ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸಾಹಿತ್ಯ
ಗಿಡ್ಡ ಗಿಡ್ಡ ಫ್ರಾಕು ತೊಟ್ಟು
ಪಿಳ್ಳಿ ಜುಟ್ಟ ಕಟ್ಟಿ
ಪುಟ್ಟ ಕಾಲ್ಗಳ ಗೆಜ್ಜೆ
ಝಣ ಝಣ ಎನಿಸಿ ,ನಮ್ಮ ಕೇರಿಯೊಳು
ಕುಣಿ ಕುಣಿದು ಓಡುವಾಗ
ತಿಳಿದಿರಲಿಲ್ಲ ನಾನೊಂದು ಹೆಣ್ಣು


ನಮ್ಮೂರ ಜಾತ್ರೆಯಲಿ
ಗೆಳೆತಿಯರೊಡಗೂಡಿ
ದೀಪದ ಬೆಳಕಲ್ಲಿ
ಬಳೆ ರಿಬ್ಬನ್
ಮಿಠಾಯಿ ಎಂದು
ಅಂಗಡಿಯಿಂದ ಅಂಗಡಿ
ಅಲೆದಾಡುವಾಗ ತಿಳಿದಿರಲಿಲ್ಲ
ನಾನೊಂದು ಹೆಣ್ಣು

ಅಕ್ಕ ಪಕ್ಕದ ಓರಗೆಯವರೊಡಗೂಡಿ
ಚಿನ್ನಿದಾಂಡು,ಮರಕೋತಿಯೆಂದು
ಎದ್ದು ಬಿದ್ದು ಆಡುವಾಗ
ತಿಳಿದಿರಲಿಲ್ಲ ನಾನೊಂದು ಹೆಣ್ಣು

ನಿಧಾನದ ವಯಸ್ಸಿನ ಹರಿವು
ತಾರುಣ್ಯದ ಸುಳಿವು
ಮೈಮನದಲಿ ಹೊಸತನ
ಅಚ್ಚರಿ ಮೂಡಿದರೂ
ಅರಿವಾಗಲಿಲ್ಲ ನಾನೊಂದು ಹೆಣ್ಣು

ಮೊಗ್ಗರಳಿ ಹೂವಾಗಿ
ಯೌವ್ವನ ಬಿರಿದು
ಅಂಗಾಗಳಲಿ ಚಿಮ್ಮಿ
ಕೆಂಪಾಗಿ ಹರಿದಾಗ
ಮೊದಲ ಬಾರಿಗೆ ಅರಿತೆ
ನಾನೊಂದು ಹೆಣ್ಣು

ಗೋಣಿತಾಟು,ತಟ್ಟೆ-
ಚೊಂಬ ಹಿಡಿದು
ಮೂರು ದಿನ ಮೂಲೆಯಲಿ
ಕಿಬ್ಬೊಟ್ಟೆಯ ಒತ್ತಿ ಹಿಡಿದು
ಮುಜುಗರದಿ ಮುದುಡಿ ಕುಳಿತು
ಅತ್ತೆ ನಾನಾಗಬಾರದಿತ್ತು ಹೆಣ್ಣು...


ಹಾಗಾಡ ಬೇಡ ಹೀಗಾಡ ಬೇಡ
ಅಲ್ಲಿ ಹೋಗ ಬೇಡ,ಇಲ್ಲಿ ಬರಬೇಡ
ಹುಡುಗರೊಂದಿಗೆ ಸಲಿಗೆ ಬೇಡ
ಚಲ್ಲು ಚಲ್ಲಾಡ ಬೇಡ...
ಬೇಡ ಬೇಡಗಳ ಬೇಲಿಯಲಿ
ಬಂಧಿಯಾಗಿ ಬಿಕ್ಕಳಿಸಿದೆ
ತಪ್ಪೇ ನಾನಾದದ್ದು ಹೆಣ್ಣು...

ಮನಸ್ಸು ಮುದುಡಿದರೂ
ದಿನ ದಿನಕ್ಕೂ ಅರಳುತಿಹ ದೇಹ
ನೋಟದಲ್ಲೇ ಬೆತ್ತಲಾಗಿಸುವ
ಕಾಮುಕ ಕಂಗಳು...
ಪೋಲಿ ಹುಡುಗರ ಗೇಲಿ ಮಾತ
ತಲೆ ತಗ್ಗಿಸಿ ಸಹಿಸುವಾಗಿರಲಿಲ್ಲ ಧೈರ್ಯ
ಎದುರಿಸಿ ಕೇಳಲು
ನಿಮ್ಮ ತಾಯಿ-ಸೋದರಿಯರೂ ಅಲ್ಲವೇ
ನನ್ನಂತೆಯೇ ಹೆಣ್ಣು...

ಹರೆಯದ ಭಾವನೆಗಳು ಗರಿಗೆದರಿ
ಕಲ್ಪನೆಯ ಹಂದರದಲಿ ಮೈಚಾಚಿ
ರಾಜಕುಮಾರನ ಕನಸ ಕಾಣುವಾಗ
ಗೊತ್ತಿರಲಿಲ್ಲ ನನಗಿಲ್ಲ ಕನಸಿನ ಹಕ್ಕು
ಮರೆತೇ ಹೋಗಿತ್ತು ನಾನೊಂದು ಹೆಣ್ಣು...

