ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
6:55 PM

ಇದು ಕಥೆಯಲ್ಲ...

Posted by ekanasu

ವೈವಿಧ್ಯ...

ಅದೆಲ್ಲಿಂದಲೋ ನಾಲ್ಕು ಕಾಡಾನೆಗಳು...ಒಟ್ಟಿಗೆ ನುಗ್ಗಿ ಬಂದವು... ಆದರೆ ನಿರೀಕ್ಷಿಸಿದಂತೆ ಅವೇನೂ ನಮ್ಮ ಮೇಲೆ ಧಾಳಿ ನಡೆಸಿಲ್ಲ... ಅದರಲ್ಲೊಂದು ಪುಟ್ಟ ಆನೆಯಿತ್ತು. ಅದು ಕಿಟಿಕಿಯ ಮೂಲಕವಾಗಿ ತೂರಿ ಒಳಬರುವ ಸಿದ್ಧತೆ ಕೈಗೊಂಡಿತ್ತು. ಇನ್ನೆರಡಾನೆಗಳು ಹಿಂದೆ ಮುಂದೆ ಸುತ್ತುತ್ತಿದ್ದವು. ವಾಸ್ತವದಲ್ಲಿ ಅವೆಲ್ಲವೂ ಕಾಡಾನೆಗಳಾಗಿದ್ದವು. ಆದರೂ ಅತ್ಯಂತ ಸೌಮ್ಯ ಸ್ವರೂಪದಲ್ಲಿದ್ದವು. ಯಾವೊಂದು ಹಾನಿಯೂ ಮಾಡಿಲ್ಲ. ಅಪ್ಪ ಕೋವಿ ತೆಗೆದು ಹೊರಟಿದ್ದರು.
ಆನೆಗಳಿಗೆ ಗುಂಡಿಕ್ಕಿ ಸಾಯಿಸಲೋ ಅಥವಾ ಹೆದರಿಸಿ ಓಡಿಸಲೋ ಗೊತ್ತಿಲ್ಲ... ಅಂತೂ ಕೋವಿ ಹಿಡಿದು ಹೊರಬಂದರು. ನಾನೂ ಅಪ್ಪನೂ ಆ ಕ್ಷಣದಲ್ಲಿ ಆನೆ ಹಿಂಡಿಗೆ ಒಂದೂವರೆ ಅಡಿ ದೂರದಲ್ಲಿದ್ದೆವಷ್ಟೇ...

ಅಗಲ ಕಿವಿಯ ಆನೆಗಳು ಒಂದೊಂದು ಹೆಜ್ಜೆ ಹಿಂದೆ ಮುಂದೆ ಮಾಡುತ್ತಾ ಅಲ್ಲೇ ಸುತ್ತುತ್ತಿದ್ದವು... ಅರೆಕ್ಷಣದಲ್ಲಿ ಕೋವಿಯತ್ತ ದೃಷ್ಠಿನೆಟ್ಟವು... ನನ್ನ ಜಂಘಾಬಲವೇ ನಡುಗಿ ಹೋಯಿತು... ಆದರೂ ಇದ್ದ ಧೈರ್ಯವನ್ನೆಲ್ಲ ಒಟ್ಟು ಮಾಡಿ ಅಪ್ಪನ ಕೈಯಿಂದ ಕೋವಿ ಕಸಿದು ಅದರ ನಳಿಗೆ ಮುರಿದು ಗುಂಡನ್ನು ಅದರೊಳಗೆ ಸೇರಿಸಿದೆ. ಆ ಕ್ಷಣದಲ್ಲಿ ಪುಟ್ಟ ಆನೆ ಮರಿ ಕಿಟಿಕಿ ಹಾರಿ ಒಳಹೋಯಿತು... ಯೋಚಿಸುವ ಮೊದಲೇ ಆ ಘಟನೆ ಘಟಿಸಿಹೋಯಿತು... ಆನೆಗಳ ಹಿಂಡು ಪಲಾಯನ... ಪುಟ್ಟ ಮರಿಯಾನೆ ಮಾತ್ರ ಒಳಗೆ...

