ಸಾಹಿತ್ಯ
ಬಿಕ್ಕುತ್ತಿದೆ ಹೃದಯ
ಅರಿಯದೇ ಅವಸರದಲ್ಲಿ ಆಡಿದ ಮಾತಿಗೆ
ಕೈಜಾರಿ ಹೋದ ಕ್ಷಣಗಳಿಗೆ
ಹೇಳಿದ ಮಾತಿನ ಭಾವ ಒಂದೇ ಆದರೂ
ಕೇಳಿದ ಕಿವಿಗೆ ಅದರ ಅರ್ಥ ಹಲವಾರು-
ಧ್ವನಿಸಿದ್ದೇ ಈ ಅಪಾರ್ಥಗಳಿಗೆ ಮುನ್ನುಡಿ
ಹೇಳಿದ್ದೊಂದೇ ಮಾತಾದರೂ ಹೇಳಲಾಗದೆ
ಹೋದವೆಷ್ಟೋ!
ಮಧ್ಯೆ ನುಗ್ಗಿ ಸುಂದರ ಕೊಳಕ್ಕೆ
ಕಲ್ಲು ಹಾಕಿದವೆಷ್ಟೋ
ಈ ಮಾತನಾಡಿದವರಿಗೂ ಮುಗಿಯದ ಬೇಜಾರು
ಕೇಳಿದವರಿಗೂ
ಧಿಕ್ಕಾರವಿರಲಿ ನನ್ನ ಬಾಯಿಂದ ಜಾರಿದ ಆ
ಬಿರು ನುಡಿಗಳಿಗೆ.ಕ್ಷಮೆಯಿರಲಿ...
- ಸೌಮ್ಯ ಸಾಗರ.
ರಾಜ್ಯ - ರಾಷ್ಟ್ರ
ಮೂಲ್ಕಿ : ಹೆಜಮಾಡಿ ಕಿರು ಮೀನುಗಾರಿಕಾ ಬಂದರಿನಲ್ಲಿ 2 ಕೋಟಿ ರೂಪಾಯಿ ವೆಚ್ಚದ ಹೂಳೆತ್ತುವಿಕೆ ಕಾಮಗಾರಿಗೆ ಶಾಸಕ ಲಾಲಾಜಿ ಆರ್.ಮೆಂಡನ್ ಬುಧವಾರ ಚಾಲನೆ ನೀಡಿದರು.
ಕಳೆದ4 ವರ್ಷಗಳ ಹಿಂದೆ ಬಿ.ನಾಗರಾಜ ಶೆಟ್ಟಿ ಮೀನುಗಾರಿಕಾ ಸಚಿವರಾಗಿದ್ದ ಸಂದರ್ಭ ಹೆಜಮಾಡಿ ಬಂದರಿಗೆ ಯಂತ್ರಿಕ ದೋಣಿಗಳು ಆಗಮಿಸಲು ಅಸಾಧ್ಯವಾಗಿ ಪಾಳು ಬಿದ್ದ ಕಾರಣ ಹೂಳೆತ್ತುವಿಕೆಗಾಗಿ ಇಲಾಖೆಯಿಂದ 2 ಕೋಟಿ ರೂ. ಬಿಡುಗಡೆಗೊಳಿಸಿದ್ದರು. ಆದರೆ ತಾಂತ್ರಿಕ ತೊಂದರೆ ಗಳಿಂದ ಡ್ರೆಜ್ಜಿಂಗ್ ಕಾಮಗಾರಿಗೆ ತಡೆವುಂಟಾಗಿತ್ತು. ಸ್ಥಳೀಯ ನಾಗರೀಕರು ಮತ್ತು ಜನಪ್ರತಿನಿಧಿಗಳ ಅವಿರಥ ಶ್ರಮದ ಬಳಿಕ ಸಂಸದ ( ಈಗಿನ ಮುಖ್ಯಮಂತ್ರಿ ) ಡಿ.ವಿ ಸದಾನಂದ ಗೌಡ ಮತ್ತು ಶಾಸಕ ಲಾಲಾಜಿ ಆರ್.ಮೆಂಡನ್ ಮುತುವರ್ಜಿ ವಹಿಸಿ ತಡೆಯನ್ನು ನಿವಾರಿಸಿ ಕಾಮಗಾರಿಗೆ ಅನುವು ಮಾಡಿಕೊಟ್ಟಿದ್ದರು.
ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಪ್ರದೀಪ್ ಮಾಲೀಕತ್ವದ ಪ್ರಣವ್ ಎಂಟರ್ಪ್ರೈಸಸ್ ನವರು ದೇಶದಲ್ಲಿಯೇ 7 ನೇ ಅತ್ಯುತ್ತಮ ಎನ್ನಬಹುದಾದ ಹಾಲಂಡ್ನಿಂದ ತರಿಸಿದ ಬೆವರ್ ಕಟ್ಟರ್ ಸಕ್ಷನ್ ಡ್ರಿಪ್ಪರ್ ಎಂಜಿನ್ ಮೂಲಕ ಡ್ರೆಜ್ಜಿಂಗ್ ಕಾಮಗಾರಿ ಆರಂಭಿಸಿದ್ದು, ಪ್ರತಿ ಗಂಟೆಗೆ 200 ಕ್ಯುಬಿಕ್ ಮೀಟರ್ನಷ್ಟು ಹೂಳೆತ್ತಲು ಅವಕಾಶ ಹೊಂದಿದೆ. ಮುಂದಿನ 4 ತಿಂಗಳ ಕಾಲ ಹೂಳೆತ್ತುವ ಕಾಮಾಗಾರಿ ನಡೆಯಲಿದ್ದು ಹೆಜಮಾಡಿ ಬಂದರಿನಿಂದ ಶಾಂಭವಿ ನದಿಯ ಅಳಿವೆ ಬಾಗಿಲ (ಸುಮಾರು 2 ಕಿ.ಮೀ.) ತನಕ ಹೂಳೆತ್ತಲು ನಿರ್ಧರಿಸಲಾಗಿದೆ.
ಬಂದರಿನಿಂದ ಉತ್ತರಕ್ಕೆ ನಡಿಕುದ್ರು ಸೇತುವೆ ತನಕವೂ ಹೂಳೆತ್ತಲೂ ಸರಕಾರದ ಪ್ರಿನ್ಸಿಪಾಲ್ ಸೆಕ್ರೆಟರಿ ಶಿವರಾಮ್ ಇತ್ತಿಚೆಗೆ ಭೇಟಿ ನೀಡಿದ್ದ ಸಂದರ್ಭ ಇಲಾಖಾಧಿಕಾರಿ ಗಳಿಗೆ ಸೂಚನೆ ನೀಡಿದ್ದು , ಅದಕ್ಕಾಗಿ ಸುಮಾರು 75 ಲಕ್ಷ ರೂ. ಬಿಡುಗಡೆಗೊಳಿಸಲಾಗಿದೆ. ಅಲ್ಲಿನ ಸರ್ವೇ ನಡೆದ ಬಳಿಕ ಆ ಕಾಮಗಾರಿಯೂ ನಡೆಯಲಿದೆ. ಸಮುದ್ರ ತೀರ ದ ತಗ್ಗು ಪ್ರದೇಶಗಳಿಗೆ ಹೂಳೆತ್ತಿದ ಮರಳನ್ನು ತುಂಬಿಸಲು ಇಲಾಖೆ ನಿರ್ಧರಿಸಿದ್ದು , ಅಳಿವೆ ಪ್ರದೇಶ ಸುತ್ತ ಅಧಿಕ ಖಾಲಿ ಜಾಗ ಎತ್ತರಿಸಲಾಗುವುದು ಎಂದು ಇಲಾಖಾಧಿಕಾರಿಗಳೂ ತಿಳಿಸಿದ್ದಾರೆ.
ಹೆಜಮಾಡಿ ಆಲಡೆ ಅರ್ಚಕ ಶಂಕರ ಭಟ್ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನ ನಡೆದ ಬಳಿಕ ಶಾಸಕ ಮೆಂಡನ್ ಡ್ರೆಜ್ಜಿಂಗ್ ಇಂಜಿನ್ ಚಾಲನೆಗೊಳಿಸುವ ಮೂಲಕ ಕಾಮಗರಿಗೆ ಚಾಲನೆ ನಿಡಿದರು.
ಜಿಪಂ ಸದಸ್ಯೆ ಗೀತಾಂಜಲಿ ಸುವರ್ಣ, ಗ್ರಾಪಂ ಅಧ್ಯಕ್ಷೆ ವರದಾಕ್ಷಿ ಸಾಲ್ಯಾನ್, ಉಪಾಧ್ಯಕ್ಷ ವಾಮನ ಕೋಟ್ಯಾನ್, ಮೂಲ್ಕಿ ವಲಯ ಪರ್ಸಿನ್ ಮತ್ತು ಟ್ರಾಲ್ ಬೋಟು ಮೀನುಗಾರರ ಸಂಘದ ಪದಾಧಿಕಾರಿಗಳಾದ ವಿಜಯ ಎಸ್. ಬಂಗೇರ , ವಿನೋದ್ ಕೋಟ್ಯಾನ್ , ನಾರಾಯಣ ಮೆಂಡನ್, ಶ್ರೀಧರ ಮೆಂಡನ್, ಸುಧಾಕರ ಕರ್ಕೇರ, ಕರುಣಾಕರ ಕರ್ಕೇರ, ಗಿಲ್ನೆಟ್ ಯೂನಿಯನ್ನ ಏಕನಾಥ ಕಕೇರ ಜನಾರ್ಧನ ಸುವರ್ಣ , ಬಂದರು ಮತ್ತು ಮೀನುಗಾರಿಕಾ ಇಲಾಖಾ ಎಇಇ ಎಮ.ಎನ್. ಖಾರ್ವಿ, ಎಇ ಸಂತೋಷ್ ಕುಮಾರ್ ಉಳ್ಳಾಲ್, ಗುತ್ತಿಗೆದಾರ ಪ್ರದೀಪ್ ಮತ್ತಿತರರು ಉಪಸ್ಥಿತರಿದ್ದರು.
ಅ.15ರೊಳಗೆ ಮುಖ್ಯಮಂತ್ರಿ ಬಳಿ ನಿಯೋಗ
ರಾಜ್ಯ ಕೇಂದ್ರ ಸರಕಾರವು ಅಬಿವೃದ್ದಿಗಾಗಿ ಅನುದಾನ ಬಿಡುಗಡೆಗೊಲಿಸುತ್ತಿದ್ದರೂ, ಅತ್ಯಗತ್ಯವಾಗಿ ಬೇಕಾದ ಹೆಜಮಾಡಿ ಬಂದರಿಗೆ ಯಾವುದೇ ಅನುದಾನ ಬಿಡುಗಡೆ ಗೊಳಿಸದಿರುವ ಬಗ್ಗೆ ಸ್ಥಳೀಯ ಮೀನುಗಾರರು ತೀವ್ರ ಅಸಮಧಾನಗೊಂಡಿದ್ದು , ಬುಧವಾರ ಶಾಸಕ ಮೆಂಡನ್ ಬಳಿ ಅಳಲು ತೋಡಿ ಕೊಂಡರು.
ಬಂದರಿಗೆ ಬೇಟಿ ನೀಡಿದ್ದ ಸದಾನಂದ ಗೌಡರು ನೀಡಿದ್ದ ಭರವಸೆಯನ್ನಾದರೂ ಅವರಿಗೆ ತಿಳಿ ಹೇಳುವಂತೆ ಮೀನುಗಾರರನೇಕರು
ವಿನಂತಿಸಿಕೊಂಡ ಮೇರೆಗೆ ಮೆಂಡನ್ ನವರು ಮುಖ್ಯಮಂತ್ರಿಗಳ ಜತೆ ಸ್ಥಳಿಯ ಮೀನುಗಾರರು, ಇಲಾಖಾಧಿಕಾರಿಗಳ ಜತೆ ಭೇಟಿಯಾಗಿ ಇಲ್ಲಿನ ಗಂಭೀರ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು ಎಂದವರು ಪತ್ರಿಕೆಗೆ ತಿಳಿಸಿದ್ದಾರೆ.
ತಕ್ಷಣ ಬ್ರೇಕ್ವಾಟರ್ ಕಾಮಗಾರಿಗಾಗಿ 20ಕೋಟಿ ಬಿಡುಗಡೆಗೊಳಿಸಿ
ಹೆಜಮಾಡಿ ಬಂದರಿನ ಪ್ರಮುಖ ಸಮಸ್ಯೆ ಏಂದರೆ ಬಂದರು ವ್ಯಾಪ್ತಿಯಾದ್ಯಂತ ಹೂಳು ತುಂಬಿರುವುದು ಅಳಿವೆಯ ನಿರಂತರ ಚಾಲನೆಯಿಂದ ಯಾಂತ್ರಿಕ ದೋಣಿಗಳು ಬೇಕಾದಲ್ಲಿ ಸಂಚರಿಸಲಾಗುವುದು. ಅದಕ್ಕಾಗಿ ತಕ್ಷಣ ಬ್ರೇಕ್ ವಾಟರ್ ನಿರ್ಮಾಣ ಕೈಗೊಂಡಲ್ಲಿ ಸಕಲ ಸಮಸ್ಯೆ ತಕ್ಷಣ ಪರಿಹಾರವಾಗಲಿದೆ ಎಂಬುದು ಸ್ಥಳೀಯ ಮೀನುಗಾರರ ವಾದ. ಇದನ್ನು ಇಲಾಖಾ ಮುಖ್ಯಸ್ಥರು ಒಪ್ಪುತ್ತಾರೆ. ಅದಕ್ಕಾಗಿ ಮುಖ್ಯಮಂತ್ರಿ ಗಳ ಮನ ಒಲಿಸಿ ಬ್ರೇಕ್ ವಾಟರ್ ನಿರ್ಮಾಣದ ಪ್ರಥಮ ಹಂತದ ಕಾಮಗಾರಿಗೆ 20 ಕೊಟಿ ರೂಪಾಯಿ ಬಿಡುಗಡೆ ಗೊಳಿಸ ಬೇಕೆಂದು ಸ್ಥಳೀಯ ಮೀನುಗಾರರು ಆಗ್ರಹಿಸಿದ್ದಾರೆ.
ಹೆಜಮಾಡಿ ಬಂದರು ಇದ್ದಿದ್ದರೆ ಮಂಗಳೂರು ದುರಂತ ತಪ್ಪುತ್ತಿತ್ತು
ಇತ್ತಿಚೇಗೆ ಮಂಗಳೂರಿನಲ್ಲಿ ನಡೆದ 2 ದೋಣಿ ದುರಂತಗಳು ಹೆಜಮಾಡಿ ಬಂದರು ಇರುತ್ತಿದ್ದರೆ ನಡೆಯುತ್ತಿರಲಿಲ್ಲ ಎಂಬುದು ಹಿರಿಯ ಮೀನುಗಾರರ ವಾದ. ಎನ್ಎಂಪಿಟಿ ಬಂದರಿನಲ್ಲಿ ಮೀನುಗಾರಿಕಾ ದೋಣಿಗಳಿಗೆ ಸೂಕ್ತ ಅವಕಾಶ ಕೊಡದ ಹಿನ್ನೆಲೆಯಲ್ಲಿ ದುರಂತ ಸಂಭವಿಸಿತ್ತು. ಹೆಜಮಾಡಿ ಬಂದರು ಇರುತ್ತಿದ್ದಲ್ಲಿ ಸಮಸ್ಯೆ ಪರಿಹಾರ ವಾಗುತ್ತಿತ್ತು. ಸರಕಾರ ಇದನ್ನೂ ಗಮನದಲ್ಲಿರಿಸ ಬೇಕೆಂದು ಮೀನುಗಾರರು ಆಗ್ರಹಿಸಿದ್ದಾರೆ.
ಚಿತ್ರ - ವರದಿ: ಭಾಗ್ಯವಾನ್ ಮುಲ್ಕಿ
ರಾಜ್ಯ - ರಾಷ್ಟ್ರ
ಯುಗಪುರುಷ ಹಾಗೂ ವಿಜಯಾ ಕಲಾವಿದರು ನೀಡುವ ಕೆ.ಜೆ.ಶೆಟ್ಟಿ ಕಡಂದಲೆ ಪ್ರಶಸ್ತಿಗೆ ವಿಜಯ ಕರ್ನಾಟಕದ ಮಂಗಳೂರು ಆವೃತ್ತಿಯ ಉಪಸಂಪಾದಕ ಸ್ಟೀವನ್ ರೇಗೊ ಆಯ್ಕೆಯಾಗಿದ್ದಾರೆ.ವಿಜಯಕರ್ನಾಟಕದಲ್ಲಿ ಪ್ರಕಟವಾಗಿದ್ದ ಸ್ಟೀವನ್ ರೇಗೊ ಅವರ `ಮಲ್ಲಿಗೆಯ ಕಟು ವಾಸನೆ, ಟ್ರ್ಯಾಜಿಡಿ ಊರು ಶಂಕರಪುರ ' ವರದಿಯು ತೀರ್ಪುಗಾರರ ಗಮನ ಸೆಳೆದಿದೆ. ಅತಿಯಾದ ಕೀಟನಾಶಗಳ ಬಳಕೆ ವಿರುದ್ಧ ಜಾಗೃತಿ ಮೂಡಿಸುವ ಅವರ ಲೇಖನವು ಗ್ರಾಮೀಣ ವರದಿಗಾರಿಕೆ ಹಾಗೂ ನಗರಾಭಿವೃದ್ಧಿ ಸೇತುವಾಗಿತ್ತು.ಪತ್ರಕರ್ತ ದಿವಂಗತ ಕೆ.ಜೆ.ಶೆಟ್ಟಿ ಕಡಂದಲೆ ಸ್ಮರಣಾರ್ಥ ನೀಡುವ ಪ್ರಶಸ್ತಿಯು 15 ಸಾವಿರ ರೂ. ನಗದು, ಫಲಕ ಹಾಗೂ ಸನ್ಮಾನ ಪತ್ರ ಒಳಗೊಂಡಿದೆ. ಅ.2ರಂದು ಸಂಜೆ ಕಿನ್ನಿಗೋಳಿ ಯುಗಪುರುಷ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ತಿಳಿಸಿದ್ದಾರೆ.
ರಾಜ್ಯ - ರಾಷ್ಟ್ರ
ಬೆಂಗಳೂರು: ಜಗದ್ಗುರುಶಂಕರಾಚಾರ್ಯಮಹಾಸಂಸ್ಥಾನಮ್ - ಶ್ರೀ ಸಂಸ್ಥಾನ ಗೋಕರ್ಣ, ಶ್ರೀ ರಾಮಚಂದ್ರಾಪುರ ಮಠ ಬೆಂಗಳೂರು ಹವ್ಯಕ ಮಂಡಲ ಮಂಡಲೋತ್ಸವ ಸಮಾರಂಭವು ಅ.2ರಂದು ಬೆಳಗ್ಗೆ 9ರಿಂದ ಸಂಜೆ 6ರ ತನಕ ಬೆಂಗಳೂರು ಶ್ರೀರಾಮಾಶ್ರಮ ಗಿರಿನಗರದಲ್ಲಿ ನಡೆಯಲಿದೆ. ಗೋಕರ್ಣಮಂಡಲಾಧೀಶ್ವರ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀಶ್ರೀಮದ್ರಾಘವೇಶ್ವರಭಾರತೀ ಮಹಾಸ್ವಾಮಿಗಳ ದಿವ್ಯ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ದೆಹಲಿ ಸರ್ವೋಚ್ಛನ್ಯಾಯಾಲಯದ ಹಿರಿಯ ನ್ಯಾಯವಾದಿ ಕೆ.ಎನ್.ಭಟ್ಟ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ.
ರಾಜ್ಯ - ರಾಷ್ಟ್ರ
ನವೆಂಬರ್ 11 - 13 : ಮೂಡಬಿದಿರೆಯಲ್ಲಿ ಕನ್ನಡದ ಕಲರವ
ಮೂಡಬಿದಿರೆ: ಆಳ್ವಾಸ್ ಎಜುಕೇಷನ್ ಫೌಂಡೇಷನ್ ಆಶ್ರಯದಲ್ಲಿ ನಡೆಯಲಿರುವ ಎಂಟನೇ ವರುಷದ " ಆಳ್ವಾಸ್ ನುಡಿಸಿರಿ"ಯನ್ನು ಸಾಹಿತಿ ಬರಗೂರು ರಾಮಚಂದ್ರಪ್ಪ ಉದ್ಘಾಟಿಸಲಿದ್ದಾರೆ. ಬರಗೂರು ರಾಮಚಂದ್ರಪ್ಪನವರು 2004ರಲ್ಲಿ ಪ್ರಾರಂಭಗೊಂಡ ಆಳ್ವಾಸ್ ನುಡಿಸಿರಿಯ ಮೊಟ್ಟಮೊದಲ ಸರ್ವಾಧ್ಯಕ್ಷರಾಗಿದ್ದರು. ಇದೀಗ ಎಂಟನೇ ನುಡಿಸಿರಿಯ ಉದ್ಘಾಟನೆಯನ್ನು ಹಿರಿಯರಾದ ಬರಗೂರು ರಾಮಚಂದ್ರಪ್ಪ ನೆರವೇರಿಸುತ್ತಿರುವುದು ಹರ್ಷತಂದಿದೆ ಎಂದು ಆಳ್ವಾಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ನುಡಿಸಿರಿ ರೂವಾರಿ ಡಾ.ಎಂ.ಮೋಹನ ಆಳ್ವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬರಗೂರು ರಾಮಚಂದ್ರಪ್ಪನವರು 1946 ಅಕ್ಟೋಬರ್ 18ರಂದು ತುಮಕೂರು ಜಿಲ್ಲೆಯ ಬರಗೂರು ಎಂಬಲ್ಲಿ ಜನಿಸಿದರು. ಕೆಂಚಮ್ಮ ಮತ್ತು ರಂಗದಾಸಪ್ಪ ಅವರ ಸುಪುತ್ರರಾಗಿ ಜನಿಸಿದ ಬರಗೂರು ರಾಮಚಂದ್ರಪ್ಪನವರು ಬೆಂಗಳೂರು ವಿ.ವಿ. ಕನ್ನಡ ಅಧ್ಯಯನ ಕೇಂದ್ರದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಎರಡು ವರುಷ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ನೀಡಿದ್ದಾರೆ. ಬರಗೂರು ರಾಮಚಂದ್ರಪ್ಪನವರ ಕಥಾ ಸಂಕಲನ ಸುಂಟರಗಾಳಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ ದೊರಕಿದೆ. ಒಂದು ಊರಿನ ಕಥೆಗಳು, ಕನ್ನಡಾಭಿಮಾನ, ಕಪ್ಪು ನೆಲದ ಕೆಂಪುಕಾಲು, ಮರಕುಟಿಕ, ರಾಜಕಾರಣಿ, ಸಾಹಿತ್ಯ, ಸುಂಟರಗಾಳಿ, ಸೂತ್ರ, ಕಾಂಟೆಸ್ಸಾ ಕಾವ್ಯ ಮೊದಲಾದ ಕೃತಿಗಳು ಓದುಗರಲ್ಲಿ ಅಚ್ಚಳಿಯದೆ ಉಳಿಯುವಂತಾಗಿದೆ.
"ಕನ್ನಡ ಮನಸ್ಸು ಸಂಘರ್ಷ ಮತ್ತು ಸಾಮರಸ್ಯ " ಪರಿಕಲ್ಪನೆಯಲ್ಲಿ ಈ ಬಾರಿಯ ಆಳ್ವಾಸ್ ನುಡಿಸಿರಿ ಸಮ್ಮೇಳನ ನಡೆಯಲಿದೆ. ನವೆಂಬರ್ 11ರಂದು ಬೆಳಗ್ಗೆ ಬೃಹತ್ ವೇದಿಕೆಯಲ್ಲಿ ನುಡಿಸಿರಿಯ ಉದ್ಘಾಟನೆಯನ್ನು ಈ ಮಹಾನ್ ಸಾಹಿತಿ ನೆರವೇರಿಸಲಿದ್ದಾರೆ.
ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಪ್ರತಿನಿಧಿಗಳು ಸಮ್ಮೇಳನದಲ್ಲಿ ಸದಸ್ಯರಾಗಿ ಭಾಗವಹಿಸುವ ನಿರೀಕ್ಷೆಯಿದೆ.ಆಳ್ವಾಸ್ ನುಡಿಸಿರಿ 2011ರ ಪ್ರತಿನಿಧಿಗಳಾಗಬಯಸುವವರು ಹಾಗೂ ಆಳ್ವಾಸ್ ನುಡಿಸಿರಿ ಪೂರ್ವಭಾವೀ ಸಮಾಲೋಚನಾ ಸಭೆಗಳನ್ನು ತಮ್ಮ ಕ್ಷೇತ್ರಗಳಲ್ಲಿ ನಡೆಸಲು ಆಸಕ್ತ ಕನ್ನಡಾಭಿಮಾನಿಗಳು ಉತ್ಸುಕರಾಗಿದ್ದಲ್ಲಿ ಆಳ್ವಾಸ್ ಸಂಸ್ಥೆಯ ನುಡಿಸಿರಿ ಕಛೇರಿಯನ್ನು ಸಂಪರ್ಕಿಸಬಹುದು.(ದೂರವಾಣಿ ಸಂಖ್ಯೆ : 08258 - 261229,238104 - 111)
ರಾಜ್ಯ - ರಾಷ್ಟ್ರ
ಮಂಗಳೂರು : ಭಾರತೀಯ ವಾಯು ಸೇನೆಯ ದಕ್ಷಿಣ ವಿಭಾಗ ತನ್ನ 50ನೇ ವಷರ್ಾಚರಣೆಯ ಸಂದರ್ಭದಲ್ಲಿ ಯುವಕರಲ್ಲಿ ವಾಯುಪಡೆಯ ಬಗ್ಗೆ ಜಾಗೃತಿ ಮೂಡಿಸಲು ಮೋಟಾರು ಸೈಕಲ್ ರ್ಯಾಲಿ ಹಮ್ಮಿಕೊಂಡಿದ್ದು ರ್ಯಾಲಿ ಮೈಸೂರಿನಿಂದ ಮಂಗಳೂರಿಗೆ ಆಗಮಿಸಲಿದೆ.
ವಾಯುಪಡೆಯ 20 ಮೋಟಾರ್ ಸೈಕಲಿಸ್ಟ್ ಮಂಗಳೂರಿಗೆ 22ರಂದು ಸಂಜೆ ನಾಲ್ಕು ಗಂಟೆಗೆ ನಗರ ಪ್ರವೇಶ ಮಾಡಲಿದ್ದು, ಅಲೋಷಿಯಸ್ ಕಾಲೇಜಿನ ಬಳಿ ಕಾರ್ಯಕ್ರಮ ನೀಡುವರು ಎಂದು ಸ್ಥಳೀಯ ಕಚೇರಿಯ ಪ್ರಕಟಣೆ ತಿಳಿಸಿದೆ.
ವಿಚಾರ
ಸಾರ್ವಜನಿಕವಾಗಿ ಬಿಸಿಬಿಸಿ ಚರ್ಚೆಯಾಗಿ, ಪರ-ವಿರೋದಿ ವಾಗ್ವಾದಗಳಿಗೆ ಕಾರಣಗಳಾದ ಜ್ವಲಂತ ಸಮಸ್ಯೆಗಳು ಇನ್ಯಾವುದೋ ವಿವಾದ, ಮತ್ಯಾವುದೋ ಹಗರಣ, ಅಕಸ್ಮಿಕ ಅನಾಹುತಗಳ ನಂತರ ಜನರ ಮನಸ್ಸಿನಿಂದ ಮರೆಯಾಗುವುದು, ಆ ಪ್ರಕರಣದಿಂದ ಯಾರು ಲಾಭ ಪಡೆಯುತ್ತಾರೋ ಅವರು ಅದನ್ನು ತಲುಪಿಸಬೇಕಾದ ಜಾಗಕ್ಕೆ ತಲುಪಿಸುವುದು, ಜನ ಹಿಂದಿನದನ್ನು ಮರೆತು ಹೊಸ ಪ್ರಕರಣಗಳನ್ನು ಆವಾಹಿಸಿಕೊಳ್ಳುವುದು ನಿರಂತರವಾಗಿ ನಡೆದಿದೆ. ಧಿಕ್ಕಾರ ಕೂಗುವವನು ಕೂಗುತ್ತಲೇ ಇರುತ್ತಾನೆ, ಪ್ರಕರಣಗಳು ಮಾತ್ರ ಬದಲಾಗುತ್ತಿರುತ್ತವೆ ಅಷ್ಟೆ. ಪ್ರತಿಭಟನೆಗಳು ಆ ಕ್ಷಣದ ಕಾವು ಮತ್ತು ಅಂದಿನ ವಾಸ್ತವ ಮಾತ್ರ. ಗುರಿ ತಲುಪಬೇಕಾದ ಅಗತ್ಯ ಹಾಗೂ ಅನಿವಾರ್ಯತೆ ಯಾರಿಗೂ ಇರುವುದಿಲ್ಲ. ಇವೆಲ್ಲವನ್ನು ನೋಡಿದಾಗ ಈ ಹೋರಾಟಗಳೆಲ್ಲಾ ಕೇವಲ ಸುದ್ಧಿಯಲ್ಲಿರುವುದಕ್ಕಾಗಿಯೇ? ಅಥವಾ ತಮ್ಮ ಅಸ್ಥಿತ್ವವನ್ನು ಸಾಬೀತುಪಡಿಸಲೋ ಎಂದು ಅನುಮಾನವಾಗುತ್ತದೆ. ಒಂದು ಹಗರಣವನ್ನು ಜನರ ಮನಸ್ಸಿನಿಂದ ದೂರ ಮಾಡಲು ಇನ್ಯಾರದ್ದೋ ಇನ್ನೊಂದು ಹಗರಣವನ್ನು ಮುಂಚೂಣಿಗೆ ತಂದು ಹಿಂದಿನದನ್ನು ಸಕ್ರಮಗೊಳಿಸುವ ವ್ಯವಸ್ಥಿತ ಯೋಜನೆಗಳಿಂದ ಜನ ಹಿಂದಿನಿಂದಲೂ ಪಿಗ್ಗಿ ಬೀಳುತ್ತಲೇ ಇದ್ದಾರೆ.
