ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಗೋಕರ್ಣ: ಪ್ರಯತ್ನಗಳಿಗೆ ಇನ್ನೊಂದು ಹೆಸರೇ ಭಗೀರಥ. ಈತ ಎಷ್ಟೇ ಅಡ್ಡಿ-ಆತಂಕಗಳು ಬಂದರೂ ಹಿಡಿದ ಕಾರ್ಯವನ್ನು ಸಾಧಿಸಿದ್ದಾನೆ. ಭೂಮಂಡಲಕ್ಕೆ ದೇವಲೋಕದ ಗಂಗೆಯನ್ನು ಹರಿಸುವಂತೆ ಮಾಡಿದ ಹರಿಕಾರ. ಇಂದಿಗೂ ಭಗೀರಥ ಪ್ರಯತ್ನ ಎಂದೇ ಪ್ರಚಲಿತವಿದೆ. ಭೂಮಿಗೆ ಗಂಗೆಯನ್ನು ಭಗೀರಥ ತಂದ ಕಾರಣಕ್ಕಾಗಿಯೇ ಗಂಗಾಮಾತೆ ಭಾಗೀರಥಿಯಾಗಿದ್ದಾಳೆ.ಈ ಮೂಲಕ ಭಾಗೀರಥ ತಂದೆಯೂ ಆದನು. ಗಂಗೆಯು ಭಾಗೀರಥನ ಮಗಳೆಂದೂ ಪ್ರಸಿದ್ಧಿಯಾದಳು. ಇವೆಲ್ಲವೂ ಭಗೀರಥನ ಭಗೀರಥ ಪ್ರಯತ್ನದಿಂದಾಗಿಯೇ ಸಾಧ್ಯವಾಯಿತು. ಎಂದು ಶ್ರೀಮದ್ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ನುಡಿದರು.
ಅವರು ಇಲ್ಲಿನ ಕಡಲತೀರದ ಮಹರ್ಷಿ ದೈವರಾತ ವೇದಿಕೆಯಲ್ಲಿ ಶಿವರಾತ್ರಿ ಮಹೋತ್ಸವದ ಪ್ರಯುಕ್ತ ಶ್ರೀ ರಾಮಕಥಾ ಪ್ರವಚನವನ್ನು ಅನುಗ್ರಹಿಸಿ, ಮಾತನಾಡುತ್ತಿದ್ದರು. ಭಗೀರಥ ಗಂಗೆಯನ್ನು ದೇವಲೋಕದಿಂದ ಭೂಮಿಗೆ ತರುವಾಗಲೇ ಗಂಗೆಗೆ ಮನಸ್ಸಿಲ್ಲ. ಬ್ರಹ್ಮನು ತಿಳಿಹೇಳಿ ಒಪ್ಪಿಸಿದ ಕಾರಣಕ್ಕಾಗಿ ಭೂಮಿಗೆ ಮನಸ್ಸಿಲ್ಲದ ಮನಸ್ಸಿನಲ್ಲಿ ಬಂದಳು. ಭೂಮಿಯನ್ನು ಕೊಚ್ಚಿಹೋಗುವಂತೆ ಹರಿಯಲು ಮುಂದಾದಳು. ಗಂಗೆಯ ಗರ್ವವನ್ನು ಮುರಿಯಲು, ಭೂಮಿಯನ್ನು ಕಾಪಾಡಲು ಶಿವನು ತನ್ನ ಜಟೆಯಲ್ಲಿ ಹಿಡಿದು ನಿಲ್ಲಿಸಿದನು.ಶಿವನನ್ನು ಒಲಿಸಿ,ಭಗೀರಥನು ಗಂಗೆಯನ್ನು ಭೂಮಿಗೆ ಕರೆದೊಯ್ಯುತ್ತಾನೆ. ಭಗೀರಥನನ್ನು ಹಿಂಬಾಲಿಸಿದ ಗಂಗೆಯು ಜನ್ಹು ಮಹರ್ಷಿಯ ಆಶ್ರಮವನ್ನು ಯಜ್ಞ ಶಾಲೆಯನ್ನು ನೀರಿನಲ್ಲಿ ಮುಳುಗಿಸುತ್ತಾಳೆ. ಕೋಪಗೊಂಡ ಜನ್ಹು ಮಹರ್ಷಿಯು ಗಂಗೆಯನ್ನೇ ಆಪೋಶನ ಪಡೆಯುತ್ತಾನೆ. ಈಗ ದೇವತೆಗಳು ಭಗೀರಥನಿಗೆ ಯಾವುದೇ ತೊಂದರೆಕೊಡದೇ ಜನ್ಹು ಮಹರ್ಷಿಯನ್ನು ಓಲೈಸಿ,ಗಂಗೆಯನ್ನು ಓಲೈಸಿ,ಜನ್ಹುವಿನ ಮಗಳಾಗಿ,ಆತನ ಕಿವಿಯಿಂದ ಹೊರಹೊಮ್ಮುತ್ತಾಳೆ.ಹೀಗೆ ಗಂಗಾಮಾತೆಯು ಶಿವನ ಜಟೆಯಿಂದ ಹೊರಬಂದು ಶಿವಗಂಗೆಯಾಗಿ, ಜನ್ಹುವಿನ ಕಿವಿಯಿಂದ ಹೊರಬಂದ ಕಾರಣಕ್ಕಾಗಿ ಜಾನ್ಹವಿಯಾಗಿ, ಭಗೀರಥನ ಪ್ರಯತ್ನದಿಂದ ಭೂಮಿಗಿಳಿದು ಬಂದ ಕಾರಣಕ್ಕಾಗಿ ಭಾಗೀರಥಿಯಾಗಿ ಹೆಸರುಪಡೆದಳು. ಎಲ್ಲಾ ಅಡೆತಡೆಗಳನ್ನು,ಕಷ್ಟ-ಸಂಕಷ್ಟಗಳನ್ನು ಧೈಯವಾಗಿ ಎದುರಿಸಿ,ಹಿಡಿದ ಪ್ರಯತ್ನವನ್ನು ಗುರಿಸಾಧಿಸುವವರೆಗೆ ಮಾಡಿ,ಭಗೀರಥ ಪ್ರಯತ್ನ ಎಂಬ ಬಿರುದಿಗೆ ಕಾರಣವಾಗಿದ್ದಾನೆ. ಈ ಮೂಲಕ ಭಗೀರಥನು ಈಶಾನ್ಯ ಕಟ್ಟ ತುದಿಯಲ್ಲಿರುವ ಕಂದಕದಲ್ಲಿ ತನ್ನ ಪೂರ್ವಿಕರು ೬೦ ಸಾವಿರ ಸಗರ ಪುತ್ರರನ್ನು ಗಂಗಾಜಲದಿಂದ ತರ್ಪಣ ನೀಡಿ, ಅವರಿಗೆ ಪಿತೃಲೋಕ ಪ್ರಾಪ್ತಿಯಾಗುವಂತೆ ಮಾಡಿ, ಅವರಿಂದ ಹಾಗೂ ಬ್ರಹ್ಮದೇವರಿಂದ ಪುತ್ರ ಸಂತಾನದ ಆಶೀರ್ವಾದ ಪಡೆದನು.

