ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
2:15 PM

ವಿಮರ್ಶೆ - 1

Posted by ekanasu

ಕೃತಿಯೊಂದು...ವಿಮರ್ಶೆ ಎರಡು...
ತಂಬೂರಿ - ವಿಮರ್ಶೆ : ಕೆ.ಸತ್ಯನಾರಾಯಣ ಗಟ್ಟಿಗಾರು.ಹವ್ಯಾಸಿ ಬರಹಗಾರ.
ನಾಡಿನ ಹಿರಿಯ ಲೇಖಕಿ ಶ್ರೀಮತಿ ಸುಮತಿ ಕೆ.ಸಿ ಭಟ್ ಆದೂರು ಅವರ ಚೊಚ್ಚಲ ಕೃತಿ "ತಂಬೂರಿ" ಕಥಾ ಸಂಕಲನ ಮಹಿಳೆ ತನ್ನ ಕೌಟುಂಬಿಕ ವ್ಯವಸ್ಥೆಯಲ್ಲಿ ಒಳಗೊಳ್ಳಬಹುದಾದ ಎಲ್ಲಾ ಪ್ರಕಾರಗಳನ್ನು ಹಿಡಿದಿಟ್ಟುಕೊಂಡು ರಚಿಸಿದ ಕೃತಿ.


19 ಕಥೆಗಳನ್ನು ಒಳಗೊಂಡ ಈ ಸಂಕಲನವು ಸ್ತ್ರೀಯು ತನ್ನ ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಕ ಅನುಭವ, ಬದುಕು, ಬವಣೆ, ಸೋಲು - ಗೆಲುವು, ದುಃಖ, ದುಮ್ಮಾನ, ಹೀಗೆ ಎಲ್ಲವನ್ನೂ ಹಿಡಿದಿಟ್ಟುಕೊಂಡು ಯಶಸ್ಸನ್ನು ಕಾಣಬೇಕೆಂಬ ತುಡಿತ, ಯಶಸ್ಸಿನ ಮೇಲಾಗುವ ಅಡೆತಡೆಗಳು ಇವೆಲ್ಲವನ್ನೊಳಗೊಂಡಿದೆ. ಹೆಣ್ಣನ್ನೇ ಕೇಂದ್ರವಾಗಿಟ್ಟುಕೊಂಡು ಹೆಣೆಯಲ್ಪಟ್ಟ ಕಥೆ. ಇದು ಕೇವಲ ಕಥೆಗಳಲ್ಲ . ಸಮಕಾಲೀನ ವ್ಯಥೆ,ನಿತ್ಯ ಕಂಡುಬರುವಂತಹ ದೃಷ್ಠಾಂತಗಳನ್ನು ಕಣ್ಣಿಗೆ ಕಟ್ಟಿದಂತೆ ನಿರೂಪಿಸುವ ಶೈಲಿ ಉತ್ತಮವಾಗಿದೆ.

ಭಾರತೀಯ ಸಮಾಜದ ಕುಟುಂಬ ವ್ಯವಸ್ಥೆಯಲ್ಲಿ ಹೆಣ್ಣುಮಗಳೊಬ್ಬಳು ಪುರುಷಪ್ರಧಾನ ಕೇಂದ್ರದಲ್ಲಿ ತಾಯಿ, ತಂಗಿ, ಮಗಳು, ಹೆಂಡತಿ, ಅತ್ತೆ, ಸೊಸೆ, ನಾದಿನಿ, ಸಹೋದರಿಯ ಪಾತ್ರದಲ್ಲಿ ಜೊತೆಗೆ ನಡೆ , ನುಡಿ, ದ್ವೇಷ , ತಿರಸ್ಕಾರ, ಪ್ರೀತಿ, ವಿಶ್ವಾಸ, ಶೋಷಣೆ, ಪೋಷಣೆಯ ಜೊತೆ ಜೊತೆಗೆ ಆಧ್ಯಾತ್ಮಿಕ, ಸಾಂಸ್ಕೃತಿಕ, ವೈದಿಕ, ಆರ್ಥಿಕ, ಸಾಮಾಜಿಕ ಹೀಗೆ ಹಲವು ವಿಚಾರಗಳನ್ನು ಕಥೆಗಳ ಮೂಲಕ ವಿವರಿಸಹೊರಟ ಈ ಲೇಖಕಿ ರಾಜಕೀಯದಿಂದ ಮಾತ್ರ ಯಾಕೆ ದೂರ ಉಳಿದಿದ್ದಾರೆ ಎಂಬುದು ಆಶ್ಚರ್ಯವಾಗುತ್ತದೆ.