ಶೇಖಡಾ 33ರಷ್ಟು ಇರಬೇಕಾದ ಕಡೆ ಕೇವಲ ಶೇಖಡಾ 18 ನ್ನು ಮಾತ್ರ ಅದೂ ಸರ್ಕಾರೀ ದಾಖಲೆಗಳಲ್ಲಿ ಇರುವ ರಾಜ್ಯದ ಅರಣ್ಯ ಪ್ರದೇಶ ಇಡೀ ವಿಶ್ವದ ಆಸ್ತಿ. ಬೆಟ್ಟ-ಗುಡ್ಡ , ಗಿಡ-ಮರಗಳಲ್ಲಿ, ನದಿ-ತೊರೆಗಳಲ್ಲಿ ದೇವರನ್ನು ಕಾಣುವುದೆಂದರೆ ಯಾವುದೋ ಒಂದು ಮರ, ಒಂದು ಕಲ್ಲಿನ ತುಂಡನ್ನು ಗುಡಿಯೊಳಗಿರಿಸಿ, ಕುಂಕುಮ ಹಚ್ಚಿ, ಗಂಟೆ ಬಾರಿಸಿ ಪೂಜಿಸುವುದಲ್ಲ.
ಅನಗತ್ಯ ರಸ್ತೆಗಳು, ವಿವೇಚನಾರಹಿತ ಜಲವಿದ್ಯುತ್ ಯೋಜನೆಗಳು, ಪರಿಸರ ಪ್ರವಾಸೋದ್ಯಮದ ಹೆಸರಿನಲ್ಲಿ ನಡೆಯುತ್ತಿರುವ ಖಾಸಗಿಯವರ ಬಂಡವಾಳ ಹೂಡಿಕೆಗಳ ಮೂಲಕ ಸಮಸ್ತ ಜೀವಸಂಕುಲದ ಆಸ್ತಿಯನ್ನು ತಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಬಳಸುತ್ತಿರುವುದು ಅಕ್ಷಮ್ಯ. ಅರಣ್ಯವನ್ನು ಏಟಿಎಮ್ ಎಂದು ಭಾವಿಸಿ ದಿನನಿತ್ಯ ನಿರಂತರವಾಗಿ ಗೊತ್ತುಗುರಿಯಿಲ್ಲದೇ ದೌರ್ಜನ್ಯಕ್ಕೆ ಗುರಿಪಡಿಸಲಾಗುತ್ತಿದೆ. ಈ ಪ್ರಕೃತಿಯು ನಮ್ಮ ಮುಂದಿನ ದಿನಗಳಲ್ಲಿ ಮೈದೆಳೆಲಿರುವ ಜೀವಸಂಕುಲದ ಆಸ್ತಿ. ಅದು ನಾವು ನೀಡುತ್ತಿರುವ ದಾನವಲ್ಲ, ನಾವೇ ಇಲ್ಲಿ ಸಾಲಗಾರರು. ಈ ಅಮೂಲ್ಯ ಕಾಡುಗಳನ್ನು ರಕ್ಷಿಸಲು, ವಿಸ್ತರಿಸಲು ತ್ವರಿತ ಕ್ರಮ ಕೈಗೊಳ್ಳದಿದ್ದರೆ ಅದು ನಮ್ಮ ಮೂರ್ಖತನದ ಪರಮಾವಧಿ.
ರಸ್ತೆ, ಜಲವಿದ್ಯುತ್, ಗಣಿಗಾರಿಕೆ, ತೈಲಸಾಗಣೆ, ಕೃಷಿಗಾಗಿ ಭೂಮಿ ಒತ್ತುವರಿ ಮುಂತಾದುವು ಸರಕಾರೀ ಯೋಜನೆಗಳ ಹೆಸರಿನಲ್ಲಿ ಪರಿಸರದ ಮೇಲೆನಡೆಯುತ್ತಿರುವ ಅಮಾನುಷ ಅತ್ಯಾಚಾರ. ಅದರ ಪರವಾಗಿ ಮಾತನಾಡುವವರು ಆಧುನಿಕ ದುಶ್ಯಾಸನರೇ ಸರಿ.
ಹತ್ತಾರು ನದಿಗಳಿಗೆ ಉಗಮ ಸ್ಥಾನವಾದ ಪಶ್ಚಿಮಘಟ್ಟಗಳು ಪ್ರಪಂಚದ ಜೀವವೈವಿಧ್ಯದ ಹಾಟ್ಸ್ಪಾಟ್ ಆಗಿದೆ. ಇಲ್ಲಿರುವ ಇರುವೆ, ಗೆದ್ದಲು, ಹುಲ್ಲು, ಪೊಟರೆಯೊಳಗಿನ ಹಕ್ಕಿ, ಧರೆಗುರುಳಿದ ಮರ, ಕಲ್ಲು ಇವೆಲ್ಲವಕ್ಕೂ ಅವುಗಳದೇ ಆದ ಜೈವಿಕ ಮಹತ್ವ ಇದೆ. ನಮ್ಮ ಯಾವುದೇ ರೀತಿಯ ಮದ್ಯ ಪ್ರವೇಶವು ದೊಡ್ಡ ಜೈವಿಕ ದುರಂತಕ್ಕೆ ಕಾರಣವಾಗುತ್ತದೆ.
ಅಭಿವೃದ್ಧಿಯೆಂದರೆ ಏನು? ಕಾಡಿನೊಳಗೆ ರಸ್ತೆ ಮಾಡಿಸಿ ಗುತ್ತಿಗೆದಾರರಿಗೆ ಕೆಲಸ ಒದಗಿಸುವುದಾ?, ಪರ್ವತದ ಒಡಲು ಬಗೆದು ಖನಿಜ ಹೊರತೆಗೆಯುವುದಾ?, ಜೀವನದಿಗಳನ್ನು ಅಡ್ಡಗಟ್ಟಿ, ತಿರುವಿ ಕಾಡು ಮುಳುಗಿಸಿ ಖಾಸಗಿಯವರಿಗೆ ಬಂಡವಾಳ ಹೂಡಲು ಅನುಕೂಲ ಮಾಡಿಕೊಡುವುದಾ?, ಕಾಡಿನಂಚಿನಲ್ಲಿರುವ ಒತ್ತುವರಿ ಕೃಷಿಭೂಮಿಗೆ ವಾಣಿಜ್ಯ ಬೆಲೆ ದೊರಕಿಸಿಕೊಡುವುದಾ? ಎಲ್ಲಿ ಪುಕ್ಕಟೆ ಸಂಪನ್ಮೂಲ ಹಾಗೂ ಹಣ ಓಡಾಡುತ್ತದೆಯೋ ಅಲ್ಲೆಲ್ಲ ಪ್ರಕೃತಿಯ ಮೇಲೆ ದಾಳಿ ಅವ್ಯಾಹತವಾಗಿ ನಡೆಯುತ್ತದೆ.
ಜೈವಿಕ ಪರಿಸರವನ್ನು ಕಾಪಾಡುವುದಕ್ಕೇ ಯುನೆಸ್ಕೋ ಸ್ಥಳೀಯ ಸರಕಾರಗಳಿಗೆ ಸಹಕಾರ ನೀಡುತ್ತಿರುವುದು ಒಂದು
ರಚನಾತ್ಮಕ ಬೆಳವಣಿಗೆ. ಅದನ್ನು ಅರಿಯದೇ ತಿರಸ್ಕರಿಸಿ ದಾಷ್ಟ್ರ್ಯ ಮೆರೆದರೆ ಅದು ರಾಜ್ಯ ಸರಕಾರದ ಅಕ್ಷಮ್ಯ ಅಪರಾದವೇ ಸರಿ. ಯಾರ ಹಿತವನ್ನು ಕಾಪಾಡಲು ಈ ವಿರೋಧವನ್ನು ತೋರಿಸುತ್ತಿದೆ ಎಂದು ಹೇಳಲಿ. ಗಿರಿಜನರು, ವಿದ್ಯುತ್ ಸಮಸ್ಯೆ, ವನ್ಯಜೀವಿ ರಕ್ಷಣೆ, ಮುಂತಾದುವುಗಳಿಗೆ ಪ್ರಾಯೋಗಿಕ ಪರಿಹಾರವನ್ನು ಕಂಡುಕೊಳ್ಳಲಾರದ ಸರಕಾರ ತನ್ನ ಭಂಡತನವನ್ನು ಮರೆಮಾಚಲು ಯುನೆಸ್ಕೋ ಜತೆ ಗುದ್ದಾಡಿದೆವೆಂಬ ಹಮ್ಮಿಗೆ ಬಿದ್ದು ವರ್ತಿಸುತ್ತಿರುವುದು ತಪ್ಪು. ಇದರಿಂದ ಯುನೆಸ್ಕೋ ಕಳೆದುಕೊಳ್ಳುವುದು ಏನೂ ಇಲ್ಲ, ನಷ್ಟವಾಗುವುದು ನಮ್ಮೆಲ್ಲರಿಗೆ ಮತ್ತು ನಮ್ಮನಿಮ್ಮೆಲ್ಲರನ್ನೂ ಕಾಪಾಡುತ್ತಿರುವ ಜೈವಿಕ ವ್ಯವಸ್ಥೆಗೆ.
ಅಭಿವೃದ್ಧಿಯೆಂದರೆ ಕಾಂಕ್ರೀಟ್ ಕಟ್ಟಡ, ಟಾರು ರಸ್ತೆ, ವ್ಯಾಪಾರೀ ಮಳಿಗೆಗಳನ್ನು ನಿರ್ಮಿಸಲು ತಮ್ಮ ರಾಜಕೀಯ ಕಾರ್ಯಕರ್ತರಿಗೆ ಅನುವು ಮಾಡಿಕೊಡುವುದು ಎಂದುಕೊಂಡಿರುವುದು ನಮ್ಮ ತಿಳುವಳಿಕೆಗಿರುವ ಮಿತಿ. ಸೀಮಿತ ಸಂಪನ್ಮೂಲಗಳನ್ನು ಸುಸ್ತಿರವಾಗಿ ಉಳಿಸಿಕೊಂಡೇ ಹೆಜ್ಜೆ ಮುಂದಿಡಬೇಕಾದ ಅಗತ್ಯ ಹಿಂದೆಂದಿಗಿಂತಲೂ ಇಂದಿದೆ. ಅಲ್ಲಲ್ಲಿ ಅಲ್ಪಸ್ವಲ್ಪ ಉಳಿದಿರುವ ಕಾಡನ್ನು ವಿಚಲಿತಗೊಳಿಸದೇ ಅಭಿವೃದ್ಧಿ ಸಾಧಿಸಲು ಪ್ರಯತ್ನಿಸದಿರುವುದೇ ನಮ್ಮ ದೌರ್ಬಲ್ಯ.
ಅರಣ್ಯ ಮತ್ತು ಪರಿಸರವೆಂದರೆ ಮರಮುಟ್ಟು ನೀಡುವ ಅಕ್ಷಯ ಖಜಾನೆ ಎಂದುಕೊಂಡಿರುವ ನಾಯಕರು, ಬಂಜರು ಪ್ರದೇಶದಲ್ಲಿ ನೀಲಗಿರಿ, ಅಕೇಶಿಯಾ, ಸಾಗುವಾನಿ ಗಿಡಗಳನ್ನು ನೆಡುವದರಿಂದಲೇ ಅರಣ್ಯ ಸೃಷ್ಟಿಮಾಡಿದೆವೆಂದು ಬೀಗುವ ಅಧಿಕಾರಿಗಳು ಸ್ವಲ್ಪ ಪರಿಸರ ಅದ್ಯಯನ ಮಾಡುವುದು ಒಳ್ಳೆಯದು. ಕಲ್ಲು ಕೀಳುವುದು, ಮರ ಉರುಳಿಸುವುದು, ಕಾಡು ಮಳುಗಿಸುವುದು, ಪ್ರವಾಸಿಗರಿಂದ ದುಡ್ಡು ಪೀಕುವುದು, ರೈಲು ಹಳಿ ಹಾಕುವುದು, ಪೈಪ್ಲೈನ್ ಅಳವಡಿಸುವುದು, ವಿದ್ಯುತ್ ಸಾಗಣೆಗೆ ಲೈನ್ ಎಳೆಯುವುದು ಮಾತ್ರ ಅಭಿವೃದ್ಧಿಯಲ್ಲವೆಂದು ಅರಿಯುವುದು ಅಗತ್ಯವಾಗಿದೆ.
ಗಣಿಗಾರಿಕೆ, ಕೈಗಾರಿಕೆ, ಕೃಷಿಭೂಮಿ ಒತ್ತುವರಿ, ಅರಣ್ಯ ಉತ್ಪನ್ನಗಳ ಲೂಟಿ ಇವನ್ನೆಲ್ಲಾ ನಿಯಂತ್ರಣದಲ್ಲಿಡಬೇಕಾದ ಸರಕಾರ ಪಶ್ಚಿಮಘಟ್ಟಕ್ಕೆ ಯುನೆಸ್ಕೋ ನೀಡಲುದ್ದೇಶಿಸಿದ್ದ ಮಾನ್ಯತೆಯನ್ನು ವಿವೇಚನೆಯಿಂದ ಸ್ವಾಗತಿಸಿ, ಸಿಕ್ಕಿರುವ ಗೌರವವನ್ನು ಪಡೆಯಬೇಕಿತ್ತು. ನೂರಾರು ದೇಶಗಳು ತಮ್ಮ ಪರಂಪರೆಯ ತಾಣಗಳಿಗೆ ಯುನೆಸ್ಕೋ ಮಾನ್ಯತೆ ಸಿಗಲೆಂದು ಆಶಿಸುತ್ತಿರುವಾಗ ಕರ್ನಾಟಕದ ವಿಮುಖತೆ ಆಶ್ಚರ್ಯ ಹಾಗೂ ಮರುಕ ಉಂಟುಮಾಡುತ್ತದೆ. ಬಂಡವಾಳಶಾಹಿಗಳು ಹಾಗೂ ಗುತ್ತಿಗೆದಾರರೇ ಈ ಸರಕಾರವನ್ನು ನಡೆಸುತಿದ್ದಾರೋ ಎಂಬ ಅನುಮಾನ ಉಂಟಾಗುತ್ತಿದೆ. ಜನಸೇವೆ ಮಾಡಲು ಆಯ್ಕೆಯಾದವರು ಜನರ ಮೇಲೇ ಸವಾರಿ ಮಾಡುವುದು ಸರಿಯಲ್ಲ.
ಕಾಡಿನೊಳಗೆ ಪ್ರವೇಶಿಸಿದೊಡನೆ ಎದುರಾಗುವ ಮರದಿಂದ ಎಷ್ಟು ಚದರಡಿ ನಾಟಾ ಪಡೆಯಬಹುದೆನ್ನುವುದು, ಕಾಡು ಸವರಿ ತೋಟಮಾಡಿದರೆ ಎಷ್ಟು ಬೆಳೆ ತೆಗೆಯಬಹುದೆನ್ನುವುದು, ಕರಿಕಲ್ಲು ಕಿತ್ತರೆ ಎಷ್ಟು ಗಳಿಸಬಹುದೆನ್ನುವುದು, ನೆಲ ಅಗೆದರೆ ಎಷ್ಟು
ಅದಿರು ಸಾಗಿಸಬಹುದೆನ್ನುವುದು, ನೀರು ಕಟ್ಟಿ ನಿಲ್ಲಿಸಿದರೆ ಎಷ್ಟು ಕಮಿಷನ್ ಪಡೆಯಬಹುದೆನ್ನುವುದು, ಗಿರಿಜನರನ್ನು ಸ್ಥಳಾಂತರಿಸಿದರೆ ಹುಟ್ಟುವ ಕಾಲೋನಿಗಳಲಿ ಎಷ್ಟು ಓಟು ಪಡೆಯಬಹುದೆನ್ನುವುದು, ರಸ್ತೆ ನಿರ್ಮಾಣ ಮಾಡಲು ಗುತ್ತಿಗೆ ನೀಡಿದರೆ ಪಾರ್ಟಿಗೆ ಎಷ್ಟು ಫಂಡ್ ಪಡೆಯಬಹುದೆಂದು ಯೋಚಿಸುವುದನ್ನು ಬಿಟ್ಟು ಮರದ ಮೇಲಿರುವ ಆರ್ಕಿಡ್ , ತೊಗಟೆಯಡಿ ವಾಸಿಸುವ ಹುಳುಹುಪ್ಪಟೆಗಳು, ಕಪ್ಪೆಗಳು, ಪೊಟರೆಯ ಪಕ್ಷಿಗಳು, ನೆಲದಲ್ಲಿನ ಅಣಬೆಗಳು, ಮರಗಳು ಬೇರಿಳಿಸಿ ಬಾಷ್ಪೀಕರಿಸುವ ನೀರು, ನೆಲದಡಿಯ ಸೂಕ್ಷ್ಮ ಜೀವಿಗಳು, ಕಲ್ಲಿನಡಿಯ ನೀರಿನ ಸಂಗ್ರಹ, ದೊಣೆಗಳೊಳಗಿನ ಸರೀಸೃಪಗಳು ಇವುಗಳನ್ನು ಗಮನಿಸಲಿ. ಇವೆಲ್ಲವೂ ಸೇರಿಯೇ ಅರಣ್ಯವಾಗುತ್ತದೆ.
ಪಶ್ಚಿಮಘಟ್ಟವನ್ನು ವಿಶ್ವಪರಂಪರೆಯ ಪಟ್ಟಿಗೆ ಯಾಕೆ ಸೇರಿಸಬೇಕೆಂದು ಕೇಳಿದರೆ ಕನಿಷ್ಟ ನೂರು ಕಾರಣ ನೀಡಬಹುದಾದರೆ, ಯಾಕೆ ಸೇರಿಸಬಾರದೆಂಬುದಕ್ಕೆ ಮೂರು ವಿತಂಡವಾದಗಳು ಸಿಗಬಹುದು. ಜೈವಿಕ ಪರಿಸರ, ಪರಿಸರ ವಿಜ್ಞಾನ, ಮಾಲಿನ್ಯ ನಿಯಂತ್ರಣ, ಅರಣ್ಯ ಸಂರಕ್ಷಣೆ ಮುಂತಾದುವುಗಳ ಬಗ್ಗೆ ತಳಮಟ್ಟದ ಚರ್ಚೆಯಾಗಬೇಕು. ಇಂದಿನ ಲಾಭಕ್ಕಾಗಿ ಮಿಲಿಯಾಂತರ ವರ್ಷಗಳ ಈ ಭೂಮಿಯನ್ನು ಬಲಿಕೊಡುವುದು ಬೇಡ. ಯುನೆಸ್ಕೋ ಪರಂಪರಾ ತಾಣಗಳ ನಿರ್ವಹಣೆಯ ಕುರಿತಾದ ನೀತಿನಿಯಮಾವಳಿಗಳನ್ನೇ ಪೂರ್ಣವಾಗಿ ಅಧ್ಯಯನ ಮಾಡದೇ ಸಾರಾಸಗಟಾಗಿ "ಜುಟ್ಟು" ಹೇಳಿಕೆಯನ್ನು ನೀಡಿರುವುದು ಎಷ್ಟರಮಟ್ಟಿಗೆ ಸರಿ?
ಅರಣ್ಯ ಇಲಾಖೆಯ ಅಧಿಕಾರಿಗಳಲ್ಲದೇ ಆ ಕ್ಷೇತ್ರದಲ್ಲಿ ಪರಿಣತಿ, ಆಸಕ್ತಿಯುಳ್ಳ ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳು, ವಿಜ್ಞಾನಿಗಳು ಸೇರಿ ಸಮಗ್ರವಾಗಿ ಪರಂಪರಾತಾಣಗಳ ಉಸ್ತ್ತುವಾರಿ ಮಾಡಬೇಕೆನ್ನುವುದನ್ನು ಯುನೆಸ್ಕೋ ಸೂಚಿಸುತ್ತದೆ. ಪ್ರವಾಸಿಗಳು ಬರಲಿ, ಬಿಡಲಿ ನಮಗೆ ನಮ್ಮ ಅರಣ್ಯ ಪ್ರದೇಶದ ಸೂಕ್ಷ್ಮ ಮೂಲಸ್ವರೂಪವನ್ನು ಉಳಿಸಿಕೊಳ್ಳುವುದು ಮುಖ್ಯ.
ವೈಜ್ಞಾನಿಕ ಅನ್ವೇಷಣೆಗಳ ಅಳವಡಿಕೆ, ಐಷಾರಾಮಿ ಜೀವನ ಶೈಲಿಗಳ ಅನುಕರಣೆ, ವಿದೇಶೀ ಜೀವನ ಶೈಲಿಗಳತ್ತ ನೋಡುವ, ದನ ಸಾಕುವುದು ಹೇಗೆಂದು ತಿಳಿಯಲು ವಿದೇಶೀ ಪ್ರವಾಸ ಹೋಗುವ ಮಂತ್ರಿ ಮಹೋದಯರಿಗೆ, ಶೌಚಗೃಹಗಳ ನಿರ್ಮಾಣ ತಂತ್ರಜ್ಞಾನ ತಿಳಿಯಲು ವಿದೇಶಕ್ಕೆ ಅದ್ಯಯನ ತಂಡವನ್ನು ಕಳಿಸುವ ಸರಕಾರಕ್ಕೆ, ಕೆರೆ ಹೂಳೆತ್ತುವ ನೆಪದಲ್ಲಿ, ರಸ್ತೆ ನಿರ್ಮಾಣದ ಕಾರಣಕ್ಕೆ, ಚರಂಡಿ ನಿರ್ಮಾಣದ ನೆಪದಲ್ಲಿ ದುಡ್ಡುಹೊಡೆಯಲು ವಿಶ್ವಬ್ಯಾಂಕ್ ನೆರವಿಗೆ ಕೈಒಡ್ಡುವ ನಮಗೆ, ನಮ್ಮ ಕಾಡನ್ನು ರಕ್ಷಣೆ ಮಾಡಲು ವಿಶ್ವಸಂಸ್ಥೆಯ ನೆರವಿನ ಅಗತ್ಯವಿಲ್ಲ ಎನ್ನುವುದು ಹಾಸ್ಯಾಸ್ಪದವಾಗಿ ಕಾಣುತ್ತದೆ.
ನಾವೇ ಸ್ಥಳೀಯರು ರಕ್ಷಣೆ ಮಾಡುತ್ತೇವೆಂದು ಈವರೆವಿಗೆ ಕಾಪಾಡಿಕೊಂಡಿರುವುದು ನಮ್ಮ ಕಣ್ಣಮುಂದಿದೆ. ನಮ್ಮೊಡನೆ ಯಾರೋ ಸದುದ್ದೇಶ ಹೊಂದಿರುವವರು ಕೈಜೋಡಿಸಿದರೆ ಎಲ್ಲಿ ನಮ್ಮಗಳ ಹುನ್ನಾರ ಜಾರಿಯಾಗಲು ಕಷ್ಟವಾಗುತ್ತದೋ ಎಂಬ ಭಯ ಅಧಿಕಾರಸ್ಥರನ್ನು ಕಾಡುತ್ತಿದೆ. ಈ ಅರಣ್ಯ ಪ್ರದೇಶ ಯಾರೊಬ್ಬರ ಸ್ವಂತ ಆಸ್ತಿಯಲ್ಲ, ಇಡೀ ಜಗತ್ತಿನ ಜೀವರಾಶಿಯ ಮಿಲಿಯಾಂತರ ವರ್ಷಗಳ ಫಲಶೃತಿ.
ಸ್ಥಳೀಯರಿಗೆ ಇಲ್ಲಸಲ್ಲದ ಸುಳ್ಳು ಹೇಳಿ, ಆಮಿಷ ಒಡ್ಡಿ ಹಾದಿತಪ್ಪಿಸುವುದನ್ನು ಬಿಟ್ಟು ಪಶ್ಚಿಮ ಘಟ್ಟವನ್ನು ಕಾಪಾಡುವತ್ತ
ಗಮನ ಹರಿಸುವುದು ಮತ್ತು ಜವಾಬ್ದಾರಿಯುತ ಹಾಗೂ ತಿಳುವಳಿಕೆಯುಳ್ಳ ನಾಗರೀಕರನ್ನು ಒಳಗೊಂಡ ಜೈವಿಕ ಪರಿಸರ ರಕ್ಷಣಾ ತಂಡಗಳನ್ನು ತಾಲ್ಲೂಕುವಾರು ರಚಿಸುವುದು ಇಂದಿನ ಅಗತ್ಯವಾಗಿದೆ. ಅರಣ್ಯವಾಸಿಗಳನ್ನು ಯಾವುದಾದರೂ ನೆಪದಲ್ಲಿ ಒಕ್ಕಲೆಬ್ಬಿಸಿ ಉದ್ದಿಮೆಗಳಿಗೆ ಕಾರ್ಮಿಕರನ್ನು ಸೃಷ್ಟಿಸಲು ಪ್ರಯತ್ನಿಸುತ್ತಿರುವ ಬಂಡವಾಳಶಾಹಿಗಳೊಂದಿಗೆ ಕೈಜೋಡಿಸುತ್ತಿರುವ ಆಡಳಿತ ವ್ಯವಸ್ಥೆ ತಮ್ಮ ಅಧಿಕಾರದ ಅವದಿಯಲ್ಲಿ ಇಡೀ ಕಾಡನ್ನೇ ಹರಾಜು ಹಾಕಲು ಹೊರಟಿರುವುದು ವಿಪರ್ಯಾಸ.
ಸ್ಥಳೀಯ ಅಮಾಯಕ ಜನರಿಗೆ ಪರಿಹಾರ ಹಣದ ಆಮಿಷ ಒಡ್ಡಿ ಅವರನ್ನು ಹಾದಿ ತಪ್ಪಿಸಲು ಸಕರ್ಾರದ ಬಳಿ ಸಾಕಷ್ಟು ದಾರಿಗಳಿವೆ. ಕೃಷಿ ಮಾಡುವುದು ನಷ್ಟದ ಬಾಬತ್ತೆಂದು ರೈತರಿಗೆ ಅನ್ನಿಸುವಂತೆ ಪರಿಸ್ಥಿತಿ ಸೃಷ್ಟಿಮಾಡಿ, ಪರಿಹಾರ ರೂಪದ ಹಣದಲ್ಲಾದರೂ ಜೀವನ ಮಾಡುವ ಎಂದು ನಗರಕ್ಕೆ ವಲಸೆ ಹೋಗುವಂತೆ ಮಾಡುವುದು, ನಗರದಲ್ಲಿ ಇರುವ ಅಧಿಕಾರಸ್ತರ ಉದ್ದಿಮೆಗಳಿಗೆ ಕೂಲಿ-ಕಾರ್ಮಿಕರನ್ನು ಪೂರೈಕೆ ಮಾಡುವುದು ಇದರ ಪರೋಕ್ಷ ಹುನ್ನಾರ. ಇಲ್ಲಿ ರೈತರು ಮೂರುಕಾಸಿಗೆ ಮಾರಿದ ಭೂಮಿಯನ್ನು ತಾವೇ ಖರೀದಿಸಿ, ರೈತರನ್ನೇ ಕೂಲಿಗಿಟ್ಟುಕೊಳ್ಳುವ ವ್ಯವಸ್ಥಿತ ಲೂಟಿಯ ಭಾಗವೇ ಈ ಎಲ್ಲಾ ವಿದ್ಯಮಾನಗಳು.
ಈಗ ಗುರುತಿಸಿರುವ ಅರಣ್ಯಪ್ರದೇಶಗಳು ಮಾತ್ರವಲ್ಲ, ರಾಜ್ಯದಾದ್ಯಂತ ಇರುವ ಇನ್ನೂ ಹಲವು ತಾಣಗಳನ್ನು ಆಯ್ಕೆ ಮಾಡಿ ಶೀಘ್ರವೇ ಯುನೆಸ್ಕೋ ಮಾನ್ಯತೆಗೆ ಶಿಫಾರಸ್ಸು ಮಾಡಿ ಸರ್ಕಾರ ಕೋರಿಕೆ ಸಲ್ಲಿಸಬೇಕು.
ಮರಗಳ್ಳರು, ಗಣಿಕೋರರು, ಅರಣ್ಯ ಒತ್ತುವರಿದಾರರು, ರೆಸಾರ್ಟ್ ಬಂಡವಾಳಿಗರು, ಭ್ರಷ್ಟ ಅಧಿಕಾರಿಗಳು, ಸಮಯ ಸಾಧಕ ರಾಜಕಾರಣಿಗಳು, ಒಟ್ಟಾಗಿ ಸೇರಿ ನಡೆಸಿರುವ ಈ ಲಾಬಿಗೆ ಸರಕಾರ ಮಣಿದರೆ ಈ ರಾಜ್ಯದ ಜನತೆ ಅವರನ್ನು ಎಂದೂ ಕ್ಷಮಿಸಲಾರರು.
ಜೈವಿಕ ಪರಿಸರ ಎಂದರೆ ಮೂಲಭೂತವಾಗಿ ಏನೆಂದೇ ತಿಳಿಯದವರು ವಾದ ಮಂಡಿಸುವುದನ್ನು ನೋಡಿದರೆ ನಾವು ಈ ಮಟ್ಟಿಗಿನ ಬೌದ್ಧಿಕ ಅಧ:ಪತನ ಕಂಡಿದ್ದೇವೆಯೇ ಎಂದು ದಿಗ್ಬ್ರಮೆ ಉಂಟಾಗುತ್ತಿದೆ. ಓಟು ಗಳಿಸಿ ಅಧಿಕಾರ ಪಡೆದಿದ್ದಾರೆ ಎಂಬ ಒಂದೇ ಕಾರಣಕ್ಕೆ ರಾಜಕಾರಣಿಗಳ ಮುಂದೆ ಈ ನಾಡಿನ ಬುದ್ಧಿಜೀವಿಗಳು ಅಂಗೈಯಷ್ಟು ಸ್ಪಷ್ಟವಾಗಿರುವ ಸತ್ಯವನ್ನು ಮನವರಿಕೆ ಮಾಡಿಕೊಡಲು ಕೈ ಮುಗಿದು ಪ್ರಾರ್ಥಿಸುವ ಪರಿಸ್ಥಿತಿ ನಿರ್ಮಾಣವಾಗಿದೆಯೆಂದರೆ ನಮ್ಮೆಲ್ಲರಿಗೂ ನಾಚಿಕೆಯ ವಿಷಯ.
