ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಗೋಕರ್ಣ: ಐತಿಹಾಸಿಕ ಶೈವಕ್ಷೇತ್ರಗಳಲ್ಲಿ ಅತ್ಯಂತ ಪ್ರಾಚೀನವಾದ ಪರಶಿವನ ಆತ್ಮಲಿಂಗದ ಸಾನ್ನಿಧ್ಯವನ್ನು ಹೊಂದಿರುವ ಸಾರ್ವಭೌಮ ಶ್ರೀ ಮಹಾಬಲೇಶ್ವರನ ಸ್ಥಾನವಾದ ಗೋಕರ್ಣದಲ್ಲಿ ಮಹಾಹಿವರಾತ್ರಿಯ ಪುಣ್ಯಪರ್ವದ ಸಂದರ್ಭದಲ್ಲಿ ಸಹಸ್ರ ಸಹಸ್ರ ಸಂಖ್ಯೆಯ ಭಕ್ತರು ಆತ್ಮಲಿಂಗ ರೂಪಿಯಾದ ಪರಮೇಶ್ವರನನ್ನು ಅರ್ಚಿಸಿ ಆರಾಧಿಸಿದರು.ನೆರೆ ಜಿಲ್ಲೆಗಳಾದ ಉಡುಪಿ, ಮಂಗಳೂರು, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲದೆ ಮಹಾರಾಷ್ಟ್ರ ಕೇರಳಗಳಿಂದಲೂ ಬಂದ ಆಸ್ತಿಕಭಕ್ತರು ಶಂಕರನನ್ನು ದರ್ಶಿಸಿ ಪೂಜಿಸಿದರು. ೧೯ರ ರಾತ್ರಿಯಿಂದಲೇ ಮಹಾಗಣಪತಿ, ಮಹಾಬಲೇಶ್ವರ ದೇವಾಲಯಗಳ ಮುಂಭಾಗದಲ್ಲಿ ಅತ್ಯಂತ ಉದ್ದದ ಸರತಿಸಾಲುಗಳಲ್ಲಿ ಜನರು ದರ್ಶನಕ್ಕಾಗಿ ಕಾಯುತ್ತಿದ್ದರು.


ಈ ವರ್ಷದ ಶಿವರಾತ್ರಿಯು ಈಶ್ವರಾರಾಧನೆಗೆ ಪ್ರಶಸ್ತವಾದ ಸೋಮವಾರದಂದು ಬಂದಿದ್ದರಿಂದ ಭಕ್ತರ ಸಂಖ್ಯೆ ಅತ್ಯಂತ ಹೆಚ್ಚಾಗಿತ್ತು. ಶಿವರಾತ್ರಿಯ ಮಹೋತ್ಸವದಲ್ಲಿ ದೇವಾಲಯದ ವತಿಯಿಂದ ಬಂದ ಭಕ್ತರೆಲ್ಲರಿಗೂ ಅಮೃತಾನ್ನ ವಿಭಾಗದಲ್ಲಿ ಉಪಾಹಾರ ಹಾಗೂ ಭೋಜನವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಜಿಲ್ಲೆಯ ಆರಕ್ಷಕ ವಿಭಾಗವು ಶಾಂತಿ ಸುವ್ಯವಸ್ಥೆಯ ಹೊಣೆಯನ್ನು ಯಶಸ್ವಿಯಾಗಿ ನಿರ್ವಹಿಸಿತು.

