ಪ್ರಾದೇಶಿಕ ಸುದ್ದಿಮೂಡುಬಿದಿರೆ: ಮಿಜಾರಿನ ಆಳ್ವಾಸ್ ಶೋಭಾವನದಲ್ಲಿ ಮಲೇಶಿಯನ್ ತಳಿ ಸಿಹಿಹುಣಸೆ ಹಣ್ಣಿನ ಗಿಡವನ್ನು ಡಾ.ಎಂ.ಮೋಹನ ಆಳ್ವರಿಗೆ ನೀಡುವುದರ ಮೂಲಕ ಕೈಕಂಬದ ಸ್ಖಂಧಶ್ರೀ ಸೇವಾ ಸಮಿತಿ ವಿಶಿಷ್ಟ ರೀತಿಯಲ್ಲಿ ವನಮಹೋತ್ಸವವನ್ನು ಆಚರಿಸಿತು.ಬಹರೈನ್ನಲ್ಲಿ ಉದ್ಯೋಗದಲ್ಲಿರುವ ಕಂದಾವರ ಮೋಹನ ಸಾಲ್ಯಾನ್ ಅವರು ಬೆಳೆಸಿದ ಗಿಡವನ್ನು ಸಸ್ಯ ಅಧ್ಯಯನ ಮಾಡುವವರಿಗೆ ಸದುಪಯೋಗವಾಗಲೆಂದು ಶೋಭಾವನಕ್ಕೆ ಸಮರ್ಪಿಸಿದ್ದೇವೆ ಎಂದು ಸ್ಕಂಧಶ್ರೀ ಸೇವಾ ಸಮಿತಿಯ ಪದಾಧಿಕಾರಿಗಳು ತಿಳಿಸಿದರು. ಗಿಡವನ್ನು ಸ್ವೀಕರಿಸಿ ಮಾತನಾಡಿದ ಡಾ.ಎಂ.ಮೋಹನ ಆಳ್ವರು ಸೇವಾ ಸಂಸ್ಥೆಗಳು ಪ್ರಕೃತಿ ಪ್ರೀತಿಯ, ಸೇವಾ ಮನೋಭಾವದಿಂದ ಕಾರ್ಯವೆಸಗಬೇಕು. ಸ್ಕಂದಶ್ರೀಯ ಕಾರ್ಯಗಳು ಎಲ್ಲರಿಗೂ ಪ್ರೇರಣೆಯಾಗಲಿ ಎಂದರು. ಈ ಸಂದರ್ಭದಲ್ಲಿ ಸ್ಕಂಧಶ್ರೀಯ ಅಧ್ಯಕ್ಷ ನವೀನ್ ಕೈಕಂಬ, ಪ್ರಕಾಶ್ ಕೈಕಂಬ, ಕಂದಾವರ ಮೋಹನ್ ಸಾಲ್ಯಾನ್, ಶೇಖರ್ ಶೆಟ್ಟಿಗಾರ್, ಭರತ್ ಕರ್ಕೇರ ಮೊದಲಾದವರು ಉಪಸ್ಥಿತರಿದ್ದರು.
ರಾಜ್ಯ - ರಾಷ್ಟ್ರ
ಗೋಕರ್ಣ: ಹವ್ಯಕ ಸಮುದಾಯದ ಪ್ರತಿಭಾವಂತರಾದ ಹಾಗೂ ಆರ್ಥಿಕವಾಗಿ ಹಿಂದುಳಿದವರಾದ ವಿದ್ಯಾರ್ಥಿಗಳಿಗೆ ಸಹಾಯ ನೀಡುವ ಉದ್ಧೇಶದಿಂದ ರಚಿತವಾದ ಶ್ರೀಕ್ಷೇತ್ರ ಗೋಕರ್ಣ ಹವ್ಯಕ ಕ್ಷೇಮಾಭಿವೃದ್ಧಿಸಂಘವನ್ನು ಅಶೋಕೆಯಲ್ಲಿ ಪೂಜ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಲೋಕಾರ್ಪಣೆಗೊಳಿಸಿದರು . ರಮೇಶ ಪ್ರಸಾದ,ಪ್ರೊ.ಕೆ.ಜಿ.ಗುಣಿ. ವಸಂತರಾಜನ್ ಕೊಡ್ಲೆಕೆರೆ,ಹಾಗೂ ಮಂಗಲಮೂರ್ತಿ ಸಭಾಹಿತ ಮೊದಲಾದವರು ಪದಾಧಿಕಾರಿಗಳಾಗಿರುವ ಈ ಸಂಘದ ವತಿಯಿಂದ ಸಾಂಕೇತಿಕವಾಗಿ ಹತ್ತುಮಂದಿ ವಿದ್ಯಾರ್ಥಿಗಳಿಗೆ ಶ್ರೀಗಳ ಅಮೃತಹಸ್ತದಿಂದ ಪ್ರೋತ್ಸಾಹಧನವನ್ನು ಕೊಡಿಸಲಾಯಿತು. ಸಮೇಶ ಪ್ರಸಾದ,ಕೆ.ಜಿ.ಗುಣಿ ಮೊದಲಾದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ರಾಜ್ಯ - ರಾಷ್ಟ್ರ
ಗೋಕರ್ಣ: ಪ್ರಸಿದ್ಧವಾದ ಕ್ಷೇತ್ರಗಳ ಸ್ನಾನಘಟ್ಟಗಳಲ್ಲಿ ಸ್ನಾನಮಾಡುವಲ್ಲಿ ಸರಪಣಿಗಳನ್ನು ಜೋಡಿಸಿರುತ್ತಾರೆ.ಅದನ್ನು ಹಿಡಿದುಕೊಂಡೇ ಸ್ನಾನವನ್ನು ಮಾಡಿ ಕೃತಾರ್ಥರಾಗಬೇಕಾಗುತ್ತದೆ.ಆ ಸರಪಣಿಯನ್ನು ಅವಲಂಬಿಸದಿದ್ದರೆ ರಭಸವಾದ ಪ್ರವಾಹದಲ್ಲಿ ಕೊಚ್ಚಿಹೋಗುವ ಭೀತಿ ತಪ್ಪಿದ್ದಲ್ಲ.
ಅದರಂತೆಯೇ ಗುರುಪೀಠ ಸಹ.ಈ ಸಂಸಾರಪ್ರವಾಹವು ನಮ್ಮನ್ನು ಎತ್ತಲೋ ಒಯ್ಯದಂತೆ ಬಲವಾಗಿ ಇದನ್ನು ಹಿಡಿದುಕೊಂಡರೆ ಮಾತ್ರ ಬದುಕಿನಲ್ಲಿ ಸೆಳೆತಕ್ಕೊಳಗಾಗಿ ಹೋಗುವುದನ್ನು ತಡೆಯಬಹುದು.ಎಂದು ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳವರು ಹೇಳಿದ್ದಾರೆ.ಅಶೋಕೆಯಲ್ಲಿ ನಡೆಯುತ್ತಿರುವ ಚಾತುರ್ಮಾಸ್ಯದಲ್ಲಿ ಶ್ರೀ ತಲೆಂಗಳ ಶ್ಯಾಮ ಭಟ್ ಇವರ ಶ್ರೀಗುರುದೇವತಾಸೇವೆ ಹಾಗೂ ಬೋವಿಸಮಾಜದ ಗುರುಪಾದುಕಾಪೂಜೆಗಳನ್ನು ಸ್ವೀಕರಿಸಿ ಅನುಗ್ರಹಸಂದೇಶವನ್ನು ನೀಡಿದರು.
ಸಂಸಾರವನ್ನು ಬಿಡಲು ಸಾಧ್ಯವಿಲ್ಲ. ಆದರೆ ಅದರಲ್ಲಿಯೇ ಮುಳುಗಿ ಕೊಚ್ಚಿ ಹೋಗಬಾರದು.ಅವಲಂಬನೆಯೇ ಬೇಕಾದಾಗ ಚಿಕ್ಕಪುಟ್ಟ ವಸ್ತುವನ್ನು ಆಶ್ರಯಿಸದೆ ಶಾಶ್ವತವಾದ ಪರಮಾತ್ಮನ ಅವಲಂಬನೆಯನ್ನು ಬಯಸುವುದು ಒಳಿತು. ಎಂದು ಹೇಳಿ ನಮ್ಮ ಸನಾತನ ಸಂಸ್ಕೃತಿಯಲ್ಲಿ ಹಲವು ಹಬ್ಬಗಳಿವೆ.ಅನೇಕ ಉತ್ಸವಗಳಿವೆ. ನಿರಂತರವಾದ ಅರವತ್ತುದಿನಗಳ ಚಾತುರ್ಮಾಸ್ಯವಿದೆ. ಈ ಎಲ್ಲವೂ ಆ ಸರಪಣಿಯ ರೂಪವಾದ ಪರಮಾತ್ಮನನ್ನು ಸ್ಮರಿಸಿಕೊಳ್ಳಲೆಂದೇ ವಿಹಿತವಾಗಿದೆ.ವ್ಯಾಸಪೂರ್ಣಿಮೆಯ ಶುಭದಿನದಂದು ಶ್ರೀಗುರುಗಳನ್ನು ಸಂದರ್ಶಿಸಿ ತೀರ್ಥಮಂತ್ರಾಕ್ಷತೆಗಳನ್ನು ಪಡೆಯಬೇಕು. ತಪ್ಪಿದರೆ ಚಾತುರ್ಮಾಸ್ಯದ ಒಂದುದಿನದಲ್ಲಿಯಾದರೂ ಗುರುಗಳನ್ನು ನೋಡಿ ಆಶೀರ್ವಾದವನ್ನು ಸ್ವೀಕರಿಸಬೇಕು. ಇದು ಪರಂಪರಾಗತವಾದ ಪದ್ಧತಿ.
ಇಂದು ಗುರುದೇವತಾಸೇವೆಯನ್ನು ಸಲ್ಲಿಸಿದ ಬೋವಿ ಸಮಾಜ ಗುರುಗಳನ್ನು ತಮ್ಮ ಹೆಗಲಮೇಲೆ ಇಟ್ಟುಕೊಂಡು ಹೋಗುವ ಸಮುದಾಯ. ಕಾಲ ನಮ್ಮ ಬದುಕಿನಲ್ಲಿ ಅನೇಕರೀತಿಯ ಬದಲಾವಣೆಗಳನ್ನು ತಂದರೂ ಈ ಸಮಾಜ ಮಾತ್ರ ಎಂದೂ ಗುರುಪೀಠದಿಂದ ದೂರವಾಗದೆ ಅತ್ಯಂತಶ್ರದ್ಧೆಯಿಂದ ತ್ರಿಕರಣಪೂರ್ವಕವಾಗಿ ತಮ್ಮದಾದ ಸೇವೆಯನ್ನು ಸಲ್ಲಿಸುತ್ತಿದೆ. ಈ ಸೇವೆಯನ್ನುಸಮರ್ಪಿಸಿದವರಿಗೂ ಹಾಗೂ ಇನ್ನುಳಿದ ಎಲ್ಲ ಶಿಷ್ಯರಿಗೂ ಎಲ್ಲ ರೀತಿಯ ಮಂಗಳವನ್ನು ಪ್ರಭು ಶ್ರೀರಾಮಚಂದ್ರನು ಅನುಗ್ರಹಿಸಲಿ ಎಂದೂ ಆಶಿಸಿದರು.

ಎಂದಿನಂತೆ ಶ್ರೀ ಮಠದ ಮೂಲಮಠನಿರ್ಮಾಣ,ಗೋಬಂಧು,ಸಾವಿರದೆಡೆ ಅಭಿಯಾನ ವಿದ್ಯಾಬಂಧು ಮೊದಲಾದ ಅನೇಕಯೋಜನೆಗಳಿಗೆ ಶಿಷ್ಯರು ತಮ್ಮ ದೇಣಿಗೆಯನ್ನು ಸಮರ್ಪಿ ಸಿದರು. ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪೂಜ್ಯಶ್ರೀಗಳು ಪ್ರಶಸ್ತಿಪತ್ರ ನೀಡಿಅನುಗ್ರಹಿಸಿದರು .ಇದೇ ಸಂದರ್ಭದಲ್ಲಿ ರಾಷ್ಟ್ರಪ್ರಶಸ್ತಿಪುರಸ್ಕೃತ ಶಿಕ್ಷಕಿ ಬಾಡದ ಜಾಹ್ನವಿ ಭಟ್ಟರನ್ನು ಪೂಜ್ಯಶ್ರೀಗಳು ಸ್ಮರಣಿಕೆಯನ್ನು ನೀಡಿ ಸಮ್ಮಾನಿಸಿದರು.ಶ್ರೀಸವಾರಿಯ ವ್ಯವಸ್ಥಾಪಕ ರಾಘವೇಂದ್ರ ಮಧ್ಯಸ್ಥ ಹಾಗೂ ರಾಜಶೇಖರ ಹೆಬ್ಬಾರ್ ಕಾರ್ಯಕ್ರಮವನ್ನು ನಿರ್ವಹಿಸಿದರು.
ವೈವಿಧ್ಯ
ಈ ಕನಸು ಹಲೋ ಡಾಕ್ಟರ್ ಹೋಮಿಯೋಪಥೀ ವೈದ್ಯಕೀಯ ಸಲಹೆ ಕಾರ್ಯಕ್ರಮದಲ್ಲಿ ಈ ವಾರ ಪರೀಕ್ಷೆ ಭಯಕ್ಕೆ ಏನು ಮಾಡಬೇಕೆಂಬ ಪ್ರಶ್ನೆಯನ್ನು ಅನೇಕ ನಮ್ಮ ಓದುಗರು ಕೇಳಿದ್ದಾರೆ. ಹಲವು ಮಂದಿಗೆ ಪರೀಕ್ಷೆ ಭಯ. ತಮ್ಮ ಮಕ್ಕಳ ಪರೀಕ್ಷೆಯ ಭಯದ ಕುರಿತಾದ ಅನೇಕ ಪ್ರಶ್ನೆಗಳು ಹೆತ್ತವರಿಂದ ಬಂದಿದೆ.ಅದಕ್ಕೆ ನಮ್ಮ ವೈದ್ಯರಾದ ಡಾ.ರಾಮಕೃಷ್ಣ ಭಟ್ ಸೂಕ್ತ ಸ್ಪಂದನೆ ನೀಡಿದ್ದಾರೆ.
ಪರೀಕ್ಷೆ ಭಯ ಇರುವವರು, ಪ್ರಶ್ನೆ ಪತ್ರಿಕೆ ನೋಡಿದೊಡನೆ ಉತ್ತರ ಮರೆತು ಹೋಗುವುದು ಗೊಂದಲ ಉಂಟಾಗುವುದು ಮೊದಲಾದ ಲಕ್ಷಣಗಳಿದ್ದವರು ಎತೂಸ ಸೈನಾಪಿಯಂ .30 ಮದ್ದನ್ನು ಪರೀಕ್ಷೆಯ ಹಿಂದಿನ ದಿವಸದಿಂದ ದಿನಾ ಒಂದು ಸಲ ಪರೀಕ್ಷೆ ಮುಗಿಯುವ ತನಕ ತೆಗೆದುಕೊಳ್ಳಬೇಕು.ಇದರಿಂದ ಪರೀಕ್ಷೆಯ ಭಯ, ಉತ್ತರ ಮರೆತುಹೋಗುವ ಸಂಭವ ಗುಣವಾಗುತ್ತದೆ.
ರಾಜ್ಯ - ರಾಷ್ಟ್ರಗೋಕರ್ಣ: ನಮ್ಮ ಬದುಕು ಮುಂದಿನಪೀಳಿಗೆಗೆ ಮಾರ್ಗದರ್ಶಿಯಾಗಬೇಕು.ಅಷ್ಟೇ ಅಲ್ಲ. ನಮಗೆ ಕಾರಣರಾದ ನಮ್ಮ ಪೂರ್ವಜರು ಮೆಚ್ಚುವಂತಿರಬೇಕು.ನಮ್ಮ ಸತ್ಕಾರ್ಯ ಪೂರ್ವಜರನ್ನು ಉನ್ನತಸ್ಥಾನಕ್ಕೇರಿಸುವಂತಿರಬೇಕು,ಅಥವಾ ಅಲ್ಲಿದ್ದವರು ಸಂತೋಷಪಡುವಂತಿರಬೇಕು. ಹಾಗಾದರೆ ಮಾತ್ರ ನಮಗೆ ಇಂತಹ ಉತ್ತಮಮಾನವಜೀವನವನ್ನು ಕರುಣಿಸಿದ ಪರಮಾತ್ಮನಿಗೆ ತೃಪ್ತಿಯಾಗುತ್ತದೆ.ನಾವು ಮಾಡುವ ಒಳ್ಳೆಯ ಕೆಲಸದಿಂದ ನಮ್ಮ ವಂಶದ ಹೆಸರು ಪ್ರಸಿದ್ಧವಾಗುವಂತೆ ನಮ್ಮ ಅಕೃತ್ಯಗಳೂ ಸಹ ನಮ್ಮ ಪೂರ್ವಜರನ್ನು ಪತಿತಗೊಳಿಸುತ್ತವೆ. ಬಗ್ಗೆ ಸದಾ ನಮ್ಮ ಎಚ್ಚರ ಅಗತ್ಯ ಎಂದು ಪೂಜ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳವರು ಹೇಳಿದ್ದಾರೆ.
ಸಮೀಪದ ಅಶೋಕೆಯಲ್ಲಿ ಚಾತುರ್ಮಾಸ್ಯದ ನಿಮಿತ್ತ ಹೊನ್ನಾವರ ಮಂಡಲದ ಕರ್ಕಿ ,ಹೊಸಾಕುಳಿ,ಮತ್ತು ಕಡ್ಲೆ ವಲಯಗಳ ಶ್ರೀಗುರುದೇವತಾಸೇವೆ ಮತ್ತು ಭಂಡಾರಿಸಮಾಜದಶಿಷ್ಯರ ಗುರುಪಾದುಕಾಪೂಜೆಗಳನ್ನು ಸ್ವೀಕರಿಸಿ ಅನುಗ್ರಹಸಂದೇಶವನ್ನು ನೀಡುತ್ತಿದ್ದ ಪೂಜ್ಯಶ್ರೀಗಳು ಇಂದು ಆಷಾಢದ ಕೊನೆಯ ದಿನ.ಅಮಾವಾಸ್ಯೆ. ಅಮಾವಾಸ್ಯೆಯೆಂದರೆ ಸೂರ್ಯ ಮತ್ತು ಚಂದ್ರ ಸಮಾಗಮ.ಪರಪ್ರಕಾಶಕನಾದ ಚಂದ್ರ ಇಂದು ಸೂರ್ಯನನ್ನು ಸೇರಿ ಒಂದು ತಿಂಗಳಕಾಲ ಬೆಳಗಲು ಬೇಕಾದ ಪ್ರಕಾಶವನ್ನು ಸೂರ್ಯನಿಂದ ಪಡೆಯುತ್ತಾನೆ. ಇದೊಂದು ಸಾಂಕೇತಿಕ ಕ್ರಿಯೆ. ಚಂದ್ರ ಮನಸ್ಸಿಗೆ ಪ್ರತೀಕವಾದರೆ ಸೂರ್ಯ ಪರಮಾತ್ಮನ ಸಂಕೇತ.ಜೀವಿಯು ಪರಮಾತ್ಮನಲ್ಲಿ ದೃಷ್ಟಿಯಿಟ್ಟರೆ ಬೇಕಾದ ಸುಖವನ್ನು ಪಡೆದುಕೊಳ್ಳಬಹದೆಂಬುದನ್ನು ಈ ಅಮಾವಾಸ್ಯೆ ಎಂಬ ಸಂಕೇತ ಧ್ವನಿಸುತ್ತದೆ.ತೆಗೆದಷ್ಟೂ ಮಿಗುವ ಅಗಾಧ ಸಂಪತ್ತು ಅಲ್ಲಿದೆ.ಆದರೆ ಅದನ್ನು ಪಡೆಯಲು ನಮ್ಮ ಮನಸ್ಸು ಅಲ್ಲಿ ಕೇಂದ್ರೀಕೃತವಾಗಬೇಕಷ್ಟೆ ಎಂದು ನುಡಿದ ಶ್ರೀಗಳು ನಮ್ಮ ಬಾಳಿನ ಸಾರ್ಥಕತೆಗೆ ಪ್ರಯತ್ನದಷ್ಟೇ ದೈವಾನುಗ್ರಹವೂ ಅಗತ್ಯ.ಮನಸ್ಸನ್ನು ದೇವರಲ್ಲಿಡುವುದೆಂದರೆ ಯಾವ ಖರ್ಚು ಇಲ್ಲದ ಬಂಡವಾಳದಿಂದ ಅಪಾರಲಾಭವನ್ನು ಗಳಿಸುವ ಒಂದು ಶ್ರೇಷ್ಠವ್ಯಾಪಾರ ಎಂದು ಹೇಳಿನಮ್ಮ ಪೂರ್ವಜರು ಸಂತೋಷಪಡುವ ರೀತಿಯಲ್ಲಿ ಪರಮಾತ್ಮನುಮೆಚ್ಚುವ ಬಗೆಯಲ್ಲಿ ಬದುಕೋಣ.
