ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಚಾರ

ಜಾಗತೀಕರಣದ ಇಪ್ಪತ್ತು ವರ್ಷ ಉಕ್ಕಿಸಿದ್ದೆಷ್ಟು? ಕರಗಿಸಿದ್ದೆಷ್ಟು?

ದಕ್ಷಿಣ ಕೊಡಗಿನ ಕಾನೂರು ಎಂಬ ಊರು. ಹೆಚ್ಚು ಕಮ್ಮಿ ಅದು ಕೊಡಗಿನ ಕೊನೆಯ ಊರು. ಆ ಊರಿನಿಂದ ಇಂದು ಮುಂಜಾನೆ ಬೆಳಕು ಮೂಡುವ ಮೊದಲೇ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವೋಲ್ವೋ ಐರಾವತ ಬಸ್ಸೊಂದು ನಿತ್ಯ ಬೆಂಗಳೂರಿಗೆ ಹೊರಡುತ್ತದೆ. ಮುಂಜಾನೆಯ ಆ ಹೊತ್ತಿನಲ್ಲೂ ಆ ಬಸ್ಸು ತುಂಬಿಕೊಂಡಿರುತ್ತದೆ. ದಿನಂಪ್ರತಿ ಬಸ್ಸು ಹೀಗೇ ಸಾಗುತ್ತದೆ. ಹೊರನೋಟಕ್ಕೆ ಈ ಬಸ್ಸು ಇಂತಿಷ್ಟು ದರದೊಡನೆ ರಾಜಧಾನಿಗೆ ಸಾಗುತ್ತದೆ ಎನಿಸಿದರೂ ಆ ಐರಾವತ ಸುಮ್ಮನೇ ಸಾಗುವುದಿಲ್ಲ.

ಕಾನೂರು ಸುತ್ತಮುತ್ತಲಿನ ಹಲವು ಕಥೆಗಳನ್ನು ಹೊತ್ತುಕೊಂಡು ಬಸ್ಸು ಓಡುತ್ತದೆ. ಪಾಳುಬಿದ್ದ ಭತ್ತದ ಗದ್ದೆಗಳ ಕಥೆಗಳನ್ನು, ಮನೆಯೊಂದನ್ನು ಬಿಟ್ಟು ಮಿಕ್ಕೆಲ್ಲವನ್ನೂ ಮಾರಿದವರ ಕಥೆಗಳನ್ನು , ತಮ್ಮ ಮಾತು ಲೆಕ್ಕಿಸದೆ ಇನ್ನೂ ಉತ್ತು ಬಿತ್ತುತಿರುವ ಅಪ್ಪ-ಅಮ್ಮಂದಿರ ಕಥೆಗಳನ್ನು, ಪಟಾಕಿಯ ಅಬ್ಬರದಲ್ಲಿ ಹೂತುಹೋದ ಹುತ್ತರಿಯ ಮಹತ್ತ್ವವನ್ನು, ಕಾವೇರಿ ತೀರ್ಥಕ್ಕೆ ಬೆಂಗಳೂರಿನಿಂದ ಬಂದ ಕಥೆಗಳನ್ನು ಹೊತ್ತುಕೊಂಡು ಸಾಗುತ್ತದೆ.

ವರ್ಷಗಟ್ಟಲೆ ಸಿಗದ ಊರವರು ಈ ಬಸ್ಸಿನಲ್ಲಿ ಆಗಾಗ್ಗೆ ಸಿಗುತ್ತಾರೆ. ಒಟ್ಟು ಆ ಬಸ್ಸಿನಲ್ಲಿರುವುದು ಬೆಂಗಳೂರಿಗೆ `ಸಾಧನೆ' ಗೆ ಹೊರಟವರ ಕಥೆಗಳು. ಒಂದೊಂದು ಮುಖಗಳದ್ದೂ ಏನನ್ನೋ ಹೊತ್ತುಕೊಂಡ ಕಥೆ. ಹೀಗೆ ಕಥೆಗಳನ್ನು ರಾಜಧಾನಿಗೆ ಸಾಗಿಸಲೆಂದೇ ಕರ್ನಾಟಕಾದ್ಯಂತ ಕಾನೂರಿನಂಥ ಹಲವು ಮೂಲೆಯ ಊರುಗಳಿಗೆ ರಾಜಹಂಸಗಳೂ, ಐರಾವತಗಳೂ ಸಂಚರಿಸುತ್ತವೆ.

