ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
8:46 PM

ಚೆರಿ ಮರದ ಪಯಣ

Posted by ekanasu

ವೈವಿಧ್ಯ

ಧಾರವಾಡದಿಂದ ಬೆಂಗಳೂರಿಗೆ ವಾಸ್ತವ್ಯ ಬದಲಾಯಿಸಲು ನಿರ್ಧರಿಸಿದಾಗ ತಕ್ಷಣ ಕಣ್ಣೆದುರು ಬಂದದ್ದು ಚೆರಿಮರ.

ಕಳೆದ ನಾಲ್ಕೂವರೆ ವರ್ಷಗಳಿಂದ ಜೊತೆಯಲ್ಲಿದ್ದು ಈಗ ಅದನ್ನು ಹಾಗೇ ಬಿಟ್ಟು ಹೋಗುವುದೆಂದರೆ ಚಿನುವಾನಿಗಷ್ಟೆ ಅಲ್ಲ ನಮಗೂ ಕಷ್ಟವೆನಿಸಿತ್ತು. ಇಷ್ಟು ವರ್ಷ ನಮ್ಮದೇ ಮನೆಯೆಂಬಂತೆ ವಾಸಿಸಲು ಅವಕಾಶ ಮಾಡಿಕೊಟ್ಟ ಮನೆಯ ಒಡೆಯರಾದ ಶಿರಹಟ್ಟಿ ದಂಪತಿ ಅಪರೂಪದ ಮನಸ್ಸಿನವರು. ಸತತ ನಿರ್ವಹಣೆ ಅಗತ್ಯವಿರುವ ಈ ಮರ ನಿವೃತ್ತಿಯ ನಂತರ ಮುಂದಿನ ವರ್ಷ ಇಲ್ಲಿ ನೆಲೆಸಲಿರುವ ಅವರಿಗೆ ಸೂಕ್ತವೆನಿಸಲಿಕ್ಕಿಲ್ಲ ಎಂಬುದು ನಮಗೆ ಗೊತ್ತೇ ಇತ್ತು.

ದಶಕದ ಹಿಂದೆ ಡಾ. ಸಂಜೀವ ಕುಲಕರ್ಣಿಯವರು ಇನ್ನೆಲ್ಲೋ ನೆಲಸಮವಾಗಲಿದ್ದ ಕೆಲವು ತೆಂಗು ಹಾಗೂ ಮಾವಿನ ಮರಗಳನ್ನು ತಮ್ಮ ತೋಟದಲ್ಲಿ ಮರುನೆಟ್ಟ ವಿಷಯ ನಮಗೆ ತಿಳಿದಿತ್ತು. ಆ ರೀತಿಯಲ್ಲೇ ಚೆರಿ ಮರವನ್ನು ಚಿನುವಾನ ಶಾಲೆ ’ಬಾಲ ಬಳಗ’ಕ್ಕೆ ಕಳುಹಿಸುವ ಯೋಜನೆ ಮೊಳಕೆಯೊಡೆಯಿತು. ಮುಂದೆಂದೋ ಶಾಲೆಗೆ ಭೇಟಿ ನೀಡುವಾಗ ಅಲ್ಲಿ ತನ್ನದೇ ಆದ ಒಂದು ಮರವಿರುತ್ತದೆ ಎಂಬ ಕಲ್ಪನೆಗೆ ಚಿನುವಾ ಪುಳಕಗೊಂಡಿದ್ದ. ತಡ ಮಾಡದೆ ಅವನ ’ಸಂಜೀವ ಮಾಮಾ’ನ ಬಳಿ ಒಪ್ಪಿಗೆ ಪಡೆದ. ಪೂರ್ಣ ಆಸಕ್ತಿ ವಹಿಸಿದ ಸಂಜೀವ ಕುಲಕರ್ಣಿ ಮರ ನೆಡಲು ಸೂಕ್ತ ಜಾಗವನ್ನೂ ಆರಿಸಿ, ಈ ಕಾರ್ಯದಲ್ಲಿ ಪರಿಣತಿ ಇರುವ ದ್ಯಾಮಪ್ಪ ಅವರನ್ನು ಸಂಪರ್ಕಿಸಿದರು.