ಹೊಟ್ಟೆಗೆ ಅನ್ನ ತಿನ್ನಿ ಎಂದು ಹೇಳುವುದಕ್ಕೂ ಕೈ ಜೋಡಿಸಿ ಬೇಡಬೇಕಾಗಿರುವುದು ಪರಿಸ್ಥಿತಿಯ ವ್ಯಂಗ್ಯ. ಮಲೆಕುಡಿಯರು, ಸಿದ್ಧಿಯರನ್ನು ಮುಖ್ಯವಾಹಿನಿಗೆ ತರುತ್ತೇವೆಂದು ಬಂಬಡಾ ಬಾರಿಸುತ್ತಿರುವುದರ ಹಿಂದೆ ಇರುವ ಉದ್ದೇಶ ಎಂಥವರಿಗೂ ಅರ್ಥವಾಗುವಂಥದ್ದೇ. ಕಾಡುಜನರಿಗಾಗಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತಿದ್ದೇವೆ ಎಂದು ಜಾಗಟೆ ಹೊಡೆಯುತ್ತಿರುವವರು ಈ ಎಲ್ಲಾ ಕಾರ್ಯಗಳನ್ನು ಅರಣ್ಯ ಲೂಟಿ ಹೊಡೆಯಲು ಮೂಲಸೌಕರ್ಯವಾಗಿ ಹೊಂದಿಸಿಕೊಳ್ಳುತ್ತಿದ್ದಾರೆ ಅಷ್ಟೇ.
ಇಲ್ಲಿನ ಕಾಮಗಾರಿಗಳ ಗುತ್ತಿಗೆಯ ಫಲಾನುಭವಿಗಳು ಆಯಾ ಪಕ್ಷದ ಕಾರ್ಯಕರ್ತರುಗಳು. ಕೆಲಸಕ್ಕಾಗಿ ಗುತ್ತಿಗೆಯಲ್ಲ, ಗುತ್ತಿಗೆದಾರರಿಗಾಗಿ ಕೆಲಸದ ಸೃಷ್ಟಿಯಾಗುತ್ತಿದೆ. ನಮ್ಮ ಕಾನೂನಿನ ಸದುಪಯೋಗ ಪಡೆದು ಈವರೆಗೆ ಅರಣ್ಯ ರಕ್ಷಣೆ ಮಾಡಿರುವುದರ ಚಿತ್ರಣ ನಮ್ಮ ಮುಂದೆ ಇದೆ. ವಿಶ್ವ ಪರಂಪರೆಯ ಪಟ್ಟಿಗೆ ಅರಣ್ಯ ಪ್ರದೇಶವನ್ನು ಸೇರಿಸುವುದರಿಂದ ಯಾವುದೇ ಲಾಭವಿಲ್ಲ ಎಂದಿರುವ ಸಚಿವರು ಈ "ಲಾಭ" ಪದದ ಅರ್ಥವ್ಯಾಪ್ತಿಯನ್ನು ವಿವರಿಸಿದರೆ ಈ ನಾಡಿನ ಜನತೆಗೆ ಉಪಕಾರವಾಗುತ್ತದೆ.
ನಮಗೆ ಪ್ರವಾಸೋದ್ಯಮದ ಹೆಸರಿನಲ್ಲಿ ಹರಿದು ಬರುವ ಹಣ ಬೇಡ. ಹಣದಿಂದ ನಮಗೆ ಆಮ್ಲಜನಕ, ಶುಭ್ರ ನೀರು, ಆರೋಗ್ಯಕರ ವಾತಾವರಣ ಸಿಗುವುದಿಲ್ಲ. ನಮಗೆ ನಮ್ಮ ಅರಣ್ಯ ಉಳಿಯಬೇಕು, ಹೆಚ್ಚು ವಿಸ್ತಾರವಾಗಿ ಬೆಳೆಯಬೇಕು ಮತ್ತು ನೈಸರ್ಗಿಕವಾಗಿರಬೇಕು. ಅರಣ್ಯದೊಳಗೆ ಬದುಕುತ್ತಿರುವವರು ಈ ಮೂರನ್ನು ಗಮನದಲ್ಲಿಟ್ಟುಕೊಂಡು ಪ್ರಕೃತಿಯೊಡನೆ ಹೊಂದಿಕೊಂಡು ಜೀವಿಸಬೇಕು.
2005ರಲ್ಲಿ ಕರ್ನಾಟಕ ಸರಕಾರವೇ ಯುನೆಸ್ಕೋ ಮಾನ್ಯತೆ ಕೋರಿ ಮನವಿ ಸಲ್ಲಿಸಿದ್ದರೆ ಇಂದಿನ ಸರಕಾರ ಸಿಕ್ಕಿರುವ ಮಾನ್ಯತೆಯನ್ನು ತಿರಸ್ಕರಿಸಿ ಭಾರೀ ಪ್ರಮಾದವನ್ನೇ ಮಾಡಿದೆ. ಜನತೆ ತಮಗೆ ನೀಡಿರುವ ಪರಮಾಧಿಕಾರದಿಂದ ಈ ವರೆವಿಗೆ ಏನೇನನ್ನು ಮಾಡಿದ್ದೀರೆಂಬುದು ಕಣ್ಣೆದುರೇ ಇದೆ. ಯಾರಿಗೂ ಬೇಕಿಲ್ಲದ ಕಾಮಗಾರಿಗಳನ್ನು ಅರಣ್ಯದೊಳಗೆ ನಡೆಸಿದ್ದರಿಂದ ಸರಕಾರೀ ಖಜಾನೆ ಖಾಲಿಯಾಯ್ತಲ್ಲದೇ, ಹಿಂಬಾಲಕರ ಜೇಬು ಈ ನೆಪದಲ್ಲಿ ತುಂಬಿತು. ಪರಂಪರಾ ತಾಣವಾಗಿ ಗುರುತಿಸಿರುವ ಹತ್ತು ಸ್ಥಳಗಳಲ್ಲಿ 5 ತಾಣಗಳು ರಾಷ್ಟ್ರೀಯ ಉದ್ಯಾನ ಮತ್ತು ವನ್ಯಜೀವಿ ಧಾಮಗಳಾಗಿದ್ದು, ಇನ್ನು 5 ತಾಣಗಳು ರಕ್ಷಿತಾರಣ್ಯಗಳೇ ಆಗಿವೆ. ಸರಕಾರ ಈ ವರೆಗೆ ಮಾಡಿರುವ ಸಂರಕ್ಷಣಾ ಕೆಲಸಗಳನ್ನು ಮಾನ್ಯಮಾಡುವುದಷ್ಟೇ ಯುನೆಸ್ಕೋದ ಉದ್ದೇಶವಾಗಿದೆ. ಕೆಸರಿನಲ್ಲಿ ಸಿಕ್ಕಿಹಾಕಿಕೊಂಡಿರುವ ವಾಹನವನ್ನು ತಳ್ಳಲು ನಮ್ಮ ಜೊತೆ ದಾರಿಹೋಕರ್ಯಾರೋ ಕೈಜೋಡಿಸಿದಂತೆ ಅಷ್ಟೇ. ಅದಕ್ಕೆ ಯಾಕೆ ಈ ಅವಾಂತರ ಸೃಷ್ಟಿಯಾಗಿದೆಯೋ ಆಶ್ಚರ್ಯವಾಗುತ್ತದೆ.
ವನಮಹೋತ್ಸವದಂದು ಒಂದು ಗಿಡವನ್ನು ಕೈಯಲ್ಲಿ ಹಿಡಿದು ಫೋಟೋ ತೆಗೆಸಿಕೊಂಡು, ಪೇಪರಿನಲ್ಲಿ ಹಾಕಿಸಿಕೊಳ್ಳುವುದೇ ಪರಿಸರ ರಕ್ಷಣೆ ಎಂದುಕೊಂಡಿರುವುದು ಹಾಸ್ಯಾಸ್ಪದ. ಯಾರೋ ಕೆಲವು ಬುದ್ಧಿಗೇಡಿಗಳ ತಪ್ಪು ನಿರ್ಧಾರದಿಂದ ಕರ್ನಾಟಕದ ಜನತೆ ಮೂರ್ಖರೆಂಬ ಹಣೆಪಟ್ಟಿ ಧರಿಸುವ ಕಾಲ ಬಂದಿದೆ.
ಪ್ರತಿಭಟಿಸಿದವರನ್ನು ಯಾವುದಾದರೂ ಟೀಯೆ ಡೀಯೆ ಸೌಲಭ್ಯವಿರುವ ಕಮಿಟಿಗಳಿಗೆ ಹಾಕಿಕೊಂಡರೆ, ಸಮಾಜ ಸೇವಕರ ಕೋಟಾದಡಿ ಸೈಟು ನೀಡಿದರೆ, ಯಾವುದೋ ಕಾರಣದಲ್ಲಿ ವಿದೇಶ ಪ್ರವಾಸ ಕಳಿಸಿದರೆ ಅಥವಾ ಇನ್ಯಾವುದೋ ಆಮಿಷ ಒಡ್ಡಿ ಬಾಯಿ ಮುಚ್ಚಿಸುವ ನಮ್ಮ ಈ ವ್ಯವಸ್ಥೆ ಚಳುವಳಿಗಳನ್ನು ಹಾದಿ ತಪ್ಪಿಸುವ ಕೆಲಸ ಮಾಡುತ್ತಿದೆ. ವೈಯಕ್ತಿಕ ಲಾಭದ ನಿರೀಕ್ಷೆಯಲ್ಲಿ ಹೋರಾಟಗಳ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವವರ ಸಂಖ್ಯೆಯೇನೂ ಕಡಿಮೆಯಿಲ್ಲ.
ಅತ್ಯಂತ ಮುಖ್ಯ ನಿರ್ಧಾರಗಳನ್ನು ಮತ್ತು ಸಮಸ್ಯೆಗಳನ್ನು ಜನರಿಂದ ದೂರವಿಟ್ಟು ಮುಚ್ಚಿಹಾಕುವ ಹುನ್ನಾರ ನಾಡಿಗೆ ಒಳಿತನ್ನು ಮಾಡುವುದಿಲ್ಲ. ನಮ್ಮ ನೈಸರ್ಗಿಕ ಕಾಡನ್ನು ಮೂಲಧನವನ್ನಾಗಿಟ್ಟುಕೊಂಡು ಅದರಿಂದ ಬರುವ ಬಡ್ಡಿಯನ್ನಷ್ಟೇ ನಾವು ಬಳಸುವುದನ್ನು ಬಿಟ್ಟು ಮೂಲ ಬಂಡವಾಳವನ್ನೇ ಬೇಕಾಬಿಟ್ಟಿಯಾಗಿ ಬಳಸಿಕೊಳ್ಳುತ್ತಿದ್ದೇವೆ. ಜೀವಮಂಡಲದ ಮೇಲೆ ದಬ್ಬಾಳಿಕೆ ನಡೆಸದಂತೆ ಬದುಕುವುದರಲ್ಲಿ ನಾಡಿನ ಘನತೆ-ಗೌರವ ಇದೆ.
ಧನಂಜಯ ಜೀವಾಳ ಬಿ.ಕೆ.
ಪರಿಸರ ಕಾರ್ಯಕರ್ತ, ಮೂಡಿಗೆರೆ.
ರಾಜ್ಯ - ರಾಷ್ಟ್ರ
ಬೆಂಗಳೂರು: ಇತ್ತೀಚೆಗೆ ಸಿಕ್ಕಿಂನಲ್ಲಿ ಸಂಭವಿಸಿದ ಭೂಕಂಪದಲ್ಲಿ ಸಂತ್ರಸ್ತರಾಗಿರುವವರ ನೆರವಿಗಾಗಿ 5 ಕೋಟಿ ರೂ.ಗಳ ಆರ್ಥಿಕ ನೆರವನ್ನು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು ಕರ್ನಾಟಕ ಸರ್ಕಾರದ ಪರವಾಗಿ ಪ್ರಕಟಿಸಿದ್ದಾರೆ. ಈ ಸಂಬಂಧವಾಗಿ ಸಿಕ್ಕಿಂನ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ರಾಜ್ಯದ ಮುಖ್ಯಮಂತ್ರಿಗಳು, 'ಸಂಕಷ್ಟದಲ್ಲಿರುವ ಸಿಕ್ಕಿಂ ಜನತೆಯ ನೆರವಿಗೆ ನಮ್ಮ ರಾಜ್ಯದ ಜನತೆ ಇದ್ದಾರೆ, ಹೆಚ್ಚಿನ ನೆರವು ಬೇಕಿದ್ದಲ್ಲಿ ತಿಳಿಸುವಂತೆ' ಕೋರಿದ್ದಾರೆ.
ರಾಜ್ಯ - ರಾಷ್ಟ್ರ
ಬೆಂಗಳೂರು:ರಾಜ್ಯದ ನೇಕಾರರಿಗೆ ಶೇ. 3ರ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ಕಳೆದ ಮೂರು ವರ್ಷಗಳಿಂದ ನೀಡುತ್ತಾ ಬಂದಿರುವುದಕ್ಕೆ ಆಂಧ್ರ ಪ್ರದೇಶದ ಜವಳಿ ಸಚಿವ ಡಾ. ಪಿ. ಶಂಕರ್ ರಾವ್ ಅವರು ರಾಜ್ಯ ಸರಕಾರದ ಕ್ರಮಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು. ರಾಜ್ಯದಲ್ಲಿ ಜವಳಿ, ಸಣ್ಣಕೈಗಾರಿಕೆ, ಖಾದಿ ಮತ್ತು ಸಾರ್ವಜಿನಿಕ ಉದ್ದಿಮೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುವ ಸಲುವಾಗಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿದ ಆಂಧ್ರ ಜವಳಿ, ಕೈಮಗ್ಗ, ಸಣ್ಣಕೈಗಾರಿಕೆಗಳ ಸಚಿವರು ಹಲವಾರು ವಿಷಯಗಳ ಬಗ್ಗೆ ಮಾಹಿತಿ ಪಡೆದುಕೊಂಡಿದರು. ರಾಜ್ಯದಲ್ಲಿ ಜಾರಿಗೆ ತಂದಿರುವ ಸುವರ್ಣ ವಸ್ತ್ರ ನೀತಿ, ಜವಳಿ ಪಾರ್ಕ್, ವಿದ್ಯುತ್ ಕೈಮಗ್ಗ ನೀಡಿಕೆ ಮತ್ತು ಅವುಗಳಿಗೆ ನೀಡುವ ವಿದ್ಯುತ್ ಗೆ ಸಬ್ಸಡಿ ಸೇರಿದಂತೆ ರಾಜ್ಯದಲ್ಲಿ ಜವಳಿ ಉದ್ಯಮದ ಉತ್ತೇಜನಕ್ಕೆ ಕೈಗೊಂಡಿರುವ ಅನೇಕ ಕ್ರಮಗಳ ಬಗ್ಗೆ ಮುಖ್ಯಮಂತ್ರಿಗಳು ಮಾಹಿತಿ ನೀಡಿದರು.
ರಾಜ್ಯ - ರಾಷ್ಟ್ರ
ಬೆಂಗಳೂರು: ಸಾರ್ವಜನಿಕರು ಮೆಚ್ಚುವಂಥ ಲೋಕಾಯುಕ್ತರನ್ನು ನೇಮಕ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ತಿಳಿಸಿದರು.ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸಾರ್ವಜನಿಕರ ಭೇಟಿಯ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, 'ನೂತನ ಲೋಕಾಯುಕ್ತರ ಆಯ್ಕೆಗಾಗಿ ಪ್ರತಿಪಕ್ಷಗಳ ಸಲಹೆ ಹಾಗೂ ಹೈಕೋರ್ಟ್ ನ್ಯಾಯಾಧೀಶರ ಮಾರ್ಗದರ್ಶನ ಪಡೆದುಕೊಳ್ಳಲಾಗುವುದು' ಎಂದರು.
ಕೊಪ್ಪಳ ಭೇಟಿ: ಪಕ್ಷದ ಓರ್ವ ಸಾಮಾನ್ಯ ಕಾರ್ಯಕರ್ತನಾಗಿ ಸೆ. 22 ಮತ್ತು 23 ರಂದು ಎರಡು ದಿನಗಳ ಕಾಲ ಕೊಪ್ಪಳ ಉಪ ಚುನಾವಣೆಗಾಗಿ ಪ್ರಚಾರ ಕಾರ್ಯಗಳನ್ನು ಕೈಗೊಳ್ಳುತ್ತೇನೆ. ಹಿಂದಿನ ಚುನಾವಣೆಗಳಲ್ಲಿನ ಕಾರ್ಯತಂತ್ರವನ್ನೇ ಇಲ್ಲೂ ಬಳಸಿಕೊಂಡು ಭಾರಿ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸ ಹೊಂದಿರುವುದಾಗಿ ತಿಳಿಸಿದರು.
ಪ್ರಾದೇಶಿಕ ಸುದ್ದಿ
ಗೋಕರ್ಣ: ಖ್ಯಾತ ಧಾರ್ಮಿಕ ಗುರು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ರವಿಶಂಕರಗುರೂಜಿಯವರು ಐತಿಹಾಸಿಕ ಶೈವಕ್ಷೇತ್ರ ಗೋಕರ್ಣಕ್ಕೆ ಭೇಟಿ ನೀಡಿ ಸಾರ್ವಭೌಮ ಶ್ರೀಮಹಾಬಲೇಶ್ವರ ಹಾಗೂ ಶ್ರೀಮಹಾಗಣಪತಿ,ತಾಮ್ರಗೌರಿ ದೇವಾಲಯಗಳನ್ನು ಸಂದರ್ಶಿಸಿದರು.
ಈ ಸಂದರ್ಭದಲ್ಲಿ ಸ್ವತಃ ಶ್ರೀಮಹಾಬಲೇಶ್ವರನನ್ನು ಅಭಿಷೇಕ,ಆರಾಧನೆಗಳ ಮೂಲಕ ಅರ್ಚಿಸಿ ಶ್ರೀರವಿಶಂಕರಗುರೂಜಿಯವರು ಲೋಕಕಲ್ಯಾಣಕ್ಕಾಗಿ ಶ್ರೀದೇವರನ್ನು ಪ್ರಾರ್ಥಿಸಿದರು.ನಂತರ ಶ್ರೀಗುರೂಜಿಯವರು ಇಲ್ಲಿಯ ಇತಿಹಾಸವನ್ನು ಕೇಳಿ ತಿಳಿದುಕೊಂಡರಲ್ಲದೆ ಶತಶತಮಾನಗಳಿಂದ ಇಲ್ಲಿ ಉಳಿದು ನಿರಂತರವಾಗಿ ಲೋಕಶಂಕರನನ್ನು ಅರ್ಚಿಸುತ್ತ ಬಂದಿರುವ ಸ್ಥಳೀಯ ವೈದಿಕಸ್ತೋಮವನ್ನು ಆಸ್ತಿಕಶ್ರದ್ಧಾಳುಗಳನ್ನು ಪ್ರಶಂಸಿಸಿದರು.
ಅರ್ಚಕರ ತಪೋಯೋಗದಿಂದಾಗಿ ಶಿಲೆಯಲ್ಲಿಯೂ ಶಂಕರನ ದಿವ್ಯಸಾನ್ನಿಧ್ಯವು ಸ್ಥಿರವಾಗುತ್ತದೆ.ವಿಶ್ವದಲ್ಲಿಯೇ ಪರಮೇಶ್ವರನ ಏಕೈಕಪ್ರಾಣಲಿಂಗವನ್ನು ಹೊಂದಿರುವ ಗೋಕರ್ಣವು ಅತ್ಯಂತ ಪುನೀತಕ್ಷೇತ್ರವಾಗಿದೆಯೆಂದು ಹೇಳಿದ ಗುರೂಜಿ ದೇವಾಲಯದಲ್ಲಿ ಲೋಕಕಲ್ಯಾಣಕ್ಕಾಗಿ ನಡೆಯುತ್ತಿರುವ ಕೋಟಿರುದ್ರ ಕಾರ್ಯಕ್ರಮದ ಬಗ್ಗೆ ಹಾಗೂ ಶ್ರೀದೇವಾಲಯದ ಆಡಳಿತವ್ಯವಸ್ಥೆಯ ಬಗ್ಗೆ ತಮ್ಮ ಸಂತಸವನ್ನು ವ್ಯಕ್ತಪಡಿಸಿದರು.
ದೇವಾಲಯದ ಆಡಳಿತದ ಪರವಾಗಿ ಜಿ.ಕೆ.ಹೆಗಡೆ ಗೋಳಗೋಡು, ಉಪಾಧಿವಂತ ಮಂಡಳದ ಅಧ್ಯಕ್ಷ ವೇ.ಗಣೇಶ ನಾರಾಯಣ ಹಿರೇಗಂಗೆ,ವೇ.ಶಿತಿಕಂಠ ಭಟ್ ಹಿರೇ,ವೇ.ರಾಮಕೃಷ್ಣ ಭಟ್ ಶಂಕರಲಿಂಗ ವೇ.ಪರಮೇಶ್ವರ ಮಾರ್ಕಂಡೆ ಮೊದಲಾದ ಗಣ್ಯರು ಗುರೂಜಿಯವರನ್ನು ವೇದಘೋಷ,ವಾದ್ಯ,ಮೊದಲಾದ ಎಲ್ಲ ಪಾರಂಪರಿಕಸ್ವಾಗತವಿಧಿಗಳೊಡನೆ ದೇವಾಲಯಕ್ಕೆ ಬರಮಾಡಿಕೊಂಡು ಪೂಜಾಕೈಂಕರ್ಯದಲ್ಲಿ ಸಹಕರಿಸಿದರು.
ಈ ಕನಸು ಅವಾರ್ಡ್
ನೀನೇ ನನ್ನ ಜೀವ, ನೀನೇ ನನ್ನ ಪ್ರಾಣ, ಸರ್ವಸ್ವ ಎಂದು ಅವನಿಗಾಗಿ/ಅವಳಿಗಾಗಿ ಹಾತೊರೆಯುವ ಮನಸ್ಸು, ಬದುಕಿರುವುದೆಲ್ಲಾ ನಿನಗಾಗಿ,ನಿನ್ನ ಪ್ರೀತಿಗಾಗಿ ಎಂದೆನಿಸುವ ಹುಚ್ಚು ಪ್ರೀತಿ ಅದು.. ಇಡೀ ಜೀವನವನ್ನೇ ಅವಳ/ಅವನ ಪ್ರೀತಿಗಾಗಿ ಮುಡಿಪಾಗಿಟ್ಟರೆ ಜೀವನದ ಗುರಿ,ಸಾಧನೆಯನ್ನು ಸಾಧಿಸೋದು ಯಾವ ಅವರಿಗಾಗಿ?ಕೆಲದಶಕಗಳಿಂದ ನಮ್ಮೊಂದಿಗೆ ನಮ್ಮ ಹೆತ್ತವರು ಇರುತ್ತಾರೆ, ಬೇಕುಬೇಡಗಳನ್ನು ಪೂರೈಸುತ್ತಾರೆ, ಆದರೆ ಅವರಿಗಾಗಿ ನಾವೆಂದೂ ಅಂತಹಾ ಪ್ರೀತಿಯನ್ನು ತೋರುವುದಿಲ್ಲ...
ಕೇವಲ ಕೆಲವು ತಿಂಗಳ ಹಿಂದೆ ಬಂದಿರುವ ಅವನ/ಳನ್ನು ಭವಿಷ್ಯದ, ಜೀವನದ ಒಡೆಯ/ಒಡತಿ ಎಂದು ಘೋಷಿಸಿಬಿಡುತ್ತೇವೆ. ಪ್ರೀತಿ ಮಾಡುತ್ತೇವೆ. ಇದೇನಾ ನಿಜವಾದ ಜೀವನ? ಇದೇನಾ ನಿಜವಾದ ಪ್ರೀತಿ?
ತನ್ನ ಪ್ರೀತಿಗೆ ಅವರೊಪ್ಪಿಕೊಂಡಿಲ್ಲ ಎಂದಾಕ್ಷಣ ಏನೇನೋಕೆಟ್ಟ ನಿರ್ಧಾರ ತೆಗೆದುಕೊಳ್ಳುವಷ್ಟು ಮುಂದಾಗುತ್ತೇವೆ, ಹಿಂದೆ ಮುಂದೆ ಹೆತ್ತವರನ್ನೂ ಅವರು ನಮಗಾಗಿ ಪಟ್ಟ ಕಷ್ಟಗಳನ್ನೂ ಮರೆತು ನಿರ್ಧಾರ ತೆಗೆದುಕೊಳ್ಳುವುದು ಸಾಮಾನ್ಯವಾಗಿದೆ.
ಪ್ರೀತಿಯೇ ಜೀವನವಲ್ಲ,ಆದರೆ ಜೀವನದಲ್ಲಿ ಪ್ರೀತಿ ಬರಲಿ... ಪ್ರೀತಿಯೆಂಬ ಮಾಯೆಯಿಂದ ಹೊರಬರೋಣ...
'ಸಮಯ' ಎಲ್ಲರನ್ನೂ ಎಲ್ಲವನ್ನೂ ಬದಲಾಯಿಸುತ್ತದೆ. ಕೆಲವಂದು ಬಾರಿ ಕ್ಷಣ ಕಾಲ ನಮ್ಮ ಜೊತೆಗಿರುವ ಅವನ/ಅವಳ ಪ್ರೀತಿಗಿಂತಾ, ಚಿರಕಾಲ ನಮ್ಮೊಂದಿಗೆ ಇರುವ ನಮ್ಮ ಹೆತ್ತವರನ್ನು ಪ್ರೀತಿಸೋಣ.ಅವರ ಬಗ್ಗೆ ಒಂದು ಬಾರಿ ಒಂದು ಕ್ಷಣ ಯೋಚಿಸೋಣ..
- ಸನತ್ ಕುಮಾರ್
ಪ್ರಾದೇಶಿಕ ಸುದ್ದಿಮಂಗಳೂರು :ಸರಕಾರದ ಸಾಮಾಜಿಕ ಭದ್ರತಾ ಯೋಜನೆಗಳು ಅರ್ಹ ಫಲಾನುಭವಿಗಳನ್ನು ತಲುಪುವಲ್ಲಿ ಸಮನ್ವಯಕಾರರ ಪಾತ್ರ ಪ್ರಮುಖವಾಗಿದ್ದು, ಯೋಜನೆಯ ಪರಿಣಾಮಕಾರಿ ಅನುಷ್ಠಾನದಲ್ಲಿ ಸಮನ್ವಯಕಾರರ ಪಾತ್ರ ಹಿರಿದು ಎಂದು ರೋಶನಿಲಯ ಪ್ರಾಂಶುಪಾಲರಾದ ಜೆಸಿಂತ ಡಿಸಿಲ್ವಾ ಅವರು ಹೇಳಿದರು. ನಂತೂರಿನ ಶಾಂತಿಕಿರಣದ ಪ್ಯಾಸ್ಟರ್ ಇನ್ಸ್ಟಿಟ್ಯೂಟ್ ನಲ್ಲಿ ಜಿಟಿಝಡ್(ಜರ್ಮನ್ಟೆಕ್ನಿಕಲ್ ಕೋ ಆಪರೇಷನ್) ಸಹಯೋಹದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಬಂಟ್ವಾಳ ತಾಲೂಕುಗಳ ಗ್ರಾಮ ಪಂಚಾಯಿತಿ ಮತ್ತು ಸಮುದಾಯ ಸೌಲಭ್ಯ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸಲಿರುವ ಸಮುದಾಯ ಸೌಲಭ್ಯೀಕರಣಿಕರಿಗೆ 3ದಿನಗಳ ತರಬೇತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ತರಬೇತಿ ಕಾರ್ಯಕ್ರಮವನ್ನು ಜಿಲ್ಲಾ ವಾರ್ತಾಧಿಕಾರಿ ರೋಹಿಣಿ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾರ್ಮಿಕ ಆಯುಕ್ತರಾದ ವೆಂಕಟೇಶಅಪ್ಪಯ್ಯ ಶಿಂಧಿಹಟ್ಟಿ ಅವರು, ಎರಡು ವರ್ಷದಿಂದಜಿ ಟಿ ಝಡ್ ಸಹಯೋಗದೊಂದಿಗೆ ಕಾರ್ಯಕ್ರಮ ರೂಪಿಸಲು ಹಂತಹಂತವಾಗಿ ಕ್ರಮ ಕೈಗೊಂಡಿದ್ದು, ಒಂದೆಡೆಯಲ್ಲಿ ವಿವಿಧ ಇಲಾಖೆಗಳ ಸೌಲಭ್ಯಗಳು ಅರ್ಹರಿಗೆ ದೊರೆಯುವಂತಾಗಿಸಲು ಈ ಯೋಜನೆ ರೂಪಿಸಲಾಗಿದೆ ಎಂದರು. ಅಸಂಘಟಿತ ಕಾರ್ಮಿಕರೇ ಹೆಚ್ಚಾಗಿರುವ ನಮ್ಮಲ್ಲಿ ಅವರಿಗೊಂದು ಸಾಮಾಜಿಕ ಭದ್ರತೆ ನೀಡುವ ಯೋಜನೆ ಉತ್ತಮದ್ದಾಗಿದೆ ಎಂದರು. ಕೃಷಿ ಕಾರ್ಮಿಕರು, ನಿರ್ಮಾಣಕಾರ್ಮಿಕರು, ಗೃಹ ಕೃತ್ಯದ ಕಾರ್ಮಿಕರು, ವಸ್ತ್ರೋದ್ಯಮಕಾರ್ಮಿಕರು ಅಗರ ಬತ್ತಿ ಕಾರ್ಮಿಕರು ಇವರಿಗೆ ಸಂಬಂಧಿಸಿದೆ.
