ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸಾಹಿತ್ಯ

2011 ರ ಮಧ್ಯದಲ್ಲಿ ನನ್ನ ಅದೃಷ್ಟವೋ ಕಾಕತಾಳೀಯವೋ ಎಂಬಂತೆ ಕೈಗೆ ಸಿಕ್ಕ ಅಪರೂಪದ ಪುಸ್ತಕ ಆಂಟನಿ ಸಮ್ಮರ್ಸ್ ವಿರಚಿತ ಹಾಲಿವುಡ್ ತಾರೆ ಮರ್ಲಿನ್ ಮನ್ರೋ ಆತ್ಮಕಥೆ. ಮರ್ಲಿನ್ ಮನ್ರೋ ಎಂಬ ಕೌತುಕದ ನಟಿಯ ಜೀವನವನ್ನು ಸಂಶೋಧನಾತ್ಮಕವಾಗಿಯೂ, ವಿಮರ್ಶಾತ್ಮಕವಾಗಿಯೂ ಅಕ್ಷರರೂಪಕ್ಕಿಳಿಸಿದ ಅಪರೂಪದ ಪುಸ್ತಕವಿದು.ಜಗತ್ತು ಎಂದೆಂದೂ ಮರೆಯಲಾಗದಂತಹ ಇಂಥಾ ಹಾಲಿವುಡ್ ತಾರೆಯ ಬಗ್ಗೆ ಚಲನಚಿತ್ರವೊಂದು ತಯಾರಾಗುತ್ತಿದೆ ಎಂಬ ಸುಳಿವು ಸಿಕ್ಕಿದಾಗಿನಿಂದಲೂ ನನ್ನ ಮಟ್ಟಿಗೆ ಇದೊಂದು ಬಹು ನಿರೀಕ್ಷಿತ ಚಿತ್ರವಾಗಿತ್ತು. ಕಾಲಿನ್ ಕ್ಲಾರ್ಕ್ ಬರೆದ ಕೃತಿಯನ್ನಾಧರಿಸಿ ಸೈಮನ್ ಕರ್ಟಿಸ್ ನಿರ್ದೇಶನದ ಸಾರಥ್ಯದಲ್ಲಿ ಅಕ್ಟೋಬರ್ 2011 ರಲ್ಲಿ "ಮೈ ವೀಕ್ ವಿದ್ ಮರ್ಲಿನ್ " ತೆರೆಗೆ ಬಂತಾದರೂ ಭಾರತದ ಚಿತ್ರಮಂದಿರಗಳಲ್ಲಿ ಕಳೆದವಾರವಷ್ಟೇ ಪ್ರದರ್ಶನವನ್ನು ಕಂಡಿದೆ. ಪ್ರತಿಷ್ಠಿತ ಆಸ್ಕರ್ ಪುರಸ್ಕಾರದ ಋತುವಿನಲ್ಲಿ ಭಾರತದಲ್ಲಿ ತೆರೆಕಂಡಂತಹ ಚಿತ್ರ ಮರ್ಲಿನ್ ಮನ್ರೋಳನ್ನು ಅದ್ಭುತ ದೃಶ್ಯಕಾವ್ಯವನ್ನಾಗಿಸಿ ಜನರ ಮುಂದಿರಿಸಿದೆ ಎಂಬುದರಲ್ಲಿ ಸಂಶಯವಿಲ್ಲ.

"ಮೈ ವೀಕ್ ವಿದ್ ಮರ್ಲಿನ್" ಕಾಲಿನ್ ಕ್ಲಾರ್ಕ್ ಬರೆದ "ದ ಪ್ರಿನ್ಸ್, ದ ಶೋ ಗರ್ಲ್ ಅಂಡ್ ಮಿ" ಮತ್ತು "ಮೈ ವೀಕ್ ವಿದ್ ಮರ್ಲಿನ್" ಎಂಬ ಕೃತಿಗಳನ್ನಾಧರಿಸಿದ ಚಿತ್ರ. 1957 ರ "ದ ಪ್ರಿನ್ಸ್ ಆಂಡ್ ದ ಶೋ ಗರ್ಲ್ " ಚಿತ್ರೀಕರಣದ ಸಂದರ್ಭದಲ್ಲಿ ಮರ್ಲಿನ್ ಮನ್ರೋ ಜೊತೆ ಕಾಲಿನ್ ಕ್ಲಾರ್ಕ್ ಕಳೆದ ಅಪೂರ್ವ ಕ್ಷಣಗಳೇ ಈ ಚಿತ್ರದ ಮೂಲ ಕಥಾವಸ್ತು.


