ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ
ಸ್ವಾಮಿ ವಿವೇಕಾನಂದರ ೧೫೦ನೇ ಜನ್ಮದಿನೋತ್ಸವದ ಸಂಧರ್ಭದಲ್ಲಿ , ಅವರ ಕುರಿತಾಗಿ ವಿಶೇಷ ಲೇಖನ.ಓದಿ ಅಭಿಪ್ರಾಯಿಸಿ. - ಸಂ.
ಒಮ್ಮೆ ಮಹಾ ಕವಿ ರವೀಂದ್ರನಾಥ ಟ್ಯಾಗೋರ್ , ಈ ಮಹಾ ಪುರುಷನನ್ನು ಕುರಿತು ಹೀಗೆಂದಿದ್ದರು,,: "If you want to know India, study Vivekananda. In him everything is positive and nothing negative."
ಈ ಮಾತು ಎಷ್ಟು ಸತ್ಯ.. ಈ ಒಂದು ಮಾತು ವಿವೇಕಾನಂದರ ಸಂಪೂರ್ಣ ವ್ಯಕ್ತಿತ್ವವನ್ನು ಹೇಳುತ್ತದೆ.. ಅವರಿಗೆ ಸರಿಯಾಗಿ ಒಪ್ಪುತ್ತದೆ. ಅವರೇ svaami ವಿವೇಕಾನಂದ.


ಆತ ಹುಟ್ಟಿ ಇಂದಿಗೆ ೧೫೦ ವರ್ಷಗಳಾದರೂ ಭಾರತದ ಪಾಲಿಗೆ ಅಷ್ಟೇ ಏಕೆ ಇಡೀ ವಿಶ್ವಕ್ಕೆ ಆತ 'ಚಿರಯುವಕ' ವಿವೇಕಾನಂದ ಎಂಬ ಹೆಸರು ಕೇಳಿದಾಕ್ಷಣವೇ ನಮ್ಮ ದೇಹದ ರೋಮ ರೋಮವೂ ಪುಟಿದೇಳುತ್ತದೆ. ಅಂತಹ ಅದಮ್ಯ ಶಕ್ತಿ - ಚೈತನ್ಯ ವಿವೇಕಾನಂದರದ್ದು. ದೃಢ ಮತ್ತು ಸಮಚಿತ್ತದ ಗಂಭೀರವಾದ ನೇರ ವ್ಯಕ್ತಿತ್ವ, ಆತ್ಮವಿಶ್ವಾಸವೇ ತುಂಬಿ ತುಳುಕುತ್ತಿರುವ ಭಾರತದ ಭವಿಷ್ಯದ ಅಂತರ್ಗತ ನೋಟ. ಒಮ್ಮೆ ನೋಡಿದರೆ ನೋಡುತ್ತಲೇ ಇರಬೇಕು ಎನ್ನಿಸುವ ಆಕರ್ಷಣೆಯ ಮುಖದ ಹೊಳಪು. ಆ ಮೊಗ ಛಾಪಿನಲ್ಲೂ ಭಾರತೀಯತೆ , ವೇದಾಂತ, ಹಿಂದುತ್ವ , ಸನಾತನತೆ ಮತ್ತು ಸನ್ನಡತೆಯ ಸತ್ವ-ತತ್ವ. ಮಂದಸ್ಮಿತ ನಗೆಯುಕ್ಕುವ ತುಟಿಗಳು , ಸಿಂಹದ ಘರ್ಜನೆಯಂತಿರುವ ನಡೆ-ನುಡಿ , ಸರಳ ಪೋಷಾಕು , ಭಾರತೀಯ ಸ್ವ-ಸಂಸ್ಕೃತಿಯ ಸ್ಪಷ್ಟ ಪ್ರತಿಬಿಂಬ ಇವೆಲ್ಲವೂ ಸ್ವಾಮಿ ವಿವೇಕಾನಂದರನ್ನು ಕಂಡಾಗ , ಅವರ ಕುರಿತಾಗಿ ಓದಿದಾಗ ಮನಸ್ಸಿಗಾಗುವ ಅನುಭವಗಳು. ಅವರ ಹೆಸರಿನಲ್ಲಿಯೇ ಚೈತನ್ಯದಾಯಕ ಶಕ್ತಿಯಿದೆ. ವಿವೇಕಯುತವಾದ ಮಹತ್ ಆನಂದದ ಪುಣ್ಯ ಫಲವೇ ಸ್ವಾಮಿ ವಿವೇಕಾನಂದ. ಪ್ರತಿಯೊಬ್ಬರೂ ಆಕರ್ಷಿತಗೊಳ್ಳುವಂತಹ ಪರಿಪಕ್ವ ವ್ಯಕ್ತಿತ್ವ. ಎಲ್ಲರೂ ಒಪ್ಪುವಂತಹ ಉದಾತ್ತ ತತ್ವ ಚಿಂತನೆ. ಮಾನವರೆಲ್ಲರಿಗೂ ಮಾರ್ಗದರ್ಶನ ನೀಡಬಲ್ಲ ಮೂರ್ತ ಸ್ಪೂರ್ತಿ.

