ಈ ಕನಸು

ಇದು ವರ್ಷದ ಕನಸು

ಈ ಕನಸು.ಕಾಂಗೆ ಸುದ್ದಿ,ವಿಶೇಷ ಲೇಖನ ಬರಹಗಳನ್ನು ಈ ವಿಳಾಸಕ್ಕೆ ಕಳುಹಿಸಿ.info@ekanasu.com

ರಾಜ್ಯ - ರಾಷ್ಟ್ರ


ಆಳ್ವಾಸ್ ನುಡಿಸಿರಿ ಬೆಳಗಾವಿ ಸಮಾಲೋಚನಾ ಸಭೆಯನ್ನುದ್ದೇಶಿಸಿ ಸಾಹಿತಿ ಸರಜು ಕಾಟ್ಕರ್ ಮಾತನಾಡಿದರು. ಈ ಸಂದರ್ಭದಲ್ಲಿ ಬೆಳಗಾವಿ ಕ.ಸಾ.ಪ.ಅಧ್ಯಕ್ಷ ಡಾ.ಬಸವರಾಜ ಜಗದಂಬಿ, ಆಳ್ವಾಸ್ ಸಮೂಹ ಸಂಸ್ಥೆಗಳ ಮಾಧ್ಯಮ ಸಂಪರ್ಕಾಧಿಕಾರಿ ಹರೀಶ್ ಕೆ.ಆದೂರು, ಡಾ.ಧನಂಜಯ ಕುಂಬ್ಳೆ, ದೀಪಾ ಕೊಠ್ಠಾರಿ, ನಿತ್ಯಾನಂದ ಮೊಗೇರ, ಧೀರೇಂದ್ರ ಜೈನ್ ಉಪಸ್ಥಿತರಿದ್ದರು.










ಮುಂದೆ ಓದಿ

ರಾಜ್ಯ - ರಾಷ್ಟ್ರ


ಮೂಡಬಿದಿರೆ : ಕಾಲೇಜು ವಾರ್ಷಿಕ ಸಂಚಿಕೆಗಳೆಂದರೆ ಜಾಳು ಜಾಳಾಗಿರುವುದಲ್ಲ.ಬದಲಾಗಿ ಮಾಹಿತಿಯುಕ್ತ ಗ್ರಂಥವಾಗಿರಬೇಕು. ಅದಕ್ಕೆ ಈ "ಸ್ವರೂಪ" ಒಂದು ಸಾಕ್ಷಿ ಎಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ.ಎಂ.ಎಂ.ಕಲಬುರ್ಗಿ ಹೇಳಿದ್ದಾರೆ.
ಡಾ.ಎಂ.ಎಂ.ಕಲಬುರ್ಗಿ ಅವರ ನಿವಾಸಕ್ಕೆ ಆಳ್ವಾಸ್ ನುಡಿಸಿರಿ ಸ್ವಾಗತ ಸಮಿತಿ ಪದಾಧಿಕಾರಿಗಳು ತೆರಳಿ ಸಮ್ಮೇಳನಕ್ಕೆ ಆಮಂತ್ರಣ ನೀಡಿದ ಸಂದರ್ಭದಲ್ಲಿ "ಸ್ವರೂಪ" ವಾರ್ಷಿಕ ಸಂಚಿಕೆಯ ಮೊದಲ ಪ್ರತಿಯನ್ನು ಕಲಬುರ್ಗಿ ಅವರಿಗೆ ಹಸ್ತಾಂತರಿಸಲಾಯಿತು.




ಸ್ವರೂಪ ವಾರ್ಷಿಕ ಸಂಚಿಕೆಯಲ್ಲಿ ಕನ್ನಡ, ಹವ್ಯಕ ಕನ್ನಡ, ಅರೆಗನ್ನಡ, ಹುಬ್ಬಳ್ಳಿ ಕನ್ನಡ, ಉತ್ತರ ಕನ್ನಡದ ಕನ್ನಡ, ತುಳು, ಶಿವಳ್ಳಿ ತುಳು, ಮಲೆಯಾಳಂ, ಹಿಂದಿ, ಆಂಗ್ಲಭಾಷೆ, ಮಣಿಪುರಿ, ಉರ್ದು, ಅರಬ್ಬಿ, ಕೊಂಕಣಿ, ಹೀಗೆ ವೈವಿಧ್ಯಮಯ ಭಾಷಾ ಪ್ರಬೇಧಗಳ ಲೇಖನಗಳಿವೆ. ಒಂದು ಆಕರ ಗ್ರಂಥ ರೂಪದಲ್ಲಿ ಈ ಬಾರಿಯ ಸ್ವರೂಪವನ್ನು ಹೊರತರಲಾಗಿದೆ ಎಂದು "ಸ್ವರೂಪ" ವಾಷರ್ಿಕ ವಿಶೇಷ ಸಂಚಿಕೆಯ ಸಂಪಾದಕ ಹರೀಶ್ ಕೆ.ಆದೂರು ಮಾಹಿತಿ ನೀಡಿದರು.

ಡಾ.ಧನಂಜಯ ಕುಂಬ್ಳೆ, ನಿತ್ಯಾನಂದ ಗಾಣಿಕ, ಧೀರೇಂದ್ರ ಜೈನ್ ಉಪಸ್ಥಿತರಿದ್ದರು.

ಮುಂದೆ ಓದಿ

ರಾಜ್ಯ - ರಾಷ್ಟ್ರ

ಡಾ.ಕಲಬುರ್ಗಿ ಅವರಿಗೆ 'ಆಳ್ವಾಸ್ ನುಡಿಸಿರಿ' ಆಮಂತ್ರಣ

ಮೂಡಬಿದಿರೆ : ಮೂಡಬಿದಿರೆಯಲ್ಲಿ ನವೆಂಬರ್ 11,12 ಮತ್ತು 13ರಂದು ನಡೆಯಲಿರುವ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ ಸಮ್ಮೇಳನದ ಸರ್ವಾಧ್ಯಕ್ಷರಾಗಿರುವ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ.ಎಂ.ಎಂ.ಕಲಬುರ್ಗಿ ಅವರ ನಿವಾಸಕ್ಕೆ ಆಳ್ವಾಸ್ ನುಡಿಸಿರಿ ಸ್ವಾಗತ ಸಮಿತಿ ಪದಾಧಿಕಾರಿಗಳು ತೆರಳಿ ಸಮ್ಮೇಳನಕ್ಕೆ ಆಮಂತ್ರಣ ನೀಡಿದರು.



ಆಳ್ವಾಸ್ ಸಮೂಹ ಸಂಸ್ಥೆಗಳ ಮಾಧ್ಯಮ ಸಂಪರ್ಕಾಧಿಕಾರಿ, ನುಡಿಸಿರಿ ಸ್ವಾಗತ ಸಮಿತಿ ಕಾರ್ಯದರ್ಶಿ ಹರೀಶ್ ಕೆ.ಆದೂರು, ಡಾ.ಧನಂಜಯ ಕುಂಬ್ಳೆ, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಉಪನ್ಯಾಸಕರುಗಳಾದ ಧೀರೇಂದ್ರ ಜೈನ್, ನಿನ್ಯಾನಂದ ಗಾಣಿಗ ಈ ಸಂದರ್ಭದಲ್ಲಿದ್ದರು.
ಆಳ್ವಾಸ್ ನುಡಿಸಿರಿಯ ಧಾರಾವಾಡ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಡಾ.ಜಿನದತ್ತ ಹಡಗಲಿ, ಸುಜಾತಾ ಹಡಗಲಿ, ಡಾ.ಶಿವಾನಂದ ಗಾಳಿ, ವೀಣಾ ಸಂಕನಗೌಡರ ದಂಪತಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

ಆಳ್ವಾಸ್ ನುಡಿಸಿರಿ 2011ರ ಸ್ವಾಗತ ಸಮಿತಿಯ ವತಿಯಿಂದ ಈ ಸಂದರ್ಭದಲ್ಲಿ ಡಾ.ಎಂ.ಎಂ.ಕಲಬುರ್ಗಿ ಅವರಿಗೆ ಪುಷ್ಪಗುಚ್ಛ ನೀಡಿ, ಹೂಹಾರ ಸಮರ್ಪಿಸಿ, ಫಲ,ಪುಷ್ಪಗಳೊಂದಿಗೆ, ಸಾಂಪ್ರದಾಯಿಕ ಸನ್ಮಾನ ಗೌರವಗಳನ್ನು ಸಲ್ಲಿಸಲಾಯಿತು.
ಕನ್ನಡ ಮನಸ್ಸು - ಸಂಘರ್ಷ ಮತ್ತು ಸಾಮರಸ್ಯ ಪರಿಕಲ್ಪನೆ ಪ್ರಸ್ತುತವೂ ಹೌದು. ಈ ಒಟ್ಟು ಚಿಂತನೆಯನ್ನೊಳಗೊಂಡು ಸರ್ವಾಧ್ಯಕ್ಷತೆಯ ಭಾಷಣ ಮಾಡಲಿದ್ದೇನೆ. ಆಳ್ವಾಸ್ ನುಡಿಸಿರಿ ಒಂದು ಮಾದರಿ ಸಮ್ಮೇಳನ. ಅದು ಕನ್ನಡಿಗರ ಮನ ತಲುಪುವಲ್ಲಿ ಯಶಸ್ವಿಯಾಗಿದೆ ಎಂದು ಕಲಬುರ್ಗಿ ಹೇಳಿದರು.

ಮುಂದೆ ಓದಿ

ವೈವಿಧ್ಯ
ದೀಪಾವಳಿ ದೀಪಾವಳಿ ಗೋವಿಂದ ಲೀಲಾವಳಿ..ಹೌದು ಬೆಳಕಿನ ಹಬ್ಬ ದೀಪವಳಿ ಬಂತೆಂದರೆ ಎಲ್ಲೆಲ್ಲೂ ಸಡಗರ, ಸಂಭ್ರಮ. ಜನರ ಮಳೆಗಾಲದ ಜಡತ್ವವನ್ನೆಲ್ಲಾ ಕಳೆಯುವುದಕ್ಕೆ ಈ ಹಬ್ಬವೇ ನಾಂದಿ.ಊರ ತುಂಬಾ ಸೇವಂತಿಗೆ ಹೂವು,ಚಂಡು ಹೂವಿನ ಹಾರಗಳ ಜಾತ್ರೆ,ಜಾನುವಾರು ಸಾಕುವವರ ಕಣ್ಣಿ-ಹಗ್ಗಕ್ಕಾಗಿನ ಹುಡುಕಾಟ, ಹಣತೆ ದೀಪಗಳ ಚಿತ್ತಾರ,ಪಟಾಕಿಗಳ ಅಬ್ಬರ..ಒಟ್ಟಿನಲ್ಲಿ ದೀಪಾವಳಿ ಎಂದರೆ ಬೆಳಕಿನ ರೂಪಕ.


ಮಲೆನಾಡಿಗರಿಗೆ ದೀಪಾವಳಿ ಪ್ರಮುಖವಾದ ಹಬ್ಬ. ಕೊಟ್ಟಿಗೆಯಿಲ್ಲದ ಮನೆ ಮಲೆನಾಡಿನಲ್ಲಿ ಅಪರೂಪ.ಏನಿಲ್ಲವೆಂದರೂ ದೀಪಾವಳಿಯ ಗೋ ಪೂಜೆಗಾಗಿಯೇ... ಜಾನುವಾರು ಸಾಕುವವರೂ ಇದ್ದಾರೆ. ಮಲೆನಾಡಿನಲ್ಲಿ ಮೂರು ದಿನ ಅತ್ಯಂತ ಸಂಭ್ರಮದಿಂದ ಆಚರಿಸುವ ಈ ಹಬ್ಬ ಆಡು ಭಾಷೆಯಲ್ಲಿ ದೊಡ್ಡ ಹಬ್ಬವೆಂದೇ ಕರೆಯಲ್ಪಡುತ್ತದೆ.ಚತುರ್ದಶಿಯಂದು ಶುರುವಾಗುವ ಈ ಹಬ್ಬ ಪಾಡ್ಯದಂದು ಕೊನೆಗೊಳ್ಳುತ್ತದೆ.


ನರಕ ಚತುರ್ದಶಿ

ಈ ದಿನ ಸುಮಂಗಲಿಯರಿಂದ ಭೂರೆ ಹಬ್ಬ ಆಚರಿಸಲ್ಪಡುತ್ತದೆ. ಇದನ್ನು ನೀರು ತುಂಬುವ ಹಬ್ಬ ಎಂದೂ ಕರೆಯುತ್ತಾರೆ. ಹಿಂದಿನ ದಿನವೇ ಬಾವಿ ಕಟ್ಟೆಯನ್ನು ಹಸೆ,ಶೇಡಿ,ರಂಗೋಲಿಗಳಿಂದ ಚಂದಗಾಣಿಸಿಡುತ್ತಾರೆ. ಚತುರ್ದಶಿಯ ದಿನ ಮುಂಜಾನೆ ಐದಕ್ಕೇ ಬಾವಿಯ ನೀರನ್ನು ಪೂಜಿಸಿ,ಕಲಶದಲ್ಲಿ ತುಂಬಿಸಿ ದೇವರ ಮಂಟಪದೆದುರು ಇಡುತ್ತಾರೆ. ಇದನ್ನು ಗಂಗಾ ಜಲವೆಂದು ಕರೆಯುತ್ತಾರೆ.ಮನೆ ಮಂದಿಗೆಲ್ಲಾ ಎಣ್ಣೆ-ಅಭ್ಯಂಜನದ ಸ್ನಾನ ಕಡ್ಢಾಯ.ಮನೆಯ ಆಕಳಿಗೂ ಎಣ್ಣೆ ಹಚ್ಚುವ ಪದ್ಧತಿಯಿದೆ.ವೈಜ್ಞಾನಿಕ ಹಿನ್ನೆಲೆಯಲ್ಲಿ ಇದು ಚಳಿಗಾಲದಿಂದ ರಕ್ಷಣೆಗೆ ತೆಗೆದುಕೊಳ್ಳುವ ಮುನ್ನೆಚ್ಚರಿಕಾ ಕ್ರಮ. ಭೂರೆ ಕಡುಬು ನರಕ ಚತುರ್ದಶಿಯ ಹಬ್ಬದೂಟದ ವಿಶೇಷ.

ಸಂಜೆ 'ಬಲೀಂದ್ರ ಪೂಜೆ,ಪೌರಾಣಿಕ ಹಿನ್ನೆಲೆಯಲ್ಲಿ ಮಹಾ ವಿಷ್ಣುವಿನಿಂದ ವರ ಪಡೆದು ಭೂಮಿಗೆ ಭೇಟಿ ನೀಡುವ ಬಲಿ ಚಕ್ರವರ್ತಿಯನ್ನು ಬರಮಾಡಿಕೊಳ್ಳುವ ಸಂತಸ.ಅವನ ನೇತೃತ್ವದಲ್ಲಿಯೇ ಮೂರು ದಿನದ ದೀಪಾವಳಿ ಆಚರಿಸಲ್ಪಡುತ್ತದೆ. ಮಲೆನಾಡಿನ ಕೆಲವೇ ಮನೆಗಳಲ್ಲಿ ಮಾತ್ರ ಈ ಆಚರಣೆಯಿದೆ.ಮನೆಯ ಜಗುಲಿಯ ಮೇಲೆ ಕಲಶವನ್ನಿಟ್ಟು ಅದಕ್ಕೆ ಪ್ರಾಣ ಪ್ರತಿಷ್ಠೆ ಮಾಡಿ ಬಲಿ ರಾಜನನ್ನು ಆಹ್ವಾನಿಸುತ್ತಾರೆ.ಕಲಶದಿಂದ ಮನೆಯ ವಾಸ್ತುವಿನವರೆಗೆ ಏಳು ಹೆಜ್ಜೆಗಳನ್ನು ರಂಗೋಲಿಯಲ್ಲಿ ಚಿತ್ರಿಸಿರುತ್ತಾರೆ.ಇದು ಆಹ್ವಾನಿತ ದೇವತೆಯ ಗುರುತಾಗಿರುತ್ತದೆ.


ಅಮವಾಸ್ಯೆಯ ದಿನ ಲಕ್ಷ್ಮೀ ಪೂಜೆಯ ಜೊತೆಗೇ ಮಾರನೇ ದಿನದ ಗೋಪೂಜೆಗೆ ಸಿದ್ಧತೆಗಳೂ ನಡೆದಿರುತ್ತದೆ.ದೀಪಾವಳಿ ಪಾಡ್ಯದ ದಿನ ಆಚರಿಸಲ್ಪಡುತ್ತದೆ.ಹಬ್ಬದ ವಿಶೇಷ ಗೋ ಪೂಜೆ. ಮನೆಯಲ್ಲಿ ಕರು ಹಾಕಿದ ಹಸುವಿಗೆ ಅಗ್ರ ಪೂಜೆ.ಮನೆಯ ಜಾನುವಾರುಗಳನ್ನು ಹೂ ಮತ್ತು ಬಣ್ಣಗಳಿಂದ ಅಲಂಕರಿಸಿ ಪೂಜೆಯ ನಂತರ ಊರ ಜನರೆಲ್ಲಾ ಜಾಗಟೆ ಬಾರಿಸುತ್ತಾ ಊರ ದೇವಾಲಯದತ್ತ ಕೊಂಡೊಯ್ಯುತ್ತಾರೆ.ಅಲ್ಲಿ ಗ್ರಾಮ ದೇವತೆ,ಯಕ್ಷ, ಯಕ್ಷಿಣಿ,ಚೌಡಿ,ನಾಗರ ಮುಂತಾದ ದೈವಗಳಿಗೆ ಹಣ್ಣು ಕಾಯಿ ಪೂಜೆ ನೆರವೇರುತ್ತದೆ.ಇಲ್ಲಿ ಹಬ್ಬ ಕೇವಲ ಆಚರಣೆಯೊಂದೇ ಆಗಿರದೆ ಸಾಮಾಜಿಕ ಜೀವನ ಮೌಲ್ಯವನ್ನು ಒಳಗೊಂಡಿದೆ.ಯಾವುದೇ ಜಾತಿ ಭೇದವಿಲ್ಲದೆ ಈ ದಿನದ ಹಬ್ಬ ಆಚರಿಸಲ್ಪಡುತ್ತದೆ.

