ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಕೃತಿ ವಿಮರ್ಶೆ
ಇದೊಂದು ಕುತೂಹಲಕಾರಿಯಾದ, ಓದುಗರಲ್ಲಿ ನಿಗೂಢತೆಯನ್ನು ಬಿತ್ತುತ್ತ ಸತ್ಯಸಂಗತಿಯನ್ನು ಹೇಳುವ ಪ್ರೀತಿ-ಪ್ರೇಮದ ಮೂಲ ಎಳೆಯುಳ್ಳ ಕಾದಂಬರಿಯಾಗಿದೆ. ನಿರಂತರವಾಗಿ ಓದಿಸಿಕೊಂಡು ಹೋಗುವ ವಾಹಕತೆ ಈ ಕಾದಂಬರಿಗಿದೆ.


ಅನಗತ್ಯ ವಿಚಾರಗಳ, ಅತಿಯಾದ ವರ್ಣನೆಗಳ ಹೇರಿಕೆ ಇಲ್ಲಿಲ್ಲ. ಹೇಳುವುದನ್ನು ಸಂಕ್ಷಿಪ್ತವಾಗಿ ಹೇಳಲಾಗಿದೆ. ಕಥೆಯ ನೇರ ನಿರೂಪಣೆಯಿದೆ. ಕಥೆಯ ನಿರೂಪಣೆಯಲ್ಲಿ ಹೊಸತನವಿದೆ. ಸಮಕಾಲೀನ ಪಾಶ್ಚಾತ್ಯ ಸಾಹಿತ್ಯದಲ್ಲಿ ಕಂಡುಬರುವ ತಂತ್ರನಾವಿನ್ಯತೆಯಿದೆ. ಪತ್ತೆದಾರಿ ಕಾದಂಬರಿಯ ಕುರುಹಿದೆ. ಆ ಮೂಲಕ ಅವರ ಇತರ ಕಥೆ ಕಾದಂಬರಿಗಳಂತೆ ಇಲ್ಲೂ ರೋಚಕತೆ, ಕೌತುಕತೆಗೆ ಹೆಚ್ಚು ಆಸ್ಪದವಿದೆ. ಅನುಬೆಳ್ಳೆ ನಾಮಾಂಕಿತ ರಾಘವೇಂದ್ರ ಬಿ. ರಾವ್ ಅವರ ಹಿಂದಿನ ಸಾಹಿತ್ಯ ಕೃಷಿಯ ಮುಂದುವರಿಕೆಯ ಭಾವವನ್ನೂ, ಹದಗೊಂಡಿರುವ ಜೀವನಾನುಭಾವದ ಪ್ರಜ್ವಲ ಕಿರಣಗಳನ್ನು ಈ ಕೃತಿಯ ಮೂಲಕ ಕಾಣಬಹುದಾಗಿದೆ.

ನೇರವಾಗಿ ಇದೊಂದು ಪ್ರೀತಿ-ಪ್ರೇಮಾಧಾರಿತ ಕಾದಂಬರಿಯಂತೆ ಕಂಡರೂ ಕಾದಂಬರಿಯ ಒಳಹೊಕ್ಕಂತೆ ಹೊಸ ಹೊಸ ಭಾವವಿಚಾರಗಳು ಮೈದಳೆಯುತ್ತವೆ. 'ನಿನ್ನ ಕಣ್ಣ ಬಿಂಬದಿ ನಾನಿಲ್ಲವೇ ...?! ' ಎಂಬ ಶೀರ್ಷಿಕೆಯೇ ಕಥೆಯ ಬಗೆಗಿನ ಪ್ರಶ್ನೆ ಮತ್ತು ಆಶ್ಚರ್ಯವನ್ನು ಹುಟ್ಟಿಸುವ ಜೊತೆಗೆ ಕಾದಂಬರಿಯುದ್ದಕ್ಕೂ ಸಹಜಸ್ಪೂರ್ತ ಕುತೂಹಲವನ್ನು ಉಳಿಸಿಕೊಳ್ಳುತ್ತದೆ. ನೇಹಾ (ನಿಧಿ) ಎಂಬ ಮುಗ್ಧ ಯುವತಿಯ ಸುತ್ತ ನಡೆಯುವ ಪ್ರೀತಿ, ಪ್ರೇಮ, ಅಪಾರ್ಥ, ಅಪರಾಧಗಳ ನಡುವಿನ ಸಂದಿಗ್ಧತೆಯೇ ಕಥೆಯ ಮೂಲ ವಸ್ತು.

ಇಡೀ ಕಾದಂಬರಿಯು ವಿಹಾನ್, ನೇಹಾ, ಡಾ. ಮನ್ವಿತ್ ಸುತ್ತವೇ ನಡೆಯುವ ಕಾವ್ಯಾತ್ಮಕ ಪ್ರಸಂಗವಾಗಿದೆ. ಆದರೂ ಈ ಮೂಲ ಎಳೆಗೆ ಪೂರಕವಾಗಿ ಬರುವ ಹಿನ್ನೆಲೆ-ಮುನ್ನೆಲೆಯ ಮಾಹಿತಿಯನ್ನೊದಗಿಸುವ, ಮೂಲ ನೆಲೆಗೆ ಅವಿನಾಭಾವದಿಂದ ಬೆಸೆದುಕೊಂಡಿರುವ ಉಪ-ಪೂರಕ ಕಥೆಗಳು ಕಾದಂಬರಿಗೆ ಮತ್ತೊಂದು ಸ್ಥರವನ್ನೂ, ನಿರಂತರ ನಿಗೂಡ ಅಚ್ಚರಿಯನ್ನು ಒದಗಿಸಿಕೊಡುತ್ತವೆ. ಕೆಲವೊಂದು ಕಡೆ ಕಥೆ ಸಾಗುತ್ತಲೇ ಇಲ್ಲವೇನೋ ಎಂದುಕೊಳ್ಳುವಷ್ಟರಲ್ಲೆ ಕಥೆಯ ವೇಗಕ್ಕೆ, ಆಯಾಮಕ್ಕೆ ಮುಂದಡಿಯಿಡುವ ಉಪಕಥೆಗಳು ಪೂರಕ ಮಾಹಿತಿಗಳ ಕಣಜಗಳಾಗಿವೆ. ಆ ಮೂಲಕ ಕಾದಂಬರಿಗೆ ನಿರಂತರ ತಿರುವನ್ನು ಕೊಡುತ್ತಿರುತ್ತವೆ.

ಯುವ ಮನಸ್ಸುಗಳ ಆಕರ್ಷಣೆಯ ಪ್ರೇಮ, ದುಡುಕು ನಿರ್ಧಾರ, ಪರಿಸ್ಥಿತಿಗೆ ಸಂಬಂಧಿಕರ ಭಯಕ್ಕೆ ಬೆದರಿ ಮಣಿಯುವ ಆ ಮೂಲಕ ತಮ್ಮ ಪ್ರೇಮದ ನೆಲೆ (ಅಶ್ವಿನ್-ನಿಧಿ) ಒಂದೆಡೆಯಾದರೆ, ನಿಧಿಯೇ ನೇಹಾಳಾಗಿ ವೈದ್ಯರಿಂದ ಆರೈಕೆಗೊಳಗಾಗಿ ಅಶ್ವಿನ್ನಂತೆಯೇ ಇರುವ ವೈದ್ಯನ ಮಿತ್ರ ವಿಹಾನ್ನನ್ನು ಕಂಡು ಬೆಚ್ಚುವ, ಪುರ್ನಜನ್ಮದ ನಂಟಿನ ಕಥೆಯೇನೋ ಎಂಬಂತೆ ಭಾಸವಾಗುತ್ತದೆ. ವಿಹಾನ್ಗೆ ಆಕೆಯ ಮೇಲೆ ವಿಶೇಷವಾದ ಪ್ರೀತಿ, ಕಾಳಜಿ. ಈ ಪ್ರೀತಿ ಕಾಳಜಿಯೇ ಉಷಾಳ ಅಪಾರ್ಥಕ್ಕೆ ಕಾರಣವಾಗಿ, ಆಕೆ ವಿಹಾನ್ನೊಂದಿಗಿನ ಪ್ರೀತಿಯನ್ನು ಮುರಿಯುತ್ತಾಳೆ. ಆತನಿಂದ ದೂರ ಸಾಗುತ್ತಾಳೆ.

ಇವೆಲ್ಲದರ ನಡುವೆ ವಾಸ್ತವ ತಿಳಿಯದ ಗೊಂದಲದಲ್ಲಿ ಬಂಧಿಯಾದ ಡಾ. ಮನ್ವಿತ್. ಮನ್ವಿತ್ನ ಗೊಂದಲ ಪರಿಹಾರವಾಗುತ್ತಾ ಸಾಗಿದಂತೆ ಓದುಗರ ಗೊಂದಲವೂ ನಿವಾರಣೆಗೊಳ್ಳುತ್ತದೆ. ಗೊಂದಲದ ಗೂಡಾದ , ಪರಿಸ್ಥಿತಿಯ ಬಂಧಿಯಾದ ಸಂದರ್ಭದ ಸಂಕೋಲೆಯಿಂದ ಹೊರಬರುವ ನೇಹಾಳ ಬಾಳಿಗೆ ಒಂದು ಸ್ಪಷ್ಟತೆ ದೊರೆಯುತ್ತಾ ಸಾಗಿದಂತೆ ಕಥೆಗೂ ಒಂದು ಸ್ಪಷ್ಟತೆ ದೊರಕುತ್ತದೆ. ಯಾರ ಕಣ್ಣ ಬಿಂಬದಲ್ಲಿ ಯಾರಿರಬಹುದು ಎಂಬ ಊಹೆಯನ್ನು ಊಹಿಸುವಷ್ಟರಲ್ಲಿ ಕಥೆಯಲ್ಲಿ ಮತ್ತೊಂದು ತಿರುವು (ಟ್ರಸ್ಟ್) ಬಂದಿರುತ್ತದೆ. ಇದೇ ಈ ಕಾದಂಬರಿಯ ಶಕ್ತಿ. ಅದು ಅಲ್ಲಲ್ಲಿ ಸಮಯ ಸಂದರ್ಭಾನುಸಾರವಾಗಿ ಬರುತ್ತಲಿರುತ್ತದೆ.

