ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಯುವಾ
ಅಂದು ಜುಲಾಯಿ 19, 1999...
ಬಾಲ್ಯಾವಸ್ಥೆಯ ಮುಗ್ಧ ಮನಗಳು ಕನಸುಗಳಿಂದ ಪ್ರಪಂಚವನ್ನು ವೀಕ್ಷಿಸುತ್ತಾ, ಸುತ್ತಲಿನ ಪ್ರಪಂಚವನ್ನು ಅರಿಯುವ ಹೊತ್ತಿನಲ್ಲಿ ಅಡಿಯಿರಿಸಿದ್ದೆವು 'ನವೋದಯ' ಎಂಬ ನೂತನ ವಿಶ್ವಕ್ಕೆ.


ಅದು ನಮ್ಮನ್ನು ಸೆಳೆದು ಸಪ್ತ ವರ್ಷಗಳಷ್ಟು ಕಾಲ ತನ್ನಾಳ ಗರ್ಭದಲ್ಲಿರಿಸಿಕೊಂಡು ಸಾಕಿ.. ಸಲಹಿ, ಮಥಿಸಿ ಕಡೆದು ಶಿಲ್ಪವನ್ನಾಗಿಸಿತ್ತು. ಮಣ್ಣಿನ ಮುದ್ದೆಯಾಗಿ ಪ್ರವೇಶಿಸಿದ್ದ ವ್ಯಕ್ತಿತ್ವವನ್ನು ಆಕೃತಿಯನ್ನಾಗಿಸಿ ಹೊರಹೊಮ್ಮಿಸಿತ್ತು...ನಾನು ಹೇಳ ಹೊರಟಿರುವುದು, ರಾಜೀವ್ ಗಾಂಧಿಯವರ ಕನಸಿನ ಕೂಸಾದ, ವಿದ್ಯಾರ್ಥಿಗಳ ಪಾಲಿಗೆ ವರದಾನವಾದ, ಉಡುಪಿ ಜಿಲ್ಲೆಯ ಹೆಬ್ರಿಯಿಂದ ಮೂರು ಕಿಲೋ ಮೀಟರ್ ದೂರದ ಚಾರಾದಲ್ಲಿ 'ಪ್ರಜ್ಞಾನ ಬ್ರಹ್ಮ' ಎಂಬ ಧ್ಯೇಯದಿಂದ ತಲೆಯೆತ್ತಿ ನಿಂತಿರುವ 'ಜವಾಹರ ನವೋದಯ ವಿದ್ಯಾಲಯ' ಎಂಬ ವಿದ್ಯಾದೇಗುಲದ ಬಗ್ಗೆ.

ಸೀತಾನದಿಯ ತಟದಲ್ಲಿ ಪ್ರಕೃತಿಯ ಮಡಿಲಲ್ಲಿ ಆಳೆತ್ತರದ ಗೋಡೆಗಳಿಂದ ಆವೃತ್ತವಾಗಿ, ಹೊರ ಜಗತ್ತಿನಿಂದಲೇ ಹೊರತಾದ ಗುರುಕುಲದ ಪರಿಸರದಲ್ಲಿ..,ಉನ್ನತ ಆಚಾರ್ಯ ವೃಂದ ಒಟ್ಟಾಗಿ ಶ್ರಮಿಸಿ ಮುಂದಿನ ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ನೀಡಲು ಯತ್ನಿಸುತ್ತಿರುವ ಕರ್ಮಕುಟೀರವಿದು. ಜುಲಾಯಿ 19,1999 ರಂದು ಇದರೊಳಗೆ ಅಡಿಯಿರಿಸಿದ ನಾವು ಈ ಜಗತ್ತಿನ ಆರನೇ ತಲೆಮಾರು... ಇಂದು ಇದು ತನ್ನ ಹನ್ನೆರಡನೇ ತಲೆಮಾರನ್ನು ಬಿಡುಗಡೆಗೊಳಿಸುವ ಮಹಾಪರ್ವಕ್ಕೆ ಸಜ್ಜಾಗಿ ನಿಂತಿದೆ.

ಪ್ರತೀವರ್ಷ ಜಿಲ್ಲೆಯ ವಿವಿಧ ಪ್ರದೇಶ ಪರಿಸರದಿಂದ ಆಯ್ಕೆಯಾದ 60 ವಿದ್ಯಾರ್ಥಿಗಳು ಈ ಕುಟುಂಬಕ್ಕೆ ಪ್ರವೇಶ ಪಡೆಯುತ್ತಾರೆ. ಜೊತೆಜೊತೆಗೆ ಆಟ,ಪಾಠ,ಊಟ,ವಸತಿ ಇವು ಸಹಬಾಳ್ವೆಯ ಸೂತ್ರಗಳು. ಉತ್ತಮ ಭೌತಿಕ ವ್ಯವಸ್ಥೆಗಳು, ಸದಾ ವಿದ್ಯಾರ್ಥಿಗಳ ಉನ್ನತಿಗಾಗಿ ಶ್ರಮಿಸುವ, ಅವರ ಯಶಸ್ಸಿನಲ್ಲಿ ಹರ್ಷಿಸುವ ಶಿಕ್ಷಕ ವೃಂದ, ಅತ್ಯುತ್ತಮ ಗ್ರಂಥಗಳ ಆಕರವಾದ ವಾಚನಾಲಯ, ಇಂದಿನ ಸ್ಪರ್ಧಾತ್ಮಕ ಯುಗದ ಅಗತ್ಯವನ್ನು ಪೂರೈಸುವ ಕಂಪ್ಯೂಟರ್ ಲ್ಯಾಬ್ಗಳು, ವೈಜ್ಞಾನಿಕ ಪ್ರಯೋಗಾಲಯಗಳು, ಇದಲ್ಲದೇ.. ಸದಾ ದೊರೆಯುವ ವೈದ್ಯಕೀಯ ಸೇವೆ, ದೈಹಿಕ ಬೆಳವಣಿಗೆಗೆ ಪೂರಕವಾಗಿ ಜಿಮ್, ಆಟದ ಮೈದಾನ... ಹೀಗೆ ಹಲವಾರು ಸೌಲಭ್ಯಗಳು.