ಜೀವನದಲ್ಲಿ ಅಕ್ರಮಾಗತವಾಗದ ದೈವೀಕೃಪೆಯಿಂದ ದೊರೆತ ಸಂಪತ್ತು ಮಾತ್ರ ನೈಜವಾದ ಸಂಪತ್ತಾಗಿ ಬದುಕಿಗೆ ಆಧಾರವಾಗುತ್ತದೆ. ಇಲ್ಲವಾದರೆ ಅದು ಘೋರವಿಪತ್ತಾಗಿ ಪರಿಣಮಿಸುತ್ತದೆ.ಈ ಎಚ್ಚರ ಸದಾ ನಮಗಿರಬೇಕು. ಇಂದು ಶ್ರೀಗುರುದೇವತಾಸೇವಾಭಾಗಿಗಳಾದ ಹೊನ್ನಾವರ ಮಂಡಲದ ವಲಯಗಳು ಶ್ರೀಮಠಕ್ಕೆ ಸದಾ ನಿಕಟವಾಗಿರುವ ಸೇವಾಕಾರ್ಯದಲ್ಲಿ ಪ್ರಥಮಸ್ಥಾನದಲ್ಲಿರುವಂತವು. ಹಾಗೆಯೇ ಭಂಡಾರಿಸಮಾಜದಶಿಷ್ಯರು ಎಲ್ಲ ಶುಭ ಶೋಭನಾದಿಕಾರ್ಯಗಳಿಗೆ ಅಗತ್ಯವಾಗಿದ್ದು ಶ್ರೀಪೀಠದ ಎಲ್ಲಾ ಸೇವಾಕಾರ್ಯಗಳಲ್ಲಿ ತ್ರಿಕರಣಪೂರ್ವಕವಾಗಿ ತಮ್ಮನ್ನು ತೊಡಗಿಸಿಕೊಂಡವರು.ಇವರೆಲ್ಲರಿಗೂ ಪ್ರಭು ಶ್ರೀರಾಮಚಂದ್ರ ಎಲ್ಲ ಸನ್ಮಂಗಳಗಳನ್ನು ಅನುಗ್ರಹಿಸಲಿ ಎಂದು ಆಶೀರ್ವದಿಸಿದರು.ಎಂದಿನಂತೆಶ್ರೀಮಠದ ಸಮಾಜೋನ್ಮುಖಿಯಾದ ಮೂಲಮಠ ನಿರ್ಮಾಣ,ಸಾವಿರದ ಅಭಿಯಾನ,ಗೋಬಂಧು,ವಿದ್ಯಾಬಂಧು ಯೋಜನೆಗಳಿಗೆ ದೇಣಿಗೆಯ ಸಮರ್ಪಣೆ ಹಾಗೂ ಪ್ರತಿಭಾವಂತವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರವಿತರಣೆ ಮತ್ತು ಸಮ್ಮಾನಕಾರ್ಯಕ್ರಮಗಳು ಸಂಪನ್ನಗೊಂಡವು.ಹೊನ್ನಾವರಮಂಡಲದ ರಾಜಶೇಖರ ಹೆಬ್ಬಾರ್ ಹಾಗೂ ಪ್ರೊ.ಎಸ್.ಜಿ.ಭಟ್ ಕಾರ್ಯಕ್ರಮವನ್ನು ನಿರ್ವಹಿಸಿದರು.
ಈ ಕನಸು ಅವಾರ್ಡ್
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಮಲದಕಲ್ ಗ್ರಾಮದ ಒಬ್ಬ ಹುಡುಗನ ಕಥೆಯಿದು. ಒಂದರಿಂದ ನಾಲ್ಕನೆ ತರಗತಿಯವರೆಗೆ ಉತ್ತಮ ವಿದ್ಯಾಭ್ಯಾಸ ಪಡೆದ ವಿದ್ಯಾರ್ಥಿ ಓದಿನಲ್ಲಿ ತುಂಬಾ ಮುಂದೆ. ನಾಲ್ಕನೇ ತರಗತಿಯನ್ನು ಮುಗಿಸಿದ ನಂತರ ತಂದೆ ಹೇಳುತ್ತಾರೆ. 'ಮಗನೇ ನಿನಗೆ ಓದಿಸುವ ಸಾಮರ್ಥ್ಯ ನನ್ನಲಿಲ್ಲ. ಆದ್ದರಿಂದ ಓದನ್ನು ನಿಲ್ಲಿಸಿ ಹೊಲದ ಕೆಲಸಕ್ಕೆ ಬಾ' ಎಂದು.
ಆದರೆ ಓದಿನಲ್ಲಿ ಅತಿಹೆಚ್ಚಿನ ಶ್ರದ್ಧೆಯನ್ನು ಹೊಂದಿರುವ ಬಾಲಕ ತಂದೆಗೆ ಹೇಳುತ್ತಾನೆ. ಇಲ್ಲ ನಾನು ಓದಲೇ ಬೇಕೆಂದು. ಆಗ ತಂದೆ ಮಗನಿಗೆ ಹೇಳುತ್ತಾನೆ. ಈ ಬಾರಿ ಹತ್ತಿಯನ್ನು ಮಾರಾಟ ಮಾಡಲು ಟ್ರ್ಯಾಕ್ಟರ್ ರಾಯಚೂರಿಗೆ ಹೋಗುತ್ತಿದೆ. ಅಲ್ಲಿಯವರೆಗೆ ಮಾತ್ರ ನಾನು ಬಿಡುತ್ತೇನೆ, ಅದರ ಮುಂದೆ ಕೆಲಸ ನಿನ್ನದು ಏನಾದರು ಮಾಡು.
ಆ ಬಾಲಕ ರಾಯಚೂರಿನ ಗಂಜ್ ವೃತ್ತದಲ್ಲಿ ಇಳಿದು ಹಮ್ದರ್ದ್ ಶಾಲೆಯವರೆಗೆ ನಡೆದು ಬಂದು ತನ್ನ ವಿದ್ಯಾ ದಾಹದ ಬಗ್ಗೆ ಶಾಲೆಯ ಮುಖ್ಯಸ್ಥರ ಮುಂದಿಟ್ಟ. ಆತನಿಗೆ ಶಿಕ್ಷಣ ಕೊಡಿಸಲಾಯಿತು. ಆ ಬಾಲಕ ನಿರಂತರವಾಗಿ ಉತ್ತಮ ಶಿಕ್ಷಣ ಪಡೆದು ಪ್ರಾಥಮಿಕ, ಪ್ರೌಢ, ಕಾಲೇಜು ಮುಗಿಸಿ ಉಪನ್ಯಾಸಕ, ಪ್ರಾಚಾರ್ಯ, ವಕೀಲನಾಗಿ, ಹೈ ಕೋರ್ಟ್ ನ್ಯಾಯಾಧೀಶರಾಗಿ ಮುಂದೆ ಸರ್ವೋ ಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಿ ಮೆರೆಯುತ್ತಾರೆ.
ಈ ವ್ಯಕ್ತಿ ಬೇರೆ ಯಾರೂ ಅಲ್ಲ ನ್ಯಾಯಮೂರ್ತಿ ಶಿವರಾಜ್ ಪಾಟೀಲ್, ಹೀಗೆ ನೀವು ಜೀವನದಲ್ಲಿ ಒಮ್ಮೆ ದೃಢ ನಿರ್ಧಾರ ತೆಗೆದುಕೊಂಡು ಮುಂದೆಜ್ಜೆ ಹಾಕಿದರೆ ಜಯ ಸಿಗಲಿದೆ. ಹೆಜ್ಜೆ ಇಡುವುದಕ್ಕಿಂತ ಮುಂಚೆ ಯೋಚಿಸಿ ಎಂದು ಹೇಳಿದ ಅಧ್ಯಾಪಕ ಅಯ್ಯಪ್ಪ ತುಕ್ಕಾಯಿ ಅವರ ರೋಮಾಂಚನಕಾರಿ ಪಾಠದಲ್ಲಿ ಕಲ್ಪನೆಗೆ ಬಂದ ಹೀರೋ ರಾಜ್ಯದ ಅತ್ಯಂತ ಹಿಂದುಳಿದ ತಾಲೂಕು ದೇವದುರ್ಗದ ಬಡ ರೈತನ ಮಗ ನ್ಯಾ.ಶಿವರಾಜ್ ಪಾಟೀಲ್.
ನಂತರದ ದಿನದಲ್ಲಿ ಅವರನ್ನು ಮುಖಾಮುಖಿಯಾಗಿ ಭೇಟಿಯಾಗುವ ಸನ್ನಿವೇಶ. ಅದು ಅತಿಥಿ ಉಪನ್ಯಾಸಕರಾಗಿ ಅಗಮಿಸಿದ ಉದ್ದ ಮೂಗಿನ, ಕೆಂಪು ಮೈ ಬಣ್ಣದ, ಉದ್ದನೇಯ ದೇಹದ ವ್ಯಕ್ತಿ. ಕಲ್ಪನೆಗೂ ಮೀರಿ ನಿಂತ ವ್ಯಕ್ತಿತ್ವ. ಸ್ಪುಟವಾಗಿ, ನಿರರ್ಗಳವಾಗಿ ಪತ್ರಿಕೋದ್ಯಮದ ನೀತಿ ಸಂಹಿತೆಯ ಬಗ್ಗೆ ಮಾಡಿದ ಪಾಠ ಇನ್ನೂ ಕಿವಿಯಲ್ಲಿ ಗುಂಯ್ ಗುಡುತ್ತಿದೆ. ನಂತರ ಕೇಳಿದ ಪ್ರಶ್ನೆ 'ರಾಜಕೀಯ ವ್ಯಕ್ತಿಗಳ ವೈಯಕ್ತಿಕ ವಿಷಯಗಳನ್ನು ಕೇಳಬಾರದೋ? ಅಥವಾ ಕೇಳಲೇಬಾರದೋ...? ಅದಕ್ಕೆ ಸ್ಪಷ್ಟವಾಗಿ ಉತ್ತರಿಸಿದ ಅವರು ಕೇಳಬೇಕು. ರಾಜಕೀಯ ವ್ಯಕ್ತಿಗಳ ಬಗ್ಗೆ ತಿಳಿಯಬೇಕೆಂಬ ಕುತೂಹಲ ಜನರಿಗೆ ಇರುತ್ತದೆ. ಆ ಕುತೂಹಲವನ್ನು ತಣಿಸುವ ಕಾರ್ಯವನ್ನು ನೀವು(ಪತ್ರಕರ್ತರು) ಮಾಡಬೇಕು . ಆದರೆ ಅವರ ಅತೀ ವೈಯಕ್ತಿಕ ವಿಚಾರಕ್ಕೆ ಕೈ ಹಾಕಬಾರದೆಂದು ನಿರ್ದೇಶನ ಕೊಟ್ಟರು.
ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿರುವ ನ್ಯಾ.ಶಿವರಾಜ್ ಪಾಟೀಲ್ ಲೋಕಾಯುಕ್ತರಾಗಿ ಆಯ್ಕೆಯಾಗಿರುವುದು ವ್ಯಕ್ತಪಡಿಸಲಾರದಷ್ಟು ಸಂತೋಷದ ಸಂಗತಿ ಇವರು ಮುಂದಿನ ದಿನಗಳಲ್ಲಿ ಮೂಕ ಜನರ ಧ್ವನಿಯಾಗಿ, ಕಿವುಡು ಸರಕಾರಕ್ಕೆ ಎಚ್ಚರಿಕೆಯ ಗಂಟೆಯಾಗಿ ಕೆಲಸ ಮಾಡಲಿ ಎಂಬುದು ಹಾರೈಕೆ.
ಹೈಮದ್ ಹುಸೇನ್ ದಂಡ್
ವೈವಿಧ್ಯ
ನಮ್ಮ ದೇಶದಲ್ಲಿ ಲಂಚ ಇರುವುದು ಸತ್ಯ. ಲಂಚ ಕೊಡದೆಯೂ ಉದ್ಯೋಗ ಪಡೆಯಬಹುದು ಎನ್ನುವುದು ಸತ್ಯ. ಯಾವುದೇ ಲಂಚ ಪಡೆಯದೆ ಉದ್ಯೋಗ ನೀಡುವ ಎಷ್ಟೋ ಕಂಪನಿಗಳಿವೆ, ಸರ್ಕಾರಿ ಹುದ್ದೆಗಳಿವೆ. ಆದರೆ ಯುವಕರು ಪ್ರಯತ್ನಿಸುತ್ತಿಲ್ಲ. ಲಂಚ,Influence ಇಲ್ಲದೆ ನೌಕರಿ ಸಿಗುವುದಿಲ್ಲ ಎಂಬ ಪೂರ್ವಾಗ್ರಹ ಬೆಳೆಸಿಕೊಂಡಿದ್ದಾರೆ. ಯಾವ ಉದ್ಯೋಗಕ್ಕೆ ಎಷ್ಟು qualification ಇರಬೇಕು ಅಂತನೂ ಸರಿಯಾಗಿ ಗೊತ್ತಿರುವುದಿಲ್ಲ. ಹೀಗಾಗಿ ನಿರುದ್ಯೋಗ ಸಮಸ್ಯೆ ಹೆಚ್ಚುತ್ತದೆ. ಐ.ಎ.ಎಸ್. ಹುದ್ದೆಗಳ ನೇಮಕಾತಿಗೆ ನಡೆಯುವ ಪರೀಕ್ಷೆ ಬರೆಯಲು ಬೇಕಾಗಿರುವುದು ಪದವಿ ಮಾತ್ರ. ಪದವೀಧರರು ಲಕ್ಷಾಂತರ ಮಂದಿ ನಮ್ಮ ರಾಜ್ಯದಲ್ಲಿ ಇದ್ದಾರೆ. ಆದರೆ ಅರ್ಜಿ ಹಾಕುವವರು ಕೆಲವರು ಮಾತ್ರ! ಉಳಿದವರೆಲ್ಲ ಈಗಿನ ಕಾಲದಲ್ಲಿ ಲಂಚ ಇಲ್ಲದೆ... ಎಂದು ಮೂಗು ಮುರಿಯುತ್ತಾರೆ. 
ಹೀಗಿರುವಾಗ ಉದ್ಯೋಗ ಮತ್ತು ಯುವಕರ ನಡುವೆ ಒಂದು ಸೇತುವೆ ಆಗ್ತಾ ಇದ್ದಾರೆ ಹೊನ್ನಾವರದ ಎಸ್.ಡಿ.ಎಂ. ಕಾಲೇಜಿನ ಉಪನ್ಯಾಸಕ ಡಾ| ಜಿ.ಪಿ. ಪಾಠಣ್ಕರ್ ಮನೆ ಮೇಲೆ ಮಹಡಿ ಕಟ್ಟಿ ಅದನ್ನು ವಿದ್ಯಾರ್ಥಿಗಳCareer guidance (ವೃತ್ತಿ ಮಾರ್ಗದರ್ಶನ) ಗೆ ಮೀಸಲಿಟ್ಟಿದ್ದಾರೆ. ತಮ್ಮ ತಾಯಿ ಲಕ್ಷ್ಮಿ ಪಾಂಡುರಂಗ ಪಾಠಣ್ಕರ್ ಹೆಸರಿನಲ್ಲಿ ಗ್ರಂಥಾಲಯವನ್ನೂ ಅಲ್ಲಿ ಪ್ರಾರಂಭಿಸಿದ್ದಾರೆ. ಯಾವುದೇ ಉದ್ಯೋಗ ಅವಕಾಶವಿದ್ದರೂ ಸರ್ಕಾರ ಹೊಸ ಹುದ್ದೆಗಳ ನೇಮಕ ಮಾಡಲು ಹೊರಟರೂ ಅದನ್ನು ವಾಚನಾಲಯದNotice Board ಗೆ ಹಾಕುತ್ತಾರೆ.
ಉದ್ಯೋಗವಕಾಶ ತಿಳಿಸಲೆಂದೇ ಇರುವ ಹಲವು Magazine ಗಳು ಅಲ್ಲಿ ಬರುತ್ತದೆ. ಅಂಗಡಿಯಲ್ಲಿ ಕೊಂಡರೆ ಅಂತಹ Magazine ಗಳಿಗೆ 15-20 ರೂಪಾಯಿ ಇದೆ. ಆದರೆ ಇಲ್ಲಿ ಅಂತಹ ಹಲವುMagazine ಗಳನ್ನು ಉಚಿತವಾಗಿ ಓದಬಹುದು. ಅಷ್ಟೇ ಅಲ್ಲ ಆ ನೇಮಕಾತಿಗೆ ಸಂಬಂಧಪಟ್ಟ ಪರೀಕ್ಷೆಗಳಿಗೆ ಓದಲು ಪುಸ್ತಕಗಳನ್ನು ಅಲ್ಲಿಯ ಗ್ರಂಥಾಲಯದಿಂದ ಪಡೆಯಬಹುದು. ಕ್ಲರ್ಕ್ ಹುದ್ದೆಯಿಂದ ಹಿಡಿದು ಐ.ಎ.ಎಸ್. ಹುದ್ದೆಯ ತನಕ ನಡೆಯುವ ವಿವಿಧ ಪರೀಕ್ಷೆಗಳಿಗೆ ಅಲ್ಲಿ ಪುಸ್ತಕಗಳು ಲಭ್ಯ. ಉದ್ಯೋಗವಕಾಶಕಷ್ಟೇ ಅಲ್ಲದೆ ವಿವಿಧ ಕೋರ್ಸ್ ಗಳಿಗೆ ಸಂಬಂಧಪಟ್ಟಂತೆ ಡಾ| ಪಾಠಣ್ಕರ್ ಕೌನ್ಸೆಲಿಂಗ್ ನಡೆಸುತ್ತಾರೆ. ಬಿ.ಎ. ಮುಗಿಯಿತು ಮುಂದೇನು? ಎನ್ನುವ ಪ್ರಶ್ನೆಗೆ ಅವರ ಬಳಿ ನೂರಾರು ಉತ್ತರಗಳಿವೆ. ವಿವಿಧ ಕೋರ್ಸ್ ಗಳ ಪ್ರವೇಶ ಪರೀಕ್ಷೆಗಳಿಗೆ ಸಂಬಂಧಪಟ್ಟಂತೆ ಓದಲು ಅಲ್ಲಿ ಹಲವು ಪುಸ್ತಕಗಳಿವೆ. CAT, MAT, CET, Text Book ಗಳು ಇತ್ಯಾದಿಗಳು. 