ಅದೇ ದಿನ ಸಂಜೆ ಬಲಿ ದೇವರ ಉದ್ಯಾವಪನೆ ಅಥವಾ ವಿಸರ್ಜನೆ ಇರುತ್ತದೆ.ನರಕ ಚತುರ್ದಶಿಯ ದಿನ ಬರ ಮಾಡಿಕೊಂಡ ಬಲಿ ರಾಜನನ್ನು ಸಕಲರಿಗೂ ಸನ್ಮಂಗಳವಾಗುವಂತೆ ಬೇಡಿಕೊಂಡು ಸಂಪ್ರದಾಯ ಬದ್ಧವಾಗಿ ಕಳುಹಿಸಿ ಕೊಡುತ್ತಾರೆ. ದೇವರ ಮಂಟಪದಿಂದ ಕೊಟ್ಟಿಗೆಯನ್ನೊಳಗೊಂಡು ಎಲ್ಲಾ ಕಡೆಗಳಲ್ಲಿ ಕಕ್ಕಡ( ಬಟ್ಟೆಯನ್ನು ಕೋಲಿಗೆ ಸುತ್ತಿ ಒಳ್ಳೆಣ್ಣೆಯಲ್ಲಿ ಮಾಡಿದ ದೀಪ) ಹಚ್ಚಿ ಮೂರು ದಾರಿ ಸೇರುವಲ್ಲಿ ಹೋಗಿ ಬಲಿ ಚಕ್ರವರ್ತಿಯನ್ನು ಕಳುಹಿಸಿ ಕೊಡುತ್ತಾರೆ.ವರ್ಷಕ್ಕೊಮ್ಮೆ ಭುವಿಗೆ ಬರುವ ಬಲಿರಾಜ ಎಲ್ಲೆಡೆಯೂ ಬೆಳಕಿನ ಮೂಲಕ ಹರ್ಷವನ್ನು ತುಂಬಿ ಒಳಿತನ್ನು ಮಾಡುವನೆಂಬ ನಂಬಿಕೆ ಈ ಆಚರಣೆಯಲ್ಲಿದೆ.ಮನೆ ಮಂದಿಯೆಲ್ಲಾ ಸೇರಿ 'ದೀಪ ದೀಪದೊಳಗೆ..ಹಬ್ಬಕ್ಕೊಂದು ಹೋಳಿಗೆಎನ್ನುತ್ತಾ ಬಲೀಂದ್ರನ್ನು ಕಳುಹಿಸಿ ಕೊಡುತ್ತಾರೆ.

ದೀಪಾವಳಿಯ ದಿನ ಹವ್ಯಕರು ಆಯುಧ ಪೂಜೆಯನ್ನಾಚರಿಸುತ್ತಾರೆ,ಹಾಗು ನವ ವಸ್ತ್ರ ಧಾರಣೆಯ ದಿನವಾಗಿ ಕೂಡ ಪರಿಗಣಿಸುತ್ತಾರೆ.ಹೊಸತಾಗಿ ಮದುವೆಯಾದ ದಂಪತಿಗಳನ್ನು ಕರೆಸಿ ಆರತಿ ಎತ್ತಿ ಉಡುಗೊರೆ ನೀಡುವ ಸಂಪ್ರದಾಯವೂ ಇದೆ.ಹಬ್ಬದ ದಿನ ರಾತ್ರಿ ಅಂಟಿಗೆ ಪಿಂಟಿಗೆ ತಂಡದವರು 'ಬೋ ಬೋಲೆಂದ್ರ ಬಲೀಂದ್ರನೆ,ಅದರ ನೀ ಕೇಳು ಸಾಲಂಗತನೆ.. ಎನ್ನುತ್ತಾ ಊರಿನ ಎಲ್ಲಾ ಮನೆಗಳಿಗೆ ಹೋಗಿ ದೀಪಾವಳಿಯ ಹಾಡುಗಳನ್ನು ಹಾಡುತ್ತಾರೆ.

ದೀಪಾವಳಿಯ ನಂತರ ಮೂರನೆ ದಿನ ಹೊಸತೊಡಗು ಎಂಬ ಹಬ್ಬವನ್ನೂ ಮಲೆನಾಡಿಗರು ಆಚರಿಸುತ್ತಾರೆ.ಈ ದಿನ ಕೃಷಿ ಮತ್ತು ಇತರ ಆಯುಧ ಉಪಕರಣಗಳನನ್ನು ತೆಗೆದು ಮುಂದಿನ ಕೆಲಸಗಳಿಗೆ ನಾಂದಿಯಿಡುತ್ತಾರೆ.ಮಲೆನಾಡಿನಲ್ಲಿ ಕಾರ್ತಿಕ ಮಾಸ ಪೂರ್ತಿ ದೀಪಾರಾಧನೆಯನ್ನು ದೇವಾಲಯಗಳಲ್ಲಿ ನಡೆಸುತ್ತಾರೆ.

ಹೀಗೆ ಬೆಳಕಿನ ಹಬ್ಬ ದೀಪಾವಳಿ ಮಲೆನಾಡಿನಲ್ಲಿ ಸಾಮಾಜಿಕ, ಧಾರ್ಮಿಕ ತಳಹದಿಯೊಂದಿಗೆ ಬೆಸೆದುಕೊಂಡು ಕೃಷಿ ಕೆಲಸಕ್ಕೆ ಕೂಡ ಸ್ಫೂರ್ತಿ ಯಾಗಿದೆ.ಹಸಿರ ತವರು ಮಲೆನಾಡಿನಲ್ಲಿ ಈ ಹಬ್ಬ ವೈಶಿಷ್ಟ್ಯದಿಂದ ಆಚರಿಸಲ್ಪಡುತ್ತದೆ.

- ಸೌಮ್ಯ ಸಾಗರ

ಮುಂದೆ ಓದಿ

ರಾಜ್ಯ - ರಾಷ್ಟ್ರ

ನಮ್ಮ ಅಕ್ಕರೆಯ ಸನ್ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಡಿ. ವಿ. ಸದಾನಂದ ಗೌಡರು ತಮ್ಮಿಂದ ತಪ್ಪುಗಳಾದಾಗ ಎಚ್ಚರಿಸಿ ಎಂತ ಭಾಷಣಗಳಲ್ಲಿ ಹೇಳುತ್ತಿರುವುದರಿಂದ ನಾನೀಗ ಆ ಕೆಲಸವನ್ನು ಮಾಡುತ್ತಿದ್ದೇನೆ. ಪುತ್ತೂರಿನ ವಿವೇಕಾನಂದ ಆಂಗ್ಲ ಮಾಧ್ಯಮದ ಶಾಲೆಯ ಬೆಳ್ಳಿಹಬ್ಬದಲ್ಲಿ ದೀಪ ಬೆಳಗಿಸಿದ ಅವರು ತಾನು ಮುಖ್ಯ ಮಂತ್ರಿ ಆಗಿರುವಷ್ಟು ಕಾಲ ತನ್ನ ಒಂದು ತಿಂಗಳ ಸಂಬಳವನ್ನು ಆ ಶಾಲೆಗೆ ನೀಡುವುದಾಗಿ ಘೋಷಿಸಿದರು. ಜನರೆಲ್ಲಾ ಚಪ್ಪಾಳೆ ತಟ್ಟಿದರು. ಎಲ್ಲರಿಗೂ ಖುಷಿಯಾಯಿತು. ಆದರೆ ಇದು ಸರಿಯೆ ಎಂಬುದೀಗ ಪ್ರಶ್ನೆ. ಏಕೆಂದರೆ ಇದೊಂದು ತಪ್ಪು ಸಂದೇಶ ನೀಡಿದಂತಾಗುತ್ತದೆ.



ಸನ್ಮಾನ್ಯ ಮುಖ್ಯ ಮಂತ್ರಿಗಳ ಸಂಬಳ ಎಷ್ಟೆಂದು ನನಗೆ ಗೊತ್ತಿಲ್ಲ. ಅದು ಎಷ್ಟೇ ಇರಲಿ, ಒಂದೇ ರುಪಾಯಿ ಆಗಿರಲಿ. ಆದರೆ ಅವರಿಂದ ದೇಣಿಗೆ ಪಡೆಯುವುದೆಂದರೆ ಅದಕ್ಕೆ ಗೌರವ ಬೇರೆಯೆ ಇದೆ. ಇದೀಗ ಆ ಗೌರವವು ಒಂದು ಆಂಗ್ಲ ಮಾಧ್ಯಮ ಶಾಲೆಗೆ ಹೋಯಿತಲ್ಲಾ! ಇದು ಚಿಂತಿಸ ತಕ್ಕ ವಿಚಾರ. ಅದರ ಬದಲು ಅವರು ಅದೇ ವೇದಿಕೆಯಿಂದ ಅದೇ ಸಂಸ್ಥೆ ನಡೆಸುತ್ತಿರುವ 'ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ' ಕೊಡುತ್ತೇನೆಂದಿದ್ದರೆ ಕನ್ನಡಿಗರೆಲ್ಲ ಆನಂದಿಸ ಬಹುದಿತ್ತು. ಕರ್ನಾಟಕದ ಆಡಳಿತದ ಚುಕ್ಕಾಣಿ ಹಿದಿದ ಅವರು ನೀಡುವ ಒಳ್ಳೆಯ ಸಂದೇಶವಾಗುತ್ತಿತ್ತು. ಆದರೆ ನಮ್ಮ ಕರುನಾಡಿನ ಮುಖ್ಯ ಮಂತ್ರಿ ಕನ್ನಡದ ಕರುಳು ಹಿಂಡುತ್ತಿರುವ ಆಂಗ್ಲ ಮಾಧ್ಯಮಕ್ಕೆ ಶಕ್ತಿ ನೀಡುತ್ತಿರುವುದು ಎಂತಹ ವಿಪರ್ಯಾಸ! ಇದು ಎಡವಿದ್ದೇ ಅಲ್ಲವೇ? ಇದನ್ನು ಇನ್ನಾದರೂ ಸರಿಪಡಿಸ ಬಹುದು. ಮನಸ್ಸಿದ್ದರೆ ಕೊಡುವವರಿಗೂ ಪಡೆ0ುುವವರಿಗೂ ನಷ್ಟವಿಲ್ಲ.

- ಡಾ. ಚಂದ್ರಶೇಖರ ದಾಮ್ಲೆ, ಸುಳ್ಯ

ಮುಂದೆ ಓದಿ
2:29 PM

ನಾವೂ ಸೈ...

Posted by ekanasu

ರಾಜ್ಯ - ರಾಷ್ಟ್ರ

ಏನೇ ಹೇಳಿ ಈಗೀಗ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಮುಂದು...ಇದೀಗ ತೆಂಗಿನ ಮರವನ್ನೂ ನಾವು ಏರಬಲ್ಲೆವು ಎಂಬುದನ್ನು ಸಾಬೀತುಪಡಿಸಹೊರಟಿದ್ದಾರೆ. ಕಾಸರಗೋಡಿನ ಸಿ.ಪಿ.ಸಿ.ಆರ್.ಐ ನಲ್ಲಿ 17ಮಂದಿ ಮಹಿಳೆಯರು ಇದೀಗ ಈ ತರಬೇತಿ ಪಡೆಯುತ್ತಿದ್ದಾರೆ.







ಮುಂದೆ ಓದಿ

ದೀಪಾವಳಿ ಸ್ಪೆಷಲ್

ನೆನಪೆಂಬ ದೋಣಿಯಲ್ಲಿ ದೂರ ಪ್ರಯಾಣ? ಸಾಗರದಾಚೆಗೆ. ಮತ್ತೆ ಬರುವನೆಂದು ಇಲ್ಲ ಕಾತರಿ. ಅದೆಷ್ಟೊ ನಿರೀಕ್ಷೆಗಳನ್ನು ಹೊತ್ತು ಸಾಗುತಿತ್ತು ಪಯಣ. ಕಡಲಾಚೆ ಯಾರೂ ಇಲ್ಲ ಎಂಬ ನಂಬಿಕೆ, ಏನನ್ನೋ ನೋಡಲು ಹೊರಟಿಲ್ಲ, ಕೇವಲ ನೆಮ್ಮದಿಗಾಗಿ? ಆಗೊಮ್ಮೆ ಈಗೊಮ್ಮೆ ನನ್ನ ಹಿಂದೆ ಆ ಪುಟ್ಟ ಮೀನೊಂದು ಬರುತ್ತಲೇ ಇತ್ತು. ಏನೋ ಕುತೂಹಲ, ಮಗದೊಮ್ಮೆ ಮನಸ್ಸಿನಲ್ಲಿ ನಿರೀಕ್ಷೆ,.. ಆದರೂ ಅದು ನನಗೆ ನೆಮ್ಮದಿ ತಂದಿಲ್ಲ, ನನ್ನ ಸಮೀಪದಲ್ಲೆ ಅವರ ಪಯಣ ಸಾಗುತಿತ್ತು?ಅವರಿಬ್ಬರೂ ಖುಷಿಯಿಂದಲೇ ನಗುತ್ತಿದ್ದಾರೆ.


ಅವರವರ ಪಾಡಿಗೆ, ನಾನೂ ನಗುತ್ತಿದ್ದೆ, ಆದರೆ ಅವರಿಗಾಗಿ ಅಲ್ಲ, ನನಗಾಗಿ ನಾನು ಕಂಡಿದ್ದ ಕನಸಿನ ನೆನಪಿಗಾಗಿ. ಆ ಸೂರ್ಯನೂ ಕೂಡಾ ನಗುತ್ತಿದ್ದ, ನನ್ನ ಮುಖವನ್ನು ನೋಡಿ, ನಾನು ಕನಸಿನಲ್ಲಿ ಕಂಡಿದ್ದ ಪುಟ್ಟ ಗುಬ್ಬಿಯು ಇನ್ನೊಬ್ಬರ ಮಡಿಲಿನಲ್ಲಿ ಸ್ವಚ್ಚಂದವಾಗಿ ಮಲಗಿರುವುದನ್ನು ಕಂಡು,, ಅದು ಕನಸು ಎಂದು ನನಗರಿವಾಗಿರಲಿಲ್ಲ.


ಆ ಕನಸು ನನಸಾಗಬೇಕ ಬಯಸಿದ್ದು ನನ್ನ ದಡ್ಡತನ. ಸಾವರ ಸಾವಿರ ಮರಳ ಹೆಜ್ಜೆಯಲ್ಲೂ ನಿನ್ನ ಹೆಜ್ಜೆಯನ್ನು ಹುಡುಕಬಯಸಿದ್ದೆ. ಆ ಹೆಜ್ಜೆಯ ಸ್ಪರ್ಶದಲ್ಲಿ ನಿನ್ನ ಗೆಜ್ಜೆಯ ಸದ್ದನ್ನು ನಾ ಕಂಡಿದ್ದೆ? ಕನಸೋ? ನನಸೋ? ಮನಸ್ಸಿನಲ್ಲಿ ಮೂಡಿಬಂದ ಕನಸಿನ ಮಾತಿನೊಂದಿಗೆ ನೆನಪಿನ ಬುಟ್ಟಿಯಲ್ಲಿ ನಿನ್ನ ಪ್ರೀತಿಯನ್ನು ನಾ ಬಯಸಿದ್ದೆ. ನಿಜವಾದ ಪ್ರೀತಿಯನ್ನು ನನ್ನಿಂದ ಕೊಡಲಾಯಿತೇ ಹೊರತು ಅವರಂತೆ ಪ್ರೀತಿಯನ್ನು ತೋರ್ಪಡಿಸಲು ನನಗೆ ತಿಳಿಯಲಿಲ್ಲ.

ನಾ ಪ್ರೀತಿಯಿಂದ ಸಾಕಿದ ಪುಟ್ಟ ಗುಬ್ಬಿ ಮರಿ ನನ್ನಿಂದ ದೂರಕ್ಕೆ ಸಾಗಿ ಹಾರಿ ಹೋಯಿತು ಎಂದು ಬಾವಿಸಲೇ? ಆ ನನ್ನ ಪುಟ್ಟ ಗುಬ್ಬಿಮರಿಗೆ ಆಶ್ರಯ ನೀಡಲು ಅನೇಕ ವ್ರಕ್ಷಗಳೇ ಇರಬಹುದು. ಆದರೆ ನನಗಾರು? ಕೇವಲ ಆ ನನ್ನ ಗುಬ್ಬಿಮ ರಿ ಇಂದು ಬರುವುದೋ ನಾಳೆ ಬರುವುದೋ ಎಂದು ಒಂದು ಸಣ್ಣ ನಿರೀಕ್ಷೆ ಅಷ್ಟೆ?

