ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ

ಪ್ರಾಚೀನ ದೇವಾಲಯಗಳು ತನ್ನದೇ ಆದ ವಿಶಿಷ್ಟ ಸಂಪ್ರದಾಯ,ಆಚರಣೆಗಳನ್ನು ಹೊಂದಿರುತ್ತವೆ. ಯಾಂತ್ರಿಕ ಜೀವನ,ಕಡಿಮೆಯಾಗುತ್ತಿರುವ ನಂಬಿಕೆಗಳು ಇವೆಲ್ಲ ಕಾರಣಗಳಿಂದ ಇತ್ತೀಚೆಗೆ ಅಂತಹ ಆಚರಣೆಗಳೆಲ್ಲ ಕಣ್ಮರೆಯಾಗುತ್ತಿವೆ. ಇವುಗಳ ನಡುವೆಯೂ ಸಂಪ್ರದಾಯಗಳನ್ನು ಮುಂದುವರಿಸಿಕೊಂಡು ಬರುತ್ತಿರುವ ಹಳೆಯ ದೇವಾಲಯಗಳಲ್ಲಿ ಯಲ್ಲಾಪುರ ತಾಲೂಕಿನ ಅಣಲಗಾರ ಗೋಪಾಲಕೃಷ್ಣ ದೇವಾಲಯವೂ ಒಂದು.


ಇಲ್ಲಿ ಪ್ರತಿವರ್ಷ ಸುಮಾರು 5-6 ಉತ್ಸವಗಳು ನಡೆಯುತ್ತವೆ. ಅವುಗಳಲ್ಲಿ ಕಾರ್ತಿಕ ಉತ್ಸವಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಕಾರ್ತಿಕ ಮಾಸದ ಶುಕ್ಲ ಪಕ್ಷದ ಕೊನೆಯ ನಾಲ್ಕು ದಿನಗಳ ಕಾಲ ಈ ಉತ್ಸವವನ್ನು ಆಚರಿಸಲಾಗುತ್ತದೆ. ಆ ನಾಲ್ಕು ದಿನ ಊರಿನಲ್ಲಿ ಹಬ್ಬದ ವಾತಾವರಣವಿರುತ್ತದೆ. ಮೊದಲು ಮೂರು ದಿನ ಮಧ್ಯಾಹ್ನ ಸಮಾರಾಧನೆ,ಸಂಜೆ ದೀಪಾರಾಧನೆಗಳು ನಡೆಯುತ್ತವೆ. ಸಂಜೆ ಪೂಜೆಯ ನಂತರ ಸ್ಥಳೀಯರು ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮ ನಡೆಸುತ್ತಾರೆ.


ಉತ್ಸವದ ಕೊನೆಯ ದಿನ ವಿಶೇಷ ಪೂಜೆಗಳು ನಡೆಯುತ್ತವೆ. ಅಂದು ಮಧ್ಯಾಹ್ನ ಉತ್ಸವ ಮೂರ್ತಿಗೆ ವಿಶೇಷ ಅಲಂಕಾರ ಮಾಡಿ ದೇವಾಲಯದ ಪಕ್ಕದ ತೋಟದಲ್ಲಿರುವ ಕಪಿಲ ತೀರ್ಥದ ಬಳಿ ಪಲ್ಲಕ್ಕಿಯಲ್ಲಿ ಒಯ್ಯಲಾಗುತ್ತದೆ. ಅಲ್ಲಿರುವ ಅಶ್ವತ್ಥ ವೃಕ್ಷದ ಕೆಳಗೆ ಮೂರ್ತಿಯನ್ನಿರಿಸಿ ವಿಶೇಷ ಪೂಜೆ,ಸಮಾರಾಧನೆ ಮಾಡುತ್ತಾರೆ. ಪೂಜೆಯ ನಂತರ ಪಕ್ಕದಲ್ಲಿ ನಿರ್ಮಿಸಿದ ಸೋಗೆಯ ಚಪ್ಪರದಲ್ಲಿ ವನಭೋಜನ!

ಸಂಜೆ ಭಜನೆ,ಹಾಡುಗಳ ಮೂಲಕ ದೇವರ ಆರಾಧನೆ ನಡೆಯುತ್ತದೆ. ನಂತರ ಅಲ್ಲಿಂದ ಮೂರ್ತಿಯನ್ನು ಪುನಃ ಹೊರಡಿಸುತ್ತಾರೆ. ದೇವಾಲಯದ ದಾರಿಯಲ್ಲಿ ಊರವರೆಲ್ಲ ದೇವರಿಗೆ ಪೂಜೆ ಸಲ್ಲಿಸುವುದು ಉತ್ಸವದ ವಿಶೇಷ. ದೇವಾಲಯಕ್ಕೆ ಮರಳಿದ ನಂತರ ಬೆಳಗಿನವರೆಗೆ ತಾಳಮದ್ದಲೆ ನಡೆಯುತ್ತದೆ. ಬೆಳಗಿನ ಪೂಜೆಯೊಂದಿಗೆ ಉತ್ಸವದ ಮುಕ್ತಾಯ.

ಹಲವಾರು ವರ್ಷಗಳಿಂದ ನಡೆದು ಬಂದಿರುವ ಪದ್ಧತಿ ಇದಾಗಿದ್ದು ಮೊದಲೆಲ್ಲ ಉತ್ಸವಕ್ಕೆ ನೂರಾರು ಜನರು ಸೇರುತ್ತಿದ್ದರು. ಆದರೆ 7-8 ವರ್ಷಗಳಿಂದೀಚೆಗೆ ಉತ್ಸವದಲ್ಲಿ ಪಾಲ್ಗೊಳ್ಳುವ ಜನರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಜನರಲ್ಲಿ ಧಾರ್ಮಿಕ ಆಚರಣೆಗಳ ಕುರಿತಾದ ನಂಬಿಕೆ ಕಡಿಮೆ ಆಗುತ್ತಿರುವುದೇ ಇದಕ್ಕೆ ಮುಖ್ಯ ಕಾರಣ ಎನ್ನುತ್ತಾರೆ ದೇವಾಲಯದ ಆಡಳಿತ ಮಂಡಳಿಯ ಗೋಪಾಲಕೃಷ್ಣ ಭಟ್ಟ.

ಗ್ರಾಮೀಣ ಭಾಗಗಳಲ್ಲಿ ಇಂತಹ ನೂರಾರು ದೇವಾಲಯಗಳಿವೆ. ಅಲ್ಲಿನ ಆಚರಣೆಗಳು ನಶಿಸುತ್ತಿರುವುದಕ್ಕೆ ಇಂದಿನ ಗ್ರಾಮೀಣ ಯುವಕರು ನಗರಗಳತ್ತ ಮುಖ ಮಾಡಿರುವುದೂ ಒಂದು ಕಾರಣವಾಗಿದೆ. ನಮ್ಮ ಸಂಸ್ಕೃತಿಯ ಪ್ರಕಾರಗಳಾದ ಇಂತಹ ಉತ್ಸವಗಳು ನಶಿಸುತ್ತಿರುವುದು ವಿಷಾದದ ಸಂಗತಿ...


ಶ್ರೀಧರ ಅಣಲಗಾರ