ವೈವಿಧ್ಯ
ಸುಖಕರವಾಗಿ ಕುಳಿತುಕೊಳ್ಳುವ ಭಂಗಿ
ಪದ್ಮ ಎಂದರೆ ಕಮಲದ ಹೂ ಯಾ ತಾವರೆ ಹೂ ಎಂದರ್ಥ. ಈ ಆಸನವು ಕಮಲ ಹೂವನ್ನು ಹೋಲುತ್ತದೆ. ಆದಕಾರಣ ಪದ್ಮಾಸನ ಎನ್ನುವುದು. ಈ ಆಸನವು ಧ್ಯಾನ ಮತ್ತು ಪ್ರಾಣಾಯಾಮಕ್ಕೆ ಹೇಳಿ ಮಾಡಿಸಿದ ಭಂಗಿಯಾಗಿದೆ. ಹಾಗೂ ಇದು ಒಂದು ಸುಖಕರವಾಗಿ ಕುಳಿತುಕೊಳ್ಳುವ ಭಂಗಿಯಾಗಿದೆ. ಈ ಆಸನದಲ್ಲಿ ನೆಲೆಸಿದಾಗಲೇ ಬುದ್ಧದೇವನಿಗೆ ಜ್ಞಾನೋದಯವಾಯಿತು ಎಂದು ಹೇಳಲಾಗಿದೆ. ಈ ಆಸನವನ್ನು ಕಲಿಯುವಾಗ ಗುರುಗಳ ಸಲಹೆ, ಮಾರ್ಗದರ್ಶನ ಪಡೆದುಕೊಂಡೇ ಅಭ್ಯಾಸ ಮಾಡಬೇಕು.
ಅಭ್ಯಾಸ ಕ್ರಮ
ಜಮಖಾನೆ ಹಾಸಿದ ನೆಲದ ಮೇಲೆ ನೇರವಾಗಿ ಕುಳಿತು, ಎರಡೂ ಕಾಲುಗಳನ್ನೂ ಮುಂದಕ್ಕೆ ನೀಳವಾಗಿ ಚಾಚಬೇಕು. ಬಲಕಾಲನ್ನು ಎಡತೊಡೆಯ ಮೇಲೆ, ಎಡಗಾಲನ್ನು ಮಡಿಸಿ ಬಲತೊಡೆಯ ಮೇಲೆ ಇರಿಸಬೇಕು. ಕೈಗಳನ್ನು ಆಯಾ ಮಂಡಿಗಳ ಮೇಲಿಟ್ಟು ಹೆಬ್ಬೆಟ್ಟು ಮತ್ತು ತೋರು ಬೆರಳುಗಳ ತುದಿಗಳನ್ನು ತಗಲಿಸಿ 'ಚಿನ್ಮುದ್ರೆ' ಭಂಗಿಯನ್ನು ಹಿಡಿಯಬೇಕು ಅಥವಾ ಕೈಗಳೆರಡನ್ನೂ ಹಿಮ್ಮಡಿಗಳೆರಡರ ಮಧ್ಯ ಇಡಬೇಕು. ಅಂಗೈಗಳು ಮೇಲ್ಮೊಗವಾಗಿರಬೇಕು. ಈ ಸ್ಥಿತಿಯಲ್ಲಿ ಸಾಮಾನ್ಯ ಉಸಿರಾಟ ನಡೆಸುತ್ತಾ ಆರಂಭದಲ್ಲಿ ಸ್ವಲ್ಪ ಹೊತ್ತು ಕ್ರಮೇಣ ಸಾಧ್ಯವಿದ್ದಷ್ಟು ಸಮಯದವರೆಗೆ ಮಾಡಬಹುದು. ಕಾಲುಗಳು ನೋವು ಅನಿಸಿದರೆ ಕೂಡಲೇ ವಿರಮಿಸಬೇಕು. ಅಭ್ಯಾಸ ಆದ ಅನಂತರ ಕಣ್ಣುಗಳನ್ನು ಮುಚ್ಚಿ ಗಮನವನ್ನು ಉಸಿರಾಟದಲ್ಲಿ ಯಾ ಇಷ್ಟ ದೇವರಲ್ಲಿ ಇರಿಸಬೇಕು. ಇದರಿಂದಾಗಿ ಏಕಾಗ್ರತೆಯನ್ನು ಬಲು ಬೇಗ ಸಾಧಿಸಬಹುದಾಗಿದೆ. ಪದ್ಮಾಸನವನ್ನು ಮಾಡಲು ಕಷ್ಟವಾಗುವವರು ಆರಂಭದಲ್ಲಿ ಅರ್ಧ ಪದ್ಮಾಸನ, ಕಾಲುಗಳನ್ನು ಮಡಿಸಿ ಬಿಡಿಸುವ ವ್ಯಾಯಾಮ, ಮತ್ತು ಬದ್ಧ ಕೋಣಾಸನವನ್ನು ಚೆನ್ನಾಗಿ ಅಭ್ಯಾಸ ಮಾಡಬೇಕು. ಪದ್ಮಾಸನದಲ್ಲಿ ಪರಿಣತಿ ಹೊಂದಿದ ನಂತರ ಧ್ಯಾನ ಮತ್ತು ಪ್ರಾಣಾಯಾಮವನ್ನು ಮಾಡಬಹುದು. ಈ ಸ್ಥಿತಿಯಲ್ಲಿ ದೃಷ್ಠಿಯನ್ನು ನಾಸಿಕಾಗ್ರ ಅಥವಾ ಭ್ರೂ ಮಧ್ಯದಲ್ಲಿ ಇರಿಸಬೇಕು.
ಉಪಯೋಗಗಳು
ಹೊಸಬರಿಗೆ ಆರಂಭದಲ್ಲಿ ಪದ್ಮಾಸನ ಅಭ್ಯಾಸ ಮಾಡುವಾಗ ಕೆಲವು ದಿನಗಳ ಕಾಲ ಸ್ವಲ್ಪ ಮಂಡಿನೋವು ಬರಬಹುದು. ಅಭ್ಯಾಸ ಆದ ನಂತರ ಪದ್ಮಾಸನವು ಒಂದು ಸುಖಕರವಾಗಿ ಕುಳಿತುಕೊಳ್ಳುವ ಭಂಗಿಯಾಗಿದೆ. ನೆಲದಲ್ಲಿ ತುಂಬಾ ಹೊತ್ತು ಕುಳಿತುಕೊಳ್ಳಬಹುದು. ಯಾವುದೇ ರೀತಿಯ ಕಾಲು ಸೆಳೆತ, ಮಂಡಿನೋವು ಇತ್ಯಾದಿ ಬರುವುದಿಲ್ಲ. ಕಾಲಿನ ನರ, ಹೊಟ್ಟೆ ಸೊಂಟ, ಬೆನ್ನು, ಮಂಡಿ ಇತ್ಯಾದಿ ಅಂಗಗಳು ಹೊಸ ಹುರುಪನ್ನು ಪಡೆದು ಚುರುಕಾಗುತ್ತದೆ. ಹೊಟ್ಟೆಯು ತೆಳ್ಳಗಾಗಿ ಶರೀರಕ್ಕೆ ಒಂದು ಬಗೆಯ ಸುಂದರತೆ ಕಂಡುಬರುತ್ತದೆ. ತೊಡೆಗಳ ಕೊಬ್ಬು ಕರಗುತ್ತದೆ. ಈ ಆಸನದಲ್ಲಿ ಮನಸ್ಸು ಏಕಾಗ್ರತೆಯನ್ನು ಸಾಧಿಸಿ ಬುದ್ಧಿ ಚುರುಕಾಗುತ್ತದೆ. ಆತಂಕ, ಉದ್ವೇಗ ದೂರವಾಗುತ್ತದೆ. ಈ ಆಸನದಿಂದ ಮನಸ್ಸಿಗೆ ಸುಖ, ಶಾಂತಿ, ನೆಮ್ಮದಿ ದೊರೆಯುತ್ತದೆ. ಶಿಸ್ತು ಎದ್ದು ತೋರುತ್ತದೆ.
ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ,
ನಿವೃತ್ತ ಸೀನಿಯರ್ ಹೆಲ್ತ್ ಇನ್ಸ್ಪೆಕ್ಟರ್, ಅಂತರರಾಷ್ಟೀಯ ಯೋಗ ತೀರ್ಪುಗಾರರು,
ರಾಜ್ಯ - ರಾಷ್ಟ್ರ
ಗೋಕರ್ಣ: ಲೋಕದಲ್ಲಿ ಸಾವಿರಾರು ವಸ್ತುಗಳಿವೆ.ಆದರೆ ಅವೆಲ್ಲವೂ ಸಾವನ್ನು ಹೊಂದಿದವೇ.ಆದರೆ ಸಾವಿರದ ಒಂದು ಸ್ಥಾನವಿದ್ದರೆ ಅದು ಭಗವಂತನ ಸಾನ್ನಿಧ್ಯ ಮಾತ್ರ. ಹಣಬಲದಿಂದಲೋ, ತೋಳಿನಶಕ್ತಿಯಿಂದಲೋ ಅಧಿಕಾರದಿಂದಲೋ ಅದನ್ನು ಪಡೆಯಲು ಅಸಾಧ್ಯ.ಪರಮಾತ್ಮನ ಮೇಲಿನ ಅಸಾಧಾರಣ ಪ್ರೀತಿಯಿಂದ ಅನನ್ಯ ಶರಣತೆಯಿಂದ ಮಾತ್ರ ನಾವು ಆಸ್ಥಾನವನ್ನು ಸೇರಬಹುದು.ಅದಕ್ಕೆ ಅವನ ಕರುಣೆಯೂ ಬೇಕು ಎಂದು ಶ್ರೀ ರಾಮಚಂದ್ರಾಪುರಮಠದ ಪೂಜ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಹೇಳಿದ್ದಾರೆ.
ಚಾತುರ್ಮಾಸ್ಯದ ನಿಮಿತ್ತ ಅಶೋಕೆಯಲ್ಲಿ ಆಯೋಜಿತವಾಗಿರುವ ರಾಮಕಥಾದ ಭಾದ್ರಪದಪರ್ವದ ಶುಭಾರಂಭ ದಿನದಂದು ರಾಮಾಯಣದ ಅನುಗ್ರಹಸಂದೇಶವನ್ನು ನೀಡುತ್ತಿದ್ದ ಪೂಜ್ಯಶ್ರೀಗಳು ಸಾವಿನಲೋಕಕ್ಕೆ ಹೋಗುವವರಿದ್ದಾರೆ. ಅಲ್ಲಿಗೆ ಹೋಗಿ ಪುನಃ ಬಂದವರೂ ಅಪರೂಪಕ್ಕೆ ಸಿಗಬಹುದು. ಆದರೆ ಮೃತ್ಯುವಿನ ನಾಡಿಗೆ ಹೋಗಿ ಅವನೊಂದಿಗೆ ಸೆಣಸಿ ಗೆದ್ದೆ ಎಂದು ಬೀಗುತ್ತಬಂದ ಒಬ್ಬ ವ್ಯಕ್ತಿಯಿದ್ದರೆ ಅದು ರಾವಣ ಮಾತ್ರ.ಸಾವೆಂಬುದು ನೆರಳಿನಂತೆ ನಮ್ಮನ್ನು ಹಿಂಬಾಲಿಸುತ್ತಲೇ ಇರುತ್ತದೆ ಎಂಬುದನ್ನು ಅರಿಯದೆ ಭ್ರಮಾಲೋಕದಲ್ಲಿಯೇ ಆತ ಬದುಕಿದ.ಸಮಸ್ತವಿಶ್ವವೇ ತನಗೆ ತಲೆಬಾಗಬೇಕೆಂಬ ಆಸೆಯಿಂದ ಆತ ಎಲ್ಲರನ್ನೂ ಹಿಂಸಿಸಿದ. ರಾವಣ ಎಂದರೆ ಸಾವು ಅಥವಾ ನೋವು.ಸ್ವಂತ ತಂಗಿಯಾದ ಶೂರ್ಪಣಖಿಯ ಪತಿಯಾದ ವಿದ್ಯುಜ್ಜಿಹ್ವನನ್ನೂ ಅವನು ಕೊಂದುಹಾಕಿದ.ಇಂತಹ ಭಯಾನಕನಾದ ರಾವಣನೂ ಸಹ ವರುಣಲೋಕಕ್ಕೆ ಹೋದಾಗ ಅಲ್ಲಿ ವಿಶ್ವಜನನಿಯಾದ ಕಾಮಧೇನುವನ್ನು ಕಂಡು ಕೈಮುಗಿದ ಎನ್ನುತ್ತದೆ ರಾಮಾಯಣ.
ಆತನಿಂದ ಪೀಡೆಗೊಳಗಾಗದೆ ಉಳಿದದ್ದು ಸುರಧೇನುವಾದ ಸುರಭಿ ಮಾತ್ರ ಎಂದು ಹೇಳಿದ ಪೂಜ್ಯಶ್ರೀಗಳು ಗೋರೂಪವಾದ ಕಾಮಧೇನು ಲೋಕಕ್ಕೆ ಅನುಗ್ರಹಿಸಿದ ವಸ್ತುಗಳೆಲ್ಲವೂ ನಮ್ಮ ಬದುಕಿಗೆ ಅತ್ಯಂತ ಅಗತ್ಯವಾದವುಗಳೇ.ಮಮತಾಮಯಿಯಾದ ಗೋವನ್ನು ಮರೆತರೆ ನಾವು ಕೃತಘ್ನರು ಎಂದು ಹೇಳಿ ರಾಮಾಯಣದಲ್ಲಿ ನಿರೂಪಿತವಾದ ಸಮುದ್ರಮಥನಜನ್ಯಪದಾರ್ಥಗಳ ವಿಸ್ತಾರವಿವೇಚನೆ ಮಾಡಿ ಅವುಗಳ ಸಾಂಕೇತಿಕತೆಯನ್ನು ವಿಶ್ಲೇಷಿಸಿದರು.
ಶ್ರೀಪಾದ ಭಟ್,ಸಂಧ್ಯಾ ಭಟ್,ಪ್ರೇಮಲತಾ ದಿವಾಕರ್ ಇವರ ಸುಶ್ರಾವ್ಯಸಂಗೀತಕ್ಕೆ ಗೋಪಾಲಕೃಷ್ಣ ಹೆಗಡೆಯವರ ತಬಲಾ,ಶ್ರೀಪ್ರಕಾಶರ ವೇಣುವಾದನಗಳು ಸಾಥ್ ನೀಡಿದವು.ಪ್ರೊ. ಕುಮಾರಿ ಸುಭದ್ರಾ ಅವರ ನಿರ್ದೇಶನದಲ್ಲಿ ಡಾ.ಗಜಾನನ ಶರ್ಮಾ ಅವರು ರಚಿಸಿದ ಸುರಭಿ ರೂಪಕ ಪ್ರದರ್ಶನವು ಪ್ರಸ್ತುತವಾಯಿತು.ರಾಮಕಥೆಯಲ್ಲಿ ನಾಡಿನ ಖ್ಯಾತ ಉದ್ಯಮಿಗಳಾದ ಕೊಲ್ಕತಾದ ಇಮಾಮಿ ಸಮೂಹಸಂಸ್ಥೆಯ ರಾಧೇಶ್ಯಾಂ ಗೋಯೆಂಕಾ, ಆನಂದ್ ರಾಟಿ ಸಂಸ್ಥೆಯ ಆನಂದ ರಾಟಿ, ಎಮ್.ಪಿ.ಸೋನಿಕಾಜಿ ಹಾಗೂ ಅವರ ಕುಟುಂಬದ ಎಲ್ಲ ಸದಸ್ಯರು ಉಪಸ್ಥಿತರಿದ್ದರು.
ವರದಿ: ಸತ್ಯನಾರಾಯಣ ಶರ್ಮ
ರಾಜ್ಯ - ರಾಷ್ಟ್ರ
ಗೋಕರ್ಣ: ಗೋಕರ್ಣದ ಸಾರ್ವಭೌಮ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ನಡೆಯುತ್ತಿರುವ ಕೋಟಿರುದ್ರ ಕಾರ್ಯಕ್ಕೆ ನಾಡಿನ ಪ್ರತಿಷ್ಠಿತ ಕರ್ಣಾಟಕ ಬ್ಯಾಂಕ್ ಯೋಜಿಸಿರುವ ಇ-ಹುಂಡಿ ವ್ಯವಸ್ಥೆಯನ್ನು ಶ್ರೀ ರಾಮಚಂದ್ರಾಪುರ ಮಠದ ಪೂಜ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಲೋಕಾರ್ಪಣೆಗೊಳಿಸಿದರು.ಅಶೋಕೆಯಲ್ಲಿ ಚಾತುರ್ಮಾಸ್ಯವ್ರತನಿಷ್ಠರಾಗಿರುವ ಪೂಜ್ಯಶ್ರೀಗಳು ಈ ಸಂದರ್ಭದಲ್ಲಿ ಮಾತನಾಡಿ ವೇಗವಾಗಿ ಬೆಳೆಯುತ್ತಿರುವ ಇಂದಿನ ತಾಂತ್ರಿಕಜ್ಞಾನದ ಮುಖಾಂತರ ಮನೆಯಲ್ಲಿಯೇ ಕುಳಿತು ಶ್ರೀದೇವಾಲಯಕ್ಕೆ ಕಾಣಿಕೆಯನ್ನು ಸಮರ್ಪಿಸಬಹುದಾಗಿದ್ದು ಈ ಸೇವೆಯ ಲಾಭವನ್ನು ಎಲ್ಲರೂ ಪಡೆಯುವಂತಾಗಲೆಂದು ಆಶಿಸಿದರು.
ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಜಯರಾಮ ಭಟ್ಟರು,ಡಿ.ಜಿ.ಎಮ್. ರಾಮಚಂದ್ರ ಭಟ್,ಬ್ಯಾಂಕಿನ ಮಾಜಿ ನಿರ್ದೇಶಕ ಭೀಮ ಭಟ್,ಶ್ರೀಮಠದ ಆಡಳಿತಸಮಿತಿಯ ದಿವಾಕರ ಶಾಸ್ತ್ರಿ, ಕೃಷ್ಣಕುಮಾರ ಅತ್ರಿಜಾಲು ಮೊದಲಾದವರು ಉಪಸ್ಥಿತರಿದ್ದರು.ಶ್ರೀಸವಾರಿಯ ವ್ಯವಸ್ಥಾಪಕ ರಾಘವೇಂದ್ರ ಮಧ್ಯಸ್ಥರು ನಿರ್ವಹಿಸಿದರು.
ಅಶೋಕೆಯಲ್ಲಿ ಚಾತುರ್ಮಾಸ್ಯ ವ್ರತನಿಷ್ಠರಾದ ಪರಮಪೂಜ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳನ್ನು
ಮಾಜಿ ಸಚಿವ ಕಾಂಗ್ರೆಸ್ ಮುಖಂಡ ಆರ್.ವಿ.ದೇಶಪಾಂಡೆ ಸಪತ್ನೀಕರಾಗಿ ಸಂದರ್ಶಿಸಿ ಆಶೀರ್ವಾದ ಪಡೆದರು.
ರಾಜ್ಯ - ರಾಷ್ಟ್ರ
ಮೂಡಬಿದಿರೆ: ಆಳ್ವಾಸ್ ಎಜುಕೇಷನ್ ಫೌಂಡೇಷನ್ ಪ್ರವರ್ತಿತ ಆಳ್ವಾಸ್ ಪದವಿಕಾಲೇಜಿನ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ನಿರ್ಮಾಣಗೊಂಡ ಸಾಗರದ ಮೋಹನ ಗಣಪತಿ ಹೆಗಡೆ ಸಂಗ್ರಹದ ಪತ್ರಿಕಾ ಸಂಗ್ರಹಾಲಯವನ್ನು ಆಳ್ವಾಸ್ ಎಜುಕೇಷನ್ ಫೌಂಡೇಷನ್ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಉದ್ಘಾಟಿಸಿ ಶುಭಹಾರೈಸಿದರು.ಮೋಹನ ಗಣಪತಿ ಹೆಗಡೆಯವರು ಸಂಗ್ರಹಿಸಿದ ಅನರ್ಘ್ಯ ಸಂಗ್ರಹವನ್ನು ಅತ್ಯಂತ ಕಾಳಜಿಯಿಂದ ಕಾಪಿಡುವ ಕಾರ್ಯ ಪತ್ರಿಕೋದ್ಯಮ ವಿಭಾಗದ ವತಿಯಿಂದ ನಡೆಸಲಾಗುತ್ತದೆ. ಇದು ವಿದ್ಯಾರ್ಥಿಗಳ ಪ್ರಾಯೋಗಿಕ ಕಲಿಕೆಗೆ ಸಹಕಾರಿಯಾಗಲಿದೆ ಎಂದು ಡಾ.ಆಳ್ವ ಮೆಚ್ಚುಗೆ ವ್ಯಕ್ತಪಡಿಸಿದರು.
ಸಾಗರದ ನಿವಾಸಿ ನಿವೃತ್ತ ಶಿಕ್ಷಕ ಮೋಹನ ಗಣಪತಿ ಹೆಗಡೆಯವರ ಹೆಸರಿನಲ್ಲಿ ಈ ಸಂಗ್ರಹಾಲಯವನ್ನು ಸ್ಥಾಪಿಸಲಾಗಿದೆ.ಪತ್ರಿಕಾ ಸಂಗ್ರಹಾಲಯದಲ್ಲಿ ಮಂಗಳೂರ ಸಮಾಚಾರ ಪತ್ರಿಕೆಯಿಂದ ಪ್ರಾರಂಭಗೊಂಡು ಇಂದಿನ ಪತ್ರಿಕೆಗಳು ಪ್ರದರ್ಶನಗೊಂಡಿವೆ.ಮೋಹನ ಗಣಪತಿ ಹೆಗಡೆ ಸ್ವಯಂ ಸ್ಪೂರ್ತಿಯಿಂದ ಸಂಸ್ಥೆಗೆ ದಾನವಾಗಿ ನೀಡಿದ ಪತ್ರಿಕೆಗಳ ಜೊತೆಗೆ ಆಳ್ವಾಸ್ ಕಾಲೆಜಿನ ಪತ್ರಿಕೋದ್ಯಮ ಉಪನ್ಯಾಸಕ ಹರೀಶ್ ಕೆ ಆದೂರು ಇವರ ಸಂಗ್ರಹದ ಅನೇಕ ಪತ್ರಿಕೆಗಳು ಈ ಸಂಗ್ರಹಾಲಯದಲ್ಲಿ ಸ್ಥಾನಗಳಿಸಿವೆ.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪಿ.ಬಿ.ಹರೀಶ್ ರೈ ಯಾವುದೇ ಭ್ರಮೆಯನ್ನು ಹೊಂದಿಕೊಂಡು ಪತ್ರಿಕೋದ್ಯಮ ಕ್ಷೇತ್ರಕ್ಕೆ ಬರಬೇಡಿ.ಬದಲಾಗಿ ಇದೂ ಒಂದು ವೃತ್ತಿ ಎಂಬುದನ್ನು ಗಮನಿಸಬೇಕಾಗಿದೆ. ದಿನ ದಿನವೂ ಹೊಸತನದೊಂದಿಗೆ ಈ ವೃತ್ತಿ ಕೂಡಿರುತ್ತದೆ ಎಂದರು.
