ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ
ಮಹಿಳಾ ದಿನಾಚರಣೆಯ ಪ್ರಯುಕ್ತ ಲೇಖನ
ಆಧುನಿಕ ಜೀವನ ವಿಧಾನದಲ್ಲಿ ಮಹಿಳೆಯರಿಗೆ ಇತ್ತೀಚಿನ ದಿನಗಳಲ್ಲಿ ವ್ಯಾಯಾಮ ಹಾಗೂ ಆರೋಗ್ಯದ ಕೊರತೆ ಕಂಡುಬರುತ್ತದೆ. ಯಾಕೆಂದರೆ ಹಿಂದಿನ ಕಾಲದ ಮಹಿಳೆಯರಿಗೆ ಸಾಕಷ್ಟು ವ್ಯಾಯಾಮವಾಗಬಲ್ಲ ಬಹಳಷ್ಟು ಕೆಲಸಗಳಿದ್ದವು. ಉದಾ : ರುಬ್ಬುವುದು, ಒನಕೆಯಲ್ಲಿ ಭತ್ತ ಕುಟ್ಟುವುದು, ನೆಲ ಒರೆಸುವುದು, ಬಟ್ಟೆ ಒಗೆಯುವುದು ಇತ್ಯಾದಿ ಇರುತ್ತಿತ್ತು .


ಅಲ್ಲದೆ ಬೆಳಿಗ್ಗೆ ಮತ್ತು ಸಂಜೆಯ ಹೊತ್ತಿನಲ್ಲಿ ಭಕ್ತಿಯಿಂದ ಭಜನೆ, ಧ್ಯಾನ, ದೇವರ ಪ್ರಾರ್ಥನೆಗಳನ್ನು ಮಾಡಿಕೊಂಡು ಶಾಂತಿ ನೆಮ್ಮದಿಯಲ್ಲಿ ಇರುತ್ತಿದ್ದರು. ಇಂದಿನ ಮುಂದುವರಿದ ಸಮಾಜದಲ್ಲಿ ಸೌಕರ್ಯಗಳು ಹೆಚ್ಚಿವೆ. ಹೆಚ್ಚಬೇಕಾದ ಅಗತ್ಯತೆಯೂ, ಅವಶ್ಯಕತೆಯೂ ಇದೆ. ಮಹಿಳೆಯರು ತಮ್ಮ ಕೌಟುಂಬಿಕ ಮತ್ತು ಉದ್ಯೋಗ ನಿರ್ವಹಣೆಗಾಗಿ ಆಧುನಿಕ ಸೌಕರ್ಯಗಳನ್ನು ಅಳವಡಿಸಿಕೊಳ್ಳಬೇಕಾಗಬಹುದು.


ಕೆಲವೊಮ್ಮೆ ಕಛೇರಿಯಲ್ಲೂ ಅತಿಯಾದ ಕೆಲಸ ಕಾರ್ಯಗಳ ಒತ್ತಡದಿಂದ, ಅತಿಯಾದ ಚಿಂತನೆಯಿಂದ,
- ಸಮಯಕ್ಕೆ ಸರಿಯಾಗಿ ಉತ್ತಮ ಆಹಾರವನ್ನು ಸೇವಿಸದೇ ಇರುವುದು (ಅನಿವಾರ್ಯವಾದ ಆಹಾರ ಪದ್ದತಿ) ಹಾಗೂ ಶುದ್ಧ ನೀರನ್ನು ಸೇವಿಸದೇ ಇರುವುದು. ಆಧುನಿಕ ಜೀವನದ ಶೈಲಿಯಿಂದಾಗಿ ಬಂದಂತಹ ದೇಹದ ಅಧಿಕ ತೂಕ ಮತ್ತು ಕೊಬ್ಬಿನಿಂದಾಗಿ ಬಹಳಷ್ಟು ಮಂದಿಗೆ ದಿನಚರಿ ನಡೆಸುವುದೇ ಕಷ್ಟಕರವಾಗಿದೆ.


ಮಹಿಳೆಯರಿಗೆ ಮುಟ್ಟಿನ ಅವಧಿಯಲ್ಲಿ ಹಾರ್ಮೋನ್ ಬದಲಾವಣೆಯಾಗುವುದರಿಂದ ಈ ಆಧುನಿಕ ಸೌಕರ್ಯಗಳಿಂದ ಈಗಿನ ದಿನಗಳಲ್ಲಿ ದೈಹಿಕ ವ್ಯಾಯಾಮದ ಕೊರತೆಯನ್ನು ನಿವಾರಿಸಲು ಆರೋಗ್ಯವನ್ನು ಪಡೆಯಲು ಯೋಗಾಸನಗಳು ಅತ್ಯವಶ್ಯಕ. ಯೋಗಾಸನದಿಂದ ದೈಹಿಕ, ಮಾನಸಿಕ ಸಮಸ್ಯೆಯನ್ನು ಪರಿಹರಿಸಬಹುದಾಗಿದೆ.