ನಿರ್ದೇಶಕನಾಗಿ ಸೈಮನ್ ಕರ್ಟಿಸ್ ಗೆ ಇದು ಚೊಚ್ಚಲ ಚಿತ್ರವಾದರೂ ಅನುಭವಿ ಚಿತ್ರನಿರ್ದೇಶಕರಿಗೆ ಸಾಟಿಯೆಂಬಂತೆ ಅಚ್ಚುಕಟ್ಟಾಗಿ ಚಿತ್ರವನ್ನು ನಿರ್ಮಿದ್ದಾರೆ. ಮಿಶೆಲ್ ವಿಲಿಯಮ್ಸ್, ಎಮ್ಮಾ ವ್ಯಾಟ್ಸನ್, ಕೆನ್ನೆತ್ ಬ್ರನ್ನಹ್ ರಂತಹ ಅನುಭವಿ ತಾರಾಗಣದ ಜೊತೆಯೇ ಪ್ರತಿಭಾನ್ವಿತ ತಂತ್ರಜ್ಞರನ್ನು ಹೊಂದಿದ್ದ ಚಿತ್ರತಂಡವು ಬಹುದಿನಗಳ ನಂತರ ಒಂದು ಸುಂದರ ಬಯಾಗ್ರಾಫಿಕಲ್ ಚಲನಚಿತ್ರವನ್ನು ತೆರೆಯ ಮೇಲೆ ಮೂಡಿಸಿದೆ.

1956 ರಲ್ಲಿ "ದ ಪ್ರಿನ್ಸ್ ಆಂಡ್ ದ ಶೋ ಗರ್ಲ್ " ಚಿತ್ರೀಕರಣಕ್ಕಾಗಿ ಅಂದಿನ ಚಿತ್ರತಂಡ ಬೀಡುಬಿಟ್ಟಿದ್ದ ಲಂಡನ್ನಿನ ಸ್ಟುಡಿಯೋವನ್ನೇ ಈ ಚಿತ್ರದಲ್ಲೂ ಬಳಸಿಕೊಳ್ಳಲಾಗಿದೆ ಮತ್ತು ನಟಿ ಮಿಶೆಲ್ ವಿಲಿಯಮ್ಸ್ ಗೆ ಸ್ಟುಡಿಯೋದಲ್ಲಿರುವ ಮರ್ಲಿನ್ ಮನ್ರೋ ಡ್ರೆಸ್ಸಿಂಗ್ ರೂಮನ್ನೇ ಚಿತ್ರೀಕರಣದ ಸಂದರ್ಭದಲ್ಲಿ ನೀಡಲಾಗಿತ್ತು.

ಚಿತ್ರಕಥೆ, ಮೇಕಪ್ ಸೇರಿದಂತೆ ಎಲ್ಲಾ ವಿಭಾಗದಲ್ಲೂ ಕಾಣಸಿಗುವ ಐವತ್ತರ ದಶಕದ ಗಾಂಭೀರ್ಯತೆ ಚಿತ್ರದಲ್ಲಿ ಎದ್ದು ಕಾಣುವ ಅಂಶ. ಚಿತ್ರದ ಮುಖ್ಯಪಾತ್ರವಾದ ಮರ್ಲಿನ್ ಮನ್ರೋ ಪಾತ್ರವನ್ನು ನಟಿ ಮಿಶೆಲ್ ವಿಲಿಯಮ್ಸ್ ಮನ್ರೋಳೇ ಜೀವತಾಳಿ ಬಂದಂತೆ ಮನೋಜ್ಞವಾಗಿ ಅಭಿನಯಿಸಿದ್ದಾರೆ. "ಇದು ನನಗೆ ಈವರೆಗೆ ಸಿಕ್ಕಂತಹ ಪಾತ್ರಗಳಲ್ಲೇ ಬಹು ವಿಭಿನ್ನವಾದದ್ದು. ಚಿತ್ರೀಕರಣಕ್ಕೆ ಪೂರಕವಾಗಲು ಆರು ತಿಂಗಳಿಗಿಂತಲೂ ಹೆಚ್ಚು ಸಮಯ ಮರ್ಲಿನ್ ಮನ್ರೋ ಆತ್ಮಕಥೆ, ಸಾಕ್ಷ್ಯಚಿತ್ರಗಳು, ವೈಯಕ್ತಿಕ ಪತ್ರಗಳು, ಸ್ವರಚಿತ ಕವನಗಳು, ಅಭಿನಯಿಸಿದ ಚಲನಚಿತ್ರಗಳು, ಧ್ವನಿ ಮುದ್ರೀಕರಿಸಿದ ಸಂದರ್ಶನಗಳು, ನಡೆಯುವ ಮತ್ತು ನೃತ್ಯಭಂಗಿಗಳು ಹೀಗೆ ಬಹಳಷ್ಟನ್ನು ಅಧ್ಯಯನ ಮಾಡಿದೆ.