ಇಪ್ಪತ್ತು ವರ್ಷಗಳ ಹಿಂದೇ ಮಾರ್ಗವಾಗಿ ಮಹಾನಗರಕ್ಕೆ ಒಂದೇ ಒಂದು ಬಸ್ಸಿತ್ತಂತೆ. ಬಹುತೇಕ ಅದು ಖಾಲಿಯಾಗಿಯೇ ಹೋಗುತ್ತಿತ್ತಂತೆ ಎಂಬುದು ಕೆಲವು ವಯಸ್ಸಾದವರ ನೆನಪು. ರಾಜ್ಯದ ಬಹುತೇಕ ಹಳ್ಳಿಗಳೆಲ್ಲವೂ ಇಪ್ಪತ್ತು ವರ್ಷದ ಹಿಂದೆ ಹೀಗೇ ಇದ್ದವು.ಆದರೆ ಇಂದು ಕಾಲಕ್ಕಿಂತಲೂ ವೇಗವಾಗಿ ಅವೆಲ್ಲವೂ `ಮುಂದುವರಿದಿವೆ'. ಏಕಾಏಕಿ ಈ ಸ್ಥಿತ್ಯಂತರ ಉಂಟಾಗಲು ಕಾರಣವೇನು? ಜನರೇಕೆ ಈ ಪರಿಯಲ್ಲಿ ಪಟ್ಟಣ ಸೇರಲು ಹಾತೊರೆಯುತ್ತಿದ್ದಾರೆ? ಹಳ್ಳಿಗಳೂ ಪಟ್ಟಣಗಳಾಗಬೇಕೆಂದು ಏಕೆ ಎಲ್ಲರೂ ಹಂಬಲಿಸುತ್ತಾರೆ?

ಅದಕ್ಕೆಲ್ಲಾ ಚಿಂತಕರು, ಪರಿಸ್ಥಿತಿಯನ್ನು ಅಧ್ಯಯನ ಮಾಡಿದವರು `ಜಾಗತೀಕರಣ' ಎಂದು ಹೆಸರಿಟ್ಟರು. ಹೊಸ ವ್ಯಾಪಾರ ನೀತಿ, ಆರ್ಥಿಕ ನಿಲುವು, ಸೀಮಿತದ ಎಲ್ಲೆ ದಾಟಿ ಬರುವ ಎಲ್ಲಾ ಸಂಗತಿಗಳು ಸೇರಿ ಸಾಮಾನ್ಯನಿಗೂ ಆಕಾಶವನ್ನು ತೋರಿಸಿತ್ತು. ಇದು ಹೊಸ ಜೀವನ ವಿಧಾನವೊಂದನ್ನು ಸದ್ಯದಲ್ಲೇ ನಿರ್ಮಾಣ ಮಾಡುವುದಿತ್ತು. ಆ ಹೊಸ ಜೀವನ ವಿಧಾನಕ್ಕೆ ಬೇಕಾದ ಎಲ್ಲಾ ಸರಕು-ಸರಂಜಾಮುಗಳೆಲ್ಲವೂ ಎಲ್ಲರಿಗೂ ಎಟುಕುವುದೆಂದೂ ಸರಕಾರದವರು ಹೇಳಿದರು.

ಕೇಳಿಸಿಕೊಳ್ಳದವರಿಗೂ ಅವು ಅರ್ಥವಾದವು. ಏಕೆಂದರೆ ಏಕಾಏಕಿ ಅವಕಾಶಗಳು ತೆರೆದುಕೊಂಡವು. ಸಾಮಾನ್ಯರೂ ಒಳಗೊಳ್ಳುವಂತೆ ಮಾರುಕಟ್ಟೆಯನ್ನು ರೂಪಿಸಲಾಯಿತು. ಎಲ್ಲವೂ ಎಲ್ಲರಿಗೂ ದೊರಕಿದವು. ಅಮೆರಿಕಾದ ಪಿಜ್ಜಾವನ್ನು ತರಿಸಿದರು, ಎಲ್ಲರೂ ತಿನ್ನಬಹುದು ಎಂದರು. ಮನೆಯಲ್ಲಿ ಕಾಫಿ ಕುಡಿದವರು ರೂ. 200 ಕ್ಕೆ ಕಾಫಿ ಶಾಪ್ನಲ್ಲಿ ಕುಳಿತು ಹೀರುವಂತೆ ಮಾಡಲಾಯಿತು. ಎಲ್ಲಿನದ್ದೊ ಜನರಿಗೆ ಇಲ್ಲಿನ ನೆಲವನ್ನು ತೋರಿಸಲಾಯಿತು.