ಯಾರಿಗೆ ಈಗಿನ ಕೆಲಸಗಳನ್ನು ದೈಹಿಕ ವ್ಯಾಯಾಮದ ಕೊರತೆ ಇದೆಯೋ ಅಂಥವರು ದಿನಕ್ಕೆ ಕಡಿಮೆ ಪಕ್ಷ ಕೇವಲ ಅರ್ಧ ತಾಸುಗಳ ಕಾಲ 15ರಿಂದ 20 ಆಸನಗಳನ್ನು ಶಿಸ್ತು ಬದ್ಧವಾಗಿ ಕ್ರಮ ಪ್ರಕಾರವಾಗಿ ಉಸಿರಿನ ಗತಿಯೊಂದಿಗೆ ಮಾಡಿದರೆ ಧಾರಾಳ ಸಾಕು. ಯೋಗಾಭ್ಯಾಸದಿಂದ ಪ್ರತಿಯೊಂದು ಅಂಗವೂ ಪ್ರಚೋದನೆ ಪಡೆದು, ಸ್ಪೂರ್ತಿಯುತವೂ, ಹಗುರವೂ ಆಗಿ ಆರೋಗ್ಯ ಬಲಗಳು ಲಭಿಸುತ್ತವೆ.

ಯೋಗಾಸನವು ಮನುಷ್ಯನ ಶರೀರದ ರಚನಾ ಶಾಸ್ತ್ರದ ಸಂಪೂರ್ಣ ಜ್ಞಾನದ ವೈಜ್ಞಾನಿಕ ಆಧಾರದ ಮೇಲೆ ನಿಂತಿದೆ. ಯೋಗಾಭ್ಯಾಸಿಯು, ಸದಾಚಾರಿಯೂ, ಸದ್ಗುಣ ಸಂಪನ್ನಳೂ ಆಗಿ ಯೋಗ್ಯ ಪ್ರಜೆಯಾಗುವಳು. ಶಿಸ್ತುಬದ್ಧವಾಗಿ ಕ್ರಮವತ್ತಾಗಿ ಉಸಿರಿನ ಗತಿಯೊಂದಿಗೆ ಯೋಗಾಸನ ಮಾಡುವುದರಿಂದ ದೇಹದಲ್ಲಿ ರಕ್ತ ಪರಿಚಲನೆ ಸುಗಮವಾಗುವುದು. ರಕ್ತ ಶುದ್ಧಿಯಾಗುವುದು, ರಕ್ತದೊತ್ತಡದ ಏರಿಳಿತಗಳು ಹಿಡಿತಕ್ಕೆ ಬರುತ್ತವೆ. ಅಲ್ಲದೆ ರಕ್ತದ ಸಕ್ಕರೆ ಅಗತ್ಯದಷ್ಟೇ ಮಿತಿಯಲ್ಲಿರುತ್ತದೆ.ಖಾಯಿಲೆಗಳನ್ನು ಸುಲಭವಾಗಿ ಮಂಡಿನೋವು, ಕಾಲು ಸೆಳೆತ, ಮಾನಸಿಕ ಒತ್ತಡ ಮತ್ತು ಮುಟ್ಟಿನ ಸಮಸ್ಯೆ ಇತ್ಯಾದಿ ನಿವಾರಣೆಗೆ ನಮ್ಮ ಭಾರತೀಯ ಸಂಸ್ಕೃತಿ ಕಲೆಯಾದ ಯೋಗಾಸನಗಳು ತುಂಬಾ ಸಹಕಾರಿಯಾಗಿವೆ. ಯೋಗಾಸನವನ್ನು ಅಭ್ಯಾಸ ಮಾಡುವುದು ಜೀವನ ಸುಖಕ್ಕಾಗಿ. ಯೋಗಾಭ್ಯಾಸ ಮಾಡುವುದರಿಂದ ಸ್ತ್ರೀಯರ ದೈಹಿಕ ಸಾಮಥ್ರ್ಯ ಹೆಚ್ಚಿ ಸರ್ವತೋಮುಖ ಬೆಳವಣಿಗೆಯಾಗುತ್ತದೆ.