ಚಿತ್ರತಂಡವೂ ಈ ನಿಟ್ಟಿನಲ್ಲಿ ತೆರೆಯ ಹಿಂದೆ ಬಹಳಷ್ಟು ಸಂಶೋಧನಾತ್ಮಕವಾದ ಪ್ರಯತ್ನವನ್ನು ಮಾಡಿದೆ" ಎಂದು ಮಿಶೆಲ್ ವಿಲಿಯಮ್ಸ್ ಇತ್ತೀಚೆಗಿನ ಟೆಲಿವಿಷನ್ ಸಂದರ್ಶನವೊಂದರಲ್ಲಿ ತನ್ನ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ. ಮರ್ಲಿನ್ ಮನ್ರೋಳ ಚಂಚಲ ತುಂಟ ಭಂಗಿಗಳು, ಖಿನ್ನತೆ-ನೀರಸತೆ, ಚಿತ್ರೀಕರಣದ ಸಂದರ್ಭದಲ್ಲಿ ಉಂಟಾಗುವ ತಳಮಳ, ಇಲ್ಲವೇ ಇಲ್ಲದ ಸಮಯ ಪರಿಪಕ್ವತೆ, ಪ್ರಖ್ಯಾತಿಯ ಮೇಲ್ಪದರದ ಒಳಗೆ ಇರುವ ಮುಗ್ಧ ಮಗುವಿನ ಭಾವ, ಸರಳವಾದ ಮೇಕಪ್ ಮತ್ತು ಉಡುಗೆ ತೊಡುಗೆ, ನಟನಾ ತರಬೇತುಗಾರ್ತಿ ಪೌಲಾ ಸ್ಟ್ರಾಸ್ ಬರ್ಗ್ ತೋರುವ ಅತಿಯಾದ ಮುದ್ದು ಹೀಗೆ ಎಲ್ಲವನ್ನೂ ನೈಜಸಂದರ್ಭಕ್ಕೆ ಕೊಂಚವೂ ಆಭಾಸವಾಗದಂತೆ ಚಿತ್ರದಲ್ಲಿ ತೋರಿಸಲಾಗಿದೆ. ಇನ್ನು ಮುಖ್ಯಭೂಮಿಕೆಯಲ್ಲಿರುವ ನಟಿ ಮಿಶೆಲ್ ವಿಲಿಯಮ್ಸ್ ಒಂದೆರಡು ಹಾಡುಗಳಿಗೂ ದನಿಯಾಗಿದ್ದಾರೆ.ಇನ್ನು ಯಶಸ್ಸಿನ ಬಗ್ಗೆ ಹೇಳುವುದಾದರೆ "ಮೈ ವೀಕ್ ವಿದ್ ಮರ್ಲಿನ್" ವಿಶ್ವದಾದ್ಯಂತ ಅದ್ಭುತ ವಿಮರ್ಶೆಯನ್ನೂ ಪುರಸ್ಕಾರಗಳ ಸುರಿಮಳೆಯನ್ನೂ ಪಡೆದುಕೊಂಡಿದೆ. ಅಮೆರಿಕಾದಲ್ಲಿ ತೆರೆಗೆ ಬಂದ ಮೊದಲ ಐದು ದಿನಗಳಲ್ಲಿ ಎರಡು ಮಿಲಿಯನ್ ಗಿಂತಲೂ ಹೆಚ್ಚು ಸಂಪಾದಿಸಿದ ಚಿತ್ರವು ಬಾಕ್ಸ್ ಆಫೀಸ್ ನ ಆರು ವಾರಗಳಲ್ಲಿ ಬರೋಬ್ಬರಿ ಹತ್ತು ಮಿಲಿಯನ್ ಗಳಿಸಿದೆ. ಚಿತ್ರವು ರೋಮ್, ದುಬೈ, ಹಾಲಿವುಡ್ ಫಿಲಂ ಫೆಸ್ಟಿವಲ್ ನಂತಹ ಪ್ರತಿಷ್ಠಿತ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಯಶಸ್ವಿ ಪ್ರದರ್ಶನಗಳನ್ನು ಕಂಡಿದೆ.

ಈ ಬಾರಿಯ ಆಸ್ಕರ್ ಪುರಸ್ಕಾರಕ್ಕಾಗಿ ಶ್ರೇಷ್ಠ ನಟಿ ಮತ್ತು ಶ್ರೇಷ್ಠ ಪೋಷಕ ನಟ ವಿಭಾಗದಲ್ಲಿ ಮಿಶೆಲ್ ವಿಲಿಯಮ್ಸ್ ಮತ್ತು ಕೆನೆತ್ ಬ್ರನಹ್ ನಾಮನಿರ್ದೇಶನಗೊಂಡಿದ್ದಾರೆ. ಮರ್ಲಿನ್ ಮನ್ರೋಳ ಪಾತ್ರಾಭಿನಯಕ್ಕೆ ನಟಿ ಮಿಶೆಲ್ ವಿಲಿಯಮ್ಸ್ ಈ ವರ್ಷದ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಮತ್ತು ಬ್ರಿಟಿಷ್ ಅಕಾಡೆಮಿಯ ಮ್ಯೂಸಿಕಲ್-ಕಾಮಿಡಿ ವಿಭಾಗದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದ್ದಾರೆ.