ಪತ್ರಿಕಾ ಸಂಗ್ರಾಹಕ ಮೋಹನ ಗಣಪತಿ ಹೆಗ್ಡೆ ಸಾಗರ ಹಾಗೂ ಇಂದಿರಾ ಹೆಗಡೆ ಸಾಗರ ಇವರನ್ನು ಸನ್ಮಾನಿಸಲಾಯಿತು. ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಪುಸ್ತಕಗಳಿಗಿಂತಲೂ ಪತ್ರಿಕೆಗಳ ಅಗತ್ಯತೆ ಇದೆ.ನಿರಂತರ ಓದು ಪತ್ರಿಕೋದ್ಯಮ ವಿದ್ಯಾರ್ಥಿಗಳ ಬೆಳವಣಿಗೆಗೆ ತೀರಾ ಅವಶ್ಯಕ. ಈ ದೃಷ್ಟಿಯಿಂದ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಸಂಗ್ರಾಹಲಯ ಸಹಕಾರಿಯಾಗಲಿ ಎಂದು ಆಶಿಸಿದರು.
ಆಳ್ವಾಸ್ ಎಜುಕೇಷನ್ ಫೌಂಡೇಷನ್ ಆಡಳಿತಾಧಿಕಾರಿ ಸ್ಮಿತಾ ಪಿ.ಐತಾಳ್, ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಕುರಿಯನ್, ಆಳ್ವಾಸ್ ಕಾಲೇಜಿನ ಉಪನ್ಯಾಸಕ, ಮಾಧ್ಯಮ ಸಂಪರ್ಕಾಧಿಕಾರಿ ಹರೀಶ್ ಕೆ.ಆದೂರು, ಉಪನ್ಯಾಸಕಿ ಮೌಲ್ಯ ಜೀವನ್ ಉಪಸ್ಥಿತರಿದ್ದರು.
ರಾಜ್ಯ - ರಾಷ್ಟ್ರ
ಗೋಕರ್ಣ: ಸಾಮಾಜಿಕವಾದ ಅನೇಕ ಋಣಗಳು ನಮ್ಮ ಮೇಲಿವೆ.ದೀನರ ಆರ್ತರ ಕಣ್ಣೊರೆಸುವುದೂ ಒಂದು ಭಗವತ್ಪ್ರೀತಿಸಾಧನವಾದ ಕಾರ್ಯವೇ.ಸಾಧ್ಯವಾದಷ್ಟರಮಟ್ಟಿಗೆ ನಮ್ಮಿಂದ ಇನ್ನೊಬ್ಬರಿಗೆ ಸಹಾಯ,ಸಹಕಾರಗಳು ಲಭ್ಯವಾಗುವ ರೀತಿಯಲ್ಲಿ ಬಾಳಬೇಕು. ಆಗ ಮಾತ್ರ ಬದುಕಿನ ಸಾರ್ಥಕತೆ ಎಂದು ಶ್ರೀ ರಾಮಚಂದ್ರಾಪುರಮಠದ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಹೇಳಿದ್ದಾರೆ.ಇಂದು ಅಶೋಕೆಯಲ್ಲಿ ಚಾತುರ್ಮಾಸ್ಯದ ನಿಮಿತ್ತ ಹೊರನಾಡಿನ ಚೆನ್ನೈ ವಲಯದ ಶಿಷ್ಯಸಮುದಾಯದ ಶ್ರೀಗುರುದೇವತಾಸೇವೆಯನ್ನು ಹಾಗೂ ಗಾವಡಿ ಸಮಾಜದ ಶ್ರೀಗುರುಪಾದುಕಾಪೂಜೆಯನ್ನು ಸ್ವೀಕರಿಸಿ ಧರ್ಮಸಭೆಯಲ್ಲಿ ಅನುಗ್ರಹಸಂದೇಶವನ್ನು ನೀಡುತ್ತಿದ್ದ ಪೂಜ್ಯಶ್ರೀಗಳು ಎಷ್ಟು ವರ್ಷ ಬದುಕುತ್ತೇವೆನ್ನುವುದಕ್ಕಿಂತ ಯಾವರೀತಿಯಲ್ಲಿ ನಾವು ಬದುಕುತ್ತೇವೆಂಬುದು ಮುಖ್ಯ ಎಂದರು.
ಜೀವನವು ಒಂದುನೌಕೆಯಾದರೆ ಧಾರ್ಮಿಕತೆಯು ಅದರ ಮಾರ್ಗಸೂಚಿ.ನಾವು ಆಚರಿಸಿದ ಧರ್ಮ ಮಾತ್ರ ನಮ್ಮನ್ನು ಆಪತ್ಕಾಲದಲ್ಲಿ ಕಾಪಾಡುತ್ತದೆ ಎಂದು ನುಡಿದರು.ಇದೇ ಸಂದರ್ಭದಲ್ಲಿ ಗೋಕರ್ಣದ ಸಾರ್ವಭೌಮ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ನಡೆಯುತ್ತಿರುವ ಕೋಟಿರುದ್ರ ಕಾರ್ಯಕ್ಕೆ ನಾಡಿನ ಪ್ರತಿಷ್ಠಿತ ಕರ್ಣಾಟಕ ಬ್ಯಾಂಕ್ ಯೋಜಿಸಿರುವ ಇ-ಹುಂಡಿ ವ್ಯವಸ್ಥೆಯನ್ನು ಲೋಕಾರ್ಪಣೆಗೊಳಿಸಿದ ಪೂಜ್ಯಶ್ರೀಗಳು ವೇಗವಾಗಿ ಬೆಳೆಯುತ್ತಿರುವ ಇಂದಿನ ತಾಂತ್ರಿಕಜ್ಞಾನದ ಮುಖಾಂತರ ಮನೆಯಲ್ಲಿಯೇ ಕುಳಿತು ಶ್ರೀದೇವಾಲಯಕ್ಕೆ ಕಾಣಿಕೆಯನ್ನು ಸಮರ್ಪಿಸಬಹುದಾಗಿದ್ದು ಈ ಸೇವೆಯ ಲಾಭವನ್ನು ಎಲ್ಲರೂ ಪಡೆಯುವಂತಾಗಲೆಂದು ಆಶಿಸಿದರಲ್ಲದೆ ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷರಕಾಲದಿಂದಲೂ ಶ್ರೀಮಠಕ್ಕೂ ಮತ್ತು ಬ್ಯಾಂಕಿಗೂ ಇರುವ ಉತ್ತಮಸಂಬಂಧವನ್ನು ಸ್ಮರಿಸಿ ನಾಡಿನ ಜನತೆಗೆ ಹಣಕಾಸು ವಿಷಯದಲ್ಲಿ ಶ್ರೇಷ್ಠಸೇವೆಯನ್ನು ನೀಡುತ್ತಿರುವ ಕರ್ಣಾಟಕ ಬ್ಯಾಂಕಿಗೆ ಇನ್ನೂ ಹೆಚ್ಚಿನ ಶ್ರೇಯೋಭಿವೃದ್ಧಿಯನ್ನುಹಾರೈಸಿದರು. ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಜಯರಾಮ ಭಟ್ಟರು,ಡಿ.ಜಿ.ಎಮ್. ರಾಮಚಂದ್ರ ಭಟ್,ಬ್ಯಾಂಕಿನ ಮಾಜಿ ನಿರ್ದೇಶಕ ಭೀಮ ಭಟ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.ಶ್ರೀಸವಾರಿಯ ವ್ಯವಸ್ಥಾಪಕ ರಾಘವೇಂದ್ರ ಮಧ್ಯಸ್ಥರು ನಿರ್ವಹಿಸಿದರು.
ವರದಿ: ಸತ್ಯನಾರಾಯಣ ಶರ್ಮ
ವೈದೇಹೀ ಕಾದಂಬರಿ
ಹಿಂದಿನ ಸಂಚಿಕೆಯಿಂದ...
ಇದೆಲ್ಲ ತಾನು ಬೇಕಾಗಿಯೇ ತಂದುಕೊಂಡ ಸ್ಥಿತಿಯಲ್ಲವೇ? ಅಂತ ಅನಿಸುತ್ತದೆ. ಸಮಯ ನೋಡಿ ರುಕ್ಕುವಿಗೆ ಹೇಳಬೇಕು.ಪಾರ್ತಕ್ಕನ ಮಗ ಅಂಥದ್ದು ಮಾಡಿದ್ದಕ್ಕೆ ರುಕ್ಕು ಹಾಗೆ ಹೇಳಲು ಚಡಿ ಸಿಕ್ಕಿತು. ಇಲ್ಲವಾದರೆ ರುಕ್ಕುವಿಗಾದರೂ ಬಾಯಿ ಇರುತ್ತಿತ್ತಾ? ಅವಳಿಗೆ ಬಯ್ದು ಪ್ರಯೋಜನ ಉಂಟಾ? ರತ್ನ ಕೂಡ ಬಾಣಂತಿ ಕೋಣೆಯ ಕಂಡಿಯಿಂದ ಇಣುಕಿ ಜಗಳ ಕಾಣುತ್ತಿದ್ದಳು. ಸರೋಜ ಮಾತ್ರ ಈ ಜಗಳ ತನ್ನ ಕಿವಿಗೇ ಬೀಳಬಾರದು ಎಂಬಂತೆ ಅಚ್ಯುತಾಷ್ಟಕವನ್ನು ಜೋರಾಗಿ ಹೇಳುತ್ತಾ ಮಜ್ಜಿಗೆ ಕಡೆಯುತ್ತಿದ್ದಳು. ಸೊಳೆ ಬೇಯುತ್ತಿದೆ. ನಾವು ಕರೆಯುವವರೆಗೆ ಬೇಕಾದರೆ ಆಡಿಕೊಂಡಿರಿ ಎಂದದ್ದಕ್ಕೆ ಮಕ್ಕಳೆಲ್ಲ ಸಣ್ಣ ಉಪ್ಪರಿಗೆಯ ಕೆಳಗಿದ್ದ ಸಣ್ಣ ಕೋಣೆ ಸೇರಿದರು.ಗೌರಮ್ಮ ಬಾಣಂತಿ ಕೋಣೆಯಲ್ಲಿ ರತ್ನನ ಹತ್ತಿರ `ಬಾಣಂತಿ ಮನೆಯಲ್ಲಿ ಭೂತದ ಕತೆ ಯಾಕಪ್ಪ ಹೇಳಬೇಕು'?ಈ ಪಾರ್ತಕ್ಕನಿಗೆ ವರ್ಷವಾದದ್ದು ದಂಡಕ್ಕೆ.ಭೂತ ಮೆಟ್ಟಿಕೊಳ್ಳುವುದೇ ಹಸಿ ಬಾಣಂತಿಯರನ್ನು, ಚೂರಿ ಇಟ್ಟುಕೊಂಡಿದ್ದಿಯಲ್ಲ?'
`ಹ್ಹುಂ' - ಎಂದಳು ರತ್ನ,
ಸ್ವರದಲ್ಲಿ ತ್ರಾಣವೆಂಬುದಿರಲಿಲ್ಲ. ಹೆದರಿ ಹರಡಿಕೊಂಡಿತ್ತು.
`ಬಚ್ಚಲಿಗೆ, ಪಾಯಿಖಾನೆಗೆ ಎಲ್ಲಿ ಹೋಗುವುದಾದರೂ ಅದನ್ನು ಮಡಚಿ ಕೈಯಲ್ಲಿ ಇಟ್ಟುಕೊಂಡಿರು. ಅದೊಂದು ಮುಟ್ಸು ' -ಎಂದರು.
`ಹ್ಹುಂ'
ಅಲ್ಲಿಯೇ ಮಗುವಿನ ಬಟ್ಟೆ ಮಡಚುತ್ತ ಕುಳಿತಿದ್ದ ಸರೋಜನಿಗೆ ನಗೆ ಬಂತು.
`ಅಕ್ಕ, ಅಷ್ಟು ಹೆದರುವುದು ಯಾಕೆ? ಅಮ್ಮನೇನೋ ಹೇಳಿದಳು. ಆ ವಾತಾವರಣದಲ್ಲಿ ಬೆಳೆದು ಬಂದವಳು. ನೀನಾದರೂ ವಿಚಾರ ಮಾಡಬಹುದಲ್ಲ?'
ರತ್ನ ಕಣ್ಣು ಬಿಟ್ಟು ಸರೋಜನನ್ನು ನೋಡಿದಳೇ ವಿನಾ ಉಪ್ಪು ಉಪ್ಪಿನ ಕಲ್ಲೆನ್ನಲಿಲ್ಲ. ಬಿಟ್ಟ ಕಣ್ಣಲ್ಲಿ `ನೀನೂ ಒಂದು ದಿನ ಮಗುವನ್ನು ಹೆತ್ತು ಅರೆ ತ್ರಾಣಿಯಾಗಿ ಬಿಳಿಚಿಕೊಂಡು ಮಂಚದ ಮೇಲೆ ಮಲಗಿರು.ಆಗ ಅಂತಹದೆಲ್ಲ ಹೆದರಿಕೆ ಆಗತ್ತದೆಯ ಇಲ್ಲವ ನೋಡುತ್ತೇನೆ ' -ಎಂದು ... ಸರೋಜ ಮತ್ತೆ ನಕ್ಕಳು.
`ಸರೋಜ ದೊಡ್ಡ ಸಂಗ್ತಿಯಂತೆ ಮಾತಾಡುತ್ತಾಳೆ. ಎಲ್ಲ ಭಾಸ್ಕರಣ್ಣನ ನಕಲು ಹೊಡೆಯಲು ನೋಡುತ್ತಾಳೆ. ಸ್ವಂತ ಬುದ್ಧಿ ಇಲ್ಲ' - ಎಂದು ರತ್ನ ಸ್ವಲ್ಲ ಹೊತ್ತಿನ ಮೇಲೆ ಗೌರಮ್ಮನ ಹತ್ತಿರ ದೂರುಕೊಟ್ಟದ್ದಕ್ಕೆ `ನಂಗೆ ಗೊತ್ತಾಗುವುದಿಲ್ಲ ಅಂತ ಮಾಡಿದೆಯ? ಎಲ್ಲ ಗೊತ್ತಾಗುತ್ತದೆ.ಅದಕ್ಕೆ ತಾನೊಂದು ದೊಡ್ಡ ಜನ ಅಂತ ಮನಸ್ಸಿನಲ್ಲಿ ಹೊಕ್ಕಿಕೊಂಡಿದೆ. ಭಾಸ್ಕರ ಹಾಗೆ ಮಾಡಿದರೆ ಅವನಿಗೆ ಒಪ್ಪೀತು. ಇದಕ್ಕೆ ಒಪ್ಪುತ್ತದೆಯೇ?ಇದು ಪೂರ ಆಚೆಗೂ ಅಲ್ಲ, ಈಚೆಗೂ ಅಲ್ಲ.ಒಟ್ಟಾರೆ ಯಾರ ಕೈ ಮೇಲಾದರೂ ಇದನ್ನು ಹಾಕಿದನೇ ನಾ ಗೆದ್ದೆ' -ಎಂದರು.
ಮುಂದುವರಿಯುವುದು...
- ವೈದೇಹಿ.
ವೈವಿಧ್ಯ
ಈ ಕನಸು ಹಲೋಡಾಕ್ಟರ್ ಸರಣಿ ಕಾರ್ಯಕ್ರಮದಲ್ಲಿ ಓದುಗರು ಕೇಳಿದ ಪ್ರಶ್ನೆಯೊಂದು ಅತ್ಯಂತ ಪರಿಣಾಮಕಾರಿಯಾಗಿತ್ತು. ನಿದ್ರೆಯಲ್ಲಿ ಉಸಿರಾಣ ಸಂಪೂರ್ಣ ನಿಲ್ಲುವ ಖಾಯಿಲೆ ಬಗ್ಗೆ ಪ್ರಶ್ನೆ ಮೂಡಿತ್ತು. ಇದಕ್ಕೆ ನಮ್ಮ ವೈದ್ಯರು ಉತ್ತರ ನೀಡುತ್ತಾ ಇದೊಂದು ಅಪರೂಪದ ಖಾಯಿಲೆಯಾಗಿದೆ.ಇದಕ್ಕೆ ಗ್ರಿಂಡೆಲಿಯಾ ರೊಬಸ್ಟಾ 200 5ಗ್ರಾಂ. 5-0-0 ಬೆಳಗ್ಗೆ 1ರ ಪ್ರಮಾಣದಲ್ಲಿ ಸೇವಿಸುವುದು. ಆದರೆ ಪುನಃ ಇದರ ಲಕ್ಷಣವಿದ್ದರೆ ಮಾತ್ರ ಮುಂದುವರಿಸಬಹುದೆಂಬ ಸೂಚನೆ ನೀಡಿದ್ದಾರೆ. ನಿಮ್ಮ ಪ್ರಶ್ನೆಗಳಿದ್ದಲ್ಲಿ ನಮಗೆ ತಿಳಿಸಿ.info@ekanasu.com
ರಾಜ್ಯ - ರಾಷ್ಟ್ರ
ಶ್ರೀ ಶ್ರೀಗಳಿಂದ ಸಾರ್ವಭೌಮನಿಗೆ ಸುವರ್ಣಾರ್ಚನೆ
ಗೋಕರ್ಣ: ಅಶೋಕೆಯಲ್ಲಿ ಚಾತುರ್ಮಾಸ್ಯವ್ರತವನ್ನು ಆಚರಿಸುತ್ತಿರುವ ಶ್ರೀ ರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳವರು ತ್ರಯೋದಶಿಯ ಪ್ರದೋಷಪೂಜಾನಿಮಿತ್ತವಾಗಿ ಇಂದು ಶ್ರೀ ಕ್ಷೇತ್ರ ಗೋಕರ್ಣ ಮಹಾಬಲೇಶ್ವರ ದೇವಾಲಯವನ್ನು ಸಂದರ್ಶಿಸಿ ಸಾರ್ವಭೌಮನಿಗೆ ವಿಶೇಷಪೂಜೆಯನ್ನು ಸಲ್ಲಿಸಿದರು.
ಲಭ್ಯವಿರುವ ಮಾಹಿತಿಯಂತೆ ಇತ್ತೀಚಿನ ಶತಮಾನಗಳಲ್ಲಿ ಇದೇ ಮೊದಲಬಾರಿಗೆ ಪೂಜ್ಯಶ್ರೀಗಳು ಕ್ಷೇತ್ರಾಧೀಶ ಮಹಾಬಲೇಶ್ವರನಿಗೆ ಅಷ್ಟೋತ್ತರಶತ ಸುವರ್ಣ ನಾಣ್ಯಗಳು ಹಾಗೂ ರಜತ ನಾಣ್ಯಗಳಿಂದ ಕನಕಾಭಿಷೇಕ ಮತ್ತು ರಜತಾಭಿಷೇಕ ಸೇವೆಗಳನ್ನು ಸಮರ್ಪಿಸಿದರು. ಇದೇ ಸಂದರ್ಭದಲ್ಲಿ ಪೂಜ್ಯಶ್ರೀಗಳು ಶ್ರೀ ಮಹಾಗಣಪತಿ ದೇವಾಲಯ ಹಾಗೂ ಶ್ರೀ ತಾಮ್ರಗೌರಿ ದೇವಸ್ಥಾನಗಳನ್ನೂ ಸಂದರ್ಶಿಸಿ ವಿಶೇಷವಾದ ಅರ್ಚನೆಯನ್ನು ಸಲ್ಲಿಸಿದರು.
