ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಫೆ.28/2012
ಸಂಪಾದಕೀಯ
ಓದುಗ ಬಂಧುಗಳೇ ಇದು ನಿಮ್ಮ ಯಶಸ್ಸು...ನಮ್ಮದಲ್ಲ...ನೀವು ಮುನ್ನಡೆಸಿದಿರಿ...ನಾವು ನಡೆದೆವು...ನೀವು ದಾರಿ ತೋರಿದಿರಿ...ಆ ಹಾದಿಯಲ್ಲಿ ನಾವು ಸಾಗಿದೆವು...ಹೌದು...ನಿಮ್ಮೆಲ್ಲರ ಪ್ರೀತಿ , ಪ್ರೋತ್ಸಾಹ, ಸ್ಫೂರ್ತಿ , ಸಹಕಾರ, ಇದೆಲ್ಲದರ ಪ್ರತೀಕ ಈ ಕನಸು.ಕಾಂ ಇಂದು ಯಶಸ್ವೀ ನಾಲ್ಕು ವರುಷಗಳನ್ನು ಪೂರೈಸಿ ಐದನೇ ವರುಷಕ್ಕೆ ಅಡಿಯಿಟ್ಟಿದೆ. ಮೊಟ್ಟ ಮೊದಲನೆಯದಾಗಿ ಈ ಕನಸಿನ ಯಶಸ್ಸಿಗೆ ಕಾರಣರಾದ ನಿಮಗೆ ನಮ್ಮ ಮೊದಲ ಪ್ರಣಾಮಗಳು...

ಕಳೆದ ನಾಲ್ಕು ವರುಷಗಳ ಹಿಂದೆ ಕನಸೊಂದು ಚಿಗುರೊಡೆದಾಗ ನಿಜಕ್ಕೂ ಈ ರೀತಿಯ ಕ್ಷಿಪ್ರ ಪ್ರಗತಿಗೆ ಇದೊಂದು ವೇದಿಕೆಯಾಗಬಲ್ಲದು ಎಂದು ನಾನೂ ಊಹಿಸಿರಲಿಲ್ಲ... ಹೌದು...ಶ್ರೀ ರಾಮಚಂದ್ರಾಪುರ ಮಠದ ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಅಂದೇ ಹರಸಿದ್ದರು...ಶ್ರೀ ರಾಮ ಕನಸು ಕಂಡಿದ್ದ...ಎಲ್ಲ ಸಾಧಕರೂ ಒಂದೊಂದು ಕನಸು ಕಂಡಿದ್ದರು...ಹಾಗೆ ನೀನು ಕೂಡಾ...ನಿನ್ನ ಕನಸು ನನಸಾಗಲಿ...ಯಶಗಳಿಸಲಿ...ಎಂದು... ಶ್ರೀಗಳ ಆ ಪೂರ್ಣಾನುಗ್ರಹ ಆಶೀರ್ವಾದದ ನೆರಳಲ್ಲಿ , ನಿಮ್ಮೆಲ್ಲರ ಪ್ರೋತ್ಸಾಹದಲ್ಲಿ ಜೊತೆ ಜೊತೆಗೆ ನನ್ನ ಪ್ರೀತಿಯ ಅಪ್ಪ, ಅಮ್ಮ, ಅಕ್ಕಂದಿರು , ಮಕ್ಕಳು, ಭಾವಂದಿರು, ಗೆಳೆಯರು ಇವರೆಲ್ಲರ ಪ್ರೀತಿಪೂರ್ವಕ ಆಶೀರ್ವಾದ, ಪ್ರೋತ್ಸಾಹದೊಂದಿಗೆ ಈ ಸಾಧನೆ ಸಾಧ್ಯವಾಗಿದೆ. ಇದೀಗ ಬಾಳಸಂಗಾತಿ ಜೊತೆಯಾಗಿದ್ದಾಳೆ...ಇನ್ನು ಕನಸಿನ ಕೆಲಸ ಮತ್ತಷ್ಟು ಸುಲಭವಾಗಲಿದೆ.