ಎರಡು ತಿಂಗಳ ಹಿಂದೆಯೇ ಈ ಕುರಿತು ನಿರ್ಧಾರವಾಗಿತ್ತು. ಮಳೆಗಾಲ ಆರಂಭಕ್ಕೆ ಸ್ವಲ್ಪ ಮೊದಲು ಮರ ನೆಡುವುದು ಸೂಕ್ತ ಎನ್ನುವುದು ತಿಳಿದೇ ಇತ್ತು. ಆದರೆ ನಾವು ಊರು ಬಿಡುವ ಮುನ್ನ ಆ ಮರ ಹೊಸ ಜಾಗದಲ್ಲಿ ಬೇರೂರಬೇಕು ಎನ್ನುವುದು ನಮ್ಮ ಆಸೆ.

ಚೆರಿ ಮರದ ನಿರ್ವಹಣೆ ಮಾಡುತ್ತಿದ್ದ ಸಿದ್ದಪ್ಪನಿಗೆ ಮರ ಜಾಗ ಬದಲಾಯಿಸುತ್ತಿರುವುದನ್ನು ಹೇಳಿದರೆ ಅವನು ಕೇಳಿದ ಮೊದಲ ಪ್ರಶ್ನೆ - ’ಪುಕ್ಕಟೆ ಖರ್ಚು ಯಾಕ್ ಮಾಡ್ತೀರಿ? ನರ್ಸರಿಯಲ್ಲಿ ಬೇಕಾದಷ್ಟು ಸಿಕ್ತಾವಲ್ರಿ’. ಸುಲಭದಲ್ಲಿ ಚಿಗುರೊಡೆಯಬಲ್ಲ ಚೆರಿ ಗಿಡವನ್ನು, ಹೊತ್ತೊಯ್ಯುವ ಅಗತ್ಯವಿಲ್ಲ ಎಂಬುದು ಅವರ ಭಾವನೆ. ಮರ ಕಡಿದರೆ ಸಾಕಷ್ಟು ಕಟ್ಟಿಗೆ ಸಿಗುತ್ತದೆ ಅಂಬ ಭಾವವೂ ಮಾತಿನಲ್ಲಿ ಸ್ಫುರಿಸಿತ್ತು. ಅದರ ನೆರಳಲ್ಲೇ ನಿಂತು ಮಾತನಾಡುವಾಗ ಆ ಮರ ಎಷ್ಟು ನೋವುಂಡಿರಬಹುದು ಎಂದೆಣಿಸಿದ್ದು ಸುಳ್ಳಲ್ಲ. ಯಾವ ಮರ ನೆಟ್ಟರೂ, ಅದು ಚಿನುವಾನ ಮರ ನೆಟ್ಟಂತಲ್ಲ ಎಂದು ಹೇಳಿ ಅವನನ್ನು ಕಳುಹಿಸಿದ್ದಾಯಿತು.


ಫೆಬ್ರವರಿ ೧೬, ೨೦೧೨ರ ಸಾಯಂಕಾಲ ಮರವನ್ನು ಪರಿಶೀಲಿಸಲು ಬಂದ ದ್ಯಾಮಪ್ಪ ತಕ್ಷಣ ’ಒಳ್ಳೆ ಕೆಲಸ ಮಾಡಿದ್ರಿ. ಮನುಷ್ಯರ ಜೀವ ಉಳಿಸಿದ್ದಕ್ಕಿಂತ ಉತ್ತಮ ಕೆಲಸ ಮರದ ಜೀವ ಉಳಿಸೋದು’ ಎಂದು ಹೇಳಿದರು. ಕಳೆದ ೨೦ ವರ್ಷಗಳಲ್ಲಿ ೫೦ಕ್ಕೂ ಹೆಚ್ಚು ಮರಗಳನ್ನು ಮರುನೆಟ್ಟಿರುವ ನವಲೂರಿನ ದ್ಯಾಮಪ್ಪನಿಗೆ ಈ ಕೆಲಸ ಸಂತಸ ನೀಡಿದೆಯಂತೆ. ಮರಗಳ ಜೀವನ ಹಾಳುಮಾಡುವ ಹಕ್ಕು ಮಾನವರಿಗಿಲ್ಲ ಎನ್ನುತ್ತಾರೆ ದ್ಯಾಮಪ್ಪ. ಅವರು ನೆಟ್ಟ ಮರಗಳಲ್ಲಿ ಹೆಚ್ಚಿನವು ತೆಂಗು ಹಾಗೂ ಮಾವು. ಚಿಕ್ಕು, ಸೀಬೆ ಮುಂತಾದವೂ ಹೊಸ ಜೀವ ಪಡೆದಿವೆ.

