ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಜಿಲ್ಲೆಯಾದ್ಯಂತ ಕಲುಷಿತ ನೀರು ಪೂರೈಕೆ

ಬೆಚ್ಚಿ ಬೀಳಿಸಿದ ಸ್ಫೋಟಕ ಮಾಹಿತಿ

ವಿಶೇಷ ವರದಿ : ಜ್ಯೋತಿಪ್ರಕಾಶ್ ಪುಣಚ

ವಿಟ್ಲ : ಪರಿಶುದ್ಧ ನೀರು ಜೀವದ ಟಾನಿಕ್. ಆರೋಗ್ಯದಾಯಕ ಜೀವನದ ದಿವ್ಯ ಔಷಧಿ. ಆದರೆ ಕಲುಷಿತ ನೀರು ಸೇವನೆ ಜನಜೀವನದ ಮೇಲೆ ಬೀರುವ ಪರಿಣಾಮವೇ ಭೀಕರ ! ಈಗ ಜಿಲ್ಲೆಯಲ್ಲಿ ಕುಡಿಯಲು ಬಹುತೇಕ ಪೂರೈಕೆಯಾಗುತ್ತಿರುವುದು ಕಲುಷಿತ ನೀರು . ಇದು ವಿಚಿತ್ರವಾದರೂ ಸತ್ಯ !!

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ತಾಲೂಕು ಹಾಗೂ ಗ್ರಾಮ ಪಂಚಾಯತ್ಗಳು ಜಿಲ್ಲೆಯಾದ್ಯಂತ ನದಿ, ಹೊಳೆ ಹಾಗೂ ತೋಡುಗಳಲ್ಲಿ ತೆರೆದ ಬಾವಿಯನ್ನು ಕೊರೆದು ಯಾವುದೇ ಶುದ್ಧೀಕರಣ ಘಟಕಗಳನ್ನು ನಿರ್ಮಿಸದೇ ಅದರಿಂದ ನೇರವಾಗಿ ಕಲ್ಮಶವುಳ್ಳ ನೀರನ್ನು ಜನತೆಗೆ ಪೂರೈಸುತ್ತಿರುವ ಆಘಾತಕಾರಿ ವಿಚಾರ ಬಹಿರಂಗಗೊಂಡಿದ್ದು, ಜನತೆ ಎಚ್ಚೆತ್ತುಕೊಳ್ಳಬೇಕಾಗಿದೆ.

ಶುದ್ಧ ನೀರು ಮಾನವನ ಮೂಲಭೂತ ಹಕ್ಕು ಆಗಿದೆ. ಆದರೆ ಇಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಪರಿಶುದ್ಧ ನೀರನ್ನು ಜನರಿಗೆ ಪೂರೈಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಮಾತ್ರವಲ್ಲ ಕಲುಷಿತ ನೀರಿನ ಸರಬರಾಜು ಮಾಡಿ ಸಾರ್ವಜನಿಕ ಜೀವನದಲ್ಲಿ ಚೆಲ್ಲಾಟವಾಡುತ್ತಿದೆ,
ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅಡಿಕೆ ತೋಟ ಕೃಷಿಗಳಿಗೆ ಬಳಸುವ ವಿಷಕಾರಿ ಮಾರಕ ಎಂಡೋಸಲ್ಫಾನ್ ಮುಂತಾದ ರಾಸಾಯನಿಕಗಳು, ಕಸ-ಕಲ್ಮಶಗಳು, ಪರಿಸರದ ಎಲ್ಲಾ ಕೊಳಚೆಗಳು, ಕೊಳೆತ ಮೃತ ದೇಹಗಳು, ತಾಜ್ಯಗಳು ಮಳೆ ನೀರಿಗೆ ಹೊಳೆ ನದಿ ಸೇರಿ, ನದಿಗಳಲ್ಲಿ ತೋಡಿದ ಬಾವಿಗಳಿಗೆ ಸೇರುತ್ತದೆ.