ಇದು ಕಟ್ಟು ಕಥೆಯಲ್ಲ...ಆದರೆ ಪೂರ್ತಿ ಸತ್ಯವೂ ಅಲ್ಲ...ಹಾಗೆಂದ ಮಾತ್ರಕ್ಕೆ ಸುಳ್ಳಂತೂ ಅಲ್ಲವೇ ಅಲ್ಲ... ಮತ್ತೇನು...? ಕನಸು....ಹೌದು ಇದೊಂದು ಕನಸು... ಕನಸು ಎಲ್ಲವೂ ನನಸಲ್ಲ... ಆದರೆ ಕನಸು ನನಸಾಗದೆ ಕೇವಲ ಕನಸಾಗಿಯೇ ಉಳಿದು ಬಿಡುತ್ತದೆ ಅಂತೇನಿಲ್ಲ...ಹಲವಾರು ಬಾರಿ ಕನಸುಗಳು ನೈಜ ಘಟನೆಗಳ ಒಂದು ಅಮೂರ್ತವಾಗಿ ಕನಸಿನ ರೂಪದಲ್ಲಿ ಕಂಡುಬರುವುದಿದೆ. ಇನ್ನು ಎಷ್ಟೋ ಸಂದರ್ಭಗಳಲ್ಲಿ ಹಲವಾರು ಕನಸುಗಳು ನೈಜ ಜೀವನದಲ್ಲಿ ಘಟಿಸುವಾಗ ಇದು ಹಿಂದೆಲ್ಲೋ ಈ ಘಟನೆ ನಡೆದಿದೆಯಲ್ಲವೇ ಎಂಬ ಭಾವನೆ ಮನದಲ್ಲಿ ಮೂಡುವುದಿದೆ.

ಇವೆಲ್ಲವೂ ಮನ:ಶಾಸ್ತ್ರದ ಪ್ರಕಾರ ಹೌದು. ಅವೆಲ್ಲವುಗಳಿಗೂ ಅದರದ್ದೇ ಆದಂತಹ ಕಾರಣಗಳು ಕೂಡಾ ಇವೆ.
ಹೌದು ಆನೆಯ ಕನಸು ಬೀಳುವುದಕ್ಕೆ ಕಾರಣ ಏನಿರಬಹುದೆಂದು ಯೋಚಿಸತೊಡಗಿದೆ. ನಿನ್ನೆಯ ನನ್ನ ಇಡೀ ದಿನದ ಮನ:ಸ್ಥಿತಿ, ಅನುಭವಿಸಿದ ವಿಚಾರಗಳನ್ನು ನೋಡಿದರೆ ಸಂಪೂರ್ಣ ಒತ್ತಡ, ವೇದನೆ ಅದಕ್ಕಿಂತಲೂ ಹೆಚ್ಚಾಗಿ ಬಿಡಿಸಲಾಗದ ಸಮಸ್ಯೆಗಳ ಸುಳಿಯಲ್ಲಿ ತೊಳಲಾಡುತ್ತಿದ್ದೆ.
. ಕೌಟುಂಬಿಕ ಒತ್ತಡ , ಮಾನಸಿಕ ತುಮುಲಗಳು ಒಟ್ಟು ಸೇರಿದಾಗ ಅಂತಹ ಒಂದು ಚಿಂತನೆಗೆ ಅಮೂರ್ತ ಅರ್ಥವನ್ನು ಒದಗಿಸುವಂತಹ ಕನಸು ಬಿದ್ದಿರಬಹದೆಂಬುದಾಗಿ ಊಹಿಸಿದೆ. ದೊಡ್ಡ ಕಗ್ಗಂಟಾಗಿದ್ದ ಸಮಸ್ಯೆಯೊಂದು ಕೊನೆಯ ಘಳಿಗೆಯಲ್ಲಿ ಅತ್ಯಂತ ಸರಳವಾಗಿ ಪರಿಹಾರವಾಗಿತ್ತು. ಅದು ಕನಸಿನಲ್ಲೂ ಹಾಗೇ ಬಿಂಭಿಸಲ್ಪಿಟಿದೆ... ಆನೆ ಹಿಂಡು ಪಲಾಯನ ಮಾಡಿದ್ದು ಅದೊಂದು ಸುಖಾಂತ್ಯ... ಅಲ್ಲೂ ಸರಳವಾಗಿ ಯೋಚಿಸಿದರೆ ನನ್ನ ಅನುಭವಕ್ಕೂ ಆ ಕನಸಿಗೂ ಒಂದು ಸಂಬಂಧ ಇರುವುದು ಸ್ಪಷ್ಟವಾಯಿತು.

