ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಇದು ಈ ಕನಸು ಸ್ಪೆಷಲ್ ರಿಪೋರ್ಟ್
ವೇಣೂರು:ವೇಣೂರ ಬಾಹುಬಲಿಗೆ ಮಹಾಮಜ್ಜನ ನಡೆದಿದೆ. ಕಳೆದ ಹನ್ನೆರಡು ವರುಷಗಳ ಹಿಂದೆ ಈ ವಿರಾಟ್ ವಿರಾಗಿಗೆ 40ವರುಷಗಳ ಬಳಿಕ ಮಹಾಮಜ್ಜನದ ಭಾಗ್ಯ ಒಲಿದು ಬಂದಿತ್ತು. ಆ ಸಂದರ್ಭದಲ್ಲಿ ಮೂರ್ತಿಯ ರಕ್ಷಣೆಯ ಕ್ರಮ ಕೈಗೊಳ್ಳಲಾಗಿದೆಯಾದರೂ ಇದೀಗ ಮೂರ್ತಿಯ ದೇಹದುದ್ದಕ್ಕೂ ಭಗ್ನಗೊಂಡ ಅಂಶಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ಅತ್ಯಂತ ಸುಂದರ, ವಿರಾಟ್ ಮೂರ್ತಿ ನಿರಂತರ ಬಿಸಿಲು, ಮಳೆ , ಚಳಿಗೆ ಹಾಗೂ ನಿಸರ್ಗವೈಪರೀತ್ಯಗಳಿಗೆ ಒಳಗಾಗಿ ಭಗ್ನವಾಗುತ್ತಿದೆ.35 ಅಡಿ ಎತ್ತರದ ಈ ಬಾಹುಬಲಿಯ ವಿರಾಟ್ ಮೂರ್ತಿಯ ಸಂರಕ್ಷಣೆಯ ಕಾರ್ಯ ನಡೆಯಬೇಕಾಗಿದೆ. ಮೂರ್ತಿಯ ಎಡ ಭುಜದ ಹಿಂಭಾಗ, ಕೈ, ಬೆನ್ನಿನ ಭಾಗವೂ ಸೇರಿದಂತೆ ಇತರ ಕಡೆಗಳಲ್ಲಿ ಗಂಭೀರ ಭಗ್ನಗಳು ಗೋಚರಿಸತೊಡಗಿವೆ.


ದಕ್ಷಿಣ ಕನ್ನಡಜಿಲ್ಲೆಯಲ್ಲಿರುವ ವೇಣೂರು ಒಂದು ಐತಿಹಾಸಿಕ ಪ್ರಸಿದ್ಧಿಯ ತಾಣ. ಪೇಟೆ ಮಧ್ಯದಲ್ಲೇ ತಾಲೂಕು ಕೇಂದ್ರವಾದ ಬೆಳ್ತಂಗಡಿ ಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಹಾದು ಹೋಗುತ್ತದೆ. ವೇಣೂರು ಏಳೂರು ಏನೂರಾಗಿ ಇದೀಗ ವೇಣೂರಾಯಿತು...ಇದು ವೇಣೂರ ಹೆಸರಿನ ಹಿಂದಿರುವ ಇತಿಹಾಸ.ಫಲ್ಗುಣೀ ನದೀ ದಂಡೆಯಲ್ಲಿ ಲಭಿಸಿದ ಶಿಲಾ ಲೇಖವೊಂದು ವೇಣೂರನ್ನು `ಏನೂರು' ಎಂದು ಕರೆದ ಬಗ್ಗೆ ಉಲ್ಲೇಖಿಸಲ್ಪಟ್ಟಿದೆ.

ಏಳೂರು ವೇಣೂರಾಯಿತು...


ಏಳು ಊರುಗಳು ಕರಗಿ ಹೋಗಿ `ಏನೂರು' ಆಯಿತು.ಮುಂದೆ ವೇಣೂರು ಎಂದು ಕರೆಯಲ್ಪಟ್ಟಿತು ಎಂಬುದು ಇದರ ಹಿಂದಿರುವ ಕಥೆ.ಏಳು ಊರು ಮಾಗಣೆಯ ಊರು “ಏನೂರು ಪತ್ತನ” ಪಟ್ಟಣವಾಗಿದ್ದು, ಕ್ರಮೇಣ ವೇಣೂರು ಪಟ್ಟಣ ಆಗಿದೆ ಎನ್ನುವ ವಾದವೂ ಇದೆ.ವೇಣೂರು ಎಂದು ಕರೆಯಲ್ಪಡುವ ಈ ಊರಿನಲ್ಲಿ ೩೯೦ ವರುಷಗಳ ಹಿಂದೆ ೭೭೦ ಜೈನ ಕುಟುಂಬಗಳು ವಾಸಿಸುತ್ತಿದ್ದವು ಎಂಬ ಮಾಹಿತಿ `ಜೈನಾಚಾರ' ಎಂಬ ಗ್ರಂಥದಲ್ಲಿ ಉಲ್ಲೇಖಿಸಲ್ಪಟ್ಟಿದೆ.ಆ ಸಂದರ್ಭದಲ್ಲಿ ವೇಣೂರು ಬೃಹತ್ ವ್ಯಾಪಾರ ಕೇಂದ್ರವಾಗಿಯೇ ಗುರುತಿಸಲ್ಪಟ್ಟಿತು. ಸೆಟ್ಟಿಗಾರರು, ಯೆಳಮೆಗಳು, ಹಲರು ಮೊದಲಾದ ಹೆಸರಿನಿಂದ ಕರೆಯಲ್ಪಡುತ್ತಿದ್ದ ವ್ಯಾಪಾರಿ ಸಂಘಗಳು ವೇಣೂರಿನಲ್ಲಿ ವ್ಯಾಪಾರ ವ್ಯವಹಾರ ನಡೆಸುತ್ತಿದ್ದವು.