- ಸನತ್ ಕುಮಾರ್

ಮುಂದೆ ಓದಿ

ದೀಪಾವಳಿ ಸ್ಪೆಷಲ್

ಬೆಳಕಿನ ಹಬ್ಬ ದೀಪಾವಳಿಯ ಸಡಗರದಲ್ಲಿ...
ಬೆಳಕಿನ ಹಬ್ಬ ದೀಪಾವಳಿಯನ್ನು ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತಿದೆ. ದೀಪ ಸಮೃದ್ದಿ ಮತ್ತು ಪ್ರಗತಿಯ ಸಂಕೇತ. ಎಲ್ಲೆಡೆ ಆಕಾಶಬುಟ್ಟಿಗಳ ಮಾರಾಟ ಭರ್ಜರಿಯಿಂದ ನಡೆಯುತ್ತದೆ. ಎಲ್ಲಾ ಅಂಗಡಿಗಳು ಈ ಬುಟ್ಟಿಗಳಿಂದ ರಾರಾಜಿಸುತ್ತವೆ. ಬಣ್ಣ ಬಣ್ಣಗಳಿಂದ ತುಂಬಿ ತುಳುಕುತ್ತಿದೆ. ದೀಪದಿಂದ ದೀಪವನ್ನು ಹಚ್ಚಿ ಪ್ರಗತಿಯತ್ತ ಮುನ್ನುಗ್ಗುವುದು ಈ ಹಬ್ಬದ ಸಂಕೇತ. ಜಾತಿ ಮತ ನೊಡದೇ ಎಲ್ಲರೂ ಕೂಡಿ ಈ ಹಬ್ಬವನ್ನ ಸಂಭ್ರಮ ಹಾಗೂ ಸಡಗರದಿಂದ ದೇಶಾದ್ಯಂತ ಆಚರಿಸಲಾಗುತ್ತಿದೆ. ಪ್ರಮುಖವಾಗಿ ಮೂರು ದಿನಗಳ ಕಾಲ ಈ ಹಬ್ಬವನ್ನು ಆಚರಿಸಲಾಗುತ್ತದೆ. ನರಕ ಚತುರ್ದಶಿಯಿಂದ ಆರಂಭವಾಗಿ ಬಲಿಪಾಡ್ಯಮಿಯ ದಿನ ಮುಕ್ತಾಯಗೊಳ್ಳುತ್ತದೆ.



ರಾಕ್ಷಸ ನರಕಾಸುರನ ಸಂಹಾರವಾದ ಆ ದಿನವನ್ನು ನರಕ ಚತುರ್ದಶಿ ಎಂದು ಕರೆಯಲಾಗುತ್ತದೆ. ಅಂದು ಹಿಂದುಗಳಿಗೆ ಪವಿತ್ರ ದಿನ ರಾಕ್ಷಸನ ಸಂಹಾರ ಆದ ಕಾರಣ ಪವಿತ್ರ ಸ್ನಾನ ಮಾಡಿ ಮೊದಲು ಸಿಹಿ ತಿನ್ನಲಾಗುತ್ತದೆ. ಕರ್ನಾಟಕದ ಹಲವು ಭಾಗಗಲ್ಲಿ ವಿಶೇಷವಾಗಿ ಆ ದಿನಕ್ಕೆಂದೇ ಕಜ್ಜಾಯವನ್ನು ತಯಾರಿಸಲಾಗಿರುತ್ತದೆ. ಇದು ಮೊದಲ ದಿನದ ವಿಶೇಷತೆ ಆದರೆ, ಎರಡನೇ ದಿನ ಅಮವಾಸ್ಯೆ ಅಂದು ಮಾತಾ ಶ್ರೀ ಲಕ್ಷ್ಮೀ ದೇವಿಯ ಆರಾಧನೆ ಮಾಡಲಾಗುತ್ತದೆ. ಪ್ರತಿ ಮನೆಯಿಂದ ಹಿಡಿದು ದೊಡ್ಡ ಕಂಪನಿಗಳವರೆಗೆ ಮಾತೆಯ ಆರಾಧನೆ ನಡೆಸಲಾಗುತ್ತದೆ.


ಮೂರನೇ ದಿನ ಬಲಿಪಾಡ್ಯಮಿ. ದೀಪಾವಳಿ ಹಬ್ಬದ ಪ್ರಮುಖ ದಿನ. ಈ ದಿನದ ವೈಶಿಷ್ಟ್ಯ ಎಂದರೆ, ಹಿಂದೆ ಬಲಿ ಚಕ್ರವರ್ತಿ ಎಂಬ ಮಹರಾಜ ಬಹಳ ಸುಭೀಕ್ಷೆಯಿಂದ ರಾಜ್ಯಭಾರವನ್ನು ಮಾಡುತ್ತಿರುತ್ತಾನೆ. ಬಹಳ ದಾನವಂತನಾದ ಈತ ಯಾರು ಏನೇ ಕೇಳಿದರೂ ಇಲ್ಲ ಎಂದು ಹೇಳುತ್ತಿರಲಿಲ್ಲ. ಇದನ್ನು ಕಂಡ ದೇವತೆಗಳಿಗೆ ಇವನ ಮೇಲೆ ಅಸೂಹೆ ಹುಟ್ಟುಕೊಳ್ಳುತ್ತದೆ. ಆಗ ಮಹಾ ವಿಷ್ಣು ಈತನಲ್ಲಿಗೆ ಬ್ರಾಹ್ಮಣನ ವೇಷದಲ್ಲಿ ಬಂದು ಎಲೈ ಬಲಿ ಚಕ್ರವರ್ತಿಯೇ, ನಾನು ನನ್ನ ಮೂರು ಪಾದಗಳನ್ನಿಡಲು ಇಚ್ಛಿಸಿದ್ದೇನೆ.



ಒಂದನ್ನು ಆಕಾಶದಲ್ಲಿ ಇಟ್ಟಿದ್ದೇನೆ ಇನ್ನೊಂದನ್ನು ಭೂಮಿಯ ಮೇಲೆ ಇಟ್ಟಿದ್ದೇನೆ ಮೂರನೇ ಪಾದವನ್ನು ಎಲ್ಲಿ ಇಡಲಿ ಎಂದು ಕೇಳಿದಾಗ, ನಿಸ್ವಾರ್ಥ ಚಕ್ರವರ್ತಿ ವಿಷ್ಣುವಿಗೆ ತನ್ನ ತಲೆಯ ಮೇಲಿಡಲು ಹೇಳುತ್ತಾನೆ. ಇದೇ ಸಮಯಕ್ಕಾಗಿ ಕಾದು ಕುಳಿತಿದ್ದ ಶ್ರೀ ವಿಷ್ಣು ತನ್ನ ಪಾದವನ್ನು ಚಚಕ್ರವರ್ತಿಯ ತಲೆಯ ಮೇಲಿಡುತ್ತಾನೆ. ತಕ್ಷಣವೇ ಚಕ್ರವರ್ತಿ ಪಾತಾಳಕ್ಕೆ ಹೋಗುತ್ತಾನೆ. ಆಗ ವಿಷ್ಣುವಿನಲ್ಲಿ ಪ್ರಾರ್ಥಿಸಿ ಸ್ವಾಮಿ, ವರ್ಷದಲ್ಲಿ ಒಮ್ಮೆಯಾದರೂ ನನ್ನ ಪ್ರಜೆಗಳನ್ನು ಹಾಗೂ ರಾಜ್ಯವನ್ನು ನೋಡಲು ಅವಕಾಶ ಮಾಡಿ ಕೊಡು ಎಂದಾಗ, ವಿಷ್ಣುವು ದೀಪಾವಳಿಯ ಬಲಿಪಾಡ್ಯಮಿಯ ದಿನ ಬಲೀಂದ್ರನ ರೂಪದಲ್ಲಿ ಬಂದು ಹೋಗು ಎಂದು ಆಶೀರ್ವದಿಸುತ್ತಾನೆ. ಅಂತೆಯೇ ಪ್ರತೀ ದೀಪಾವಳಿಯ ಬಲಿಪಾಡ್ಯಮಿಯ ದಿನ ಸಗಣಿಯಲ್ಲಿ ಬಲೀಂದ್ರನನ್ನು ಮಾಡಿ ಪೂಜೆ ಸಲ್ಲಿಸಲಾಗುತ್ತಿದೆ.

ಹೀಗೆ ಹಲವು ರೀತಿಗಳಲ್ಲಿ ದೀಪಾವಳಿಯನ್ನು ನಾಡಿನೆಲ್ಲೆಡೆ ಆಚರಿಸಲಾಗುತ್ತಿದೆ. ಎಲ್ಲಾ ದೇವಾಲಯಗಳು, ಅಂಗಡಿ ಮುಂಗಟ್ಟುಗಳು ದೀಪಾಲಂಕೃತದಿಂದ ಕಂಗೊಳಿಸುತ್ತಿವೆ. ಎಲ್ಲರಿಗೂ ಈ ದೀಪಾವಳಿ ಹಬ್ಬ ಸಕಲ ಐಶ್ವರ್ಯ ಆರ್ಯೋಗ್ಯವನ್ನಿಡಲಿ ಎಂದು ಪ್ರಾರ್ಥಿಸುತ್ತಿದ್ದೇವೆ.

- ದರ್ಶನ್ ಬಿ.ಎಂ
ದ್ವಿತೀಯ ಬಿ.ಎ ಪತ್ರಿಕೋದ್ಯಮ
ಆಳ್ವಾಸ್ ಕಾಲೇಜು
ಮೂಡುಬಿದಿರೆ.

ಮುಂದೆ ಓದಿ

ದೀಪಾವಳಿ ಸ್ಪೆಷಲ್

ದೀಪಾವಳಿ ದೀಪಗಳ ಹಬ್ಬ . ನಮ್ಮ ಮಲೆನಾಡಿನಲ್ಲಿ ಅಳಿಯನ ಹಬ್ಬ ಎಂದೇ ಕರೆಯುತ್ತಾರೆ . ನಮ್ಮಲ್ಲಿ ಒಂದು ಸಂಪ್ರದಾಯವಿದೆ.ಹೊಸದಾಗಿ ಮದುವೆಯಾದ ಮಗಳು ಅಳಿಯ ಅಂದು ತವರುಮನೆಗೆ ಹೋಗಿ ಹಬ್ಬ ಆಚರಿಸಬೇಕು.ಅದು ಮದುಮಕ್ಕಳಿಗೆ ಹೊಸಹಬ್ಬ .ಮಗಳು ಅಳಿಯ ಬರುತ್ತಾರೆ ಎಂದು ತಂದೆತಾಯಿಗೆ ಎಲ್ಲಿಲ್ಲದ ಹರ್ಷ.ಮನೆಯಬಾಗಿಲು ಗಳಿಗೆ ಹಸಿರು ತೋರಣ ಕಟ್ಟಿ ಸಂತೋಷದಿಂದ ಪ್ರಾರಂಭಿಸುತ್ತಾರೆ.ಮನೆಯ ಮುಂದೆ ರಂಗೋಲಿ ಇಟ್ಟು ಶುಭಾಶಯ ಕೋರುತ್ತಾರೆ ಆ ದಿನ ಬೆಳಿಗ್ಗೆ ಮಗಳು ಅಳಿಯನಿಗೆ ಎಣ್ಣೆ ಅರಿಶಿನ ಹಾಕಿ ಅಭ್ಯಂಜನ ಮಾಡಿಸುತ್ತಾರೆ.ಹಬ್ಬಕ್ಕೆ ಉಡುಗೊರೆಯಾಗಿ ಹೊಸ ವಸ್ತ್ರವನ್ನು ನೀಡಿ ಸಂಭ್ರಮಿಸುತ್ತಾರೆ.


ದೇವರ ಕೋಣೆಯಲ್ಲಿ ದೀಪಗಳನ್ನು ಹಚ್ಚುವುದರಿಂದ ಪ್ರಾರಂಭಿಸಿ ಮನೆಯ ಹೊರಗಿನ ಮೆಟ್ಟಿಲು ಗಳವರೆಗೆ ದೀಪಗಳ ಸಾಲು ಅಲಂಕಾರಮಾಡಲಾಗುತ್ತದೆ.ಅಳಿಯ ಬಂದಿರುವ ಸಂತಸದಲ್ಲಿ ಹೋಳಿಗೆ ,ಕಡುಬು,ಕೋಸಂಬರಿ,ಚಿತ್ರಾನ್ನ,ಪಾಯಸ,ಚಕ್ಕುಲಿ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.ಗೋವುಗಳಿಗೆ ನವ ಮದುಮಕ್ಕಳಿಂದ ಆರತಿ ಎತ್ತಿಸುತ್ತಾರೆ.ಸಂಜೆಯಾಯಿತೆಂದರೆ ಸಾಕು ಬಾಸಿಂಗ ಕಟ್ಟಿಕೊಂಡ ಜೋಡಿ ಎತ್ತುಗಳನ್ನು ಓಡಿಸಿಕೊಂಡು ಎಲ್ಲರ ಮನೆಗೆ ಹೋಗುವುದು ಅಲ್ಲಿ ಅವುಗಳಿಗೆ ನೀಡಲಾದ ತಿಂಡಿ ತೆಗೆದುಕೊಳ್ಳುವುದು , ಅದಾದ ನಂತರ ದೀಪ ಹಚ್ಚಿಕೊಂಡು ಎಲ್ಲರ ಊರಿನವರೆಲ್ಲ ಒಟ್ಟು ಸೇರಿ ಊರಲ್ಲಿರುವ ಬೂತಪ್ಪ ಚೌಡಪ್ಪ ಗಳಿಗೆ ದೀಪ ಇಟ್ಟು ಬರುವುದು ಇದೆಲ್ಲ ಸುಂದರವಾಗಿರುತ್ತದೆ.ಇನ್ನು ಚಿಕ್ಕಮಕ್ಕಳಿದ್ದರಂತು ಹೊಸಬಟ್ಟೆ ಧರಿಸಿ ಎಲ್ಲರಿಗೂ ತೋರಿಸುವುದೆಂದರೆ ಎಲ್ಲಿಲ್ಲದ ಹಿಗ್ಗು . ಜೊತೆಗೆ ಪಟಾಕಿಗಳ ಭರಾಟೆ.


ರಾತ್ರಿ ಪಟಾಕಿಗಳ ಸುರಿಮಳೆ ಆ ಸಮಯಕ್ಕೆ ಸರಿಯಾಗಿ ಎಲ್ಲರ ಮನೆಯವರೂ ಹೊರಬಂದು ನೋಡುವ ಸಂಭ್ರಮವೇ ಚಂದ .ಆ ದಿನ ನೆಂಟರಿಷ್ಟರಿಂದ ಚಿಕ್ಕ ಮಕ್ಕಳ ಗದ್ದಲ ಗಳಿಂದ ತುಂಬಿರುವ ಎಲ್ಲರ ಮನೆಗಳಲ್ಲಿ ಸಂಭ್ರಮವೋ ಸಂಭ್ರಮ.ಹೀಗೆ ದೀಪಾವಳಿ ಹಬ್ಬವೆಂದರೆ ಹೊಸಹರುಷ , ಸಂತಸ, ಸಂಭ್ರಮದಿಂದ ಕೂಡಿರುತ್ತದೆ.
ಇನ್ನೇನು ದೀಪಾವಳಿ ಹತ್ತಿರ ಬರುತ್ತಿದೆ.ದೂರದಲ್ಲಿರುವುದರಿಂದ ಮೊದಲ ಹೊಸಹಬ್ಬಕ್ಕೆ ತವರೂರಿಗೆ ಹೋಗಲಾಗುತ್ತಿಲ್ಲ.ನನ್ನ ತವರೂರಿಗೆ ಬಂಧುಗಳಿಗೆ,ಸ್ನೇಹಿತರಿಗೆ ಶುಭಾಶಯಗಳು .ದೀಪಾವಳಿ ಎಲ್ಲರ ಬಾಳಲ್ಲಿ ಬೆಳಕನ್ನು ತರಲಿ.


- ಅರ್ಪಿತಾ ಹರ್ಷ.

ಮುಂದೆ ಓದಿ

ಈ ಕನಸು.ಕಾಂ ಸಂಡೇ ಸ್ಪೆಷಲ್




ಹೌದು... ಜಲಧಾರೆಗಳ ನಾಡು ದೇಗುಲಗಳ ಬೀಡೆಂದು ದೊಡ್ಡದೊಡ್ಡ ಫಲಕಹಾಕಿರೋ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಸ್ವಕ್ಷೇತ್ರವಾಗಿರೋ ಶಿವಮೊಗ್ಗ ಜಿಲ್ಲೆಯ ವ್ಯಾಪ್ತಿಯಲ್ಲಿರುವ ತಾವರೆಕೊಪ್ಪ ಹುಲಿ - ಸಿಂಹ ಧಾಮದಲ್ಲಿರುವ ಪ್ರಾಣಿಗಳು "ಸೇಫ್" ಆಗಿಲ್ಲ!!!
ಖಂಡಿತ ಅಚ್ಚರಿಯಾಗೋದ್ರಲ್ಲಿ ಸಂದೇಹವೇ ಇಲ್ಲ. ತಾವರೆಕೊಪ್ಪ ಹುಲಿ ಸಿಂಹ ಧಾಮದಲ್ಲಿ ಫಾರೆಸ್ಟ್ ಆಫೀಸರ್ ಎಚ್.ಆರ್ .ಹೀರೇಮಟ್ ಪ್ರಕಾರ 12ಹುಲಿಗಳಿವೆ.ಆ ಪೈಕಿ 7ಹೆಣ್ಣು .ಉಳಿದವು ಗಂಡು.4 ಸಿಂಹಗಳಿವೆ. ಆ ಪೈಕಿ 1ಮಾತ್ರ ಗಂಡು .ಮಿಕ್ಕವು ಹೆಣ್ಣು. ಉಳಿದಂತೆ 20 ಪ್ರಬೇಧಗಳ ವೈವಿಧ್ಯಮಯ ಪ್ರಾಣಿಗಳಿವೆ. ಒಂದಷ್ಟು ಪಕ್ಷಿಗಳೂ ಇವೆ. ದಿನಂಪ್ರತಿ ದೂರದೂರುಗಳಿಂದ ಪ್ರವಾಸಿಗರು ಈ ಧಾಮ ವೀಕ್ಷಣೆಗೆ ಆಗಮಿಸುತ್ತಾರೆ.ವಿದೇಶೀ ಪ್ರವಾಸಿಗರೂ ಬರ್ತಾರೆ. ಈ ಧಾಮದ ಒಳ ಪ್ರವೇಶಿಸಬೇಕಾದರೆ ಒಬ್ಬರಿಗೆ ರು.50 ಪ್ರವೇಶ ಶುಲ್ಕ. ಕ್ಯಾಮರಾ ಇದ್ದರೆ ಅದಕ್ಕೆ ಹೆಚ್ಚುವರಿ.ಸಫಾರೀ ಹೋಗೋದಾದ್ರೆ ಮತ್ತೆ 50ರು.ಕ್ಯಾಮರಾಕ್ಕೆ ಬೇರೆ.ಇರಲಿ...