ಚಿಟ್ಟಾಣಿ ರಾಮಚಂದ್ರ ಹೆಗಡೆ ಯವರಿಗೆ "ಸಾರ್ವಭೌಮ"ಪ್ರಶಸ್ತಿ

ಶ್ರೀಕ್ಷೇತ್ರ ಗೋಕರ್ಣದ ಮಹಾಬಲೇಶ್ವರ ದೇವರ ಅನುಗ್ರಹರೂಪವಾಗಿ ಪ್ರತಿವರ್ಷ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಮಹಾಶಿವರಾತ್ರಿಯ ಪರ್ವದಲ್ಲಿ ನೀಡುವ "ಸಾರ್ವಭೌಮ" ಪ್ರಶಸ್ತಿಗೆ ನಾಡಿನ ಸುಪ್ರಸಿದ್ಧ ಯಕ್ಷಗಾನ ಲೋಕದ ಮೇರು ಕಲಾವಿದರೂ ಪದ್ಮಶ್ರೀ ಪ್ರಶಸ್ತಿಪುರಸ್ಕೃತರೂ ಆದ ಶ್ರೀ ರಾಮಚಂದ್ರ ಹೆಗಡೆ ಚಿಟ್ಟಾಣಿಯವರು ಆಯ್ಕೆಯಾಗಿದ್ದಾರೆ. ೨೨ ಬುಧವಾರದಂದು ಬೆಳಿಗ್ಗೆ ೧೧ ಘಂಟೆಗೆ ಗೋಕರ್ಣದ ಸಾಗರತೀರದಲ್ಲಿ ನಿರ್ಮಿಸಲಾದ ರಾಮಕಥಾ ವೇದಿಕೆಯಲ್ಲಿ ವಿಶೇಷವಾಗಿ ಆಯೋಜಿಸಲಾದ ಸಭೆಯಲ್ಲಿ ಪರಮಪೂಜ್ಯಶ್ರೀ ಶ್ರೀಗಳು ಶ್ರೀ ಹೆಗಡೆಯವರಿಗೆ "ಸಾರ್ವಭೌಮ"
ಪ್ರಶಸ್ತಿಯನ್ನಿತ್ತು ಅನುಗ್ರಹಿಸುವರು. ಸಮಸ್ತ ಕಲಾಭಿಮಾನಿಗಳು, ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರಬೇಕಾಗಿ ಶ್ರೀ ದೇವಾಲಯದ
ಪ್ರಕಟಣೆಯಲ್ಲಿ ಕೋರಲಾಗಿದೆ.


ಧರ್ಮರೂಪದ ಮಂಗಳದ ಮುಂಬೆಳಕೇ ಶಿವರಾತ್ರಿ - ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀ

ನಮ್ಮ ಬದುಕಿನಲ್ಲಿ ಅನೇಕರಾತ್ರಿಗಳನ್ನು ನಾವು ಕಂಡಿದ್ದೇವೆ. ಆ ಎಲ್ಲ ರಾತ್ರಿಗಳಲ್ಲಿ ಪೂರ್ಣ ಕತ್ತಲೇ ತುಂಬಿದೆ. ಆದರೆ ಈ ಶಿವರಾತ್ರಿ ಮಾತ್ರ ಹಾಗಲ್ಲ. ಇದು ನಮ್ಮ ಜೀವನದಲ್ಲಿ ಮಂಗಳವನ್ನು ಶುಭವನ್ನು ಕೊಡುವ ರಾತ್ರಿ. ಇರುಳೆಲ್ಲ ಎಚ್ಚರವಾಗಿದ್ದು ಪರಶಿವನನ್ನು ಹೃದಯದಲ್ಲಿ ತುಂಬಿಕೊಂಡು ಅವನನ್ನು ಆರಾಧಿಸುವ ಪುಣ್ಯಪರ್ವವೇ ಶಿವರಾತ್ರಿ. ಲೋಕಹಿತಂಕರನಾದ ಶಂಕರ ಈ ಶಿವರಾತ್ರಿಯ ಸಂದರ್ಭದಲ್ಲಿ ಲೋಕದ ಎಲ್ಲ ಶೈವಸಂಕೇತಗಳಲ್ಲಿ ಸಂಪೂರ್ಣಸಾನ್ನಿಧ್ಯವನ್ನು ಕರುಣಿಸಿ ನಮಗೆ ಸಂತೋಷವನ್ನು ನೀಡುವ ಆತ ಬೇಗನೇ ಸಂತುಷ್ಟನಾಗುವ "ಆಶುತೋಷ"ನೂ ಹೌದು. ಎಲ್ಲ ಘೋರಗಳನ್ನು ದೂರ ಮಾಡುವ ಅಘೋರನೂ ಹೌದು. ಈ ಪುಣ್ಯಕಾಲದಲ್ಲಿ ಶಿವನಿಗೆ ಅತ್ಯಂತಪ್ರಿಯನಾದ ರಾಮನ ಕಥೆಯನ್ನು ಕೇಳಿ ನಮ್ಮನ್ನು ಸಂಸ್ಕರಿಸಿಕೊಳ್ಳುವುದೂ ಅವನ ಆರಾಧನೆಯ ಒಂದು ಭಾಗವೇ ಎಂದು ಪರಮಪೂಜ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಹೇಳಿದರು.

