ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಚಾರ

ದಕ್ಷಿಣಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗಿನಿಂದ ಕರ್ನಾಟಕ ಬಿಜೆಪಿ ಪ್ರಖ್ಯಾತಿಗಿಂತಲೂ ಕುಖ್ಯಾತಿಯಲ್ಲೇ ಗಮನಸೆಳೆಯುತ್ತಿರುವುದು ಇಡೀ ದೇಶಕ್ಕೆ ಗೊತ್ತಿರುವ ವಿಚಾರ. ಹಗರಣಗಳ ಸರಮಾಲೆ, ಒಳ ಗುಂಪುಗಾರಿಕೆ ಮತ್ತು ಭಿನ್ನಮತದ ಬಾಧೆಯನ್ನು ನಿವಾರಿಸುವ ಜಂಜಾಟದಲ್ಲಿ ರಾಜ್ಯ ಮತ್ತು ರಾಷ್ಟ್ರ ಬಿಜೆಪಿಯು ಜೂಜಾಡುತ್ತಿರುವಂತೆಯೇ ರಾಜ್ಯ ಆಡಳಿತಾರೂಢ ಸರಕಾರದ ಇನ್ನೂ ಮೂರು ವಿಕೆಟ್ಟುಗಳು ಕುಸಿದುಬಿದ್ದಿವೆ. ಇದಕ್ಕಿಂತಲೂ ಹೆಚ್ಚಿನ ವಿಪರ್ಯಾಸದ ವಿಷಯವೆಂದರೆ ವಿಧಾನಸೌಧದಲ್ಲಿ ಮಾಧ್ಯಮಗಳ ಕ್ಯಾಮೆರಾದಲ್ಲಿ ಸೆರೆಯಾದ ಮಂತ್ರಿದ್ವಯರ ಕಾಮಕೇಳಿಯ ದೃಶ್ಯಗಳು ವಿಶ್ವಮಟ್ಟದಲ್ಲಿ ಸುದ್ದಿಯಾಗಿದ್ದು.ಈ ವಿವಾದಾಸ್ಪದ ವೀಡಿಯೋ ತುಣುಕುಗಳು ರಾಜ್ಯ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದ ಕೆಲವೇ ಕ್ಷಣಗಳಲ್ಲಿ ರಾಷ್ಟ್ರಮಟ್ಟದ ಪ್ರಮುಖ ನ್ಯೂಸ್ ಚಾನೆಲ್ ಗಳೂ ದೇಶಾದ್ಯಂತ ಸುದ್ದಿಯನ್ನು ಬಿತ್ತರಿಸತೊಡಗಿದ್ದವು. ಮುಂದಿನ ಕೆಲವೇ ಕೆಲವು ಘಂಟೆಗಳಲ್ಲಿ ಅಂತರ್ಜಾಲದ ದೈತ್ಯ ತಾಣಗಳಾದ ಯಾಹೂ, ಯೂಟ್ಯೂಬ್ ಹಾಗೂ ಮತ್ತಿತರ ವೆಬ್ ಸೈಟ್ ಗಳು ಸಂಬಂಧಿತ ಚಿತ್ರ ಮತ್ತು ವೀಡಿಯೋ ತುಣುಕುಗಳನ್ನು ತಮ್ಮ ಹೋಮ್ ಪೇಜ್ ನಲ್ಲೇ ಪ್ರಕಟಿಸಿ ಘಟನೆಯ ತೀವ್ರತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಾಮುಖ್ಯತೆಯನ್ನು ನೀಡಿದವು. ರೇಣುಕಾಚಾರ್ಯ-ಜಯಲಕ್ಷ್ಮಿ ವಿವಾದ ಮತ್ತು ಹಾಲಪ್ಪರ ಮೇಲೆ ಹೇರಲಾದ ಅತ್ಯಾಚಾರ ಆಪಾದನೆಯ ಬಳಿಕ ಆಡಳಿತಾರೂಢ ಬಿಜೆಪಿಗೆ ಇದು ಮೂರನೇ ಹಾಗೂ ಬಹುಶಃ ಅತೀ ದೊಡ್ಡ ಸೆಕ್ಸ್ ಸ್ಕ್ಯಾಂಡಲ್ ಹೊಡೆತ.


