ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಮಹಿಳಾ ದಿನದ ವಿಶೇಷ

ಆಕೆ ಮಹಿಳಾ ವಾದಿಯಲ್ಲ...ಮಹಿಳಾ ವಾದವೆಂಬ ಹೋರಾಟವನ್ನೂ ಮಾಡಿಲ್ಲ... ತಾನೇನೋ ದೊಡ್ಡ ಸಾಧನೆ ಮಾಡಿದ್ದೇನೆಂದು ಎಲ್ಲೂ ಹೇಳಿಕೊಂಡು ಹೋಗಲಿಲ್ಲ... ಹೇಳಿ , ಹೇಳಿಸಿ , ಕೇಳಿ , ಯಾವೊಂದು ಪ್ರಶಸ್ತಿಯನ್ನೂ ಪಡಕೊಂಡಿಲ್ಲ... ಸಾಕಷ್ಟು ಶ್ರಮ...ನೋವು.... ಕಷ್ಟಗಳ ನಡುವೆ ಸಾಧಿಸಿ ತಾನು ಇತರರಿಗಿಂತ ಭಿನ್ನ ಎಂಬುದನ್ನು ತೋರಿಸುವಲ್ಲಿ ಯಶಸ್ವಿಯಾಗಿದ್ದಾಳೆ.ಒಂದೇ ಒಂದು ಕ್ಷಣಕಾಲವೂ ಸುಮ್ಮನಿರುವಂತಹವಳಲ್ಲ...ಏನಾದರೊಂದು ಚಟುವಟಿಕೆಯಲ್ಲಿ ನಿತ್ಯ ನಿರಂತರ ತೊಡಗಿಕೊಳ್ಳುವಿಕೆ...ಶಿಸ್ತು, ಅಚ್ಚುಕಟ್ಟು, ಎಲ್ಲ ಕೆಲಸ ಕಾರ್ಯವೂ ಹಾಗೇನೇ... ಇದು ಬೇರ್ಯಾರ ಬಗ್ಗೆನೂ ಹೇಳುತ್ತಿಲ್ಲ...ನನ್ನಮ್ಮನ ಬಗ್ಗೆ. ಹೌದು ಆಕೆ ಸಾಧಕಿ. ಮಹಿಳಾ ದಿನದಂಗವಾಗಿ ನನ್ನಮ್ಮನ ಬಗ್ಗೆಯೇ ವಿಶೇಷ ಬರಹವೊಂದನ್ನು ನಮ್ಮ ಓದುಗರಿಗಾಗಿ ನೀಡುತ್ತಿದ್ದೇವೆ. ಮಾರ್ಚ್ 31ಕ್ಕೆ ನನ್ನಮ್ಮನ ಮೊದಲ ಕಥಾ ಸಂಕಲನ ಬಿಡುಗಡೆ. ಆ ಪುಸ್ತಕದ ಮುನ್ನುಡಿಯಲ್ಲಿ ಬರೆದದ್ದನ್ನೇ ಇಲ್ಲೂ ಕೊಟ್ಟಿದ್ದೇನೆ. ಓದಿ...ಅಭಿಪ್ರಾಯಿಸಿ.