ನೀವು ಬಂಡವಾಳ ಹೂಡಿ ಎಂದು ಕರೆಯಲಾಯಿತು. ಹೀಗೆ ಕಾರ್ಯಗಳು ನಡೆಯುತ್ತಿದ್ದಂತೆಯೇ ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಭೂಮಿ ಚಪ್ಪಟೆಯಾಯಿತು. ದೇಶಗಳು ಹತ್ತಿವಾದವು. ಮೊದಲು ಕೆಟ್ಟು ಪಟ್ಟಣ ಸೇರಿದ ಹಳ್ಳಿಯ ಹೈದನೊಬ್ಬ ವಿದೇಶ ಸುತ್ತಿ ಬಂದ. ಮಹತ್ತ್ವಾಕಾಂಕ್ಷಿ ರೈತನೊಬ್ಬನ ಮಗ ಊರಿನ ಗದ್ದೆಯನ್ನು ಮಾರಿ ಸಿಟಿಯಲ್ಲಿ ಥರ್ಟಿ -ಫಾರ್ಟಿ ಸೈಟು ಕೊಂಡ. ಹಳ್ಳಿಯ ಯುವಕರು ಪಟ್ಟನ ಸೇರಲು ಹಾತೊರೆದರು. ಸೇರಿದರು, ಹಿಂಡುಹಿಂಡಾಗಿ ಸಾಗಿದರು. ಸಾಗಿದವರು ಮತ್ತೆಂದೂ ಮರಳಿಬಾರದಂತೆ ಸಿಕ್ಕಿಹಾಕಿಕೊಂಡರು. ಯುವಕರಿಲ್ಲದ ಹಳ್ಳಿ ತನ್ನ ಒಡಲಿನ ಭಾವ ತೀವ್ರೆತೆಯನ್ನು , ಸೂಕ್ಷ್ಮ ಸಂವೇದನೆಯೊಂದನ್ನು ಕಳೆದುಕೊಳ್ಳುತ್ತಾ ಬಂತು. ಗಾಂಜಿ ಹೇಳಿದ್ದ ಭಾರತದ ಆತ್ಮಕ್ಕೆ ಜೀವವೇ ಇಲ್ಲದಾಯಿತು.

ಜಾಗತೀಕರಣಕ್ಕೀಗ ಇಪ್ಪತ್ತು ವರ್ಷಗಳು. ಈ ಇಪ್ಪತ್ತು ವರ್ಷಗಳಲ್ಲಿ ಎಲ್ಲೆಲ್ಲೂ ಸೂತಕದ ಛಾಯೆ. ಆದರೆ ಈ ಸೂತಕದ ಹೊತ್ತಲ್ಲೂ ಮೇರೆ ಮೀರಿದ ಹಬ್ಬ ಮಾಡುವ ಜಾಯಮಾನ. 90ರ ದಶಕದ ಮೊದಲು ಹುಟ್ಟಿ , ಈ ಇಪ್ಪತ್ತರೊಳಗೆ ಬಲಿಯಾಗದವರಿಗೆ ಈ ಸೂತಕದ ಅರಿವಾಗಬಹುದು. ಏನೇನಾಗಿಹೋಯಿತು ಈ ಇಪ್ಪತ್ತು ವರ್ಷಗಳಲ್ಲಿ...? ಹಳ್ಳಿಗರ ಮುಗ್ದತೆಯೇ ನಾಶವಾಯಿತು. ಮುಗ್ದತೆ ನಾಶವಾದರೂ ಮೋಸಹೋಗುವುದು ತಪ್ಪಿತೇ ಎಂದರೆ ಅದೂ ಇಲ್ಲ. ಪಟ್ಟಣಗಳ ಅಹಂಕಾರ ಹಳ್ಳಿಗೂ ನುಗ್ಗಿತು. ಶುದ್ಧ ವ್ಯವಹಾರಗಳು ಸಾಮಾನ್ಯವಾದುವು. ಮಾಡುತ್ತಿದ್ದ ವೃತ್ತಿಗಳು ಕೈಬಿಟ್ಟುಹೋಯಿತು.