ಪೂರೈಕೆಯ ಮದ್ಯೆ ಯಾವುದೇ ಶುದ್ಧೀಕರಣ ಘಟಕವೇ ಇಲ್ಲ. ಟ್ಯಾಂಕುಗಳನ್ನು ಶುಚಿತ್ವಗೊಳಿಸದೇ ವರ್ಷಗಳೇ ಕಳೆದಿರಬಹುದು. ಹೊಳೆಯಲ್ಲಿ ನಿರ್ಮಿಸಲಾಗಿರುವ ತೆರೆದ ಬಾವಿಗೆ ನದಿ ಬದಿಯ ಮರದ ರೆಂಬೆ ಕೊಂಬೆಗಳು ಮುತ್ತಿಕೊಂಡು ಎಲೆಗಳು, ಮುರಿದ ರೆಂಬೆಗಳು ಉದುರಿ ನೀರು ಕಲುಷಿತಗೊಳ್ಳುತ್ತಿದೆ. ನದಿಗಳಲ್ಲಿ ನಿರ್ಮಿಸಿರುವ ಬಾವಿಗಳಲ್ಲಿ ಶೇಖರಣೆಯಾದ ಈ ಕಲುಷಿತ ನೀರನ್ನು ಟ್ಯಾಂಕಿಗಳಿಗೆ ತುಂಬಿಸಿ ಅಲ್ಲಿಂದ ನೇರವಾಗಿ ಸಾರ್ವಜನಿಕರಿಗೆ ಪೂರೈಸಲಾಗುತ್ತಿದೆ. ಈ ನೀರಿನ ಸೇವನೆಯಿಂದ ಜನತೆ ಯಾವ ಮಟ್ಟದ ಆರೋಗ್ಯವನ್ನು ಕಾಯ್ದುಕೊಳ್ಳಬಹುದು ? ಇದು ಜಿಲ್ಲೆಯ ಜನತೆಗೆ ಆಡಳಿತ ವ್ಯವಸ್ಥೆ ನೀಡಿರುವ ಕುಡಿಯುವ ನೀರಿನ ವಿತರಣೆಯೆಂಬ ವರವಾದ ಶಾಪ !

ಮನುಷ್ಯನಿಗೆ ಬರುವ ಕಾಯಿಲೆಗಳಲ್ಲಿ ಶೇ. 60ರಷ್ಟು ಕಾಯಿಲೆಗಳು ಅಶುದ್ಧ ನೀರಿನ ಸೇವನೆಯಿಂದಲೇ ಬರುತ್ತವೆ. ಇದರಿಂದ ಶುದ್ಧ ನೀರು ಎಷ್ಟು ಮುಖ್ಯ ನೀರಿನ ಶುದ್ಧೀಕರಣ ಎಷ್ಟು ಮಹತ್ವದ್ದು ಎಂಬುದು ಸ್ಪಷ್ಪವಾಗುತ್ತದೆ, ಸಾರ್ವಜನಿಕ ಉಪಯೋಗಕ್ಕೆ ಸರಬರಾಜು ಮಾಡುವ ನೀರಿನ ಶುದ್ಧೀಕರಣ ಎಷ್ಟು ಮುಖ್ಯ ಎಂಬುದು ಕಳೆದ ಶತಮಾನದ ಮಧ್ಯಭಾಗದಲ್ಲಿ ಜಗತ್ತಿನ ಅರಿವಿಗೆ ಬಂತು. 1849 ಮತ್ತು 1856ರಲ್ಲಿ ಲಂಡನ್ ನಗರವನ್ನು ಕಾಲರ ಸಾಂಕ್ರಾಮಿಕರೋಗ ಅಮರಿಕೊಂಡಿತು.

