ಈ ಕನಸು

ಇದು ವರ್ಷದ ಕನಸು

ಈ ಕನಸು.ಕಾಂಗೆ ಸುದ್ದಿ,ವಿಶೇಷ ಲೇಖನ ಬರಹಗಳನ್ನು ಈ ವಿಳಾಸಕ್ಕೆ ಕಳುಹಿಸಿ.info@ekanasu.com

ಈ ಕನಸು ಅವಾರ್ಡ್

ಪರಿಣತಿ ಸಾಧಿಸುವದು ಒಂದು ಸವಾಲು, ಆದರೆ ಅಂತಹ ವಿಚಾರಗಳಲ್ಲಿ ಸವಾಲುಗಳನ್ನು ಆಸಕ್ತಿಯಿಂದ ಸ್ವೀಕರಿಸಿ ಬಹುಮುಖ ಪ್ರತಿಭೆಯಾಗಿ ಹೊರಹೊಮ್ಮಿ, ಗಟ್ಟಿಯಾಗಿ ನೆಲೆ ನಿಂತವರು ಕೆಲವೇ ವ್ಯಕ್ತಿಗಳು, ಅಂತಹ ಸಾಧಕರಲ್ಲಿ ರಂಗ ರತ್ನ ಪ್ರಶಸ್ತಿ ವಿಜೇತ ಡಾ.ರಾಜಪ್ಪ ದಳವಾಯಿ ಒಬ್ಬರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ, ವೈವಿಧ್ಯಮಯವಾದ ಕ್ಷೇತ್ರಗಳಲ್ಲಿ ತೊಡಗಿಕೊಂಡು ವಿಶಿಷ್ಟ ಶೈಲಿಯ ಕಲೆಯನ್ನು ರೂಡಿಸಿಕೊಂಡಿರುವ ಇವರು ವಿಮರ್ಶಕರಾಗಿ, ಸಂಪಾದಕರಾಗಿ, ಸಿನಿಮಾ ನಿರ್ದೇಶಕರಾಗಿ, ರಂಗಭೂಮಿ, ಜಾನಪದ, ಸಂಗೀತ ಹೀಗೆ ಹಲವಾರು ಕೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕು ಶಿವನಿ ಬಳಿಯ ಅನುವನಹಳ್ಳಿಯ ಕುರುಬ ಜನಾಂಗದ ಕಡು ಬಡತನ ಕುಟುಂಬದಲ್ಲಿ ಜನಿಸಿರುವ ಇವರು ಮಾಡಿದ ಸಾಧನೆ ಅಮೋಘವಾಗಿದೆ. ಕಷ್ಟ, ಸುಖಗಳನ್ನು ಅನುಭವಿಸಿದ ಇವರ ಬದುಕು ಏಳು, ಬೀಳುಗಳನ್ನು ಕಂಡಿದೆ. ಶಿವಮೊಗ್ಗದ ಡಿ.ವಿ.ಎಸ್ ಕಾಲೇಜಿನಲ್ಲಿ ಬಿ.ಎ. ಪದವಿ, ಮೈಸೂರು ವಿಶ್ವವಿದ್ಯಾಲಯದಿಂದ 1985ರಲ್ಲಿ ಎಂ.ಎ ಪದವಿ ಪಡೆದು, ಎಂ.ಎಂ, ಪಿ.ಜಿ.ಡಿ.ಎಫ್, ಎಂ.ಫಿಲ್, ಪಿಎಚ್.ಡಿ, ಪದವಿಗಳನ್ನು ಪಡೆದಿದ್ದಾರೆ.

'ಸ್ವಾತಂತ್ರ್ಯಪೂರ್ವದ ಕನ್ನಡ ಕಾದಂಬರಿಗಳಲ್ಲಿ ಚಾರಿತ್ರಿಕ ವಸ್ತುಗಳು' ಎಂಬ ವಿಷಯ ಕುರಿತು ಸಂಶೋಧನೆ ನಡೆಸಿದ್ದಾರೆ. ಕಪ್ಪು ದಾರಿಯ ಕೆಂಪು ಚಿತ್ರ, ಸಗಟು ಕವಿಯ ಚಿಲ್ಲರೆ ಪದ್ಯಗಳು, ನೆನಪುಗಳು ಸಾಯುವದಿಲ್ಲ, ಹಕ್ಕಿ ಪಿಕ್ಕಿಯರ ಸಂಸ್ಕೃತಿ, ಏಳೂರು ದೇವರ ಕಾಳಗ, ಇವು ಇವರ ಕೃತಿಗಳು. ಅಂತರ್ಗಟ್ಟೆವ್ವ, ರಕ್ತದ ಬಣ್ಣ ಕಪ್ಪು, ಚಲನ, ಡೋಲಿ, ತಿಳಿವಳಿಕೆ, ಓದು-ಬರಹ, ಸಿನಿಮಾ ಮೀಮಾಂಸೆ, ಕೃತಿ ಆಕೃತಿ, ಉಳುಮೆ, ಸಂಸ್ಕೃತಿ ನಿರ್ವಚನ, ಬೆಳೆ ಮತ್ತು ಸುಯೋಧನ ಎಂಬ ಹನ್ನೆರಡು ಕೃತಿಗಳು ಏಕಕಾಲದಲ್ಲಿ ಪ್ರಕಟಗೊಂಡ ದಳವಾಯಿ ಡಜನ್ ಕೃತಿಗಳೆನಿಸಿಕೊಂಡಿವೆ.

ಕದ್ದವರ್ಯಾರಣ್ಣ ಬೀಜಗಳ, ಜಾತಿ ಮಾಡಬ್ಯಾಡಿರಿ ಅಧಿಕಾರದೊಳಗ ಎಂಬ ಬೀದಿ ನಾಟಕಗಳು, 'ಕುಲಂ' ಎಂಬ ಪಂಪಭಾರತದ ಕರ್ಣನನ್ನು ಕುರಿತ ಪ್ರಸಿದ್ಧ ನಾಟಕವಾಗಿದೆ.. ಇವರ ಹಲವಾರು ಸಂಶೋದನಾ ಲೇಖನಗಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ.

ಇವರು ಕನ್ನಡ ರಂಗಭೂಮಿಗೆ ಸಲ್ಲಿಸಿರುವ ಅಪಾರ ಸೇವೆಯನ್ನು ಗುರುತಿಸಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಅಮೂಲ್ಯ ಸೇವೆಗೆ ಡಾ.ನಲ್ಲೂರು ಪ್ರಸಾದ್ ಪ್ರಶಸ್ತಿ, ಇವರ ಮುಡಿಗೇರಿವೆ. ವಿವಿಧ ಸಂಘ, ಸಂಸ್ಥೆಗಳಿಂದ ಗೌರವ, ಸನ್ಮಾನಗಳು ದೊರೆತಿವೆ.

ಪ್ರಸ್ತುತ ಇವರು ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಸಹ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾಯಕವೇ ಕೈಲಾಸವೆಂದು ತಿಳಿದು ತಮ್ಮ ಕಾರ್ಯದಲ್ಲಿ ಮಗ್ನರಾಗಿ ಕ್ರಿಯಾಶೀಲ, ನಿತ್ಯಪರಿವರ್ತನಾಶೀಲ ಗುಣ ಸ್ವಭಾವ ಅಳವಡಿಸಿಕೊಂಡಿರುವ ಇವರು ತಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಂಡಿದ್ದಾರೆ.

ನಾಟಕ ಅಕಾಡೆಮಿ ಪ್ರಶಸ್ತಿ, ನಲ್ಲೂರು ಪ್ರಶಸ್ತಿ ದೊರೆತ ಬಗ್ಗೆ ನಿಮ್ಮ ಅನಿಸಿಕೆ?

ನಾಟಕ ಅಕಾಡೆಮಿ ಪ್ರಶಸ್ತಿ ಒಂದು ವಿಶೇಷ ಸಂದರ್ಭ ಪ್ರಶಸ್ತಿ. ಸಾಹಿತ್ಯ ಅಕಾಡೆಮಿ ಆರಂಭವಾಗಿ ಐವತ್ತು ವರ್ಷ ಗತಿಸಿದೆ. ಈ ಅವಧಿಯಲ್ಲಿ ಬೆಳ್ಳಿ ಹಬ್ಬವನ್ನು ಆಚರಿಸಿ, ಐವತ್ತು ಜನಕ್ಕೆ ಸನ್ಮಾನಿಸಿ ಜೀವಮಾನದ ಸಾಧನೆ ಹಿನ್ನೆಲೆಯಲ್ಲಿ ಪ್ರಶಸ್ತಿ ವಿತರಿಸಲಾಗಿದೆ. ನಾಟಕಕಾರ, ವಿಮರ್ಶಕ, ರಂಗಕರ್ಮಿ ಪರವಾಗಿ ನನ್ನನ್ನು ಗುರುತಿಸಿದ್ದಾರೆ. ಒಳ್ಳೆಯ ಅಧ್ಯಾಪಕನಿಗೆ ರಂಗಭೂಮಿಯ ನಂಟಿರಬೇಕು ಹಾಗೂ ರಂಗಭೂಮಿ ಕುರಿತು ಅಂಕಣ ಬರೆಯುತ್ತಿದ್ದ್ದೇನೆ. ಪ್ರಶಸ್ತಿಗಳನ್ನು ನಾವು ಬಯಸಿರುವದಿಲ್ಲ. ಪ್ರಶಸ್ತಿಗಳು ದೊರೆತ ಸಂದರ್ಭದಲ್ಲಿ ಭರವಸೆ ಮೂಡುತ್ತದೆ. ಜವಾಬ್ದಾರಿ ಹೆಚ್ಚುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಕಾರ್ಯ ಮಾಡಲು ಪ್ರೋತ್ಸಾದಾಯಕವಾಗಿರುತ್ತದೆ.

ನಿಮಗೆ ಬರವಣಿಗೆಯೇ ಬದುಕಾಗಲು ಕಾರಣ?

ನಾನು ಮೊದಲು ನಿರುದ್ಯೋಗಿ, ಬದುಕಿನ ಅನಿವಾರ್ಯತೆಗಳು, ಹತ್ತಾರು ವರ್ಷ ಬಳಲಿದ ಅನುಭವ ಬರಹಗಾರನಾಗಲು ಪ್ರೇರೇಪಿಸಿತು. ವಿಶ್ವವಿದ್ಯಾಲಯ ಮಟ್ಟದಲ್ಲಿ ಕಲಿಯುವದು ಒಂದು ಹಂತ. ಬದುಕಿನಿಂದ ಕಲಿಯುವ ಕಲಿಕೆ ಮನುಷ್ಯನ ಜೀವನ ರೂಪಿಸುತ್ತದೆ. ಜೀವನದಲ್ಲಿ ಬರುವಂತಹ ಅನಿವಾರ್ಯ ಸಂದರ್ಭಗಳು ಕವಲು ದಾರಿಗಳಾಗಿ ಒಂದು ಹಂತಕ್ಕೆ ತಂದು ನಿಲ್ಲಿಸುತ್ತವೆ. ವಿಶ್ವವಿದ್ಯಾಲಯದಿಂದ ಸಮಾಜ ಅಪಾರವಾದುದನ್ನು ಬಯಸುತ್ತದೆ. ಮೂಲತ: ನಾನು ಚಿತ್ರ ಕಲಾವಿದ, ಆಮೇಲೆ ಸಾಹಿತ್ಯದ ವಿದ್ಯಾರ್ಥಿ, ಸಿನಿಮಾ, ನಾಟಕ, ಸಂಗೀತ ಈ ಎಲ್ಲಾ ಕ್ಷೆತ್ರಗಳಲ್ಲಿ ಕೆಲಸ ಮಾಡಿದ ಅನುಭವ ಒಬ್ಬ ಒಳ್ಳೆಯ ಅಧ್ಯಾಪಕನನ್ನಾಗಿ ರೂಪಿಸಿವೆ.

ನಾಟಕ ಕ್ಷೇತ್ರಕ್ಕೆ ಪಾದಾರ್ಪಣೆ ಹೇಗಾಯಿತು?

ಬಾಲ್ಯದಿಂದಲೂ ನನಗೆ ನಾಟಕದಲ್ಲಿ ಆಸಕ್ತಿ, ನಮ್ಮ ಹಳ್ಳಿಯಲ್ಲಿ ಬಯಲಾಟ ತುಂಬಾ ಪ್ರಸಿದ್ಧ, ಬಯಲಾಟದಲ್ಲಿ ನಾನು ಭಾಗವಹಿಸುತ್ತಿದ್ದೆ. ಪ್ರಸಿದ್ಧ ರಂಗ ನಿರ್ದೇಶಕ ಅಶೋಕ ಬಾದರದಿನ್ನಿ ನನ್ನ ಮೊದಲ ರಂಗ ಗುರು. ಅವರು 'ಎ ಮಿಸ್ಸೆಮರ್ ನೈಟ್ ಡ್ರೀಮ್ಸ್' ಷೇಕ್ಸ್ಪಿಯರ್ನ ನಾಟಕ ಕಲಿಸಿದ್ದರು. ಅದರಲ್ಲಿ ನನ್ನದೊಂದು ಚಿಕ್ಕ ಪಾತ್ರ, ಅವರು ಮಾಡಿದ ರಂಗಭೂಮಿಯ ಸಿದ್ದಾಂತ, ಅದರ ಕುರಿತ ವ್ಯಾಖ್ಯಾನಗಳು ಇವೆಲ್ಲವೂ ನನ್ನನ್ನು ರಂಗಭೂಮಿ ಕಡೆಗೆ ಆಕರ್ಷಿಸಿದವು. ಆಗ ಮೈಸೂರಿನಲ್ಲಿ ರಂಗಭೂಮಿ ಶುರುವಾಗಿತ್ತು. ರಂಗಾಯಣದ ನಾಟಕಗಳನ್ನು ನೋಡುತ್ತ ಎರಡು ದಶಕಗಳು ಕಳೆದವು, ರಂಗಾಯಣ ಒಂದು ರೀತಿಯಲ್ಲಿ ನಾಟಕಕಾರನನ್ನಾಗಿ ರೂಪಿಸಿತು.

ಒಳ್ಳೆಯ ನಾಟಕಗಳನ್ನು ನೋಡಿದರೆ ನಾಟಕಕಾರನಾಗಲು ಸಾಧ್ಯವಿಲ್ಲ. ಅದರಲ್ಲಿ ಭಿನ್ನವಾಗಿ ತೊಡಗಿಕೊಳ್ಳಬೇಕು. ರವೀಂದ್ರ ಕಲಾ ಕ್ಷೇತ್ರದ ಒಬ್ಬ ಸಾಮಾನ್ಯ ಪ್ರೇಕ್ಷಕ ನಾನು, ಮುಂದೊಂದು ದಿನ ನಾನೊಬ್ಬ ನಾಟಕಕಾರ ಆಗಬಹುದು, ಇದೇ ರಂಗಮಂದಿರದಲ್ಲಿ ನಿರ್ದೇಶನ ಮಾಡಬಹುದು ಎಂದು ನಾನು ಕಲ್ಪಿಸಿಕೊಂಡೇ ಇರಲಿಲ್ಲ.

ಕನ್ನಡ ರಂಗಭೂಮಿಯ ಪ್ರಸ್ತುತ ಸ್ಥಿತಿಗತಿ ಹೇಗಿದೆ?

ಕನ್ನಡ ರಂಗಭೂಮಿ ಸೃಜನಶೀಲ ಮಾಧ್ಯಮವಾಗಿದ್ದು ಅತ್ಯಂತ ಪ್ರಯೋಗಶೀಲವಾಗಿದೆ. ಇಂದು ಆಸಕ್ತ ಕಲಾವಿದರು ಹಾಗೂ ಯುವಕರು ಈ ಕ್ಷೇತ್ರದ ಕಡೆ ಹೆಚ್ಚು ಹೆಚ್ಚು ಆಕರ್ಷಿತರಾಗಿದ್ದಾರೆ ಪ್ರಸಕ್ತ ದಿನಮಾನಗಳಲ್ಲಿ ತಾಂತ್ರಿಕ ಮಾಧ್ಯಮಗಳಾದ ದೂರದರ್ಶನ, ಸಿನಿಮಾ ಮಾಧ್ಯಮಗಳು ಸೃಷ್ಟಿಯಾಗಿವೆ. ಅದಾಗ್ಯೂ ಕನ್ನಡ ರಂಗಭೂಮಿ ಜೀವಂತ ಮಾಧ್ಯಮವಾಗಿದ್ದು ಇಂದು ಪ್ರಯೋಗಶೀಲವಾಗಿದೆ. ಹಾಗೂ ಸಕ್ರಿಯವಾಗಿದೆ ಆದರೆ ಆದಾಯಕ್ಕಿಂತ ಪರಿಣಾಮಕಾರಿ ಜನ ಮಾಧ್ಯಮವಾಗಿದೆ. ಸಿನಿಮಾದಲ್ಲಿ ಗ್ಲಾಮರ್ ಇರುತ್ತದೆ, ಆದಾಯ ಹೆಚ್ಚು. ರಂಗಭೂಮಿಯಲ್ಲಿ ಹೆಚ್ಚು ಆದಾಯದ ಸಾಧ್ಯತೆಗಳು ಕಡಿಮೆ, ರಂಗಭೂಮಿಯಲ್ಲಿ ಲಾಭ ಇಲ್ಲ. ಆದರೆ ಅದು ಪ್ರತಿಭೆಗಳನ್ನು ನಿರ್ಮಾಣ ಮಾಡುತ್ತದೆ.

ಕನ್ನಡ ರಂಗಭೂಮಿಯ ಮೇಲೆ ಪಾಶ್ಚಾತ್ಯ ರಂಗಭೂಮಿಯ ಪ್ರಭಾವ ಬೀರಿದೆಯೇ?

ಕನ್ನಡ ರಂಗಭೂಮಿಯ ಮೇಲೆ ಪಾಶ್ಚಾತ್ಯ ರಂಗಭೂಮಿ ಪ್ರಭಾವ ಇದೆ. ಮೊದಲು ಬೇರೆ ಭಾಷೆಯ ರಂಗಭೂಮಿ ಭಾರತೀಯ ಸಂಸ್ಕೃತಿ, ಜೀವನ ಶೈಲಿ ಮತ್ತು ಭಾಷೆಯ ಮೇಲೆ ಹೆಚ್ಚು ಪರಿಣಾಮ ಬೀರಿದೆ. ದೇಶೀಯ ಹಿತಾಸಕ್ತಿಯನ್ನು ಕಾಪಾಡುವಲ್ಲಿ ಕನ್ನಡ ರಂಗಭೂಮಿ ದೇಶೀಯ ಸಂಸ್ಕೃತಿಯ ಜೊತೆಗೆ ಪಾಶ್ಚಿಮಾತ್ಯ ರಂಗಭೂಮಿಯ ಕೆಲವು ಸಾಹಿತ್ಯಗಳ ಪ್ರಭಾವದಿಂದ ಪ್ರಭಾವಿತವಾಗಿರುವುದು ಉಂಟು. ಭಾರತೀಯ ರಂಗಭೂಮಿ ಕೂಡ ಪಾಶ್ಚಾತ್ಯರ ಮೇಲೆ ಪ್ರಭಾವ ಬೀರಿದೆ, ಪೀಟರ್ ಬ್ರೂಕ್ ಎನ್ನುವವರು ಹನ್ನೆರಡು ಘಂಟೆಗಳ ಕಾಲ 'ಮಹಾಭಾರತ' ನಿರ್ದೇಶನ ಮಾಡಿದರು. ನಾಟಕ ಒಂದು ಜಾಗತಿಕ ಭಾಷೆ. ಸಿನಿಮಾ ನಾಟಕದಲ್ಲಿ ಭಾಷೆ ಮುಖ್ಯ ಅಲ್ಲ. ಅನುಭವ ಮುಖ್ಯ. ಅದೊಂದು ಜಾಗತಿಕ ವ್ಯಾಕರಣ ಕ್ಷೇತ್ರ. ಕನ್ನಡದ ಅಗ್ನಿ ಮತ್ತು ಮಳೆ ಅಮೇರಿಕನ್ ನಾಟಕದ ಮೇಲೆ ಪ್ರಭಾವ ಬೀರಿದೆ. ರಂಗಭೂಮಿಯ ವೈಶಿಷ್ಟ್ಯ ಎಲ್ಲಿದ್ದರೂ ಪ್ರಭಾವ ಬೀರುತ್ತದೆ.


ಪ್ರಶಸ್ತಿಗಳ ಆಯ್ಕೆಯಲ್ಲಿ ಅಪಸ್ವರಗಳಿವೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ?

ಪ್ರಶಸ್ತಿಗಳ ಆಯ್ಕೆಯಲ್ಲಿ ಅನೇಕ ವಿಚಾರಗಳನ್ನು ಚರ್ಚೆ ಮಾಡಿ ನಿರ್ದಿಷ್ಟವಾದ ಮಾನದಂಡಗಳನ್ನು ಪರಿಗಣಿಸಿ ಪ್ರಶಸ್ತಿಯನ್ನು ಕೊಡಲಾಗುತ್ತದೆ. ನಾನು ಕೂಡ ಸಾಹಿತ್ಯ ಅಕಾಡೆಮಿ ಸದಸ್ಯನಾಗಿ ಕೆಲಸ ನಿರ್ವಹಿಸಿದ್ದೇನೆ. ಅನೇಕ ವಿಷಯಗಳನ್ನು ಚರ್ಚೆಗೆ ತಂದು, ಸದಸ್ಯರು ಯಾರನ್ನು ಒಪ್ಪಿಕೊಳ್ಳುತ್ತಾರೆ, ಆ ವ್ಯಕ್ತಿಯ ಬಗ್ಗೆ ಕೂಲಂಕಷವಾಗಿ ತಿಳಿದು ಚರ್ಚೆ ನಡೆಸಲಾಗುತ್ತದೆ. ಇದು ಪ್ರಜಾಪ್ರಭುತ್ವ ರಾಷ್ಟ್ರ, ಪ್ರಶಸ್ತಿಗಳು ಪ್ರಜಾಪ್ರಭುತ್ವದಿಂದ ಕೂಡಿರುತ್ತವೆ. ಕೆಲವು ಸಾರಿ ಕೆಲವರ ಪ್ರಾಭಲ್ಯ ಅಧಿಕವಾಗಿರುತ್ತದೆ. ಪ್ರಶಸ್ತಿಗಳ ಆಯ್ಕೆಯಲ್ಲಿ ಅಪಸ್ವರ ಹೇಳಬಹುದು, ಏಕೆಂದರೆ ಆಪೇಕ್ಷಿತರ ಪಟ್ಟಿ ಅಧಿಕವಾಗಿರಬಹುದು. ಕ್ಷೇತ್ರದಲ್ಲಿ ಗಣನೀಯ ಸಾಧನೆ, ಕೊಡುಗೆಗಳನ್ನು ಪರಿಗಣಿಸಿ ಚೆನ್ನಾಗಿ ಕೆಲಸ ಮಾಡಿದವರನ್ನು ಯಾವ ಪ್ರಸಸ್ತಿಗಳು ಮರೆತಿಲ್ಲ.


ಅಮರೇಶ ನಾಯಕ ಜಾಲಹಳ್ಳಿ
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಗುಲಬರ್ಗಾ ವಿಶ್ವವಿದ್ಯಾಲಯ ಗುಲಬರ್ಗಾ

ಮುಂದೆ ಓದಿ

ವೈವಿಧ್ಯ

ತೋಟ ಗದ್ದೆಗಳಲ್ಲಿ ಅಡಗಿರುವ ಎಂತಹುದೇ ಹಾವು ಅದಾಗಿರಲಿ, ಎಷ್ಟೇ ವಿಷಕಾರಿಯಾಗಿರಲಿ, ಆಹಾರವನ್ನರಸುತ್ತ ಆಗಮಿಸಿ ಇತರರ ಭಯಕ್ಕೆ ಕಾರಣವಾಗುವಂತಹ ಅಂತಹ ಹಾವುಗಳನ್ನು ಸರಳ ವಿದಾನವೊಂದರ ಮೂಲಕ ಬೀಳ್ಕೊಡಬಹುದೆಂಬುದನ್ನು ತೋರಿಸಿಕೊಟ್ಟಿದ್ದಾರೆ ಯಲ್ಲಾಪುರ ತಾಲೂಕಿನ ತಟಗಾರ್ ಗ್ರಾಮದ ರವೀಂದ್ರ ಭಟ್ಟ ಕಣ್ಣಿಮನೆ. ಯಾವದೇ ಹಿಂಸೆ ನೀಡಿದೆ ಎಂಥ: ವಿಷಕಾರಿ ಹಾವನ್ನಾದರೂ ಸರಳ ಉಪಾಯದ ಮೂಲಕ ಯಾವದೇ ಅಪಾಯವಿಲ್ಲದೇ ಹಿಡಿಯಬಹುದು. ಕೇವಲ ಒಂದು ಪಿ.ವಿ.ಸಿ ಪೈಪ್ ಹಾಗೂ ಕೋಳಿಮೊಟ್ಟೆಯೊಂದನ್ನು ಬಳಸಿ ಹಾವನ್ನು ಸೆರೆಹಿಡಿಯಬಹುದು ಎಂಬುದು ಅವರ ಚಿಂತನೆ. ಇದುವರೆಗೆ 30ಕ್ಕೂ ಅಧಿಕ ಹಾವೂಗಳನ್ನು ಈ ತಂತ್ರದಿಂದ ಹಿಡಿದು ನಾಡಿನಿಂದ ಕಾಡಿನ ದಿಕ್ಕು ತೋರಿಸಿದ ಕೀರ್ತಿಯೂ ಇವರಿಗಿದೆ.



ಹೀಗಿದೆ ವಿಧಾನ

5ಅಡಿ ಉದ್ದದ ಹಾವು ಅದಾಗಿದ್ದರೆ 7ಅಡಿ ಉದ್ದದ ಪಿ.ವಿ.ಸಿ ಪೈಪ್ ಹಾಗೂ ಒಂದು ಕೊಳಿಮೊಟ್ಟೆಯಿದ್ದರೆ ಸಾಕು. ಪೈಪ್ನ ಒಂದು ಭಾಗದಲ್ಲಿ ಕೋಳಿಮೊಟ್ಟೆಯನಿಡಬೇಕು. ಸ್ವಲ್ಪ ಗಟ್ಟಿಯಾಗಿ ಮುಚ್ಚಳವನ್ನು ಮುಚ್ಚಿಟ್ಟು ಇನ್ನೊಂದು ತುದಿಯನ್ನು ಸ್ವಲ್ಪ ಎತ್ತರ ಜಾಗದಲ್ಲಿ ಅಂದರೆ ಗೋಣಿಚೀಲ ಅಥವಾ ಇವರೆ ತಯಾರಿಸಿರುವ ಸ್ಟಾಂಡ್ಒಂದನ್ನು ಬಳಸಬಹುದು. ಪೈಪ್ ಅತ್ತಿತ್ತ ಹೊರಳಾಡದಂತೆ ಎಚ್ಚರ ವಹಿಸಬೇಕು. ಪೈಪ್ನ ಗಾತ್ರ ಸುಲಬವಾಗಿ ಹಾವು ಒಳಹೊಕ್ಕುವಂತಿರಬೇಕು. ಇಲ್ಲಿಗೆ ನಮ್ಮ ಕೆಲಸ ಮುಗಿಯಿತು. ಕೆಲವೇ ಘಂಟೆಗಳಲ್ಲಿ ನಿಮಗೆ ತೊಂದರೆ ನೀಡುತ್ತಿದ್ದ ಹಾವು ಬೋನಿನಲ್ಲಿರುತ್ತದೆ. ಆಹಾರಕ್ಕಾಗಿ ಮೊಟ್ಟೆಯ ವಾಸನೆಯನ್ನು ಗ್ರಹಿಸಿ ಆಗಮಿಸುವ ಉರಗ ಮೊಟ್ಟೆಯನ್ನು ಜೀರ್ಣಿಸುವದರಳಗಾಗಿ ನಿಮ್ಮ ತಕ್ಕೆಯಲ್ಲಿರುತ್ತದೆ. ನಾಗರ ಹಾಗೂ ಇತರೆ ಬಲು ವಿಷಕಾರಿ ಹಾವುಗಳಿಂದ ರಕ್ಷಣೆ ಪಡೆಯಲು ಇದೊಂದು ಸುಲಬ ಉಪಾಯ. ಹಾವುಗಳೆಂದರೆ ಭಯಪಡುವವರು ಈ ಸುಲಭ ತಂತ್ರವನ್ನು ಉಪಯೋಗಿಸಿ ಅಪಾಯದಿಂದ ಪಾರಾಗಬಹುದು.