ಸರಕಾರದ ಸಾಮಾಜಿಕ ಸಹಾಯ ಕಾರ್ಯಕ್ರಮಗಳಾದ ವಿಧವಾ ವೇತನ, ಅಂಗವಿಕಲ ವೇತನ, ಸಂಧ್ಯಾ ಸುರಕ್ಷಾ, ಸ್ತ್ರೀ ಶಕ್ತಿ, ವೃದ್ಧಾಪ್ಯ ವೇತನ, ಹೊಸ ಪಿಂಚಣಿಯೋಜನೆ, ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆಗಳಂತಹ ಸೌಲಭ್ಯಗಳನ್ನು ಅಸಂಘಟಿತ ವಲಯದವರಿಗೆ ಒದಗಿಸುವುದರೊಂದಿಗೆ ಪ್ರಥಮ ಹಂತದಲ್ಲಿ ಜಿಲ್ಲೆಯ ಮಂಗಳೂರು ಮತ್ತು ಬಂಟ್ವಾಳದ ಐವತ್ತು ಗ್ರಾಮಪಂಚಾಯಿತಿ ಹಾಗೂ ವಾರ್ಡುಗಳಲ್ಲಿ ಜಾರಿಗೊಳಿಸಲಾಗುವುದು ಎಂದರು.
ತರಬೇತಿ ಸಮನ್ವಯಾಧಿಕಾರಿ ಜಲಜಾ, ಸಂಪನ್ಮೂಲ ವ್ಯಕ್ತಿಗಳಾದ ಬಸವರಾಜ್, ಶಂಕರ್ ಉಪಸ್ಥಿತರಿದ್ದರು. ಸ್ವಾತಿ ಪ್ರಾರ್ಥಿಸಿದರು.ಜಿಲ್ಲಾ ಸಮನ್ವಯಾಧಿಕಾರಿ ಅಕ್ಷತಾ ಸ್ವಾಗತಿಸಿದರು.ಹಿರಿಯ ಕಾರ್ಮಿಕ ನಿರೀಕ್ಷಕರಾದ ಸತ್ಯನಾರಾಯಣ ವಂದಿಸಿದರು.
ವೈವಿಧ್ಯ
ಈ ಆಸನವು ಕುಳಿತು ತಿರುಚಿ ಮಾಡುವ ಸರಳ ಭಂಗಿಯಾಗಿದೆ.
ಅಭ್ಯಾಸ ಕ್ರಮ : ಎರಡು ಕಾಲುಗಳನ್ನು ನೇರವಾಗಿ ಚಾಚಿ ಕುಳಿತುಕೊಳ್ಳಬೇಕು. ಉಸಿರನ್ನು ಬಿಡುತ್ತಾ ಎರಡು ಕೈಗಳ ಸಹಾಯದಿಂದ ಬಲಗಾಲನ್ನು ಮಡಿಸಿ ಎಡ ಮಂಡಿಯ ಬಲ ಪಕ್ಕದಲ್ಲಿರಿಸಬೇಕು. ಆಮೇಲೆ ಉಸಿರನ್ನು ತೆಗೆದುಕೊಂಡು ಬಲ ಕೈ ನೇರವಾಗಿಸಿ, ಉಸಿರನ್ನು ಬಿಡುತ್ತಾ ನಿಧಾನವಾಗಿ ಕಣ್ಣುಗಳಿಂದ ಬಲ ಕೈಯ ಮಧ್ಯದ ಬೆರಳುಗಳನ್ನು ನೋಡುತ್ತಾ ದೇಹವನ್ನು ಬಲ ಬದಿಗೆ ತಿರುಗಿಸಿ ಬಲ ಕೈಯನ್ನು ನೆಲಕ್ಕೆ ಊರಬೇಕು ಮತ್ತು ಬೆನ್ನು, ಕುತ್ತಿಗೆ ನೇರವಾಗಿಸಬೇಕು. ಆಮೇಲೆ ಎಡಕೈಯಿಂದ ಬಲಗಾಲಿನ ಪಾದ ಅಥವಾ ಹೆಬ್ಬೆರಳನ್ನು ಹಿಡಿದುಕೊಳ್ಳಬೇಕು. ಎಡಕಾಲು ನೇರವಾಗಿರಬೇಕು. ಈ ಸ್ಥಿತಿಯಲ್ಲಿ 20 ಸೆಕೆಂಡಿನಷ್ಟು ಸಮ ಉಸಿರಾಟ ನಡೆಸುತ್ತಾ ಮರಳಿ ಸ್ಥಿತಿಗೆ ಬರಬೇಕು. ಇದೇ ರೀತಿ ಎಡ ಭಾಗದಲ್ಲಿ ಅಭ್ಯಾಸ ಮಾಡಬೇಕು. ಅನಂತರ ತುಸು ವಿಶ್ರಾಂತಿ.
ಉಪಯೋಗಗಳು
ಈ ಆಸನದಲ್ಲಿ ಬೆನ್ನು ಹುರಿಯ ಸ್ಥಿತಿಸ್ಥಾಪಕ ಶಕ್ತಿ ಹೆಚ್ಚಿ ಬೆನ್ನು ನೋವು ನಿವಾರಣೆಯಾಗುವುದು. ಹೊಟ್ಟೆಗೆ, ಸೊಂಟಕ್ಕೆ ಮೃದುವಾದ ವ್ಯಾಯಾಮ ದೊರೆತು ಮಲಬದ್ಧತೆ, ಇತ್ಯಾದಿ ನಿವಾರಣೆಯಾಗುವುದು. ಈ ಆಸನದಿಂದ ಹೊಟ್ಟೆಯ ಬೊಜ್ಜು ಕರಗಲು ಸಹಾಯವಾಗುವುದು. ಮೂತ್ರದೋಷ ಮತ್ತು ಮಧುಮೇಹ ಸಮಸ್ಯೆ ನಿವಾರಣೆಗೆ ಈ ಆಸನ ಉಪಯುಕ್ತವಾಗಿದೆ ಹಾಗೂ ಕುತ್ತಿಗೆ, ಭುಜಗಳ, ಕೈಗಳ ನೋವು ಪರಿಹಾರವಾಗುತ್ತದೆ.
-'ಯೋಗರತ್ನ' ಶ್ರೀ ಗೋಪಾಲಕೃಷ್ಣ ದೇಲಂಪಾಡಿ
ಅಂತರರಾಷ್ಟ್ರೀಯ ತೀರ್ಪುಗಾರರು
ಮಕ್ಕಳಿಗೆ ಬೇಡವಾದ ಪೋಷಕರಿಗೆ ಇಲ್ಲಿದೆ ಆಶ್ರಯ
ವಿಶೇಷ ವರದಿ
ಬೈಂದೂರು : ಬೇರೆ ಬೇರೆ ಕಾರಣದಿಂದ ಮಕ್ಕಳು ಹಾಗೂ ಬಂಧು ಬಳಗದವರಿಂದ ದೂರವಾದ ಮುಸ್ಸಂಜೆ ಬದುಕಿಗೆ ಜಾರಿಕೊಂಡ ಅಸಹಾಯಕ ಜೀವಿಗಳಿಗೆ 'ಅನಘ' ಪುನರ್ವಸತಿ ಕೇಂದ್ರ ಬೆಚ್ಚನೆ ಗೂಡು. ಕೂಡು ಕುಟುಂಬದೊಟ್ಟಿಗೆ ಜೀವನದ ಯಾತ್ರೆಯ ಅಂತಿಮ ಘಟ್ಟದಲ್ಲಿರುವ ಹಿರಿಯರಿಗೆ ಅನಘದಲ್ಲಿ ನೂರಾರು ಮೊಮ್ಮಕ್ಕಳ ಪ್ರೀತಿ ಸಿಕ್ಕಿದೆ. 'ಸ್ಫೂರ್ತಿ ಧಾಮ'ದ ಮಕ್ಕಳಿಗೆ ಅಜ್ಜಿಯಂದಿರ ಅಕ್ಕರೆ ಸಿಗುತ್ತಿದೆ. ಅನಘದಲ್ಲಿ ಪ್ರೀತಿಯ ಹಂಚಿಕೆ ನಿರಂತರ. ಕೊಟ್ಟುಕೊಳ್ಳುವ ಸುಖದಲ್ಲಿ ಎಳೆಯರು ಮತ್ತು ಮುಪ್ಪಡರಿದ ಹಿರಿಯ ಜೀವಿಗಳು ಖುಷಿ ಹಂಚಿಕೊಳ್ಳುತ್ತಿದ್ದಾರೆ.
ಎಲ್ಲಿದೆ ಅನಘ ಆಶ್ರಮ 
ಕುಂದಾಪುರ ತಾಲೂಕ್ ಬೇಳೂರು ಗ್ರಾಮ ಪಂಚಾಯಿತಿ ಸರಿಹದ್ದಿನಲ್ಲಿ ಅನಘ ಪುನರ್ವಸತಿ ಕೇಂದ್ರ ಬರುತ್ತದೆ. 'ಸ್ಪೂರ್ತಿ ಗ್ರಾಮೀಣ ಅಭಿವೃದ್ಧಿ ಮತ್ತು ತರಬೇತಿ ಸಂಸ್ಥೆ' ಆಶ್ರಯದಲ್ಲಿ ಅನಘ ನಡೆಯುತ್ತಿದೆ.
'ಸ್ಪೂರ್ತಿ ಅನೌಪಚಾರಿಕ ವಸತಿ ಶಿಕ್ಷಣ ಕೇಂದ್ರದಲ್ಲಿ ಕಲಿಯುತ್ತಿರುವ ಸುಮಾರು 130ಕ್ಕೂ ಮಿಕ್ಕ ಬೇರೆ ಬೇರೆ ಪ್ರದೇಶದ ಮಕ್ಕಳಿಗೆ ಅನಘ ಆಶ್ರಮದ ಹಿರಿಯ ಜೀವಿಗಳು ಅಜ್ಜ ಅಜ್ಜಿರು. ಕುಟುಂಬ ಸುಖದಿಂದ ವಂಚಿತರಾದ ಅನಘದ ಹಿರಿಯ ಜೀವಿಗಳೂ ಶಿಕ್ಷಣ ಕೇಂದ್ರದ ಮಕ್ಕಳನ್ನು ತಮ್ಮ ಮಮ್ಮೊಕ್ಕಳಂತೆ ಮುದ್ದಿಸುತ್ತಾರೆ. ಆಶ್ರಮದ ಹಿರಿಯರು ಶಿಕ್ಷಣ ಕೇಂದ್ರ ಮಕ್ಕಳ ತೆಕ್ಕೆಯಲ್ಲಿ ಹಳೆಯ ನೆನಪುಗಳಿಗೆ ಜಾರಿಕೊಳ್ಳುತ್ತಿದ್ದಾರೆ.
ಅನಘ ಪುನರ್ವಸತಿ ಕೇಂದ್ರ ಜ.1, 2011ರಲ್ಲಿ ಅರಂಭವಾಯಿತು. 12 ಲಕ್ಷ ರೂ. ವೆಚ್ಚದಲ್ಲಿ ಸಾರ್ವಜನಿಕರ ಸಹಕಾರದಲ್ಲಿ ಪುನರ್ವಸತಿ ಕೇಂದ್ರ ನಿರ್ಮಾಣವಾಯಿತು. ಕೇವಲ ಆರು ತಿಂಗಳಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿ ವೃದ್ಧರ ಸೇವೆಗೆ ಒದಗಿದ್ದು, ಅನಘದ ಹೆಚ್ಚುಗಾರಿಕೆ. ಸಾರ್ವಜನಿಕರು ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಸ್ಪಷ್ಟ ಸಾಕ್ಷಿ ಅನಘ ಪುನರ್ವಸತಿ ಕೇಂದ್ರ.
ಎಲ್ಲೆಲ್ಲಿಂದಲೋ ಬಂದವರು
ಅನಘದಲ್ಲಿ ಪ್ರಸಕ್ತ 16 ಜನ ಹಿರಿಯರು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ. ಬಿಹಾರ, ಗುಲ್ಬರ್ಗ, ಬೆಳಗಾಂ, ಬ್ರಹ್ಮಾವರ, ಮಲ್ಪೆ, ಮಣಿಪಾಲ, ಕುಂದಾಪುರ, ವಕ್ವಾಡಿ, ಕೋಟ ಪರಿಸರದ 12 ಜನ ಮಹಿಳೆಯರು 4 ಜನ ಪುರುಷರು ಅನಘದ ಮಾಡಿನಡಿಯಲ್ಲಿ.
ಇವರೊಟ್ಟಿಗೆ ಮಾನಸಿಕ ಹಿಡಿತ ಕಳೆದುಕೊಂಡ ಕರುಣಾಕರ ಮತ್ತು ಸುಧಾಕರ ಅವರನ್ನೂ ಅನಘ ಪೊರೆಯುತ್ತಿದೆ. ಕರುಣಾಕರ ಅವರಂತೂ ಪೊಲಿಟಿಕಲ್ ಸೈನ್ಸ್ನಲ್ಲಿ ಮಾಸ್ಟರ್ ಡಿಗ್ರಿ ಪಡೆದಿದ್ದಾರೆ. ಪ್ರಸಕ್ತ ಈ ಇಬ್ಬರೂ ತಮ್ಮ ಮನಸ್ಸಿನ ಹಿಡಿತ ಪಡೆದುಕೊಳ್ಳುತ್ತಿದ್ದಾರೆ. ನೀಟ್ ಎಂಡ್ ಕ್ಲೀನಾಗಿದ್ದಾರೆ.
ಆಶ್ರಮದಲ್ಲಿ ಇರೋರು ಆಶ್ರಮದ ವಾಸ ಬಯಸಿಬಂದಿದ್ದಲ್ಲ. ಬೇರೆ ಬೇರೆ ಕಾರಣಗಳಿಂದ ಕುಟುಂಬದ ಅವಜ್ಞೆಗೆ ಈಡಾದವರು ಆಶ್ರಮದ ಬಾಗಿಲಗೆ ಬಂದಿದ್ದಾರೆ. ಮತ್ತೆ ಕೆಲವರು ರಸ್ತೆಯಿಂದ ಆಶ್ರಮಕ್ಕೆ ಶಿಷ್ಟ್ ಆಗಿದ್ದಾರೆ. ಮತ್ತೆ ಕೆಲವರನ್ನು ಪೊಲೀಸರು ಆಶ್ರಮಕ್ಕೆ ಬಿಟ್ಟು ಹೋಗಿದ್ದಾರೆ. ಒಂದು ಕಾಲದಲ್ಲಿ ನಾಟಕ ರಂಗದಲ್ಲಿ ನರ್ತನದ ಮೂಲಕ ಹೆಸರು ಮಾಡಿದ ಕಲಾವಿದೆ ಕೂಡಾ ಆಶ್ರಮ ವಾಸಿ!
ಆಶ್ರಮದಲ್ಲಿರುವ ಹಿರಿಯ ಜೀವಿಗಳಿಗೆ ವೃದ್ಧಾಶ್ರಮದಲ್ಲಿದ್ದೇವೆ ಎಂಬ ನೋವು ಕಾಡೋದಿಲ್ಲ. ಇದಕ್ಕೆ ಕಾರಣ ಶಿಕ್ಷಣ ಕೇಂದ್ರದ ಮಕ್ಕಳ ಕಲರವ ಮೇಳ. ಈ ಮಕ್ಕಳಲ್ಲಿ ತಮ್ಮ ತಮ್ಮ ಮಕ್ಕಳು,ಮರಿಯನ್ನು ಕಂಡುಕೊಳ್ಳುವ ಪ್ರಯತ್ನ ಹಿರಿಯರು ಮಾಡುತ್ತಿದ್ದಾರೆ. ಮಕ್ಕಳು ಕೂಡಾ ಹಿರಿಯ ಜೀವಿಗಳ ಸೇವೆಯನ್ನು ಶ್ರದ್ಧೆಯಿಂದ ಮಾಡುತ್ತಿದ್ದಾರೆ. ಒಟ್ಟಾರೆ ಇಲ್ಲಿ ಎಲ್ಲರೂ ಕ್ಷೇಮ ಎಲ್ಲವೂ ಸಸೂತ್ರ. ಯಾರೂ ಇಲ್ಲದವರಿಗೆ ದೇವರಿದ್ದಾನೆ ಎಂಬ ನಾಣ್ನುಡಿಯನ್ನು ಆಶ್ರಮ ಸತ್ಯ ಮಾಡಹೊರಟಿದೆ.
ಅನಘ ಆಶ್ರಮ ವಿಳಾಸ : ಅನಘ ಪುನರ್ ವಸತಿ ಕೇಂದ್ರ, ಬೇಳೂರು, ಕುಂದಾಪುರ ತಾಲೂಕ್, ಉಡುಪಿ ಜಿಲ್ಲೆ. ಮೋಬೈಲ್ 948984119.
ಉಚಿತವಾಗಿ ಅತ್ಯಂತ ಬಡವರಿಗೆ, ಅವಕಾಶ ವಂಚಿತರಿಗೆ ಕನಿಷ್ಠ ಬದುಕು ಕೊಡುವ ಉದ್ದೇಶದಲ್ಲಿ ಅನಘ ಪುನರ್ವಸತಿ ಕೇಂದ್ರ ತೆರೆಯಲಾಗಿದೆ. ಸಾರ್ವಜನಿಕರ ಸಹಕಾರದಲ್ಲಿ ಅನಘ ನಡೆಯುತ್ತಿದೆ.
ಹಣ ಕೊಟ್ಟು ವೃದ್ಧಾಶ್ರಮಕ್ಕೆ ಪೋಷಕರನ್ನು ತಂದು ಬಿಡೋರಿಗೆ ಆಶ್ರಮ ಅವಕಾಶ ನೀಡೋದಿಲ್ಲ. ಆಶ್ರಮಕ್ಕೆ ಬರುವ ಹಿರಿಯ ಜೀವಿಗಳಿಂದ ಹಣ ಸ್ವೀಕಾರ ಮಾಡೋದಿಲ್ಲ.
ಅನಘ ಸ್ಥಾಪನೆಯ ಹಿಂದೆ ಮತ್ತೊಂದು ಸದುದ್ದೇಶವಿದೆ. ಶಿಕ್ಷಣ ಕೇಂದ್ರದಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಅನಾಥ ಪ್ರಜ್ಞೆ ಕಾಡಬಾರದು. ಅನಘ ತೆರೆದಿದ್ದರಿಂದ ಹಿರಿಯ ಮತ್ತು ಕಿರಿಯರಲ್ಲಿ ಕುಟುಂಬ ಭಾಂದವ್ಯ ಹುಟ್ಟಿದೆ.
ಅನಘದಲ್ಲಿ ಊಟ, ವಸತಿ, ಶುಶ್ರೂಷೆ ಮತ್ತು ವೈದ್ಯಕೀಯ ಪರೀಕ್ಷೆ ಕೂಡಾ ಉಚಿತ. ಮುಂದಿನ ದಿನದಲ್ಲಿ ಸಾರ್ವಜನಿಕರು ಸಹಕಾರಿಸಿದರೆ ಹುಚ್ಚರ ಆಶ್ರಮ ತೆರೆಯಲಾಗುತ್ತದೆ. ಶ್ರೀಪತಿ ಹೆಗಡೆ ಹಕ್ಲಾಡಿ
ಈ ಕನಸು ಅವಾರ್ಡ್
ಇಂದಿನ ಆಧುನಿಕ ಯುಗದಲ್ಲಿ ಸ್ಪರ್ಧಿಸಿ ಗೆಲ್ಲುವದು ಅನಿವಾರ್ಯ . ಸರಕಾರ ನಿಗಧಿಪಡಿಸಿರುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಉದ್ಯೋಗ ಪಡೆದು ಜೀವನದಲ್ಲಿ ಸಾಫಲ್ಯತೆಯನ್ನು ಪಡೆದುಕೊಳ್ಳಬೇಕೆಂಬುದು ಹಲವು ಜನರ ಆಕಾಂಕ್ಷೆ. ಆದರೆ ಹಲವು ಜನರಲ್ಲಿ ಕೆಲವು ಜನರು ಮಾತ್ರ ಸ್ಪರ್ಧೆ ಎದುರಿಸಲು ತಕ್ಕ ಸಿದ್ಧತೆಯನ್ನು ಮಾಡಿಕೊಂಡು ಆ ನಿಟ್ಟಿನಲ್ಲಿ ನಿರಂತರವಾಗಿ ಅಭ್ಯಾಸದಲ್ಲಿ ತೊಡಗುತ್ತಾರೆ, ಪ್ರಯತ್ನ ಪಡುವವರಿಗೇನೂ ಕಡಿಮೆಯಿಲ್ಲ, ಪ್ರಯತ್ನಕ್ಕೆ ತಕ್ಕ ಪ್ರತಿಫಲ ದೊರೆಯುವದರಲ್ಲಿ ಸಂಶಯವಿಲ್ಲ ಎಷ್ಟೋ ಜನ ಅದು ಮಾಡಬೇಕು, ಇದು ಮಾಡಬೇಕು ಎಂದುಕೊಂಡು ಆ ನಿಟ್ಟಿನಲ್ಲಿ ಪ್ರಯತ್ನಪಡದೆ ಕಾಲಹರಣ ಮಾಡುವದನ್ನು ನೋಡುತ್ತೇವೆ.
ಕರ್ನಾಟಕ ಲೋಕ ಸೇವಾ ಆಯೋಗ ನಡೆಸುವ ಎಸ್,ಡಿ,ಎ. ಎಫ್,ಡಿಎ. ಪಿ,ಡಿ,ಒ. ಗಳಂತಹ ಸಾಮಾನ್ಯ ಪ್ರವೇಶ ಪರೀಕ್ಷೆಗಳನ್ನು ಬರೆಯಲು ಲಕ್ಷ ಲಕ್ಷ ಜನರು ಅರ್ಜಿ ಹಾಕಿದ್ದಾರೆ. ಈ ಪರೀಕ್ಷೆಗಳಿಗೆ ಸಾಮಾನ್ಯ ಜ್ಞಾನ ಅತ್ಯವಶ್ಯಕ, ಆಂಗ್ಲ ಭಾಷೆಯು ಕೂಡ ಅವಶ್ಯವಾಗಿದೆ. ಗೆಲುವಿಗಾಗಿ ಪ್ರಯತ್ನ ಪಡಬೇಕಷ್ಟೇ. ಇತಿಹಾಸ, ಭೂಗೋಳ, ವಿಜ್ಞಾನ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಸಂಖ್ಯಾಶಾಸ್ತ್ರಗಳಂತಹ ವಿಷಯಗಳಲ್ಲಿ ಪ್ರಾವೀಣ್ಯತೆ ಹೊಂದಿರಬೇಕಾಗುತ್ತದೆ. ಕಂಪ್ಯೂಟರ್ ಜ್ಞಾನ ಹೊಂದುವುದು ಇದಕ್ಕೆ ಹೊರತಾಗಿಲ್ಲ, ಸಿ.ಇ.ಟಿ ಪರೀಕ್ಷೆಗಳಲ್ಲಿ ಒಂದೇ ವಿಷಯದ ಮೇಲೆ ಪ್ರಶ್ನೆಗಳನ್ನು ಕೇಳಲಾಗುವದಿಲ್ಲ. ಆದ್ದರಿಂದ ಸ್ಪರ್ಧಾಕಾಂಕ್ಷಿಗಳು ಹಲವು ವಿಷಯಗಳಲ್ಲಿ ಪ್ರಭುತ್ವ ಹೊಂದುವದು ಅಗತ್ಯವಾಗಿದೆ. ಎಲ್ಲಾ ವಿಷಯಗಳನ್ನು ಅಭ್ಯಾಸ ಮಾಡಬೇಕೆಂದರೆ ಗೊಂದಲ ಸೃಷ್ಟಿಯಾಗುವದು ಸಹಜ. ಸಿ.ಇ.ಟಿ ಪರೀಕ್ಷೆಗೆ ತಯಾರಾಗಬೇಕಾದರೆ ಪ್ರಥಮವಾಗಿ ಏಕಾಗ್ರತೆಯನ್ನು ಗಳಿಸಿಕೊಳ್ಳಬೇಕು. ನಮ್ಮ ಪ್ರೀತಿ ಎಲ್ಲಿರುತ್ತದೆಯೋ, ಅಲ್ಲ ನಮ್ಮ ಮನಸ್ಸಿರುತ್ತದೆ. ನಮ್ಮ ಮನಸ್ಸು ಎಲ್ಲಿರುತ್ತದೆಯೋ ಅಲ್ಲಿ ಏಕಾಗ್ರತೆ ಇರುತ್ತದೆ. ಮೊದಲು ಇಷ್ಟವಿರುವ ವಿಷಯವನ್ನು ಆಯ್ದುಕೊಂಡು ಅದರ ಬಗ್ಗೆ ಸಂಪೂರ್ಣ ಅಧ್ಯಯನ ನಡೆಸಬೇಕು.
ಎಲ್ಲಾ ವಿಷಯಗಳುಳ್ಳ ಪುಸ್ತಕಗಳನ್ನು ಕೂಡಿ ಹಾಕಿಕೊಂಡು ಅಭ್ಯಾಸ ಮಾಡುವದು ಒಳ್ಳೆಯ ಪದ್ಧತಿಯಲ್ಲ. ಏಕೆಂದರೆ ಯಾವುದನ್ನು ಓದಬೇಕು, ಯಾವುದನ್ನು ಬಿಡಬೆಕು ಎಂದು ಗಲಿಬಿಲಿಗೊಳ್ಳುವಂತಾಗುತ್ತದೆ. ಟೈಂ ಟೇಬಲ್ ಹಾಕಿಕೊಂಡು ಅಭ್ಯಾಸ ಮಾಡುವದು ಒಳ್ಳೆಯದು. ಕಳೆದು ಹೋದ ಸಮಯ ಮರಳಿ ಬಾರದು ಎಂಬ ಕಟುಸತ್ಯ ತಿಳಿದಿರಬೇಕಾಗುತ್ತದೆ. ಜೀವನದಲ್ಲಿ ಸಮಯ ಪಾಲನೆ ಅತ್ಯಗತ್ಯವಾಗಿದೆ. ಸಮಯದ ಮಹತ್ವ ತಿಳಿಯಬೇಕಾದರೆ, ವರ್ಷಪೂರ್ತಿ ಓದಿಕೊಂಡು ಪರಿಕ್ಷೆಯಲ್ಲಿ ಫೇಲಾದ ವಿದ್ಯಾರ್ಥಿಯನ್ನು ಕೇಳಬೇಕು, ಬಸ್ಸು ನಿಲ್ದಾಣಕ್ಕೆ ಐದು ನಿಮಿಷ ತಡವಾಗಿ ಬಂದು ಬಸ್ಸು ತಪ್ಪಸಿಕೊಂಡ ವ್ಯಕ್ತಿಯನ್ನು ಕೇಳಬೇಕು, ಟಿಕೇಟು ಖರೀದಿಸಲು ಲೇಟಾಗಿ ಒಂದು ನಿಮಿಷದಲ್ಲೇ ರೈಲು ತಪ್ಪಿಸಿಕೊಂಡ ಪ್ರಯಾಣಿಕನನ್ನು ಕೇಳಬೇಕು, ಓಲಂಪಿಕ್ಸ್ ಓಟದಲ್ಲಿ ಒಂದು ಸೆಕೆಂಡಿನಲ್ಲಿ ಸೋತು ಕಪ್ ಕಳೆದುಕೊಂಡ ಆಟಗಾರರನ್ನು ಕೇಳಬೇಕು. ಇದರಿಂದ ಸಮಯದ ಮಹತ್ವದ ಅರಿವಾಗುತ್ತದೆ, ವಿನಾಕಾರಣ ಸಮಯ ಕಳೆಯಲು ಪ್ರಯತ್ನಿಸಬೇಡಿ, ಇದ್ದ ಸಮಯದಲ್ಲೇ ಸಾಧಿಸುವದನ್ನು ಕಲಿತುಕೊಳ್ಳಿ.
ಯಾವುದಾದರೊಂದು ಕೆಲಸ ಮಾಡಬೇಕಾದರೆ ಅಥವಾ ಅಭ್ಯಾಸ ಮಾಡಬೇಕಾದರೆ ಮುಂದೂಡುವ ಪ್ರವೃತ್ತಿ ಸಲ್ಲದು. ನಾಳೆ ಮಾಡುವ ಕೆಲಸ ಇವತ್ತೇ ಮಾಡು, ಇವತ್ತೇ ಮಾಡುವ ಕೆಲಸ ಈಗಲೇ ಮಾಡಿ ಮುಗಿಸಿ ಬಿಡಿ. ಜೀವನದಲ್ಲಿ ಯಶಸ್ವಿಯನ್ನು ಸಾಧಿಸಿರುವ ವ್ಯಕ್ತಿಗಳು ವಿಭಿನ್ನ ಕೆಲಸಗಳನ್ನೇನೂ ಮಾಡುವದಿಲ್ಲ ಅವರು ಕೆಲಸಗಳನ್ನೆ ಭಿನ್ನಿ ಭಿನ್ನ ರೀತಿಯಲ್ಲಿ ಮಾಡುತ್ತಾರೆ, ಯಶ ಸಾಧಿಸುತ್ತಾರೆ. ಸಾಧಿಸಬೇಕೆನ್ನುವ ಛಲ, ಆತ್ಮವಿಶ್ವಾಸ, ದೃಢನಿರ್ಧಾರ ಇದ್ದರೆ ಜೀವನದಲ್ಲಿ ಸಾಧಿಸಲು ಅಸಾಧ್ಯವಾದುದು ಯಾವುದೂ ಇಲ್ಲ.