ರಾಜಕೀಯ ಜಗತ್ತಿನಲ್ಲಿ ಲೈಂಗಿಕತೆಯ ಸುತ್ತ ಗಿರಕಿಹೊಡೆದು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಾದಕ್ಕೀಡಾದ ಘಟನೆಗಳ ಸಂಖ್ಯೆ ಕಮ್ಮಿಯೇನೂ ಇಲ್ಲ. ಇತಿಹಾಸವನ್ನು ಕೆದಕಿ ನೋಡಿದರೆ ಮೊದಲು ಕಣ್ಣಿಗೆ ರಾಚುವ ವಿವಾದವೆಂದರೆ 1998 ರಲ್ಲಿ ನಡೆದ ಅಮೆರಿಕಾದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಮತ್ತು ಮೋನಿಕಾ ಲೆವಿಂಸ್ಕಿ ವಿವಾದ.

1995 ರಲ್ಲಿ ಅಧ್ಯಕ್ಷೀಯ ಭವನ ವೈಟ್ ಹೌಸ್ ನಲ್ಲಿ ಇಂಟರ್ನಿ ಆಗಿ ಸೇರಿಕೊಂಡ ಇಪ್ಪತ್ಮೂರರ ಹರೆಯದ ಮೋನಿಕಾ ಆಗಿನ ರಾಷ್ಟ್ರಾಧ್ಯಕ್ಷ ಬಿಲ್ ಜೊತೆಗೆ ಅನೈತಿಕ ಸಂಬಂಧದ ಸುಳಿಯಲ್ಲಿ ಸಿಕ್ಕಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದರು. ಮೋನಿಕಾರ ಸಹೋದ್ಯೋಗಿಯೂ ರಕ್ಷಣಾ ಇಲಾಖೆಯ ಅಧಿಕಾರಿಯೂ ಆಗಿದ್ದ ಲಿಂಡಾ ಟ್ರಿಪ್ ರವರು ರಹಸ್ಯವಾಗಿ ರೆಕಾರ್ಡ್ ಮಾಡಿದ್ದ ಬಿಲ್ ಮತ್ತು ಮೋನಿಕಾಳ ಟೆಲಿಫೋನ್ ಸಂಭಾಷಣೆಯು ಮಾಧ್ಯಮಗಳ ತೆಕ್ಕೆಗೆ ಬಿದ್ದು ಅಧ್ಯಕ್ಷರ ನೈತಿಕತೆಗೆ ಧೂಳನ್ನೆರಚಿದವು.

ಪತ್ನಿ ಹಿಲರಿ ಕ್ಲಿಂಟನ್ ಜೊತೆಯಾಗಿ ಕೋರ್ಟ್ ಮತ್ತು ಮಾಧ್ಯಮಗಳ ಮುಂದೆ ತಾನು ಮುಗ್ಧ ಎಂದು ಹೇಳಿಕೆಯನ್ನು ಕೊಟ್ಟರೂ ಮುಂದೆ ನಡೆದ ಡಿ.ಎನ್.ಎ ಪರೀಕ್ಷೆಗಳು ಅನೈತಿಕ ಸಂಬಂಧದ ಊಹಾಪೋಹಗಳು ಸತ್ಯವೆಂದು ಜಗಜ್ಜಾಹೀರುಗೊಳಿಸಿದವು. ಹಿಲರಿ ಕ್ಲಿಂಟನ್ ಇಂತಹ ಸಂದಿಗ್ಧ ಸಮಯದಲ್ಲಿ ತನ್ನ ಪತಿ ನಿರಪರಾಧಿ ಮತ್ತು ಇಡೀ ಪ್ರಕರಣವು ಅಧ್ಯಕ್ಷರನ್ನು ರಾಜಕೀಯವಾಗಿ ಮುಗಿಸಲು ನಡೆದಿರುವ ಒಂದು ಸಂಚು ಎಂಬ ಹೇಳಿಕೆಗಳನ್ನು ಸಾಲು ಸಾಲಾಗಿ ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ.

