 360 ಅಡಿ ಉದ್ದದ ಮತ್ತು 16 ಅಡಿಗಳಷ್ಟು ಅಗಲದ ದಾರಿ ಮಾಡಿದ. ಆ ಮುದಿ ವಯಸ್ಸಿನಲ್ಲೂ ಎಂತಹ ಸಾಧನೆ ನೋಡಿ. ಇದು ಸಾಧನೆಯಲ್ಲವೆಂದು ನಿಮಗನಿಸಿದರೆ, ನಿಮ್ಮ ಮನೆಯಂಗಳದಲ್ಲಿ ಒಂದು ತೆಂಗಿನ ಸಸಿ ನಡೆಲು ಹಳ್ಳ ತೋಡಿ ನೋಡಿ, ಆಗ ನಿಮಗೆ ದಶರಥನ ಶ್ರಮ ಅರ್ಥವಾಗುತ್ತದೆ.
ದಶರಥ ಇಂದು ನಮ್ಮ ನಡುವೆ ಇಲ್ಲ. ಆದರೆ ಅವನು ನಿರ್ಮಿಸಿದ ದಾರಿಯಲ್ಲಿ ಜನ ಓಡಾಡುತ್ತಿದ್ದಾರೆ. ಏಕಚಿತ್ತದಿಂದ ನಿರಂತರ ಶ್ರಮಪಟ್ಟರೆ ಪ್ರತಿಫಲ ಸಿಗದೆ ಇರಲಾರದು. ಪ್ರಿತಿಯೊಬ್ಬರಲ್ಲೂ ಏಕಚಿತ್ತವಿದೆ ಆದರೆ ಅದು ನಮ್ಮಲ್ಲಿ ಎಷ್ಟು ಸಮಯವಿರಬಲ್ಲದು ಎಂಬುವುದೇ ಮೂಲ ಪ್ರಶ್ನೆ.
ಅಮೀತಾಬ್ ಬಚ್ಚನ್ಗೆ ಈಗ 70 ವರ್ಷ ತುಂಬಲಿದೆ. ಸಿನಿಮಾರಂಗದಲ್ಲಿ ಬಂದ ಹೊಸ ಮುಖಗಳು ಒಂದೇ ಒಂದು ವರ್ಷದಲ್ಲಿ ಮರೆಯಾಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಬಚ್ಚನ್ ರ ಏಕಚಿತ್ತವೇ ಅವರನ್ನು ಇಲ್ಲಿಯವರೆಗೆ ಕರೆದುಕೊಂಡು ಬಂದಿದೆ ಎಂಬುದರಲ್ಲಿ ಸಂದೇಹವೇ ಇಲ್ಲ.- ಜಬೀವುಲ್ಲಾ ಖಾನ್.
ವೈವಿಧ್ಯ
ಇದೊಂದು ಪುಟ್ಟ ಮರ! ಸಾಮಾನ್ಯವಾಗಿ ಮರಗಳಿಗೆ ಪುಟ್ಟ ಮರ ಎನ್ನುವುದು ಕಡಿಮೆ. ಚಿಕ್ಕದಾಗಿದ್ದರೆ ಅದನ್ನು ಗಿಡ ಎನ್ನುತ್ತೇವೆ. ಆದರೆ ಬೋನ್ಸಾಯ್ ಮರಗಳನ್ನು ನೋಡಿದರೆ ಪುಟ್ಟ ಮರ ಎಂಬ ಉದ್ಘಾರ ನಮಗರಿವಿಲ್ಲದಂತೆ ಬರುತ್ತದೆ.
ಹಳ್ಳಿಗಳಂತೆ ನಗರ ಪ್ರದೇಶಗಳಲ್ಲಿ ಎಲ್ಲೆಂದರಲ್ಲಿ ಮರಗಳನ್ನು ಬೆಳೆಸಲು ಸಾಧ್ಯವಿಲ್ಲ. ಅದಕ್ಕಾಗಿ ವೈಜ್ಙಾನಿಕ ತಂತ್ರಜ್ಞಾನದ
ನೆರವಿನಿಂದ ಮರಗಳನ್ನು ಕುಂಡದಲ್ಲಿ ಬೆಳೆಸಲಾಗುತ್ತದೆ. ಹಾಗೆ ಬೆಳೆಸಿದ ಮರಗಳನ್ನು "ಬೋನ್ಸಾಯ್ ಟ್ರೀ" ಎಂದು ಕರೆಯುತ್ತಾರೆ.
ಇದನ್ನು ನಗರಗಳ ಮನೆಗಳಲ್ಲಿ ಅಲಂಕಾರಿಕವಾಗಿಯೂ ಇಡಲಾಗುತ್ತದೆ. ಮರವನ್ನು ಕುಂಡದಲ್ಲಿ ಬೆಳೆಸುವುದರಿಂದ ಅದನ್ನು ಎಲ್ಲೆಂದರಲ್ಲಿ ಕೊಂಡೊಯ್ಯಬಹುದು.ಹಳ್ಳಿಯಲ್ಲಿದ್ದರೆ ಸ್ವತಂತ್ರವಾಗಿ, ಸ್ವಚ್ಛಂದವಾಗಿ ಬೃಹದಾಕಾರದಲ್ಲಿ ಬೆಳೆಯುತ್ತಿದ್ದ ನಾನು ನಗರದ ನಾಗರಿಕರ ಕೈಯಲ್ಲಿ ನಲುಗುತ್ತಿದ್ದೇನೆ ಎಂದು ನೋಡುಗರ ಬಳಿ ತನ್ನ ವೇದನೆಯನ್ನು ಹೇಳಿಕೊಳ್ಳುತ್ತಿರುವಂತೆ ಭಾಸವಾಗುತ್ತಿದೆ. ಹಳ್ಳಿಗಳಲ್ಲಿನ ಸಂಸ್ಕೃತಿಯ ವಿಶಾಲತೆ ಹಾಗೂ ನಗರಗಳಲ್ಲಿ ಸಂಸ್ಕೃತಿಯ ಕುಬ್ಜತೆಯನ್ನು ಇದು ಹೇಳುತ್ತಿರಬಹುದೇ?
ಶ್ರೀಧರ ಅಣಲಗಾರ, ನಂದೊಳ್ಳಿ
ಯಲ್ಲಾಪುರ(ಉ.ಕ
ಸಾಹಿತ್ಯ
ಚಿಕ್ಕ೦ದಿನಿ೦ದಲೂ ಸ೦ಪೂರ್ಣ ಬಲು ಸ್ನೇಹ ಭಾವದ ಹುಡುಗಿ.ಅಪ್ಪ-ಅಮ್ಮ೦ದಿರ ಮುದ್ದಿನ
ಮಗಳು.ಎಲ್ಲರ೦ತಲ್ಲ ಆಕೆ,ವಿಭಿನ್ನ ಹುಡುಗಿ.ಎಲ್ಲ ತನ್ನ ಗೆಳೆಯ ಗೆಳತಿಯರನ್ನು
ಸಮಾನವಾಗಿ ಕಾಣುತ್ತಿದ್ದಳು.ಎಲ್ಲರೂ ವಿಜ್ಞಾನ ವಿಷಯ ಪಡೆದು ಇ೦ಜಿನಿಯರಿ೦ಗ್,ಡಾಕ್ಟರ್
ಎ೦ದೆಲ್ಲ ಓದುತ್ತಿರುವಾಗ ಆಕೆ ಮಾತ್ರ ಕಲಾ ವಿಭಾಗಕ್ಕೆ ಸೇರಿ ಜರ್ನಲಿಸ೦ ಡಿಗ್ರಿ
ಪಡೆದಳು.ಆ ಕ್ಷೇತ್ರದಲ್ಲೇ ಬಹುವಾಗಿ ಬೆಳೆಯುವ ಬಹು ಆಸೆ ಆಕೆಗೆ. ತನ್ನ ಬಾಳನ್ನೇ
ಪತ್ರಿಕೋದ್ಯಮ ಕ್ಷೇತ್ರಕ್ಕೆ ಮೀಸಲಿಡಬೇಕೆ೦ದು ಆಕೆಯ ಆಸೆ.