ಮಹಿಳೆಯರ ಆರೋಗ್ಯ ರಕ್ಷಣೆಗಾಗಿ ಇರುವ ಯೋಗಗಳ ಸಂಕ್ಷಿಪ್ತ ಪಟ್ಟಿ :
ಈಗಿನ ಆಧುನಿಕ ಮಹಿಳೆಯರ ಆರೋಗ್ಯ ಪಾಲನೆಗಾಗಿ ಇರುವ ಪ್ರಾಮುಖ್ಯವಾದ ಆಸನಗಳನ್ನು ಸಂಕ್ಷಿಪ್ತವಾಗಿ ಈ ಕೆಳಗಿನಂತೆ ಪಟ್ಟಿ ಮಾಡಲಾಗಿದೆ. ಆದರೆ ಯೋಗಾಸನಗಳನ್ನು ಯಾವತ್ತು ವಿನ್ಯಾಸಗಳೊಂದಿಗೆ ಅಭ್ಯಾಸ ಮಾಡಬೇಕು. ವಿನ್ಯಾಸಗಳನ್ನು ಬಿಟ್ಟು ಅಭ್ಯಾಸ ಮಾಡಬಾರದು.
- ಆರಂಭದಲ್ಲಿ ಇಷ್ಟ ದೇವರ ಪ್ರಾರ್ಥನೆ
- ಕೆಲವು ಕ್ರಿಯೆಗಳಾದ ಕಪಾಲಭಾತಿ, ತ್ರಾಟಕ ಇತ್ಯಾದಿಗಳು
- ಕುತ್ತಿಗೆ ಭುಜಗಳ ಸರಳ ವ್ಯಾಯಾಮ (ಗುರುಗಳ ಸಲಹೆ ಮೇರೆಗೆ)
- ದೇಹದ ಜಡತ್ವ ಹೋಗಿ ಲಘುತ್ವ ಬರಲು ಕೆಲವು ಸರಳ ವ್ಯಾಯಾಮಗಳು
- ಸಾಧ್ಯವಾಗುವವರಿಗೆ ಸೂರ್ಯನಮಸ್ಕಾರಗಳು
- ತುಸು ವಿಶ್ರಾಂತಿ.

ಅಗತ್ಯದ ಯೋಗಾಸನಗಳ ಸಂಕ್ಷಿಪ್ತ ಪಟ್ಟಿ
ತಾಡಾಸನ, ಅರ್ಧ ಚಕ್ರಾಸನ, ಉತ್ತಾನಾಸನ, ಪಾದ ಹಸ್ತಾಸನ, ಅರ್ಧ ಕಟಿ ಚಕ್ರಾಸನ, ಉತ್ಕಟಾಸನ, ತ್ರಿಕೋಣಾಸನ, ವೀರ ಭದ್ರಾಸನ, ಬದ್ಧ ಕೋಣಾಸನ, ಪದ್ಮಾಸನ, ಜಾನು ಶೀರ್ಷಾಸನ, ಪಶ್ಚಿಮೋತ್ತಾನಾಸನ, ವಜ್ರಾಸನ, ಶಶಾಂಕಾಸನ, ಉಷ್ಟ್ರಾಸನ, ಮಾರ್ಜಾಲಾಸನ, ವಕ್ರಾಸನ, ಊರ್ಧ್ವ ಪ್ರಸಾರಿತ ಪಾದಾಸನ, ಪವನ ಮುಕ್ತಾಸನ, ವಿಪರೀತ ಕರಣಿ, ಹಲಾಸನ, ಮಕರಾಸನ, ಭುಜಂಗಾಸನ, ಶಲಭಾಸನ, ಧನುರಾಸನ ಇತ್ಯಾದಿ. ಶವಾಸನ, ಸರಳ ಪ್ರಾಣಾಯಾಮ ನಾಡಿಶುದ್ಧಿ ಪ್ರಾಣಾಯಾಮ, ಸರಳ ಧ್ಯಾನ.

ಯೋಗ ಎಂದರೇನು?