ಸಮಕಾಲೀನ ಸತ್ಯ ಸಂಗತ ಘಟನೆ, ವರದಿಯನ್ನು ಕಥೆಗಾರನು ಕಥಾಪ್ರಜ್ಞೆಯಿಂದ ಎಷ್ಟು ಸುಂದರವಾಗಿಸಬಹುದು, ಸಾಹಿತ್ಯದ ಕಥಾಮಹಲುಗಳನ್ನು ಕಟ್ಟಬಹುದು ಎಂಬುದನ್ನು ತೋರ್ಪಡಿಸಲು ಈ ಕಾದಂಬರಿ ಉತ್ತಮ ಉದಾಹರಣೆಯಾಗಿದೆ. ವರ್ತಮಾನದ ಸಂದರ್ಭದ ಜೊತೆಗೆ 'ನಂದಗಿರಿಯ' ಹೆಸರಿನ ಹಿಂದಿನ ಐತಿಹಾಸಿಕ (ಕಾಲ್ಪನಿಕ) ಕಥೆಹೇಳುತ್ತಾ ಚರಿತ್ರೆಯೊಂದಿಗೂ ಬೆಸೆಯಲ್ಪಡುತ್ತದೆ. ಒಂದೇ ಸಿಟ್ಟಿಂಗ್ನಲ್ಲಿ ಓದಿ ಮುಗಿಸಬಹುದಾದ ರೋಚಕ ಕುತೂಹಲಕಾರಿ ಕೃತಿ ಇದಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.

'ಜನಪ್ರಿಯ' ಸಾಹಿತ್ಯ ಪ್ರಕಾರದಂತೆ ಕಂಡುಬಂದರೂ, ಅನುಭವದ ಅಮೂರ್ತ ಚೈತನ್ಯದಿಂದ ಇಲ್ಲಿ ಆಳವಾದ, ಪುಷ್ಟಿಯುತವಾದ ಸಾಹಿತ್ಯದ ಬಿಂಬವಿದೆ. ಉತ್ತಮವಾದ ಹೋಲಿಕೆಗಳಿವೆ. ಸಾಂಕೇತಿಕ ಪ್ರತಿಮೆಗಳಿವೆ. ಅಗತ್ಯವೆನಿಸುವಷ್ಟು ವರ್ಣನೆಯಿದೆ. ಸಂದರ್ಭೋಚಿತ ಭಾವ ಪ್ರಧಾನತೆ, ಪ್ರಕೃತಿಯೊಂದಿಗಿನ ಮಿಲೀನತೆಗಳಿವೆ. ಕುತೂಹಲ ಹುಟ್ಟಿಸುವುದೇ ಮೂಲ ಉದ್ಧೇಶವಾದರೂ, ಪತ್ತೆದಾರಿಕೆಯ ಸೋಗಿದ್ದರೂ ಭಾವನೆಗಳ ಅಭಿವ್ಯಕ್ತಿಗೆ ಪ್ರಾಂಜಲವಾದ ಸ್ಥಳಾವಕಾಶವಿದೆ. ಮನುಷ್ಯ ಬಾಂಧವ್ಯದ ಅನುಭೂತಿಯಿದೆ.

