ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ

ದಿ.ಸಿ.ವಿ.ಗೋಪಾಲ ಶರ್ಮ ಸ್ಮರಣ ಕಾರ್ಯಕ್ರಮ

ವೇಣೂರು: ಇದು "ನಿಜಾರ್ಥದ" ನೆನಪಿನ ಕಾರ್ಯಕ್ರಮ. ಉನ್ನತ ಮಾನವೀಯ ಗುಣದ ಸಿ.ವಿ.ಗೋಪಾಲ ಶರ್ಮ ಅವರ 67ನೇಯ ಜನ್ಮದಿನದಂದು ಒಟ್ಟು ಹನ್ನೊಂದು ಗಂಟೆಗಳ "ಚಿಂತನ - ಮಂಥನ - ಗೀತ - ಗಾನ - ಸಮ್ಮಾನ - ವಿಶೇಷ" ಕಾರ್ಯಕ್ರಮ. ನೆನಪುಳಿಯುವ ರೀತಿಯ ಸ್ಮರಣಾಂಜಲಿ. ಬೆಳ್ತಂಗಡಿಯ ಸಂತೆಕಟ್ಟೆ ಬಳಿಯ ಸುವರ್ಣ ಆರ್ಕೇಡ್ ನ " ಸಪ್ತಪದಿ ಸಭಾಂಗಣ "ದಲ್ಲಿ ಕವಿ, ವಿಮರ್ಶಕ ಸುಬ್ರಾಯ ಚೊಕ್ಕಾಡಿ ಅವರ ಸರ್ವಾಧ್ಯಕ್ಷತೆಯಲ್ಲಿ ಬೆಳಗ್ಗೆ 9ಕ್ಕೆ ಸರಿಯಾಗಿ ಕಾರ್ಯಕ್ರಮ ಪ್ರಾರಂಭಗೊಳ್ಳಲಿದೆ.

ಕಾರ್ಯಕ್ರಮದ ಮೊದಲಿಗೆ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ಉಪನ್ಯಾಸಕ ಜೋಸೆಫ್ ಎನ್.ಎಮ್ ಆಶಯ ಭಾಷಣ ಮಾಡಲಿದ್ದಾರೆ. ಖ್ಯಾತ ಚಿಂತಕ ಕೆ.ಎಸ್.ಪಾರ್ಥಸಾರಥಿ ದಿ.ಕೆ.ವಿ.ರಾವ್ ಅವರ "ದರಿದ್ರರು" ಕಾದಂಬರಿಯ ಬಗ್ಗೆ ಮಾತನಾಡುವರು. ಸಂಶೋಧಕ ಮುಂಬಯಿಯ ಬಾಬು ಶಿವ ಪೂಜಾರಿ "ವಿಕಾಸದ ನಿಜಬಣ್ಣ" ಎಂಬ ಲಕ್ಷ್ಮೀಶ ಚೊಕ್ಕಾಡಿ ಅವರ ಕವನ ಸಂಕಲನ ಅನಾವರಣಗೊಳಿಸಲಿದ್ದಾರೆ. ಸಾಧಕರಾದ ಕಾರ್ಕಳದ ವೈದ್ಯ ಭರತೇಶ್, ಮೂಡಬಿದಿರೆಯಲ್ಲಿರುವ ಸ್ಟಾಫ್ ನರ್ಸ್ ಗುಲಾಬಿ ವಿ. ಶೆಟ್ಟಿ ಮತ್ತು ನಿವೃತ್ತ ಅಧ್ಯಾಪಕ ಲಕ್ಷ್ಮೀಶ ಚೊಕ್ಕಾಡಿ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು.

