ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಬಾಗಲಕೋಟೆ ಪಾತವ್ವ (ಹೆಸರು ಬದಲಾಯಿಸಲಾಗಿದೆ)ಳಿಗೆ ಮದುವೆಯಾಗಿ ವರ್ಷ ಹತ್ತಾದರೂ ಅವಳಿಗಿನ್ನೂ ತೊಟ್ಟಿಲು ತೂಗುವ ಭಾಗ್ಯ ಬಂದೊದಗಿರಲಿಲ್ಲ. `ಬಂಜೆ' ಎಂಬ ಪಟ್ಟ ಕಟ್ಟಿಸಿಕೊಂಡ ಆಕೆಗೆ ನಾಟಿ ವೈದ್ಯರ ಮದ್ದು ಮಾಡಿದ್ದಾಯಿತು. ಕಂಡ ಕಂಡ ದೇವರಿಗೆ ಪೂಜೆ ಮಾಡಿಸಿಯಾಯಿತು. ವ್ರತ, ಪೂಜೆಗೆ ಹಣ ಖರ್ಚು ಮಾಡಿದ್ದೇ ವಿನ: ಪ್ರಯೋಜನ ಶೂನ್ಯ.ದೊಡ್ಡ ಆಸ್ಪತ್ರೆಯ ತಜ್ಞ ವೈದ್ಯರನ್ನು ಭೇಟಿ ಮಾಡಿದ್ದಾಗ ಗಂಡ- ಹೆಂಡತಿ ಇಬ್ಬರಲ್ಲೂ ದೈಹಿಕ ದೋಷವಿದ್ದು, ಮಕ್ಕಳಾಗುವ ಯೋಗ ಶೇ. 60ರಷ್ಟು ಮಾತ್ರ. ಲಕ್ಷಾಂತರ ರೂ. ಖರ್ಚು ಮಾಡಿದರೆ ಸಂತಾನಭಾಗ್ಯ ಲಭಿಸಲೂಬಹುದು.

ಆದರೂ ಅದು ಗ್ಯಾರಂಟಿಯ ಮಾತಲ್ಲ ಎಂದ ವೈದ್ಯರ ಮಾತು ಕೇಳಿ ಅವರು ಸುಸ್ತಾಗಿದ್ದರು. ತಮಗೆ ವಂಶಾಭಿವೃದ್ಧಿಯ ಕುಡಿಯ ಯೋಗವಿಲ್ಲ ಎಂದು ಹತಾಶರಾದ ಆ ದಂಪತಿ ದತ್ತು ಸ್ವೀಕರಿಸಲು ಮುಂದಾಗಿದ್ದಾಗ ದೂರದ ಸಂಬಂಧಿಯೋರ್ವರು ಹೇಳಿದರು- ಸುರ್ಯಕ್ಕೆ ಹೋಗಿ ಅರಿಕೆ ಮಾಡಿಕೊಂಡು ಬಂದಲ್ಲಿ ಮಕ್ಕಳಾಗುತ್ತದೆ ಎಂದು! ಅದೇ ರೀತಿ ಸುರ್ಯ ಶ್ರೀ ಸದಾಶಿವ ರುದ್ರ ದೇವಸ್ಥಾನಕ್ಕೆ ಬಂದು ಅಲ್ಲಿನ ದೇವರಲ್ಲಿ ಶ್ರದ್ಧಾಭಕ್ತಿಯಿಂದ ಅರಿಕೆ ಮಾಡಿಕೊಂಡ ತರುವಾಯ ಅವರಿಗೆ ಮಗುವಾಯಿತು!!