ವಿಚಾರಣೆಯ ಅವಧಿಯಲ್ಲಿ ಸುಳ್ಳು ಹೇಳಿಕೆಯನ್ನು ಕೊಟ್ಟ ತಪ್ಪಿಗಾಗಿ ಅಮೆರಿಕಾದ ಸೆನೆಟ್ ಕೋರ್ಟ್ ಶಿಕ್ಷೆಯಾಗಿ ಬಿಲ್ ಕ್ಲಿಂಟನ್ನರ ಕಾನೂನು ಅಧ್ಯಯನದ ಉಚ್ಚ ಪದವಿಗಾಗಿ ಬೇಕಿದ್ದ ಲೈಸನ್ಸ್ ಅನ್ನು ಐದು ವರ್ಷಗಳ ಕಾಲ ತಡೆಹಿಡಿಯುವುದರ ಜೊತೆಗೆ ತೊಂಭತ್ತು ಸಾವಿರ ಡಾಲರ್ ಗಳ ದೊಡ್ಡ ದಂಡಮೊತ್ತವನ್ನೂ ಹೇರಿತು. ಈ ಬೆಳವಣಿಗೆಗಳು ಮುಂದಿನ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಬಿಲ್ ಗೆ ನಿಸ್ಸಂದೇಹವಾಗಿ ಪ್ರತಿಕೂಲವಾಗಿ ಪರಿಣಮಿಸಿದವು.

ರಷ್ಯಾದ ಪ್ರಧಾನಿ ವ್ಲಾದಿಮಿರ್ ಪುತಿನ್ ಮತ್ತು ರೂಪದರ್ಶಿ ಎಲಿನಾ ಕಬಯೀವಾರ ಪ್ರಣಯವೂ ರಾಜಕೀಯ ಜಗತ್ತಿನ ರಂಗುರಂಗಿನ ಹೆಡ್ ಲೈನ್. 29 ರ ಹರೆಯದ ಎಲಿನಾ ಮತ್ತು ಅರವತ್ತಾದರೂ ಜೇಮ್ಸ್ ಬಾಂಡ್ ಇಮೇಜ್ ಹೊಂದಿರುವ ಪುತಿನ್ ಆಗಾಗ್ಗೆ ಸುದ್ದಿಯಾಗುತ್ತಾರೆ. ಪುತಿನ್ 1983 ರಲ್ಲಿ ಲ್ಯುಡ್ಮಿಲಾ ಜೊತೆ ವೈವಾಹಿಕ ಜೀವನಕ್ಕೆ ಅಡಿಯಿಟ್ಟಿದ್ದರು. ಕಾಕತಾಳೀಯವೆಂಬಂತೆ ಎಲಿನಾ ಹುಟ್ಟಿದ ವರ್ಷವೂ ಕೂಡ 1983.

ಇನ್ನು ಎಪ್ಪತ್ತರ ಗಡಿದಾಟಿದ ವಯಸ್ಸಿನ ಇಟಲಿಯ ಮಾಜಿ ಪ್ರಧಾನಿ ಸಿಲ್ವಿಯೋ ಬರ್ಲುಸ್ಕೋನಿ ಕೂಡ ತನ್ನ ಸ್ತ್ರೀಲೋಲುಪತೆಯಿಂದ ವಿವಾದದ ಸುಳಿಯಲ್ಲಿ ಕೊಚ್ಚಿ ಹೋದ ಆಸಾಮಿ. ಇಪ್ಪತ್ತು ವರ್ಷಗಳ ಅವಧಿಯಲ್ಲಿ ಮೂರು ಬಾರಿ ಪ್ರಧಾನಿಯಾಗಿ ಮೆರೆದ ಬರ್ಲುಸ್ಕೋನಿ ಇಟಲಿ ಕಂಡ ಓರ್ವ ಅತೀ ಶ್ರೀಮಂತ ಮತ್ತು ಓರ್ವ ಪ್ರಭಾವಿ ರಾಜಕಾರಣಿ.