ಕಣ್ಣುಗಳು ತುಂಬಿ ಬಂದವು... ಅದ್ಯಾಕೋ ಗೊತ್ತಿಲ್ಲ... ಅಮ್ಮ ಅಂದೆಲ್ಲಾ ನನ್ನ ಕಥೆ ಬಂದಿದೆ ಓದು ಎಂದಾಗ ಒಮ್ಮೆಯಾದರೂ ನಾನು ಒಂದೇ ಒಂದು ಕಥೆಯನ್ನೂ ಓದಿರಲಿಲ್ಲ. ಅಮ್ಮ ಪ್ರೀತಿಯಿಂದ ಪತ್ರಿಕೆ ತಂದು ಕೈಗಿತ್ತರೂ ಹಾ ಚೆನ್ನಾಗಿದೆ ಎಂದಷ್ಟೇ ಹೇಳಿ ಅಲ್ಲೇ ಮಡಚಿಡುತ್ತಿದ್ದೆ. ಆದರೆ ಅಮ್ಮನ ಕಥಾ ಸಂಕಲವೊಂದನ್ನು ಹೇಗಾದರೂ ಮಾಡಿ ಪ್ರಕಟಿಸಲೇ ಬೇಕೆಂಬ ತುಡಿತ ನನ್ನೊಳಗೆ ಬಹು ವರುಷಗಳಿಂದ ಸುಪ್ತವಾಗಿತ್ತು... ಮೊನ್ನೆ ಮೊನ್ನೆಯಷ್ಟೇ ಅರವಿಂದ ಚೊಕ್ಕಾಡಿ ಪರಿಚಯಿಸಿದ ಬೆಂಗಳೂರಿನ ನಾಗಮಣಿ ಅವರ ದೂರವಾಣಿ ಕರೆ ಬರುತ್ತಲೇ ಮನದೊಳಗಿನ ಸುಪ್ತ ಚಿಂತನೆ ಗರಿಕೆದರಿ ನಿಂತಿತು...ಹೌದು ಇದು ಸಕಾಲ ಎನಿಸಿತು. ಅಮ್ಮನ ಕಥಾ ಸಂಕಲನದ ಪ್ರತಿಯೊಂದು ಕಥೆಯನ್ನು ಅತ್ಯಂತ ಶ್ರದ್ಧೆಯಿಂದ ಓದಿದೆ...

ಅವೆಲ್ಲವೂ ನನ್ನನ್ನು ನಿರಂತರ ಕಾಡತೊಡಗಿದವು. ನನ್ನಮ್ಮ ಎಷ್ಟು ಸೊಗಸಾಗಿ ಕತೆ ಬರೆಯುತ್ತಾರಲ್ಲಾ... ಛೇ..ನಾನು ಈ ಕಥೆಗಳನ್ನು ಈ ತನಕ ಓದದೆ ಹೀಗೆ ಇದ್ದುಬಿಟ್ಟೆನಲ್ಲಾ...ಎಂಬ ನನ್ನ ಸಣ್ಣ ಮನಸ್ಸಿನ ಬಗೆಗೆ ನನಗೇ ಜಿಗುಪ್ಸೆಯಾಯಿತು. ಹೌದು ನನ್ನಮ್ಮ ಸೊಗಾಸದ ಕಥೆಗಾರ್ತಿ ... ನನ್ನ ಜೀವನದ ಈ ಹಂತದ ತನಕ ಕನ್ನಡದ ಮೇರು ಸಾಹಿತಿಗಳಿಂದ ತೊಡಗಿ ಅದೆಷ್ಟೋ ಹಿರಿ - ಕಿರಿಯ ಸಾಹಿತಿಗಳ ನಿರಂತರ ಒಡನಾಟ , ಅವರ ಲೇಖನ, ಕಥೆ ಒಟ್ಟಾರೆ ಬರಹಗಳನ್ನು ಓದಿದ್ದೆ.ಅವರೆಲ್ಲರ ಬಗೆಗೂ ನನಗೆ ಅಪಾರ ಗೌರವವೂ ಇವೆ. ಆದರೆ ಇಂದು ನನ್ನಮ್ಮ ಅವರೆಲ್ಲರಿಗಿಂತಲೂ ಒಂದು ಹೆಜ್ಜೆ ಮುಂದಿದ್ದಾರೆ ಎಂಬುದನ್ನು ಅತ್ಯಂತ ಪ್ರೀತಿಯಿಂದ ಹೆಮ್ಮೆಯಿಂದ ಹೇಳಲಿಚ್ಛಿಸುತ್ತೇನೆ. ಇದು ಅಹಂಕಾರದ ನುಡಿಗಳಲ್ಲ... ಆದರೆ ಸತ್ಯ.ನಾವೇನೂ ಬಹಳ ಶ್ರೀಮಂತರಲ್ಲ. ನನಗೆ ತಿಳುವಳಿಕೆ ಮೂಡಿದಾಗಿಂದಲೂ ಅಮ್ಮ ಬರೆಯುತ್ತಿದ್ದರು. ಅದನ್ನು ನಾನು ನೋಡುತ್ತಿದ್ದೆ. ಮದುವೆ ಆಮಂತ್ರಣಗಳ ಹಿಂಭಾಗದಲ್ಲೋ, ಅದರ ಲಕೋಟೆಯನ್ನು ಬಿಡಿಸಿ ಅದರ ಒಳಭಾಗದಲ್ಲೋ, ಕಸದ ಬುಟ್ಟಿಯಲ್ಲಿ ಎಸೆದ ಕಾಗದಲ್ಲೋ, ಹೀಗೆ ರದ್ದಿಕಾಗದಲ್ಲಿ ಬರೆದೇ ದೊಡ್ಡ ಕಥೆಗಾರ್ತಿಯಾದ ನನ್ನಮ್ಮ ನಿಜಕ್ಕೂ ಇಂದು ಮಾಡಿದ ಸಾಧನೆ ಇತರರಿಗೆ ಮಾದರಿ ಎಂದರೆ ತಪ್ಪಾಗಲಾರದು. ನನ್ನಮ್ಮನನ್ನು ನಾನು ಅರಿತಷ್ಟು, ಇನ್ಯಾರೂ ಅರ್ಥೈಸಿಕೊಳ್ಳಲು ಸಾಧ್ಯವೇ ಇಲ್ಲ. ಅಂತಹ ಅಮ್ಮ ಇಂದು ನೂರಾರು ಕಥೆಗಳನ್ನು ಬರೆದು ಹೆಸರು ಮಾಡಿದ್ದಾರೆ. ಅವೆಲ್ಲವೂ ಜನಜೀವನದ ನೋವಿನ ಹಂದರವನ್ನೊಳಗೊಂಡಿವೆ.