ಸಂಧ್ಯಾಕಾಲದಲ್ಲಿ ಸಮಾಗಮಿಸಿದ ಪೂಜ್ಯಶ್ರೀಗಳನ್ನು ದೇವಾಲಯದ ಪರವಾಗಿ ಜಿ.ಕೆ.ಹೆಗಡೆ ಗೋಳಗೋಡು ವೇ.ಶಿತಿಕಂಠ ಭಟ್ಟ ಹಿರೇ ಮೊದಲಾದ ಗಣ್ಯರು ಸ್ವಾಗತಿಸಿದರು.ಉಪಾಧಿವಂತಮಂಡಲದ ಪದಾಧಿಕಾರಿಗಳು ಸದಸ್ಯರು ಶ್ರೀಗಳ ಪೂಜಾಕೈಂಕರ್ಯದಲ್ಲಿ ಸಹಕರಿಸಿದರು. ಇಂದೇ ಪ್ರಾರಂಭಗೊಂಡ ಈ ಕನಕಾಭಿಷೇಕ ಹಾಗೂ ರಜತಾಭಿಷೇಕ ವಿಶೇಷಸೇವೆಗಳು ಇನ್ನು ಮುಂದೆ ಎಲ್ಲ ಆಸಕ್ತ ಆಸ್ತಿಕಭಕ್ತರಿಗೆ ಲಭ್ಯವಿರುತ್ತದೆಯೆಂದು ಶ್ರೀ ದೇವಾಲಯದ ಪ್ರಕಟಣೆಯು ತಿಳಿಸಿದೆ
ವರದಿ:ಸತ್ಯನಾರಾಯಣ ಶರ್ಮ
ಈ ಕನಸು ಅವಾರ್ಡ್
ಜೀವನವೊಂದು ತೂಗುಯ್ಯಾಲೆ
ಮೀಟಿ ಬದುಕುವುದು ಮಾನವನ ಕಲೆ
ಕಲೆಯೇ ಜೀವನದ ಬೆಲೆ
ಬೆಲೆ ಅರಿತಾಗ ಜೀವನವೊಂದು ನೆಲೆ
ಇದು ಕಥೆಯಲ್ಲ ಜೀವನ
ನಡೆಯುತ್ತದೆ ಜನನ ಮರಣ
ಅದರೊಳಗೆ ನಡೆಸಿ ಚಿಂತನ ಮಂಥನ
ಕೊನೆಗೊಮ್ಮೆ ಹೇಳಿ ನಮನ
ದರ್ಶನ್ ಬಿ.ಎಂ
ದ್ವಿತೀಯ ಪತ್ರಿಕೋದ್ಯಮ
ಆಳ್ವಾಸ್ ಕಾಲೇಜ್
ಮೂಡುಬಿದಿರೆ
ರಾಜ್ಯ - ರಾಷ್ಟ್ರ
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಪರಿಷತ್ ಸಭಾಪತಿ ಶಂಕರ ಮೂರ್ತಿ , ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್ ಶನಿವಾರ ಮೂಡಬಿದಿರೆಯ ಆಳ್ವಾಸ್ ಎಜುಕೇಷನ್ ಫೌಂಡೇಷನ್ ನ ಆಳ್ವಾಸ್ ಪದವಿ ಕಾಲೇಜಿಗೆ ಭೇಟಿನೀಡಿ ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ ಹಾಗೂ ಪಠ್ಯ ಪರಿಕರಗಳ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದರು. ಈ ಸಂದರ್ಭ ಆಳ್ವಾಸ್ ಎಜುಕೇಷನ್ ಫೌಂಡೇಷನ್ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ಆಳ್ವಾಸ್ ಸಂಸ್ಥೆಯ ಆಡಳಿತಾಧಿಕಾರಿ ಸ್ಮಿತಾ ಪಿ.ಐತಾಳ್, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ರಮೇಶ್ ಶೆಟ್ಟಿ ಉಪಸ್ಥಿತರಿದ್ದರು.
ಚಿತ್ರ: ಹರೀಶ್ ಕೆ.ಆದೂರು.
ಸಾಹಿತ್ಯ
ನಿಗೂಢ ಧಾರಾವಾಹಿ ಮೂರನೇ ಕಂತು ನಿಮ್ಮ ಮುಂದೆ ಇದೆ.ಈಗಾಗಲೇ ಎರಡು ಕಂತುಗಳಿಗೆ ನಿಮ್ಮ ಉತ್ತಮ ಸ್ಪಂದನೆ ನಮಗೆ ದೊರೆಕಿದೆ.ಅದಕ್ಕಾಗಿ ಓದುಗ ಮಿತ್ರರಿಗೆ ಕೃತಜ್ಞತೆಗಳು.ಮುಂದೆಯೂ ನಿಮ್ಮ ಸಂಪೂರ್ಣ ಸಲಹೆ,ಸೂಚನೆ ಮಾರ್ಗದರ್ಶನಗಳು ನಮ್ಮ ಮೇಲಿರಲಿ...
ರಾಜ್ಯ - ರಾಷ್ಟ್ರ
ದಿನೇ ದಿನೇ ಪೆಟ್ರೋಲ್ , ಡೀಸೆಲ್ ಬೆಲೆ ಏರುತ್ತಿದೆ.ಭಾರತೀಯರು ತಲೆ ಕೆರೆದುಕೊಳ್ಳುತ್ತಿದ್ದಾರೆ.ಈ ಪರಿ ಇಂಧನ ದುಬಾರಿ ಆದರೆ ಹೇಗೆ ಎಂಬ ಚಿಂತೆ ಎಲ್ಲರನ್ನೂ ಕಾಡಿದೆ.ಏತನ್ಮಧ್ಯೆ ಅಮೆರಿಕಾದಲ್ಲಿ ಸೋಲಾರ್ ಕಾರ್ ಬಗ್ಗೆ ಚಿಂತನೆ ನಡೆಯತೊಡಗಿದೆ. ಸಂಪೂರ್ಣ ಸೋಲಾರ್ ಪ್ಯಾನಲ್ ಹೊಂದಿದ ಕಾರುಗಳು ಈಗಾಗಲೇ ರೂಪುಗೊಳ್ಳತೊಡಗಿದೆ. ಇದೀಗ ಪ್ರಯೋಗಾರ್ಥ ಇಂತಹ ಕಾರು ನಿರ್ಮಾಣಗೊಂಡಿದೆ. ಮುಂದಿನ ದಿನಗಳಲ್ಲಿ ಈ ಕಾರುಗಳು ರಸ್ತೆಯಲ್ಲಿ ರಾಜಾರೋಷವಾಗಿ ಓಡಾಡಲಿದೆ.
ಒಂದು ಬಾರಿ ಒಂದಷ್ಟು ಖರ್ಚು ಹಾಕಿದರೆ ಮತ್ತೇನೂ ಖರ್ಚಿಲ್ಲ. ಪ್ರತಿದಿನ ಇಂಧನ ಹಾಕೋ ಖರ್ಚೂ ಇಲ್ಲ...ಏನೇ ಆಗ್ಲಿ ಭಾರತದ ಮಾರುಕಟ್ಟೆಗೂ ಇಂತಹ ಕಾರು ಆದಷ್ಟು ಬೇಗ ಕಾಲಿಡಲಿ ಎಂಬುದು ಕಾರು ಪ್ರಿಯರ ಆಸೆ.
ರಾಜ್ಯ - ರಾಷ್ಟ್ರ
ಮೂಡಬಿದಿರೆ: ಆಳ್ವಾಸ್ ಎಜುಕೇಷನ್ ಫೌಂಡೇಷನ್ , ಬೆಲ್ಜಿಯಂನ ಘೆಂಟ್ ವಿ.ವಿ.ಯ ತೌಲನಿಕ ಸಂಸ್ಕೃತಿ ವಿಜ್ಞಾನ ಕೇಂದ್ರ ಹಾಗೂ ಕುವೆಂಪು ವಿ.ವಿ.ಯ ಪ್ರಾದೇಶಿಕ ಸಂಸ್ಕೃತಿಗಳ ಅಧ್ಯಯನ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಸಮಾಜ ವಿಜ್ಞಾನ ಕುರಿತ ಒಂದು ದಿನದ ಅಂತಾರಾಷ್ಟ್ರೀಯ ಕಾರ್ಯಾಗಾರ ಮೂಡಬಿದಿರೆ ಆಳ್ವಾಸ್ ಎಜುಕೇಷನೌ ಫೌಂಡೇಷನ್ ನ ಶಿವರಾಮ ಕಾರಂತ ವೇದಿಕೆಯಲ್ಲಿ ನಡೆಯಿತು.ಕಾರ್ಯಾಗಾರವನ್ನು ಆಳ್ವಾಸ್ ಎಜುಕೇಷನ್ ಫೌಂಡೇಷನ್ ಟ್ರಸ್ಟಿ ವಿವೇಕ್ ಆಳ್ವ ಉದ್ಘಾಟಿಸಿ, ಅಗಾಧವಾದ ಭಾರತೀಯ ಸಂಸ್ಕೃತಿಯ ಕುರಿತಾದ ಅಧ್ಯಯನಗಳು ಪ್ರಸ್ತುತವಾಗಿದೆ. ಯುವ ಜನತೆ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕಾಗಿದೆ. ಸಂಸ್ಕೃತಿ, ಸಂಸ್ಕಾರಗಳ ಮಹತ್ವವನ್ನು ಇಂದಿನ ಜನ ತಿಳಿದುಕೊಳ್ಳಬೇಕಾಗಿದೆ. ಕಲೆ, ಸಂಸ್ಕೃತಿ, ಸಾಹಿತ್ಯಕ್ಕೆ ಆಳ್ವಾಸ್ ಸಂಸ್ಥೆ ಪೂರಕ ಸಹಕಾರ ನೀಡುತ್ತಾ ಬಂದಿದೆ ಎಂದರು.
ಬೆಲ್ಜಿಯಂನ ಘೆಂಟ್ ವಿ.ವಿ.ಯ ತೌಲನಿಕ ಸಂಸ್ಕೃತಿ ವಿಜ್ಞಾನ ಕೇಂದ್ರದ ಪ್ರಾಧ್ಯಾಪಕ ಪ್ರೊ.ಎಸ್.ಎನ್ ಬಾಲಗಂಗಾಧರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಉತ್ತಮ ವಿಷಯಗಳು ಪ್ರತಿಯೊಂದು ಸಂಸ್ಕೃತಿಯಲ್ಲೂ ಇವೆ. ಪಾಶ್ಚಿಮಾತ್ಯ ಸಂಸ್ಕೃತಿಯ ಕುರಿತಾಗಿ ಭಾರತೀಯರಿಗೆ ಮಾಹಿತಿಯಿಲ್ಲ. ಮಾತ್ರವಲ್ಲದೆ ನಮ್ಮ ಸಂಸ್ಕೃತಿ ಏನೆಂಬುದನ್ನು ಪಾಶ್ಚಿಮಾತ್ಯರು ಹೇಳಿದ್ದಾರೆ.ಅವರು ಹೇಳಿದ್ದೇ ಪರಮ ಸತ್ಯ ಎಂಬ ನಿಟ್ಟಿನಲ್ಲಿ ನಾವು ಅನುಸರಿಸುತ್ತಿದ್ದೇವೆ. ಒಟ್ಟಾರೆಯಾಗಿ ತ್ರಿಶಂಕು ಸ್ಥಿತಿಯಲ್ಲಿ ಭಾರತೀಯರಿದ್ದಾರೆ ಎಂದರು.
ಪಾಶ್ಚಾತ್ಯರು ಹೇಳಿದ್ದನ್ನೇ ಸರಿ ಎಂದು ನಂಬಿ ಇಂದಿನ ಪಠ್ಯವಿಚಾರಗಳು ರೂಪುಗೊಂಡಿವೆ ಎಂಬ ಖೇದ ವ್ಯಕ್ತಪಡಿಸಿದರು. ಭಾರತದಲ್ಲಿರುವ ನಾವು ಭಾರತವನ್ನು ಹೇಗೆ ಅರ್ಥೈಸಿಕೊಂಡಿದ್ದೇವೆಂದರೆ "ಬಿಟ್ರಿಷರು ಹೇಳಿದ್ದನ್ನು"ನಾವು ನಂಬುವ ರೀತಿಯಲ್ಲಾಗಿದೆ ಎಂದರು. ಬ್ರಿಟಿಷರು ಅವರ ಅಭಿಪ್ರಾಯವನ್ನು ಹೇಳಿದ್ದರೇ ಹೊರತು ಸತ್ಯವನ್ನಲ್ಲ ಎಂಬುದನ್ನು ನಾವು ಅರ್ಥೈಸಿಲ್ಲ ಎಂದರು.
ಕುವೆಂಪು ವಿ.ವಿಯ ಪ್ರಾಧ್ಯಾಪಕ ಡಾ.ರಾಜಾರಾಂ ಹೆಗಡೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಆಳ್ವಾಸ್ ಎಜುಕೇಷನ್ ಫೌಂಡೇಷನ್ ಆಡಳಿತಾಧಿಕಾರಿ ಸ್ಮಿತಾ ಪಿ.ಐತಾಳ್ ಸ್ವಾಗತಿಸಿದರು. ಉಪನ್ಯಾಸಕ ಯೋಗೀಶ್ ಕೈರೋಡಿ ಕಾರ್ಯಕ್ರಮ ನಿರ್ವಹಿಸಿದರು. ಡಾ.ಧನಂಜಯ ಕುಂಬ್ಳೆ ವಂದಿಸಿದರು.
ವಾರೆನ್ ಬಫೆಟ್ ಉಪದೇಶದ ಸಾರಾಂಶ
ಸಂಪಾದನೆ:
ಒಂದೇ ಕಡೆಯಿಂದ ಬರುತ್ತಿರುವ ಸಂಪಾದನೆಯ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಬೇಡಿ. ನಾಳೆ ಅದು ಆಕಸ್ಮಿಕವಾಗಿ ನಿಂತು ಹೋದರೆ ಜೀವನ ನಡೆಸುವುದು ನಿಮಗೆ ಕಷ್ಟವಾಗಬಹುದು. ನಿಮ್ಮ ಮೂಲ ಸಂಪಾದನೆ ಹೊರತು ಪಡಿಸಿ, ಬೇರೊಂದು ಸಂಪಾದನೆಯ ಝರಿ ಮಾಡಿ. ಕಷ್ಟದ ಸಮಯದಲ್ಲಿ ಸಹಾಯವಾಗುತ್ತದೆ. (ಉದಾಹರಣೆಗೆ ಪಾರ್ಟ್ ಟೈಂ ಕೆಲಸವಾಗಿರಬಹುದು,ಆಟೋ ಅಥವಾ ಕಾರು ಬಾಡಿಗೆಗೆ ಬಿಟ್ಟಿರಬಹುದು,ಬಂಡವಾಳ ಹೂಡಿಕೆ ಇರಬಹುದು, ಇನ್ನಿತರೆ ನ್ಯಾಯಯುತ ಸಂಪಾದನೆಯ ದಾರಿಗಳಾಗಿರಬಹುದು. ಒಟ್ಟಿನಲ್ಲಿ ಕಡಿಮೆಯೋ ಅಥವಾ ಹೆಚ್ಚೋ ಹಣ ಹರಿದುಕೊಂಡು ನಿಮ್ಮತ್ತ ಬರುತ್ತಿರಬೇಕು.)
ಖರ್ಚು:
ಅನಾವಶ್ಯಕ ವಸ್ತುಗಳನ್ನು ಖರೀದಿಸಬೇಡಿ. ಇಲ್ಲವಾದಲ್ಲಿ ಒಂದು ದಿನ ನಿಮಗೆ ಬೇಕಾದ ವಸ್ತುಗಳನ್ನು ಮಾರಬೆಕಾಗುತ್ತದೆ. (ನೆರೆಹೊರೆಯವರಿಗೆ,ನೆಂಟರಸ್ಥರಿಗೆ ಟೊಳ್ಳು ಶ್ರೀಮಂತಿಕೆ ತೋರಿಸಿಕೊಳ್ಳಲು ಸಾಲ ಮಾಡಿ, ಬಡ್ಡಿ ಕಟ್ಟಿ, ಚಕ್ರಬಡ್ಡಿ ಕಟ್ಟಿ, ಮನಃಶಾಂತಿ ಕೆಡಿಸಿಕೊಂಡು ಪಡಬಾರದ ಭಾದೆ ಪಡಬೇಡಿ)
ಜಮಾ:
ಖರ್ಚಾದ ಮೇಲೆ ಉಳಿಯುವುದು ಉಳಿತಾಯವಲ್ಲ. ಉಳಿತಾಯ ಮಾಡಿದ ಮೇಲೆ ಖರ್ಚನ್ನು ಮಾಡಿ.
ಸಾಲ:
ಸಾಲಗಾರ ಮಾಲಿಕನ ಗುಲಾಮನಾಗಿರುತ್ತಾನೆ. ತಂದೆತಾಯಿಯ ಮುಂದೆ ಗುರುಹಿರಿಯರ ಮುಂದೆ ತಲೆ ತಗ್ಗಿಸುವುದಿಲ್ಲ. ಆದರೆ ಮಾಲೀಕನ ಮುಂದೆ ಗೂಬೆ ತರಹ, ಕೈಕಟ್ಟಿಕೊಂಡು, ಹೇಳಿದ್ದನ್ನು ಸಹಿಸಿಕೊಂಡು ಅಮಾಯಕನಾಗಿ ನಾಚಿಕೆಯಿಂದ ನಿಂತಿರುತ್ತಾನೆ.
ಲೆಕ್ಕಚಾರ:
ಸಂಪಾದನೆ ವ್ಯರ್ಥವಾಗಿ ಎಲ್ಲಿ ಸೋರಿ ಹೋಗುತ್ತಿದೆ ಎಂಬುದರ ಬಗ್ಗೆ ನಿಗಾ ಇರಲಿ. ನೀರಿನ ತೊಟ್ಟಿಯಲ್ಲಿ ಬಿದ್ದಿರುವ ತೂತನ್ನು ಮುಚ್ಚದೆ ಹೋದರೆ, ಅಲ್ಲಿ ಎಷ್ಟು ನೀರನ್ನು ಕೂಡಿಟ್ಟರೂ, ನೀರು ನಿಲ್ಲುವುದಿಲ್ಲ. ಕುಡಿಯಲ್ಲಿಕ್ಕೂ ಸಹ ನೀರು ಸಿಗದೇ ಹೋಗಬಹುದು.
ಆಡಿಟ್:
ಒಂದು ಸಣ್ಣ ತೂತು ಹಡಗನ್ನೇ ಮುಳುಗಿಸಿ ಬಿಡಬಹುದು. ನಿಮ್ಮ ಚಿಲ್ಲರೆ ಖರ್ಚುಗಳ ಮೇಲೆ ಜಾಗರೂಕತೆ ಇರಲಿ.
ರಿಸ್ಕ್:
ನದಿಯ ಆಳವನ್ನು ಎರಡೂ ಕಾಲುಗಳಿಂದ ಅಳೆಯಲು ಹೋಗಬೇಡಿ. ಆಳ ಎಷ್ಟಿದೆ ಎನ್ನುವುದು ನಮಗೆ ಗೊತ್ತಿಲ್ಲ. ತಿಳಿದಿರ ದುಮುಕಿಬಿಟ್ಟರೆ ಹಾನಿಯೂ ಆಗಬಹುದು. ಯಾವುದೇ ವಿಷಯದಲ್ಲಾಗಲಿ ಮುಂದಾಲೋಚಿತವಾಗಿ ಪರ್ಯಾಯ ಮಾರ್ಗವನ್ನು ಮನಸ್ಸಿನಲ್ಲಿಟ್ಟುಕೊಂಡಿರಬೇಕು.
ಹೂಡಿಕೆ:
ಎಲ್ಲಾ ಮೊಟ್ಟೆಗಳನ್ನು ಒಂದೇ ಬುಟ್ಟಿಯಲ್ಲಿ ಹಾಕಬೇಡಿ. ಕೈಬಿಟ್ಟರೆ ಎಲ್ಲಾ ಮೊಟ್ಟೆಗಳು ಒಡೆದು ಹೋಗುತ್ತವೆ. ಒಂದೇ ಕಡೆ ನೀವು ಸಂಪಾದನೆ ಹೂಡುವುದು ಸರಿಯಲ್ಲ. ಮೋಸ ಹೋಗಬಹುದು. ರಕ್ತ ಸಂಬಂಧಿಕರೇ ಕೈಕೊಟ್ಟು ಬಿಡುತ್ತಾರೆ. ಪರರನ್ನು ನಂಬುವುದು ಹೇಗೆ?
ಜಿಪುಣರಾಗಬೇಡಿ. ಮಕ್ಕಳಿಗೆ ಹಣ ದಾನ ಮಾಡುವುದನ್ನು ಕಲಿಸಿ ಮತ್ತು ಹಣವನ್ನು ಕೂಡಿಡುವುದನ್ನು ಸಹ ಕಲಿಸಿ. ಇಲ್ಲವಾದಲ್ಲಿ ಹಣವಿರುವಾಗ ಅತಿಯಾಗಿ ಖರ್ಚು ಮಾಡಿ, ಹಣವಿಲ್ಲದಿರುವಾಗ ಬೇರೆಯವರ ಮುಂದೆ ಕೈಚಾಚಿ ಪರದಾಡುವ ಪರಿಸ್ಥಿತಿ ಉಂಟಾಗಬಹುದು.
ಖಲೀಫ ಅಬ್ದುಲ್ ಅಜೀಜ್ ಕಾಲದಲ್ಲಿ (717-720 ಸಿ.ಇ.) ಡಮಾಸ್ಕಸ್ ರಾಜ್ಯದಲ್ಲಿ ಬಡತನವೇ ಇರಲಿಲ್ಲ. ಜಕಾತ್ ಹಣವನ್ನು ತೆಗೆದುಕೊಳ್ಳುವವರು ಯಾರೂ ಇರಲಿಲ್ಲ. ಅಂದರೆ ಎಲ್ಲರೂ ಶ್ರೀಮಂತರಾಗಿದ್ದರು. ಆದುದರಿಮದ ಹಣವನ್ನು ಯೂರೋಪ್ನಲ್ಲಿ ಜೀತಾಳುಗಳನ್ನು ಬಿಡುಗಡೆಗೊಳಿಸಲು ಕಳುಹಿಸಲಾಗುತ್ತಿತ್ತು.