ಪತ್ರಿಕೋದ್ಯಮ ಕೆಲಸದೊ೦ದಿಗೆ ತಾನು ಪತ್ರಿಕೋದ್ಯಮ ಡಿಗ್ರಿ ಪಡೆದ ಕಾಲೇಜಿನಲ್ಲಿ
ಪಾರ್ಟ್ ಟೈಮ್ ಲೆಕ್ಚರರ್ ಕೆಲಸ ಮಾಡಿ ಪತ್ರಿಕೋದ್ಯಮ ಸೇವೆಯನ್ನು ಮಾಡುತ್ತಿದ್ದಳು.
ಹೀಗೆ ಆಕೆಯ ೨೪*೭ ಗ೦ಟೆಯೂ ಪತ್ರಿಕೋದ್ಯಮಕ್ಕೆ ಮಿಸಲಾಗಿದ್ದವು. ಈ ನಡುವೆ ಆಕೆಗೆ
ತನಗೂ ಒ೦ದು ಬದುಕಿದೆ,ತಾನು ಎಲ್ಲರ೦ತೆ ಮದುವೆಯಾಗಿ ಗ೦ಡ ಮಕ್ಕೊ೦ದಿಗೆ ಬದುಕಬೇಕೆ೦ಬ
ಭಾವವು ಕೂಡ ಆಕೆಗೆ ಬರಲಿಲ್ಲ.
ಆಕೆಯ ಪ್ರಾಣ-ಸ್ನೇಹಿತ ಸ೦ಜೀವನೊ೦ದಿಗೆ ಆಕೆಗೆ ಸಮಯ ಸಿಕ್ಕಾಗ,ಆಗಾಗ
ಓಡಾಡುತ್ತಿದ್ದಳು.ಅವರಿಬ್ಬರ ಒಡನಾಟವ ನೋಡಿ ಆಕೆಯ ಕೆಲವು ನೆರೆಹೊರೆಯವರು ಸ೦ಶಯ
ಪಡಹತ್ತಿದರು.
ಆಕೆಯನ್ನು ಇಷ್ಟ ಪಡುತ್ತಿದ್ದ ಅವನು ಈ ವಿಷಯ ತಿಳಿದ೦ತೆ ಮಾಡುವೆ ಪ್ರಸ್ತಾಪ
ತೆಗೆದ,ಆಕೆ ತಾನು ಮಾದುವೆ ಆಗುವುದಿಲ್ಲವೆ೦ದೂ ,ತನ್ನ ಬಾಳು ಪತ್ರಿಕೋದ್ಯಮಕ್ಕೆ
ಮುಡಿಪು ಎ೦ದು ಹೇಳಿದಳು.ಆತ ಮದುವೆಯಾದ ಮೇಲು ಪತ್ರಿಕೋದ್ಯಮದಲ್ಲಿ ದುಡಿಯೆ೦ದು ಎಷ್ಟು
ಹೇಳಿದರು ಕೇಳಲಿಲ್ಲ.ಆದರೆ ಆಕೆ ಹಟ ಸಾಧಿಸಿದಳು... ಇ೦ದು ಆತನ ಮದುವೆ,ಈಕೆಗೆನೋ ಕಳೆದುಕೊ೦ಡ೦ತೆ ಭಾವ...
-ಪಾರ್ಥವಿ
ವೈವಿಧ್ಯ
ಅಂತಿಂಥಾ ಅಣಬೆ ಇದಲ್ಲಾ...ಹೌದು...ಇದು ಮಾಮೂಲಿ ಅಣಬೆ ಅಂತೂ ಅಲ್ಲವೇ ಅಲ್ಲ...14ಇಂಚು ವ್ಯಾಸ ಹೊಂದಿರುವ ಬೃಹತ್ ಅಣಬೆ...ಈ ನಾಯಿಕೊಡೆಯ ಕಾಂಡದ ಭಾಗವೂ ದೃಢವಾಗಿದ್ದು ವೈಶಿಷ್ಟ್ಯತೆಯಿಂದ ಕೂಡಿದೆ. ಅಂಗಳದ ತುಳಸಿಕಟ್ಟೆಯ ಬುಡದಲ್ಲಿ ಒಂಭತ್ತು ವಿವಿಧ ಕೊಡೆಗಳು ಅರಳಿ ನಿಂತು ಬೆಕ್ಕಸ ಬೆರಗಾಗಿಸುತ್ತಿದೆ. ಬಿ.ಸಿ.ರೋಡಿನ ಪಡ್ಯಾರನಿವಾಸಿ ಪಲ್ಲಮಜಲು ರಾಜಾ ಎಂಬವರ ಮನೆಯಂಗಳವೇ ಈ ವೈಚಿತ್ರ್ಯಕ್ಕೆ ಸಾಕ್ಷಿಯಾಗಿದೆ.ಕಳೆದ ಒಂದು ತಿಂಗಳಿನಿಂದ ಈ ಶ್ವೇತವರ್ಣದ ಅಣಬೆ ಬೆಳೆದು ನಿಂತು ಜನರನ್ನು ತನ್ನತ್ತ ಆಕರ್ಷಿಸುತ್ತಿದೆ.
ಈ ಕುರಿತ ಇನ್ನಷ್ಟು ಮಾಹಿತಿ ವಿವರಗಳಿಗೆ ನಿರೀಕ್ಷಿಸಿರಿ...
ಈ ಕನಸು ಅವಾರ್ಡ್
ಎರಡು ಮನಸ್ಸುಗಳನ್ನು
ನಿಯಂತ್ರಿಸುವ
ಆಕರ್ಷಕ ಶಕ್ತಿ
- ಮಲ್ಲಿಕಾ ಭಟ್ ಪರಪ್ಪಾಡಿ.
ವೈವಿಧ್ಯ ಪ್ರವಾಸೋದ್ಯಮ ನಕ್ಷೆಯಲ್ಲಿ ಉತ್ತರ ಕನ್ನಡ ಜಿಲ್ಲೆ ಚಿನ್ನದ ಗುರುತು. ಅದರಲ್ಲಿಯೂ ಯಲ್ಲಾಪುರ ತಾಲೂಕಿನಲ್ಲಂತೂ ಪ್ರವಾಸೋದ್ಯಮ ಕೇಂದ್ರಗಳಿಗೇನೂ ಕೊರತೆಯಿಲ್ಲ. ಎಲ್ಲರ ಪ್ರೀತಿಯ ಎಲ್ಲಾಪುರ ಜಲಪಾತಗಳ ತವರೂರು. ಜಗತ್ಪ್ರಸಿದ್ದ ಸಾತೋಡ್ಡಿ ಜಲಪಾತ, ಮಾಗೋಡ್ ಜಲಪಾತಗಳಿಗಷ್ಟೆ ಈ ಪ್ರದೇಶ ಸೀಮಿತವಾಗಿಲ್ಲ. ನಿಸರ್ಗದ ಮಡಲಿನಲ್ಲಿ ಸುಂದರ ರಮಣಿಯ ದೃಶ್ಯಕಾವ್ಯವನ್ನೆ ಬೆಸೆದು ವರ್ಷದ 12 ತಿಂಗಳುಗಳಲ್ಲಿ ನೀರನ್ನು ಚಿಮ್ಮಿಸುತ್ತಿರುವ ಅನೇಕ ಜಲಪಾತಗಳು ಇಲ್ಲಿವೆ. ಪ್ರಚಾರದಿಂದ ದೂರವೇ ಉಳಿದ ಸಸ್ಯಕಾಶಿಯಿಂದಲೆ ಸುತ್ತುವರೆಯಲ್ಪಟ್ಟ ಜಲಪಾತವೊಂದರ ಕಿರು ಪರಿಚಯ ನೀಡುವುದು ನಮ್ಮ ಉದ್ದೇಶ...