ಹಲವು ವೇಶ್ಯೆಯರೊಂದಿಗೆ ಲೈಂಗಿಕ ಸಂಬಂಧವನ್ನು ಹೊಂದಿದ್ದಲ್ಲದೆ ಹದಿನೇಳರ ಹರೆಯದ ಕರೀಮಾ ರೂಬಿ ಎಂಬ ಹೈ ಪ್ರೊಫೈಲ್ ಕಾಲ್ ಗರ್ಲ್ ಜೊತೆಗಿನ ತಡರಾತ್ರಿ ಪಾರ್ಟಿ ಮತ್ತು ಅನೈತಿಕ ಸಂಬಂಧದ ರಾಡಿಯಲ್ಲಿ ಮುಳುಗಿ ರಾಜಕೀಯ ಜೀವನದಲ್ಲಿ ಸದ್ಯಕ್ಕೆ ಮೇಲೇಳಲಾರದಂತಹ ಏಟನ್ನೇ ತಿಂದರು. ಲಿಬಿಯಾದ ಗತ ಸರ್ವಾಧಿಕಾರಿ ಗದ್ದಾಫಿಯ ಸುತ್ತಮುತ್ತ ಸುಂದರ ಅಂಗರಕ್ಷಕಿ ತರುಣಿಯರ ಸಣ್ಣ ಪಡೆಯೇ ಇತ್ತು. 1982 ರ ಮಿಸ್ ಇಂಡಿಯಾ ಪಮೇಲಾ ಬೋರ್ಡಸ್ ಹಲವು ಬ್ರಿಟಿಷ್ ರಾಯಭಾರಿ ಮತ್ತು ಸಂಬಂಧಿತ ಅತ್ಯುಚ್ಚ ಅಧಿಕಾರಿ ವರ್ಗಗಳಿಗಾಗಿ ಎಸ್ಕಾರ್ಟ್ ಸೇವೆಯನ್ನೊದಗಿಸಿದ್ದೂ ಮಾಧ್ಯಮ ವರದಿಗಳಿಂದ ಸಾಕಷ್ಟು ಸಂಚಲನವನ್ನು ಮೂಡಿಸಿದ್ದವು.

ಇನ್ನು ಭಾರತದಲ್ಲಿ ಕಳೆದ ಒಂದೆರಡು ವರ್ಷಗಳಿಂದ ಇಂತಹ ಸುದ್ದಿಯಾಗಬಾರದಂತಹ ಸುದ್ದಿಗಳಿಂದ ಸುದ್ದಿಯಾದವರೆಂದರೆ ಹಿರಿಯ ರಾಜಕಾರಣಿ ಎನ್. ಡಿ. ತಿವಾರಿ. ಎಂಭತ್ತಾರರ ಇಳಿ ವಯಸ್ಸಿನ ನಾರಾಯಣ ದತ್ತ ತಿವಾರಿ ಮೂರು ಬಾರಿ ಮುಖ್ಯಮಂತ್ರಿ, ರಾಜ್ಯಪಾಲರಲ್ಲದೆ ಕೇಂದ್ರ ಕ್ಯಾಬಿನೆಟ್ ಸಚಿವರಂತಹ ಪ್ರಭಾವಿ ಹುದ್ದೆಯನ್ನೂ ಅಲಂಕರಿಸಿದವರು. ಆದರೆ ತೆಲುಗು ನ್ಯೂಸ್ ಚಾನೆಲ್ ಎಬಿಎನ್ ಆಂಧ್ರಜ್ಯೋತಿ ಸೆರೆಹಿಡಿದ ವೇಶ್ಯೆಯರೊಂದಿಗಿನ ಸಚಿವರ ಕಾಮಕೇಳಿಯ ದೃಶ್ಯಗಳು ಆಂಧ್ರಪ್ರದೇಶದ ಮೂಲೆಮೂಲೆಯಲ್ಲೂ ಕೋಲಾಹಲವನ್ನೆಬ್ಬಿಸಿದವು.

