ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಯುವಾ...

ತಾಳಿ ಕಟ್ಟಿದ ಮೇಲೆ ಮದುವೆಗೆ ಹೋಗಬಾರದು, ತೇರು ಎಳೆದ ಮೇಲೆ ಜಾತ್ರೆಗೆ ಹೋಗಬಾರದು ಎಂದು ಗಾದೆಯಿದೆ. ಆದರೆ ಎರಡು ಕಾರ್ಯಕ್ರಮಕ್ಕೆ ಸರಿಯಾದ ಸಮಯಕ್ಕೆ ಹೋದರೂ ಸಹ ಪ್ರಯೋಜನವಾಗದೇ ಇದ್ದರೆ!! ಸದ್ಯದ ಪರಿಸ್ಥಿತಿಲಿ ಹಾಗೇ ಆಗುತ್ತಿದೆ.

ಕಾರಣ 'ದಿ ಗ್ರೇಟ್ ಫೋಟೋಗ್ರಾಫರ್ಸ್'!
ಈ ಲೇಖನ ಯಾಕೆ ಬರೆಯುತ್ತಿದ್ದೇನೆ ಎಂದರೆ ನಾನು ಅನೇಕ ಕಾರ್ಯಕ್ರಮಗಳಲ್ಲಿ ಅನುಭವಿಸಿದ ನರಕಯಾತನೆಯ ಸವಿನೆನಪಿಗಾಗಿ! ಯಾಕೆ ಹೀಗೆನ್ನುತ್ತೇನೆಂದರೆ ಯಾವುದೇ ಒಂದು ಕಾರ್ಯಕ್ರಮಕ್ಕೆ ಹೋದರೆ ಅದನ್ನು ಮೊದಲಿನಿಂದ ಕೊನೆಯವರೆಗೆ ನೋಡಿ ಆನಂದಿಸಬೇಕೆನ್ನುವುದು ನನ್ನ ಇಚ್ಛೆ. ಆದರೆ ಯಾವುದೇ ಸಭೆ ಸಮಾರಂಭಗಳಿಗೆ ನನಗೇನೆ ಬಹುಶಃ ಶತೃಗಳಾಗಿ ಆಗಮಿಸುತ್ತಾರೆ 'ದಿ ಗ್ರೇಟ್ ಫೋಟೋಗ್ರಾಫರ್ಸ್'.

ಕಾರ್ಯಕ್ರಮದ ಉದ್ಘಾಟನೆ ದೀಪ ಬೆಳಗಿಸುವುದರ ಮೂಲಕವೋ, ಸಸಿಗೆ ನೀರು ಹಾಕಿಯೋ ಚಾಲನೆ ಮಾಡುತ್ತಾರೆ. ಅಸಂಖ್ಯ ವೀಕ್ಷಕರು ಕೂತಿದ್ದಾರೆ ಎನ್ನುವ ಅರಿವೂ ಇಲ್ಲದೆ ಎಲ್ಲೋ ಕೂತು ಪತ್ರಿಕೆ ಓದುವ ಓದುಗನಿಗಾಗಿ ಹೆಣಗಾಡಿ ಫೋಟೋ ತೆಗೆಯುವ ದಿ ಗ್ರೇಟ್ ಫೋಟೋಗ್ರಾಫರ್ಸ್ಗಳಿಗೆ ಕೂತಲ್ಲೇ ಬೈದಾಡಿಕೊಳ್ಳುವುದು ನಿತ್ಯದ ಪರಿಪಾಠ.

ಇಂದಿನ ದಿನಗಳಲ್ಲಿ ಮಾಧ್ಯಮ ಮಿತ್ರರಿಗೆ ಬೈದರೆ ಒಳ್ಳೇ ಪ್ರಚಾರ ಬರುತ್ತದೆ ಎನ್ನುವುದು ಎಲ್ಲರ ಹುಚ್ಚು ಕಲ್ಪನೆ! ಆದರೆ ಆ ಕಾರಣಕ್ಕಾಗಿ ನಾನು ಈ ಬರಹ ಬರೆದಿಲ್ಲ. ಬಹುಶಃ ಈ ಬರಹವೋದಿದ ಕಾರ್ಯಕ್ರಮ ಆಯೋಜಕರು ಫೋಟೋಗ್ರಾಫರ್ಸ್ಗಳಿಗೆಯೇ ಒಂದು ವ್ಯವಸ್ಥೆ ಮಾಡಬಹುದೇನೋ...ಎಂಬ ಸಣ್ಣ ನಿರೀಕ್ಷೆ. ಆದರೂ ಕ್ಯಾಮರಾ ಹೆಗಲೇರಿಸಿಕೊಂಡರೆ ಸಾಕು ಬೇರೆ ಯಾರು ಕಣ್ಣಿಗೆ ಕಾಣುವುದಿಲ್ಲ! ಇದು ನನ್ನ ಸ್ವಂತ ಅನುಭವವೂ ಇರಬಹುದು. ಅನೇಕ ವೈಭವೋಪೇತ ಕಾರ್ಯಕ್ರಮಗಳಲ್ಲಿ ಕ್ಯಾಮೆರಾಮೆನ್ಗಳಿಗಾಗಿಯೇ ವೇದಿಕೆಯ ಮುಂದೆ ಒಂದು ಚೂರು ತಗ್ಗು, ಅಥವಾ ವೇದಿಕೆಯ ಮುಂದೆ ಒಂದು ಚಿಕ್ಕ ವೇದಿಕೆ ಹಾಕಿರುತ್ತಾರೆ. ಇದರಿಂದ ಫೋಟೋ ತೆಗೆದುಕೊಳ್ಳುವವರಿಗೂ ತೊಂದರೆ ಇಲ್ಲ. ಕಾರ್ಯಕ್ರಮ ವೀಕ್ಷಕರಿಗೂ ಬೇಸರವಿಲ್ಲ.