ಹತ್ತು ಹಲವು ಒತ್ತಡ, ಕೆಲವೊಂದು ಬಾರಿ ಸಂತಸ ಇವೆಲ್ಲವೂ ಕನಸಿಗೆ ಒಂದು ಕಾರಣವಾಗುತ್ತವೆ. ಕನಸಿಗೂ ನಿಜ ಜೀವನಕ್ಕೂ
ಹತ್ತಿರದ ನಂಟಿದೆ ಎಂದರೆ ತಪ್ಪಲ್ಲ. ದುಗುಡ ದುಮ್ಮಾನ, ಬೇಸರ, ಕೋಪ, ಅತೀ ಒತ್ತಡ ಇವೆಲ್ಲವನ್ನೊಳಗೊಂಡಿದ್ದರೆ ಅದು ರಾತ್ರಿಯ ನಿದ್ದೆಯ ವೇಳೆಗೆ ಕನಸಾಗಿ ಕನಸಿನ ರೂಪದಲ್ಲಿ ವಿವಿಧ ರೀತಿಯಲ್ಲಿ ಗೋಚರಿಸುವುದಿದೆ.
ಡೀಪ್ ಸ್ಲೀಪ್ ಅಥವಾ ಅತಿಯಾದ ನಿದ್ದೆಯ ಸಂದರ್ಭದಲ್ಲಿ ಬಿದ್ದಂತಹ ಕನಸು ಫಕ್ಕನೆ ನಮ್ಮ ನೆನಪಿಗೆ ಬರಲಾರದೆಂಬುದು ವಿಜ್ಞಾನದ ಪ್ರಕಾರ ದೃಢಪಟ್ಟಿದೆ. ಆದರೆ ಅನೇಕ ಕನಸುಗಳು ಬೀಳುತ್ತಲೇ ಎಚ್ಚರಗೊಳ್ಳುವುದು ಅಥವಾ ಎಚ್ಚರವಾದಾಕ್ಷಣ ಕನಸು ನಮ್ಮ ಮನಸ್ಸಿಗೆ ಮೂಡಿಬರುವುದು ಇವೆಲ್ಲವೂ ಘಟಿಸುವುದು ನಮ್ಮೆಲ್ಲರ ಜೀವನದಲ್ಲಿ ಅನುಭವಕ್ಕೆ ಬಂದಂತಹ ವಿಚಾರ. ಇದು ಮನಶಾಸ್ತ್ರದ ಪ್ರಕಾರ ಎನ್.ಆರ್.ಇ.ಎಮ್ ವ್ಯಾಪ್ತಿಗೊಳಪಡುತ್ತವೆ.

ಕನಸು ಮನುಷ್ಯರಿಗಷ್ಟೇ ಅಲ್ಲ... ಕನಸು ಪ್ರತಿಯೊಂದು ಪ್ರಾಣಿಗಳಿಗೂ ಬೀಳುತ್ತವೆಯಂತೆ... ಮನುಷ್ಯರಂತೆ ಪ್ರಾಣಿಗಳ ಜೀವನದಲ್ಲೂ ಕನಸುಗಳು ಕಾಣುತ್ತವೆ ಎಂಬುದು ಸಹ ವೈಜ್ಞಾನಿಕವಾಗಿ ದೃಢಪಟ್ಟ ವಿಚಾರವಾಗಿದೆ.
ಕನಸಿಗೂ ಜೀವನದಕ್ಕೂ ಇನ್ನೂ ಅನೇಕ ರೀತಿಯ ನಂಟಿದೆ. ಜಾನಪದೀಯವಾಗಿ ಹಾಗೂ ಆಚರಣೆಯ ಪ್ರಕಾರವೂ ಕನಸುಗಳಿಗೆ ಅರ್ಥ ಕಲ್ಪಿಸುವ ಕಾರ್ಯಗಳಾಗುತ್ತವೆ. ಕೆಲವೊಂದು ಕನಸುಗಳು ಬಿದ್ದರೆ ಅದು ಅನಿಷ್ಟ ಎಂಬ ನಂಬಿಕೆಯೂ ಜನಮಾನಸದಲ್ಲಿದೆ. ಒಟ್ಟಿನಲ್ಲಿ ಕನಸಿಗೊಂದು ಅರ್ಥವನ್ನು ಕೊಡುವ ಕಾರ್ಯ ಈ ಹಿಂದಿನಿಂದಲೂ ಇತ್ತು...ಅದು ಈಗಲೂ ಮುಂದುವರಿದಿದೆ.

- ಆಶಾ

0 comments:

Post a Comment