ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
11:44 PM

ಯಾರು ಸುಖಿಗಳು...

Posted by ekanasu

ವಿಶೇಷ ವರದಿ

ಜಗತ್ತಿನಲ್ಲಿ ಅತ್ಯಂತ ಸುಖಮಯ ಜೀವನ ನಡೆಸುವವರು ಎಂದರೆ ಉತ್ತರಕನ್ನಡದ ಜನರು ಎಂಬುದು ನಮ್ಮ ರಾಜ್ಯದ ನಗರವಾಸಿಗಳ ಅಂಬೋಣ. ಸುಂದರ ಪರಿಸರಗಳ ನಡುವೆ ಅಡಿಕೆ,ತೆಂಗು,ಭತ್ತ ಮುಂತಾದ ಉತ್ಪನ್ನಗಳನ್ನು ಬೆಳೆದು ಮಾರಿ ಸುಖಿ ಜೀವನವನ್ನು ನಡೆಸುತ್ತಿದ್ದಾರೆ ಎಂದು ಹೇಳುವವರಿಗೆ ಕಮ್ಮಿಯಿಲ್ಲ. ಆದರೆ ಜಿಲ್ಲೆಯ ಕೃಷಿಕನ ಬವಣೆ,ಆ ಬೆಳೆಗಳ ಹಿಂದಿನ ಕಷ್ಟ ಇವ್ಯಾವುದೂ ನಗರಗಳಲ್ಲಿ ರಂಗಿನ ಜೀವನ ನಡೆಸುವವರಿಗೆ ತಿಳಿದಿರುವುದಿಲ್ಲ.ಕೂಲಿಗಳ ಸಮಸ್ಯೆ,ಬೆಳೆಗೆ ಅಂಟುವ ರೋಗಗಳು,ಮಾರುಕಟ್ಟೆಯಲ್ಲಿ ದರಗಳ ಏರಿಳಿತ ಇಂತಹ ನೂರಾರು ತೊಂದರೆಗಳ ನಡುವೆ ಎಲ್ಲರಿಗೂ ಅನ್ನ ನೀಡುತ್ತಿರುವ ಅನ್ನದಾತನ ನೋವು ಅವರಿಗೆ ಹೇಗೆ ತಾನೆ ತಿಳಿಯಲು ಸಾಧ್ಯ?


ಹಿಂದೆ ಕೃಷಿಕರು ತೋಟ,ಗದ್ದೆಗಳನ್ನು ಸಮನಾದ ಪ್ರಮಾಣದಲ್ಲಿ ಹೊಂದಿರುತ್ತಿದ್ದರು. ನಿಧಾನವಾಗಿ ಗದ್ದೆಗಳೆಲ್ಲ ತೋಟಗಳಾಗಿ ಪರಿವರ್ತಿತವಾಗತೊಡಗಿದವು. ಅದಕ್ಕೆ ಕಾರಣ ಗದ್ದೆ ಉಳಲು,ನಾಟಿ ಮಾಡಲು,ಕೊಯ್ಲು ಮಾಡಲು ಆಳುಗಳು ಸಿಗುವುದಿಲ್ಲ ಎಂಬುದಾಗಿತ್ತು. ಮತ್ತೂ ಪ್ರಮುಖ ಕಾರಣವೆಂದರೆ ಭತ್ತಕ್ಕೆ ಕಡಿಮೆ ಬೆಲೆ ಇದ್ದುದಾಗಿತ್ತು. ಇದರಿಂದ ವರ್ಷಪೂರ್ತಿ ತಾನು ಬೆಳೆದ ಅನ್ನವನ್ನು ಉಣ್ಣುತ್ತಿದ್ದ ಜಿಲ್ಲೆಯ ಕೃಷಿಕ ಅಕ್ಕಿಯನ್ನು ಅಂಗಡಿಯಿಂದ ತಂದು ಉಣ್ಣುವ ಸ್ಥಿತಿ ಬಂತು. ಅಡಿಕೆ ಬೆಳೆಗೆ ಎಲ್ಲರೂ ಮೊರೆ ಹೋಗಿದ್ದರು.


