ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ

ವಿಟ್ಲ : ಕರ್ನಾಟಕ ರಾಜ್ಯ ಗಡಿ ಪ್ರದೇಶವಾದ ಆನೆಕಲ್ಲು ಎಂಬಲ್ಲಿ ಕೇರಳ ರಾಜ್ಯ ಸರಕಾರ ಅಕ್ರಮವಾಗಿ ನಿರ್ಮಿಸಿರುವ ಅಣೆಕಟ್ಟಿನ ರಕ್ಷಣಾ ತಡೆಗೋಡೆ ಒಡೆದು ಕರ್ನಾಟಕ ರಾಜ್ಯಕ್ಕೆ ಸೇರಿದ ಕೃಷಿ ಭೂಮಿ ಹಾನಿಯಾಗಿ ನದಿ ತೀರದ ಕುಟುಂಬಗಳು ಸಂಕಷ್ಟವನ್ನು ಅನುಭವಿಸುತ್ತಿರುವ ಮಧ್ಯೆಯೇ ಇದೀಗ ಅವೈಜ್ಞಾನಿಕವಾಗಿ ಅಣೆಕಟ್ಟಿನ ಪುನರ್ ನಿರ್ಮಾಣ ಕಾಮಗಾರಿ ಭರದಿಂದ ನಡೆಯುತ್ತಿದ್ದು,ಇಲ್ಲಿನಜನತೆ ಮತ್ತೆ ಸಂಕಷ್ಟ ಎದುರಿಸುವ ಭೀತಿಯಲ್ಲಿದ್ದಾರೆ.
ಕಳೆದ ಮಳೆಗಾಲಕ್ಕೆ ಅಣೆಕಟ್ಟಿನ ಸುತ್ತುಮುತ್ತಲಿನ ಸುಮಾರು 50 ಎಕ್ರೆಗಿಂತಲೂ ಅಧಿಕ ಕೃಷಿಭೂಮಿ ಮುಳುಗಡೆಯಾಗಿದ್ದು, ತಡೆಗೋಡೆ ಒಡೆದು ಲಕ್ಷಗಟ್ಟಲೆ ಮೌಲ್ಯದ ಕೃಷಿಭೂಮಿ ನಾಶವಾಗಿದೆ. ಕೇರಳ ಜಲಮಂಡಲಿ ತಮ್ಮ ಹಿತಚಿಂತನೆಯನ್ನು ಮಾಡಿ ಕರ್ನಾಟಕದ ಕೃಷಿಭೂಮಿ ಮುಳುಗಡೆ ತಡೆಗೆ ಯಾವುದೇ ತಡೆಗೋಡೆ ನಿರ್ಮಾಣ ಮಾಡದೆ ಮತ್ತೆ ಅಣೆಕಟ್ಟನ್ನು ಕಟ್ಟುತ್ತಿರುವುದರಿಂದ ಜನ ಆತಂಕಗೊಂಡಿದ್ದಾರೆ.

ಕೇರಳ ರಾಜ್ಯ ಜಲಮಂಡಲಿಯಿಂದ ಕರ್ನಾಟಕ ಭೂಪ್ರದೇಶದಲ್ಲಿ ಅಣೆಕಟ್ಟು ನಿರ್ಮಾಣ ಕಾಮಗಾರಿಯು 2009ರಲ್ಲಿ ಪ್ರಾರಂಭಗೊಂಡಿದ್ದು, ಕರ್ನಾಟಕ ರಾಜ್ಯದಿಂದ ಯಾವುದೇ ಅನುಮತಿ ಪಡೆಯದೆ ಕಾಮಗಾರಿ ಪೂರ್ಣಗೊಳಿಸಿ, ರಾಜ್ಯದ ಜನತೆಗೆ ಅಪಾರ ಹಾನಿಮಾಡಲಾಗಿದೆ.
ಬಂಟ್ವಾಳ ತಾಲೂಕು ಕರೋಪಾಡಿ ಗ್ರಾಮ ಕೇರಳ ಗಡಿ ಪ್ರದೇಶದಲ್ಲಿದ್ದು, ಈ ಗ್ರಾಮದಂಚಿನಲ್ಲಿ ಕೇರಳ-ಕರ್ನಾಟಕ ಮಧ್ಯೆ ಅನೆಕಲ್ಲು ಹೊಳೆಯೊಂದು ಹರಿಯುತ್ತಿದೆ. ಹೊಳೆಯು ಗ್ರಾಮ ಪಂಚಾಯತಿನ ವ್ಯಾಪ್ತಿಯಲ್ಲಿರುವ ಸರ್ವೇ ನಂಬರ್ ಒಂದರಲ್ಲಿ 28.06 ಎಕ್ರೆ ಪರಂಬೋಕು (ಸರಕಾರಿ)ನಲ್ಲಿದ್ದು, ಈ ಹೊಳೆಗೆ ಕೇರಳ ರಾಜ್ಯ ಜಲಮಂಡಲಿ ಆನೆಕಲ್ಲು ಎಂಬಲ್ಲಿ ಆರು ಕೋಟಿ ವೆಚ್ಚದಲ್ಲಿ ಬೃಹತ್ ಶಾಶ್ವತ ಅಣೆಕಟ್ಟು ನಿರ್ಮಿಸಿದೆ.


ಈ ಅಣೆಕಟ್ಟು ಅವೈಜ್ಞಾನಿಕವಾಗಿ ನಿರ್ಮಾಣ ಗೊಂಡಿರುವುದರಿಂದ ಕಳೆದ ಮಳೆಗಾಲಕ್ಕೆ ತಡೆಗೋಡೆ ಒಡೆದು ಅರ್ಧ ಕಾಮಗಾರಿ ನೀರುಪಾಲಾಯಿತು. ಕೇರಳ ರಾಜ್ಯದ ವರ್ಕಾಡಿ ಪಂಚಾಯತಿಗೊಳಪಡುವ ನಾಲ್ಕು ಗ್ರಾಮಗಳಾದ ಪಾತೂರು, ಕೊಡ್ಲಮೊಗರು, ಪಾವೂರು ಮತ್ತು ವರ್ಕಾಡಿ ಪ್ರದೇಶಗಳಿಗೆ ಕುಡಿಯುವ ನೀರನ್ನು ಸರಬರಾಜು ಮಾಡುವ ಯೋಜನೆ ಇದಾಗಿದ್ದು, ಸುಮಾರು 20 ಅಡಿ ಎತ್ತರವಾಗಿ ನಿರ್ಮಾಣಗೊಂಡಿರುವ ಬೃಹತ್ ಅಣೆಕಟ್ಟಿನ ನೀರು ಐದಾರು ಅಡಿ ಎತ್ತರದ ಬಹುತೇಕ ಹೊಳೆಯಂಚಿನ ಕೃಷಿ ಭೂಮಿಗಳನ್ನು ಮುಳುಗಡೆ ಮಾಡಲಿರುವುದರಿಂದ ಕರ್ನಾಟಕ ಸರಕಾರದ ಸ್ಥಳದಲ್ಲಿ ಕೇರಳ ಸರಕಾರ ಕಾನೂನು ಬಾಹಿರವಾಗಿ ಕಾಮಗಾರಿ ನಡೆಸಿರುವುದಕ್ಕೆ ಜಿಲ್ಲಾಧಿಕಾರಿಯಿಂದ ಗ್ರಾಮ ಪಂಚಾಯತು ತನಕ ಕಾಮಗಾರಿಗೆ ಆಕ್ಷೇಪಣೆ ನೀಡಲಾಗಿತ್ತು.

ಕರಾವಳಿ ಕರ್ನಾಟಕ ಗಡಿ-ನೆಲ-ಜಲ ಸಂರಕ್ಷಣಾ ಸಮಿತಿ ಹಾಗೂ ಗ್ರಾಮಸ್ಥರು ಕಾನೂನು ಬಾಹಿರವಾಗಿ ನಡೆಯುತ್ತಿರುವ ಕಾಮಗಾರಿಗಳನ್ನು ತಡೆಹಿಡಿಯುವುವಂತೆಯೂ ಮೇಲಧಿಕಾರಿಗಳಿಗೆ ಮನವಿ ಮಾಡಿದರೂ, ಕೇರಳ ಸರಕಾರ ನಿರಾತಂಕವಾಗಿ ಕಾಮಗಾರಿ ಪೂರೈಸಿದ ನಂತರ ಸಂಘ ಸಂಸ್ಥೆಗಳ ಆಕ್ಷೇಪಣೆಗೆ ಮಣಿದು ಕೊನೆಗೂ ದ.ಕ. ಜಿಲ್ಲಾಧಿಕಾರಿಗಳ ಮೂಲಕ ಕರೋಪಾಡಿ ಗ್ರಾಮ ಪಂಚಾಯತಿನ ಅನುಮತಿಯನ್ನು ಕೇಳಿತು.