ಕದಿಯಲು ಸಾಧ್ಯವಾಗದ ವಸ್ತುವೆಂದರೆ ಜ್ಞಾನ, ಜ್ಞಾನ ಸಂಪಾದಿಸಿದರೆ ಎಂತಹ ಸ್ಪರ್ಧಾತ್ಮ ಪರೀಕ್ಷೆಗಳನ್ನು ಎದುರಿಸಲು ಸುಲಭವಾಗುತ್ತದೆ. ಪ್ರತಿಯೊಬ್ಬರ ಜೀವನದಲ್ಲಿ ಜ್ಞಾನದ ಬೆಳಕು ಪಸರಿಸಬೇಕು, ಪ್ರತಿಯೊಬ್ಬರಿಗೂ ತಿಳಿದುಕೊಳ್ಳೂವ ಜಿಜ್ಞಾಸೆ ಇರಬೇಕು, ತಿಳಿಸುವ ಆಸೆ ಇರಬೇಕು, ಕಲಿಕೆ ನಿರಂತವಾಗಿರಬೇಕು. ಇಂದಿನ ಯುವಜನತೆಯಲ್ಲಿ ಆತ್ಮವಿಶ್ವಾಸ ಇಲ್ಲದಿರುವದೇ ಅವರ ಹಿನ್ನೆಡೆಗೆ ಕಾರಣವಾಗಿದೆ. ಅವರಲ್ಲಿ ಉತ್ಸಾಹ ಪುಟಿದೇಳಬೇಕು, ತನ್ನಲ್ಲಿ ತನಗೆ ನಂಬಿಕೆ ಹುಟ್ಟಬೇಕು, ಯುವಕರು ತಮ್ಮಲ್ಲಿ ಅಡಗಿರುವ ಶಕ್ತಿಯನ್ನು ಪ್ರಚುರಪಡಿಸಿ ಆತ್ಮ ಬಲದಿಂದ ಮುನ್ನುಗ್ಗಿ ಶ್ರದ್ದೆಯಿಂದ ಕಾರ್ಯ ಸಾಧಿಸಬೇಕಾಗಿದೆ ಏಕೆಂದರೆ ಶ್ರದ್ಧೆಯೇ ಸಿದ್ದಿಯ ಕೀಲಿ ಕೈ ಆಗಿದೆ.
ಮುಂದೂಡುವ ಪ್ರವೃತ್ತಿ ಅತ್ಯಂತ ಭಯಂಕರ ಲಕ್ಷಣ ಒಬ್ಬನಲ್ಲಿ ಸಾಮರ್ಥ್ಯವಿದ್ದೂ ಹಿಂದುಳಿಯುತ್ತರುವನೆಂದರೆ ಅದಕ್ಕೆ ಕಾರಣ ಮುಂದೂಡುವ ಪ್ರವೃತ್ತಿಯೇ. ಕೆಲಸವನ್ನು ಪದೇ ಪದೇ ಮುಂದೂಡುವದನ್ನು ರೂಢಿಸಿಕೊಂಡರೆ ಸೋಮಾರಿತನ ಹೆಗಲೇರಿ ಗಹಗಹಿಸುತ್ತದೆ. ಇದು ಪ್ರತಿಯೊಬ್ಬರಿಗೂ ಅನ್ವಯವಾಗುವ ಮಾತು. ಒಂದು ಯೋಜನೆಯನ್ನು ಹಾಕಿಕೊಂಡು ಅದಕ್ಕೆ ಅನುಗುಣವಾಗಿ ಓದುವದರಿಂದ ಯಶಸ್ಸು ಕಟ್ಟಿಟ್ಟ ಬುತ್ತಿ.
ಅಮರೇಶ ನಾಯಕ
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಗುಲಬರ್ಗಾ ವಿಶ್ವವಿದ್ಯಾಲಯ.
ನೋಡ ಬನ್ನಿ ಕುಪ್ಪಳಿಯ
ಕುಪ್ಪಳಿ ಎಂದ ತಕ್ಷಣ ನೆನಪಿಗೆ ಬರುವುದೇ ರಾಷ್ಟ್ರಕವಿ ಕುವೆಂಪು. ನಾಡಿನ ಹೆಸರಾಂತ ಸಾಹಿತಿಯ ಊರು, ಮನೆ, ಅಲ್ಲಿನ ಪರಿಸರ ನೋಡಲೇ ಬೇಕಾದಂತದ್ದು. ಮಲೆನಾಡಿನ ಸುರಮ್ಯ ವಾತಾವರಣದಲ್ಲಿ ಇರುವ ಕುಪ್ಪಳಿ ಎರಡು ದಿನದ ಪ್ರವಾಸಕ್ಕೆ ಹೇಳಿಸಿ ಮಾಡಿಸಿದಂತಹ ಸ್ಥಳ.
ಕವಿಮನೆ ಪುಟ್ಟಪ್ಪನವರು ಬಾಳಿದ ಒಳ ಅಂಗಳ ಇರುವ ಮನೆಯನ್ನು ಇಂದು ಸ್ಮಾರಕ ಮಾಡಲಾಗಿದೆ. ಕುವೆಂಪುರವರು ಬರೆದ ಕೃತಿಗಳು, ಅವರ ಬಾಲ್ಯದಲ್ಲಿನ ಫೋಟೋಗಳು, ಅವರು ಮೈಸೂರಿನ ಮನೆಯಲ್ಲಿ ಬಳಸುತ್ತಿದ್ದ ವಸ್ತುಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿಡಲಾಗಿದೆ. ಅವರಿಗೆ ದೊರೆ ಪ್ರತಿಷ್ಠಿತ ಪ್ರಶಸ್ತಿಗಳು, ಅನೇಕ ವಿ.ವಿ.ಗಳು ಅವರಿಗೆ ನೀಡಿದ ಡಾಕ್ಟರೇಟ್ ಪದವಿಗಳನ್ನು ಇಡಲಾಗಿದೆ. ಅವರ ಕಾಲದಲ್ಲಿಬಳಸುತ್ತಿದ್ದಂತಹ ಎತ್ತಿನ ಗಾಡಿ, ಭತ್ತ ತುಂಬುವ ಸಾಧನಗಳು, ಕೃಷಿ ಉಪಕರಣಗಳನ್ನು ಸಂಗ್ರಹಿಸಿಡಲಾಗಿದೆ. ಕುವೆಂಪುರವರ ಜೀವನದ ಅಪೂರ್ವ ಕ್ಷಣಗಳ ಚಿತ್ರಗಳನ್ನೂ ಇಡಲಾಗಿದೆ. ಇದಲ್ಲದೇ ಅಡುಗೆ ಮನೆಯ ಸಾಮಾಗ್ರಿಗಳನ್ನು ಜೋಪಾನ ಮಾಡಿದ್ದಾರೆ. ಬಹುತೇಕ ಚಿತ್ರಗಳನ್ನು ಕುವೆಂಪುರ ಪುತ್ರ ತೇಜಸ್ವಿಯವರು ತೆಗೆದದ್ದಾಗಿವೆ. ಒಮ್ಮೆ ಈ ಕವಿಮನೆಯನ್ನು ನೋಡಿದಾಗ ಭಾವ ಪರವಶವಾಗುತ್ತದೆ.
ಕವಿಶೈಲ
ಕುವೆಂಪುರವರಿಗೆ ಬರೆಯಲು ಪ್ರೇರಣೆ ನೀಡಿದಂತಹ ಸ್ಥಳ ಕವಿಶೈಲವಾಗಿದೆ. ಕವಿಮನೆಯ ಹತ್ತಿರದಲ್ಲೇ ಇರುವ ಕವಿಶೈಲ ಸೂರ್ಯಾಸ್ತಮಾನಕ್ಕೆ ಹೇಳಿಮಾಡಿಸಿದ ಸ್ಥಳ. ಕುವೆಂಪು, ಬಿ.ಎಂ.ಶ್ರೀ, ಟಿ.ಎಸ್.ವೆಂ ಎಂಬ ಕೆತ್ತನೆಗಳು ಕವಿಶೈಲದ ಬಂಡೆಯ ಮೇಲೆ ಕಾಣಸಿಗುತ್ತವೆ. ಸುತ್ತಮುತ್ತಲಿನ ಪ್ರಕೃತಿ ಸೌಂದರ್ಯವನ್ನು ಇಲ್ಲಿ ವೀಕ್ಷಿಸಬಹುದಾಗಿದೆ.
ಇದಲ್ಲದೇ ಇಲ್ಲಿ ಕುವೆಂಪು ಜನ್ಮ ಶತಮಾನೋತ್ಸವ ಸ್ಮಾರಕ ಭವನವನ್ನು ನಿರ್ಮಿಸಲಾಗಿದೆ. ಅಲ್ಲಿಯ ರಂಗ ಮಂದಿರಕ್ಕೆ ಹೇಮಾಂಗಣ ಎಂದು ಹೆಸರಿಡಲಾಗಿದೆ. ಕನ್ನು ವಿವಿಯ ಅಧ್ಯಯನ ಕೇಂದ್ರ ಇಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಶಿಬಿರಗಳು ನಡೆಸಲು ಸೂಕ್ತ ಸ್ಥಳವಾಗಿದೆ. ಚಾರಣಿಗರು, ಪ್ರವಾಸಿಗರು ತಂಗಲು ವ್ಯವಸ್ಥೆ ಇದೆ. ಸುಸಜ್ಜಿತ ಗ್ರಂಥಾಲಯ ಇಲ್ಲಿದೆ. ಮಲೆನಾಡಿನ ಮನೆಗಳ ಶೈಲಿಯಲ್ಲಿಯೇ ಈ ಭವನವನ್ನೂ ಸಹ ನಿರ್ಮಿಸಲಾಗಿದೆ.
ಕುಪ್ಪಳಿಗೆ ಬರುವ ಪ್ರವಾಸಿಗರು ಶಿವಮೊಗ್ಗದಿಂದ ತೀರ್ಥಹಳ್ಳಿ-ಕೊಪ್ಪಕ್ಕೆ ಹೋಗುವ ಬಸ್ ಹಿಡಿಯಬೇಕು. ಹತ್ತಿರದ ರೈಲು ನಿಲ್ದಾಣ ಶಿವಮೊಗ್ಗ, ವಿಮಾನ ನಿಲ್ದಾಣ ಮಂಗಳೂರು. ಬೆಂಗಳೂರಿನಿಂದ ಕುಪ್ಪಳಿಗೆ ಪ್ರತೀ ದಿನ ರಾಜಹಂಸ ಬಸ್ ಇದೆ. ಉಳಿಯುವ ಸೌಕರ್ಯವೂ ಸಹ ಇಲ್ಲಿ ಇದೆ. ಊಟ-ತಿಂಡಿ ಪ್ರತಿಯೊಂದು ವ್ಯವಸ್ಥೆಯೂ ಸಹ ಇಲ್ಲಿದೆ.
ಈ ಸುದಂರ ಮಾಯಾ ಲೋಕವನ್ನು ಖಂಡಿತ ನೋಡಲೇಬೇಕು. ಮನ ಅರಳಿಸುವಂತಹ ಈ ಸ್ಥಳ ನೆಮ್ಮದಿಯ ನಿಟ್ಟುಸುರು ಬಿಡಲು ಪ್ರಶಸ್ತವಾಗಿದೆ.ದರ್ಶನ್ ಬಿ.ಎಂ
ದ್ವಿತೀಯ ಪತ್ರಿಕೋದ್ಯಮ, ಆಳ್ವಾಸ್ ಕಾಲೇಜು,ಮೂಡುಬಿದಿರೆ.
ವೈವಿಧ್ಯ
ಉಡುಪಿ ಕುಕ್ಕಿಕಟ್ಟೆ ಉದ್ಯಮಿ ಮರ್ತಪ್ಪ ಶೆಣೈಯವರ ತೋಟದಲ್ಲಿ ಬೆಳೆದ ಗೆಣಸೊಂದು ಹಂಸದಾಕೃತಿಯಲ್ಲಿ ಕಂಡುಬಂದಿದೆ. ಲಕ್ಷ್ಮೀನಾರಾಯಣ ಶೆಣೈ ತಮ್ಮ ಕ್ಯಾಮರಾದಲ್ಲಿ ಕ್ಲಿಕ್ಕಿಸಿ ಈ ಕನಸಿಗಾಗಿ ಕಳುಹಿಸಿದ್ದಾರೆ...
ರಾಜ್ಯ - ರಾಷ್ಟ್ರ
ಬೆಂಗಳೂರು: ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರರಿಗೆ ಅತ್ಯುನ್ನತ ಪ್ರಶಸ್ತಿ ಜ್ಞಾನಪೀಠ ಲಭಿಸಿದೆ. ಕಂಬಾರರ ಅಮೋಘ ಸಾಹಿತ್ಯ ಸೇವೆಗೆ ಅವರನ್ನರಸಿ ಈ ಪ್ರಶಸ್ತಿ ಬಂದಿದೆ. ತನ್ಮೂಲಕ ಕನ್ನಡ ಸಾಹಿತ್ಯಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿ ಲಭಿಸಿದಂತಾಗಿದೆ.ಕಂಬಾರರು ಹಲವು ಸಾಹಿತ್ಯಕೃತಿಗಳನ್ನು ರಚಿಸುವ ಮೂಲಕ ಕನ್ನಡ ಸಾಹಿತ್ಯದ ಮೇರು ಸಾಹಿತಿಯಾಗಿ ಗುರುತಿಸಿಕೊಂಡಿದ್ದರು. ಅನೇಕ ಪ್ರಶಸ್ತಿಗಳು ಈ ಸಾಹಿತಿಯನ್ನು ಅರಸಿ ಬಂದಿವೆ. ಸರಳ ಸಜ್ಜನ ವ್ಯಕ್ತಿತ್ವದ ಕಂಬಾರರಿಗೆ ಅತ್ಯುನ್ನತ ಪ್ರಶಸ್ತಿಗಳಲ್ಲೊಂದಾದ ಜ್ಞಾನಪೀಠ ಪ್ರಶಸ್ತಿ ದೊರಕಿರುವುದಕ್ಕೆ ಕನ್ನಡ ಸಾಹಿತ್ಯಾಸಕ್ತರು, ಕಂಬಾರರ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಡಾ. ಚಂದ್ರಶೇಖರ ಕಂಬಾರ (ಜನನ- ೨ ಜನವರಿ ೧೯೩೭) ಜಾನಪದ ಸೊಗಡನ್ನು ತಮ್ಮ ಬರವಣಿಗೆಯಲ್ಲಿ ಮೈದಾಳಿಸಿಕೊಂಡು ಬಂದಿರುವ ಚಂದ್ರಶೇಖರ ಕಂಬಾರರು ಹಲವು ಪ್ರತಿಭೆಗಳ ಸಂಗಮ. ಕವಿ, ನಾಟಕಕಾರ, ಸಂಗೀತ ನಿರ್ದೇಶಕ, ಚಲನಚಿತ್ರ ನಿರ್ದೇಶಕ, ಅಧ್ಯಾಪಕ, ಜಾನಪದ ತಜ್ಞ, ಆಡಳಿತಗಾರ ಇತ್ಯಾದಿ.
ಮುಖ್ಯವಾಗಿ ಕವಿ-ನಾಟಕಕಾರರಾಗಿ ಕಂಬಾರ ಜನಪ್ರಿಯರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಹಲವು ವರ್ಷಗಳ ಉಪನ್ಯಾಸಕ ವೃತ್ತಿಯಿಂದ ಕನ್ನಡ ವಿಶ್ವವಿದ್ಯಾಲಯ ಹಂಪಿಯ ಕುಲಪತಿಗಳಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಈಗ ಬೆಂಗಳೂರಿನ ಬನಶಂಕರಿಯಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಈ ನಡುವೆ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರಾಗಿಯೂ ಮೂರು ವರ್ಷ ಕಾರ್ಯ ನಿರ್ವಹಿಸಿದ್ದಾರೆ. ಅಲ್ಲದೆ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ೧೯೩೭ ಜನವರಿ ೨ರಂದು ಕಂಬಾರರು ಬೆಳಗಾವಿ ಜಿಲ್ಲೆ ಘೋಡಗೇರಿಯಲ್ಲಿ ಜನಿಸಿದರು. ತಮ್ಮ ಊರಿನ ವಾತಾವರಣದಲ್ಲಿನ ಜಾನಪದ ಹಾಡು, ಕುಣಿತ, ನಾಟಕಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ ಅವುಗಳ ಸಂಗ್ರಹ, ಬರವಣಿಗೆಯನ್ನು ರೂಢಿಸಿಕೊಂಡರು. ಉತ್ತರ ಕರ್ನಾಟಕದ ಅದರಲ್ಲೂ ಬೆಳಗಾವಿ, ಧಾರವಾಡದ ಗಂಡುಭಾಷೆಯನ್ನು ಕನ್ನಡ ಸಾಹಿತ್ಯಕ್ಕೆ ಹೊತ್ತು ತಂದರು. ಧಾರವಾಡದ ವರಕವಿ ಡಾ. ದ. ರಾ. ಬೇಂದ್ರೆ ಅವರ ನಂತರ ಭಾಷೆಯನ್ನು ಪರಿಣಾಮಕಾರಿಯಾಗಿ ದುಡಿಸಿಕೊಂಡವರಲ್ಲಿ ಕಂಬಾರರು ಒಬ್ಬರು.
ಕಂಬಾರರು ತಾವೇ ಬರೆದ ಕಾದಂಬರಿಗಳನ್ನು ಚಲನಚಿತ್ರಗಳಾಗಿಸಿದರು. ಕರಿಮಾಯಿ, ಸಂಗೀತಾ, ಕಾಡುಕುದುರೆ ಇವುಗಳಲ್ಲಿ ಪ್ರಮುಖವಾದುವು. ಕಂಬಾರರು ತಮ್ಮ ಚಿತ್ರಗಳಿಗೆ ತಾವೇ ಸಂಗೀತ ನೀಡಿದ್ದಾರೆ. ಕಾಡುಕುದುರೆಯ ಹಿನ್ನಲೆ ಸಂಗೀತದ ``ಕಾಡು ಕುದುರೆ ಓಡಿಬಂದಿತ್ತಾ .." ಹಾಡಿಗೆ ಶಿವಮೊಗ್ಗ ಸುಬ್ಬಣ್ಣ ಅವರಿಗೆ ರಾಷ್ಟ್ರಪತಿಗಳ ಫಲಕ ಕೂಡ ಸಿಕ್ಕಿತು. `ಜೀಕೆ ಮಾಸ್ತರ ಪ್ರಣಯ ಪ್ರಸಂಗ' ಕಾದಂಬರಿಯನ್ನು ಕಿರುತೆರೆಗೂ ಅಳವಡಿಸಿದ್ದಾರೆ. ಹತ್ತಾರು ಸಾಕ್ಷ್ಯಚಿತ್ರಗಳನ್ನೂ ನಿರ್ಮಿಸಿರುವ ಕಂಬಾರರು ಉತ್ತಮ ನಾಟಕಕಾರರು. ಜೊತೆಗೆ ಜಾನಪದ ಶೈಲಿಯ ಹಾಡುಗಳಿಗೆ ಜನಪ್ರಿಯರು. ತಾವೇ ಸ್ವತಃ ಹಾಡುಗರೂ ಸಹಾ.
ಹೇಳತೇನ ಕೇಳ, ಸಿರಿಸಂಪಿಗೆ, ಬೆಳ್ಳಿಮೀನು, ಋಷ್ಯಶೃಂಗ, ಕಾಡುಕುದುರೆ, ನಾಯಿಕಥೆ, ಹರಕೆಯ ಕುರಿ, ಬೋಳೇಶಂಕರ, ಸಿಂಗಾರವ್ವ ಮತ್ತು ಅರಮನೆ ಮುಂತಾದವು ಇವರ ಪ್ರಮುಖ ಕೃತಿಗಳು. ಮಹಾಮಾಯಿ ಅವರ ಇತ್ತೀಚಿನ ಹೊಸ ನಾಟಕ ಕೃತಿ.ಶಿಖರ ಸೂರ್ಯ ೨೬ ವರ್ಷಗಳ ನಂತರ ಹೊರಬಂದ ಕಾದಂಬರಿ;ಡಿಸೆಂಬರ ೨೦೦೬ರಲ್ಲಿ ಬಿಡುಗಡೆಯಾಯಿತು. ಕನ್ನಡ ಜಾನಪದ ವಿಶ್ವಕೋಶ ಸಂಪಾದಿತ ಕೃತಿ. ಸುಮಾರು ನಲವತ್ತಕ್ಕೂ ಮಿಕ್ಕಿ ಕೃತಿಗಳು ಹೊರಬಂದಿವೆ.
ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಕಂಬಾರರು ೧೯೯೧ರಲ್ಲಿ ತಮ್ಮ `ಸಿರಿಸಂಪಿಗೆ' ನಾಟಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದಾರೆ.
ಇತ್ತೀಚೆಗೆ ಆಳ್ವಾಸ್ ನುಡಿಸಿರಿ ಅಧ್ಯಕ್ಷ ಗಿರಿಯೂ ಇವರಿಗೆ ಪ್ರಾಪ್ತವಾಗಿತ್ತು.
ರಾಜ್ಯ - ರಾಷ್ಟ್ರ
ನವೆಂಬರ್ 11 - 13 : ಮೂಡಬಿದಿರೆಯಲ್ಲಿ ಕನ್ನಡದ ಕಲರವ
ಮೂಡಬಿದಿರೆ: ಆಳ್ವಾಸ್ ಎಜುಕೇಷನ್ ಫೌಂಡೇಷನ್ ಆಶ್ರಯದಲ್ಲಿ ಎಂಟನೇ ವರುಷದ " ಆಳ್ವಾಸ್ ನುಡಿಸಿರಿ" ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ಇದೇ ನವೆಂಬರ್ 11, 12 ಮತ್ತು 13ರಂದು ಮೂಡಬಿದಿರೆಯ ವಿದ್ಯಾಗಿರಿಯಲ್ಲಿರುವ ಸುಂದರಿ ಆನಂದ ಆಳ್ವ ಕ್ಯಾಂಪಸ್ ನಲ್ಲಿ ಹಲವು ವೈಶಿಷ್ಟ್ಯಗಳೊಂದಿಗೆ, ಶಿಸ್ತುಬದ್ಧ ರೀತಿಯಲ್ಲಿ ನಡೆಯಲಿದೆ.ಇದಕ್ಕಾಗಿ ಭರದ ಸಿದ್ಧತೆಗಳು ಪ್ರಾರಂಭವಾಗಿದೆ ಎಂದು ಆಳ್ವಾಸ್ ನುಡಿಸಿರಿ ರೂವಾರಿ, ಆಳ್ವಾಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಳೆದ ಏಳು ವರುಷಗಳಿಂದ ಆಳ್ವಾಸ್ ಸಮೂಹ ಸಂಸ್ಥೆ ಯಾವುದೇ ಸರಕಾರಿ ನೆರವನ್ನೂ ಪಡೆಯದೆ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ನುಡಿಸಿರಿಯನ್ನು ಆಯೋಜಿಸುತ್ತಾ ಬಂದಿದ್ದು, ಸಮಯಪ್ರಜ್ಞೆ, ವ್ಯವಸ್ಥೆ,ಶಿಸ್ತುಬದ್ಧ ಕಾರ್ಯಕ್ರಮ ಸಂಯೋಜನೆಗಳ ಮೂಲಕ "ಮಾದರಿ ಸಮ್ಮೇಳನ" ಎಂಬ ಪ್ರಶಂಸೆಯನ್ನು ಸಮಸ್ತ ಕನ್ನಡಿಗರಿಂದ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಬಾರಿಯೂ ಸಮ್ಮೇಳನವನ್ನು ಸಂಪೂರ್ಣ ಪಾರದರ್ಶಕವಾಗಿ, ವ್ಯವಸ್ಥಿತ ರೀತಿಯಲ್ಲಿ ಸಂಯೋಜನೆಗೊಳಿಸುವ ನಿಟ್ಟಿನಲ್ಲಿ , ಸಮ್ಮೇಳನದಲ್ಲಿ ಜನತೆಯ ಸಹಭಾಗಿತ್ವ ಇನ್ನಷ್ಟು ಮೂಡಬೇಕೆಂಬ ಮಹತ್ವಾಕಾಂಕ್ಷೆಯಿಂದ ಕರ್ನಾಟಕದ ವಿವಿಧ ಕಡೆಗಳಲ್ಲಿ ನುಡಿಸಿರಿ ಪೂರ್ವಭಾವೀ ಸಮಾಲೋಚನಾ ಸಭೆಗಳನ್ನು ನಡೆಸುವ ಬಗ್ಗೆ ಚಿಂತಿಸಲಾಗಿದೆ ಎಂದು ಡಾ.ಆಳ್ವ ತಿಳಿಸಿದರು.
ರಾಜ್ಯದ ಆಯ್ದ ಪ್ರದೇಶಗಳಲ್ಲಿ ಈ ಸಮಾಲೋಚನಾ ಸಭೆ ನಡೆಸಲು ಉದ್ದೇಶಿಸಲಾಗಿದೆ. ನುಡಿಸಿರಿ ಪೂರ್ವಭಾವೀ ಸಮಾಲೋಚನಾ ಸಭೆಗಳನ್ನು ತಮ್ಮ ಕ್ಷೇತ್ರಗಳಲ್ಲಿ ನಡೆಸಲು ಆಸಕ್ತ ಕನ್ನಡಾಭಿಮಾನಿಗಳು ಉತ್ಸುಕರಾಗಿದ್ದಲ್ಲಿ ಆಳ್ವಾಸ್ ಸಂಸ್ಥೆಯ ನುಡಿಸಿರಿ ಕಛೇರಿಯನ್ನು ಸಂಪರ್ಕಿಸಬಹುದು. ಸಮಾಲೋಚನಾ ಸಭೆಗಳನ್ನು ನಡೆಸುವ ಸಂದರ್ಭದಲ್ಲಿ ಸಮ್ಮೇಳನಕ್ಕೆ ಸದಸ್ಯರಾಗಿ ಭಾಗವಹಿಸಲು ಉತ್ಸಕರಾಗಿರುವವರು ಸ್ಥಳದಲ್ಲೇ ಹೆಸರು ನೋಂದಾಯಿಸಿ ಸದಸ್ಯತ್ವ ಪಡೆದುಕೊಳ್ಳಲು ಅವಕಾಶವಿರುತ್ತದೆ.
ಜಾಗತಿಕ ಸಮ್ಮೇಳನ
ಹತ್ತನೇ ವರುಷದ ನುಡಿಸಿರಿ ಸಮ್ಮೇಳನವನ್ನು ಜಾಗತಿಕ ಮಟ್ಟದ ಸಮ್ಮೇಳನವಾಗಿ ಆಯೋಜಿಸಲಾಗವುದು. ಇದಕ್ಕೆ ಪೂರಕ ಯೋಜನೆ, ಯೋಚನೆಗಳು ಪ್ರಗತಿಯಲ್ಲಿವೆ. ವಿಭಿನ್ನವಾಗಿ, ಅತ್ಯಂತ ವೈಭವಯುತವಾಗಿ ಅಷ್ಟೇ ವ್ಯವಸ್ಥಿತವಾಗಿ ಹತ್ತನೇ ವರುಷದ ನುಡಿಸಿರಿ ಸಮ್ಮೇಳನ ಮೂಡಿಬರಲಿದೆ ಎಂಬ ಆಶಾಭಾವವನ್ನು ಡಾ.ಆಳ್ವ ವ್ಯಕ್ತಪಡಿಸಿದರು.
ಎಲ್ಲಾಜಿಲ್ಲೆಯಿಂದ ಪ್ರತಿನಿಧಿಗಳು
ಈ ಬಾರಿಯ ನುಡಿಸಿರಿಗೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ಕನ್ನಡಾಸಕ್ತರು ಪ್ರತಿನಿಧಿಗಳಾಗಿ ಭಾಗವಹಿಸಬೇಕೆಂಬ ಆಸೆ ನಮ್ಮದು. ಕಳೆದ ವರುಷವೂ ಬಹುತೇಕ ಎಲ್ಲಾ ಜಿಲ್ಲೆಗಳಿಂದ ಪ್ರತಿನಿಧಿಗಳು ಆಗಮಿಸಿದ್ದಾರೆ.ಈ ಬಾರಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿನಿಧಿಗಳಾಗಿ ಕನ್ನಡಿಗರು ಈ ಸಮ್ಮೇಳನದಲ್ಲಿ ಪಾಲ್ಗೊಳ್ಳಬೇಕೆಂಬುದು ನಮ್ಮ ಆಸೆ. ಇದಕ್ಕಾಗಿ ಪ್ರತೀ ಜಿಲ್ಲೆಯಲ್ಲಿಯೂ ನುಡಿಸಿರಿಯ ಬಗ್ಗೆ ಸೂಕ್ತ ಮಾಹಿತಿ ಲಭ್ಯವಾಗುವಂತೆ ಪ್ರಚಾರ ಕೈಗೊಳ್ಳಲಾಗುವುದು ಎಂದರು.
ಯುವ ಮನಸ್ಸು ಪಾಲ್ಗೊಳ್ಳಲಿ
ಯುವ ಮನಸ್ಸುಗಳು ಕನ್ನಡವನ್ನು ಕಟ್ಟುವ, ಬೆಳೆಸುವ ಕಾರ್ಯ ಮಾಡಬೇಕಾಗಿದೆ. ಇಂತಹ ಯುವ ಮನಸ್ಸುಗಳು ಹೆಚ್ಚಿನ ಸಂಖ್ಯೆಯಲ್ಲಿ ನುಡಿಸಿರಿ ಸಮ್ಮೇಳನದಲ್ಲಿ ಭಾಗವಹಿಸಬೇಕಾಗಿದೆ. ಯುವ ಜನತೆಯಲ್ಲಿ ಕನ್ನಡದ ಬಗೆಗಿನ ಆಸಕ್ತಿ ಉಂಟಾದಲ್ಲಿ ಮಾತ್ರ ಕನ್ನಡದ ಬೆಳವಣಿಗೆ ಸಾಧ್ಯ. ಆ ನಿಟ್ಟಿನಲ್ಲಿ ಯುವ ಮನಸ್ಸುಗಳು ಈ ಸಮ್ಮೇಳನದಲ್ಲಿ ಭಾಗವಹಿಸಲು ಉತ್ಸುಕರಾಗಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಮಾಧ್ಯಮ ಸಂಪರ್ಕಾಧಿಕಾರಿ, ಪತ್ರಿಕೋದ್ಯಮ ಉಪನ್ಯಾಸಕ ಹರೀಶ್ ಕೆ.ಆದೂರು ಉಪಸ್ಥಿತರಿದ್ದರು.