20,000 ಜನಬಲಿಯಾದರು. ಥೇಮ್ಸ್ ನದಿ ನೀರಿಗೆ ಸೇರಿದ ಕಶ್ಮಲಗಳು ಈ ದುರ್ಘಟನೆ ಕಾರಣವಾಗಿತ್ತು. 1892ರಲ್ಲಿ ಕಾಲರಾ ಜರ್ಮನಿಯ ಹ್ಯಾಂಬರ್ಗನ್ನು ಧೂಳೀಪಟ ಮಾಡಿತು. ಆದರೆ ಪಕ್ಕದ ಅಬ್ಬೊನ ನಗರಕ್ಕೆ ಕಾಲರ ಕಾಲಿಡಲಿಲ್ಲ ಕಾರಣ, ಅಬ್ಬೊನ ನಗರದಲ್ಲಿ ನೀರು ಶುದ್ಧೀಕರಣ ವ್ಯವಸ್ಥೆ ಜಾರಿಯಾಗಿತ್ತು, ಇದರಂತೆ ಪಶ್ಚಿಮ ಯುರೋಪು ಮತ್ತು ಅಮೇರಿಕಾದ ಅನೇಕ ಕಡೆಗಳಲ್ಲಿ ಜನರನ್ನು ಪೀಡಿಸಿದ ಕಾಲರ ಮತ್ತು ವಿಷಮಜ್ವರ ಪ್ರಪಂಚದ ಎಲ್ಲ ನಗರಗಳಲ್ಲಿ ವೈಜ್ಞಾನಿಕ ರೀತಿಯಲ್ಲಿ ಕೆಲಸ ಮಾಡುವ ಶುದ್ಧೀಕರಣ ಸ್ಥಾವರಗಳು ತಲೆ ಎತ್ತುವಂತೆ ಮಾಡಿದವು .

ಜಿಲ್ಲೆಯಲ್ಲಿ ಕಲುಷಿತ ನೀರು ಸರಬರಾಜು ಆಗುತ್ತಿರುವ ಬಗ್ಗೆ ಮತ್ತು ಕಲುಷಿತ ನೀರಿನ ಸೇವನೆಯಿಂದ ಜನರ ಆರೋಗ್ಯದ ಬಗ್ಗೆ ಆಗಬಹುದಾದ ಪ್ರತಿಕೂಲ ಪರಿಣಾಮಗಳ ಬಗ್ಗೆ ಪ್ರಥಮವಾಗಿ ಎಚ್ಚರಿಕೆಯ ಘಂಟೆ ಭಾರಿಸಿದವರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಪಂಚಾಯತ್ ಸದಸ್ಯ, ಕರಾವಳಿ ಕರ್ನಾಟಕ ಗಡಿ, ನೆಲ, ಜಲ ಸಂರಕ್ಷಣಾ ಸಮಿತಿಯ ಅಧ್ಯಕ್ಷರಾದ ರಾಮಣ್ಣ ಶೆಟ್ಟಿ ಪಾಲಿಗೆ. ಈ ಹೋರಾಟಗಾರ ಅಪಾಯಕಾರಿ ಕಲುಷಿತ ನೀರು ಪೂರೈಕೆಯ ಬಗ್ಗೆ ಬೆನ್ನುಹತ್ತಿದಾಗ ಬಂಟ್ವಾಳ ತಾಲೂಕಿನಲ್ಲಿ 12, ಪುತ್ತೂರಿನಲ್ಲಿ 2, ಸುಳ್ಯದಲ್ಲಿ 2, ಮತ್ತು ಬೆಳ್ತಂಗಡಿ ತಾಲೂಕಿನಲ್ಲಿ 7 ಕಡೆ ಸೇರಿದಂತೆ ಜಿಲ್ಲೆಯ 23 ಕಡೆಗಳಲ್ಲಿ ತೊರೆಗಳಲ್ಲಿ ತೋಡಿದ ಬಾವಿಗಳಿಂದ ಕುಡಿಯುವ ನೀರಿನ ಪೂರೈಕೆಯಾಗುತ್ತಿದ್ದು, ಎಲ್ಲಿಯೂ ಶುದ್ಧ ನೀರಿನ ಘಟಕಗಳನ್ನು ನಿರ್ಮಿಸಿರುವುದಿಲ್ಲ ಎಂಬ ಸ್ಫೋಟಕ ಮಾಹಿತಿ ದ.ಕ. ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದಿಂದ ದೊರೆತಿದೆ.ಒಂದೆರಡು ತಿಂಗಳಿನ ಹಿಂದೆ ವಿಟ್ಲದ ನೀರು ಸರಬರಾಜು ಟ್ಯಾಂಕಿಗೆ ಕಾಡುಪ್ರಾಣಿಯೊಂದು ( ಬೆರು ) ಬಿದ್ದು ಸತ್ತು ಹೋಗಿ ಯಾವತ್ತೋ ಟ್ಯಾಂಕಿಯಲ್ಲಿ ಇಣುಕಿದಾಗ ಅದರ ಅಸ್ಥಿಪಂಜರ ಮಾತ್ರ ಕಂಡುಬಂದ ಘಟನೆಯಿಂದ ಎಚ್ಚತ್ತುಕೊಂಡ ಪಾಲಿಕೆಯವರು ಅದೇ ನೀರನ್ನು ಸೇವಿಸಿ ಆರೋಗ್ಯವನ್ನು ಕಾಯ್ದುಕೊಳ್ಳಲು ಸಾಧ್ಯವಿದೆಯಾ ಎಂದು ಸಂಬಂಧಪಟ್ಟ ಇಲಾಖೆಯನ್ನು ಪ್ರಶ್ನಿಸಿದ್ದರು.