ಒಂದು ಕೌಟುಂಬಿಕ ಜೀವನವನ್ನು ನೆಲೆಯಾಗಿಟ್ಟುಕೊಂಡು ದೃಷ್ಟಿಹಾಯಿಸಿದಾಗ ಹೆಣ್ಣಿನ ಸುತ್ತ ಹೆಣೆಯಲ್ಪಟ್ಟ ಹಂದರಗಳೇ ಕಾಣಸಿಗುತ್ತವೆ. ಹೆಣ್ಣೆಂಬುದು ಭೋಗದ ವಸ್ತು. ಬಡತನ, ತಿರಸ್ಕಾರದ ಜೊತೆಗೆ ಪುರಷರ ವಂಚನೆ, ಕಳ್ಳಾಟದ ನಡು ನಡುವೆಯೂ ಸ್ವಾಭಿಮಾನವೂ ಎದ್ದು ಕಾಣುತ್ತದೆ. ಹೆಣ್ಣಿನ ಮೇಲಾಗುವ ಅತ್ಯಾಚಾರ, ಕನಸಿನ ನನಸಿಗಾಗಿ ಹಂಬಲಿಸುವ ಪರಿ, ಅವಮಾನ, ಅಪಮಾನಗಳನ್ನು ಸಹಿಸಿಕೊಂಡು ಕುಟುಂಬಕ್ಕಾಗಿ ಜೀವ ಸವೆಸುತ್ತಿದ್ದರೂ ದುರಂತದ ಬಾಳನ್ನಾಶ್ರಯಿಸುವ ಪರಿ, ಹೆಣ್ಣು ಹೆಣ್ಣನ್ನೇ ಶೋಷಿಸುತ್ತಿರುವ ಘಟನೆ, ಆಸ್ತಿಗಾಗಿ ಹೊಂಚು ಹಾಕುವ ಮಗಳು , ಅಳಿಯಂದಿರ ವರ್ತನೆ, ಇದರಿಂದಾಗಿ ತನ್ನೆಲ್ಲಾ ಆಸ್ತಿಯನ್ನು ಆಶ್ರಮಕ್ಕೆ ನೀಡಿ ಹೋಗುವ ದೃಶ್ಯಗಳು ಎಂಥಹವರನ್ನೂ ನೋಯಿಸದಿರದು.ಜೊತೆಗೆ ನಾವು ಕಲಿಯಬೇಕಾದ ಪಾಠವೂ ಹೌದು.

ಆದರೆ ಡೈರಿಯ ಪುಟಗಳು ಎಂಬ ಕಥೆ ನೀಳ್ಗಥೆಯಾಗಿದ್ದು ಅದು ಯಾವುದೇ ಕುತೂಹಲವನ್ನಾಗಲೀ ಆಸಕ್ತಿಯನ್ನಾಗಲೀ ತೋರಿಸುತ್ತಿಲ್ಲ.ಈ ಕಥೆ ಆಧ್ಯಾತ್ಮಿಕ, ಜ್ಯೋತಿಷ್ಯ ಮತ್ತು ಮೂಢನಂಬಿಕೆಗಳ ಸುತ್ತ ಹೆಣೆಯಲ್ಪಟ್ಟಿದೆ.

ಅಂತರ್ಜಾತೀಯ ಮತ್ತು ಪ್ರೇಮ ವಿವಾಹಕ್ಕೆ ಸಂಬಂಧಿಸಿದ ಎರಡು ಕಥೆಗಳಿದ್ದು ಅವುಗಳು ಸಮಕಾಲೀನ ಜನಾಂಗಕ್ಕೆ ಮಾದರಿ ಎನಿಸುತ್ತಿದೆ. ಹೋರಾಟದ ಬದುಕು ಮತ್ತು ಸ್ವಾಭಿಮಾನದ ಬದುಕನ್ನು ಮಹಿಳೆಯರು ನಡಸಬೇಕೆನ್ನುವುದು ಹಲವಾರು ನಿದರ್ಶನಗಳ ಮೂಲಕ ವ್ಯಕ್ತಗೊಳ್ಳುತ್ತಿದೆ. ಕೆಲವೊಂದು ಕಥೆಗಳು ಮುಂದೇನು...? ಎನ್ನುತ್ತಾ ಓದುಗರ ವಿವೇಚನೆಗೆ ಒಳಪಡುತ್ತಿರುತ್ತದೆ. ಇನ್ನೂ ಕೆಲವು ಇಷ್ಟೇನಾ...!ಎಂಬ ಅಚ್ಚರಿಮೂಡಿಸುಂತಿದೆ. ಕೌಟುಂಬಿಕ ಹಿಂಸೆಯೊಂದಿಗೆ ಮಾವನಿಂದಲೂ ಅತ್ಯಾಚಾರಕ್ಕೆ ಒಳಪಟ್ಟ ಸೊಸೆಯ ಪಾಡು ಕಣ್ಣೀರು ತರಿಸುತ್ತದೆ. ಬದುಕಿನ ಅನಿವಾರ್ಯತೆ , ಕೆಟ್ಟ ಕೆಲಸವೆಂದು ತಿಳಿದರೂ ಮಾಡಲೋ - ಬೇಡವೋ ಎನ್ನುವ ಚಡಪಡಿಕೆ ಇದು ವಾಸ್ತವಕ್ಕೆ ತೀರಾ ಹತ್ತಿರದ ಪ್ರಕರಣ.ಈ ಕಥೆಗಳಲ್ಲಿ ಎಲ್ಲವೂ ಎಳೆ ಎಳೆಯಾಗಿ ಬಿಡಿಸಿಡಲಾಗಿದೆ.