ಅರ್ಧಕ್ಕಿಂತ ಹೆಚ್ಚು ಭಾಗ ನದಿಯು ಕರ್ನಾಟಕ ವ್ಯಾಪ್ತಿಯಲ್ಲಿ ಬರುವುದರಿಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ನದಿಯ ಆಸುಪಾಸಿನ ರೈತರು ಹಾಗೂ ಸಾರ್ವಜನಿಕರು ಈ ನದಿಯಿಂದ ನೀರನ್ನು ತೆಗೆಯುತ್ತಿದ್ದು ಅಣೆಕಟ್ಟು ಆದ ನಂತರವೂ ಕೇರಳ ರಾಜ್ಯದವರು ಅಡ್ಡಿಪಡಿಸಬಾರದು. ಸಾರ್ವಜನಿಕ ಮತ್ತು ಗ್ರಾಮ ಪಂಚಾಯತ್ ನೀರು ಸರಬರಾಜು ಘಟಕಕ್ಕೆ ಮತ್ತು ತೆರೆಯುವ ನೀರಿನ ಘಟಕಗಳಿಗೆ ಯಾವುದೇ ಆಕ್ಷೇಪ ಮಾಡಬಾರದು. ಕರ್ನಾಟಕದ ಕೆಳಗಿನ ಭಾಗದಲ್ಲಿ ನೀರಿನ ಕೊರತೆ ಬಂದರೆ ಕನಿಷ್ಟ ವಾರಕ್ಕೊಮ್ಮೆ 2 ಗಂಟೆ ಆಣೆಕಟ್ಟಿನ ಬಾಗಿಲು ಓಪನ್ ಮಾಡಿ ನೀರನ್ನು ಕೆಳಗಿನ ಪ್ರದೇಶಕ್ಕೆ ಹರಿಯಬಿಡಬೇಕು.

ಕೃಷಿಕರ ಭೂಮಿ ಮುಳುಗಡೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಷರತ್ತುಗಳೊಂದಿಗೆ ಕಾಮಗಾರಿಯನ್ನು ನಡೆಸಲು ಗ್ರಾಮ ಪಂಚಾಯತು ನಿರಪೇಕ್ಷಣಾ ಪತ್ರವನ್ನು ಕೇರಳ ನೀರಾವರಿ ಇಲಾಖೆಗೆ ನೀಡಿತು. ಪಂಚಾಯತಿನ ಷರತ್ತುಗಳನ್ನು ಒಪ್ಪಿದ ಮಂಡಲಿ ತದನಂತರ ಷರತ್ತುಗಳನ್ನು ಗಾಳಿಗೆ ತೂರಿ ರಾಜ್ಯದ ಜನತೆಗೆ ಮೋಸ ಎಸಗಿದೆ.

ಕರ್ನಾಟಕ ರಾಜ್ಯದ ಜಮೀನಿನಲ್ಲಿ ಸರ್ವಾಧಿಕಾರಿ ಧೋರಣೆಯಿಂದ ಅಣೆಕಟ್ಟು ನಿರ್ಮಿಸಿ ಕೃಷಿಕರ ಬದುಕನ್ನು ನೀರುಪಾಲು ಮಾಡುವ ಕೇರಳ ಸರಕಾರದ ಮಾರಕ ನೀತಿಯ ಬಗ್ಗೆ ಜಿಲ್ಲಾಡಳಿತ ಮೌನವಾಗಿರುವುದರಿಂದ ಕೃಷಿಕನ ಬಾಳು ಕೊಚ್ಚಿಹೋಗುವುದರಲ್ಲಿ ಯಾವುದೇ ಸಂದೇಹವಿಲ್ಲ.
ಇನ್ನಾದರೂ ಜಿಲ್ಲಾಡಳಿತ ಎಚ್ಚತ್ತುಕೊಂಡು ಅಣೆಕಟ್ಟಿನಿಂದ ಬಿಗಡಾಯಿಸಿರುವ ಸಮಸ್ಯೆಗೆ ಶಾಶ್ವತವಾದ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ.

ಕರ್ನಾಟಕಕ್ಕೆ ದ್ರೋಹವೆಸಗುವ ಕಾನೂನು ಬಾಹಿರ ಕಾಮಗಾರಿಯ ವಿರುದ್ಧ ಜಿಲ್ಲಾಧಿಕಾರಿಗಳನ್ನೊಳಗೊಂಡ ಉಭಯ ರಾಜ್ಯಗಳ ಜಂಟಿ ಸಮಿತಿಯೊಂದನ್ನು ರಚಿಸಿ ಸಮಸ್ಯೆಯನ್ನು ಬಗೆಹರಿಸಲು ರಾಜ್ಯಸರಕಾರಗಳು ಪ್ರಯತ್ನಿಸಬೇಕು ಎಂದು ಒತ್ತಾಯಿಸುತ್ತಿರುವ ಹೋರಾಟಗಾರರು ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ಮಾಡುವ ಮೂಲಕ ನ್ಯಾಯ ಪಡೆದೇ ತೀರುತ್ತೇವೆಂದು ಹೇಳುತ್ತಾರೆ.
- ಜ್ಯೋತಿಪ್ರಕಾಶ್ ಪುಣಚ

0 comments:

Post a Comment