ಸಮಾಜದ ಎಲ್ಲಾ ವರ್ಗಗಳೂ ಎಲ್ಲಾ ವೃತ್ತಿಗಳನ್ನು ಮಾಡಿದರು. ಹಾಗಾದರೆ ಸಮಾನತೆ ಬಂದುಬಿಟ್ಟತೋ ಎಂದರೆ ಅದೂ ಕೂಡಾ ಆಗಲಿಲ್ಲ. ಜಾತಿ ವ್ಯವಸ್ಥೆಗೆ ವೃತ್ತಿ ಒಂದು ಕಾರಣವೇ ಅಲ್ಲ ಎಂಬುದನ್ನು ಜಾಗತೀಕರಣ ತೋರಿಸಿಕೊಟ್ಟಿತು. ಇನ್ನು ಕಳೆದುಕೊಂಡಿದ್ದು, ಗಳಿಸಿಕೊಂಡಿದ್ದರ ಹೊರತಾಗಿ ಉಳಿದುಕೊಂಡಿದ್ದು ಎಂದರೆ ದ್ವಂದ್ವ, ಗೊಂದಲ, ಅಸಹನೆ, ಒತ್ತಡಗಳು ಮಾತ್ರ. ಜಾಗತೀಕರಣ ಸೃಷ್ಟಿಸಿದ ವಿಚಿತ್ರವಾದ ಅವಕಾಶ ಎಲ್ಲಾ ಕ್ಷೇತ್ರಗಳನ್ನು ಸ್ಪರ್ಶಮಾಡಿತ್ತು.

ಕೃಷಿಯನ್ನು ಅದು ಎಂದೂ ನುಂಗಿ ನೀರು ಕುಡಿಯಲಿಲ್ಲ. ಆದರೆ ವಿಚಿತ್ರವಾಗಿ ಕೃಷಿ ಆರಂಭವಾಯಿತು. ವ್ಯಾಪಾರವನ್ನು ಕಣ್ಣಮುಂದಿಟ್ಟುಕೊಂಡು ಕೃಷಿ ನೀತಿಗಳು ಆರಂಭವಾದವು. ಪೈರುಗಳು ನಿಯಮಕ್ಕೆ ತಕ್ಕಂತೆ ತೆನೆದೂಗಿದವು. ಪುರಾತನ ತಳಿಗಳು ನಾಶವಾದವು. ಕೃಷಿಯನ್ನು ರೈತನೇ ಮಾಡಬೇಕೆಂದಿಲ್ಲ ಎಂಬಂತಾಯಿತು. ಇಂತಿಷ್ಟು ಗಂಟೆಯಿಮದ ಇಂತಿಷ್ಟು ಗಂಟೆಯವರೆಗೆ ದುಡಿಮೆ, ಇಂತಿಂಥ ಸಮಯದಲ್ಲಿ ಇಷ್ಟಿಷ್ಟನ್ನು ಸುರಿಯುವುದು ಬೆಳೆ ತೆಗೆಯುವ ವಿಧಾನಗಳಾದವು. ಹೀಗೆ ಪ್ರೀತಿಯಿಲ್ಲದ ಕೃಷಿ ನೀತಿಯಿಲ್ಲದ ಆಹಾರವನ್ನು ಉತ್ಪಾದಿಸಿದವು.