ವಿಶೇಷ ವರದಿ
ನಿಯಾಮಕನ ಆಟಕ್ಕೆ ತತ್ತರಿಸುತ್ತದೆ ಕುಟುಂಬ 
ಬೈಂದೂರು : ದೇವರ ಶಾಪವಾ.. ನಿಯಾಮಕನ ಕಣ್ಣಾಮುಚ್ಚಾಲೆ ಆಟವಾ.. ಅನಾರೋಗ್ಯದ ಪರಿಣಾಮವಾ. ಒಟ್ಟಿನಲ್ಲಿ ಜವರಾಯನ ಹೊಡೆತಕ್ಕೆ ಕುಟುಂಬ ತತ್ತರಿಸಿದೆ. ಬೆನ್ನುಬೆನ್ನಿಗೆ ಸರತಿಯಂತೆ ಸಾವು ಸಂಭವಿಸಿದೆ!
ಕುಟುಂಬದ ಆಧಾರ ಸ್ಥಂಭದಂತಿದ್ದ ಮೂವರು ಕಳಚಿಬಿದಿದ್ದಾರೆ. ವಿಧಿಯಾಟಕ್ಕೆ ಲಿಂಗಬೇಧವಿಲ್ಲದೆ ವಿಧಿ ಎಲ್ಲರನ್ನೂ ಆಪೋಶನ ತೆಗೆದುಕೊಂಡಿದೆ. ಕಳೆದ ಆರು ತಿಂಗಳೊಳಗೆ ಮೂವರು ವಿಧಿ ವಶರಾಗಿದ್ದಾರೆ. ಮತ್ತೊಬ್ಬರ ಸ್ಥಿತಿಕೂಡಾ ಆಶಾದಾಯಕವಾಗಿಲ್ಲ. ಇದರೊಟ್ಟಿಗೆ ವಿಧಿಯ ವಕ್ರದೃಷ್ಟಿ ಚಿಕ್ಕ ಹೆಣ್ಣು ಮಗುವಿನ ಎರಡೂ ಕಾಲನ್ನು ಕಿತ್ತುಕೊಂಡಿದೆ.
ಇದ್ಯಾವುದೋ ಸಿನಿಮಾದಲ್ಲಿ ಬರುವ ಒನ್ ಲೈನ್ ಕತೆಯಲ್ಲ. ವಾಸ್ತವ ಜೀವನದ ಸತ್ಯ ಸಂಗತಿ. ಕುಟುಂಬದ ಸದಸ್ಯರಲ್ಲಿ ಯಾರಾದರೊಬ್ಬರು ಅಕಾಲ ಮೃತ್ಯುವಿಗೆ ಒಳಗಾದರೆ ಅದನ್ನ ಮರೆಯೋದು ಅಷ್ಟು ಸುಲಭವಲ್ಲ. ಅಂತಾದ್ದರಲ್ಲಿ ಒಂದರ ಹಿಂದೆ ಒಂದರಂತೆ ಸಾವು ಸಂಭವಿಸಿದರೆ ಸುಧಾರಿಸಿ ಕೊಳ್ಳೋದಾದರೂ ಹೇಗೆ? ಈ ಎಲ್ಲಾ ಅನಾಹುತಕ್ಕೆ ದೇವರ ಶಾಪವಾ ವಿಧಿನಿಯಮ ಕಾರಣವಾ ಎಂಬ ಗೊಂದಲ ಹುಟ್ಟಿಕೊಂಡಿದೆ ಕುಟುಂಬದಲ್ಲಿ.
ಮೃತ್ಯು ಸರಮಾಲೆ
ಕುಂದಾಪುರ ತಾಲ್ಲೂಕ್ ಬಳ್ಳೂರು ಕಂಬಳಗದ್ದೆ ಮನೆ ಜವರಾಯನ ಹೊಡೆತಕ್ಕೆ ಸಿಕ್ಕಿ ಕಂಗೆಟ್ಟಿದೆ. ಮೊಟ್ಟಮೊದಲು ಮನೆಯ ಹಿರಿಯ ವ್ಯಕ್ತಿ ಮಂಜು ಶೆಟ್ಟ್ಟಿಗಾರ್ (65) ವಿಧಿವಶರಾದರು. ನಂತರದ ಮಂಜು ಶೆಟ್ಟಿಗಾರ್ ಅವರ ಹಿರಿಯ ಪುತ್ರ ವಿಜಯ ಶೆಟ್ಟಿಗಾರ್ (42). ಇವರ ಬೆನ್ನಿಗೆ ನಾರಾಯಣ ಶೆಟ್ಟಿಗಾರ್ ಅವರ ಮಗಳು ದೀಪ (19) ಬೆಂಕಿ ಆಕಸ್ಮಿಕದಲ್ಲಿ ವಿಧಿ ನುಂಗಿಹಾಕಿತು. ಇಷ್ಟಕ್ಕೂ ವಿಧಿಗೆ ಕರುಣೆ ಬರಲಿಲ್ಲ. ಮಂಜು ಶೆಟ್ಟಿಗಾರ್ ಅವರ ಸೊಸೆ ಶೈಲಾ (38) ಅವರನ್ನು ಬ್ರೈನ್ ಟ್ಯೂಮರ್ ನುಂಗಿಹಾಕಿತು. ಇದೆಲ್ಲವೂ ಮಂಜು ಶೆಟ್ಟಿಗಾರ್ ಮರಣದ ನಂತರ ನಡೆದ ಸರಣಿ ಮರಣ.
ಇಷ್ಟಾದರೂ ವಿಧಿಗೆ ಮರಣ ದಾಹ ತಗ್ಗಿಲ್ಲ.ಮಂಜು ಶೆಟ್ಟಿಗಾರ್ ಅವರ ಮತ್ತೊಬ್ಬ ಪುತ್ರ ಪ್ರಭಾಕರ ಶೆಟ್ಟಿಗಾರ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇವರ ತಬ್ಬಲಿ ಮಗಳು ವೀಣಾ ತನ್ನ ಎರಡೂ ಕಾಲನ್ನ ಕಳೆದುಕೊಂಡಿದ್ದಾಳೆ. ಊರುಗೋಲಿಲ್ಲದೆ ಹೆಜ್ಜೆಯಿಡಲೂ ಸಾಧ್ಯವಿಲ್ಲ.
ಪ್ರಭಾಕರ ಶೆಟ್ಟಿಗಾರ್ ಹೆಂಡತಿಸತ್ತ ನಂತರ ಖಿನ್ನರಾದರು. ಇದ್ದಕಿದ್ದ ಹಾಗೆ ಹಾಸಿಗೆ ಹಿಡಿದರು. ದಿನೇ ದಿನೇ ಅವರ ಹೊಟ್ಟೆ ದೊಡ್ಡದಾಗುತ್ತಲೇ ಸಾಗಿತು. ಸಧ್ಯದ ಪರಿಸ್ಥಿತಿಯಲ್ಲಿ ಹೊಟ್ಟೆ ಒಡೆಯುವ ಹಂತ ಮುಟ್ಟಿದೆ. ಕೆಲ ವೈದ್ಯರು ಲಿವರ್ ಸಮಸ್ಯೆ ಅಂತಾರೆ. ಮತ್ತೆ ಕಲೆ ಡಾಕ್ಟರ್ಗಳು ಜಲೋಧರ ಅಂತಾರೆ. ಶೀಘ್ರ ಪ್ರಭಾಕರ ಅವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸುವಂತೆ ವೈದ್ಯರು ಸೂಚಿಸಿದ್ದಾರೆ. ಆದರೆ ಇವರನ್ನು ಆಸ್ಪತ್ರೆಗೆ ದಾಖಲಿಸಲು ಹಣ ಅಡ್ಡಿ ಬಂದಿದೆ. ಈಗಾಗಲೇ ಈ ಕುಟುಂಬ ಅನಾರೋಗ್ಯಕ್ಕೆ ಒಳಗಾದವರ ಆರೋಗ್ಯಕ್ಕಾಗಿ ಬರೋಬ್ಬರಿ ಏಳು ಲಕ್ಷ ರೂ. ಸುರಿದಿದೆ. ಕುಟುಂಬದ ಸದಸ್ಯರು ರೊಕ್ಕವನ್ನೂ ಕಳೆದುಕೊಂಡರು. ಜೊತೆಗೆ ಅಮೂಲ್ಯ ಜೀವವನ್ನೂ ಬಲಿಕೊಡಬೇಕಾಗಿ ಬಂದಿದ್ದು ವಿಪರ್ಯಾಸ.
ವೀಣಾ ಕತೆಯೇನು
ಪ್ರಭಾಕರ ಶೆಟ್ಟಿಗಾರ್ ಮತ್ತು ದಿ.ಶೈಲಾ ಶೆಟ್ಟಿಗಾರ್ ದಂಪತಿಗಳ ಇಬ್ಬರು ಮಕ್ಕಳಲ್ಲಿ ವೀಣಾ ಒಬ್ಬರು. ಮತ್ತೊಬ್ಬ ಪುತ್ರ ಪ್ರವೀಣ್ ಹೊಟ್ಟೆಪಾಡಿಗಾಗಿ ಬಾಗಲುಕೋಟೆಯಲ್ಲಿ ಬೀಡಾ ಅಂಗಡಿ ನಡೆಸುತ್ತಿದ್ದಾನೆ.
ವೀಣಾ ಜನನದ ನಂತರ ಎಲ್ಲಾ ಮಕ್ಕಳಂತೆ ಇದ್ದಳು. ಹುಟ್ಟಿದ ಐದು ವರ್ಷದ ನಂತರ ವೀಣಾ ಅವಳ ಕಾಲು ವಶ ಕಳೆದುಕೊಳ್ಳತೊಡಗಿತು. ಪ್ರಸಕ್ತ ಕಾಲು ಹಿಂದುಮುಂದಾಗಿದೆ. ಎರಡೂ ಕಾಲು ಸಂಪೂರ್ಣ ಬಲಕಳೆದುಕೊಂಡಿದೆ. ಆಡಿ ನಲಿವ ವಯಸ್ಸಲ್ಲಿ ಕಂಕಳಿನಲ್ಲಿ ಊರುಗೋಲು ಹಿಡಿದು ನಡೆವ ವೀಣಾ ಕಂಡರೆ ಕರಳು ಚುರುಕ್ ಎನ್ನುತ್ತಿದೆ. ವೀಣಾ ಕಾಲಿಗಾಗಿ ಆಸ್ಪತ್ರೆಗೆ ಸುರಿದ ಹಣ ಸರಿಸುಮಾರು 2.5 ಲಕ್ಷ ರೂ. ವೀಣಾಳನ್ನು ಬೇರೆ ವೈದ್ಯರಿಗೆ ತೋರಿಸುವ ಬಲವೂ ಈ ಕುಟುಂಬಕ್ಕಿಲ್ಲ.
ಏನಂದರೆ ಏನೂ ಇಲ್ಲ 
ದಿ.ಮಂಜು ಶೆಟ್ಟಿಗಾರ್ ಕುಟುಂಬಕ್ಕೆ ಏನೆಂದರೆ ಏನೂ ಇಲ್ಲ. ಎರಡು ಮುಡಿ ಗದ್ದೆ ಬಿಟ್ಟರೆ ಹೊಟ್ಟೆಪರಿಗೆ ಕೆಲಸ ಮಾಡಬೇಕಾದ ಅನಿವಾರ್ಯತೆಯಿದೆ. ಯಾರೂ ಹೆಚ್ಚು ಓದಿಕೊಂಡವರಲ್ಲ. ಮಂಜು ಶೆಟ್ಟಿಗಾರ್ ಅವರ ಕಿರಿಯ ಪುತ್ರ ರಾಘವೇಂದ್ರ ಶೆಟ್ಟಿಗಾರ್ ಕುಂದಾಪುರದಲ್ಲಿ ಬಸ್ ಏಜೆಂಟ್ ಕೆಲಸ ಮಾಡುತ್ತಾರೆ. ಇವರ ದುಡಿಮೆಯಲ್ಲಿ ಮನೆ ನಡೆಯಬೇಕು. ಜ್ವರಜಾಪತ್ತಿಗೆ ದಾರಿಯಾಗಬೇಕು. ಅಣ್ಣನ ಅನಾರೋಗ್ಯಕ್ಕೆ ಮದ್ದು ಮಾಡುವ ಮನಸ್ಸಿದ್ದರೂ ರಾಘು ಅಸಹಾಯಕ. ರಾಘುವಿಗೂ ಹೆಂಡತಿ ಮಕ್ಕಳಿದ್ದಾರೆ. ಹಾಗಾಗಿ ರಾಘು ಕೈಚಲ್ಲಿ ಕೂತಿದ್ದಾರೆ. ಅಸಹಾಯಕ ರಾಘು ನೆರವಿಗೆ ಮಾನವೀಯತೆಯ ಸಹಕಾರ ಬೇಕಾಗಿದೆ. ಸಹಾಯ ಮಾಡುವವರು ಕುಂದಾಪುರ ವಡೇರ ಹೋಬಳಿ ಎಸ್ಸಿಡಿಸಿ ಬ್ಯಾಕ್ ಅಕೌಂಟ್ ನಂಬರ್ 1659ಕ್ಕೆ ಕಳುಹಿಸಬಹುದು. ಶ್ರೀಪತಿ ಹೆಗಡೆ ಹಕ್ಲಾಡಿ
ಸೆ.17: ಪಡುಬೊಂಡಂತಿಲದಲ್ಲಿ ಸಹಸ್ರ ದೀಪ ಪೂಜೆ, ಸಾಂಸ್ಕೃತಿಕ ಸ್ಪರ್ಧೆ
ಮಂಗಳೂರು: ಪಡು ಬೊಂಡಂತಿಲದ ಶ್ರೀ ವಿಘ್ನೇಶ್ವರ ಗ್ರಾಮೀಣಾಭಿವೃದ್ಧಿ ಸೇವಾ ಸಮಿತಿಯಿಂದ ಇಲ್ಲಿನ ಶಿವಗಿರಿ ಸಭಾಭವನದಲ್ಲಿ ಸೆ.17ರಂದು ಸಂಜೆ 7ಗಂಟೆಗೆ ಶ್ರೀ ವಿಘ್ನೇಶ್ವರನಿಗೆ ಸಹಸ್ರ ದೀಪ ಪೂಜೆ ಹಾಗೂ ಮಕ್ಕಳಿಗೆ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿವೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಶಿವಾನಂದ ಪಿಲಾರ್ ಕಾರ್ಯಕ್ರಮ ಉದ್ಘಾಟಿಸುವರು. ಉದ್ಯಮಿ ರಾಕೇಶ್ ಮಲ್ಲಿ ಅಧ್ಯಕ್ಷತೆ ವಹಿಸುವರು. ತುಳು ಸಾಹಿತ್ಯ ಅಕಾಡೆಮಿ ಸದಸ್ಯ ದಯಾನಂದ ಕತ್ತಲ್ಸಾರ್ ಧಾರ್ಮಿಕ ಉಪನ್ಯಾಸ ನೀಡುವರು. ಉದಯ ಕುಮಾರ್ ಎಚ್, ಮಾಧವ ಶೆಟ್ಟಿಗಾರ್, ಮೋಹನ್ದಾಸ್ ಶೆಟ್ಟಿ ಪಡು, ಪದ್ಮನಾಭ ಕೋಟ್ಯಾನ್ ವೊದಲಾದವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭರತನಾಟ್ಯ(ವೈಯಕ್ತಿಕ ಮತ್ತು ತಂಡ), ನೃತ್ಯ ಭಜನೆ(ತಂಡಕ್ಕೆ ಮಾತ್ರ), ಜಾನಪದ ನೃತ್ಯ(ವೈಯಕ್ತಿಕ ಮತ್ತು ತಂಡ), ತುಳುನಾಡು ನಂಗೆಷ್ಟು ಗೊತ್ತು?(ತಂಡದಲ್ಲಿ ಇಬ್ಬರು ಮಾತ್ರ) ವಿಭಾಗಗಳಿವೆ. ಬಳಿಕ ಛತ್ರಪತಿ ಶಿವಾಜಿ ಜೀವನಾಧಾರಿತ ಧರ್ಮರಸು ಎಂಬ ನಾಟಕ ಪ್ರದರ್ಶನವಾಗಲಿದೆ.
ಈ ಕನಸು ಅವಾರ್ಡ್
ಪಂಕಜ್ ಅಡ್ವಾಣಿ, ಭಾರತೀಯ ಕ್ರೀಡಾಪ್ರೇಮಿಗಳಿಗೆ ಚಿರಪರಿಚಿತ ಹೆಸರು, ಬಿಲಿಯರ್ಡ್ಸ್ ಮತ್ತು ಸ್ನೂಕರ್ಗಳಲ್ಲಿ ವಿಶ್ವಚಾಂಪಿಯನ್ ಪಟ್ಟ ಹೊಂದಿರುವ ಇವರು ಭಾರತಕ್ಕೊಂದು ಹೆಮ್ಮೆ.ಜುಲೈ24,1985ರಂದು ಪುಣೆಯಲ್ಲಿ ಹುಟ್ಟಿದ ಈತ ಓದಿದ್ದು ಬೆಂಗಳೂರಿನ ಫ್ರಾಂಕ್ ಅಂಥೋನಿ ಪಬ್ಲಿಕ್ ಸ್ಕೂಲಿನಲ್ಲಿ, ಮುಂದೆ ಶ್ರೀ ಭಗವಾನ್ ಮಹಾವೀರ್ ಜೈನ್ ಕಾಲೇಜು ಬೆಂಗಳೂರಿನಲ್ಲಿ ವ್ಯಾವಹಾರಿಕ ಸಂವಹನದಲ್ಲಿ ಪದವಿ ಪಡೆದರು.
ಸ್ನೂಕರ್ ಮತ್ತು ಬಿಲಿಯರ್ಡ್ಸ್ ನಲ್ಲಿ ಮೊದಲಿಂದಲೇ ಆಸಕ್ತಿಹೊಂದಿದ್ದ ಪಂಕಜ್ ತನ್ನ ಪ್ರಥಮ ವಿಶ್ವಚಾಂಪಿಯನ್ ಕಿರೀಟ ಪಡೆದಿದ್ದು 2003ರಲ್ಲಿ ಚೈನಾದಲ್ಲಿ ನಡೆದ ಐಬಿಎಸ್ ಎಫ್ವಲ್ಡ್ ಸ್ನೂಕರ್ ಚಾಂಪಿಯನ್ಶಿಪ್ನಲ್ಲಿ ಅಲ್ಲಿಂದಾಚೆಗೆ ಅಡ್ವಾಣಿ ಹಿಂತಿರುಗಿ ನೊಡಲೇ ಇಲ್ಲ.
2005ರಲ್ಲಿ ಮಾಲ್ನಾಡ ಕ್ಯಾರದಲ್ಲಿ ನಡೆದ ಐ.ಎಸ್. ಬಿ.ಎಫ್ ವರ್ಲ್ಡ್ ಚಾಂಪಿಯನ್ಶಿಪ್ನಲ್ಲೂ ವಿಜಯಿಯಾದರೂ ಸ್ನೂಕರ್ ಮತ್ತು ಬಿಲಿಯರ್ಡ್ಸ್ ಎರಡರಲ್ಲೂ ವಿಶ್ವಚಾಂಪಿಯನ್ ಆದ ವಿಶ್ವದ 2ನೇ ಆಟಗಾರನೆಂಬ ಖ್ಯಾತಿ ಪಡೆದರು. ಮೊದಲು ಈ ಗೌರವಕ್ಕೆ ಮಾಲ್ವಾದ ಪೌಲ್ ಮಿಸ್ ಫೀಟ್ ಪಾತ್ರರಾಗಿದ್ದರು.
ಈ ಬಾರಿಯ ಕಾಮನ್ ವೆಲ್ತ್ನಲ್ಲಿ ಸ್ವರ್ಣಪಡೆದು ಮಿಂಚಿದ್ದ ಅಡ್ವಾಣಿ, ಏಷಿಯನ್ಗೇಮ್ಸ್ ನಲ್ಲಿ ಯಾವಾಗಲೂ ಸ್ವರ್ಣಗೆಲ್ಲುವ ಕುದುರೆ. 2001ರಲ್ಲಿ ಪದ್ಮಶ್ರೀ ಯಿಂದ ಪುರಸ್ಕೃತರಾದ ಅಡ್ವಾಣಿ 2005-06ನೇ ಸಾಲಿನ ರಾಜೀವ್ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಪಡೆದಿದ್ದಾರೆ. 2009ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಕೂಡ ಇವರಿಗೊಲಿದಿದೆ. ಒಟ್ಟಿನಲ್ಲಿ ಹೇಳುವುದಾದರೆ ದೇಶದ ಕೀರ್ತಿಯನ್ನು ವಿಶ್ವದಲ್ಲೆಡೆ ಹಬ್ಬಿಸಿದ ಪಂಕಜ್ ಕೀರ್ತಿ ಇನ್ನೂ ಹೆಚ್ಚಾಗಲಿ ಎಂಬುದು ಭಾರತದ ಪ್ರತಿಯೊಬ್ಬ ಪ್ರಜೆಯ ಆಶಯ.
ಬರಹ: ಸನತ್ ಭಟ್,
ದ್ವಿತೀಯ ಎಂ.ಸಿ.ಜೆ, ಎಸ್.ಡಿ.ಎಂ.ಕಾಲೇಜು , ಉಜಿರೆ.
ರಾಜ್ಯ - ರಾಷ್ಟ್ರ
ಗೋಕರ್ಣ: ನಮ್ಮ ಈ ಬದುಕು ಭಗವಂತನ ಕೊಡುಗೆ. ಇಲ್ಲಿ ನಾವು ಕೇವಲ ಸಾಧನಮಾತ್ರ ಎಂದು ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀ ಹೇಳಿದರು.
ಯಾವಕಾರ್ಯದಲ್ಲಿಯೂ ನಮಗೆ ಸ್ವತಂತ್ರಕತ್ರತ್ವವಿಲ್ಲ. ಎಂದಾದರೂ ಇದು ನಮ್ಮದೇ ಸಾಧನೆಯೆಂಬ ಭಾವ ಬಲಿತರೆ ಅಹಂಕಾರ ಅಮರಿಕೊಂಡರೆ ನಮ್ಮ ಪತನಕ್ಕೆ ಹೆಚ್ಚು ಸಮಯವಿಲ್ಲ ಎಂದೇ ಅರ್ಥ.ಪ್ರಭು ಶ್ರೀರಾಮಚಂದ್ರ ಈ ವರ್ಷದ ಚಾತುರ್ಮಾಸ್ಯಕಾರ್ಯಕ್ರಮವನ್ನು ತುಂಬಸುಂದರವಾಗಿ ನಿರೂಪಿಸಿದ್ದಾನೆ.ಇದಕ್ಕೆ ಕಾರಣ ನಾವೂ ಅಲ್ಲ ಅಥವಾ ಶಿಷ್ಯರಾದ ನೀವೂ ಅಲ್ಲ.ಇಲ್ಲಿ ನಮ್ಮೆಲ್ಲರ ಪಾತ್ರ ಪುಸ್ತಕಲೇಖನದಲ್ಲಿ ಉಪಯೋಗವಾಗುವ ಲೇಖನಿಯಂತೆ.
ಈ ಮಹಾಕಾವ್ಯವನ್ನು ಬರೆಯಲು ನಮ್ಮನ್ನು ಸಾಧನವಾಗಿಸಿಕೊಂಡಿದ್ದಾನೆ.ನಮ್ಮ ಭಾಗಕ್ಕೆ ಬಹುದೊಡ್ಡದಾದ ಬಹುಮಾನವನ್ನು ನೀಡಿದ್ದಾನೆ ಎಂಬ ಸಮಾಧಾನ ಮಾತ್ರ ಸಾಕು.ಅದಕ್ಕಿಂತ ಹೆಚ್ಚಿನ ಅಪೇಕ್ಷೆ ಸಲ್ಲದು.ಕೋಟಿ ಕೋಟಿ ಜನರ ಮಧ್ಯೆ ಆತ ತನ್ನಸೇವೆಗೆ ನಮ್ಮನ್ನು ಆಯ್ಕೆ ಮಾಡಿದ್ದಾನೆಂದರೆ ಅದರರ್ಥ ನಾವು ಪರಮಾತ್ಮನಿಗೆ ಪ್ರಿಯರಾಗಿದ್ದೇವೆಂಬುದೇ. ಆದರೆ ಈ ರೀತಿಯ ಅಹಂಭಾವವು ನಮ್ಮಲ್ಲಿ ಮೊಳೆಯಿತೆಂದರೆ ಆತ ನಮ್ಮಿಂದ ದೂರಾಗಲು ಹೆಚ್ಚುಕಾಲ ಬೇಕಾಗದು ಎಂದು ಶ್ರೀರಾಮಚಂದ್ರಾಪುರಮಠದ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಹೇಳಿದ್ದಾರೆ.
ಇಂದು ಅಶೋಕೆಯಲ್ಲಿ ನಿನ್ನೆಗೆ ಸಮಾಪ್ತವಾದ ಚಾತುರ್ಮಾಸ್ಯದಲ್ಲಿ ನಿರಂತರವಾಗಿ ಎರಡುತಿಂಗಳಿನಿಂದ ಶ್ರೀಗಳ ಎಲ್ಲ ಕಾರ್ಯಕ್ರಮದಲ್ಲಿ ಸೇವೆಸಲ್ಲಿಸಿದ ಶ್ರೀಮಠದ ಕಾರ್ಯಕರ್ತರು ಸಮರ್ಪಿಸಿದ ಶ್ರೀಗುರುದೇವತಾಸೇವೆಯನ್ನು ಸ್ವೀಕರಿಸಿ ಆಶೀರ್ವಚನವನ್ನು ನೀಡುತ್ತಿದ್ದ ಪೂಜ್ಯಶ್ರೀಗಳು ಅಶೋಕೆಯು ಚೈತನ್ಯದ ಚಿಲುಮೆ.ಇಲ್ಲಿ ಅದೆಷ್ಟೋ ಧಾರ್ಮಿಕ ಕಾರ್ಯಕ್ರಮಗಳು,ಗ್ರಹಯಾಗಾದಿಗಳು, ನಡೆದಿವೆ. ಈಪರಿಸರವನ್ನು ಮತ್ತಷ್ಟು ಪವಿತ್ರವನ್ನಾಗಿಸಿವೆ.ನಿರಂತರವಾಗಿ ನಡೆದ ಶ್ರೀರಾಮಕಥೆಯು ಅದೆಷ್ಟೋ ಜನರಬಾಳಿಗೆ ದೀಪವಾಗಿದೆ.ಆದಿಶಂಕರಾಚಾರ್ಯರಿಂದ ಸಂಸ್ಥಾಪಿತವಾಗಿ ತನ್ನ ಅವಿಚ್ಛಿನ್ನಪರಂಪರೆಯಿಂದ ಲೋಕವಂದ್ಯತ್ವವನ್ನು ಗಳಿಸಿದ ಈ ಮಠದ ಆರಾಧ್ಯದೇವತೆಯಾದ ಪ್ರಭು ಶ್ರೀರಾಮಚಂದ್ರನ ನಡೆಯೇ ಅದ್ಭುತ.ಆತನ ಎಲ್ಲ ಕಾರ್ಯಗಳೂ ಲೋಕಹಿತೈಕದೃಷ್ಟಿಯವಾಗಿದ್ದು ಅದು ಈ ಚಾತುರ್ಮಾಸ್ಯಕಾಲದಲ್ಲಿ ಸ್ಪಷ್ಟವಾಗಿದೆ ಎಂದು ನುಡಿದರು.
ಪೂಜ್ಯಶ್ರೀಗಳು ಶ್ರೀರಾಮನನ್ನು ನಂಬಿಬದಕುವವರಿಗೆ ಯಾವ ಆತಂಕವೂ ಕಾಡದು ಲೇಖನಿಯಿಲ್ಲದೆ ಬರೆಯಲಾಗದು, ಹಾಗೆಂದು ಗ್ರಂಥಕ್ಕೆ ಸಲ್ಲುವ ಗೌರವವನ್ನು ಲೇಖನಿ ಬಯಸಬಾರದು. ಆ ಮಹಾಕಾರ್ಯದಲ್ಲಿ ಸಾಧನವಾಗಿರುವುದೇ ತನ್ನ ಭಾಗ್ಯವೆಂದುಕೊಳ್ಳ ಬೇಕು ಎಂದು ಹೇಳಿ ಎಲ್ಲ ಕಾರ್ಯಕರ್ತರಿಗೂ ಪ್ರಭು ಶ್ರಿರಾಮಚಂದ್ರ ಸಂಪೂರ್ಣಾನುಗ್ರಹವನ್ನು ಆಶಿಸಿದರು.ಕುಮುಟಾ ಹವ್ಯಕಮಂಡಲದ ಸೇವಾಶಾಖೆಯ ಪ್ರಧಾನ ಗಜಾನನ ಹಂಸಳ್ಳಿ ದಂಪತಿಗಳು ಕಾರ್ಯಕರ್ತರಪರವಾಗಿ ಶ್ರಿಗಳಿಗೆ ಫಲಕಾಣಿಕೆಗಳನ್ನು ಸಮರ್ಪಿಸಿದರು.ಉಗ್ರಾಣವಿಭಾಗದ ಆರ್.ಬಿ.ಹೆಗಡೆ,ಚಾತುರ್ಮಾಸ್ಯ ಸಮಿತಿಯ ಎಮ್.ಕೆ.ಹೆಗಡೆ, ಶ್ರೀ ಪರಿವಾರದ ಶ್ರಿಹರ್ಷ ಜೋಯ್ಸ್ ಚಾತುರ್ಮಾಸ್ಯಕಾಲದ ಕುರಿತಾಗಿ ತಮ್ಮ ಅನಿಸಿಕೆಗಳನ್ನು ಶ್ರೀಗಳಲ್ಲಿ ನಿವೇದಿಸಿಕೊಂಡರು. ಶ್ರೀಸವಾರಿಯ ವ್ಯವಸ್ಥಾಪಕ ರಾಘವೇಂದ್ರ ಮಧ್ಯಸ್ಥರು ನಿರ್ವಹಿಸಿದರು.