ಯಾವಾಗ ಒಂದು ಕಾರ್ಯಕ್ರಮದಲ್ಲಿ ಈ ವ್ಯವಸ್ಥೆ ಇಲ್ಲದಿರುವುದೋ ಅಲ್ಲಿ ವೀಕ್ಷಕ ಪರದಾಡುವುದಂತೂ ನೂರಕ್ಕೆ ನೂರರಷ್ಟು ನಿಜ!. ಇಂತಹ ಸಂದರ್ಭದಲ್ಲಿ ನಮ್ಮ ದಿ ಗ್ರೇಟ್ ಫೋಟೋಗ್ರಾಫರ್ಸ್ ಒಂದು ಚೂರು ವೀಕ್ಷಕರಿಗೆ ಕರುಣೆ ತೋರಿಸಿ, ಇತರರಿಗೆ ತೊಂದರೆ ಕೊಡದೆ ಒಳ್ಳೆ ಫೋಟೋ ತೆಗೆದರೆ ಉತ್ತಮ ಎನ್ನುವುದು ನನ್ನ ಅಭಿಪ್ರಾಯ.

ಇನ್ನು ಕೆಲವರು ನಾಡಗೀತೆ, ರೈತ ಗೀತೆ ಮೊಳಗಿದರೆ ನನಗೆ ಮತ್ತು ಅದಕ್ಕೆ ಯಾವುದೇ ಸಂಬಂಧ ಇಲ್ಲ ಎನ್ನುವ ಹಾಗೆ ಕಾಲ ಮೇಲೆ ಕಾಲು ಹಾಕಿಕೊಂಡು ಕ್ಯಾಮೆರಾ ಸೆಟ್ಟಿಂಗ್ ಮಾಡಿಕೊಂಡು ಕೂಡುವುದು ಬಹುಶಃ ಎಷ್ಟು ಸಮಂಜಸ ಎನ್ನುವದನ್ನು ಅವರಿಗೆ ಕೇಳಿದರೇ ಉತ್ತಮ ಎನಿಸಿಬಹುದೇನೋ! ಆದರೆ ಏನು ಮಾಡುವುದು ಅವರೊಡನೆ ಚರ್ಚೆಗೆ ಅವಕಾಶವಿದೆಯೇ! ಅವರಿಗೆ ದಿ ಗ್ರೇಟ್ ಪೋಟೋಗ್ರಾಫರ್ ಎಂಬ ಪಟ್ಟ ಬೇರೆ. ಕಾರ್ಯಕ್ರಮಕ್ಕೆ ಬಂದ ತಕ್ಷಣ ಕಾರ್ಯಕ್ರಮ ಆಯೋಜಕರೇ ಅವರಿಗೆ ಸಲಾಮ್ ಹೊಡೆಯುವುದು ಲೋಕರೂಢಿ. ಈ ಸಲಾಮ್ ಅವರಿಗೋ ಅಥವಾ ಅವರ ಕ್ಯಾಮೆರಾಗೋ ಎನ್ನುವುದು ನನಗೆ ಇನ್ನೂ ಯಕ್ಷಪ್ರಶ್ನೆ.


ಸ್ನೇಹಾ ಉಜ್ವಲ

1 comments:

Ranga said...

'ದಿ ಗ್ರೇಟ್ ಫೋಟೋಗ್ರಾಫರ್' ಕೈಯಲ್ಲಿ ಇರುವ ಕ್ಯಾಮರಗೆನೆ ಹೆಚ್ಚಿನ ಮಹತ್ವ ಮೇಡಂ..... ಉತ್ತಮ ಲೇಕನೆ.

Post a Comment