ಆದ್ರೆ ವಿಷ್ಯಾ ಇರೋದು ಅದಲ್ಲ.ಸುಮಾರು 250 ಹೆಕ್ಟೇರ್ ಪ್ರದೇಶದಲ್ಲಿ ತಾವರೆಕೊಪ್ಪ ಹುಲಿ - ಸಿಂಹ ಧಾಮ ಇದೆಯಾದರೂ ಆ ಪ್ರಾಣಿಗಳು ಇಲ್ಲಿ ಸೇಫಾಗಿಲ್ಲ ಎಂಬ ಭಾವನೆ ಪ್ರವಾಸಿಗರಲ್ಲಿ ಮೂಡೋದು ಸಹಜ. ಸಫಾರೀ ವಾಹನದಲ್ಲಿರುವ ಈ ಧಾಮದ ಸಿಬ್ಬಂದಿಯ ಪ್ರಕಾರ ಇಲ್ಲಿ ಒಂದೇ ಒಂದು ಸಿಂಹ ಇದೆ.ಅದೂ ಹೆಣ್ಣು ಸಿಂಹ.ಪ್ರಾಯ 19ವರುಷ.

ಆ ಸಿಂಹವನ್ನು ನೋಡಿದ್ರೆ ಇನ್ನೇನು ಇಂದೋ... ನಾಳೆಯೋ ಎಂಬಂತಾಗಿದೆ. ಅದರ ಹಿಂಭಾಗದಲ್ಲಿ ದೊಡ್ಡದಾದ ಗಾಯವೊಂದಾಗಿದೆ.ನೋವಿನಿಂದ ನರಕ ಯಾತನೆ ಅನುಭವಿಸುತ್ತಿದೆ. ಇಲ್ಲಿರೋ ಹುಲಿಗಳ ಪೈಕಿ ದೊಡ್ಡ ಹುಲಿಯೊಂದರ ಎಡ ಭುಜದಲ್ಲಿ ಬೃಹತ್ ಗಾಯವಾಗಿದ್ದು ಅದರ ಆರೋಗ್ಯ ಸ್ಥಿತಿಯೂ ಅಷ್ಟೊಂದು ಉತ್ತಮವಾಗಿದೆ ಎಂದರೆ ನಂಬಲಾಗುತ್ತಿಲ್ಲ.



ಪ್ರಾಣಿಗಳಿಗೆ ಸೂಕ್ತ ಚಿಕಿತ್ಸೆ ನೀಡುವ ಸಲುವಾಗಿ ಆಸ್ಪತ್ರೆ ಈ ಧಾಮದೊಳಗಿದೆ. ಮಾಂಸಾಹಾರಿ ಪ್ರಾಣಿಗಳಿಗೆ ಸೂಕ್ತ ಆಹಾರ ಕಾಲ ಕಾಲಕ್ಕೆ ನೀಡಲಾಗುತ್ತದೆ ಎಂಬ ಮಾತು ಫೋರೆಸ್ಟ್ ಆಫೀಸರ್ ಅವರಿಂದ ದೊರಕುತ್ತಿದೆ.

ಒಟ್ಟಿನಲ್ಲಿ ಈ ಧಾಮ ವನ್ಯಪ್ರಾಣಿಗಳಿಗೆ ಅಷ್ಟಾಗಿ "ಸೇಫ್" ಆಗಿಲ್ಲ ಎಂಬುದಂತೂ ಸತ್ಯ.

ಮುಂದೆ ಓದಿ
5:12 PM

ಭೀಕರ ಅಪಘಾತ

Posted by ekanasu

ರಾಜ್ಯ - ರಾಷ್ಟ್ರ
ರಾ.ಹೆ.4 ಹುಬ್ಬಳ್ಳಿ - ಬೆಂಗಳೂರು ರಸ್ತೆಯ ಹೊನ್ನಾಪುರ ಎಂಬಲ್ಲಿ ಸ್ಕಾರ್ಫಿಯೋ ವಾಹನವೊಂದು ಭೀಕರ ದುರಂತಕ್ಕೀಡಾಗಿದೆ. ವಾಹನದಲ್ಲಿ 7ಮಂದಿ ಪ್ರಯಾಣಿಕರಿದ್ದು ಎಲ್ಲರೂ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ.ವಾಹನದ ಚಕ್ರ ತುಂಡಾಗಿ ರಸ್ತೆಯಲ್ಲಿ ಕವಚಿ ಬಿದ್ದಿದೆ.ತಡಸ್ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.ಮಗೇಶ್ ಎಂಬವರಿಗೆ ಸೇರಿದ ವಾಹನ ಇದಾಗಿತ್ತು.

ಮುಂದೆ ಓದಿ

ಈ ಕನಸು ಅವಾರ್ಡ್


'ನಾನೊಬ್ಬ ನಿದ್ದೆಯ ಮಾಡಿದರೆ
ಅದು ನನ್ನೊಬ್ಬನ ಸುಖಕೆ
ನಾನೊಬ್ಬನೆಚ್ಚೆತ್ತು ದುಡಿಯುವುದಾದರೆ
ಅದು ಬೇರೊಬ್ಬನ ಹಿತಕೆ'




ಈ ಕವಿವಾಣಿಯು ನಮ್ಮಿಂದ ಸಮಾಜಕ್ಕೆ, ದೇಶಕ್ಕೆ ಏನು ಸೇವೆ ಆಗಬೇಕಿದೆ ಎಂಬುದರ ಬಗ್ಗೆ ಸಾರಿ ಹೇಳುತ್ತದೆ. ನಮ್ಮದು ಕೃಷಿ ಪ್ರಧಾನವಾದ ದೇಶ. ನಾಡಿನ 70% ಜನ ಕೃಷಿಯನ್ನು ಅವಲಂಬಿಸಿ ಬದುಕುತ್ತಿದ್ದಾರೆ. ಈ ಕೃಷಿಕರೆ ಮಣ್ಣಗೆ ಬೆವರಿನ ಹನಿ ಹರಿಸಿದಲ್ಲಿ ಮಾತ್ರ ನಾವು ಉಣ್ಣಬಹುದು.




ಆದರೆ ಈಗಿನ ಈ ನಮ್ಮ ಸಮಾಜ ಕೃಷಿಕರನ್ನು ಮರೆಮಾಡುತ್ತಿದೆ. ವಿಜ್ಞಾನ-ತಂತ್ರಜ್ಞಾನ ಮುಂತಾದ ಕ್ವ್ಷತ್ರಗಳಲ್ಲಿ ಸಾಕಷ್ಟು ಉದ್ಯೋಗವಕಾಶಗಳು ಸೃಷ್ಟಿಯಾಗುತ್ತದೆ. ಜನ ಆಧುನಿಕತೆಯತ್ತ ವಾಲುತ್ತಿದ್ದಾರೆ. ಕೃಷಿಯನ್ನು ಮರೆಯುತ್ತಿದ್ದಾರೆ. ಈಗಿನ ಮಕ್ಕಳಿಗಂತೂ ಇದರ ಬಗ್ಗೆ ಏನೂ ಅರಿವಿಲ್ಲ. ಮಕ್ಕಳನ್ನು ಸಾಕಷ್ಟು ಓದಿಸಿ ದೂರದ ಊರಿಗೆ ವಲಸೆ ಹೋಗುತ್ತಿದ್ದಾರೆ. ಹಳ್ಳಿಗಳು ನಗರಗಳಾಗುತ್ತಿದೆ. ಹಳ್ಳಿಯೇ ಕೃಷಿಗೆ ಮೂಲ ಹೀಗಿರುವಾಗ ಇವು ಪಟ್ಟಣಗಳಾಗಿ ಜನ ನಗರ ವೈಭವಯುತ ಬದುಕಿಗೆ ಮಾರು ಹೋಗುತ್ತಿದ್ದಾರೆ.

ಇತ್ತಿಚಿನ ದಿನಗಳಲ್ಲಿ ಹಿಂದಿನಂತೆ ಕೃಷಿ ಕಾಯಕವೇ ಪವಿತ್ರ ಕಾರ್ಯವೆಚಿದು ತಿಳಿದು ದುಡಿಯುವ ಸಂಖ್ಯೆ ಬಹಳಷ್ಟು ವಿರಳವಾಗಿದೆ. ಹೀಗಿರುವ ಪರಿಸ್ಥಿತಿಯಲ್ಲಿ ಕೃಷಿ ಕಾಯಕದ ಪವಿತ್ರತೆಯ ಬಗ್ಗೆ ಅರಿವನ್ನು ಮೂಡಿಸಬೇಕಾಗಿದೆ. ಈ ಕಾರ್ಯ ಚಿಗುರುತ್ತಿರುವ ಮೊಳಕೆಯಲ್ಲೇ ಅರಳಿದರೆ ಸೂಕ್ತವಲ್ಲವೇ? ಹೌದು . ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಸಮಕ್ಷಮದಲ್ಲಿ ನಡೆಯುತ್ತಿದೆ.
ರತ್ನವರ್ಮ ಹೆಗ್ಗಡೆಯವರ ಕನಸಿನ ಕೂಸು 'ರತ್ನಮಾನಸ' ಎಂಬ ಶಿರೋನಾಮೆಯಡಿ 1973ರಲ್ಲಿ ತಲೆಎತ್ತಿ ನಿಂತಿತು. ಇದೊಂದು ಜೀವನ ಶಿಕ್ಷಣ ಪ್ರಯೋಗಶಾಲೆಯಾಗಿ ಆರಂಭಗೊಂಡಿತು. 'ವಿದ್ಯಾರ್ಥಿಯೊಬ್ಬನನ್ನು ಸ್ವಾವಲಂಬಿಯಾಗಿ ಶಾರೀರಿಕವಾಗಿ, ಭೌಧ್ಧಿಕವಾಗಿ, ಭಾವನಾತ್ಮಕವಾಗಿ ಮತ್ತು ಆಧ್ಯಾತ್ಮಿಕವಾಗಿ ಸಜ್ಜುಗೊಳಿಸುವ ಶಿಕ್ಷಣವೇ ನಿಜವಾದ ಶಿಕ್ಷಣ. ಶಿಕ್ಷಣದಲ್ಲಿ ನೈತಿಕತೆ ತುಂಬಾ ಮುಖ್ಯ ಎಂಬುದು ಅವರ ಕಲ್ಪನೆಯಾಗಿತ್ತು ಇದರಿಂದಲೇ ಗ್ರಾಮಾಂತರದಿಂದ ಪಟ್ಟಣ ಪ್ರದೇಶದ ವಿದ್ಯಾರ್ಥಿಗಳಿಗೆ ಇಲ್ಲಿ ಫ್ರೌಢಶಿಕ್ಷಣದ ಜೊತೆಗೆ ಸಮಗ್ರ ಕೃಷಿ ಅರಿವನ್ನೂ, ಸ್ವಾವಲಂಬನೆ ಮತ್ತು ಆತ್ಮವಿಶ್ವಾಸದ ಮಂತ್ರವನ್ನು ತನ್ನ ತನ್ನಲ್ಲಿ ಅಳವಡಿಸಿಕೊಳ್ಳುವಂತೆ ಮಾಡುವುದೇ ರತ್ನಮಾನಸದ ಧ್ಯೇಯವಾಗಿದೆ.

ಗೇಟ್ ದಾಟಿ ಮುಂದಡಿ ಇಟ್ಟಾಗ ಪ್ರಕೃತಿಮಾತೆ ಹಸಿರು ಸೀರೆ ತೊಟ್ಟಂತ ಅನುಭವ, ಎಲ್ಲೆಲ್ಲೂ ಹಚ್ಚಹಸುರಿನ ತೋರಣ. ಒಳಗಡಿಯಿಟ್ಟಾಗ ಯಾವುದೋ ಹಳ್ಳಿಗೆ ಹೋದೆವೇನೋ ಎಂಬಂತೆ ಭಾಸವಾಗುತ್ತದೆ. ಸುತ್ತಲೂ ಉಪಯುಕ್ತವಾದ ಗಿಡಬಳ್ಳಿ, ವಿಧ ವಿಧವಾದ ತರಕಾರಿ, ಗೆಡ್ಡೆ-ಗೆಣಸುಗಳು, ಸೊಪ್ಪು ತರಕಾರಿಗಳು, ಈಗಿನ ಕಾಲದಲ್ಲಿ ಎಲ್ಲೂ ಕಾಣದ ಹಣ್ಣು-ಹಂಪಲುಗಳು ಇವೆಲ್ಲವೂ ಇಲ್ಲಿನ ರತ್ನಗಳಿಂದಲೇ ನಿರ್ಮಿತವಾದ ಒಂದು ಪುಟ್ಟ ಪ್ರಪಂಚ. ಇಷ್ಟೇ ಯಾಕೆ ಇಲ್ಲಿನ ಎಲ್ಲಾ ದಿನಚರಿ ಕಾರ್ಯವೂ ಇವರಿಂದಲೇ ಆರಂಭ. ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತುಕೊಂಡು, ಇವರು ಯಾರನ್ನೂ ಯಾವ ಕೆಲಸಕ್ಕೂ ಅವಲಂಬಿಸಿಲ್ಲ.

ಈ ಸಂಸ್ಥೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವ ಪ್ರತೀ ವಿದ್ಯಾರ್ಥಿಯು 3 ವರ್ಷದ ಅವಧಿಯಲ್ಲಿ ಅಚಿದರೆ 8-10ನೇ ತರಗತಿಯವರೆಗೆ ವಸತಿ ಸೌಲಭ್ಯದೊಂದಿಗೆ, ಫ್ರೌಢಶಿಕ್ಷಣ, ಕೃಷಿ ಮತ್ತು ಕೃಷಿಯೇತರ ಚಟುವಟಿಕಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳವಲ್ಲಿ ಯಶಸ್ವಿಯಾಗುತ್ತಾರೆ. ಮುಂಜಾನೆ 5ರಿಂದ ಇವರ ದಿನಚರಿ ಪ್ರಾರಂಭವಾಗುತ್ತದೆ. ಅಲ್ಲಿಂದ ನಿತ್ಯವೈಖರಿ ಮುಗಿಸಿ, ಪ್ರಾರ್ಥನೆ, ಯೋಗಾಭ್ಯಾಸ ಪೂರೈಸಿ ತಮಗೆ ನೀಡಿದ ಕೆಲಸಕ್ಕಾಗಿ ತೆರಳುತ್ತಾರೆ. ಇಲ್ಲಿರುವ ಹಲವು ಕೃಷಿಗಳು , ಅವುಗಳ ಪೋಷಣೆ, ಇವುಗಳೆಲ್ಲದರ ಬಗ್ಗೆ ಅನುಭವಿ ತಜ್ಞರಿಂದ ಮತ್ತು ಪ್ರಗತಿಪರ ಕೃಷಿಕರಿಂದ ಅನುಭವವನ್ನೂ ಪಡೆಯುತ್ತಾರೆ.

ಇಲ್ಲಿ ವಿದ್ಯಾರ್ಥಿಗಳ ತರಬೇತಿಗೆಂದೇ ಒಂದು ಹೈನುಗಾರಿಕಾ ಕೇಂದ್ರವಿದೆ. ಜಾನುವಾರುಗಳ ಪೋಷಣೆ, ಕರುಗಳ ಸಾಕಾಣಿಕೆ, ಹಾಲು ಕರೆಯುವುದು, ಹಾಲು ಮಾರಾಟ ಮಾಡುವುದು ಪಶು ಆಹಾರಗಳ ನಿರ್ವಹಣೆ ಇವುಗಳನ್ನು ಸ್ವತಃ ವಿದ್ಯಾರ್ಥಿಗಳೇ ಮಾಡುತ್ತಾರೆ. ಅಲ್ಲದೇ ಇಲ್ಲಿ ತರಕಾರಿಗಳಿಗೆ ಮಾರುಕಟ್ಟೆಯನ್ನು ಅವಲಂಬಿಸುವುದಿಲ್ಲ. ವಿವಿಧ ಪ್ರಾಣಿ-ಪಕ್ಷಿಗಳು ಸಹಿತ ಇಲ್ಲಿವೆ. ಮಾತ್ರಲ್ಲದೇ ಕೃಷಿಯೇತರ ಚಟುವಟಿಕೆಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಜೊತೆಗೆ ವಿದ್ಯಾರ್ಥಿಗಳ ವಾರ್ಷಿಕ ಫಲಿತಾಂಶ ಕೂಡಾ ಉತ್ತಮವಾಗಿದೆ.