ಅಷ್ಟೇ ಅಲ್ಲದೆ ಹಾಲಿವುಡ್ ಫಿಲ್ಮ್ ಫೆಸ್ಟಿವಲ್, ಡೆಸೆರ್ಟ್ ಪಾಮ್ ಅಚೀವ್ಮೆಂಟ್ ಅವಾರ್ಡ್ಸ್ , ಇಂಡಿಪೆಂಡೆಂಟ್ ಸ್ಪಿರಿಟ್ ಅವಾರ್ಡ್ಸ್ , ನ್ಯೂಯಾರ್ಕ್ ಫಿಲ್ಮ್ ಕ್ರಿಟಿಕ್ ಅಸೋಸಿಯೇಶನ್ ಅವಾರ್ಡ್ಸ್ , ಸ್ಯಾಟಲೈಟ್ ಅವಾರ್ಡ್ಸ್ ಗಳಿಂದಲೂ ವರ್ಷದ ಶ್ರೇಷ್ಠ ನಟಿ ಪ್ರಶಸ್ತಿಯನ್ನು ಮಿಶೆಲ್ ವಿಲಿಯಮ್ಸ್ ತನ್ನ ಮನೋಜ್ಞ ಅಭಿನಯದ ಮೂಲಕ ತನ್ನದಾಗಿಸಿಕೊಂಡಿದ್ದಾರೆ.

ಚಿತ್ರದ ಬಗ್ಗೆ ಹೇಳುತ್ತಾ ಹಾಲಿವುಡ್ ದಂತಕಥೆ ಮರ್ಲಿನ್ ಮನ್ರೋರ ಬಗ್ಗೆ ಹೇಳದೆ ಕೂರದಿರಲಾಗದು. ಐವತ್ತರ ದಶಕದಲ್ಲಿ ಹಲವು ಯಶಸ್ವಿ ಚಲನಚಿತ್ರಗಳನ್ನು ಕೊಟ್ಟು ಯಶಸ್ಸಿನ ತುತ್ತತುದಿಗೇರಿದ್ದವರು ಅಮೆರಿಕನ್ ನಟಿ ಮರ್ಲಿನ್ . ಮರ್ಲಿನ್ ಮನ್ರೋ ಎಂದರೆ ಹಾಲಿವುಡ್, ಹಾಲಿವುಡ್ ಎಂದರೆ ಮರ್ಲಿನ್ ಮನ್ರೋ ಎಂದು ಹೇಳುವಂತಹ ಕಾಲವಾಗಿತ್ತದು. ಚಾರ್ಲಿ ಚಾಪ್ಲಿನ್, ಮರ್ಲನ್ ಬ್ರಾಂಡೋ, ಎಲಿಜಬೆತ್ ಟೇಲರ್ ಮುಂತಾದ ಘಟಾನುಘಟಿ ನಟನಟಿಯರ ಪೈಪೋಟಿಯೆದುರು ಜನಪ್ರಿಯತೆಯ ಉತ್ತುಂಗಕ್ಕೇರಿದಷ್ಟೇ ಅಲ್ಲದೆ ಇಂದಿನವರೆಗೂ ಹಾಲಿವುಡ್ ನಲ್ಲಿ ಒಂದು ಸಾಟಿಯಾಗದ ಟ್ರೆಂಡ್ ಆಗಿ ಉಳಿದುಕೊಂಡ ಏಕೈಕ ತಾರೆಯೆಂದರೆ ಮರ್ಲಿನ್ ಒಬ್ಬರೇ. ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ತಾಯಿಯಿಂದ ದೂರವಿದ್ದು ಬಾಲ್ಯವನ್ನೆಲ್ಲಾ ಯಾರ್ಯಾರ ಮನೆಯಲ್ಲೇ ಕಳೆದು, ಕಾಲ್ ಗರ್ಲ್ ಆಗಿ ದುಡಿದು ವೃತ್ತಿಜೀವನದ ಆರಂಭದಲ್ಲಿ ಕ್ಯಾಲೆಂಡರ್ ಗಳಿಗೆ ನಗ್ನತೆಯ ಪೋಸ್ ಕೊಡಬೇಕಾಗಿ ಬಂದಂತಹ ಸಂದರ್ಭಗಳಲ್ಲೂ ಅಳುಕದೆ ಮುನ್ನಡೆದು, ತನ್ನ ಸೌಂದರ್ಯ ಮತ್ತು ಪ್ರತಿಭೆಯಿಂದ ಹಾಲಿವುಡ್ ನಲ್ಲಿ ಮರ್ಲಿನ್ ಗಟ್ಟಿಯಾಗಿ ಬೇರೂರಿದರು.