ರವಿಯ ನುಡಿಯಂತೆ...
ಒಮ್ಮೆ ತೋಟದಲ್ಲಿ ಗಿಡಗಳಗೆ ನೀರುಣಿಸಲೆಂದು ಬಳಸಿರುವ ಪೈಪ್ನೊಳಗೆ ಮಿನಿ ನಾಗರವೊಂದು ನುಸುಳಿದ್ದೆ ಇವರ ಈ ಸಂಶೋಧನೆಗೆ ಪ್ರೇರಣೆಯಂತೆ! ಬೋನಿನೊಳಗೆ ಬಿದ್ದ ಹಾವನ್ನು ಯಾವದಾದರೂ ನೀರಿನೋಳಗೆ ಬಿಡುವದು ಸೂಕ್ತ ಎಂಬುದು ಇವರ ವಾದ. ನೀರಿನೊಳಗೆ ಬಿಡುವದರಿಂದ ಹಾವಿಗೂ ಪೆಟ್ಟಾಗದು, ನಮಗೂ ಯಾವದೇ ಅಪಾಯವಿಲ್ಲ. ಇಲ್ಲವಾದಲ್ಲಿ ದಟ್ಟ ಕಾನನದಲ್ಲಿಯೂ ಹಾವನ್ನು ಬಿಡಬಹುದು. ಹಾವಿನೊಂದಿಗೆ ಹುಡುಗಾಟ ಸಲ್ಲದು ಎಂಬ ಎಚ್ಚರಿಕೆಯನ್ನು ಇವರು ನೀಡುತ್ತಾರೆ. ರೈತರು ಇಲಿಯ ಕಾಟದಿಂದ ಮುಕ್ತಿ ಪಡೆಯಲೂ ಇದೇ ವಿದಾನದಲ್ಲಿ ಕೊಂಚ ಬದಲಾವಣೆಯೊಂದಿಗೆ ಪ್ರಯತ್ನಿಸಬಹುದು ಎನ್ನುತ್ತಾರೆ ರವಿ ಕಣ್ಣಿ.

ಸಾಗಿಬಂದ ದಾರಿ...
ಹಳ್ಳಿಯೆಂದರೆ ಮೂಗು ಮುರಿಯುತ್ತಲಿದ್ದ ಹಳ್ಳಿಯಿಂದ ನಗರ ಸೇರಿದ ಯುವಕರಿಗೆ ಮಾದರಿಯಾಗಿರುವ ರವಿ ಡಿಪ್ಲೋಮಾ ಪದವಿಧರರಾಗಿದ್ದು ಹೊಸ ಸಂಶೋಧನೆಗಳ ಹರಿಕಾರ. ನ್ಯಾಶನಲ್ ಇನೋವೇಶನ್ ಫೌಂಡೇಶನ್ ಅವರಿಂದ ತಳಮಟ್ಟದ ಸಂಶೋಧಕ ಎಂಬ ಪ್ರಶಂಸೆಗೂ ಇವರು ಪಾತ್ರರಾಗಿದ್ದಾರೆ. ಹಾವು ಹಿಡಿಯುವ ತಂತ್ರದಂತೆ ರೈತನಿಗೆ ಅನೂಕುಲವಾಗುವ ನಿಟ್ಟಿನಲ್ಲಿ ಇಲಿ ಹಿಡಿಯುವ ತಂತ್ರದ ಪರಿಕಲ್ಪನೆಯನ್ನು ನೀಡಿದ್ದಾರೆ. ವೆನಿಲಾ ಪಂಚ್ ಹಾಗೂ ಅಡಿಕೆ ಪಂಚ್ ಎಂಬ ಇವರ ಹೊಸ ಆವಿಷ್ಕಾರ ಕಳ್ಳ ಕಾಕರರಿಂದ ರೈತರನ್ನು ಕಾಪಾಡುವ ಕೀಲಿ ಕೈ ಎಂದೆ ಹೇಳಬಹುದು. ಧಾರವಾಡದಲ್ಲಿ 2009-10ರಲ್ಲಿ ನಡೆದ ಕೃಷಿಮೆಳದಲ್ಲಿ ಇವರ ಇತರೆ ಸಂಶೋದನೆಗಳು ಪ್ರಶಂಸೆಯ ಕೇಂದ್ರಬಿಂದುಗಳಾಗಿದ್ದವು. ಡಿಪ್ಲೋಮಾ ಪದವಿದರರಾಗಿರುವ ಇವರು ಕೃಷಿ ಸಂಶೋದನೆಯತ್ತ ಆಸಕ್ತಿ ತೋರಿ ಸುಲಭ ಹಾಗೂ ಸರಳ ವಿದಾನಗಳ ಮೂಲಕ ನೂತನ ಸಂಶೋಧನೆಗಳತ್ತ ದಾಪುಗಾಲು ಹಾಕುತ್ತಿದ್ದಾರೆ. ಇವರ ಸಂಪರ್ಕಕ್ಕಾಗಿ 9845875161ಗೆ ಕರೆಮಾಡಿ ಇತರೆ ಹೆಚ್ಚಿನ ಮಾಹಿತಿ ಪಡೆಯಬಹುದು.

-ಅಚ್ಯುತಕುಮಾರ, ಯಲ್ಲಾಪುರ

ಮುಂದೆ ಓದಿ

ಈ ಕನಸು ಅವಾರ್ಡ್
ಕರ್ನಾಟಕ ರಾಜ್ಯ ಅನೇಕ ಆದಿವಾಸಿಗಳ ನೆಲೆಬೀಡು. ಊರ ಹೊರಗೋ ಅಥವಾ ಎಲ್ಲೋ ಕಾಡಿನ ಮಧ್ಯೆ ಜೀವನ ನಡೆಸುತ್ತಿರುವ ಇವರು ಇಂದು ಸುಶಿಕ್ಷಿತರಾಗಿ ಸಮಾಜದ ಮುಖ್ಯ ಬರುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕಂಡು ಬರುವ ಪ್ರಮುಖ ಬುಡಕಟ್ಟು ಜನಾಂಗ ಎಂದರೆ ಅದು ಸಿದ್ದಿ ಜನಾಂಗ. ದೂರದ ಆಫ್ರಿಕಾದಿಂದ ಬಂದ ಇವರು ದೇಶದ ಅನೇಕ ಭಾಗಗಳಲ್ಲಿ ನೆಲೆಸಿದ್ದಾರೆ.ಸಿದ್ಧಿಜನಾಂಗದ ಕುರಿತಾದ ಅಧ್ಯಯನ ನಮ್ಮ ಚಿಂತನೆಯಾಗಿತ್ತು. ಅಂದು ಸುಮಾರು ಮಧ್ಯಾನ್ನ 12.30ರ ಸಮಯ.


ಶಿರಸಿ ತಾಲೂಕಿನ ವಾನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಪುಟ್ಟ ಗ್ರಾಮ ಶಿರಸಗಾಂವವನ್ನು ತಲುಪಿದ್ದೆವು. ಸಿದ್ದಿಗಳ ಜನಜೀವನವನ್ನು ತಿಳಿಯಲೆಂದೇ ನಾವು ಅಲ್ಲಿನ ವೆಂಕಟರಮಣ ಗಿಡ್ಡ ಸಿದ್ದಿ ಎಂಬುವವರ ಮನೆಗೆ ನಡೆದೆವು. ಅವರ ಮನೆ ಸಾಮಾನ್ಯ ಮನೆಯಂತೆ ಇತ್ತು. ಡಿಶ್ ಟಿವಿ ಪ್ರಭಾವವೂ ಇತ್ತು. ಮನೆ ಯೊಳಗೆ ನೋಡಿದಾಗ ಏಸುವಿನ ಚಿತ್ರಗಳು ಕಾಣುತ್ತಿದ್ದವು. ಅವರು ಕ್ರೈಸ್ಥ ಧರ್ಮಕ್ಕೆ ಸೇರಿದವರಾಗಿದ್ದರು. ವೆಂಕಟರಮಣ ಸಿದ್ದಿಯವರ ಸಂಸಾರದಲ್ಲಿ
ಹೆಂಡತಿ, ಮೂರು ಜನ ಹೆಣ್ಣು ಮಕ್ಕಳು, ಒಂದು ಗಂಡು ಮಗುವಿನ ಚಿಕ್ಕ ಕುಟುಂಬ.

ಅವರ ಮನೆಗೆ ನಾವು ಭೇಟಿ ನೀಡಿದಾಗ ಅವರ ಮನೆಗೆ ಸುಣ್ಣ - ಬಣ್ಣ ಬಳಿಯಲಾಗುತ್ತಿತ್ತು. ಅವರ ಎರಡನೇ ಮಗಳಿಗೆ ಮದುವೆ ನಿಶ್ಚಯವಾಗಿತ್ತು. ಹಿಂದೂ ವರನೊಂದಿಗೆ ವಿವಾಹ ನಿಶ್ಚಯಿಸಿದ್ದರು. ಮೊದಲ ಮಗಳಿಗೆ ಮದುವೆಯಾಗಿತ್ತು. ಅವರ ಸಂಪ್ರದಾಯ ಏನೆಂದರೆ ಹಿಂದೂಗಳೊಂದಿಗೆ ವಿವಾಹವಾಗುವಾಗ ಹಿಂದೂ ವಿವಾಹ ಪದ್ದತಿ ಅನುಸರಿಸುವುಸುದು, ಕ್ರೈಸ್ತರೊಂದಿಗೆ ವಿವಾಹ ಆಗುವಾಗ ಕ್ರೈಸ್ತ ಧರ್ಮದ ವಿವಾಹ ಪದ್ದತಿಯನ್ನು ಅನುಸರಿಸುವುದಾಗಿದೆ. ಹೀಗೆ ಎಲ್ಲಾ ಧರ್ಮಗಳಲ್ಲೂ ಇವರು ಸಂಬಂಧ ಬೆಳೆಸುತ್ತಿರುವುದು ಆಶ್ಚರ್ಯದ ಸಂಗತಿ.

ಸ್ವಲ್ಪ ಸಮಯದ ನಂತರ ನಾವು ಅವರ ಅಡುಗೆ ಮನೆಗೆ ತೆರಳಿ ಮನೆಯವರೊಂದಿಗೆ ಮಾತನಾಡುತ್ತಿದ್ದೆವು. ಆಗ ಅವರು ನಮಗೆ ಕೋಕಂಬ್ ಜ್ಯೂಸ್ ತಯಾರಿಸುತ್ತಿದ್ದು ಕಂಡು ಬಂತು. ಅವರು ಆ ಜ್ಯೂಸ್ ತಯಾರಿಸುವುದನ್ನು ಶಿರಸಿಯ ಪ್ರಗತಿ ಎಂಬ ಸಂಸ್ಥೆಯಿಂದ ಕಲಿತಿದ್ದರು. ಅವರ ಮೂಲ ಅಡುಗೆಗಳ ಬಗ್ಗೆ ಕೇಳಿದಾಗ , "ಮೂಲ ಅಡುಗೆಗಳು ಅಂತ ಏನೂ ಇಲ್ಲರಿ, ಈಗ ಎಲ್ಲರೂ ಮಾಡುವ ಅಡುಗೆಯನ್ನೇ ಮಾಡುತ್ತೇವೆ, ಅನ್ನ ಸಾರು, ಪಲಾವ್ ಹೀಗೆ ಎಲ್ಲಾ ಮಾಡುತ್ತೇವೆ" ಎಂದು ಆ ಮನೆಯ ಮಗಳು ಅನ್ನಳ ಹೇಳುತ್ತಾಳೆ..


ಆ ಮನೆಯವರಿಂದ ಸಿಕ್ಕ ಇನ್ನೊಂದು ಕುತೂಹಲದ ವಿಷಯ ಎಂದರೆ ಚಿಗಳಿ ಚಟ್ನಿ. ಈ ಚಿಗಳಿ ಚಟ್ನಿಯನ್ನು ಕೆಂಪು ಇರುವೆಗಳಿಂದ ಮಾಡುತ್ತಾರಂತೆ. ಈ ಇರುವೆಗಳ ಗೂಡನ್ನೇ ತಂದು ಅವನ್ನು ಹುರಿದು ಮಸಾಲೆ ಹಾಕಿ ಚಟ್ನಿಯನ್ನು ತಯಾರಿಸುತ್ತಾರಂತೆ. ಇದು ಬಾಣಂತಿಯರಿಗೆ ತುಂಬಾ ಉಪಯೋಗ ಹಾಗೂ ನೆಗಡಿ ಕೆಮ್ಮು ಎಲ್ಲಕ್ಕೂ ಬರತ್ತೆ ಅಂತ ಹೇಳ್ತಾರೆ ಮನೆಯ ಯಜಮಾನಿ ಪ್ರೇಮ ವೆಂಕಟರಮಣ ಸಿದ್ದಿ.
ಜೀವನೋಪಾಯಕ್ಕೆಂದೇ ಅನೇಕ ಕಸುಬುಗಳನ್ನು ಮಾಡುತ್ತಿದ್ದಾರೆ.
ಇವರು ಅರಣ್ಯ ಕಿರು ಉತ್ಪನ್ನಗಳಾದ ಉಪ್ಪಾಗೆ, ಲವಂಗ, ದೂಪ, ರಾಂಪತ್ರೆಗಳನ್ನು ಕಾಡಿನಿಂದ ಸಂಗ್ರಹಿಸಿ ಮಾರುಕಟ್ಟೆಗೆ ನೀಡುತ್ತಿದ್ದಾರೆ. ಒಂದನ್ನು ಕಡಿದರೆ ಎರಡನ್ನು ಬೆಳಸಿ ಎಂಬ ತತ್ವದೊಂದಿಗೆ ಉತ್ತಮ ಜೀವನ ನಡೆಸುತ್ತಿದ್ದಾರೆ.
ಕಾಡಿನಲ್ಲಿ ಸಿಗುವಂತಹ ಹುಕ್ಕೆ ಬಳ್ಳಿಯಿಂದ ಬುಟ್ಟಿ ಹೆಣೆಯುವುದು, ಪ್ಲೇಟ್ ತಯಾರಿಕೆ, ಬೀಸಣಿಕೆ, ಟಿಪಾಯಿಗಳು, ಅಲಂಕಾರಿಕ ಹೂಗಳನ್ನು ತಯಾರಿಸುತ್ತಿದ್ದಾರೆ. ವೈವಿಧ್ಯಮಯ ಚಾಪೆಗಳನ್ನು ಹೆಣೆಯುತ್ತಿದ್ದಾರೆ. ಈ ವಸ್ತುಗಳ ಬೆಲೆ 250-300 ರೂಗಳಿಂದ ಆರಂಭವಾಗುತ್ತದೆಯಂತೆ ಇದಕ್ಕೆ ಮಾರುಕಟ್ಟೆಯಲ್ಲಿ ತುಂಬಾ ಬೇಡಿಕೆ ಇದೆಯಂತೆ.




ನಮ್ಮದು ಅಡಿಕೆ ಹಾಗು ತೆಂಗಿನ ತೋಟ ಇದೆ ಕಣ್ರಿ ಮತ್ತೆ ಜೇನು ಕೂಡಾ ಸಾಕುತ್ತಾ ಇದ್ದೇವೆ ಕಣ್ರೀ ಅಂತ ಖುಷಿಯಿಂದ ಜೇನು ಸಾಕುತ್ತಿರುವ ಪಟ್ಟಿಗೆಯನ್ನು ತೆಗೆದು ತೊರಿಸುತ್ತಾರೆ ವೆಂಕಟರಮಣ ಸಿದ್ದಿಯವರು.
ಒಟ್ಟಾರೆ ಇಂದಿನ ಕಳೆದು ಹೋಗಿರುವ ಪ್ರಪಂಚದಲ್ಲಿ ಕಳೆದು ಹೋಗಿರುವ ನಾವು ಸಿದ್ದಿಗಳ ಜೀವನವನ್ನು ನೋಡಿದಾಗ ನಮಗಿಂತ ಉತ್ತಮ ಸ್ಥಿತಿಯಲ್ಲಿದ್ದಾರೆ ಎನ್ನಿಸುವುದು ಸಹಜ. ಆದರೆ ಅವರಲ್ಲಿ ಇಂದು ಅನೇಕ ಬದಲಾವಣೆಗಳನ್ನು ಕಾಣಬಹುದು. ಅವರ ಮೂಲ ಆಹಾರ ಪದ್ದತಿಗಳನ್ನು ಮರೆತ್ತಿದ್ದಾರೆ. ಅನೇಕ ಕಾಡಿನ ಔಷಧಿಗಳನ್ನು ಬಿಟ್ಟು ಇಂಗ್ಲೀಷ್ ಮೆಡಿಸಿನ್ ಗಳತ್ತ ನಡೆಯುತ್ತಿದ್ದಾರೆ. ಆಧುನಿಕ ಯುಗದತ್ತ ದಾಪುಗಾಲಿಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯೇ ಸರಿ. ಆದರೆ ಎಲ್ಲೋ ಅವರ ಮೂಲ ಸಂಸ್ಕೃತಿ ನಾಶವಾಗುತ್ತಿದೆ ಎಂದು ಅನಿಸುತ್ತಿಲ್ಲವೇ?. ಇದು ಅವರ ಸಿದ್ದಿಗಳ ಉನ್ನತಿಯೋ...? ಅವನತಿಯೋ...? ಎಂಬುದು ಯಕ್ಷ ಪ್ರಶ್ನೆಯಾಗಿದೆ.

ದರ್ಶನ್ ಬಿ.ಎಂ
ಪತ್ರಿಕೋದ್ಯಮ ವಿಭಾಗ
ಆಳ್ವಾಸ್ ಕಾಲೇಜ್
ಮೂಡುಬಿದಿರೆ.

ಮುಂದೆ ಓದಿ

ರಾಜ್ಯ - ರಾಷ್ಟ್ರ
ಮೂಡುಬಿದಿರೆ: ಮಂಗಳೂರು ವಿವಿ 2011 ಮೇ ನಲ್ಲಿ ನಡೆಸಿದ ಪದವಿ ಪರೀಕ್ಷೆಯ ರ್ಯಾಂಕ್ ಪಟ್ಟಿ ಪ್ರಕಟಿಸಿದೆ. ಬಿಎಸ್ಡ್ಲೂ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ಆತ್ಮೀಯ ಜೆ. ಕಡಂಬ 3733 ಅಂಕಗಳೊಂದಿಗೆ ವಿವಿಗೆ ಪ್ರಥಮ ರ್ಯಾಂಕ್ ಗಳಿಸಿದ್ದಾರೆ. ಮೂಲತಃ ಕಾರ್ಕಳದವರಾದ ಇವರು ಕೆ. ಜಯಶೀಲ ಕಡಂಬ ಹಾಗೂ ಕಾಂತಿ ಕಡಂಬ ಅವರ ಪುತ್ರಿ. ಈಕನಸಿಗೆ ಪ್ರತಿಕ್ರಿಯೆ ನೀಡಿದ ಅವರು ರ್ಯಾಂಕ್ ಬಂದದ್ದು ತುಂಬ ಸಂತಸ ತಂದಿದೆ. ಇದೊಂದು ಅನಿರೀಕ್ಷಿತ ಸಂಗತಿ. ರ್ಯಾಂಕ್ ಬರಬೇಕು ಅಂತ ಕನಸು ಇತ್ತು ಅದು ಈಗ ನನಸಾಗಿದೆ.


ನಾನು ಸಾಂಸ್ಕೃತಿಕ ವಿದ್ಯಾರ್ಥಿ ಆದ ಕಾರಣ ತರಗತಿಗೆ ಹೋದದ್ದು ಕಡಿಮೆ. ಆಗ ಉಪನ್ಯಾಸಕರೆಲ್ಲಾ ತುಂಬಾ ಸಹಾಯ ಮಾಡಿದ್ದಾರೆ. ಕೆಲ ಉಸನ್ಯಾಸಕರು ಈಗ ಬೇರೆ ಕಡೆ ಇದ್ದಾರೆ. ಎಲ್ಲರಿಗೂ ಧನ್ಯವಾದ. ಹೊಸಂಗಡಿ ಕ್ಯಾಂಪ್ ಶೈಕ್ಷಣಿಕವಾಗಿ ನನಗೆ ತುಂಬ ಸಹಾಯ ಮಾಡಿತು. ಮುಂದೆ ಸ್ವಲ್ಪ ಮಟ್ಟಿಗಾದರೂ ಸಮಾಜ ಸೇವೆ ಮಾಡಬೇಕು ಅಂತ ಆಸೆ ಇದೆ. ಐ.ಎಫ್.ಎಸ್ ಆಗಬೇಕು ಅಂತ ಕೂಡ ಆಸೆ ಇದೆ ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಪ್ರಸ್ತುತ ನಿಟ್ಟೆಯ ಕೆ.ಎಸ್ ಹೆಗಡೆ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ನಲ್ಲಿ ಎಂಬಿಎ ಅಭ್ಯಾಸ ಮಾಡುತ್ತಿದ್ದಾರೆ.

ಮುಂದೆ ಓದಿ

ರಾಜ್ಯ - ರಾಷ್ಟ್ರ

ಜ.4ರಿಂದ 8 : ರಾಷ್ಟ್ರೀಯ ಚಿತ್ರಕಲಾ ಮೇಳ
ಮೂಡಬಿದಿರೆ: ಹಿರಿಯ ಚಿತ್ರಕಲಾವಿದ, ಸಾಧಕ ಕೇರಳದ ಎರ್ನಾಕುಲಂ ಜಿಲ್ಲೆಯ ಸತ್ಯಪಾಲ್ ಅವರಿಗೆ ಈ ಬಾರಿಯ "ವರ್ಣವಿರಾಸತ್ " ರಾಷ್ಟ್ರೀಯ ಚಿತ್ರಕಲಾ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಆಳ್ವಾಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಪ್ರಕಟಿಸಿದ್ದಾರೆ.
ತಮ್ಮ ವೈಶಿಷ್ಟ್ಯಪೂರ್ಣ ಕಲಾಪ್ರಕಾರಗಳ ಮೂಲಕ ಕಲಾಸಕ್ತರ ಮನಗೆದ್ದ ಸತ್ಯಪಾಲ್ ಓರ್ವ ಸಾಧಕ ಕಲಾವಿದ. ಇವರ ಅಪರಿಮಿತ ಶ್ರಮಕ್ಕೆ ಹತ್ತು ಹಲವು ಪ್ರಶಸ್ತಿ ಪುರಸ್ಕಾರಗಳು ಸಂದಿವೆ.


ಇವರ ಅಪೂರ್ವ ಕಲಾಕೃತಿಗಳು ಭಾರತದ ಉದ್ದಗಲಕ್ಕೂ , ನ್ಯೂಯಾರ್ಕ್ , ಕ್ಯಾಲಿಫೋರ್ನಿಯಾ ಮೊದಲಾದ ಪ್ರದೇಶಗಳಲ್ಲಿ ಇಂದಿಗೂ ಕಾಣಬಹುದಾಗಿದ್ದು ಇದು ಇವರ ಕಲಾ ಸಾಧನೆಗೆ ಸಂದ ಗೌರವವಾಗಿದೆ.
ಜ.8ರಂದು ನಡೆಯುವ ಆಳ್ವಾಸ್ ವರ್ಣವಿರಾಸತ್ ಸಮಾರೋಪ ಸಮಾರಂಭದಲ್ಲಿ ಕಲಾವಿದ ಸತ್ಯಪಾಲ್ ಅವರಿಗೆ ಈ ಬಾರಿಯ ವರ್ಣವಿರಾಸತ್ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಈ ಬಾರಿಯ ವರ್ಣ ವಿರಾಸತ್ ರಾಷ್ಟ್ರೀಯ ಚಿತ್ರಕಲಾ ಮೇಳದಲ್ಲಿ 15ಮಂದಿ ಸಮಕಾಲೀನ ಕಲಾವಿದರು ಹಾಗೂ 8ಮಂದಿ ಸಾಂಪ್ರದಾಯಿಕ ಹಾಗೂ ಬುಡಕಟ್ಟು ಕಲಾವಿದರು ಭಾಗವಹಿಸಲಿದ್ದಾರೆ. ಈ ಕಲಾವಿದರು ಅಪೂರ್ವ ಕಲಾಕೃತಿಗಳನ್ನು ರಚಿಸಲಿದ್ದು, ಕಲಾಸಕ್ತರಿಗೆ ವೀಕ್ಷಣೆಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಈ ಕಲಾಮೇಳ ಮಿಜಾರು ಶೋಭಾವನದಲ್ಲಿ ನಡೆಯಲಿದೆ.

ಮುಂದೆ ಓದಿ

ಆಟ - ಅವಲೋಕನ
27ರಿಂದ ಅಖಿಲಭಾರತ ಅಂತರ್ ವಿ.ವಿ. ಮಹಿಳೆಯರ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್

* ಸಿದ್ಧತೆಪೂರ್ಣ,* 70ಕ್ಕೂ ಮೇಲ್ಮಟ್ಟ ತಂಡಗಳ ಭಾಗವಹಿಸುವಿಕೆ * ಈಗಾಗಲೇ ನಾಲ್ಕು ತಂಡಗಳ ಆಗಮನ
ಮೂಡಬಿದಿರೆ: ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಆಳ್ವಾಸ್ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಡಿಸೆಂಬರ್ 27ರಿಂದ 30ರ ತನಕ ಮೂಡಬಿದಿರೆಯ ವಿದ್ಯಾಗಿರಿಯಲ್ಲಿ ಅಖಿಲಭಾರತ ಅಂತರ್ ವಿ.ವಿ. ಮಹಿಳೆಯರ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಡೆಯಲಿದೆ. ಅದಕ್ಕಾಗಿ ಆರು ಕ್ರೀಡಾಂಗಣಗಳು ಸಿದ್ಧಗೊಂಡಿವೆ. ಅಂತಿಮ ಹಂತದ ಸಿದ್ಧತೆಗಳು ಭರದಿಂದ ಸಾಗುತ್ತಿವೆ.ಕ್ರೀಡಾಕೂಟಕ್ಕೆ ಈಗಾಗಲೇ ಪೂರ್ವಭಾವಿಯಾಗಿ ನಾಲ್ಕು ತಂಡಗಳು ಮೂಡಬಿದಿರೆಗೆ ಆಗಮಿಸಿವೆ. ತಮಿಳ್ನಾಡಿನ ಅಣ್ಣಾ ಮಲೈ ವಿ.ವಿ.ತಂಡ, ರಾಜಸ್ಥಾನದ ಎಂ.ಜಿ.ಎಸ್ ತಂಡ, ನಾರ್ಥ್ ಮಹಾರಾಷ್ಟ್ರಾ ವಿ.ವಿ. ಜಲಗಾಂವ್, ಪಂಜಾಬ್ ಅಮೃತ ಸರದ ಗುರುನಾನಕ್ ವಿ.ವಿ. ಮೂಡಬಿದಿರೆಗೆ ಆಗಮಿಸಿ ನೋಂದಣಿ ನಡೆಸಿವೆ. ಸುಮಾರು 70ವಿ.ವಿ.ಗಳ ತಂಡಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.