ಈ'ರತ್ನಮಾನಸವು' ಒಂದು ಪ್ರಬುದ್ಧ ರತ್ನಗಳನ್ನು ಉತ್ಪಾದಿಸುವ ಒಂದು ಅಸಾಧ್ಯ ತಾಣ. ಇದರ ಕೀರ್ತಿ ಜಗದೆಲ್ಲೆಡೆ ಪಸರಿಸಿದೆ. ಆಧುನಿಕತೆಗೆ ಮಾರುಹೋಗುತ್ತಿರುವ ಈ ಸಂದರ್ಭದಲ್ಲೂ ಇದು ಬೆಳೆದು ನಿಂತಿರುವುದು ನಿಜಕ್ಕೂ ಶ್ಲಾಘನೀಯ. ಈ ತಾಣಕ್ಕೆ, ಇದರ ನಿರ್ಮಾತೃಗಳಿಗೆ ನಾವು ಚಿರ ಋಣಿ ಯಾಗಿರಲೇಬೇಕು. ಇಲ್ಲಿ ಇಡೀ ಜೀವನದ ಬಗ್ಗೆ ಪಾಠ ಕಲಿಸುತ್ತದೆ. ಎಲ್ಲರಿಗೂ ಆತ್ಮವಿಶ್ವಾಸ, ಸ್ವಾವಲಂಬನೆ, ಸ್ವಉದ್ಯೋಗದ ಬಗ್ಗೆ ಬದುಕನ್ನೇ ಕಲಿಸಿಕೊಡುತ್ತದೆ. ಇದೊಂದು ಆದರ್ಶ ಶಿಕ್ಷಣ ಪದ್ಧತಿ ಎಂಬುವುದರಲ್ಲಿ ಸಂದೇಹವಿಲ್ಲ. ಇಂತಹ ಅನೇಕ ಶಿಕ್ಷಣ ಸಂಸ್ಥೆಗಳು ತಲೆಎತ್ತಿ ನಿಲ್ಲಬೇಕು. ನವಭಾರತ ನಿರ್ಮಾಣವಾಗಬೇಕು.

- ವಿಸ್ಮಿತಾ ಎಡಮಂಗಲ

ಎಸ್.ಡಿ.ಎಂ. ಉಜಿರೆ.

ಮುಂದೆ ಓದಿ

ಈ ಕನಸು ಅವಾರ್ಡ್

ಶಿವಮೊಗ್ಗ ಜಿಲ್ಲೆ ಅನೇಕ ಪ್ರವಾಸಿ ತಾಣಗಳನ್ನು ಹೊಂದಿದೆ. ಆದ್ದರಿಂದಲೇ ಶಿವಮೊಗ್ಗಕ್ಕೆ ಪ್ರವಾಸಿ ತಾಣಗಳ ತವರು ಎಂದು ಕರೆಯಲಾಗಿದೆ. ಅನೇಕ ಜಲಪಾತಗಳನ್ನು ಇಲ್ಲಿ ಕಾಣಬಹುದು. ವಿಶ್ವವಿಖ್ಯಾತ ಜೋಗ, ಒನಕೆ ಅಬ್ಬೆ, ಅಚಕನ್ಯ, ಹಿದ್ಲಮನೆ, ತುಂಗ ಅಣೆಕಟ್ಟು, ಬಿಆರ್ಪಿ ಡ್ಯಾಂ, ಲಿಂಗನಮಕ್ಕಿ ಡ್ಯಾಂ ಹೀಗೆ ಅನೇಕ ನೀರಿನ ಮೂಲಗಳನ್ನು ಕಾಣಬಹುದಾಗಿದೆ.


ಜೋಗ ಜಲಪಾತ



ದೇಶದಲ್ಲೇ ಅತ್ಯಂತ ಪ್ರಸಿದ್ದಿ ಪಡೆದಿರುವ ಜಲಪಾತ ಇದಾಗಿದೆ. ಶಿವಮೊಗ್ಗ ನಗರದಿಂದ ಸುಮಾರು 100 ಕಿ.ಮೀ ದೂರದಲ್ಲಿದೆ. ಶರಾವತಿ ನದಿ ಇಲ್ಲಿ ವಿಸ್ಮಯವನ್ನೇ ನಿರ್ಮಿಸಿದೆ. ರಾಜ, ರಾಣಿ, ರೋರರ್ ಹಾಗೂ ರಾಕೇಟ್ ನಾಲ್ಕು ಭಾಗಗಳ ಮೂಲಕ 900 ಅಡಿ ಎತ್ತರದಿಂದ ಶರಾವತಿ ಧುಮ್ಮಿಕ್ಕಿ ಹರಿಯುತ್ತಿದ್ದಾಳೆ. ದೇಶ-ವಿದೇಶಗಳಿಂದ ಪ್ರವಾಸಿಗರು ವೀಕ್ಷಣೆಗೆ ದಿನೇ ದಿನೇ ಹರಿದು ಬರುತ್ತಿದ್ದಾರೆ. ಇಲ್ಲಿನ ಪ್ರವಾಸಕ್ಕೆ ಜುಲೈ ಇಂದ ಜನವರಿವರೆಗೆ ಉತ್ತಮ ಸಮಯ. ಮಹಾತ್ಮ ಗಾಂಧಿ ವಿದ್ಯುತ್ ಉತ್ಪಾಧನಾ ಕೇಂದ್ರ ಇಲ್ಲಿದೆ.

ವನಕೆ-ಅಬ್ಬೇ ಫಾಲ್ಸ್

ಅಬ್ಬೇ ಎನ್ನುವ ಹೆಸರನ್ನು ಸಾಮಾನ್ಯವಾಗಿ ಜಲಪಾತಗಳಿಗೆ ಕರ್ನಾಟಕದಲ್ಲಿ ಕರೆಯಲಾಗುತ್ತದೆ. ಶಿವಮೊಗ್ಗ ಜಿಲ್ಲೆಯೂ ಕೂಡಾ ಈ ಕೀರ್ತಿಗೆ ಪಾತ್ರವಾಗಿದೆ. ಈ ಜಲಪಾತ ಆಗುಂಬೆಯಿಂದ 4 ಕಿ.ಮೀ ದೂರದಲ್ಲಿದೆ. ಸೂರ್ಯಾಸ್ತ ಸಮಯಕ್ಕೆ ಇದು ಹೇಳಿ ಮಾಡಿಸಿದ ಸ್ಥಳ. ಈ ಫಾಲ್ಸ್ ಪ್ರಕೃತಿಯ ಹಸಿರು ಸ್ವೌಂದರ್ಯವನ್ನು ತನ್ನೊಳಗಿರಿಸಿಕೊಂಡಿದೆ.

ಅಚಕನ್ಯಾ ಫಾಲ್ಸ್

ತೀರ್ಥಹಳ್ಳಿಯಿಂದ ಹೊಸನಗರಕ್ಕೆ ಹೋಗುವ ಮಾರ್ಗದಲ್ಲಿ ಅರಲ್ಸುರುಲಿ ಎಂಬಲ್ಲಿ ಕಾಣ ಸಿಗುತ್ತಿದೆ. ಕಣ್ಣಿಗೆ ತಂಪೆರೆಯುವ ಈ ಜಲಪಾತ ಶರಾವತಿ ನದಿಯಿಂದ ಈ ಜಲಪಾತ ರಚನೆಗೊಂಡಿದೆ.

ಹಿದ್ಲಮನೆ ಫಾಲ್ಸ್
ಹೊಸನಗರ ಸಮೀಪದ ನಿಟ್ಟೂರಿನ ಹತ್ತಿರ ಈ ಜಲಪಾತವನ್ನು ನೋಡಬಹುದು. ಗುಡ್ಡ-ಬೆಟ್ಟಗಳ ಮಧ್ಯದಿಂದ ಈ ಜಲಪಾತ ಮೌನವಾಗಿ ಹರಿಯುತ್ತಿದೆ.

ತುಂಗಾ ಅಣೆಕಟ್ಟು

ಶಿವಮೊಗ್ಗ ನಗರದಿಂದ 10 ಕಿಮೀ ದೂರದಲ್ಲಿನ ಗಾಜನೂರಿನಲ್ಲಿ ತುಂಗಾ ನದಿಗೆ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಜಿಲ್ಲೆಯ ಸುತ್ತಮುತ್ತಲಿನ ರೈತರಿಗೆ ಈ ಡ್ಯಾಂ ಜೀವನಾಡಿಯಾಗಿದೆ.


ಲಿಂಗನಮಕ್ಕಿ ಡ್ಯಾಂ

ಜೋಗದಿಂದ 6 ಕಿಮೀ ದೂರದಲ್ಲಿ ಈ ಡ್ಯಾಂ ಅನ್ನು ಶರಾವತಿ ನದಿಗೆ ನಿರ್ಮಿಸಲಾಗಿದೆ. ಸಮುದ್ರ ಮಟ್ಟದಿಂದ ಸುಮಾರು 1819 ಅಡಿ ಎತ್ತರದಲ್ಲಿ ಈ ಅಣೆಕಟ್ಟನ್ನು ಮಾಡಲಾಗಿದೆ. ಇಲ್ಲಿ ಹೈಡ್ರೋ ಎಲೆಕ್ಟ್ರಿಕ್ ಪವರ್ ಯುನಿಟ್ ನಿರ್ಮಿಸಲಾಗಿದೆ.


ದರ್ಶನ್ ಬಿ.ಎಂ

ಪತ್ರಿಕೋದ್ಯಮ ವಿದ್ಯಾರ್ಥಿ
ಆಳ್ವಾಸ್ ಕಾಲೇಜ್
ಮೂಡುಬಿದಿರೆ.

ಮುಂದೆ ಓದಿ
9:45 PM

ಕ್ಲಿಕ್...

Posted by ekanasu

ಕ್ಲಿಕ್...










ಚಿತ್ರಗಳು: ಅಭಿಲಾಷ್ ಪಿ.ಎಸ್.

ಮುಂದೆ ಓದಿ

ರಾಜ್ಯ - ರಾಷ್ಟ್ರ
ಬೆಂಗಳೂರು: ಡಾ.ಕೆ.ಎಸ್. ನಿಸಾರ್ ಅಹಮ್ಮದ್, ಡಾ.ಚಂದ್ರಶೇಖರ ಪಾಟೀಲ , ಡಾ.ಸಿ.ಎನ್ ರಾಮಚಂದ್ರನ್ ಸೇರಿದಂತೆ ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸಿದ ಹತ್ತು ಮಂದಿಗೆ ಈ ಬಾರಿಯ ಆಳ್ವಾಸ್ ನುಡಿಸಿರಿ - 2011 ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಆಳ್ವಾಸ್ ಎಜುಕೇಷನ್ ಫೌಂಡೇಷನ್ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.ನುಡಿಸಿರಿಯ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿಪ್ರದಾನ ಕಾರ್ಯಕ್ರಮ ನಡೆಯಲಿದೆ.



ಪ್ರಶಸ್ತಿಯು ಪ್ರಶಸ್ತಿ ಪತ್ರ, ಸ್ಮರಣಿಕೆ, ಹತ್ತು ಸಾವಿರ ನಗದು ಸೇರಿದಂತೆ ಸಾಂಪ್ರದಾಯಿಕ ಸನ್ಮಾನಗಳನ್ನೊಳಗೊಂಡಿರುತ್ತವೆ.ನವೆಂಬರ್ 13ರಂದು ನಡೆಯಲಿರುವ ಆಳ್ವಾಸ್ ನುಡಿಸಿರಿಯ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸಿದ ಹಿರಿಯರಾದ ಡಾ.ಕೆ.ಎಸ್ ನಿಸಾರ್ ಅಹಮದ್, ಡಾ.ಚಂದ್ರಶೇಖರ ಪಾಟೀಲ, ಡಾ.ಸಿ.ಎನ್ ರಾಮಚಂದ್ರನ್, ಡಾ.ಎಂ.ವಿ.ಕಾಮತ್, ಡಾ.ಬಿ.ಟಿ. ಲಲಿತಾ ನಾಯಕ್, ಶ್ರೀನಾಥ್, ಬಿ.ಕೆ.ಸುಮಿತ್ರಾ, ಚಿದಂಬರ ರಾವ್ ಜಂಬೆ, ಪಾಂಡವಪುರ ಅಂಕೇಗೌಡ ಹಾಗೂ ಮಾಚಾರ್ ಗೋಪಾಲ ನಾಯ್ಕ ಈ ಬಾರಿಯ ಪ್ರಶಸ್ತಿಗೆ ಭಾಜನರಾಗುವವರು.

ಮುಂದೆ ಓದಿ
10:29 PM

?!

Posted by ekanasu

ಕ್ಲಿಕ್
ಮೈಸೂರು ದಸರಾ ವಸ್ತು ಪ್ರದರ್ಶನದಲ್ಲಿ ಗಮನ ಸೆಳೆದ ಫಲಕ!!!

ಚಿತ್ರ:ಎಚ್.ಕೆ.

ಮುಂದೆ ಓದಿ

ಈ ಕನಸು ಅವಾರ್ಡ್

ರಾಜಕೀಯ ವಲಯವು ಸಹ ಇಂದು ತಲ್ಲಣ ಗೋಂಡಿದೆ. ಹಲವು ರಾಜಕೀಯನಾಯಕರುಗಳು ವಿವಿಧ ಹಗರಣಗಳಲ್ಲಿ ಸಿಲುಕಿ ಒಬ್ಬರ ಹಿಂದೆ ಒಬ್ಬರಂತೆ ಸೆರೆಮನೆ ಸೇರುತ್ತಿದ್ದಾರೆ. ಇದು ರಾಜ್ಯ ಮತ್ತು ಕೇಂದ್ರ ಸರಕಾರದಲ್ಲಿಯು ಎಚ್ಚರಿಕಕೆಯ ಘಂಟೆ ಬಾರಿಸಿದೆ. ಆದರಲ್ಲಿಯು ಮಾಜಿ ಕೇಂದ್ರ ಸಚಿವರು , ಮಾಜಿ ಮುಖ್ಯ ಮಂತ್ರಿಗಳು ಬಂಧನವಾಗಿರುವುದು ರಾಜಕೀಯವಲಯವನ್ನು ಮತ್ತಸ್ಟು ಚಿಂತಿಸುವಂತೆ ಮಾಡಿದೆ. ಇವರೊಂದಿಗೆ ಸಿನಿಮಾ ನಾಯಕರು ಸಾಮಾಜದ ಉನ್ನತ ವ್ಯಕ್ತಿ ಬಂಧನ ದಿಂದ ಕಾನೂನಿನ ಮುಂದೆ ಎಲ್ಲರು ಸಮಾನರು ಎಂದು ಸಾಮಾನ್ಯ ಜನತೆಗೆ ಈಗ ಅರಿವಾಗುತ್ತಿದೆ.



ಇದು ಸಂತೋಷದ ವಿಷಯ. ಆದರೆ ಈ ರಾಜಕೀಯ ನಾಯಕರು ಬಂಧನದ ನಂತರ ಸೆರೆಮನೆಯಲ್ಲಿ ಇರಲು ಬಯಸದೆ ಅನಾರೋಗ್ಯದ ಕಾರಣವನ್ನು ನೀಡಿ ಆಸ್ಪತ್ರೇ ಸೇರುತ್ತಿದ್ದಾರೆ. ಬಂಧನದ ತನಕ ಇರದ ಅನಾರೋಗ್ಯ ಬಂಧನದ ನಂತರ ಬರುವದು ಏಕೆ? ಇದು ನಾಟಕವೇ? ಎಂಬ ಪ್ರಶ್ನೆ ಸಮಾಜದಲ್ಲಿ ಎಲ್ಲರನ್ನು ಕಾಡುತ್ತಿದೆ. ಇದುವರೆವಿಗೂ ನಮ್ಮ ರಾಜ್ಯದಲ್ಲಿ ಬಂದನವಾದ ಏಲ್ಲಾ ರಾಜಕೀಯ ನಾಯಕರ ವಿಷಯದಲ್ಲಿಯು ಇದು ನಡೆದಿದ್ದೆ,.
ಸಾಮಾನ್ಯ ವ್ಯಕ್ತಿಯಂತೆ ಸೆರೆಮನೆಯಲ್ಲಿ ಇರಲು ಇವರಿಂದ ಸಾದ್ಯವಾಗುತ್ತಿಲ್ಲ. ಇದರಿಂದ ಅನಾರೋಗ್ಯದ ಕಾರಣನೀಡಿ ಆಸ್ಪತ್ರೆಗೆ ಸೇರುತ್ತಿದ್ದಾರೆಯೇ ಎಂಬುದೆ ತಿಳಿಯದು. ಸಮಾಜದ ಸೇವಕರೆ ಈ ರೀತಿ ಮಾಡುತ್ತಿರುವುದು ಸರೀಯಿಲ್ಲ. ಇವರನ್ನು ನೋಡಿ ಸಾಮಾನ್ಯ ಜನತೆಯು ಇದೇ ಚಾಳಿಯನ್ನು ಮುಂದುವರೆಸಿದರೆ ಏನುಮಾಡುವುದು. ಅವರು ಆಡುತ್ತಿರುವುದು ನಾಟಕ ಎಂದು ತಿಳಿದರೆ ಅಂತಹ ವ್ಯಕ್ತಿಗಳಿಗೆ ಸಾಮಾನ್ಯ ಜನತೆಗೆ ನೀಡುವ ಶಿಕ್ಷೆಗಿಂತ ಕಠಿಣವಾದ ಶಿಕ್ಷೆನೀಡಬೇಕು. ಈ ಮೂಲಕ ಮುಂದೆ ಬರುವ ಏಲ್ಲರಿಗೂ ಏಚ್ಚರಿಕೆ ನೀಡಬೇಕು.
.
ಶ್ರೀನಿಧಿ ಶ್ರೀಕರ್
ಅಂತಿಮ ಎಂ.ಸಿ.ಜೆ
ಮಾನಸ ಗಂಗೋತ್ರಿ
ಮೈಸೂರು.