ಜಕಾತ್ ಹಣವೆಂದರೆ - ಪ್ರತಿಯೊಬ್ಬ ಧನಿಕ ಮುಸ್ಲಿಮನ ಮೇಲೆ ಅವನ ಬಳಿ ಕನಿಷ್ಟ ನಲವತ್ತು ರೂಪಾಯಿಗಳಿದ್ದು ಅದರ ಮೇಲೆ ಒಂದು ವರ್ಷ ಕಳೆದಿದ್ದರೆ, ಅದರಿಂದ ಒಂದು ರೂಪಾಯಿಯನ್ನು ಒಬ್ಬ ಬಡ ಸಂಬಂಧಿಕ, ಒಬ್ಬ ಅಪೇಕ್ಷಿತ ವ್ಯಕ್ತಿ, ಒಬ್ಬ ದರಿದ್ರ, ಒಬ್ಬ ಪ್ರಯಾಣಿಕ ಅಥವಾ ಒಬ್ಬ ಸಾಲಗಾರನಿಗೆ ನೀಡುವುದನ್ನು ದೇವರು ಕಡ್ಡಾಯ ಗೊಳಿಸಿರುತ್ತಾನೆ. ಈ ರೀತಿ ದೇವರು ಧನಿಕರ ಸೊತ್ತಿನಲ್ಲಿ ಕನಿಷ್ಟ ಪಕ್ಷ ಎರಡೂವರೆ ಶೇಕಡವನ್ನು ಬಡವರ ಪಾಲೆಂದು ನಿಶ್ಚಯಿಸಿರುವನು. ಇದಕ್ಕಿಂತ ಹೆಚ್ಚಿನದನ್ನು ಯಾರಾದರೂ ನೀಡಿದರೆ ಇದು ಅವರ ಉದಾರತೆಯಾಗಿದ್ದು ಅವನಿಗೆ ಅದಕ್ಕೆ ಖಂಡಿತ ಅಧಿಕ ಪುಣ್ಯಫಲ ಸಿಗುವುದು. ಶ್ರೀಮಂತರ ಸೊತ್ತಿನ ಈ ಅಂಶವು ದೇವರಿಗೆ ತಲುಪುವುದಿಲ್ಲ. ಅವನು ನಮ್ಮಿಂದ ಯಾವ ವಸ್ತುವನ್ನೂ ಅಪೇಕ್ಷಿಸುವುದಿಲ್ಲ. ಆದರೆ ನಾವು ಸನ್ಮನಸ್ಸಿನಿಂದ ಬಡವರಿಗೆ ನೀಡಿದರೆ ಅದು ಅವನಿಗೆ ನೀಡಿದಂತೆ. ಆದರೆ ಅದನ್ನು ಕೊಟ್ಟು ನಾವು ಅವರ ಮೇಲೆ ಉಪಕಾರ ಭಾವಿಸಬಾರದು. ಅವರನ್ನು ನಿಂದಿಸಬಾರದು, ಅಪಮಾನಿಸಬಾರದು. ಅವರಿಂದ ಕೃತಜ್ಞತೆಯನ್ನು ಬಯಸಬಾರದು. ನಿಮ್ಮ ಈ ಕೊಡುಗೆಯ ಬಗ್ಗೆ ಜನರಲ್ಲಿ ಚಚರ್ೆಯಾಗಿ ಅವರು ನಮ್ಮನ್ನು ದೊಡ್ಡ ಕೊಡುಗೈ ದಾನಿಯೆಂದು ಹೊಗಳಬೇಕೆಂದು ಬಯಸಬಾರದು - ಎಂದು ದೇವರು ಹೇಳುತ್ತಾನೆ.
ಶ್ರಮಪಡಿ. ಸೋಮಾರಿತನ ಬಿಡಿ. ಸಂಪಾದನೆ ಮಾಡಿ.
- ಜಬೀವುಲ್ಲಾ ಖಾನ್
ರಾಜ್ಯ - ರಾಷ್ಟ್ರ
ಸಮಾಜದ ಡೊಂಕನ್ನು ತಿದ್ದುವಮೊದಲು ನಮ್ಮೊಳಗಿನ ಡೊಂಕನ್ನು ತಿದ್ದಿಕೊಳ್ಳಬೇಕು.ಈ ಮಾತು ಇಂದು ಅಕ್ಷರಶಃ ಸತ್ಯ.
ಮಾಧ್ಯಮಗಳು ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸುವ ಮಂದಿ (ಖಂಡಿತಾ ಉತ್ತಮ ಭಾವನೆ ಹೊಂದಿದ ಅನೇಕ ಮಾಧ್ಯಮ ಮಿತ್ರರಿದ್ದಾರೆ.ಅವರನ್ನು ಹೊರತು ಪಡಿಸಿ, ಅಂತಹ ಮಾಧ್ಯಮಗಳನ್ನು ಹೊರತು ಪಡಿಸಿ) ಉಳಿದಂತಹ ಅನೇಕ ಮಂದಿ ಇಂದು ಭ್ರಷ್ಟಾಚಾರದಲ್ಲಿ ಭಾಗಿಗಳಾಗಿದ್ದಾರೆ.ಈ ಬಗ್ಗೆ ಇತ್ತೀಚೆಗೆ ಪ್ರಜಾವಾಣಿ ದಿನ ಪತ್ರಿಕೆ ಮುಖಪುಟದಲ್ಲಿ ವರದಿ ಮಾಡಿದ್ದನ್ನು ಉಲ್ಲೇಖಿಸಬಹುದು. ತಮ್ಮ ಸಂಪಾದಕೀಯ ಬರಹದಲ್ಲೋ ಅಥವಾ ಕಾಲಂ ಬರಹಗಳಲ್ಲೋ, ಇಡೀ ಪತ್ರಿಕೆಯಲ್ಲೋ ದೊಡ್ಡ ದೊಡ್ಡದಾಗಿ ಬೇರೆಯವರ ಹುಳುಕನ್ನು ಎತ್ತಿ ತೋರಿಸುತ್ತಿದ್ದ "ದೊಡ್ಡ ದೊಡ್ಡ" ಪತ್ರಕರ್ತರು ಇಂತಹ ಹೀನ ಕೃತ್ಯಕ್ಕೆ ಕೈ ಯಿಕ್ಕಿ ಇಡೀ ಮಾಧ್ಯಮ ಸಮೂಹವನ್ನೇ "ಕೆಟ್ಟ" ದೃಷ್ಠಿಯಿಂದ ಜನತೆ ನೋಡುವಂತೆ ಮಾಡಿದ್ದಾರೆ. ಇದರಿಂದಾಗಿ ಅತ್ಯಂತ ನಿಷ್ಟಾವಂತ ಮಾಧ್ಯಮ ಮಂದಿ ಮುಜುಗರಪಡುವಂತಾಗಿದೆ.
ಮಾಧ್ಯಮ ರಂಗ ಎಂದು "ಉದ್ಯಮ"ವಾಗಿ ಪರಿವರ್ತನೆಯಾಯಿತೋ ಅಂದಿನಿಂದ ಮಾಧ್ಯಮಕ್ಕೆ ಕಳಂಕ ಕಟ್ಟಿಟ್ಟ ಬುತ್ತಿ. ಜೊತೆಗೆ ಇಂತಹ ಭ್ರಷ್ಟ ಪತ್ರಕರ್ತರಿಂದಾಗಿ ಮತ್ತೆ ಮಾಧ್ಯಮ ಲೋಕ ಅಲ್ಪರಾಜಕಾರಣಿಗಳ ತಾತ್ಸಾರಕ್ಕೆ ಗುರಿಯಾಗುವಂತಾಗಿದೆ. ಕೆಲಸ ಮಾಡಿದ್ದಕ್ಕೆ ಸರಿಯಾದ ವೇತನವನ್ನು ಆಯಾಯ ಸಂಸ್ಥೆ ನೀಡಿಯೇ ನೀಡುತ್ತವೆ. ಅದಕ್ಕಿಂತ ಹೆಚ್ಚಿನ ದುರಾಸೆಯಿಂದಾಗಿ ಈ ರೀತಿಯ ಅನಾಹುತಗಳು ಎದುರಾಗುತ್ತವೆ. ಇದು ಇತರ ಸಂಸ್ಥೆಗಳಲ್ಲಾಗುತ್ತಿವೆ. ಆದರೆ ಸಂವಿಧಾನದ ನಾಲ್ಕನೇ ಅಂಗ ಎಂದು ಗುರುತಿಸಲ್ಪಟ್ಟಿರುವ, ಸಮಾಜದಲ್ಲಿ ಪ್ರತಿಷ್ಠಿತ ಸ್ಥಾನ ಮಾನ ಹೊಂದಿರುವ ಮಾಧ್ಯಮ ಕ್ಷೇತ್ರದಲ್ಲೂ ಈ ರೀತಿಯ ಕೆಟ್ಟ ಚಾಳಿ ಅಂಟಿರುವುದು, ವ್ಯಾಪಿಸುತ್ತಿರುವುದು ಮಾತ್ರ ಸರಿಯಲ್ಲ.
ಒಂದು ಉದಾಹರಣೆಯನ್ನಷ್ಟೇ ಇಲ್ಲಿ ನೀಡಬಯಸುತ್ತೇವೆ. ಅಕ್ರಮ ಗಣಿಗಾರಿಕೆ ವಿಷಯದಲ್ಲಿ ಯು.ವಿ.ಸಿಂಗ್ ವರದಿಯಲ್ಲಿ ಉಲ್ಲೇಖಿಸಲ್ಪಟ್ಟ ಎಲ್ಲ ಪತ್ರಕರ್ತರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ. ಅಷ್ಟು ಮಾತ್ರವಲ್ಲದೆ ಅಂತಹ ಪತ್ರಕರ್ತರು ಒಂದು ಕ್ಷಣವೂ ಆ ಸ್ಥಾನದಲ್ಲಿ ಮುಂದುವರಿಯುವ ನೈತಿಕ ಹಕ್ಕು ಹೊಂದಿಲ್ಲ ಎಂಬ ಮಾತು ಹೇಳಿದ್ದಾರೆ. ಛೇ...ಇಷ್ಟು ಸಾಲದೇ... ಬೇರೆಯವರು ತಪ್ಪು ಮಾಡಿದರೆ ಸುಮ್ಮನೆ ಬಿಡುತ್ತೀರಾ ಎಂಬ ಚುಚ್ಚು ಮಾತನ್ನೂ ಉಗ್ರಪ್ಪ ಆಡಿದ್ದಾರೆ.
ಮರ್ಯಾದೆ ಇದ್ದವರಿಗೆ ಇಷ್ಟು ಸಾಲದೇ???
ಪ್ರಾದೇಶಿಕ ಸುದ್ದಿ
ಮೂಡಬಿದಿರೆ ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಮೌಲ್ಯಜೀವನ್ ತಮಿಳುನಾಡಿನ ಸೇಲಂ ವಿನಾಯಕ ಮಿಷನ್ಸ್ ವಿಶ್ವವಿದ್ಯಾಲಯದಿಂದ ಎಂಫಿಲ್ ಪದವಿಯನ್ನು ಪಡೆದರು. "ರೋಲ್ ಆಫ್ ಫೋಕ್ ಮೀಡಿಯ ಇನ್ ಡೆವಲಪ್ಮೆಂಟ್-ಎ ಸ್ಟಡಿ ಆಫ್ ಸೌತ್ ಕೆನರ" ಎಂಬ ವಿಷಯದಲ್ಲಿ ಮಂಗಳೂರು ವಿಶ್ವವಿದ್ಯಾಲಯ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾಗಿದ್ದ ಕೆ.ವಿ.ನಾಗರಾಜ್ ಮಾರ್ಗದರ್ಶನದಲ್ಲಿ ಅಧ್ಯಯನ ನಡೆಸಿದ್ದರು.
ಕ್ಲಿಕ್...
ಮಳೆಗಾಲದ ಆಗಸ ಅದೆಷ್ಟು ಚಂದ...ನೋಡುಗರ ದೃಷ್ಠಿಯಲ್ಲಿ ಒಂದೊಂದು ಚಿತ್ತಾರ ಕಾಣಸಿಗುತ್ತದೆ...
ಮೋಹಕ ಆಗಸದ ಸುಂದರ ದೃಶ್ಯ ನಿಮಗೇನನ್ನಿಸಿತು...?
ಚಿತ್ರ: ಹರೀಶ್ ಕೆ.ಆದೂರು.
ವಿಚಾರ
ಎಲ್ಲವೂ ಹಣವಲ್ಲ ಆದರೆ ಹಣವಿಲ್ಲದೆ ಹೆಣವೂ ಏಳುವುದಿಲ್ಲ
ಮೇಷ್ಟ್ರೆ...! ಮದುವೆ ವಯಸ್ಸಾಯಿತು... ಆದರೂ ಈ ಹುಡುಗರು ಇನ್ನೂ ಯಾವ ಕೆಲಸವನ್ನು ಜವಾಬ್ದಾರಿಯಿಂದ ಸರಿಯಾಗಿ ನಿಭಾಯಿಸುತ್ತಿಲ್ಲ ನೋಡಿ. ಸ್ವಲ್ಪ ನೀವೇ ಏನಾದರು ಇವರಿಗೆ ಹೇಳಿ. ನಾನಂತು ಹೇಳಿ ಹೇಳಿ ಸಾಕಾಯಿತು. ನಾಲ್ಕು ಕಾಸು ಸಂಪಾದನೆ ಮಾಡಿದರೆ ಅಲ್ಲವೇ...
ಯಾಕ್ರಪ್ಪಾ...ನಿಮ್ಮ ತಂದೆ ಮಾತನ್ನು ಸ್ವಲ್ಪ ಕೇಳ್ರೋ...ಹಣಕಾಸು ಪೀಡಿತ ಖಾಯಿಲೆಗಳು ನಮ್ಮ ಕುಟುಂಬಗಳನ್ನು, ಸಂಸ್ಥೆಗಳನ್ನು ಮತ್ತು ದೇಶಗಳನ್ನು ನುಂಗುತ್ತಿವೆ. ಈ ಖಾಯಿಲೆಗಳಿಗೆ ಪ್ರತಿಯೊಬ್ಬರು ಔಷದ ನುಂಗಿದರೆ ಮಾತ್ರ " ಸ್ವಸ್ಥ ಹಣಕಾಸಿನ ವಹಿವಾಟು" ಸಾಧ್ಯ. ಇಲ್ಲವಾದಲ್ಲಿ ಅತಿಯಾಗಿ ಪೀಡಿತವಾಗುವುದು ನಮ್ಮಂತಹ ಮಧ್ಯಮ ವರ್ಗ ಮತ್ತು ಬಡತನದ ರೇಖೆಯ ಕೆಳಗಿರುವ ವರ್ಗಗಳು ಮಾತ್ರ.
ಹೆಮ್ಮೆಯಿಂದ ನಿಮ್ಮ ಕೆಲಸ ನೀವು ಮಾಡಿದರೆ, ಅದು ನಿಮ್ಮ ಪ್ರಗತಿಗೆ ದಾರಿಯಾಗುತ್ತದೆ. ನಿಮ್ಮಲ್ಲಿರುವ ನಿಪುಣತೆ ಜನರನ್ನು ನಿಮ್ಮತ್ತ ಆಕರ್ಷಿಸುತ್ತದೆ. ನಿಮ್ಮತ್ತ ಜನ ಬಂದರೆ ಜೊತೆಯಲ್ಲಿ "ಹಣ"ವೂ ಹರಿದು ಬರುತ್ತದೆ. ಮನೆಗಳಿಗೆ ಬಣ್ಣ ಬಳೆಯುವ ಕೆಲಸವಾಗಿರುಬಹುದು, ಕಾರುಗಳನ್ನು ವಾಷ್ ಮಾಡುವುದಾಗಿರಬಹುದು, ನೆಲ ಗುಡಿಸುವುದಾಗಿರಬಹುದು, ಮನೆಗೆಲಸ, ಗಾರೆಕೆಲಸ, ಕಛೇರಿ ಕೆಲಸ, ಟೈಲರಿಂಗ್, ಮೊಬೈಲ್ ಸರ್ವೀಸ್ , ಕಂಪ್ಯೂಟರ್ ಸರ್ವೀಸ್ , ಗಡಿಯಾರ ಸರ್ವೀಸ್, ಎ.ಸಿ. ಸರ್ವೀಸ್, ಮೆಕಾನಿಕ್ ಕೆಲಸ ಅಥವಾ ಇನ್ನಾವುದೋ ಸ್ವಂತ ಕೈಕೆಲಸವಾಗಿರಬಹುದು. ಏನೇ ಕೆಲಸವಾಗಲಿ ನೀವು ಎಷ್ಟು ಶ್ರದ್ಧೆ ಮತ್ತು ಶ್ರಮ ನೀಡುತ್ತೀರೋ ಅದು ಅಷ್ಟೇ ಪ್ರತಿಫಲ ಕೊಡುತ್ತದೆ. ಬೇರೆಯವರು ನಿಮ್ಮನ್ನು ನೀವು ಹೋದ ಮೇಲೆಯೂ ನೆನಸಿಕೊಳ್ಳುತ್ತಾರೆ - "ಇಲ್ಲಿ ಒಬ್ಬ ಕೆಲಸಗಾರನಿದ್ದ, ಬಹಳ ಚೆನ್ನಾಗಿ ಕೆಲಸ ಮಾಡುತ್ತಿದ್ದ."
ಸರ್ಕಾರವಾಗಲಿ, ದೇವರಾಗಲಿ ನೇರವಾಗಿ ಬಂದು ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುವುದಿಲ್ಲ. ಖಲೀಫ ಹಜ್ರತ್ ಅಲಿ(ರ) ಅವರ ಒಂದು ಮಾತು ನೆನಪಿಗೆ ಬರುತ್ತೆ - "ಕೂದಲಿಗೆ ಕಪ್ಪು ಬಣ್ಣ ಹಚ್ಚಿಕೊಂಡರೆ ಯೌವ್ವನ ಬರಲ್ಲ, ಆಸೆಪಟ್ಟರೆ ಸಂಪತ್ತು ಬರಲ್ಲ". ಸಂಪತ್ತು ನಿಮ್ಮ ಬಳಿಗೆ ಬರಬೇಕಾದರೆ ನೀವು ಕಷ್ಟಪಟ್ಟು ದುಡಿಯಬೇಕು. ನಾನು ಶ್ರೀಮಂತನಾಗಬೇಕಂತ ಬರೀ ಆಸೆ ಪಟ್ಟುಕೊಂಡು ಮನೆಯಲ್ಲೇ ಕುಳಿತರೆ ಹಣ ಬರುತ್ತದೆಯೇ?
ಯಾವುದೇ ಕೆಲಸ ದೊಡ್ಡದು ಅಥವಾ ಚಿಕ್ಕದಾಗಿರುವುದಿಲ್ಲ. ಕೆಲಸ ಕೆಲಸವೇ ಆಗಿರುತ್ತದೆ. ಆದರೆ ಅದನ್ನು ನೋಡುವ ನಮ್ಮ ದೃಷ್ಟಿಕೋನ ಬೇರೆ ಬೇರೆಯಾಗಿರುತ್ತದೆ.
ಬೆಳಕು ಹರಿದಾಕ್ಷಣ ಪಕ್ಷಿಗಳು ತಮ್ಮ ಆಹಾರವನ್ನು ಹುಡುಕಲು ಗೂಡನ್ನು ಬಿಡುತ್ತವೆ. ಅದನ್ನು ನೋಡಿ! ಪ್ರಕೃತಿಯ ನಿಯಮವನ್ನು ಯಾವ ರೀತಿ ಪಾಲಿಸುತ್ತಿವೆ. ನಾವು ಮನುಷ್ಯರಾಗಿ ಹುಟ್ಟಿದ ಮೇಲೆ ಹೇಗೆ ಬಾಳಬೇಕೆಂಬುದನ್ನು ನೀವೆ ಯೋಚಿಸಿ ನೋಡಿ...!
ತೋಟದಲ್ಲಿ ಪರಾವಲಂಬಿ ಕಳೆಯನ್ನು ಬುಡಸಮೇತ ಕಿತ್ತು ಹಾಕುತ್ತಾರೆ. ಈ ಸಮಾಜದಲ್ಲಿ ಪರರ ಗುಲಾಮಗಿರಿ ಮಾಡುವವರ ಗತಿಯೂ ಅಷ್ಟೆ. ಕರಬೇವಿನ ಸೊಪ್ಪನ್ನು ಸಾರು ಆಗುವ ತನಕ ಉಪಯೋಗಿಸಿಕೊಂಡು ನಂತರ ಅದನ್ನು ಬಿಸಾಕಿಬಿಡುತ್ತಾರೆ. ನಿಮ್ಮ ಗತಿಯೂ ಹಾಗೆ ಆಗಬೆಕಾ? ಇಲ್ಲ. ಹಾಗಾದರೆ ನೀವು ಸ್ವಾವಲಂಬಿಗಳಾಗಲೇ ಬೇಕು.
ಎಲ್ಲವೂ ಹಣವಲ್ಲ ಆದರೆ ಹಣವಿಲ್ಲದೆ ಹೆಣವೂ ಏಳುವುದಿಲ್ಲ. ರಾತ್ರಿಯ ಒಂದು ಗಂಟೆ. ಆರೋಗ್ಯ ಕೆಟ್ಟು ಹೋಗಿದೆ. ವಾಹನದಲ್ಲಿ ಪೆಟ್ರೋಲ್ ಇಲ್ಲ. ಮೊಬೈಲ್ ಇದೆ ಆದರೆ ಕರೆನ್ಸಿ ಮುಗಿದು ಹೋಗಿದೆ. ಆಸ್ಪತ್ರೆ ದೂರವಿದೆ. ಅಲ್ಲಿ ಎಷ್ಟು ಖರ್ಚಾಗುತ್ತದೋ ಗೊತ್ತಿಲ್ಲ. ಇಂತಹ ನೂರಾರು ಸಂದರ್ಭಗಳು ನಿಮ್ಮ ಜೀವನದಲ್ಲಿ ಬಂದಿರಬಹುದು. ಹಣದ ಮಹಿಮೆ ಏನೆಂದು ಗೊತ್ತಾಯಿತಾ?
ನಾನು ಎಲ್ಲ ಕಲಿತು, ನಿಪುಣತೆ ಪಡೆದು ಕೆಲಸಕ್ಕೆ ಹೋಗುತ್ತೇನೆ. ನಾನು ಸಂಪೂರ್ಣವಾಗಿ ಸಜ್ಜಾಗಿ ಕೆಲಸ ಪ್ರಾರಂಭಿಸುತ್ತೇನೆ ಎಂದು ಕಾಯುತ್ತಾ ಕುಳಿತುಕೊಳ್ಳಬೆಡಿ. ನಿಮ್ಮ ಹತ್ತಿರ ಏನಿದೆ, ಎಷ್ಟಿದೆ ಅದರಿಂದಲೇ ಪ್ರಾರಂಭ ಮಾಡಿ. ಜ್ಞಾನ, ಬುದ್ಧಿ, ನಡತೆ, ಕುಶಲತೆ ಅಥವಾ ಬೇರೇನೋ ಆಗಿರಬಹುದು. ಮುಂದೆ ಸಾಗುತ್ತಾ ಸಾಗುತ್ತಾ ನಿಮ್ಮ ಕುಶಲತೆ ವಿಕಸನಗೊಳ್ಳುತ್ತದೆ. ಹಣ ಹರಿದು ಬರುತ್ತದೆ.