ನಮ್ಮ ಹಾದಿ ಹೂ ಹಾಸಿನ ಸುಗಮ ಹಾದಿಯಾಗಿರಲಿಲ್ಲ...ಬದಲಾಗಿ ಕಲ್ಲು ಮುಳ್ಳು... ದುರ್ಗಮವಾಗಿತ್ತು... ಠೀಕೆ, ಚುಚ್ಚು ನುಡಿಗಳು ನಿರಂತರವಾಗಿತ್ತು... ನಾಲ್ಕು ವರುಷಗಳಲ್ಲಿ ಸಾವಿರಾರು ಮಾತುಗಳು ಕೇಳಿಬಂದಿದ್ದವು... ಆದರೆ ಅದಕ್ಕೆಲ್ಲ ಸಣ್ಣ ನಗೆಯೊಂದನ್ನು ಸೂಸಿ ಮೌನವೇ ಉತ್ತರ ಎಂಬಂತೆ ನಡೆದದ್ದಾಯಿತು... ಆ ನಡೆ ...ಆ ಮೌನ ಸಾಧನೆಗೊಂದು ಸ್ಫೂರ್ತಿಯಾಗುತ್ತಾ ಬಂದವು... ಹೌದು..ಆ ಕಾರಣಕ್ಕಾಗಿಯೇ ನಾಲ್ಕು ವರುಷಗಳ ಕಾಲವೂ ಹಲವು ನೋವು , ಠೀಕೆಗಳ ಮಡುವಿನಲ್ಲಿಯೇ ಸುಖವನ್ನು ಕಾಣುತ್ತಾ ಆ ಕನಸನ್ನು ಕಟ್ಟುತ್ತಾ ಪೋಷಿಸುತ್ತಾ ಜತನದಿಂದ ಕಾಪಾಡುತ್ತಾ ಬಂದೆನು...ಅದರಲ್ಲೂ ತೃಪ್ತಿ ಕಂಡೆನು...

ಮೊಟ್ಟ ಮೊದಲನೆಯದಾಗಿ "ನಾವು ಜಾಹೀರಾತು ಪ್ರಕಟಿಸುವುದಿಲ್ಲ...ಪೇಯ್ಡ್ ನ್ಯೂಸ್ ನಗಳಿಗೆ ನಮ್ಮ ತಾಣದಲ್ಲಿ ಜಾಗವಿಲ್ಲ " ಎಂದು ಬಹಿರಂಗವಾಗಿ ಘೋಷಿಸಿ ಆ ರೀತಿಯಲ್ಲೇ ನಡೆದುಕೊಂಡು ಬಂದ ಕನ್ನಡದ ಸುದ್ದಿ ತಾಣ ಈ ಕನಸು.ಕಾಂ ಎಂಬುದನ್ನು ಮತ್ತೊಮ್ಮೆ ನಿಮಗೆ ನೆನಪಿಸುತ್ತಿದ್ದೇನೆ. ಮಾತಿನಲ್ಲೊಂದು ಕೃತಿಯಲ್ಲೊಂದು ಆಗ ಬಾರದು.ಏನು ಹೇಳುತ್ತೇವೋ ಅದನ್ನು ಮಾಡಿ ತೋರಿಸಬೇಕೆಂಬುದು ನನ್ನ ಆಸೆ. ಅದರಂತೆ ಈ ಕನಸನ್ನು ಕಟ್ಟಿ ಬೆಳೆಸುವ ಪ್ರಯತ್ನ ನಿರಂತರವಾಗಿ ಮುನ್ನಡೆಯುತ್ತಿದೆ.