ಇಲಾಖೆಯ ನಿಯಮದ ಪ್ರಕಾರ ಒಂದು ವರ್ಷಕ್ಕೆ ಕನಿಷ್ಠ ಮೂರು ಬಾರಿಯಾದರೂ ನೀರು ಶೇಖರಣಾ ಟ್ಯಾಂಕುಗಳನ್ನು ಶುದ್ಧೀಕರಣಗೊಳಿಸಬೇಕು. ಆದರೆ ಎಷ್ಟೋ ಟ್ಯಾಂಕುಗಳು ಕೆಲವು ವರ್ಷಗಳಿಂದ ಶುದ್ಧಿಗೊಳ್ಳದೇ ಅದೆಷ್ಟೋ ಜೀವಗಳನ್ನೇ ಬಲಿತೆಗೆದುಕೊಳ್ಳುವ ಹಾನಿಕರ ಕಲ್ಮಶಗಳನ್ನು ತನ್ನಲ್ಲಿಯೇ ತುಂಬಿಕೊಂಡಿದೆ. ಸರಕಾರದ ನಿಯಮಾವಳಿಗಳ ಪ್ರಕಾರ ಆರೋಗ್ಯ ಇಲಾಖೆಯನ್ನು ಒಳಗೂಡಿಸಿಕೊಂಡು ಪರಿಶುದ್ದವಾದ ಕುಡಿಯುವ ನೀರಿಗಾಗಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಒಂದು ಸಮಿತಿ ರಚನೆಯಾಗಿ ಶೇಖರಣಾ ಘಟಕಗಳನ್ನು ಅದರ ಮೂಲಕ ಶುಚಿತ್ವಗೊಳಿಸಬೇಕು. ಅದಕ್ಕಾಗಿ ರಚನೆಯಾದ ಸಮಿತಿಗೆ ಸರಕಾರದಿಂದ ವರ್ಷಕ್ಕೆ ರೂ. 10 ಸಾವಿರ ರೂ. ಅನುದಾನ ದೊರೆಯುತ್ತದೆ. ಈ ಸಮಿತಿ ಹಲವೆಡೆ ಕಡತಗಳಲ್ಲಿ ರಚನೆಯಾಗಿದ್ದರೂ ನಿಷ್ಪ್ರಯೋಜಕವಾಗಿದೆ. ಕೆಲವು ಕಡೆ ಅನುಷ್ಠಾನವೇ ಗೊಂಡಿಲ್ಲ !