ಮುಂದೆ ಓದಿ

ಮಡಿಕೇರಿ/ ಮೈಸೂರು ಸುದ್ದಿಗೋಷ್ಠಿ ವರದಿ

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಗುಣಕೇಂದ್ರಿತ ಶಿಕ್ಷಣದೊಂದಿಗೆ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ "ಆಳ್ವಾಸ್ ನುಡಿಸಿರಿ"ಯನ್ನು ಆಯೋಜಿಸುತ್ತಾ ಬಂದಿದೆ. ಈಗಾಗಲೇ ಏಳು ಸಮ್ಮೇಳನಗಳು ನಾಡಿನ ಸಾಹಿತ್ಯಾಸಕ್ತರ ಸಹಕಾರದೊಂದಿಗೆ ಅರ್ಥಪೂರ್ಣವಾಗಿ ನಡೆದಿದ್ದು ಇದೀಗ ಎಂಟನೇ ಸಮ್ಮೇಳನ ನವೆಂಬರ್ 11,12 ಮತ್ತು 13ರಂದು ಮೂಡಬಿದಿರೆಯ ವಿದ್ಯಾಗಿರಿಯಲ್ಲಿರುವ ಸುಂದರಿ ಆನಂದ ಆಳ್ವ ಆವರಣದಲ್ಲಿ ನಡೆಯಲಿದೆ ಎಂದು ಆಳ್ವಾಸ್ ಎಜುಕೇಷನ್ ಫೌಂಡೇಷನ್ ನ ಮಾಧ್ಯಮ ಸಂಪರ್ಕಾಧಿಕಾರಿ ಹರೀಶ್ ಕೆ.ಆದೂರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.





ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಲಾದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಜಾಗತಿಕ ಸಮ್ಮೇಳನಕ್ಕೆ ತಳಹದಿ:
ಆಳ್ವಾಸ್ ನುಡಿಸಿರಿಯ ಹತ್ತನೇ ವರುಷದ ಸಮ್ಮೇಳನ ಜಾಗತಿಕ ಮಟ್ಟದ ಸಮ್ಮೇಳನವಾಗಿ ಮೂಡಿಬರಲಿದ್ದು ಇದಕ್ಕೆ ಈ ಸಮ್ಮೇಳನವು ಒಂದು ವೇದಿಕೆಯಾಗಲಿದೆ. ಕನಿಷ್ಟ 25ವಿವಿಧ ರಾಷ್ಟ್ರಗಳಿಂದ ಕನ್ನಡಾಸಕ್ತ ಮನಸ್ಸುಗಳು ಜಾಗತಿಕ ಸಮ್ಮೇಳನದಲ್ಲಿ ಭಾಗವಹಿಸುವ ಗುರಿಯನ್ನು ಹೊಂದಲಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯದಾದ್ಯಂತ ಜಿಲ್ಲಾವಾರು ಆಳ್ವಾಸ್ ನುಡಿಸಿರಿ ಘಟಕಗಳನ್ನು ಸ್ಥಾಪಿಸುತ್ತಾ ಆ ಮೂಲಕ ಕನ್ನಡ ಸೇವೆಯನ್ನು ಪರಿಣಾಮಕಾರಿಯಾಗಿ ನಡೆಸುತ್ತಿರುವುದು ಮತ್ತೊಂದು ಗಮನಾರ್ಹ ಅಂಶ.
ಇದೇ 23ರಂದು ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರಿಯಪ್ಪ ಕಾಲೇಜಿನಲ್ಲಿ ಕೊಡಗು ಘಟಕದ ಸಮಾಲೋಚನಾ ಸಭೆ ನಡೆಯಲಿದೆ ಎಂದು ತಿಳಿಸಿದರು.

"ಕನ್ನಡ ಮನಸ್ಸು; ಸಂಘರ್ಷ ಮತ್ತು ಸಾಮರಸ್ಯ" ಎಂಬ ಪರಿಕಲ್ಪನೆಯಲ್ಲಿ ಈ ಬಾರಿಯ ಆಳ್ವಾಸ್ ನುಡಿಸಿರಿ ಸಮ್ಮೇಳನ ನಡೆಯಲಿದೆ. ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ನಾಡೋಜ ಡಾ.ಎಂ.ಎಂ.ಕಲಬುರ್ಗಿ ವಹಿಸಲಿದ್ದಾರೆ. ಖ್ಯಾತ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ.

ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದ ಡಾ.ಚಂದ್ರಶೇಖರ ಕಂಬಾರರನ್ನು ವಿಶೇಷವಾಗಿ ಗೌರವಿಸಿ ಸನ್ಮಾನಿಸಲಾಗುವುದು. ಡಾ.ಸಿ.ಎನ್.ಆರ್ ಅವರು ಕಂಬಾರರ ಸಮಗ್ರ ಸಾಹಿತ್ಯದ ಕುರಿತು ವಿಶೇಷ ಉಪನ್ಯಾಸವನ್ನು ನಡೆಸಿಕೊಡಲಿದ್ದಾರೆ.

ಸಮ್ಮೇಳನದಲ್ಲಿ ಕನ್ನಡ ಸಂಸ್ಕೃತಿ-ಭಾಷೆ :ಸಂಘರ್ಷ ಮತ್ತು ಸಾಮರಸ್ಯ, ಪ್ರಾಚೀನ ಕನ್ನಡ ಸಾಹಿತ್ಯ : ಸಂಘರ್ಷ ಮತ್ತು ಸಾಮರಸ್ಯ,ಮಧ್ಯಕಾಲೀನ ಕನ್ನಡ ಸಾಹಿತ್ಯ : ಸಂಘರ್ಷ ಮತ್ತು ಸಾಮರಸ್ಯ , ಆಧುನಿಕ ಕನ್ನಡ ಸಾಹಿತ್ಯ : ಸಂಘರ್ಷ ಮತ್ತು ಸಾಮರಸ್ಯ ಎಂಬ ನಾಲ್ಕು ಪ್ರಮುಖ ಗೋಷ್ಠಿಗಳು ನಡೆಯಲಿವೆ.
ಪಂಡಿತ್ ಭೀಮ್ಸೇನ್ ಜೋಷಿ ನೆನಪು ಮತ್ತು ಕೆ.ಕೆ.ಹೆಬ್ಬಾರ್ ನೆನಪು ಎಂಬ ಸಂಸ್ಮರಣಾ ಕಾರ್ಯಕ್ರಮ ನಡೆಯಲಿವೆ.
ಮಾಧ್ಯಮ : ಸಂಘರ್ಷ ಮತ್ತು ಸಾಮರಸ್ಯ -ರವಿ ಬೆಳಗೆರೆ ಅವರಿಂದ, ಕನ್ನಡ ಜನಪರ ಚಳುವಳಿಗಳು: ಎಸ್.ಜಿ.ಸಿದ್ಧರಾಮಯ್ಯ,ಕನ್ನಡ ಜನಪದ : ಪ್ರೊ. ವೀರಣ್ಣ ದಂಡೆ ಇವರಿಂದ ವಿಶೇಷೋಪನ್ಯಾಸ ನಡೆಯಲಿವೆ. ಕವಿಸಮಯ - ಕವಿನಮನ, ಕಥಾ ಸಮಯ ಕಾರ್ಯಕ್ರಮಗಳು ನಡೆಯಲಿವೆ.

ಸಂವಾದ: ಸಮ್ಮೇಳನದ ದ್ವಿತೀಯ ದಿನ ಆಳ್ವಾಸ್ ನುಡಿಸಿರಿ ರೂವಾರಿ ಡಾ.ಎಂ.ಮೋಹನ ಆಳ್ವ ಅವರೊಂದಿಗೆ ಸಂವಾದ, ಹಾಗೂ ಸಮ್ಮೇಳನದ ಮೂರನೇ ದಿನ ಬೆಳಗ್ಗೆ ಸಮ್ಮೇಳನದ ಅಧ್ಯಕ್ಷತೆ ವಹಿಸಿರುವ ನಾಡೋಜ ಡಾ.ಎಂ.ಎಂ.ಕಲಬುರ್ಗಿ ಅವರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಲಿವೆ.

ಈ ಬಾರಿ ನುಡಿಸಿರಿ ನಡೆಯಲಿರುವ ಸಭಾಂಗಣಕ್ಕೆ ಪಂಡಿತ್ ಭೀಮ್ ಸೇನ್ ಜೋಷಿ ಸಭಾಂಗಣವೆಂದು ನಾಮಕರಣ ಮಾಡಲಾಗಿದೆ. ಎಂದಿನಂತೆ ನಾಲ್ಕು ವೇದಿಕೆಗಳಲ್ಲಿ ಸಾಂಸ್ಕೃತಿಕ ವೈವಿಧ್ಯಗಳು ನಡೆಯಲಿವೆ.

ನುಡಿಸಿರಿಯಲ್ಲಿ ವೈಶಿಷ್ಠ್ಯಗಳು
* ನಾಡಿನ ಹೆಸರಾಂತ ಪುಸ್ತಕ ಪ್ರಕಾಶಕರು ಮಾರಾಟಗಾರರಿಂದ ಪುಸ್ತಕ ಪ್ರದರ್ಶನ ಮಾರಾಟ
* ಕನ್ನಡ ಧ್ವಜಾರೋಹಣದ ಮೂಲಕ ಸಮ್ಮೇಳನಕ್ಕೆ ಚಾಲನೆ
* ವೈವಿಧ್ಯಮಯ ಸಾಂಸ್ಕೃತಿಕ ಮೆರವಣಿಗೆ
* ಸರಿಯಾದ ಸಮಯಕ್ಕೆ ಕಾರ್ಯಕ್ರಮ ಆರಂಭ
* ಶಿಸ್ತು ಬದ್ಧ ಕಾರ್ಯಕ್ರಮ, ಸಮಯಪ್ರಜ್ಞೆಗೆ ಒತ್ತು.
* ಕರಾವಳಿಯ ಸೊಗಡಿನ ಅನ್ನದಾಸೋಹ
* ಸಮ್ಮೇಳನದ ಮೂರೂ ದಿನಗಳ ಕಾಲ ಏಕಕಾಲಕ್ಕೆ ನಾಲ್ಕುವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ
* ಜಿಲ್ಲೆ ಜಿಲ್ಲೆಗಳಲ್ಲಿ ಆಳ್ವಾಸ್ ನುಡಿಸಿರಿ ಘಟಕ ಸ್ಥಾಪನೆ

ಮುಂದೆ ಓದಿ

ರಾಜ್ಯ - ರಾಷ್ಟ್ರ
ಮಡಿಕೇರಿ: ಆಳ್ವಾಸ್ ನುಡಿಸಿರಿಗೆ ದಿನಗಣನೆ ಪ್ರಾರಂಭವಾಗಿದೆ.ಈಗಾಗಲೇ ನುಡಿಸಿರಿಗೆ ಸಕಲ ಸಿದ್ಧತೆಗಳು ಪ್ರಾರಂಭಗೊಂಡಿದೆ ಎಂದು ಆಳ್ವಾಸ್ ಎಜುಕೇಷನ್ ಫೌಂಡೇಷನ್ ಮಾಧ್ಯಮ ಸಂಪರ್ಕಾಧಿಕಾರಿ ಹರೀಶ್ ಕೆ.ಆದೂರು ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.ಮಡಿಕೇರಿಯ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.ನವೆಂಬರ್ 11,12 ಮತ್ತು 13ರಂದು ಆಳ್ವಾಸ್ ನುಡಿಸಿರಿ ಮೂಡಬಿದಿರೆಯಲ್ಲಿ ನಡೆಯಲಿದೆ.ಕನ್ನಡ ಮನಸ್ಸು ಸಂಘರ್ಷ ಮತ್ತು ಸಾಮರಸ್ಯ ಪರಿಕಲ್ಪನೆಯಲ್ಲಿ ಈ ಸಮ್ಮೇಳನ ಮೂಡಿಬರಲಿದೆ.ನಾಡೋಜ ಎಂ.ಎಂ.ಕಲಬುರ್ಗಿ ಸರ್ವಾಧ್ಯಕ್ಷರಾಗಿದ್ದಾರೆ.ಬರಗೂರು ರಾಮಚಂದ್ರಪ್ಪ ಉದ್ಘಾಟಿಸಲಿದ್ದಾರೆ ಎಂದವರು ವಿವರ ನೀಡಿದರು.




ಕೊಡಗು ಜಿಲ್ಲೆಯ ಸಮಾಲೋಚನಾ ಸಭೆ ಇದೇ 23ರಂದು ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರಿಯಪ್ಪ ಕಾಲೇಜಿನಲ್ಲಿ ನಡೆಯಲಿದೆ.ಕನ್ನಡಾಸಕ್ತರು ಭಾಗವಹಿಸುವಂತೆ ವಿನಂತಿ ಮಾಡಿದರು.
ನುಡಿಸಿರಿ ಸ್ವಾಗತ ಸಮಿತಿಯ ಪದಾಧಿಕಾರಿಗಳಾದ ಹರೀಶ್,ಯೋಗೀಶ್ ಕೈರೋಡಿ, ಪ್ರವೀಣ್ ಪದ್ಯಾಣ ಉಪಸ್ಥಿತರಿದ್ದರು.

ಮುಂದೆ ಓದಿ

ರಾಜ್ಯ - ರಾಷ್ಟ್ರ

ಕೊಡಗು: ತಲಕಾವೇರಿಯಲ್ಲಿ ಸಂಭ್ರಮ...ಕಾವೇರೀ ಸಂಕ್ರಮಣದ ತೀರ್ಥೋದ್ಭವಕ್ಕೆ ಇದೀಗ ತಲಕಾವೇರೀ ಕ್ಷೇತ್ರ ಸರ್ವರೀತಿಯಲ್ಲಿ ಸಜ್ಜಾಗುತ್ತಿದೆ.ತಲಕಾವೇರಿಯಲ್ಲಿ ಇಂದಿನಿಂದಲೇ ಭಕ್ತಾಧಿಗಳು, ಪ್ರವಾಸಿಗರು ಅಧಿಕ ಸಂಖ್ಯೆಯಲ್ಲಿ ಆಗಮಿಸತೊಡಗಿದ್ದಾರೆ.ಸೋಮವಾರ ಮಧ್ಯರಾತ್ರಿಯ ವೇಳೆ ತಲಕಾವೇರಿಯಲ್ಲಿ ತೀರ್ಥೋದ್ಭವ ಆಗಲಿದೆ. ಈ ಕ್ಷಣಕ್ಕಾಗಿ ಭಕ್ತಾಧಿಗಳು ದೂರದೂರುಗಳಿಂದ ಆಗಮಿಸತೊಡಗಿದ್ದಾರೆ. ವಾಹನ ನಿಲುಗಡೆಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಹೆಚ್ಚುವರಿ ಪೊಲೀಸ್ ನಿಯೋಜಿಸಲಾಗಿದೆ. ವಿದ್ಯುತ್ ದೀಪಗಳಿಂದ ತಲಕಾವೇರೀ ಕ್ಷೇತ್ರ ನಳನಳಿಸುತ್ತಿದೆ.

ಮುಂದೆ ಓದಿ

ಪ್ರಾದೇಶಿಕ ಸುದ್ದಿ

ಸುಳ್ಯ: ಕಲ್ಲಗುಂಡಿ ಎಂಬಲ್ಲಿ ರಿಕ್ಷಾವೊಂದು ರಸ್ತೆಬದಿಯ ಹೊಂಡಕ್ಕೆ ಉರುಳಿ ಚಾಲಕ ಅಲ್ಪಸ್ವಲ್ಪ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ.ರಿಕ್ಷಾ ಸುಳ್ಯದತ್ತ ತೆರಳುತ್ತಿದ್ದು ಬಸ್ಸೊಂದಕ್ಕೆ ದಾರಿಕೊಡುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಘಟನೆಸಂಭವಿಸಿತು.

ಮುಂದೆ ಓದಿ
11:36 PM

ಅಸ್ಪೃಶ್ಯರು

Posted by ekanasu

ವೈದೇಹೀ ಕಾದಂಬರಿ

ಕಳೆದ ಸಂಚಿಕೆಯಿಂದ...