ಡಿಸೆಂಬರ್ 27ರಂದು ಬೆಳಗ್ಗೆ 9ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಬಾಲ್ ಬ್ಯಾಡ್ಮಿಂಟನ್ ನಲ್ಲಿ ಸ್ಟಾರ್ ಆಫ್ ಇಂಡಿಯಾ ಪ್ರಶಸ್ತಿ ಪುರಸ್ಕೃತ ಬಿ.ಎನ್.ಮೀರಾ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಮಂಗಳೂರು ವಿ.ವಿ.ಉಪಕುಲಪತಿ ಪ್ರೊ.ಟಿ.ಸಿ. ಶಿವಶಂಕರ ಮೂರ್ತಿ ವಹಿಸಲಿದ್ದಾರೆ. ಕರ್ನಾಟಕ ಬಾಲ್ ಬ್ಯಾಡ್ಮಿಂಟನ್ ಎಸೋಸಿಯೇಷನ್ ಕಾರ್ಯದರ್ಶಿ ಮೊಹಮ್ಮದ್ ಇಲ್ಯಾಸ್, ವಿಶ್ರಾಂತ ದೈಹಿಕ ನಿರ್ದೇಶನ ನಿರ್ದೇಶಕ ಮೋಹನ್ ದಾಸ್ ಶಾನ್ ಭಾಗ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಡಿಸೆಂಬರ್ 30ರಂದು ಸಾಯಂಕಾಲ 4.30ಕ್ಕೆ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆಯನ್ನು ಆಳ್ವಾಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ವಹಿಸುವರು. ಮಂಗಳೂರು ವಿ.ವಿ.ರಿಜಿಸ್ಟ್ರಾರ್ ಡಾ.ಕೆ.ಚಿನ್ನಪ್ಪ ಗೌಡ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಅತಿಥಿಗಳಾಗಿ ಸಂಸದ ನಳಿನ್ ಕುಮಾರ್ ಕಟೀಲು, ಕರ್ನಾಟಕ ಬಾಲ್ ಬ್ಯಾಡ್ಮಿಂಟನ್ ಎಸೋಸಿಯೇಷನ್ ಅಧ್ಯಕ್ಷ ಪ್ರಕಾಶ್ ಹೆಬ್ಬಾಳ್, ಡಾ.ಕೆ.ವಿ.ಶೆಣೈ ಭಾಗವಹಿಸುವರು.

ಮುಂದೆ ಓದಿ
11:05 PM

ಜೈ ಗೊಮ್ಮಟೇಶ

Posted by ekanasu

ವಿಶೇಷ ವರದಿ

`ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ಗೊಮ್ಮಟ ಮೂರ್ತಿಗಳು ಪ್ರತಿಷ್ಠಾಪನೆಗೊಂಡಿದೆ. ಅತ್ಯಂತ ಎತ್ತರದ ಗೊಮ್ಮಟ ಮೂರ್ತಿ ಶ್ರವಣಬೆಳಗುಳದ್ದೆಂದು ಜಗತ್ ಪ್ರಸಿದ್ಧಿ ಪಡೆದಿದ್ದರೆ ಕಳೆದ ಕೆಲವರುಷಗಳ ಹಿಂದೆ ಶ್ರವಣ ಬೆಳಗುಳದ ಗೊಮ್ಮಟನಿಗಿಂತಲೂ ಎತ್ತರದ ವಿಶ್ವದಲ್ಲೇ ಅತಿ ದೊಡ್ಡ ವಿರಾಗಿಯನ್ನು ಹುಬ್ಬಳ್ಳಿ ಸಮೀಪದ ವರೂರಿನಲ್ಲಿ ಬಿಜೆಪಿ ಮುಖಂಡ ಲಾಲ್ ಕೃಷ್ಣ ಅಡ್ವಾಣಿ ಜೈನ ಮುನಿಗಳ ಸಮ್ಮುಖದಲ್ಲಿ ರಾಷ್ಟ್ರಕ್ಕೆ ಸಮರ್ಪಿಸಿದರು.ಕರ್ನಾಟಕ ಹಲವು ಐತಿಹ್ಯಗಳ, ನೆಲೆವೀಡು.ಶಿಲ್ಪಕಲಾಕೃತಿಗಳ ಅನರ್ಘ್ಯ ಸಂಗ್ರಹ ಕರ್ನಾಟಕದಲ್ಲಿದೆ.ಇಂತಹ ಶಿಲ್ಪ ವೈಭವಕ್ಕೆ ಈ ವಿರಾಟ್ ವಿರಾಗಿಯ ಮೂರ್ತಿಗಳು ಸಹ ಸೇರುತ್ತವೆ ಎಂಬುದರಲ್ಲಿ ಸಂದೇಹವಿಲ್ಲ. ಬಾಹುಬಲಿ ವಿಗ್ರಹಗಳ ಸಂಖ್ಯೆ ರಾಜ್ಯದಲ್ಲಿ ಹೆಚ್ಚುತ್ತಿದೆ'ಕರ್ನಾಟಕದ ಪ್ರಮುಖ ಜೈನ ಕ್ಷೇತ್ರವಾದ ವೇಣೂರಿನಲ್ಲಿ ಇದೇ ಜನವರಿ 28ರಿಂದ ವೇಣೂರ ಗೊಮ್ಮಟನಿಗೆ ಮಹಾ ಮಜ್ಜನ ನಡೆಯಲಿದೆ. ಈ ಶುಭಾವಸರದಲ್ಲಿ ಕರ್ನಾಟಕದ ಬಾಹುಬಲಿ ವಿಗ್ರಹಗಳ ಒಂದು ನೋಟ ಈ ಕನಸು ಓದುಗರಿಗಾಗಿ...


ಇವು ಕರ್ನಾಟಕದ ಬಾಹುಬಲಿಮೂರ್ತಿಗಳು


ಕರ್ನಾಟಕದ ಹತ್ತು ಹಲವು ವಿಚಾರಗಳಿಂದಾಗಿ ಇಡೀ ವಿಶ್ವದ ಗಮನ ಸೆಳೆಯುತ್ತಿದೆ. ಇಲ್ಲಿರುವಷ್ಟು ಶಿಲ್ಪಕಲಾಕೃತಿಗಳು, ಪ್ರಾಚ್ಯ ವಸ್ತುಗಳು, ಕೋಟೆ ಕೊತ್ತಲಗಳು, ಪುರಾತನ ಐತಿಹ್ಯಗಳು, ವಸ್ತು ವಿಶೇಷಗಳು, ಪ್ರಕೃತಿ ಐಸಿರಿ, ಐತಿಹ್ಯಗಳು ಇತರೆಡೆಗಳಲ್ಲಿಲ್ಲ. ಈ ಕಾರಣಕ್ಕಾಗಿಯೇ ಕರ್ನಾಟಕ ಅಷ್ಟೊಂದು ಪ್ರಾಮುಖ್ಯತೆಯನ್ನು ಪಡೆದಿದೆ.ಎಲ್ಲರ ದೃಷ್ಠಿಯೂ ಇತ್ತ ನೆಡುವಂತೆ ಮಾಡಿದೆ.

ದಕ್ಷಿಣ ಕನ್ನಡ ಜಿಲ್ಲೆ ಹಲವು ಪ್ರಮುಖಗಳಿಗೆ ಮತ್ತು ಪ್ರಥಮಗಳಿಗೆ ಸಾಕ್ಷಿಯಾಗಿದೆ. ಕನ್ನಡ ಪತ್ರಿಕೋದ್ಯಮ ಇತಿಹಾಸವೂ ಇಲ್ಲಿಂದಲೇ ಆರಂಭಗೊಂಡಿತು. ಇಂತಹ ಜಿಲ್ಲೆಯಲ್ಲಿ ಮೂರು ಏಕಶಿಲಾ ಗೋಮಟ ವಿಗ್ರಹಗಳೂ ಇವೆ. ಇದೂ ಒಂದು ವಿಶೇಷವೇ ಆಗಿದೆ. ಆ ಮೂರು ಕ್ಷೇತ್ರಗಳೂ ಅತ್ಯಂತ ಪ್ರಸಿದ್ಧಿಯ ಕ್ಷೇತ್ರವೆಂಬುದು ಮತ್ತೊಂದು ಹೆಮ್ಮೆ. ಬೆಳ್ತಂಗಡಿ ತಾಲೂಕಿನಲ್ಲಿ ಎರಡು ಬಾಹುಬಲಿ ಮೂರ್ತಿಗಳು ಪ್ರತಿಷ್ಟಾಪನೆಗೊಂಡಿದ್ದರೆ, ನೆರೆಯ ಕಾರ್ಕಳದಲ್ಲಿ ಇನ್ನೊಂದು ಮೂರ್ತಿಯಿದೆ. ಈ ಮೂರು ಮೂರ್ತಿಗಳ ಪೈಕಿ ಎರಡು ಬೆಟ್ಟದ ಮೇಲೆ ನೆಲೆನಿಂತರೆ ಒಂದು ಮೂರ್ತಿ ದಿಣ್ಣೆಯೊಂದರಲ್ಲಿ ಸ್ಥಾಪನೆಗೊಂಡಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳದ ಬಾಹುಬಲಿ ಮೂರ್ತಿ ರತ್ನಗಿರಿ ಬೆಟ್ಟದಲ್ಲಿದೆ. ವೇಣೂರು ವಿರಾಟ್ ಮೂರ್ತಿ ದಿಣ್ಣೆಯ ಮೇಲೆ ಸ್ಥಾಪಿಸಲ್ಪಟ್ಟಿದೆ. ಕಾರ್ಕಳದ ಗೊಮ್ಮಟೇಶ ಎತ್ತರದ ಬೆಟ್ಟದ ಮೇಲೆ ನೆಲೆ ನಿಂತಿದೆ.

ಧರ್ಮಸ್ಥಳದ ಬಾಹುಬಲಿ(ದಕ್ಷಿಣ ಕನ್ನಡ ಜಿಲ್ಲೆ)
ಪುರಾಣ ಪ್ರವಾಂಗಳಿಗೆ ಸರಿಯಾಗಿ ಸುಂದರ 39ಅಡಿಯ ಬೃಹತ್ ಏಕಶಿಲಾ ಮೂರ್ತಿ ನೆಲೆಗೊಂಡಿದೆ. ಕ್ವಾರ್ಟ್ಜ್ ಖನಿಜಗಳ ಪಟ್ಟಿ ಮಿಶ್ರಗೊಂಡಿರುವ ಸೀಣಿ ಜಾತಿಯ ಗಡಸು ಕರ್ಗಲ್ಲಿನಲ್ಲಿ ಈ ಮೂರ್ತಿ ನಿರ್ಮಾಣಗೊಂಡಿದೆ. ರತ್ನಗಿರಿ ಬೆಟ್ಟದಲ್ಲಿ ಈ ಮೂರ್ತಿ ಪ್ರತಿಷ್ಠಾಪಿಸಲ್ಪಟ್ಟಿದೆ.
ರಾಜಲಕ್ಷಣಗಳಿಂದೊಡಗೂಡಿದ ಈ ಮೂರ್ತಿ ನಯನಮನೋಹರವಾಗಿದೆ. ಅರೆತೆರೆದ ಧ್ಯಾನ ಮುದ್ರೆಯ ಕಣ್ಣುಗಳು, ಗುಂಗುರು ಕೂದಲು, ದೀರ್ಘವಾದ ಕರ್ಣ, ವಿಶಾಲ ಬಾಹು, ತೋಳುಗಳಲ್ಲಿ ಮಾಧವೀಲತೆ, ಪ್ರಬಲ ಕಟಿ, ಈ ಶಿಲ್ಪದಲ್ಲಿ ಕಾಣಬಹುದಾಗಿದೆ.
ಕಾರ್ಕಳದ ಮಂಗಲಪಾದೆಯಲ್ಲಿ ವಾಯುವ್ಯ ಆಗ್ನೇಯ ದಿಕ್ಕಿಗೆ ಚಾಚಿಕೊಂಡಿದ್ದ ಬೃಹತ್ ಬಂಡೆಯನ್ನು ಧರ್ಮಸ್ಥಳದ ವಿರಾಟ್ ಬಾಹುಬಲಿ ಮೂರ್ತಿರಚನೆಗಾಗಿ ಆಯ್ಕೆಮಾಡಲಾಯಿತು.

ದೈವಾನುಗ್ರಹ, ಗುರುಹಿರಿಯರ ಆಶಯ, ಸಂಕಲ್ಪ ಶಕ್ತಿ, ದೃಢವಿಶ್ವಾಸಗಳೊಂದಿಗೆ ಶಿಲ್ಪಿ ರೆಂಜಾಳ ಗೋಪಾಲ ಶೆಣೈಯವರು ತಮ್ಮ ಪುತ್ರ ಮಂಜುನಾಥ ಶೆಣೈ, ಮೊಮ್ಮಗ ರಾಧಾ ಮಾಧವ ಶೆಣೈ ಸಹಿತ ತಮಿಳು ನಾಡಿನ 40 ಶಿಲ್ಪಿಗಳೊಂದಿಗೆ ಈ ಕಾರ್ಯವನ್ನು ಐದೂವರೆ ವರ್ಷಗಳಲ್ಲಿ ಪೂರ್ಣಗೊಳಿಸಿದರು1981ರಲ್ಲಿ ಏಲಾಚಾರ್ಯ ವಿದ್ಯಾನಂದಾಜೀ ಯವರ ಮಾರ್ಗದರ್ಶನದಲ್ಲಿ ಪ್ರತಿಷ್ಠೆ. ಶ್ರೀ ರತ್ನವರ್ಮ ಹಗ್ಗಡೆ ಮತ್ತು ಮಾತೃಶ್ರೀಯವರ ಸಂಕಲ್ಪ. ಡಾ.ಡಿ ವೀರೇಂದ್ರ ಹೆಗ್ಗಡೆಯವರು ಈ ಕಾರ್ಯ ನೆರವೇರಿಸಿದರು. ಪೀಠವೂ ಸೇರಿ 52ಅಡಿ ಎತ್ತರದ 210ಟನ್ ಭಾರದ ಶಿಲಾ ಮೂರ್ತಿ14 ಅಡಿ ಅಗಲ ಹೊಂದಿದೆ.

ವೇಣೂರು ಗೊಮ್ಮಟೇಶ (ದಕ್ಷಿಣ ಕನ್ನಡ ಜಿಲ್ಲೆ)
ಬೆಳ್ತಂಗಡಿ ತಾಲೂಕಿನ ವೇಣೂರು ಈ ಗೊಮ್ಮಟ ಮೂರ್ತಿಯಿಂದಾಗಿಯೇ ಗುರುತಿಸಿಕೊಂಡಿದೆ. ಪಕ್ಕದಲ್ಲೇ ಹರಿಯುವ ಫಲ್ಗುಣೀ ನದೀ ತೀರದಲ್ಲಿ ದಿಣ್ಣೆಯೊಂದರ ಮೇಲೆ ವಿರಾಜಮಾನವಾಗಿದೆ. 1604ರಲ್ಲಿ ತಿಮ್ಮರಾಜನಿಂದ ಪ್ರತಿಷ್ಠಾಪನೆ. 35ಅಡಿ ಎತ್ತರದ ಈ ಮೂರ್ತಿ ಅತ್ಯಂತ ರಮಣೀಯವಾಗಿದೆ. ಮಂದಸ್ಮಿತ ಮೂರ್ತಿ ಅಭಿಷೇಕದ ಸಂದರ್ಭದಲ್ಲಿ ನಯನಮನೋಹರವಾಗಿ ಕಂಡುಬರುತ್ತದೆ.
ವೇಣೂರು -ನಾರಾವಿಯ ಯುದ್ಧದ ಸಂದರ್ಭದಲ್ಲಿ ಬಾಹುಬಲಿ ಮೂರ್ತಿಯನ್ನು ಫಲ್ಗುಣೀ ನದೀ ತೀರದ ಮರಳಿನಲ್ಲಿ ಹೂತಿಡಲಾಗಿದ್ದು, ನಂತರ ವಿಗ್ರಹ ಪ್ರತಿಷ್ಠಾಪನೆ ನಡೆಸಲಾಯಿತು.



ಕಾರ್ಕಳ(ದಕ್ಷಿಣ ಕನ್ನಡ)
ದಕ್ಷಿಣ ಕನ್ನಡ ಜಿಲ್ಲೆಯ ಮತ್ತೊಂದು ಬಾಹುಬಲಿ ವಿಗ್ರಹವೇ ಕಾರ್ಕಳದಲ್ಲಿರುವುದಾಗಿದೆ. 41.5ಅಡಿಗಳ ಈ ಮೂರ್ತಿ ಕರ್ರಗಿನ ಶಿಲೆಯಿಂದ ರಚಿಸಲ್ಪಟ್ಟಿದೆ. ಎತ್ತರದಲ್ಲಿ ಪ್ರತಿಷ್ಟಾಪಿಸಲ್ಪಟ್ಟ ಈ ಮೂರ್ತಿ ಕ್ರಿ.ಶ.1432ರಲ್ಲಿ ಪಾಂಡ್ಯರಾಜನಿಂದ ಪ್ರತಿಷ್ಠಾಪಿಸಲ್ಪಟ್ಟಿತು. ಶಂಭುಕಲ್ಕುಡ ಈ ಬಾಹುಬಲಿ ಮೂರ್ತಿಯನ್ನು ರಚಿಸಿದ ಶಿಲ್ಪಿ. ಕಾರ್ಕಳದ ಹೆದ್ದಾರಿಯಲ್ಲಿ ಸಾಗುವ ಸಂದರ್ಭದಲ್ಲಿ ಎತ್ತರದ ಬಾಹುಬಲಿಮೂರ್ತಿ ಕಾಣಸಿಗುತ್ತದೆ.
20ಚಕ್ರದ ವಿಶೇಷ ಗಾಡಿಯ ಮೇಲೆ 10ಸಾವಿರ ಜನರ ಸಹಾಯದಿಂದ ಮೂರ್ತಿಯನ್ನು ಇರಿಸಲಾಯಿತು. ಹಿಂದಿನಿಂದ ಮದ್ದಾನೆಗಳು ಗಾಡಿಯನ್ನು ದೂಡಿದರೆ ಮುಂದಿನಿಂದ, ಗಾಡಿಯ ಪಕ್ಕದಿಂದ ಅಸಂಖ್ಯಾತ ಭಕ್ತರು ಬೆಟ್ಟದ ಮೇಲಕ್ಕೆ ಎಳೆದರು. ಈ ರೀತಿ ಮೂತರ್ಿಮೂರ್ತಿಯ ಪ್ರತಿಷ್ಠಾಪನೆಯಾಯಿತು.ಒಂದೊಂದ್ದು ಚಕ್ರಕ್ಕೂ ದೊರೆ ತಲಾ ಹತ್ತು ಸಾವಿರ ಹಿಡಿಕಾಯಿ ಹಾಕಿಸಿದ್ದ. ವಿಗ್ರಹವನ್ನು ಎತ್ತಿನಿಲ್ಲಿಸಲು ಒಂದುಸಾವಿರ ರಾಟೆಗಳನ್ನಳವಡಿಸಿ 25ಸಾವಿರ ಜನರು ಮೇಲೆಳೆದರಂತೆ...!


ಶ್ರವಣ ಬೆಳಗುಳ(ಹಾಸನ)
`ಬೆಳಗುಳದ ಜನರೀಗೆ ಮಳೆ ಬಂದರಭಿಷೇಕ...' ಎಂಬ ಜಾನಪದ ಹಾಡು ಶ್ರವಣ ಬೆಳಗುಳದಲ್ಲಿ ಅತ್ಯಂತ ಜನಪ್ರಿಯ. ಇದು ಈ ಗೊಮಟೇಶನ ಬಗ್ಗೆಯೇ ರಚಿಸಲ್ಪಟ್ಟ ಹಾಡಾಗಿದೆ. ಕರ್ನಾಟಕದ ಗೊಮಟೇಶವಿಗ್ರಹಗಳ ಪೈಕಿ ಅತ್ಯಂತ ಎತ್ತರದ, ಪ್ರಸಿದ್ಧಿಯ ಕ್ಷೇತ್ರ ಇದಾಗಿದೆ. 57ಅಡಿ ಎತ್ತರದ ಬಿಳಿಕಲ್ಲಿನಲ್ಲಿ ಈ ಮೂರ್ತಿ ರಚಿಸಲ್ಪಟ್ಟಿದೆ. ಕ್ರಿ.ಶ 981ರಲ್ಲಿ ಚಾವುಂಡರಾಯನಿಂದ ನಿರ್ಮಾಣಗೊಂಡು ಸ್ಥಾಪಿಸಲ್ಪಟ್ಟಿತು.

ಶ್ರೀ ಗೋಮಟಗಿರಿ(ಮೈಸೂರು)
ಈ ಮೂರ್ತಿ ಮೈಸೂರಿನಲ್ಲಿದೆ. ಕಣಶಿಲೆಯಿಂದ ರಚಿಸಲ್ಪಟ್ಟಿದೆ. ಇದೊಂದು ವಿಶಿಷ್ಟ ವಿಗ್ರಹ. 20ಅಡಿಯ ಈ ವಿಗ್ರಹ ಸುಂದರವಾಗಿದೆ. ದ್ವಾರ ಸಮುದ್ರದ ಬಲ್ಲಾಳರಾಯನ ವಂಶದವರಿಂದ 800ವರ್ಷಗಳ ಹಿಂದೆ ಪ್ರತಿಷ್ಠಾಪಿಸಲ್ಪಟ್ಟಿತ್ತು. 1950ರಲ್ಲಿ ವಿಗ್ರಹ ಪತ್ತೆಯಾಯಿತು. ಅದುವರೆಗೂ ಗಿಡಗಂಟಿಗಳ ನಡುವೆ ಇದು ಮುಚ್ಚಿಹೋಗಿತ್ತು.

ಕನ್ನಂಬಾಡಿ ಕಟ್ಟೆ(ಮಂಡ್ಯ)
ಇದು ಮಂಡ್ಯ ಜಿಲ್ಲೆಯಲ್ಲಿರುವ ಬಾಹುಬಲಿ ವಿಗ್ರಹ. 18ಅಡಿ ಎತ್ತರವನ್ನಷ್ಟೇ ಇದು ಹೊಂದಿದೆ. ಇದರ ಕಾಲ, ಕತೃ ತಿಳಿದಿಲ್ಲ. ಬಳಪದ ಕಲ್ಲಿನಲ್ಲಿ ಈ ಮೂರ್ತಿ ರಚಿಸಲ್ಪಟ್ಟಿದೆ.ಈ ವಿಗ್ರಹ ಕೃಷ್ಣರಾಜ ಸಾಗರ ಅಣೆಕಟ್ಟು ನಿರ್ಮಾಣದ ನಂತರ ಮುಳುಗಡೆ ಪ್ರದೇಶದಲ್ಲಿದೆ.

ಶೇಡಬಾಳ(ಬೆಳಗಾವಿ)
ಇದು ಬೆಳಗಾವಿಯ ಗೊಮ್ಮಟೇಶ. ಸಂಗಮವರೀ ಕಲ್ಲಿನಿಂದ ಈ ಬಾಹುಬಲಿ ಮೂರ್ತಿ ನಿರ್ಮಾಣಗೊಂಡಿದೆ. 12ಅಡಿ ಎತ್ತರವನ್ನು ಈ ಮೂರ್ತಿ ಹೊಂದಿದೆ.1954ರಲ್ಲಿ ಜೈನ ಶ್ರಾವಕರಿಂದ ಇದು ರಚಿಸಲ್ಪಟ್ಟಿದೆ.

ಕೊಲ್ಹಾಪುರ(ಮಹಾರಾಷ್ಟ್ರದ ಗಡಿ)
ಇದು ಕೊಲ್ಹಾಪುರ ಮಹಾರಾಷ್ಟ್ರದ ಗಡಿ ಪ್ರದೇಶದಲ್ಲಿದೆ. ಕರ್ನಾಟಕದ ಸೀಮೆಯಲ್ಲಿಯೇ ಈ ಬಾಹುಬಲಿ ವಿಗ್ರಹವಿದೆ. 28ಅಡಿ ಎತ್ತರವನ್ನು ಇದು ಹೊಂದಿದೆ. ಚಂದ್ರಕಾಂತ ಶಿಲೆಯಿಂದ ನಿರ್ಮಾಣಗೊಂಡಿದೆ. 1963ರಲ್ಲಿ ಪ್ರತಿಷ್ಠೆ. ಶಾಂತಿಸಾಗರ ಮಹಾರಾಜರ ಸಂಕಲ್ಪದಂತೆ ಇದು ನಿರ್ಮಾಣಗೊಂಡಿದೆ. ಆಚಾರ್ಯ ಸಮಂತಭದ್ರ ಸ್ವಾಮೀಜಿ ಮಾರ್ಗದರ್ಶನದಲ್ಲಿ ಪ್ರತಿಷ್ಠಾಪನೆಗೊಂಡಿದೆ.


ಹರೀಶ್ ಕೆ. ಆದೂರು

ಮುಂದೆ ಓದಿ
11:00 PM

ತೀರ್ಥಸ್ನಾನ

Posted by ekanasu

ಪ್ರಾದೇಶಿಕ ಸುದ್ದಿ
ಮೂಲ್ಕಿ: ಪವಿತ್ರ ಎಳ್ಳಮವಾಸ್ಯೆ ಅಂಗವಾಗಿ ಹೆಜಮಾಡಿ ಅಮವಾಸ್ಯೆ ಕರಿಯ ಬಳಿ ಸಾವಿರಾರು ಭಕ್ತಾಧಿಗಳು ಸಮುದ್ರ ಸ್ನಾನ ಗೈದರು.



ಮುಂಜಾವ 3 ಗಂಟೆಯಿಂದಯೆ ಸಾವಿರಾರು ಭಕ್ತರು ವಿವಿಧ ಆಗಮಿಸಿ ಮುಂಜಾನೆಯ ಚಳಿಯಲ್ಲಿ ಸಮುದ್ರ ಸ್ನಾನ ಗೈಯ್ಯುತ್ತಿರುವ ದೃಶ್ಯ ಕಂಡು ಬಂದಿತ್ತು. ಕಾರ್ಕಳ , ಬಜಗೋಳಿ, ಶಿರ್ವ, ಬೆಳ್ಮಣ್ಣು, ಮುದರಂಗಡಿ , ಇನ್ನಾ, ಪಲಿಮಾರು, ಮೂಡಬಿದರೆ, ಕಿನ್ನಿಗೋಳಿ, ಮೂಲ್ಕಿ ಕಡೆಗಳಿಂದ ಸಹಸ್ರಾರು ಭಕ್ತಾಧಿಗಳು ಸಮುದ್ರ ಸ್ನಾನಕ್ಕಾಗಿ ಆಗಮಿಸಿದ್ದರು.

ಪಿಂಡ ಪ್ರದಾನ , ತಿಲಹವನ : ಅಮವಾಸ್ಯೆ ದಿನಗಳಲ್ಲಿ ಸಮುದ್ರ ತೀರದಲ್ಲಿ ಸ್ವರ್ಗಸ್ಥ ಪಿತೃಗಳಿಗೆ ಮೋಕ್ಷ ಪ್ರಾಪ್ತಿಗಾಗಿ ಪಿಂಡ ಪ್ರದಾನ , ತಿಲಹವನ ನಡೆಸುವ ಕಾರ್ಯವು ಅಲ್ಲಲ್ಲಿ ಕಂಡು ಬಂದಿತ್ತು. ಸಂಜೆ ವರೆಗೂ ಸಮುದ್ರ ಸ್ನಾನ ಮುಂದುವರಿದಿತ್ತು.