ನೀವು ಶ್ರೀಮಂತರಾದರೆ ದೇಶ ಶ್ರೀಮಂತವಾಗುತ್ತದೆ ಎಂದರ್ಥ. ಅಂದರೆ ದೇಶದ ಅರ್ಥಶಾಸ್ತ್ರದಲ್ಲಿ, ಆರ್ಥಿಕ ಬೆಳವಣಿಗೆಯಲ್ಲಿ ನಿಮ್ಮದೂ ಒಂದು ಪಾಲಿದೆ ಎಂದಾಯಿತು. ಇದು ಸಹ ಒಂದು ರೀತಿಯ ದೇಶ ಸೇವೆಯೇ ಕಣ್ರಪ್ಪಾ....!
- ಜಬೀವುಲ್ಲಾ ಖಾನ್
ರಾಜ್ಯ - ರಾಷ್ಟ್ರ
ಗೋಕರ್ಣ: ನೂರು ಕಾನೂನುಗಳಿಂದ ತಪ್ಪಿಸಲು ಸಾಧ್ಯವಾಗದ ಕುಕೃತ್ಯವನ್ನು ಒಂದು ಪಾಪಭೀತಿ ತಡೆಯುತ್ತದೆ.ಅಂತಸ್ಸಾಕ್ಷಿಯಿಲ್ಲದ ಯಾವವ್ಯಕ್ತಿಯೂ ಇಲ್ಲ.ಸಾಮಾನ್ಯವಾಗಿ ತಾನು ಮಾಡಿದ ಪಾಪಪ್ರಜ್ಞೆಯು ವ್ಯಕ್ತಿಯನ್ನು ಕಾಡದೇ ಇರದು.ನಮ್ಮ ಪ್ರಾಚೀನರು ವ್ಯಕ್ತಿಯ ಅಭ್ಯುದಯ ಹಾಗೂ ಸಮಾಜದ ಸ್ವಾಸ್ಥ್ಯದ ಉದ್ದೇಶದಿಂದಲೇ ಹತ್ತು ಹಲವು ನಿಯಮಗಳನ್ನು ರೂಪಿಸಿ ಅವನ್ನು ಬದುಕಿನಲ್ಲಿ ಅಳವಡಿಸಿದರು.ಆದ್ದರಿಂದಲೇ ಹಿಂದಿನಕಾಲದಲ್ಲಿ ಇಂದು ನಾವು ಕಾಣುತ್ತಿರುವ ಸಮಾಜಘಾತುಕಕೃತ್ಯಗಳು ಸಂಭವಿಸುತ್ತಿರಲಿಲ್ಲ.
ಜನರಲ್ಲಿ ಪಾಪಭೀತಿ ಹಾಗೂ ಅದರಿಂದ ಉಂಟಾಗುವ ನರಕಭಯವು ಇದಕ್ಕೆ ಕಾರಣವಾಗಿತ್ತು.ಆ ಮನೋಭಾವವು ಮುಂದುವರೆದಿದ್ದರೆ ಇಂದು ಇಷ್ಟೊಂದು ಸಂಖ್ಯೆಯ ಆರರಕ್ಷಕರಾಗಲೀ,ರಕ್ಷಣಾವ್ಯವಸ್ಥೆಯಾಗಲೀ ಅಗತ್ಯವಿರುತ್ತಿರಲಿಲ್ಲ. ಮನುಷ್ಯನಾದವನಿಗೆ ತಾನುಮಾಡುವ ಕಾರ್ಯದಲ್ಲಿ ಧರ್ಮಪ್ರಜ್ಞೆ ಹಾಗೂ ಪಾಪಭೀತಿ ಅಗತ್ಯ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಹೇಳಿದ್ದಾರೆ.
ಅಶೋಕೆಯಲ್ಲಿ ಚಾತುರ್ಮಾಸ್ಯದ ನಿಮಿತ್ತ ಆಯೋಜಿತವಾಗಿದ್ದ ರಾಮಕಥೆಯ ಶ್ರೀಕೃಷ್ಣಪರ್ವದ ಸಮಾರೋಪದಲ್ಲಿ ಅನುಗ್ರಹಸಂದೇಶವನ್ನು ನೀಡುತ್ತಿದ್ದ ಪೂಜ್ಯಶ್ರೀಗಳು ಈ ಲೋಕದಲ್ಲಿ ಹುಟ್ಟಿದವನಿಗೆ ಮರಣವು ನಿಶ್ಚಿತ.ಅದನ್ನು ತಪ್ಪಿಸಲು ಅಸಾಧ್ಯ.ಮೃತ್ಯುವೆಂದರೆ ಭಯಪಡಬೇಕಾಗಿಲ್ಲ. ಮರಣವು ಬೇರೊಂದು ಲೋಕಕ್ಕೆ ಬೇರೊಂದು ಪಾತ್ರಕ್ಕೆ ನಮ್ಮನ್ನು ಕರೆದೊಯ್ಯುವ ಮಿತ್ರ. ಹುಟ್ಟನ್ನು ಸಂತೋಷದಿಂದ ಸ್ವಾಗತಿಸುವಂತೆ ಸಾವನ್ನೂ ಸಂತೋಷದಿಂದ ಸ್ವೀಕರಿಸುವ ಮನೋಭಾವ ನಮ್ಮದಾಗಬೇಕು.ಯಮನೆಂದರೆ ಧರ್ಮರಾಜ.ಲೋಕದ ಎಲ್ಲ ಜೀವಿಗಳ ಪಾಪಪುಣ್ಯಗಳನ್ನು ಆಧರಿಸಿ ಅವರನ್ನು ಪರಿಶುದ್ಧರನ್ನಾಗಿ ಮಾಡುವ ಕಾಯಕವು ಆತನದು.ಪಕ್ಷಪಾತವಿಲ್ಲದೆ ಸಮಚಿತ್ತದಿಂದ ವರ್ತಿಸುವ ಯಮನೂ ಕೂಡಾ ಲೋಕನಿಯಮಕ್ಕೆ ಬದ್ಧ. ನಿಯಮ ಎಂಬ ಪದವು ಬಂದಿದ್ದೇ ಯಮನಿಂದ ಎಂದು ಹೇಳಿ ಪುರಾಣಗಳಲ್ಲಿ ವರ್ಣಿತವಾದ ವಿವಿಧ ನರಕಗಳು ಹಾಗೂ ಪಾಪಿಗಳು ಅನುಭವಿಸುವ ಶಿಕ್ಷೆಗಳನ್ನು ರಾಮಾಯಣದ ತಾತ್ವಿಕ ಹಿನ್ನೆಲೆಯಲ್ಲಿ ವಿಶ್ಲೇಷಿಸಿದರು.ಮಹರ್ಷಿ ವಾಲ್ಮೀಕಿ ರಾಮಾಯಣದಲ್ಲಿ ಎಂತಹವ್ಯಕ್ತಿಯೂ ಗೌರವಿಸಬೇಕಾದಂತಹ ಯಮನ ಅದ್ಭುತವ್ಯಕ್ತಿತ್ವವನ್ನು ತುಂಬ ರೋಚಕವಾಗಿ ನಿರೂಪಿಸಿದ್ದಾರೆ.
ರಾಮಾಯಣದ ಯಮನನ್ನು ಕಂಡರೆ ಯಾರಿಗೂ ಭಯಬರುವಂತಿಲ್ಲ.ಎಂದು ಹೇಳಿ ರಾವಣನು ಅಕಾಲಿಕವಾಗಿ ತಾನು ಸಾಯಬಾರದೆಂಬ ಉದ್ದೇಶದಿಂದ ಎಲ್ಲರಿಗೂ ಮೃತ್ಯುವಾದ ಯಮನನ್ನೇ ಗೆದ್ದುಬಿಟ್ಟರೆ ಮುಂದೆಂದೂ ತನಗೆ ಸಾವಿನಭಯವಿರದೆಂದು ಯಮಲೋಕದಮೇಲೆ ಧಾಳಿ ಮಾಡಿದ್ದನ್ನು ಹಾಗೂ ರಾವಣನನ್ನು ಸಂಹರಿಸಲು ಯಮ ಶಕ್ತನಾಗಿದ್ದರೂ ಬ್ರಹ್ಮದೇವರ ವರಕ್ಕೆ ಲೋಪಬರಬಾರದೆಂಬ ಒಂದೇ ಉದ್ದೇಶದಿಂದ ರಾವಣನನ್ನು ಕೊಲ್ಲದೆ ಬಿಟ್ಟನೆಂಬ ರಾಮಾಯಣದ ಪ್ರಸಂಗದ ಸಾಂಕೇತಿಕತೆಯನ್ನು ಹಾಗೂ ಅದರ ಅಂತರಾರ್ಥವನ್ನು ವಿವರಿಸಿ ನಮ್ಮ ಬದುಕಿನಲ್ಲಿ ಪಾಪಭೀತಿ ಹಾಗೂ ಧರ್ಮಪ್ರಜ್ಞೆ ಅತ್ಯಗತ್ಯ ಎಂದೂ ನುಡಿದರು.
ಪ್ರೇಮಲತಾ ದಿವಾಕರ್.ವಸುಧಾ ಶರ್ಮಾ , ಶ್ರೀಪಾದ ಭಟ್ ಸಂಧ್ಯಾ ಭಟ್ ಇವರ ಗಾಯನ,ಪ್ರಕಾಶರ ವೇಣುವಾದನ,ನರಸಿಂಹ ಮೂರ್ತಿಯವರ ಮೃದಂಗ,ಗೋಪಾಲಕೃಷ್ಣ ಹೆಗಡೆಯವರ ತಬಲಾ ವಾದನಗಳು ರಾಘವೇಂದ್ರ ಹೆಗಡೆಯವರ ಮರಳುಶಿಲ್ಪ ಗಣಪತಿ ನೀರ್ನಳ್ಳಿಯವರ ಆಶುಚಿತ್ರಗಳು ಕಲಾರಸಿಕರನ್ನು ಆಕರ್ಷಿಸಿದವು.
ಡಿ.ವಿ.ಶಿವರಾಮಯ್ಯನವರ ನಿರ್ದೇಶನದಲ್ಲಿ ವೈಶ್ರವಣಯಮಸಂಗ್ರಾಮ ಎಂಬ ರೂಪಕವು ಪ್ರಸ್ತುತವಾಯಿತು. ಖ್ಯಾತ ಕಲಾವಿದರಾದ ಶ್ರೀಪಾದ ಹೆಗಡೆ ಹಡಿನಬಾಳ, ವಿಷ್ಣು ಭಟ್ ಮೂರೂರು, ಜಿ.ಎಲ್.ಹೆಗಡೆ ಕುಮುಟಾ ಮೊದಲಾದ ಕಲಾವಿದರು ಈ ರೂಪಕದಲ್ಲಿ ಪಾಲ್ಗೊಂಡಿದ್ದರು.
ವರದಿ: ಸತ್ಯನಾರಾಯಣ ಶರ್ಮ
ವಿಶೇಷ ವರದಿ
ಅಣ್ಣಾ ಹಜಾರೆಗೆ ಬೆಂಬಲ
ಕುಂದಾಪುರ : ಭ್ರಷ್ಟಾಚಾರದಲ್ಲಿ ದೇಶ ನಂಬರ್ ಒನ್..! ಆದರೆ ಭ್ರಷ್ಟಾಚಾರ ವಿರೋಧದಲ್ಲಿ ಕುಂದಾಪುರ ನಂಬರ್ ತ್ರೀ...
ಅಚ್ಚರಿಯಾದರೂ ಹೌದು. ಅಣ್ಣಾ ಹಜಾರೆ ಅವರ ಭ್ರಷ್ಟಾಚಾರ ವಿರೋಧಿ ಧರಣಿಯಲ್ಲಿ ಕುಂದಾಪುರ ಅಹೋರಾತ್ರಿ ಧರಣಿ ನಡೆಸುವ ಮೂಲಕ ನಂಬರ್ ಮೂರರ ಪಟ್ಟ ಅಲಂಕರಿಸಿದೆ. ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಮಹಾತ್ಮ ಗಾಂಧಿ ಅವರು ಕುಂದಾಪುರಕ್ಕೆ ಭೇಟಿ ನೀಡಿದ ಸವಿ ಸವಿ ನೆನಪು ಪರಿಸರದಲ್ಲಿ ಹಸಿಯಾಗಿರುವ ಹಾಗೆ ಭ್ರಷ್ಟಾಚಾರ ವಿರೋಧದ ಮೂಲಕ ಅಣ್ಣಾ ಹಜಾರೆ ಬೆಂಬಲಕ್ಕೆ ಕುಂದಾಪುರ ನಾಗರಿಕರು ನಿಲ್ಲುವ ಮೂಲಕ ಗಾಂಧೀ ಅವರ ಭೇಟಿ ನೆನಪುಗಳನ್ನು ಮತ್ತೆ ಮತ್ತೆ ಮೆಲಕು ಹಾಕುತ್ತಿದ್ದಾರೆ.
ಮೂರನೇ ಸ್ಥಾನ ಹೇಗೆ : ಬಲಿಷ್ಠ ಜನಲೋಕಪಾಲ್ ಮಸೂದೆಗೆ ಆಗ್ರಹಿಸಿ ಅಣ್ಣಾ ಹಜಾರೆ, ಕಿರಣ್ ಬೇಡಿ, ಅರವಿಂದ ಕೇಜ್ರಿವಾಲ, ಪ್ರಶಾಂತ್ ಭೂಷಣ್ ಮತ್ತು ಶಾಂತಿ ಭೂಷಣ್ ಅವರ ಅಸಂಖ್ಯಾತ ಬೆಂಬಲಿಗರ ಜೊತೆ ದೆಹಲಿಯ ರಾಮಲೀಲಾ ಮೈದಾನದಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಹಾಗೆ ಬೆಂಗಳೂರು ಫ್ರೀಡಂ ಪಾರ್ಕ್ ನಲ್ಲಿ ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರ ಮುಂದಾಳತ್ವದಲ್ಲಿ ಧರಣಿ ನಡೆಯುತ್ತಿದೆ.
ಉಡುಪಿ ಪ್ರಗತಿಪರ ಚಿಂತಕರ ವೇದಿಕೆ ಕುಂದಾಪುರ ತಾಲೂಕ್ ಸಮಿತಿ ಆಶ್ರಯದಲ್ಲಿ ಕಳೆದ ಆರು ದಿನದಿಂದ ಕುಂದಾಪುರ ಶಾಸ್ತ್ರಿ ವೃತ್ತದ ಸಮೀಪ ಅಹೋರಾತ್ರಿ ಧರಣಿ ನಡೆಯುತ್ತಿದೆ. ಅನಿರ್ಧಿಷ್ಠಾವಧಿ ಧರಣಿ ದೆಹಲಿ, ಬೆಂಗಳೂರು ಮತ್ತು ಕುಂದಾಪುರ ಬಿಟ್ಟರೆ ಮತ್ತೆಲ್ಲೂ ನಡೆಯುತ್ತಿಲ್ಲ. ಹಾಗಾಗಿ ಕುಂದಾಪುರಕ್ಕೆ ನಂಬರ್ ತ್ರೀ ಸ್ಥಾನ ಲಭ್ಯ.
ಹಾಗಂತ ಅಣ್ಣಾ ಹಜಾರೆ ಅವರನ್ನು ಬೆಂಬಲಿಸಿ ಮತ್ತೆಲ್ಲೂ ಧರಣಿ ನಡೆಯುತ್ತಿಲ್ಲ ಎಂಬ ಅರ್ಥವಲ್ಲ. ದೇಶದ ಮೂಲೆ ಮೂಲೆಯಲ್ಲಿ ಅಣ್ಣಾ ಹಜಾರೆ ಅವರನ್ನು ಬೆಂಬಲಿಸಿ ನಾಗರಿಕರು ಬೀದಿಗೆ ಇಳಿದಿದ್ದಾರೆ. ಆದರೆ ಒಂದೇ ಸ್ಥಳದಲ್ಲಿ ಪಟ್ಟಾಗಿ ಧರಣಿ ನಡೆಯುತ್ತಿಲ್ಲ. ಭ್ರಷ್ಟಾಚಾರ ವಿರೋಧಿ ಅಂದೋಲನದಲ್ಲಿ ಕುಂದಾಪುರಕ್ಕೂ ಒಂದು ಸ್ಥಾನ ಸಿಕ್ಕಿದ್ದು ಪರಿಸರದ ನಾಗರಿಕರಿಗೆ ಗರ್ವ ತಂದಿದೆ.
ಎತ್ತಣ ಮಾಮರ ಎತ್ತಣ ಕೋಗಿಲೆ : ಬೆಟ್ಟದ ನೆಲ್ಲಿಕಾಯಿ ಸಮುದ್ರದ ಉಪ್ಪು ಸೇರಿದರೆ ರುಚಿಕಟ್ಟಾದ ಉಪ್ಪಿನಕಾಯಿ ಆಗುವ ಹಾಗೆ ಕುಂದಾಪುರದಲ್ಲಿ ನಡೆಯುತ್ತಿರುವ ಧರಣಿಗೆ ಬಿಜಾಪುರದ ಮಂದಿ ಸಾಥ್ ನೀಡಿದ್ದಾರೆ. ಬಿಜಾಪುರ ನಂದಿ ಶುಗರ್ ಕಾರ್ಖಾನೆ ಸರಹದ್ದಿನ ಗಲಿಗಲಿ ಎಂಬ ಪುಟ್ಟ ಊರಿನ ಮಂದಿ ಕುಂದಾಪುರದಲ್ಲಿ ಕೂತು ಅಣ್ಣಾ ಹಜಾರೆ ಅವರಿಗೆ ಜೈ ಅಂದಿದ್ದಾರೆ. ಜನ ಲೋಕಪಾಲ್ ಮಸೂದೆ ಆಗ್ರಹಿಸಿ ಘೋಷಣೆ ಕೂಗಿದ್ದಾರೆ.
ಧರ್ಮಸ್ಥಳಕ್ಕೆ ಯಾತ್ರಾರ್ಥಿಯಾಗಿ ಹೊರಟ ಇವರು ಧರಣಿ ನಡೆಯುತ್ತಿರುವ ಸ್ಥಳದಲ್ಲಿ ಅಣ್ಣಾ ಹಜಾರೆ ಅವರ ಭಾವ ಚಿತ್ರಕಂಡು ವೇದಿಕೆ ಏರಿ ತಮ್ಮ ಆಕ್ರೋಶ ವ್ಯಕ್ತಿ ಪಡಿಸಿದ್ದಾರೆ. ತಾವು ಊರಿಗೆ ಮರಳುವುದರೊಳಗೆ ಧರಣಿ ನಿಂತು ಹೋದರೆ ಸತ್ಯಾಗ್ರದಲ್ಲಿ ಭಾಗವಹಿಸಲು ಆಗಲಿಲ್ಲವಲ್ಲಾ ಎಂಬ 'ಗಿಲ್ಟಿ' ಕಾಡಬಾರದು ಎಂಬ ಹಿನ್ನೆಲೆಯಲ್ಲಿ ಇವರು ವೇದಿಕೆ ಹತ್ತಿ ಕುಳಿತಿದ್ದಾರೆ. ಭಾರತೀಯತೆ ಜನರನ್ನು ಬೆಸುಗೆ ಹಾಕುತ್ತದೆ ಎನ್ನೋದಕ್ಕೆ ಇದಕ್ಕಿಂತ ಬೇರೆ ನಿದರ್ಶನ ಬೇಕಾ. ಅದಕ್ಕೆ ಹೇಳಿದ್ದು, ಎತ್ತಣ ಮಾಮರ ಎತ್ತಣ ಕೋಗಿಲೆ ಅಂತ.
ಪ್ರಗತಿಪರ ವೇದಿಕೆ ಕಥೆಯೇನು : ಕುಂದಾಪುರ ಪ್ರಗತಿಪರ ಚಿಂತಕರ ವೇದಿಕೆಗೆ ಅದರದ್ದೇ ಆದ ಸ್ಥಾನವಿದೆ. ಮಂದಾರ್ಥಿ ದೇವಸ್ಥಾನದಲ್ಲಿ ಬಿಲ್ಲವ ಕಲಾವಿದರಿಗೆ ಯಕ್ಷಗಾನ ಮೇಳದಲ್ಲಿ ಜಾತಿ ಹೆಸರಲ್ಲಿ ಅವಕಾಶ ನಿರಾಕರಣೆಯಾದಾಗ ಅವರ ಬೆನ್ನಿಗೆ ನಿಂತಿದ್ದು ಪ್ರಗತಿಪರ ಚಿಂತಕರ ವೇದಿಕೆ. ಕೊನೆಗೂ ಬೆಂಗಳೂರು ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸುವ ಮೂಲಕ ಬಿಲ್ಲವ ಕಲಾವಿದರಿಗೆ ನ್ಯಾಯ ಒದಗಿಸಿಕೊಟ್ಟಿದ್ದು ಒನ್ಸ್ ಎಗೇನ್ ಪ್ರಗತಿಪರ ಚಿಂತಕರ ವೇದಿಕೆ.
ಹಾಗೆ ವೀಣಾಧರಿ ಅವರನ್ನು ಹೊರ ಪ್ರಪಂಚಕ್ಕೆ ಪರಿಚಯಿಸಿದ್ದೂ ಕೂಡಾ ಪ್ರಗತಿ ಪರ ಚಿಂತಕರ ವೇದಿಕೆ. ವೀಣಾಧರಿ ಅವರು ಬಹಿರಂಗವಾಗಿ ತಾನೂ ಎಚ್ಐವಿ ಭಾದಿತೆ ಎನ್ನೊ ಮೂಲಕ ಎಚ್ಐವಿ ಬಗ್ಗೆ ಇದ್ದ ಭಯವನ್ನು ತೊಡೆದು ಹಾಕಿ ಎಚ್ಐವಿ ಸೋಂಕಿಗೆ ಒಳಗಾದವರೂ ಎಲ್ಲರಂತೆ ಬದುಕಬಹುದು ಎನ್ನೋದನ್ನ ತೋರಿಸಿದರು. ಇವರಿಂದ ಪ್ರಭಾವಿತರಾದವರು ಬಯಲಿಗೆ ಬಂದು ನಿರ್ಭೀತವಾಗಿ ಜೀವನ ಕಟ್ಟಿಕೊಳ್ಳುವ ಸಾಹಸ ಮಾಡಿದರು. ಈ ಸಾಹಸದ ಹಿಂದೆ ಪ್ರಗತಿಪರ ಚಿಂತಕರ ವೇದಿಕೆ ಇದೆ ಎನ್ನೋದು ಅಷ್ಟೇ ಸತ್ಯ.