ವರದಿ: ಸತ್ಯನಾರಾಯಣ ಶರ್ಮ
ವಿಶೇಷ ವರದಿ
ಎಲ್ಲವರಂತಲ್ಲವಯ್ಯ್ಲಾ... ನಮ್ಮ ಕಂಡೆಕ್ಟರ್ ಶೀನೂ...!
ಬೈಂದೂರು : ಇದು ಆಕರ್ಷಣೆಯ ಹುಚ್ಚು ಪ್ರೀತಿಯೋ ಗೊತ್ತಿಲ್ಲ! ಆದರೆ ಇಲ್ಲೊಬ್ಬರು ವಿದೇಶದಲ್ಲಿ ಕೈತುಂಬಾ ಸಂಬಳದ ಕೆಲಸವಿದ್ದರೂ ಬಿಟ್ಟು ಬಂದು ಕಂಡೆಕ್ಟರ್ ವೃತ್ತಿ ಅಪ್ಪಿಕೊಂಡಿದ್ದಾರೆ.ಪ್ರಾಣಕಿಂತ ಮಿಗಿಲಾಗಿ ವೃತ್ತಿಯನ್ನು ಪ್ರೀತಿಸುತ್ತಾರೆ. ಹೊಟ್ಟೆಪಾಡಿಗಾಗಿ ಕಂಡೆಕ್ಷರ್ ವೃತ್ತಿಯಾದರೂ, ಕಂಡೆಕ್ಟರ್ ವೃತ್ತಿಯೇ ಬದುಕಲ್ಲಾ ಎಂದು ನಂಬಿದವರು. ಅವರೇ ಕಂಡೆಕ್ಟರ್ ಶೀನೂ. ಆಲಿಯಾಸ್ ಶ್ರೀನಿವಾಸ ಆಲೂರು.
ಕಂಡೆಕ್ಟರ್ ವೃತ್ತಿ ಬಗ್ಗೆ ಇದ್ದ ಆಕರ್ಷಣೆ, ಕಂಡೆಕ್ಟರ್ ಆಗಬೇಕು ಎನ್ನುವ ಹುಚ್ಚು ತುಡಿತ ಬಸ್ ಬಾಗಿಲಿಗೆ ಶೀನೂ ಅವರನ್ನು ತಂದು ನಿಲ್ಲಿಸಿದೆ. ಇವರು ಬರೇ ಕಂಡೆಕ್ಟರ್ ಆಗಿದ್ದರೆ ಹತ್ತರಲ್ಲಿ ಹನ್ನೊಂದಾಗುತ್ತಿದ್ದರು. ಪೆನ್ನು ಹಿಡಿದರೆ ಕವಿ, ಕತೆಗಾರ. ಸ್ಕ್ರಿಪ್ಟ್ ಹಿಡಿದರೆ ನಾಟಕ ನಿರ್ದೇಶಕ. ಬಣ್ಣ ಹಚ್ಚಿ ಥಕಥೈ ಅಂದರೆ ಕಲಾವಿದ ಹೀಗೆ ಸಾಗುತ್ತದೆ ಶೀನೂ ಬಯೋಡಾಟ. ಹಾಗಾಗಿ ಕಂಡೆಕ್ಟ್ರು ಶೀನೂ ಎಲ್ಲವರಂತಲ್ಲದೆ ಬೇರೆಯಾಗಿ ಕಾಣುತ್ತಾರೆ. ಇತರೆ ನಿರ್ವಾಹಕರಿಗೆ ಮಾದರಿಯಾಗುತ್ತಾರೆ.
ಆಲೂರು ಶ್ರೀ ಜಯದುರ್ಗಾ ಮೋಟಾರ್ ಸರ್ವಿಸ್ ನಲ್ಲಿ ಕಳೆದ ಇಪ್ಪತ್ತೊಂದು ವರ್ಷದಿಂದ ಸೇವೆ ಸಲ್ಲಿಸುತ್ತಿದ್ದಾರೆ. ವೃತ್ತಿಯಲ್ಲಿ ಇದೂವರೆಗೆ ಒಂದೇ ಒಂದು 'ರೆಡ್ ಮಾರ್ಕ್' ಇಲ್ಲದಿರೋದು ಶೀನೂ ವೃತ್ತಿಯ ಪ್ಲಸ್ ಪಾಯಿಂಟು.
ಶೀನೂ ಕತೆ ಹೀಗಿದೆ : ಶ್ರೀನಿವಾಸ ಆಲೂರು (39) ಬೈಂದೂರು ಕ್ಷೇತ್ರದ ಆಲೂರಿನವರು. ಓದಿದ್ದು ಬರೇ ಆರನೇ ಕ್ಲಾಸ್! ತಂದೆ ಗೋವಿಂದ ಪೂಜಾರಿ ಮತ್ತು ತಾಯಿ ಸುಬ್ಬು ಪೂಜಾರಿ ಅವರ ಐವರು ಸಂತಾನದಲ್ಲಿ ಶೀನು 'ಲಾಸ್ಟ್' ಇಬ್ಬರು ಅಣ್ಣಂದಿರು ಹಾಗೂ ಅಷ್ಟೇ ಜನ ಸಹೋದರಿಯರ ಕೂಡು ಕುಟುಂಬ. ವಿಕಲಚೇತನ ಪತ್ನಿ ಮತ್ತು ಇಬ್ಬರು ಪುತ್ರರ ತಂದೆ ಶೀನೂ ಅವರ ಬ್ಯಾಕ್ ಗ್ರೌಂಡ್ ಸ್ಟೋರಿ.
ಶೀನೂ ಕುಟುಂಬಕ್ಕೆ ಅಲ್ಪಸ್ವಲ್ಪ ಜಮೀನಿದೆ. ಅದು ಕಾಲಿಗಿದ್ದರೆ ತಲೆಗಿಲ್ಲ, ತಲೆಗಿದ್ದರೆ ಕಾಲಿಗಿಲ್ಲದ ಸಂಬಂಧ. ಹಾಗಾಗಿ ವೃತ್ತಿ ಶೀನೂ ಅವರಿಗೆ ಅನಿವಾರ್ಯವೂ ಹೌದು. ಅರನೇ ತರಗತಿ ಓದಿಗೆ ಆಖರಿ ಸಲಾಂ ಹೊಡೆದ ಶೀನೂ ಬಸ್ ಏರಿಬಿಟ್ಟರು. ಬಸ್ ಪಯಣದಲ್ಲಿ ಶೀನೂ ಕ್ರಮಿಸಿದ ದೂರ ಬಹು ದೂರ.
ಶೀನೂ ಅಪ್ಪ ಅಮ್ಮಂಗೆ ವಯಸ್ಸಾಗಿದೆ. ಸಹೋದರ, ಸಹೋದರಿಯರಿಗೆ ಮದುವೆಯಾಗಿದೆ. ಶೀನೂ ವಿಕಲಚೇತನ ಮಹಿಳೆಗೆ ಹೊಸ ಬದುಕು ಕೊಡುವ ಮೂಲಕ ಗೃಹಸ್ಥರಾಗಿದ್ದಾರೆ. ಇಷ್ಟೆಲ್ಲಾ ಬದಲಾವಣೆ ಕಂಡರೂ ಶೀನೂ ವೃತ್ತಿಯಲ್ಲಿ ಬದಲಾಗಿಲ್ಲ. ಅದು ಬದಲಾಗೋದು ಇಲ್ಲ. ಶೀನೂ ಕಂಡೆಕ್ಟರ್ ವೃತ್ತಿಯಲ್ಲಿ ತೃಪ್ತಿಕಂಡಿದ್ದಾರೆ.
ತೀರಾ ಬಿನ್ನಾ ಹ್ಯಾಗೆ : ಸರಕಾರ ವಿಕಲಚೇತನರಿಗೆ ಬಸ್ ಪ್ರಯಾಣದಲ್ಲಿ ಮೀಸಲು, ರಿಯಾಯ್ತಿ ತರೋ ಮೊದಲೇ ಶೀನೂ ತಮ್ಮ ಬಸ್ನಲ್ಲಿ ಪ್ರಯಾಣಿಸುವ ವಿಕಲಚೇತನ ಪ್ರಯಾಣಿಕರಿಗೆ ರಿಯಾಯ್ತಿ ದರದಲ್ಲಿ ಪ್ರಯಾಣಿಸುವ ಅವಕಾಶ ನೀಡಿದ್ದರು.
ಬಸ್ನಲ್ಲಿ ಪ್ರಯಾಣಿಸುವ ವಿಕಲಚೇತನ ಪ್ರಯಾಣಿಕರಿಗಾಗಿ ಶೀನೂ ಸಂಬಳದಲ್ಲಿ ಕೆಲ ಕಾಸು ಎತ್ತಿಡುತ್ತಿದ್ದರು. ಇವರಿಗೆ ವಿಕಲಚೇತರ ಬಗ್ಗೆ ಇದ್ದ ಕಾಳಜಿಯೇ ಪೋಲಿಯೋ ಪೀಡಿತೆ ಮಹಿಳೆ ಕೈ ಹಿಡಿಯಲು ಕಾರಣ. ಬಸ್ಸಿಗೆ ಬರುತ್ತಿದ್ದ ವಿಕಲಚೇತನ ರತ್ನ ಶೀನೂ ಕೈಹಿಡಿದಾಕೆ. ತನಗೆ ಬದುಕು ನೀಡಿದ ಗಂಡನನ್ನು ರತ್ನ ಕಣ್ಣಿನ ರಪ್ಪೆ ಹಾಗೆ ಜೋಪಾನ ಮಾಡುತ್ತಿದ್ದಾಳೆ.
ಬಸ್ಸಿಗೆ ಬರುವ ಪ್ರಯಾಣಿಕರನ್ನು ಶೀನೂ ಏಕ ವಚನದಲ್ಲಿ ಸಂಭೋದಿಸಲ್ಲ. ಅವರವರ ವಯಸ್ಸಿಗೆ ತಕ್ಕ ಹಾಗೆ ಗೌರವ ಸಂದಾಯ. ವಯೋವೃದ್ಧರನ್ನು ಇವರು ಎಂದೂ ಅಜ್ಜ, ಅಜ್ಜಿ ಅಂತ ಕರೆಯೋದಿಲ್ಲ. ಅವರಿಗೆ 'ಯಜಮಾನ' ಗೌರವ. ಚಿನ್ನು, ಪುಟ್ಟು, ಅಣ್ಣ, ಅತ್ತಿಗೆ, ಅಕ್ಕ, ತಂಗಾ, ಚಿಕ್ಕಮ್ಮ, ಚಿಕ್ಕಪ್ಪ, ಹೀಗೆ ಪ್ರಯಾಣಿಕರನ್ನು ಕರೆಯೋದು ಶೀನೂ ಸ್ಪೆಷಾಲಟಿ. ಬಸ್ ಏರುವಲ್ಲಿಂದ ಹಿಡಿದು ಇಳಿಯೋವರೆಗಿನ ಕಾಯಕದಲ್ಲಿ ಶೀನೂ ಸದಾ ಜಾಗೃತಿ. ಇಳಿಯೋರಿಗೆ ಇಳಿಯುವ ಜಾಗ ಅವರ ಸಾಮಾನು ಸರಂಜಾಮುಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದ ನಂತರ ಪ್ರಯಾಣಿಕರನ್ನು ಇಳಿಸುತ್ತಾರೆ. ಮಧ್ಯೆ ಮಧ್ಯೆ ಕವನ ಹೇಳುತ್ತಲೋ ಮತ್ತೆ ಸಡನ್ನಾಗಿ ಜೋಕ್ ಕಟ್ ಮಾಡುತ್ತಾ ಪ್ರಯಾಣಿಕರಿಗೆ ಕಿರಿಕಿರಿ ಆಗದಂತೆ ನೋಡಿಕೊಳ್ಳೋದು ಶೀನೂ ಕರಗತ.
ಶೀನೂ ಕಣ್ಣಲ್ಲಿ ಕನಸಿದೆ ಕಾಣ್ರಿ : ಶೀನೂ ಕಣ್ಣಲ್ಲಿ ಕನಸಿನ ಗಂಟಿದೆ. ಎಲ್ಲಾ ತಂದೆ ತಾಯಿಗಳು ತಮ್ಮ ಮಕ್ಕಳು ಡಾಕ್ಟರ್, ಎಂಜಿನಿಯರ್ ಆಗಬೇಕು ಅಂತ ಬಯಸಿದರೆ ಶೀನೂ ತನ್ನ ಮಕ್ಕಳಲ್ಲಿ ಒಬ್ಬ ಜವಾಬ್ದಾರಿಯುತ ಪರ್ತಕರ್ತನಾಗಬೇಕು. ಮತ್ತೊಬ್ಬ ಉತ್ತಮ ಛಾಯಾಚಿತ್ರಗಾರನಾಬೇಕು ಎನ್ನುತ್ತಾರೆ. ಇದೆಲ್ಲಕ್ಕಿಂತ ಮೇಲಾಗಿ ಅವರಲ್ಲಿ ಹುಟ್ಟಿಕೊಂಡ ಸಮಾಜ ಸೇವೆಯ ಹಪಹಪಿ ಮತ್ತಷ್ಟು ಇಂಟರೆಸ್ಟ್.
ಶೀನೂ ಬಸ್ನಲ್ಲಿ ಪ್ರಯಾಣಿಕರು ಬೆಲೆ ಬಾಳುವ ವಸ್ತು ಬಿಟ್ಟು ಹೋದರೆ ಅದು ಹಿಂದಕ್ಕೆ ಸಿಕ್ಕೇ ಸಿಗುತ್ತದೆ ಎಂಬ ಖಾತ್ರಿ ಪ್ರಯಾಣಿಕರಿಗೆ ಇದೆ. ಹೀಗೆ ಬಿಟ್ಟು ಹೋದ ವಸ್ತುಗಳ ಮೌಲ್ಯದ ಆಧಾರದಲ್ಲಿ ಶೀನು ಪ್ರಯಾಣಿಕರಿಂದ ಇಂತಿಷ್ಟು ಅಂತ ರೊಕ್ಕ ಎತ್ತಿಟ್ಟಿಕೊಳ್ಳುತ್ತಾರೆ. ಹೀಗೆ ಒಟ್ಟಾದ ಹಣವನ್ನು ಪರಿಸರದ ಶಾಲೆಯಲ್ಲಿ ಕಲಿಯುತ್ತಿರುವ ಅತೀ ಬಡ ಮಕ್ಕಳಿಗೆ ಕೊಡುವ ಕೆಲಸ ಮಾಡುತ್ತಾರೆ. ಕಳೆದ ವರ್ಷ ಇವರಿಗೆ ಆರು ಮೊಬೈಲ್ ಮತ್ತು ಅರವತ್ತಾರು ಕೊಡೆ ಸಿಕ್ಕಿತ್ತು. ಈ ವರ್ಷ ಇದೂವರಗೆ 60 ಕೊಡೆ ಮತ್ತು ಮೂರು ಮೊಬೈಲ್ ಸಿಕ್ಕಿದೆ. ವಸ್ತು ಕಳೆದುಕೊಂಡವರಿಗೆ ಅವರ ವಸ್ತು ಹಿಂದಿರುಗಿಸುವ ಜೊತೆಗೆ ಅವರಿಂದ ಕಿಂಚಿತ್ತು ಹಣ ಪಡೆದು ಅದನ್ನು ಗುಡ್ಡೆ ಹಾಕಿ ಮಕ್ಕಳ ಭವಿಷ್ಯಕ್ಕಾಗಿ ಬಳಸುತ್ತಾರೆ. ಇದು ಶೀನೂ ಅವರು ಸಮಾಜದ ಮೇಲೆ ಇಟ್ಟ ಕಾಳಜಿಗೆ ಚಿಕ್ಕ ನಿದರ್ಶನ. ಇಂತಾ ಸಣ್ಣ ಪುಟ್ಟ ನಿದರ್ಶನಗಳ ಪಟ್ಟಿ ದೊಡ್ಡದೂ ಇದೆ.
ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗುವ ಆಕಾಂಕ್ಷಗಳು ಶೀನೂ ಅವರ 'ನಾಟ್ ಫಿನಿಷ್' ಕವನ ಓದಬೇಕು. ವಿದೇಶಿ ಹುಚ್ಚು ಬಿಟ್ಟಿಹೋಗುತ್ತದೆ. ಒಟ್ಟಾರೆ ಕಂಡೆಕ್ಟರ್ ಅಂದ್ರೆ ಮೂಗು ಮುರಿಯುವ ಕಾಲದಲ್ಲಿ ಶೀನೂ ಬೇರೆಯಾಗಿ ಕಾಣುತ್ತಾರೆ.
ಶ್ರೀಪತಿ ಹೆಗಡೆ ಹಕ್ಲಾಡಿ
ವಿಚಾರ
ಅದೃಷ್ಟವೋ? ದುರದೃಷ್ಟವೋ? ಯಾರಿಗೆ ಗೊತ್ತು?
ಓರ್ವ ಮುದಿ ರೈತ ತನ್ನ ಕುದುರೆಯಿಂದ ಹೊಲವನ್ನು ಹೂಳುತ್ತಿದ್ದ. ಒಂದು ದಿನ ಆ ಕುದುರೆ ತಪ್ಪಿಸಿಕೊಂಡು ಬೆಟ್ಟಗುಡ್ಡಗಳಲ್ಲಿ ಮರೆಯಾಗಿ ಹೋಯಿತು. "ಪಾಪ ನಿನ್ನ ಜೊತೆ ಹೀಗಾಗಬಾರದಿತ್ತು. ನಿನ್ನ ದುರದೃಷ್ಟ" - ಎಂದು ನೆರೆಹೊರೆಯವರೆಲ್ಲ ದುಃಖ ವ್ಯಕ್ತಪಡಿಸಿದರು. ರೈತ ಹೇಳಿದ - ದುರದೃಷ್ಟವೋ? ಅದೃಷ್ಟವೋ? ಯಾರಿಗೆ ಗೊತ್ತು? ಒಂದು ವಾರದ ನಂತರ ಆ ಕುದುರೆ ಬೆಟ್ಟಗುಡ್ಡಗಳಿಂದ ಕಾಡು ಕುದುರೆಗಳನ್ನು ಜೊತೆಯಲ್ಲಿ ಕರೆ ತಂದಿತು. ಆಗ ಆತನ ನೆರೆಹೊರೆಯವರು - "ನಿನ್ನ ಅದೃಷ್ಟ ಚೆನ್ನಾಗಿದೆ" ಎಂದರು. ರೈತ ಹೇಳಿದ - ಅದೃಷ್ಟವೋ? ದುರದೃಷ್ಟವೋ? ಯಾರಿಗೆ ಗೊತ್ತು?
ನಂತರ, ರೈತನ ಮಗ ಒಂದು ಕಾಡು ಕುದುರೆ ಹತ್ತಲು ಹೋಗಿ, ಜಾರಿಬಿದ್ದು, ಕಾಲನ್ನು ಮುರಿದುಕೊಂಡ. ಆಗ ನೆರೆಹೊರೆಯವರು ಹೇಳಿದರು - "ಛೆ! ಬಹಳ ದುರದೃಷ್ಟದ ಸಂಗತಿ." ರೈತ ಹೇಳಿದ - ದುರದೃಷ್ಟವೋ? ಅದೃಷ್ಟವೋ? ಯಾರಿಗೆ ಗೊತ್ತು?
ಕೆಲವು ವಾರಗಳ ನಂತರ ಸೇನಾಧಿಕಾರಿಗಳು ಬಂದು, ಯೋಗ್ಯ ಪುರುಷರನ್ನು ಸೈನ್ಯದಲ್ಲಿ ಭರ್ತಿ ಮಾಡಿಕೊಳ್ಳಲು ಹುಡುಕಾಟ ನಡೆಸಿದರು. ರೈತನ ಮಗನ ಕಾಲು ಮುರಿದಿರುವುದರಿಂದ ಆತನನ್ನು ಆರಿಸಿಕೊಂಡು ಹೋಗಲಿಲ್ಲ. ಆಗಲೂ ನೆರೆಹೊರೆಯವರು ಹೇಳಿದರು - "ಒಬ್ಬನೇ ಪ್ರೀತಿಯ ಮಗ. ಈಗ ನಿನ್ನ ಜೊತೆಯೇ ಇರುತ್ತಾನೆ. ಬಹಳ ಒಳ್ಳೆಯ ಅದೃಷ್ಟ ನಿನ್ನದು." ರೈತ ಹೇಳಿದ - ಅದೃಷ್ಟವೋ? ದುರದೃಷ್ಟವೋ? ಯಾರಿಗೆ ಗೊತ್ತು? ವಿಧಿ ಬರಹ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಅತಿಯಾದ ಸಂತೋಷ, ಅತಿಯಾದ ದುಃಖ - ಇವೆರಡೂ ಒಳ್ಳೆಯದಲ್ಲ. ಇವೆರಡೂ ಶಾಶ್ವತವಲ್ಲ. ಸಿಹಿಕಹಿ ಘಟನೆಗಳು ನಡೆದಾಗ ಮಾನಸಿಕ ಸಮತೋಲನ ಕಾಪಾಡಿಕೊಳ್ಳಬೇಕು. ಅಂತಹ ವ್ಯಕ್ತಿತ್ವ ಬೆಳೆಸಿಕೊಳ್ಳಲು ಸಣ್ಣಪುಟ್ಟ ಘಟನೆಗಳಿಂದ ಅಭ್ಯಸಿಬೇಕು. ಮುಂದೆ ಜೀವನದಲ್ಲಿ ಎಂತಹ ಘಟನೆ ನಡೆದರೂ ಅದನ್ನು ಸಹಿಸುವ ಗುಣ ಬೆಳೆಯುತ್ತದೆ. ಇಲ್ಲವಾದಲ್ಲಿ ಒಂದು ಸಣ್ಣ ದುಃಖ ಸಹ ನಮ್ಮನ್ನು ಖಿನ್ನತೆಗೆ ಒಳಪಡಿಸಿ ಬಿಡುತ್ತದೆ.
ಚೀನಾ ದೇಶದ ಈ ಒಂದು ಹಳೆ ಕಥೆಯಿಂದ ಎಷ್ಟೊಂದು ಪಾಠ ಕಲಿಯುವುದಿದೆ ನೋಡಿ!
- ಜಬೀವುಲ್ಲಾ ಖಾನ್
ಈ ಕನಸು ಅವಾರ್ಡ್
ಹೌದು ರಂಗಭೂಮಿಯೆಂದರೆ ಬಹಳಷ್ಟು ಬೇಗ ನೆನಪಾಗುವುದು ದೊಡ್ಡ ದೊಡ್ಡ ಕಲಾವಿದರ ಹೆಸರುಗಳು. ಆದರೆ ಪ್ರಾಮಾಣೀಕತೆಗೆ ಉಸಿರುಗೊಟ್ಟು ದುಡಿಯುವ ಕಲಾವಿದರ ಪರಿಚಯವಿರುವುದು ವಿರಳವೇ. ಅಂತಹದೆ ಅಪ್ಪಟ ಕಲಾವಿದ ರಂಗಭೂಮಿಯೇ ತನ್ನ ಮನೆ ರಂಗಶಿಕ್ಷಣ ನಾಟಕವೇ ತನ್ನ ಉಸಿರನ್ನಾಗಿ ಪರಿವರ್ತಿಸಿಕೊಂಡ ಯುವ ಉತ್ಸಾಹಿ ನಟ ನಮ್ಮೆಲ್ಲರ ಹಿತೈಷಿ ಇಪ್ಪತ್ತೊಂಬತ್ತರ ಹರೆಯದ ನವೀನ್ ಎಡಮಂಗಲ ಈಗ ನಮ್ಮೆಲ್ಲರ ಕಣ್ಣಿನಿಂದ ಕಣ್ಮರೆಯಾದ ಈ ಅನರ್ಘ್ಯ ರತ್ನ ವಿಧಿ ಬಳಿ ಸಾಗಿ ಒಂದು ವರ್ಷ ಸಂದಿತು.
ನಾಟಕ ನಿರ್ದೇಶನದಲ್ಲಿ ತೊಡಗಿದರೆಂದರೆ ಅವರ ಲಕ್ಷ್ಯವೆಲ್ಲಾ ಅದರ ಕಡೆಯೇ, ಸಮಯದ ಅರಿವೂ ಅವರಿಗಿರುತ್ತಿರಲಿಲ್ಲ. ಒಬ್ಬ ಉತ್ತಮ ಕಲಾವಿದನಾಗಿ ತಾನೇನು ಮಾಡಬೇಕು ಎಂಬುದನ್ನು ಅವರ ಮನಬಲ್ಲದು. ಅದರ ಸಲುವಾಗಿಯೇ ಮಧ್ಯರಾತ್ರಿಯಾದರೂ ನಾಟಕ ನಿರ್ದೇಶನ ತರಬೇತಿಯಲ್ಲಿ ತೊಡಗುತ್ತಿದ್ದರು. ಆ ನಾಟಕ ಪ್ರದರ್ಶನ ಯಶಸ್ವಿಯ ನಂತರವೇ ನೆಮ್ಮದಿಯ ನಿಟ್ಟುಸಿರು ಬಿಡುವುದು.
ಆನಂದ ಗೌಡ ಮತ್ತು ರತ್ನಾವತಿ ದಂಪತಿಗಳ ಇಬ್ಬರು ಮಕ್ಕಳಲ್ಲಿ ಚೊಚ್ಚಲ ಪುತ್ರರಾದ ಇವರು ಜನಿಸಿದ್ದು 25-12-1981ರಂದು ಸುಳ್ಯ ತಾಲೂಕಿನ ಎಡಮಂಗಲವೆಂಬ ಪುಟ್ಟ ಗ್ರಾಮದ ಕೃಷಿಕ ಕುಟುಂಬದಲ್ಲಿ ತಂದೆ-ತಾಯಿ, ತಾತ ಮಾಜಿ ಸೈನಿಕ 99 ವರ್ಷ ಪ್ರಾಯದ ಲಿಂಗಪ್ಪ ಗೌಡ ಮತ್ತು ದಿಲ್ಲಿಯಲ್ಲಿರುವ ತಮ್ಮನಾದ ಪ್ರವೀಣ್ ಕುಮಾರ್ ಜೊತೆ ಸರಳ ಜೀವನ ಇವರದು.
ಎಳವೆಯಲ್ಲೇ ತುಂಬಾ ಸರಳ ವ್ಯಕ್ತಿತ್ವ ಮತ್ತು ಮಿತಭಾಷಿಯಾದ ಇವರು ತನ್ನ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಎಡಮಂಗಲದಲ್ಲಿ ಮುಗಿಸಿ ಫೌಢಶಿಕ್ಷಣವನ್ನು ಬಾಳಿಲದಲ್ಲಿ ಮುಗಿಸಿದರು. ಆಗಲೇ ಪಠ್ಯ-ಪಠ್ಯೇತರ ಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಇವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾಣಿಯೂರು ಇಲ್ಲಿ ಪಿಯುಸಿ ಮುಗಿಸಿ ಪದವಿ ಶಿಕ್ಷಣಕ್ಕಾಗಿ ಕೆ.ಎಸ್.ಎಸ್. ಸುಬ್ರಹ್ಮಣ್ಯದತ್ತ ವಾಲಿದರು. ಅವರು ಕಲಾಸಕ್ತಿಗೆ ಪ್ರಭಾವಿತರಾಗಿದ್ದುದು ಇಲ್ಲೇ. ಇವರು ಸುಬ್ರಹ್ಮಣ್ಯದ ನಾಟಕ ತಂಡ 'ಕುಸುಮ ಸಾರಂಗ'ಜದ ಕುಡಿ. ಇಲ್ಲಿಯೇ ಅವರ ಆಸಕ್ತಿಯು ಸಹಿತ ಚಿಗುರೊಡೆದಿರುವುದು. ಐ.ಕೆ. ಬೊಳುವಾರು ಅವರ 'ಜಾಗತಿಕ ವೀರನ ಕಥೆ' ಇವರಚೊಚ್ಚಲ ಪ್ರಯತ್ನ ಮತ್ತು ಗೆಲುವು. ನಂತರ 'ಮಹಾಮಾಯಿ'ಯಲ್ಲಿ ಮುಖ್ಯ ನಟನಾಗಿ ಅಭಿನಯಿಸಿದರು. ಇದು ಅವರ ಆಸಕ್ತಿಯನ್ನು ಇನ್ನಷ್ಟು ಗಟ್ಟಿಗೊಳಿಸಿತ್ತು. ಜನಜಾಗೃತಿಗಾಗಿ ಮಾಡಿದ ಬೀದಿ ನಾಟಕಗಳಲ್ಲಿ ಅಭಿನಯಿಸಿದ ಕೀರ್ತಿ ಅವರ ಪಾಲಿಗಿತ್ತು ಜೊತೆಗೆ ದ.ಕ. ಜಿಲ್ಲೆಯಾದ್ಯಂತ ಜನಜಾಗೃತಿ ಮೂಡಿಸಿದ ಹೆಮ್ಮೆಯ ಕಲಾವಿದ. ಜೊತೆಗೆ ವಿದ್ಯಾರ್ಥಿಯಾಗಿದ್ದಾಗಲೇ ನಿರ್ದೇಶನದಲ್ಲಿ ತೊಡಗಿ ಸಾಕಷ್ಟು ನಾಟಕಗಳಿಗೆ ಜೀವ ತುಂಬಿದ್ದಾರೆ.