ಇದು ಕೇವಲ ಪಾತವ್ವನ ಕಥೆಯಲ್ಲ. ಸುರ್ಯ ದೇವಾಲಯಕ್ಕೆ ಇಂಥದೇ ಸುದ್ದಿ ಹೊತ್ತು ನೂರಾರು ಜನ ಬರುತ್ತಾರೆ. ಕೆಲವರು ಅರಿಕೆ ಮಾಡಲೆಂದೇ ಬಂದರೆ, ಮತ್ತೂ ಹಲವರು ತಮ್ಮ ಅರಿಕೆಯ ಫಲ ಲಭಿಸಿತು ಎಂಬ ಸಂತಸದಿಂದ ದೇವರಿಗೆ ಹರಕೆಯೊಪ್ಪಿಸಲು ಬರುತ್ತಿದ್ದಾರೆ. ಅಲ್ಲಿಗೆ ಬರುತ್ತಿರುವ ಸಾವಿರಾರು ಭಕ್ತರ ಅರಿಕೆ, ಹರಕೆಯಲ್ಲೂ ವಿಧಗಳುಂಟು.
ಸುರ್ಯದ ದೇವರಿಗೆ ಭಕ್ತರ ಹಣ, ಒಡವೆ ಇತ್ಯಾದಿ ಯಾವುದೂ ಬೇಡ. ಆತನಿಗೆ ಬೇಕಾಗಿರುವುದು ಮಣ್ಣು ಮಾತ್ರ. ಸುರ್ಯದ ಮೃತ್ಯುಂಜಯ ರೂಪಿ ಶ್ರೀ ಸದಾಶಿವ ರುದ್ರ ಮೃತ್ತಿಕೆ ಸಮರ್ಪಣೆಯಿಂದಲೇ ಸಂತೃಪ್ತ! ಭಕ್ತರ ಅರಿಕೆ ಮಣ್ಣಿನ ಮೂರ್ತರೂಪ ಪಡೆದು ಅಲ್ಲಿನ ದೇವರಿಗೆ ಸಮರ್ಪಿತವಾದಾಗಲೇ ಭಕ್ತರ ಹರಕೆ ಪರಿಪೂರ್ಣ.

ದ. ಕ. ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ `ಸುರಿಯ' ಅಥವಾ `ಸುರ್ಯ' ಕ್ಷೇತ್ರ ತನ್ನ ವೈಶಿಷ್ಟ್ಯದಿಂದಲೇ ಪ್ರಸಿದ್ಧಿ ಪಡೆದಿದೆ. ತಮ್ಮ ಅಭೀಷ್ಟಗಳು ಈಡೇರಿದಾಗ ಅವುಗಳನ್ನು ಸಂಕೇತಿಸುವ ಮಣ್ಣಿನ ಮಾದರಿಯೊಂದನ್ನು ಹರಕೆಯ ರೂಪದಲ್ಲಿ ಸಮರ್ಪಿಸುವ ಅನಾದೃಶ ಸಂಪ್ರದಾಯವೊಂದು ಅಲ್ಲಿದೆ. ಜನರ ಮನಸ್ಸಿನ ಅನೇಕಾನೇಕ ಮನಸ್ಸಿನ ಅನೇಕಾನೇಕ ಇಚ್ಛೆಗಳಂತೆ ಅಲ್ಲಿ ಸಮರ್ಪಿತವಾಗುವ ಮಣ್ಣಿನ ಗೊಂಬೆಗಳೂ ವೈವಿಧ್ಯಮಯ. ಸುರ್ಯ ಕ್ಷೇತ್ರ ಐತಿಹಾಸಿಕ ದೃಷ್ಟಿಯಿಂದಲೂ ಮಹತ್ವ ಪಡೆದ ಕಾರಣೀಕ ಕ್ಷೇತ್ರ. ಈ ಪರಿಯ ಕ್ಷೇತ್ರ ಕರ್ನಾಟಕದಲ್ಲಿ ಮಾತ್ರವಲ್ಲದೇ ದೇಶದಲ್ಲೇ ಪ್ರಾಯಶ: ಇನ್ನೊಂದೆಡೆ ಇಲ್ಲ.

ದಾರಿ ಯಾವುದಯ್ಯಾ ಸುರ್ಯಕೆ?