'ಪುಸ್ತಕ ಕೊಳ್ಳಲು ದುಡ್ಡಿಲ್ಲದೆ ಯಾವ ವಿದ್ಯಾರ್ಥಿಯು ಶಿಕ್ಷಣ ವಂಚಿತನಾಗಬಾರದು' ಎನ್ನುತ್ತಾರೆ ಪಾಠಣ್ಕರರು.
ಡಾ| ಪಾಠಣ್ಕರ್ರಿಗೆ ಸಮಾಜಸೇವೆಗಾಗಿ ರಾಷ್ಟ್ರಮಟ್ಟದ ಡಾ| ಅಂಬೇಡ್ಕರ್ ಫೆಲೊಶಿಪ್ ಪ್ರಶಸ್ತಿ ಬಂದಿದೆ. ಅವರು ರಾಜ್ಯ ಸರ್ಕಾರದ ಜಿಲ್ಲಾ ಸಂಪನ್ಮೂಲ ವ್ಯಕ್ತಿ. ಹಲವಾರು ಕಡೆ ಕಾರ್ಯಗಾರ ನಡೆಸಿದ್ದಾರೆ. ಇವರ ಮಾರ್ಗದರ್ಶನದಿಂದ ಉದ್ಯೋಗ ಪಡೆದ ವ್ಯಕ್ತಿಯೊಬ್ಬ ತನ್ನ ಮದುವೆಯ ಆಮಂತ್ರಣ ಪತ್ರಿಕೆಯಲ್ಲೇ ಡಾ| ಪಾಠಣ್ಕರ್ರ ಹೆಸರು ಛಾಪಿಸಿದ್ದ. ನೂರಾರು ಮಕ್ಕಳು ಇವರಿಂದಾಗಿ ಉದ್ಯೋಗ ಪಡೆದಿದ್ದಾರೆ. ಎಷ್ಟೇ ಪ್ರಶಸ್ತಿಗಳು ಬಂದರೂ ಅಹಂ ಬೆಳೆಸಿಕೊಳ್ಳದ ಪಾಠಣ್ಕರ್ರು ಯಾವುದೇ ವಿದ್ಯಾರ್ಥಿ ಬಂದರೂ ತಾಳ್ಮೆಯಿಂದ ಶಿಕ್ಷಣ, ಉದ್ಯೋಗದ ಬಗ್ಗೆ ಮಾಹಿತಿ ನೀಡುತ್ತಾರೆ. ಸ್ವಂತ ಖರ್ಚಿನಲ್ಲಿ ಕಾಸರಗೋಡಿನಲ್ಲಿ ಮರಳಿನಲ್ಲಿ ಕಲಾಕೃತಿ ರಚಿಸುವ ಹಾಗೂ ಗಾಳಿಪಟ ಹಾರಿಸುವ ಸ್ಪರ್ಧೆ ಏರ್ಪಡಿಸುತ್ತಾರೆ. ಸ್ವಂತ ಖರ್ಚಿ ನಲ್ಲಿ ಊರಿನಲ್ಲಿ ಹಲವಾರು ಗಿಡಗಳನ್ನು ನೆಟ್ಟಿದ್ದಾರೆ. ಅವುಗಳ ಸುತ್ತ ಕಲ್ಲು ಕಟ್ಟಿಸಿ ರಕ್ಷಣೆ ನೀಡಿದ್ದಾರೆ. ಸುಮಾರು 7 ಅಂತರಾಷ್ಟ್ರೀಯ ಸೆಮಿನಾರ್ಗಳಲ್ಲಿ ಸಂಶೋಧನೆಗಳನ್ನು ಮಂಡಿಸಿದ್ದಾರೆ. 
ಸುಮಾರು ಒಂದು ಲಕ್ಷಕ್ಕೂ ಹೆಚ್ಚು ರೂಪಾಯಿ ಸ್ವಂತ ಹಣ ಖರ್ಚು ಮಾಡಿ ಇದನ್ನೆಲ್ಲ ಪ್ರಾರಂಭಿಸಿದ್ದಾರೆ. ಅಲ್ಲಿ ಬಡ ವಿದ್ಯಾರ್ಥಿಗಳಿಗೆ ಉಚಿತ ಟ್ಯೂಶನ್ ಸಿಗುವ ವ್ಯವಸ್ಥೆ ಮಾಡಿದ್ದಾರೆ. ಅದರ ಫೀಯನ್ನು ಪಾಠಣ್ಕರ್ರೇ ನೀಡುತ್ತಾರೆ. ಅವರ ಈ ಎಲ್ಲಾ ಚಟುವಟಿಕೆಗಳು ನೇರವಾಗಿ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಬಡ ವಿದ್ಯಾರ್ಥಿಗಳಿಗೆ ಸಹಾಯವಾಗುವಂತವು. ಇದು ಶಿಕ್ಷಕನೊಬ್ಬ ಮಾಡಬಹುದಾದ ಸಮಾಜಸೇವೆ. ಸಮಾಜಸೇವೆ ಮಾಡಲು ಎಲ್ಲರೂ ಖಾವಿ ತೊಡಬೇಕಾಗಿಲ್ಲ. ಪಾದ್ರಿ ಆಗಬೇಕಿಲ್ಲ. ಎಲ್ಲರೂ ತಮ್ಮ-ತಮ್ಮ ಕ್ಷೇತ್ರದಲ್ಲಿ ಪರೋಪಕಾರ ಬುದ್ಧಿ ಬೆಳೆಸಿಕೊಂಡರೆ ಸಮಾಜ ಉದ್ಧಾರವಾಗುತ್ತದೆ. ಡಾಕ್ಟರ್ ನಾಲ್ಕಾರು ಜನರಿಗೆ ದಿನ ಉಚಿತ ಔಷಧ ನೀಡಿದರೆ ಸಮಾಜಸೇವೆಯೆ. ಶಿಕ್ಷಕರ ಇಂತಹ ಕೆಲಸಗಳನ್ನು ಜನ ಗುರುತಿಸಿ ಬೆಳೆಸಬೇಕು. ಇದು ಕೇವಲ ಪ್ರಾರಂಭ ಮಾತ್ರ ಅಂದಿದ್ದಾರೆ ಪಾಠಣ್ಕರ್ರು. ಅವರ ಈ ಹೆಜ್ಜೆ ಹೆಮ್ಮರವಾಗಿ ಬೆಳೆದು ಸಮಸ್ತ ರಾಜ್ಯಕ್ಕೆ ಆದರ್ಶವಾಗಲಿ ಎಂದು ಆಶಿಸೋಣ.
- ಆದಿತ್ಯ ಭಟ್
ವಿಚಾರ
ನಾಯಿಗಳು ಬೊಗಳಿದರೆ ನಕ್ಷತ್ರಗಳು ಉದುರಿ ಹೋಗುವುದಿಲ್ಲ
ಗೀತಾ ಬಾರೆ ಇಲ್ಲಿ. ನಿನ್ನ ಬಳಿ ಬಹಳ ಹೇಳೋದಿದೆ. ಬುಧವಾರ ನಮ್ಮ ಕಾಲೇಜಿನಲ್ಲಿ "ವ್ಯಕ್ತಿತ್ವ ವಿಕಸನ"ದ ಬಗ್ಗೆ ಒಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನಮಗೆ ತರಬೇತು ಮಾಡಲು ಬಂದ ಆ ಟ್ರೇನರ್ ಕಾರ್ಯಕ್ರಮವನ್ನು ಎಷ್ಟು ಚನ್ನಾಗಿ ನಡಿಸಿಕೊಟ್ಟರೆಂದರೆ...ಅವರ ಮಾತುಗಳನ್ನು ಕೇಳಿ ನನ್ನ ಮನಸ್ಸಂತು ತುಂಬಾ ಹಗುರವಾಗಿ ಹೋಯಿತು.1000 ರೂಗಳ ನೋಟನ್ನು ಕೈಯಲ್ಲಿ ಹಿಡಿದು ಎಲ್ಲರಿಗೂ ತೋರಿಸುತ್ತ - "ಈ ನೋಟು ಯಾರಿಗೆ ಬೇಕು" ಎಂದರು? ನಾವೆಲ್ಲ "ನನಗೆ ಬೇಕು, ನನಗೆ ಬೇಕು" ಎಂದು ಕೈಯನ್ನು ಎತ್ತಿ ಹೇಳಿದೆವು.
ಓಹೋ...ಪರವಾಗಿಲ್ಲವೇ...? ಎಲ್ಲರಿಗೂ ಬೇಕು. ಸಂತೋಷ. ಈಗ ನಾನು ಇದನ್ನು ಕಸ ಮಡಚುವ ಹಾಗೆ ಮಡಚುತ್ತೇನೆ ನೋಡಿ ಎಂದು ತನ್ನ ಮುಷ್ಠಿಯಲ್ಲಿ ಅದನ್ನು ಮಡಚಿಬಿಟ್ಟರು. ಈಗ ಹೇಳಿ ಈ ನೋಟು ಯಾರಿಗೆ ಬೇಕು...?
ಮತ್ತೆ ಎಲ್ಲರು ಕಿರುಚಾಡುತ್ತಾ ಜೋರಾಗಿ ಕೈಯತ್ತಿ ಹೇಳಿದರು - "ನನಗೆ ಬೇಕು, ನನಗೆ ಬೇಕು".
ನಾನು ನಿಮ್ಮಲ್ಲಿ ಯಾರಿಗಾದರು ಇದನ್ನು ಕೊಡುತ್ತೇನೆ. ಆದರೆ ಅದಕ್ಕಿಂತ ಮೊದಲು ಇದನ್ನು ಯಾರಾದರು ಶೂ ಕಾಲುಗಳಿಂದ ಹುಚ್ಚರಂತೆ ತುಳಿದು ಅದರ ರೂಪ ಕೆಡಿಸಿಬಿಡಿ.
ಆನಂದ ಎದ್ದು ಹಾಗೆಯೇ ಮಾಡಿ ನೋಟನ್ನು ಹಿಂತಿರುಗಿಸಿದನು.
ಈಗ ಈ ನೋಟು ಯಾರಿಗೆ ಬೇಕು...? ಎಲ್ಲರು ಅದೇ ರೀತಿ "ನನಗೆ ನನಗೆ" ಎಂದು ಕೂಗಾಡಿದರು.
ನನ್ನ ಪ್ರೀತಿಯ ವಿದ್ಯಾರ್ಧಿಗಳೇ, ಇದರಿಂದ ನಿಮಗೆ ಒಂದು ಒಳ್ಳೆಯ ಪಾಠ ಕಲಿತಂತಾಯಿತಲ್ಲವೇ...? ನಾನು ಆ ನೋಟಿನೊಂದಿಗೆ ಏನು ಮಾಡಿದರೂ ನೀವು ಅದು "ನನಗೆ ಬೇಕು ನನಗೆ ಬೇಕು" ಎಂದು ಕೂಗಾಡಿದಿರಿ. ಕಾರಣ...ನಾನು ಏನು ಮಾಡಿದರೂ, ಅದು ಯಾವ ಅವಸ್ಥೆಯಲ್ಲಿದ್ದರೂ ಅದರ ಬೆಲೆ ಮಾತ್ರ ಕಡಿಮೆಯಾಗಲಿಲ್ಲ್ಲ. ಅಲ್ಲವೇ..?
ನಾವು ಜೀವನದಲ್ಲಿ ತಿಳಿದೋ ತಿಳಿಯದೋ ತಪ್ಪುಗಳನ್ನು ಮಾಡಿ ಬೇರೆಯವರ ಟೀಕೆಗಳಿಗೆ ಗುರಿಯಾಗುತ್ತೇವೆ ಅಥವಾ ಸೋಲಿನ ಮೇಲೆ ಸೋಲನ್ನು ಅನುಭವಿಸಿರುತ್ತೇವೆ. ಆ ಟೀಕೆಗಳು ಅಥವಾ ಸೋಲು ಮನಸ್ಸಿನ ಮೇಲೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಅದೆಷ್ಟೊಂದು ಪ್ರಭಾವ ಬೀರಿರುತ್ತದೆಂದರೆ, ನಾವು "ನಮ್ಮ ಅಸ್ತಿತ್ವ ಯಾವುದಕ್ಕೂ ನಾಲಾಯಕ್ಕು, ನಾವು ಕೆಲಸಕ್ಕೆ ಬಾರದವರು, ನಮ್ಮ ಹಣೆಬರಹವೇ ಇಷ್ಟು, ನಮಗೆ ಬೆಲೆಯೇ ಇಲ್ಲ" ಎಂಬ ನಕಾರಾತ್ಮಕ ಭಾವನೆಗಳನ್ನು ಬೆಳೆಸಿಕೊಳ್ಳುತ್ತಾ ಹೋಗುತ್ತೇವೆ. ಅದು ನಮ್ಮ ಸರ್ವತೋನ್ಮುಖ ಅಭಿವೃದ್ಧಿಗೆ ಕಲ್ಲುಬಂಡೆಯಂತೆ ಅಡ್ಡಿಯಾಗಿ ನಿಲ್ಲುತ್ತದೆ.
ಪರರ ಟೀಕೆಗಳಿಂದ ನಮ್ಮ ಬೆಲೆ ಕಳೆದು ಹೋಗಲ್ಲ. ನಾಯಿಗಳು ಬೊಗಳಿದರೆ ನಕ್ಷತ್ರಗಳು ಉದುರಿ ಹೋಗುತ್ತವೆಯೇ...?ಆದರೆ ನಾವು ನಮ್ಮ ಬೆಲೆಯನ್ನು ಮರೆತುಬಿಟ್ಟಿರುತ್ತೇವೆ. ಪರರ ಟೀಕೆಗಳನ್ನು ನಿಷ್ಪ್ರಯೋಜಕ ಮಾಡಲು ಪ್ರಯತ್ನವೇ ಮಾಡಿರುವುದಿಲ್ಲ. 1000 ರೂಗಳ ನೋಟಿನ ಜೊತೆ ನಾವು ಏನೇನು ಮಾಡಿದ್ದೇವೆ, ನೀವೇ ಕಣ್ಣಾರೆ ನೋಡಿದ್ದೀರಿ. ಅದರ ಬೆಲೆ ಕಡಿಮೆ ಆಯಿತೇ...? ಇಲ್ಲ. ಸ್ವಲ್ಪ ಗಲೀಜಾಯಿತು ಅಷ್ಟೆ. ಅದನ್ನು ಶುದ್ಧಗೊಳಿಸಬಹುದು. ನಕಾರಾತ್ಮಕ ಯೋಚನೆಗಳಿಂದ ಹೊರಬಂದು ನಿಮ್ಮ ತಪ್ಪುಗಳನ್ನು ನೀವು ತಿದ್ದುಕೊಂಡರೆ, ಅದೇ ಜನ ನಿಮ್ಮನ್ನು ಗುರುತಿಸಿ ಗೌರವವನ್ನು ಕೊಡುತ್ತಾರೆ.
ಯಾರು ಬೆಲೆ ಕೊಡದಿದ್ದರೂ ದೇವರು ಬೆಲೆ ಕೊಡುತ್ತಾನೆ.
- ಜಬೀವುಲ್ಲಾ ಖಾನ್
ಶ್ರೀ ರಾಘವೇಶ್ವರ ಶ್ರೀಗಳ ದಿವ್ಯ ಆಶೀರ್ವಚನ
ಗೋಕರ್ಣ: ಅಶೋಕೆಯು ನಮ್ಮ ಶ್ರೀಮಠದ ಜನ್ಮಭೂಮಿ.ಇಲ್ಲಿ ಲೋಕಶಂಕರನಾದ ಆದಿಕಿರಾತ ಮಲ್ಲಿಕಾರ್ಜುನನಿದ್ದಾನೆ.ಶ್ರೀರಾಮಾದಿ ದೇವತಾಸಾನ್ನಿಧ್ಯ ಇಲ್ಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ಗುರುಪೀಠದ ಧರ್ಮಾಚಾರ್ಯರ ಚಾತುರ್ಮಾಸ್ಯದ ವಿಶೇಷಸಂದರ್ಭ.ಎಲ್ಲ ಶಿಷ್ಯರೂ ಬಂದು ಗುರುದರ್ಶನವನ್ನು ಮಾಡಿ ಪುನೀತರಾಗುವ ಪುಣ್ಯಕಾಲ. ಗುರುಸೇವೆ,ಸಮಾಜಸೇವೆ ಎರಡೂ ಬದುಕಿನ ಎರಡು ಕಣ್ಣುಗಳು.
ಈ ಎರಡನ್ನೂ ಕರ್ತವ್ಯವೆಂದು ತಿಳಿದು ಶ್ರದ್ಧಾಪೂರ್ವಕವಾಗಿ ಅನುಷ್ಠಾನಿಸಿದರೆ ಅದಕ್ಕಿಂತ ಹೆಚ್ಚಿನ ಜೀವನಲಾಭ ಬೇರಿಲ್ಲ. ಎಂದು ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಹೇಳಿದ್ದಾರೆ.ಇಂದು ಚಾತುರ್ಮಾಸ್ಯದ ನಿಮಿತ್ತ ಹೊನ್ನಾವರಮಂಡಲದ ಭವತಾರಿಣೀ,ಮರವಂತೆ,ಹೊನ್ನಾವರ ಹಾಗೂಭಟ್ಕಳ ವಲಯಗಳ ಶ್ರೀಗುರುದೇವತಾ ಸೇವೆ ಮತ್ತು ಗಾಬಿತಸಮಾಜದ ಪಾದಪೂಜಾಸೇವೆಯನ್ನು ಸ್ವೀಕರಿಸಿ ಅನುಗ್ರಹಸಂದೇಶವನ್ನು ನೀಡುತ್ತಿದ್ದ ಪೂಜ್ಯಶ್ರೀಗಳು ನಮ್ಮ ಬದುಕು ಸಂತೆಯಂತೆ.ಜಾತ್ರೆಗೆ ಹೋದ ಮಗು ಬೆಂಡು,ಬತ್ತಾಸು,ಪೀಪಿಗಳಲ್ಲಿಯೇ ಸಮಾಧಾನ ಹೊಂದುವಂತೆ ನಾವೂ ಸಹ ಜೀವನದಲ್ಲಿ ಲಭ್ಯವಾಗುವ ಅಲ್ಪಸಂತೋಷದಲ್ಲಿಯೇ ತೃಪ್ತರಾಗಿಬಿಡುತ್ತೇವೆ. ಈ ಸ್ಥಿತಿ ದೂರಾಗಬೇಕು.ಜಾತ್ರೆಯ ಕೇಂದ್ರ ತೇರು.ತೇರಿನಲ್ಲಿ ದೇವರು.ಇದನ್ನು ಮರೆಯದಿದ್ದರೆ ಬದುಕಿನ ಸಾರ್ಥಕತೆಯನ್ನು ಪಡೆಯಬಹುದು.