ಸ್ವಾಮಿ ವಿವೇಕಾನಂದ ಎಂಬುವವರು ಕೇವಲ ಒಬ್ಬ 'ವ್ಯಕ್ತಿಯಲ್ಲ' , ಬದಲಾಗಿ ಅವರೊಂದು 'ಶಕ್ತಿಯೇ' ಸರಿ. ೧೮೬೩ರ ಜನವರಿ ೧೨ ಅಂದು ಅಂದರೆ ಇಂದಿಗೆ ಸರಿಯಾಗಿ ೧೫೦ ವರ್ಶಗಳ ಹಿಂದೆ ಕಲ್ಕತ್ತದಲ್ಲಿ ಈತನ ಜನನವಾಯಿತು. ಮುಂದೆ ನಡೆದದ್ದೆಲ್ಲ ಇತಿಹಾಸ. ತಂದೆತಾಯಿಯರ ಉತ್ತಮ ಮಾರ್ಗದರ್ಶನ , ಒಳ್ಳೆಯ ಶಿಕ್ಷಣ, ಸಂಸ್ಕಾರ ಬಾಲ್ಯದಿಂದಲೇ ನರೇಂದ್ರದತ್ತನನ್ನು ಆಧ್ಯಾತ್ಮದತ್ತ ಮುಖಮಾಡುವತ್ತ ಮಾಡಿತು. ಶ್ರೀ ರಾಮಕೃಷ್ಣ ಪರಮಹಂಸರ ಸಖ್ಯ, ಅನುಭೂತಿ ಸಿಕ್ಕಮೇಲಂತು ಆತ ಭಾರತದ ಆಸ್ತಿಯಾದ. ಶ್ರೀ ಶಂಕರಾಚಾರ್ಯರ ನಂತರ 'ಅದ್ವೈತ'{ಆತ್ಮ ಮತ್ತ್ತು ಪರಮಾತ್ಮ ಒಂದೆ.} ಎಂಬ ತತ್ವವನ್ನು ದೇಶದಾದ್ಯಂತ ಪಸರಿಸಿದ ಮಹಾ ಸಂತ. ಆ ಕಾಲದ ಶ್ರೇಷ್ಟ ಸಮಾಜಸುಧಾರಕ. ಬಡತನ ನಿರ್ಮೂಲನದಂತಹ ಸಾಮಾಜಿಕ ಪಿಡುಗನ್ನು ಹೋಗಲಾಡಿಸಲು 'ದರಿದ್ರ ನಾರಾಯಣ' ಪೂಜೆಯ ದೀಕ್ಷೆಯನ್ನು ನೀಡಿದ.ಬಾಲ್ಯದಿಂದಲೂ ದೇವರನ್ನು ಕಾಣುವ ಹಂಬಲ, ಪರಮಹಂಸರಿಂದ ಆತ್ಮ ಮತ್ತು ಪರಮಾತ್ಮ ಎರಡೂ ಒಂದೆ ಎಂದು ತಿಳಿದ ಮೇಲಂತೂ ಆ ದಾರಿಯಲ್ಲೇ ಈತನ ವ್ಯಕ್ತಿತ್ವ ವಿಕಸನ. ಪರಕೀಯತೆಯ ಎದುರು ಅಂದರೆ ಪಾಶ್ಚಾತ್ಯ ತತ್ವ-ಶಾಸ್ತ್ರಗಳೆದುರು ಸ್ವಕೀಯತೆಯ ಸ್ವಾಭಿಮಾನವನ್ನೂ, ಶ್ರೇಷ್ಟತೆಯನ್ನೂ ಎತ್ತಿ ಹಿಡಿತಯುವ ಮೂಲಕ ಭಾರತೀಯ ವೇದಾಂತ , ಸನಾತನ ಸಂಸ್ಕೃತಿ , ತತ್ವಶಾಸ್ತ್ರಗಳನ್ನು ಪಾಶ್ಚಾತ್ಯರಿಗೆ ಪರಿಚಯಿಸಿದ ಸಂವಾಹಕ. ೧೮೯೩ರಲ್ಲಿ ಚಿಕಾಗೋದಲ್ಲಿ ನಡೆದ ಸರ್ವಧರ್ಮ ಸಮ್ಮೇಳನವನ್ನು ಮರೆಯಲಾದೀತೇ? ಭಾರತೀಯತೆಯನ್ನು ಪ್ರಸರಿಸುವ ನೆಲೆಯಲ್ಲಿ, {ಆದರೆ ಮತಪ್ರಚಾರಕನಾಗಿ ಅಲ್ಲ} ಆತ ಇತರ ದೇಶಗಳಿಗೂ ಸಂಚರಿಸಿ ಪಾಶ್ಚಾತ್ಯರು ಕೀಳಾಗಿ ಕಾಣುತ್ತಿದ್ದ ಈ ದೇಶದ ಸಂಸ್ಕೃತಿ - ನಾಗರೀಕತೆ - ಚಿಂತನೆಯ ಮಹತ್ವ ಶ್ರೇಷ್ಟತೆಯನ್ನು ತೋರಿಸಿಕೊಟ್ಟು ಅವರೆಲ್ಲರೂ ಈ ನಾಡಿನ ಚಿಂತನೆಗಳಿಗೆ ತಲೆಬಾಗುವಂತೆ ಮಾಡಿ ಆ ಮೂಲಕ ಇಲ್ಲಿನ ಉದಾತ್ತ ವಿಚಾರಗಳೆಡೆಗೆ ಆಕರ್ಷಿತರಾಗುವಂತೆ ಮಾಡಿದ ಮಹಾ ಮೇಧಾವಿ.


ಆತನ ಇಡೀ ಜೀವನವೇ ಪವಾಡಗಳ ಬೀಡು. ಅಂತಹ ಮಹಾನ್ ಆಧ್ಯಾತ್ಮ ಪುರುಷನಾದರೂ ಸಾಮಾನ್ಯರಲ್ಲಿ ಅತೀ ಸಾಮಾನ್ಯ. ಆತನ ಚಿಂತನೆಗಳು , ಆದರ್ಶಗಳು ಆತನನ್ನು ಶ್ರೇಷ್ಟರಲ್ಲಿ ಅತೀ ಶ್ರೇಷ್ಟರನ್ನಾಗಿಸಿವೆ. ಕೆಲವರು ನೂರಾರು ವರ್ಷ ಬಾಳಿದರೂ ಯಾವುದೇ ಸಾಧನೆ - ಪ್ರಭಾವವನ್ನು ಬೀರುವುದಿಲ್ಲ. ಆದರೆ ವಿವೇಕಾನಂದರು ಬಾಳಿ ಬದುಕಿದ ಕೆಲವೇ ವರ್ಷಗಳಲ್ಲಿ(ಸರಿ ಸುಮಾರು ೩೯ ವರ್ಷಗಳು)ಮಾಡಿದ ಸಾಧನೆ , ನೀಡಿದ ಮಾರ್ಗದರ್ಶನ ಮನುಷ್ಯಮಾತ್ರನಾದವರಿಗೆ ಒಂದು ಇಡೀ ಜೀವಮಾನದಲ್ಲೂ ಮಾಡಲು ಸಾದ್ಯವಿಲ್ಲ.'ವಿವೇಕಾನಂದರು ಯುವಕರಲ್ಲಿ ಚಿರಯುವಕ. ಅವರು ಜನಿಸಿ ಇಷ್ಟು ವರ್ಷಗಳಾದರೂ ಇಂದಿಗೂ ನಮಗೆ ಚಿರಯವ್ವನದ, ಪುಟಿದೇಳುವ, ಬಿಸಿರಕ್ತದ , ದೇಶಾಭಿಮಾನಿ ಯುವಕರಂತೆಯೇ ಗೊಚರವಾಗುತ್ತರೆ. ಅವರ ಮಾತುಗಳು ಎಂಥವರನ್ನೂ ಚಿರಯುವಕರನ್ನಾಗಿಸುತ್ತದೆ. ಎಂಥಹ ನಿದ್ದೆಯಲ್ಲಿರುವವರೂ ಕೂಡ ಅವರ ಧ್ವನಿಗೆ, ಮಾತಿನ ಮೋಡಿಗೆ, ನಿತ್ಯ ನಿರಂತರ ಚಿಂತನೆಗೆ ಜಾಗೃತರಾಗುತ್ತರೆ' ಆಲಸ್ಯ ಎಂಬುದು ಇವರಿಂದ ಸಾವಿರಾರು ಮೈಲಿ ದೂರ. ಆದ್ದರಿಂದಲೇ ವಿವೇಕಾನಂದರು ದೇಶದ ಯುವಕರನ್ನು ಆಂತರಿಕವಾಗಿ ಮತ್ತು ಬಾಹ್ಯವಾಗಿ ಸದೃಢರನ್ನಾಗಿಸುವ, ಗಟ್ಟಿಮುಟ್ಟುಗೊಳಿಸುವ, ಲವಲವಿಕೆಯಿಂದ ಚಿಮ್ಮುವಂತೆ ಮಾಡಲು ಸದಾ ಕ್ರಿಯಾಶೀಲರಾಗಿರಲು ಸಂದೇಶ ನೀಡುತ್ತಾರೆ. ಅವರಿಗೆ ಯುವಶಕ್ತಿ ಸದೃಢವಾಗಿರಬೇಕೆಂಬ ಆಸೆಯಿತ್ತು. ಮತ್ತು ಅದೇ ದೇಶದ ಆಸ್ತಿಯೆಂದು ನಂಬಿದ್ದರು. ಹಾಗಾಗಿ ಅವರು "ನೀವು ನನಗೆ ೨೦೦ ಸಾವಿರ ಸಧೃಡ ಯುವಕರನ್ನು ಕೊಡಿ ನಾನು ಈ ದೇಶದ ಚಿತ್ರಣವನ್ನೇ ಬದಲಾಯಿಸುತ್ತೇನೆಂಬ ಆತ್ಮವಿಶ್ವಾಸ ಹೊಂದಿದ್ದರು." ಅವರು ಯುವಕರನ್ನು ಸನ್ಮಾರ್ಗದಲ್ಲಿ ಚಂತಿಸುವ , ಸದಾ ಸಕಾರತ್ಮಕ ಭಾವನೆಗಳನ್ನು ಬೆಳೆಸಿಕೊಳ್ಳಲು ಕರೆ ನೀಡುತ್ತಿದ್ದರು. ಯುವಮನಸ್ಸು ಮೈದಾನಗಳಲ್ಲಿ 'ಫುಟ್ಬಾಲ್'ನಂತಹ ಮೈದಣಿಸುವ ಆಟಗಳಲ್ಲಿ ತೊಡಗಿಸಿಕೊಳ್ಳಬೇಕು ಆ ಮೂಲಕ ಬಲಿಷ್ಟರಾಗಿ-ಸದಾ ಹುರುಪು ಹುಮ್ಮಸ್ಸಿನಿಂದ ಇರಬೇಕೆಂಬ ವಿಚಾರವನ್ನು ಹೊಂದಿದ್ದರು. ಯುವಜನತೆಗೆ ಸಾಧನೆಯ ಬಗೆಗೆ, ಯಶಸ್ಸು , ವಿದ್ಯೆ, ಸಂಸ್ಕಾರ, ಸನ್ನಡತೆ,ಸನಾತನತೆ, ಸಂಸ್ಕೃತಿಗಳ ಬಗೆಗೆ ಅಧಿಕೃತವಾದ - ಸರ್ವರೂ ಪಾಲಿಸಲು ಯೋಗ್ಯವಾದ ವಿಚಾರಗಳನ್ನು ಮಂಡಿಸಿದ, ಮಾರ್ಗದರ್ಶನ ನೀಡಿದ ಮೊದಲ 'ಸಕ್ಸಸ್ ಗುರು' ಎಂದರೆ ತಪ್ಪಾಗುವುದಿಲ್ಲ.