ಯಲ್ಲಾಪುರದಿಂದ ಕಾರವಾರ ಮಾರ್ಗವಾಗಿ 16ಕಿ.ಮಿಗಳಷ್ಟು ದೂರ ಸಂಚರಿಸಿದಾಗ ಸಿಗುವ ಊರೆ ಶಿರಲೆ. ರಾಷ್ಟ್ರಿಯ ಹೆದ್ದಾರಿಯ ಪಕ್ಕದಲ್ಲಿಯೇ ಇದ್ದರು ಇದೊಂದು ಊರು ಎಂದು ಗೋಚರಿಸದಷ್ಟು ಕಾನನ.
ಇಡಗುಂದಿಯಿಂದ 4ಕಿ.ಮೀನಷ್ಟು ದೂರದ ಈ ಊರಿಗೆ ಪ್ರಕೃತಿ ಮಾತೆಯಿಂದ ದೊರಯಲ್ಪಟ್ಟ ಕಿರು ಕಾಣಿಕೆಯೆ ಶಿರಲೆ ಪಾಲ್ಸ್. ದಟ್ಟ ಕಾನನದ ನಡುವೆ ಪುಟ್ಟ ಜಲದಾರೆ. ಸುಮಾರು 160ಅಡಿಗಳೆಷ್ಟು ಎತ್ತರದಿಂದ ರಭಸವಾಗಿ ದುಮುಕುವ ಹಿನ್ನೀರ ಧಾರೆ. ವರ್ಷದ ಎಲ್ಲ ಮಾಸಗಳಲ್ಲಿಯೂ ನೀರು ತುಂಬಿ ತುಳುಕುತ್ತಿರುವ ಜಲಪಾತಗಳಲ್ಲಿ ಇದು ಒಂದು. ಅದರಲ್ಲಿಯೂ ಮಳೆಗಾಲದ ಆರಂಭದಲ್ಲಿ ಸೂರ್ಯನ ಹೊಂಗಿರಣಗಳ ನಡುವೆ ಕಂಗೊಳಿಸುವ ಕಾಮನಬಿಲ್ಲಿನ ಮಧ್ಯೆ ಧೋ.. ಎಂದು ಸಪ್ಪಳ ಮಾಡುತ್ತ ಧುಮುಕುವ ನೀರನ್ನು ವರ್ಣಿಸಲು ಅಸದಳ.
ನಂದೂಳ್ಳಿ ಸಮೀಪದ ಪುರಾತನ ಭೃಹ್ಮೇತಿ ಕೆರೆಯು ಈ ಜಲಪಾತದ ಉಗಮ ಸ್ಥಾನ. ಕುಂಕಿ, ಸಂಪೆಕೊಡ್ಲು ಮುಂತಾದ ಊರಿನ ಮಾರ್ಗವಾಗಿ ಬೆಟ್ಟ ಗುಡ್ಡಗಳನ್ನು ಬೆಸದು ಶಿರಲೆಯ ಅಡಿಕೆ ತೋಟದ ನಡುವೆ ಜಲಪಾತ ರೂಪುಗೊಂಡಿದೆಯಲ್ಲದೆ ಮುಂದೆ ಡಬ್ಗುಳಿ, ಮಾರ್ಗವಾಗಿ ಸಂಚರಿಸುವ ಈ ನೀರು ಗಂಗಾವಳಿ ನದಿಯಲ್ಲಿ ಐಕ್ಯವಾಗುವದು.
ಜಲಪಾತದ ಕೆಳಭಾಗದಲ್ಲಿ ಗುಹೆಯೊಂದು ಇದ್ದು ಸಾವಿರಾರು ಬಾವಲಿಗಳ ಆಶ್ರಯತಾಣವೂ ಹೌದು. ಪ್ರಚಾರದಲ್ಲಿ ಇತರೆ ಜಲಪಾತಗಳಿಗಿಂತ ಹಿಂದಿನ ಸಾಲಿನಲ್ಲಿಯೆ ಇದ್ದರೂ ಪ್ರತಿ ದಿನ ನೂರಾರು ಪ್ರವಾಸಿಗರಿಗೆ, ಪರಿಸರದ ಅಧ್ಯಯನಕಾರರಿಗೇನೂ ಕೊರತೆಯಿಲ್ಲ. ರಾ.ಹೆದ್ದಾರಿಯಿಂದ ಅರ್ಧ ಮೈಲಿನಷ್ಟು ದೂರ ಕಾಡಿನ ನಡುವೆ ಸಂಚರಿಸಿದ ಬಳಿಕ ಸುಂದರ ಅಡಿಕೆ ತೋಟದ ನಡುವೆ ತೊರೆ ತೊರೆಯಾಗಿ ಹರಿಯುವ ಜಲಪಾತದ ದರ್ಶನವಾಗುತ್ತದೆ. ಗೃಹ ಬಳಕೆಯಿಂದ ತೋಟದ ಸಸಿಗಳಿಗೆ ನೀರುಣಿಸುವವರೆಗೂ ಈ ಜಲವೇ ಶಾಶ್ವತ ಗಂಗೆಯಾಗಿ ಮಾರ್ಪಟಿದ್ದು ನೀರಿನ ಸಂರಕ್ಷಣೆಗಾಗಿ ಪ್ರವಾಸಿಗರನ್ನು ಜಾಗೃತಿಗೊಳಿಸುವ ಕಾರ್ಯವೂ ಬರದಿಂದ ಸಾಗಿದೆ.
ಅಚ್ಯುತಕುಮಾರ, ಯಲ್ಲಾಪುರ
ವ್ಯಾಯಾಮ
ಖಾನ್ ಸಾಹೇಬರೇ ನಿಮಗೆ ಒಂದು ಮಾತು ಕೇಳಬೇಕಂತ್ತಿದ್ದೆ... ಆದರೇ ಮರತೇ ಹೋಗುತ್ತಿತ್ತು. ಇವತ್ತು ಕಣ್ಮುಂದೆ ಸಿಕ್ಕಿದ್ದೀರಿ...ನಿಮ್ಮನ್ನು ನೋಡಿ ಜ್ಞಾಪಕಕ್ಕೆ ಬಂತು ನೋಡಿ...! ಬನ್ನಿ ಅಲ್ಲಿ ಕುಳಿತುಕೊಳ್ಳೋಣ...ನನ್ನ ಮಗ ಈನಡುವೆ ಮಂಕಾಗಿರುತ್ತಾನೆ. ಮುಖದಲ್ಲಿ ಕಳೆಯೇ ಇಲ್ಲ. ಯಾವ ಕೆಲಸದಲ್ಲೂ ಉತ್ಸಾಹ ತೋರಲ್ಲ. ಇದಕ್ಕೆ ಏನು ಕರಣ ಇರಬಹುದು...?ಏನಾದರು ಕೆಟ್ಟ ಚಟಗಳಿಗೆ ಬಲಿಯಾಗಿದ್ದಾನೆಯೇ ನೋಡಿ. ಏಕೆಂದರೆ 10-15 ವರ್ಷಗಳ ಹಿಂದೆ ಗಾಂಜಾ ಅಫೀಮು ನೋಡಕ್ಕೆ ಹೇಗಿರುತ್ತೆಂಬುದೇ ನಮ್ಮ ರಾಜ್ಯದ ಕಾಲೇಜು ವಿದ್ಯಾರ್ಥಿಗಳಿಗೆ ಗೊತ್ತಿರಲಿಲ್ಲ. ಯಾವಾಗ ಉತ್ತರಭಾರತದಿಂದ ವಿದ್ಯಾಭ್ಯಾಸ ಮಾಡಲು ಹುಡುಗರು ಬಂದರೋ,ಶುರು ಆಯಿತು ನೋಡಿ ಈ ಹಾಳು ಕೆಟ್ಟಚಟಗಳ ಪಿಡುಗು. ಎಲ್ಲರೂ ಕೆಟ್ಟ ಹುಡುಗರು ಅಂತ ನಾನು ಹೇಳುತ್ತಿಲ್ಲ. ಆದರೆ ವನ ಕೆಡಿಸಲು ಒಂದು ಕೋತಿ ಸಾಕಲ್ಲವೇ...? ಅವರಿಗೆ ಇಲ್ಲಿ ಹೇಳೋರಿಲ್ಲ ಕೇಳೋರಿಲ್ಲ...ಆಡಿದ್ದೆ ಆಟ. ಕೆಲ ಕಾಲೇಜ್ ಕ್ಯಾಂಪಸ್ ನಲ್ಲಿ ಗಾಂಜಾ ಮಾರಾಟವಾಗುತ್ತಿದೆ. ನಮ್ಮ ಕೆಲ ಮುಗ್ಧ ವಿದ್ಯಾರ್ಥಿಗಳು ತಿಳಿದೋ ತಿಳಿಯದೋ ಕೆಟ್ಟಚಟಗಳಿಗೆ ಬಲಿಯಾಗುತ್ತಿದ್ದಾರೆ.