ಹತ್ತು ಹಲವು ಸಮಾಜಮುಖಿ ಕೆಲಸವನ್ನು ಮಾಡಿದ ಹೆಗ್ಗಳಿಗೆ ವೇದಿಕೆಗೆ ಇದೆ. ಹಾಗಾಗಿ ಕುಂದಾಪುರದಲ್ಲಿ ವೇದಿಕೆ ಅಣ್ಣಾ ಹಜಾರೆ ಅವರಿಗೆ ಬೆಂಬಲ ಸೂಚಿಸಿ ಧರಣಿ ನಡೆಸಲು ಕೂತಿತು. ಹತ್ತು ಹಲವು ವೈವಿಧ್ಯಗಳ ಮೂಲಕ ಧರಣಿ ನಡೆಸುವ ಮೂಲಕ ಧರಣಿಯನ್ನೂ ಹೀಗೂ ಮಾಡುಬಹುದು ಎನ್ನೋದನ್ನು ವೇದಿಕೆ ನಿರೂಪಿಸಿದೆ.
ಸುಮಾರು ಒಂದು ದಶಕದ ಹಿಂದೆ ವೇದಿಕೆ ಅಸ್ತಿತ್ವಕ್ಕೆ ಬಂತು. ಅಂದಿನಿಂದ ಇಂದಿನವರೆಗೆಗೂ ವೇದಿಕೆ ಸಾಗಿದ ಹಾದಿ ಬಲು ದೂರು. ವೇದಿಕೆ ಜನಪರ ಕಾಳಜಿಗೆ ಸ್ಪಂಧನವಾಗಬೇಕು ಎನ್ನೋದು ಉಡುಪಿ ಜಿಲ್ಲಾ ಪ್ರಗತಿಪರ ಚಿಂತಕರ ವೇದಿಕೆ ಜಿಲ್ಲಾ ಸಂಚಾಲಕ ಕೇಶವ ಕೋಟೇಶ್ವರ ಅವರ ಆಶಯ. ಹಾಗೆ ತಾಲೂಕ್ ಸಂಚಾಲಕ ಪ್ರಕಾಶ್ಚಂದ್ರ ಶೆಟ್ಟಿ ಅವರಿಗೆ ಸಮಾಜಕ್ಕೆ ಏನನ್ನಾದರೂ ಕೊಡುವ ಉಮೇದಿದೆ. ವೇದಿಕೆ ಹಿಂದೆ ಸಾಹಿತಿ ಎ.ಎಸ್.ಎನ್ ಹೆಬ್ಬಾರ್. ನ್ಯಾಯವಾದಿಗಳಾದ ಟಿ.ಬಿ.ಶೆಟ್ಟಿ, ಚರಣ್ ನಾವುಡ ಹಾಗೂ ಹಳ್ಳಿಯಲ್ಲಿ ಅಂಗನವಾಡಿ ತೆರೆದ ಶಿಕ್ಷಣ ಸೇವೆಗೆ ಮುಂದಾದ ಚಂದ್ರಶೇಖರ್ ವೇದಿಕೆ ಬೆನ್ನಿಗೆ ನಿಂತಿದ್ದಾರೆ. ಇವರೊಟ್ಟಿಗೆ ಕುಂದಾಪುರ ನಾಗರಿಕರು ಕೈಜೋಡಿಸಿದ್ದಾರೆ. ಒಟ್ಟಾರೆ ವಿಶಿಷ್ಟ ಕಾರ್ಯಕ್ರಮದ ಮೂಲಕ ವೇದಿಕೆ ಹೊಸ ದಿಕ್ಕುದಿಶೆ ಕಡೆಗೆ ಗಮನ ಹರಿಸಿದೆ. ರಾಜಕೀಯೇತರ ವೇದಿಕೆಯಾಗಿ ಸಮಾಜದ ತುಡಿತಕ್ಕೆ ಸ್ಪಂದಿಸುವ ಗುಣ ವೇದಿಕೆಯ ಯಶಸ್ಸಿ ಕಾರಣ.
- ಶ್ರೀಪತಿ ಹೆಗಡೆ ಹಕ್ಲಾಡಿ.
ಯಥಾ ರಾಜ ತಥಾ ಪ್ರಜಾ/ಯಥಾ ಪ್ರಜಾ ತಥಾ ರಾಜ
ಅರೇಬಿಯಾ ದೇಶ ಭಾರತ ಭೂಮಿಯಿಂದ ಭಿನ್ನವಾದುದಾದರೂ, ಅವರ ಚರಿತ್ರೆಯನ್ನೂ ಅವರ ಮಹಾಪುರುಷರ ಜೀವನಗಳನೂ ನೋಡಿದರೆ - ನಮ್ಮಂತೆಯೇ ಅವರಿಗೂ ಒಂದು ಸುಖೀ ರಾಜ್ಯದ ಕಲ್ಪನೆಯಿತ್ತೆಂದು ಕಾಣಬಹುದು.ಅರೇಬಿಯಾ ರಾಷ್ಟ್ರವನ್ನು ಕಿರೀಟವಿಲ್ಲದೆ ಆಳಿದವರಲ್ಲಿ ಹಜ್ರತ್ ಉಮರ್(ರ) ಎಂಬ ಎರಡನೇಯ ಖಲೀಫರು. ಖಲೀಫ ಎಂದರೆ ದೇವರ ಪರವಾಗಿ, ಪ್ರಜೆಗಳ ಪರವಾಗಿ ದೇಶವನ್ನು ಧರ್ಮದಿಂದ ಆಳುವ ಪ್ರಜಾ ಪ್ರತಿನಿಧಿ. ಇವರ ಆಳ್ವಿಕೆಯ ಕಾಲ ಕ್ರಿ. ಶ. 636-644. ಆ ಕಾಲದಲ್ಲಿ ಅರೇಬಿಯಾದ ಉತ್ತರ ಭಾಗದ ಕಡೆ ವೀರಕ್ಷಾಮ ಒದಗಿತು. ಕ್ಷಾಮಕ್ಕೆ ಸಿಕ್ಕಿದ ಜನಗಳನ್ನು ಹೇಗೆ ರಕ್ಷಿಸುವುದು ಎಂದು ಹಗಲೂ ರಾತ್ರಿ ಖಲೀಫರಿಗೆ ಅದೇ ಚಿಂತೆಯಾಯಿತು. ಕ್ಷಾಮವೆಲ್ಲ ದೇಶದಲ್ಲಿ ಸುಭಿಕ್ಷ ನೆಲಸುವವರೆಗೂ ನಾನು ಹಾಲು ಮುಟ್ಟುವುದಿಲ್ಲ, ನಾನು ಬೆಣ್ಣೆ ಸವಿಯುವುದಿಲ್ಲ ಎಂದು ಖಲೀಫ ಉಮರ್ ವ್ರತ ಹಿಡಿದರು.
ಕ್ಷಾಮವೇನೋ ಕಡಿಮೆಯಾಗುತ್ತಾ ಬಂತು. ಜನ ಚೇತರಿಸಿಕೊಂಡರು ಎನ್ನುವ ಹೊತ್ತಿಗೆ, ಅಸಾಧ್ಯವಾದ ಸಾಂಕ್ರಾಮಿಕ ರೋಗವು ತಲೆದೋರಿತು. ಅದು ಕ್ರಮಕ್ರಮವಾಗಿ ಸಿರಿಯಾ ದೇಶಕ್ಕೂ ಹರಡಿತು.
ಸಿರಿಯಾ ದೇಶದಲ್ಲಿ ಜನರ ಸ್ಥಿತಿಗತಿ ಹೇಗಿದೆಯೋ ಕಂಡು ಬಂದ ಹೊರತು ಮನಸ್ಸಿಗೆ ನೆಮ್ಮದಿಯಿಲ್ಲ ಎಂದು ಖಲೀಫ ಉಮರ್ ಒಂಟೆಯನ್ನು ಹತ್ತಿ ಅಲ್ಲಿಗೆ ಹೋದರು. ಹೋಗಿ ಪರಿಶೀಲನೆಯಲ್ಲ ಮುಗಿದ ಮೇಲೆ, ಮದೀನಾಗೆ ಹಿಂತಿರುಗುವಾಗ ದಾರಿಯ ಪಕ್ಕದಲ್ಲಿ ಒಂದು ಸಣ್ಣ ಗುಡಿಸಲು ಅವರಿಗೆ ಗೋಚರವಾಯಿತು. ಏನೋ ಕುತೂಹಲವಾಗಿ, ಅವರು ಕೆಳಗಿಳಿದು ನೋಡಿದರೆ, ಯಾರೋ ಮುದುಕಿಯೊಬ್ಬಳು ಅಲ್ಲಿ ಕುಳಿತಿದ್ದಳು.
ಖಲೀಫರು ಕೇಳಿದರು - "ಏನಮ್ಮಾ, ಖಲೀಫ ಉಮರನ ವಿಚಾರವೇನಾದರೂ ನಿನಗೆ ಗೊತ್ತೇ?
"ಅದೇನೋ ಅವನು ಸಿರಿಯಾದಿಂದ ಮದೀನಾಗೆ ಹೋಗುತ್ತಿರುವನಂತೆ".
ಆಮೇಲೆ?
"ಅಯ್ಯೋ, ಅವನ ವಿಷಯ ಏನೆಂದು ಮಾತನಾಡುವುದು ಬಿಡು! ಅವನ ಸುದ್ದಿಗೆ ಬೆಂಕಿ ಬಿತ್ತು!"
"ಅದು ಏಕಮ್ಮ ಹಾಗೆ ಹೇಳುತ್ತಿ?"
"ಮತ್ತೆ ಇನ್ನೇನು ಹೇಳಬೇಕು? ಗತಿಯಿಲ್ಲದವಳು ನಾನು ಇಲ್ಲಿ ಇದ್ದೇನಲ್ಲಾ, ಈ ವರೆಗೆ ನನಗೆ ಅವನು ಏನಾದರೂ ಕೊಟ್ಟದ್ದುಂಟೆ?"
"ಅಲ್ಲಮ್ಮ, ಈ ದೂರದಲ್ಲಿ ಈ ಮೂಲೆಯಲ್ಲಿ ನೀನು ಹೀಗೆ ಇರುವೆಯೆಮದು ಅವನಿಗೆ ಹೇಗೆ ತಿಳಿಯಬೇಕು?"
"ತನ್ನ ಪ್ರಜೆಗಳ ವಿಷಯವನ್ನು ತಿಳಿದುಕೊಳ್ಳುಲು ಆಗದಿದ್ದ ಮೇಲೆ ಅವನಿಗೆ ಖಲೀಫರ ಪಟ್ಟ ಏಕೆ? ಮಣ್ಣು ಹುಯಿದುಕೊಳ್ಳುವುದಕ್ಕೆ?"
"ತಾಯಿ, ಈ ದಿವಸ ನೀನು ನನಗೆ ಒಂದು ಪಾಠ ಕಲಿಸಿಕೊಟ್ಟೆ" ಎಂದು ಖಲೀಫರು ಅವಳಿಗೆ ನಮಸ್ಕಾರ ಮಾಡಿದರು. ಅವಳಿಗೆ ಬೇಕಾದ ಅನುಕೂಲಗಳನ್ನು ಮಾಡಿಕೊಟ್ಟರು.
ಎರಡನೇ ಸನ್ನಿವೇಶ
ಒಂದು ರಾತ್ರಿ ಖಲೀಫ ಉಮರ್, ಜೊತೆಗೆ ಒಬ್ಬ ಸಂಗಡಿಗನನ್ನು ಕರೆದುಕೊಂಡು, ಮದೀನಾ ನಗರದಲ್ಲಿ ಸಂಚಾರ ಹೊರಟರು. ವೇಷಾಂತರದಲ್ಲಿ ರಾತ್ರಿ ಹಾಗೆ ತಿರುಗಾಡಿ, ಜನರ ಕಷ್ಟ ಸುಖಗಳನ್ನು ತಿಳಿದು ಬರುವುದು ಅವರ ರೂಢಿ.
ಆ ರಾತ್ರಿ ಅವರು ಒಂದು ಗುಡಿಸಲ ಹತ್ತಿರ ಹಾಯ್ದು ಹೋದಾಗ ಒಳಗೆ ಏನೋ ಗುಸುಗುಸು ಕೇಳಿಸಿತು. ಖಲೀಫರು ಕಿವಿಗೊಟ್ಟರು. ಒಳಗೆ ಒಬ್ಬ ಮುದುಕಿ ತನ್ನು ಮಗಳ ಹತ್ತಿರ ಮಾತನಾಡುತ್ತಿದ್ದಳು.
"ಈ ಹಾಲು ಮಾರಿ ಬರುವ ಹಣ ನಮ್ಮ ಜೀವನಕ್ಕೆ ಸಾಲದಾಗಿದೆ. ಒಂದಿಷ್ಟು ನೀರು ಸೇರಿಸಿ ಮಾರಿದಾದರೂ ಎರಡು ಕಾಸು ಹೆಚ್ಚಿಗೆ ಕೈಗೆ ಬಂದೀತು!"ಎಂದಳು ಮುದುಕಿ.
ಅದಕ್ಕೆ ಹುಡುಗಿ ಹೇಳಿದಳು: "ಏನಮ್ಮ ಖಲೀಫರ ಆಜ್ಞೆಯನ್ನು ನೀನು ಮರೆತು ಬಿಟ್ಟೆಯಾ? ಹಾಲು ಮಾರುವವರು ಯಾರೂ ಹಾಲಿಗೆ ನೀರು ಬೆರೆಸತಕ್ಕದ್ದಲ್ಲ, ಎಂದು ಅವರು ಡಂಗುರವನ್ನು ಹಾಕಿಸಲಿಲ್ಲವೆ?"
"ಅಯ್ಯೋ ಅವರು ಹೇಳುವುದಕ್ಕೇನು! ನಾವು ಇಲ್ಲಿ ನೀರು ಬೆರೆಸುವಾಗ ಯಾರಿದ್ದಾರೆ ಇಣಿಕಿ ನೋಡುವುದಕ್ಕೆ? ಖಲೀಫರೇ? ಅಥವಾ ಅವರ ಅಧಿಕಾರಿಗಳೇ?"
"ಆದರೂ, ಅಮ್ಮ, ಯಾರು ನೋಡಲಿ, ನೋಡದಿರಲಿ, ಖಲೀಫರ ಆಜ್ಞೆಯಂತೆ ನಡೆಯಬೇಕಾದುದು ನಮ್ಮ ಧರ್ಮ. ನಾವು ಮಾಡಿದ್ದನ್ನು ಖಲೀಫರ ಕಣ್ಣು ಕಾಣದಿರಬಹುದಾದರೂ ಅದನ್ನು ದೇವರ ದೃಷ್ಟಿಯಿಂದ ಮರಸಲಾಗುವುದೇ? ಏನು ನೀನು ಹೇಳುವ ಮಾತು!"
ಆ ಹುಡುಗಿಯ ಮಾತಿಗೆ ತುಂಬ ಸಂತೋಷಪಟ್ಟು, ಖಲೀಫರು ಅಲ್ಲಿಂದ ಹೊರಟು ಹೋದರು.
ಈ ಎರಡೂ ಉದಾಹರಣೆಗಳನ್ನು ಯಾಕೆ ಕೊಟ್ಟೆ ಅಂದರೆ ಆಡಳಿತಾಧಿಕಾರಿಗಳೂ ಪ್ರಾಮಾಣಿಕವಾಗಿರಬೇಕು ಮತ್ತು ಪ್ರಜೆಗಳೂ ಸಹ ಪ್ರಾಮಾಣಿಕವಾಗಿರಬೇಕು. ಒಂದು ವಾಹನದ ಎರಡೂ ಚಕ್ರಗಳು ಸರಿಯಾಗಿದ್ದಲ್ಲಿ ಮಾತ್ರ ಆ ವಾಹನ ಸರಿಯಾಗಿ ಚಲಿಸಬಲ್ಲದು.
ಪ್ರಪಂಚದ ಎಲ್ಲಾ ಧರ್ಮಗಳು ಪ್ರಾಮಾಣಿಕತೆಯ ಪಾಠವನ್ನು ಕಲಿಸುತ್ತವೆ. ಅವನ್ನು ಪಾಲಿಸದೆ ಇರುವುದು ನಮ್ಮ ತಪ್ಪು. ಅರ್ಥಶಾಸ್ತ್ರ ಎಂದಾಕ್ಷಣ ಕಣ್ಮುಂದೆ ಬರುವುದು ಹಣದ ಕಂತೆಗಳ ಚಿತ್ರಣ. ಹಣವೆಂದರೆ ಹೆಣವೂ ಏಳುತ್ತದೆ ಎನ್ನುತ್ತಾರೆ. ಪ್ರಾಮಾಣಿಕತೆ ಇಲ್ಲದೆ ಹೋದರೆ ಇನ್ನೇನು ತಾನೆ ಆಗಲು ಸಾಧ್ಯ ಹೇಳಿ?
ನಮ್ಮ ಪರಿಸ್ಥಿತಿಯನ್ನು ಅವಲೋಕಿಸಿಕೊಂಡರೆ ನಮಗೇ ತಿಳಿಯುತ್ತದೆ. ಸರಕಾರಿ ಅಧಿಕಾರಿಗಳು ಜನರನ್ನು ವಂಚಿಸಲು ಪ್ರಯತ್ನಿಸುತ್ತಿದ್ದಾರೆ. ನಾವು ಸರಕಾರವನ್ನು ಮೋಸ ಮಾಡುತ್ತಿದ್ದೇವೆ. ಒಂದಲ್ಲಾ ಒಂದು ರೀತಿಯಲ್ಲಿ ಇದು ನಡೆಯುತ್ತಿದೆ. ಹಾಗಾದರೆ ಸುಖಿ ದೇಶದ ಕನಸು ಕಾಣುವುದು ಸರಿಯೇ?
ಜನರನ್ನು ಬದಲಿಸಲು ಸಾಧ್ಯವಿಲ್ಲ. ಸರಿ. ಆದರೆ ನಾವು ಬದಲಾಬಹುದಲ್ಲ. ಹನಿ ಹನಿ ಸೇರಿದರೆ ಸಮುದ್ರ. ನಮ್ಮಂತೆಯೇ ಸಮಾನ ಮನಸ್ಕರು ಈ ದೇಶದಲ್ಲಿ ಎಷ್ಟಿದ್ದಾರೋ..? ಖಂಡಿತವಾಗಿಯೂ ಬದಲಾವಣೆಗಳನ್ನು ತರಬಹುದು. ಪ್ರಾಮಾಣಿಕತೆಯಿಂದ ಪ್ರಯತ್ನ ಮಾಡೋಣ ಅಲ್ಲವೇ..?
"ಅಧಿಕಾರಿಗಳು ಸಾಮಾನ್ಯವಾಗಿ ತಮ್ಮ ವಸ್ತುಗಳ ಉಸ್ತುವಾರಿಗಾಗಿ ಜನರನ್ನು(ಸೇವಕರನ್ನು) ನೇಮಿಸಿಕೊಳ್ಳುತ್ತಾರೆ. ನನ್ನ ನಡವಳಿಕೆ ಮತ್ತು ನನ್ನ ಮೇಲೆ ನಿಗಾ ಇಡಲು ನಾನು ನಿಮ್ಮನ್ನು ನೇಮಿಸಿದ್ದೇನೆ. ನನ್ನ ಮಾತು ಅಥವಾ ಕ್ರಮ ದಲ್ಲಿ ನೀವು ತಪ್ಪು ಕಂಡರೆ ನನ್ನನ್ನು ಉಪದೇಶ ಮಾಡಿ ಮತ್ತು ಅದನ್ನು ಮಾಡುವುದರಿಂದ ತಡೆಯಿರಿ" - ಖಲೀಫ ಅಬ್ದುಲ್ ಅಜೀಜ್. ಮುಂದುವರೆಯುವುದು....
- ಜಬೀವುಲ್ಲಾ ಖಾನ್
ಈ ಕನಸು ಅವಾರ್ಡ್
"ಈ ಕ್ಷಣ ನಾನು ನಿಮಗೇನಾದರೂ ಒಂದು ಕೋಟಿ ರೂಪಾಯಿ ಮೊತ್ತದ ನಗದನ್ನು ಕೊಟ್ಟರೆ ನೀವೇನು ಮಾಡುತ್ತೀರಿ?", ಬಚ್ಚನ್ ಸಾಹೇಬರ 'ಕೌನ್ ಬನೇಗಾ ಕರೋಡ್ ಪತಿ' ಕೆಲವು ವರ್ಷಗಳ ಹಿಂದೆ ಹೊಸದಾಗಿ ತೆರೆಗೆ ಬಂದಾಗ ಹುಟ್ಟಿಕೊಂಡ ಟೈಂ ಪಾಸ್ ಪ್ರಶ್ನೆಯಿದು. ಕೋಟಿ ಸಿಕ್ಕ ಅದೃಷ್ಟವಂತ ಜಾಹೀರಾತಿನ ಜಡಿಮಳೆಯ ನಡುವೆ ನಿಮಿಷಾರ್ಧದಲ್ಲಿ ಎಲ್ಲೋ ಮರೆಯಾಗಿದ್ದರೆ ಮೂರ್ಖರ ಪೆಟ್ಟಿಗೆಯ ಮುಂದೆ ಕಾಲಕಳೆಯುವ ತರಲೆಗಳಿಗೆ ಈ ಪ್ರಶ್ನೆ ಕೇಳುವುದರಲ್ಲಿ ಮತ್ತು ಉತ್ತರಿಸುವುದರಲ್ಲಿ ಏನೋ ಖುಷಿ. ಹಾಟ್ ಸೀಟ್, ಪ್ರಶ್ನೆಗಳ ಜುಗಲ್ ಬಂದಿ, ಬಚ್ಚನ್ ಸಾಹೇಬರ ಸಮ್ಮೋಹಕ ಗಡಸುದನಿ ಎಲ್ಲಾ ಹಾರಿಯೋಯಿತು ಈ ಕೋಟಿಯ ಕೋತಿ ಚೇಷ್ಟೆಯ ಮಧ್ಯೆ. ಒಂದು ಕೋಟಿಯನ್ನು ನಮ್ಮ ಕಣ್ಣ ಮುಂದೆಯೇ ಇಟ್ಟಂತೆ ಎಷ್ಟು ಯೋಚಿಸಿ ಉತ್ತರಿಸುತ್ತಿದ್ದೆವು ನಾವು. ಕೈಯಲ್ಲಿ ಹತ್ತರ ನೋಟು ಇದ್ದಾಗ ಸರಿಯಾಗಿ ಅದನ್ನು ಉಪಯೋಗಿಸಿಕೊಳ್ಳುತ್ತಿವೋ ಇಲ್ಲವೋ ಎಂಬುದನ್ನೂ ಇಷ್ಟು ಗಂಭೀರವಾಗಿ ತೆಗೆದುಕೊಂಡಿರಲಿಕ್ಕಿಲ್ಲ.