ಪ್ರತಿಯೊಂದೂ ಆಪ್ತತೆಯ ಸ್ಪರ್ಶವನ್ನೊಳಗೊಂಡಿವೆ. ನಾನು ಹೇಳುವುದ್ಕಕಿಂತಲೂ ನೀವು ಓದಿ... ಎಲ್ಲೋ ನಮ್ಮ ಆಪ್ತವಲಯದಲ್ಲೋ, ನಮ್ಮ ನಡುವೆಯೇ ಕಂಡು ಅನುಭವಿಸಿದ ಘಟನೆಗಳಿವು ಎಂಬಂತೆ ಭಾಸವಾಗುವುದರಲ್ಲಿ ಸಂದೇಹವಿಲ್ಲ...ಕಥೆಗಳನ್ನೋದುತ್ತಲೇ ಮನದೊಳಗೆ ಅವ್ಯಕ್ತವೇದನೆ, ಮೂಡುವ ಮೂಲಕ ಕಥೆ ಮನಸ್ಸನ್ನಾವರಿಸಿಕೊಳ್ಳುತ್ತವೆ. ಆ ರೀತಿಯಲ್ಲಿ ಪ್ರತಿಯೊಂದು ಕಥೆಗಳು ಓದುಗರನ್ನು ಮುಟ್ಟುವಂತೆ ತಟ್ಟುವಂತೆ, ಭಾವನೆಗಳನ್ನು ಸ್ಪುರಿಸುವಂತೆ ಮಾಡುತ್ತವೆ..." ನನ್ನ ಎಳವೆಯಲ್ಲಿ ಕಥೆ ಬರೆದು ಇದನ್ನು ನಿನ್ನ ಪತ್ರಿಕೆಯಲ್ಲಿ ಹಾಕು ಎಂದು ಪುಟ್ಟ ಕಾಗದವೊಂದನ್ನು ಕೈಯಲ್ಲಿ ಹಿಡಿದು ಹೇಳಿದಾಗ ; ಹ್ಹೂಂ...ನೀನೂ ಕಥೆ ಬರೆಯುತ್ತಿ...ನೀನೇನು ದೊಡ್ಡ ಸಾಹಿತಿಯೇ...? ಎಂದು ಹತ್ತಿರದ ಬಂಧುವೊಬ್ಬ ವ್ಯಂಗ್ಯವಾಡಿದ್ದ;... ಆತ ಅಂದು ಹಾಗೆ ಹೇಳಿದ್ದು ಒಂದು ರೀತಿಯಲ್ಲಿ ಒಳ್ಳೆಯದೇ ಆಯಿತು... " ಸಣ್ಣ ನಿಟ್ಟುಸಿರಿನೊಂದಿಗೆ ಅಮ್ಮ ಹೇಳಿದಾಗ... ಹೌದು... ಅಮ್ಮ ಹೇಳುವುದರಲ್ಲಿ ಸತ್ಯವಿದೆ ಎಂಬ ಸತ್ಯದ ಅನಾವರಣವಾಗುತ್ತದೆ. ನಾವೇನಾದರೂ ಕಿಂಚಿತ್ ಮಾಡ ಹೊರಟರೆ ತುಳಿಯುವ ಮಂದಿಯೇ ಅಧಿಕ. ಅದು ಅಮ್ಮನೂ ಅನುಭವಿಸಿದ್ದರು...ನಾನೂ ಅನುಭವಿಸುತ್ತಿದ್ದೇನೆ. ಎಲ್ಲಿ ಆತ/ಕೆ ಮೇಲೆ ಬಂದು ಬಿಡುತ್ತಾನೋ/ಳೋ ಎಂಬ "ಸಣ್ಣ ಮನಸ್ಸು" ಸಮಾಜದಲ್ಲಿ ಹೆಚ್ಚುತ್ತಿದೆ.