ಹುಡುಗರ ವಿಷಯ ಹಾಗಿರಲಿ...ಹುಡುಗಿಯರು ಕಡಿಮೇ ಅಂತ ತಿಳಿದುಕೊಂಡಿರಾ...ಸಾಮಾನ್ಯವಾಗಿ ಕಾರ್ಪೋರೇಟ್ ಆಫೀಸುಗಳಲ್ಲಿ ಕೆಲಸ ಮಾಡುವವರು "ಲಿವಿನ್ ರಿಲೇಶನ್" ಗೆ ಮೊರೆ ಹೋಗುತ್ತಿದ್ದರು. ಈಗ ಆ ವಿಷಯ ಹಳೆಯದಾಗಿ ಹೋಗಿದೆ. ಹುಡುಗಿಯರು ಇನ್ನೂ ಡಿಗ್ರಿಯೇ ಮುಗಿಸಿರಲ್ಲಾ...ಆಗಲೇ ನರ್ಸಿಂಗ್ ಹೋಮ್ಗಳಿಗೆ ಹೋಗಿ ಗೌಪ್ಯವಾಗಿ ಗರ್ಭಪಾತ ತೆಗೆಸಿಕೊಳ್ಳುತ್ತಿದ್ದಾರೆ. ನನಗೆ ಪರಿಚಿತ ಓರ್ವ ಸ್ತ್ರೀ ವೈದ್ಯರು ಹೇಳಿದರು - ತಿಂಗಳಿಗೆ ಅಂತಹ 10 ಕೇಸುಗಳಾದರು ಬರುತ್ತವೆ. ನನಗೆ ಹಣ ಬೇಕು,ಅವರಿಗೆ ಅವರ ಸಮಸ್ಯಗೆ ಪರಿಹಾರ ಬೇಕು ಅಷ್ಟೆ.
ನಮ್ಮ ದೇಶ ಯಾವ ದಿಕ್ಕಿನಲ್ಲಿ ಹೋಗುತ್ತಿದೆಯೋ ಗೊತ್ತಿಲ್ಲ. ಎಲ್ಲಿ ನೋಡಿದರು ಕಾಮದ ಹುತ್ತ ಬೆಳೆಯುತ್ತಿದೆ. ಪಂಚೇದ್ರಿಯಗಳ ಆಸೆ ತೀರಿಸಿಕೊಲ್ಲಳು ಎಲ್ಲರು ಒಂದಲ್ಲ ಒಂದು ರೀತಿಯಲ್ಲಿ ಮುಗಿ ಬೀಳುತ್ತಿದ್ದಾರೆ. ಯಾವ ಹುತ್ತದಲ್ಲಿ ಯಾವ ಹಾವಿದೆಯೋ ಗೊತ್ತೇ ಆಗಲ್ಲ. ಅರಿಷಡ್ವರ್ಗಗಳ ನಿಯಂತ್ರಣ ಕೇವಲ ಗ್ರಂಥಗಳ ಮಾತಾಗಿ ಉಳಿದುಬಿಟ್ಟಿದೆ. ನಮ್ಮ ದೇಶಕ್ಕೆ ಸ್ವಾತಂತ್ರ ಬಂದಾಗ ಹೋರಾಟಗಾರರು ಬಹಳ ಸಂತೋಷಪಟ್ಟರಂತೆ. ಅವರು ನಮ್ಮ ಈಗಿನ ಭಾರತ ನೋಡುತ್ತಿದ್ದಿದ್ದರೆ ನೋವು ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದರೋ ಏನೋ... ಪ್ರತಿ ಹೆಜ್ಜೆಯಲ್ಲೂ ಮೋಸ,ಅನ್ಯಾಯ,ದುರಾಡಳಿತ,ವ್ಯಭಿಚಾರ,ಗುಂಡಾಗಿರಿ,ಕೋಮುಗಲಭೆ,ಜಾತಿಪದ್ಧತಿ,ಬಡತನ,ಅನಕ್ಷರತೆ,ಭ್ರಷ್ಟಾಚಾರ,ಕಳ್ಳತನ,ಲಂಚ.....ಇತ್ಯಾದಿ...ಇತ್ಯಾದಿ... ದಿನೇ ದಿನೇ ನಾವು ಮಾನವಿಯತೆಯ ಮೌಲ್ಯಗಳನ್ನು ಕಳೆದುಕೊಳ್ಳುತ್ತಾ ಹೋಗುತ್ತಿದ್ದೇವೆ. ಯಾರಾದರು ಇಂತಹ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲು ಏನಾದರು ಬರೆದರೆ ಅವರ ಗತಿ ಅಷ್ಟೆಯೇ...ಸಾವಿರಾರು ಶತ್ರುಗಳನ್ನು ಕಟ್ಟಿಕೊಳ್ಳಬೇಕಾಗುತ್ತದೆ. ಲೇಖಕಿ ಬಾನು ಮುಷ್ತಾಖ್ ಹೇಳುವ ಪ್ರಕಾರ ಬರೆದರೆ ಕೈಸುಡುತ್ತದೆ. ಬರೆಯದಿದ್ದರೆ ಎದೆ ಸುಡುತ್ತದೆ. ಏನು ಮಾಡುವುದು ನೀವೇ ಹೇಳಿ....?
ಇದೆಲ್ಲಾ ಹಾಗಿರಲಿ ಮೊದಲು ನಿಮ್ಮ ಹುಡುಗನ ಬಗ್ಗೆ ಸ್ವಲ್ಪ ನಿಗಾ ಇಡಿ.. .ಹೌದೂ. ..ಆತನ ದಿನಚರಿ ಏನು...? ಅವನ ಮಲಗುವ ಮತ್ತು ಏಳುವ ಸಮಯವೇನು...?
ಕಾಲೇಜು ಮುಗಿದ ಮೇಲೆ ತಡವಾಗಿ ಮನೆಗೆ ಬರುತ್ತಾನೆ. ಅವನ ಕೋಣೆಯಲ್ಲಿ ಕುಳಿತು 1 ಗಂಟೆ ರಾತ್ರಿಯವರೆಗೆ ಟಿ.ವಿ. ನೋಡುತ್ತಾನೆ. ಬೆಳಿಗ್ಗೆ ಏಳುವುದು ಸುಮಾರು 9 ಗಂಟೆಗೆ.
ಹಾಗಾದರೆ ನಿಮ್ಮ ಮಗ ಬೇಡವಾದ ಕಸವನ್ನು ತಲೆಯಲ್ಲಿ ತುಂಬಿಸಿಕೊಳ್ಳುತ್ತಿದ್ದಾನೆ ಎಂದಾಯಿತು. ಮೊದಲು ಅವನ ಕೋಣೆಯಿಂದ ಟಿ.ವಿ. ಹೊರ ಹಾಕಿ. ಬೇಕಾದರೆ ನಿಮ್ಮ ಜೊತೆ ಹಜಾರದಲ್ಲಿ ಕುಳಿತು ನೋಡಲಿ. ಅರ್ಧ ಗಂಟೆ ನೋಡಿ ಟಿ.ವಿ. ಆಫ್ ಮಾಡಿಬಿಡಿ. ಆತನಿಗೆ ಹೋಗಿ ಮಲಗಿಕೊಳ್ಳಲು ಹೇಳಿ.