ಬೇಸಿಗೆಯ ಜನವರಿಯಿಂದ ಎಪ್ರಿಲ್ವರೆಗೆ ಹೊಳೆ ನದಿ ನೀರು ಸ್ವಲ್ಪ ಗಡಸಾಗಿರುತ್ತದೆ. ನದಿ ದಂಡೆಯ ಮೇಲಿನ ರೈತರು ರಸಾಯನಿಕ ಬಳಸುವುದರಿಂದ ನೀರು ವಿಷಕಾರಿಯಾಗಿ ಹೃದ್ರೋಗ, ಸಂಧಿವಾತ, ಥೈರಾಲ್ಡ್,ಸಿರಾಸಿಸ್ ಮತ್ತು ಮಧುಮೇಹ ರೋಗಗಳು ಅಂಟಿಕೊಳ್ಳಬಹುದೆಂದು
ಬೇಸಿಗೆ ಕಾಲದಲ್ಲಿ ನದಿನೀರಿನ ಗುಣಮಟ್ಟ ಕುರಿತು ಅಧ್ಯಯನ ನಡೆಸಿದ ಜಿ.ಎಚ್. ಕಾಲೇಜಿನ ಪ್ರಾಣಿ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎನ್. ಆರ್. ಬಿರಸಾಲ್ ಅವರು ತಮ್ಮ ವರದಿಯಲ್ಲಿ ಬಹಿರಂಗಗೊಳಿಸಿದ್ದಾರೆ. 2010ರಿಂದ ಸುಮಾರು 12 ತಿಂಗಳುಗಳ ಕಾಲ ಅಧ್ಯಯನ ನಡೆಸಿದ ಬಿರಸಾಲ್ ಕುಡಿಯಲು ಯೋಗ್ಯವಲ್ಲದ ಕುಡಿಯುವ ನೀರನ್ನು ಶುದ್ಧೀಕರಣ ಗೊಳಿಸಿಯೇ ಪೂರೈಕೆ ಮಾಡಬೇಕೆಂದು ಈ ವರದಿಯಲ್ಲಿ ತಿಳಿಸಿದ್ದಾರೆ,
ಜನರ ಮೂಲಭೂತ ಹಕ್ಕಾಗಿರುವ ನೀರನ್ನು ಬೇಜವಾಬ್ಧಾರಿಯಾಗಿ ನಿರ್ವಹಣೆ ಮಾಡುವ ಜಿಲ್ಲೆಯ ಬಹುತೇಕ ಗ್ರಾಮ ಪಂಚಾಯತಿಗಳು ಜನರಿಗೆ ಗುಣಮಟ್ಟದ ಶುದ್ಧ ಕುಡಿಯುವ ನೀರನ್ನು ಪೂರೈಸಲು ಆಸಕ್ತಿ ತೋರುತ್ತಿಲ್ಲ ಎಂಬುವುದು ಸಾಬೀತಾಗಿದೆ. ಕಲುಷಿತ ನೀರು ಸೇವನೆಯಿಂದ ಸಾಂಕ್ರಾಮಿಕ ರೋಗಗಳು ಮನುಷ್ಯನ ಬದುಕನ್ನೇ ಕಸಿದುಕೊಳ್ಳುವುದಲ್ಲದೇ ಪೌಷ್ಠಿಕಾಂಶದ ಸತ್ವಗಳು ಕೂಡಾ ಬೆಳವಣಿಗೆಯಲ್ಲಿ ಸಹಕಾರಿಯಾಗದೆ ರೋಗಗಳು ಬಾಧಿಸುತ್ತವೆ.