ಶಿಸ್ತುಬದ್ಧ ವೇಳಾಪಟ್ಟಿಯೊಂದಿಗೆ ದಿನದ ಆರಂಭ..ಸೂರ್ಯೋದಯಕ್ಕೂ ಮೊದಲೇ ಆರಂಭಗೊಳ್ಳುವ ದೈಹಿಕ ಶಿಕ್ಷಣ ತರಗತಿಗಳು.. ಮುಂಜಾವಿನ ಜಾಗಿಂಗ್, ಯೋಗ-ವ್ಯಾಯಾಮಗಳು. ನಂತರದಲ್ಲಿ ಪ್ರಾರ್ಥನೆಯೊಂದಿಗೆ ಐಚ್ಛಿಕ ವಿಷಯಗಳ ಬೋಧನೆ ಆರಂಭಗೊಳ್ಳುವುದು. ತನ್ಮಧ್ಯೆ ಬೆಳಗ್ಗಿನ ಉಪಹಾರ, ಮಧ್ಯಾಹ್ನದ ರುಚಿ-ಶುಚಿ ಭೋಜನ. ಅಪರಾಹ್ನದ ಅವಧಿ ಸ್ವಕಲಿಕೆಗೆ ಮೀಸಲು. ಸಂಜೆ ಪುನಃ ಕ್ರೀಡಾವಧಿಯಲ್ಲಿ ಸೊಕ್ಕುವ ಮನ.. ವಿರಾಮದ ನಂತರದಲ್ಲಿ ಮೊತ್ತೊಂದು ಓದಿನ ಅವಧಿ.. ರಾತ್ರಿಯ ಭೋಜನ, ಹೀಗೆ ಕೊನೆಗೊಳ್ಳುವ ದಿನಚರಿ.

ಇಷ್ಟೆಲ್ಲದರ ನದುವೆಯೂ ಮಂಕಾಗುವ ಮನಸ್ಸು, ಮನೆ ಕಡೆಯ ನೆನಪು...ಕಣ್ಣಂಚಿನಲಿ ಹನಿಯು...ಇದು ಸೇರಿದ ಮೊದಲ ವರ್ಷ, ಸರ್ವೇ ಸಾಮಾನ್ಯ ದೃಶ್ಯ. ವರ್ಷ ಕಳೆಯುವ ಹೊತ್ತಿಗೆ ಮನ ಹಗುರವಾಗಿ, ಅದುವೇ ಮನೆಯಾಗುತ್ತದೆ.
ಇಲ್ಲಿ ಶಿಕ್ಷಣ ಎನ್ನುವುದು ಕೇವಲ ಪಠ್ಯ ವಿಷಯಗಳಿಗೆ ಮಾತ್ರಾ ಸೀಮಿತವಾಗಿರದೇ, ಮಗುವಿನ ಸರ್ವತೊಮುಖ ಬೆಳವಣಿಗೆಯ ಕಡೆಗೆ ಕೇಂದ್ರೀಕೃತವಾಗಿದೆ. ಇಲ್ಲಿಯ ಶಿಕ್ಷಣ ಕೇವಲ ವಿಷಯ ಜ್ಞಾನವನ್ನು ಕಟ್ಟಿಕೊಡದೇ..ಬದುಕನ್ನು ಕಟ್ಟಿಕೊಡುತ್ತದೆ. ಇಲ್ಲಿ ಕಲಿತ ಪ್ರತಿಯೊಬ್ಬ ವಿದ್ಯಾರ್ಥಿಯೂ ಮುಂದೆ, ಜೀವನದಲ್ಲಿ ಸೋಲೊಪ್ಪಿಕೊಳ್ಳದೆ ಬದುಕುಸಾಗಿಸುತ್ತಿರುವುದು ಇಲ್ಲಿಯ ಶಿಕ್ಷಣ ವಿಧಾನಕ್ಕೆ ಹಿಡಿದ ಕನ್ನಡಿ...

ಆದರೂ.. ಹೊರಪ್ರಪಂಚದ ಸಂಪರ್ಕದಿಂದ ದೂರವಿದ್ದ ನಮಗೆ...ಒಮ್ಮೆಲೇ ಜನಸಂಪರ್ಕಕ್ಕೆ ಬಂದಾಗ ತಡಬಡಾಯಿಸುವಂತಾಗುತ್ತದೆ. ಹೊಸಪರಿಸರಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ.. ಇತ್ತೀಚಿನ ದಿನಗಳಲ್ಲಿ ಹೊರಗಿನ ಆಗು-ಹೋಗುಗಳು ಒಳಗಿನ ಪ್ರಶಾಂತತೆಯ ಮೇಲೆ ಪ್ರಭಾವ ಬೀರುವಂತಿದ್ದರೂ.. ಸ್ವಂತಿಕೆಯನ್ನು ಉಳಿಸಿಕೊಂಡು ತನ್ನ ಕಂಪನ್ನು ಪಸರಿಸುತ್ತಿರುವ ನವೋದಯದ ಭವ್ಯತೆಗೆ ನನ್ನದೊಂದು 'ನುಡಿನಮನ'..

ಭಾವಗೀತಾ.

1 comments:

radhika said...

Geetha....thumba olle baravanige...

Post a Comment