ಮದುವೆಯೆಂಬ ವಹಿವಾಟಿನಲಿ
ಹಣತೆತ್ತು ಬಿಕರಿಯಾದಾಗ
ದು:ಖಿಸಿದೆ ತಿಳಿದು
ಹೆತ್ತವರಿಗೂ ಭಾರ ಹೆಣ್ಣು...

ಸಪ್ತಪದಿಯಡಿಯಲ್ಲಿ
ಭಾವನೆಗಳ ತುಳಿದು
ಉರುಳಿಗೆ ಕೊರಳೊಡ್ಡಿ
ಗಂಡನೆಂಬ ಗಂಡಿನ ಹಿಂದೆ
ಅಲಂಕಾರಗೊಂಡ ಬಲಿ ಕುರಿಯಂತೆ
ಮೌನವಾಗಿ ನಡೆದಾಗ
ಕಲ್ಲಾಗಿದ್ದೆ ಅರಿತು ನಾನಿನ್ನು
ಮದುವೆಯಾದ ಜವಾಬ್ದಾರಿ ಹೆಣ್ಣು...

ಸಂಸಾರ ಸಾಗರದಲಿ ಮುಳುಗಿ
ಉಸಿರುಗಟ್ಟಿದರೂ ಬದುಕಿ...
ಕುಡಿದು ಬಂದ ಗಂಡನಡಿಯಲ್ಲಿ
ವಾಸನೆಯ ಸಹಿಸಿ ನರಳುವಾಗ
ಮೂಕವಾಗಿ ಚೀರಿದೆ
ನಾನೇಕಾದೆ ಹೆಣ್ಣು...

ನೀರು ನಿಂತು
ಒಡಲೊಳು ಕುಡಿಯೊಡೆದು
ವಾಕರಿಕೆ-ಹೀಕರಿಕೆಯಲ್ಲೂ ಸುಖ
ಹೊಟ್ಟೆಯೊಳು ಕಂದಮ್ಮ
ಗುಳು ಗುಳು ಹೊರಳಿದಾಗ
ಬಸಿರ ಮೇಲೆ ಕೈಯಿಟ್ಟು
ಸಂಭ್ರಮಿಸಿದೆ ನಾನೊಂದು ಹೆಣ್ಣು...

ತಿಂಗಳು ತುಂಬಿ
ಬೆನ್ನ ಹುರಿಯಲ್ಲಿ ಛಳಕ್ಕೆಂಬ ನೋವು
ಗರ್ಭ ಹರಿದು ಕೂಸು ಹೊರ ಹೊರಟಾಗ
ನೋವ ತಡೆಯಲಾರದೆ ಕಿರುಚಿದೆ
ಯಾರಿಗೂ ಬೇಡ ಈ ಹೆಣ್ಣು ಜನ್ಮ
ಉಸಿರ ಕೊಟ್ಟು ಕರುಳ ಕುಡಿಯ
ಹೊರ ದಬ್ಬುವಾಗಲೂ ಬೇಡಿದೆ
ನನ್ನ ಮಗುವಾಗದಿರಲಿ ಹೆಣ್ಣು...


ಸೋತು ಸೊರಗಿ ಸತ್ತಂತೆ ಬಿದ್ದವಳು
ಕಣ್ತೆರೆದೆ ಕೇಳಿ ನನ್ನ ಮಗುವ ಅಳು
ಮುದ್ದು ಕಂದಮ್ಮನ ಮೊಗ ನೋಡುತ್ತಲೇ
ಮರೆತೆ ನನ್ನೆಲ್ಲಾ ನೋವು...
ಮಗಳು ಹುಟ್ಟಿದ್ದಾಳೆ ನೋಡೆಂಬ ದಾದಿಯ ಮಾತಿಗೆ
ಬೆಚ್ಚಿದೆ...ಬೆದರಿದೆ...
ಹತಾಶಳಾಗಿ ಒದರಿದೆ..
ಅಯ್ಯೋ ಕಂದ ನೀನೇಕಾದೆ ಹೆಣ್ಣು...


ಮರು ಕ್ಷಣವೇ ಪ್ರತಿಭಟನೆಯ
ಕಿಡಿಯೊಂದು ನನ್ನೊಳು ಭುಗಿಲೆದ್ದು
ಬಿಳಿ ಬಟ್ಟೆಯಲಿ ಸುತ್ತಿಟ್ಟ
ಕೂಸ ಕೈಲಿಡಿದು ಎತ್ತಿ
ನೆತ್ತಿಗೆ ಮುತ್ತಿಕ್ಕಿ ಉಸುರಿದೆ
ಹೆದರದಿರು ಮಗಳೇ ಹೆಣ್ಣೆಂದು...
ನೀನಲ್ಲ ಅಬಲೆ....ಅಧೀನೆ...
ನೀನೊಬ್ಬ ಸ್ವತಂತ್ರ ವ್ಯಕ್ತಿ...
ಹೀನ ಪದ್ದತಿಯ ಕಟ್ಟಳೆಯ ಮುರಿದು
ಸ್ವಾಭಿಮಾನವ ಮೆರೆದು
ಸಾಧಿಸಿ ತೋರು ಜಗಕೆ
ಹೆಣ್ಣು ಲೋಕದ ಕಣ್ಣು...

- ಜಿ.ಎನ್ ದಿವ್ಯಾ ರಾವ್

0 comments:

Post a Comment