ಚಿತ್ರ - ವರದಿ: ಭಾಗ್ಯವಾನ್ ಮುಲ್ಕಿ

ಮುಂದೆ ಓದಿ

ರಾಜ್ಯ - ರಾಷ್ಟ್ರ

ಮೂಡಬಿದರೆ: ಆಳ್ವಾಸ್ ಎಜುಕೇಶನ್ ಫೌಂಡೇಶನ್ ಆಶ್ರಯದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ "ಆಳ್ವಾಸ್ ವಿರಾಸತ್" ಜನವರಿ 5ರಿಂದ 8ರ ತನಕ ಮಿಜಾರು ಶೋಭಾವನದಲ್ಲಿ ನಡೆಯಲಿದೆ.20ನೇ ವರುಷದ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಇದಾಗಿದ್ದು, ಅತ್ಯಂತ ವೈವಿಧ್ಯಮಯವಾದ ಬೃಹತ್ ವೇದಿಕೆಯಲ್ಲಿ ಈ ಉತ್ಸವ ನಾಲ್ಕುದಿನಗಳ ಕಾಲ ಮೂಡಿಬರಲಿದೆ. ಎಂದು ಆಳ್ವಾಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ತಿಳಿಸಿದ್ದಾರೆ.



ಉದ್ಘಾಟನೆಗೆ ಡಿ.ವಿ.

ಜನವರಿ 5ರಂದು ಸಂಜೆ 5.45ಕ್ಕೆ ಅತಿಥಿಗಳ ಮೆರವಣಿಗೆ ನಡೆಯಲಿದ್ದು ಸಂಜೆ 6ಕ್ಕೆ ಸರಿಯಾಗಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧಮಾ೯ಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ನಿಟ್ಟೆ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಎನ್ ವಿನಯ ಹೆಗ್ಡೆ, ಎ.ಜೆ ಸಮೂಹ ಸಂಸ್ಥೆಗಳ ಆಡಳಿತ ನಿದೇ೯ಶಕ ಎ.ಜೆ ಶೆಟ್ಟಿ, ಉದ್ಯಮಿ ಶಶಿಕಿರಣ್ ಶೆಟ್ಟಿ, ಶಾಸಕ ಅಭಯಚಂದ್ರ ಜೈನ್, ವಿಧಾನ ಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾಣೀ೯ಕ್, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ, ಕೆನರಾ ಬ್ಯಾಂಕ್ ಉಪ ಮಹಾ ಪ್ರಬಂಧಕ ದಾಸಯ್ಯ, ಕನಾ೯ಟಕ ಬ್ಯಾಂಕ್ ವ್ಯವಸ್ಥಾಪಕ ನಿದೇ೯ಶಕ ಪಿ. ಜಯರಾಮ ಭಟ್, ನಾಡೋಜ ಡಾ.ಜಿ ಶಂಕರ್, ಗೋಲ್ಡ್ ಫಿಂಚ್ ಆಡಳಿತ ನಿದೇ೯ಶಕ ಕೆ. ಪ್ರಕಾಶ ಶೆಟ್ಟಿ, ಉದ್ಯಮಿ ಎನ್. ಬಾಲಕೃಷ್ಣ, ಕೆ.ಎಲ್.ಎನ್ ಇಂಜಿನಿಯರಿಂಗ್ ಪ್ರೈ.ಲಿ ಬೆಂಗಳೂರು ಇದರ ಪ್ರಸನ್ನ ಕುಮಾರ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಆಳ್ವಾಸ್ ವಿರಾಸತ್ 2012ರ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವೂ ನಡೆಯಲಿದೆ.


ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಜನವರಿ 5ರಂದು ಸಂಜೆ 7.15 ರಿಂದ 8.45ರ ತನಕ ವಿದ್ವಾನ್ ಗಣೇಶ್ -ಕುಮರೇಶ್ ಸಹೋದರರು ಚೆನ್ನೈ, ಅವರಿಂದ ಅಪೂರ್ವ ವಯೋಲಿನ್ ಕಾರ್ಯಕ್ರಮ ನಡೆಯಲಿದೆ. 8.45ರಿಂದ 10ರ ತನಕ ಪಂಜಾಬಿನ ರೋಮಾಂಚಕ ಭಾಂಗ್ರಾ ಮತ್ತು ಜಾನಪದ ನೃತ್ಯಗಳು ನಡೆಯಲಿವೆ. ಜ.6 ಶುಕ್ರವಾರ ಸಂಜೆ 6ರಿಂದ 8ರ ತನಕ ಶಿವ ದಿ ಮ್ಯೂಸಿಕಲ್ ಥಂಡರ್ ಕಾರ್ಯಕ್ರಮ ಶಿವ ಫ್ಯೂಶನ್ ಗ್ರೂಪ್ ಚೆನ್ನೈ ಇವರಿಂದ ಪ್ರಸ್ತುತಗೊಳ್ಳಲಿದೆ. ದ್ವಿತೀಯ ಕಾರ್ಯಕ್ರಮದಲ್ಲಿ ಕೌಲಾಲಂಪುರದ ರಾಮ್ ಲಿ ಇಬ್ರಾಹಿಂ ಮತ್ತು ತಂಡದವರಿಂದ ಸ್ಪೆಲ್ ಬೌಂಡ್ -ಒಡಿಸ್ಸಿ ಸಮೂಹ ನೃತ್ಯ ಕಾರ್ಯಕ್ರಮ ನಡೆಯಲಿವೆ.

ಜನವರಿ 7ರಂದು ಗ್ರಾಮಿ ಅವಾಡ್೯ ಪುರಸ್ಕೃತ ಪಂಡಿತ್ ವಿಶ್ವಮೋಹನ ಭಟ್ ಅವರ ಮೋಹನ ವೀಣಾ ಮತ್ತು ಸುರಮಣಿ ಪಂಡಿತ್ ಪ್ರವೀಣ್ ಗೋಡ್ಕಿಂಡಿ ಕೊಳಲು, ಸುಭೆನ್ ಚಟಜಿ೯ ತಬಲಾ, ಸುಮಿತ್ ರಾಮಚಂದ್ರನ್ ಎಲೆಕ್ಟ್ರಿಕ್ ಗಿಟಾರ್, ಸಂಬಿತ್ ಚಟಜಿ೯ ಜಾಝ್ ಡ್ರಮ್ಸ್ ನಡೆಯಲಿದೆ. ದ್ವಿತೀಯ ಕಾರ್ಯಕ್ರಮದಲ್ಲಿ ಅದಿತಿ ಮಂಗಲ್ ದಾಸ್ ಬಳಗದಿಂದ ಕಥಕ್ ನೃತ್ಯ ಸಂಗಮ ನಡೆಯಲಿದೆ.



ಕೊನೆಯ ದಿನದ ಮೊದಲ ಕಾರ್ಯಕ್ರಮವಾಗಿ ಚೆನ್ನೈ ಮಹೇಶ್ ವಿನಾಯಕ್ ರಾಮ್ ಮತ್ತು ಬಳಗದವರಿಂದ ವಿಶೇಷ ಫ್ಯೂಶನ್ ಸಂಗೀತದ ಸಮ್ಮಿಲನ ಮೋಕ್ಷ ಕಾರ್ಯಕ್ರಮ ನಡೆಯಲಿದೆ. ದ್ವಿತೀಯ ಕಾರ್ಯಕ್ರಮವಾಗಿ 7.30ರಿಂದ 9.30 ರಘು ದೀಕ್ಷಿತ್ ಮತ್ತು ಎಂ.ಡಿ ಪಲ್ಲವಿ ಬಳಗದವರಿಂದ ಮಧುರ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಸಮಯಕ್ಕೆ ಸರಿಯಾಗಿ ಕಾರ್ಯಕ್ರಮವು ಪ್ರಾರಂಭಗೊಳ್ಳಲಿದೆ. ಆಳ್ವಾಸ್ ವಿರಾಸತ್ ನಡೆಯುವ ಪ್ರತಿದಿನ ರಾಷ್ಟ್ರೀಯ ಪ್ರತಿಭಾ ಸ್ಪಧೆ೯ " ಇಂಡಿಯಾಸ್ ಗೋಟ್ ಟ್ಯಾಲೆಂಟ್ನಲ್ಲಿ ಫೈನಲ್ ಪ್ರವೇಶ ಪಡೆದ ಮೆಗಾ ಮ್ಯಾಜಿಕ್ ಸ್ಟಾರ್ ಕುದ್ರೋಳಿ ಗಣೇಶ್ ಅವರ ವಿಸ್ಮಯ ಜಾದು ಪ್ರದರ್ಶನ ಮತ್ತು ಆಳ್ವಾಸ್ ವಿದ್ಯಾಥಿ೯ಗಳಿಂದ ವರ್ಣರಂಜಿತ ನೃತ್ಯ ಕಾರ್ಯಕ್ರಮಗಳು ನಡೆಯಲಿವೆ.

ಮುಂದೆ ಓದಿ

ರಾಜ್ಯ - ರಾಷ್ಟ್ರ
ಮೂಡಬಿದಿರೆ: ಭಕ್ತಿಯ ಭಾವ ಮುಖ್ಯ, ಈ ಭಕ್ತಿಯ ಭಾವದಿಂದ ಕೀರ್ತನೆಗಳನ್ನು ಹಾಡಬೇಕು, ಕೀರ್ತನೆಗಳು ಒಂದು ದೀಕ್ಷೆ ಇದ್ದಂತೆ ಎಂಬುದನ್ನು ಅರಿತುಕೊಳ್ಳಬೇಕೆಂದು ಮೂಡಬಿದಿರೆ ಜೈನ ಮಠದ ಭಾರತಭೂಷಣ ಸ್ವಸ್ತಿ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳು ತಿಳಿಸಿದರು

ಮಂಗಳೂರಿನ ಮೊಟ್ಟಮೊದಲ ಕನ್ನಡ ಅಂತರ್ಜಾ ಲ ಪತ್ರಿಕೆ ಈ ಕನಸು.ಕಾಂ ಮೂಡಬಿದಿರೆಯ ಡಿ.ಜೆ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ ಕೀರ್ತನ ಕಮ್ಮಟದ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ಭಗವಂತನ ಭಕ್ತರಾಗಿ ಹಾಡಿದಾಗ ಪುಣ್ಯಪ್ರಾಪ್ತಿಯಾಗುತ್ತದೆ. ಎಳೆಯ ಮಕ್ಕಳು ಈ ಸದ್ ವಿಚಾರವನ್ನು ಜೀವನದಲ್ಲಿ ಅಳವಡಿಸಬೇಕೆಂದು ತಿಳಿಸಿದರು.


ಅಧ್ಯಕ್ಷತೆಯನ್ನು ಡಿ.ಜೆ.ವಿ.ವಿ.ಸಂಘದ ಸಂಚಾಲಕ ಪ್ರತಾಪ್ ಕುಮಾರ್ ವಹಿಸಿದ್ದರು. ಮೂಡಬಿದಿರೆಯ ಹಿರಿಯ ಸಂಕೀರ್ತನಾಕಾರ ಉಮೇಶ್ ಕಾಮತ್ ಅವರನ್ನು ಇದೇ ಸಂದರ್ಭದಲ್ಲಿ ಪೂಜ್ಯ ಸ್ವಾಮೀಜಿಯವರು ಅಭಿನಂದಿಸಿ ಸನ್ಮಾನಿಸಿದರು.ಮೂಡಬಿದಿರೆಯಲ್ಲಿ ಸಂಕೀರ್ತನಾ ಪರಂಪರೆ ವಿಷಯದಲ್ಲಿ ಪತ್ರಕರ್ತ ಗಣೇಶ್ ಕಾಮತ್ ಉಪನ್ಯಾಸ ನೀಡಿದರು. ಮೂಡಬಿದಿರೆ ಪುರಸಭಾ ಸದಸ್ಯ ಎಂ.ಬಾಹುಬಲಿ ಪ್ರಸಾದ್, ಮಾಧವ ಭಟ್, ಕೆ.ಶ್ರೀಪತಿ ಭಟ್, ರಾಮಕೃಷ್ಣ ಶಿರೂರು, ಉಮೇಶ್ ಪ್ರಸಾದ್ ಉಪಸ್ಥಿತರಿದ್ದರು. ಸಿರಿಪುರ ಸಾಂಸ್ಕೃತಿಕ ಪ್ರತಿಷ್ಠಾನ ಸಹಕಾರ ನೀಡಿತ್ತು.

ಮುಂದೆ ಓದಿ

ವಿಶೇಷ ವರದಿ
`ಸಂಯೋಜಿತ' ಚಿಕಿತ್ಸಾ ಪದ್ಧತಿಯ ಮೂಲಕ `ಆನೆಕಾಲು'ರೋಗಕ್ಕೆ ಯಶಸ್ವೀ ಚಿಕಿತ್ಸೆ ಕಂಡುಹಿಡಿದು ವೈದ್ಯಕೀಯ ಕ್ಷೇತ್ರದಲ್ಲೇ ಒಂದು ಸಂಚಲನ ಮೂಡಿಸಿದ ಇನ್ಸಿಟ್ಯೂಟ್ ಆಫ್ ಅಪ್ಲೈಡ್ ಡರ್ಮಿಟಾಲಜಿ(ಐಎಡಿ) ಬಿಳಿತೊನ್ನಿಗೆ ಪರಿಣಾಮಕಾರಿ ಚಿಕಿತ್ಸೆ ಕಂಡುಹಿಡಿಯುವ ಮೂಲಕ ಇನ್ನೊಂದು ಮೈಲಿಗಲ್ಲು ನೆಟ್ಟಿದೆ.ಜೀವನದಲ್ಲಿ ನೊಂದ, ದೇಶದ 50 ಲಕ್ಷಕ್ಕೂ ಅಧಿಕ ಜನರ ಬಾಳಲ್ಲಿ `ಆಶಾಕಿರಣ' ಮೂಡಿಸುವಲ್ಲಿ ತನ್ಮೂಲಕ ಐಎಡಿಯ ಸಮಾನ ಮನಸ್ಕ ನಾಲ್ವರು ವೈದ್ಯರು ಪಾತ್ರರಾಗಿದ್ದಾರೆ.ಬಿಳಿತೊನ್ನಿಗೆ ಕಾರಣವೇನು?, ಯಾರಲ್ಲಿ, ಯಾಕಾಗಿ ಇದು ಕಾಣಿಸಿಕೊಳ್ಳುತ್ತದೆ ಎಂಬುದೇ ವೈಜ್ಞಾನಿಕ ಕ್ಷೇತ್ರಕ್ಕೊಂದು ಸವಾಲಾಗಿದ್ದ ಸಂದರ್ಭದಲ್ಲಿ ಹಲವು ಎಡರು ತೊಡರುಗಳ ನಡುವೆ ಈ ಖಾಸಗಿ ಸಂಸ್ಥೆ `ಕಾರಣ' ಹುಡುಕುವಲ್ಲಿ ಯಶಗಳಿಸಿದೆ.ಈ ರೋಗದ ಬಗ್ಗೆ ಈತನಕವಿದ್ದ ನಾನಾ ಆತಂಕಗಳಿಗೆ ತೆರೆಎಳೆಯುವಂತೆ ಮಾಡಿದೆ.


ಫೈಲೇರಿಯಾ, ಎಚ್.ಐ.ವಿ ಮತ್ತು ಬಿಳಿತೊನ್ನು ರೋಗಗಳಿಗೆ ಈ ಖಾಸಗೀ ಸಂಸ್ಥೆ ಚಿಕಿತ್ಸೆ ನೀಡುವ ಮೂಲಕ ವಿಶ್ವವೇ ಇವರತ್ತ ನೋಡುವಂತೆ ಮಾಡಿದೆ; ಕರ್ನಾಟಕದ ಭಾಗವೆಂದೇ ಪರಿಗಣಿಸಲ್ಪಡುವ ಕಾಸರಗೋಡು ಈ ಹೆಮ್ಮೆಗೆ ಪಾತ್ರವಾಗಿದೆ. ಇಲ್ಲಿನ ಪುಟ್ಟ ಕಟ್ಟಡದೊಳಗೆ ನಾಲ್ಕು ಮನಸ್ಸುಗಳು ಒಂದುಗೂಡಿ ನಡೆಸಿದ ಪರಿಣಾಮಕಾರಿ ಚರ್ಚೆಯೇ ಇದಕ್ಕೆಲ್ಲಾ ಉತ್ತರ ನೀಡುವಲ್ಲಿ ಸಾಧ್ಯವಾಗಿದೆ.

ಬಿಳಿತೊನ್ನು(ಪಾಂಡುರೋಗ, ಶ್ವಿತ್ರ, ವೈಟ್ ಪ್ಯಾಚಸ್) ದೇಶದ ಅಸ್ಪೃಶ್ಯ ಕಾಯಿಲೆಯೆಂದೇ ಪರಿಗಣಿಸಲ್ಪಟ್ಟಿದೆ. ಕಾಸರಗೋಡು, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಈ ರೋಗಿಗಳಿದ್ದಾರೆಯಾದರೂ ಹುಬ್ಬಳ್ಳಿ, ಧಾರಾವಾಡ, ದಾವಣಗೆರೆ ಪ್ರದೇಶಗಳಲ್ಲಿ ಈ ರೋಗಪೀಡಿತರ ಸಂಖ್ಯೆ ಅಧಿಕ. ವೆಸ್ಟ್ ಬೆಂಗಾಳ್, ಬಾಂಗ್ಲಾದೇಶಗಳಲ್ಲೂ ರೋಗ ಬಾಧಿತರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ.

ದೇಶದ ಜನಸಂಖ್ಯೆಯ 0.5ಶೇಕಡಾ ಜನರು ಬಿಳಿತೊನ್ನು ರೋಗದಿಂದ ಬಳಲುತ್ತಿದ್ದಾರೆ... ಮಾನಸಿಕ ಜರ್ಝರಿತರಾಗುತ್ತಿದ್ದಾರೆ. ಕಲ್ಕತ್ತಾದ ದಾಸ್, ಮುಜುಂದಾರ್ ಚಕ್ರಬೋರ್ತಿ ನಡೆಸಿದ ಸಂಶೋಧನೆ ಇದನ್ನು ದೃಢಪಡಿಸಿದೆ. ಬಿಳಿತೊನ್ನು ಚರ್ಮವನ್ನು ಬಾಧಿಸುವ ಒಂದು ಕಾಯಿಲೆ. ಚರ್ಮ ಎಂಬುದು ಇಡೀ ದೇಹದ ಕವಚ. ಕೂದಲು, ಉಗುರು ಸಹ ಇದಕ್ಕೆ ಸೇರುತ್ತದೆ. ತ್ವಚೆಯಲ್ಲಿನ ಕೆಲವು ಭಾಗಗಳಲ್ಲಿ ಅಥವಾ ಶರೀರ ಪೂರ್ತಿ ಬೆಳ್ಳಗಾಗುವುದನ್ನೇ `ಪಾಂಡುರೋಗ'ಎನ್ನಲಾಗಿದೆ. ಇದು ವಂಶಪಾರಂಪರ್ಯ(ಶೇ.20ರಷ್ಟು ಸಾಧ್ಯತೆ)ವಾಗಿಯೂ ಬರಬಹುದು. ಯಾವುದೇ ಒಂದು ಕಾರಣಕ್ಕೆ ಚರ್ಮಕ್ಕೆ ಬಣ್ಣ ನೀಡುವ `ಮೆಲನೋಸೈಟು' ತನ್ನ ಕಾರ್ಯವನ್ನು ನಿಲ್ಲಿಸಬಹುದು. ಇದರಿಂದಾಗಿ ಮೆಲನಿನ್ ಜೀವಕಣದ ಉತ್ಪಾದನೆ ಆಗುವುದಿಲ್ಲ. ಆಗ ಚರ್ಮ ತನ್ನ ತಾಜಾ ಬಣ್ಣವನ್ನು ಕಳೆದು ಬಿಳಿ ಬಣ್ಣಕ್ಕೆ ತಿರುಗುತ್ತದೆ.

ಹೊಸ ವಿಧಾನ: ರೋಗಿಗಳು ಬಹುಪದ್ಧತಿಯ(ಆಯುರ್ವೇದ ಮತ್ತು ಅಲೋಪತಿ)ಔಷಧಿಗಳನ್ನು ಏಕಕಾಲದಲ್ಲಿ ಬಳಸುವುದರಿಂದ ರೋಗಗಳ ನಿಯಂತ್ರಣ ಬಹುಬೇಗನೇ ಆಗುತ್ತಿದೆ ಎಂಬ ಸತ್ಯವನ್ನು ತಮ್ಮ ವೈದ್ಯಕೀಯ ವೃತ್ತಿ ಅನುಭವದಿಂದ ಕಂಡುಕೊಂಡ ಕಾಸರಗೋಡಿನ ಚರ್ಮ ಮತ್ತು ಲೈಂಗಿಕ ರೋಗ ತಜ್ಞ ಡಾ.ಎಸ್ ಆರ್ ನರಹರಿ, ಈ ಸೂಕ್ಷ್ಮ ವಿಚಾರವನ್ನೇ ತಮ್ಮ ಅಧ್ಯಯನ ವಿಷಯವನ್ನಾಗಿ ಕೈಗೊಂಡರು. ಇದರ ಪರಿಣಾಮವೇ ಇಡೀ ವಿಶ್ವದಲ್ಲೇ ಅತ್ಯಂತ ಹೊಸಪದ್ಧತಿಯೆಂದು ಪರಿಗಣಿಸಲ್ಪಟ್ಟ `ಸಂಯೋಜಿತ ಚಿಕಿತ್ಸಾ ಪದ್ಧತಿ'ಯ ಜನನ.

ಆಯುರ್ವೇದ, ಅಲೋಪತಿ ಮತ್ತು ಹೋಮಿಯೋಪತಿ ಪದ್ಧತಿಗಳನ್ನು ಒಗ್ಗೂಡಿಸಿ ರೋಗಿಗಳಿಗೆ ಅನುರೂಪವಾದ ಚಿಕಿತ್ಸೆ ನೀಡುವ ವಿಧಾನವೇ ಸಂಯೋಜಿತ ಚಿಕಿತ್ಸಾ ಪದ್ಧತಿ. ಇದರ ಮೂಲಕವೇ ಐಎಡಿಯ ತಂಡ ಪಾಂಡುರೋಗಕ್ಕೆ ಪರಿಣಾಮಕಾರಿ ಚಿಕಿತ್ಸೆಯನ್ನೂ ನೀಡುತ್ತಿದೆ.
ಡಾ.ಪ್ರಸನ್ನ ನರಹರಿ, ಆಯುರ್ವೇದ ಪದ್ಧತಿಯ ಡಾ.ಮಹಾದೇವನ್, ಹೋಮಿಯೋಪತಿಯ ಡಾ.ಕೆ.ಎಸ್ ಬೋಸ್ ಸೇರಿದಂತೆ ಒಂದು ಸಮಾನ ಮನಸ್ಕರ ತಂಡ ರಚಿತಗೊಂಡು ಈ ನೂತನ ಚಿಕಿತ್ಸಾವಿಧಾನವನ್ನು ಕಂಡುಹಿಡಿದೆ. ಇದರಿಂದ ನಿರೀಕ್ಷೆಗೂ ಮೀರಿದ ಫಲ ಇದರಿಂದ ದೊರಕಿದೆ.
ಆಯುರ್ವೇದ ಪದ್ಧತಿಯಲ್ಲಿ ಬಿಳಿತೊನ್ನಿಗೆ ಚಿಕಿತ್ಸೆ ಇದೆ. ಇದರಲ್ಲಿ ಹೇಳಿರುವಂತೆ ಶರೀರದ ಬ್ರಾಜಕ ಪಿತ್ತದಲ್ಲಿನ ಅಸಮತೋಲನದಿಂದಲೇ ಈ ರೋಗ ಕಾಣಸಿಗುತ್ತದೆ. ರೋಗಿಗಳಿಗೆ ಕಾಮಧೇನು ಶ್ವಿತ್ರನಾಶಕವಟಿ ಮಾತ್ರೆಯ ಮೂಲಕ ಚಿಕಿತ್ಸೆ ನೀಡುವ ಪದ್ಧತಿಯೂ ಸೇರಿದಂತೆ ಇನ್ನಿತರ 25ಕ್ಕೂ ಅಧಿಕ ಚಿಕಿತ್ಸಾ ವಿಧಾನಗಳನ್ನು ಗೊತ್ತುಮಾಡಿದೆ.

ಮಹಾರಾಷ್ಟ್ರದ ವಾರ್ಧಾದಲ್ಲಿರುವ ಡೆಲ್ಲಿಯ ಐಐಟಿ ಅಂಗಸಂಸ್ಥೆಯಾದ ಎಂಜಿಐಆರ್ಐ ನ ತಜ್ಞ ವೈದ್ಯರ ತಂಡವೊಂದು ಪಾಂಡುರೋಗಕ್ಕೆ ಕಾಮಧೇನು ಶ್ವಿತ್ರನಾಶಕ ವಟಿಯಿಂದ ಚಿಕಿತ್ಸೆ ನಡೆಸಿದಾಗ ಉತ್ತಮ ಫಲಿತಾಂಶ ದೊರಕುತ್ತಿದೆ ಎಂಬ ಸತ್ಯವನ್ನು ಕಂಡುಕೊಂಡಿತು. ಅದೇ ಸಂದರ್ಭದಲ್ಲಿ ಕಾಸರಗೋಡಿನ ಐಎಡಿ ವೈದ್ಯ ತಂಡ ಸಂಯೋಜಿತ ಚಿಕಿತ್ಸಾ ಪದ್ಧತಿ ಸಿದ್ಧಪಡಿಸಿ, 2003ರ ಮಾರ್ಚ್ ತಿಂಗಳಲ್ಲಿ ಎಂಜಿಆರ್ಐ ನ ಅಂಗೀಕಾರಕ್ಕೆ ಕಳುಹಿಸಿತು. ಜುಲೈನಲ್ಲಿ ಇದು ಅಂಗೀಕೃತವಾಗಿ ಈ ವಿಧಾನ ಮುಂದುವರಿಸಲು ಅಧಿಕೃತ ಆದೇಶವನ್ನೂ ನೀಡಿತು. 2003ರ ಆಗಸ್ಟ್ ತಿಂಗಳಲ್ಲಿ ಐಎಡಿ ಬಿಳಿತೊನ್ನಿಗೆ ಚಿಕಿತ್ಸೆ ನೀಡುವ ವಿಚಾರದಲ್ಲಿ `ಎಥಿಕ್ ಕಮಿಟಿ' ಒಪ್ಪಿಗೆ ಪಡೆದು ಚಿಕಿತ್ಸೆ ಆರಂಭಿಸಿತು. 2006ರ ಅಗಸ್ಟ್ ತಿಂಗಳ ತನಕ ಒಟ್ಟು 237 ಮಂದಿಗೆ ಇದೇ ರೋಗಕ್ಕೆ ಚಿಕಿತ್ಸೆಯನ್ನು ನೀಡಿದೆ. ಈ ಪೈಕಿ ಶೇ.33ಮಂದಿಗೆ ಉತ್ತಮ ಫಲಿತಾಂಶ ದೊರಕಿದೆ.

ಶೇ.46.6ಮಂದಿಗೆ ಪರಿಣಾಮಕಾರಿಯಾಗಿದೆ. ಶೇ.20 ಮಂದಿ ನಾನಾ ಕಾರಣದಿಂದ ಚಿಕಿತ್ಸೆಯಿಂದ ಹಿಂದೆ ಸರಿದಿದ್ದಾರೆ. ಒಟ್ಟಿನಲ್ಲಿ ಹೊಸ ಪದ್ಧತಿ ಈ ರೋಗಕ್ಕೆ ಪರಿಣಾಮಕಾರಿ ಚಿಕಿತ್ಸಾ ವಿಧಾನವಾಗಿ ಕಾರ್ಯನಿರ್ವಹಿಸಿದೆ.