ದೇಶೀಯತೆ, ಪ್ರಾದೇಶಿಕ ನೆಲೆಗಟ್ಟು, ಆಡುಭಾಷೆಯ ಸೊಗಡು , ಗ್ರಾಂಥಿಕ ಭಾಷೆಯೊಂದಿಗಿನ ಸಮ್ಮಿಳಿತ ಇವು ಕಥಾ ನಿರೂಪಣಾ ಶೈಲಿಯ ಪ್ರಧಾನ ಭೂಮಿಕೆ.ಹೆಣ್ಣನ್ನು ಗಂಡು ಮಾತ್ರವಲ್ಲದೆ ಹೆಣ್ಣೂ ಶೋಷಿಸುವಂತೆ ಚಿತ್ರಿಸಿದ್ದು ಅತಿಶಯೋಕ್ತಿಯಲ್ಲ.ವಾಸ್ತವತೆ, ಕೌಟುಂಬಿಕ ಜೀವನದ ಆಗು ಹೋಗು, ಆಳ ವಿಸ್ತಾರದ ಎಲ್ಲಾ ಹಂತವನ್ನು ಸೂಕ್ಷ್ಮವಾಗಿ ಸಂವೇದಿಸಿದ್ದು ; ಬಡತನದ ಬೇಗೆ, ಸಿರಿವಂತಿಗೆಯ ಸೊಕ್ಕು, ಮಧ್ಯಮ ವರ್ಗದ ಹಾಡು ಪಾಡು , ವ್ಯಂಗ್ಯ, ಕುಹಕ, ಕಟಕಿ ಮುಂತಾದವುಗಳನ್ನು ಅಳವಡಿಸಿರುವುದು ಸಹಜ ಹಾಗೂ ಲೇಖಕಿಯ ಎದೆಗಾರಿಕೆ.

ಎಲ್ಲಾ ಕಥೆಗಳಲ್ಲೂ ಸ್ತ್ರೀಯನ್ನೇ ಕೇಂದ್ರವಾಗಿಟ್ಟುಕೊಂಡು ಬರೆಯಲಾಗಿದ್ದರೂ ಪುರುಷರ ಬಗೆಗಿನ ಒಲವು ಅಲ್ಲಲ್ಲಿ ಕಾಣುತ್ತಿರುವುದರಿಂದಾಗಿ ಮಹಿಳಾ ಪರ ಲೇಖಕಿ ಎನ್ನುವುದಕ್ಕಿಂತಲೂ ಮಹಿಳಾ ಸಂವೇದನೆಯ ಬರಹಗಾರ್ತಿ ಎನ್ನುವುದು ಸೂಕ್ತ. ಪುರುಷರ ಅಂತಃಸತ್ವ- ಅಂತಃಕರಣವನ್ನೂ ಅರಿಯಬೇಕೆಂಬುದು ಪರೋಕ್ಷವಾದಂತಹ ವಾದದಂತಿದೆ.ಕೆಲವೊಂದು ಕಥೆಗಳಲ್ಲಿ "ಮುಂದೇನು...?"ಎಂಬುದನ್ನು ಓದುಗರಿಗೇ ಬಿಟ್ಟು ನಿಗೂಢ ಸೃಷ್ಠಿಸಿದ್ದಾರೆ.

ಅಂತೂ ಸುಮಾರು 50ರಿಂದ 60ವರುಷಗಳ ಜೀವನಾನುಭವಗಳನ್ನು ಯಾವುದೇ ರೀತಿಯ ಗೊಂದಲಗಳಿಗೆ ಆಸ್ಪದವನ್ನೀಯದೆ ಓದುಗರಿಗೆ ಮನಮುಟ್ಟುವಂತೆ ಕಟ್ಟಿಕೊಡುವಲ್ಲಿ ಲೇಖಕಿ ಯಶಗಳಿಸಿದ್ದಾರೆ.

0 comments:

Post a Comment