ನೀ ಏನೇ ಹೇಳು ವಾಸ್ತೇವ. ಈ ಶೂದ್ರ ಮಕ್ಕಳಿಗೆ ವಿದ್ಯೆ ಸಿಕ್ಕಿದರೆ ಪ್ರಪಂಚ ಇಡುತ್ತವಾ? ತಮ್ಮ ಅಂದಿಗರನ್ನೇ ಕಾಣದವು. `ನೀನು ಹಾಗೆ ಹೇಳುವುದು ಸುಮ್ಮನೆ ಪಾರ್ತಕ್ಕ. ಆಲೋಚನೆ ಮಾಡಿದರೆ - ನಾನು ನಿಮ್ಮನ್ನು ನೋಯಿಸುವುದಕ್ಕಂತ ಹೇಳುವುದಲ್ಲ. ಮಾತಿನಂಶ ಅಷ್ಟೇ - ನಿಮ್ಮ ಮಗ ಭಾಸ್ಕರ ಈಗ ? ನೀವು ಹೇಳುವ ಅಲ್ಪ ಜಾತಿಯವಳ ಒಟ್ಟಿಗೆ ಸುಖವಾಗಿಲ್ಲವ?'
ಪಾರ್ತಕ್ಕನ ದನಿ ಕಳಕಿತು. `ಸುಖವಾಗಿದ್ದಾನಾ? ಇರಲಿ ಸುಖವಾಗಿರಲಿ. ಅಬ್ಬೆಯ ನೆನಪನ್ನೂ ಮಾಡದವ. ಅಬ್ಬೆಯನ್ನು ಪರಾಧೀನ ಮಾಡಿದವ. , ಸುಖವಾಗಿರಲಿ. ಸುಖ , ಒಂದು ದಿನ ಏನಂತ ಗೊತ್ತಾದೀತು.'


ಗೌರಮ್ಮ ಈಗ ಯಾಕೆ ಆ ವಿಷಯ ತೆಗೆದದ್ದು ಎಂಬಂತೆ ಗಂಡನತ್ತ ನೋಡಿ `ಹಾಗೆ ಯಾಕೆ ಪರಾಧೀನ ಎನ್ನಬೇಕು? ನೀವು ನನಗೆ ಬೇಕು. ಇವತ್ತಿನವರೆಗೆ ನಾವು ನಿಮ್ಮನ್ನು ಬೇರೆಯವರು ಅಂತ ಕಂಡದ್ದುಂಟ? ಒಂದು ಲೆಕ್ಕದಲ್ಲಿ ನೀವಿಲ್ಲದಿದ್ದರೆ ಈ ಮನೆಯ ವಹಿವಾಟಿನಲ್ಲಿ ನಾನು ಪರಾಧೀನೆಯಾಗುತ್ತಿದ್ದೆ ' - ಎಂದರು.

`ನೀವು ಹಾಗೆಲ್ಲ ಎಣಿಸಿದರೆ ಅದು ನನಗೆ ಅವಮಾನ ಮಾಡಿದಂತೆ. ನಾ ಹೇಳಿದ್ದು ಮಾತಿನಂಶ ಎಂದೆನಲ್ಲ, ಮೊದಲೇ. ನಿಮಗೆ, ಭಾಸ್ಕರನ ತಾಯಿಗೆ, ಎಂತಹ ಸ್ಥಾನ ಇಲ್ಲಿದೆ ಅಂತ ಪುನಃ ಹೇಳುವುದಿಲ್ಲ.' ಹೀಗೆ ಹೇಳಿ ವಾಸುದೇವರಾಯರು ತಮ್ಮ ಕೋಣೆಗೆ ಹೊರಟು ಹೋದರು.

ಭಾಸ್ಕರನ ಮಾಡಲು ಪಾರ್ತಕ್ಕನಿಗೆ ವಚ್ಚಕೊಟ್ಟ ಹಾಗಾಯಿತು. ಬಾಣಂತಿ ಕೋಣೆಗೆ ಬಂದರು. ಗೋಡೆಗೆ ಬೆನ್ನು ಆನಿಸಿ ಕತೆ ಪುಸ್ತಕ ಹಿಡಿದು ಕುಳಿತಿದ್ದ ಬಾಣಂತಿಗೆ `ನಾಳೆ ಬೆನ್ನು ನೋವು ಸುರುವಾಗುತ್ತದೆ. ಹೀಗೆ ಓದಿದರೆ ಕಣ್ಣು ಯಾಕೆ ಮುಡಿಯುತ್ತದೆ? ತೆಗೆದಿಡು ಪುಸ್ತಕವನ್ನು ' - ಎಂದರು.

ಅವಳು ತೆಗೆದಿಡಲಿಲ್ಲ. `ಹೋಗಿ ಪಾರ್ತಕ್ಕ , ನಂಗೆ ಮಲಗಿ ಮಲಗಿ ಬೇಜಾರು ಬಂದು ಹೋಯಿತು.'
`ಈಗ ಹಾಗೇ. ಮಲಗಿ ಬೇಜಾರಾಗುತ್ತದೆ. ಮೂರು ತಿಂಗಳಾಗುವ ಹೊತ್ತಿಗೆ ಸ್ವಸ್ಥ ಮಲಗಿಯೇನೇ ಎಂದು ಕಾಣುತ್ತದೆ. ಅಷ್ಟು ಬೆನ್ನು ನೋವು , ಕಣ್ಣು ನೋವು , ಮೈ ಕೈ ನೋವು ಸುರುವಾಗುತ್ತದೆ. ನನ್ನ ಮಾತು ತಕೋ. ಬಾಣಂತನ ಕಾಟು ಮಾಡಿಕೊಳ್ಳಬಾರದು. ಮಲಕೋ' ಎಂದರು. ರತ್ನ ಪುಸ್ತಕ ತೆಗೆದಿಟ್ಟಳು.

ಮಗುವನ್ನು ಮೀಯಿಸಿ ಮಲಗಿಸಿದ್ದರಿಂದ ಅದು ಗಾಢ ನಿದ್ರೆಯಲ್ಲಿತ್ತು. ತಲೆಯ ಇಕ್ಕೆಲಗಳಲ್ಲಿ ಎರಡೂ ಕೈ ಮುಷ್ಟಿಯನ್ನಿರಿಸಿಕೊಂಡು ಮಲಗಿತ್ತು. `ಕಂಡೆಯ ಮಗು ಮಲಗಿದ್ದು ? ಹೆಡಿಗೆಯಲ್ಲಿ ಮಣ್ಣು ಹೊರುವಂತಿಲ್ಲವೇ? ಮಗು ಅಬ್ಬೆಯ ಹೊಟ್ಟೆಯಲ್ಲಿರುವಾಗ ಕಗ್ಗತ್ತಲೆ ಇರುತ್ತದೆಯಲ್ಲ. `ದೇವರೇ ಒಂದು ಸಲ ಈ ಕತ್ತಲೆಯಿಂದ ನನ್ನನ್ನು ತಪ್ಪಿಸು ' ಅಂತ ಬೇಡಿಕೊಳ್ಳುತ್ತದೆಯಂತೆ. `ತಪ್ಪಿಸಿದರೆ ಎಂತ ಕೊಡುತ್ತಿ ನನಗೆ ? ' ಎಂದು ದೇವರು ಕೇಳುತ್ತಾನಂತೆ. `ನಿಂಗೆ ದೇವಸ್ಥಾನ ಕಟ್ಟಿಸುತ್ತೇನೆ ' - ಎನ್ನುತ್ತದಂತೆ ಮಗು. ಈಗ ಭೂಮಿಗೆ ಬಂತಲ್ಲ. ಬೆಳಕು ಕಂಡಿತಲ್ಲ. `ನಂಗೆ ಯಂತದೂ ಮಾಡಿಲಿಲ್ಲ ನೀನು ' ಅಂತ ಆವಾಗವಾಗ ಬಂದು ದೇವರು ಮಾತನಾಡಿಸುತ್ತಾ ಹೇಳುತ್ತಾನಂತೆ. ನಿದ್ದೆಯಲ್ಲಿ ಮಗು ನಗುತ್ತದೆಯಲ್ಲ. ಅದಕ್ಕೇ .`ಆಯಿತು .ದೇವಸ್ಥಾನ ಖಂಡಿತ ಕಟ್ಟಿಸುತ್ತೇನೆ' ಅಂತ ಮಗು ಅವನನ್ನು ಕಳಿಸುತ್ತ ಇರುತ್ತದೆ.ಎರಡು ಎರಡೂವರೆ ತಿಂಗಳಲ್ಲಿ ದೇವಸ್ಥಾನ ಕಟ್ಟಲು ಸುರುಮಾಡುತ್ತದೆ. ಹೀಗೇ. ಮಣ್ಣು ಹೊತ್ತು. ಬೇಕಾದರೆ ಅದರ ಮುಷ್ಟಿ ಬಿಡಿಸಿ ನೋಡು ಅದರಲ್ಲಿ ಚೂರು ಮಣ್ಣಿರುತ್ತದೆ.'

- ವೈದೇಹಿ

ಮುಂದೆ ಓದಿ

ವೈವಿಧ್ಯ

ಮೋಟುದ್ದದ ಕೂದಲಿಗೆ ಅಡ್ಡಾದಿಡ್ಡಿ ಕ್ಲಿಪ್ ಸಿಕ್ಕಿಸಿಕೊಳ್ಳುತ್ತಿದ್ದ ಮೊಮ್ಮಗಳನ್ನು ನೋಡಿದ ಅಜ್ಜಿ ಹಿಂದೊಂದು ಕಾಲವಿತ್ತು ಎಂದು ಉದ್ಗಾರವೆಳೆಯುತ್ತಾ... ಹೆಣ್ಮಕ್ಕಳು ಉದ್ದ ಜಡೆ ಹೆಣೆದು ಮೊಳವುದ್ದದ ಘಮಘಮಿಸುವ ಮಲ್ಲಿಗೆ ಹೂ ಮುಡಿದು ಸಿಂಗರಿಸಿಕೊಂಡರೆ, ಸೌಂದರ್ಯಕ್ಕೆ ಬೇರೆ ಉದಾಹರಣೆ ಬೆಕಿಲ್ಲ! ಎಂದು ತನ್ನ ಉಪದೇಶವನ್ನು ಸುಸೂತ್ರವಾಗಿ ಮುಗಿಸಿದಳು. ನಿಜ! ಹಳ್ಳಿಗಳಲ್ಲಿ ಅಂಗಳದ ತುದಿಯಲ್ಲಿಯೋ, ಹಿತ್ತಲ ಕಡೆಗೋ, ತೋಟದ ಕಾಲುವೆಯ ದಿಬ್ಬದ ಮೇಲೋ ಹಿಂಡು ಹಿಂಡಾಗಿ ಬೆಳೆದ ಮಲ್ಲಿಗೆಯ ಬುಡಗಳಿಗೆ ಅಜ್ಜಿಗಿನಂತಲೂ ಹೆಚ್ಚಿನ ಆಯಸ್ಸು!



ಹೊತ್ತು ಮುಳುಗುವವರೆಗೆ ಎಷ್ಟೇ ಮೈಮುರಿಯುವ ಕೆಲಸವಿರಲಿ,ಮಲ್ಲಿಗೆ ಗಿಡದ ಆರೈಕೆ ಮಹಿಳೆಯ ದಿನಚರಿಯಲ್ಲೊಂದು.ಮಲ್ಲಿಗೆಗೇ ಪ್ರತ್ಯೇಕವಾದ ತೋಟವನ್ನೇನೂ ನಿರ್ಮಿಸುವುದು ಇವರ ಜಾಯಮಾನವಲ್ಲ. ಎಲ್ಲಿ ಹೊಸ ತರಹದ ಮಲ್ಲಿಗೆ ಗಿಡ ಇಲ್ಲವೇ ಬಳ್ಳಿ ಇದೆಯೆಂಬ ಸುದ್ದಿ ತಿಳಿಯುವುದೋ, ಅದನ್ನು ಹರಸಾಹಸ ಪಟ್ಟಂತೆ ತಂದು ಮನೆಯ ಸುತ್ತ ಮುತ್ತಲಲ್ಲಿ ಎಲ್ಲಿ ಖಾಲಿ ಸ್ಥಳವಿದೆಯೋ ಅಲ್ಲಿ ತಂದು ಊರಿಬಿಟ್ಟರೆಂದರೆ ಮುಗಿಯಿತು. ಅದು ಹೂಬಿಟ್ಟಾಗಲೇ ಆ ಗಿಡದ ಮೇಲೆ ಮತ್ತೊಮ್ಮೆ ದೃಷ್ಟಿ ಹಾಯುವುದು!



ಮಲ್ಲಿಗೆಯ ಬಗ್ಗೆ ಕೇಳಹೊರಟೆವೆಂದರೆ ಸಾಕು ಪ್ರದೋಷ ಮಲ್ಲಿಗೆ, ಕಸ್ತ್ರ ಮಲ್ಲಿಗೆ, ಪತ್ರ ಮಲ್ಲಿಗೆ, ಭಟ್ಕಳ ಮಲ್ಲಿಗೆ, ಸೂಜಿ ಮಲ್ಲಿಗೆ, ದುಂಡು ಮಲ್ಲಿಗೆ, ಶಂಕರ ಮಲ್ಲಿಗೆ, ಕಾಕಡ ಮಲ್ಲಿಗೆ, ಮಾಗೀ ಮಲ್ಲಿಗೆ, ಚೆಂಡು ಮಲ್ಲಿಗೆ, ಜಾಜಿ ಮಲ್ಲಿಗೆ, ನಿತ್ಯ ಮಲ್ಲಿಗೆ ಇತ್ಯಾದಿ ಇತ್ಯಾದಿ...ಹೀಗೆ ಮಾರುದ್ದದ ಪಟ್ಟಿಯನ್ನೇ ಬಿಚ್ಚಿಡುತ್ತಾರೆ.



ಕಾಲ ಬದಲಾಗಿದೆ, ಗೊಡ್ಡು ಸಂಪ್ರದಾಯಕ್ಕೆ ಬೆಲೆ ಕೊಡುವಷ್ಟು ಸಮಯವಿಲ್ಲ ಎಂದು ಮೂಗು ಮುರಿಯುವ ನಮಗೆ, ಪೇಟೆಯಲ್ಲಿ ಮಾರಾಟಕ್ಕೆ ಬಂದ ಹಳಸಿದ ಹೂವನ್ನು ಒಂದಕ್ಕೆ ಎರಡರಷ್ಟು ಬೆಲೆಕೊಟ್ಟು ಕೊಂಡುಕೊಳ್ಳುವುದೇ ದೊಡ್ಡ ಫ್ಯಾಷನ್!
ಮಲ್ಲಿಗೆಯ ಹಿಂದೆ ಒಂದು ದೊಡ್ಡ ನಂಬಿಕೆಯೇ ಇದೆ.ಕೆಲವು ಜಾತಿಯ ಅಂದರೆ, ಕಸ್ತ್ರ ಮಲ್ಲಿಗೆ ಹಾಗೂ ಇನ್ನೂ ಕೆಲವು ಜಾತಿಯ ಮಲ್ಲಿಗೆಯ ಹೂಗಳು ಸುಮಾರು ಏಪ್ರಿಲ್ ಕೊನೆಗೆ ಹೂ ಬಿಡಲು ಪ್ರಾರಂಭವಾದರೆ, ಹೆಚ್ಚೆಂದರೆ ಮೂರು ದಿನದ ವರೆಗೆ ಬಹಳವಾಗಿ ಇರುತ್ತವೆ. ಅಲ್ಲದೇ ಇದು ಮೂರು ಬಾರಿ ಹೂ ಬಿಟ್ಟು ಮುಗಿದ ಮೇಲೆ ಗೆಡಿ ಹಿಡಿಯುತ್ತದೆ ಎಂದು ಮಳೆಯನ್ನು ಬರಹಾಯುವ ರೈತರ ನಂಬಿಕೆ ಇಂದಿಗೂ ಸುಳ್ಳಾಗಿಲ್ಲವೆಂದು ಹೇಳಲಗುತ್ತದೆ.

ಹಲವು ಜಾತಿಯ ಮಲ್ಲಿಗೆ ಗಿಡಕ್ಕೆ ಮಳೆಗಾಲ ಪ್ರಾರಂಭವಾಯಿತೆಂದರೆ, ಬಹು ನಿರೀಕ್ಷಿತ ಹಬ್ಬವೇ ಸರಿ! ಅಂತೆಯೇ ನಾಗರ ಪಂಚಮಿಯಿಂದ ಹೂ ಬಿಡುವ ಮಲ್ಲಿಗೆಯ ವಿಧಗಳೂ ಇವೆ. ಇನ್ನೂ ಕೆಲವು ವಿಧದ ಮಲ್ಲಿಗೆ ಪ್ರತಿದಿನವೂ ಹೂ ಬಿಡುತ್ತಿರುತ್ತದೆ.
ಮಲ್ಲಿಗೆಯ ಬುಡವು ಕೆಲವು ಗಿಡಗಳಾದರೆ, ಇನ್ನೂ ಕೆಲವು ಬಳ್ಳಿ. ಕೆಲವೊಮ್ಮೆ ಗಿಡಕ್ಕೆ ಆಧಾರವೇನಾದರೂ ಸಿಕ್ಕಿದರೆ, ಅದೂ ಸಹ ಬಳ್ಳಿಯಾಗಿಯೇ ಹಬ್ಬುತ್ತದೆ. ಆದರೆ ಚೆಂಡು ಮಲ್ಲಿಗೆಯು ಬಳ್ಳಿಯಾಗಲಾರದು. ಮಲ್ಲಿಗೆಗೆ ಚಪ್ಪರ ಮಾಡಿ ಹಬ್ಬಿಸುವುದು ರೂಢಿ. ಇದಕ್ಕೆ ಹೂವು ಬಹಳವಾಗಿ ಬಿಡುತ್ತದೆ ಎನ್ನುವುದು ಒಂದು ಕಾರಣವಾದರೆ,ಹೂ ಕೊಯ್ಯುವುದು ಸುಲಭವಾದೀತು ಎನ್ನುವುದು ಇನ್ನೊಂದು ಕಾರಣ. ಇದರಲ್ಲಿ ಅನೇಕ ಹೂಗಳು ಅತಿ ಪರಿಮಳಯುಕ್ತವಾಗಿದ್ದರೆ, ಇನನು ಕೆಲವು ಸುವಾಸನೆಯನ್ನೇ ಹೊಂದಿರುವುದಿಲ್ಲ.