ಸಾಮಾನ್ಯ ರೈತ `ಕೃಷಿ ಕಾರ್ಮಿಕ' ಎಂಬ ಹೊಸ ಮತ್ತು ದುಬಾರಿ ಪೀಳಿಗೆ ಯೊಂದಕ್ಕೆ ಅವಲಂಭಿತನಾದ. ತಮ್ಮ ತಮ್ಮ ಕುಲಕಸುಬನ್ನು ಬಿಟ್ಟ ಈ ವರ್ಗ ಸಣ್ಣ ರೈತರನ್ನು ಎಷ್ಟೊಂದು ಗೋಳಾಡಿಸಿದರೆಂದರೆ ಸ್ವತಃ ರೈತರೇ ತಮ್ಮ ಮಕ್ಕಳಿಗೆ ಮಣ್ಣಿನ ಹಂಗು ಬೇಡ ಎಂದರು. ಕೃಷಿ ಮಾಡಿಯೇ ಹೊಟ್ಟೆ ಹೊರೆಯಬೇಕೆಂಬ ಅನಿವಾರ್ಯತೆ ಇಂದಿಲ್ಲ ಎಂಬುದನ್ನ್ನೂ ಅವರು ಕಂಡುಕೊಂಡಿದ್ದಾರೆ. ಕೊನೆಗೆ ಜಮೀನನ್ನು ಮಾರುವ ವಿಫುಲ ಅವಕಾಶವನ್ನೂ ಆತ ಕಂಡುಕೊಂಡಿದ್ದಾನೆ.

ಜಾಗತಿಕ ಸ್ಥಿತಿಗತಿಗಳ ಖ್ಯಾತ ವಿಶ್ಲೇಷಕ ಹಂಟಿಂಗ್ಟನ್ `` ನಾಗರಿಕತೆಗಳ ಸಂಘರ್ಷದಲ್ಲಿ ಉಂಟಾಗುವ ಸ್ಥಿತ್ಯಂತರಗಳು ಯಾವುದೂ ಶಾಶ್ವತವಲ್ಲ. ಅವು ಕ್ಷಣಿಕ'' ಎನ್ನುತ್ತಾನೆ. ಆದರೆ ಈ ಇಪ್ಪತ್ತು ವರ್ಷಗಳ ಸ್ಥಿತ್ಯಂತರ, ಸ್ಥಿತಿಗಳನ್ನು ನೋಡಿದರೆ ಹಂಟಿಂಗ್ಟನ್ನನ ವಾದ ತಪ್ಪು ಎಂದೇ ಎನಿಸುತ್ತದೆ. ಏಕೆಂದರೆ ಈ ಇಪ್ಪತ್ತರ ಹೊತ್ತಲ್ಲಿ ನಡೆದಿದ್ದೆಲ್ಲವೂ ಮರಳಿಬಾರದಷ್ಟು ದೂರಕ್ಕೆ ಸಾಗಿದ ಸಂಗತಿಗಳೇ. ಒಮ್ಮೆ ಮಾರಿದ ಕೃಷಿ ಭೂಮಿಯಲ್ಲಿನ್ನು ಯಾವತ್ತೂ ರೈತ ಕೃಷಿ ಮಾಡಲಾರ. ಅದು ಯಾವುದೋ ಕಾಣದ ದಣಿಗಳ ಪಾಲಾಗಿದೆ. ರೈತ ಇನ್ನೆಂದೂ ಸ್ವಾಭಿಮಾನಿಯಾಗಿ `ಬಾಳಲಾರ. ಏಕೆಂದರೆ ಭೂಮಿಯಿಲ್ಲದವನು ಎಷ್ಟಿದ್ದರೂ ಪರಾವಲಂಭಿ.

ಕೋಲಾದ ರುಚಿ ಕಂಡ ಬಾಯಿಗೆ ಕಷಾಯ ಇಷ್ಟವಾಗುವುದೂ ಸಂಶಯವೇ.ಪಟ್ಟಣ ಸೇರಿದವರು ಮರಳಿ ಬಂದು ಸ್ವತಃ ನೊಗ ಕಟ್ಟುವರೆನ್ನುವುದು ತಮಾಷೆಯ ಮಾತು. ಹಾಗಾಗಿ ನಾಗರಿಕತೆಗಳ ಸಂಘರ್ಷದಲ್ಲಿ ಫಲಿತಾಂಶವೇ ಸಿಂಧು ಎಂಬುದು ಈ ಇಪ್ಪತ್ತು ವರ್ಷಗಳ ಅವ ತಿಳಿಸಿದೆ.