ಮಾನವಜೀವನವೇ ಭಗವತ್ಸಾಕ್ಷಾತ್ಕಾರಕ್ಕೆ ಸುಲಭಸಾಧನ ಎಂದೂ ನುಡಿದ ಪೂಜ್ಯಶ್ರೀಗಳು ಗಾಬಿತಸಮಾಜ ನಮ್ಮ ಶ್ರೀಮಠದ ಆರಾಧ್ಯದೈವವಾದ ಪ್ರಭು ಶ್ರೀರಾಮಚಂದ್ರನ ಆತ್ಮಸಖನಾದ ಗುಹನ ಸಂಬಂಧವನ್ನು ಹೊಂದಿದ ಕಡಲಮಕ್ಕಳ ಸಮಾಜ. ಈ ಸಮಾಜವೂ ಸಹ ಶ್ರೀಪೀಠದಲ್ಲಿ ಭಕ್ತಿಶ್ರದ್ಧಾಪೂರ್ವಕವಾದ ನಡವಳಿಕೆಯನ್ನು ಹೊಂದಿದ್ದು ಗುರುಸೇವೆಯಲ್ಲಿ ಭಾಗಿಯಾಗಿದೆ. ಇಂದು ಶ್ರೀ ಗುರುದೇವತಾಸೇವೆಯನ್ನು ಸಲ್ಲಿಸಿದ ಸಮಾಜದ ಎಲ್ಲ ಶಿಷ್ಯರಿಗೂ ಸಹ ಸನ್ಮಂಗಳವಾಗಲಿ ಎಂದೂ ಆಶೀರ್ವದಿಸಿದರು.ಈ ಮೊದಲು ಎಂದಿನಂತೆ ಶ್ರೀಮಠದ ಸಮಾಜೋನ್ಮುಖಿಯಾದ ಸಾವಿರದ ಅಭಿಯಾನ,ಗೋಬಂಧು, ಮೊದಲಾದ ಹಲವಾರುಯೋಜನೆಗಳಿಗೆ ಹಲವಾರು ಶಿಷ್ಯರು ತಮ್ಮ ಕೊಡುಗೆಯನ್ನು ಘೋಷಿಸಿದರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪೂಜ್ಯಶ್ರೀಗಳು ಪ್ರಶಸ್ತಿಪತ್ರಪೂರ್ವಕವಾಗಿ ಅನುಗ್ರಹಿಸಿದರು.ಶ್ರೀಸವಾರಿಯ ವ್ಯವಸ್ಥಾಪಕ ರಾಘವೇಂದ್ರ ಮಧ್ಯಸ್ಥರು ಕಾರ್ಯಕ್ರಮವನ್ನು ನಿರ್ವಹಿಸಿದರು.
ರಾಜ್ಯ - ರಾಷ್ಟ್ರ
ಗೋಕರ್ಣ:ಗೋಕರ್ಣದ ಸಾರ್ವಭೌಮ ಶ್ರೀಮಹಾಬಲೇಶ್ವರ ಯಾವುದೇ ಒಂದು ಕುಟುಂಬದ ಅಥವಾ ವಂಶದ ಕುಲದೇವತೆಯಲ್ಲ.
ಲೋಕನಿಯಾಮಕನಾದ ಆತ ವಿಶ್ವಾರಾಧ್ಯ. ಆ ಹಿನ್ನೆಲೆಯಲ್ಲಿಯೇ ಶ್ರೀಮದಾಚಾರ್ಯ ಶಂಕರ ಭಗವತ್ಪಾದರು ತಮ್ಮ ದಿಗ್ವಿಜಯಕಾಲದಲ್ಲಿ ಗೋಕರ್ಣಕ್ಕೆ ಬಂದು ಆತ್ಮಲಿಂಗರೂಪಿಯಾದ ಶಿವನನ್ನು ಅರ್ಚಿಸಿ ಸನಾತನಧರ್ಮವು ಶಾಶ್ವತವಾಗಿರಬೇಕೆಂಬ ಉದ್ದೇಶದಿಂದ ಸಮೀಪದಲ್ಲಿನ ಈ ಅಶೋಕೆಯಲ್ಲಿ ನಮ್ಮ ಈ ಅವಿಚ್ಛಿನ್ನರಾಜಗುರುಪರಂಪರೆಯ ಶ್ರೀಮಠವನ್ನು ಸ್ಥಾಪಿಸಿದರು.ಅಂದಿನಿಂದಲೂ ಈ ಕ್ಷೇತ್ರದ ಶಿಷ್ಯರು ಸೇವಾಭಾವನೆಯಿಂದ ಗುರುಪೀಠಕ್ಕೆ ನಡೆದುಕೊಳ್ಳುತ್ತಿದ್ದು ಧಾರ್ಮಿಕಮಾರ್ಗದರ್ಶನವನ್ನು ಪಡೆಯುತ್ತ ಬಂದಿದ್ಧಾರೆ.
ಈ ಕ್ಷೇತ್ರವು ಶ್ರೀಮಠಕ್ಕೆ ಜನ್ಮಸ್ಥಾನವಾದಂತೆ ನಮ್ಮ ಬದುಕಿನ ಪೂರ್ವಾಶ್ರಮದಲ್ಲಿ ನಮಗೆ ಆಶ್ರಯವನ್ನು ನೀಡಿ ವಿದ್ಯಾಭಾಗ್ಯವನ್ನು ಕೊಟ್ಟ ಕ್ಷೇತ್ರವೂ ಹೌದು. ನಮ್ಮ ಮಠದ ಅನೇಕ ಪೀಠಾಧೀಶರಿಗೂ ಸಹ ಗೋಕರ್ಣ ಮಾತೃಭೂಮಿ.
ಈ ವಿಷಯವನ್ನು ನಾವು ಎಂದೂ ಮರೆಯುವಂತಿಲ್ಲ.ಎಂದು ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಹೇಳಿದರು.ಸಮೀಪದ ಅಶೋಕೆಯಲ್ಲಿ ಚಾತುರ್ಮಾಸ್ಯದ ನಿಮಿತ್ತ ಶ್ರೀಕ್ಷೇತ್ರಗೋಕರ್ಣದ ಶಿಷ್ಯಭಕ್ತರ ಶ್ರೀಗುರುದೇವತಾ ಸೇವೆ ಹಾಗೂ ಸ್ಥಳೀಯ ಗೌಡಸಾರಸ್ವತಸಮಾಜದ ಶ್ರೀಗುರುಪಾದುಕಾಪೂಜೆಗಳನ್ನು ಸ್ವೀಕರಿಸಿ ಅನುಗ್ರಹಸಂದೇಶವನ್ನು ನೀಡುತ್ತಿದ್ದ ಪೂಜ್ಯಶ್ರೀಗಳು ಗುರುಶಿಷ್ಯಸಂಬಂಧವು ಇತರ ಸಂಬಂಧದಂತಲ್ಲ. ಅದು ಶಿಷ್ಯನ ಸರ್ವಸಮರ್ಪಣಾಭಾವ ಹಾಗೂ ಬದುಕಿಗೆ ದಾರಿತೋರುವ ಗುರುವಿನ ಪೂರ್ಣಾನುಗ್ರಹವನ್ನೊಳಗೊಂಡ ಒಂದು ಅವಿನಾಭಾವರೂಪದ್ದು. ಶ್ರೀಮದಾಚಾರ್ಯಶಂಕರ ಭಗವತ್ಪಾದರ ಕಾಲದಿಂದಲೂ ನಡೆದುಕೊಂಡುಬಂದ ಈ ಗುರುಶಿಷ್ಯ ಬಾಂಧವ್ಯ ಮುಂದೆಯೂ ಕೂಡಾ ನಿರಂತರವಾಗಿರಲಿ ಎಂದು ಆಶಿಸಿ ಗೌಡಸಾರಸ್ವತಸಮಾಜ ಗುರುಪೀಠದಲ್ಲಿ ಅತ್ಯಂತ ಶ್ರದ್ಧೆಯನ್ನಿಟ್ಟ ಸಮಾಜ.
ಅಷ್ಟೇ ಅಲ್ಲ,ವಾಣಿಜ್ಯಾದಿ ವ್ಯವಹಾರಗಳಲ್ಲಿ ತುಂಬ ಮುಂದಿರುವ ಸಮಾಜವೂ ಹೌದು. ಇಂದು ಸೇವೆಸಲ್ಲಿಸಿದ ಎಲ್ಲ ಶಿಷ್ಯಭಕ್ತವೃಂದಕ್ಕೂ ವಿದ್ಯಾ,ಸಂಪತ್ತು,ಗೌರವಗಳ ಅಭಿವೃದ್ಧಿಯಾಗಲಿ ಎಂದೂ ಆಶೀರ್ವದಿಸಿದರು.ಇದಕ್ಕೂ ಮೊದಲು ಸಪರಿವಾರ ಶ್ರೀರಾಮಚಂದ್ರಾದಿ ದೇವತೆಗಳು ಹಾಗೂ ಸಂಕಲ್ಪಿತ ಸಾಂಕೇತಿಕ ಅಶ್ವಮೇಧ ಯಾಗದ ಅಶ್ವದ ಜೊತೆ ಅಶೋಕೆಗೆ ಆಗಮಿಸಿ ಅನುಗ್ರಹ ಭಾಷಣ ಮಾಡಿದ ಶ್ರೀ ಸಮರ್ಥ ರಾಮಾಶ್ರಮ ಸಾಕೇತಪುರದ ಶ್ರೀ ರಾಮ ಅವಧೂತರು ಸಂತರಿಗೆ ಸಂತಸ ಬೇಕಿರುವುದು ಸ್ವಂತಕ್ಕಾಗಿ ಅಲ್ಲ. ಅದು ಸಮಾಜಕ್ಕೆ ನೀಡಲೆಂದೇ ಇರುವ ಬಯಸುವ ಸ್ಥಿತಿ.ಗುರುಸೇವೆ ಅದರಲ್ಲಿಯೂ ಚಾತುರ್ಮಾಸ್ಯದಂತಹ ಪುಣ್ಯಕರಸಮಯದಲ್ಲಿ ಮಾಡುವ ಗುರುಶುಶ್ರೂಷೆ ಪರಮಾತ್ಮನ ಸಾನ್ನಿಧ್ಯಕ್ಕೆ ಸುಲಭಸಾಧನ ಎಂದು ಅಭಿಪ್ರಾಯಪಟ್ಟರು.ಶ್ರೀಕ್ಷೇತ್ರಗೋಕರ್ಣದ ಶಿಷ್ಯರ ಪರವಾಗಿ ಖ್ಯಾತ ಶ್ರೌತವಿದ್ವಾಂಸ ವೇ.ಯಜ್ಞಪತಿ ಭಟ್ಟ ಚಿತ್ರಿಗೆಮಠ ಹಾಗೂ ಗೌಡಸಾರಸ್ವತಸಮಾಜದ ಪರವಾಗಿ ಶ್ರೀಧರ ಕಾಮತ್ ತಮ್ಮ ನಿವೇದನೆಯನ್ನು ಸಲ್ಲಿಸಿದರು.ಎಂದಿನಂತೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರವನ್ನು ಅನುಗ್ರಹಿಸುವ ಮೂಲಕ ಪೂಜ್ಯಶ್ರೀಗಳು ವಿಶೇಷಸಾಧನೆಯನ್ನು ಗೈದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.ಶ್ರೀ ಸವಾರಿಯ ವ್ಯವಸ್ಥಾಪಕ ಶ್ರೀ ರಾಘವೇಂದ್ರ ಮಧ್ಯಸ್ಥ ನಿರ್ವಹಿಸಿದರು.
ಪ್ರಾದೇಶಿಕ ಸುದ್ದಿಮೂಡುಬಿದಿರೆ: ಬರವಣಿಗೆಗೆ ಸಮಾಜದ ಮೇಲೆ ಗಾಢ ಪ್ರಭಾವ ಬೀರುವ ಶಕ್ತಿಯಿದ್ದು ಸತ್ಯನಿಷ್ಟವಾದ, ಅನುಭವ ಜನ್ಯವಾದ ಬರಹಕ್ಕೆ ಸಾಮಾಜಿಕ ಬದಲಾವಣೆಯ ಶಕ್ತಿಯಿದೆ ಎಂದು ಕಲಾ ವಿಮರ್ಶಕ ಮಣಿಪಾಲದ ಈಶ್ವರಯ್ಯ ಅವರು ಹೇಳಿದರು.
ಅವರು ಗುರುವಾರ ವಿದ್ಯಾಗಿರಿಯಲ್ಲಿ ಆಳ್ವಾಸ್ ಕಾಲೇಜಿನ ಕನ್ನಡ ಸಂಘದ ವತಿಯಿಂದ ನಡೆದ ಬರವಣಿಗೆ ಸರಣಿ ತರಬೇತಿ ಶಿಬಿರ 'ಅಭಿವ್ಯಕ್ತಿ 2011'ರ ಉದ್ಘಾಟನೆ ಮತ್ತು ಆಳ್ವಾಸ್ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕ ಅನು ಬೆಳ್ಳೆ ಅವರ ಪತ್ತೇದಾರಿ ಕಾದಂಬರಿ 'ರಾಗದೀಪ'ವನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಸತತ ಓದು, ವಿಚಾರದಲ್ಲಿನ ಸ್ಪಷ್ಟತೆ, ವಿವಿಧೆಡೆಗಳಿಂದ ಮಾಹಿತಿ ಸಂಗ್ರಹ ಹಾಗೂ ಭಾಷಾ ಬಳಕೆಯ ಕೌಶಲ್ಯ ಇವು ಬರವಣಿಗೆಯನ್ನು ಮಹತ್ವದ್ದಾಗಿಸುತ್ತವೆ. ಕನ್ನಡದಲ್ಲಿ ವಿಡಂಬನೆಯನ್ನು ಸಶಕ್ತವಾಗಿ ಬಳಸಿಕೊಂಡದ್ದು ಕಡಿಮೆ. ಅದನ್ನು ಬಳಸಿಕೊಂಡಾಗ ಭ್ರಷ್ಟಾಚಾರ, ಸಾಮಾಜಿಕ ಅನ್ಯಾಯಗಳ ಕಡೆಗೆ ಮಾತಿನ ಕತ್ತಿಯನ್ನು ಸಶಕ್ತವಾಗಿ ಬೀಸಬಹುದು ಎಂದು ಅವರು ಹೇಳಿದರು.
ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಪ್ರೊ.ಕುರಿಯನ್ ಅಧ್ಯಕ್ಷತೆ ವಹಿಸಿದ್ದರು.ಭಾಷೆಯ ಬಳಕೆಯಲ್ಲಿ ಸರಾಗತೆ ಸಾಧ್ಯವಾಗಬೇಕಾದರೆ ಅಭಿವ್ಯಕ್ತಿ ಕೌಶಲವನ್ನು ವೃದ್ಧಿಸಿಕೊಳ್ಳುವುದು ಅಗತ್ಯ. ಕೇವಲ ಫಲಿತಾಂಶದ ಕಡೆಗೆ ಮಾತ್ರ ನೋಡದೆ ಅನುಭವ ನಿಷ್ಠ ಜ್ಞಾನಕ್ಕೆ ವಿದ್ಯಾರ್ಥಿಗಳು ತಮ್ಮನ್ನು ತೆರೆದುಕೊಳ್ಳಬೇಕು ಎಂದರು. ಆಡಳಿತಾಧಿಕಾರಿ ಸ್ಮಿತಾ ಪಿ.ಐತಾಳ್, ಕಾದಂಬರಿಕಾರ ಅನುಬೆಳ್ಳೆ, ಕನ್ನಡ ಸಂಘದ ಸಂಚಾಲಕ ಡಾ.ಧನಂಜಯ ಕುಂಬ್ಳೆ ಉಪಸ್ಥಿತರಿದ್ದರು.
ಡಾ.ಧನಂಜಯ ಕುಂಬ್ಳೆ ಸ್ವಾಗತಿಸಿದರು. ಉಪನ್ಯಾಸಕ ಯೋಗೀಶ್ ಕೈರೋಡಿ ಕಾರ್ಯಕ್ರಮ ನಿರೂಪಿಸಿದರು. ಪ್ರಾಧ್ಯಾಪಕ ಚಂದ್ರಶೇಖರ ಗೌಡ ವಂದಿಸಿದರು. ವಿದ್ಯಾರ್ಥಿ ಶರತ್ ಹಣತೆ ಹಚ್ಚುತ್ತೇವೆ ನಾವು ಕವನವನ್ನು ವಾಚನ ಮಾಡಿದರು.
ಚಿತ್ರ: ಯಶೋಧರ ಮೂಡಬಿದಿರೆ
ಯುವಾ
"ಸರಕಾರಿ ಶಾಲೆಗಳನ್ನು ಆಂಗ್ಲಮಾಧ್ಯಮ ಶಾಲೆಗಳನ್ನಾಡಿ ಪರಿವರ್ತಿಸಬೇಕು" ಈ ಅಂಶ ಇಂದು ಹಲವು ಚರ್ಚೆಗೆ ವೇದಿಕೆಯೊದಗಿಸಿಕೊಟ್ಟಿದೆ. ಸ್ಪರ್ಧಾತ್ಮಕ ಯುಗದಲ್ಲಿ ನಾವಿಂದಿದ್ದೇವೆ. ರಾಷ್ಟ್ರ,ಅಂತಾರಾಷ್ಟ್ರೀಯ ಮಟ್ಟದಲ್ಲಿ ವಹಿವಾಟುಗಳು ನಡೆಸುವ ಸಂದರ್ಭ ಇದು. ಇಂತಹ ಸಂದರ್ಭದಲ್ಲಿ ವಹಿವಾಟು ಪ್ರಕ್ರಿಯೆಗಳಿಗೆ ಆಂಗ್ಲಭಾಷೆಯ ಅಗತ್ಯತೆ ಅವಶ್ಯವಾಗಿದೆ. ಆದರೆ ಇಂದು ಬುದ್ದಿಜೀವಿಗಳು ಎಂದು ಕರೆಯಲ್ಪಡುವ ಕೆಲಮಂದಿ ಸರಕಾರದ ನಿಲುವಿಗೆ ಅಡ್ಡಗಾಲುಹಾಕುತ್ತಿರುವುದು ವಿಪರ್ಯಾಸ.ಕನ್ನಡದ ಬಗ್ಗೆ ಕನ್ನಡ ಮಾಧ್ಯಮಗಳ ಬಗ್ಗೆ ಉದ್ದುದ್ದ ಭಾಷಣ ಬಿಗಿಯುವ ಬುದ್ಧಿಜೀವಿಗಳು ತಮ್ಮ ಮಕ್ಕಳನ್ನು ಮೆತ್ತಗೆ ಆಂಗ್ಲಮಾಧ್ಯಮಗಳಿಗೆ ಕಳುಹಿಸಿ ಕೈ ತೊಳೆದುಕೊಂಡುಬಿಡುವುದನ್ನು ಏನೆನ್ನಬೇಕೋ ತಿಳಿಯುತ್ತಿಲ್ಲ.
ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ರಾಜಕೀಯಗಳು, ಮಾಧ್ಯಮಗಳಲ್ಲಿ ಪ್ರಚಾರ ಪಡೆಯಲು ನಡೆಸುವ ರಾಜಕೀಯಗಳು ಸಮಾಜದ ಮೇಲೆ ಹೊಡೆತ ಬೀಳುತ್ತಿದೆ ಎಂಬುದನ್ನು ಮರೆಯುವಂತಿಲ್ಲ.
ಐಶ್ವರ್ಯ ಕಾರಂತ
ವಿಚಾರ
ಕರಾವಳಿ ಎಂದಾಕ್ಷಣ ಮೊದಲು ನೆನಪಾಗುವುದೇ ಚೆಂಡೆಯ ನಿನಾದ...ಯಕ್ಷಗಾನದ ಗೆಜ್ಜೆಯ ಹೆಜ್ಜೆಯ ಸದ್ದು...ತಲೆ ತಲಾಂತರಗಳಿಂದ ಜನಮಾನಸದಲ್ಲಿ ಅಚ್ಚೊತ್ತದೆ ಮತ್ತೆ ಮತ್ತೆ ನನಪಿನಲ್ಲಿ ಕಾಡುವ ಬಣ್ಣದ ಲೋಕ...ಅಲ್ಲಿ ಹಾಡುಗಾರಿಕೆ ಇದೆ...ಶಬ್ಧಗಳ ಭಂಡಾರವಿದೆ... ವಾಕ್ಚಾತುರ್ಯವಿದೆ...ಓಘವಿದೆ...ನಾಟ್ಯವಿದೆ...ವರ್ಣಗಾರಿಕೆಯಿದೆ...ಹಾವ ಭಾವ ಭಂಗಿ...ಸಂದೇಶ...ಏನಿಲ್ಲ...ಎಲ್ಲವೂ ಇದೆ...ಸ್ಪಷ್ಟ ಸಂದೇಶ ರವಾನೆಗೊಂದು ಸೂಕ್ತ ಕಲೆ ಎಂಬಂತಹ ಒಂದು ಮಹತ್ವದ ಹೆಗ್ಗಳಿಕೆ ಜೊತೆಗಿದೆ...ಕರ್ನಾಟಕದ ಕರಾವಳಿಯುದ್ದಕ್ಕೂ ಹರಡಿರುವ ಯಕ್ಷಗಾನ "ಗಂಡು ಕಲೆ" ಎಂದೇ ಗುರುತಿಸಲ್ಪಟ್ಟಿದೆ...ಕರೆಯಲ್ಪಟ್ಟಿದೆ.
ಇಷ್ಟಲ್ಲಾ ವೈಶಿಷ್ಟ್ಯಗಳನ್ನು ಹೊಂದಿಕೊಂಡಿರುವ ಯಕ್ಷಗಾನ "ಜಾನಪದ ಕಲೆ" ಹೌದೇ? ಇದನ್ನು ಜಾನಪದ ಕಲೆ ಎಂದು ಕರೆಯುವುದು ಎಷ್ಟರಮಟ್ಟಿಗೆ ಸರಿ...? ಯಕ್ಷಗಾನ "ಶಾಸ್ತ್ರೀಯ ಕಲೆ" . ಕಾಲ ಹಾಗೂ ಪರಿಸರದ ಪ್ರಭಾವಕ್ಕೆ ಒಳಗಾಗಿ ತನ್ನ ಶಾಸ್ತ್ರೀಯತೆಯನ್ನು ಸ್ವಲ್ಪ ಮಟ್ಟಿಗೆ ಕಳೆದುಕೊಂಡ ಕಾರಣಕ್ಕೆ ಇದನ್ನು ಜಾನಪದ ಕಲೆ ಎಂದು ಕರೆಯುವುದು ತಪ್ಪು. ಸಮರ್ಥ ಗುರುಗಳ ಕೊರತೆಯೋ, ಅಥವಾ ಕಾಲ , ಪರಿಸರದ ಪ್ರಭಾವಗಳಿಗೋ ತುತ್ತಾಗಿ ಶಾಸ್ತ್ರೀಯತೆಯನ್ನು ಕಳೆದುಕೊಂಡು ಒಂದಷ್ಟು ಬದಲಾವಣೆಯನ್ನು ಕಂಡಮಾತ್ರಕ್ಕೆ ಅದು ಜಾನಪದ ಕಲೆಯಾಗಿ ಸ್ಥಾನ ಪಡಕೊಳ್ಳಲು ಸಾಧ್ಯವೇ ಇಲ್ಲ.
ಆರ್ಭಟಿ,ಕೈಶಿಕಿ,ಭಾರತಿ,ಸಾತ್ವತಿ ಎಂಬ ಭರತನ ನಾಟ್ಯಶಾಸ್ತ್ರದಲ್ಲಿ ಉಲ್ಲೇಖಿತವಾದ ನಾಲ್ಕೂ ವೃತ್ತಿಗಳನ್ನು ಈ ಯಕ್ಷಗಾನ ಒಳಗೊಂಡಿದೆ.ಆಂಗಿಕಾಭಿನಯ, ವಾಚಿಕಾಭಿನಯ,ಆಹಾರ್ಯ,ಸಾತ್ವಿಕಾಭಿನಯಗಳು ಸಮ್ಮಿಳಿತಗೊಂಡಿರುವುದು ಪ್ರಾಮುಖ್ಯತೆಯನ್ನು ಪಡೆಯುತ್ತದೆ.ಒಂದು "ಕಲೆಯು" ನಾಟ್ಯ ಎನಿಸಿಕೊಳ್ಳಬೇಕಾದರೆ ನೃತ್ಯದೊಂದಿಗೆ ವಾಚಿಕ ಅಂದರೆ "ಮಾತೂ" ಇರಬೇಕು. ಅವೆರಡನ್ನೂ ಹೊಂದಿದ ನಾಟ್ಯಕಲೆ ಈ ಯಕ್ಷಗಾನ.
ನಿರ್ಧಿಷ್ಟವಾದ ಹಸ್ತಮುದ್ರೆಗಳನ್ನು ಈ ಕಲೆ ಒಳಗೊಂಡಿದೆ. ನಿರ್ಧಿಷ್ಟ ತಾಳ, ರಾಗ, ರಂಗಚಲನೆ, ರಂಗತಂತ್ರ, ಹೆಜ್ಜೆಗಳನ್ನು ಹೊಂದಿದೆ.ಸಪ್ತತಾಳಗಳು, ನವರಸಾಭಿನಯವನ್ನು ಹೊಂದಿದೆ.ಘನ, ಸುಷಿರ, ಅವನದ್ಧ ವಾದ್ಯಗಳನ್ನು ಹೊಂದಿದೆ. ಹಲವಾರು ಮುಖವರ್ಣಿಕೆ, ನಿರ್ಧಿಷ್ಟ ವೇಷ ಭೂಷಣಗಳನ್ನು ಈ ಕಲೆ ಒಳಗೊಂಡಿದೆ.
ದೇವದಾಸಿಯರ ನೃತ್ಯ `ಸದಿರ್' ಭರತನಾಟ್ಯ ಎನಿಸಿಕೊಂಡು ಶಾಸ್ತ್ರೀಯ ಕಲೆಗಳ ಸಾಲಿಗೆ ಸೇರಲ್ಪಟ್ಟರೆ, ಮುಸಲ್ಮಾನ್ ಸೇವಕಿಯರ ನೃತ್ಯ `ಕಥಕ್' ಶಾಸ್ತ್ರೀಯ ನೃತ್ಯಪ್ರಕಾರವಾದರೆ, ಯಕ್ಷಗಾನಕ್ಕೆ ಯಾಕೆ ಈ ಶಾಸ್ತ್ರೀಯ ಸ್ಥಾನ ಮಾನ ದೊರೆತಿಲ್ಲ ಎಂಬುದು ಅಚ್ಚರಿಯಾಗಿ ಕಾಡುತ್ತಿದೆ.
ಭರತನೃತ್ಯ ತಮಿಳುನಾಡಿನ ಶಾಸ್ತ್ರೀಯ ಕಲೆಯಾದರೆ , ಕಥಕ್ಕಳಿ, ಮೋಹಿನಿಯಾಟ್ಟಂ ಕೇರಳದ ಶಾಸ್ತ್ರೀಯ ಕಲೆ. ಕೂಚಿಪುಡಿ ಆಂಧ್ರದ ಶಾಸ್ತ್ರೀಯ ಕಲೆ, ಒಡಿಸ್ಸಿ ಒರಿಸ್ಸಾದ ಶಾಸ್ತ್ರೀಯ ಕಲೆ.
ದಕ್ಷಿಣ ಭಾರತದ ಈ ಎಲ್ಲಾ ರಾಜ್ಯಗಳೂ ಒಂದೊಂದು ಶಾಸ್ತ್ರೀಯ ಕಲೆಗಳನ್ನು ಒಳಗೊಂಡಿದೆ. ಹಾಗಾದರೆ ಕರ್ನಾಟಕದ ಶಾಸ್ತ್ರೀಯ ಕಲೆ ಯಾವುದು?ನಿಜಾರ್ಥದಲ್ಲಿ ನೋಡಿದರೆ ಕರ್ನಾಟಕದ ಪ್ರಾತಿನಿಧಿಕ ಏಕೈಕ ಕಲೆ ಯಕ್ಷಗಾನವೇ ಅಲ್ಲವೇ?
- ಅಶ್ವಿನಿ ಕೊಂಡದಕುಳಿ.
ವೈವಿಧ್ಯ
ಈ ಆಸನದಲ್ಲಿ ದೇಹದ ಎಲ್ಲಾ ಅಂಗಗಳಿಗೆ ವ್ಯಾಯಾಮ ದೊರಕುತ್ತದೆ. ಆದ್ದರಿಮದ ಈ ಆಸನಕ್ಕೆ ಸರ್ವಾಂಗಾಸನ ಎಂದು ಹೆಸರು. ಈ ಆಸನಕ್ಕೆ ತಾಯಿ ಎಂಬ ಹೆಸರು ಇದೆ. ಯಾವ ರೀತಿ ತಾಯಿ ಸುಖ, ಸಂತೋಷ, ಆರೋಗ್ಯ ನೀಡುತ್ತಾಳೆ ಅದೇ ರೀತಿ ಈ ಆಸನ ಅಭ್ಯಾಸ ಮಾಡುವುದರಿಂದ ಸುಖ, ಸಂತೋಷ, ಆರೋಗ್ಯ ಲಭಿಸುತ್ತದೆ.
ಅಭ್ಯಾಸ ಕ್ರಮ :
ಮೊದಲು ನೆಲದಲ್ಲಿ ಜಮಖಾನದ ಮೇಲೆ ಅಂಗಾತವಾಗಿ ಕಾಲುಗಳನ್ನು ಜೋಡಿಸಿ ಉದ್ದಕ್ಕೆ ನೇರವಾಗಿ ಮಲಗಬೇಕು. ಕೈಗಳನ್ನು ಕಾಲುಗಳ ಪಕ್ಕದಲ್ಲಿ ಇರಿಸಬೇಕು. ಆಮೇಲೆ ಉಸಿರನ್ನು ಹೊರಕ್ಕೆ ಬಿಟ್ಟು ಮೊಣಕಾಲು ಬಗ್ಗಿಸಿ, ಎರಡು ಕಾಲುಗಳನ್ನೂ ನಿಧಾನವಾಗಿ ಮೇಲೆತ್ತಬೇಕು. ಕೈಗಳನ್ನು ಸೊಂಟಕ್ಕೆ ಆಧಾರವಾಗಿ ಇಡಬೇಕು. ಕಾಲುಗಳನ್ನು ಸಾಧ್ಯವಾದಷ್ಟು ನೇರವಾಗಿ ಎತ್ತರಕ್ಕೆ ನಿಲ್ಲಿಸಬೇಕು. ನೆಲಕ್ಕೆ ಲಂಬವಾಗಿ, ಈ ಭಂಗಿಯಲ್ಲಿ ಸಮವಾಗಿ ಉಸಿರಾಟ ನಡೆಸುತ್ತಾ 1 ನಿಮಿಷದಿಂದ 5 ನಿಮಿಷದವರೆಗೆ ಇರಬಹುದು. ಈ ಆಸನದಲ್ಲಿ ಪರಿಣತಿ ಹೊಂದಿದ ಮೇಲೆ ಮೊಣಕಾಲು ಮಡಚದೇ ಎರಡು ಕಾಲುಗಳನ್ನೂ ನೇರವಾಗಿ ನಿಧಾನವಾಗಿ ಮೇಲೆ ಎತ್ತಿಕೊಂಡು ಮಾಡಬಹುದು. ಈ ಸರ್ವಾಂಗಾಸನದಲ್ಲಿ ಹಲವು ವಿನ್ಯಾಸಗಳಿವೆ. ಆಸನಾನಂತರ ವಿಶ್ರಾಂತಿ ಅಗತ್ಯ.
ಉಪಯೋಗಗಳು :
ಈ ಭಂಗಿಯಲ್ಲಿ ದೇಹದ ಎಲ್ಲಾ ಭಾಗಗಳಲ್ಲಿಯೂ ರಕ್ತ ಪರಿಚಲನೆ ಚೆನ್ನಾಗಿ ನಡೆಯುತ್ತದೆ. ಈ ಆಸನದಿಂದ ಸರ್ವ ಅಂಗಗಳಿಗೂ ಹೆಚ್ಚಿನ ಚೈತನ್ಯ ದೊರಕಿ ದೀರ್ಘ ಯೌವನ ಲಭಿಸುತ್ತದೆ. ಉದರ ವ್ಯಾಧಿ, ಗಂಟಲು ನೋವು, ತಲೆ ನೋವು ಇತ್ಯಾದಿ ಪರಿಹಾರವಾಗುತ್ತದೆ. ರಕ್ತ ಶುದ್ಧಿಯಾಗಿ ನವ ಶಕ್ತಿ ಉಂಟಾಗುತ್ತದೆ. ಈ ಆಸನದಿಂದ ರಕ್ತದೋಷಗಳು ದೂರವಾಗುತ್ತದೆ. ಹೊಟ್ಟೆ ಹುಣ್ಣು, ರಕ್ತದೊತ್ತಡ, ಮೂಲವ್ಯಾಧಿ, ಮುಟ್ಟುದೋಷಗಳು ನಿವಾರಣೆಯಾಗುತ್ತದೆ.
ಲೋಕಮಾನ್ಯ ತಿಲಕರ ಅನುಯಾಯಿಯಾಗಿದ್ದ ಯೋಗ ಸಂಶೋಧನಾ ಪಟು ಸ್ವಾಮಿ ಕುವಲಯಾನಂದ (ಪೂರ್ವಾಶ್ರಮದಲ್ಲಿ ಜಿ.ಜಿ.ಗುಣೆ, ಲೋನವ್ಲಾವಾಸಿ) ಪುಣೆಯಿಂದ ಗಾಂಧೀಜಿಯವರಿಗೆ ಶೀರ್ಷಾಸನ, ಸರ್ವಾಂಗಾಸನ ಮತ್ತು ಹಲಾಸನ ಹಾಗೂ ಭುಜಂಗಾಸನಗಳ ಬಗ್ಗೆ ಸಾಕಷ್ಟು ಸಲಹೆಗಳನ್ನೂ, ಮಾರ್ಗದರ್ಶನವನ್ನೂ ನೀಡುತ್ತಿದ್ದರು. ಗಾಂಧೀಜಿ ಅವುಗಳನ್ನು ಅಭ್ಯಾಸ ಮಾಡುತ್ತ ರಕ್ತದೊತ್ತಡಕ್ಕೂ ಅವುಗಳಿಗೂ ಇರುವ ಸಂಬಂಧಗಳನ್ನು ತಿಳಿಯಬಯಸುತ್ತಿದ್ದರು. ಇವುಗಳಿಂದಾಗಿ ರಕ್ತದ ಒತ್ತಡವು ಖಂಡಿತ ಕಡಿಮೆಯಾಗುವುದೆಂದು ದೃಢವಾಗಿ ತಿಳಿಸಿದ್ದರು.
'ಯೋಗರತ್ನ' ಶ್ರೀ ಗೋಪಾಲಕೃಷ್ಣ ದೇಲಂಪಾಡಿ
ಅಂತರರಾಷ್ಟ್ರೀಯ ತೀರ್ಪುಗಾರರು.
ಪ್ರಾದೇಶಿಕ ಸುದ್ದಿ
ಬೇಕಾಗಿದ್ದಾಳೆ... ಆಕರ್ಷಕ ನಿಲುವಿನ, ಬಿಳಿ ಚಹರೆಯ ಹುಡುಗಿಯೊಬ್ಬಳು ಬೇಕಾಗಿದ್ದಾಳೆ. ವಿದ್ಯಾರ್ಹತೆ - ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು. ಎತ್ತರ 5.5; ಅಳತೆ 32", 28", 32"; ಭಾರ 40ರಿಂದ 45ಕೆ.ಜಿ.ಶ್ರೀಮಂತ ಯುವಕನೊಬ್ಬನ ಭಾವನೆಗಳಿಗೆ ಸ್ಪಂದಿಸುವಂತಿರಬೇಕು. ಸಂದರ್ಶನ ಸಮಯ: ಬೆಳಗ್ಗೆ 10ರಿಂದ ಸಂಜೆ 4 ಗಂಟೆ. ಮೊದಲು ಬಂದವರಿಗೆ ಆದ್ಯತೆ. - ರಾಗದೀಪ.
! ! !
ಗೆಳೆಯ ಅನುಬೆಳ್ಳೆ ಹೀಗೆಂದಾಗ ದಂಗಾಯಿತು... ಹೌದು ಇದು ಅನುಬೆಳ್ಳೆ(ರಾಘವೇಂದ್ರ ಬಿ.ರಾವ್) ಅವರ ಹೊಸ ಕಾದಂಬರಿ. ಪತ್ತೇದಾರಿ ಕಾದಂಬರಿ.
ಈ ಕನಸು.ಕಾಂ ನಲ್ಲಿ ಪ್ರತೀ ವಾರವೂ ಶೂಟಿಂಗ್ ಶೂಟಿಂಗ್ ಅಂಕಣ ಬರೆಯುತ್ತಿದ್ದ ಅನುಬೆಳ್ಳೆ ನಿರಂತರ ಬರಹದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ನಿರಂತರ ಕೃತಿಗಳ ರಚನೆಯಲ್ಲಿ ತೊಡಗಿರುವುದು ಖುಷಿಯ ವಿಷಯ. ಇದೀಗ ಆಳ್ವಾಸ್ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಜೊತೆಗೆ ಈ ಹವ್ಯಾಸ ಮುಂದುವರಿಸುತ್ತಿದ್ದಾರೆ.