ಈ ವಿವಾದವು ತೆಲಂಗಾಣ ರಚನೆ ಚರ್ಚೆಯ ವೇಗಕ್ಕೂ ಅಡ್ಡಗಾಲನ್ನಿಕ್ಕಿತು ಅಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ. ಆಂಧ್ರಪ್ರದೇಶದ ಘನತೆವೆತ್ತ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕವೇ ವಿವಾದವು ತಕ್ಕಮಟ್ಟಿಗೆ ತಣ್ಣಗಾಯಿತು. ಎಂಟರಿಂದ ಎಂಭತ್ತು ವರ್ಷಗಳ ಹಿಂದೆ ಉತ್ತರ ಪ್ರದೇಶದ ಮಾಜಿ ಮಂತ್ರಿ ಅಮರಮಣಿ ತ್ರಿಪಾಠಿ ಮತ್ತು ಓರ್ವ ತರುಣಿ ಕವಯತ್ರಿ ಮಧುಮಿತಾ ಶುಕ್ಲಾ ನಡುವಿದ್ದ ಅನೈತಿಕ ಸಂಬಂಧ ದಿಕ್ಕುತಪ್ಪಿ ಮಧುಮಿತಾರ ಕೊಲೆಯಲ್ಲಿ ಅಂತ್ಯ ಕಂಡಿತು. ಮಾಜಿ ಸಚಿವರ ಪತ್ನಿ ಮಧುಮಣಿಯವರ ಹೆಸರೂ ಕೂಡ ಕೊಲೆಯ ಆರೋಪದಲ್ಲಿ ಕೇಳಿಬಂದವು. ಹೀಗೆ ಶಯನಗೃಹದಿಂದ ಬೀದಿಗೆ ಬಂದ ರಹಸ್ಯಗಾಥೆಗಳು ಚಾರಿತ್ರ್ಯಹರಣವನ್ನೇ ಮಾಡಿವೆ ಎಂಬುದು ಅಕ್ಷರಶಃ ಸತ್ಯ.

ಸಮರ್ಥನೆ ಮತ್ತು ಖಂಡನೆಗಳು ರಾಜಕೀಯ ಮತ್ತು ಸಾಮಾಜಿಕ ವಲಯಗಳಲ್ಲಿ ಬೆರೆತುಹೋಗಿರುವುದು ಸಾಮಾನ್ಯ ಮತ್ತು ವಾಕ್ ಸ್ವಾತಂತ್ರ್ಯದ ದೃಷ್ಟಿಕೋನದಿಂದ ಅನಿವಾರ್ಯವೂ ಹೌದು. ಓರ್ವ ರಾಜಕಾರಣಿಯಾಗಿರಲಿ ಇಲ್ಲವೇ ಸೆಲೆಬ್ರಿಟಿಯಾಗಿರಲಿ, ಅವರು ಸಾಮಾನ್ಯ ಜನರಿಂದ ಭಿನ್ನರಾಗಿ ಕಾಣಲು ಇರುವ ಏಕಮಾತ್ರ ಕಾರಣವೆಂದರೆ ಅವರಿಂದ ಅಪೇಕ್ಷಿಸಲ್ಪಡುವ ಕಿಂಚಿತ್ತು ಹೆಚ್ಚಿನ ಸಾಮಾಜಿಕ ಜವಾಬ್ದಾರಿ.

ಹಾಗಾಗಿಯೇ ಇವರುಗಳ ಜೀವನಶೈಲಿ, ಕಾರ್ಯವೈಖರಿಯಷ್ಟೇ ಅಲ್ಲದೆ ಮಾಧ್ಯಮಗಳಿಗೆ ಕೊಡುವ ಒಂದೊಂದು ವಾಕ್ಯವೂ ಮಹತ್ವದ್ದಾಗಿರುತ್ತದೆ. ಅಧ್ಯಕ್ಷ ಹುದ್ದೆಯಲ್ಲಿದ್ದಾಗಲೇ ಬಿಲ್ ಕ್ಲಿಂಟನ್ ರವರಿಗೆ ಅಮೆರಿಕಾದಲ್ಲಿ ಶಾಸಕ ನ್ಯಾಯಾಲಯದಿಂದ ಶಿಕ್ಷೆಯಾಯಿತು. ಇಂತಹ ನಿಷ್ಪಕ್ಷಪಾತಿ ಮತ್ತು ಕ್ಷಿಪ್ರ ನ್ಯಾಯಾಂಗ ವ್ಯವಸ್ಥೆಯ ಅಗತ್ಯತೆ ಭಾರತದಲ್ಲಿ ಅಸಾಧ್ಯವೇನೂ ಅಲ್ಲ.