ಚಿತ್ರಗಳ ಯಶಸ್ಸಿನ ಜೊತೆಗೆ ತನ್ನ ಜೀವನಶೈಲಿಯ ವಿಶಿಷ್ಟತೆಯಿಂದಲೂ ಮರ್ಲಿನ್ ಮನ್ರೋ ಸದಾ ಸುದ್ದಿಯಲ್ಲಿದ್ದವರು. ನೃತ್ಯ ಮತ್ತು ನಟನೆಯ ಮೊದಲು ಹಾಲಿವುಡ್ ಕಣ್ಣಿಗೆ ಮೊದಲು ರಾಚಿದ್ದು ಮರ್ಲಿನ್ ಳ ಸ್ನಿಗ್ಧ ಸೌಂದರ್ಯ. ಮರ್ಲಿನ್ ಎಂಬ ಈ ಮುತ್ತನ್ನು ಹಾಲಿವುಡ್ ನಿಧಾನವಾಗಿ ಸೆಕ್ಸ್ ಸಿಂಬಲ್ ಲೇಬಲ್ ಹಾಕಿ ಮಾರುಕಟ್ಟೆಗಿಳಿಸಿ ನಿರೀಕ್ಷೆಗೂ ಮೀರಿ ಯಶಸ್ವಿಯಾಯಿತು. (ಅತ್ಯುತ್ತಮ ಚಿತ್ರಗಳಲ್ಲಿ ನಟಿಸಿದ ಹೊರತಾಗಿಯೂ ಕೊನೆಯವರೆಗೂ ಈ 'ಸೆಕ್ಸ್ ಸಿಂಬಲ್' ಇಮೇಜ್ ಉಳಿಸಿಕೊಂಡಿರುವ ಬಗ್ಗೆ ಮನ್ರೋ ಬಹಳಷ್ಟು ಬಾರಿ ಹೇಳಿ ನಗುತ್ತಿದ್ದರು)ಮರ್ಲಿನ್ ಮನ್ರೋರ ನಡೆಯುವ ಮತ್ತು ನೃತ್ಯಭಂಗಿಗಳು, ಚಂಚಲ ಮುಗುಳ್ನಗೆ, ಬಳುಕುವ ಕತ್ತು ಮತ್ತು ಸೊಂಟ, ನಗುತ್ತಾ ಗಾಳಿಗೆ ಹಾರುತ್ತಿರುವ ಸ್ಕರ್ಟ್ ಅನ್ನು ಬಳಸಿದ ನೋಟ, ಕೈ ಬೀಸುತ್ತಾ ಅಭಿಮಾನಿಗಳತ್ತ ಕಣ್ಣು ಮಿಟುಕುವ ಪರಿ ಎಲ್ಲವೂ ಮರ್ಲಿನ್ ಸ್ಟೈಲ್ ಎಂದೇ ಪ್ರಖ್ಯಾತವಾಗಿವೆ.

ವಿದ್ಯಾ ಬಾಲನ್ ಅಭಿನಯದ 'ದ ಡರ್ಟ್ ಪಿಕ್ಚರ್' ನಲ್ಲೂ ಸಿಲ್ಕ್ ಸ್ಮಿತಾ ಪಾತ್ರವು ಮುಗುಳ್ನಗುತ್ತಾ ಅಭಿಮಾನಿಗಳಿಗೆ ಈ ಕಣ್ಣು ಮಿಟುಕಿಸುವ ದೃಶ್ಯ ಮರ್ಲಿನ್ ಮನ್ರೋರಿಂದಲೇ ಪ್ರೇರಿತ. ಕವನಗಳನ್ನು ಗೀಚುವ ಅಭ್ಯಾಸವೂ ಇವರಿಗಿತ್ತು. ಪೌಲಾ ಸ್ಟ್ರಾಸ್ ಬರ್ಗ್ ಎಂಬ ಮಹಿಳೆ ನಟನಾ ತರಬೇತುಗಾರ್ತಿಯಾಗಿ ಮರ್ಲಿನ್ ಜೊತೆ ಸದಾ ಇರುತ್ತಿದ್ದರು. ಪೌಲಾ ಮರ್ಲಿನ್ ಮನ್ರೋರನ್ನು ಅಗತ್ಯಕ್ಕಿಂತ ಹೆಚ್ಚೇ ಮುದ್ದಿಸುತ್ತಿದ್ದರು, ಹೊಗಳಿ ಹೊಗಳಿ ಅಟ್ಟಕ್ಕೇರಿಸುತ್ತಿದ್ದರು ಎಂದು ಮರ್ಲಿನ್ ಆಪ್ತರು ಹೇಳುತ್ತಾರೆ. ಚಿತ್ರೀಕರಣದ ಸಂದರ್ಭಗಳಲ್ಲಿ ಕ್ಯಾಮೆರಾ ಬೆಳಕು ಕಂಡೊಡನೆಯೇ ಬೆವತು ಡಯಲಾಗುಗಳು ಮರೆತುಹೋಗಿಬಿಡುತ್ತಿದ್ದವು. ಒಂದು ದೃಶ್ಯವನ್ನು ಶೂಟ್ ಮಾಡಲು ಹಲವು ಟೇಕ್ ಗಳನ್ನು ತೆಗೆದುಕೊಳ್ಳಬೇಕಾಗುತ್ತಿತ್ತು. ಇಂಥಾ ಸಂದರ್ಭಗಳಲ್ಲಿ ಪೌಲಾ ಆಸರೆ ಮರ್ಲಿನ್ ಮನ್ರೋಗೆ ಸದಾ ಇರುತ್ತಿತ್ತು.