ಇಂದು ವಿವೇಕಾನಂದರು ನಮ್ಮೊಂದಿಗಿಲ್ಲ, ಆದರೆ ಅವರು ಹಾಕಿಕೊಟ್ಟ ಮಾರ್ಗ, ತತ್ವ ಚಿಂತನೆಗಳು ದಾರಿತಪ್ಪುತ್ತಿರುವ ಯುವಜನತೆಗೆ, ಭಾರತೀಯರಿಗೆ ದಾರಿದೀಪವಾಗಿವೆ. ಅವರ ಬದುಕಿನ ಪ್ರತಿಯೊಂದು ಭಾಗವೂ ಒಂದು ಪಾಠ, ಸಂದೇಶ.. ಅವೇ ನಮ್ಮ ಬಾಳಿನ-ವ್ಯಕ್ತಿತ್ವದ ಏಳ್ಗೆಗೆ ಅಮೃತ ಮಂತ್ರಗಳೂ ಹೌದು. ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆದರೆ ಯುವಜನತೆ ದೇಶವನ್ನು ಉಚ್ಛ್ರಾಯ ಸ್ಥಿತಿಗೆ ತಲುಪಿಸಬಹುದು, ತಾವೂ ತಲುಪಬಹುದು.

'ವಿವೇಕಾನಂದರ ಭವಿಷ್ಯದ ಭಾರತದ ಕನಸು ಸಾಕಾರಗೊಳ್ಳದೆ ಹಾಗೇ ಉಳಿದಿದೆ. ಅವರು ಬಯಸಿದ್ದು ಭವ್ಯ ಭಾರತದ ಸುಂದರ ನಾಳೆಗಳ ಬದುಕನ್ನು, ಬೆಳವಣಿಗೆಯನ್ನು, ಅಖಂಡತೆಯನ್ನು.. ಅದನ್ನು ಈ ದಿನದಂದು , ಹುಟ್ಟಿದ ದಿನದ ಸವಿನೆನಪಿನ ಕೊಡುಗೆಯನ್ನಾಗಿ ನೀಡಬಹುದೆ??? ವಿವೇಕಾನಂದರು ಅಂದು ಕಂಡ ಕನಸನ್ನು ನನಸುಗೊಳಿಸದ ಹೊರತು 'ಸ್ವಾಮಿ ವಿವೇಕಾನಂದ ಜಯಂತಿ'ಯನ್ನೋ , 'ಯುವಜನೋತ್ಸವನ್ನೋ' ಅದ್ಧೂರಿಯಾಗಿ ಅಚರಿಸಿ, ಕೈತೊಳೆದು ನಂತರ ಮುಂದಿನ ವರ್ಷದ ತನಕ ಸಂಪೂರ್ಣವಾಗಿ ಮರೆಯುವುದರಲ್ಲಿ {ಅವರ ಆದರ್ಶಗಳ ಸಮಾಧಿ ಮಾಡಿ} ಯಾವುದೇ ಅರ್ಥವಿಲ್ಲ. ಅಂಥಹ ಸಾಧು ಸಂತನಾಗಿದ್ದ, ಶಾಂತಿಧೂತನಂತಿದ್ದ ವಿವೇಕಾನಂದರೂ ದೇಶದ ಸ್ವಾಭಿಮಾನದ, ಸ್ವಾತಂತ್ರ್ಯದ ವಿಚಾರ ಬಂದಾಗ ಸಿಡಿದೇಳುತ್ತಿದ್ದರು. ಆದರೆ ಇಂದು ನಮ್ಮಲ್ಲಿ ಆ ರೀತಿಯಲ್ಲಿ ಯೊಚಿಸುವ ಯುವಜನತೆಯೆಲ್ಲಿದೆ? ದೇಶಕ್ಕಾಗಿ ಏನನ್ನಾದರೂ ಮಾಡುವ ಹೆಬ್ಬಯಕೆ ಯಾರಲ್ಲಿದೆ? ಒಂದು ವೇಳೆ ಇದ್ದರೂ ಕೂಡ ಈ ದೇಶದ, " ಇಂತಹ " ಪರಿಸ್ಠಿತಿಯಲ್ಲಿ ಯಾರೊಬ್ಬರೂ ಸುಮ್ಮನೆ ಮನೆಯಲ್ಲಿ ಕುಳಿತುಕೊಳ್ಳುತ್ತಿರಲಿಲ್ಲ. ಅದಕ್ಕೆಲ್ಲ ನಮ್ಮ ವ್ಯಕ್ತಿತ್ವದಲ್ಲಿನ ಪೊಳ್ಳುತನವೇ ಕಾರಣ. ಆ ಪೊಳ್ಳುತನವನ್ನು ಹೋಗಲಾಡಿಸಲು ಸಾದ್ಯವಾಗುವುದು ವಿವೇಕಾನಂದರನ್ನು ಸರಿಯಾಗಿ ಅರಿತಾಗ ಮಾತ್ರ....!!!! ಅವರನ್ನು ಸರಿಯಾಗಿ ಅರಿಯುವುದು ಎಂದರೆ ಅವರ ತತ್ವ- ಚಿಂತನೆಗಳನ್ನು ಸರಿಯಾಗಿ ತಿಳಿದುಕೊಂಡು ದಿನನಿತ್ಯವೂ ಪಾಲಿಸುವುದು ಎಂಧರ್ಥ.

ಇನ್ಯಾಕೆ ತಡ ಅವರ ೧೫೦ನೆ ಜನ್ಮದಿನಾಚರಣೆಯನ್ನು ಕೇವಲ ಅವರನ್ನು ಬಗೆ-ಬಗೆಯಿಂದ ಹಾಡಿ ಹೊಗಳಿ ಆಚರಿಸುವುದರಿಂದ ಯಾವುದೇ ಫಲವಿಲ್ಲ.{ಅಷ್ಟಕ್ಕೆ ಸೀಮಿತಗೊಳಿಸುವುದರಿಂದ}.. "ನಮ್ಮ ಇಂದಿಗೆ ನಾವೇ ಕಾರಣರು, ಅಂತೆಯೇ ನಮ್ಮ ನಾಳೆಗಳಿಗೂ ನಾವೇ ಕಾರಣರು". [ವಿವೇಕಾನಂದ]. ಹಾಗೆಯೇ ನಿನ್ನೆ - ಇಂದು - ನಾಳೆಗಳಿಗೆ ಕೊಂಡಿಯಂತಿರುವ , ಆದರ್ಶದ ಸಾಕಾರಮೂರ್ತಿಯಂತಿರುವ , ಭಾರತದ ಬದಲಾವಣೆಯ-ಭರವಸೆಯ ಹರಿಕಾರರನ್ನು ನಿತ್ಯವೂ ನಮ್ಮೊಳಗೆ ಪೂಜಿಸುವ ಮೂಲಕ, ಆತನನ್ನು ನಿಜವಾಗಿ ಆರಾಧಿಸುವ-ಪಾಲಿಸುವ ಮೂಲಕ ಖಂಡಿತವಾಗಿಯೂ ಬದಲಾವಣೆಯನ್ನು ತರಲು ಸಾಧ್ಯವಿದೆ.