ಮರವೊಂದನ್ನು ಬೇರು ಸಮೇತ ಕೀಳುವಾಗ ಅದರ ತಾಯಿ ಬೇರು ಹಾಗೂ ಪುಟ್ಟ ’ಜೀವ ಬೇರು’ಗಳು ಸುರಕ್ಷಿತವಾಗಿಡುವುದು ಮುಖ್ಯ. ಅದಕ್ಕಾಗಿ ಮರದ ಗಾತ್ರ, ಜಾತಿ ನೋಡಿಕೊಂಡು ಸಾಕಷ್ಟು ಅಗಲಕ್ಕೆ ಗುಳಿ ತೋಡುತ್ತಾರೆ. ರಸ್ತೆ ಅಗಲೀಕರಣದಲ್ಲಿ ಜೀವ ಕಳೆದುಕೊಳ್ಳುವ ಮರಗಳಿಗೂ ಈ ವ್ಯವಸ್ಥೆ ಹೊಂದಲಿಕ್ಕಿಲ್ಲವೇ ಎಂದು ಕೇಳಿದರೆ, ಕೆಲವು ಮರಗಳು ಅಷ್ಟು ಸುಲಭದಲ್ಲಿ ಸ್ಥಳಾಂತರಕ್ಕೆ ಒಗ್ಗಿಕೊಳ್ಳುವುದಿಲ್ಲ ಎಂದು ವಿವರಿಸಿದರು ದ್ಯಾಮಪ್ಪ. ಮನುಷ್ಯರೇ ತಮ್ಮ ಬೇರುಗಳನ್ನು ಸ್ಥಳಾಂತರಿಸಲು ಕಷ್ಟಪಡುವಾಗ ಚಲನಶೀಲತೆ ಇಲ್ಲದ ಮರಗಳು ಹಠ ಮಾಡುವುದರಲ್ಲಿ ವಿಶೇಷವೇನಿಲ್ಲ ಎಂದೆನಿಸಿತು.

ಮರುದಿನ ದ್ಯಾಮಪ್ಪ ಅವರ ಸಹಾಯಕರೊಂದಿಗೆ ಮರದ ಬೇರು ಸಡಿಲಿಸುವ ಕಾರ್ಯಪ್ರಾರಂಭಿಸಿದಾಗ ಮನಸ್ಸಿಗೆ ತುಂಬಾ ಕಷ್ಟವೆನಿಸಿತ್ತು. ಮಗುವನ್ನು ಅನಿವಾರ್ಯವಾಗಿ ಹಾಸ್ಟೆಲ್‌ಗೆ ಕಳುಹಿದಂತೆಯೂ ಅನಿಸಿತ್ತು. ಮರದ ಗೆಲ್ಲು ಕಡಿಯದೇ ಒಯ್ಯಬೇಕೆಂಬುದು ನನ್ನ ಬೇಡಿಕೆ. ಆಗ ದ್ಯಾಮಪ್ಪ ಪ್ರಮುಖವಾದುವನ್ನು ಬಿಟ್ಟು ಎಲ್ಲಾ ಗೆಲ್ಲುಗಳನ್ನೂ, ಎಲೆಗಳನ್ನೂ ಸವರುವುದು ಅಗತ್ಯವೆಂದು ವಿವರಿಸಿದರು. ಇಂತಹ ಸಂದರ್ಭಗಳಲ್ಲಿ ಬೇರುಗಳು ನಿಶ್ಯಕ್ತವಾಗುವುದರಿಂದ ಅವಕ್ಕೆ ನೀರು/ಆಹಾರವನ್ನು ಹೀರುವ ಸಾಮರ್ಥ್ಯವಿರುವುದಿಲ್ಲ. ಚಳಿಗಾಲದಲ್ಲಿ ಕೆಲವು ಮರಗಳು ಎಲೆಗಳನ್ನುದುರಿಸಿ ಜೀವದ್ರವ್ಯ ಉಳಿಸಿಕೊಳ್ಳುವಂತೆ, ಈ ಮರವೂ ಸದ್ಯದ ಮಟ್ಟಿಗೆ ತನ್ನ ನಿಬಿಡ ಗೆಲ್ಲುಗಳನ್ನು ಕಳೆದುಕೊಂಡಿದೆ. ಉಳಿಸಿರುವ ಕೆಲವೇ ಕೆಲವು ಚಿಗುರುಗಳು ನಮ್ಮನ್ನು ಸಮಾಧಾನಪಡಿಸುತ್ತಿವೆ.