ರಾಗದೀಪ ಎಂಬ ಹೊಚ್ಚ ಹೊಸ ಕಾದಂಬರಿ ಇದೀಗ ಬಿಡುಗಡೆಗೆ ಸಿದ್ಧಗೊಂಡಿದೆ.ಈ ಕಾದಂಬರಿಯನ್ನು ಪತ್ತೇದಾರಿ ಸಾಹಿತ್ಯದ ರುಚಿ ಉಳಿಸಿದ ಹಿರಿಯ ಸಾಹಿತಿ ಸುದರ್ಶನ ದೇಸಾಯಿ ಅವರಿಗೆ ಅರ್ಪಿಸಿದ್ದಾರೆ. 240ಪುಟಗಳ ಈ ಕಾದಂಬರಿಯ ಬೆಲೆ 140 ರುಪಾಯಿಗಳು.ಜುಲೈ 28ರಂದು ಆಳ್ವಾಸ್ ಕಾಲೇಜಿನ ಪಿ.ಜಿ.ಬ್ಲಾಕ್ ನಲ್ಲಿರುವ ಸೆಮಿನಾರ್ ಹಾಲ್ ನಲ್ಲಿ 3.30ಕ್ಕೆ ಕನ್ನಡ ಸಂಘ ಆಳ್ವಾಸ್ ಕಾಲೇಜು ಇದರ ಬರವಣಿಗೆ ತರಬೇತಿ ಶಿಬಿರದ ಉದ್ಘಾಟನೆ ಕಾರ್ಯಕ್ರಮ ಹಾಗೂ ರಾಗದೀಪ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.
ಈಶ್ವರಯ್ಯ ಉಪಸ್ಥಿತಿಯಲ್ಲಿ ಆಳ್ವಾಸ್ ಎಜುಕೇಷನ್ ಫೌಂಡೇಷನ್ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಕೃತಿ ಲೋಕಾರ್ಪಣೆ ಮಾಡಲಿದ್ದಾರೆ.
ರಾಜ್ಯ - ರಾಷ್ಟ್ರಶ್ರೀಕ್ಷೇತ್ರ ಗೋಕರ್ಣದ ಶ್ರೀಮಹಾಬಲೇಶ್ವರ ದೇವಾಲಯದಲ್ಲಿ ಪುರಾತನ ಸಂಪ್ರದಾಯದಂತೆ ಯಾಮಪೂಜೆಯನ್ನು ದಿನಾಂಕ ಜು.28 ನೇ ಗುರುವಾರದಂದು ನಡೆಸಲಾಗುವುದು. ಪರಮಪೂಜ್ಯ ಜಗದ್ಗುರುಶಂಕರಾಚಾರ್ಯ ಗೋಕರ್ಣಮಂಡಲಾಧೀಶ್ವರ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ಮಾರ್ಗದರ್ಶನ ಹಾಗೂ ದಿವ್ಯ ಉಪಸ್ಥಿತಿಯಲ್ಲಿ ಶ್ರೀಕ್ಷೇತ್ರ ಗೋಕರ್ಣದ ಉಪಾಧಿವಂತ ಮಂಡಳದ ನೇತೃತ್ವದಲ್ಲಿ ಈ ಕಾರ್ಯಕ್ರಮವು ಲೋಕಕಲ್ಯಾಣಾರ್ಥವಾಗಿ ಜರುಗಲಿದೆ.
ಸಮಸ್ತರಿಗೂ ಜಗದೀಶ್ವರನ ಶ್ರೀರಕ್ಷೆ ದೊರೆಯಲೆಂದು ಸಂಕಲ್ಪ ಹಾಗೂ ಪ್ರಾರ್ಥನೆಯೊಂದಿಗೆ ಎಂಟೂ ಯಾಮಗಳ ಕಾಲದಲ್ಲಿ ಶ್ರೀಆತ್ಮಲಿಂಗಕ್ಕೆ ಅಭಿಷೇಕ ಮತ್ತು ಪ್ರತಿ ಯಾಮದ ಅಂತ್ಯಕ್ಕೊಂದು ಪೂಜಾ ವಿಧಾನಗಳೊಂದಿಗೆ ಜರುಗಲಿರುವ ಈ ಕಾರ್ಯಕ್ರಮದ ಅಂತ್ಯಕ್ಕೆ ಅಂದರೆ ಜುಲೈ29ರ ಶುಕ್ರವಾರ ಮಹಾರುದ್ರ ಹವನವನ್ನು ನಡೆಸಲಾಗುವುದು ಹಾಗೂ ಹೂವಿನಪೂಜೆ, ಮಹಾಮಂಗಳಾರತಿ ಇರುತ್ತದೆ.ಈ ಕಾರ್ಯಕ್ರಮಕ್ಕೆ ಭಗವದ್ಭಕ್ತರೆಲ್ಲರೂ ಆಗಮಿಸಿ ಪ್ರಸಾದ ಸ್ವೀಕರಿಸಬೇಕಾಗಿ ಭಕ್ತಜನತೆಯಲ್ಲಿ ಕೋರಲಾಗಿದೆ.
ಪ್ರಾದೇಶಿಕ ಸುದ್ದಿ
ಮಂಗಳೂರು ವಿಶ್ವವಿದ್ಯಾನಿಲಯ, ರಾಷ್ಟ್ರೀಯ ಸೇವಾ ಯೋಜನೆಯಡಿಯಲ್ಲಿ ರಾಜ್ಯಮಟ್ಟದ ಆಯ್ಕೆ ಶಿಬಿರ ಮತ್ತು ನಾಯಕತ್ವ ತರಬೇತಿ ಶಿಬಿರ ಕೊಣಾಜೆಯಲ್ಲಿ ನಡೆಯಿತು. ಈ ಶಿಬಿರದಲ್ಲಿ ಸುಮಾರು 300ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಎನ್.ಸಿ.ಸಿ ವಿದ್ಯಾರ್ಥಿಗಳಿಗೆ ಅಂತರರಾಷ್ಟ್ರೀಯ ಯೋಗ ತೀರ್ಪುಗಾರರಾದ ಯೋಗ ರತ್ನ ಗೋಪಾಲಕೃಷ್ಣ ದೇಲಂಪಾಡಿಯವರು ಮುಂಜಾನೆ ಹೊತ್ತಿನಲ್ಲಿ ಯೋಗ ತರಬೇತಿ ನೀಡಿದರು.
ಈ ತರಬೇತಿಯಲ್ಲಿ ವಿದ್ಯಾರ್ಥಿಗಳಿಗೆ ಕ್ರಿಯೆಗಳು, ಮುದ್ರೆಗಳು, ಸರಳ ವ್ಯಾಯಾಮಗಳು ಸೂರ್ಯ ನಮಸ್ಕಾರ ಅಗತ್ಯವಿರುವ ಯೋಗಾಸನಗಳು, ಪ್ರಾಣಯಾಮಗಳು ಮತ್ತು ಧ್ಯಾನವನ್ನು ತಿಳಿಸಿಕೊಡಲಾಯಿತು. ಹಾಗೂ ವಿದ್ಯಾರ್ಥಿಗಳ ಏಕಾಗ್ರತೆಗೆ, ಆರೋಗ್ಯ ರಕ್ಷಣೆಗೆ ಮತ್ತು ಉತ್ತಮ ಜೀವನ ಶೈಲಿಯ ಬಗ್ಗೆಯ ಮಾಹಿತಿಯನ್ನು ತಿಳಿಸಿಕೊಡಲಾಯಿತು. ದೇಲಂಪಾಡಿಯವರ ಶಿಷ್ಯರು ಈ ಶಿಬಿರಕ್ಕೆ ಸಹಕಾರ ನೀಡಿದರು. ಈ ತರಬೇತಿ ನೀಡಿದ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿಯವರನ್ನು ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಘಟಕರು ಗೌರವಿಸಿದರು.
ವೈವಿಧ್ಯ
ಹಿಂದೆಲ್ಲ ಪ್ರವಾಸಿ ತಾಣಗಳೆಂದರೆ ಪವಿತ್ರ ತಾಣಗಳೆಂಬ ಭಾವನೆ ಪ್ರವಾಸಿಗರಲ್ಲಿ ಇತ್ತು. ಅಲ್ಲಿನ ಸೌಂದರ್ಯವನ್ನು ಆಸ್ವಾದಿಸಿ ಹೆಚ್ಚೆಂದರೆ ಅದರ ಕುರಿತು ನಾಲ್ಕು ಮೆಚ್ಚುಗೆಯ ಮಾತನಾಡಿಬಿಟ್ಟರೆ ಅಲ್ಲಿನ ಕೆಲಸ ಮುಗಿಯಿತು. ಕೆಲವರು ಅಲ್ಲಿನ ಗೋಡೆಗಳು, ಕಲ್ಲು-ಬಂಡೆಗಳ ಮೇಲೆ, ತಮ್ಮ ಹೆಸರನ್ನೋ ಅಥವಾ ಇನ್ನೇನನ್ನೋ ಶಾಸನ ಕೆತ್ತಿ ಅಲ್ಲಿ ಅಂದವನ್ನು ಹಾಳುಗೆಡವಿ ಬರುತ್ತಿದ್ದರು. ಇವಿಷ್ಟೇ ಅಲ್ಲದೇ ಇತ್ತೀಚೆಗೆ ಪ್ರವಾಸಿ ತಾಣಗಳಿಗೆ ಕಾಲಿಟ್ಟಿರುವುದು ಧೂಮಪಾಮ,ಮದ್ಯಪಾನಾದಿ ದುಶ್ಚಟಗಳು.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲರುವ ಸಾತೊಡ್ಡಿ ಜಲಪಾತ ಇದಕ್ಕೊಂದು ಜ್ವಲಂತ ಸಾಕ್ಷಿ. ಇಲ್ಲಿ ಪ್ರತಿದಿನ ಕನಿಷ್ಠ 20-25 ಸಾರಾಯಿ ಬಾಟಲಿಗಳು, ಸಿಗರೇಟು ಪ್ಯಾಕುಗಳು ಇನ್ನೂ ಅನೇಕ ದುಶ್ಚಟ ಸಂಭಂಧಿ ವಸ್ತುಗಳು ಕಾಣಸಿಗುತ್ತವೆ. ಸಾತೊಡ್ಡಿಯಲ್ಲಿ ಸಾಮಾನ್ಯವಾಗಿ ಕಂಡು ಬರುವ ದೃಶ್ಯ ಪ್ರವಾಸಿಗರು ಗುಂಪು ಕಟ್ಟಿಕೊಂಡು ದುಶ್ಚಟಗಳಲ್ಲಿ ತೊಡಗಿರುವುದು. ಪಾನಮತ್ತರಾದವರು ಏನಾದರೂ ಅಪಾಯ ಮಾಡಬಹುದೆಂಬ ಭಯದಿಂದ ಎಷ್ಟೋ ಪ್ರವಾಸಿಗರು ಜಲಪಾತ ವೀಕ್ಷಿಸುವ ಇಚ್ಚೆಯಿದ್ದರೂ ಬರಲು ಹಿಂಜರಿಯುತ್ತದ್ದಾರೆ.
ಇಲ್ಲಿ ಪ್ರತಿವರ್ಷ 15-20 ಮಂದಿ ನೀರಿನಲ್ಲಿ ಮುಳುಗಿ ಸಾಯುತ್ತದ್ದಾರೆ. ಮದ್ಯಪಾನ ಮಾಡಿ ಮೈಮರೆತು ನೀರಿನ ಬಳಿ ಹೋಗಿ ಆಯತಪ್ಪಿ ಬಿದ್ದು ಸತ್ತವರ ಸಂಖ್ಯೆಯೇ ಇಲ್ಲಿ ಹೆಚ್ಚು. ಹೀಗೆ ಸತ್ತವರಲ್ಲಿ ಯುವ ಜನರೇ ಹೆಚ್ಚಿರುವುದು ವಿಶೇಷ. ಒಂದು ಕ್ಷಣದ,ದಿನದ ಮೋಜಿಗಾಗಿ ಪ್ರಾಣವನ್ನೇ ಕಳೆದುಕೊಳ್ಳುವಂತಹ ಘಟನೆಗಳು ದಿನೇ ದಿನೇ ಹೆಚ್ಚಾಗುತ್ತರುವುದು ವಿಪರ್ಯಾಸ.
ಇದು ಕೇವಲ ಸಾತೊಡ್ಡಿಗೆ ಮಾತ್ರ ಸೀಮಿತವಾದ ವಿಚಾರವಲ್ಲ. ರಾಜ್ಯದ ಬಹುತೇಕ ಎಲ್ಲ ಪ್ರವಾಸಿ ತಾಣಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ವಿಷಯವಾಗಿದೆ. ಈ ಕುರಿತು ಪ್ರವಾಸೋದ್ಯಮ ಇಲಾಖೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತದ್ದರೂ ಯಾವುದೇ ಪರಿಣಾಮ ಕಾಣುತ್ತಿಲ್ಲ. ಆದ್ದರಿಂದ ಇಲಾಖೆಯಿಂದ ಕಠಿಣ ಕ್ರಮದ ಅಗತ್ಯತೆ ಇದೆ.
- ಶ್ರೀಧರ ಅಣಲಗಾರ
ರಾಜ್ಯ - ರಾಷ್ಟ್ರ
ಜುಲೈ 28-30 : ನಿಟ್ಟೆಯಲ್ಲಿ ಕಾರ್ಯಕ್ರಮ
ಮಂಗಳೂರು: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದಲ್ಲಿ, ವಿದ್ಯುತ್ ಮತ್ತು ವಿದ್ಯುನ್ಮಾನ ವಿಭಾಗದ ಆಶ್ರಯದಲ್ಲಿ ಜು. 28 ರಿಂದ 30 ರ ವರೆಗೆ ಮೂರು ದಿನಗಳ ರಾಷ್ಟ್ರೀಯ ಮಟ್ಟದ ಕಾರ್ಯಾಗಾರ ಜರುಗಲಿದೆ.
ಪ್ರಸಕ್ತ ರಾಷ್ಟ್ರೀಯ ಕಾರ್ಯಾಗಾರವು "ಎಮೆರ್ಜಿಂಗ್ ಟೆಕ್ನೋಲೊಜಿ ಇನ್ ಪವರ್ ಎಲೆಕ್ಟಾನಿಕ್ಸ್-ಬ್ರಾಡ್ ಸ್ಪೆಕ್ಟ್ರಂ ರಿವ್ಹೀವ್" ವಿಷಯದಲ್ಲಿ ನಡೆಯಲಿರುವುದು. ಉನ್ನತ ತಾಂತ್ರಿಕ ಶಿಕ್ಷಣದ ಹೊಸ ಹೊಸ ಅಧ್ಯಯನಗಳ ಜ್ಞಾನ ಭಂಡಾರವು ಆಮಂತ್ರಿತ ಸಂಪನ್ಮೂಲ ವ್ಯಕ್ತಿಗಳಿಂದ ಕಾರ್ಯಗಾರದಲ್ಲಿ ಭಾಗವಹಿಸುವ ತಾಂತ್ರಿಕ ಶಿಕ್ಷಕರಿಗೆ ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಗೆ ಲಭ್ಯವಾಗಲಿದೆ.
ಭಾರತೀಯ ತಾಂತ್ರಿಕ ಸಂಸ್ಥೆ (ಐ.ಐ.ಟಿ) ಹಾಗೂ ಭಾರತೀಯ ವಿಜ್ಞಾನ ಸಂಸ್ಥೆ (ಐ.ಐ.ಎಸ್ಸಿ) ಗಳಿಂದ ವಿಜ್ಞಾನಿಗಳು ಹಾಗೂ ತಂತ್ರಜ್ಞರು ಸಂಪನ್ಮೂಲವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಡಾ ಅಶೋಕ್ ಕುಮಾರ್ ಟಿ, ಪ್ರಾಂಶುಪಾಲರು, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು, ಪುತ್ತೂರು ಭಾಗವಹಿಸಲಿದ್ದು ಕಾರ್ಯಾಗಾರದ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ನಿಟ್ಟೆ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್.ವೈ.ಕುಲಕರ್ಣಿ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಕಾರ್ಯಾಗಾರದ ಹೆಚ್ಚಿನ ವಿವರಗಳಿಗೆ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥರಾದ ಪ್ರೊ ವಾಸುದೇವ ಶೆಟ್ಟಿಗಾರರನ್ನು ಸಂಪರ್ಕಿಸಬಹುದು .
ಎಸ್.ಎಂ.ಎಸ್ ಮಹಿಮೆ
ಮೊಬೈಲ್ ನಲ್ಲಿ ಅಂತರ್ಜಾಲದ ಸೌಲಭ್ಯವಿದ್ದರೆ ಸಾಕು, ಪುಟ್ಟ ಗಣಕಯಂತ್ರವೇ ಜೊತೆಯಲ್ಲಿದ್ದಂತೆ! ಕುಂತಲ್ಲೇ ನಿಂತಲ್ಲೇ ಬೆರಳಂಚಲ್ಲಿ ಅನೇಕ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ಮೊಬೈಲ್ ಬ್ಯಾಂಕಿಂಗ್,ಟಿಕೆಟ್ ಬುಕ್ಕಿಂಗ್ ಸೆಕೆಂಡಗಳಲ್ಲಿ ಆಗಬಲ್ಲದು. ಯಾವ ಬಿಲ್ಲು ಬೇಕಾದರೂ ಕಟ್ಟಬಹುದು. ಬೇಕಾದ ಹಾಡು ಕೇಳಬಹುದು,ಬೇಕಾದ ಸಿನಿಮಾ ನೋಡಬಹುದು. ಯಾವ ವಾರ್ತೆ ಬೇಕು ನಿಮಗೆ...? ಏನು ಬೇಕಾದರೂ ಬ್ರೌಜ್ ಮಾಡಬಹುದು. ಎಸ್.ಎಂ.ಎಸ್ ಗಳ ಭರಾಟೆಯಂತೂ ಕೇಳಲೇ ಬೇಡಿ... !"ಗುರು ಒಂದು ಎಸ್.ಎಂ.ಎಸ್ ಕಳುಹಿಸು ಸಾಕು... ಅವನ ಕೆಲಸ ಸರಿಯಾದ ಸಮಯಕ್ಕೆ ಮುಗಿಸಿ ಬಿಡುತ್ತೇನೆ"... ಅಂದರೆ ಎಸ್.ಎಂ.ಎಸ್ ಅಷ್ಟೊಂದು ಪ್ರಭಾವಶಾಲಿ ಎಂದಾಯಿತು. ಒಂದೇ ಒಂದು ಎಸ್.ಎಂ.ಎಸ್ ಪ್ರಾಣ ತೆಗೆಯುತ್ತೆ ಅಥವಾ ಉಳಿಸುತ್ತೆ. ಇದು ರೌಡಿಗಳ ಕತೆಯಾಯಿತು.
ಮನೆಯಲ್ಲಿ ಎಲ್ಲರು ಗಾಢ ನಿದ್ದೆಯಲ್ಲಿದ್ದರೆ ಹುಡುಗ ಹುಡುಗಿಯರಂತೂ ಕಂಬಳಿ ಹೊದ್ದುಕೊಂಡು ಎಸ್.ಎಂ.ಎಸ್ ಗಳನ್ನು ಮಾಡುತ್ತಿರುತ್ತಾರೆ. ಅವರ ಒಂದೊಂದು ಎಸ್.ಎಂ.ಎಸ್ ಗೂ ಬೆಲೆಯೇ ಕಟ್ಟಲಾಗುವುದಿಲ್ಲವಂತೆ...! ಅಷ್ಟೊಂದು ಅಮೂಲ್ಯ...!!!
