ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಶೈಕ್ಷಣಿಕ ರಂಗದ ಮಹತ್ವದ ತಿರುವು. ಅನೇಕ ಕನಸುಗಳನ್ನ ಹೊತ್ತು ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಬರೆದಿರುತ್ತಾರೆ. ಆದರೆ ಇಂದು ಪರೀಕ್ಷಾ ಪ್ರಾಧಿಕಾರಗಳ ಅಸಡ್ಡೆತನದಿಂದ ವಿದ್ಯಾರ್ಥಿಗಳಂತೂ ಕಷ್ಟ ಅನುಭವಿಸುತ್ತಿರುವುದು ನಿಜ.


ಇತ್ತೀಚಿಗಷ್ಟೇ 2012ನೇ ಸಾಲಿನ ದ್ವಿತೀಯ ಪಿಯುಸಿ ಪ್ರೆಶ್ನೆಪತ್ರಿಕೆ ಬಯಲು ಪ್ರಕರಣ, ಮೌಲ್ಯಮಾಪನ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ ಉಪನ್ಯಾಸಕರು ಇದೀಗ 18 ದಿನ ಮುಂದೂಡಲಾದ ಸಿಇಟಿ ಪರೀಕ್ಷೆ. ಈ ಎಲ್ಲ ಬೆಳವಣಿಗೆಗಳು ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿವೆ ಎಂದರೆ ತಪ್ಪಲ್ಲ.

ಗಣಿತ ಹಾಗೂ ಭೌತಶಾಸ್ತ್ರ ಪ್ರೆಶ್ನೆಪತ್ರಿಕೆಗಳ ಬಯಲು ಪ್ರಕರಣ ಪಿಯು ಮಂಡಳಿಗೆ ತಲೆನೋವಾಗಿ ಪರಿಣಮಿಸಿತ್ತು. ನಂತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪಿಯುಸಿ ಉಪನ್ಯಾಸಕರು ನಾಲ್ಕು ದಿನ ಮೌಲ್ಯಮಾಪನ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದರು. ಇದರ ಪರಿಣಾಮ ಏಪ್ರಿಲ್ ಕೊನೆಯ ವಾರದಲ್ಲಿ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದಿದ್ದ ಶಿಕ್ಷಣ ಸಚಿವರ ಮಾತು ಸುಳ್ಳಾಯಿತು. ಈಗ ಫಲಿತಾಂಶ ಮೇ ತಿಂಗಳಿಗೆ ಮುಂದೂಡಲ್ಪಟ್ಟಿದೆ. ಇವೆಲ್ಲವುಗಳ ನಂತರ ಬಂದಿರುವ ಸಮಸ್ಯೆ ಎಂದರೆ ಸಿಇಟಿ ಮುಂಡೂಡಿಕೆ.

ವೃತ್ತಿಪರ ಕೋರ್ಸ್ ಗಳಾದ ವೈದ್ಯಕೀಯ, ದಂತವೈದ್ಯಕೀಯ ಹಾಗೂ ಇಂಜಿನಿಯರಿಂಗ್ ದಾಖಲಾತಿಗೆ ನಡೆಯಬೇಕಾಗಿದ್ದ ಸಿಇಟಿ 2012ನ್ನು 18 ದಿನಗಳ ಕಾಲ ಮುಂದೂಡಲಾಗಿದೆ. ಮೇ 3 ಮತ್ತು 4 ರಂದು ನಡೆಯಬೇಕಿದ್ದ ಪರೀಕ್ಷೇಯನ್ನು ಮೇ 21, 22ಕ್ಕೆ ನಿಗಧಿಪಡಿಸಲಾಗಿದೆ. ಈ ಬದಲಾವಣೆಯಿಂದಾಗಿ ಅನೇಕ ವಿದ್ಯಾರ್ಥಿಗಳು ಸಂಕಷ್ಟಕ್ಕೀಡಾಗಿದ್ದಾರೆ.

ಸಿಇಟಿಯೊಂದಿಗೆ ಐಐಟಿ, ಎಐಇಇಇ ಯಂತಹ ರಾಷ್ಟ್ರಮಟ್ಟದ ಪರೀಕ್ಷೆಗಳನ್ನು ತೆಗೆದುಕೊಂಡಿರುವ ವಿದ್ಯಾರ್ಥಿಗಳಿಗೆ ಈ ಬದಲಾವಣೆ ಅಸಮಾಧಾನ ತಂದಿದೆ. ಈ ಮುಂದೂಡಿಕೆಗೆ ಕರ್ನಾ ಟಕ ಪರೀಕ್ಷಾ ಪ್ರಾಧಿಕಾರ ಅನೇಕ ಕಾರಣಗಳನ್ನು ಕೊಟ್ಟು ನಿಟ್ಟುಸಿರು ಬಿಟ್ಟರೆ, ಇತ್ತ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಉಸಿರು ಕಟ್ಟಿದಂತಾಗಿದೆ.

ಸಿಇಟಿ ಕೌನ್ಸೆಲಿಂಗ್ ನಂತರ ಉತ್ತಮ ಕಾಲೇಜುಗಳಲ್ಲಿ ಸೀಟು ಸಿಗದಿದ್ದರೆ ಪದವಿ ಕೋರ್ಸುಗಳತ್ತ ಧಾವಿಸುವುದು ವಾಡಿಕೆ. ಆದರೆ ಈ ಎಲ್ಲಾ ಬದಲಾವಣೆಗಳಿಂದ ವಿದ್ಯಾರ್ಥಿಗಳು ಅತ್ತ ವೃತ್ತಿಪರ ಕೋರ್ಸುಗಳನ್ನು ತೆಗೆದುಕೊಳ್ಳುವುದೋ ಅಥವಾ ಪದವಿ ಕೋರ್ಸುಗಳನ್ನು ತೆಗೆದುಕೊಳ್ಳುವುದೋ ಎಂಬ ಪರಿಸ್ಥಿತಿ ಒದಗಿರುವ ಕಾರಣ ಅವರ ಸ್ಥಿತಿ ಡೋಲಾಯಮಾನವಾಗಿದೆ. ಹೀಗೆ ಮುಂದುವರೆದರೆ ವಿದ್ಯಾರ್ಥಿಗಳ ಭವಿಷ್ಯದ ಗತಿಯೇನು ಎಂಬ ಆತಂಕದ ಪ್ರಶ್ನೆ ಎಲ್ಲರಲ್ಲೂ ಉದ್ಭವಿಸಿದೆ. ಇದಕ್ಕೇನಾದರೂ ಸರಿಯಾದ ಪರಿಹಾರವನ್ನು ಕಂಡು ಹಿಡಿಯಲೇ ಬೇಕಾಗಿದೆ.

- ದರ್ಶನ್ ಬಿ.ಎಂ
ಪತ್ರಿಕೋದ್ಯಮ ವಿದ್ಯಾರ್ಥಿ
ಆಳ್ವಾಸ್ ಕಾಲೇಜು, ಮೂಡುಬಿದಿರೆ.

0 comments:

Post a Comment