ಜಾಗತೀಕರಣ ಕೇವಲ ಕೃಷಿ, ವ್ಯಾಪಾರ, ಆರ್ಥಿಕತೆ,ತಂತ್ರಜ್ನಾನಗಳಿಗಷ್ಟೇ ಸೀಮಿತವೂ ಆಗಿಲ್ಲ ಎಂಬುದನ್ನು ಈ ಇಪ್ಪತ್ತು ವರ್ಷಗಳು ತೋರಿಸಿಕೊಟ್ಟಿವೆ. ಜನಜೀವನ, ಮೌಲ್ಯಗಳು ಸಾಂಸ್ಕೃತಿಕ ಅಧಃಪತನಗಳ ಅಬ್ಬರ ಕಂಡುಬರುತ್ತಿವೆ. ಅವಿಭಕ್ತ ಕುಟುಂಬಗಳು ಒಡೆದಿವೆ. ತಾನು ಎಂಬ ಭಾವ ಇನ್ನಿಲ್ಲದಂತೆ ಜಾಗೃತವಾಗಿವೆ. ನೆಂಟರಿಷ್ಟರು, ನೆರೆಹೊರೆ ಎಲ್ಲವೂ ಇಂದು ಅಳೆದೂತೂಗಿ ವ್ಯವಹಾರಕ್ಕಿಳಿಯುತ್ತದೆ. ಅಣ್ಣನಿಂದ ಲಾಭವಿದ್ದರೆ ತಮ್ಮನಿಂದ ಪ್ರೀತಿ, ಭಾವನಿಂದ ಲಾಭವಿದ್ದರೆ ಮೈದುನನಿಂದ ಪ್ರೀತಿ. ಒಟ್ಟು ಪ್ರೀತಿ ಕೂಡಾ ಮಾರಾಟದ ಸರಕು! ಸಂಬಂಧಗಳಿಗೂ ಕೃತಕತೆಯ ಲೇಪ! ಕಂಸ-ಶಕುನಿಗಳಂಥ ಮಾನವರು, ಹೊಟ್ಟೆಕಿಚ್ಚಿನ ದಾಯಾದಿಗಳು ಪುರಾಣಕಾಲದಿಮದಲೂ ಇದ್ದಿಬಹುದು.

ಆದರೆ ಹೊಸ ವಿನ್ಯಾಸಗಳ ಮೂಲಕ ಇಂಥವರು ಇಂದು ಅಬ್ಬರಿಸುತ್ತಿದ್ದಾರೆ. ಎಲ್ಲವೂ ಇತ್ತಪ್ಪು ವರ್ಷಗಳ ಮಹಿಮೆ.
ಇನ್ನು ಆಡಳಿತದಲ್ಲಿ ಅಭಿವೃದ್ಧಿಯ ವ್ಯಾಖ್ಯಾನವೇ ಬದಲಾಗಿದೆ. ರಸ್ತೆ, ಸೇತುವೆ, ಸಾರಿಗೆ, ಬ್ಯಾಂಕುಗಳೆಲ್ಲವೂ ಮುಂದುವರಿದಿವೆ. ಕಾಡು ಕಡಿದು, ಹೊಳೆ ಮುಚ್ಚಿದರೂ ಸರಿ ರಸ್ತೆಯಾಗಲೇ ಬೇಕು. ವಿಧ್ಯುತ್ ಬರಲೇಬೇಕು. ಜನರ ಅಹಂ ಹೆಚ್ಚಿಸಲು, ಕೊಳ್ಳುಭಾಕತನವನ್ನು ಜಾಗೃತಗೊಳಿಸಲು ಏನೆಲ್ಲಾ ಬೇಕೋ ಅವೆಲ್ಲವನ್ನೂ ಅಭಿವೃದ್ಧಿಪಡಿಸಲಾಗಿದೆ. ಇದರೊಂದಿಗೆ ಲಂಚಕೋರತನವೂ ಅಭಿವೃದ್ಧಿಯಾಗಿದೆ. ಇದರಿಂದ ಜನರು ಮತ್ತಷ್ಟು ಭೃಷ್ಟರಾಗಿದ್ದಾರೆ.