ಮಹಿಳೆಗೆ, ಮಲ್ಲಿಗೆ ಹೂ ಬಿಡಲು ಪ್ರಾರಂಭವಾದಾಗಿನಿಂದ ಹೂ ಕೊಯ್ದು ಅದನ್ನು ಕಟ್ಟುವುದೇ ಒಂದು ಹವ್ಯಾಸ.ಒಮ್ಮೊಮ್ಮೆ ಬೆಳಿಗ್ಗೆಯಿಂದ ಪ್ರಾರಂಭವಾದ ಈ ಕಾರ್ಯ ಸಂಜೆಯಾದರೂ ಮುಗಿಯದು. ಮಾಲೆ ,ದಂಡೆ ಎಂದು ನಾವು ಸಾಮಾನ್ಯವಾಗಿ ಹೂ ಕಟ್ಟುವ ರೀತಿಯನ್ನು ಗುರುತಿಸಿದರೂ, ಅದರಲ್ಲಿ ಕಾಲ್ದಂಡೆ,ಕೈದಂಡೆ, ಮೂರ್ಬಳ್ಳಿ ದಂಡೆ, ಸುತ್ತುಬಳ್ಳಿ ದಂಡೆ,ಕಡ್ಡಿ ದಂಡೆ, ಮಾಲೆ ಇತ್ಯಾದಿಗಳನ್ನು ಗುರುತಿಸಲಾಗುತ್ತದೆ. ಹಾಗೂ ಜಾಜಿ ಮಲ್ಲಿಗೆ, ಶಂಕರ ಮಲ್ಲಿಗೆ, ಭಟ್ಕಳ ಮಲ್ಲಿಗೆ, ಕಾಕಡ ಮಲ್ಲಿಗೆ, ದುಂಡು ಮಲ್ಲಿಗೆ, ಕಸ್ತ್ರ ಮಲ್ಲಿಗೆಗೆಂದೇ ಬೇರೆ ಬೇರೆ ರೀತಿಯಲ್ಲಿ ದಂಡೆ ಹಾಗೂ ಮಾಲೆ ಕಟ್ಟುವ ರೂಢಿಯಿದೆ. ಮಹಿಳೆಯ ಸೃಜನಶೀಲತೆಯಲ್ಲಿ ಹೂ ಕಟ್ಟುವ ಹೊಸ ಹೊಸ ವಿನ್ಯಾಸಗಳು ರೂಪುಗೊಂಡೀತು!


ಮಲ್ಲಿಗೆಯು ನಮ್ಮ ನಿತ್ಯೋಪಯೋಗೀ ಅನೇಕ ವಸ್ತುಗಳ ಉತ್ಪನ್ನವಾಗಿ ಬಳಕೆಯಲ್ಲಿದೆ. ಆದರೂ ಅದನ್ನು ನೇರವಾಗಿಯೇ ಔಷಧಿಯಾಗಿ ಬಳಸುವುದು ಸ್ವಲ್ಪ ಕಡಿಮೆ. ಜಾಜಿ ಮಲ್ಲಿಗೆಯನ್ನು ಕೈಯಲ್ಲಿಯೇ ಅರೆದು, ಅದರ ರಸವನ್ನು ಗಾಯದಿಂದ ಕಲೆಯಾದ ಜಾಗಕ್ಕೆ ಹಾಗೂ ಮೊಡವೆಗಳಿಗೆ ಲೇಪಿಸಿದರೆ ಉತ್ತಮ ಪರಿಣಾಮ ಕಂಡು ಬರುತ್ತದೆ.
ತನ್ನ ಸೌಂದರ್ಯದ ಜೊತೆಗೆ ಮನೆಯ ಅಂಗಳದ ಸೌಂದರ್ಯವನ್ನು ಕಾಪಾಡಿಕೊಳ್ಳುವುದು ಪ್ರತಿಯೊಂದು ಉತ್ಸಾಹೀ ಮಹಿಳೆಯ ಕರ್ತವ್ಯ. ಇನ್ನೇನು ಮಲ್ಲಿಗೆ ಗಿದ ಹಾಗೂ ಬಳ್ಳಿಗಳನ್ನು ಆಯ್ದು ನೆಡುವ ಸಮಯ. ಯಾವ ಬಳ್ಳಿ ಹಾಗೂ ಯಾವ ಮಲ್ಲಿಗೆ ಗಿಡ ಹೇಗೆ ಬೆಳೆಯುತ್ತದೆ ಮತ್ತು ಹಬ್ಬಬಹುದು ಎಂಬ ಆಧಾರದ ಮೇಲೆ ನಿರ್ದಿಷ್ಟ ಸ್ಥಳವನ್ನು ಆಯ್ದುಕೊಂಡು, ಮನೆಗೆ ಕಂಪೌಮಡ್ ಇದ್ದರೆ ಅದರ ನಾಲ್ಕೂ ಮೂಲೆಯಲ್ಲಿಯೂ, ಇಲ್ಲವೇ ಗೋಡೆಯ ಒಂದು ಸಾಲಿನಲ್ಲಿಯೂ ನೆಡಬಹುದು. ಹಾಗೂ ಮನೆಯ ಒಂದು ಮೂಲೆಯಿಂದ ಬಳ್ಳಿ ಮನೆಯ ಮಾಳಿಗೆಯ ಕಡೆ ಹಬ್ಬುವಂತೆ ಜಾಗೃತೆಯಿಂದ ದಾರಿ ಮಾಡಿಕೊಡಬಹುದು. ಒಂದು ಮನೆಯ ಹೊರ ವಿನ್ಯಾಸಕ್ಕೆ, ಅಂಗಳದ ಸ್ಥಳಾವಕಾಶಕ್ಕೆ ಅನುಗುಣವಾಗಿ ಮಲ್ಲಿಗೆ ಗಿಡ ಹಾಗೂ ಬಳ್ಳಿಯನ್ನು ಬೆಳೆಸಬಹುದಾಗಿದೆ.

- ಭವ್ಯಾ ನೇರಲಜಡ್ಡಿ,
ಸೋಂದಾ, ಶಿರಸಿ.

ಮುಂದೆ ಓದಿ

ಪ್ರಾದೇಶಿಕ ಸುದ್ದಿ

ಸುರತ್ಕಲ್: ಪೆರ್ಮುದೆ ಗ್ರಾಮಪಂಚಾಯತ್ ವ್ಯಾಪ್ತಿಯ ಕಾಯರ್ ಕಟ್ಟೆಯಿಂದ ಪೆರ್ಮುದೆಗೆ ಸಾಗುವ ಸುಮಾರು 3 ಕಿ.ಮೀ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು ಎಸ್ಈಝೆಡ್ ಮತ್ತು ಗುತ್ತಿಗೆದಾರರ ಆಂತರಿಕ ಕಲಹದಿಂದ ಇಲ್ಲಿನ ಸಾರ್ವಜನಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಗ್ರಾಮಸ್ಥರು, ಸ್ಥಳೀಯ ಸಂಘ ಸಂಸ್ಥೆಗಳು ಮತ್ತು ಪೆರ್ಮುದೆ ಗ್ರಾಮ ಪಂಚಾಯತ್ ನ ಸರ್ವ ಸದಸ್ಯರಿಂದ ಅ. 17 ಸೋಮವಾರ ಒಂದು ದಿನದ ರಸ್ತೆ ತಡೆ - ಪ್ರತಿಭಟನೆ ನಡೆಯಲಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.



ಎಂಎಸ್ಈಝೆಡ್ಗೆ ಸಂಬಂಧಪಟ್ಟ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುವ ಈ ರಸ್ತೆಯನ್ನು ಸಾರ್ವಜನಿಕರ ಮನವಿಯ ಮೇರೆಗೆ ಕಳೆದ ವರ್ಷ ಅಗಲಗೊಳಿಸಿ ಹೊಂಡಗಳನ್ನು ಮುಚ್ಚಿ ದುರಸ್ಥಿಯನ್ನು ಎಂಎಸ್ಈಝೆಡ್ ಮಾಡಿತ್ತು. ಈ ಬಾರಿ ಮಳೆಯಿಂದಾಗ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ. ರಸ್ತೆ ದುರಸ್ಥಿ ಮಾಡುವಂತೆ ಎಂಎಸ್ಈಝೆಡ್ ಅಧಿಕಾರಿಗಳನ್ನು ವಿನಂತಿಸಿದಾಗ ಈ ಬಗ್ಗೆ ಈಗಾಗಲೇ ಗುತ್ತಿಗೆದಾರರಿಗೆ ಟೆಂಡರ್ ನೀಡಲಾಗಿದ್ದು ಅವರು ರಸ್ತೆ ರಿಪೇರಿಯ ಕಾಮಗಾರಿ ಕೈಗೆತ್ತಿಕೊಳ್ಳುತ್ತಿಲ್ಲ ಎಂದು ತಿಳಿಸಿದ್ದಾರೆಂದು ಪೆರ್ಮುದೆ ಗ್ರಾಮಪಂಚಾಯತ್ ಸದಸ್ಯ ಶ್ರೀಧರ ಶೆಟ್ಟಿ ತಿಳಿಸಿದ್ದಾರೆ. ಎಂಎಸ್ಈಝೆಡ್ ಮತ್ತು ಗುತ್ತಿಗೆದಾರರ ನಡುವಿನ ಶೀತಲ ಸಮರದಿಂದ ಸಾರ್ವಜನಿಕರು ತೊಂದರಗೊಳಗಾಗಿದ್ದು ಇದನ್ನು ಪ್ರತಿಭಟಿಸಿ ರಸ್ತೆ ದುರಸ್ಥಿಮಾಡುವಂತೆ ಒತ್ತಾಯಿಸಿ ಒಂದು ದಿನದ ರಸ್ತೆತಡೆಯನ್ನು ಮಾಡಲಾಗುವುದು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ವರದಿ: ರವೀಂದ್ರ ಶೆಟ್ಟಿ ಕುತ್ತೆತ್ತೂರು.

ಮುಂದೆ ಓದಿ
11:12 PM

ಕ್ಲಿಕ್...

Posted by ekanasu

ಕ್ಲಿಕ್...
ಜೋಡಿ ಹಕ್ಕಿಗಳ ಮೌನರಾಗ!..ಅಭಿಲಾಷ್ ಪಿ.ಎಸ್.ಕ್ಯಾಮರಾ ಕಣ್ಣಿಗೆ ಸೆರೆ ಸಿಕ್ಕಿದ್ದು ಹೀಗೆ...









ಮುಂದೆ ಓದಿ

ರಾಜ್ಯ - ರಾಷ್ಟ್ರ

ಮೂಲ್ಕಿ: ಮಂಗಳೂರಿನಿಂದ ಮುಂಬಯಿಗೆ ಹೊರಟಿದ್ದ ಖಾಸಗಿ ಬಸ್ಸೊಂದು ಉತ್ತರಕನ್ನಡದ ಯಲ್ಲಾಪುರ ಸಮೀಪದ ಕೂಡ್ಲುಗದ್ದೆ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ಸು ಉರುಳಿ ಬಿದ್ದ ಘಟನೆಯಲ್ಲಿ ಅದರಲ್ಲಿ ಪ್ರಯಾಣಿಸುತ್ತಿದ್ದ ಮೂಲ್ಕಿ ಬಳಿಯ ಕೆ.ಎಸ್.ರಾವ್ ನಗರದ ಒಂದೇ ಮನೆಯ ಇಬ್ಬರು ಮಕ್ಕಳು ದಾರುಣವಾಗಿ ಸಾವನ್ನಪ್ಪಿದ್ದು ಅವರ ತಾಯಿ ಅಪಘಾತದಲ್ಲಿ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೃತ ಪಟ್ಟವರನ್ನು ರಂಜಿತ್ (11), ರಶಿತಾ (7) ಎಂದು ಗುರುತಿಸಲಾಗಿದ್ದು ಇವರು ಮೂಲ್ಕಿ ಕೆ.ಎಸ್.ರಾವ್.ನಗರದ ನಿವಾಸಿ ಜಯರಾಮ ಎಂಬುವವರ ಮಕ್ಕಳಾಗಿದ್ದಾರೆ. ಮಕ್ಕಳೊಂದಿಗೆ ಪ್ರಯಾಣಿಸುತ್ತಿದ್ದ ಪತ್ನಿ ಮಮತಾ ಎಸ್.ಸನಿಲ್ ಹಾಗೂ ಆಕೆಯ ಸಹೋದರ ಪ್ರಸಾದ್ ಅಪಘಾತದಲ್ಲಿ ಗಾಯಗೊಂಡಿದ್ದಾರೆ.



ಕಾರ್ಕಳದ ಕಾಳಿಕಾಂಬ ದೇವಸ್ಥಾನದ ಬಳಿಯ ನಿವಾಸಿ ಸುಶೀಲ ಎಂಬುವವರ ಮಗಳಾದ ಮಮತಾರವರು ಮುಂಬಯಿಯಲ್ಲಿ ಭಾನುವಾರ ನಡೆಯಲಿದ್ದ ತಮ್ಮ ಸಂಬಂದಿಕರ ಮದುವೆಗೆಂದು ಸಹೋದರನೊಂದಿಗೆ ತೆರಳಿದ್ದರು. ಪತಿ ಜಯರಾಮ ಕೆ.ಎಸ್.ರಾವ್.ನಗರದಲ್ಲಿನ ಸಹೋದರ ಸಂಬಂದಿಯ ಅಂಗಡಿಯೊಂದರಲ್ಲಿ ಕೆಲಸದಲ್ಲಿದ್ದು ಅವರು ಪ್ರಯಾಣ ಬೆಳಸಿರಲಿಲ್ಲ.ಬಾಲಕ ರಂಜಿತ್ ಕಾರ್ಕಳದಲ್ಲಿಯೇ ಅಜ್ಜಿ ಮನೆಯಲ್ಲಿ ನೆಲೆಸಿದ್ದು ಅಲ್ಲಿಯೇ ಶಾಲೆಗೆ ಹೋಗುತ್ತಿದ್ದನು ಬಾಲಕಿ ರಶಿತಾ ತಂದೆ ತಾಯಿಯೊಂದಿಗೆ ಇದ್ದು ಮೂಲ್ಕಿಯ ನಾರಾಯಣ ಗುರು ಆಂಗ್ಲ ಮಾದ್ಯಮಶಾಲೆಯಲ್ಲಿ ಎರಡನೇ ತರಗತಿಯಲ್ಲಿ ಕಲಿಯುತ್ತಿದ್ದಳು. ಮಕ್ಕಳ ತಾಯಿ ಮಮತಾರನ್ನು ಕಾರ್ಕಳದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಕರುಳಿನ ಕುಡಿಗಳ ಸಾವಿನ ಅಘಾತದಿಂದ ಅವರು ಹೊರಬಂದಿಲ್ಲ.
ಮುಂಬಯಿಗೆ ಪ್ರಯಾಣಿಸಲು ರೈಲಿನಲ್ಲಿ ಟಿಕೇಟ್ ಸಿಗದೇ ಇದ್ದುದರಿಂದ ಕೊನೆ ಕ್ಷಣದಲ್ಲಿ ಖಾಸಗಿ ಬಸ್ಸಿನಲ್ಲಿ ಮೂಲ್ಕಿಯಿಂದ ಪ್ರಯಾಣಿಸಿದ್ದರು ಎಂದು ತಿಳಿದು ಬಂದಿದೆ.

ವರದಿ: ಭಾಗ್ಯವಾನ್ ಮೂಲ್ಕಿ

ಮುಂದೆ ಓದಿ

ರಾಜ್ಯ - ರಾಷ್ಟ್ರ

ವೇಣೂರು: ಬೆಂಗಳೂರಿನಿಂದ ಕುಂದಾಪುರಕ್ಕೆ ತೆರಳುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಐರಾವತ ಬಸ್ಸೊಂದು ವೇಣೂರು ಸಮೀಪದ ಪೆರಿಂಜೆ ಪಡ್ಡ್ಯಾರ ಬೆಟ್ಟದ ಬಳಿ ಮುಂಜಾನೆ ದರೆಯೊಂದಕ್ಕೆ ಢಿಕ್ಕಿಹೊಡೆದಿದೆ. ಚಾಲಕ ರಮೇಶ್ ಮೇಟಿ ಅವರಿಗೆ ಅಲ್ಪಸ್ವಲ್ಪ ಗಾಯಗಳಾಗಿವೆ. ಬಸ್ಸಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿತ್ತು.


ವೇಣೂರಿನಿಂದ ಎಂಟು ಕಿಲೋಮೀಟರ್ ಮುಂದೆ ಈ ಅಪಘಾತವಾಗಿದೆ. ಬಸ್ಸಿನಲ್ಲಿ 35ಮಂದಿ ಪ್ರಯಾಣಿಕರಿದ್ದರು. ಅವರನ್ನು ಸುರಕ್ಷಿತವಾಗಿ ಮತ್ತೊಂದು ಬಸ್ಸಿನ ಮೂಲಕ ಕಳುಹಿಸಿಕೊಡಲಾಗಿದೆ.










ಮುಂದೆ ಓದಿ
| | |Home