ಇಂದು ವಿಶ್ವದ ಎಲ್ಲಾ ಜನಾಂಗದವರನ್ನು ಭಾರತದ ಸಂಸ್ಕೃತಿಯ ಉತ್ಕೃಷ್ಟ ಕಲೆಯಾದ ಯೋಗ ಶಾಸ್ತ್ರವು ಬಲವಾಗಿ ಆಕರ್ಷಿಸುತ್ತದೆ. ಯೋಗ ಎನ್ನುವ ಪದ ಸಂಸ್ಕೃತ ಮೂಲಧಾತುವಾದ 'ಯುಜ್' ಎನ್ನುವುದರಿಂದ ಬಂದಿದ್ದು ಕೂಡಿಸು, ಚಿತ್ತವೃತ್ತಿಯನ್ನು ನಿರೋಧಿಸು, ಮನಸ್ಸನ್ನು ಕೇಂದ್ರೀಕರಿಸು ಎನ್ನುವ ಆಜ್ಞೆಗಳನ್ನು ಕೊಡುತ್ತದೆ. ಜ್ಞಾನಯೋಗ, ಭಕ್ತಿಯೋಗ, ಕರ್ಮಯೋಗ ಮತ್ತು ರಾಜಯೋಗಗಳೆಂಬ ನಾಲ್ಕು ವಿಧದ ಯೋಗಗಳಿವೆ.

ಪತಂಜಲಿ ಯೋಗ ಸೂತ್ರದಲ್ಲಿ ಯೋಗ : 'ಚಿತ್ತವೃತ್ತಿ ನಿರೋಧಃ' ಎಂದು ತಿಳಿಸುತ್ತದೆ. ಚಿತ್ತದ ವೃತ್ತಿಗಳನ್ನು ಬಯಕೆಗಳನ್ನು ಸರ್ವಥಾ ತಡೆದು ನಿಲ್ಲಿಸಿ, ಏಕಾಗ್ರತೆ ಸಾಧಿಸುವುದು ಯೋಗ. ಋಷಿ ಪತಂಜಲಿಯವರು ಯೋಗದಲ್ಲಿ ಎಂಟು ಮೆಟ್ಟಿಲುಗಳನ್ನು ತಿಳಿಸಿದ್ದಾರೆ. ಅವು ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿ.

ಗುರುಮುಖೇನವೇ ಯೋಗವನ್ನು ಕಲಿಯಬೇಕು. ಕಾಯಿಲೆಗಳನ್ನು ಸುಲಭವಾಗಿ ವೆಚ್ಚ ಮತ್ತು ಹಿಂಸೆ ಇಲ್ಲದೆ ಗುಣಪಡಿಸಬಹುದು. ಅದರಲ್ಲೂ ಮುಖ್ಯವಾಗಿ ಸೊಂಟನೋವು, ಬೆನ್ನುನೋವು, ಕಾಲು ಸೆಳೆತ, ಮುಟ್ಟಿನ ಸಮಸ್ಯೆ ಇತ್ಯಾದಿ ನಿವಾರಣೆಗೆ ಈ ಯೋಗಾಸನಗಳು ತುಂಬಾ ಸಹಕಾರಿಯಾಗಿವೆ. ಮುಂದೆ ಅಸೌಖ್ಯವಾಗುವುದನ್ನು ತಡೆದು ಉತ್ತಮ ಆರೋಗ್ಯವಂತಳಾಗಿ ಸುಖವಾಗಿ ಜೀವಿಸಬಹುದು. ರೋಗದಿಂದ ನರಳಬೇಕಾಗಿಲ್ಲ.