ವಿರಾಟ್ ವಿರಾಗಿ


ವೇಣೂರಿನ ವಿಶೇಷ ಆಕರ್ಷಣೆಯೆಂದರೆ ಬಾಹುಬಲಿ ಮೂರ್ತಿ . ಅಜಿಲ ಮನೆತನದ ತಿಮ್ಮರಾಜನು ಚಾರುಕೀರ್ತಿಗಳ ಉಪದೇಶದಿಂದ ೧೬೦೩ರಲ್ಲಿ ಸ್ಥಾಪಿಸಿದ ಎಂದು ಶಾಸನ ಹೇಳುತ್ತದೆ. ೩೫ ಅಡಿ ಎತ್ತರ.ವಿಗ್ರಹ ಬಲ ಬದಿಯಲ್ಲಿರುವ ಸಂಸ್ಕೃತ ಶಾಸನದಲ್ಲಿ “ಚಾಮುಂಡವಂಶದ ತಿಮ್ಮರಾಜನು ಶ್ರವಣ ಬೆಳಗೊಳದ ತನ್ನ ಗುರುಗಳಾದ ಚಾರುಕೀರ್ತಿಯವರ ಅಪ್ಪಣೆ ಪ್ರಕಾರ ಭುಜಬಲಿಯ ಪ್ರತಿಮೆಯನ್ನು ಶಾಲಿವಾಹನಶಕ ೧೫೨೫ ನೇ ಶೋಭಕೃತ್ಸಂವತ್ಸರ ಪಾಲ್ಗುಣಮಾಸ, ಶುಕ್ಲಪಕ್ಷ, ದಶಮೀತಿಥಿ, ಗುರುವಾಸರ, ಪುಷ್ಯಾನಕ್ಷತ್ರ, ಮಿಥುನಲಗ್ನ (ಬೆಳಗ್ಗೆ ೧೧.೩೦ರಿಂದ ಮಧ್ಯಾಹ್ನ ೧.೪೦ರಒಳಗೆ)’ (ಕ್ರಿ.ಶ. ೧೬೦೪ನೇ ಮಾರ್ಚ್ ೧ನೇ ತಾರೀಕು ಗುರುವಾರ) ಪ್ರತಿಷ್ಠಾಪಿಸಿದ.ಎಲ್ಲ ಬಾಹುಬಲಿ ವಿಗ್ರಹಗಳೂ ಗುಡ್ಡ- ಬೆಟ್ಟದಲ್ಲಿ ಪ್ರತಿಷ್ಠಾಪಿಸಿದ್ದರೆ, ವೇಣೂರಿನ ಈ ಬಾಹುಬಲಿ ಮೂರ್ತಿ ಮಾತ್ರ ಭೂಮಟ್ಟದಲ್ಲಿಯೇ ಇದೆ. ಆದ್ದರಿಂದ ಸುಲಭದಲ್ಲಿ ಬಾಹುಬಲಿ ದರ್ಶನ ಮಾಡಬಹುದಾದ ಅಪರೂಪದ ಕ್ಷೇತ್ರ ಇದಾಗಿದೆ. ವೇಣೂರಿನಲ್ಲಿ ಶ್ರೀ ಆದೀಶ್ವರ ಸ್ವಾಮಿ ಬಸದಿ, ಶಾಂತೀಶ್ವರ ಸ್ವಾಮಿ ಬಸದಿ, ೨೪ ತೀರ್ಥಂಕರರ ಬಸದಿ, ಅಕ್ಕಂಗಳ ಬಸದಿ, ಭಿನ್ನಾಣಿ ಬಸದಿ ಎಂಬ ೭ ಜಿನ ಚೈತ್ಯಾಲಯಗಳಿವೆ.ಕಾರ್ಕಳದ ಗೋಮಟ ವಿಗ್ರಹಮಾಡಿದ "ವೀರ ಶಂಭು ಕಲ್ಕುಡ" ಕುಟುಂಬದವರನ್ನು ಕರೆಯಿಸಿ ವೇಣೂರಿನ ಸಮೀಪದ (ಕಂಬಳ ನಡೆಯುವ ಸ್ತಳದ ಹತ್ತಿರ ) ಕಲ್ಯಾಣಿ ಎಂಬ ಸ್ಥಳದಲ್ಲಿ ಏಕಶಿಲೆಯಿಂದ ಗೋಮಟೇಶ್ವರ ಮೂರ್ತಿಯನ್ನು ಕೆತ್ತಿಸಿದನು.ತುಳುನಾಡಿನ ಶಿಲ್ಪಿ ವೀರ ಶಂಭು ಕಲ್ಕುಡನು ವೇಣೂರು ಬಾಹುಬಲಿ ಮೂರ್ತಿಯನ್ನು ಒಂದು ಕೈ,ಒಂದು ಕಾಲಿನಿಂದ,ಒಂದು ರಾತ್ರಿ ಬೆಳಗಾಗುವುದರೊಳಗೆ ನಿರ್ಮಿಸಿ ಸ್ತಾಪಿಸಿದನೆಂದು ತುಳುನಾಡಿನ ಸಂದಿ,ಪಾಡ್ದನಗಳಲ್ಲಿ ಹೇಳಲ್ಪಡುತ್ತದೆ.

- ಟೀಂ ಈ ಕನಸು.

0 comments:

Post a Comment