ವರ್ಗ ಭೇದವಿಲ್ಲದೆ ತಪ್ಪಿತಸ್ಥರಿಗೆ ಶಿಕ್ಷೆಯಾದರೆ ಜನಸಾಮಾನ್ಯರಲ್ಲೂ ನ್ಯಾಯಾಂಗ ವ್ಯವಸ್ಥೆಯ ಮೇಲಿರುವ ನಂಬಿಕೆ ಮತ್ತಷ್ಟು ದೃಢವಾಗುತ್ತದೆ. ವಿಶ್ವಸಂಸ್ಥೆಯ ವೇದಿಕೆಯಲ್ಲಿ ಹಿಂದಿಯಲ್ಲಿ ಭಾಷಣವನ್ನು ಮಂಡಿಸಿ ರಾಷ್ಟ್ರಭಾಷೆಗೆ ಘನತೆಯನ್ನು ತಂದುಕೊಟ್ಟಂತಹ ಅಟಲ್ ಬಿಹಾರಿ ವಾಜಪೇಯಿವರಂತಹ ಧುರೀಣ ನಾಯಕನನ್ನು ಕೊಟ್ಟ ದೇಶ ಭಾರತ.

ರಾಜ್ಯ-ರಾಷ್ಟ್ರ ಸಂಬಂಧಿ ಸಮಸ್ಯೆಗಳು ಮತ್ತು ಪರಿಹಾರೋಪಾಯಗಳ ಬಗ್ಗೆ ವಿಸ್ತೃತ ಚರ್ಚೆಯಾಗಬೇಕಾದಂತಹ ಸಂಸತ್ತು, ವಿಧಾನಸಭೆಗಳಲ್ಲಿ ಇಂದು ಮಂತ್ರಿ ಮಹೋದಯರ ಹಾಜರಾತಿಯೇ ಕಮ್ಮಿಯಾಗುತ್ತಿದೆ. ಬೆರಳೆಣಿಕೆಯ ಮಂದಿ ಬಂದರೂ ಚರ್ಚೆಯಲ್ಲಿ ಸಂಪೂರ್ಣವಾಗಿ ಪಾಲುಗೊಳ್ಳದೆ ಕೂತಲ್ಲೇ ತೂಕಡಿಸುವ ದೃಶ್ಯಗಳನ್ನು ನಾವು ಬಹಳಷ್ಟು ಬಾರಿ ವೀಕ್ಷಿಸಿದ್ದೇವೆ. ಇಂತಹ ಪವಿತ್ರ ಸ್ಥಳಗಳಲ್ಲಿ ಜನಸಾಮಾನ್ಯರ, ರೈತರ, ದೇವರ ಹೆಸರುಗಳಲ್ಲಿ ಪ್ರಮಾಣ ವಚನವನ್ನು ಸ್ವೀಕರಿಸಿ ಬಂದ ಜನನಾಯಕರು ತಮ್ಮದೇ ಮೋಜಿನಲ್ಲಿ ಮೈಮರೆತು ಕಾಲಹರಣ ಮಾಡಿದರೆ ಅದು ಖಂಡಿತವಾಗಿಯೂ ಆಕ್ಷೇಪಾರ್ಹ. ಮುಂದಾದರೂ ಇಂತಹ ಕಹಿ ಘಟನೆಗಳು ಮರುಕಳಿಸದಿರಲಿ ಎಂದು ಆಶಿಸೋಣ.

ಪ್ರಸಾದ್

2 comments:

ಮೊಳಹಳ್ಳಿ ಅನಿಲ್ ಕುಮಾರ್ said...