ಇವೆಲ್ಲಾ ಎಂಥ ಕುಲುಮೆಯಯ್ಯಾ ಎನ್ನುವಂತೆ ಲೋಕವಿದೆ. ಉತ್ತರ ಹೊಳೆಯುತ್ತಿಲ್ಲ. ಆದರೆ ಕಾರಣ ಮಾತ್ರ ಸಷ್ಟವಾಗಿದೆ. ಇಪ್ಪತ್ತೇ ಇಪ್ಪತ್ತು ವರ್ಷ! ಇಂಥ ಸಂಗತಿಗಳ ನಡುವೆ ಬದುಕುವ ನಾವು ಉದ್ದಾರವಾಗಿದೆ ಎಂದುಕೊಳ್ಳುತ್ತಿದ್ದೇವೆ. ಅಂಗಡಿಯ ಮೆರುಗಿಗೆ ಮರುಳಾಗಿ ಮನೆ ತುಂಬಿಸಿಕೊಳ್ಳುತ್ತಿದ್ದೇವೆ. ಜನರ ಪರಿಸ್ಥಿತಿ ಹೀಗಿರುವಾಗ ದೇಶದ ಪರಿಸ್ಥಿತಿ ಇನ್ನು ಹೇಗಿರಲು ಸಾಧ್ಯ? ಈ ಇಪ್ಪತ್ತು ವರ್ಷಗಳಲ್ಲಿ ಚಳವಳಿಗಳು ನೆಲಕಚ್ಚಿದ ಕಾರಣವನ್ನು ಹುಡುಕಿದರೆ ಜಾಗತೀಕರಣದ ಜಾಡು ಕಾಣದೇ ಇರುವುದಿಲ್ಲ.

ಅಂದು ಸ್ವಾತಂತ್ರ್ಯ ಹೋರಾಟದಲ್ಲಿ, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜನರು ಹಿಂಡುಹಿಂಡಾಗಿ ಜೈಲು ಸೇರಿದ್ದರು. ಆಗೊಂದು ಮೌಲ್ಯವಿತ್ತು, ತೀವ್ರತೆಯಿತ್ತು, ಕಾಳಜಿಯಿತ್ತು. ಇಂದು ದೇಶಕ್ಕಾಗಿ ಜೈಲು ಸೇರಬೇಕಾದ ಪ್ರಸಂಗ ಬಂದರೆ ಅವರ ಪ್ರಮಾಣ ಎಷ್ಟಿರಬಹುದು? ಅಣ್ಣಾ ಹಜಾರೆಯನ್ನು ಯುವಕರು ಬೆಂಬಲಿಸಿದ್ದರೂ ಅವರೆಲ್ಲಾ ಆ ಚಳವಳಿಯಲ್ಲಿನ `ಸುರಕ್ಷಿತ ವಲಯ' ವನ್ನು ಕಂಡೇ ಚಳವಳಿಗೆ ಬಂದವರು ಎಂಬುದನ್ನು ಮರೆಯಬಾರದು.

ಕೊನೆಗೂ ಈ ಇಪ್ಪತ್ತು ವರ್ಷಗಳ ಅವ ಏನನ್ನೂ ಸ್ಪಷ್ಟ ಪಡಿಸುವುದಿಲ್ಲ. ಆಧುನಿಕದಲ್ಲೂ ದೇವರ ಭಕ್ತಿ ಕಡಿಮೆಯಾಗಿಲ್ಲ ಎಂದುಕೊಂಡರೂ ಆ ಭಕ್ತಿಯಲ್ಲಿ ಭಾವದ ಲೇಪವಿಲ್ಲ. ಹೊಟ್ಟೆ ತುಂಬಿದಂತೆ ಕಂಡರೂ ನೆಮ್ಮದಿಯಿಲ್ಲ. ಗೆಲುವಿನಂತೆ ಕಂಡರೂ ಸಂತೋಷವಿಲ್ಲ. ಮನರಂಜನೆಗೆ ಅವಕಾಶವಿದ್ದರೂ ಮನಸ್ಸು ಅರಳುವಂಥದ್ದಿಲ್ಲ. ವಿದ್ಯೆ ಇದ್ದರೂ ಅದು ಬುದ್ದಿಗೆ ಕಾರಣವಾಗುತ್ತಿಲ್ಲ. ಮೇಕಪ್ ಇದ್ದರೂ ಸಿಡುಕು ಮುಖಗಳು ಎದ್ದುಕಾಣುತ್ತಿವೆ.