ಹತ್ತು ಹಲವು ಹೊಸನತಕ್ಕೆ ಈ ಕನಸು ನಿರಂತರ ತನ್ನನ್ನು ಒಡ್ಡಿಕೊಳ್ಳುತ್ತಿದೆ. ಮೊಟ್ಟ ಮೊದಲ ಬಾರಿಗೆ ಫೋಟೋ ಕಾಮಿಕ್ಸ್ ಪ್ರಕಟಿಸಿದೆ. ನಿರಂತರ ವಿದ್ಯಾರ್ಥಿಗಳ ಬರವಣಿಗೆಗೆ ವೇದಿಕೆ ಒದಿಗಿಸಿದೆ. ಹಿರಿ ಕಿರಿಯ ಬರಹಗಾರರಿಗೆ , ಉದಯೋನ್ಮುಖ ಬರಹಗಾರರಿಗೆ ವೇದಿಕೆ ಕಲ್ಪಿಸಿದೆ. ಸಾಕ್ಷ್ಯಚಿತ್ರಕ್ಕೆ ಒಂದಷ್ಟು ಜಾಗ ಮೀಸಲಿರಿಸಿದೆ. ನೇರ ವರದಿಯ ಮೂಲಕ ಜನತೆಯ ಮನ ಗೆಲ್ಲುವಲ್ಲಿ ಯಶ ಕಂಡಿದೆ. ಜನಪರ ಹೋರಾಟವನ್ನು ಪ್ರಾರಂಭಿಸುವ ಮೂಲಕ ಗ್ರಾಮೀಣ ಜನತೆಯ ಸಮಸ್ಯೆ ನಿವಾರಣೆಗೆ ಧೈರ್ಯ ತುಂಬಿದೆ.

ವೈಶಿಷ್ಟ್ಯಪೂರ್ಣ ವಿನ್ಯಾಸ, ನವೀನ ವಿಷಯಗಳನ್ನೊಳಗೊಂಡು ಈ ಕನಸು ದಿನ ದಿನವೂ ಹೊಸ ಪ್ರಯೋಗಗಳ ಮೂಲಕ ಎಲ್ಲೂ ಓದುಗರಿಗೆ ಹೇರಿಕೆಯಾಗದಂತೆ; ಆಭಾಸ ಎನಿಸದಂತೆ ; ಕೊಳಕು ಅಶ್ಲೀಲ ವಿಚಾರಗಳಿಂದ ಮುಕ್ತವಾಗಿ ಉತ್ತಮ ಅಂಶಗಳನ್ನು ಓದುಗರ ಮುಂದಿಡುತ್ತಾ ಬಂದಿದೆ... ನಾಲ್ಕು ವರುಷಗಳನ್ನು ಅತ್ಯಂತ ಯಶಸ್ವಿಯಾಗಿ ಕಳೆದಿದೆ. ಇದೀಗ ಇಂದಿನಿಂದ ಐದರ ಸಂಭ್ರಮದಲ್ಲಿ ಈ ಕನಸು ಮುಂದುವರಿಯಲಿದೆ. ಸಂಭ್ರಮವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಆಸೆ ನನ್ನದು...ಹುಟ್ಟು ಹಬ್ಬದ ಆಚರಣೆ ಮಾರ್ಚ್ ತಿಂಗಳ 31ರಂದು ನಡೆಯಲಿದೆ. ತಪ್ಪದೆ ನೀವೆಲ್ಲಾ ಬನ್ನಿ...ಕನಸು ಕಟ್ಟೋಣ...

ಹರೀಶ್ ಕೆ.ಆದೂರು
ಸಂಪಾದಕ

1 comments:

Shankara Bhat said...

"ಹರೇ ರಾಮ".ಈ-ಕನಸು;ತನ್ನ 5ನೇ ವರ್ಷಕ್ಕೆ ಕಾಲಿಡುತ್ತಿರುವ ಈ ಶುಭಸಂದರ್ಭದಲ್ಲಿ ಹೃತ್ಪೂರ್ವಕ "ಶುಭಾಶಯ"ಗಳು.ಶ್ರೀಗುರುಗಳ ಆಶೀರ್ವಾದ ಸದಾ ನಿಮ್ಮ ಮೇಲಿರಲಿ.
ನಿಮ್ಮ ಶಂಕರ ಭಟ್ಟ ಬಾಲ್ಯ.

Post a Comment