ಸಂತರು ಸ್ನಾನಗೈದ ಜಲ, ತೀರ್ಥವಾಗುವುದು. ಮುಟ್ಟಿದ ಶಿಲೆ ದೇವರಾಗುತ್ತದೆ. ಎಂದೂ ಬತ್ತದ ವಿಶಾಲ ಹರವಿನ ಗಂಗೆಯನ್ನು ಆಪೋಶನ ಮಾಡಿ,ತನ್ನ ಉದರದಲ್ಲಿಟ್ಟ ಜನ್ಹುಮಹರ್ಷಿ ಸಮುದ್ರವನ್ನು ಆಪೋಶ್ನಮಾಡಿದ ಅಗಸ್ತ್ಯ ಮಹರ್ಷಿ ಹೀಗೆ ಸಂತರು ವಿಶೇಷತೆಯನ್ನು ಹೊಂದಿದ್ದಾರೆ. ಸಂತರು,ಮಹರ್ಷಿಗಳು ಜ್ಞಾನ ಎಂಬ ಗಂಗೆಯನ್ನು ಪಾನಮಾಡುವ ಶಕ್ತಿ ಹೊಂದಿರುತ್ತಾರೆ. ನಮ್ಮ ಶರೀರವೇ ಕಾಶಿಯಾದರೆ, ಗಂಗೆಯೇ ಜ್ಞಾನ. ಭೂಃ ಭುವಃ ಸುವಃ ಮಹಃ ಈ ನಾಲ್ಕು ನಮ್ಮೊಳಗಿನ ಲೋಕಗಳಾಗಿವೆ. ಭಕ್ತಿ-ಶ್ರುದ್ಧೆಗಳೇ ಗಂಗೆಯಾಗಿದೆ. ವಿಶ್ವೇಶ್ವರನು ನಮ್ಮೊಳಗಿನ ಆತ್ಮನಾಗಿದ್ದಾನೆ ಎಂದು ಶ್ರೀಮದ್ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ನುಡಿದರು.

ಶ್ರೀಪಾದ್ ಭಟ್ ಹಾಗೂ ಪ್ರೇಮಲತಾ ದಿವಾಕರ್ ಇವರ ರಾಮಾಯಣ ಕಾವ್ಯ ಸಂಗೀತಕ್ಕೆ ತಬಲಾವಾದಕರಾಗಿ ಗೋಪಾಲ ಕೃಷ್ಣ ಹೆಗಡೆ, ಗೌರೀಶ್ ಹೆಗಡೆ,ಕೊಳಲು ವಾದಕರಾಗಿ ಪ್ರಕಾಶ್ ಕಲ್ಲರ್ ಮನೆ ಸಾಥ್ ನೀಡಿದರು. ಚಿತ್ರಕಲಾವಿದ ನೀರ್ನಳ್ಳಿ ಗಣಪತಿ ಅವರಿಂದ ಚಿತ್ರ ಪ್ರದರ್ಶನ ಹಾಗೂ ರಾಘವೇಂದ್ರ ಹೆಗಡೆ ಅವರ ಮರಳು ಶಿಲ್ಪ ಪ್ರದರ್ಶನದೊಂದಿದೆ, ವಿಷ್ಣು ಭಟ್ ಮೂರುರು, ವಿಶ್ವೇಶ್ವರ್ ಹೆಗಡೆ ಮೂರುರು, ಪೂರ್ಣಿಮಾಭಟ್, ಪೂರ್ಣಿಮಾ ಎಸ್.ಭಟ್ ತಂಡದಿಂದ ರೂಪಕ ಮನರಂಜಿಸಿತು.ಈ ಸಂದರ್ಭದಲ್ಲಿ ಗವಾರದ ಸ್ವಾಮೀಜಿ ಉಪಸ್ಥಿತರಿದ್ದರು. ಪರಿವಾರದ ಹರ್ಷ ಹಾಗೂ ಅರವಿಂದ ನಿರೂಪಿಸಿದರು.
ಎಂ.ಜಿ.ಉಪಾಧ್ಯ , ಗೋಕರ್ಣ .
ಚಿತ್ರ: ಗೌತಮ್

0 comments:

Post a Comment