ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ
ಹ್ಹುಂ ಇದೇನು ಎಂದು ಮೂಗುಮುರಿಯದಿರಿ...ಎಲ್ಲೆಂದರಲ್ಲಿ ಹುಟ್ಟಿ ಬೆಳೆಯುವ ಕುಕ್ಕುಸುಂಠಿಯೂ ಒಂದು ಪರ್ಯಾಯ ಬೆಳೆ. ಅಸಡ್ಡೆ ತೋರದೆ ಇದನ್ನೇ ಒಂದು ಬೆಳೆಯಾಗಿ ಕಂಡರೆ ರೈತರ ಮುಖದಲ್ಲಿ ಹರ್ಷದ ಹೊನಲು ಹರಿಸಲು ಸಾಧ್ಯ.


ಹೌದು ಈ ಕುಕ್ಕು ಸುಂಠಿ ತೋಟದಲ್ಲಿ, ಕೃಷಿ ಭೂಮಿಯಲ್ಲಿ ಹೆಚ್ಚು ತೇವಾಂಶ ಹೊಂದಿದ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.ಏಷ್ಯಾ, ಆಫ್ರಿಕಾ, ಆಸ್ಟ್ರೇಲಿಯಾದಲ್ಲಿ ಹೆಚ್ಚಾಗಿ ಬೆಳೆಯಲ್ಪಡುವ ಈ ಕುಕ್ಕುಂಶುಂಠಿ ಸ್ಥಳೀಯವಾಗಿ ಕಾಸರಗೋಡು, ದ.ಕ, ಉತ್ತರ ಕನ್ನಡ ಜಿಲ್ಲೆಯಲ್ಲಿ ತೋಟದೊಳಗೆ ಹೆಚ್ಚಾಗಿ ಕಾಣಬಹುದಾಗಿದೆ. ಇದಕ್ಕೆ ಯಾವುದೇ ಕೀಟಗಳ ಬಾಧೆಯಿಲ್ಲ.

ಮಾವಿನ ಕಾಯಿಯ ಪರಿಮಳವನ್ನೇ ಹೋಲುವ ಶುಂಠಿಯಂತೆ ಕಂಡುಬರುವ ಈ ಗಿಡದ ಗಡ್ಡೆಯನ್ನು ಮಾವಿನ ಶುಂಠಿ ಎಂದೂ ಕರೆಯುತ್ತಾರೆ. ಇಂಗ್ಲಿಷ್ ನಲ್ಲಿ ಮ್ಯಾಂಗೋ ಜಿಂಜರ್, ಮಲೆಯಾಳಂ ನಲ್ಲಿ ಮಾಂಙನ್ನಾರಿ, ಅಂಬೆ ಅರಶಿನ, ಅಂಬೆಕೊಂಬು ಎಂದೂ ಕರೆಯಲ್ಪಡುತ್ತದೆ. ಅರಶಿನ ಗಿಡದ ಎಲೆಯನ್ನೇ ಹೋಲುವ ಎಲೆ, ನೇರಳೆ ಬಣ್ಣದ ಹೂವು, ಗೆಡ್ಡೆ ಹಾಗೂ ಎಲೆ(ಗಿಡ)ದಲ್ಲಿ ಮಾವಿನ ಕಾಯಿಯನ್ನು ಹೋಲುವ ಪರಿಮಳ...ಇದು ಕುಕ್ಕುಶುಂಠಿಯನ್ನು ಫಕ್ಕನೆ ಗುರುತಿಸಲಿರುವ ಸಾಧ್ಯತೆಗಳು.


ಇಂಡೋ ಮಲಯ ಮೂಲದ ಈ ಕುಕ್ಕುಶುಂಠಿಯ ತಳಿಯ ಹೆಸರು ಕುರ್ಕುಮಾ.ಕುರ್ಕುಮ್ ಇದು ಅರೇಬಿಕ್ ಮೂಲದ ಹೆಸರಾಗಿದೆ. ಕುರ್ಕುಮ್ ಅಂದರೆ ಅರಶಿನ ಬಣ್ಣ.ಈ ಗಿಡವೂ ಅರಶಿನ ಗಿಡವನ್ನು ಹೋಲುವುದರಿಂದ ಈ ರೀತಿಯಾಗಿ ಇದನ್ನು ಕರೆಯಲಾಗುತ್ತದೆ. ಇದರ ವೈಜ್ಞಾನಿಕ ಹೆಸರು ಕುರ್ಕುಮಾ ಅಮಡಾ. ಝಿಂಗಿ ಬರೇಶಿಯೇ ಕುಟುಂಬಕ್ಕೆ ಸೇರಿದ್ದಾಗಿದೆ.