ಹೀಗೆ ಟೊಂಗೆ ಕಳಚಿಕೊಂಡು, ಬೇರು ಸಡಿಲಗೊಂಡು, ಅಲ್ಲಲ್ಲಿ ಗಾಯಗೊಂಡಿರುವ ಈ ಮರಕ್ಕೆ ಮಣ್ಣುಬೆರೆತ ಸೆಗಣಿ ಆಂಟಿಸೆಪ್ಟಿಕ್. ನೋವಾದೆಡೆಯೆಲ್ಲಾ ಅದನ್ನು ಲೇಪಿಸುತ್ತಾರೆ.

ಹೀಗೆ ಮನೆ ಬಿಟ್ಟು ಹೊರಡಲು ತಯಾರಾದ ಮರವನ್ನು ನೋಡಲು ರಸ್ತೆಯ ಮಂದಿಯೆಲ್ಲ ನೆರೆದಿದ್ದರು. ನನ್ನ ಸ್ನೇಹಿತೆಯರು ಹಾಗೂ ಚಿನುವಾನ ಗೆಳೆಯರಿಗೆ ಆತ್ಮೀಯರೊಬ್ಬರನ್ನು ಬೀಳ್ಕೊಡುವ ಬಿಕ್ಕಳಿಕೆ. ಮರವನ್ನು ಮತ್ತೆ ಮತ್ತೆ ಮುಟ್ಟುವ ತವಕ. ಕೆಲವರಿಗೆ ಅದು ಮತ್ತೆ ಬದುಕುವ ಕುರಿತು ಆತಂಕ. ಇನ್ನೂ ಕೆಲವರಿಗೆ ಅದು ಇನ್ನೊಂದು ಕಡೆಯಲ್ಲಿ ಜೀವರಾಶಿಯನ್ನು ಸಲಹುವ ಕುರಿತು ಸಂತಸ. ಹೀಗೆ ವಿವಿಧ ಭಾವಗಳು ಒಟ್ಟಿಗೇ ಮೇಳೈಸಿದ್ದವು.