ಮೃಣ್ಮಯ ಮೂರ್ತಿ ಸಮರ್ಪಣೆಯ ಖ್ಯಾತಿಯ ಸುರ್ಯ ದ. ಕ. ಜಿಲ್ಲೆಯಲ್ಲಿದೆ. ಧರ್ಮಸ್ಥಳ ಸಮೀಪದ ಉಜಿರೆಯಿಂದ 4 ಕಿ. ಮೀ. ಉತ್ತರಕ್ಕೆ ಈ ಕ್ಷೇತ್ರವಿದೆ. ಉಜಿರೆಯಿಂದ ಸುರ್ಯಕ್ಕೆ ಖಾಸಗಿ ವಾಹನಗಳ ವ್ಯವಸ್ಥೆಯಿದೆ. ಸುಮಾರು 1,200 ವರ್ಷಗಳಷ್ಟು ಪುರಾತನವಾದ ಈ ದೇವಳ ಈಚೆಗಷ್ಟೇ ನವೀಕರಣಗೊಂಡಿದೆ. ಸುರಿಯ ಎಂಬ ಪುರಾತನ ಹೆಸರುಳ್ಳ ಆ ಹೆಸರು ಬರಲು ಕಾರಣ- ಹಿಂದೊಮ್ಮೆ ಹೆಂಗಸೊಬ್ಬಳು ತನ್ನ ಮಗುವಿನೊಂದಿಗೆ ಸೊಪ್ಪು ಕಡಿಯುತ್ತಿದ್ದಾಗ ಅವಳ ಕೈಯಲ್ಲಿದ್ದ ಕತ್ತಿ (ಕುಡುಗೋಲು) ಕಲ್ಲಿಗೆ ತಾಗಿ ಆ ಕಲ್ಲಿನಿಂದ ರಕ್ತ ಚಿಮ್ಮಿತು. ಅದನ್ನು ಕಂಡು ಗಾಬರಿಗೊಂಡ ಮಹಿಳೆ 'ಓ, ಸುರೆಯ...' ಎಂದು ತನ್ನ ಮಗುವನ್ನು ಕರೆದಳು. ಆ ಘಟನೆ ಬಳಿಕ ಆ ಸ್ಥಳಕ್ಕೆ ಸುರೆಯ ಎಂಬ ಹೆಸರಾಯಿತು. ಬಳಿಕ ಸುರಿಯ, ಸುರ್ಯ ಎಂದು ನಾಮಾಂತರಗೊಂಡಿತು ಎಂದು ಸ್ಥಳೀಯರು ಹೇಳುತ್ತಾರೆ. ಈ ಬಗೆಯ ಕಥೆಗಳು ದ. ಕ. ಜಿಲ್ಲೆಯ ಅನೇಕ ಪುರಾತನ ದೇವಾಲಯಗಳಲ್ಲೂ ಚಾಲ್ತಿಯಲ್ಲಿವೆ.
ಅಪ್ಪಟ ಜನಪದೀಯ ಸಂಸ್ಕೃತಿ ಸುರ್ಯದಲ್ಲಿದೆ. `ಮಣ್ಣಿನ ಹರಕೆ' ಸುರ್ಯ ಶ್ರೀ ಸದಾಶಿವ ರುದ್ರ ದೇವಸ್ಥಾನದ ವಿಶಿಷ್ಟ ಹರಕೆಯ ಸಂಪ್ರದಾಯ. ಕಡು ಬಡವನಿಗೂ ತನ್ನ ಹರಕೆಯನ್ನು ಸಲ್ಲಿಸಲು ಅವಕಾಶವಿದೆ. ದೇವರ ಸೇವೆ ಮಾಡಲು ಶಕ್ತಿ ಇಲ್ಲದವರೂ ಹಿಡಿ ಮಣ್ಣನ್ನು ಸಮರ್ಪಿಸಿ ಕೃತಕೃತ್ಯತೆಯನ್ನು ಪಡೆಯುವ ವಿಶಿಷ್ಟ ಕ್ಷೇತ್ರವಿದು.