ಎಡೆಬಿಡದ ಒತ್ತಡದ ನಡುವೆಯೋ, ಅನಾರೋಗ್ಯದ ನಿರಂತರ ಬಳಲುವಿಕೆಯ ನಡುವೆಯೋ ಅಮ್ಮ ಕಥೆಬರೆಯುತ್ತಾಳೆ. ನನ್ನಮ್ಮನ ಒಳಗೊಬ್ಬಳು ಕಥೆಗಾರ್ತಿಯ ಮನಸ್ಸಿದೆ. ಆ ಮನಸ್ಸು ತನ್ನ ನೋವು ನಲಿವು, ಅನುಭವ, ವಾಸ್ತವಗಳಿಗೊಂದು ಕಥೆಯ ರೂಪು ನೀಡುವಲ್ಲಿ ಕಾರಣೀಕರ್ತಳಾಗುತ್ತಾಳೆ... ಹೌದು... ನನ್ನಮ್ಮನ ಕಥೆಗಳೇ ಹಾಗೆ. ಅಷ್ಟರ ಮಟ್ಟಿಗೆ ಅವೆಲ್ಲವೂ ಮನಸ್ಸನ್ನು ತಟ್ಟುತ್ತವೆ...ಮುಟ್ಟುತ್ತವೆ...ಓದುತ್ತಿದ್ದಂತೆ ನಮ್ಮನ್ನು ನಾವೇ ಮರೆತುಬಿಡುತ್ತೇವೆ...ಕಥೆಯೊಳಗಿನ ಪಾತ್ರ ನಾವಾಗಿರುತ್ತೇವೆ...ಕೆಲವೊಮ್ಮೆ ಮನಸಾರೆ ನಗುವಂತೆ ಮಾಡಿದರೆ ಅರೆಕ್ಷಣದಲ್ಲಿಯೇ ಕಣ್ಣಂಚಿನಿಂದ ಹನಿನೀರು ಜಿನುಗುವಂತೆ ಮಾಡುತ್ತದೆ. ಅಂತಹ ಶಕ್ತಿ ನನ್ನಮ್ಮ ಬರೆದ ಕಥೆಗಳಿಗಿವೆ... ಆ ರೀತಿಯಲ್ಲಿ ಕಥೆಯ ಪಾತ್ರಗಳು , ಕಥಾನಕ ಸೃಷ್ಟಿಯಾಗುತ್ತದೆ...ಅದೆಷ್ಟೋ ಕಥೆಗಾರರ ಕಥೆಗಳನ್ನೋದಿದ್ದೇನೆ.ಆದರೆ ಅವೆಲ್ಲವುಗಳಿಂದ ಭಿನ್ನವಾಗಿ ನನ್ನಮ್ಮ ಬರೆದ ಕಥೆಗಳಿವೆ.