ಅಧ್ಯಯನ ವರದಿ-ಹೋಲಿಕಾ ಮಾಪನ: ಪಾಂಡುರೋಗದ ಚಿಕಿತ್ಸೆ, ಪ್ರಗತಿಗಳ ಬಗ್ಗೆ ನಿರಂತರ ಮೂರು ವರ್ಷಗಳ ಅಧ್ಯಯನ ವರದಿ ಈ ತನಕ ವಿಶ್ವದಲ್ಲೇ ನಡೆದಿಲ್ಲ,ಎನ್ನುತ್ತಾರೆ ಐಎಡಿ ಸಂಸ್ಥೆಯ ನಿರ್ದೇಶಕ ಮತ್ತು ಅಧ್ಯಕ್ಷ ಡಾ.ಎಸ್ ಆರ್ ನರಹರಿ.
ಇದೀಗ ಐಎಡಿ ಈ ಬಗ್ಗೆ ಕಾರ್ಯೋನ್ಮುಖವಾಗಿದೆ.

- ಟೀಂ ಈ ಕನಸು

ಮುಂದೆ ಓದಿ

ಈ ಕನಸು ಅವಾರ್ಡ್
ಲೇಖನ ಬರೆಯಬೇಕೆಂಬ ನನ್ನ ಈ ಕನಸುಗಳಿಗೆ ಜೀವ ತುಂಬಿದ್ದು. ಗೆಳೆಯ ಅಹ್ಮದ್ ಅದೊಂದು ದಿವಸ ಗುಲಬರ್ಗಾ ವಿವಿಯಲ್ಲಿ ಸ್ನಾತ್ತಕೋತ್ತರ ಪದವಿಗೆ ವಿದ್ಯಾರ್ಥಿಗಳ ಆಯ್ಕೆ ನಡೆದಿತ್ತು. ತನ್ನ ಗೆಳೆಯನ ಅಡ್ಮಿಷನ್ ಸಲುವಾಗಿ ಆತ ಇಲ್ಲಿಗೆ ಬಂದಿದ್ದ. ನಾನು ಭೇಟಿ ಮಾಡಿ ಬಹಳ ವರ್ಷಗಳೇ ಕಳೆದಿದ್ದವು. ಆಕಸ್ಮಿಕವಾಗಿ ಭೇಟಿಯಾದ ಆತನ ಕುಶಲೋಪರಿ ವಿಚಾರಿಸಿದೆ. ಅಲ್ಲಿರುವ ಸುಂದರವಾದ ಪಾರ್ಕ್.ಅಲ್ಲಿ ಕುಳಿತು ಮಾತನಾಡುತ್ತಿದ್ದಾಗ, ನಿನ್ನ ಲೇಖನಗಳ ಬರವಣಿಗೆ ಎಲ್ಲಿಗೆ ಬಂತು ಎಂದು ಕೇಳಿದೆ. ಕೆಲವೊಂದು ಲೇಖನಗಳು ಪತ್ರಿಕೆಗಳಲ್ಲಿ ಹಾಗೂ ಈ-ಕನಸು.ಕಾಂ ವೆಬ್ಸೈಟ್ನಲ್ಲೂ ಪ್ರಕಟಗೊಂಡಿವೆ ಎಂದು ತಿಳಿಸಿದ. ಕುತೂಹಲದಿಂದ ಕೇಳಿದಾಗ ವೆಬ್ಸೈಟ್ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ. ನಾನು ಕೂಡ ಈ ವೆಬ್ ಗೆ ಲೇಖನಗಳನ್ನು ಕಳಿಸಬೇಕೆಂದು ತೀರ್ಮಾನಿಸಿದೆ. ಅದಾಗಲೇ ನಾನು ಬರೆದ ಹತ್ತಕ್ಕೂ ಹೆಚ್ಚು ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದವು. ಒಂದು ಸಲ ಆ ವೆಬ್ ಸರ್ಚ್ ಮಾಡಿ ನೋಡಿದೆ.


ಇಲ್ಲಿ ಪ್ರಸ್ತುತಪಡಿಸುವಂತಹ ವೈವಿಧ್ಯಮಯ ಸುದ್ದಿಗಳು, ಹಲವು ವಿಚಾರಧಾರೆಯ ಲೇಖನಗಳು, ಮನಮೋಹಕವಾದಂತಹ ಚಿತ್ರಗಳು, ಯಾವುದೋ ಕಲ್ಪನಾ ಲೋಕಕ್ಕೆ ಕರೆದೊಯ್ಯುವಂತ್ತಿದ್ದವು. ಪ್ರತಿನಿತ್ಯ ಇದನ್ನು ಓದುತ್ತಾ ಇದರ ಅಭಿಮಾನಿಯಾದೆ. ಹೊಸ ಬಗೆಯ ಲೇಖನಗಳು, ಪ್ರಚಲಿತ ಘಟನೆಗಳನ್ನು ಕುರಿತು ಲೇಖನಗಳನ್ನು ಬರೆಯಲು ಇದು ಸ್ಫೂರ್ತಿಯಾಯಿತು. ನಾನಿರುವುದು ವಸತಿ ನಿಲಯದಲ್ಲಿ, ಆಗತಾನೇ ಸ್ಪರ್ಧಾತ್ಮಕ ಪರೀಕ್ಷೇಗಳು ಹತ್ತಿರವಾಗುತ್ತಿದ್ದವು. ಕೆಲವರು ಓದಲು ಮಗ್ನರಾದರೆ, ಹಲವರು ಪರೀಕ್ಷೆ ಇನ್ನೂ ಮುಂದೆ ಇವೆ, ನಾವು ಯಾಕೆ ಟೆನ್ಷನ್ ಮಾಡಿಕೊಂಡು ಓದಬೆಕು ಎನ್ನುತ್ತಾ ಕಾಲವನ್ನು ಮುಂದಕ್ಕೆ ಹಾಕುತ್ತಿದ್ದರು. ಈ ದೃಷ್ಟಿಕೋನ ಇಟ್ಟುಕೊಂಡು ಲೇಖನ ಬರೆಯ ತೊಡಗಿದೆ.

ನಾಳೆ ಮಾಡುವ ಕೆಲಸ ಇವತ್ತೆ ಮಾಡು, ಇವತ್ತೇ ಮಾಡುವ ಕೆಲಸ ಈಗಲೇ ಮಾಡಿ ಮುಗಿಸಿ ಬಿಡು ಎಂಬ ಮಾತಿದೆ. ಕಳೆದು ಹೋದ ಸಮಯ ಮತ್ತೆ ಬರಲಾರದು. ಕಾಲಗಳು ಉರುಳುವವು, ಗಳಿಗೆಗಳು ಹೊರಳುವವು ಇದನ್ನರಿತುಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸರಿಯಾದ ಕ್ರಮದಲ್ಲಿ ಓದಿ, ಯಶಸ್ಸನ್ನು ತಮ್ಮದಾಗಿಸಿಕೊಳ್ಳಬೇಕೆಂಬ ನಿಟ್ಟಿನಲ್ಲಿ ಒಂದು ಲೇಖನ ಸಿದ್ಧಪಡಿಸಿದೆ.

ಮುಂದೂಡುವ ಪ್ರವೃತ್ತಿ ಸಲ್ಲದು. ಎಂಬ ತಲೆಬರಹದೊಂದಿಗೆ ಈ-ಕನಸು.ಕಾಂನಲ್ಲಿ ಲೇಖನ ಪ್ರಕಟವಾಯಿತು. ಆ ದಿನ ಸಾಯಂಕಾಲ 7 ಘಂ. ಸುಮಾರಿಗೆ ನನಗೆ ಒಂದು ಕರೆ ಬಂತು. ಆ ಕರೆ ಬೇರೆ ಯಾರದೂ ಅಲ್ಲ... ವೆಬ್ ಸೈಟ್ ಎಡಿಟರ್ ಕರೆ ಮಾಡಿದ್ದರು! ಅವರು ಲೇಖನದ ಸರಿ ತಪ್ಪುಗಳನ್ನು ನನಗೆ ತಿಳಿಸುತ್ತಾ, ಇನ್ನೂ ಚನ್ನಾಗಿ ಲೇಖನ ಬರೆಯಲು ಹುರಿದುಂಬಿಸಿದರು. ಹೊಸ ಹೊಸ ವಿಷಯಗಳತ್ತ ಗಮನ ಹರಿಸುವದು, ಓದುಗರಿಗೆ ಅಭಿರುಚಿ ಇರುವಂತಹ ವಿಷಯಗಳ ಬಗ್ಗೆ, ಪ್ರಚಲಿತ ಘಟನೆಗಳ ಕುರಿತು ಲೇಖನವಿರಬೇಕು. ಪ್ರತಿಯೊಂದು ವಿಷಯಕ್ಕೆ ಹೊಂದಿಕೊಳ್ಳುವಂತಹ ಭಾವಚಿತ್ರಗಳಿದ್ದರೆ ಲೇಖನ ಸ್ವಾರಸ್ಯಕರವಾಗಿರುತ್ತದೆ. ಎಂದು ತಿಳಿಸಿಕೊಟ್ಟ ಅವರ ಮಾತುಗಳು ಇಂದಿಗೂ ಅವಿಸ್ಮರಣೀಯ.

ಲೇಖನ ಬರೆಯಬೇಕೆಂಬ ಹಂಬಲ, ತುಡಿತ ನನಗೆ ಇನ್ನೂ ಹೆಚ್ಚಾಯಿತು. ನನ್ನ ಈ ಅಭಿಲಾಷೆಯಿಂದ ಇದೀಗ ಹತ್ತು ಲೇಖನಗಳು ಈ-ಕನಸು.ಕಾಂನಲ್ಲಿ ಪ್ರಕಟಗೊಂಡಿವೆ. ನನ್ನ ಮನೋಭಿಲಾಷೆಗೆ ಇದು ಸ್ಪೂರ್ತಿಯ ಸೆಲೆಯಾಯಿತು. ಹೊಸ ಹೊಸ ಬರಹಗಾರರಿಗೆ ವೇದಿಕೆ ಕಲ್ಪಿಸಿಕೊಟ್ಟು, ಯುವಲೇಖಕರಲ್ಲಿ ಉತ್ಸಾಹವನ್ನು ತುಂಬುವದರ ಜೊತೆಗೆ ಅವರ ಗುರಿಯನ್ನು ಸಾಧಿಸಲು ಸಹಾಯಕವಾಗಿದೆ. ಯುವ ಮನಸ್ಸಿನ ಮನದಂಗಳಕೆ ಬರವಣಿಗೆಯ ಭರವಸೆ ಮೂಡಿಸುತ್ತಿರುವ ಈ ವೆಬ್ಸೈಟ್ ಪತ್ರಿಕೆ ನಿಜಕ್ಕೂ ಶ್ಲಾಘನೀಯವಾದುದು.

ಬರವಣಿಗೆ ಎನ್ನುವದು ಒಂದು ಕಲೆ. ಅದು ಎಲ್ಲರಿಗೂ ಸಿದ್ದಿಸುವುದಿಲ್ಲ ಎನ್ನುವದು ಬಹಳ ಜನರ ಅಭಿಮತ. ಆದರೆ ಪ್ರಪಂಚದಲ್ಲಿ ಇಷ್ಟೊಂದು ಬರಹಗಾರರು ಇರುವಾಗ, ಅವರಲ್ಲಿ ನಾವೇಕೆ ಒಬ್ಬರಾಗಬಾರದು? ಮನಸ್ಸಿನಲ್ಲಿರುವದನ್ನು ಬರವಣಿಗೆಯ ರೂಪಕ್ಕೆ ಇಳಿಸಲು ಪ್ರಯತ್ನ ಮಾಡಬೇಕು, ಅಕ್ಷರದ ಮೂಲಕ ವ್ಯಕ್ತಪಡಿಸಲು ಸಮರ್ಥರಾಗಬೇಕು. ನಾವು ಬರೆಯುವಂತಹ ಲೇಖನಗಳಲ್ಲಿ ಸತ್ವವಿದ್ದರೆ ಅದು ಖಂಡಿತಾ ಪ್ರಕಟಣೆಗೆ ಒಳಪಡುತ್ತದೆ. ಬನ್ನಿ ಬರಹಗಾರರಾಗೋಣ, ಈ-ಕನಸು, ಇದು ವರ್ಷದ ಕನಸು. ಇದೊಂದು ಅಪೂರ್ವ ಸಂಗಮ.

ಅಮರೇಶ ನಾಯಕ ಜಾಲಹಳ್ಳಿ
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಗುಲಬರ್ಗಾ ವಿಶ್ವವಿದ್ಯಾಲಯ ಗುಲಬರ್ಗಾ

ಮುಂದೆ ಓದಿ

ಈ ಕನಸು ಅವಾರ್ಡ್

ಅದು ಕಳೆದ 2010 ಜುಲೈ 15ರ ಬೆಳಗ್ಗೆ ಸುಮಾರು 8.30 ರ ಸಮಯ, ಚುಮುಚುಮು ಚಳಿಯ ನಡುವೆ ಸಣ್ಣಗೆ ಬೀಳುತ್ತಿದ್ದ ಮಳೆಯೊಂದಿಗೆ ಕಾಲೇಜು ಮೆಟ್ಟಿಲು ಹತ್ತಿದಾಗ ಎನೋ ಒಂದು ಹೊಸ ಅನುಭವ. ಕಾಲೇಜಿನ ಅಕ್ಕ ಪಕ್ಕದಲ್ಲಿ ನಿರ್ಮಿಸಲಾಗಿದ್ದ ಬೃಹತ್ ಯಕ್ಷಗಾನ ಕಲಾಕೃತಿಗಳು ನಮ್ಮನ್ನು ಸ್ವಾಗತಿಸುವಂತೆ ಭಾಸವಾಗುತ್ತಿತ್ತು. ದಕ್ಷಿಣ ಕನ್ನಡ ಜಿಲ್ಲೆಗೆ ಹೊಸಬನಾಗಿದ್ದ ನನಗೆ ಅಲ್ಲಿನ ಸುಂದರ ವಾತಾವರಣ ಮನಸ್ಸಿಗೆ ಮುದ ನೀಡಿತು. ಸಂತೋಷದಿಂದ ತರಗತಿ ಹುಡುಕಿ ಒಳಗೆ ಕುಳಿತೆ. ಹೊಸ ಊರು, ಹೊಸ ಕಾಲೇಜು, ಹೊಸ ತರಗತಿ, ಹೊಸ ಗೆಳೆಯರು ಎಲ್ಲವೂ ಹೊಸತು. ಗೆಳೆಯರ ಪರಿಚಯ ಮಾಡಿಕೊಳ್ಳುತ್ತಿದ್ದೆ. ಅಲ್ಲಿನ ಸ್ಥಳೀಯ ಭಾಷೆಯಾದ ತುಳುವಿನಲ್ಲಿ ಎಲ್ಲರೂ ಸಂವಹನ ನಡೆಸುತ್ತಿದ್ದರು. ಮೂಲತಃ ಶಿವಮೊಗ್ಗ ಜಿಲ್ಲೆಯವನಾದ ನನಗೆ ತುಳುವಿನ ಗಂಧ ಗಾಳಿ ಗೊತ್ತಿರಲಿಲ್ಲ.!


ನಾನು ಅವರು ಮಾತನಾಡುತ್ತಿದ್ದದ್ದು ಬಾಯಿ ಬಿಟ್ಟುಕೊಂಡು ನೋಡುತ್ತಾ ಕುಳಿತೆ. ಅಲ್ಲಿ ಒಬ್ಬ ಹುಡುಗಿ ಸರಿತಾ ಬಂದು ತನ್ನ ಪರಿಚಯ ಮಾಡಿಕೊಂಡಳು, ನಾನು ಕೂಡಾ ಅವಳ ಪರಿಚಯ ಮಾಡಿಕೊಂಡೆ. ನನಗೆ ತುಳು ಬರುವುದಿಲ್ಲ ನಾನೇನು ಮಾಡಲಿ ಎಂದು ಅವಳಲ್ಲಿ ಕೇಳಿದಾಗ, ಆಗ ಅವಳು ಯಾರಾದರೂ ತುಳುವಿನಲ್ಲಿ ಮಾತನಾಡಿಸಿದರೆ "ಎಂಕ್ ತುಳು ಬರ್ಪುಜಿ" ಅಂತ ಹೇಳು ಎಂದುಉ ಹೇಳಿಕೊಟ್ಟಳು. ಅಂದಿನಿಂದ ಯಾರಾದರೂ ತುಳುವಿನಲ್ಲಿ ಮಾತನಾಡಿಸಿದರೆ ಎಂಕ್ ತುಳು ಬರ್ಪುಜಿ ಅಂತ ನಗುತ್ತಾ ಹೇಳುತ್ತಿದ್ದೆ. ಅದೊಂದು ಹೊಸ ಅನುಭವ.

ಈಗ ಯಾರಾದರೂ ತುಳುವಿನಲ್ಲಿ ಮಾತನಾಡಿದರೆ ತುಳುವಿನಲ್ಲೇ ಉತ್ತರ ಕೊಡುವಷ್ಟು ಭಾಷೆ ಕಲಿತಿದ್ದೇನೆ. ಇದೊಂದು ಹೊಸ ಅನುಭವ ನೀಡಿತು. ಹಾಗೆಯೇ ಮಾತನಾಡುತ್ತಾ ಕುಳಿತಾದ ತರಗತಿಗೆ ಬಂದವರೇ ಇಂಗ್ಲೀಷಿನ ಮಂಜುಶ್ರೀ ಮೇಡಂ. ಅವರು ತಮ್ಮ ಪರಿಚಯ ಮಾಡಿಕೊಳ್ಳುತ್ತಾ ನಾನು ಶಿವಮೊಗ್ಗೆಯವಳು ಎಂದು ಹೇಳಿಕೊಂಡಳು. ಆಗ ನನಗೆ ಎಲ್ಲಿಲ್ಲದ ಸಂತೋಷ ಆಯಿತು. ಅವರು ಎಲ್ಲರ ಪರಿಚಯ ಮಾಡಿಕೊಂಡು ಮೊದಲ ದಿನ ಎಂದು ನಮ್ಮ ಜೊತೆ ಹರಟೆ ಹೊಡೆದರು. ಮುಂದಿನ ತರಗತಿ ಯಾವುದೆಂದು ತಿಳಿಯದೆ ಎಲ್ಲರೂ ಹರಟೆ ಹೊಡೆಯುತ್ತಾ ಕುಳಿತೆವು.

ಅನೇಕರು ಹೊರ ರಾಜ್ಯದವರಿದ್ದರು. ಒಬ್ಬಳು ಮಾತ್ರ ಶ್ರೀಲಂಕಾದವಳಾಗಿದ್ದಳು. ಮೊದಲು ಅವಳ ಪರಿಚಯ ಮಾಡಿಕೊಂಡೆ. ಕೇರಳ ಮಣಿಪುದ ವಿದ್ಯಾರ್ಥಿಗಳೂ ಇದ್ದರು. ಕಾಲೇಜಿಗೆ ರಜೆ ಬಂದರೆ ಎಲ್ಲರನ್ನೂ ಬಿಟ್ಟಿರುವುದು ಸ್ವಲ್ಪ ಕಷ್ಟ. ಒಂದು ವರ್ಷದಲ್ಲಿ ನಮ್ಮ ಕೋರ್ಸು ಮುಗಿದೇ ಹೊಗುತ್ತದೆ ಎಂಬ ವಿಷಯವನ್ನ ನೆನಪಿಸಿಕೊಂಡರೆ ನನ್ನ ಕಣ್ಣಲ್ಲಿ ನೀರು ಬರುತ್ತದೆ.

ದರ್ಶನ್ ಬಿ.ಎಂ
ಪತ್ರಿಕೋದ್ಯಮ ವಿದ್ಯಾರ್ಥಿ
ಆಳ್ವಾಸ್ ಕಾಲೇಜು
ಮೂಡುಬಿದಿರೆ

ಮುಂದೆ ಓದಿ

ವಿಶೇಷ ವರದಿ

ಸತ್ತ ಮನುಷ್ಯರಿಂದ ಕಥೆ ಹೇಳಲು ಅಸಾಧ್ಯ,

ಮಂಗಳೂರು:ಅದು ಹಳೆಯ ಕಥೆ...ಆಗ ಮಂಗಳೂರು ಇಷ್ಟೊಂದು ಬೆಳವಣಿಗೆಯಾಗಿರಲಿಲ್ಲ.ನಗರದಲ್ಲಿ ಸಾಕಷ್ಟು ಜಾಗ ಇತ್ತು.ರಸ್ತೆಗಳು, ವಾಹನ ಸಂಚಾರಕ್ಕೆ,ಓಡಾಟಕ್ಕೆ ಅವಕಾಶವಿತ್ತು.ಹಸಿರು ತುಂಬಿತ್ತು.ಆದರೆ ಇಂದು ಮಂಗಳೂರು ನಗರವನ್ನವಲೋಕನ ಮಾಡಿದ್ರೆ "ಮಳೆ ಬಂದ್ರೆ ನೀರು ಹರಿದು ಹೋಗೋದಕ್ಕೂ ಜಾಗ ಇಲ್ಲ! " ಅನ್ನೋರೀತಿಯಾಗಿಬಿಟ್ಟಿದೆ. ನಗರ ಬೆಳೆದುಬಿಟ್ಟಿದೆ.ಈ ಬೆಳವಣಿಗೆಯ ಓಘದಲ್ಲಿ ಹಳೆಯ ಕಟ್ಟಡಗಳು ನೆಲಸಮವಾಗತೊಡಗಿವೆ. ಹಳೆಯ ಸ್ಮಾರಕಗಳು, ಐತಿಹ್ಯಗಳನ್ನು ತನ್ನೊಳಗೆ ಹುದುಗಿಸಿಟ್ಟ ಅನೇಕಾನೇಕ ಅನರ್ಘ್ಯ ಸ್ಥಳಗಳು ಮಾಯವಾಗತೊಡಗಿವೆ. ನಾವಿಂದು ನಿಮ್ಮೆಲ್ಲರ ಗಮನಕ್ಕೆ ತರಲಿಚ್ಛಿಸುವುದು ಅಂತಹದೇ ಒಂದು ಸ್ಥಳವನ್ನ...ಅದೇ ಇಂದಿನ ವಿಶೇಷ ವರದಿ.. ಇಲ್ಲಿ ಗೋರಿಗಳೂ ಕಥೆ ಹೇಳುತ್ತವೆ...!!!





ದೇಶದ ಇತಿಹಾಸವನ್ನು ಸಾರುವ, ಸಂಶೋಧಕರಿಗೆ ಮಾಹಿತಿಗಳ ಆಗರವನ್ನೇ ನೀಡುವ , ನಗರ ಮಧ್ಯೆವೇ ಇರುವ ಐತಿಹಾಸಿಕ ಸ್ಮಾರಕಗಳು ಅವಸಾನದ ಅಂಚಿನಲ್ಲಿವೆ. ಶಿಥಿಲಾವಸ್ಥೆಯಲ್ಲಿ ಕೇಳುವವರಿಲ್ಲದೆ ಪಾಳುಬಿದ್ದಿದೆ. ಈ ಸ್ಮಾರಕಗಳ ಬಗ್ಗೆ ಇಲ್ಲಿನ ಅನೇಕ ಜನಕ್ಕೆ ಇನ್ನೂ ತಿಳಿದಿಲ್ಲ ಎಂಬ ಅಂಶ ಮಾತ್ರ ಅಚ್ಚರಿ!. ಕೆನರಾ ಡಿಸ್ಟ್ರಿಕ್ಟ್ ನ ಹಲುವು ಉತ್ತಮ ಹುದ್ದೆಯಲ್ಲಿದ್ದ ಯುರೋಪಿಯನ್ನರನ್ನು 1800ರಿಂದ 1895ರ ತನಕ ಮಂಗಳೂರಿನಲ್ಲಿ ಧಪನ ಮಾಡಲಾಗಿದೆ. ಇವೆಲ್ಲವನ್ನೂ ಅಳಿದುಳಿದ ಈ ಸ್ಮಾರಕಗಳು ಇಂದು ತಿಳಿಸುತ್ತವೆ. ಓಲ್ಡ್ ಕೆಂಟ್ ರೋಡ್ ಅಂದರೆ ಇಂದಿನ ಟೆಲಿಕಾಂ ಹೌಸ್ ರೋಡ್ ನಲ್ಲಿರುವ ಸಂತ ಪಾವ್ಲ್ ರ ಸಮಾಧಿ ಸ್ಥಳದ ಪ್ರದೇಶದಲ್ಲಿ `ಬ್ರಿಗೇಡಿಯರ್ ಜನರಲ್ ಕಾರ್ನೆಸ್' ಸ್ಮಾರಕ ಶಾಸನ ಸ್ಥಂಭವಿದೆ. ಇದು 20 ಅಡಿ ಎತ್ತರದ ಸ್ತಂಭವಾಗಿದ್ದು ಕಲಾತ್ಮಕವಾಗಿ ರೂಪುಗೊಂಡಿದೆ. ಬ್ರಿಗೇಡಿಯರ್ ಜನರಲ್ ಜೋನ್ ಕಾರ್ನೆಸ್ ಬಂಗಾಳದ ಸೇನಾ ದಂಡ ನಾಯಕ. ಆತ ನಂತರ ಮದ್ರಾಸ್ ಪ್ರಾಂತ್ಯದ ಕೌನ್ಸಿಲರ್ ಆಗಿದ್ದ. ಆತನ ಅಂತ್ಯ ಕ್ರಿಯೆ ನಡೆದದ್ದು ಇದೇ ನಮ್ಮ ಮಂಗಳೂರಿನಲ್ಲಿ. ಬ್ರಿಗೇಡಿಯಲ್ ಜನರಲ್ ಕಾರ್ನೆಸ್ ತನ್ನ 84ನೇ ವಯಸ್ಸಿನಲ್ಲಿ ನಿಧನರಾದರು. 1806ರಲ್ಲಿ ಪ್ಲಾಸಿ ಕದನದ ವೇಳೆ ರಾಬರ್ಟ್ ಕ್ಲೈವ್ ರ ಸಹಾಯಕರಾಗಿ ಯುದ್ಧದಲ್ಲಿ ಪಾಲ್ಗೊಂಡಿದ್ದರು.


ಇವರ ಸ್ಮರಣಾರ್ಥ ನಿರ್ಮಿಸಲಾದ ಶಾಸನ ಸ್ಥಂಭವು ಇಂದು ಜೀರ್ಣಾವಸ್ಥೆಯಲ್ಲಿದೆ. ಇವರ ಸ್ಮಾರಕ ಸಮಾಧಿಯಲ್ಲಿ ಅವರ ಜನಪರ ಸೇವೆ., ಕಾಳಜಿ, 1761ರಲ್ಲಿ ಶಾಹ್ ಸದ್ದಾಹ್ ನ ವಿರುದ್ಧಗಳಿಸಿದ ಜಯ ಮೊದಲಾದ ವಿವರಗಳು ಸ್ಪುಟವಾಗಿ ಕೆತ್ತಲ್ಪಟ್ಟಿದೆ.
ಇಂತಹ ಉತ್ತಮ ಇತಿಹಾಸ ಸಾರುವ ಸ್ಥಂಭವಿಂದು ಮುರಿದು ಬೀಳುವ ಹಂತ ತಲುಪಿದೆ. ಬುದ್ದಿವಂತರ ಜಿಲ್ಲೆಯೆಂದೇ ಪ್ರಸಿದ್ಧಿ ಪಡೆದ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಅತ್ಯಧಿಕ ವಿದ್ಯಾವಂತರ ನಗರವಾದ ಮಂಗಳೂರಿನವರ ಇತಿಹಾಸ ಪ್ರಜ್ಞೆಗೆ ಇದೊಂದು ನಾಚಿಗೆಗೇಡಿನ ವಿಷಯವಾಗಿದೆ.
ಬ್ರಿಟಿಷರ 70 ಸಮಾಧಿಗಳು ಮತ್ತು ಸಂತ ಪಾವ್ಲರ ಚರ್ಚನ ಕೆಲವು ಸದಸ್ಯರ ಗೋರಿಗಳು ಇಲ್ಲಿವೆ. ಆದರೆ ಇವೆಲ್ಲವೂ ಇಂದು ಅವನತಿಯಂಚಿನಲ್ಲಿದೆ. ಇಲ್ಲಿರುವ ಪ್ರಮುಖ ಗೋರಿಗಳ ಪೈಕಿ ಕ್ಯಾಪ್ಟನ್ ಫಾಜ್ ರಹಮಾನ್ನ ಗೋರಿಯೂ ಉಲ್ಲೇಖನೀಯವಾಗಿದೆ. ಮೈಕಲ್ ಥಾಮಸ್ ಹಾರಿಸ್, ಕೆನರಾ ಡಿಸ್ಟ್ರಿಕ್ಟ್ ನ ಐದನೇ ಕಲೆಕ್ಟರ್ ಆಗಿದ್ದರು. ಇವರ ಗೋರಿಯೂ ಇಲ್ಲಿದೆ. ಆದರೆ ಅದು ಭಗ್ನಾವಸ್ಥೆಯಲ್ಲಿದೆ ಎಂಬುದು ಬೇಸರದ ಸಂಗತಿ.