ಈ ದೇವಳದಲ್ಲಿ ಹರಕೆ ಹಾಕುವ ಸ್ಥಳವನ್ನು `ಹರಕೆ ಬನ' ಅಥವಾ `ಅಮ್ಟಾಡಿ ಬನ' ಎಂದು ಕರೆಯುತ್ತಾರೆ. ಈ ಬನದಲ್ಲಿ ಹಲವಾರು ಮರಗಳ ನಡುವೆ ವಿವಿಧ ರೀತಿಯ ಮಣ್ಣಿನ ಮೂರ್ತಿಗಳ ಒಂದು ದೊಡ್ಡ ರಾಶಿಯನ್ನೇ ಕಾಣಬಹುದು. ಭೂಮಿಯ ಮೇಲ್ಗಡೆ ಹರಡಿದ ಲಕ್ಷ ಲಕ್ಷ ಗೊಂಬೆಗಳಲ್ಲದೇ ಭೂಮಿಯ ಅಡಿಯಲ್ಲಿಯೂ 4 ಅಡಿ ಆಳದಿಂದಲೂ ಈ ಗೊಂಬೆಗಳ ರಾಶಿ ಹರಡಿದೆ. ಈ ರಾಶಿಯ ಮಧ್ಯಭಾಗದಲ್ಲಿ 2 ಲಿಂಗಗಳನ್ನು ಕಾಣಬಹುದು. ಈ ಲಿಂಗಗಳು ಶಿವ ಪಾರ್ವತಿಯರ ಲಿಂಗಗಳಾಗಿವೆ.

ಮಹರ್ಷಿಯ ತಪೋಭೂಮಿ
ಹಲವಾರು ವರ್ಷಗಳ ಹಿಂದೆ ಭೃಗು ಮಹರ್ಷಿ ಶಿವನನ್ನು ಕುರಿತು ತಪಸ್ಸು ಮಾಡುತ್ತಿದ್ದ. ಆತನ ತಪಕ್ಕೆ ಒಲಿದು ಈಶ್ವರ ಪಾರ್ವತಿಯರು ಪ್ರತ್ಯಕ್ಷರಾದರು. ಮುಂದೆ ಆ ಸ್ಥಳದಲ್ಲಿ ಶಿವ- ಪಾರ್ವತಿಯರ ಲಿಂಗಗಳು ಉದ್ಭವವಾದವು ಎಂದು ಅಲ್ಲಿನ ಸ್ಥಳಪುರಾಣ ಹೇಳುತ್ತದೆ. ಈ ಲಿಂಗಗಳ ಸಮೀಪದಲ್ಲಿ ಎರಡು ಪಾದಗಳಿದ್ದು, ಅವು ಭೃಗು ಮಹರ್ಷಿಯದು ಎಂದು ಹೇಳುತ್ತಾರೆ. ಕಾಲಾಂತರದಲ್ಲಿ ಬನದಲ್ಲಿದ್ದ ದೇವತಾ ಸಾನ್ನಿಧ್ಯ ಸ್ಥಾನಾಂತರಗೊಂಡು ಈಗ ಕಾಣುವ ದೇವಸ್ಥಾನದಲ್ಲಿ ನೆಲೆಗೊಂಡು ಬಳಿಕ ಅದಕ್ಕೊಂದು ದೇವಸ್ಥಾನದ ರೂಪ ಬಂತೆಂದು ಹೇಳಲಾಗಿದೆ. ಇನ್ನೊಂದು ಸ್ಥಳ ಪುರಾಣ ಪ್ರಕಾರ ದೇವಳದೆದುರಿನ `ದೇವರಗುಡ್ಡ'ದಿಂದ ಈಗಿನ ಸ್ಥಳಕ್ಕೆ ದೇವರು ಬಂದರೆಂಬ ನಂಬಿಕೆಯೂ ಇದೆ.