ಇಂದು ಗೋಕರ್ಣದ ಸಾಗರ ತೀರದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಆಯೋಜಿತವಾದ "ರಾಮಕಥಾ" ದಲ್ಲಿ ಪ್ರವಚನವನ್ನು ಅನುಗ್ರಹಿಸುತ್ತಿದ್ದ ಪೂಜ್ಯಶ್ರೀಗಳು ನಮ್ಮ ಬದುಕಿನಲ್ಲಿ ಸರ್ವದಾ ನಾವು ಸುಖಾಪೇಕ್ಷಿಗಳು. ಆದರೆ ಆ ಸುಖಕ್ಕೆ ಮೂಲ ಕಾರಣವೇನೆಂಬುದನ್ನು ತಿಳಿಯದೆ ಯಾವಯಾವುದೋ ವಸ್ತುಗಳನ್ನು ಸುಖಸಾಧನಗಳೆಂದು ಭ್ರಮಿಸಿ ಅದರತ್ತ ಓಡುತ್ತಿದ್ದೇವೆ. ವಾಸ್ತವವಾಗಿ ಎಲ್ಲ ರೀತಿಯ ಸುಖಗಳಿಗೆ ಮೂಲ ಕಾರಣ ಧರ್ಮ. ನಾವು ಧಾರ್ಮಿಕರಾಗಿ ವಿಹಿತವಾದ ಕರ್ಮಗಳಲ್ಲಿ ಆಸಕ್ತರಾಗಿ ಅಸೂಯಾ ಅಹಂಕಾರ, ದರ್ಪ ಮೊದಲಾದ ದುರ್ಗುಣಗಳನ್ನು ದೂರೀಕರಿಸಿದರೆ ಮಾತ್ರ ಅಂತಹ ಅಪೇಕ್ಷಿತ ಸುಖಲಾಭವಾಗುತ್ತದೆ. ಆದರೆ ಕೆಲವೊಮ್ಮೆ ಬದುಕಿನಲ್ಲಿ ಬಂದ ಅಧಿಕಾರ ಅಂತಸ್ತುಗಳು ನಮ್ಮ ನಿಜರೂಪವನ್ನು ಮರೆಸಿಬಿಡುತ್ತವೆ. ಪರರನ್ನು ನಿಕೃಷ್ಟವಾಗಿ ಕಾಣುವ ಪ್ರವೃತ್ತಿ ಬೆಳೆಯತೊಡಗುತ್ತದೆ. ಹಿಂದೆ ಪ್ರಜಾಪತಿಯಾದ ದಕ್ಷನಿಗಾದದ್ದು ಇದೇ ಸ್ಥಿತಿ. ಸತೀದೇವಿಯ ತಂದೆಯಾದ ಅವನು ಅಧಿಕಾರದ ಅಮಲಿನಲ್ಲಿ ಮರೆತ. ಲೋಕಾಧೀಶನಾದ ಸಕಲ ಐಶ್ವರ್ಯದ ಖನಿಯಾದ ಅಳಿಯನಾದ ಶಂಕರನನ್ನು ಅಪಮಾನಿಸಿದ. ತಂದೆಯಿಂದ ನೊಂದ ಮಗಳು ಸತೀದೇವಿಯೂ ಸಹ ಅವನಿಂದ ಅಪಮಾನಿತಳಾದಳು. ಸ್ವತಹ ಸತೀದೇವಿಯಂತಹ ಮಗಳನ್ನು ತಪಸ್ಸನ್ನು ಮಾಡಿ ಪಡೆದವ ದಕ್ಷ. ಆದರೆ ಮುಂದೆ ಅಧಿಕಾರದ ಅಮಲಿನಲ್ಲಿ ಶಿವನ ಸ್ವರೂಪವನ್ನು ಮರೆತ. ಇದೇ ಮುಂದೆ ಸತೀದೇವಿಯನ್ನು ಪಾರ್ವತಿಯ ರೂಪದಲ್ಲಿ ಪುನಹ ವರಿಸಲು ಕಾರಣವಾಯಿತು. ಭಗವದ್ವಿಷಯಕವಾದ ಅಪಚಾರ ಎಂತಹ ಎತ್ತರದಲ್ಲಿರುವ ವ್ಯಕ್ತಿಯನ್ನೂ ಕೂಡಲೇ ಅಧಃಪತನದತ್ತ ತಳ್ಳುತ್ತದೆ ಎಂಬುದಕ್ಕೆ ಜ್ವಲಂತ ದೃಷ್ಟಾಂತವಾಯಿತು ಎಂದು ನುಡಿದ ಪೂಜ್ಯಶ್ರೀಗಳು ನಮ್ಮ ಜೀವನದಲ್ಲಿ ಸುಖಬೇಕೆಂದಾದರೆ ಧರ್ಮವನ್ನು ಅನುಸರಿಸಬೇಕು.ಧರ್ಮಮಾರ್ಗಚ್ಯುತರಾದವರಿಗೆ ಸಂತೋಷವು ಎಂದೂ ದೊರೆಯಲಾರದು ಎಂದೂ ಹೇಳಿದರು.