ವಿವೇಕಾನಂದರು ಹೇಳಿದಂತಹ ಭಾರತದ "ಯುಗಪರ್ವ - ಯುಗಸಂಧಿ" ಅಂದರೆ ಭಾರತ ದೇಶವು "ಸೂಪರ್ ಪವರ್" ಆಗುವ ಸಮಯ ಹತ್ತಿರಬರುತ್ತಿದೆ. ಅದನ್ನು ನಾವು ಸಾಧ್ಯಮಾಡಿ, ಭರವಸೆಯ ನಾಳೆಗಳನ್ನಾಗಿ ಪರಿವರ್ತಿಸಿ ತೋರಿಸಬೇಕಷ್ಟೆ.... "ಮನುಷ್ಯ ಆತ್ಮಕ್ಕೆ ಅಸಾಧ್ಯವಾದದ್ದು ಯಾವುದೂ ಇಲ್ಲ" ಎಂಬ
ವಿವೇಕಾನಂದರ ವಾಣಿಯನ್ನು ನೆನಪಿಸಿಕೊಳ್ಳಬೇಕು.. [ಅದೇ ಈ ಹೊತ್ತಿನ ತುರ್ತು.] ಅಸಾಧ್ಯ ಎಂದು ಅಂದುಕೊಂಡಿರುವುದನ್ನು ಸಾಧ್ಯ ಮಾಡಿ ತೋರಿಸಬೆಕಾಗಿದೆ. ಅದೇ ನಾವು ಭಾರತ ದೇಶಕ್ಕೆ , ಸ್ವಾಮಿ ವಿವೇಕಾನಂದರಿಗೆ ಪ್ರತಿಯಾಗಿ ಸಲ್ಲಿಸಬಹುದಾದ ಶ್ರೇಷ್ಠ, ಕೃತಜ್ನ್ಯತೆಯ ನಮನಗಳು ಮತ್ತು ಕೊಡುಗೆಯಾಗಿದೆ..
ನಮ್ಮಲ್ಲಿನ ವಿವೇಕವೂ ಜಾಗೃತವಾಗಲಿ.ನಮ್ಮ ಕಣ ಕಣದಲ್ಲೂ ಭಾರತೀಯತೆ ಮೈದಳೆಯಲಿ.
ವಿವೇಕ ವಾಣಿ: " ಏಳಿ ಎದ್ದೇಳಿ.. ಗುರಿ ಮುಟ್ಟುವ ತನಕ ನಿಲ್ಲದಿರಿ.... "

ಎಲ್ಲರಿಗೂ ಹೊಸಯುಗದ ಸೃಷ್ಟಿಕರ್ತ, ವೀರ ಸಂನ್ಯಾಸಿ ಸ್ವಾಮಿ ವಿವೇಕಾನಂದರ ೧೫೦ನೇ ಜನ್ಮದಿನಾಚರಣೆಯ - ಯುವಜನೋತ್ಸವದ ಶುಭಾಶಯಗಳು.ಶ್ರೇಯಾಂಕ ಎಸ್. ರಾನಡೆ.
ಪ್ರಥಮ ಎಂ.ಎ., ಕನ್ನಡ ವಿಭಾಗ
ಮಂಗಳೂರು ವಿ.ವಿ., ಮಂಗಳಗಂಗೋತ್ರಿ
ಕೋಣಾಜೆ.
ಮಂಗಳೂರು ೫೭೪ ೧೯೯

2 comments:

Anonymous said...

k. good

dr.divakokkada said...

very good and thoughtful and relavant article. beautiful narration also.

Post a Comment