ಅವರೇ ಹೇಳಿರುವಂತೆ ವೈವಾಹಿಕ ಜೀವನದಲ್ಲಿ ಮಾತ್ರ ಮೂರು ವಿಚ್ಛೇದನಗಳಿಂದ ಹಿನ್ನಡೆ. ಎರಡನೇ ಪತಿ ಜೋ ಡಿಮ್ಯಾಗಿಯೋ ವಿಶ್ವವಿಖ್ಯಾತ ಆಟಗಾರನಾಗಿದ್ದರೆ ಮೂರನೇ ಪತಿ ಆರ್ಥರ್ ಮಿಲ್ಲರ್ ಆಂಗ್ಲ ಸಾಹಿತ್ಯ ಕಂಡ ಓರ್ವ ಪ್ರತಿಭಾನ್ವಿತ ಬರಹಗಾರ. ಮುರಿದು ಬಿದ್ದ ಸಂಬಂಧಗಳಿಂದ ಮತ್ತು ವ್ಯಾವಹಾರಿಕ ವಿಷಯಗಳಿಂದ ಸದಾ ನೀರಸರಾಗಿದ್ದ ನಟಿ ಖಿನ್ನತೆಗೂ ಒಳಗಾಗಿದ್ದರು. ಅಲ್ಲೂ ಇಲ್ಲ ಇಲ್ಲೂ ಇಲ್ಲ ಎಂಬ ದ್ವಂದ್ವ ಭಾವ ಮರ್ಲಿನ್ ಗೆ ಸದಾ ಇತ್ತು.

ಅಮೇರಿಕಾದ ಮಾಜಿ ಪ್ರಧಾನಿ ಜಾನ್. ಎಫ್. ಕೆನಡಿಯಲ್ಲದೆ ಅವರ ಸಹೋದರ ರಾಬರ್ಟ್ ಕೆನಡಿಯ ಜೊತೆಗೂ ಸಂಬಂಧವಿರಿಸಿಕೊಂಡಿದ್ದ ಮರ್ಲಿನ್ ಮನ್ರೋ ಮಾಫಿಯಾ ಒಳಸಂಚು - ಅಧ್ಯಕ್ಷೀಯ ಚುನಾವಣೆಗಳ ಭರಾಟೆಯಲ್ಲಿ ಸಂಬಂಧವನ್ನು ಇಮೇಜ್ ನೆಪದಲ್ಲಿ ಹಳಸಿಕೊಂಡರು. ಕೆನಡಿ ಸಹೋದರರು ತನ್ನನ್ನು ಒಂದು ಸಾಮಾನ್ಯ ಆಟಿಕೆಯ ವಸ್ತುವಿನಂತೆ ಬಳಸಿಕೊಂಡಿದ್ದರ ಬಗ್ಗೆ ಅವರು ತೀವ್ರವಾಗಿ ಅಸಮಧಾನಗೊಂಡಿದ್ದರು.

ತನ್ನನ್ನು ಯಾರೋ ಇಪ್ಪತ್ತನಾಲ್ಕು ಘಂಟೆಯೂ ಗಮನಿಸುತ್ತಿದ್ದಾರೆ, ತನ್ನ ಮಾತುಗಳನ್ನು ಯಾರೋ ರೆಕಾರ್ಡ್ ಮಾಡುತ್ತಿದ್ದಾರೆ ಎಂಬ ಭ್ರಮೆಯೂ ಇತ್ತು. ಕೆನಡಿ ಮನೆತನ, ಅಮೆರಿಕಾದಲ್ಲಿ ಬೇರೂರಿದ ಇಟಲಿ ಮೂಲದ ಮಾಫಿಯಾ ಇವರುಗಳು ಗುಪ್ತವಾಗಿ ಟೆಲಿಫೋನ್ ಸಂಭಾಷಣೆಗಳನ್ನು ಧ್ವನಿಮುದ್ರೀಕರಿಸುತ್ತಿರುವ ಸಂಪೂರ್ಣ ಸತ್ಯವೂ ಅಲ್ಲದ ಮತ್ತು ಸಂಪೂರ್ಣ ಸುಳ್ಳೂ ಅಲ್ಲದ ಊಹಾಪೋಹಗಳು ಇವಕ್ಕೆ ಕಾರಣವಾಗಿದ್ದವು. ಇವರ ಆಪ್ತ ವೈದ್ಯರು ಹೇಳುವ ಪ್ರಕಾರ "ಬಾರ್ಡರ್ ಲೈನ್ ಪರ್ಸನಾಲಿಟಿ ಡಿಸಾರ್ಡರ್ ಎಂಬ ಮನೋಸ್ಥಿತಿ ಮರ್ಲಿನ್ ಮನ್ರೋಗಿತ್ತು.