ಕೆನರಾ ಡಿಸ್ಟ್ರಿಕ್ಟ್ ನ ಕಲೆಕ್ಟರ್ ಆಗಿದ್ದ ಮೈಕಲ್ ಥಾಮಸ್ ಹಾರಿಸ್ 1823ರಲ್ಲಿ ಕೃಷಿಕರಿಗೆ ಕುಮ್ಕಿ ಹಕ್ಕನ್ನು ಮಂಜೂರು ಮಾಡಿದನು. ಕೃಷಿಕನ ಕೃಷಿ ಭೂಮಿಗೆ ಒತ್ತುವರಿಯಾಗಿದ್ದ ಉಪಯೋಗ ಶೂನ್ಯ ಸ್ಥಳವನ್ನು ತನ್ನ ಕೃಷಿ ಭೂಮಿಯ ಕೃಷಿ ಅಭಿವೃದ್ಧಿಯ ಅವಶ್ಯಕತೆಗಳಿಗೆ ಉಪಯೋಗಿಸಬಹುದು ಎಂಬ ಕಾನೂನನ್ನು ಅವರು ಜಾರಿಗೊಳಿಸಿದ್ದರು . ಇದರಿಂದ ಬೇಸಾಯಗಾರನಿಗೆ ಅತ್ಯಂತ ಉಪಕಾರವಾಗಿದೆ. ಇಂತಹ ಜನಪರ ಕಾಳಜಿ ಹೊಂದಿದ, ಕೊಡುಗೆಗಳನ್ನು ನೀಡಿದ ವ್ಯಕ್ತಿಗಳ ವಿಚಾರನ್ನು , ಅಧ್ಬುತ ದಾಖಲೆಗಳನ್ನು , ಗತ ಇತಿಹಾಸದ ವೈಭವಗಳನ್ನು , ಜಿಲ್ಲೆಯ ಉತ್ತಮ ದಾಖಲೆಗಳನ್ನು ಕಾಳಜಿಯಿಂದ ಕಾಪಾಡಬೇಕಾದ ಜಿಲ್ಲಾಡಳಿತವು ಇವುಗಳ ಬಗ್ಗೆ ನಿಲ್ಯಕ್ಷ್ಯ ತಾಳಿರುವುದು ನಿಜಕ್ಕೂ ಖೇಧಕರ ಸಂಗತಿ.
ಇತಿಹಾಸ ಸಾರುವ ಇವುಗಳಿಂದು ಪೊದೆ, ಗಿಡಗಂಟಿಗಳಿಂದಾವೃತಗೊಂಡು ನಶಿಸತೊಡಗಿದೆ. ಇದು ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಾಟಾಗಿದೆ. ಈ ನಿರ್ಮಿತಿಗಳ ಕಲ್ಲುಗಳು ಕುಸಿಯತೊಡಗಿದೆ. ಹಲವಾರು ನಾಶವಾಗಿದೆ. ಕಣ್ಮರೆಯಾಗಿವೆ.

- ವರ್ಷ

ಮುಂದೆ ಓದಿ

ವೈವಿಧ್ಯ
ಜೀವನ ಎಂಬುದು ಗಾಲಿಯಂತೆ...ಒಮ್ಮೆ ಮೇಲೇರುತ್ತದೆ..ಮತ್ತೊಮ್ಮೆ ಕೆಳಗೆ ಹೋಗುತ್ತದೆ. ನೆನಪುಗಳೂ ಹಾಗೆನೇ...ಇದೀಗ ಜೀವನ ಒಂದು ಹಂತ ತಲುಪುತ್ತಿದ್ದಂತೆ ಮತ್ತೆ ಮತ್ತೆ ಹಳೆಯ ನೆನಪುಗಳು ಬೇಡ ಬೇಡವೆಂದರೂ ಕಾಡತೊಡಗುತ್ತವೆ...ಆ ನೆನಪುಗಳ ಅಂಗಳದಿಂದ ಎದ್ದೆದ್ದು ಬರುತ್ತವೆ...ನಿರಂತರವಾಗಿ ಬರೆಯುತ್ತಿದ್ದ ಅಂಕಣಗಳು...ಓದುಗರ ನಿರಂತರ ಪ್ರತಿಸ್ಪಂದನ, ಪತ್ರಗಳ ರಾಶಿ ರಾಶಿ ಅದೆಲ್ಲವೂ ಮತ್ತೆ ನೆನಪನ್ನು ಕೆದಕತೊಡಗಿವೆ...ನನ್ನ ಕೋಣೆಯೊಳಗೆ ಒಂದಷ್ಟು ಕ್ಲೀನಿಂಗ್ ಕೆಲಸ ಆರಂಭಿಸಿದ್ದೇನೆ...ಪತ್ರಿಕೆಯಲ್ಲಿದ್ದಾಗ ಬಂದಂತಹ ಹಳೆಯ ಪತ್ರಗಳು, ಓದುಗರ ಪ್ರತಿಸ್ಪಂದನಗಳು ಹಳೆಯ ಲೇಖನಗಳನ್ನು ನೆನಪಿಸುವಂತೆ ಮಾಡಿದವು...ಆ ನೆನಪಿಗೋಸ್ಕರ ಇದೀಗ ಹಳೆಯ ಲೇಖನವೊಂದನ್ನು ಈ ಕನಸಿನ ಮೂಲಕ ಮತ್ತೊಮ್ಮೆ ಓದುಗರಿಗೆ ನೀಡುತ್ತಿದ್ದೇನೆ...ಅದೇ ಪ್ರೀತಿ ವಿಶ್ವಾಸದ ನಿರೀಕ್ಷೆಯೊಂದಿಗೆ...



ಆಕೆ ಮುನಿಸಿಕೊಂಡರೆ ನೋಡುವುದಕ್ಕೇನೋ ಒಂಥರಾ ಖುಷಿ... ನಾನು ಏನಾದರೊಂದು ಹೇಳಿದರೆ ಸಾಕು...ಅದಕ್ಕೆ ಆಕೆಯ ಕಾಮೆಂಟ್ಸ್ ಇದ್ದೇ ಇರುತ್ತದೆ. ಪ್ರತಿಯಾಗಿ ನಾನು ವಾದ ಮಾಡಹೊರಟರಂತೂ ಸಾಕು...`ನಿಮ್ಮಲ್ಲಿ ಮಾತ್ನಾಡೋದಕ್ಕೆ ಫುಲ್ ಪ್ರಿಪೇರ್ ಮಾಡ್ಬೇಕು ... ಇಲ್ಲಾಂದ್ರೆ ಕಷ್ಟ ನೋಡಿ..' ಸಾಕು ಸಾಕು ಎಂದು ಮಾತು ಅರ್ಧಕ್ಕೆ ಸ್ಟಾಪ್. ಅಷ್ಟರಲ್ಲಿ ನಾನೊಂದು ಡೈಲಾಗ್ ಹೊಡ್ದೇನಂತ್ರೆ ಸಾಕು... ಮುನಿಸು ಓಡೋಡಿ ಬಂದು ಆಕೆಯ ನೀಳ ಮೂಗಿನ ತುದಿಗೇರಿಯೇ ಬಿಡುತ್ತದೆ...ಗೋಧಿವರ್ಣದ ತ್ವಚೆ ಕೆಂಪಗೆ ತಿರುಗಿಯೇ ಬಿಡುತ್ತದೆ...


ಅಲ್ಲೆಲ್ಲಾ ಬೆವರ ಹನಿ ಜಿನುಗಿ ಸುಂದರ ಮುತ್ತಿನಂತೆ ತುದಿಯನ್ನಲಂಕರಿಸಿಬಿಡುತ್ತದೆ!... ಆಗ ನಾನೇ ಸಜೆಷನ್ ಕೊಡುತ್ತೇನೆ... `ಕೆಂಪುಮೂಗಿನ ಹುಡುಗಿಯೇ ಕರ್ಚೀಫ್ ತೆಗೆದು ಮೂಗಿನ ತುದಿ ಒರೆಸಿಕೋ' ಎನ್ನುತ್ತೇನೆ... ಮತ್ತದೇ ಕೋಪದಲ್ಲಿ ...ರೀ...ನೋಡಿ ನೋಡಿ... ನನ್ನ ರೇಗಿಸ್ಬೇಡೀ ಮತ್ತೆ... ಎನ್ನುತ್ತಾಳೆ..
ಮತ್ತೆ ಒಂದಷ್ಟು ಕಾಲ ಮೌನ... ಹೂಂ...ಎನ್ನುವ ಒಂದು ಸಣ್ಣ ಹೂಂಕಾರ... ಎದುರಿಗಿದ್ದರೆ ಆಕಡೆ ಎಲ್ಲೋ ನೋಡುತ್ತಾ ಕೂರುವ ಸ್ವಭಾವ.. ಇಲ್ಲಾಂದ್ರೆ ಮೇಲೆ ನೋಡುತ್ತಾ ಕಾಲಲ್ಲಿ ಭೂಮಿಯನ್ನೇ ತಿವಿಯುತ್ತಾ `ಹಗೆ'ತೀರಿಸುತ್ತಾಳೆ...


ಕೊನೆಗೆ ಆಕೆಯ ಸಾವರಿಸಿಕೊಂಡು ಛೆ...ಏನಾಯ್ತು...ಯಾಕೆ ಮೂಡ್ ಹೋಯ್ತಾ...ದೇವ್ರೇ ಎಷ್ಟೊತ್ತಿಗೆ ಮೂಡ್ ಬರುತ್ತೆ...ಎಷ್ಟೊತ್ತಿಗೆ ಮೂಡ್ ಹೋಗುತ್ತೆ ಹೇಳೋದೇ ಕಷ್ಟ. ನಿಮ್ಮಲ್ಲಂತೂ ಮಾತಾಡೋದ್ ಭಾರೀ ಡೇಂಜರಪ್ಪಾ... ಎಂದು ನಂಗೇ ಡೈಲಾಗ್ ತಿರುಗಿಸಿ ಹೊಡೀತಾಳೆ!...ಫೋನಲ್ಲಿ ಮಾತಾಡ್ಬೇಕಾದ್ರೆ ನಾನ್ ಏನಾದ್ರೂ ಡೈಲಾಗ್ ಹೊಡ್ದೇ ಅಂದ್ರೆ ಅಲ್ಲಿಂದ ಕ್ಷಣ ಕಾಲ ಮೌನದುತ್ತರ ದೊರೆತ್ರೆ ನಂಗೆ ಗೊತ್ತಾಗಿ ಬಿಡುತ್ತೆ... ಆಕೆಯ ಮೂಗು ಕೆಂಪಾಗಿದೆ!... ನಾನೇ ಆಗ ಹೇಳುತ್ತೇನೆ... `ಹೇ...ನೋಡೇ ಅಲ್ಲೇ ಪಕ್ಕದಲ್ಲಿರೋ ಟವೆಲ್ ತೆಗೆದು ಮೂಗ್ ಒರೆಸ್ಕೋ... ಹೇಗೆ ಕೆಂಪಾಗಿದೆ ನೋಡು...' ಏನು ಇನ್ನೂ ಮೇಲೆ ನೋಡ್ತಿಯಲ್ಲೇ... ಹೇಳಿದ್ದು ಗೊತ್ತಾಗಿಲ್ವೇ ಎಂದು ಮತ್ತೊಂದು ಡೈಲಾಗ್ ಹೊಡೆದೇ ಆಂದ್ರೆ ...ಅಲ್ಲಿಗೇ ಶರಣು..ಶರಣು...ಮತ್ತೆ ಒಂದಷ್ಟು ಕಾಲ ಮುಗುಂ...ಮಾತು ಇಲ್ಲ ಕಥೆನೂ ಇಲ್ಲ...


ಮತ್ತೂ ಮಜ ಇದೆ ನೋಡಿ...ಒಂದಷ್ಟು ಹೊತ್ತು ಮಾತು ಕತೆ ಇಲ್ಲಾಂದ್ರೆ ಆಕೆಯ ಮೊಬೈಲ್ ಮೇಲೆ ಸುಂದರ ಕೈಬೆರಳು ಓಡೋಡಿ ಒಂದಷ್ಟು ಎಸ್.ಎಂ.ಎಸ್ ಹಾಗೇ ಟೈಪ್ ಆಗಿರುತ್ತೆ.... `ಹೇ .... ಏನಾಯ್ತು...ನೀನ್ ನನ್ನ ರಾಜ್ಕುಮಾರ ಅಲ್ವಾ...ಏನಾಯ್ತು ಪಾಪೂ...ಯಾಕೆ ಕೋಪಾನಾ...ಸೋರಿ...ಸೋರಿ ಅಂದ್ನಲ್ಲಾ...ಹ್ಹಾಂ...ನಿಂಗೊಂದು ಸಸ್ಪನ್ಸ್ ಇದೆ... ಏನ್ ಗೊತ್ತಾ...ಹೇಳಲ್ಲ...ತಕ್ಷಣ ಕಾಲ್ ಮಾಡು..' ಅಲ್ಲಿಗೆ ಸ್ಟಾಪ್! ಹಾಗೇ ಸಸ್ಪನ್ಸ್ ಕೊಟ್ಟು ಎಲ್ಲಾ ಸಿಟ್ಟನ್ನು ಒಮ್ಮೆಲೆ ಕರಗಿಸಿ ಬಿಡ್ತಾಳೆ ಈ ಚೆಂದುಳ್ಳಿ ಚೆಲುವೆ....! ಮತ್ತೆ ಒಂದೋ...ಎರಡೋ ಗಂಟೆಗಳು ನಿಮಿಷದಂತೆ ಹೋಗಿಬಿಡುತ್ತೆ...!ಆಕೆಗೆ ಮೂಡ್ ಆಫ್ ಆದ್ರೆ ಎಲ್ಲಾದ್ರೂ ಏಕಾಂತದಲ್ಲಿ ಹೋಗಿ ಕೂರುತ್ತಾಳೆ...ಒಂದಷ್ಟು ಕಾಲ ತಲೆ ಅಡಿಗೆ ಹಾಕಿ ಅಳ್ತಾಳೆ... ಊಟ..ತಿಂಡಿಗೆಲ್ಲಾ ಸ್ಟ್ರೈಕ್.

ಹ್ಹೂಂ...ಇದೆಲ್ಲಾ ಹಳೇ ಕಥೆ... ಅದು ಹಾಗೇ ನೆನಪಾಯಿತು... ಅಲ್ಲೇ ಟೆರೇಸ್ ಮೇಲೆ ನಿಂತು ಹಾಗೇ ಫೋನಲ್ಲಿ ಮಾತನಾಡುತ್ತಿರಬೇಕಾದ್ರೆ ನೆನಪಾಯ್ತು. ಅದೇ ಅಂದು ನಾನು ಆಕೆಯಲ್ಲಿ ಫೋನ್ ಮಾತನಾಡ್ಬೇಕಾದ್ರೆ ಇದ್ದ `ಚೆವಿ' ಹಣ್ಣಿನ ಗಿಡ ಇಂದು ಒಣಗಿ ಕರಟಾಗಿ ಹೋಗಿದೆ. ನಮ್ಮ ಸಂಬಂಧದಂತೆ!...ಅದೇ ಗಿಡ ಈ ಎಲ್ಲಾ ಘಟನೆಗಳನ್ನು ನೆನಪಿಸಿತು.ಈಗ `ಮೂಗಿನ ತುದಿ ಒರೆಸಿಕೋ' ಅನ್ನೋ ಡಯಲಾಗ್ ಹೊಡೆಯೋಕೆ ಫೋನೇ ಇಲ್ಲ... ಮುಖತಾ ಸಿಗುವುದಂತೂ ಇಲ್ಲವೇ ಇಲ್ಲ... ಮಾತೂ ಇಲ್ಲ ಕಥೆನೂ ಇಲ್ಲ. ಆ ಆತ್ಮೀಯ ಸಂಬಂಧಗಳೂ ಹಾಗೇ ಮಂಜುಗಡ್ಡೆಯಂತೆ ಕರಗಿ ನೀರಾಗಿ ಹೋಗಿದೆ... ಆ ನೀರ ಕೊನೆ ಹನಿಯೂ ಆರಿ ಹೋಗಿದೆ...!


ಈತನಕ ನನ್ನಲ್ಲಿದ್ದ ಸಿಟ್ಟು, ಬೇಸರ, ಮೂಗಿನ ತುದಿಯಲ್ಲಿದ್ದ ಕೋಪ ಎಲ್ಲವೂ ಈ ಹೊಸ ವರ್ಷದಲ್ಲಿ ಜೊತೆ ಜೊತೆಗೆ ಕರಗಿ ಹೋಗಿದೆ... ಈಗ ಎಲ್ಲವೂ ಹೊಸತು... ನವೋಲ್ಲಾಸದ ಸಂಭ್ರಮ... ಬರಡುಗಾಡಲ್ಲಿ ಓಯಸಿಸ್ ಹುಡುಕುವಂತೆ ಹೊಸತನದ ಹುಡುಕಾಟ...ಹೊಸದಾಸೆಗಳ ಹುಡುಕಾಟ...ಹಳೆಯ ನೆನಪುಗಳು ಕಳಚಿಕೊಳ್ಳತೊಡಗಿದೆ...ಬಾಡಿದ ಗುಲಾಬಿಯ ಒಂದೊಂದೇ ದಳಗಳು ಕಳಚಿ ತೇಲುತ್ತಾ ತೇಲುತ್ತಾ...ಭೂಸ್ಪರ್ಷವಾಗುವಂತೆ... ಅದೇ ಸ್ಥಾನದಲ್ಲಿ ಹೊಸ ಮೊಗ್ಗು ಅರಳತೊಡಗಿದೆ...ಸುವಾಸನೆ ಬೀರಿ ನವೋಲ್ಲಾಸವ ಹರಡುವ ತವಕದಲ್ಲಿದೆ...! ಕಾಲಚಕ್ರ ಬದಲಾದಂತೆ...ಹಳೆಯ ನೆನಪುಗಳು ಮಾಸುತ್ತವೆ...ಅಲ್ಲಿ ಹೊಸ ನೆನಪುಗಳು ಪುಳಕಗೊಳ್ಳುತ್ತವೆ... ಹಳೆ ಬೇರು ಬಾಡುತ್ತದೆ...ಹೊಸ ಚಿಗುರು ಮೊಳೆಯುತ್ತದೆ...ಹಾಗೇ ಜೀವನವೂ!

- ಹರೀಶ್ ಕೆ.ಆದೂರು

ಮುಂದೆ ಓದಿ

ವಿಶೇಷ ವರದಿ

ಬೆಳಗ್ಗೆ ಭಾನುವಿನ ಹೊಂಗಿರಣ ಭೂಮಿಗೆ ಬರುವ ಮುನ್ನವೇ ಮೈನುಡುಗುವ ಚಳಿಯಲ್ಲಿ ಸೈಕಲ್ ತುಳಿಯುತ್ತಾ ಯಾವ ಭಯವಿಲ್ಲದೇ ತೋಟದ ಕಡೆ ಪಯಣ ಬೆಳಸುತ್ತಾರೆ. ಏಣಿ ಏರಿ ಅಂಬು ಎಲೆಗಳನ್ನು ಕೀಳುತ್ತಾ, ಗುದ್ದಲಿ ಹಿಡಿದು ತೋಟದಲ್ಲಿ ಕೆಲಸಮಾಡುತ್ತಾರೆ ಈ ಮಹಾತಾಯಿ.ಇಲ್ಲಿವರೆಗೂ ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂದು ಕೇಳಿದ್ದೇವೆ; ನೋಡೂ ಇದ್ದೇವೆ. ಆದರೆ, ಒಬ್ಬ ಮಹಿಳೆ ಆಕಾಶದೆತ್ತರದ್ದನ್ನು ಸಾಧಿಸಬೇಕಾದರೆ, ಅವಳ ಹಿಂದೆ ಯಾರಿರುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. ಪತಿರಾಯನ ಪ್ರೋತ್ಸಾಹ ಹಾಗೂ ಸಾಮರಸ್ಯ ಜೀವನದಿಂದ ಏನೂ ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಸುನೀತಾ ಜ್ವಲಂತ ನಿದರ್ಶನ.



ಈಕೆಯನ್ನು ಯಾರೇ ಆಗಲಿ `ಹೆಣ್ಣೊಂದು ಮನಸು ಮಾಡಿದರೆ ಕೊರಡು ಕೊನರುವುದಯ್ಯ' ಎಂಬ ಶರಣರ ಉಕ್ತಿಯನ್ನು ಉವಾಚಿಸದಿರಲು ಸಾಧ್ಯವೇ ಇಲ್ಲ. ಅಷ್ಟೊಂದು ಆಕರ್ಷಕ ವ್ಯಕ್ತಿತ್ವ ಹಾಗೂ ಮೈಮನ ನವಿರೇಳಿಸುವ ಕಾರ್ಯಗಳನ್ನು ಮಾಡಿದ್ದಾರೆ. ಹೆಣ್ಣು ಕೃಷಿಕನನ್ನು ಮದುವೆಯಾದಲ್ಲಿ ಹೆಚ್ಚೆಂದರೆ, ಗಂಡನಿಗೆ ರೊಟ್ಟಿ ಕೊಡಬಹುದು ಅಥವಾ ಕಳೆ ಕೀಳುವಲ್ಲಿ ಸಹಾಯ ಮಾಡಬಹುದಷ್ಟೆ. ಆದರೆ, ಬರಡು ಭೂಮಿಯನ್ನೂ ಅಚ್ಚ ಹಸುರಾಗಿ ನಿಲ್ಲಿಸಬಹುದು, ಲಕ್ಷಾಂತರ ಲಾಭ ತರುವಂತೆ ಕೃಷಿಯನ್ನು ಮಾಡುವುದೆಂದರೆ ಅದು ಕನಸಿನ ಮಾತೇ ಸರಿ. ಅದರಲ್ಲೂ ಪದವೀಧರೆಯಾಗಿದ್ದರೆ, ತೋಟದ ಕೆಲಸಗಳಿಂದ ತುಸು ದೂರು ಇರುತ್ತಾರೆ. ನಾಜೂಕು ಲಲನೆಯರು ಯಾವುದೇ ರೀತಿಯ ಕಷ್ಟದ ಕೆಲಸಕ್ಕೆ ಕೈಹಾಕೋದಿಲ್ಲ. ಅವರಿಗೇನಿದ್ದರೂ ಅಡುಗೆ ಮನೆಯೇ ಪ್ರಪಂಚ.


ಆದರೆ, ಇವೆಲ್ಲವನ್ನೂ ಮೀರಿ ಸಾಧನೆ ಗೈದ ಸುನೀತಾ ಹುಟ್ಟಿದ್ದು ಬೆಟ್ಟಗುಟ್ಟಗಳ ನಾಡು ಶಿವಮೊಗ್ಗದಲ್ಲಿ. ಬೆಳೆದು, ತನ್ನ ಬಿಎ ಗ್ರ್ಯಾಜುಯೇಷನ್ ಸಹ ಅಲ್ಲಿಯೇ ಮುಗಿಸಿದರು. ಬಳಿಕ ಮಹಿಳೆಯರ ಸಹಜ ಪ್ರವೃತ್ತಿ ಹಾಗೂ ಮನೆಯವರ ಮರ್ಜಿಯಂತೆ ರಾಣೆಬೆನ್ನೂರು ತಾಲ್ಲೂಕಿನ ಮದೇನೂರು ಗ್ರಾಮದ ಶಂಕರೇಗೌಡ ಎಂಬುವವರೊಂದಿಗೆ ಹಸೆ ಮಣೆ ಏರಿದರು. ಪತಿರಾಯ ಕೂಡ ಬಿಎ ಪದವೀಧರ. ಆದರೆ, ಅವರಿಗೆ ಸಿನಿಮಾದಲ್ಲಿ ನಟಿಸುವ ವಿಚಿತ್ರ ಹುಚ್ಚು. ಗಾಂಧಿನಗರದಲ್ಲಿ ವಾಸ್ತವ್ಯ ಹೂಡಿ, ಬಳಿಕ ಅವಕಾಶ ದೊರಕದ ಕಾರಣ ಬಂದ ದಾರಿಗೆ ಸುಂಕವಿಲ್ಲವೆಂದು ಊರಿಗೆ ವಾಪಸಾದರು. ಬಳಿಕ ಸತಿಪತಿ ಇಬ್ಬರೂ ಕೃಷಿಯಲ್ಲಿ ತೊಡಗಿಕೊಂಡರು. ಅಲ್ಲಿಂದ ಪ್ರಾರಂಭವಾದ ಅವರ ಜೀವನ ಇಂದು ಇಡೀ ಊರಿಗೆ ಊರೇ ಹೊಗಳುವ ಹಂತಕ್ಕೆ ಬಂದು ನಿಂತಿದೆ. ಇದಕ್ಕೆ ಅಂಕುರಾರ್ಪಣೆ ಆದದ್ದು ಸುನೀತಾ ಅವರಿಂದ.




ಪ್ರಾರಂಭದಲ್ಲಿ ಮಳೆ ಆಧಾರಿತ ಉತ್ತರ ಕರ್ನಾಟಕದ ಕೃಷಿಗೆ ಒಗ್ಗಿಕೊಳ್ಳಲು ಸ್ವಲ್ಪ ಕಷ್ಟವಾದರೂ ಬಳಿಕ ಅದನ್ನೇ ಸವಾಲಾಗಿ ಸ್ವೀಕರಿಸಿದ ಈ ದಂಪತಿ ಅದನ್ನೇ ಒಗ್ಗಿಸಿಕೊಂಡರು. ಪ್ರಥಮಾರ್ಧದಲ್ಲಿ ಸುನೀತಾ ಬೆಂಗಾಡು ತೋಟನೋಡಿದಾಗ ಇಲ್ಲಿ ಅಚ್ಚ ಹಸುರಾದ ಅಡಿಕೆ ತೋಟ ನಿರ್ಮಾಣವಾಗಬಹುದೆಂದು ಖುದ್ದು ಅವರೇ ಕನಸು ಮನಸ್ಸಿನಲ್ಲೂ ಯೋಚಿಸಿರಲಿಲ್ಲ. ಆದರೆ, ಮನಸ್ಸೊಂದಿದ್ದರೆ ವಿಧಿಯನ್ನೂ ಸ್ಲೇಟು ಲಿಖಿತ ಬರಹದಂತೆ ಬದಲಿಸಬಹುದು ಎನ್ನುವುದಕ್ಕೆ ಇವರೇ ತಾಜಾ ಉದಾಹರಣೆ. ಸುನೀತಾ ಮೂಲತಃ ಕೃಷಿಕ ಕುಟುಂಬದಿಂದಲೇ ಬಂದಿದ್ದು, ಅವರು ವಿದ್ಯಾರ್ಥಿನಿಯಾಗಿರುವಾಗಲೇ ವಿದ್ಯಾಭ್ಯಾಸದ ಜತೆಗೆ ಅಡಿಕೆ ತೋಟದಲ್ಲಿ ತಮ್ಮ ಬಿಡುವಿನ ವೇಳೆಯಲ್ಲಿ ಕೆಲಸಮಾಡುತ್ತಿದ್ದರಂತೆ. ಹೀಗಾಗಿ ಕೃಷಿ ಅಂದರೆ ಇವರಿಗೆ ಅಚ್ಚುಮೆಚ್ಚು ಎಂದು ಖುಷಿ-ಖುಷಿಯಿಂದ ಹೇಳಿಕೊಂಡರು.