ಆ ಹೊತ್ತಿನಲ್ಲಿ ಕೂಲಿಗಳ ಸಮಸ್ಯೆ ಎನ್ನುವುದು ಅಡಿಕೆ ಕೆಲಸವನ್ನು ಆವರಿಸಿರಲಿಲ್ಲ. ಆದರೆ ಇಂದು ಅಡಿಕೆ ಕೊಯ್ಯುವವ ಒಬ್ಬ ಸಿಕ್ಕರೆ ಸಾಕು. ಅದು ನಮ್ಮ ಪೂರ್ವಜನ್ಮದ ಪುಣ್ಯ ಎನ್ನುತ್ತಾನೆ ಅಡಿಕೆ ಬೆಳೆಗಾರ! ಅಡಿಕೆ ಕೊಯ್ದರೆ ಸುಲಿಯುವುದು ದೊಡ್ಡ ಸಮಸ್ಯೆ. ಸುಲಿಯಲೂ ಆಳುಗಳು ಸಿಗಲಾರರು. ಹಲವಾರು ಕಡೆಗಳಲ್ಲಿ ಅಡಿಕೆ ಕೊಯ್ಯುವವರು ಸಿಗದೇ ಬೆಳೆದ ಅಡಿಕೆಗಳು ಉದುರುತ್ತಿವೆ. ಅಡಿಕೆ ಸುಲಿಯುವ ಕೆಲಸಕ್ಕೆ ಆಳುಗಳ ಕೊರತೆಯಿಂದ ಪರ್ಯಾಯ ವ್ಯವಸ್ಥೆಯಾಗಿ ಶ್ರಮ ವಿನಿಮಯ ಪದ್ಧತಿಯನ್ನು ಇಂದಿಗೂ ಹಳ್ಳಿಗಳಲ್ಲಿ ಅನುಸರಿಸುತ್ತಿರುವುದು ವಿಶೇಷ. ಆದರೆ ಈ ವ್ಯವಸ್ಥೆ ಎಷ್ಟು ವರ್ಷ ಉಳಿದೀತು?


ಹಳ್ಳಿಯ ಜನತೆ ಕೃಷಿಯನ್ನು ಬಿಟ್ಟು ನಗರಗಳತ್ತ ಮುಖ ಮಾಡಿದ್ದಾಗಿದೆ. ನಿಧಾನವಾಗಿ ಹಳ್ಳಿಗಳು ಬರಿದಾಗುತ್ತಿವೆ. ಇದು ಮುಂದುವರಿದರೆ ಕೃಷಿಗೆ ಉಳಿಗಾಲವಿದೆಯೆ? ಕೃಷಿಯಲ್ಲಿನ ಸಮಸ್ಯೆಗಳಿಂದ ರೈತ ಬೇಸತ್ತು ಹೋಗಿದ್ದಾನೆ. ಈ ಸಮಸ್ಯೆಗಳು ಹೀಗೆಯೇ ಮುಂದುವರಿದಲ್ಲಿ ಇದೀಗ ಕೃಷಿ ಜೀವನ ನಡೆಸುತ್ತಿರುವವರೂ ಸಹ ನಗರಗಳಿಗೆ ವಲಸೆ ಹೋದರೆ ಆಶ್ಚರ್ಯವೇನಿಲ್ಲ. ಈಗಾಗಲೇ ಬಹುತೇಕ ಯುವಕರೆಲ್ಲ ನಗರವಾಸಿಗಳಾಗಿದ್ದಾರೆ. ಈಗಿನ ಕೃಷಿಕರ ನಂತರ ಕೃಷಿ ಕಾಣ ಸಿಗುವುದು ಅಪರೂಪವೇ ಸರಿ.

ಈ ಎಲ್ಲ ಸಮಸ್ಯೆಗಳ ಅರಿವಿರುವ,ಇದೇ ಹಳ್ಳಿಗಳಲ್ಲಿ ಹುಟ್ಟಿ,ಬೆಳೆದು ಇದೀಗ ನಗರಗಳಲ್ಲಿ ನೋಟು ಎಣಿಸುತ್ತಿರುವ ಕೆಲವರ ಬಾಯಲ್ಲಿ ಕೃಷಿಕ ಸುಖಜೀವಿ ಎಂಬ ಮಾತುಗಳು ಬರುತ್ತವೆ. ಅದಕ್ಕೆ ಹುಟ್ಟಾ ನಗರಜೀವಿಗಳ ಕೋರಸ್! ನಿಜವಾಗಿ ಕೃಷಿಯ ಬವಣೆ ಎಂಥದ್ದೆಂದು ಹಳ್ಳಿಗಳಲ್ಲಿ ವಾಸಿಸುತ್ತಿರುವ ರೈತನಿಗೆ ಮಾತ್ರ ಗೊತ್ತು. ಇಷ್ಟಾದರೂ ನಮ್ಮಲ್ಲಿ ಸಹಜವಾಗಿ ಮೂಡುವ ಪ್ರಶ್ನೆ ಇಷ್ಟೆಲ್ಲ ಕಷ್ಟಗಳ ನಡುವೆ ಅನ್ನ ನೀಡುತ್ತಿರುವ ರೈತ ಸುಖಜೀವಿಯೇ?

- ಶ್ರೀಧರ ಅಣಲಗಾರ

0 comments:

Post a Comment