ಇಂತಹ ಮನೋಸ್ಥಿತಿಯುಳ್ಳವರು ಮಾನವೀಯ ಸಂಬಂಧ (ಸ್ನೇಹ / ಪ್ರೀತಿ) ಗಳಲ್ಲಿ ಬಹು ಬೇಗ ಹೊಂದಿಕೊಳ್ಳುತ್ತಾರೆ ಮತ್ತು ಇಂತಹ ಆಪ್ತ ಸಂಬಂಧಗಳಲ್ಲಿ ಏನಾದರೂ ಕೊರತೆಯುಂಟಾದರೆ ಇಲ್ಲವೇ ಕಳೆದುಹೋದರೆ ಅಷ್ಟೇ ವೇಗವಾಗಿ ಕುಗ್ಗಿಹೋಗುತ್ತಾರೆ. ಮನಸ್ಸಿಗಾದ ನೋವನ್ನು ಇವರು ಅಷ್ಟು ಬೇಗನೆ ಮರೆಯುವುದಿಲ್ಲ ಮತ್ತು ಹಳೆಯ ವಿಫಲ ಸಂಬಂಧಗಳನ್ನು ನೆನೆಯುತ್ತಾ ಕೊರಗಿ ಹೊಸ ಸಂಬಂಧಗಳಿಗೆ ಮುಂದೆ ಕಳೆದುಹೋಗುವ ಕಾಲ್ಪನಿಕ ಭಯದಲ್ಲಿ ತಮ್ಮನ್ನು ತಾವು ತೆರೆದುಕೊಳ್ಳುವುದಿಲ್ಲ." ಹೆತ್ತ ತಾಯಿ ಸೇರಿದಂತೆ ಮರ್ಲಿನ್ ಮನ್ರೋ ವಂಶವಾಹಿಯಲ್ಲೇ ಈ ಮಾನಸಿಕ ತೊಂದರೆಯ ದೃಷ್ಟಾಂತಗಳು ಅಲ್ಲಲ್ಲಿ ಕಾಣುವುದು ಸ್ಪಷ್ಟ.

ಬಾಲ್ಯದಲ್ಲಿ ಒಂದೆರಡು ಬಾರಿ ತನ್ನ ಮೇಲೆ ಅತ್ಯಾಚಾರವನ್ನೆಸಗಲಾಗಿದೆ ಎಂದು ಮರ್ಲಿನ್ ಅಲ್ಲಲ್ಲಿ ಹೇಳಿದ್ದಾರೆ. ಆದರೆ ಅವರ ಯಾವ ಹೇಳಿಕೆಗಳೂ ಒಂದಕ್ಕೊಂದು ತಾಳೆಯಾಗದಿದ್ದುದರಿಂದ ಹಲವು ತಜ್ಞರು ಮತ್ತು ಲೇಖಕರು ಇದೊಂದು ಪೊಳ್ಳು ನಾಟಕ, 'ಅಟೆಂನ್ಷನ್ ಸೀಕಿಂಗ್ ಟ್ರಿಕ್' ಎಂದು ಅಭಿಪ್ರಾಯಪಡುತ್ತಾರೆ. ಇನ್ನು ಸಮಯದಲ್ಲಿ ಪರಿಪಕ್ವತೆಯೆಂಬುದು ಮರ್ಲಿನ್ ಗೆ ಇರಲೇ ಇಲ್ಲ. ಚಿತ್ರೀಕರಣಕ್ಕೆ ಯಾವಾಗಲೂ ಎರಡು-ಮೂರು ಘಂಟೆ ತಡವಾಗಿ ಬರುವುದಂತೂ ಸಾಮಾನ್ಯವಾಗಿ ಹೋಗಿತ್ತು.

ಇವರಿಗೋಸ್ಕರ ಇಡೀ ಚಿತ್ರತಂಡ ಹಲವು ಬಾರಿ ಅಸಮಧಾನದಿಂದ ಘಂಟೆಗಟ್ಟಲೆ ಕಾಯುತ್ತಾ ಕೂತಿರುತ್ತಿದ್ದವು. ಹಲವು ನಿರ್ದೇಶಕರೂ ನಿರ್ಮಾಪಕರೂ ಈ ಕೆಟ್ಟ ಅಭ್ಯಾಸದಿಂದ ಕಂಗೆಟ್ಟು ಹೋಗಿದ್ದರು. ಒಂದೆರಡು ಬಾರಿ ಕೆಲ ನಿರ್ದೇಶಕರು ಚಿತ್ರತಂಡದಿಂದ ಮರ್ಲಿನ್ ರನ್ನು ಕೈಬಿಡುವಷ್ಟರ ಮಟ್ಟಿಗೂ ಹೋಗಿದ್ದರು. ಮಾಜಿ ಪ್ರಧಾನಿ ಕೆನಡಿ ಹುಟ್ಟುಹಬ್ಬದ ಸಾರ್ವಜನಿಕ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಬಂದು ಶುಭಾಶಯ ಭಾಷಣ ಮಾಡಬೇಕಿದ್ದ ಮರ್ಲಿನ್ ಇಲ್ಲಿಗೂ ತಡವಾಗಿ ಬಂದಿದ್ದರು. ತಡವಾಗಿ ವೇದಿಕೆಗೆ ಬಂದ ಮರ್ಲಿನ್ ಮನ್ರೋರನ್ನು ನಿರೂಪಕ "ವೆಲ್ ಕಂ ಲೇಟ್ ಮರ್ಲಿನ್ ಮನ್ರೋ" ಎಂದು ಸ್ವಾಗತಿಸಿ ಎಲ್ಲರನ್ನೂ ನಗೆಗಡಲಿನಲ್ಲಿ ತೇಲಿಸಿಬಿಟ್ಟಿದ್ದ. ಇದೇ ವೇದಿಕೆಯಲ್ಲಿ ಕೆನಡಿಗೋಸ್ಕರ "ಹ್ಯಾಪಿ ಬರ್ತ್ ಡೇ ಮಿಸ್ಟರ್ ಪ್ರೆಸಿಡೆಂಟ್" ಎಂದು ತನ್ನ ಕೀರಲುದನಿಯಿಂದ ಹಾಡಿ ಎಲ್ಲರ ಮನಸ್ಸನ್ನು ಸೂರೆಗೊಂಡಿದ್ದು, ನಂತರ ಕೆನಡಿ ಭಾಷಣದಲ್ಲಿ ತನಗಾಗಿ ಹಾಡಿದ ಹಾಡನ್ನು ಹೊಗಳಿದ್ದು ಈಗ ಇತಿಹಾಸ.