ಈ ನಡುವೆ ಟಿ.ವಿ. ಯಲ್ಲಿ ಮೂಡಿ ಬರುತ್ತಿರುವ ಪ್ರೋಗ್ರಾಂಗಳಂತೂ...! ದೇವರೇ ಕಾಪಾಡಬೇಕು. ಸಂಸಾರ ಸಮೇತ ನೋಡುವುದಕ್ಕೆ ಅಸಹ್ಯವಾಗುತ್ತೆ. ಮಕ್ಕಳ ಜೊತೆ ಕುಳಿತು ನ್ಯೂಸ್ ಸಹ ನೋಡಲು ಭಯ ಆಗುತ್ತೆ. ನ್ಯೂಸ್ ನಲ್ಲೂ ತೋರಿಸಬಾರದನ್ನು ಪದೇ ಪದೇ ತೋರಿಸುತ್ತಾರೆ. ಮೊನ್ನೆ ಆ ಪೋಲಿಸ್ ಪೇದೆಗಳ ಕಾಮಲೀಲೆ ನೋಡಲಿಲ್ಲವೇ...? ವಾರ್ತೆಗಳ ಮಧ್ಯೆ ಬರುವಂತಹ ಕೆಲ ಜಾಹಿರಾತುಗಳಂತೂ..ಥೂ..ಥೂ....ಇವತ್ತು ವಾರ್ತೆಗಳನ್ನು ನೋಡುತ್ತಿರಬೇಕಾದರೆ ಒಂದು ಡಿಯೋ ಜಾಹಿರಾತು ಬಂತು...ಹುಡುಗ ಬಾಡಿ ಸ್ವ್ರೇ ಮಾಡಿಕೊಂಡಾಕ್ಷಣ ಕೆಲವು ಹುಡುಗಿಯರು ಒಳ ಉಡುಪುಗಳಲ್ಲೇ ಬಂದು ಅವನನ್ನು ತಬ್ಬಿಕೊಳ್ಳುತ್ತಾರೆ. ಇಂತಹ ಇನ್ನೂ ಅನೇಕ ಜಾಹಿರಾತುಗಳಿವೆ. ಅದನ್ನು ವಿವರಿಸಲು ಸಾಧ್ಯವಿಲ್ಲ ಬಿಡಿ. ಮನೆಯಲ್ಲಿ ಹಿರಿಯರಿರುತ್ತಾರೆ. ಪುಟಾಣಿ ಮಕ್ಕಳಿರುತ್ತಾರೆ. ಮಕ್ಕಳ ಮೆದುಳು ಬಿಳಿಹಾಳೆಯಂತೆ. ಮುಖ್ಯವಾಹಿನಿಗಳು ಬಿತ್ತರಿಸುತ್ತಿರುವ ಕಸವನ್ನು ಕಂದಮ್ಮಗಳು ಎಲ್ಲಿ ತನ್ನ ತಲೆಗಳಲ್ಲಿ ತುಂಬಿಕೊಳ್ಳುತ್ತಾರೋ ಎನ್ನುವ ಭಯ ನನಗೆ ಕಾಡುತ್ತಿರುತ್ತದೆ. ನಾವು ಬಾಯಿಬಿಟ್ಟಿ ಏನಾದರು ಸಮಾಜದಲ್ಲಿ ಇದರ ಬಗ್ಗೆ ಹೇಳಿದರೆ, ನಕಾರಾತ್ಮಕವಾಗಿ ಯೋಚಿಸಬೇಡಿ. ನಿಮ್ಮದು ನ್ಯಾರೋ ಮೈಂಡ್. ಇದು ಆಧುನಿಕ ಯುಗ. ನಿಮಗೆಲ್ಲ ಈ ಪ್ರಪಂಚದ ಬಗ್ಗೆ ಏನು ತಾನೆ ಗೊತ್ತು..? ಹಾಗೆ ಹೀಗೆ ಹೇಳಿ ನಮ್ಮ ಬಾಯಿ ಮುಚ್ಚಿಸಿಬಿಡುತ್ತಾರೆ.
ಹೌದೂ...ನಿಮ್ಮ ಮಗ ಚನ್ನಾಗಿ ಓದುತ್ತಿದ್ದಾನೆಯೇ..?
ಇಲ್ಲ ಸಾಹೇಬ್ರೆ...ಅವನು ಓದುತ್ತಿರುವುದು ಅಷ್ಟರಲ್ಲೇ ಇದೆ...ಹೋದ ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ಪಡೆದಿದ್ದ...ಅದಕ್ಕೆ ಸ್ವಲ್ಪ ಬೈದೆ...ಅಂದಿನಿಂದ ಮುನಿಸಿಕೊಂಡಿದ್ದಾನೆ.
ವಯಸ್ಸಿಗೆ ಬಂದ ಮಕ್ಕಳನ್ನು ಹಾಗೆ ಬಯ್ಯುವುದು ತಪ್ಪಲ್ಲವೇ...? ಬಹುಶಃ ಅವನು ನಿಮ್ಮ ಬೈಗುಳಗಳನ್ನು ಬೇರೆ ರೀತಿಯಲ್ಲೇ ತೆಗೆದುಕೊಂಡಿರಬಹುದು. ನಾನು ಏನು ಸಾಧನೆ ಮಾಡುವುದಕ್ಕೆ ಆಗುತ್ತಿಲ್ಲವಲ್ಲ ಎಂಬ ನೋವು ಅವನನ್ನು ಕಾಡುತ್ತಿರಬಹುದು. ಅವನು ಯಾವುದೇ ಕೆಲಸದಲ್ಲಿ ಉತ್ಸಾಹ ತೋರುತ್ತಿಲ್ಲವೆಂದರೆ ಆತ ಡಿಪ್ರೆಷನಲ್ಲಿರಬಹುದು.
ಅವನಿಗೆ ಪ್ರೀತಿಯಿಂದ ಬುದ್ಧಿವಾದ ಹೇಳಿ. ಒಂದು ದೀಪ ಗೋಡೆಯ ಮೇಲೆ ಕುಳಿತು ಅಳುತ್ತಿತ್ತಂತೆ - ನಾನೊಂದು ಪುಟ್ಟ ದೀಪ. ನನ್ನಿಂದ ಏನೂ ಸಾಧನೆ ಮಾಡಲು ಆಗುವುದಿಲ್ಲ. ಯಾಕೆ ಈ ಬದುಕು ಎಂದು ಕೊರಗುತ್ತಿರುವಾಗ, ಅದರ ಮಾತುಗಳನ್ನು ಒಂದು ಗೂಬೆ ಕೇಳಿಸಿಕೊಂಡು - ಅಯ್ಯೋ ಮಂಕೇ...ನಿನ್ನ ಶಕ್ತಿ ನಿನಗೇನು ಗೊತ್ತು...? ನೋಡು... ಸೂರ್ಯ ಎಷ್ಟು ದೊಡ್ಡದು ಅಲ್ಲವೇ..? ಆದರೂ ರಾತ್ರಿ ಬೆಳಕನ್ನು ಕೊಡಲು ಅಸಮರ್ಥ. ಅವನಿಂದ ಅಸಾಧ್ಯವಾದುದನ್ನು ನೀನು ಸಾಧ್ಯ ಮಾಡುತ್ತಿದ್ದೀಯ. ಕತ್ತಲಲ್ಲಿ ಬೆಳಕನ್ನು ಚೆಲ್ಲುತ್ತಿದ್ದೀಯ. ನೀನು ಬಲು ಶಕ್ತಿಶಾಲಿ ಎಂದು ಹೇಳಿತು. ದೀಪಕ್ಕೆ ಎಲ್ಲಿಲ್ಲದ ಚೈತನ್ಯ ಬಂದು ಉತ್ಸಾಹದಿಂದ ಬೆಳಕನ್ನು ಹರಡಿತಂತೆ.