ವಿಪರ್ಯಾಸವೊಂದು ನೆನಪಾಗುತ್ತಿದೆ. ಆ ಮುಂಜಾನೆಯ ಐರಾವತ ಹೊರಡುವ ಕಾನೂರು ಎಂಬ ಪಾಯಿಂಟಿನಲ್ಲಿ ಲಕ್ಷ್ಮಣತೀರ್ಥ ನದಿ ಹರಿಯುತ್ತದೆ. ಇಪ್ಪತ್ತು ವರ್ಷಕ್ಕೆ ಹಿಂದೆ ಆ ನದಿಯಲ್ಲಿ ಹುಡುಗರು ಮೀಯುತ್ತಿದ್ದರು, ಹೊಳೆದಂಡೆಯ ಮರಳಿನಲ್ಲಿ ಕಪ್ಪೆ ಗೂಡು ಕಟ್ಟಿ ಆಡುತ್ತಿದ್ದರು. ಅದೇ ಮಕ್ಕಳು ಇಂದು ಅದೇ ಹೊಳೆಯ ನೀರನ್ನು ಮೋಟಾರು ಹಾಕಿ ಬತ್ತಿಸುತ್ತಿದ್ದಾರೆ, ಆಡುತ್ತಿದ್ದ ಅದೇ ಮರಳಿನ ಅಕ್ರಮ ದಂದೆಯಲ್ಲಿ ತೊಡಗಿದ್ದಾರೆ. ಇದು ಇಪ್ಪತ್ತು ವರ್ಷಗಳು ಮಾಡಿದ ಬದಲಾವಣೆ ! ಕೊಡಗಿನ ತೋಟಗಳಿಗೆ ಜೀಪುಗಳಲ್ಲಿ ಕಾಲೋನಿಗಳಿಂದ ಆಳುಗಳನ್ನು ತುಂಬಿಸಿಕೊಂಡು ಹೋಗಲಾಗುತ್ತದೆ. ಜೀಪಿನಲ್ಲಿ ಆಳುಗಳು ಮಾತಿಗೊಮ್ಮೆ `ಅವ್ವನ್' ಎನ್ನುತ್ತಲೇ ಕವಳವನ್ನು ಉಗಿಯುತ್ತಿದ್ದಾರೆ. ತೋಟದ ಮಾಲಿಕನ ಮಗ ಮಹಾನಗರದ ಕ್ಯಾಬ್ಗಳಲ್ಲಿ, ಪಬ್ಗಳಲ್ಲಿ ಅದೇ ಧಾಟಿಯಲ್ಲಿ ` ಫ...' ಎನ್ನುತ್ತಿದ್ದಾನೆ. ಭಾಷೆಯಲ್ಲಿ ವ್ಯತ್ಯಾಸವಿಬಹುದು. ಪದದಲ್ಲಿ ವ್ಯತ್ಯಾಸವಿಲ್ಲ.
ಅಬ್ಬಾ , ಈ ಇಪ್ಪತ್ತು ವರ್ಷ ಏನೇನೆಲ್ಲಾ ಉಕ್ಕಿಸಿದೆ!? ಕರಗಿಸಿದೆ !?

ಸಂತೋಷ್ ತಮ್ಮಯ್ಯ
ಪತ್ರಕರ್ತ

1 comments:

ಅರವಿಂದ್ said...

ಜಾಗತೀಕರಣ ಪ್ರಭಾವ ಚೆನ್ನಾಗಿ ಅರ್ಥ್ಯೆಸಿದ್ದೀರಿ, ಕಾನೂರೊಂದೆ ಅಲ್ಲಾ, ಬೀದರಿಂದ ಚಾಮರಾಜನಗರದವರೆಗೂ ಇದೇ ಸ್ಥಿತಿ. ಒಂದಷ್ಟು ಅಕ್ಷರದೋಷಗಳು ಎದ್ದು ಕಾಣುತ್ತದೆ, ಇದರತ್ತ ಗಮನ ನೀಡಬೇಕು.

Post a Comment