ಕೆಲವರ ಹತ್ತಿರ ಮೊಬೈಲ್ ಇರುತ್ತದೆ, ಆದರೆ ಎಸ್.ಎಂ.ಎಸ್ ಓದಕ್ಕೂ ಬರಲ್ಲ, ನೋಡಕ್ಕೂ ಬರಲ್ಲ....ಪಾಪ....!
ಕೆಲವರು ಮೊಬೈಲನ್ನು ನೋಡಿ ನಗುತ್ತಿರುವುದನ್ನು ನೀವು ಗಮನಿಸಿರಬಹುದು. ಅಂದರೆ ಅವರಿಗೆ ಯಾರೋ ಜೋಕ್ಸ್ ಕಳುಹಿಸಿ ನಗಿಸಲು ಪ್ರಯತ್ನಿಸುತ್ತಿದ್ದಾರೆ ಎಂದರ್ಥ. ಅಳುತ್ತಿದ್ದರೆ ಏನೋ ಬ್ಯಾಡ್ ನ್ಯೂಸ್...ಗ್ರಾಚಾರ.
ಅದೇನೇ ಇರಲಿ ಒಂದೇ ಒಂದು ಎಸ್.ಎಂ.ಎಸ್ ನಿಂದ ಸಂಬಂಧಗಳು ಗಟ್ಟಿಯಾಗಬಹುದು ಅಥವಾ ಒಂದೇ ಒಂದು ಎಸ್.ಎಂ.ಎಸ್ ವಿಚ್ಛೇದನೆಗೆ ಕಾರಣವಾಗಬುದು. ಕೋಪದಲ್ಲಿದ್ದಾಗ ಎಸ್.ಎಂ.ಎಸ್ ಕಳುಹಿಸುವುದು ಉತ್ತಮವಲ್ಲ. ಅದರಿಂದ ದೊಡ್ಡ ಅನಾಹುತವೇ ಸಂಭವಿಸಬಹುದು.
ಇನ್ನೂ ಕೆಲವರಂತೂ ತನ್ನ ಮೊಬೈಲನ್ನೇ ಸುಳ್ಳಿನ ಕಾರ್ಖಾನೆಯನ್ನಾಗಿ ಮಾಡಿಕೊಂಡಿರುತ್ತಾರೆ. ಮನೆಯಲ್ಲೇ ಇದ್ದು ಟಿ.ವಿ. ನೋಡುತ್ತಾ ನಾನು ಊರಲ್ಲಿಲ್ಲ ಅಂತಾರೆ. ಸಂತೆಯಲ್ಲಿ ನಿಂತುಕೊಂಡು ದೇವಸ್ಥಾನದಲ್ಲಿದ್ದೇನೆ ಅಂತಾರೆ.
ಮೊಬೈಲನ್ನು ಏನೆಂದುಕೊಂಡಿದ್ದೀರಾ....? ಮೊಬೈಲೇ ಕೋರ್ಟಿನಲ್ಲಿ ದೊಡ್ಡ ಸಾಕ್ಷಿ ಆಧಾರವಾಗುವ ಕಾಲ ಸಹ ಬಂದು ಬಿಟ್ಟಿದೆ. ಒಟ್ಟಾರೆ ಎಸ್.ಎಂ.ಎಸ್ ಗಳು ಬಹಳ ಬಲಶಾಲಿಯಾಗಿ ಹೊರಹೊಮ್ಮುತ್ತಿವೆ.
ಕೆಲವೊಮ್ಮೆ ನಮಗೆ ಎಸ್.ಎಂ.ಎಸ್ ಗಳಲ್ಲಿ ಒಳ್ಳೆಯ ನೀತಿ ಪಾಠ, ಅನುಭವಸ್ಥರ ಸತ್ಯವಾದ ಮಾತುಗಳು ಓದಲು ಸಿಗುತ್ತವೆ. ಅದನ್ನು ಒಮ್ಮೆ ಓದಿ ಅಳಿಸಿ ಬಿಡುತ್ತೇವೆ. ಅಂತಹ ಎಸ್.ಎಂ.ಎಸ್ ಗಳನ್ನು ಓದಿ ಅದರ ಬಗ್ಗೆ ಒಂದೆರಡು ನಿಮಿಷ ಯೋಚಿಸಿದರೆ ಆ ಮಾತುಗಳ ಆಳ ನಮ್ಮ ಮನಸ್ಸಿಗೆ ಇಳಿಸಿಕೊಳ್ಳಬಹುದು. ಮನಸ್ಸನ್ನು ಸಕಾರಾತ್ಮಕವಾಗಿ ಪರಿವರ್ತನೆ ಮಾಡಿಕೊಳ್ಳಬಹುದು.
ಉದಾಹರಣೆಗೆ ಒಬ್ಬ ಹುಡುಗ ಜೀವನದಿಂದ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸುತ್ತಿದ್ದ. ಅಂತಹ ಸಮಯದಲ್ಲಿ ಆತನಿಗೆ ಒಂದು ಎಸ್.ಎಂ.ಎಸ್ ಬಂತು. - "ಸಂಪತ್ತು,ಅಧಿಕಾರ ಮತ್ತು ಕಷ್ಟದಲ್ಲಿ ಮನುಷ್ಯನ ಬುದ್ಧಿಯ ಪರೀಕ್ಷೆಯಾಗುತ್ತದೆ, ಮನುಷ್ಯ ಸಹನೆಯಿಂದ ಇರುತ್ತಾನೆಯೇ ಅಥವಾ ಕೆಟ್ಟ ಹೆಜ್ಜೆ ಇಡುತ್ತಾನೆಯೇ" - ಕಲೀಫ ಹಜ್ರತ್ ಅಲಿ
ತಕ್ಷಣ ಅವನ ಮನಸ್ಸು ಪರಿವರ್ತನೆಗೊಂಡು ಬೇರೆ ಕೆಲಸ ಹುಡುಕಲು ಹೊರಡುತ್ತಾನೆ. - ಜಬೀವುಲ್ಲಾ ಖಾನ್
ವಿಶೇಷ ವರದಿ
ಪುತ್ತೂರು: ಇದು ನಿಜವೋ ಸುಳ್ಳೋ ಗೊತ್ತಿಲ್ಲ. ಆದರೆ ಹೀಗೊಂದು ಸಂದೇಶ ಪ್ರತಿ ದಿನ ರವಾನೆಯಾಗುತ್ತಲೇ ಇದೆ. ನಿಮಗೆ ಕರೆ ಮಾಡುವ ಅನಾಮಿಕ ವ್ಯಕ್ತಿಯೊಬ್ಬ #90 ಅಥವಾ #09 ಡಯಲ್ ಮಾಡಲು ಹೇಳಿದಾಗ ನೀವೆಲ್ಲಾದರೂ ಡಯಲ್ ಮಾಡಿದಿರಿ ಎಂದರೆ ನಿಮ್ಮ ಮೊಬೈಲ್ ಸಂಖ್ಯೆಯಿಂದ ಅವರೂ ಮಾತನಾಡಬಹುದು. ಭಯೋತ್ಪಾದಕರು ಈ ತಂತ್ರವನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬುದು ಈ ಮಾಹಿತಿ ಹೇಳುತ್ತದೆ.ಪ್ರತಿದಿನ ಇಂತಹದ್ದೊಂದು ಸುದ್ದಿ ಇಮೈಲ್ನಲ್ಲಿ ರವಾನೆಯಾಗುತ್ತಿದೆ. ಹಾಗೆಂದು ಈ ಮಾಹಿತಿಯನ್ನು ಅಷ್ಟು ಸಲೀಸಾಗಿ ತಳ್ಳಿ ಹಾಕುವಂತೆಯೂ ಇಲ್ಲ. ಇಂದಿನ ಆಧುನಿಕ ಯುಗದ ತಂತ್ರಜ್ಞಾನಗಳಲ್ಲಿ ಯಾವುದನ್ನೂ ಅಲ್ಲಗಳೆಯುವ ಹಾಗಿಲ್ಲ. ಹಾಗೆಂದು ಯಾವುದನ್ನೂ ನಂಬುವಂತೂ ಇಲ್ಲ. ಈಗ ಇಂದಿನ ದಿನ ಭಯೋತ್ಪಾದನೆಯ ಜೊತೆಗೆ ಇದರ ಸಂಪರ್ಕ ಇದೆ ಎಂದು ಮೈಲ್ನಲ್ಲಿ ಬರುವ ಸಂದೇಶ.
ನಿಮಗೆ ಯಾರಾದರೂ ಕರೆ ಮಾಡಿ , ನಾವು ಸರ್ವಿಸ್ ಪ್ರೊವೈಡರ್ನಿಂದ ಕರೆ ಮಾಡುತ್ತಿರೋದು , ನಿಮ್ಮ ಮೊಬೈಲ್ ಹಾಗೂ ಸಂಖ್ಯೆ ಸರಿ ಇದೆಯೇ ಎಂದು ಪರೀಕ್ಷಿಸಲು #90 ಅಥವಾ #09 ಡಯಲ್ ಮಾಡಿ ಎಂದು ಹೇಳಲಾಗುತ್ತದೆ.ಒಂದು ವೇಳೆ ಈ ಸಂಖ್ಯೆಯನ್ನು ಒತ್ತಿದಾಕ್ಷಣ ಈ ಜಾಲದ ತಂಡವು ನಿಮ್ಮ ಸಂಖ್ಯೆಯನ್ನು ಟ್ಯಾಪ್ ಮಾಡುತ್ತದೆ. ಆ ನಂತರ ನಿಮ್ಮ ಸಂಖ್ಯೆಯನ್ನು ಬಳಸಿಕೊಂಡು ಅವರು ಕರೆ ಮಾಡಬಹುದು. ಭಯೋತ್ಪಾದಕರು ಈ ಜಾಲವನ್ನು ಹೆಚ್ಚು ಬಳಸಿಕೊಂಡು ಅಮಾಯಕರನ್ನು ಬಲಿಪಶು ಮಾಡುವ ತಂತ್ರ ಇದಾಗಿದೆ ಎಂದು ಹೇಳುತ್ತದೆ ಈ ಮಾಹಿತಿ. ಇದೊಂದು ದೊಡ್ಡ ಜಾಲವಾಗಿದ್ದು ಈಗಾಗಲೇ 3 ಮಿಲಿಯನ್ ಮೊಬೈಲ್ಗಳಿಗೆ ತೊಂದರೆಯಾಗಿದೆ ಎಂದು ಹೇಳುತ್ತವೆ ಕೆಲ ಕಂಪನಿಗಳು.
ಒಟ್ಟಿನಲ್ಲಿ ಇದೊಂದು ವ್ಯವಸ್ಥಿತ ಜಾಲವೋ ಅಥವಾ ಜನರನ್ನು ತಪ್ಪು ದಾರಿಗೆಳೆವ ಪ್ರಯತ್ನವೋ ಗೊತ್ತಿಲ್ಲ. ಒಂದು ವೇಳೆ #09 ಮತ್ತು #90 ಮೂಲಕ ಮೊಬೈಲ್ ಸಂಖ್ಯೆಗಳನ್ನು ಬಳಸಿಕೊಳ್ಳಲು ಸಾಧ್ಯವೇ ? ಸಾಧ್ಯವಾದರೆ ಹೇಗೆ ಎಂದೆಲ್ಲಾ ವಿಶ್ಲೇಷಣೆ ಇನ್ನು ನಡೆಯಬೇಕಿದೆ. ಏನಿದ್ದರೂ ಇಂದು ಅತ್ಯಂತ ಎಚ್ಚರಿಕೆ ವಹಿಸಬೇಕಾದ ಕಾಲವಿದು.
- ಮಹೇಶ್ ಪುಚ್ಚಪ್ಪಾಡಿ
ವಿಶೇಷ ವರದಿ
ನಲವತ್ತು ವರ್ಷ ಮುಂಬಯಿಯಲ್ಲಿ ಕಷ್ಟಪಟ್ಟು ಟ್ಯಾಕ್ಸಿ ಓಡ್ಸಿ, ಹಣವನ್ನೆಲ್ಲ ಕೂಡಿಟ್ಟು ಮಗನಿಗೆ ವಿಧ್ಯೆ ನೀಡಿದೆ... ಅವನು ನನ್ನನ್ನು ಈ ವೃದ್ಧಾಶ್ರಮದಲ್ಲಿ ಬಿಟ್ಟು ಹೆಂಡತಿಯೊಂದಿಗೆ ವಿದೇಶಕ್ಕೆ ಹೋದ! ಹಾಗೆಂದು ಹಿರಿಯ ಜೀವ ಹೇಳುತ್ತಿದ್ದಾಗ ವಿದ್ಯಾರ್ಥಿಗಳ ಕಣ್ಣಂಚಿನಲ್ಲಿ ನೀರಿತ್ತು. ಇನ್ನೊಬ್ಬರ ಮಗ ಇಂಜಿನಿಯರ್ ಚೆನ್ನೈನಲ್ಲಿ ಹೆಂಡತಿಯೊಂದಿಗೆ ವಾಸವಿದ್ದಾನೆ. ತಾಯಿಯನ್ನು ವೃದ್ಧಾಶ್ರಮದಲ್ಲಿ ಬಿಟ್ಟು ಹೋಗಿದ್ದಾನೆ...
ಇನ್ನೊಬ್ಬರನ್ನು ಮಾನಸಿಕ ಅಸ್ವಸ್ಥರು ಎಂಬ ಸುಳ್ಳು ಕಾರಣ ನೀಡಿ ಅವರ ಮಗ ವೃದ್ಧಾಶ್ರಮದಲ್ಲಿ ಬಿಟ್ಟಿದ್ದಾರೆ ... ಇವರೆಲ್ಲರೂ ಬಡತನದಲ್ಲಿ ಹೊಟ್ಟೆಬಟ್ಟೆ ಕಟ್ಟಿಕೊಂಡು ಮಕ್ಕಳಿಗೆ ವಿಧ್ಯೆ ನೀಡಿದವರು. ಆದರೆ ಮಕ್ಕಳು ದೊಡ್ಡವರಾದ ನಂತರ ನೌಕರಿ ಹಿಡಿದು ಮದುವೆಯಾಗಿ ಇವರನ್ನು ವೃದ್ಧಾಶ್ರಮದಲ್ಲಿ ಬಿಟ್ಟು ಹೋಗಿದ್ದಾರೆ. ವೃದ್ಧಾಶ್ರಮದಲ್ಲಿದ್ದ ಪ್ರತಿಯೊಬ್ಬರ ಕಥೆಯು ಹೀಗೆಯಾಗಿತ್ತು.
ಹಿರಿಯರಿಗೆ ಅಪಾರ ಜೀವನಾನುಭವ ಇರುತ್ತದೆ. ಬದುಕಿನ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಕಿರಿಯ ಸ್ವಾಮಿಗಳ ಕಾಲಿಗೆ ಬೀಳುವುದಕ್ಕಿಂತ ಹಿರಿಯ ಗ್ರಹಸ್ಥರನ್ನು ಸಂದರ್ಶಿಸುವುದು ಒಳ್ಳೆಯದು. ವಾನಪ್ರಸ್ಥದ ಘಟ್ಟದಲ್ಲಿರುವ ಹಲವರಲ್ಲಿ ಜೀವನದ ಬಗ್ಗೆ ಸೂತ್ರಗಳಿರುತ್ತದೆ. ಕೆಲವರು ಜೀವನಪರ್ಯಂತ ನಕ್ಕು ಸಮಸ್ಯೆಗಳನ್ನು ತಿಳಿಗೊಳಿಸಿರುತ್ತಾರೆ. ಇನ್ನೂ ಕೆಲವರು ಒಂದು ಗುರಿಯಿಟ್ಟುಕೊಂಡು ತುಂಬಾ ಗಂಭೀರವಾಗಿ ಅದರತ್ತ ಸಾಗುತ್ತಾರೆ. ಸಾಗುವಾಗ ಕೆಲವೊಮ್ಮೆ ನಗುವುದನ್ನೇ ಮರೆತಿರುತ್ತಾರೆ. ಹಾಗಾದರೆ ಯಾವ ಸೂತ್ರ ಒಳ್ಳೆಯದು? ಇದನ್ನೆಲ್ಲ ಅರಿತುಕೊಳ್ಳಲು ನಾನು ಆಳ್ವಾಸ್ ಪದವಿ ಕಾಲೇಜಿನ ಹ್ಯೂಮೆನಿಟಿಸ್ ಫೋರಂನ ವಿದ್ಯಾರ್ಥಿಗಳೊಂದಿಗೆ ವೃದ್ಧಾಶ್ರಮಕ್ಕೆ ಹೊರಟೆ.



ಫೋರಂನ ಮುಖ್ಯಸ್ಥ, ರಾಜಕೀಯಶಾಸ್ತ್ರದ ಮುಖ್ಯಸ್ಥ, ಸತ್ಯಕ್ಕೆ ನನಗೆ ಗೀತೋಪದೇಶ ನೀಡುತ್ತಿರುವ ಪ್ರೊ. ರಮೇಶ್ ಬಸ್ ಇತ್ಯಾದಿಗಳನ್ನು ನೀಡಿ, ಮಾರ್ಗದರ್ಶನವನ್ನು ನೀಡಿ ನಮ್ಮ ಜೊತೆಯಲ್ಲೆ ಬಂದರು. ವಾನಪ್ರಸ್ಥ ಡಿಸ್ಕವರಿಂಗ್ ಲೈಫ್ ಎಂಬ ಸಾಕ್ಷ್ಯ ಚಿತ್ರ ಮಾಡುವ ವಿಚಾರವಿತ್ತು ನಮಗೆ. ಪ್ರೊ. ರಮೇಶ್ ಕೂಡಾ ತುಂಬಾ ದಿನಗಳಿಂದ ಒಳ್ಳೆಯ ಕಾರ್ಯಕ್ರಮವನ್ನು ಮಾಡಬೇಕು ಎನ್ನುತ್ತಿದ್ದರು. ವಾನಪ್ರಸ್ಥದ ವಿಚಾರ ಹೇಳಿದಾಗ ಸಂತೋಷದಿಂದ ಒಪ್ಪಿಕೊಂಡರು. ಡಾ| ಮೋಹನ್ ಆಳ್ವರ ಸಾಮ್ರಾಜ್ಯದಲ್ಲಿ ಯಾವಾಗಲೂ ರಚನಾತ್ಮಕವಾದ ಕೆಲಸಗಳಿಗೆ ಬೆಂಬಲ ಸಿಗುತ್ತದೆ. ಇದೆಲ್ಲ ಕಾರಣಗಳಿಂದ ಆಳ್ವಾಸ್ ಕಾಲೇಜಿನ ಹ್ಯೂಮೆನಿಟಿಸ್ ಪೊರಂ ಹೊರಟಿತು ವಾನಪ್ರಸ್ಥ-ಡಿಸ್ಕವರಿಂಗ್ ಲೈಫ್ ಗಾಗಿ. ಪ್ರೊ. ರಮೇಶ್ರನ್ನೂ ಸೇರಿಸಿ ಇದ್ದವರೆಲ್ಲ ಯುವಜನರೇ! ಹಿರಿಯರ ಜೀವನಾನುಭವವನ್ನು ಹೊರತೆಗೆಯಲು ಒಂದಿಷ್ಟು ಪ್ರಶ್ನೆಗಳನ್ನು ಸಿದ್ಧಪಡಿಸಿಕೊಂಡಿದ್ದೆವು. ಕ್ಯಾಮೆರಾ ಪ್ರವೀಣ ಹಲವು ವಿದ್ಯಾರ್ಥಿಗಳು ಇದ್ದರು. ವೃದ್ದಾಶ್ರಮ ತಲುಪಿ ಪ್ರಶ್ನೆಗಳನ್ನು ಕೇಳಿ, ನಾವೆ ಕೊಂಡೊಯ್ದಿದ್ದ ತಿಂಡಿ-ತಿನಿಸುಗಳನ್ನು ಹಿರಿಯರೊಂದಿಗೆ ಸೇರಿ ತಿಂದೆವು. ನಮ್ಮ ಒಡನಾಟ ಅವರಿಗೆಲ್ಲ ಆಪ್ತವೆನಿಸಿರಬೇಕು. ಒಬ್ಬೊಬ್ಬರಾಗಿ ತಮ್ಮ ದುಃಖ ಹೇಳಿಕೊಳ್ಳಲು ಪ್ರಾರಂಭಿಸಿದರು. ಕ್ಯಾಮರಾ ಮುಚ್ಚಿತು. ಪ್ರಶ್ನೆಗಳ ಹಾಳೆ ಎಲ್ಲೋ ಹಾರಿ ಹೋಯಿತು. ಅವರ ದುಃಖ ನಮ್ಮನ್ನೂ ಆವರಿಸಿತು. ನಾವು ಜೀವನಾನುಭವ ಪಡೆಯಲು ಸಾಕ್ಷ್ಯಚಿತ್ರ ಮಾಡಲು ಬಂದೆವು ಎಂಬುದನ್ನೇ ಕ್ಷಣಕಾಲ ಮರೆತೆವು.
