ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ.....ಹೌದು .ಎಷ್ಟೋ ವರುಷ ಕಳೆದು ಹೋದರೂ ಪ್ರತಿ ಯುಗಾದಿಯೂ ತನ್ನ ಹೊಸತನದೊಂದಿಗೆ ಮರಳಿ ಬರುತ್ತಿದೆ.ಯುಗಾದಿ ಹಿಂದೂಗಳಿಗೆ ಹೊಸ ವರ್ಷದ ಆರಂಭ ಮಾತ್ರವಲ್ಲದೇ ಹೊಸತನದ ಪ್ರತೀಕವಾಗಿದೆ.

ಮಲೆನಾಡ ಹೃದಯ ಭಾಗ ಸಾಗರದಲ್ಲಂತೂ ಯುಗಾದಿ ಪ್ರಮುಖ ಹಬ್ಬಗಳಲ್ಲೊಂದು ಎಂದೇ ಪರಿಗಣಿಸಲ್ಪಟ್ಟಿದೆ.ಇತ್ತ ಕೇರಳಿಗರಿಗೆ ವಿಷು ಪ್ರಮುಖ ಹಬ್ಬ.ವಿಷುವಿನ ಆಚರಣೆಯನ್ನು ಕೇರಳದ ಹಾಗೂ ಕರ್ನಾಟಕದ ಕೆಲ ಭಾಗಗಳಲ್ಲಿ ಪ್ರಾಮುಖ್ಯವಾಗಿ ಆಚರಿಸುತ್ತಾರೆ.

ಕಾರಣಾಂತರಗಳಿಂದ ಸಾಗರ ಬಿಟ್ಟು ಬೇರೆ ಊರುಗಳಲ್ಲಿ ನೆಲೆಸಿರುವ ನನ್ನಂತಹ ಮಲೆನಾಡಿಗರಿಗೆ ಯುಗಾದಿ ಬಂತೆಂದರೆ ಬಾಲ್ಯದ ನೆನಪೂ ಓಡೋಡಿ ಬರುತ್ತದೆ.ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿಗಳಿಗೆ ಯುಗಾದಿಯಿಂದಲೇ ಬೇಸಿಗೆ ರಜೆ ಶುರು.ಶಾಲೆಯಿಂದ ಹೊರ ಬರುತ್ತಲೇ ರಜೆಯ ಮಜಾ ಪಡೆಯಲು ಏನೇನೋ ಪ್ಲಾನುಗಳನ್ನು ಹಾಕುತ್ತಾ ಮನೆಗೆ ಬಂದರೆ ಸಿಹಿ ತಿನಿಸುಗಳ ತಯಾರಿ ನಡೆಸುತ್ತಿರುವ ಅಮ್ಮಂದಿರು ಹಬ್ಬದ ಮುನ್ಸೂಚನೆ ನೀಡುತ್ತಾರೆ.ಕನಸು ಕಾಣುತ್ತಾ ಮಲಗಿದವರಿಗೆ ಹೊಸ ವರ್ಷವನ್ನು ಎದುರುಗೊಳ್ಳುವ ತವಕ.ಹೆಣ್ಣು ಮಕ್ಕಳಿಗೆ ಹಬ್ಬದ ರಂಗೋಲಿ ಹಾಕುವ ಸಡಗರ.

ಹಿರಿಯರ ಆಣತಿಯಂತೆ ಅಲ್ಪ ಉದಾಸೀನದೊಂದಿಗೆ ಮುಂಜಾನೆ ಎದ್ದ ಕೂಡಲೇ ಮತ್ತೆ ಹಬ್ಬದ ನೆನಪು.ಅಯ್ಯೋ ಸೂರ್ಯ ಉದಯಿಸಿ ಬಿಟ್ಟನೇನೋ ಎಂಬ ಗಾಬರಿಯೊಂದಿಗೆ ದೊಡ್ಡಪ್ಪನ ಜೊತೆ ನಾವು ಮಕ್ಕಳೆಲ್ಲಾ ಬೆಟ್ಟದ ತುದಿಗೆ ಹೋಗಿ ಪೂರ್ವ ದಿಕ್ಕಿಗೆ ಮುಖ ಮಾಡಿ ನಿಲ್ಲುತ್ತಿದ್ದ ಆ ಕ್ಷಣ ಕಳೆದ ಮುತ್ತಿನಂತೀಗ.ಹಾಗೆ ಉದಯಿಸುವ ಬಾಲ ಸೂರ್ಯನನ್ನು ಸಂಭ್ರಮದಿಂದ ಎದುರುಗೊಂಡು ಪೂಜಿಸಿ ಮನೆಗೆ ವಾಪಾಸು ಮರಳುವಾಗ ಅದೇನೋ ಹೊಸತನದ ಭಾವವನ್ನು ನಾವು ಅನುಭವಿಸುತ್ತಿದ್ದೆವು.

ಇದು ವಿಷು ಕಣಿ.ಕೇರಳ ಭಾಗದಲ್ಲಿ ವಿಷುವಿನ ದಿನದಂದು ಕಣಿನೋಡಿ ದಿನಾರಂಭಮಾಡುವುದು ಪದ್ಧತಿ.