ಹೀಗೆ ಮಕ್ಕಳಿಗೆ ಏನಾದರೊಂದು ಹೇಳಿ,ಸಮಾಧಾನ ಮಾಡಿ,ಧೈರ್ಯ ತುಂಬಿದಾಗ,ಮಕ್ಕಳು ಚೇತರಿಸಿಕೊಳ್ಳುತ್ತಾರೆ. ನಾಳೆಯಿಂದ ಸೂರ್ಯ ಹುಟ್ಟುವ ಮುಂಚೆ ಎದ್ದು,ಪ್ರಾರ್ಥನೆ ಮಾಡಿ,ಮಗನನ್ನು ಕರೆದುಕೊಂಡು ಜಾಗಿಂಗ್ ಗೆ ಹೋಗಿ. ಬೆಳಗಿನ ವಾತಾವರಣ ಮನಸ್ಸಲ್ಲಿ ಉತ್ಸಾಹ ಮತ್ತು ಶಾಂತಿ ನೀಡುತ್ತದೆ. ವ್ಯಾಯಾಮ ಮಾಡುವುದರಿಂದ ಕಾರ್ಟಿಸೋಲ್ ಎಂಬ ಸ್ಟ್ರೆಸ್ ಹಾರ್ಮೋನಿನ ಪ್ರಮಾಣ ಕಡಿಮೆಯಾಗಿ,ಎಂಡಾರ್ಫಿನ್ಸ್ ಎಂಬ ಹಾರ್ಮೋನಿನ ಪ್ರಮಾಣ ಹೆಚ್ಚಾಗುತ್ತದೆ. ಮಾನಸಿಕ ಒತ್ತಡ ಕಡಿಮೆಯಾದರೆ ದುಃಖದ ಪ್ರಮಾಣ ಕಡಿಮೆಯಾಗಿ ಸಂತೋಷ ಹೆಚ್ಚಾಗುತ್ತದೆ. ಬ್ರಿಸ್ಟಾಲ್ ವಿಶ್ವವಿದ್ಯಾಲಯ ನಡೆಸಿದ ಅನ್ವೇಷಣೆ ಪ್ರಕಾರ ಯಾರು ವ್ಯಾಯಾಮ ಮಾಡಿ ಕೆಲಸಕ್ಕೆ ಅಥವಾ ಬೇರಾವುದೋ ವಿಷಯಕ್ಕಾಗಿ ಹೊರ ಹೋಗುತ್ತಾರೆಯೋ ಅವರಲ್ಲಿ ಒತ್ತಡದ ಪ್ರಮಾಣ ಕಡಿಮೆ ಇರುತ್ತದೆ ಮತ್ತು ಶಾಂತರಾಗಿರುತ್ತಾರೆ. ನಿಪುಣತೆಯಿಂದ,ಹುರುಪಿನಿಂದ,ಜವಾಬ್ದಾರಿಯಿಂದ ಕೈಗೆ ಬಂದ ಕೆಲಸಗಳನ್ನು ಸಮಯಕ್ಕೆ ತಕ್ಕಂತೆ ಮಾಡಿ ಮುಗಿಸುತ್ತಾರೆ(ಡೈಲಿ ಮೇಲ್). ದ ಅಮೇರಿಕನ ಹಾರ್ಟ ಅಸೋಸಿಯೇಷನ್ 2008 ರ ವರದಿಯ ಪ್ರಕಾರ 20-30 ನಿಮಷದ ವಾಕಿಂಗ್ ಸಂತೋಷವನ್ನು ಕೊಡುತ್ತದೆ(ಯು.ಎಸ್.ಎ.ಟುಡೆ). ವ್ಯಾಯಾಮ ಹೃದಯ ಮತ್ತು ಸಕ್ಕರೆ ಕಾಯಿಲೆಯವರಿಗೆ ಆರೋಗ್ಯ ಕಿರಣವಾಗಿದೆ. ಮಾನಸಿಕ ಒತ್ತಡದಿಂದ ಮುಕ್ತಿ ಪಡೆಯಲು ಉಸಿರಾಟದ ವ್ಯಾಯಾಮ ಬಹಳ ಪರಿಣಾಮಕಾರಿ ಇದನ್ನು ಮಾಡುವುದು ಬಹಳ ಸುಲಭ ಕೂಡ.ಯಾರು ಯಾವಾಗಬೇಕಾದರೂ ಮಾಡಬಹುದು. ಇದರಿಂದ ನಿಮ್ಮ ಆರೋಗ್ಯವೂ ಚನ್ನಾಗಿರುತ್ತದೆ ಮತ್ತು ನಿಮ್ಮ ಮಗನ ಆರೋಗ್ಯವೂ ಚನ್ನಾಗಿರುತ್ತದೆ.
ಜತೆಯಲ್ಲಿ ತಂದೆ ಮಗ ಕಾಲ ಸಹ ಕಳೆಯಬಹುದಲ್ಲವೇ...?
- ಜಬೀವುಲ್ಲಾ ಖಾನ್
ವೈವಿಧ್ಯ
ಈ ಆಸನಕ್ಕೆ ಗರುಡ ಪಕ್ಷಿಯ ಹೆಸರನ್ನು ಇಡಲಾಗಿದೆ.ಅಭ್ಯಾಸ ಕ್ರಮ : ಪ್ರಥಮವಾಗಿ ತಾಡಾಸನದಲ್ಲಿ ನೆಲೆಸಬೇಕು. ಆನಂತರ ಬಲಮಂಡಿಯನ್ನು ಬಾಗಿಸಿ ಎಡಕಾಲನ್ನು ಬಲಮಂಡಿಯ ಮೇಲ್ಬಾಗಕ್ಕೆ ತರಬೇಕು.
ನಂತರ ಎಡತೊಡೆಯ ಹಿಂಭಾಗ ಬಲಮಂಡಿಯ ಮುಂಭಾಗಕ್ಕೆ ತರಬೇಕು. ಬಳ್ಳಿ ಮರವನ್ನು ಸುತ್ತುವಂತೆ. ಆಮೇಲೆ ಮೊಣಕೈಗಳನ್ನು ಪರಸ್ಪರ ಹೆಣೆದು ಎದೆಯ ಮಟ್ಟಕ್ಕೆ ತರಬೇಕು. (ಚಿತ್ರದಲ್ಲಿರುವಂತೆ) ಈ ಸ್ಥಿತಿಯಲ್ಲಿ ಇಪ್ಪತ್ತು ಸೆಕೆಂಡು ಸಮ ಉಸಿರಾಟ. ಹಾಗೆ ಇನ್ನೊಂದು ಬದಿಯೂ ಅಭ್ಯಾಸ ಮಾಡಬೇಕು.
ಉಪಯೋಗಗಳು : ಇದರಲ್ಲಿ ಮುಖ್ಯವಾಗಿ ಕಾಲಿನ ಸೆಳೆತ ಹಾಗೂ ನೋವನ್ನು ಪರಿಹರಿಸಲು ಈ ಆಸನ ಸಹಕಾರಿಯಾಗುತ್ತದೆ. ತೊಡೆಗಳ ಭಾಗಕ್ಕೆ ಉತ್ತಮವಾದ ವ್ಯಾಯಾಮ ದೊರೆತು ಸೆಳೆತ ಬಾರದಂತೆ ತಡೆಯಲು ಸಹಕಾರಿ. ತೋಳುಗಳ ಮತ್ತು ಭುಜಗಳ ಪೆಡೆಸುತನ ನಿವಾರಣೆಯಾಗುತ್ತದೆ.
-ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ,
ಅಂತರರಾಷ್ಟೀಯ ಯೋಗ ತೀರ್ಪುಗಾರರು.
ಈ ಕನಸು ಅವಾರ್ಡ್
ಏಕಾಂಗಿಯಾಗಿ ನನ್ನೊಳಗೆ
ನನ್ನೇ ನಾ ಹುಡುಕುತ್ತಿದ್ದೆ
ಭಾವ ಪ್ರಪಂಚದೋಳಗೆ
ನಿಶ್ಚಲ-ನಿರಾಳವಾಗಿದ್ದ
ನನ್ನ ಮನದಾಳದಲ್ಲಿ...