ವಿಚಾರಗೋಷ್ಠಿ " ಎರಡು ತಲೆಮಾರು - 5 " ಬೆಳಗ್ಗೆ 11 - 20ರಿಂದ 1 - 30ರ ತನಕ ನಡೆಯಲಿದೆ. ಖ್ಯಾತ ವಿಮರ್ಶಕಿ ಎಲ್.ಸಿ.ಸುಮಿತ್ರಾ "ಗ್ರಾಮೀಣ ಬದುಕಿನ ಬದಲಾವಣೆಯ ನಡೆಗಳು", ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್ "ಶಿಕ್ಷಣ ನೀತಿಯಲ್ಲಿ ಶಾಸಕಾಂಗದ ಪಾತ್ರ" , ಕಥೆಗಾರ ಶ್ರೀಧರ ಬಳಗಾರ್ "ಸಾಹಿತಿಯ ಸ್ವಾತಂತ್ರ್ಯ" , ಉದ್ಯಾವರ ಕ್ಯಾಥೋಲಿಕ್ ಚರ್ಚ್ ನ ಧರ್ಮಗುರು ವಿಲಿಯಮ್ ಮಾರ್ಟಿಸ್ " ಧಾರ್ಮಿಕ ಸಹಬಾಳ್ವೆ" ವಿಚಾರದಲ್ಲಿ ವಿಚಾರ ಮಂಡಿಸಲಿರುವರು.

ವಿಚಾರಗೋಷ್ಠಿ "ಎರಡು ತಲೆಮಾರು - 6 " ಅಪರಾಹ್ನ 2- 20ರಿಂದ 4 - 30ರ ತನಕ ನಡೆಯಲಿದೆ. ಕರ್ನಾಟಕ ಸರಕಾರದ ಮಾಜಿ ಸಚಿವ ಬಿ.ಎಲ್.ಶಂಕರ್ "ರಾಜಕಾರಣಿಗಳ ಸಂಕಷ್ಟಗಳು", ಚಿಂತಕಿ ಸಾರಾ ಅಬೂಬಕರ್ " ಮಹಿಳೆಯರ ಸಾರ್ವಜನಿಕ ಬದುಕಿನ ಸವಾಲುಗಳು " , ತುಳು ಜಾನಪದ ವಿದ್ವಾಂಸ ಪೂವಪ್ಪ ಕಣಿಯೂರು " ವಿದ್ಯಾವಂತರು ಕೃಷಿ ರಂಗವನ್ನು ನಿರಾಕರಿಸುವದರ ಔಚಿತ್ಯ ", ಮತ್ತು ಸಾಫ್ಟ್ ವೇರ್ ಇಂಜಿನಿಯರ್ ರವಿಕೃಷ್ಣಾ ರೆಡ್ಡಿ "ತಂತ್ರಜ್ಞಾನ ಪ್ರಗತಿಯ ಸಾಮಾಜಿಕ ಪರಿಣಾಮಗಳು" ವಿಷಯದಲ್ಲಿ ಮಾತನಾಡುವರು.

ಸಂಜೆ 4 - 50 ರಿಂದ 7 - 55ರ ವರೆಗೆ " ಗೀತ - ಗಾನ - ಸಮ್ಮಾನ : ವಿಶೇಷ ಕಾರ್ಯಕ್ರಮ " ನಡೆಯಲಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಬೆಳ್ತಂಗಡಿ ಇದರ ಅಧ್ಯಕ್ಷ ಸಂಪತ್ ಸುವರ್ಣ ಮುಖ್ಯ ಅತಿಥಿಗಳು. ಚಿತ್ತಾರ ಪತ್ರಿಕೆ ಸಂಪಾದಕ ಬಿ.ಗಣಪತಿ ಅಭಿನಂದಿಸಲಿದ್ದಾರೆ. ಗಾಯಕ, ಚಿತ್ರ ನಿರ್ದೇಶಕ ಕೆ.ಎಸ್.ಎಲ್.ಸ್ವಾಮಿ, ಗಾಯಕಿ ಬಿ.ಕೆ.ಸುಮಿತ್ರಾ, ಕವಿ - ಗೀತರಚನಾ ಕಾರ ಎಮ್.ಎನ್.ವ್ಯಾಸರಾವ್ ಭಾಗವಹಿಸಲಿದ್ದಾರೆ. ಸಿ.ವಿ.ಗೋಪಾಲ ಶರ್ಮ ಅವರ ನೆನಪಿನಲ್ಲಿ ನಡೆಯಲಿರುವ ಮೂರನೇ ವರುಷದ ಸ್ಮರಣ ಕಾರ್ಯಕ್ರಮಕ್ಕೆ ಸಾಹಿತ್ಯಾಸಕ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಿ.ಜಿ.ಪಾರ್ವತಿ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

0 comments:

Post a Comment