ಅಷ್ಟಕ್ಕೂ ಸಾಧಿಸಿದ್ದೇನು?

ಈ ಹಿಂದೆಯೂ ಕೃಷಿ ಕ್ಷೇತ್ರದಲ್ಲಿ ಸಾದನೆಗೈದ ಮಹಿಳೆಯರು ಹಲವು. ಹಾಗೇ ಅವರು ಮುಖ್ಯವಾಹಿನಿಗೆ ಬಂದು ಪ್ರಶಸ್ತಿಗೂ ಭಾಜನರಾಗಿದ್ದಾರೆ. ಆದರೆ, ವಿಪರ್ಯಾಸವೆಂದರೆ, ಸುನೀತಾರಂಥ ಅನೇಕ ಮಹಿಳೆಯರು ಇನ್ನೂ ಬೆಳಕಿಗೆ ಬಾರದೆ ಎಲೆಮರೆ ಕಾಯಿಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ.
ಇವರು ಸಾಧಿಸಿದ್ದು ಅಷ್ಟಿಷ್ಟಲ್ಲ. ಆಲೋಚನೆಗೆ ಸಿಗದು, ಅಕ್ಷರಗಳಿಗೆ ಎಟುಕದು. ಆದರೆ, ನೂರಾರು ಸಮಸ್ಯೆ ಸವಾಲುಗಳ ಮಧ್ಯೆ, ಹಲವಾರು ಅನಾನುಕೂಲಗಳ ನಡುವೆಯೇ ಕೃಷಿಗಿಳಿದು ಆಕಾಶಕ್ಕೆ ಎಟುಕುವಂಥ ಅಡಿಕೆ ಮರಗಳನ್ನು, ಜೌಷಧಿಗಿಡಗಳನ್ನು, ಗಿಡಮೂಲಿಕೆಗಳನ್ನು, ತರಕಾರಿ, ಹಣ್ಣುಹಂಪಲು, ತೆಂಗು, ಬಾಳೆ, ವೀಳ್ಯದೆಲೆ, ಮಿಶ್ರಬೆಳೆ, ಶ್ರೀಗಂಧ ಮುಂತಾದ ಬೆಳೆಗಳನ್ನು ಬೆಳೆಸುವುದೆಂದರೆ ಸಾಮಾನ್ಯದಾದುದ್ದೇನಲ್ಲ.

ತೋಟದ ಸುತ್ತ ಪಕ್ಷಿನೋಟ

ಅಡಿಕೆ: ಈ ಹಿಂದೆನೆ ಹೇಳಿರುವಂತೆ ಇಲ್ಲಿ ಇವರು ಬೆಳೆಸಿರುವ ಪ್ರಮುಖ ಬೆಳೆ ಅಡಿಕೆ. ಸುಮಾರು 1100 ಅಡಿಕೆ ಮರಗಳನ್ನು ಬೆಳೆಸಿದ್ದು, ಈ ಹಿಂದಿನ ಇಳುವರಿಯಲ್ಲಿ ಅವರಿಗೆ 5 ಕೀಲೂ ಅಡಿಕೆ ಬಂದಿದೆಯಂತೆ. ಇದಕ್ಕೆ ಇವರು 15 ದಿನಕ್ಕೋಮ್ಮೆ ನೀರು ಕೊಡುತ್ತಾ ಬಂದಿದ್ದಾರೆ.

ತೆಂಗು: ಇಲ್ಲಿ 80 ತೆಂಗಿನಗಿಡಗಳನ್ನು ನೆಟ್ಟಿದ್ದಾರೆ, ಹಿಂದಿನ ವರ್ಷ ಸುಮಾರು 50 ಸಾವಿರ ಆದಾಯ ಬಂದಿದೆಯಂತೆ. ಈ ವರ್ಷವೂ ಬೆಳೆ ಚೆನ್ನಾಗಿದ್ದು, ಕಳೆದ ಬಾರಿಗಿಂತ ಉತ್ತಮ ಇಳುವರಿ ಬರಲಿದೆ ಎಂದು ಹರ್ಷದಿಂದ ನುಡಿದರು.

ಬಾಳೆಗಿಡ: ಅಡಿಕೆ ಮರಗಳ ಮಧ್ಯೆ ಏಲಕ್ಕಿ ಬಾಳೆಯನ್ನೂ ಬೆಳೆದಿದ್ದಾರೆ. ಸುಮಾರು ಒಂದು ಸಾವಿರ ಬಾಳೆ ಗಿಡಗಳಿವೆ. ಈ ಬಾಳೆಯನ್ನು ನಾಟಿಮಾಡಿ 10 ವರ್ಷ ಕಳೆದರೂ ಇಂದಿಗೂ ಅದೇ ಬೆಳೆದುಕೊಂಡುಬಂದಿದೆ. ಈ ಬಾಳೆಯಲ್ಲಿ ಅವರು ಯಾವುದೇ ರೀತಿಯ ಕೆಲಸ ಮಾಡಲ್ವಂತೆ. ಇಲ್ಲಿ ಒಣಗಿ ಬಿದ್ದ ಬಾಳೆ ಎಲೆಗಳೇ ಅದಕ್ಕೇ ಗೊಬ್ಬರ ಹಾಗೂ ಫಲವತ್ತಾದದ್ದು ಎನ್ನುತ್ತಾರೆ ಸುನೀತಾ.



ಕಾಳು ಮೆಣಸಿನ ಕಾಯಿ: 100 ಕಾಳು ಮೆಣಸಿನ ಬಳ್ಳಿ ಹಾಕಲಾಗಿದೆ. ಹಿಂದಿನ ವರ್ಷವಷ್ಟೇ ಇದರ ಇಳುವರಿ ಪ್ರಾರಂಭವಾಗಿದ್ದು, ಈ ಬಾರಿ ಕೇವಲ 1 ಕೆಜಿ (ಮೊದಲನೇ ಇಳುವರಿ) ದೊರೆತಿದೆ. ಅದೇ ರೀತಿಯಲ್ಲಿ ಒಂದು ಎಕರೆ ಭೂಮಿಯಲ್ಲಿ ಅಂಬುಎಲೆಯನ್ನು ಬೆಳೆಸಿದ್ದಾರೆ. ಇವರು ಎಲೆ ಬಳ್ಳಿಗೆ ಬೇರೆ ರೈತರು ತೆಗೆದುಕೊಳ್ಳುವಷ್ಟು ಕಾಳಜಿಯನ್ನು ತೆಗೆದುಕೊಂಡಿಲ್ಲ. ಈ ಬಳ್ಳಿ ತನ್ನಷ್ಟಕ್ಕೆ ತಾನೇ ಬೆಳೆದಿದೆ. ಆದರೂ ಈ ಎಲೆಯಿಂದ 50 ಸಾವಿರ ರೂ. ಲಾಭ ಬಂದಿರುವುದಾಗಿ ತಿಳಿಸಿದರು. ಇದೆಲ್ಲಕ್ಕೂ ಜೀವಂತ ಕಾವಲಾಗಿ ಸುಬಾಬುಲ್ ಗಿಡಗಳನ್ನು ಬೆಳೆಸಿದ್ದಾರೆ. ಇದೂ ಕೂಡ ಅಷ್ಟೆ. ಪ್ರತಿ ಎರಡು ವರ್ಷಕ್ಕೊಮ್ಮೆ ಇವುಗಳ ಕಟಾವು ಮಾಡಿ ದಾಂಡೇಲಿ ಕಾರ್ಖಾನೆಗೆ ಮಾರಾಟ ಮಾಡುತ್ತಾರೆ. ಇದರಿಂದ 4 ಲಕ್ಷ ಆದಾಯ ಬಂದಿರುವುದಾಗಿ ಹೇಳಿದರು. ಜತೆಗೆ ಶ್ರೀಗಂಧ ಕೂಡ ಬೆಳೆಸಲಾಗಿದೆ. ಆದರೆ, ಇದರಿಂದ ನಿರೀಕ್ಷತ ಲಾಭ ದೊರೆತಿಲ್ಲ ಎನ್ನುತ್ತಾರೆ ಶಂಕರೇಗೌಡ.

ಸಾಮಾನ್ಯವಾಗಿ ಇಂದಿನ ರೈತರು `ಅಗಸನಿಗೆ ನೀರಿನ ಬರ' ಎಂಬಂತೆ ಬೇರೆಯವರ ಕಡೆ ಆಹಾರಕ್ಕೆ ಬೇಕಾದ ತರಕಾರಿಯನ್ನು ಖರೀದಿಸುತ್ತಾರೆ. ಆದರೆ, ಈ ದಂಪತಿಗಳು ಮಾತ್ರ ದಿನನಿತ್ಯ ಅವಶ್ಯಕವಾದ (ಬದನೆ, ಹಾಗಲಕಾಯಿ, ಬೆಂಡೆ, ಹೀರೆಕಾಯಿ, ನುಗ್ಗಿ, ಕುಂಬಳ, ಮರಗೆಣಸು, ತೊಗರಿಬೆಳೆ) ಸೇರಿದಂತೆ ವಿವಿಧ ತರಕಾರಿಗಳನ್ನು ತಾವೇ ಬೆಳೆದು ಬಳಸುತ್ತಾರೆ. ಇಷ್ಟೇ ಅಲ್ಲದೇ ಸಾಂಬಾರು ಪದಾರ್ಥ(ಏಲಕ್ಕಿ, ಕಾಫಿ, ಚಕ್ಕೆ, ಅರಿಶಿಣ, ಕರಿಬೇವು ಇತ್ಯಾದಿ)ಗಳನ್ನು ಕೂಡ ಬೆಳಸುತ್ತಾರೆ. ಚಿಕ್ಕಪುಟ್ಟ ಕಾಯಿಲೆಗಳಿಗೆ ಮದ್ದಾಗಿ ಬಳಸಬಲ್ಲ ದೊಡ್ಡಪತ್ರೆ, ಶುಂಠಿ, ಪೇಪರ್ ಗಿಡ, ಬೆಳ್ಳುಳ್ಳಿ, ನಿಂಬೆ, ಚಕ್ರಮುನಿ ಹೀಗೆ ಹತ್ತು ಹಲವಾರು ಉಪಬೆಳೆಗಳನ್ನು ಬೆಳೆದಿದ್ದಾರೆ.

ಪಕ್ಕಾ ನಿಸರ್ಗವಾದಿಗಳು ಈ ದಂಪತಿಗಳು

ಇವರು ಪಕ್ಕಾ ಪರಿಸರವಾದಿಗಳು. ನಿಸರ್ಗ ಹಾಳು ಮಾಡುವ ಯಾವುದೇ ವಸ್ತುವನ್ನು ಬಳಸೋದಿಲ್ಲ. ತೋಟಕ್ಕೆ ಹೋಗುವಾಗ ಗಾಡಿಯನ್ನೂ ಬಳಸದೆ ಸೈಕಲ್ ಅನ್ನು ಬಳಸುತ್ತಾರೆ. ಇದರಿಂದ ವ್ಯಾಯಾಮವಾಗುತ್ತದೆ ಹಾಗೂ ಆರೋಗ್ಯದಿಂದಿರಲು ಸಾಧ್ಯ. ಜತೆಗೆ ಪರಿಸರಕ್ಕೂ ಯಾವುದೇ ಹಾನಿಯಾಗುವುದಿಲ್ಲ ಎನ್ನುತ್ತಾರೆ ಸುನೀತಮ್ಮ.

ಪ್ಲಾಸ್ಟಿಕ್ ಬ್ಯಾಗ್ನಲ್ಲಿ ತಿಂದು ಬಿಸಾಡಿ ಓಡುವ ಜಮಾನಾ ಇದು. ಆದರೆ, ಇವರು ಮಾತ್ರ ಬಾಳೆ ಎಲೆ ಬಿಟ್ಟು ಬೇರೆ ಯಾವುದರಲ್ಲೂ ಆಹಾರ ಸೇವಿಸುವುದಿಲ್ಲ. ಅಷ್ಟೆ ಯಾಕೆ ಅಡುಗೆಗಾಗಿ ಬಳಸುವ ಪಾತ್ರೆ ಕೂಡ ಮಣ್ಣಿನದ್ದೇ ಆಗಿವೆ. ಬೆಳಗ್ಗೆ ಇವರು ಟಿಫನ್(ತಿಂಡಿ)ನಲ್ಲಿ ಕೇವಲ ಹಣ್ಣುಹಂಪಲು ಮತ್ತು ಗೆಡ್ಡೆಗೆಣಸುಗಳನ್ನೇ ತಿನ್ನುತ್ತಾರೆ.

ಎಲ್ಲದಕ್ಕಿಂತ ವಿಶೇಷವೆಂದರೆ, ಇವರು ಬೆಳೆ, ಗಿಡ ಹಾಗೂ ಮರಗಳಿಗೆ ಇಲ್ಲಿವರೆಗೂ ಯಾವುದೇ ರೀತಿಯ ಗೊಬ್ಬರವನ್ನು ಬಳಸಿಲ್ಲ. ಎರಡು ಎಳೆಹುಳು ತೊಟ್ಟಿಗಳನ್ನು ಕಟ್ಟಿಕೊಂಡಿದ್ದು, ಅದರ ಮೂಲಕ ನೈಸರ್ಗಿಕ ಗೊಬ್ಬರವನ್ನು ಉತ್ಪಾದಿಸಿ ಅದನ್ನು ಬೆಳೆಗಳಿಗೆ ಬೆಳೆಸುತ್ತಾರೆ. ಒಂದು ಮೊಬೈಲ್ ಬಯೋಗ್ಯಾಸ್ ಅನ್ನು ಹೊಂದಿದ್ದಾರೆ.

ಒಂದು ಬೆಳೆಯನ್ನೇ ಬೆಳೆಸುವಲ್ಲಿ ನೆಲಕಚ್ಚುತ್ತಿರುವ ಈ ಕಾಲದಲ್ಲಿ ಪದವಿ ಮುಗಿಸಿ, ಅದೂ ತಾನು ಹೆಣ್ಣೆಂಬ ವಿಚಾರ ಬದಿಗೊತ್ತಿ ಯಾವ ಕೂಲಿ ಕಾರ್ಮಿಕರ ಸಹಾಯವಿಲ್ಲದೇ ಗಂಡನೊಂದಿಗೆ ಜತೆಗೂಡಿ ಸ್ವಬಲ ಹಾಗೂ ಆತ್ಮವಿಶ್ವಾಸದಿಂದ ಸುನೀತಾ ಸಾಧಿಸಿರುವುದು ವಿರಳಾತಿವಿರಳ. ಇಂಥವರನ್ನು ಮುಖ್ಯವಾಹಿನಿಗೆ ತಂದು ಸನ್ಮಾನಿಸಿ, ಪ್ರೋತ್ಸಾಹಿಸುವುದು ಸರಕಾರ ಮಾತ್ರವಲ್ಲದೇ ಮಹಿಳಾ ಸಂಘಟನೆಗಳ ಆದ್ಯ ಕರ್ತವ್ಯ. ಹೀಗೆ ಮಾಡಿದ್ದಲ್ಲಿ ನಮ್ಮ ಸಮಾಜದಲ್ಲಿರುವ ಮಹಿಳೆಯರನ್ನು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಪ್ರೋತ್ಸಾಹಿಸಿದಂತಾಗುವುದಲ್ಲದೇ, ಮಹಿಳಾ ಸಶಕ್ತಿಕರಣಕ್ಕೆ ಬೃಹತ್ ನಾಂದಿಯಾಗಬಲ್ಲದು.

- ಆತೀಶ್ ಬಿ.ಕೆ.

ಮುಂದೆ ಓದಿ

ಈ ಕನಸು ಅವಾರ್ಡ್

ಪ್ರತಿ ಮಕ್ಕಳಿಗೂ ತೊಂದರೆ ಸರ್ವೇ ಸಾಮಾನ್ಯ 'ಬೆಳೆಯುವ ಸಿರಿ ಮೊಳಕೆಯಲ್ಲಿ' ಎಂಬ ನುಡಿಯಂತೆ ಮಕ್ಕಳಲ್ಲಿ ಇಂತದೆ ರೂಪ ಲಕ್ಷಣ ಬಹಳ ಇರುತ್ತದೆ.ಅನೇಕ ಮನೆಗಳಲ್ಲಿ ಮಕ್ಕಳು ಇನ್ನೇನು ವಯಸ್ಸಿಗೆ ಬರುತಿದಂತೆ ಅವರ ಮೇಲೆ ಕೆಲಸದ ಒತ್ತಡ ಹಾಕುವುದು ಸಾಮಾನ್ಯ. ಇದರಿಂದ ಮಾನಸಿಕವಾಗಿ ಮಕ್ಕಳು ನೋವನ್ನನುಭವಿಸುವಂತಾಗುತ್ತದೆ.ತೆಂಗಿನ ಮರಕ್ಕೆ ಬೇರೆ ಮರ ಅಡ್ಡವಾಗಿ ಬೆಳೆದರೆ ನೇರವಾಗಿ ಬೆಳೆಯಬೆಕಾಗಿದ್ದು ಅಡ್ಡವಾಗಿ ಬಾಗುತ್ತದೆ' ಆ ರೀತಿಯೇ ಒತ್ತಡಕ್ಕೊಳಗಾದ ಪ್ರತಿ ಮಕ್ಕಳು ದುಶ್ಚಟಗಳಿಗೆ ಬಿದ್ದು ಬೇರೆ ದಾರಿ ಹಿಡಿಯುತ್ತಾರೆ. ಅವರು ತಿಳಿದುಕೊಳ್ಳುವ ಮನೊಭಾವನೆ ಶಕ್ತಿ ಕಡಿಮೆ ಹೊಂದಿರುವಂತಾಗುತ್ತದೆ.


ಮನೆಯೊಳಗೆ ಯಾವುದೇ ತಪ್ಪು ಮಾಡಿದರೂ ಅದಕ್ಕೆ ತಿಳಿಹೇಳುವ ಕಾರ್ಯ ಆಗಬೇಕು. ಶಿಕ್ಷೆ ನೀಡುವುದಲ್ಲ.ಬದಲಾಗಿ ಸರಿಯಾದ ಶಿಕ್ಷಣ ನೀಡುವ ಕಾರ್ಯ ಆಗಬೇಕು. ತಿಳಿದವರು ಮಕ್ಕಳಿಗೆ ಬುದ್ದಿಮಾತು ಹೇಳುವ ಕಾರ್ಯ ಆಗಬೇಕು. ಪ್ರೀತಿಯಿಂದ ತಿಳಿಹೇಳುತ್ತಾ, ಮುಕ್ತವಾಗಿ ಮಾತನಾಡುತ್ತಾ ತಪ್ಪನ್ನು ತಿದ್ದುವ ಕಾರ್ಯವನ್ನು ಮಾಡಬೇಕಾಗಿದೆ.

ಒಳ್ಳೆಯದು ಮಾಡುವ ಪ್ರವೃತ್ತಿಯಲ್ಲಿ ಭಯ ಪಡಿಸುವುದು ತಾಯಿ ತಂದೆಯರದು ರೂಢಿಗತವಾದದ್ದು. ಅವರಷ್ಟಕ್ಕೆ ಬಿಟ್ಟರೆ ಯಾವ ಭಯವು ಕಾಡುವುದಿಲ್ಲ ಹೊರಗಡೆ ಕಲಿಯಬೇಕಾದದ್ದು ಸಾಕಷ್ಟು. ಅಲ್ಲಿ ಹೊಗಬೇಡ ಮಗ ಭೂತವಿದೆ, ಅದು ಕೆಟ್ಟ ಸ್ಥಳ, ಹೀಗೆ ಅಂಜಿಕೆ ಒಡ್ಡಿದರೆ ಭಯವಿಲ್ಲದೆ ಇರಬೇಕಾದ ಮಕ್ಕಳು ಜೀವನಕ್ಕೆ ಹೆದರಿ ಬದುಕುತ್ತಾರೆ. ಮಾಜಿ ರಾಷ್ಟ್ರಪತಿ ವಿಜ್ಞಾನಿ ಎ.ಪಿ.ಜಿ.ಅಬ್ದುಲ್ಕಲಾಂರಿಗೆ ಮಕ್ಕಳೆಂದರೆ ಪ್ರೀತಿ ಅವರು ಮಕ್ಕಳೊಡನೆ ಬೆರೆತು ಮುಂದಿನ ಗುರಿ ಕನಸುಗಳ ಬಗ್ಗೆ ಚಿಂತನೆ ತುಂಬುವುದೆ ಕಲಾಂರ ಕೆಲಸ. ಹೀಗೆ ಪ್ರೀತಿ ಮಕ್ಕಳಿಗೆ ಬೇಕು.

ಛತ್ರಪತಿ ಶಿವಾಜಿ ತಾಯಿ ತಂದೆ 'ಶಿವಾಜಿಗೆ' ಭಯವಾಗದೆ ವೀರನಂತೆ ಬೆಳಿಸಿದವರು. ಶಿವಾಜಿ ಹೋರಾಟಗಾರನಾಗಿ ಮಿಂಚಿ ದೇಶಕ್ಕೆ ಹೆಸರುವಾಸಿಯಾದ. ದೇಶದ ನಾಯಕ, ಹೋರಾಟಗಾರನಾಗಬೇಕೆಂದು ಮಕ್ಕಳಿಗೆ ಸ್ಪೂರ್ತಿ ನೀಡಬೇಕು. ಹಾಗೆ ಮಕ್ಕಳು ನಾವು ಒಬ್ಬ ಛತ್ರಪತಿ, ಗಾಂಧಿಜೀ,ರಾಜಕಾರಣಿ, ಯಾಕೆ ಆಗಬಾರದು? ಎಂಬ ಭಾವನೆ ಮಕ್ಕಳಲ್ಲಿ ಬರುತ್ತದೆ.

ನಾಡಿನ ಕಲೆ, ಸಾಹಿತ್ಯ, ಪ್ರವಾಸಿತಾಣ, ಮತ್ತು ರಾಜಕೀಯ, ಶಿಕ್ಷಣ, ಆಟ, ಇವುಗಳ ಬಗ್ಗೆ ತಿಳಿವಳಿಕೆ ನೀಡುವದು ಸೂಕ್ತ. ಹೆಚ್ಚಾಗಿ ರಾಷ್ಟ್ರೀಯ ನಾಯಕರು, ದೇಶ, ಜಗತ್ತು,ಪ್ರಾಣಿ, ಪಕ್ಷಿ, ಪ್ರಚಲಿತ ವಿದ್ಯಮಾನ, ಕುರಿತು ಮಕ್ಕಳು ತಿಳಿಸುವದು ಅವಶ್ಯಕ.

ಮಕ್ಕಳಿಗೆ ಒತ್ತಡ ಬೆದರಿಕೆ ಬೇಡ, ಪ್ರೊತ್ಸಾಹ, ಸಹಕಾರ ಮನೊಭಾವನೆ ಇರಬೇಕು ಅಂದಾಗ ಮಾತ್ರ ಮಕ್ಕಳು ಉತ್ತಮನಾಗರಿಕ ರಾಷ್ಟ್ರನಾಯಕನ್ನಾಗಿ ಮಾಡಲು ತುಂಬ ಉಪಯುಕ್ತ.

ಬಾಲಪ್ಪ.ಎಂ.ಕುಪ್ಪಿ

ಪತ್ರಿಕೋದ್ಯಮ ವಿಭಾಗ ಗು.ವಿ.ವಿ

ಮುಂದೆ ಓದಿ

ಆಟ- ಅವಲೋಕನ
ಮುಡುಬಿದಿರೆ:ಇಲ್ಲಿನ ಸ್ವರಾಜ್ಯ ಮೈದಾನದಿಂದ ಹೊರಟು ಮಾರೂರು ತನಕ ಮತ್ತೆ ಸ್ವರಾಜ್ಯ ಮೈದಾನಕ್ಕೆ ಒಟ್ಟು 20ಕಿಲೋಮೀಟರ್ ಗಳ ಹಾಫ್ ಮ್ಯಾರಾಥಾನ್ ಇಂದು ಬೆಳಗ್ಗೆ ನಡೆಯಿತು.ಚುಮು ಚುಮು ಚಳಿಯಲ್ಲೂ ಅಥ್ಲೇಟ್ ಗಳ ಮೈ ಬೆವರಿಳಿಸುವಲ್ಲಿ ಮ್ಯಾರಾಥಾನ್ ಯಶಸ್ವಿಯಾಯಿತು.ಹಾದಿಯುದ್ದಕ್ಕೂ ಪ್ರೇಕ್ಷಕರು ಅಥ್ಲೇಟ್ ಗಳನ್ನು ಹುರಿದುಂಬಿಸಿದರು.
ಚಿತ್ರ: ಹರೀಶ್ ಕೆ.ಆದೂರು

ಮುಂದೆ ಓದಿ

ವೈವಿಧ್ಯ

(ಕನಸಲ್ಲೆ ಅರಳಿ ಕನಸಲ್ಲೆ ಮರೆಯಾದ ಪ್ರೇಮಿಗೊಂದು ಪ್ರೇಮ ಪತ್ರ)

ನಿನ್ನ ಹೆಸರೇನು? ನೀ ಹಾಡುವ ಹಾಡಿಗೆ ಮರುಳಾಗಿ ನಿನ್ನ ಕಂಗೊಳಿಸುವ ರೂಪದ ಹೆಸರು ದೀಪ ಯಾಕಾಗಿರಬಾರದು? ಎಂದು ಒಂದು ದಿನ ಸಮಾರಂಭದಿ ಊಹಿಸಿದ್ದೆ ಹಾಡು ಮುಗಿದ ಮೇಲೆ ನಿರೂಪಕರು ಪ್ರಾರ್ಥನೆ ಮಾಡಿದ ದೀಪಾಳಿಗೆ ಅಭಿನಂದನೆಗಳು ಅಂದರು ನಾನು ಊಹಿಸಿದ್ದು ನಿಜವಾಯಿತಲ್ಲ ಅದು ಹೇಗೆ ಸಾದ್ಯ ಎಂದು ಮನಕ್ಕೆ ಚಿಂತೆ ಪ್ರಾರಂಭವಾಯಿತು. ಯಾಕೊ ಏನೊ ಅವತ್ತು ನೋಡಿದ ನಿನ್ನ ರೂಪದ ದೀಪ ಮನದಿ ಸಣ್ಣನೆ ಹೊತ್ತಿತು... ದಿನಾ ನಿನ್ನ ಬರುವಿಕೆಗೆ ನನ್ನ ಕಣ್ಣುಗಳು ಕಾಯತೊಡಗಿದವು, ಹೀಗೆ ದಿನ ಕಳೆದು ನಾನು ಪ್ರತಿ ದಿನವು ನಿನಗೆದುರಾದೆ ನಿನ್ನ ತುಟಿ ಬಿಚ್ಚಿದ ಸಣ್ಣನೆ ನಗು ನನ್ನ ಮನದಿ ಸಣ್ಣನೆ ಬೆಳಗತೊಡಗಿತು... ಹೀಗೆ ಪ್ರಾರಂಭವಾದ ಸ್ನೇಹ ಹಾಗೆ ಬೆಳೆಯತೊಡಗಿತು ಮುಂದೊದು ದಿನ ನಿನ್ನ ಹಾಡಿನ ಪ್ರಾಕ್ಟೀಸ್ ಮಾಡುವ ಸಂದರ್ಭದಿ ನಿನಗೆ ಸಹಾಯಕನಾಗುವ ಸಂದರ್ಭ ಒದಗಿ ಬಂದಾಗ ನನಗೆ ಏನೋ ಒಂಥರ ಆನಂದ ರೋಮಾಂಚನವಾಯಿತು.