ಸುಂಟರಗಾಳಿಯ
ಅಲೆಯ ಕಲರವನ್ನೇ
ಎಬ್ಬಿಸಿ ಅಬ್ಬರಿಸಿ
ನನ್ನದೇನು ತಪ್ಪಿಲ್ಲವೆಂಬಂತೆ
ನೆನಪೆಂಬ
ಅವಶೇಷಗಳ ಉಳಿಸಿ
ಮೌನವಾಗಿ
ಮರೆಯಾಗಿ
ಹೋದೆಯಲ್ಲ... 
-ಮಲ್ಲಿಕಾಭಟ್ ಪರಪ್ಪಾಡಿ
ಸಾಕ್ಷ್ಯಚಿತ್ರ...
ಪ್ರಪಂಚದ ರುದ್ರ ಮನೋಹರ ತಾಣಗಳಲ್ಲಿ ಹಿಮಾಲಯ ಪರ್ವತವೂ ಒಂದು. ಇದು ಪ್ರಾಕೃತಿಕವಾಗಿ ದೇಶಕ್ಕೆ ಸಿಕ್ಕ ವರದಾನ. ತನ್ನ ಒಡಲೊಳಗೆ ಸಾಕಷ್ಟು ವಿಸ್ಮಯಗಳನ್ನು ಅಡಗಿಸಿಟ್ಟುಕ್ಕೊಂಡಿರುವ ಈ ತಾಣದ ಪ್ರಾಕೃತಿಕ ಸೊಬಗನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಭಯಾನಕ ಕಣಿವೆಗಳು, ಹಚ್ಚ ಹಸುರು ಬಯಲುಗಾವಲುಗಳು, ರಂಗು-ರಂಗಿನ ಹೂವು-ಹಣ್ಣುಗಳಿಂದ ಕಂಗೊಳಿಸುವ ತೋಟಗಳು...ಹೀಗೆ ಹಿಮಾಲಯಕ್ಕೆ ಮಿಗಿಲಾದ ಸ್ವರ್ಗವೇ ಇಲ್ಲ ಎಂಬುವುದು ಅಕ್ಷರಶಃ ನಿಜ.ಹಿಮಾಲಯದ ಪ್ರಾಕೃತಿಕ ಸೌಂದರ್ಯಗಳನ್ನು ಹೆಚ್ಚಿಸುವಲ್ಲಿ ಅಲ್ಲಿನ ಆಪಲ್ ತೋಟಗಳ ಪಾತ್ರ ಮಹತ್ವದ್ದು.
ಅದೊಂದು ಕಾಲದಲ್ಲಿ ಇಲ್ಲಿನ ಕುಲು ಜಿಲ್ಲೆ ಪ್ರಪಂಚದಲ್ಲೇ ಅಪಲ್ ಕೃಷಿಯ ಪ್ರಮುಖ ತಾಣವೆಂದು ಗುರುತಿಸಿಕೊಂಡಿತ್ತು. ಇಲ್ಲಿನ ಸೇಬು ಹಣ್ಣುಗಳಿಗೆ ಪ್ರಪಂಚದಾದ್ಯಂತ ಒಳ್ಳೆಯ ಮಾರುಕಟ್ಟೆಯಿತ್ತು. ನೇಪಾಳ ಹಾಗೂ ನೆರೆಯ ದೇಶಗಳಿಂದ ಸೇಬು ತೊಟಗಳಲ್ಲಿ ಕೆಲಸವನ್ನರಸುತ್ತ ಸಾವಿರಾರು ಸಂಖ್ಯೆಯಲ್ಲಿ ಜನರು ಇತ್ತಕಡೆ ವಲಸೆ ಬರುತ್ತಿದ್ದರು.
ಇಡೀ ಹಿಮಾಲಯದ ಅರ್ಥವ್ಯವಸ್ಥೆಯೇ " ಆಪಲ್ ಇಕಾನಮಿ" ಎಂದು ಕರೆಸಿಕೊಳ್ಳುವಷ್ಟರ ಮಟ್ಟಿಗೆ ಸೇಬು ಹಣ್ಣು ಇಲ್ಲಿನ ಜನರಿಗೆ ಆದಾಯವನ್ನು ತಂದುಕೊಡುತ್ತಿತ್ತು. ಅಷ್ಟರಮಟ್ಟಿಗೆ ಸೇಬು ಈ ಪ್ರದೇಶದಲ್ಲಿ ಪ್ರಾಧಾನ್ಯತೆಯನ್ನು ಪಡೆದಿತ್ತು. ಆದರೆ ಬದಲಾದ ಹವಮಾನದಿಂದಾಗಿ ಇಂದು ಹಿಮಾಲಯದಲ್ಲಿ ಸೇಬು ಕಣ್ಮರೆಯಾಗುತ್ತಿದೆ. ಬೆಳೆಗಾರರು ಒಪ್ಪೊತ್ತಿನ ಊಟಕ್ಕೂ ಇಲ್ಲದೆ ಕಂಗಾಲಾಗಿದ್ದಾರೆ. ಇದಕ್ಕೆ ಕಾರಣರಾರು? ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಸಣ್ಣ ಪ್ರಯತ್ನ "ದಿ ವೀಪಿಂಗ್ ಆಪಲ್ ಟ್ರೀ". ಜಾಗತಿಕ ತಾಪಮಾನದಿಂದ ನಾವು ಕಳೆದುಕೊಳ್ಳುತ್ತಿರುವುದೇನು? ಎಂಬ ಪ್ರಶ್ನೆಗೆ ಉತ್ತರವನ್ನು ಕಂಡುಕ್ಕೊಳ್ಳುವ ಪ್ರಾಮಾಣಿಕ ಪ್ರಯತ್ನ ಈ ಸಾಕ್ಷ್ಯಚಿತ್ರದ್ದು .
ವಿಜಯ್ ಎಸ್ ಜೋಧಾ ನಿರ್ದೇಶನದ ಈ ಸಾಕ್ಷ್ಯಚಿತ್ರವನ್ನು 2005ರಲ್ಲಿ ಬ್ರಿಟಷ್ ಕೌನ್ಸಿಲ್ ಪ್ರಾಯೋಜಿಸಿತ್ತು. 13 ನಿಮಿಷಗಳ ಈ ಚಿತ್ರ ಹಿಮಾಲಯ ಸಂಪೂರ್ಣ ಚಿತ್ರಣವನ್ನು ನೀಡುವುದರ ಜತೆಗೆ ಪ್ರಕೃತಿ ಹಾಗೂ ಮಾನವನ ನಡುವಿರುವ ಸೂಕ್ಷ್ಮ ಸಂಬಂಧವನ್ನು ವೀಕ್ಷಕನಿಗೆ ಮನದಟ್ಟು ಮಾಡುತ್ತದೆ. ಚಿತ್ರದ ಮೊದಲಿನಲ್ಲಿ ಮೈತುಂಬಿ ನಿಂತಿದ್ದ ಸೇಬು ಮರಗಳನ್ನು ಕಂಡ ವೀಕ್ಷಕನಿಗೆ ಚಿತ್ರದ ಕೊನೆಯಲ್ಲಿ ಕಂಗಾಲಾಗಿ ನಿಂತ ಬೋಳು ಸೇಬು ಮರಗಳನ್ನು ಕಂಡಾಗ ಈ ಬದಲಾವಣೆಗೆ ಪರೋಕ್ಷರಾಗಿ ತಾನೇ ಜವಾಬ್ಧಾರ ಎಂಬ ಪಾಪ ಪ್ರಜ್ಣೆ ಕಾಡದಿರುವುದಿಲ್ಲ.