ಮನೆಗೆ ಮರಳಿದ ಮೇಲೆ ಮನೆ ದೇವರಿಗೆ ಪೂಜೆ ಮಾಡಿ ಬೇವು-ಬೆಲ್ಲ ತಿಂದು ಎಲ್ಲರಿಗೂ ಹೊಸ ವರ್ಷದ ಶುಭ ಹಾರೈಸಿದಾಗ ಅದೇನೋ ಒಂದು ರೀತಿಯ ತೃಪ್ತಿ.ಅಮ್ಮ ದೊಡ್ಡಮ್ಮಂದಿರ ಕಜ್ಜಾಯದ ತಯಾರಿಕೆಗೆ ನೆರವಾಗುತ್ತಾ,ಅಲ್ಲಲ್ಲೇ ಹೋಳಿಗೆ -ಹೂರಣ,ತೆಂಗಿನ ಕಾಯಿ ಎಲ್ಲಾ ಗುಳುಂ ಮಾಡುತ್ತಾ ಒಬ್ಬರಿಗೊಬ್ಬರು ಚುಡಾಯಿಸುತ್ತಾ ಇಡೀ ದಿನ ಕಳೆಯುತ್ತಿದ್ದದ್ದು ಈಗ ನೆನಪು ಮಾತ್ರ.

ಇಷ್ಟೆಲ್ಲಾ ಸಂಭ್ರಮದಿಂದ ಆಚರಿಸುವ ಯುಗಾದಿಯ ಕೊನೆಯ ಘಟ್ಟ ಊರ ದೇವಸ್ಥಾನದಲ್ಲಿನ ಪಂಚಾಗ ಶ್ರವಣ ಕಾರ್ಯಕ್ರಮಕ್ಕೆ ಹಾಜರಾತಿ ಹಾಕುವುದು.ಯುಗಾದಿಯ ದಿನ ಸಂಜೆ ಹೊಸ ಸಂವತ್ಸರದ ಪಂಚಾಂಗವನ್ನು ಓದಿ ಆಯಾ ವರ್ಷದ ಶುಭ-ಲಾಭಗಳನ್ನು ಎಲ್ಲರಿಗೂ ತಿಳಿಸುವುದು ದೇವಸ್ಥಾನದ ಅರ್ಚಕರಿಗೆ ನಿಗದಿ ಮಾಡಿದ ಒಂದು ಕೆಲಸ.ಗ್ರಾಮದ ಜನರೆಲ್ಲ ಭಯ ಭಕ್ತಿಯಿಂದ ಪಂಚಾಂಗ ಶ್ರವಣ ಆಲಿಸುತ್ತಾ ಕುಳಿತರೆ ಮಕ್ಕಳೆಲ್ಲರ ಕಣ್ಣು ನೈವೇದ್ಯಕ್ಕಿಟ್ಟ ಪಾಯಸ,ಕೋಸುಂಬರಿ,ಬೆಲ್ಲ-ಏಲಕ್ಕಿಯ ಪಾನಕದ ಕಡೆ ನೆಟ್ಟಿರುತ್ತಿತ್ತು.ಪೂಜೆಯ ನಂತರ ಪ್ರಸಾದ ಸ್ವೀಕರಿಸಿ ಯುಗಾದಿಯ ಚಂದ್ರನನ್ನು ಕಾಣುವುದು ವಾಡಿಕೆಯಾಗಿತ್ತು.ಯುಗಾದಿಯ ಚಂದ್ರನ್ನು ನೋಡಿದರೆ ಚೌತಿ ಚಂದ್ರನ್ನು ನೋಡಿದ ಪಾಪ ಪರಿಹಾರವಾಗುತ್ತದೆಂಬ ನಂಬಿಕೆ ಈಗಲೂ ಚಾಲ್ತಿಯಲ್ಲಿದೆ.

ಊರ ದೇವಸ್ಥಾನದಿಂದ ಮನೆಗೆ ಮರಳುವಾಗ ಇಡೀ ವರ್ಷಕ್ಕೆ ಬೇಕಾಗುವಷ್ಟು ಚೈತನ್ಯವನ್ನು ತುಂಬಿಕೊಂಡು ಬಂದಂತಹ ಸಂತಸ ನಮ್ಮಲ್ಲಿ ತುಂಬಿರುತ್ತಿದ್ದುದಂತೂ ಸತ್ಯ.ಇಂದಿಗೂ ತಪ್ಪದೇ ಸಾಗರಕ್ಕೆ ಓಡುವ ನನಗೆ ಮುಂಚಿನ ಉತ್ಸಾಹ ಕುತೂಹಲ ಇರದೇ ಇದ್ದರೂ ಸಂಭ್ರಮ ತಂದೇ ತರುತ್ತದೆ.ಒತ್ತಡದ ಬದುಕಿಗೆ ಯುಗಾದಿ ಒಂದಿಷ್ಟು ವಿರಾಮ ನೀಡುವ ಹಬ್ಬವಾಗಿ ಬಾಲ್ಯದ ನೆನಪುಗಳಿಗೆ ಕಿಂಡಿಯಾಗಿದೆ.

ಸೌಮ್ಯ ಆದೂರು.

0 comments:

Post a Comment