ಮರ ಹೊರಡುವ ಹಿಂದಿನ ರಾತ್ರಿ ಚಿನುವಾನ ಮನಸ್ಸಲ್ಲೊಂದು ಪ್ರಶ್ನೆ ಎದ್ದಿತು. ಈ ಮರಕ್ಕೆ ಬರುವ ಹಕ್ಕಿಗಳು ಮುಂದೆ ಏನು ಮಾಡ್ತಾವೆ? ಸುತ್ತಲೂ ಹತ್ತಾರು ಮರಗಳಿದ್ದರೂ, ಫಲಭರಿತವಾದ ಈ ಮರವೇ ಪಕ್ಷಿಗಳ ಪ್ರಮುಖ ನೆಲೆಯಾಗಿದ್ದಿತು. ’ಈ ಮರದ ವಿಳಾಸ ಬದಲಾಗಿದೆ ಎಂದು ಒಂದು ಫಲಕ ಹಾಕೋಣ’ ಎಂದೆನಾದರೂ ಅದು ಮಾತು ಮರೆಸುವ ಪ್ರಯತ್ನವೆಂದು ಅವನಿಗೂ ಗೊತ್ತಾಗಿತ್ತು. ಪೀಟರ್ ಟಾಂಪ್‌ಕಿನ್ಸ್ ಹಾಗೂ ಕ್ರಿಸ್ಟೊಫರ್ ಬರ್ಡ್ ಅವರು ಬರೆದ ’ದ ಸೀಕ್ರೆಟ್ ಲೈಫ್ ಆಫ್ ಪ್ಲಾಂಟ್ಸ್’ ಪುಸ್ತಕದ ಕೆಲವು ಉಲ್ಲೇಖಗಳೂ ನೆನಪಿಗೆ ಬಂದವು. ನಮ್ಮ ಈ ಕ್ರಿಯೆಗೆ ಮರದ ಪ್ರತಿಕ್ರಿಯೆಯ ಕುರಿತು ಯೋಚಿಸುವುದೂ ಕಷ್ಟವೆನಿಸಿತ್ತು. ಆದರೆ ಮುಂದಿನ ಒಂದೆರಡು ಗಂಟೆಗಳಲ್ಲಿ ಗಮ್ಯ ಸೇರಿದ ಮೇಲೆ ಅದು ಖಂಡಿತಾ ಸಂತೋಷಪಡುತ್ತದೆ ಎಂದು ನಮಗನಿಸಿತ್ತು.

ಬೇರು ಸಡಿಲಿಸಿ ನೆಲಕ್ಕುರುಳಿದ ಮರವನ್ನು ಟ್ರಾಕ್ಟರ್‌ಗೆ ಏರಿಸುವುದು ನಾವೆಣಿಸಿಕೊಂದಷ್ಟು ಸುಲಭವಾಗಿರಲಿಲ್ಲ. ಮಧ್ಯದಲ್ಲಿದ್ದ ಕಾಂಪೌಂಡ್ ತಡೆಯೊಡ್ಡುತ್ತಿತ್ತು. ಬಾಲಬಳಗದಿಂದ ಒಂಭತ್ತು-ಹತ್ತನೇ ತರಗತಿಯಲ್ಲಿ ಓದುತ್ತಿರುವ ಹತ್ತಾರು ಮಕ್ಕಳು ಬಂದು ಕೈಸೇರಿಸಿದ ಮೇಲೆ ಟ್ರಾಕ್ಟರ್ ಏರಿತು ಈ ಮರ. ಮರದ ಸುತ್ತಲೂ ನೆರೆದ ಮಕ್ಕಳ ಮುಖಗಳು ಖುಷಿಯಿಂದ ಅರಳಿದ್ದವು. ಹೀಗೆ ಮರಕ್ಕೆ ಜಯಕಾರ ಮಾಡುತ್ತಾ ನಾಲ್ಕು ಕಿಲೋಮೀಟರ್ ದೂರದ ಶಾಲೆಯ ಆವರನಕ್ಕೆ ಬಂದಾಗ ಅಲ್ಲಿ ಸಿಕ್ಕಿದ ಸ್ವಾಗತವಂತೂ ನಿರೀಕ್ಷೆಗೂ ಮೀರಿದ್ದು. ಎಲ್ಲ ಮಕ್ಕಳೂ ಸಾಲಾಗಿ ನಿಂತು ಕೊಂಬು ಕಹಳೆ, ಡ್ರಮ್ಸ್ ಜೊತೆ ಏರಿದ ಉತ್ಸಾಹದಲ್ಲಿ ಮರವನ್ನು ತಮ್ಮದಾಗಿಸಿಕೊಂಡರು. ಅಲ್ಲಿ ಈಗಾಗಲೇ ಇರುವ ಸಾಲು ಚೆರಿ ಮರಗಳ ನಡುವೆ ಪ್ರಶಸ್ತವಾದ ಜಾಗದಲ್ಲಿ ನಮ್ಮ ಮರ ನೆಲೆಕಂಡಿತು.

- ಅನಿತಾ ಪೈಲೂರು

0 comments:

Post a Comment