ಇಷ್ಟೆಲ್ಲಾ ಯಾಕಾಗಿ ಹೇಳಬೇಕಾಯಿತೆಂದರೆ, ಮೊನ್ನೆ ನನ್ನ ಹಿತೈಷಿಯೊಬ್ಬರು ಹೀಗೆ ಕೇಳಿದರು ನನಗೆ, "ನೀವೊಬ್ಬ ವಿಐಪಿ ಸೆಲೆಬ್ರಿಟಿಯೆಂದು ಒಂದು ನಿಮಿಷ ಅಂದುಕೊಳ್ಳಿ. ಹೇಗನಿಸುತ್ತಿದೆ ನಿಮಗೆ? ಜನರನ್ನು ತನ್ನೆಡೆ ಸೆಳೆದುಕೊಳ್ಳಲು ನೀವೇನು ಮಾಡಬಯಸುತ್ತೀರಿ?". ಪ್ರಚಾರಕ್ಕಾಗಿ ಹಾತೊರೆಯುವ ಹಲವು ಸಾಮಾನ್ಯ ಮತ್ತು ಅಸಾಮಾನ್ಯರ ಬಗೆಗಿನ ಟೈಂ ಪಾಸ್ ಹರಟೆಯಲ್ಲಿ ನನ್ನೆಡೆಗೆ ತೂರಿ ಬಂದ ವಾಗ್ಬಾಣವಿದು. ಏನೂ ತಿರುಳಿಲ್ಲದ ಬಾಲಿಶ ಒಣಪ್ರಶ್ನೆಯಾದರೂ ನಿಮಿಷಾರ್ಧಕ್ಕೆ ಏನೆಂದು ಉತ್ತರಿಸಲೂ ಆಗದೆ ನನ್ನನ್ನು ಈ ಪ್ರಶ್ನೆ ಮೂಕನನ್ನಾಗಿಸಿತು. ಕಾರಣವೇನೆಂಬುದನ್ನು ಸಮರ್ಥನೀಯವಾಗಿ ನಾನು ಹೇಳುವುದು ಕಷ್ಟವಾದರೂ ಸೆಲೆಬ್ರಿಟಿ ಮತ್ತು ಪಬ್ಲಿಸಿಟಿ ಎಂಬ ಒಂದು ನಾಣ್ಯದ ಎರಡು ಮುಖಗಳ ಸ್ಪಷ್ಟ ವ್ಯಾಖ್ಯಾನ, ಇನ್ನೂ ತನಗೆ ಅರಿವಾಗದ ಸತ್ಯ ಎಂದು ಖಂಡಿತವಾಗಿಯೂ ಇಲ್ಲಿ ಹೇಳಬಲ್ಲೆ.
ಮೊದಲಾಗಿ ಹೇಳುವುದಾದರೆ ಯಾರನ್ನು ಸೆಲೆಬ್ರಿಟಿಯೆಂದು ಕರೆಯುವುದೇ ಒಂದು ದೊಡ್ಡ ಸಮಸ್ಯೆ. ತೊಂಭತ್ತು ಪ್ರತಿಶತ ಭಾರತೀಯರು ತಮಗೆ ಗೊತ್ತಿರುವಂತೆ ಕೆಲ ಚಲನಚಿತ್ರ ನಟ-ನಟಿಯರನ್ನು, ಕ್ರಿಕೆಟ್ ಪಟುಗಳನ್ನು ಮತ್ತು ಕೆಲ ರಾಜಕಾರಣಿಗಳನ್ನು ತಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಸೆಲೆಬ್ರಿಟಿಯೆಂಬ ಹಣೆಪಟ್ಟಿ ಅಂಟಿಸಿ ತಮಗಿಂತ ಒಂದು ಮಣ ಮೇಲಿನ ಆಸನದಲ್ಲಿ ಸಾರ್ವಕಾಲಿಕವಾಗಿ ಪ್ರತಿಷ್ಠಾಪಿಸಿದ್ದಾರೆ. ಇನ್ನುಳಿದ ಪ್ರತಿಭಾವಂತ ಮಹಾಶಯರಿಗೆ, ಆರೋಗ್ಯದ ಕಾರಣದಿಂದ ನೇಪಥ್ಯಕ್ಕೆ ಸರಿದ ಮಾಜಿ ಸೆಲೆಬ್ರಿಟಿಗಳಿಗೆ, ಅದೃಷ್ಟದ ಬಲವಿಲ್ಲದೆ ತೆರೆಮರೆಗೆ ಸೇರಿದ ಎಲೆಮರೆಕಾಯಿಗಳಿಗೆ, ಮಿಂಚಿನಂತೆ ಒಮ್ಮೆ ಮಿಂಚಿ ಮಿಂಚಿನಷ್ಟೇ ವೇಗವಾಗಿ ಮಾಯವಾದ ಸೆಲೆಬ್ರಿಟಿಗಳಿಗೆ ಹೀಗೆ ಎಲ್ಲರಿಗೂ ಇದರ ಬಗ್ಗೆ ಒಂದು ಹೇಳಲಾರದ ಅಸಮಧಾನವಿದೆ. ಜೀವನದ ಹಾವು ಏಣಿಯ ಆಟದಲ್ಲಿ ಈ "ಇಮೇಜ್" ಎನ್ನುವ ಒಂದು ಗುಂಗು ಹೇಗೋ ಸ್ವಾಭಾವಿಕವಾಗಿ ಬೇರು ಬಿಟ್ಟುಹೋಗಿದೆ. ಹೀಗೆ ಪ್ರಚಾರವೆಂಬ ಸಣ್ಣ ಕ್ಷಣಿಕ ಆಶ್ರಯವನ್ನು ಬಯಸಿ ತನ್ನ ಇರುವಿಕೆಯನ್ನು ತೋರಿಕೊಳ್ಳಬಯಸುವ ಈ ಕಸರತ್ತು ಕೊಂಚ ಹಾಸ್ಯಾಸ್ಪದವಾದರೂ ತನ್ನದೇ ಆದ ಪ್ರಾಮುಖ್ಯತೆಯನ್ನು ಇದು ಉಳಿಸಿಕೊಂಡಿರುವ ಪರಿಯಂತೂ ವಿಶಿಷ್ಟ.
ಯಾರಿಗೆ ಪ್ರಚಾರ ಬೇಡ ಹೇಳಿ! ಮಾಧ್ಯಮ ವಿದ್ಯಾರ್ಥಿಯೊಬ್ಬ ಕ್ಯಾಮೆರಾ ಬೆಳಕಿನ ಬಿಸಿಗೆ ಬೆವತು ಹೋದರೂ ನಾನು ಟಿ.ವಿ ನಿರೂಪಕನಾಗಬಯಸುತ್ತೇನೆ ಎನ್ನುತ್ತಾನೆ. ನಾಲ್ಕಾರು ಪುಸ್ತಕಗಳನ್ನೋದಿ ಅಲ್ಲಲ್ಲಿಂದ ಕೆಲ ವಾಕ್ಯಗಳನ್ನು ಪೋಣಿಸಿ ಒಬ್ಬ ಓದುಗ ಏನೋ ಬರೆಯಲಾರಂಭಿಸಿ ದಿನಬೆಳಗಾಗುವುದರ ಮೊದಲೇ ಬೆಸ್ಟ್ ಸೆಲ್ಲರ್ ಪಟ್ಟಿಯಲ್ಲಿ ತನ್ನನ್ನು ಕಾಣಲು ಹಾತೊರೆಯುತ್ತಾನೆ. ಲೆಕ್ಕವಿಲ್ಲದಷ್ಟು ಮಂದಿ ಸಿನಿಮಾ ಜಗತ್ತಿನ ನಾಯಕ ನಾಯಕಿಯರಾಗಿ ಮಿಂಚುವ ಕನಸು ಕಂಡು ಎಲ್ಲಾ ಬಿಟ್ಟು ಸಿನಿಮಾ ಜಗತ್ತಿಗೆ ಕಾಲಿರಿಸಿ ಜೂನಿಯರ್ ಕಲಾವಿದರಾಗಿ ಹಿನ್ನೆಲೆಯಲ್ಲಿ ಕುಣಿಯುತ್ತಾ ಇದ್ದೂ ಇಲ್ಲವಾಗುತ್ತಾರೆ. ಪ್ರಾದೇಶಿಕ ಸಮಾಚಾರದ ಪತ್ರಿಕಾ ಗೋಷ್ಠಿಗಳಲ್ಲಿ ಏನೋ ಬಡಬಡಿಸುವ ಶಾಸಕನ ಸುತ್ತಲೂ ಹಿಂಬಾಲಕರು ಸುತ್ತುವರಿದು ತಾವೂ ಶಾಸಕರಷ್ಟೇ ಪ್ರಮುಖರೆಂದು ಕ್ಯಾಮೆರಾಗೆ ಮೂಗು ತೋರಿಸುತ್ತಾರೆ.
ಎಲ್ಲಿಂದಲೋ ಎರವಲು ಪಡೆದ, ತಲೆಬುಡವಿಲ್ಲದ ಜೋಕನ್ನು ಫೇಸ್ ಬುಕ್ ನಂತಹ ಸೋಷಿಯಲ್ ನೆಟ್ ವರ್ಕಿಂಗ್ ವಾಲ್ ಮೇಲೆ ಬರೆದು ಒಬ್ಬ ನೆಟ್ಟಿಗ ಅದನ್ನು ಎಷ್ಟು ಜನ ಇಷ್ಟಪಟ್ಟರು ಎಂಬುದನ್ನು ಕೆಲಸದ ನಡುವೆಯೂ ದಿನಕ್ಕೆ ಹತ್ತು ಬಾರಿ ನೋಡುತ್ತಾನೆ. ಇನ್ನು ಸೆಲೆಬ್ರಿಟಿಯೊಬ್ಬ ತಮ್ಮೂರಿಗೆ ಬಂದನೆಂದರೆ ಆಕಾಶದಿಂದ ಭಗವಂತನೇ ಇಳಿದು ಬಂದನೇ ಎಂಬಂತೆ ಅಭಿಮಾನಿಗಳು ಸೆಲೆಬ್ರಿಟಿಯೊಂದಿಗೆ ನಿಂತು ಒಂದು ಫೋಟೋ ತೆಗೆದುಕೊಳ್ಳಲೋ, ಕೈ ಕುಲುಕಲೋ ಹಾತೊರೆಯುತ್ತಾರೆ. ಆ ಮಹಾನುಭಾವನ ಹಸ್ತಾಕ್ಷರವನ್ನು ವರ್ಷಗಳ ಕಾಲ ಸಂರಕ್ಷಿಸಿಡುತ್ತಾರೆ. ಒಂದು ಸಾಮಾನ್ಯ ಮರದ ಕೊರಡು ಸಚಿನ್ ತೆಂಡುಲ್ಕರ್ ಹಸ್ತಸ್ಪರ್ಷವಾದೊಡನೆಯೇ ಹೂವಿನೊಂದಿಗೆ ದಾರವೂ ದೈವತ್ವವನ್ನು ಪಡೆದಂತೆ ಕ್ಷಣಾರ್ಧದಲ್ಲಿ ಬಹುಕೋಟಿ ಬೆಲೆಬಾಳುತ್ತದೆ. ಹೀಗೆ ಸಾಮಾನ್ಯ-ಅಸಾಮಾನ್ಯ, ಪ್ರಖ್ಯಾತ-ಕುಖ್ಯಾತ, ಮಾನವ-ಪಶುವೆಂಬ ಜಂತುಭೇದವಿಲ್ಲದೆ ಎಲ್ಲರೂ ಪ್ರಚಾರ ಪ್ರಿಯರು. ಪ್ರಚಾರ ದೇವೋಭವ!
ಇನ್ನು ಪ್ರಚಾರಕ್ಕಾಗಿ ಬಳಸುವ ಒಂದೊಂದು ನೆಪಗಳೂ, ಸನ್ನಿವೇಶಗಳು ಒಂದಕ್ಕಿಂತ ಒಂದು ಅದ್ಭುತ. ಅತ್ತ ಸಂಪೂರ್ಣ ನಟಿಯೂ ಅಲ್ಲದ ಇತ್ತ ಮಾಡೆಲ್ ಆಗಿ ನೆಲೆಯನ್ನೂ ಉಳಿಸಿಕೊಳ್ಳದ ರಾಖಿ ಸಾವಂತ್ ಮುಂಜಾನೆ ರಾಹುಲ್ ಗಾಂಧಿಯೇ ನನ್ನ ಕನಸಿನ ರಾಜಕುಮಾರ ಎಂದು ಹೇಳಿ ಸಂಜೆಯಾಗುವ ಹೊತ್ತಿಗೆ ಯೋಗಗುರು ಬಾಬಾ ರಾಮದೇವ ಸಕ್ಕತ್ ಹಾಟ್ ಎಂದು ಹಲ್ಲು ಕಿರಿಯುತ್ತಾಳೆ. ಅರುಂಧತಿ ರಾಯ್ರಂತಹ ಸೃಜನಶೀಲ ಲೇಖಕರು ಅಲ್ಲೊಮ್ಮೆ ಇಲ್ಲೊಮ್ಮೆ ಕೋಮುವಾದ, ಸಲಿಂಗಕಾಮಿ ವಿವಾಹ ಹೀಗೆ ನೆನೆಗುದಿಗೆ ಬಿದ್ದಿದ್ದ ವಿವಾದಕ್ಕೀಡಾಗುವ ವಿಷಯದ ಬಗ್ಗೆಯೇ ಮಾತನಾಡಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಾರೆ.
ರಾಮ್ ಗೋಪಾಲ್ ವರ್ಮಾರಂತಹ ಪ್ರತಿಭಾವಂತ ನಿರ್ದೇಶಕರು ತಮಗೆ ಸಂಬಂಧವೇ ಇಲ್ಲದ ಕೊಲೆ ಕೇಸು, ಫ್ಯಾಶನ್ ಷೋಗಳ ಬಗ್ಗೆ ಮಾತನಾಡಿ ಪ್ರಚಾರದೊಂದಿಗೆಯೇ ಅಧಿಕ ಪ್ರಸಂಗಿ ಎನಿಸಿಕೊಳ್ಳುತ್ತಾರೆ. ಆಮಿರ್ ಖಾನರಂತಹ ಬಹುಮುಖ ಪ್ರತಿಭೆ ದೆಲ್ಲಿ-ಬೆಲ್ಲಿಯಂತಹ ಚಿತ್ರ-ವಿಚಿತ್ರವನ್ನು ಜನರ ಮುಂದಿರಿಸಿ ಕುಟುಂಬವೊಂದು ಒಟ್ಟಾಗಿ ಕುಳಿತು ಸಿನಿಮಾ ನೋಡಲೂ ಕೂಡ ಹಿಂದು ಮುಂದು ನೋಡಬೇಕಾದ ಪರಿಸ್ಥಿತಿಯನ್ನು ಸಾದರಪಡಿಸುತ್ತಾರೆ. ನಟಿ ಕಿಮ್ ಕಾರ್ಡಿಶಿಯನ್ ಅದ್ದೂರಿ ಮದುವೆ ಆಮಂತ್ರಣ ಪತ್ರಿಕೆ ಒಂದೆಡೆ ರಾರಾಜಿಸಿದರೆ ಗಾಯಕಿ ಜೆನ್ನಿಫರ್ ಲೋಪೆಝ್ ಮತ್ತು ಆಂಟನಿಯ ಮುರಿದು ಬಿದ್ದ ಸಂಬಂಧವೂ ಒಂದು ಸುದ್ದಿಯಾಗುತ್ತದೆ. ಆಸೀಸ್ ಮಾಜಿ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ತಮ್ಮ ವಿಕೆಟ್ ಉದುರಿಸಿದ ಅದ್ಭುತ ಅಂಕಿಅಂಶಗಳಿಂದ ವಿಸ್ಡನ್ ನಂತಹ ಕ್ರಿಕೆಟ್ ಪತ್ರಿಕೆಗಳಿಗಿಂತಲೂ ನಟಿ ಎಲಿಜಬೆತ್ ಹರ್ಲ್ ಜೊತೆಗಿನ ಒಡನಾಟದಿಂದ ಟಾಬ್ಲಾಯ್ಡ್ ಗಳಲ್ಲಿ ತುಸುಹೆಚ್ಚಾಗಿಯೇ ಕಾಣಿಸಿಕೊಳ್ಳುತ್ತಾರೆ.
ಕೆಲವೇ ವರ್ಷಗಳ ಹಿಂದೆ ನಡೆದ ಹಾಲಿವುಡ್ ನಟಿ ಎಲಿಜಬೆತ್ ಮತ್ತು ಭಾರತೀಯ ಮೂಲದ ಉದ್ಯಮಿ ಅರುಣ್ ನಾಯರ್ ಜೋಡಿಯ ಕಂಡುಕೇಳದಂತಹ ಅದ್ದೂರಿ ಮದುವೆ ಕೇಟ್-ರಾಜಕುಮಾರ ಪ್ರಿನ್ಸ್ ವೈಭವೋಪೇತ ಮದುವೆಯ ಸಮಾರಂಭದ ಹಿಂದೆ ಮುರಿದುಬಿದ್ದ ಸಂಬಂಧದಂತೆಯೇ ಮಂಕಾಗುತ್ತದೆ. ಕೆಂಪು ಕಪ್ಪು ಮಣ್ಣೆಂಬ ಭೇದವಿಲ್ಲದೆ ಒಂದಾದರ ನಂತರ ಇನ್ನೊಂದು ಪ್ರಶಸ್ತಿಯ ಗರಿಯನ್ನು ಮುಡಿಗೇರಿಸುತ್ತಾ ಆಂಡ್ರೆ ಅಗಾಸಿ, ರಫೆಲ್ ನಡಾಲರಂತಹ ಆಟಗಾರರು ತಮ್ಮ ಆಕ್ರಮಣಶೀಲ ಆಟದಿಂದ ಮೈನವಿರೇಳಿಸಿದರೆ, ರೋಜರ್ ಫೆಡರರ್ ನಂತಹ ಶಾಂತಮೂರ್ತಿಯೂ ತಾನೂ ಏನೂ ಕಮ್ಮಿಯಿಲ್ಲವೆಂಬಂತೆ ಸಡ್ಡುಹೊಡೆದು ನಿಂತು ಚಾಕಚಕ್ಯತೆಯ ಆಟದಿಂದ ಮನಸೂರೆಗೊಳ್ಳುತ್ತಾರೆ.
ಪಾಕಿಸ್ತಾನದ ವಿದೇಶ ಮಂತ್ರಿ ಹೀನಾ ರುಬೀನಾ ಖಾನ್ ಭಾರತ-ಪಾಕಿಸ್ತಾನದ ಅಂತಾರಾಷ್ಟ್ರೀಯ ಸಾಮರಸ್ಯಕ್ಕಿಂತಲೂ ತಮ್ಮ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಹ್ಯಾಂಡ್ ಬ್ಯಾಗ್ ನಿಂದಲೋ, ಹೈ ಹೀಲ್ಡ್ ಚಪ್ಪಲಿಯ ಗ್ಲಾಮರ್ನಿಂದಲೋ ಹೆಡ್ ಲೈನ್ ನಲ್ಲಿ ಗುರುತಿಸಿಕೊಳ್ಳುತ್ತಾರೆ. ಜಗತ್ತಿನಾದ್ಯಂತ ಪಸರಿಸಿದ ಸ್ಲಟ್ ವಾಕ್ ಭಾರತಕ್ಕೆ ಬಂದು ಸಂಚಲನವನ್ನುಂಟುಮಾಡಿದರೂ ಭಾರತ-ನೇಪಾಳ ಗಡಿಭಾಗದಲ್ಲಿ ನಡೆದ ಅಮಾಯಕ ಬೌದ್ಧ ಭಿಕ್ಕುವಿನ ಮೇಲೆ ನಡುರಾತ್ರಿಯಲ್ಲಿ ನಡೆದ ಬಸ್ ಚಾಲಕ ಮತ್ತು ಕಂಡಕ್ಟರ್ ನಡೆಸಿದ ಬರ್ಬರ ಅತ್ಯಾಚಾರ ಹೇಳಹೆಸರಿಲ್ಲದಂತೆ ಮೂಲೆ ಸೇರುತ್ತದೆ. ಅಣ್ಣಾ ಹಜಾರೆಯ ಸತ್ಯಾಗ್ರಹದ ನಡುವೆಯೂ ಲೋಕಪಾಲ್ ಸಮಿತಿಯನ್ನು ಸೇರಿ ಅವರೊಂದಿಗೆ ಪ್ರಚಾರ ಗಿಟ್ಟಿಸಿಕೊಳ್ಳಲು ಕಾಣದ ಮುಖಗಳು ಪ್ರಯತ್ನಿಸುತ್ತವೆ. ಪರಲೋಕ ಸೇರಿದರೂ ಎಮ್. ಎಫ್. ಹುಸೇನರ ತೈಲಚಿತ್ರಗಳ ಬಗ್ಗೆ ಪತ್ರಿಕೆಯಲ್ಲಿ ಜರಿಯುತ್ತಾ ಕೆಲ ವಿಮರ್ಶಕರು ಪತ್ರಿಕೆಗಳಲ್ಲಿ ತಾವೇ ಶ್ರೇಷ್ಠರೆಂದು ಮೂಗು ತೂರಿಸುತ್ತಾರೆ. ಹೀಗೆ ಪಟ್ಟಿ ಮಾಡುತ್ತಾ ಹೋದರೆ ಪುಟಗಳಷ್ಟು ಈ ಬಿಟ್ಟಿ ಪ್ರಚಾರದ ಗುಂಗು ಹನುಮಂತನ ಬಾಲದಂತೆ ಮುಂದುವರಿಯುತ್ತದೆ.