ವಾನಪ್ರಸ್ಥ-ಡಿಸ್ಕವರಿಂಗ್ ಲೈಫ್ ಸಾಕ್ಷ್ಯ ಚಿತ್ರ ಮುಗಿಸುತ್ತೇವೋ ಇಲ್ಲವೋ ಗೊತ್ತಿಲ್ಲ. ಯಾಕೆಂದರೆ ಅವರ ಸ್ಥಿತಿಯನ್ನು ಚಿತ್ರೀಕರಿಸಿ ಸಾಕ್ಷ್ಯಚಿತ್ರ ಮಾಡಿದರೆ ಯಾರದ್ದೋ ವ್ಯಥೆಯನ್ನು ಬಳಸಿಕೊಂಡಂತಾಗುತ್ತದೆ. ಆದರೆ ಒಂದು ವಿಷಯ ಮಾತ್ರ ಸತ್ಯ ಸಾಕ್ಷ್ಯಚಿತ್ರ ಮುಗಿಸದಿದ್ದರೂ ನಾವು ಯಶಸ್ವಿಯೇ. ಯಾಕೆಂದರೆ ಅಂದು ವೃದ್ಧಾಶ್ರಮಕ್ಕೆ ಬಂದ ಯಾವ ವಿದ್ಯಾರ್ಥಿಯು ಹೆತ್ತವರನ್ನು ವೃದ್ಧಾಶ್ರಮದಲ್ಲಿ ಬಿಡುವುದಿಲ್ಲ. ಅಗಲುವಿಕೆಯ ನೋವು ಅವರೆಲ್ಲರಿಗೆ ಅರ್ಥವಾಗಿದೆ.
ಆದಿತ್ಯ ಭಟ್
ಪ್ರಾದೇಶಿಕ ಸುದ್ದಿ
ಶಿಕಾರಿಪುರಃಸಾವಿರಾರು ಎಕರೆ ಜಮೀನಿಗೆ ನೀರುಣಿಸುವ ಶಿಕಾರಿಪುರ ತಾಲೂಕಿನ ಬಹು ದೊಡ್ಡ ಅಂಬ್ಲಿಗೊಳ್ಳ ಜಲಾಶಯ ಸತತ ಮಳೆಯಿಂದಾಗಿ ತುಂಬಿದ್ದು,ಹೆಚ್ಚುವರಿ ನೀರು ಕೋಡಿ ಮೂಲಕ ಹೊರಹೋಗುತ್ತಿದೆ.ಇದೀಗ ಈ ರಮಣೀಯ ದೃಶ್ಯವೀಕ್ಷಣೆಗೆ ನಿರಂತರ ಪ್ರವಾಸಿಗಳು ಆಗಮಿಸುತ್ತಿದ್ದಾರೆ.
ರಾಘವೇಂದ್ರ ಎಚ್.ಆರ್.
ರಾಜ್ಯ - ರಾಷ್ಟ್ರ
ಗೋಕರ್ಣ: ಹಿಂಸೆ ಎಂದೂ ಯಾರಿಗೂ ಒಳಿತನ್ನು ಮಾಡುವಂತಹದ್ದಲ್ಲ.ಪರರನ್ನು ಪೀಡಿಸಿದ್ದರ ಫಲವನ್ನು ನಾವು ಸ್ವತಃ ಅನುಭವಿಸಲೇಬೇಕು. ಇದು ಪ್ರಾಕೃತಿಕನಿಯಮ.ಬೇರೆಯವರಿಗೆ ಮಾಡಿದ ಅಪಕಾರ, ಉಪಕಾರಗಳೆರಡೂ ನಮ್ಮಲ್ಲಿ ಪ್ರತಿಫಲಿಸುತ್ತವೆ. ಈ ಅಂಶವನ್ನು ಅರಿಯದೆ ಸಹಜವಾಗಿ ಸಿಕ್ಕ ಸುಖ,ಸಂಪತ್ತುಗಳ ಮತ್ತಿನಲ್ಲಿ ಮೈಮರೆತವರು ರಾಕ್ಷಸರಾದರು.ಸಾತ್ವಿಕರನ್ನು ಪೀಡಿಸಿದರು.ಸತ್ವಗುಣವನ್ನೇ ದ್ವೇಷಿಸಿದರು.ಹಿಂಸೆ,ಭಗವದ್ವೇಷ,ಮೊದಲಾದ ಗುಣಗಳು ಹುಟ್ಟಿನಿಂದಲೇ ರಾಕ್ಷಸರನ್ನು ಹಿಂಬಾಲಿಸಿಬಂದವು.
ಮೂಲದ್ರವ್ಯಕ್ಕೆ ಯಾವ ಗುಣಸ್ವಭಾವವಿರುವುದೋ ಅದೇ ಆ ವಸ್ತುವಿನ ವಿಕಾಸದಲ್ಲಿ ಪ್ರತ್ಯಕ್ಷವಾಗುತ್ತದೆ ಎಂಬುದಕ್ಕೆ ರಾಕ್ಷಸರೇ ದೃಷ್ಟಾಂತ ಎಂದು ಪರಮಪೂಜ್ಯಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಹೇಳಿದರು.
ಅಶೋಕೆಯಲ್ಲಿ ಕಳೆದ ಒಂದು ವಾರದಿಂದ ಆಯೋಜಿತವಾಗಿದ್ದ ಶ್ರೀರಾಮಕಥಾ ಪ್ರವಚನಮಾಲಿಕೆಯ ಪ್ರಥಮಪರ್ವದ ಸಮಾರೋಪದಲ್ಲಿ ಅನುಗ್ರಹಸಂದೇಶವನ್ನು ನೀಡುತ್ತಿದ್ದ ಪೂಜ್ಯಶ್ರೀಗಳು ಸೃಷ್ಟಿಯ ಆರಂಭದಲ್ಲಿ ಯಕ್ಷಾಮ ಎಂದು ತಮ್ಮ ಹೊಣೆಯನ್ನು ಹೇಳಿದವರು ಯಕ್ಷರಾದರು.ರಕ್ಷಾಮ ಎಂದು ಘೋಷಿಸಿದವರು ರಾಕ್ಷಸರಾದರು. ದುರಂತವೆಂದರೆ ರಕ್ಷಿಸಬೇಕಿದ್ದವರು ರಾಕ್ಷಸರಾಗಿ ಲೋಕಕಂಟಕರಾಗಿ ಬದಲಾದರು.ರಾಕ್ಷಸತ್ವವೆಂದರೆ ಒಳ್ಳೆಯತನದ ದ್ವೇಷ. ಸಾತ್ವಿಕಶಕ್ತಿಯಮೇಲಿನ ದುಷ್ಟತೆಯ ಸವಾರಿ.ಇದನ್ನು ಹೊಂದಿದವರೆಲ್ಲ ರಾಕ್ಷಸರೇ ಎಂದು ಹೇಳಿ ಈ ರಾಕ್ಷಸತತ್ವವನ್ನು ಅರಿಯದೆ ರಾಮಾಯಣವನ್ನು ಅರಿತುಕೊಳ್ಳಲು ಅಸಾಧ್ಯ. ರಾವಣನನ್ನು ತಿಳಿಯದೆ ರಾಮನನ್ನು ಸಂಪೂರ್ಣವಾಗಿ ಅರಿಯಲಾರೆವು. ಈ ಹಿನ್ನೆಲೆಯಲ್ಲಿ ರಾಮಾಯಣವೆಂದರೆ ಲೋಕಹಿತಂಕರವಾದ ಸಾತ್ವಿಕಶಕ್ತಿಗಳಿಗೂ ಪರಪೀಡಾಸಕ್ತವಾದ ದುಷ್ಟಶಕ್ತಿಗಳಿಗೂ ನಡೆಯುವ ಸಂಘರ್ಷ. ಇದನ್ನು ಒಂದು ಅಧ್ಯಾತ್ಮಸಂಕೇತವಾಗಿಯೂ ದಾರ್ಶನಿಕರು ಕಂಡಿದ್ದಿದೆ.ಎಂದು ಹೇಳಿ ನಮ್ಮ ಬದುಕಿನಲ್ಲಿ ಲೋಕಕಂಟಕವಾದ ಪ್ರಪಂಚಕ್ಕೆ ಅಹಿತವನ್ನುಂಟು ಮಾಡುವ ಗುಣಗಳನ್ನು ಮೈಗೂಡಿಸಿಕೊಳ್ಳದೆ ಸಾತ್ವಿಕತೆಯನ್ನು ಸ್ವೀಕರಿಸಿದರೆ ಮಾತ್ರ ಬದುಕಿನ ಸಾರ್ಥಕತೆ ಸಾಧ್ಯ ಎಂದೂ ಶ್ರೀಗಳು ಆಶೀರ್ವಚನದಲ್ಲಿ ತಿಳಿಸಿದರು.
ಶ್ರೀಪಾದ ಭಟ್ಟ, ಪ್ರೇಮಲತಾ ದಿವಾಕರ, ವಸುಧಾ ಶರ್ಮಾ ,ವಿಶ್ವೇಶ್ವರ ಭಟ್ಟ, ಸಂಧ್ಯಾ ಭಟ್ಟ ಇವರ ಗಾಯನ ಗೋಪಾಲಕೃಷ್ಣ ಹೆಗಡೆಯವರ ತಬಲಾ,ನರಸಿಂಹ ಮೂರ್ತಿಯವರ ಮೃದಂಗ,ಪ್ರಕಾಶ ಕಲ್ಲರೆಮನೆ ಇವರ ಕೊಳಲುವಾದನ ಜನರನ್ನು ಮಂತ್ರಮುಗ್ಧರನ್ನಾಗಿಸಿದರೆ ಇವಕ್ಕೆಲ್ಲ ಶಿಖರಪ್ರಾಯವಾಗಿ ಗಣಪತಿ ನೀರ್ನಳ್ಳಿಯವರ ಆಶುಚಿತ್ರ ಹಾಗೂ ಚಿತ್ರದುರ್ಗದ ಶ್ವೇತಾ ಭಟ್ಟ ಹಾಗೂ ಸಂಗಡಿಗರ ಭರತನಾಟ್ಯಗಳು ಪ್ರೇಕ್ಷಕರನ್ನು ಹೊಸದೊಂದು ಲೋಕಕ್ಕೆ ಕರೆದೊಯ್ದವು.
ಇಂದು ಬೆಂಗಳೂರು ಹವ್ಯಕಮಂಡಲದ ವತಿಯಿಂದ ಶ್ರೀಗುರುಭಿಕ್ಷಾಸೇವೆ ಹಾಗೂ ಶ್ರೀರಾಮಕಥಾ ಕಾರ್ಯಕ್ರಮಗಳು ಆಯೋಜಿತವಾಗಿದ್ದವು.ಮುಂದಿನ ತಿಂಗಳ ಒಂದರಿಂದ ಏಳರವರೆಗೆ ಇದೇ ವೇದಿಕೆಯಲ್ಲಿ ಪುನಃ ಪೂಜ್ಯಶ್ರೀಗಳಿಂದ ಶ್ರೀರಾಮಕಥೆಯು ಸಂಪನ್ನಗೊಳ್ಳಲಿದೆ.
ಐತಿಹಾಸಿಕ ಪ್ರಸಿದ್ಧಿಯ ಮೂಡಬಿದಿರೆಯ ಸಾವಿರ ಕಂಬದ ಬಸದಿಯ "ಭೈರಾದೇವಿ " ಮಂಟಪದಲ್ಲಿ ಮತ್ತೊಮ್ಮೆ ಇತಿಹಾಸ ಮರುಳಿಸಿದ ಕ್ಷಣ. ಅತ್ಯಂತ ವೈಭವೋಪೇತದಿಂದ ಆ ಪ್ರದೇಶದಲ್ಲಿ ಮತ್ತೆ ಗೆಜ್ಜೆಯ ನಿನಾದ...ಪುಟ್ಟ ಬಾಲೆಯೊಬ್ಬಳು ಕಾಲಿಗೆ ಗೆಜ್ಜೆ ಕಟ್ಟಿ ತನ್ನ ಅಮೋಘ ನೃತ್ಯಪ್ರದರ್ಶನವನ್ನು ಸೇರಿದ್ದ ಕಲಾಸಕ್ತ ಬಂಧುಗಳ ಸಮ್ಮುಖದಲ್ಲಿ ಪ್ರದರ್ಶಿಸಿದ ರೀತಿ ಮೆಚ್ಚತಕ್ಕಂತಹುದು.ಸೇರಿದ್ದ ಕಲಾಸಕ್ತರು ಪುಟ್ಟಹುಡುಗಿಯ ಸಾಧನೆಗೆ ಮೆಚ್ಚಿತಲೆದೂಗಿದರೆ,ಇಲ್ಲಿನ ಜೈನಮಠದ ಪರಮಪೂಜ್ಯ ಭಾರತ ಭೂಷಣ ಸ್ವಸ್ತಿ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳ ಶುಭಾಶೀರ್ವಾದ ನೀಡಿ ಪುಟ್ಟಚದುರೆಯನ್ನು ಹರಸಿ, ಸನ್ಮಾನಿಸಿ ಗೌರವಿಸಿದರು...
ಮಂಗಳೂರಿನ ಮೊತ್ತ ಮೊದಲ ಕನ್ನಡ ಅಂತರ್ಜಾಲ ತಾಣ "ಈ ಕನಸು.ಕಾಂ "ಮೂಡಬಿದಿರೆ ಜೈನ ಮಠ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ "ಚಿಗುರು" ಯೋಜನೆಯಡಿ ಈ ರಂಗ ಭಾರತಿ ಮಂಗಳೂರು ಪ್ರಸ್ತುತ ಪಡಿಸುವ "ಮನೆ ಮನೆಗೆ ಭರತನಾಟ್ಯ " ಕಾರ್ಯಕ್ರಮ ಸರಣಿಗೆ ಇದೀಗ 75ರ ಸಂಭ್ರಮವನ್ನು ಯಶಸ್ವಿಯಾಗಿ ಭೈರಾದೇವಿ ಮಂಟಪದಲ್ಲಿ ಪ್ರಸ್ತುತಪಡಿಸಿತು.ಸುಧೀರ್ಘ ಸಮಯದ ಬಳಿಕ ಮತ್ತೆ ಸಾವಿರ ಕಂಬದ ಬಸದಿಯ ಭೈರಾದೇವಿ ಮಂಟಪದಲ್ಲಿ ಗೆಜ್ಜೆಯ ಸದ್ದು ಅನುರಣಿಸಿತು...ವಿವಿಧ ವಾಧ್ಯಗಳು ಸ್ವರಮಾಧರ್ಯಸೂಸಿದರೆ, ಗುರುಗಳು ತಮ್ಮ ಶಿಷ್ಯೆಯ ಸಾಧನೆಯನ್ನು ನೋಡಿ ಮೆಚ್ಚುಗೆ ಸೂಸಿದರು...ವ್ಹಾವ್ ...ಎಂತಹ ಸುಸಂದರ್ಭ...ಇದು ಸೇರಿದ್ದ ಪ್ರತಿಯೊಬ್ಬರ ಬಾಯಲ್ಲಿ ಮೂಡಿಬಂದ ಮಾತು!







ಮನೆ - ಮನಗಳಲ್ಲಿ ಭಾರತೀಯ ಸಂಸ್ಕೃತಿ, ಕಲೆ, ಸಾಹಿತ್ಯದ ಉತ್ಸಾಹವನ್ನು ತುಂಬುವ ಮೂಲಕ ಮನೆಮಾತಾಗಿರುವ ಮೂಡಬಿದಿರೆಯ ಕೂಸು, ಬಾಲ ಕಲಾವಿದೆ ಕು.ಅಯನಾ ವಿ ರಮಣ್ ಅವರ "ನೃತ್ಯ ಪ್ರತಿಭಾಮೃತ" ಹಾಗೂ ಹಿರಿಯ ನೃತ್ಯಗುರು ವಿದುಷಿ ಶ್ರೀಮತಿ ಗೀತಾ ಸರಳಾಯ ಅವರಿಗೆ "ಗುರುನಮನ" ಕಾರ್ಯಕ್ರಮ ಅರ್ಥಪೂರ್ಣವಾಗಿ ಮೂಡಿಬಂತು.
ಮುಲ್ಕಿ - ಮೂಡಬಿದಿರೆ ಕ್ಷೇತ್ರದ ಶಾಸಕ ಕೆ.ಅಭಯಚಂದ್ರ ಜೈನ್, ಉದ್ಯಮಿಗಳಾದ ಶ್ರೀಪತಿ ಭಟ್, ಸಮಾಜ ಸೇವಕರಾದ ಕೆ.ಪಿ.ಜಗದೀಶ್ ಅಧಿಕಾರಿ, ರೋಟರಿ ಆಂಗ್ಲಮಾಧ್ಯಮ ಶಾಲೆಯ ಪ್ರಾಂಶುಪಾಲ ವಿನ್ಸೆಂಟ್ ಡಿ'ಕೋಸ್ತ, ಸ್ಥಳೀಯ ತಹಶೀಲ್ದಾರ್ ಮುರಳೀಧರ್ ಅಭ್ಯಾಗತರಾಗಿ ಪಾಲ್ಗೊಂಡರು.





ರಂಗ ಭಾರತಿ ನಿರ್ದೇಶಕ ಕೆ.ವಿ.ರಮಣ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಪತ್ರಕರ್ತ ಧನಂಜಯ ಮೂಡಬಿದಿರೆ ಕಾರ್ಯಕ್ರಮ ನಿರೂಪಿಸಿದರು. ಹರೀಶ್ ಕೆ.ಆದೂರು ವಂದಿಸಿದರು.
ಚಿತ್ರ: ಧನಂಜಯ ಮೂಡಬಿದಿರೆ
Video