ನೀರು ಕೇವಲ ನಿರ್ಜೀವಿ ಕಶ್ಮಲಗಳಿಂದ ಹೊರತಾಗಿದ್ದು ನೋಡಲು ತಿಳಿಯಾಗಿದ್ದರಷ್ಟೆ ಸಾಲದು. ಅದು ರೋಗಕಾರಕ ಸೂಕ್ಷ್ಣ ಜೀವಿಗಳಿಂದಲೂ ಮುಕ್ತವಾಗಿರಬೇಕು. ಇಂಥ ನೀರು ಮಾತ್ರ ಸೋಂಕು ರಹಿತವಾಗಿರುತ್ತದೆ. ಆರೋಗ್ಯಕ್ಕೆ ಕ್ಷೇಮವಾದುದಾಗಿರುತ್ತದೆ. ನೀರಿನಲ್ಲಿ ಕೆಲವು ಕರಗಿದ ಕಶ್ಮಲಗಳು ಇರುತ್ತವೆ. ಅವುಗಳು ಒಂದು ಮಿತಿಗಿಂತ ಹೆಚ್ಚಿಗೆ ಇದ್ದರೆ ಆರೋಗ್ಯದ ಮೇಲೆ ದುಷ್ಟರಿಣಾಮ ಬೀರುತ್ತವೆ. ನೀರನ್ನು ರಾಸಾಯನಿಕ ಕ್ರಿಯೆಗೊಳಪಡಿಸಿ ಅವುಗಳನ್ನು ತಹಬಂದಿಗೆ ತರಬೇಕಾಗುತ್ತದೆ, ಕುಡಿಯುವ ನೀರಿನ ಪ್ಲೋರೈಡ್ ಒಂದು ಸರಿ ಪ್ರಮಾಣದಲ್ಲಿ ಇರಬೇಕು ಈ ಪ್ರಮಾಣ ಪ್ರತಿ ಒಂದು ಲೀಟರ್ ನೀರಿನಲ್ಲಿ 0.6ರಿಂದ 1.2ಮಿ. ಗ್ರಾಂ. ಕಡಿಮೆಯಾದರೆ ದಂತಕ್ಷಯ, ಜಾಸ್ತಿಯಾದರೆ ಪ್ಲೋರೋಸಿಸ್ ಬರುತ್ತದೆ, ಕುಡಿಯುವ ನೀರಿನಲ್ಲಿ ಹೆಚ್ಚಿನ ಕಬ್ಬಿಣವಿದ್ದರೆ ಅದು ನಮ್ಮ ರಕ್ತ ಪ್ರಮಾಣದ ಮೇಲೆ ಪ್ರಭಾವ ಬೀರುತ್ತದೆ, ನೀರಿನ ಬಣ್ಣವೂ ಕೆಟ್ಟಿರುತ್ತದೆ. ಕಂದು ಅಥವ ಕೆಂಪಾಗಿರುತ್ತದೆ. ರುಚಿಯೂ ಕಹಿಯಾಗಿರುತ್ತದೆ. ಒಂದು ಲೀಟರ್ ನೀರಿನಲ್ಲಿ 7ಮಿ.ಗ್ರಾಂಗಿಂತಲೂ ಹೆಚ್ಚು ಕಬ್ಬಿಣ ಇರಬಾರದು, ಇದರ ನಿವಾರಣೆ ನೀರಿಗೆ ಗಾಳಿ ಸೇರುವಂತೆ ಮಾಡಬೇಕು.
ಸಾರ್ವಜನಿಕರಿಗೆ ಪರಿಶುದ್ಧ ನೀರು ದೊರೆತು ಆರೋಗ್ಯ ಪೂರ್ಣ ಪರಿಶುದ್ಧ ಬದುಕನ್ನು ನೀಡುವ ನಿಟ್ಟಿನಲ್ಲಿ ಸಂಬಂಧಪಟ್ಟವರು ಇನ್ನಾದರೂ ಎಚ್ಚರಗೊಳ್ಳ ಬೇಕಿದೆ.

ಈ ಬಗ್ಗೆ ಸಂರಕ್ಷಣಾ ಸಮಿತಿಯ ಅಧ್ಯಕ್ಷರಾದ ರಾಮಣ್ಣ ಶೆಟ್ಟಿ ಪಾಲಿಗೆ ಕರ್ನಾಟಕ ರಾಜ್ಯ ಮಾನವ ಹಕ್ಕು ಆಯೋಗದ ಅಧ್ಯಕ್ಷರಾದ ಡಾ| ಜಸ್ವೀಸ್ ಶುಭರಾಜ್ ರಾಮ ನಾಯಕ್ ಅವರಿಗೆ ದೂರು ನೀಡಿ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ನದಿ, ಹೊಳೆ, ತೊರೆಗಳಲ್ಲಿ ತೆರೆದ ಬಾವಿಯನ್ನು ನಿರ್ಮಿಸಿ ಯಾವುದೇ ಶುದ್ಧೀಕರಣ ಘಟಕವನ್ನು ನಿರ್ಮಿಸದೇ ನೇರವಾಗಿ ಕಲ್ಮಶವುಳ್ಳ ನೀರನ್ನು ಜನತೆಗೆ ಪೂರೈಸುತ್ತಿರುವ ಬಗ್ಗೆ ಕ್ರಮ ಕೈಗೊಳ್ಳುವಂತೆ ವಿನಂತಿಸಿದ್ದಾರೆ.

0 comments:

Post a Comment