ಈ ಬಿಟ್ಟಿ ಪ್ರಚಾರ ಹಲವು ಬಾರಿ ಐಶಾರಾಮಿ ಜೀವನ ಶೈಲಿಯ ಶೋಕಿಗಳಲ್ಲೂ, ತಮ್ಮ ವಿಚಿತ್ರ ನಡವಳಿಕೆಗಳಿಂದಲೂ ದಶಕಗಳಿಂದ ದೇಶ ಕಾಲವೆಂಬ ಭೇದವಿಲ್ಲದೆ ಹರಿದುಬಂದಿದೆ. ಮೂಕಿ ಹಾಸ್ಯಚಿತ್ರಗಳ ದಂತಕಥೆ ಚಾರ್ಲಿ ಚಾಪ್ಲಿನ್ ನೋಡಲು ಸಣಕಲು ಜೋಕರ್ ನಂತಿದ್ದರೂ ಮಹಾ ಸ್ತ್ರೀಲೋಲನಾಗಿದ್ದ. ಪೆಪ್ಸಿ ಕಂಪೆನಿಯ ಜಾಹೀರಾತೊಂದರ ಚಿತ್ರೀಕರಣದಲ್ಲಿ ನಡೆದ ಸಣ್ಣ ಬೆಂಕಿಯ ದುರ್ಘಟನೆಯ ನೆಪವನ್ನಿಟ್ಟು ಪಾಪ್ ದೊರೆ ಮೈಕಲ್ ಜಾಕ್ಸನ್ ಕೇವಲ ಬಿಟ್ಟಿ ಪ್ರಚಾರಕ್ಕಾಗಿ ಕಂಪೆನಿಯ ವಿರುದ್ಧ ಕೇಸು ದಾಖಲಿಸಿ ಮಿಲಿಯನ್ ಗಟ್ಟಲೆ ಪರಿಹಾರಧನವನ್ನು ಎಂಭತ್ತರ ದಶಕದಲ್ಲೇ ಪಡೆದುಕೊಂಡಿದ್ದ. ಒಡಿಸ್ಸಿ ನೃತ್ಯಗಾರ್ತಿ ಪ್ರೊತಿಮಾ ಬೇಡಿ ತನ್ನ ಹರೆಯದ ವಯಸ್ಸಿನಲ್ಲಿ ತನ್ನ ಮಾದಕ ದವ್ಯಗಳ ವ್ಯಸನದಂಥಾ ದುಶ್ಚಟಗಳಿಂದಲೇ ಕುಖ್ಯಾತಿಯನ್ನು ಗಳಿಸಿ ತನ್ನ ವಿಫಲ ಮಾಡೆಲಿಂಗ್ ಜಗತ್ತಿಗೆ ಕಾಲಿರಿಸಿದ್ದರು.
ಗಾಯಕಿ ಲೇಡಿ ಗಾಗಾ ತಮ್ಮ ವಿಚಿತ್ರ ಉಡುಗೆ ತೊಡುಗೆಗಳಿಂದಲೇ ಸುದ್ದಿಯಾಗುತ್ತಾರೆ. ಇನ್ನೋರ್ವ ಗಾಯಕಿ ಲಿಂಡ್ಸೇ ಲೋಹನ್ ಪೀಳಿಗೆ ಮುಗಿಯದಷ್ಟು ಸಂಪತ್ತು ಕೂಡಿಹಾಕಿದ್ದರೂ ಯಾವುದೋ ಸಣ್ಣ ಪುಟ್ಟ ವಸ್ತುಗಳನ್ನು ಅಂಗಡಿಗಳಿಂದ ಕದ್ದು ಕೋರ್ಟು ಮೆಟ್ಟಿಲೇರುತ್ತಾರೆ. ಓಪ್ರಾ ವಿನ್ಫ್ರೇ ತನ್ನ ಅಸಾಮಾನ್ಯ ಮಾತಿನ ಕೌಶಲ್ಯದಿಂದಲೂ, ಸೃಜನಶೀಲ ಕಾರ್ಯಕ್ರಮಗಳಿಂದಲೂ ಯಾರಿಗೂ ತನಗೂ ಬೇಜಾರಾಗದ ರೀತಿಯಲ್ಲಿ ಸಕಾರಾತ್ಮಕ ಪ್ರಭೆಯಲ್ಲಿ ಮನೆಮಾತಾಗುತ್ತಾರೆ. ಗದ್ದಾಫಿಯಂತಹ ಸರ್ವಾಧಿಕಾರಿ ತನ್ನ ಸುಂದರಿ ಅಂಗರಕ್ಷಕಿಯರೊಂದಿಗೆ ಲಲ್ಲೆ ಹೊಡೆದು ವರ್ಣರಂಜಿತ ಜೀವನ ಶೈಲಿಯ ಗುಸುಗುಸು ನೈಜ ಸುದ್ದಿ ಅಚ್ಚರಿ ಮೂಡಿಸುವುದರ ಜೊತೆಯೇ ಒಸಾಮಾ ಉಳಿದುಕೊಂಡಿದ್ದ ಮನೆಯ ಕೋಣೆಗಳಲ್ಲಿ ಪೋರ್ನೋಗ್ರಫಿಯ ಸಿ.ಡಿಗಳು ಪತ್ತೆಯಾಗುತ್ತವೆ. ಸ್ವಾಮಿ ನಿತ್ಯಾನಂದ ಮಾನ ಮರ್ಯಾದೆ ಮೂರಾಬಟ್ಟೆಯಾದರೂ ಆಶ್ರಮಗಳಲ್ಲಿ ತನ್ನ ಭಕ್ತರಿಗೆ ಅಭಯವನ್ನು ಹಸನ್ಮುಖಿ ಭಾವ ಮುದ್ರೆಯಲ್ಲಿ ನೀಡುತ್ತಾ ಏನೂ ಆಗಲೇ ಇಲ್ಲದಂತೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾನೆ. ಎಲ್ಲಾ ಮುಗಿದರೂ ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಬುಷ್ ಯಾಕೋ ಎನೋ ಜೋಕರ್ ರೂಪದಲ್ಲೇ ಉಳಿದುಹೋಗುತ್ತಾರೆ. ಲೀವಿಂಗ್ ರಿಲೇಷನ್ ಶಿಪ್ ನಲ್ಲೇ ದಿನ ದೂಡುತ್ತಿರುವ ಬ್ರಾಡ್ ಪಿಟ್ ಮತ್ತು ಆಂಜೆಲಿನಾ ಜೋಲಿಯ ಆರು ಮಕ್ಕಳೊಂದಿಗಿನ ತುಂಬಿದ ಕುಟುಂಬ ಗಣೇಶನ ಮದುವೆಯ ಆಧುನಿಕ ಉದಾಹರಣೆಯಂತೆ ಚಿತ್ರಿಸಿಕೊಳ್ಳುತ್ತದೆ. ದಶಕಗಳ ಸರಣಿ ಸಾಧನೆಯ ಹೊರತಾಗಿಯೂ ಒಂದು ತಪ್ಪಿನ ಬೆಲೆತೆತ್ತು ಗಾಲ್ಫ್ ವೀರ ಟೈಗರ್ ವುಡ್ ಮಾರುಕಟ್ಟೆಯಲ್ಲಿ ತನ್ನ ಇಮೇಜ್ ಉಳಿಸಿಕೊಳ್ಳಲು ಹೆಣಗಾಡುತ್ತಾರೆ. ಕೆಲವರಿಗೆ ಪ್ರಚಾರದ ಅಗತ್ಯ ಜೀವಜಲದಷ್ಟಿದ್ದರೆ ಇನ್ನು ಕೆಲವರಿಗೆ ಕಾಣಿಕೆಯಾಗಿ ಬೇಡವೆನ್ನುವಷ್ಟು ಸಾಕಾಗಿಹೋಗಿದೆ. ಅಂತಹ ಮಾಯೆಯಿದು!
ವಿಶ್ವವಿಖ್ಯಾತ ಟೆನ್ನಿಸ್ ಆಟಗಾರ ಆಂಡ್ರೆ ಅಗಾಸಿ ತನ್ನ ಆತ್ಮಕಥೆ "ಓಪನ್" ಕೃತಿಯಲ್ಲಿ ಹೀಗೆ ಬರೆಯುತ್ತಾರೆ. "ಇಷ್ಟೆಲ್ಲಾ ಪ್ರಶಸ್ತಿಯ ಗರಿ, ಪ್ರಚಾರದ ಭರಾಟೆ ಇವೆಲ್ಲಾ ಹೇಗನಿಸುತ್ತದೆ ಎಂದು ಪತ್ರಕರ್ತ ಸಂದರ್ಶನವೊಂದರಲ್ಲಿ ನನ್ನ ಬಳಿ ಕೇಳುತ್ತಾನೆ. ಬಹಳ ಖುಷಿಯಾಗುತ್ತದೆಂದು ನಾನು ಅವನಿಗೆ ಉತ್ತರಿಸುತ್ತೇನೆ. ಯಾಕೆಂದರೆ ಪತ್ರಕರ್ತ ಅದನ್ನೇ ನನ್ನಿಂದ ಕೇಳಲು ಬಯಸುತ್ತಾನೆ". ಈ ಮಾತು ನಿರಾಳ ನೀರಸ ಖಾಲಿತನವೆಂಬ ಭಾವ, ಪ್ರಚಾರದ ಅಬ್ಬರದ ಪರಮಾವಧಿಯೇ ಎನ್ನುವಂತೆ ಭಾಸವಾಗುತ್ತದೆ. ಆದರೂ ಈ ಮಾಯೆ ಬಹುಸಂಖ್ಯಾತ ಮನಗಳಲ್ಲಿ ತನ್ನನ್ನು ತಾನು ತೋರಿಸಿಕೊಳ್ಳಲು ಬಡಿದೆಬ್ಬಿಸುತ್ತದೆ. ಓದುಗರೂ ಕೂಡ ಈಗ ತಮ್ಮನ್ನು ಸೆಲೆಬ್ರಿಟಿಯ ಸ್ಥಾನದಲ್ಲಿ, ಅಸಂಖ್ಯಾತ ಕ್ಯಾಮೆರಾದ ಫ್ಲ್ಯಾಷ್ ಬೆಳಕುಗಳ ಮಧ್ಯದಲ್ಲಿ, ಕೋಟ್ಯಾಂತರ ಜನರ ಟೆಲಿವಿಷನ್-ಅಂತರ್ಜಾಲದ ಕಿಟಕಿಗಳಲ್ಲಿ ಒಂದು ಕ್ಷಣ ತಮ್ಮನ್ನು ಕಲ್ಪಿಸಿಕೊಳ್ಳಲು ಪ್ರಯತ್ನಿಸಿದರೆ ಅಚ್ಚರಿಯೇನಿಲ್ಲ. ಆಟದ ಚೆಂಡು ಈಗ ನಿಮ್ಮ ಅಂಗಳದಲ್ಲಿದೆ. "ಹೇಗನಿಸುತ್ತದೆ" ಪ್ರತಿಕ್ರಯಿಸಿ.
ಪ್ರಸಾದ್
ಬಿ. ಟೆಕ್. ಸಿವಿಲ್ ಎಂಜಿನಿಯರ್
ವಾಪ್ಕೋಸ್ ಲಿಮಿಟೆಡ್,ಗುರ್ಗಾಂವ್, ಹರಿಯಾಣ.
ಸಾಹಿತ್ಯ
ಮರೆತೆನೆಂದರೆ ಹೇಗೆ
ಮರೆಯಲೇ ನನ ಮಗುವೆ
ಹಳೆಯ ನೆನಪನ್ನು
ಕನಲಿ ಕಾಡುವ ಕನಸನ್ನು
ನರಳಿ ನಲುಗುವ ಮನದಿ
ಪುಡಿಯಾದ ನಲ್ಮೆಗಳು
ಬಾಡಿರುವ ಜೀವಕ್ಕೆ
ಅಲ್ಲಲ್ಲಿ ಗಾಯಗಳು
ಭೋರಿಡುವ ಹೃದಯದಲಿ
ರೋಷ ದಾವಾಗ್ನಿಗಳು
ಜಡಿಮಳೆಯ ತುಯ್ತದಲಿ
ಭ್ರಮೆಯ ನೆರಳಾಟಗಳು
ನಿನ್ನ ಮಂದಸ್ಮಿತಕೆ
ಕಣ್ಣ ಮಿಂಚಿನ ನೆನಕೆ
ಭರವಸೆಯ ಸಲಿಲವನು
ಹರಿಸಿ ಬಿಡುವೆ
ನನ್ನೊಲವ ಸುರಿ ಸುರಿದು
ನಿನ್ನ ಕಾಪಾಡುವೆನು
ಕನಸ ಕಾಮನ ಬಿಲ್ಲು
ತಂದುಕೊಡುವೆ
ನಿನ್ನ ಎಳೆಮನದಲ್ಲಿ
ಹಸಿರು ತುಂಬುವೆ ಮಗುವೆ
ದೀಪದಡಿ ನೆರಳಿರಲು
ಬೆಳಕು ಸುಳ್ಳೇ ?
- ಜಯಶ್ರೀ ಬಿ.
ರಾಜ್ಯ - ರಾಷ್ಟ್ರ
ಗೋಕರ್ಣ:ಅಯೋಧ್ಯೆ ಒಂದುಕಾಲದಲ್ಲಿ ಸಮಸ್ತಭಾರತದ ಕೇಂದ್ರಭೂಮಿ.ಸೂರ್ಯವಂಶದ ರಾಜರ ರಾಜಧಾನಿ.ವಿಶಾಲವಾದ ರಾಜಮಾರ್ಗಗಳು,ಭವನಗಳು.ಅಲ್ಲಲ್ಲಿ ಸುಂದರ ಉದ್ಯಾನಗಳು.ಭದ್ರವಾದ ಕೋಟೆಗಳು.ವ್ಯವಸ್ಥಿತವಾದ ಪೇಟೆ.ಶಿಲ್ಪಿಗಳು,ಚಿತ್ರಕಾರರು ಕಲಾವಿದರಿಂದ ತುಂಬಿದ ನಗರ.ಅತ್ಯಂತ ಬಿಗುವಾದ ರಕ್ಷಣಾವ್ಯವಸ್ಥೆ.ಶತ್ರುಗಳ ಧಾಳಿಯನ್ನು ತಡೆಯಲು ಎಲ್ಲ ಬಗೆಯ ಯಂತ್ರಗಳು.ಇಂತಹ ಪರಿಪೂರ್ಣವಾದ ನಗರ ರಘುಕುಲತಿಲಕನಾದ ಪ್ರಭು ಶ್ರೀರಾಮಚಂದ್ರನ ಜನ್ಮಭೂಮಿ.
ಅಯೋಧ್ಯೆಯೆಂದರೆ ಶತ್ರುಗಳಿಂದ ಗೆದೆಯಲಾಗದ ನಗರ.ಇದು ಅನ್ವರ್ಥವಾದ ಹೆಸರು. ಯಾಕೆಂದರೆ ನಮ್ಮ ಹೃದಯದಲ್ಲಿ ಶ್ರೀರಾಮನು ನೆಲೆಸಬೇಕೆಂದರೆ ಅದು ದುರ್ಗುಣಗಳಿಂದಗೆಲ್ಲಲಾಗದ ಅಯೋಧ್ಯೆಯಾಗಬೇಕು.ಹಾಗಿದ್ದರೆ ಮಾತ್ರ ಅಲ್ಲಿ ಪರಮಾತ್ಮನ ಆವಾಸ ಎಂಬುದನ್ನು ಮಹರ್ಷಿ ವಾಲ್ಮೀಕಿ ಸೂಚ್ಯವಾಗಿ ನಮ್ಮನ್ನು ಎಚ್ಚರಿಸಿದ್ದಾರೆ ಎಂದು ಪೂಜ್ಯಶ್ರೀಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಹೇಳಿದ್ದಾರೆ.
ಚಾತುರ್ಮಾಸ್ಯದ ನಿಮಿತ್ತ ಆಯೋಜಿತವಾದ ಶ್ರೀರಾಮಕಥೆಯ ಪ್ರವಚನವನ್ನು ನೀಡುತ್ತಿದ್ದ ಶ್ರೀಗಳು ವರಬಲದಿಂದ ಕೊಬ್ಬಿ ವಿನಾಕಾರಣವಾಗಿ ಎಲ್ಲರನ್ನೂ ಪೀಡಿಸುತ್ತಿದ್ದ ರಾವಣ ಒಮ್ಮೆ ಶ್ರೀರಾಮಚಂದ್ರನ ಪೂರ್ವಜ ರಾಜಾ ಅನರಣ್ಯನೊಂದಿಗೆ ಯುದ್ಧಮಾಡಿ ಅವನನ್ನು ಸೋಲಿಸಿದ.ಆದರೆ ಪ್ರಜೆಗಳನ್ನು ಮಕ್ಕಳಂತೆ ಪಾಲಿಸುತ್ತಿದ್ದ ಅನರಣ್ಯ ಮರಣೋನ್ಮುಖನಾದಾಗ ಸೂರ್ಯವಂಶವನ್ನು ಅಪಹಾಸ್ಯಮಾಡಿದ ರಾವಣನಿಗೆ ಮುಂದೆ ನನ್ನ ವಂಶದವನಾದ ದಶರಥನಿಗೆ ಮಗನಾಗಿ ಹುಟ್ಟುವ ಶ್ರೀರಾಮನಿಂದ ನಿನಗೆ ಮರಣ ಬರಲಿ ಎಂದು ಶಪಿಸಿದ.
ಹೀಗೆ ತನ್ನದೇ ಅವಿವೇಕದಿಂದಾಗಿ ಮೊದಲು ನಂದೀಶ್ವರನ ಶಾಪದಿಂದ ತನ್ನ ವಧೆಗಾಗಿ ವಾನರರೂಪದ ಸಹಾಯಕರನ್ನು,ವೇದವತಿಯಿಂದ ಸೀತಾರೂಪಳಾಗಿ ಕಂಟಕಳಾಗುವ ಶಾಪವನ್ನು ಪಡೆದ ರಾವಣ ಕೊನೆಗೆ ಅಯೋಧ್ಯೆಯ ಅನರಣ್ಯನಿಂದ ಅವನವಂಶದವರಿಂದಲೇ ವಧೆಯಾಗುವಂತೆ ಶಾಪಿತನಾದ. ಹೀಗೆ ಒಂದರನಂತರ ಮತ್ತೊಂದು ತಪ್ಪನ್ನು ಮಾಡುತ್ತಹೋದ ರಾವಣನೆಂದೂ ತನ್ನ ಕೃತ್ಯಕ್ಕಾಗಿ ಪಶ್ಚಾತ್ತಾಪ ಪಡಲಿಲ್ಲ. ನಮ್ಮ ಹೃದಯದಲ್ಲಿ ಭಗವಂತನ ಆವಿರ್ಭಾವವಾಗಬೇಕಾದರೆ ಅದು ರಘುವಂಶದರಾಜರಂತೆ ಪರಿಶುದ್ಧವಾಗಿರಬೇಕು ಎಂದು ಹೇಳಿದರು. ಪ್ರೇಮಲತಾ ದಿವಾಕರ್.ವಸುಧಾ ಶರ್ಮಾ , ಶ್ರೀಪಾದ ಭಟ್ ಇವರ ಗಾಯನ,ಪ್ರಕಾಶರ ವೇಣುವಾದನ,ನರಸಿಂಹ ಮೂರ್ತಿಯವರ ಮೃದಂಗ,ಗೋಪಾಲಕೃಷ್ಣ ಹೆಗಡೆಯವರ ತಬಲಾ ವಾದನಗಳು ರಾಘವೇಂದ್ರ ಹೆಗಡೆಯವರ ಮರಳುಶಿಲ್ಪ ಗಣಪತಿ ನೀರ್ನಳ್ಳಿಯವರ ಆಶುಚಿತ್ರಗಳು ತುಂಬಾ ಮನೋಹರವಾಗಿದ್ದವು.
ಮಂಗಳೂರು ಮಂಡಲದ ಉರ್ವಾಲು,ಉಪ್ಪಿನಂಗಡಿ,ವೇಣೂರು,ಉಜಿರೆ ವಲಯಗಳ ಶಿಷ್ಯಸಮುದಾಯದಿಂದ ಶ್ರೀಗುರುದೇವತಾಸೇವೆ,ಗಾಣಿಗಸಮಾಜದಶಿಷ್ಯರಿಂದ ಶ್ರೀಗುರುಪಾದುಕಾಪೂಜೆ ಸಮರ್ಪಿತಗೊಂಡವು.ಧರ್ಮಸಭೆಯಲ್ಲಿ ಪೂಜ್ಯಶ್ರೀಗಳು ಆಶೀರ್ವಚನ ಮಂತ್ರಾಕ್ಷತೆಗಳನ್ನು ಅನುಗ್ರಹಿಸಿದರು. ಶ್ರೀಸವಾರಿಯ ವ್ಯವಸ್ಥಾಪಕ ಶ್ರೀರಾಘವೇಂದ್ರ ಮಧ್ಯಸ್ಥರು ನಿರ್ವಹಿಸಿದರು.
Video