ಇದನ್ನು ಅತ್ಯಂತ ಸುಲಭವಾಗಿ ಬೆಳೆಯಬಹುದಾಗಿದೆ. ಈ ಗಿಡದ ಬುಡದಲ್ಲಿರುವ ಗಡ್ಡೆಯಲ್ಲಿ ಕಂಡುಬರುವ ಬೆರಳಿನಾಕಾರದ ರಚನೆಯನ್ನು ಭೂಮಿಯೊಳಗೆ ನಾಟಿ ಮಾಡಿದರೆ ಸಾಕು ಅದು ಹುಲುಸಾಗಿ ಬೆಳೆದು ಗಡ್ಡೆ ನೀಡುತ್ತದೆ. ವರ್ಷದುದ್ದಕ್ಕೂ ಮಣ್ಣಿನಡಿಯಲ್ಲಿ ಆರೋಗ್ಯವಂತವಾಗಿ ಈ ಗಡ್ಡೆ ಉಳಿದುಕೊಳ್ಳುತ್ತದೆ. ಇದು ಈ ಗಿಡದ ವೈಶಿಷ್ಟ್ಯತೆ.


ಭಾರತೀಯ ಸನಾತನ ವೈದ್ಯಪದ್ದತಿಯಾದ ಆಯುರ್ವೇದ ಚಿಕಿತ್ಸೆಯಲ್ಲಿ ಈ ಕುಕ್ಕುಶುಂಠಿಯ ಬಳಕೆಯಿದೆ. ದೇಹಕ್ಕೆ ಅತ್ಯಂತ ತಂಪು . ಆ ಕಾರಣಕ್ಕಾಗಿ ಇದನ್ನು ಬಳಸಲಾಗುತ್ತದೆ. ಮೈ ಮೇಲಿನ ಯಾವುದೇ ರೀತಿಯ ತುರಿಕೆಗೂ ಈ ಗಿಡದ ಗಡ್ಡೆಯನ್ನು ತೇಯ್ದು ಹಚ್ಚಿದರೆ ತುರಿಕೆ ಮಾಯವಾಗುತ್ತದೆ.ಕೊಲೆಸ್ಟ್ರಾಲ್ ನಿಯಂತ್ರಣಕ್ಕೂ ಇದು ಸಹಾಯಕಾರಿ. ಅಂತಹ ಅದ್ಭುತ ಶಕ್ತಿ ಈ ಕುಕ್ಕುಶುಂಠಿಗಿದೆ.

ಇದನ್ನು ರುಚಿಕರ ಆಯಾರಾಗಿಯೂ ಬಳಸಬಹುದು. ಉಪ್ಪಿನಕಾಯಿ, ತುಂಬುಳಿ, ಸಲಾದ್, ಚಟ್ನಿ ಹೀಗೆ ವಿವಿಧ ರೀತಿಯ ವ್ಯಂಜನಕ್ಕೂ ಇದನ್ನು ಬಳಸಬಹುದು.
ಬೇಸಿಗೆಯಲ್ಲಿ ಗಿಡ ಒಣಗಿದಂತೆ ಕಂಡರೂ ಮಣ್ಣಿನೊಳಗೆ ಗೆಡ್ಡೆಗಳು ಹಸಿಯಾಗಿರುತ್ತವೆ. ಮಳೆ ಬಂದ ನಂತರ ಮತ್ತೆ ಚಿಗುರುತ್ತವೆ. ಒಮ್ಮೆ ನಾಟಿ ಮಾಡಿದರೆ ನಾಲ್ಕೈದು ವರ್ಷ ಗೆಡ್ಡೆ ಪಡೆಯಬಹುದು. ಮಾವಿನಶುಂಠಿ ಬಳಸಿ ಚಟ್ನಿ, ಗೊಜ್ಜು, ತಂಬುಳಿ, ಉಪ್ಪಿನಕಾಯಿ ಇತ್ಯಾದಿಗಳನ್ನು ಮಾಡಬಹುದು. ಗೆಡ್ಡೆ ತುರಿಯನ್ನು ರುಚಿ ಮತ್ತು ಸ್ವಾದಕ್ಕಾಗಿ ಸಲಾಡ್‌ಗಳಲ್ಲಿ ಬಳಸಬಹುದು. ಒಂದು ಕೇಜಿ ಕುಕ್ಕುಶುಂಠಿಗೆ 25ರುಪಾಯಿ ತನಕವೂ ಮಾರುಕಟ್ಟೆ ಬೆಲೆಯಿದೆ.
ಕುಕ್ಕುಸುಂಠಿಯೇ ಎಂದು ಮೂಗುಮುರಿಯದಿರಿ...ಅದೂ ಒಂದು ಆದಾಯ ಮೂಲವಾಗಬಹುದು...

ಹರೀಶ್ ಕೆ.ಆದೂರು.

ಪೂರಕ ಮಾಹಿತಿ:ಸಂದೀಪ್ ಕೆ.ಎಂ.

0 comments:

Post a Comment