ಹೀಗೆ ನನ್ನ ಸ್ನೇಹ ಗಾಢವಾಯಿತು ಹೀಗೆ ಬೆಳೆದ ಸ್ನೇಹದ ಸಮಯದಲ್ಲಿ ಯಾವುದೊ ಹಾಡುವ ಸ್ಪರ್ಧೆಗೆ ನೀನು ಹಾಕುವ ಅರ್ಜಿಗೆ ಫೊಟೊ ಹಚ್ಚಿಕೊಡತೀರಾ ಪ್ಲೀಸ್ ಅಂದಾಗ ನನ್ನ ಮನದಲ್ಲಿ ಪುಳಕವಾಯಿತು ಅವತ್ತು ನನಗಾದ ಸಂತೋಷಕ್ಕೆ ಪಾರವೆಯಿಲ್ಲದಂತಾಯಿತು, ಅವತ್ತು ಫೊಟೋ ಹಚ್ಚತೀನಿ ಅಂತ ತಗೊಂಡು ಆ ಫೊಟೋದ ಮೇಲೆ ನಿನ್ನ ಕಣ್ಣು, ಮೂಗು, ತುಟಿ, ಕೆನ್ನೆಯೆಲ್ಲಾ ಸ್ಪರ್ಶಿಸಿ ನಿನ್ನನ್ನೆ ಸ್ಪರ್ಶಿಸಿದಷ್ಟು ಪುಳಕಿತನಾಗಿ ಕನಸಿಗೆ ಜಾರಿಬಿಟ್ಟೆ...

ಆಗ ನೀನು ಹಚ್ಚಿದಿಯಾ ಅಂದು ನನ್ನ ಭುಜ ಮುಟ್ಟಿದಾಗ ನಿನ್ನ ಮಲ್ಲಿಗೆಯ ಮೃದು ಹಸ್ತ ನನ್ನ ಭಜದ ಮೇಲೆ ತಾಗಿ ನನಗೆ ಕಚಗುಳಿಯಾಗಿ ಏನೋ ಪುಳಕವಾಯಿತು. ಬಯಸದೆ ಬಂದ ಭಾಗ್ಯ ದೀಪ ಪ್ರಕಾಶಿಸುತಿದೆಯೆನೋ ಎಂಬ ಭ್ರಾಂತಿಯಾಯಿತು, ಧಿಡೀರನೆ ಕೈ ತೆಗೆದು ಮುಗಿತಾ ಅಂದಿ ಆಗ ನಾನು ಕನಸಿನ ಲೋಕದಿಂದ ನನಸಿನ ಲೋಕಕ್ಕೆ ಬಂದು ಇನ್ನೇನು ಹಚ್ಚಿದೆ ಅಂದು ಹಚ್ಚಿ ನಿನಗೆ ಹಿಂತಿರುಗಿಸುವಾಗ ಆಗಲೂ ಕೂಡ ನಿನ್ನ ಕೈ ಬೆರಳ ಸ್ಪರ್ಶಕೆ ಮತ್ತೆ ನಿನ್ನ ಪ್ರೀತಿಯಲಿ ಮಳುಗಿಬಿಟ್ಟೆ.

ಹೀಗೆ ನನ್ನ ಮನದಾಳದಿ ಪ್ರೀತಿ ಶುರುವಾಗತೊಡಗಿತು. ಆಗ ನನಗೆ ದಿನಾ ನಿನ್ನದೆ ನೆನಪು ನೆರಳಾಗಿ ಕಾಡತೊಡಗಿತು. ಒಂದು ದಿನ ನೀನು ಕಾಲೇಜಿಗೆ ಯಾರೊ ಒಬ್ಬ ಅಪರಿಚಿತನೊಂದಿಗೆ ಬಂದು ನಿನ್ನ ಸ್ನೇಹಿತಿಯರಿಗೆಲ್ಲ ಪರಿಚಯಿಸುತಿದ್ದಾಗ ನನಗೆ ಒಂದು ರೀತಿಯ ಅನುಮಾನ ಶುರುವಾಯಿತು, ಯಾರಿರಬಹುದು ಅಂಥಾ ಇಬ್ಬರು ನನ್ನ ಬಳಿ ಬಂದು ಇವನು ನನ್ನ ಅತ್ತೆ ಮಗ ಶಿವಪ್ರಕಾಶ ಇವನು ನಾನು ಚಿಕ್ಕಂದಿನಿಂದಲೆ ಸ್ನೇಹಿತರು ಮುಂದೆ ನನ್ನ ವಿದ್ಯಭ್ಯಾಸ ಮುಗಿದ ಮೇಲೆ ಇವರ ಜೊತೆಗೆ ನನ್ನ ಮದುವೆ ಅಂದು ಬಿಟ್ಟೆ.

ಕನಸು ಕಾಣುವ ಕಣ್ಣಲ್ಲಿ ಕಣ್ಣೀರ ಹನಿಯೊಂದು ತಕ್ಷಣ ಜಾರಿ ಬಿತ್ತು... ಕನವರಿಸಿದೆ, ತಡಕಾಡಿದೆ, ಮನದಿ ನೆನಪ ನೆನ ನೆನಸಿ ಜಲ ಜಲ ಕಣ್ಣೀರ ಸುರಿಸಿ ಒಂದು ವಿಚಾರಕೆ ಬಂದು ಬಿಟ್ಟೆ. ನನ್ನ ಪ್ರೀತಿಯ ಮಾತು ಯಾರಿಗೂ ಹೇಳದೆ ಇದ್ದದ್ದೆ ಒಳ್ಳೆಯದಾಯಿತು ಒಂದು ವೇಳೆ ನನ್ನ ಪ್ರೀತಿ ಹೇಳಿ ಅವಳು ನಿರಾಕರಿಸಿದ್ದರೆ ನನ್ನ ಸ್ನೇಹ ಕೂಡ ಹಾಳಾಗುತ್ತಿತ್ತಲ್ಲ ಎಂದು ಮನದಲ್ಲಿ ಮರುಗಿದೆ. ಮನದಲ್ಲಿ ಮೊಗ್ಗಾಗಿ ಅರಳಿದ ಪ್ರೇಮ ಬಾಡುವುದು ಬೇಡ ಅದನ್ನ ಸ್ನೇಹದ ಹೂವಾಗಿ ಬೆಳೆಸೋಣ ಎಂದು ಅವಳ ಭಾವಿ ಜಿವನಕ್ಕೆ ಶುಭ ಕೋರಿ ಅಲ್ಲಿಂದ ಬಂದು ಬಿಟ್ಟೆ.

ಈಗ ನಮ್ಮ ವಿದ್ಯಭ್ಯಾಸ ಮುಗಿದು ದೂರವಾಗಿದೀವಿ.. ಆದರೆ ನೆನಪುಗಳು ಮಾತ್ರ ಎಂದೂ ದೂರವಾಗಲ್ಲ. ನಿನ್ನ ಪ್ರೀತಿಯ ನೆನಪು ನನ್ನ ಮನದಿ ಸದಾ ಹಚ್ಚ ಹಸಿರಾಗಿದೆ. ನೀ ನನಗೆ ಸಿಗದೆ ಹೋದರು ಪರವಾಗಿಲ್ಲ ನಿನ್ನ ಸ್ನೇಹವಾದರು ನನಗೆ ಸಿಕ್ಕಿತಲ್ಲ ಅದಕ್ಕೆ ನನಗೆ ತುಂಬಾ ಖುಷಿಯಿದೆ ಗೆಳತಿ... ನಿನ್ನ ನೆನಪಿಗಾಗಿ ನನ್ನ ಮಗಳಿಗೂ ಕೂಡ ನಿನ್ನ ಒಪ್ಪಿಗೆ ಕೇಳದೆ ನಿನ್ನ ಹೆಸರಿಟ್ಟಿದ್ದೇನೆ ದಯವಿಟ್ಟು ಕ್ಷಮೆಯಿರಲಿ...

ಇಂತಿ ಕಣ್ಣೀರಹನಿ ಜಾರಿಸಿಕೊಂಡವ


- ಪ್ರಬಿ
ರಾಯಚೂರ ಜಿಲ್ಲೆ

ಮುಂದೆ ಓದಿ

ಆಟ - ಅವಲೋಕನ

ಮೂಡುಬಿದರೆ:ಪೂವಮ್ಮ ಅಕ್ಷರಶಃ ಸಂತೃಪ್ತಿಯ ನಗೆ ಚೆಲ್ಲಿದ್ದಾರೆ. 72ನೇ ಅಖಿಲ ಭಾರತ ಅಂತರ್ ವಿ.ವಿ.ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಮಂಗಳೂರು ವಿ.ವಿಯನ್ನು ಪ್ರತಿನಿಧಿಸುವ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿಯಾಗಿ ಈ ಕ್ರೀಡಾಕೂಟದಲ್ಲಿ ಚಿನ್ನಗೆದ್ದಿರುವುದು ಆಕೆಯ ಸಂಭ್ರಮಕ್ಕೆ ಮೂಲಕಾರಣ.ಮೋಹನ ಆಳ್ವರ ಬಗೆಗೆ ಅಪಾರ ಅಭಿಮಾನ ಹೊಂದಿರುವ ಪೂವಮ್ಮ ನಿರಂತರವಾಗಿ ನನ್ನ ನಿರ್ವಹಣೆ ಬಗ್ಗೆ ಕೇಳುತ್ತಲೇ ಇರುತ್ತಾರೆ. ನನ್ನೆ ಎಲ್ಲಾ ಖರ್ಚು ವೆಚ್ಚಗಳಿಗೆ ನೆರವಾಗುತಿದ್ದಾರೆ.ಅವರ ಸಹಕಾರದಿಂದ ಈ ಎಲ್ಲಾ ಸಾಧನೆ ಸಾಧ್ಯವಾಗುತ್ತಿದೆ ಎಂದಿದ್ದಾರೆ.ಒಲಿಂಪಿಕ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆಯುವುದು ನನ್ನ ಗುರಿ.ಅತ್ಯಂತ ಪರಿಶ್ರಮ ಹಟದ ಮೂಲಕ ಅದನ್ನು ಸಾಧಿಸಿಯೇ ಸಾಧಿಸುತ್ತೇನೆಂಬ ಭರವಸೆ ವ್ಯಕ್ತಪಡಿಸಿದರು.




ಈ ಕ್ರೀಡಾಕೂಟದಲ್ಲಿ ನಾನು ಅಂದು ಕೊಂಡ ನಿರ್ವಹಣೆ ನೀಡದೇ ಇದ್ದೇನೆಂಬ ಬೇಸರವಿದೆ. ಆದೆ ಮುಂದಿನ ದಿನಗಳಲ್ಲಿ ನಿರ್ವಹಣೆ ಉತ್ತಮ ಪಡಿಸುವ ಅವಕಾಶ ಇದೆ. ಅದನ್ನು ಸಾಧಿಸುತ್ತೇನೆ . ಪಾಟಿಯಾಲದಲ್ಲಿ ರಮೇಶ್ ಮತ್ತು ರಾಜಿಂದರ್ ಕೌರ್ ಅವರು ನಡೆಸುತ್ತಿರುವ ತರಬೇತಿ ಶಿಬಿರದಲ್ಲಿ ಭಾಗವಹಿಸುತ್ತಿದ್ದೇನೆ. ಅವರ ನಿರಂತರವಾದಂತಹ ತರಬೇತಿಯಿಂದ ಉತ್ತಮ ನಿರ್ವಹಣೆ ಸಾಧ್ಯವಾಗುತ್ತಿದೆ. ಕೋಲ್ಕತ್ತಾದಲ್ಲಿ ನಡೆದ ಓಪನ್ ನ್ಯಾಷನಲ್ಸ್ನಲ್ಲಿ ನಾನು 53.87 ಸೆಕೆಂಡುಗಳಲ್ಲಿ ಓಟ ಮುಗಿಸಿದ್ದೆ. ಅದು ನನ್ನ ಉತ್ತಮ ನಿರ್ವಹಣೆಯಾಗಿತ್ತು ಮುಂದೆಯೂ ಉತ್ತಮ ನಿರ್ವಹಣೆ ತೋರಿ ಸಾಧನೆ ಮೆರೆಯುತ್ತೇನೆಂಬ ಭರವಸೆಯ ಮಾತುಗಳನ್ನಾಡಿದರು.

ಮುಂದೆ ಓದಿ

ವೈವಿಧ್ಯ
ಒಂದೆಡೆ ತಮ್ಮ ಮನೆಯ ಬೆಳೆಗಳಿಂದ ತಯಾರಾದ ತಿಂಡಿ-ತಿನಿಸುಗಳನ್ನು ಖರೀದಿಸುವ ತವಕ,ಇನ್ನೊಂದೆಡೆ ಅವುಗಳನ್ನು ತಯಾರಿಸಿದ ಕುರಿತು ಚರ್ಚೆಗಳು,ಕೆಲವರದು ಕೃಷಿ ಉಪಕರಣಗಳ ಕುರಿತಾದ ಮಾತುಕತೆಗಳು,ಅವುಗಳ ಕುರಿತಾದ ಮಾಹಿತಿಗಳನ್ನು ಅಧಿಕಾರಿಗಳಿಂದ ಪಡೆಯುವುದು ಇಂತಹ ಸಂಭ್ರಮಗಳು ಒಂದೆಡೆ ಮೇಳೈಸಿದ್ದು ಯಲ್ಲಾಪುರದ ನಂದೊಳ್ಳಿಯಲ್ಲಿ ಶನಿವಾರ ನಡೆದ ಜಲಾನಯನ ಮೇಳದಲ್ಲಿ. ಜಲಾನಯನ ಇಲಾಖೆ, ಜಿ.ಪಂ ಸಹಯೋಗದಲ್ಲಿ ನಡೆಸಿದ ಒಂದುದಿನದ ಈ ಮೇಳದಲ್ಲಿ ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಜಲಾನಯನ ಯೋಜನೆ ಕೃಷಿಗೆಪೂರಕವಾದುದಾಗಿದ್ದು ಗ್ರಾಮೀಣ ಭಾಗಗಳಲ್ಲಿ ಉತ್ತಮ ಕಾರ್ಯಗಳ ಮೂಲಕ ಮನೆಮಾತಾಗುತ್ತಿದೆ. ಕೃಷಿಗೆ ಹೆಚ್ಚಿನ ಮಹತ್ವ ನೀಡಿ ಅವುಗಳ ಮೂಲಕ ಹಳ್ಳಿಗಳ ಅಭಿವೃದ್ಧಿ ಮಾಡುವುದು ಇದರ ಮುಖ್ಯ ಗುರಿ. ಆ ನಿಟ್ಟಿನಲ್ಲಿ ನಂದೊಳ್ಳಿಯಲ್ಲಿ ನಡೆಸಿದ ಈ ಮೇಳ ಯಶಸ್ವಿಯಾಯಿತು.



ವಿಶೇಷ ಉಪನ್ಯಾಸ

ಜಲಾನಯನ ಮೇಳದಲ್ಲಿ ರೈತರಿಗೆ ಉಪಯೋಗವಾಗಬಲ್ಲ ವಿಷಯಗಳ ಕುರಿತು ತಜ್ಞರಿಂದ ಉಪನ್ಯಾಸ ಕಾಯಕ್ರಮ ಏರ್ಪಡಿಸಲಾಗಿತ್ತು. "ಉದ್ಯಮಶೀಲತೆ" ಎಂಬ ಕುರಿತು ಉಪನ್ಯಾಸ ನೀಡಿದ ಸಹಕಾರಿ ಧುರೀಣ ಭಾಸ್ಕರ ಹೆಗಡೆ ಕಾಗೇರಿ ಪೌರಾಣಿಕ ಘಟನೆಗಳ ಮೂಲಕ ಹಾಗೂ ಸ್ಲೈಡ್ಶೋ ಮೂಲಕ ವಿಷಯವನ್ನು ಮಂಡಿಸಿದ್ದು ವಿಶೇಷವಾಗಿತ್ತು. ಕೃಷಿಯ ಜೊತೆಗೆ ಅದಕ್ಕೆ ಪೂರಕವಾದ ಉದ್ಯಮಗಳಲ್ಲಿ ತೊಡಗಿಸುವ ಕುರಿತು ವಿಸ್ತಾರವಾಗಿ ತಿಳಿಸಿದರು. ಉದ್ಯಮಶೀಲತೆ,ಅದರ ಮಹತ್ವಗಳನ್ನು ವಿವರವಾಗಿ ಹೇಳಿದ ಅವರು ಉದ್ಯಮಶೀಲರಾಗುವಂತೆ ಕರೆನೀಡಿದರು.

ಖ್ಯಾತ ಕೃಷಿ ಬರಹಗಾರ ಶಿವಾನಂದ ಕಳವೆ "ನಮ್ಮ ನೆಲ-ಜಲ ಸಂರಕ್ಷಣೆ" ಕುರಿತು ಉಪನ್ಯಾಸ ನೀಡಿದರು. 2070ರ ಹೊತ್ತಿಗೆ ಮೂಳಭೂತ ಸಂಪನ್ಮೂಲಗಳ ಅಭಾವದಿಂದ ಉಂಟಾಗಬಹುದಾದ ವಿಪರೀತ ಪರಿಸ್ಥಿತಿಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದರು. ಮುಂದೆ ಸಂಪನ್ಮೂಲಗಳ ಕೊರತೆಯಿಂದ 50 ವರ್ಷಕ್ಕೇ ಮನುಷ್ಯ ಮುದುಕನಾಗುತ್ತಾನೆ. ತನಗೆ ಬಂದ ರೋಗಗಳ ಕುರಿತು ಆತ ತನ್ನ ಮಕ್ಕಳಿಗೆ ಬರೆಯುವ ಪತ್ರದಲ್ಲಿ ತನಗೆ ಸರ್ವರೋಗಗಳು ಬರಲು ನೀರು,ಶುದ್ಧಗಾಳಿ ಸಿಗದಿರುವುದೇ ಕಾರಣ ಎಂದು ವಿವರಿಸುತ್ತಾನೆ ಎಂಬ ಭೀಕರ ಕಲ್ಪನೆಯ ಮೂಲಕ ತಮ್ಮ ಮಾತು ಪ್ರಾರಂಭಿಸಿದರು. ಮುಂದೆ ನೌಕರರಿಗೆ ದುಡ್ಡಿನ ಬದಲು ನೀರನ್ನೇ ಸಂಬಳವನ್ನಾಗಿ ನೀಡುವ ದಿನಗಳು ಬರಬಹುದು. ವೈಜ್ಞಾನಿಕ ತಂತ್ರಜ್ಞಾನಗಳನ್ನು ಮಿತವಾಗಿ ಬಳಸದೇ ಅವುಗಳಿಗೆ ಅಂಟಿಕೊಂಡರೆ ಅವು ನಮಗೆ ಮಾರಕವಾಗುತ್ತವೆ. ಆದ್ದರಿಂದ ನೆಲ-ಜಲದ ಸಂರಕ್ಷಣೆಗೆ ಮುಂದಾಗಬೇಕಿದೆ ಎಂದು ಮನಮುಟ್ಟುವಂತೆ ತಿಳಿಸಿದರು. ಈ ಎರಡು ಉಪನ್ಯಾಸಗಳು ಪರಿಣಾಮಕಾರಿಯಾಗಿದ್ದವು.

ಮಳಿಗೆ-ಪ್ರದರ್ಶನಗಳು





ಮಳದ ಅಂಗವಾಗಿ ವಿವಿಧ ಮಾರಾಟ ಮಳಿಗೆ,ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗಿತ್ತು. ಕೃಷಿ ಇಲಾಖೆಯವರು ವಿವಿಧ ಕೃಷಿ ಉಪಕರಣಗಳ ಪ್ರದರ್ಶನ ನಡೆಸಿದರೆ ಮೀನುಗಾರಿಕಾ ಇಲಾಖೆ ವಿವಿಧ ಜಾತಿಯ ಮೀನುಗಳ ಪ್ರದರ್ಶನ ಏರ್ಪಡಿಸಿತ್ತು. ರೇಷ್ಮೆ,ಜಲಾಯನ,ಅರಣ್ಯ,ಪಶುಸಂಗೋಪನಾ ಇಲಾಖೆಗಳು ಆಯಾ ಇಲಾಖೆಗಳ ಕುರಿತಾದ ಮಾಹಿತಿ,ವಸ್ತುಗಳ ಪ್ರದರ್ಶನ ನಡೆಸಿದವು.
ಸ್ಥಳೀಯ ನಂದೊಳ್ಳಿ,ದೇವರಗದ್ದೆ,ಹೆಗ್ಗುಂಬಳಿ,ಗುಮ್ಮಾನಿಮನೆ,ಗುಂಡ್ಕಲ್ ಮುಂತಾದ ಊರುಗಳ ಸ್ವಸಹಾಯ ಸಂಘಗಳು ಸಾವಯವ ಕೃಷಿ ಉತ್ಪನ್ನಗಳಿಂದ ತಯಾರಿಸಿದ ತಿಂಡಿ-ತಿನಿಸುಗಳ ಪ್ರದರ್ಶನ,ಮಾರಾಟ ನಡೆಸಿದವು. ಅವುಗಳಲ್ಲಿ ಹಪ್ಪಳ,ಚಿಪ್ಸ್,ಪೇಡೆ,ಚಕ್ಕುಲಿ,ರೊಟ್ಟಿ,ತೊಡೆದೇವು,ಸಂಡಿಗೆ,ಉಪ್ಪಿನಕಾಯಿ,ಉಂಡೆ ಸೇರಿದಂತೆ ವಿವಿಧ ತಿಂಡಿಗಳು ಸೇರಿದ್ದವು. ಅವುಗಳ ಜೊತೆ ಅರಿಶಿನ,ಶುಂಠಿ,ಗೆಣಸು,ಮುಂತಾದ ಉತ್ಪನ್ನಗಳ ಮಾರಾಟವೂ ಇತ್ತು. ಮಜ್ಜಿಗೆ,ತಂಬ್ಳಿ,ಕೋಕಂ ಮುಂತಾದ ಪಾನೀಯಗಳೂ ಲಭ್ಯವಾಗಿದ್ದವು.




ಈ ಪ್ರದರ್ಶನಗಳ ಜೊತೆಗೆ ವಿವಿಧ ತಳಿಗಳ ಜಾನುವಾರು ಪ್ರದರ್ಶನ ನಡೆಯಿತು. ಮಧ್ಯಾಹ್ನ ನಡೆದ ಶ್ವಾನ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಬೇರೆ ಬೇರೆ ಜಾತಿಯ ನಾಯಿಗಳ ಪ್ರದರ್ಶನ ನಡೆಯಿತು. ನಾಯಿಗಳು ತಮ್ಮ ಒಡೆಯನ ಜೊತೆಗೆ ವೇದಿಕೆಯಲ್ಲಿ ಹೆಜ್ಜೆ ಹಾಕಿದವು.
ಜಲಾನಯನ ಯೋಜನೆ ಗ್ರಾಮೀಣ ಕೃಷಿ ಅಭಿವೃದ್ಧಿಯ ಗುರಿ ಹೊಂದಿದ್ದು ಇಂತಹ ಮೇಳಗಳಿಂದಾಗಿ ಯೋಜನೆಗಳ ಕುರಿತು ಸಾರ್ವಜನಿಕರಿಗೆ ಸಂಪೂರ್ಣ ಮಾಹಿತಿ ನೀಡಬಹುದು. ಇಲಾಖೆಯ ಯೋಜನಾಧಿಕಾರಿಗಳು ಸಾರ್ವಜನಿಕರ ಜೊತೆಗೆ ಬೆರೆತು ಕೆಲಸ ನಿರ್ವಹಿಸಬಹುದು. ಸಾರ್ವಜನಿಕರ ಸಕ್ರಿಯ ಪಾಲ್ಗೊಳ್ಳುವಿಕೆಯೂ ಇಂತಹ ಮೇಳಗಳಿಂದ ಸಾಧ್ಯ. ಯೋಜನೆಯ ಯಶಸ್ಸಿನ ದೃಷ್ಟಿಯಿಂದ ಜಲಾನಯನ ಮೇಳಗಳು ಉತ್ತಮ ಕಾರ್ಯಕ್ರಮ.

ಶ್ರೀಧರ ಅಣಲಗಾರ, ಯಲ್ಲಾಪುರ

ಮುಂದೆ ಓದಿ

ಸಾಹಿತ್ಯ

ಪ್ರೀತಿಯೆಂಬ ಗೂಡು ಕಟ್ಟಿ ಹಾರಿ ಹೋದ ಹಕ್ಕಿ ನೀನು ,

ಬಾನಿನಲ್ಲಿ ಚುಕ್ಕಿಯಾಗಿ ನಗುತ ನಿಂತೆಯಾ ...!!!?

ಪ್ರೀತಿ ಗೂಡ ಸುಡುಗಾಡು ಮಾಡಿ ,

ಬಳಳುತಿರುವ ನನ್ನ ಕೂಗ ನೀನು ಕೇಳೆಯಾ ...?



ಪ್ರೇಮ ಜ್ಯೋತಿ ಬೆಳಗಿಯಂದು ..ಕತ್ತಲಾಗಿಸಿ ಎನ್ನ ಹೃದಯವ ,

ಬಿರುಗಾಳಿಯಾಗಿಯಿಂದು ದೂರ ಹೋದೆಯಾ ...?

ಪ್ರೇಮ ಧಾರೆಯ ಎರೆದು ನೀನು ....ಬಂಜರಾಗಿಸಿ ಬಾಳ ದಾರಿಯ ,

ಮರೆಯಾಗಿ ಅವಿತೆಯಾ ....?

ಪ್ರೇಮ ಕಾವ್ಯಕೆ ದನಿಯಾಗಿ ನೀನು ,ಕೂಡಿ ಹಾಡಿ

ತಾಳ ತಪ್ಪಿಸಿ ....ರಾಗ ಮರೆತೆಯಾ ....?

ಪ್ರೇಮ ನಾಟ್ಯಕೆ ಹೆಜ್ಜೆಯೊಂದಿಗೆ ಹೆಜ್ಜೆ ಹಾಕಿ ,

ಲಯವ ತಪ್ಪಿಸಿ ನೀನು ..

ಗೆಜ್ಜೆ ಸದ್ದು ಮರೆತು ಬಿಟ್ಟೆಯಾ ...?

ಧೀರೇಂದ್ರ ..( ಧೀರು)

ಮುಂದೆ ಓದಿ
6:53 AM

1000ಮೀಟರ್ ಓಟ ಆರಂಭ

Posted by ekanasu

ರಾಜ್ಯ - ರಾಷ್ಟ್ರ
ಪುರುಷರ ವಿಭಾಗದ ಹತ್ತು ಸಾವಿರ ಮೀಟ ಓಟ ಇಂದು ಮುಂಜಾನೆ ನಿಗಧಿತ ವೇಳೆಗೆ ಆರಂಭಗೊಂಡಿತು.ಮೂಡಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ಕೊರೆವ ಚಳಿಯ ನಡುವೆಯೂ ಕೂಟ ಪ್ರಾರಂಭ












ಮುಂದೆ ಓದಿ

ರಾಜ್ಯ ರಾಷ್ಟ್ರ
ಮೂಡಬಿದಿರೆ ಸ್ವರಾಜ್ಯ ಮೈದಾನದಲ್ಲಿ ನಡೆಯುತ್ತಿರುವ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಗಮನ ಸೆಳೆದ ಸಾಂಸ್ಕೃತಿಕ ವೈಭವ

ಚಿತ್ರ: ಹರ್ಷ ಪದ್ಯಾಣ

ಮುಂದೆ ಓದಿ
| | |Home