ಬಿಜೆಪಿಯದ್ದು, ಅಧಿಕಾರವೇ ಮೂಲಮಂತ್ರ!
ಕನ್ನಡ ನಾಡಿನ ಜನ ಬದಲಾವಣೆ ಬಯಸಿ ಭಾಜಪಕ್ಕ ಅಧಿಕಾರ ಕೊಟ್ಟರು. ಖಂಡಿತಾ ಬದಲಾವಣೆ ತದಿದ್ದಾರೆ!. ಈ ಬದಲಾವಣೆ ಕನಾ೵ಟಕದ ಮಾನ ಹರಾಜು ಹಾಕಿದೆ. ಕರುನಾಡು ಮತ್ತೊಂದು ಬಿಹಾರವಾಗಿದೆ, ಸಾರಿ ಬಿಹಾರ ಈಗ ಮುಲಾಯನ್ ಸಿಂಗ್ ಕಾಲದಿಂದ ಮುಕ್ತಿಪಡೆದ ನಿತಿನ್ ಕುಮಾರರ ಸಶಕ್ತ ಬಿಹಾರವಾಗಿದೆ. ಈ ಬಿಹಾರದ ಸ್ಥಾನವನ್ನು ಕನ್ನಡನಾಡು ತುಂಬಿದೆ ಎಂದರೆ ಅತಿಶಯವಲ್ಲ. ಓಟುಕೊಟ್ಟ ಮತದಾರ ಇವರಿಗೆಲ್ಲ ಎಲ್ಲಿ ನೆನಪಾಗಬೇಕು ಹೇಳಿ?
ನಮ್ಮ ರಾಜ್ಯ ಇನ್ನಾವ ಸಾಧನೆ ಮಾಡಬೇಕು ಹೇಳಿ? ಸ್ನೇಹಿತನ ಹೆಂಡತಿ ಜೊತೆ ಹಾಸಿಗೆ ಹಂಚಿಕೊಂಡವ ಮಂತ್ರಿಯಾಗುತ್ತಾನೆ, ಕೋಟಿ ನುಂಗುವವರ ಕೈಯಲ್ಲದ್ದ ಹಣ ಸರಕಾರವನ್ನೆ ಆಟವಾಡಿಸುತ್ತದೆ, ಪವಿತ್ರ ವಿಧಾನಸಭೆ ಅಶ್ಲೀಲ ಚಿತ್ರ ನೋಡುವ ತಿಯೇಟರ್ ಆಗಿಸಿದ್ದೆವೆ, ಕೋಟಿ ಲೂಟಿ ಮಾಡಿದವ ಮುಖ್ಯಮಂತ್ರಿಯಾಗಿದ್ದ, ಹಣವಿದೆ ಎಂಬ ಕಾರಣಕ್ಕೆ ಸಮಾಜಕ್ಕೆ ಮಾಗ೵ದಶ೵ನ ಮಾಡಬೇಕಾಗಿದ್ದ ಸ್ವಾಮಿಜಿಗಳೇ ಜೈಲಿಗೆ ಹೋಗಿ ಮಾತನಾಡಿಸಿಕೊಂಡು ಬರುತ್ತಾರೆ ಅಂದರೆ ಇನ್ನೆನಾಗಬೇಕು ಹೇಳಿ?
ಇನ್ನು ಮಂತ್ರಿಸ್ಥಾನ, ಅಧಿಕಾರಕ್ಕಾಗಿ ದಿನ ಕಳೆದರೆ ರೇಸಾಟ್, ಶಾಸಕರ ಗುಂಪು ಕಟ್ಟಿ ಲಾಬಿ, ಆಯಕಟ್ಟಿಗೆ ತನ್ನವರನ್ನೆ ನೇಮಿಸುವ ಕುತಂತ್ರವಂತೂ ನಿರಂತರ.....
ಇದು ಫೆಬ್ರುಚವರಿ.ಆದರೆ ಈಗಾಗಲೇ ರಾಜ್ಯದ ಅನೇಕ ಕಡೆ ನೀರಿಗಾಗಿ ಹಾಹಾಕಾರ ಕೇಳಿಬರುತ್ತಿದೆ. ಸರಕಾರ ಈಗಾಗಲೇ 123 ತಾಲೂಕುಗಳನ್ನು ಬರಪೀಡಿತ ಗ್ರಾಮಗಳೆಂದು ಘೋಷಿಸಿದೆ.ಬಿಜಾಪುರದಂತಹ ಜಿಲ್ಲೆಗಳಲ್ಲಿ ಕುಡಿಯುವ ನೀರಿಗೆ ತತ್ವಾರ ಎದುರಾಗಿದೆ.ಅಲ್ಲಿ 3 ರೂ.ಗೇ 1 ಕೊಡ ನೀರನ್ನು ಖರಿದಿಸಿ ಕುಡಿಯಬೇಕಾದ ಪರಿಸ್ಥಿತಿಯಲ್ಲಿದ್ದಾರೆ. ಭೂಮಿ ಒಣಗಿದೆ. ರೈತರು ಬೇಳೆದ ಹಿಂಗಾರು ಕರಟಿಹೋಗಿದೆ.