ಶ್ರೀಪಾದ ಭಟ್ಟ,ಪ್ರೇಮಲತಾ ದಿವಾಕರ ಇವರ ಸುಶ್ರಾವ್ಯ ಗಾಯನ,ಗೋಪಾಲಕೃಷ್ಣ ಹೆಗಡೆ ಯವರ ಗಂಭೀರತಬಲಾವಾದನ ಪ್ರಕಾಶ ಕಲ್ಲಾರೆಮನೆಯವರ ಕೊಳಲು, ಗೌರೀಶ ಯಾಜಿಯವರ ಹಾರ್ಮೋನಿಯಂ ವಾದನ, ಗಣಪತಿ ನೀರ್ನಳ್ಲಿ ಯವರ ಚಿತ್ರ,ರಾಘವೇಂದ್ರ ಹೆಗಡೆಯವರ ಮರಳು ಚಿತ್ರಗಳು ಜನರನ್ನು ರಂಜಿಸಿದವು.ಇದೇ ಸಂದರ್ಭದಲ್ಲಿ ಶಿವರಾತ್ರಿಯ ನಿಮಿತ್ತ ಪ್ರಕಟಪಡಿಸಿದ "ಉದಯವಾಣಿ"ಯ ವಿಶೇಷಸಂಚಿಕೆಯನ್ನು ಶ್ರೀಗಳು ಲೋಕಾರ್ಪಣೆಗೊಳಿಸಿದರು. ಕೊನೆಯಲ್ಲಿ ಡಾ.ಜಿ.ಎಲ್.ಹೆಗಡೆ ಯವರ ನಿರ್ದೇಶನದಲ್ಲಿ ಪ್ರಸಿದ್ಧಕಲಾವಿದರಿಂದ "ಸಭಾಸಂಘರ್ಷ" ಎಂಬ ರೂಪಕವು ಆಯೋಜಿತವಾಗಿತ್ತು.

ವರದಿ: ರಾಮಚಂದ್ರ ಎ.ಜಿ.

0 comments:

Post a Comment