ಇಂತಹ ಸೌಂದರ್ಯದ ಖಣಿ ವಿಶ್ವವಿಖ್ಯಾತ ನಟಿಯ ಅಂತ್ಯ ಮೂವತ್ತಾರರ ಹರೆಯದಲ್ಲೇ ಅದದ್ದು ಮಾತ್ರ ದುರಂತ. ಪೋಸ್ಟ್ ಮಾರ್ಟಮ್ ವರದಿಯಲ್ಲಿ ಬಾರ್ಬಿಟ್ಯುರೇಟ್ ಓವರ್ ಡೋಸ್ ನಿಂದ ಸಾವು ಸಂಭವಿಸಿತು ಮತ್ತು ಇದೊಂದು ಆತ್ಮಹತ್ಯೆಯೆಂದು ಬಿಂಬಿಸಿ ಕಡತವನ್ನು ಮುಚ್ಚಲಾಯಿತು. ಆದರೂ ಹಲವು ದಾಖಲೆಗಳು, ಗೌಪ್ಯ ಹೇಳಿಕೆಗಳು, ಅಭಿಪ್ರಾಯಗಳು ಮರ್ಲಿನ್ ಸಾವನ್ನು ಕೊಲೆಯೆಂದೂ ಮತ್ತು ಅದರಲ್ಲಿ ಪ್ರಿಯಕರ ರಾಬರ್ಟ್ ಕೆನಡಿಯ ಪಾತ್ರವಿತ್ತೆಂಬ ಥಿಯರಿಯನ್ನೂ ಪುಷ್ಟೀಕರಿಸುತ್ತವೆ. ಇದಕ್ಕೆ ಪೂರಕವಾಗಿ ಸಾವಿಗೆ ಸಂಬಂಧಿಸಿದ ಹಲವು ದಾಖಲೆಗಳನ್ನು ಅಮೆರಿಕಾದ ಭದ್ರತಾ ಇಲಾಖೆ ರಾಜತಾಂತ್ರಿಕ ಗೌಪ್ಯತೆಯ ನೆಪವೊಡ್ಡಿ ನಾಶಗೊಳಿಸಿತು. ಇಂದಿಗೂ ಮಲರ್ಿನ್ ಮನ್ರೋ ಸಾವು ಒಂದು ಬಿಡಿಸಲಾರದ ಒಗಟು.

ಹೀಗೆ ಮರ್ಲಿನ್ ಮನ್ರೋ ಬಗ್ಗೆ ಬರೆಯಹೊರಟರೆ ಪುಟಗಳು ಸಾಲುವುದಿಲ್ಲ. "ಮೈ ವೀಕ್ ವಿದ್ ಮರ್ಲಿನ್" ಚಿತ್ರ ಮರ್ಲಿನ್ ಮನ್ರೋರ ದಶಕದ ನೆನಪುಗಳನ್ನು ಇನ್ನೊಮ್ಮೆ ತಾಜಾಗೊಳಿಸಿದೆ. ಚಿತ್ರ ವೀಕ್ಷಿಸಿದ ನಂತರ ನಾವೂ ಐವತ್ತರ ದಶಕಲ್ಲೇ ಇರುವ ಹಾಗೆ ಕ್ಷಣಮಾತ್ರಕ್ಕೆ ಭಾಸವಾದರೆ ಆಶ್ಚರ್ಯವಿಲ್ಲ. ಐವತ್ತು ವರ್ಷಗಳು ಕಳೆದರೂ ಮರ್ಲಿನ್ ಮನ್ರೋ ನೆನಪುಗಳು ನಮ್ಮೊಡನಿವೆ. ತೆರೆದ ಪುಸ್ತಕದಂತಿದ್ದ ಬಾಳಿನಲ್ಲಿ ತನ್ನಿಷ್ಟದಂತೆ ಬಾಳಿ ತೋರಿಸಿದ ಧೈರ್ಯದ ನೇರ ಮುಕ್ತಮಾತುಗಳು ಇಂದಿಗೂ ನಮ್ಮನ್ನು ಕೆಣಕುತ್ತವೆ. ಮುಂದೆಯೂ ಮರ್ಲಿನ್ ಮನ್ರೋ ಎಲ್ಲೋ ಹೇಗೋ ಕಾಡುತ್ತಾರೆ ಅದೇ ಶುಭ್ರ ಮುಗುಳ್ನಗೆಯೊಂದಿಗೆ.


- ಪ್ರಸಾದ್

0 comments:

Post a Comment