ಮಧ್ಯಾಹ್ನ ಊಟದ ನಂತರ ಸಣ್ಣ ನಿದ್ರೆಗೆ ನಾವೆಲ್ಲಾ ಜಾರಿದರೆ ಅಮ್ಮ ಕೆನ್ನೆಗೆ ಕೈಯಿಟ್ಟು ಹೊಲಿಗೆ ಮಿಷನ್ ಮೇಲಿಟ್ಟ ಹಳೆಯ ರಟ್ಟಿನ ತುಂಡಿನ ಮೇಲಿದ್ದ ಬಣ್ಣ ಮಾಸಿದ ಕಾಗದದಲ್ಲಿ ಕಥೆ ಬರೆಯಲಾರಂಭಿಸುತ್ತಾಳೆ. ರಾತ್ರಿ ನಾವು ಮಲಗುವ ಹೊತ್ತಿಗೆ ಅಮ್ಮ ಎಚ್ಚರದಿಂದಿರುತ್ತಿದ್ದಳು. ಬರೆಯಲು ಪ್ರತ್ಯೇಕ ಮೇಜು, ಕುರ್ಚಿಯಿಲ್ಲ. ಊಟವಾದನಂತರ ಊಟದ ಮೇಜೇ ಅಮ್ಮನ ಕಥೆ ಬರೆಯುವ ಜಾಗ!. ಒಂಟಿಯಾಗಿ ಕುಳಿತು ಆಕೆ ಕಥೆ ಬರೆಯುತ್ತಾಳೆ. ನನಗೆ ಬುದ್ದಿ ತಿಳಿದಂದಿನಿಂದ ಇಂದಿನ ತನಕವೂ ಹೊಸ ಕಾಗದಲ್ಲಿ ಅಮ್ಮ ಕಥೆಬರೆದ ಉದಾಹರಣೆಗಳೇ ಇಲ್ಲ... ಎಲ್ಲವೂ ಹಳೆಯ, ರದ್ದಿಕಾಗದಲ್ಲೇ ಮೂಡಿದ ಅದ್ಭುತ ಕಥೆಗಳು! ಆ ರೀತಿ ಕಷ್ಟದಿಂದ ಮೇಲೆ ಬಂದವಳು ನನ್ನಮ್ಮ. ಸಂಕಲನದಲ್ಲಿರುವ ಪ್ರತಿಯೊಂದು ಕಥೆಗಳು ಓದುಗರನ್ನು ಮುಟ್ಟುವಂತೆ ತಟ್ಟುವಂತೆ, ಭಾವನೆಗಳನ್ನು ಸ್ಪುರಿಸುವಂತೆ ಮಾಡುತ್ತವೆ...

ಹರೀಶ್ ಕೆ.ಆದೂರು.

1 comments:

Anonymous said...

Superb feel!Chandraprabha, Moodbidri

Post a Comment