1960ರಲ್ಲಿ ಹಿಮಾಲಯದ ಬಜೌರಾದಿಂದ ಹಿಡಿದು ಮನಾಲಿಯವರೆಗೆ ಅದೆಷ್ಟೋ ಸಾವಿರ ಎಕರೆ ಪ್ರದೇಶವನ್ನು ಸರಕಾರ "ಆಪಲ್ ಬೆಲ್ಟ್" ಪ್ರದೇಶವೆಂದು ಗುರುತಿಸಿತ್ತು. ಇಲ್ಲಿನ ಸೇಬುಗಳು ಪಂಜಾಬ್ ಹಾಗೂ ದೆಹಲಿ ರಾಜ್ಯಗಳಲ್ಲಿ ಅತ್ಯಧಿಕ ಬೆಲೆಗೆ ಮಾರಾಟವಾಗುತ್ತಿದ್ದವು. ಇಲ್ಲಿನ ಆಪಲ್ ಇಕಾನಮಿಯನ್ನು ಗುರುತಿಸಿದ ಸರಕಾರ ಅಪಲ್ ಸಾಗಣೆಗೆ ಅನುಕೂಲವಾಗಲೆಂದು ಇಲ್ಲಿಂದ ದೇಶದ ಎಲ್ಲಾ ಪ್ರಮುಖ ನಗರಗಳಿಗೆ ರಸ್ತೆ ಸಂಪರ್ಕವನ್ನು ಕಲ್ಪಿಸಿತು. ಹಣ್ಣುಗಳ ಸಂರಕ್ಷಣೆಗೆ ಲಕ್ಷಗಟ್ಟಲೆ ವೆಚ್ಚದ ಸ್ಟೋರೇಜ್ಗಳನ್ನು ಕಲ್ಪಿಸಲಾಯಿತು. ಬದಲಾಗುತ್ತಿರುವ ಹವಾಮಾನದಿಂದಾಗಿ ನಂತರದ ದಿನಗಳಲ್ಲಿ ಆಪಲ್ ಬೆಳೆ ಕುಲುವಿನ ನೆರೆಯ ರಾಜ್ಯ ಲಾಹುಲ್ಗೂ ಪಸರಿಸಿತು. ಲಾಹುಲ್ ಸೇಬು ಬೆಳೆಯಲ್ಲಿ ಕುಲು ಜಿಲ್ಲೆಯನ್ನು ಹಿಂದಿಕ್ಕಿತ್ತು. ಈ ಎರಡೂ ಪ್ರದೇಶಗಳಲ್ಲೂ ಸೇಬು ಹಣ್ಣಿನ ಸೀಜನ್ ಮುಗಿದ ಬಳಿಕ ಮಿಶ್ರ ತಳಿಗಳನ್ನು ಬೆಳೆಯಲಾಯಿತು. ಇಂತಹ ಫಲವತ್ತಾದ ತಾಣಗಳು ಇಂದು ಬಂಜರಾಗುತ್ತಿವೆ. ಇದಕ್ಕೆ ಕಾರಣ ಹೆಚ್ಚುತ್ತಿರುವ ಜಾಗತಿಕ ತಾಪಮಾನ.
ಹಿಂದೆ ನಡೆದಾಡುವಾಗ ಮೊಣಕಾಲಿನವರೆಗೆ ಬೀಳುತ್ತಿದ್ದ ಹಿಮದಲ್ಲಿ ಆಪಲ್ ಮರ ಹುಲುಸಾಗಿ ಬೆಳೆದು ಹಣ್ಣುಗಳನ್ನು ಬಿಡುತ್ತಿತ್ತು. ನನ್ನ ತೋಟದಿಂದಲೇ ಐದಾರು ಟ್ರಕ್ಗಳಲ್ಲಿ ನಾನು ಅವನ್ನು ಮಾರುಕಟ್ಟೆಗೆ ಸಾಗಿಸುತ್ತಿದೆ. ಕಳೆದೆರಡು ವರುಷಗಳಿಂದ ಹಿಮವೇ ಬೀಳುತ್ತಿಲ್ಲ. ತೋಟದ ಸೇಬುಗಳು ಒಂದು ಟ್ರಕ್ನ್ನೂ ತುಂಬುತ್ತಿಲ್ಲ....ಎಂದು ಹತಾಶರಾಗಿ ಹೇಳುತ್ತಾರೆ ಇಲ್ಲಿನ ಸೇಬ ಬೆಳೆಗಾರ ಕೃಷ್ಣ ಮಹಂತ್. ಚಿತ್ರದುದ್ದಕ್ಕೂ ಜಾಗತಿಕ ತಾಪಮಾನ ಹೆಚ್ಚಳಕ್ಕೆ ಹಲವಾರು ವೈಜ್ಣಾನಿಕ ಕಾರಣಗಳನ್ನು ನೀಡಿದ್ದರೂ ಅವೆಲ್ಲಕ್ಕೂ ಒಂದಲ್ಲ ಇನ್ನೊಂದು ರೀತಿಯಲ್ಲಿ ನಾವೇ ಹೊಣೆಗಾರರಾಗುತ್ತೇವೆ. 
ಹತ್ತು ವರುಷಗಳ ಕೆಳಗೆ ಸೇಬು ತೋಟದಲ್ಲಿ ಪ್ಯಾಕರ್ ಕೆಲಸವನ್ನರಸಿ ನೇಪಾಳದಿಂದ ಇಲ್ಲಿಗೆ ಬಂದಿದ್ದೆ. ಆದಾಯವೂ ಚೆನ್ನಾಗಿತ್ತು. ಇಂದು ಕೆಲಸವಿಲ್ಲದ ಸ್ಥಿತಿ ಎದುರಾಗಿದೆ. ಏನು ಮಾಡೋದು ತೋಚುತ್ತಿಲ್ಲ ...ಎಂದು ನೇಪಾಳಿ ವಲಸೆಗಾರ ಖಡಕ್ ಬಹಾದ್ದೂರ್ ಕ್ಯಾಮರಾಕ್ಕೆ ಮುಖ ಮಾಡಿ ಹೇಳುತ್ತಿದ್ದರೆ ನೋಡುಗರಿಗೆ ಪ್ರಕೃತಿ ಮನುಷ್ಯನನ್ನು ಅದೆಷ್ಟು ಹತಾಶನನ್ನಾಗಿಸಬಹುದೆಂಬ ವಾಸ್ತವದ ಅರಿವಾಗುತ್ತದೆ. ಚಿತ್ರದುದ್ದಕ್ಕೂ ಕಾಣುವ ಬೋಳು ಸೇಬಿನ ಮರಗಳು ಮುಂದೆ ಎದುರಾಗುವ ವಿನಾಶದ ಸಂಕೇತದಂತೆ ಗೋಚರಿಸುತ್ತವೆ.
ತಾಂತ್ರಿಕವಾಗಿ ಚಿತ್ರದ ಗುಣಮಟ್ಟ ಸಾಮಾನ್ಯವಾಗಿದ್ದರೂ ಅದು ಚರ್ಚಿಸುವ ವಿಷಯ ಗಂಭೀರವಾದುದು. ಹೆಚ್ಚುತ್ತಿರುವ ಜಾಗತಿಕ ತಾಪಮಾನದ ಬಗ್ಗೆ ನಾವು ಇನ್ನೂ ನಿರ್ಲಕ್ಷ್ಯ ಭಾವ ತಾಳಿದರೆ ಸೇಬಿನ ತೋಟಗಳಂತೇ ಇಡೀ ಪ್ರಪಂಚವೇ ಬೋಳಾಗಿಬಿಡಬಹದು. ಪ್ರಕೃತಿಯ ಜತೆಗೆ ಕ್ರೂರವಾಗಿ ವರ್ತಿ ಸುವ ಮಾನವನ ಮನೋಭಾವ ಬದಲಾಗದೇ ಹೋದರೆ ಇಡೀ ವಿಶ್ವವೇ ಅದಕ್ಕೆ ಬೆಲೆತೆರಬೇಕಾಗಬಹುದು ಎಂಬ ಸಂದೇಶ ಈ ಸಾಕ್ಷ್ಯಚಿತ್ರದ್ದು.
- ಅಕ್ಷತಾ ಭಟ್. ಸಿ.ಎಚ್.
ವಿಭಾಗ ಮುಖ್ಯಸ್ಥರು, ಪತ್ರಿಕೋದ್ಯಮ ವಿಭಾಗ
ಗೋವಿಂದ ದಾಸ ಕಾಲೇಜು, ಸುರತ್ಕಲ್.
Video