ಇವರು ಒಂದು ಪಾತ್ರವಾಗಿ ಅಭಿನಯಿಸಿದರೆಂದಾದರೆ ಆ ಪಾತ್ರವೇ ತಾನಾಗಿ ಬಿಡುತ್ತಿದ್ದರು. ಅದೇ ಪಾತ್ರಕ್ಕೆ ಗೆಲುವಾಗಿ ಜೀವ ತುಂಬುವ ಉತ್ಸಾಹಿ ನಟರಾಗಿದ್ದರು. ಇಲ್ಲಿ ಇವರು ಪ್ರಭಾವಿತರಾದುದು ತುಕರಾಂ ಏನೆಕಲ್ಲು, ಐ.ಕೆ. ಬೊಳುವಾರು, ಎಸ್,ಎಸ್. ಗೋವಿಂದ ಅವರಿಂದ. ಇವರೆಲ್ಲರೂ ಅವರ ಆಸಕ್ತಿಗೊಂದು ಅಡಿಗಲ್ಲು. ಹೆಜ್ಜೆ-ಹೆಜ್ಜೆಗೂ ಕಲಾಸಕ್ತಿಯನ್ನು ಹೆಚ್ಚಿಸಿ ಮುನ್ನಡೆಯುವಂತೆ ಪ್ರೋತ್ಸಾಹಿಸಿದವರು. ಪ್ರೋತ್ಸಾಹದ ಹಿಂದೆಯೇ ಅವರ ಗೆಲುವು ಮುನ್ನಡೆಯಿತು. ನಂತರ ತೆರಳಿದ್ದು ಡಿಪ್ಲೊಮಾ ಇನ್ ಥಿಯೇಟರ್ ಆರ್ಟ್ಸ್ ನತ್ತ. ಇದನ್ನು ಕೇಳಿದಾಗಲೇ ನಮಗೆ ಅರಿವಾಗುವುದು ಅವರ ಕಲಾಸಕ್ತಿ ಎಷ್ಟಿತ್ತೆಂಬುದು. ಇದನ್ನು ಮುಗಿಸಿ ಕೆಲವು ವರ್ಷಗಳ ಕಾಲ ರಂಗಶಿಕ್ಷಣ ತರಬೇತಿ ಹೆಗ್ಗೋಡು ಇಲ್ಲಿ ನಟನಾಗಿ ನಿರ್ದೇಶಕನಾಗಿ ದುಡಿದರು. ಇವರ ಗುರು ವೃಂದದವರಲ್ಲಿ ಅಕ್ಷರ, ಕೆ.ವಿ. ಸುಬ್ಬಣ್ಣ, ರಘುನಂದನ್, ಜಂಬೆ ಮುಂತಾದವರು ಪ್ರಮುಖರು ಮುಖ್ಯ ನಟನಾಗಿ ರಂಗಭೂಮಿ ಕಲಾವಿದನಾಗಿ ನಿನಾಸಂನಲ್ಲಿ ಮೂರು ವರ್ಷಗಳ ಕಾಲ ತಿರುಗಾಟ ನಡೆಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದರು.
ಜೊತೆಗೆ ಕಿರುತೆರೆ ನಟ ನವೃತ್ತಿ ಪ್ರಾಧ್ಯಪಕರು ಆದ ಜಿ.ಕೆ. ಗೋವಿಂದ ರಾವ್ ಅವರ ಜೊತೆ ನಿಕಟವರ್ತಿಯಾಗಿ ಮತ್ತು ಉತ್ತಮ ನಡೆ-ನುಡಿಯಿಂದ ತನ್ನ ಕಲಾಸಕ್ತಿಯನ್ನು ಇಮ್ಮಡಿಗೊಳಿಸಿದರು. ಮೈಸೂರಿನಲ್ಲಿ ರಂಗಶಿಕ್ಷಣ ತರಬೇತಿ ಶಿಕ್ಷಕನಾಗಿ ಎರಡು ವರ್ಷಗಳ ಕಾಲ ತನ್ನ ಅಮೂಲ್ಯ ಸೇವೆ ಸಲ್ಲಿಸಿದರು. ಅಲ್ಲಿಯೇ ತೆರೆದ ವಿಶ್ವ ವಿದ್ಯಾನಿಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿದರು.
2009ರಲ್ಲಿ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ರಂಗಶಿಕ್ಷಣ ತರಬೇತಿ ಶಿಕ್ಷಕನಾಗಿ ದುಡಿದಿದ್ದು ಕೇವಲ 1 ವರ್ಷ 2 ತಿಂಗಳು ಅಷ್ಟೆ. ಈ ಕೆಲವೇ ಸಮಯದಲ್ಲಿ 4 ನಾಟಕಗಳನ್ನು ನಿರ್ದೇಶಿಸಿ ವಿಶ್ವವಿದ್ಯಾನಿಲಯ ಪ್ರಶಸ್ತಿ, ಪುರಸ್ಕಾರ ಮತ್ತು ಕಾಲೇಜಿನ ಕೀರ್ತಿ ಪತಾಕೆ ಗಗನಕ್ಕೇರುವಲ್ಲಿ ಇವರ ಪಾತ್ರ ಬಹಳ ಗೌರವಯುತವಾದುದು.
ಉಜಿರೆಯಲ್ಲಿ ನಡೆದ ವಿಶ್ವ ತುಳು ಸಮ್ಮೇಳನದಲ್ಲಿ ತುಳುನಾಡಿನ ತುಳುಮಗನಾಗಿ ಇವರ ಪಾತ್ರ ಶ್ಲಾಘನೀಯ. ಅಲ್ಲಿ ಇವರು ಗಾಂಧೀಜಿಯ ಪಾತ್ರದಲ್ಲಿ ಮಿಂಚಿದ್ದರು. ಕೋಟ್ಯಾಂತರ ಜನಾಕರ್ಷಣೆ ಪಡೆದ ತುಳುಗ್ರಾಮ ನಿರ್ಮಿಸುವಲ್ಲಿ ಇವರ ಸಾಧನೆ ಅಪಾರವಾದುದು. ಪ್ರಾಮಾಣಿಕ ಮತ್ತು ನೇರ ನಡೆ-ನುಡಿಯ ಕಲಾವಿದನಿಗೆ ಇನ್ನೊಂದು ಹೆಸರೇ ಈ ನವೀನ್. ರಂಗಭೂಮಿ, ರಂಗಶಿಕ್ಷಣವೇ ತನ್ನ ಜೀವವೆಂದು ತಿಳಿದು ಸದ್ದಿಲ್ಲದೇ ಸುದ್ದಿ ಮಾಡಿದ ವ್ಯಕ್ತಿ.
ನನ್ನ ಜೀವ ಇರುವುದು ನಾಟಕಕ್ಕಾಗಿಯೇ. ಇದು ನನಗೆ ಅನ್ನ ನೀಡುತ್ತದೆ. ನಾನು ನಾಟಕಕ್ಕಾಗಿಯೇ ಸಾಯುತ್ತೇನೆ. ನಾಟಕವೇ ನನ್ನುಸಿರು. ಎಂಬ ಅವರ ಮಾತಿನಂತೆ ಜೀವನವೆಂಬ ನಾಟಕದ ಪಾತ್ರಕ್ಕೆ ಕೊನೆಹಾಡಿ, ನಾಟಕ ಪ್ರದರ್ಶನಕ್ಕೆ ತೆರಳಿರುವ ಸಂದರ್ಭದಲ್ಲಿ ವಾಹನ ಅಪಘಾತಕ್ಕೆ ಸಿಲುಕಿ ವಿಧಿಯ ಕ್ರೂರ ಲೀಲೆಗೆ ಬಲಿಯಾದರು. ಸೆ.11ಕ್ಕೆ ವರ್ಷ 1 ಸಂದರೂ ಅವರ ನೆನಪುಗಳು ನಮ್ಮ ಮನದಾಳದಲ್ಲಿ ಅಚ್ಚಳಿಯದೇ ಉಳಿದಿದೆ. ಅಂತಹ ಕಲಾವಿದ ಇನ್ನೊಮ್ಮೆ ಹುಟ್ಟಿ ಬರುವಂತಾಗಲಿ. ಅವರ ಅಲ್ಪ ಸಮಯದ ಆದರ್ಶ ಜೀವನವೇ ನಮಗೆ ಉಸಿರಾಗಲಿ, ಜೊತೆಗೆ ದಾರಿದೀಪವೂ ಆಗಲಿ.
ಬರಹ:ವಿಸ್ಮಿತ ಎಡಮಂಗಲ
ತೃತೀಯ ಪತ್ರಿಕೋದ್ಯಮ
ಎಸ್.ಡಿ.ಎಂ. ಕಾಲೇಜು ಉಜಿರೆ
ವೈವಿಧ್ಯ
ಉತ್ಥಿಥ ಪಾರ್ಶ್ವ ಕೋಣಾಸನ ಭಂಗಿಯು ದೇಹವನ್ನು ಪಾಶ್ರ್ವವಾಗಿ ಬಾಗಿಸುವ ಆಸನವಾಗಿದೆ.
ಅಭ್ಯಾಸ ಕ್ರಮ: ಪ್ರಥಮವಾಗಿ ತಾಡಾಸನ ಭಂಗಿಯಲ್ಲಿ ನಿಲ್ಲಬೇಕು. ಆಮೇಲೆ ಕಾಲುಗಳನ್ನು ನಾಲ್ಕು ನಾಲ್ಕುವರೆ ಅಡಿಗಳಷ್ಟು ಅಗಲಿಸಬೇಕು. ಈಗ ಕೈಗಳು ನೇರವಾಗಿರಬೇಕು. ಆಮೇಲೆ ಬಲಕಾಲನ್ನು ಬಲಬದಿಗೆ ತ್ತೊಂಬತ್ತು ಡಿಗ್ರಿಗಳಷ್ಟು ತಿರುಗಿಸಬೇಕು. ನಂತರ ಉಸಿರನ್ನು ಬಿಡುತ್ತಾ ಬಲ ಮಂಡಿಯನ್ನು ಮುಂದಕ್ಕೆ ಬಾಗಿಸಬೇಕು. ಈ ಕಾಲುಗಳ ಆಕಾರ ತ್ತೊಂಬತ್ತು ಡಿಗ್ರಿಗಳಷ್ಟು ಇರಬೇಕು. ಅನಂತರ ಬಲಕೈಯನ್ನು ಬಲಕಾಲಿನ ಕಿರುಬೆರಳಿನ ಪಕ್ಕದಲ್ಲಿ ಊರಿಡಬೇಕು. ಎಡಕೈಯನ್ನು ಎಡ ಕಿವಿಯ ಮೇಲೆ ತಂದು, ಆಮೇಲೆ ಗಲ್ಲವನ್ನು ಎಡ ಕೈಯ ಬಳಿ ತಿರುಗಿಸಬೇಕು. 20 ಸೆಕೆಂಡು ಸಮ ಉಸಿರಾಟ. ಹೀಗೆಯೇ ಎಡ ಬದಿಯಲ್ಲಿ ಅಭ್ಯಸಿಸಬೇಕು. ಅನಂತರ ವಿಶ್ರಾಂತಿ.
ಉಪಯೋಗಗಳು: ಈ ಆಸನವನ್ನು ಮಾಡುವುದರಿಂದ ಕಾಲಿನ ನರಗಳ ಸೆಳೆತ, ಮಂಡಿನೋವು ಹಾಗೂ ವಾತ ಇತ್ಯಾದಿಗಳು ನಿವಾರಣೆಯಾಗುತ್ತದೆ. ಈ ಆಸನವು ಮಲಬದ್ಧತೆಯ ನಿವಾರಣೆಗೆ ತುಂಬಾ ಸಹಕಾರಿಯಾಗುತ್ತದೆ. ಜೀರ್ಣ ಶಕ್ತಿಯು ಹೆಚ್ಚುತ್ತದೆ.
ಲೇಖನ :ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ,
ಅಂತರರಾಷ್ಟೀಯ ಯೋಗ ತೀರ್ಪುಗಾರರು,
ಈ ಕನಸು ಅವಾರ್ಡ್
ಮಣ್ಣಿನಲ್ಲಿ ಮಾಯವಾದ ಕೆತ್ತನೆಗಳು
ಇದು ಕಾಲಗರ್ಭದೊಳು ಹುದುಗಹೊರಟ ಪುರಾತನ ದೇಗುಲವೊಂದರ ಕಥೆ...ವ್ಯಥೆ.ಅನೇಕಾನೇಕ ಐತಿಹ್ಯಗಳನ್ನು ತನ್ನೊಡಲೊಳಗೆ ಕೂಡಿಟ್ಟ ಈ ಪುರಾತನ ದೇಗುಲ ಇಂದು ಮಣ್ಣೊಳಗೆ ಮಣ್ಣಾಗುವ ಸ್ಥಿತಿಯಲ್ಲಿದೆ. ಜೀರ್ಣಾವಸ್ಥೆಯಲ್ಲಿರುವ ಈ ದೇಗುಲ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.
ಬೈಲಂಗಡಿಯ ತೋಟತ್ತಾಡಿಯಲ್ಲಿರುವ ಈ ಶಿವ ಗುಡಿಯಲ್ಲಿ ಅನೇಕ ವಿಶೇಷತೆಗಳಿವೆ. ಸುಮಾರು ಎರಡು ಸಾವಿರ ವರ್ಷಗಳ ಹಿಂದಿನ ಈ ಶಿವ ಗುಡಿಯು ಇಂದು ಕೂಡ ಹಾಗೆಯೇ ಉಳಿದು ಕೊಂಡಿದೆ. ಅಲ್ಲಲ್ಲಿ ಬಿದ್ದು ಕೊಂಡಿರುವ ಅನೇಕ ಶಾಸನಗಳು ಹಾಗು ಕಲ್ಲಿನಿಂದ ಕೆತ್ತಲ್ಲಟ್ಟ ಸುಂದರವಾದ ಕಲ್ಲಿನ ಕೆತ್ತನೆಗಳು ನೋಡುಗರ ಕಣ್ಣಿಗೆ ಮುದ ನೀಡುತ್ತದೆ.
ಇಲ್ಲಿನ ಈ ಗುಡಿಯ ಹೊರಾಂಗಣದಲ್ಲಿ ವಿಶಿಷ್ಟವಾಗಿ ರಚಿಸಲ್ಪಟ್ಟ ಕೆತ್ತನೆಗಳು ರಾಜಮನೆತನದ ಆಳ್ವಿಕೆಗಳ ಕುರುಹನ್ನು ತಿಳಿಸುತ್ತದೆ. ಬೈಲಂಗಡಿಯ ಈ ಶಿವ ಗುಡಿಯನ್ನು ರಾಣಿ ಸೋಮಲಾದೇವಿ ಸ್ಥಾಪಿಸಿದಳು ಎಂಬ ಪ್ರತೀತಿ ಇದೆ.
ಸ್ಥಂಭದಲ್ಲಿ ಕೆತ್ತಿರುವ ಹಾವಿನಾಕೃತಿಯ ಕೆಲವು ಕೆತ್ತನೆಗಳು ಅಚ್ಚರಿಮೂಡಿಸುತ್ತವೆ. ಆನೆಯ ಕೆತ್ತನೆಗಳು ಮತ್ತು ಮಣ್ಣಿನಲ್ಲಿ ಹೂತಿರುವ ಕೆಲವೊಂದು ಬೃಹದಾಕಾರದ ಕಂಬಗಳು ನಮಗೆ ಕಾಣ ಸಿಗುತ್ತದೆ. ಗುಡಿಯ ಒಳಗಿರುವ ಕೆತ್ತನೆಗಳನ್ನು ನೋಡಿದರೆ ಅದು ವಿಜಯ ನಗರದ ಅರಸರ ಕಾಲದಲ್ಲಿ ನಿರ್ಮಿತವಾದ ಶಿವ ದೇವಾಲಯಗಳೆಂದು ಊಹಿಸಬಹುದು.
ಐತಿಹಾಸಿಕ ಕುರುಹುಗಳಿರುವ ಈ ದೇವಾಲಯದ ಅವಶೇಷಗಳು ಅವಸಾನದತ್ತ ಸಾಗುತ್ತಿದೆ ಆದರೆ ಯಾರು ಕೂಡ ಇದರ ಬಗ್ಗೆ ತಲೆಕೆಡಿಸಿ ಕೊಳ್ಳದಿರುವುದು ವಿಪರ್ಯಾಸವೇ ಸರಿ.
ಬೆಳ್ತಂಗಡಿ ತಾಲೂಕಿನ ಉಜಿರೆಯಿಂದ ಚಾರ್ಮಾಡಿ ರಸ್ತೆಯಲ್ಲಿ 20ಕಿಲೋಮೀಟರ್ ಗಳಷ್ಟು ಮುಂದೆಸಾಗಿದಾಗ ಸಿಗುವ ಗಂಡಿಬಾಗಿಲು ಕಾಯರ್ತಡ್ಕ ಎಂಬಲ್ಲಿ ಅಳಿವಿನಂಚಿನ ಸ್ಥಿತಿಯಲ್ಲಿರುವ ಈ ಪುರಾತನ ದೇಗುಲವನ್ನು ಉಳಿಸುವತ್ತ ಚಿಂತಿಸಬೇಕಾಗಿದೆ. ಸುಂದರ ಕೆತ್ತನೆಗಳು, ಅನೇಕ ಶಾಸನಗಳನ್ನೊಳಗೊಂಡಿರುವ ಈ ದೇಗುಲ ಒಂದು ಆಸ್ತಿ. ಪುರಾತತ್ವ ಇಲಾಖೆ ಇದರತ್ತ ಗಮನ ಹರಿಸಬೇಕಾಗಿದೆ. 
- ಮಾಣಿಕ್ಯ ಎಂ
ಎಸ್.ಡಿ.ಎಂ ಕಾಲೇಜ್ ಉಜಿರೆ.
ರಾಜ್ಯ - ರಾಷ್ಟ್ರ
ಗೋಕರ್ಣ: ನಾವು ನಮ್ಮ ಬದುಕಿನಲ್ಲಿ ನಾವು,ನಮ್ಮ ಶರೀರ,ಬಳಗ,ನಮ್ಮ ಕುಟುಂಬ ಎಂಬ ಸೀಮಿತವಾದ ಬೇಲಿಯನ್ನು ಹಾಕಿಕೊಂಡು ಜೀವಿಸುತ್ತೇವೆ.ಆದರೆ ಈ ಸೀಮೆಯನ್ನು ದಾಟಿ ಹೋಗಿ ಸಮಾಜದತ್ತ ಕಣ್ಣು ಹೊರಳಿಸಿದರೆ ನಮ್ಮಾತ್ಮದ ವಿಸ್ತಾರವನ್ನು ಮಾಡಿಕೊಂಡು ವಿಶ್ವಕುಟುಂಬಿಯಾಗುವ ಪ್ರಯತ್ನವನ್ನು ಮಾಡಿದರೆ ಆಗುವ ಅನುಭೂತಿಯೇ ಬೇರೆ ಎಂದು ಶ್ರೀ ರಾಘವೇಶ್ವರ ಭಾರತೀ ಶ್ರೀಗಳು ಹೇಳಿದ್ದಾರೆ.
ಎಲ್ಲರನ್ನೂ ನಮ್ಮವರೆಂದುಕೊಂಡು ವ್ಯವಹರಿಸಿದಾಗ ಆಗುವ ಸಂತೋಷ ಅನಿರ್ವಚನೀಯವಾದದ್ದು. ಸೀಮೋಲ್ಲಂಘನವು ಯತಿಗಳಿಗೆ ಮಾತ್ರ ವಿಧಿಯಾಗದೆ ಸಂಸಾರಿಗಳೂ ಲೋಕದಲ್ಲಿ ತಾದಾತ್ಮ್ಯತೆಯನ್ನು ಬೆಳೆಸಿಕೊಳ್ಳುವ ಮೂಲಕ ಜೀವನದಲ್ಲಿ ಸೀಮೋಲ್ಲಂಘನವನ್ನು ಮಾಡಬೇಕುಎಂದು ಶ್ರೀರಾಮಚಂದ್ರಾಪುರಮಠದ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಹೇಳಿದ್ಧಾರೆ. ಅಶೋಕೆಯಲ್ಲಿ ತಮ್ಮ ಹದಿನೆಂಟನೆಯ ಚಾತುರ್ಮಾಸ್ಯ ವ್ರತದ ಸೀಮೋಲ್ಲಂಘನವನ್ನು ಮಾಡಿ ಧರ್ಮಸಭೆಯಲ್ಲಿ ಶಿಷ್ಯರಿಗೆ ಅನುಗ್ರಹಸಂದೇಶವನ್ನು ನೀಡುತ್ತಿದ್ದ ಪೂಜ್ಯಶ್ರೀಗಳು ಈ ಅಶೋಕೆಯಲ್ಲಿ ಇಷ್ಟುದಿನಗಳಕಾಲ ರಾಮಕಥೆಯು ನಡೆಯುತ್ತಿತ್ತು.ಇದು ಅಕ್ಷರಶಃ ಅಯೋಧ್ಯೆಯಾಗಿ ಪರಿವರ್ತಿತವಾಗಿತ್ತು.ಹೇಗೆ ಪ್ರಭು ಶ್ರೀರಾಮಚಂದ್ರನ ಕಾಲದಲ್ಲಿ ಸಮಸ್ತಭೂಮಂಡಲಕ್ಕೇ ಅಯೋಧ್ಯೆಯು ರಾಜಧಾನಿಯಾಗಿತ್ತೋ ಶ್ರೀರಾಮನು ಏಕಚ್ಛತ್ರಾಧಿಪತಿಯಾಗಿ ಆಳಿದನೋಅದೇ ರೀತಿಯಲ್ಲಿ ನಮ್ಮ ಶ್ರೀಮಠದ ಆರಾಧ್ಯ ದೇವತೆಯಾದ ಶ್ರೀರಾಮಚಂದ್ರನು ಈ ಪ್ರದೇಶದಿಂದ ಆಕರ್ಷಿತನಾಗಿ ಆದಿಶಂಕರಾಚಾರ್ಯರ ಮೂಲಕ ದೂರದ ಅಯೋಧ್ಯೆಯಿಂದ ಇಲ್ಲಿಗೆ ಬಂದು ನೆಲೆಸಿದ. ಇದು ಒಂದು ಅದ್ಭುತ ಘಟನೆಯೇ.ಅಶೋಕೆಯು ಹಲವು ವಿಸ್ಮಯಗಳ ತಾಣ. ಸಮೀಪದ ಗೋಕರ್ಣದವರಲ್ಲಿಯೇ ಅನೇಕ ಜನರು ನೋಡದಿದ್ದ ಈ ಅಶೋಕೆಯಲ್ಲಿ ಕಳೆದ ವರ್ಷದಿಂದ ಜನಪ್ರವಾಹವೇ ಹರಿಯುತ್ತಿದೆ. ಅನೇಕ ಅಘಟಿತ ಘಟನೆಗಳಿಗೆ ಈ ಭೂಮಿ ಸಾಕ್ಷಿಯಾಗಿದೆ.ಶ್ರೀರಾಮಮುದ್ರಿಕೆ ಯನ್ನು ನಂಬಿ ಬದುಕಿ.ಇದು ನಮ್ಮ ಪೂರ್ವಪೀಠಾಧೀಶರಾಗಿದ್ದ ಎಂಟನೆಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳವರು ತಮ್ಮ ಇಹಲೋಕವ್ಯಾಪಾರವನ್ನು ಮುಗಿಸಬಯಸಿ ಮಠವನ್ನು ಬಿಟ್ಟು ಮುಕ್ತಿಕ್ಷೇತ್ರವೆಂಬ ಗೋಕರ್ಣಕ್ಕೆ ಬರುವಾಗ ಮಠದಲ್ಲಿದ್ದ ತಮ್ಮ ಉತ್ತರಾಧಿಕಾರಿಗಳಿಗೆ ಆದೇಶಿಸಿದ ವಾಕ್ಯ.
ನಮ್ಮ ಪರಂಪರೆಯವರೆಲ್ಲರೂ ಅವರು ಹೇಳಿದಂತೆ ಶ್ರೀರಾಮಚಂದ್ರನ ನೆರಳಿನಲ್ಲಿಯೇ ಬಾಳಿಬದುಕಿದವರು. ಇಂದು ನಾವು ಹೇಳುವುದೂ ಈ ಮಾತನ್ನೇ.ರಾಮನನ್ನು ನಂಬಿ ಬದುಕುವವರಿಗೆ ಬೇರಾವುದರ ಅಗತ್ಯವೂ ಇಲ್ಲ ಎಂದು ಹೇಳಿದ ಪೂಜ್ಯಶ್ರೀಗಳು ಶಿಷ್ಯರು ನದಿಗಳಾದರೆ ಗುರು ಸಮುದ್ರದಂತೆ.ವರ್ಷವಿಡೀ ಸಂಚರಿಸುತ್ತ ಸಮಾಜಕ್ಕೆ ಧರ್ಮಮಾರ್ಗವನ್ನು ಬೋಧಿಸುವ ಯತಿಗಳು ಚಾತುರ್ಮಾಸ್ಯಕಾಲದಲ್ಲಿ ಒಂದೆಡೆ ನಿಂತು ಅಂತರ್ಮುಖಿಗಳಾಗುತ್ತಾರೆ. ಇದು ಶಿಷ್ಯರೆಂಬ ನದಿಗಳು ಗುರುರೂಪವಾದ ಸಮುದ್ರವನ್ನು ತನ್ನೊಳಗಿಟ್ಟುಕೊಳ್ಳುವ ಅದರಲ್ಲಿ ಸೇರಿಹೋಗುವ ಪರಿ.ಇದೇ ರೀತಿಯಲ್ಲಿ ಸಮಾಜವು ಸಂಕುಚಿತವಾಗದೆ ತನ್ನ ನೈಜ ಆತ್ಮವಿಸ್ತಾರವನ್ನು ಪಡೆಯುವಂತಾಗಲಿ ಎಂದು ಆಶಿಸಿದರು.
ವಾರ್ಷಿಕವಾಗಿ ಚಾತುರ್ಮಾಸ್ಯದ ಸೀಮೋಲ್ಲಂಘನದ ಧರ್ಮಸಭೆಯಲ್ಲಿ ನೀಡಲಾಗುವ ಪ್ರತಿಷ್ಠಿತ ಚಾತುರ್ಮಾಸ್ಯ ಪ್ರಶಸ್ತಿಯನ್ನು ರಾಣಿಬೆನ್ನೂರಿನ ಉದ್ಯಮಿ ಶ್ರೀಮಠದ ನಿಕಟಶಿಷ್ಯ ವಾಸುದೇವ ಹೆಬ್ಬಾರ್ ಅವರಿಗೆ ನೀಡಿ ಸಮ್ಮಾನಿಸಲಾಯಿತು.ಶ್ರಿಮಠದ ಮಾಧ್ಯಮ ವಿಭಾಗದ ಮೋಹನ ಭಾಸ್ಕರ ಹೆಗಡೆ ಸಮ್ಮಾನಿತರ ಪರಿಚಯವನ್ನು ನೀಡಿ ಅಭಿನಂದಿಸಿದರು ವಾಸುದೇವ ಹೆಬ್ಬಾರರು ಈ ಪ್ರಶಸ್ತಿಯು ಸಮಸ್ತ ಉತ್ತರಕರ್ನಾಟಕಕ್ಕೆ ಸಂದ ಪ್ರಶಸ್ತಿಯೆಂದು ಸ್ವೀಕರಿಸುವುದಾಗಿ ಹೇಳಿದರು. ದೇವಶ್ರವ ಶರ್ಮಾ ದಂಪತಿಗಳಿಂದ ಸಭಾಪೂಜೆ, ಎಮ್.ಕೆ.ಹೆಗಡೆಯವರಿಂದ ಚಾತುರ್ಮಾಸ್ಯದ ಅವಲೋಕನ ಸಂಪನ್ನಗೊಂಡಿತು.
ಈ ಧರ್ಮಸಭೆಯಲ್ಲಿ ವಿಶ್ವಹಿತಮ್,ಕುಟುಂಬದರ್ಶಿನಿ ಎಂಬ ಅಂತರ್ಜಾಲ ತಾಣಗಳು ಹಾಗೂ ಆರ್ಯಪ್ರಭಾ ಪತ್ರಿಕೆಯ ವಿಶೇಷಸಂಚಿಕೆಗಳೂ ಲೋಕಾರ್ಪಣೆಗೊಂಡವು.ವಿದ್ಯಾವಿಭಾಗದ ಪ್ರಮೋದ ಪಂಡಿತ್ ಸಭೆಯನ್ನು ನಿರ್ವಹಿಸಿದರು.ಇದೇ ಸಂದರ್ಭದಲ್ಲಿ ಅಶೋಕೆಯಲ್ಲಿ ಲೋಕಕಲ್ಯಾಣಾರ್ಥವಾಗಿ ನಿರಂತರವಾಗಿ ಎರಡುತಿಂಗಳಿನಿಂದ ಉಪಾಧಿವಂತಮಂಡಲದ ಸದಸ್ಯರಿಂದ ನಡೆಯುತ್ತಿದ್ದ ಧಾರ್ಮಿಕ ಯಾಗಗಳು ಇಂದಿನ ಸಹಸ್ರಚಂಡೀಯಾಗದ ಪೂರ್ಣಾಹುತಿಯೊಂದಿಗೆ ಸಮಾಪ್ತಗೊಂಡವು.
ಬೆಂಗಳೂರಿನ ಉದ್ಯಮಿ ಎಮ್.ಎನ್.ಭಟ್ ದಂಪತಿಗಳಿಂದ ಗುರುದೇವತಾಸೇವೆಯು ಸಮರ್ಪಿತವಾಯಿತು.ಪೂಜ್ಯಶ್ರೀಗಳು ಕ್ಷೇತ್ರದೇವತೆಯಾದ ಭದ್ರಕಾಳೀ,ದೇವರಭಾವಿಯ ಕೆಂಗಳಾಪರಮೇಶ್ವರೀ ದೇವಾಲಯಗಳಿಗೆ ಸಂದರ್ಶನ ನೀಡಿ ಸೀಮೋಲ್ಲಂಘನವಿಧಿಯನ್ನು ಪೂರೈಸಿದರು.ಸಂಜೆ ಪೂಜ್ಯಶ್ರೀಗಳು ಶ್ರೀಕ್ಷೇತ್ರ ಗೋಕರ್ಣ ಉಪಾಧಿವಂತಮಂಡಲದವರು ಆಯೋಜಿಸಿದ್ದ ಮೆರವಣಿಗೆಯಲ್ಲಿ ಗೋಕರ್ಣದ ಶ್ರೀ ವೆಂಕಟರಮಣದೇವಾಲಯದಿಂದ ಹೂವಿನಹಾಸಿನಲ್ಲಿ ಸಾಗಿ ಶ್ರೀಕ್ಷೇತ್ರದೇವತೆಗಳ ಸಂದರ್ಶನ ಮಾಡಿದರು.
ವರದಿ: ಸತ್ಯನಾರಾಯಣ ಶರ್ಮ
Video