ದೇವಸ್ಥಾನ ನಿರ್ಮಾಣ

ಶ್ರೀಕ್ಷೇತ್ರದ ಮೂಲದೈವವಾದ ಶ್ರೀ ಸದಾಶಿವ ರುದ್ರ ದೇವರ ಪ್ರತಿಷ್ಠಾಪನೆ ಸುಮಾರು 1 ಸಾವಿರ ವರ್ಷ ಹಿಂದೆ ಮಾಡಲಾಗಿದೆ ಎಂದು ತಿಳಿದುಬರುತ್ತದೆ. ಆದರೆ, ಆ ಬಗ್ಗೆ ದೇವಳದಲ್ಲಿ ಯಾವುದೇ ಸ್ಪಷ್ಟ ದಾಖಲೆ, ಪುರಾವೆಗಳಿಲ್ಲ. ದೇವರ ಸನ್ನಿಧಿಯ ತೀರ್ಥಮಂಟಪದಲ್ಲಿರುವ ನಂದಿ ಮೂರ್ತಿಯನ್ನು ಕ್ರಿ. ಶ. 1497ರಲ್ಲಿ ಪ್ರತಿಷ್ಠಾಪಿಸಲಾಯಿತೆಂಬ ಶಿಲಾಲೇಖನವಿದೆ. ಈ ಶಿಲಾ ಲೇಖನದಲ್ಲಿ ಲಕ್ಷ್ಮಪ್ಪ ಅರಸರಾದ ಬಂಗರಾಜ ಒಡೆಯರ ಕಾಲದಲ್ಲಿ ನೂಜಿ ಸಂಕಪ್ಪ ಅತಿಕಾರಿ ಮಗ ನಾರಾಯಣ ಸೇನ ಬೊವಾ ಎಂಬಾತ ಸುರ್ಯ ದೇವರ ಸನ್ನಿಧಿಯಲ್ಲಿ ನಂದಿಕೇಶ್ವರ ಪ್ರತಿಷ್ಠಾಪಿಸಿದರೆಂದು ಬರೆಯಲಾಗಿದೆ. ಅಮೃತ ಪಡಿ ನೈವೇದ್ಯಕ್ಕಾಗಿ ಇಮ್ಮಡಿ ಲಕ್ಷ್ಮಪ್ಪ ಬಂಗ ಒಡೆಯ 32 ಮುಡಿ ಹುಟ್ಟುವಳಿ ಗದ್ದೆ ಉಂಬಳಿ ಬಿಟ್ಟ ಬಗ್ಗೆ ಉಡುಪಿ ಪೇಜಾವರ ಮಠದಲ್ಲಿ ತಾಮ್ರ ಶಾಸನ ಇದೆ ಎಂದು ತಿಳಿದುಬಂದಿದೆ.

ಮಣ್ಣಿನ ಹರಕೆ


ದೇವಳದೆದುರಿನ ಬನ ಹರಕೆ ಬನವೆಂದೇ ಪ್ರಸಿದ್ಧ. ಅರಿಕೆಗಾಗಿ ಕ್ಷೇತ್ರಕ್ಕೆ ಬರುವ ಭಕ್ತರು ಮೊದಲಿಗೆ ಬನಕ್ಕೆ ತೆರಳಿ ಅಲ್ಲಿ ಅರಿಕೆ ಮಾಡಿಕೊಂಡು ಬಂದು ದೇವರ ದರ್ಶನ ಪಡೆಯಬೇಕೆಂಬುದು ಇಲ್ಲಿನ ನಿಯಮ. ಮಣ್ಣಿನ ಮೂರ್ತಿ ಹರಕೆ ಸಲ್ಲಿಸುವುದು ಇಲ್ಲಿನ ವಿಶೇಷ. ನೂರಾರು ವರ್ಷಗಳಿಂದ ಜನರು ಇಲ್ಲಿ ಸಲ್ಲಿಸಿದ ಹರಕೆಗಳ ರಾಶಿ ಬಹು ಎತ್ತರಕ್ಕೆ ಬೆಳೆದಿದೆ. ವೈವಿಧ್ಯಪೂರ್ಣವಾದ ಮಣ್ಣಿನ ಮೂರ್ತಿಗಳನ್ನಿಲ್ಲಿ ಕಾಣಬಹುದು. ನಾನಾ ವಿಧದ ಕಷ್ಟಕಾರ್ಪಣ್ಯಗಳಿಗೆ ಒಳಗಾದ ಜನ ಇಲ್ಲಿಗೆ ಬಂದು ಮೌನವಾಗಿ ಭಕ್ತಿಯಿಂದ ತಮ್ಮ ಸಮಸ್ಯೆಗಳನ್ನು ಭಗವಂತನಲ್ಲಿ ನಿವೇದಿಸಿ ಇದರ ಪರಿಹಾರವಾದೊಡನೆ ಅದಕ್ಕೆ ಸಂಬಂಧಿಸಿದ ಮಣ್ಣಿನ ಮೂರ್ತಿಯನ್ನು ಈ ಬನದಲ್ಲಿ ತಂದೊಪ್ಪಿಸುತ್ತಾರೆ. ಇದರ ವಿಧಿ ವಿಧಾನಗಳು ಬಲು ಸರಳ. ತಮ್ಮ ಊರಿನ ಕುಂಬಾರರಲ್ಲಿ ಅಪೇಕ್ಷಿತ ಮೂರ್ತಿ ಮಾಡಿಸಿ ತಂದು ಹಾಕಬಹುದು. ಅಥವಾ ತಾವೇ ತಮ್ಮಿಷ್ಟದ ಪ್ರಕಾರ ಬೊಂಬೆ ತಯಾರಿಸಿ ತಂದು ಹಾಕುವವರೂ ಇದ್ದಾರೆ.