ಈ ಕಾದಂಬರಿಯು ಓದುಗರನ್ನು ಗಹನವಾದ ಚಿಂತನೆಗೆ ಒಳಪಡಿಸುವ ಜೊತೆಗೆ ಅಲ್ಲಲ್ಲಿ ಕಥೆ ನಿಂತಂತೆ ಆಗುವ ಅನುಭವ, ಕೆಲವೊಮ್ಮೆ ಕೌತುಕವೇ ಕ್ಷೀಣಿಸಿದಂತೆ ಭಾಸವಾಗುವ, ನಡುನಡುವೆ ಇರುವ ಹಲವಾರೂ ವ್ಯಾಕರಣ ದೋಷಗಳು, ಸಂಭಾಷಣೆಯಲ್ಲಿ ಭಾವನೆಗಳ ಮರುಕಳಿಕೆ, ಒಂದೆರಡು ಕಡೆ ಅನಗತ್ಯವೆನಿಸುವ ಪಾತ್ರಗಳ ಮತ್ತು ಅನಾವಶ್ಯಕ ಸಂದರ್ಭಗಳ ಹೇರಿಕೆಯನ್ನು ಸೂಕ್ಷ್ಮವಾಗಿ ಗಮನಿಸಬಹದಾಗಿದೆ. ಇದರ ಹೊರತಾಗಿಯೂ ಇದೊಂದು ಉತ್ತಮ ಕೂತೂಹಲಕಾರಿ, ಚೇತೋಹಾರಿಯಾದ ಕಾದಂಬರಿಯಾಗಿದೆ.

ಶಿಷ್ಟ ಮತ್ತು ಗ್ರಾಂಥಿಕ ಭಾಷೆಯ ಮಿಶ್ರಣವು ನಗರ ಮತ್ತು ಹಳ್ಳಿಗಾಡಿನ ಸೊಗಡತೆ, ಸಂಬಂಧವನ್ನು ಒತ್ತಿ ಹೇಳುತ್ತದೆ. ಕಲ್ಪಿತ ನಿರೀಕ್ಷೆಯ ಮೀರುವಿಕೆ, ನಿರಂತರತೆ, ಪ್ರೀತಿ, ಪ್ರೇಮ, ಅಪಾರ್ಥ, ಅಪರಾಧಗಳ ನಡುವೆ ಸಿಲುಕುವ ಮುಗ್ಧ ಮನಸ್ಸಿನ ಕುತೂಹಲಕಾರಿ ಕಥಾನಕ ಇದಾಗಿದೆ. ಗೊಂದಲ, ಆತಂಕಗಳನ್ನು ದೂರಗೊಳಿಸಿ ನೂತನ ಭಾವಪ್ರಪಂಚದ ಹೊಸ ನಿರೀಕ್ಷೆಗಳನ್ನು ಅಡಕಗೊಳಿಸುತ್ತದೆ. ನೊಂದ ಮನಸ್ಸುಗಳಿಗೆ ಹೊಸ ಪ್ರೀತಿ ದೊರೆಯುತ್ತದೆ. ಆತಂಕಗಳೊಂದಿಗೆ, ಅನುಮಾನಗಳೊಂದಿಗೆ ಪ್ರಾರಂಭವಾಗುವ ಕಾದಂಬರಿಯು ಭರವಸೆಯೊಂದಿಗೆ, ರಂಗೇರುವ ಸೂರ್ಯನ ಸೊಬಗಿನೊಂದಿಗೆ ಅಂತ್ಯವಾಗುತ್ತದೆ. ಆ ಮೂಲಕ ನಿರಾಸೆಗಳಿಗೆ ಹೊಚ್ಚ ಹೊಸದಾದ ಆಸೆಯನ್ನು ಬಿತ್ತುತ್ತದೆ. ರೋಚಕತೆ, ನಿಗೂಢತೆಯ ನಿರೀಕ್ಷೆಗೆ ಹೊಸತೊಂದು ಆಯಾಮ ದೊರೆಯುತ್ತದೆ. ಕಾದಂಬರಿಯ ಮೂಲ ಆಶಯವು ಸಂಪನ್ನವಾಗುತ್ತದೆ.

ನಿನ್ನ ಕಣ್ಣ ಬಿಂಬದಿ ನಾನಿಲ್ಲವೇ ...?
ಕಾದಂಬರಿಕಾರರು - ಅನುಬೆಳ್ಳೆ (ರಾಘವೇಂದ್ರ ಬಿ. ರಾವ್)
ಶ್ರೀನಿವಾಸ ಪುಸ್ತಕ ಪ್ರಕಾಶನ, ಬೆಂಗಳೂರು
ಬೆಲೆ : 60.00 ರೂ.ಗಳು,
ಒಟ್ಟು ಪುಟಗಳು : 112 + 4

ಬರಹ: ಶ್ರೇಯಾಂಕ ಎಸ್. ರಾನಡೆ

1 comments:

Anantha Hudengaje said...

ವಿಮರ್ಶೆ ಚೇತೋಹಾರಿಯಾಗಿದೆ. ಜನಪ್ರಿಯ ಎಂದು ಎಲ್ಲರೂ ಉಪೇಕ್ಷಿಸುವ ಪ್ರಕಾರದ ಬಗ್ಗೆ ಬರೆದಿದ್ದು ಓದಿ ಖುಷಿಯಾಯಿತು.
- ಅನಂತ ಹುದೆಂಗಜೆ

Post a Comment