ಯೋಗಾಸನ ಕಲಿಯುವವರು ಈ ಕೆಳಗಿನ ಸೂಚನೆಗಳನ್ನು ಪಾಲಿಸಬೇಕು
1. ಆಸನವನ್ನು ಖಾಲಿ ಹೊಟ್ಟೆಯಲ್ಲಿಯೇ ಮಾಡಬೇಕು, ಕಷ್ಟವಾದರೆ
ಎ) ಒಂದು ಲೋಟ ದ್ರವ ಆಹಾರವನ್ನು ಸೇವಿಸಬಹುದು. ಹೊಟ್ಟೆ ತುಂಬಾ ಉಂಡರೆ 4 ಗಂಟೆಯ ಅನಂತರ ಆಸನ ಮಾಡಬೇಕು. ಹಗುರವಾದ ಆಹಾರ ಸೇವಿಸಿದರೆ 1-2 ಗಂಟೆಯ ಅನಂತರ ಮಾಡಬಹುದು.
ಬಿ) ಆಹಾರವನ್ನು ತೆಗೆದುಕೊಳ್ಳಲು ಯೋಗಾಸನ ಮಾಡಿದ ಅರ್ಧ ಗಂಟೆಯ ಅನಂತರ ಆಗಬೇಕು.
ಸಿ) ಆಸನ ಅಭ್ಯಸಿಸುವ ಮುನ್ನ ಅಭ್ಯಾಸಿಯು ತನ್ನ ಮಲ ಮೂತ್ರ ಕೋಶಗಳನ್ನು ಬರಿದು ಮಾಡಿಡಬೇಕು.
ಡಿ) ವಿವಿಧ ಆಸನಗಳ ವೇಳೆ ಉಡುಪು ಮತ್ತು ದೃಷ್ಟಿ ಹೇಗಿರಬೇಕು ಎಂಬುದಕ್ಕೆ ಗುರುಗಳ ಆದೇಶವನ್ನು ಪಾಲಿಸಬೇಕು.
2. ಆಸನ ಅಭ್ಯಾಸಕ್ಕೆ ಬೆಳಗ್ಗೆ ಮತ್ತು ಸಂಜೆ ಅತ್ಯುತ್ತಮ ಸಮಯವಾಗಿದೆ.
3. ಆಸನ ಮಾಡಲು ಸ್ವಚ್ಛವಾದ ಗಾಳಿ, ಬೆಳಕು ಅಗತ್ಯ ಬೇಕು. ಸಮತಟ್ಟಾದ ನೆಲದ ಮೇಲೆ ಜಮಖಾನ ಹಾಸಿ ಮಾಡಬೇಕು.
4. ಆಸನ ಮಾಡಬಯಸುವವರಲ್ಲಿ ಶಿಸ್ತು, ದೃಢ ನಂಬಿಕೆ ಮತ್ತು ಸತತ ಪ್ರಯತ್ನ ಹಾಗೂ ಅಭ್ಯಾಸ ಈ ಮುಖ್ಯ ಗುಣಗಳಿರಬೇಕಾದುದು ಅತ್ಯವಶ್ತ.
5. ಆಸನಾಭ್ಯಾಸ ಮುಗಿದ ಅನಂತರ ಸ್ವಲ್ಪ ಹೊತ್ತು ಶವಾಸನದಲ್ಲಿ ಮಲಗಿರಬೇಕು. ಹೀಗೆ ಮಾಡಿದರೆ ಆಸನಾಭ್ಯಾಸದ ಬಳಲಿಕೆ ಮಾಯವಾಗುತ್ತದೆ. ಪ್ರತಿ ಆಸನಾಭ್ಯಾಸದ ನಂತರ ಅಲ್ಪಕಾಲ ವಿರಮಿಸಬೇಕು. ಆಗ ಆಸನದಿಂದ ಪ್ರಚೋದಿಸಲ್ಪಟ್ಟ ಅಂಗಾಂಗಳಿಗೆ ಸೂಕ್ತ ವಿಶ್ರಾಂತಿ ಸಿಕ್ಕಿ ಪುನಃ ಹೆಚ್ಚಿನ ಚೈತನ್ಯ ದೊರಕುವುದು.
6. ಆಸನಗಳನ್ನು ಪ್ರಾಯ, ಲಿಂಗ, ಜಾತಿ, ಮತ ಭೇದವಿಲ್ಲದೆ ಎಲ್ಲರೂ ಮಾಡಬಹುದು.
7. ಆದರೆ ಹೆಂಗಸರು ಮುಟ್ಟಾದಾಗ, ಗರ್ಭಿಣಿಯಾದಾಗ, ಬಾಣಂತಿ ಇದ್ದಾಗ ಮಾಡಬಾರದು.
8. ಬಿಸಿಲಿನಿಂದ ಬಂದ ಕೂಡಲೇ ಯೋಗಾಸನ ಮಾಡಬಾರದು.
9. ಯೋಗ್ಯ ಗುರುವಿನ ಮಾರ್ಗದರ್ಶನವಿಲ್ಲದೆ ಯೋಗಾಸನ ಮಾಡಬಾರದು. ಗುರುವಿನ ಎಲ್ಲಾ ಸಲಹೆ, ಸೂಚನೆಗಳನ್ನು ಪಡೆದುಕೊಂಡೇ ಅವುಗಳ ಪಾಲನೆ ಮಾಡಿಯೇ ಆಸನ ಅಭ್ಯಾಸ ಮಾಡಬೇಕು.
10. ಆಸನವನ್ನು ಆಯಾಸ ಮಾಡಿಕೊಂಡು ಮಾಡಬಾರದು.


- 'ಯೋಗರತ್ನ' ಶ್ರೀ ಗೋಪಾಲಕೃಷ್ಣ ದೇಲಂಪಾಡಿ

0 comments:

Post a Comment