ಇನ್ನೊಂದೆಡೆ ಈಗಾಗಲೇ ರಾಜ್ಯದ 48ಕ್ಕೂ ಹೆಚ್ಚು ಕೇರೆಗಳು ಒಣಗಿ ಹೋಗಿವೆ. ನೂರಾರು ಕೆರೆಗಳು ಬತ್ತಿಹೋಗಿವೆ, ಸಾವಿರಾರು ಎಕರೆ ಪ್ರದೇಶಗಳಿಗೆ ನೀರುಣಿಸುತ್ತಿದ್ದ ಜಲಾಶಯಗಳೂ ನೀರಿನ ಕೋರತೆ ಎದುರಿಸುತ್ತಿದೆ. ಹವಾಮಾನ ಇಲಾಖೆ ಕೂಡಾ ಕೆಲವಾರಗಳ ಹಿಂದೆ ಈ ವರುಷ ಶತಮಾನಗಳಿಂದ ಕಂಡು ಕೇಳರಿಯದಷ್ಟು ಸೆಕೆ ದಾಖಲಾಗಲಿದೆ ಎಂದು ತಿಳಿಸಿತ್ತು. ಈಗ ಅದರ ಸಾಕ್ಷ್ಯಗಳು ಗೋಚರಿಸುತ್ತಿವೆ. ರಾಜ್ಯ, ಕೇಂದ್ರಕ್ಕೆ ಸಾವಿರಾ ಕೋಟಿಗಾಗಿ ಮನವಿ ಮಾಡಿಕೊಂಡಿದ್ದಾರೆ.ಇತ್ತ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ 24 ಗಂಟೆ ದುಡಿದು ಜನರ ಕಷ್ಟಕ್ಕೆ ಸ್ಪಂದಿಸುವಂತೆ ಆಜ್ಞಾಪಿಸಿದ್ದೀರಿ . ಆದರೆ ನೀವು ಮಾಡುತ್ತಿರುವುದೇನು ಸದಾನಂದರೇ?
ರಾಜ್ಯ ಬರಗಾಲದ ಬೇಗೆಯಲ್ಲಿರುವಾಗ ನಮ್ಮದ್ಯಾವ ಭೂಜನಕೋಟ? ರೈತರು, ಬಡವರ ಬಗೆಗಿನ ನಿಮ್ಮ ನೀಜವಾದ ಕಾಳಜಿ ಇದೇಯೇ? ನಿಮಗೆ ನಿಜವಾದ ಕಾಳಜಿ ಇದ್ದಿದ್ದರೆ, ನಮ್ಮ ಲೂಟಿಯ ಹಣ ವ್ಯಯಿಸುವ ದಾರಿ ಕಾಣದಿದ್ದರೆ ದಯವಿಟ್ಟು ನೀರಿಗಾಗಿ ಹಾತೋರೆಯುತ್ತಿರುವ ಬಡರೈತ, ಜನಸಾಮಾನ್ಯರಿಗೆ ನೀಡಿ. ಅದು ಬಿಟ್ಟು ಇಲ್ಲ್ಲಿ ಆತ್ಮಹತ್ಯೆಯಂತಹ ಸ್ಥಿತಿ ರೈತ ಎದುರಿಸುತ್ತಿರುವಾಗ ನಿಮ್ಮದೇನು ಔತಣಕೂಟ. ಇದು ರಾಜ್ಯದ ಜನತೆಗೇಸೆದ ವಿಶ್ವಾಸದ್ರೋಹ, ವಂಚನೆ.
ಯಡಿಯೂರಪ್ಪರೇ ನಿಮ್ಮ ಧ್ಯೇಯ ಬದಲಾಗಿದೆ, 'ಅಭಿವೃದ್ಧಿ ನಮ್ಮ ಮೂಲಮಂತ್ರ" ಅಲ್ಲ, "ಅಧಿಕಾರವೇ ನಮ್ಮ ಮೂಲಮಂತ್ರ" . ಓಟು ಕೊಟ್ಟವ ತಲೆತಗ್ಗಿಸಬೇಕಾದ ಪರಿಸ್ಥಿತಿ. ಈಗಲಾದರೂ ಪಾಠ ಕಲಿತಾನೆಯೇ?

haree said...

congress gintha bhinna antha padhe padhe heli... mugdha janarannu nambisi adhikaarakke banda BJP idhiga idi raajyavanne adhapathanadatta kondoyyuttidhe... nijavaglu mundhina election nalli obbane obba BJP MLA elect aglebardu...

Post a Comment