ಮಣ್ಣಿನ ಮೂರ್ತಿಗಳ ವಿರಾಟ್ಸ್ವರೂಪ

ಸುರ್ಯ ಸದಾಶಿವ ರುದ್ರ ಪ್ರಸಿದ್ಧವಾಗಿರುವುದೇ ಇಲ್ಲಿನ ಮಣ್ಣಿನ ಮೂರ್ತಿಗಳಿಂದ. ಆತ ದುರ್ಬಲರ ದೇವತೆ. ಈತನನ್ನು ಪ್ರಾರ್ಥಿಸಿಕೊಂಡರೆ ಅಭೀಷ್ಟ ಈಡೇರುವುದು ಗ್ಯಾರಂಟಿ ಎಂಬುದು ಅಲ್ಲಿನ ಭಕ್ತಾದಿಗಳ ನಂಬುಗೆ. ಹರಕೆ ಹಾಕುವ ಬನದಲ್ಲಿ ಕಾಣುವ ನೋಟವೇ ಅದಕ್ಕೆ ಸಾಕ್ಷಿ. ವೈವಿಧ್ಯಮಯ ಮೂರ್ತಿಗಳ ಬ್ರಹ್ಮಾಂಡದ ವಿರಾಟ್ದರ್ಶನವೇ ಅಲ್ಲಿ ನೋಡುಗರಿಗಾಗುತ್ತದೆ. ಜೀವಂತ ಪ್ರಾಣಿಗಳ ಹಾಗೂ ನಿರ್ಜೀವ ವಸ್ತುಗಳ ಮಣ್ಣಿನ ಪ್ರತಿಕೃತಿಗಳು ಅಲ್ಲಿ ಕಾಣಸಿಗುತ್ತವೆ. ಅದು ಮನುಷ್ಯನ ಅಂಗಾಂಗಗಳಿರಬಹುದು, ಮನೆ ಇತ್ಯಾದಿ ಕಟ್ಟಡಗಳಿರಬಹುದು, ಕಚೇರಿ, ನೌಕರಿಯನ್ನು ಪ್ರತಿನಿಧಿಸುವ ಪೆನ್ನು- ಟೇಬಲ್- ಕುರ್ಚಿಗಳು, ಮಕ್ಕಳಾಗುವ ಬಯಕೆಯ ಅರಿಕೆ ಮಾಡಿ ಹರಕೆ ತೀರಿಸಿದ ತೊಟ್ಟಿಲು- ಮಗು ಪ್ರತಿಕೃತಿಗಳು ಕಂಡುಬರುತ್ತವೆ. ಈಚೆಗಷ್ಟೇ ಅಲ್ಲಿ ಮೊಬೈಲ್ನ ಪ್ರತಿಕೃತಿಯೊಂದನ್ನು ಹರಕೆ ತೀರಿಸಲು ತಂದಿದ್ದರು. ಕಳೆದುಹೋಗಿದ್ದ ತಮ್ಮ ಮೊಬೈಲ್ ಬೊಂಬೆಯಂತೆ ಅದು. ಹರಕೆಯ ಮಟ್ಟ ಆ ಪರಿ ತಲುಪಿದೆ!
- ಕಿರಣ್ ಮಂಜನಬೈಲು.

0 comments:

Post a Comment